ನಾವು ಮಾಡಿದ ಕರ್ಮಕ್ಕೆ ಪ್ರತಿಫಲ ಅನುಭವಿಸಬೇಕೆಂದು ಎಂಬ ಮಾತಿದೆ. ಅದು ಯಾವತ್ತೊ ಅಲ್ಲ. ಈಗ ಮಾಡಿದ್ದು ಈಗಲೇ ಅನುಭವಿಸಬೇಕು ಎಂಬ ವಿಷಯವ ಇಟ್ಟುಕೊಂಡು “ಇನ್ ಸ್ಟಂಟ್ ಕರ್ಮ” ಚಿತ್ರ ರೆಡಿಯಾಗಿದೆ . ಈ ಚಿತ್ರಕ್ಕೆ ಸಂದೀಪ್ ಮಹಾಂತೇಶ್ ನಿರ್ದೇಶಕರು.
ನಾನು ಈ ಹಿಂದೆ “D k ಬೋಸ್” ಚಿತ್ರ ನಿರ್ದೇಶನ ಮಾಡಿದ್ದೆ. ಮಾಧ್ಯಮದಿಂದ ಈ ಚಿತ್ರಕ್ಕೆ ಒಳ್ಳೆ ಪ್ರಶಂಸೆ ಸಿಕ್ಕಿತ್ತು. ಆದರೆ ನಿರೀಕ್ಷಿಸಿದಷ್ಟು ಗೆಲವು ಸಿಗಲಿಲ್ಲ. ಆ ಚಿತ್ರದಲ್ಲಾದ ತಪ್ಪುಗಳನ್ನು ಸರಿಪಡಿಸಿಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ನಾಲ್ಕು ಪ್ರಮುಖ ಪಾತ್ರಗಳ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ನಾನು ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲೊಂದು ಘಟನೆ ನಡೆಯಿತು. ಅದನ್ನು ಸ್ಪೂರ್ತಿಯಾಗಿಟ್ಟುಕೊಂಡು ಕಥೆ ಮಾಡಿದ್ದೇನೆ. ಸೆನ್ಸಾರ್ ನಮ್ಮ ಚಿತ್ರಕ್ಕೆ ಯು\ಎ ಪ್ರಮಾಣಪತ್ರ ನೀಡಿದೆ. ಏಪ್ರಿಲ್ ಒಂದರಂದು ಬಿಡುಗಡೆಯಾಗಲಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದರು.
ಯಶ್ ಶೆಟ್ಟಿ ಚಿತ್ರದ ಪ್ರಮುಖ ಆಕರ್ಷಣೆ. ಈ ಬಗ್ಗೆ ಹೇಳುವ ಅವರು, ನಾನು ಈ ಚಿತ್ರದ ಪ್ರಮುಖ ಪಾತ್ರಧಾರಿ. ಹೀರೋ ಎನ್ನುವುದಕ್ಕಿಂತ, ಕಥೆಯೇ ಈ ಚಿತ್ರದ ಹೀರೋ ಎನ್ನಬಹುದು. ಅಷ್ಟು ಚೆನ್ನಾಗಿ ನಮ್ಮ ನಿರ್ದೇಶಕರು ಕಥೆ ಹೆಣೆದಿದ್ದಾರೆ. ನಮಗೆ ಏನೇ ಸಂದೇಹ ಬಂದರೂ ನಿರ್ದೇಶಕರು ಅದಕ್ಕೆ ಸ್ಪಷ್ಟನೆ ನೀಡುತ್ತಿದ್ದರು ಎಂದರು ನಟ ಯಶ್ ಶೆಟ್ಟಿ.
ಪ್ರಮುಖಪಾತ್ರದಲ್ಲಿ ನಟಿಸಿರುವ ಅಂಜನ್ ದೇವ್(ಸಲಗ), ಹರಿ, ಪ್ರಜ್ವಲ್ ಶೆಟ್ಟಿ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಧನಂಜಯ, ಪನೀತ್ ಮುಂತಾದವರು ಚಿತ್ರದ ಕುರಿತಾದ ತಮ್ಮ ಅನುಭವ ಹಂಚಿಕೊಂಡರು.
ಮೂವತ್ತೈದು ಕೆಜಿ ಭಾರವುಳ್ಳ ಕ್ಯಾಮೆರಾವನ್ನು ಇಡೀ ದಿನ ಹೆಗಲ ಮೇಲೆ ಹೊತ್ತು ಚಿತ್ರೀಕರಣ ಮಾಡಿದ ಬಗ್ಗೆ ಛಾಯಾಗ್ರಾಹಕ ಭಾಸ್ಕರ್ ಹೆಗ್ಡೆ ಹೇಳಿಕೊಂಡರು. ಸೂರಜ್ ಜೋಯಿಸ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು.
ಸಂತೋಷ್ ಮಹಾಂತೇಶ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಸಂದೀಪ್ ಮಹಾಂತೇಶ್ ಹಾಗೂ ಸಂಕಲನಕಾರ ಸುರೇಶ್ ಆರ್ಮುಗಂ ಕೂಡ ಈ ಚಿತ್ರದ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ.