ಬೆಟ್ಟದ ದಾರಿ ತುಳಿದ ಮಕ್ಕಳು! ನೀರಿನ ಸಮಸ್ಯೆ ಪರಿಹರಿಸೋ ಕಥೆ ಇದು…

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮಕ್ಕಳ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ “ಬೆಟ್ಟದ ದಾರಿ” ಸಿನಿಮಾ ಕೂಡ ಒಂದು. ಬೆಟ್ಟದ ದಾರಿ ಅಂದಾಕ್ಷಣ ಥಟ್ಟನೆ ನೆನಪಾಗೋದೇ ಪುನೀತ್‌ ರಾಜಕುಮಾರ್‌ ಅವರು ನಟಿಸಿದ ಅದ್ಭುತ ಸಿನಿಮಾ ಬೆಟ್ಟದ ಹೂವು. ಹಾಗಂತ ಆ ಸಿನಿಮಾಗೆ ಈ ಚಿತ್ರವನ್ನು ಹೋಲಿಸುತ್ತಿಲ್ಲ. ಅದು ಬೆಟ್ಟದ ಹೂವು, ಇದು ಬೆಟ್ಟದ ದಾರಿ

ಇದೊಂದು ಉತ್ತರ ಕರ್ನಾಟಕ ಭಾಗದ ಕಥೆ. ಅದರಲ್ಲೂ ಅಲ್ಲಿನ ಜನರ ಬದುಕು ಬವಣೆ ಕುರಿತು ಹೇಳ ಹೊರಟಿರುವ ಕಥೆ. ಅದು ಬರಗಾಲದ ಪ್ರದೇಶ. ಆ ಭಾಗದ ಬಹುತೇಕ ಗ್ರಾಮಗಳಲ್ಲಿ ಬರಗಾಲವೇ ಹೆಚ್ಚು. ಜನರು ಕುಡಿಯಲೂ ನೀರು ಇಲ್ಲದೆ ಪರಿತಪಿಸುತ್ತಲೇ ಇದ್ದಾರೆ. ಅದಕ್ಕೆ ಪರಿಹಾರ ಅನ್ನೋದು ಗಗನ ಕುಸು. ಈ ಚಿತ್ರದ ಕಥೆ ಕೂಡ ಅದೇ ರೀತಿ ಇದೆ.

ಹೌದು, ಇಂಥದ್ದೊಂದು ಸಾಮಾಜಿಕ ಸಮಸ್ಯೆ ಇರುವಂತಹ ಕಥೆ ಇಟ್ಟುಕೊಂಡು ಮಕ್ಕಳ ಮೇಲೊಂದು ಸಿನಿಮಾ ಮಾಡಿರೋದು ನಿರ್ದೇಶಕ ಮಾ.ಚಂದ್ರು. ಈ ಹಿಂದೆ “ಬಂಗಾರಿ” ಸಿನಿಮಾ ಮಾಡಿದ್ದ ಮಾ.ಚಂದ್ರು ಆ ಬಳಿಕ “ನಡುಗಲ್ಲು” ಮತ್ತು “ಶಿವನಪಾದ” ಸಿನಿಮಾ ಮಾಡಿದ್ದಾರೆ. ಈಗ ಅವರ ನಿರ್ದೇಶನದ “ಬೆಟ್ಟದ ದಾರಿ” ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್‌ ೪ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ. ಇನ್ನು, ಈ ಚಿತ್ರ ಹೀರಾಲಾಲ್‌ ಮೂವೀಸ್‌ ಬ್ಯಾನರ್‌ನಲ್ಲಿ ತಯಾರಾಗಿದೆ. ಚಂದ್ರಕಲಾ ಟಿ.ಆರ್‌ ಹಾಗು ಮಂಜುನಾಥ ಹೆಚ್.ನಾಯಕ್‌ ಚಿತ್ರದ ನಿರ್ಮಾಪಕರು.

ತಮ್ಮ ಸಿನಿಮಾ ಕುರಿತು ಹೇಳುವ ನಿರ್ದೇಶಕರು, “ಇದೊಂದು ಮಕ್ಕಳ ಸಿನಿಮಾ. ಅದರಲ್ಲೂ ಸಾಹಸಮಯ ಕಥೆ ಇಲ್ಲಿದೆ. ಉತ್ತರ ಕರ್ನಾಟಕ ಭಾಗದ ಕಥೆ ಇಲ್ಲಿದೆ. ಒಂದು ಕುಗ್ರಾಮ. ಅಲ್ಲಿ ನೀರಿಲ್ಲದೆ ಜನ ಮತ್ತು ಜಾನುವಾರುಗಳು ಪರಿತಪಿಸುತ್ತವೆ. ನೀರಿಗಾಗಿ ಸಾಕಷ್ಟು ಹೋರಾಟ ನಡೆಸಿದರೂ ಅಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ. ನೀರಿಲ್ಲದೆಯೇ ಎಷ್ಟೋ ಸಾವು ನೋವುಗಳಾಗುತ್ತವೆ. ಅಂತಹ ಪರಿಸ್ಥಿತಿಯಲ್ಲೇ ಆ ಊರಿನ ಒಂದಷ್ಟು ಮಕ್ಕಳು ಒಗ್ಗೂಡಿ, ತನ್ನೂರಿಗೆ ಹೇಗಾದರೂ ಸರಿ ನೀರಿನ ಸಮಸ್ಯೆ ಪರಿಹರಿಸಬೇಕು ಅಂತ ಯೋಚಿಸುತ್ತಾರೆ.

ರಾಜಕಾರಣಿಗಳು, ಅಧಿಕಾರಿಗಳು ಯೋಚಿಸದೆ ನಿರ್ಲಕ್ಷಿಸುತ್ತಿರುವಾಗ, ಓದಿ, ಆಡಿ ನಲಿಯಬೇಕಾದ ಮಕ್ಕಳು ತನ್ನೂರಿನ ನೀರಿನ ಸಮಸ್ಯೆ ಪರಿಹರಿಸಬೇಕೆಂಬ ನಿಟ್ಟಿನಲ್ಲಿ ಹೋರಾಟಕ್ಕೆ ಸಜ್ಜಾಗುತ್ತಾರೆ. ಹೊಳೆಯ ನೀರನ್ನು ಊರಿಗೆ ತರಬೇಕು ಅಂತ ಹೋರಾಡಿದರೂ ಸಾಧ್ಯವಾಗುವುದಿಲ್ಲ. ಆದರೆ, ಒಂದು ವಿಶೇಷ ಸ್ಥಳದಿಂದ ನೀರು ಜಿನುಗುತ್ತದೆ. ಅದು ಕಡಿದಾದ ಬೆಟ್ಟದ ಮೇಲೆ. ಆ ಕಲ್ಲು ಮುಳ್ಳು ಹಾದಿಯಲ್ಲೇ ಸಾಗುವ ಒಂದಷ್ಟು ಮಕ್ಕಳು ತನ್ನೂರಿಗೆ ಅಲ್ಲಿಂದ ನೀರು ತರಲು ಮುಂದಾಗುತ್ತಾರೆ. ಅವರ ಹೋರಾಟ ಈಡೇರುತ್ತೋ ಇಲ್ಲವೋ ಅನ್ನೋದು ಚಿತ್ರದ ಕಥೆ.

ಸಿನಿಮಾದಲ್ಲಿ ನಿಶಾಂತ್‌ ಟಿ.ರಾಥೋಡ್‌ ಬಾಲನಟರಾಗಿ ನಟಿಸಿದ್ದು, ಇಡೀ ಚಿತ್ರದ ಮುಖ್ಯ ಆಕರ್ಷಣೆ ನಿಶಾಂತ್‌ ಟಿ.ರಾಥೋಡ್‌. ಉಳಿದಂತೆ ಚಿತ್ರದಲ್ಲಿ ಲಕ್ಷ್ಮೀ ಶ್ರೀ, ರಂಗನಾಥ್‌, ವಿಘ್ನೇಶ್‌ ಭರಮಸಾಗರ, ಅಲೋಕ್‌, ಶಾಶ್ವತಿ, ಪ್ರತೀಕ್ಷಾ, ಆಕಾಶ್‌ ಸೇರಿದಂತೆ ಹಲವು ಮಕ್ಕಳು ನಟಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಮಾ.ಚಂದ್ರು ಅವರೇ ಕಥೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ನಂದಕುಮಾರ್‌ ಕ್ಯಾಮೆರಾ ಹಿಡಿದರೆ, ಅರ್ಜುನ್‌ ಕಿಟ್ಟು ಸಂಕಲನ‌ವಿದೆ. ವೀರ್ ಸಮರ್ಥ್‌ ಅವರು ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ನಾಗೇಂದ್ರ ಪ್ರಸಾದ್‌, ಕೆ.ಕಲ್ಯಾಣ್‌, ವಿಜಯ್‌ ಭರಮಸಾಗರ ಅವರ ಗೀತ ಸಾಹಿತ್ಯ ಚಿತ್ರಕ್ಕಿದೆ. ಇನ್ನು, ವಾಸುಕಿ ವೈಭವ್‌, ಸಂಗೀತ ರವೀಂದ್ರನಾಥ್‌, ಗೋವಿಂದ ಕರ್ನೂಲ್‌ ಇತರರು ಹಾಡಿದ್ದಾರೆ.

ಚಿತ್ರದ ಮತ್ತೊಂದು ಆಕರ್ಷಣೆ ಅಂದರೆ, ಹಿರಿಯ ಕಲಾವಿದ ರಮೇಶ್‌ ಭಟ್‌, ಉಮೇಶ್‌, ಮನ್‌ದೀಪ್‌ ರಾಯ್‌, ಮೈಸೂರು ಮಲ್ಲೇಶ್‌, ಮಂಜುಳಾ ರೆಡ್ಡಿ, ರಿಚ್ಚ, ನಾಗೇಶ್‌ ಆರ್‌ ಇತರರು ನಟಿಸಿದ್ದಾರೆ. ಬಹುತೇಕ ಚಿತ್ರದ ಚಿತ್ರೀಕರಣ ವಿಜಾಪುರ ಸುತ್ತಮುತ್ತಲ ತಾಣಗಳಲ್ಲಿ ನಡೆದಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಹಾಡುಗಳು ಕೂಡ ಮೆಚ್ಚುಗೆ ಪಡೆದಿವೆ. ರಾಜ್ಯಾದ್ಯಂತ ಈ ಚಿತ್ರ ಮಾರ್ಚ್‌ ೪ ರಂದು ತೆರೆಗೆ ಬರುತ್ತಿದ್ದು, ಮಕ್ಕಳ ಚಿತ್ರವಾಗಿದ್ದರಿಂದ ವಿಶೇಷವಾಗಿ ಮಕ್ಕಳೊಂದಿಗೆ ಪೋಷಕರೂ ಕೂಡ ನೋಡಬಹುದಾದ ಚಿತ್ರವಿದು ಎಂಬುದು ಚಿತ್ರತಂಡದ ಹೇಳಿಕೆ.

ಚಿತ್ರದ ನಿರ್ಮಾಪಕರಾದ ಚಂದ್ರಕಲಾ ಟಿ.ಆರ್.‌ ಮತ್ತು ಮಂಜುನಾಥ ಹೆಚ್.ನಾಯಕ್‌ ಅವರಿಗೆ ಇದು ಎರಡನೇ ಸಿನಿಮಾ ಈ ಹಿಂದೆ ಕೂಡ ಅವರು “ಮೂಕ ಹಕ್ಕಿ” ಎಂಬ ಒಳ್ಳೆಯ ಚಿತ್ರ ನಿರ್ಮಿಸಿದ್ದರು. ಅದಾದ ಬಳಿಕ ಅವರು, ಸಾಮಾಜಿಕ ಪರಿಣಾಮ ಬೀರುವಂತಹ ಕಥೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ. ಸಿನಿಮಾಗೆ ಏನೇನು ಬೇಕು ಎಲ್ಲವನ್ನೂ ಪೂರೈಸಿ, ಒಂದೊಳ್ಳೆಯ ಸಿನಿಮಾ ಆಗೋಕೆ ಕಾರಣರಾಗಿದ್ದಾರೆ ಅನ್ನೋದು ನಿರ್ದೇಶಕ ಮಾ.ಚಂದ್ರು ಅವರ ಮಾತು.

ಇನ್ನು, ಮಕ್ಕಳು ಚಿತ್ರೀಕರಣ ವೇಳೆ ಸಾಕಷ್ಟು ಶ್ರಮಿಸಿದ್ದಾರೆ. ಬಿಸಿಲು ನಡುವೆಯೇ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ಕೆಲಸ ಮಾಡಿದ್ದಾರೆ. ಅವರೆಲ್ಲರ ಸಹಕಾರ ಮತ್ತು ನಿರ್ಮಾಪಕರ ಪ್ರೋತ್ಸಾಹದಿಂದ “ಬೆಟ್ಟದ ದಾರಿ” ನಿರೀಕ್ಷೆ ಮೀಡಿ ಮೂಡಿಬಂದಿದೆ. ಒಟ್ಟಾರೆ ಇದು ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳಿ ಹೇಗೆಲ್ಲಾ ಅಭಿವೃದ್ಧಿ ಕಾಣದೆ ಸೊರಗುತ್ತದೆ ಅನ್ನುವುದನ್ನು ಹೇಳುತ್ತದೆ. ಅಲ್ಲದೆ, ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಅನ್ನುವುದಕ್ಕೆ ಈ ಚಿತ್ರ ಸಾಕ್ಷಿ ಎನ್ನುತ್ತಾರೆ ನಿರ್ದೇಶಕರು.

Related Posts

error: Content is protected !!