Categories
ಸಿನಿ ಸುದ್ದಿ

ಕೆಜಿಎಫ್‌ ಚಾಪ್ಟರ್‌ 2 ಟ್ರೇಲರ್‌ ರಿಲೀಸ್‌ ಡೇಟ್‌ ಫಿಕ್ಸ್;‌ ಮಾರ್ಚ್‌ 27ಕ್ಕೆ ಯಶ್‌ ಫ್ಯಾನ್ಸ್‌ಗೆ ಹಬ್ಬ!

ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ 2’ ಚಿತ್ರವನ್ನು ನಮ್ಮ ದೇಶವಷ್ಟೇ ಅಲ್ಲ, ಇಡೀ ವಿಶ್ವವೇ ಎದುರು ನೋಡುತ್ತಿದೆ. ಹೌದು, ‘ಕೆಜಿಎಫ್ ಚಾಪ್ಟರ್ 1’ ಎಲ್ಲಾ ಭಾಷೆಗಳಲ್ಲೂ ಹಿಟ್‌ ಆಗಿತ್ತು. ದೇಶವೇ ಒಂದೊಮ್ಮೆ ಇತ್ತ ತಿರುಗಿ ನೋಡಿತ್ತು. ಈಗ ‘ಕೆಜಿಎಫ್ 2’ ಹವಾ ಎಬ್ಬಿಸಿದೆ. ಸಿನಿಮಾ ಬಿಡುಗಡೆಗೆ ಸಾಕಷ್ಟು ಸಮಯವಿದ್ದರೂ, ಚಿತ್ರತಂಡ ಮಾತ್ರ ಟ್ರೇಲರ್‌ ರಿಲೀಸ್‌ ಮಾಡುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ. ಈಗ ‘ಕೆಜಿಎಫ್ 2’ ಚಿತ್ರದ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ.


ಕೆಜಿಎಫ್ 2′ ಟ್ರೇಲರ್ ಮಾರ್ಚ್ 27ರ ಸಂಜೆ 6.40ಕ್ಕೆ ರಿಲೀಸ್ ಆಗಲಿದೆ ಎಂದು ಹೊಂಬಾಳೆ ಫಿಲಂಸ್‌ ಅನೌನ್ಸ್‌ ಮಾಡಿದೆ. ಈ ಮೂಲಕ ಟ್ರೇಲರ್‌ಗಾಗಿ ಎದುರು ನೋಡುತ್ತಿದ್ದವರ ಮೊಗದಲ್ಲಿ ಖುಷಿ ಇದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಟ್ರೇಲರ್ ಅಭಿಮಾನಿಗಳ ಕೈ ಸೇರಲಿದೆ. ಇಲ್ಲಿಯವರೆಗೂ ಟ್ರೇಲರ್ ಯಾವಾಗ ಎಂದು ಯೋಚಿಸುತ್ತಿದ್ದ ಫ್ಯಾನ್ಸ್‌ ಗೆ ಖುಷಿಯೋ ಖುಷಿ. ಸದ್ಯ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಟ್ರೇಲರ್‌ ಹೇಗಿರಲಿದೆ ಎಂಬ ಪ್ರಶ್ನೆಗಳು ಶುರುವಾಗಿವೆ. ಅದರಲ್ಲೂ ಚಿತ್ರದ ಪೋಸ್ಟರ್‌ ರಿಲೀಸ್‌ ಆದ ಕ್ಷಣದಿಂದಲೇ ಟ್ರೇಲರ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆ ಟ್ರೇಲರ್‌ನಲ್ಲಿ ಯಾವೆಲ್ಲ ಪಾತ್ರಗಳು ಇರಲಿವೆ ಎಂಬ ಕುತೂಹಲವೂ ಇದೆ. ಹೊಂಬಾಳೆ ಫಿಲಂಸ್‌ ಈಗ ಟ್ರೇಲರ್‌ ಬಿಡುಗಡೆ ಮಾಡುವುದನ್ನು ಸ್ಪಷ್ಟಪಡಿಸಿದೆ. ಕೊನೆಗೂ ‘ಕೆಜಿಎಫ್ 2’ ಟ್ರೇಲರ್ ಡೇಟ್ ರಿವೀಲ್ ಮಾಡುವ ಮೂಲಕ ಅಭಿಮಾನಿಗಳಲ್ಲಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದೆ.

ಅದೇನೆ ಇರಲಿ, ಕೊನೆಗೂ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಹೊಂಬಾಳೆ ಫಿಲಂಸ್‌ ತನ್ನ ಹೊಂಬಾಳೆ ಯುಟ್ಯೂಬ್ ಚಾನೆಲ್​ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದೆ.

ರಾಕಿಂಗ್ ಸ್ಟಾರ್​ ಯಶ್ ನಾಯಕನಾಗಿ ನಟಿಸಿರುವ ಈ ಚಿತ್ರದ ಮೊದಲ ಭಾಗ ಈಗಾಗಲೇ ಹೊಸ ಇತಿಹಾಸವನ್ನೇ ಬರೆದಿದೆ. ಇದೀಗ ಅದರ ಮುಂದುವರಿದ ಭಾಗದ ಮೇಲಿನ ಕುತೂಹಲಕ್ಕೂ ದಿನಗಣನೆ ಶುರುವಾಗಿದ್ದು, ಏ. 14ರಂದು ವಿಶ್ವದಾದ್ಯಂತ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷವೇ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಮುಂದೂಡಲ್ಪಟ್ಟಿತ್ತು. ಇದೀಗ ಅದೆಲ್ಲದಕ್ಕೂ ಉತ್ತರ ಎಂಬಂತೆ ಸಿನಿಮಾ ಕಳೆದ ಸಲ ಘೋಷಿಸಿದ ದಿನದಂದೇ ತೆರೆಗೆ ಬರುತ್ತಿದೆ. ಹೊಂಬಾಳೆ ಸಿನಿಮಾ ಸಂಸ್ಥೆಯ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಎರಡನೇ ಭಾಗದಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರಿ ಸ್ಟಾರ್ ಕಲಾವಿದರ ದಂಡೇ ಇದೆ.

Categories
ಸಿನಿ ಸುದ್ದಿ

ಬೆಟ್ಟದ ದಾರಿ ತುಳಿದ ಮಕ್ಕಳು! ನೀರಿನ ಸಮಸ್ಯೆ ಪರಿಹರಿಸೋ ಕಥೆ ಇದು…

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮಕ್ಕಳ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ “ಬೆಟ್ಟದ ದಾರಿ” ಸಿನಿಮಾ ಕೂಡ ಒಂದು. ಬೆಟ್ಟದ ದಾರಿ ಅಂದಾಕ್ಷಣ ಥಟ್ಟನೆ ನೆನಪಾಗೋದೇ ಪುನೀತ್‌ ರಾಜಕುಮಾರ್‌ ಅವರು ನಟಿಸಿದ ಅದ್ಭುತ ಸಿನಿಮಾ ಬೆಟ್ಟದ ಹೂವು. ಹಾಗಂತ ಆ ಸಿನಿಮಾಗೆ ಈ ಚಿತ್ರವನ್ನು ಹೋಲಿಸುತ್ತಿಲ್ಲ. ಅದು ಬೆಟ್ಟದ ಹೂವು, ಇದು ಬೆಟ್ಟದ ದಾರಿ

ಇದೊಂದು ಉತ್ತರ ಕರ್ನಾಟಕ ಭಾಗದ ಕಥೆ. ಅದರಲ್ಲೂ ಅಲ್ಲಿನ ಜನರ ಬದುಕು ಬವಣೆ ಕುರಿತು ಹೇಳ ಹೊರಟಿರುವ ಕಥೆ. ಅದು ಬರಗಾಲದ ಪ್ರದೇಶ. ಆ ಭಾಗದ ಬಹುತೇಕ ಗ್ರಾಮಗಳಲ್ಲಿ ಬರಗಾಲವೇ ಹೆಚ್ಚು. ಜನರು ಕುಡಿಯಲೂ ನೀರು ಇಲ್ಲದೆ ಪರಿತಪಿಸುತ್ತಲೇ ಇದ್ದಾರೆ. ಅದಕ್ಕೆ ಪರಿಹಾರ ಅನ್ನೋದು ಗಗನ ಕುಸು. ಈ ಚಿತ್ರದ ಕಥೆ ಕೂಡ ಅದೇ ರೀತಿ ಇದೆ.

ಹೌದು, ಇಂಥದ್ದೊಂದು ಸಾಮಾಜಿಕ ಸಮಸ್ಯೆ ಇರುವಂತಹ ಕಥೆ ಇಟ್ಟುಕೊಂಡು ಮಕ್ಕಳ ಮೇಲೊಂದು ಸಿನಿಮಾ ಮಾಡಿರೋದು ನಿರ್ದೇಶಕ ಮಾ.ಚಂದ್ರು. ಈ ಹಿಂದೆ “ಬಂಗಾರಿ” ಸಿನಿಮಾ ಮಾಡಿದ್ದ ಮಾ.ಚಂದ್ರು ಆ ಬಳಿಕ “ನಡುಗಲ್ಲು” ಮತ್ತು “ಶಿವನಪಾದ” ಸಿನಿಮಾ ಮಾಡಿದ್ದಾರೆ. ಈಗ ಅವರ ನಿರ್ದೇಶನದ “ಬೆಟ್ಟದ ದಾರಿ” ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್‌ ೪ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ. ಇನ್ನು, ಈ ಚಿತ್ರ ಹೀರಾಲಾಲ್‌ ಮೂವೀಸ್‌ ಬ್ಯಾನರ್‌ನಲ್ಲಿ ತಯಾರಾಗಿದೆ. ಚಂದ್ರಕಲಾ ಟಿ.ಆರ್‌ ಹಾಗು ಮಂಜುನಾಥ ಹೆಚ್.ನಾಯಕ್‌ ಚಿತ್ರದ ನಿರ್ಮಾಪಕರು.

ತಮ್ಮ ಸಿನಿಮಾ ಕುರಿತು ಹೇಳುವ ನಿರ್ದೇಶಕರು, “ಇದೊಂದು ಮಕ್ಕಳ ಸಿನಿಮಾ. ಅದರಲ್ಲೂ ಸಾಹಸಮಯ ಕಥೆ ಇಲ್ಲಿದೆ. ಉತ್ತರ ಕರ್ನಾಟಕ ಭಾಗದ ಕಥೆ ಇಲ್ಲಿದೆ. ಒಂದು ಕುಗ್ರಾಮ. ಅಲ್ಲಿ ನೀರಿಲ್ಲದೆ ಜನ ಮತ್ತು ಜಾನುವಾರುಗಳು ಪರಿತಪಿಸುತ್ತವೆ. ನೀರಿಗಾಗಿ ಸಾಕಷ್ಟು ಹೋರಾಟ ನಡೆಸಿದರೂ ಅಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ. ನೀರಿಲ್ಲದೆಯೇ ಎಷ್ಟೋ ಸಾವು ನೋವುಗಳಾಗುತ್ತವೆ. ಅಂತಹ ಪರಿಸ್ಥಿತಿಯಲ್ಲೇ ಆ ಊರಿನ ಒಂದಷ್ಟು ಮಕ್ಕಳು ಒಗ್ಗೂಡಿ, ತನ್ನೂರಿಗೆ ಹೇಗಾದರೂ ಸರಿ ನೀರಿನ ಸಮಸ್ಯೆ ಪರಿಹರಿಸಬೇಕು ಅಂತ ಯೋಚಿಸುತ್ತಾರೆ.

ರಾಜಕಾರಣಿಗಳು, ಅಧಿಕಾರಿಗಳು ಯೋಚಿಸದೆ ನಿರ್ಲಕ್ಷಿಸುತ್ತಿರುವಾಗ, ಓದಿ, ಆಡಿ ನಲಿಯಬೇಕಾದ ಮಕ್ಕಳು ತನ್ನೂರಿನ ನೀರಿನ ಸಮಸ್ಯೆ ಪರಿಹರಿಸಬೇಕೆಂಬ ನಿಟ್ಟಿನಲ್ಲಿ ಹೋರಾಟಕ್ಕೆ ಸಜ್ಜಾಗುತ್ತಾರೆ. ಹೊಳೆಯ ನೀರನ್ನು ಊರಿಗೆ ತರಬೇಕು ಅಂತ ಹೋರಾಡಿದರೂ ಸಾಧ್ಯವಾಗುವುದಿಲ್ಲ. ಆದರೆ, ಒಂದು ವಿಶೇಷ ಸ್ಥಳದಿಂದ ನೀರು ಜಿನುಗುತ್ತದೆ. ಅದು ಕಡಿದಾದ ಬೆಟ್ಟದ ಮೇಲೆ. ಆ ಕಲ್ಲು ಮುಳ್ಳು ಹಾದಿಯಲ್ಲೇ ಸಾಗುವ ಒಂದಷ್ಟು ಮಕ್ಕಳು ತನ್ನೂರಿಗೆ ಅಲ್ಲಿಂದ ನೀರು ತರಲು ಮುಂದಾಗುತ್ತಾರೆ. ಅವರ ಹೋರಾಟ ಈಡೇರುತ್ತೋ ಇಲ್ಲವೋ ಅನ್ನೋದು ಚಿತ್ರದ ಕಥೆ.

ಸಿನಿಮಾದಲ್ಲಿ ನಿಶಾಂತ್‌ ಟಿ.ರಾಥೋಡ್‌ ಬಾಲನಟರಾಗಿ ನಟಿಸಿದ್ದು, ಇಡೀ ಚಿತ್ರದ ಮುಖ್ಯ ಆಕರ್ಷಣೆ ನಿಶಾಂತ್‌ ಟಿ.ರಾಥೋಡ್‌. ಉಳಿದಂತೆ ಚಿತ್ರದಲ್ಲಿ ಲಕ್ಷ್ಮೀ ಶ್ರೀ, ರಂಗನಾಥ್‌, ವಿಘ್ನೇಶ್‌ ಭರಮಸಾಗರ, ಅಲೋಕ್‌, ಶಾಶ್ವತಿ, ಪ್ರತೀಕ್ಷಾ, ಆಕಾಶ್‌ ಸೇರಿದಂತೆ ಹಲವು ಮಕ್ಕಳು ನಟಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಮಾ.ಚಂದ್ರು ಅವರೇ ಕಥೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ನಂದಕುಮಾರ್‌ ಕ್ಯಾಮೆರಾ ಹಿಡಿದರೆ, ಅರ್ಜುನ್‌ ಕಿಟ್ಟು ಸಂಕಲನ‌ವಿದೆ. ವೀರ್ ಸಮರ್ಥ್‌ ಅವರು ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ನಾಗೇಂದ್ರ ಪ್ರಸಾದ್‌, ಕೆ.ಕಲ್ಯಾಣ್‌, ವಿಜಯ್‌ ಭರಮಸಾಗರ ಅವರ ಗೀತ ಸಾಹಿತ್ಯ ಚಿತ್ರಕ್ಕಿದೆ. ಇನ್ನು, ವಾಸುಕಿ ವೈಭವ್‌, ಸಂಗೀತ ರವೀಂದ್ರನಾಥ್‌, ಗೋವಿಂದ ಕರ್ನೂಲ್‌ ಇತರರು ಹಾಡಿದ್ದಾರೆ.

ಚಿತ್ರದ ಮತ್ತೊಂದು ಆಕರ್ಷಣೆ ಅಂದರೆ, ಹಿರಿಯ ಕಲಾವಿದ ರಮೇಶ್‌ ಭಟ್‌, ಉಮೇಶ್‌, ಮನ್‌ದೀಪ್‌ ರಾಯ್‌, ಮೈಸೂರು ಮಲ್ಲೇಶ್‌, ಮಂಜುಳಾ ರೆಡ್ಡಿ, ರಿಚ್ಚ, ನಾಗೇಶ್‌ ಆರ್‌ ಇತರರು ನಟಿಸಿದ್ದಾರೆ. ಬಹುತೇಕ ಚಿತ್ರದ ಚಿತ್ರೀಕರಣ ವಿಜಾಪುರ ಸುತ್ತಮುತ್ತಲ ತಾಣಗಳಲ್ಲಿ ನಡೆದಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಹಾಡುಗಳು ಕೂಡ ಮೆಚ್ಚುಗೆ ಪಡೆದಿವೆ. ರಾಜ್ಯಾದ್ಯಂತ ಈ ಚಿತ್ರ ಮಾರ್ಚ್‌ ೪ ರಂದು ತೆರೆಗೆ ಬರುತ್ತಿದ್ದು, ಮಕ್ಕಳ ಚಿತ್ರವಾಗಿದ್ದರಿಂದ ವಿಶೇಷವಾಗಿ ಮಕ್ಕಳೊಂದಿಗೆ ಪೋಷಕರೂ ಕೂಡ ನೋಡಬಹುದಾದ ಚಿತ್ರವಿದು ಎಂಬುದು ಚಿತ್ರತಂಡದ ಹೇಳಿಕೆ.

ಚಿತ್ರದ ನಿರ್ಮಾಪಕರಾದ ಚಂದ್ರಕಲಾ ಟಿ.ಆರ್.‌ ಮತ್ತು ಮಂಜುನಾಥ ಹೆಚ್.ನಾಯಕ್‌ ಅವರಿಗೆ ಇದು ಎರಡನೇ ಸಿನಿಮಾ ಈ ಹಿಂದೆ ಕೂಡ ಅವರು “ಮೂಕ ಹಕ್ಕಿ” ಎಂಬ ಒಳ್ಳೆಯ ಚಿತ್ರ ನಿರ್ಮಿಸಿದ್ದರು. ಅದಾದ ಬಳಿಕ ಅವರು, ಸಾಮಾಜಿಕ ಪರಿಣಾಮ ಬೀರುವಂತಹ ಕಥೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ. ಸಿನಿಮಾಗೆ ಏನೇನು ಬೇಕು ಎಲ್ಲವನ್ನೂ ಪೂರೈಸಿ, ಒಂದೊಳ್ಳೆಯ ಸಿನಿಮಾ ಆಗೋಕೆ ಕಾರಣರಾಗಿದ್ದಾರೆ ಅನ್ನೋದು ನಿರ್ದೇಶಕ ಮಾ.ಚಂದ್ರು ಅವರ ಮಾತು.

ಇನ್ನು, ಮಕ್ಕಳು ಚಿತ್ರೀಕರಣ ವೇಳೆ ಸಾಕಷ್ಟು ಶ್ರಮಿಸಿದ್ದಾರೆ. ಬಿಸಿಲು ನಡುವೆಯೇ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ಕೆಲಸ ಮಾಡಿದ್ದಾರೆ. ಅವರೆಲ್ಲರ ಸಹಕಾರ ಮತ್ತು ನಿರ್ಮಾಪಕರ ಪ್ರೋತ್ಸಾಹದಿಂದ “ಬೆಟ್ಟದ ದಾರಿ” ನಿರೀಕ್ಷೆ ಮೀಡಿ ಮೂಡಿಬಂದಿದೆ. ಒಟ್ಟಾರೆ ಇದು ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳಿ ಹೇಗೆಲ್ಲಾ ಅಭಿವೃದ್ಧಿ ಕಾಣದೆ ಸೊರಗುತ್ತದೆ ಅನ್ನುವುದನ್ನು ಹೇಳುತ್ತದೆ. ಅಲ್ಲದೆ, ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಅನ್ನುವುದಕ್ಕೆ ಈ ಚಿತ್ರ ಸಾಕ್ಷಿ ಎನ್ನುತ್ತಾರೆ ನಿರ್ದೇಶಕರು.

Categories
ಸಿನಿ ಸುದ್ದಿ

ಎಲ್ಲೋ ಬೋರ್ಡ್ ಕ್ಯಾಬ್‌ ಚಾಲಕರಿಗೆ ಕಿಚ್ಚ ಸಾಥ್! ಪ್ರದೀಪ್‌ ನಟನೆಯ ಈ ಚಿತ್ರ ಈ ವಾರ ತೆರೆಗೆ

ಟ್ಯಾಕ್ಸಿ ಚಾಲಕರೆಲ್ಲ ಕೆಟ್ಟವರಲ್ಲ, ಅವ‌ರಲ್ಲೂ ಮಾನವೀಯತೆ ಇರುತ್ತದೆ ಎಂಬ ಉತ್ತಮ ಸಂದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಎಲ್ಲೋ ಬೋರ್ಡ್. ಚಿತ್ರ ಈ ವಾರ (ಮಾರ್ಚ್‌ 4) ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ‌ ನಡೆಯಿತು. ತ್ರಿಲೋಕ್ ರೆಡ್ಡಿ ಅವರ ನಿರ್ದೇಶನವಿರುವ ಈ ಚಿತ್ರದಲ್ಲಿ ಪ್ರದೀಪ್ ಟ್ಯಾಕ್ಸಿ ಚಾಲಕನ ಪಾತ್ರ ನಿರ್ವಹಿಸಿದ್ದಾರೆ.

ನಟ ಕಿಚ್ಚ ಸುದೀಪ್ ಆ ಕಾರ್ಯಕ್ರಮದ ಹೈಲೈಟ್.‌ ಅಂದು ಅವರು ಹೇಳಿದ್ದಿಷ್ಟು. “ಪ್ರದೀಪ್ ನಮ್ಮ‌ಮನೆ ಮಗನಿದ್ದಂತೆ. ಅವನು ಶಿವರಾಂ ಅಳಿಯನಾಗಿದ್ದರೂ ಅವನನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಕೂಡ ಈ ಸಿನಿಮಾ ನೋಡಿದೆ. ಚೆನ್ನಾಗಿದೆ. ಒಂದೊಳ್ಳೆಯ ಮೆಸೇಜ್ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಕ್ಯಾಬ್ ಡ್ರೈವರ್ ಗಳಿಗೆ ಗೌರವ ಕೊಟ್ಟಿದ್ದಾರೆ. ನಾವು ಮಾಡಿದ ಚಿತ್ರವನ್ನು ಯಾರಿಗಾದರೂ ತೋರಿಸುವಾಗ ಸ್ವಲ್ಪ ಮುಜುಗರವಿರುತ್ತದೆ.‌ ಇಲ್ಲಿ ನಿರ್ದೇಶಕರಿಗಿರುವ ಆತಂಕ ಕಂಡು ‌ನನ್ನ ಹಳೇ ಸಿನಿಮಾಗಳು ನೆನಪಾದವು ಎಂದು ಹೇಳಿದರು.


ನಾಯಕ ಪ್ರದೀಪ್, “ಈ ರೀತಿಯ ಪಾತ್ರ ಸಿಕ್ಕಿದ್ದು ನನ್ನ ಪುಣ್ಯ. ಎಂಟೈರ್ ಕರ್ನಾಟಕ ಸುತ್ತಿ‌ಚಾಲಕರನ್ನೆಲ್ಲ‌ ಮಾತಾಡಿಸಿ ಬಂದಿದ್ದೇವೆ. ಎಲ್ಲಾ ಕಡೆ ನಮಗೆ ತುಂಬಾ ಗೌರವ ನೀಡಿ ಸಪೋರ್ಟ್ ಮಾಡಿದರು.‌ ನಮ್ಮ ಬಗ್ಗೆ ಗೌರವ ತರುವಂಥ ಸಿನಿಮಾ ಮಾಡಿದ್ದೀರಿ. ನಾವೆಲ್ಲ ಸಿನಿಮಾ ನೋಡಲು ಕಾಯುತ್ತಿದ್ದೇವೆ ಎಂದರು ನಮ್ಮ ಸಿನಿಮಾ ಇಷ್ಟೊಂದು ಪ್ರಭಾವ ಬೀರಿದ್ದು ಕಂಡು ಖುಷಿಯಾಯ್ತು ಎಂದು ಹೇಳಿದರು.

ನಿರ್ದೇಶಕ ತ್ರಿಲೋಕ್, ಆಟೋರಾಜ ಎಂದರೆ ಶಂಕರ್ ನಾಗ್ ಹೇಗೆ ನೆನಪಾಗ್ತಾರೋ ಹಾಗೇ ಎಲ್ಲೋಬೋರ್ಡ್ ಅಂದ್ರೆ ಪ್ರದೀಪ್ ನೆನಪಾಗುವಂತೆ ಸಿನಿಮಾ ಮೂಡಿಬಂದಿದೆ. ಈ ಚಿತ್ರ ಆರಂಭಿಸಿದಾಗಿನಿಂದಲೂ ಸುದೀಪ್ ಬೆಂಬಲವಾಗಿ ನಿಂತಿದ್ದಾರೆ. ಹಿಂದೆ ಟೀಸರ್, ಟ್ರೇಲರ್ ರಿಲೀಸ್ ಮಾಡಿದ್ದರು. ಈಗ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.


ಎಲ್ಲೋ ಬೋರ್ಡ್ ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರು ಚಾಲಕರಿಗೆ ಸ್ಪೂರ್ತಿ ನೀಡುವ ಹಾಡೊಂದನ್ನು ಹಾಡಿದ್ದಾರೆ. ಟಾಕ್ಸಿ ಚಾಲಕರೆಲ್ಲ ಕೆಟ್ಟವರಾಗಿರುವುದಿಲ್ಲ, ಅವರಲ್ಲಿ ಒಳ್ಳೆಯವರೂ ಇರುತ್ತಾರೆ. ಅವರಿಂದಲೂ ಸಮಾಜ ಸುಧಾರಣೆ ಸಾಧ್ಯ ಎನ್ನುವ ವಿಭಿನ್ನ ಕಥಾಹಂದರ ಇರುವ ಈ ಚಿತ್ರದಲ್ಲಿ ಅಹಲ್ಯಾ ಸುರೇಶ್ ಹಾಗೂ ಸ್ನೇಹಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಂಟೇಜ್ ಫಿಲಂಸ್ ಮೂಲಕ‌ ನವೀನ್ ಗೌಡ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Categories
ಸಿನಿ ಸುದ್ದಿ

ನೋಡೋರಿಗೆ ಮೈಸೂರು ರೆಡಿ! ಈ ವಾರ ಬಿಡುಗಡೆ

ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಾಸುದೇವ ರೆಡ್ಡಿ ನಿರ್ಮಿಸಿ, ನಿರ್ದೇಶಿಸಿರುವ “ಮೈಸೂರು” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಚಿತ್ರದ ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಮೂಲತಃ ಒರಿಸ್ಸಾದವರಾದ ಸಂವಿತ್ ಈ ಚಿತ್ರದ ನಾಯಕ. ಪೂಜಾ ನಾಯಕಿ. ಜೂ.ನರಸಿಂಹರಾಜು, ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ಇತರರು ಚಿತ್ರದಲ್ಲಿದ್ದಾರೆ.

ಎಸ್ ಆರ್ ಕಂಬೈನ್ಸ್ ಲಾಂಛನದಲ್ಲಿ ವಾಸುದೇವ ರೆಡ್ಡಿ ಅವರೆ ಈ ಚಿತ್ರ ನಿರ್ಮಾಣವನ್ನು ಮಾಡಿದ್ದಾರೆ. ಜಗದೀಶ್ (ಜೆ.ಕೆ), ಆರ್.ಅಪ್ಪಾಜಿ(ಕೊಡವತ್ತಿ) ಈ ಚಿತ್ರದ ಸಹ‌ ನಿರ್ಮಾಪಕರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಗುರುತಿಸಿಕೊಂಡಿರುವ ಜ್ಯೂನಿಯರ್ ನರಸಿಂಹರಾಜು ಅವರ ಸಾರಥ್ಯದಲ್ಲಿ ಈ ಚಿತ್ರ ತಯಾರಾಗಿದೆ.

ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ನೀಡಿದ್ದಾರೆ.

ಕೃಷ್ಣ ಮಳವಳ್ಳಿ ಸಂಭಾಷಣೆ ಬರೆದಿದ್ದಾರೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣ, ಸಿದ್ದು ಭಗತ್ ಸಂಕಲನ ಹಾಗೂ ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಸೀತಮ್ಮನ ಮಗನಿಗೆ ಗುರು ಬಲ! ಯತಿರಾಜ್‌ ಚಿತ್ರದ ಹಾಡಿಗೆ ದೇಶಪಾಂಡೆ ಸಾಥ್

ಕಲಾವಿದ ಯತಿರಾಜ್ ನಿರ್ದೇಶಿಸಿ, ನಟಿಸಿರುವ “ಸೀತಮ್ಮನ ಮಗ” ಚಿತ್ರದ ಹಾಡುಗಳು ಹೊರಬಂದಿವೆ. ನಿರ್ದೇಶಕ ಕಮ್ ನಿರ್ಮಾಪಕ ಗುರು ದೇಶಪಾಂಡೆ ಸಾಂಗ್‌ ರಿಲೀಸ್‌ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕೆಂಪೇಗೌಡ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲೇ ಈ ಚಿತ್ರ ನಿರ್ಮಾಣವಾಗಬೇಕಿತ್ತು. ಕಿಚ್ಚ ಸುದೀಪ್ ಅವರು ಸಹ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು. ಆದರೆ, ಕಾರಣಾಂತರದಿಂದ ಅದು ಆಗಲಿಲ್ಲ. ಈಗ ಕಾಲ ಕೂಡಿ ಬಂದಿದೆ. ನನ್ನ ಸ್ನೇಹಿತರೊಬ್ಬರ ಮೂಲಕ ಪರಿಚಿತರಾದ, ಉಪಾಧ್ಯಾಯರಾಗಿರುವ ಮಂಜುನಾಥ್ ನಾಯಕ್, ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ
ಚಿತ್ರದ ಚಿತ್ರೀಕರಣವನ್ನು ಚಿತ್ರದುರ್ಗದ ಬಳಿಯ ಪಂಡರಹಳ್ಳಿಯಲ್ಲಿ ಮಾಡಿದ್ದೇವೆ. ಸದ್ಯ ಸಂಗೀತ ನಿರ್ದೇಶಕ ವಿನು ಮನಸು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.

ಸದ್ಯದಲ್ಲೇ ನಮ್ಮ ಚಿತ್ರ ತೆರೆಗೆ ಬರಲು ಸಿದ್ದವಾಗಲಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ತಂತ್ರಜ್ಞರ ಕೈ ಚಳಕವೂ ಚೆನ್ನಾಗಿದೆ. ಎರಡು ಹಾಡುಗಳನ್ನು ಮಾನಸ ಹೊಳ್ಳ ಹಾಗೂ ಮೆಹಬೂಬ್ ಸಾಬ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಇಸ್ಮು ಮ್ಯೂಸಿಕ್ ಮೂಲಕ ಈ ಹಾಡುಗಳು ಬಿಡುಗಡೆಯಾಗಿದೆ ಎಂದು ನಿರ್ದೇಶಕ ಯತಿರಾಜ್ ಸಿನಿಮಾ ಕುರಿತು ವಿವರಣೆ ನೀಡಿದರು.

ಮಕ್ಕಳ ಸಿನಿಮಾ ಮಾಡಬೇಕೆಂಬುದು ನನ್ನ ಬಹು ದಿನಗಳ ಕನಸು. ಅದರಲ್ಲೂ ನಮ್ಮ ಪಂಡರಹಳ್ಳಿಯಲ್ಲೇ ಚಿತ್ರೀಕರಣ ಮಾಡಬೇಕೆಂಬ ಆಸೆಯಿತ್ತು. ಬಹಳ ವರ್ಷಗಳ ನಂತರ ನನ್ನ ಆಸೆ ಈಡೇರಿದೆ. ನಾನು ಸಿನಿಮಾ ಆರಂಭಿಸುವುದಾಗಿ ಹೇಳಿದಾಗ ಸಾಕಷ್ಟು ಜನ ನಿರ್ದೇಶಕರು ಫೋನ್ ಮಾಡಿದ್ದರು. ಆದರೆ ನಾನು ಯತಿರಾಜ್ ಅವರಿಗೆ ಸಿನಿಮಾ ಮಾಡಲು ಹೇಳಿದೆ. ಯತಿರಾಜ್ ಬಿಟ್ಟರೆ ಯಾರಿಂದಲೂ ಇಷ್ಟು ಚೆನ್ನಾಗಿ ಚಿತ್ರ ನಿರ್ದೇಶನ ಮಾಡಲು ಆಗುತ್ತಿರಲಿಲ್ಲವೇನೋ? ಎಂಬುದು ನನ್ನ ಅನಿಸಿಕೆ ಎಂದರು ನಿರ್ಮಾಪಕ ಮಂಜುನಾಥ್ ನಾಯಕ್.

ಸಹ ನಿರ್ಮಾಪಕ ಸುಮಿತ್ ನಾಯಕ್, ಮುಪ್ಪಣ್ಣ ಗೌಡ್ರು, ಸಂಗೀತ ನಿರ್ದೇಶಕ ವಿನು ಮನಸು, ಇಸ್ಮು ಮ್ಯೂಸಿಕ್ ನ ಇಸ್ಮಾಯಿಲ್, ಸೀತಮ್ಮನ ಪಾತ್ರಧಾರಿ ಚೈತ್ರ ಶ್ರೀನಿವಾಸ್, ಸೀತಮ್ಮನ ಮಗನಾಗಿ ಅಭಿನಯಿಸಿರುವ ಚರಣ್ ಕಾಸಾಲ ಹಾಗೂ ನಟಿ ಸೋನು ಸಾಗರ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಮೇಡ್ ಇನ್ ಚೈನಾ ಮಾರ್ಚ್ 11ಕ್ಕೆ ರಿಲೀಸ್

ನಾಗಭೂಷಣ್ ಹಾಗೂ ಪ್ರಿಯಾಂಕಾ ತಿಮ್ಮೇಶ್‌ ನಟನೆಯ ಮೇಡ್ ಇನ್ ಚೈನಾ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈಗಾಗಲೇ ಟೀಸರ್ ಮೂಲಕ‌ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದೆ.

ಈ ಮೊದಲು ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಂ ತೆಗ್ಗಿನಮನೆ ‘ಮೇಡ್​ ಇನ್​ ಚೈನಾ’ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್​ ತೊಟ್ಟಿದ್ದಾರೆ. ಜೊತೆಗೆ ಚಿತ್ರಕ್ಕೆ ಛಾಯಾಗ್ರಹಣ, ವಿಎಫ್​ಎಕ್ಸ್​, ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಕನ್ನಡದ ಮೊದಲ ವರ್ಚುವಲ್ ಸಿನಿಮಾ ಇದಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಪತಿಯು ವಿದೇಶದಲ್ಲಿ ಲಾಕ್ ಆಗುತ್ತಾನೆ. ಹೆಂಡತಿ ಭಾರತದಲ್ಲಿರುತ್ತಾಳೆ. ಇವರ ನಡುವೆ ನಡೆಯುವ ಕಥೆಯೇ ‘ಮೇಡ್ ಇನ್ ಚೈನಾ’.

ಮೇಡ್‌ ಇನ್‌ ಚೈನಾ ಚಿತ್ರದಲ್ಲಿ ಗೌರವ್ ಶೆಟ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಕೂಡ ನಟಿಸಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ವಿವಾನ್ ರಾಧಾಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಎನ್.ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್ ನಡಿ‌ ಈ ಸಿನಿಮಾವನ್ನು ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಪ್ರಸ್ತುತಪಡಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಗತವೈಭವಕ್ಕೆ ದುಶ್ಯಂತ್ ರೆಡಿ! ಸಿಂಪಲ್ ಸುನಿಯ ಹೊಸ ವೈಭವ…

ಕನ್ನಡ ಚಿತ್ರರಂಗದಲ್ಲಿ ಸಿಂಪಲ್ ಸುನಿ ಎಂದು ಖ್ಯಾತರಾಗಿರುವ ಸುನಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ನವನಟರನ್ನು ಪರಿಚಯಿಸಿದ್ದಾರೆ. ಈಗ ಆ ಸಾಲಿಗೆ ಸೇರ್ಪಡೆಯಾಗಿದ್ದಾರೆ ದುಶ್ಯಂತ್.
ಇವರಿಬ್ಬರ ಕಾಂಬಿನೇಶನ್ ನಲ್ಲಿ “ಗತವೈಭವ” ಚಿತ್ರ ಮೂಡಿಬರುತ್ತಿದೆ‌. ದೀಪಕ್ ತಿಮ್ಮಪ್ಪ ಹಾಗೂ ಸುನಿ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ನಾಯಕನನ್ನು ಪರಿಚಯಿಸುವ ಟೀಸರ್ ಒಂದನ್ನು ಸುನಿ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇತ್ತೀಚೆಗೆ “ಗತವೈಭವ” ಕ್ಕೆ ಚಾಲನೆ ಸಿಕ್ಕಿದೆ. ಗುಬ್ಬಿ ಶಾಸಕ ಶ್ರೀನಿವಾಸ್, ಲಹರಿ ವೇಲು, ನಿರ್ಮಾಪಕ ಪುಷ್ಕರ್, ನಿರ್ದೇಶಕರಾದ ಪವನ್ ಒಡೆಯರ್ , ಮಹೇಶ್ ಕುಮಾರ್ ಹಾಗೂ ವಿತರಕ ಸುಪ್ರೀತ್ ಚಿತ್ರತಂಡಕ್ಕೆ ಶುಭ ಕೋರಿದರು.

ದುಶ್ಯಂತ್ ಹೇಳಿದ್ದಿಷ್ಟು.’ ನಾನು ಮೂಲತಃ ತುಮಕೂರಿನವನು. ವಿದೇಶದಲ್ಲಿ ಎಲ್ ಎಲ್ ಬಿ ಓದಿದ್ದೇನೆ. ಆದರೆ ಅಭಿನಯದಲ್ಲಿ ಆಸಕ್ತಿ ಹೆಚ್ಚು . ಮೊದಲು ನಾನು ಅಪ್ಪು ಅವರನ್ನು ನೆನೆಯುತ್ತೇನೆ . ಈ ಚಿತ್ರದ ಟೀಸರ್ ಕಳೆದ ವರ್ಷ ಸಿದ್ಧವಾಗಿತ್ತು. ಮೊದಲು ನಾವು ತೋರಿಸಿದ್ದೆ ಅಪ್ಪು ಅವರಿಗೆ. ಚಿತ್ರರಂಗಕ್ಕೆ ಬರುವವರಿಗೆ ಕಾಲೆಳೆಯುವವರೆ ಹೆಚ್ಚು. ಆದರೆ ನಿನಗೆ ಒಳ್ಳೆಯ ಭವಿಷ್ಯವಿದೆ. ಚಿತ್ರದಲ್ಲಿ ನಟಿಸು ಎಂದಿದ್ದರು ಅಪ್ಪು. ಅವರ ಮಾತುಗಳು ನನಗೆ ಸ್ಪೂರ್ತಿ.
ನಮ್ಮದು ಸಂಪ್ರದಾಯಸ್ಥರ ಕುಟುಂಬ. ಸಿನಿಮಾದಲ್ಲಿ ನಟಿಸುವುದು ನನ್ನ ತಂದೆ, ತಾಯಿಗೆ ಇಷ್ಟವಿರಲಿಲ್ಲ. ಕೊನೆಗೆ ತಾಯಿಯನ್ನು ಒಪ್ಪಿಸಿದೆ.

ತಂದೆ ಈಗಲೂ ಪೂರ್ಣ ಒಪ್ಪಿಗೆ ನೀಡಿಲ್ಲ. ನಾನು ವಿದೇಶದಲ್ಲಿ ಓದುತ್ತಿದ್ದಾಗ ದಿನ ಕನ್ನಡಿ ಮುಂದೆ ನಿಂತು ನಟನಂತೆ ಅಭಿನಯಿಸುತ್ತಿದೆ. ಬನ್ನೇರುಘಟ್ಟದ ಬಳಿ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವ ನಾಟಕವೊಂದಕ್ಕೆ ಹೋದಾಗ ಕಲಾವಿದರೆಲ್ಲಾ ಒಂದು ಕಡೆ ಬನ್ನಿ ಎಂದರು . ಅವರು ಕಲಾವಿದ ಅಂದ ತಕ್ಷಣ ನನ್ನ ಮನಸ್ಸಿನಲ್ಲಿ ನಟನಾಗಬೇಕೆಂಬ ಹಂಬಲ ಹೆಚ್ಚಾಯಿತು.‌ ನಂತರ ಅಭಿನಯಕ್ಕೆ ಬೇಕಾದ ತರಬೇತಿ ಪಡೆದೆ. ನನ್ನ ಸ್ನೇಹಿತರೊಬ್ಬರ ಮೂಲಕ ಸುನಿ ಅವರ ಪರಿಚಯವಾಯಿತು.


ಕಥೆ ಸಿದ್ದವಾಯಿತು. ನಿರ್ಮಾಪಕರ ಹುಡುಕಾಟ ಆರಂಭವಾಯಿತು ಎಂದರು ದುಶ್ಯಂತ್.
ಕೆಲವರು ಹೇಳುತ್ತಾರೆ ದುಡ್ಡಿರುವವರ ಮಕ್ಕಳು ಹೀರೋ ಆಗುತ್ತಾರೆ ಅಂತ. ನಾನು ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಪುತ್ರ. ಆದರೆ ನಮ್ಮ ತಂದೆಗೆ ನಾನು ಚಿತ್ರರಂಗಕ್ಕೆ ಬರಲು ಇಷ್ಟವಿಲ್ಲ. ನನಗೆ ಇದಲ್ಲದೆ ಬೇರೆ ಇಷ್ಟವಿಲ್ಲ ಹಾಗಾಗಿ ನಾನು ನಿರ್ಮಾಪಕರ ಹುಡುಕಿ ಹಣ ಹೊಂದಿಸಲು ಒಂದು ವರ್ಷಕ್ಕೂ ಅಧಿಕ ಸಮಯ ತೆಗೆದು ಕೊಂಡೆ ಎಂದು ದುಶ್ಯಂತ್ ತಿಳಿಸಿದರು.

ನಾವು ರಾಜಕೀಯ ವ್ಯಕ್ತಿಗಳು ನಿಮಗಿಂತ ಚೆನ್ನಾಗಿ ನಟನೆ ಮಾಡುತ್ತೇವೆ. ಆದರೆ ನಾನು ನನ್ನ ಮಗನನ್ನು ಬೆಳೆಸಿದ ರೀತಿಯ ಬೇರೆ. ಅವನ ಆಯ್ಕೆಯೇ ಬೇರೆ. ಚುನಾವಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ನನಗೆ ಸಿನಿಮಾ ನಿರ್ಮಾಣ ದೊಡ್ಡ ವಿಷಯವಲ್ಲ. ಆದರೆ ನನಗಿಷ್ಟವಿಲ್ಲದ ಕೆಲಸಕ್ಕೆ ನಾನು ಕೊಡಲ್ಲ. ಈ ಚಿತ್ರತಂಡ ನೋಡಿದರೆ ಸಂತೋಷವಾಗುತ್ತಿದೆ. ನನ್ನ ಮಗನಿಂದ ಒಳ್ಳೆಯದು ಆಗದಿದ್ದರೂ ಪರವಾಗಿಲ್ಲ ಯಾರಿಗೂ ಕೆಟ್ಟದಾಗುವುದು ಬೇಡ ಎಂದರು ಗುಬ್ಬಿ ಶಾಸಕ ಶ್ರೀನಿವಾಸ್.

“ಗತವೈಭವ” ಎಂದರೆ ಗತಿಸಿ ಹೋದ ವೈಭವ ಎಂದು. ಈ ನಮ್ಮ ಚಿತ್ರದಲ್ಲಿ ವಾಸ್ಕೋಡಿಗಾಮನ ಕಥೆ ಸೇರಿದಂತೆ ಕೆಲವು ಐತಿಹಾಸಿಕ ಸನ್ನಿವೇಶಗಳಿರುತ್ತದೆ. ಫನ್, ಸೆಂಟಿಮೆಂಟ್ ಹಾಗೂ ಮೈಂಡ್ ಗೇಮ್ ನ ಮಿಶ್ರಣ ಅನ್ನಬಹುದು. ದುಶ್ಯಂತ್ ಗೆ ಸ್ಟೇಜ್ ಫಿಯರ್ ಇಲ್ಲ. ಟೀಸರ್ ನಲ್ಲಿ ಆತನ ಅಭಿನಯಕ್ಕೆ ಹಾಗೂ ಧ್ವನಿಗೆ ಹೆಚ್ಚಿನ ಪ್ರಶಂಸೆ ವ್ಯಕ್ತವಾಗಿದೆ. ಏಪ್ರಿಲ್ ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದರು ಸುನಿ.

ನಾನು ದುಶ್ಯಂತ್ ಅಕ್ಕಪಕ್ಕದ ಮನೆಯವರು. ಸುಮಾರು ಇಪ್ಪತ್ತು ವರ್ಷಗಳ ಪರಿಚಯ.‌ ದುಶ್ಯಂತ್ ನನ್ನ ಬಳಿ ಈ ವಿಷಯ ಹೇಳಿದಾಗ ನಿರ್ಮಾಣಕ್ಕೆ ಮುಂದಾದೆ. ನನ್ನೊಂದಿಗೆ ಸುನಿ ಸಹ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ ಎಂದರು ನಿರ್ಮಾಪಕ ದೀಪಕ್ ತಿಮ್ಮಪ್ಪ.

ಛಾಯಾಗ್ರಾಹಕ ವಿಲಿಯಂ ಡೇವಿಡ್, ಸಂಗೀತ ನಿರ್ದೇಶಕ ಭರತ್ ಬಿ.ಜೆ, ಸಂಕಲನಕಾರ ಆಶಿಕ್, ಕಲಾ ನಿರ್ದೇಶಕ ಶಿವಕುಮಾರ್, ವಿ ಎಫ್ ಎಕ್ಸ್ ಸೂಪರ್ ವೈಸರ್ ನಿರ್ಮಲ್ ಕುಮಾರ್ ಹಾಗೂ ಸಾಹಸ ನಿರ್ದೇಶಕ ಚೇತನ್ ಡಿಸೋಜ ಮುಂತಾದವರು ಈ ಚಿತ್ರದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಜನಾರ್ದನ ರೆಡ್ಡಿ ಪುತ್ರ ಈಗ ಹೀರೋ! ವಾರಾಹಿ ಪ್ರೊಡಕ್ಷನ್ ಹೌಸ್ ನ 15ನೇ ಸಿನಿಮಾ ಅನೌನ್ಸ್…

ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಹೈ ಬಜೆಟ್ ಹಾಗೂ ಕಂಟೆಂಟ್ ಸಿನಿಮಾಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದೆ. ಇದೀಗ ವಾರಾಹಿ ರಾಧಾ ಕೃಷ್ಣ ಸಾರಥ್ಯದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡುತಿದ್ದು, ಈ ಚಿತ್ರದ ಮೂಲಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿಯನ್ನು ನಾಯಕನಾಗಿ ಪರಿಚಯಿಸುತ್ತಿದೆ.

ಇನ್ನೂ ಹೆಸರಿಡದ ಈ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿದ್ದು ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದ್ದು,‌ ಹಲವು ಸೂಪರ್ ಹಿಟ್ ಸಿನಿಮಾಗಳ ತಂತ್ರಜ್ಞರು ಈ ಸಿನಿಮಾದ ಭಾಗವಾಗಿದ್ದಾರೆ.

ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವನ್ನು ಮಾಡಲಿದ್ದಾರೆ. ರವೀಂದರ್ ಆರ್ಟ್ ಡೈರೆಕ್ಟರ್ ಆಗಿ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಸೀಕ್ವೆನ್ಸ್‌ಗಳಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ.

ಮಾರ್ಚ್ 4 ರಂದು ಚಿತ್ರದ ಅದ್ಧೂರಿ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಇತರ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

Categories
ಸಿನಿ ಸುದ್ದಿ

ಕರ್ಮದ ಮರ್ಮ ತಿಳಿಸೋ ಇನ್ ಸ್ಟಂಟ್ ಕರ್ಮ: ಏಪ್ರಿಲ್ ಗೆ ರಿಲೀಸ್

ನಾವು ಮಾಡಿದ ಕರ್ಮಕ್ಕೆ ಪ್ರತಿಫಲ ಅನುಭವಿಸಬೇಕೆಂದು ಎಂಬ ಮಾತಿದೆ. ಅದು ಯಾವತ್ತೊ ಅಲ್ಲ. ಈಗ ಮಾಡಿದ್ದು ಈಗಲೇ ಅನುಭವಿಸಬೇಕು ಎಂಬ ವಿಷಯವ ಇಟ್ಟುಕೊಂಡು “ಇನ್ ಸ್ಟಂಟ್ ಕರ್ಮ” ಚಿತ್ರ ರೆಡಿಯಾಗಿದೆ . ಈ ಚಿತ್ರಕ್ಕೆ ಸಂದೀಪ್ ಮಹಾಂತೇಶ್ ನಿರ್ದೇಶಕರು.

ನಾನು ಈ ಹಿಂದೆ “D k ಬೋಸ್” ಚಿತ್ರ ನಿರ್ದೇಶನ ಮಾಡಿದ್ದೆ. ಮಾಧ್ಯಮದಿಂದ ಈ ಚಿತ್ರಕ್ಕೆ ಒಳ್ಳೆ ಪ್ರಶಂಸೆ ಸಿಕ್ಕಿತ್ತು. ಆದರೆ ನಿರೀಕ್ಷಿಸಿದಷ್ಟು ಗೆಲವು ಸಿಗಲಿಲ್ಲ. ಆ ಚಿತ್ರದಲ್ಲಾದ ತಪ್ಪುಗಳನ್ನು ಸರಿಪಡಿಸಿಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ನಾಲ್ಕು ಪ್ರಮುಖ ಪಾತ್ರಗಳ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ನಾನು ನನ್ನ ತಾಯಿಯನ್ನು‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲೊಂದು ಘಟನೆ ನಡೆಯಿತು. ಅದನ್ನು ಸ್ಪೂರ್ತಿಯಾಗಿಟ್ಟುಕೊಂಡು ಕಥೆ ಮಾಡಿದ್ದೇನೆ. ಸೆನ್ಸಾರ್ ನಮ್ಮ ಚಿತ್ರಕ್ಕೆ ಯು\ಎ ಪ್ರಮಾಣಪತ್ರ ನೀಡಿದೆ. ಏಪ್ರಿಲ್ ಒಂದರಂದು ಬಿಡುಗಡೆಯಾಗಲಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದರು.

ಯಶ್ ಶೆಟ್ಟಿ ಚಿತ್ರದ ಪ್ರಮುಖ ಆಕರ್ಷಣೆ. ಈ ಬಗ್ಗೆ ಹೇಳುವ ಅವರು, ನಾನು ಈ ಚಿತ್ರದ ಪ್ರಮುಖ ಪಾತ್ರಧಾರಿ. ಹೀರೋ ಎನ್ನುವುದಕ್ಕಿಂತ, ಕಥೆಯೇ ಈ ಚಿತ್ರದ ಹೀರೋ ಎನ್ನಬಹುದು. ಅಷ್ಟು ಚೆನ್ನಾಗಿ ನಮ್ಮ ನಿರ್ದೇಶಕರು ಕಥೆ ಹೆಣೆದಿದ್ದಾರೆ. ನಮಗೆ ಏನೇ ಸಂದೇಹ ಬಂದರೂ ನಿರ್ದೇಶಕರು ಅದಕ್ಕೆ ಸ್ಪಷ್ಟನೆ ನೀಡುತ್ತಿದ್ದರು ಎಂದರು ನಟ ಯಶ್ ಶೆಟ್ಟಿ.

ಪ್ರಮುಖಪಾತ್ರದಲ್ಲಿ ನಟಿಸಿರುವ ಅಂಜನ್ ದೇವ್(ಸಲಗ), ಹರಿ, ಪ್ರಜ್ವಲ್ ಶೆಟ್ಟಿ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಧನಂಜಯ, ಪನೀತ್ ಮುಂತಾದವರು ಚಿತ್ರದ ಕುರಿತಾದ ತಮ್ಮ ಅನುಭವ ಹಂಚಿಕೊಂಡರು.

ಮೂವತ್ತೈದು ಕೆಜಿ ಭಾರವುಳ್ಳ ಕ್ಯಾಮೆರಾವನ್ನು ಇಡೀ ದಿನ ಹೆಗಲ ಮೇಲೆ ಹೊತ್ತು ಚಿತ್ರೀಕರಣ ಮಾಡಿದ ಬಗ್ಗೆ ಛಾಯಾಗ್ರಾಹಕ ಭಾಸ್ಕರ್ ಹೆಗ್ಡೆ ಹೇಳಿಕೊಂಡರು. ಸೂರಜ್ ಜೋಯಿಸ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು.

ಸಂತೋಷ್ ಮಹಾಂತೇಶ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಸಂದೀಪ್ ಮಹಾಂತೇಶ್ ಹಾಗೂ ಸಂಕಲನಕಾರ ಸುರೇಶ್ ಆರ್ಮುಗಂ ಕೂಡ ಈ ಚಿತ್ರದ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ರೈತನಿಗೆ ಗಾನ ನಮನ; ಇದು ALL OK ಗೆಳೆಯರ ಶ್ರಮ

ಪ್ರತಿಯೊಬ್ಬನ ಜೀವನವೂ ಆತ ತಿನ್ನುವ ಅನ್ನದಿಂದ ನಡೆಯುತ್ತಿದೆ. ಇಂತಹ ಅನ್ನವನ್ನು ನಮಗೆ ನೀಡುತ್ತಿರುವ “ರೈತ” ನಿಜಕ್ಕೂ ಅನ್ನದಾತ.

ಇಂತಹ “ರೈತ” ನಿಗೆ ನಮನ ಸಲ್ಲಿಸುವ ಸಲುವಾಗಿ ಸಂಜಯ್ ಗೌಡ ಅವರು “ರೈತ” ಎಂಬ ಹೆಸರಿನಲ್ಲೇ ಆಲ್ಬಂ ಸಾಂಗ್ ನಿರ್ಮಾಣ ಮಾಡಿದ್ದಾರೆ.
ತಮ್ಮ ಅಮೋಘ ಗಾಯನದ ಮೂಲಕ ಖ್ಯಾತರಾಗಿರುವ ALL OK ಈ ಹಾಡನ್ನು ಬರೆದು, ಹಾಡಿ, ಸಂಗೀತ ನೀಡಿದ್ದಾರೆ. ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಹಾಡು ಬಿಡುಗಡೆಯಾಗಿದೆ.
ರೈತರ ಮಕ್ಕಳು ಈ ಹಾಡನ್ನು ಲೋಕಾರ್ಪಣೆ ಮಾಡದ್ದು ವಿಶೇಷ.


ಸಾಯಿಗೋಲ್ಡ್ ಪ್ಯಾಲೆಸ್ ನ ಶರವಣ, ಯುನೈಟೆಡ್ ಆಸ್ಪತ್ರೆಯ ಶಾಂತಕುಮಾರ್, ಅನಂತು, ನಟ ಉಪೇಂದ್ರ ಅವರ ಸಹೋದರ ಸುಧೀಂದ್ರ ಸೇರಿದಂತೆ ಅನೇಕರು ಈ ಸ ಸಮಾರಂಭಕ್ಕೆ ಆಗಮಿಸಿದ್ದರು.

ನಾವು ಮಕ್ಕಳನ್ನು ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ ? ಅಂತ ಕೇಳಿದಾಗ, ಅವರು ಡಾಕ್ಟರ್, ಇಂಜಿನಿಯರ್ ಆಗುತ್ತೀನಿ ಎನ್ನುತ್ತಾರೆ ಹೊರೆತು ರೈತ ಆಗುತ್ತೀನಿ ಅನ್ನುವುದಿಲ್ಲ. ನಾನು ರೈತ ಆಗುತ್ತೀನಿ ಅನ್ನುವ ದಿನ ಬೇಗ ಬರಬೇಕು ಎಂಬುದೇ ನಮ್ಮ‌ ಆಸೆ. ನಾನು ಹಾಗೂ ಸಂಜಯ್ ಗೌಡ ಇಬ್ಬರು ಬಾಲ್ಯ ಸ್ನೇಹಿತರು. ಹಿಂದೆ KA01 ಎಂಬ ಆಲ್ಬಂ ಸಾಂಗ್ ಮಾಡಿ ವಿದೇಶದಲ್ಲಿ ಬಿಡುಗಡೆ ಮಾಡಿದ್ದೆವು. ಈಗ ರೈತನ ಕುರಿತಾದ ಈ ಗೀತೆ ತಂದಿದ್ದೀವಿ. ಈ ವಿಷಯವನ್ನು ರಾಜಕೀಯ ವ್ಯಕ್ತಿಗಳು ಸೇರಿದಂತೆ ಅನೇಕ ‌ಗಣ್ಯರ ಮುಂದೆ ಹೇಳಿದಾಗ ಸಂತೋಷದಿಂದ ಸಾಥ್ ನೀಡಿದರು. ಛಾಯಾಗ್ರಾಹಕ ಆಕಾಶ್ ಜೋಶಿ ಸೇರಿದಂತೆ ಎಲ್ಲಾ ತಂತ್ರಜ್ಞರ ಸಾಹಕಾರ ಅಪಾರ ಎಂದರು ALL OK.

ನನ್ನನ್ನು ಪರದೆಯ ಮೇಲೆ ತರುವ ಸಲುವಾಗಿ ಗೆಳೆಯ ALL OK ಈ ವಿಭಿನ್ನ ಹಾಡನ್ನು ಮಾಡಿದ್ದಾನೆ.. ಆದರೆ ನಾವು ಪರದೆಯ ಮೇಲೆ ಬರುವುದಕ್ಕಿಂತ ನಮಗೆ ತಿನ್ನಲು ಅನ್ನ ನೀಡುತ್ತಿರುವ ರೈತನಿಗೆ ನಮನ ಸಲ್ಲಿಸುವ ಈ “ರೈತ” ಆಲ್ಬಂ ಸಾಂಗ್ ಬಿಡುಗಡೆ ಮಾಡಲಾಗಿದೆ. ರೈತನಿಗೆ ನೋಡಿ ಪ್ರಮೋಷನ್, ಇನ್ಕ್ರಿಮೆಂಟ್, ರಿಟೈರ್ ಮೆಂಟ್ ಏನು ಇಲ್ಲ. ಯಾವಾಗಲೂ ದುಡಿಮೆಯೇ ಆತನ ಜೀವನ. ನಮ್ಮ
ಮಕ್ಕಳು ರಜೆ ದಿನಗಳಲ್ಲಿ ಅಲ್ಲಿಇಲ್ಲಿ ಕರೆದುಕೊಂಡು ಹೋಗು ಎನ್ನುವ ಬದಲು ಹೊಲ,ಗದ್ದೆಗಳಿಗೆ ಕರೆದುಕೊಂಡು ಹೋಗು ನಾನು ನೋಡಬೇಕು ಎನ್ನುವಂತಾಗಲಿ ಎಂದು ಸಂಜಯ್ ಗೌಡ ಆಶಿಸಿದರು.


ಈ ಹಾಡಿನಲ್ಲಿ ನನ್ನೊಂದಿಗೆ ಸೋನು ಗೌಡ ಅಭಿನಯಿಸಿದ್ದಾರೆ. ತಂತ್ರಜ್ಞರ ಕೆಲಸ ಉತ್ತಮವಾಗಿದೆ. ರೈತರ ಮೇಲಿನ ಗೌರವದಿಂದ ಅನೇಕ ಗಣ್ಯರು ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಮುಂದೊಂದು ದಿನ ರೈತನ ಕುರಿತಾದ ಚಿತ್ರ ನಿರ್ಮಾಣ ಮಾಡುತ್ತೇನೆ ಎಂದ ಸಂಜಯ್ ಗೌಡ ಅವರು, ಕಾರ್ಯಕ್ರಮ ಬಂದ ಎಲ್ಲಾ ಅತಿಥಿಗಳಿಗೆ ಧನ್ಯವಾದ ತಿಳಿಸಿದರು.

ಸಂಜಯ್ ಗೌಡ ಮತ್ತು ALL OK ತಂಡದವರನ್ನು ಶರವಣ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ವಿಮೆ ಇಲ್ಲದ ರೈತನ ಕುಟುಂಬದಲ್ಲಿ ಯಾರಿಗಾದರೂ ತೊಂದರೆಯಾದರೆ, ಕೇವಲ ಅವರ ಚಿಕಿತ್ಸೆ ವೆಚ್ಚದಲ್ಲಿ 50% ಕಡಿಮೆ ಮಾಡುವುದಾಗಿ ಯುನೈಟೆಡ್ ಆಸ್ಪತ್ರೆಯ ಶಾಂತಕುಮಾರ್ ಹೇಳಿದರು.

ಭೋಧಿ ಟ್ರೀ ಸಂಸ್ಥೆಯವರು
ಸುಮಾರು ನೂರೈವತ್ತಕ್ಕೂ ಅಧಿಕ ಮಕ್ಕಳಿಗೆ ವಿಶೇಷ ಕಿಟ್ ನೀಡಿದರು. ALL OK ಚಿತ್ರರಂಗ ಪ್ರವೇಶಿಸಿ ಹದಿನೈದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಗೌರವಿಸಿದರು.

error: Content is protected !!