ನಾಗಭೂಷಣ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ನಟನೆಯ ಮೇಡ್ ಇನ್ ಚೈನಾ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈಗಾಗಲೇ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದೆ.
ಈ ಮೊದಲು ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಂ ತೆಗ್ಗಿನಮನೆ ‘ಮೇಡ್ ಇನ್ ಚೈನಾ’ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಜೊತೆಗೆ ಚಿತ್ರಕ್ಕೆ ಛಾಯಾಗ್ರಹಣ, ವಿಎಫ್ಎಕ್ಸ್, ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಕನ್ನಡದ ಮೊದಲ ವರ್ಚುವಲ್ ಸಿನಿಮಾ ಇದಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಪತಿಯು ವಿದೇಶದಲ್ಲಿ ಲಾಕ್ ಆಗುತ್ತಾನೆ. ಹೆಂಡತಿ ಭಾರತದಲ್ಲಿರುತ್ತಾಳೆ. ಇವರ ನಡುವೆ ನಡೆಯುವ ಕಥೆಯೇ ‘ಮೇಡ್ ಇನ್ ಚೈನಾ’.
ಮೇಡ್ ಇನ್ ಚೈನಾ ಚಿತ್ರದಲ್ಲಿ ಗೌರವ್ ಶೆಟ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಕೂಡ ನಟಿಸಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ವಿವಾನ್ ರಾಧಾಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಎನ್.ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್ ನಡಿ ಈ ಸಿನಿಮಾವನ್ನು ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಪ್ರಸ್ತುತಪಡಿಸುತ್ತಿದ್ದಾರೆ.