ಗತವೈಭವಕ್ಕೆ ದುಶ್ಯಂತ್ ರೆಡಿ! ಸಿಂಪಲ್ ಸುನಿಯ ಹೊಸ ವೈಭವ…

ಕನ್ನಡ ಚಿತ್ರರಂಗದಲ್ಲಿ ಸಿಂಪಲ್ ಸುನಿ ಎಂದು ಖ್ಯಾತರಾಗಿರುವ ಸುನಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ನವನಟರನ್ನು ಪರಿಚಯಿಸಿದ್ದಾರೆ. ಈಗ ಆ ಸಾಲಿಗೆ ಸೇರ್ಪಡೆಯಾಗಿದ್ದಾರೆ ದುಶ್ಯಂತ್.
ಇವರಿಬ್ಬರ ಕಾಂಬಿನೇಶನ್ ನಲ್ಲಿ “ಗತವೈಭವ” ಚಿತ್ರ ಮೂಡಿಬರುತ್ತಿದೆ‌. ದೀಪಕ್ ತಿಮ್ಮಪ್ಪ ಹಾಗೂ ಸುನಿ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ನಾಯಕನನ್ನು ಪರಿಚಯಿಸುವ ಟೀಸರ್ ಒಂದನ್ನು ಸುನಿ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇತ್ತೀಚೆಗೆ “ಗತವೈಭವ” ಕ್ಕೆ ಚಾಲನೆ ಸಿಕ್ಕಿದೆ. ಗುಬ್ಬಿ ಶಾಸಕ ಶ್ರೀನಿವಾಸ್, ಲಹರಿ ವೇಲು, ನಿರ್ಮಾಪಕ ಪುಷ್ಕರ್, ನಿರ್ದೇಶಕರಾದ ಪವನ್ ಒಡೆಯರ್ , ಮಹೇಶ್ ಕುಮಾರ್ ಹಾಗೂ ವಿತರಕ ಸುಪ್ರೀತ್ ಚಿತ್ರತಂಡಕ್ಕೆ ಶುಭ ಕೋರಿದರು.

ದುಶ್ಯಂತ್ ಹೇಳಿದ್ದಿಷ್ಟು.’ ನಾನು ಮೂಲತಃ ತುಮಕೂರಿನವನು. ವಿದೇಶದಲ್ಲಿ ಎಲ್ ಎಲ್ ಬಿ ಓದಿದ್ದೇನೆ. ಆದರೆ ಅಭಿನಯದಲ್ಲಿ ಆಸಕ್ತಿ ಹೆಚ್ಚು . ಮೊದಲು ನಾನು ಅಪ್ಪು ಅವರನ್ನು ನೆನೆಯುತ್ತೇನೆ . ಈ ಚಿತ್ರದ ಟೀಸರ್ ಕಳೆದ ವರ್ಷ ಸಿದ್ಧವಾಗಿತ್ತು. ಮೊದಲು ನಾವು ತೋರಿಸಿದ್ದೆ ಅಪ್ಪು ಅವರಿಗೆ. ಚಿತ್ರರಂಗಕ್ಕೆ ಬರುವವರಿಗೆ ಕಾಲೆಳೆಯುವವರೆ ಹೆಚ್ಚು. ಆದರೆ ನಿನಗೆ ಒಳ್ಳೆಯ ಭವಿಷ್ಯವಿದೆ. ಚಿತ್ರದಲ್ಲಿ ನಟಿಸು ಎಂದಿದ್ದರು ಅಪ್ಪು. ಅವರ ಮಾತುಗಳು ನನಗೆ ಸ್ಪೂರ್ತಿ.
ನಮ್ಮದು ಸಂಪ್ರದಾಯಸ್ಥರ ಕುಟುಂಬ. ಸಿನಿಮಾದಲ್ಲಿ ನಟಿಸುವುದು ನನ್ನ ತಂದೆ, ತಾಯಿಗೆ ಇಷ್ಟವಿರಲಿಲ್ಲ. ಕೊನೆಗೆ ತಾಯಿಯನ್ನು ಒಪ್ಪಿಸಿದೆ.

ತಂದೆ ಈಗಲೂ ಪೂರ್ಣ ಒಪ್ಪಿಗೆ ನೀಡಿಲ್ಲ. ನಾನು ವಿದೇಶದಲ್ಲಿ ಓದುತ್ತಿದ್ದಾಗ ದಿನ ಕನ್ನಡಿ ಮುಂದೆ ನಿಂತು ನಟನಂತೆ ಅಭಿನಯಿಸುತ್ತಿದೆ. ಬನ್ನೇರುಘಟ್ಟದ ಬಳಿ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವ ನಾಟಕವೊಂದಕ್ಕೆ ಹೋದಾಗ ಕಲಾವಿದರೆಲ್ಲಾ ಒಂದು ಕಡೆ ಬನ್ನಿ ಎಂದರು . ಅವರು ಕಲಾವಿದ ಅಂದ ತಕ್ಷಣ ನನ್ನ ಮನಸ್ಸಿನಲ್ಲಿ ನಟನಾಗಬೇಕೆಂಬ ಹಂಬಲ ಹೆಚ್ಚಾಯಿತು.‌ ನಂತರ ಅಭಿನಯಕ್ಕೆ ಬೇಕಾದ ತರಬೇತಿ ಪಡೆದೆ. ನನ್ನ ಸ್ನೇಹಿತರೊಬ್ಬರ ಮೂಲಕ ಸುನಿ ಅವರ ಪರಿಚಯವಾಯಿತು.


ಕಥೆ ಸಿದ್ದವಾಯಿತು. ನಿರ್ಮಾಪಕರ ಹುಡುಕಾಟ ಆರಂಭವಾಯಿತು ಎಂದರು ದುಶ್ಯಂತ್.
ಕೆಲವರು ಹೇಳುತ್ತಾರೆ ದುಡ್ಡಿರುವವರ ಮಕ್ಕಳು ಹೀರೋ ಆಗುತ್ತಾರೆ ಅಂತ. ನಾನು ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಪುತ್ರ. ಆದರೆ ನಮ್ಮ ತಂದೆಗೆ ನಾನು ಚಿತ್ರರಂಗಕ್ಕೆ ಬರಲು ಇಷ್ಟವಿಲ್ಲ. ನನಗೆ ಇದಲ್ಲದೆ ಬೇರೆ ಇಷ್ಟವಿಲ್ಲ ಹಾಗಾಗಿ ನಾನು ನಿರ್ಮಾಪಕರ ಹುಡುಕಿ ಹಣ ಹೊಂದಿಸಲು ಒಂದು ವರ್ಷಕ್ಕೂ ಅಧಿಕ ಸಮಯ ತೆಗೆದು ಕೊಂಡೆ ಎಂದು ದುಶ್ಯಂತ್ ತಿಳಿಸಿದರು.

ನಾವು ರಾಜಕೀಯ ವ್ಯಕ್ತಿಗಳು ನಿಮಗಿಂತ ಚೆನ್ನಾಗಿ ನಟನೆ ಮಾಡುತ್ತೇವೆ. ಆದರೆ ನಾನು ನನ್ನ ಮಗನನ್ನು ಬೆಳೆಸಿದ ರೀತಿಯ ಬೇರೆ. ಅವನ ಆಯ್ಕೆಯೇ ಬೇರೆ. ಚುನಾವಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ನನಗೆ ಸಿನಿಮಾ ನಿರ್ಮಾಣ ದೊಡ್ಡ ವಿಷಯವಲ್ಲ. ಆದರೆ ನನಗಿಷ್ಟವಿಲ್ಲದ ಕೆಲಸಕ್ಕೆ ನಾನು ಕೊಡಲ್ಲ. ಈ ಚಿತ್ರತಂಡ ನೋಡಿದರೆ ಸಂತೋಷವಾಗುತ್ತಿದೆ. ನನ್ನ ಮಗನಿಂದ ಒಳ್ಳೆಯದು ಆಗದಿದ್ದರೂ ಪರವಾಗಿಲ್ಲ ಯಾರಿಗೂ ಕೆಟ್ಟದಾಗುವುದು ಬೇಡ ಎಂದರು ಗುಬ್ಬಿ ಶಾಸಕ ಶ್ರೀನಿವಾಸ್.

“ಗತವೈಭವ” ಎಂದರೆ ಗತಿಸಿ ಹೋದ ವೈಭವ ಎಂದು. ಈ ನಮ್ಮ ಚಿತ್ರದಲ್ಲಿ ವಾಸ್ಕೋಡಿಗಾಮನ ಕಥೆ ಸೇರಿದಂತೆ ಕೆಲವು ಐತಿಹಾಸಿಕ ಸನ್ನಿವೇಶಗಳಿರುತ್ತದೆ. ಫನ್, ಸೆಂಟಿಮೆಂಟ್ ಹಾಗೂ ಮೈಂಡ್ ಗೇಮ್ ನ ಮಿಶ್ರಣ ಅನ್ನಬಹುದು. ದುಶ್ಯಂತ್ ಗೆ ಸ್ಟೇಜ್ ಫಿಯರ್ ಇಲ್ಲ. ಟೀಸರ್ ನಲ್ಲಿ ಆತನ ಅಭಿನಯಕ್ಕೆ ಹಾಗೂ ಧ್ವನಿಗೆ ಹೆಚ್ಚಿನ ಪ್ರಶಂಸೆ ವ್ಯಕ್ತವಾಗಿದೆ. ಏಪ್ರಿಲ್ ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದರು ಸುನಿ.

ನಾನು ದುಶ್ಯಂತ್ ಅಕ್ಕಪಕ್ಕದ ಮನೆಯವರು. ಸುಮಾರು ಇಪ್ಪತ್ತು ವರ್ಷಗಳ ಪರಿಚಯ.‌ ದುಶ್ಯಂತ್ ನನ್ನ ಬಳಿ ಈ ವಿಷಯ ಹೇಳಿದಾಗ ನಿರ್ಮಾಣಕ್ಕೆ ಮುಂದಾದೆ. ನನ್ನೊಂದಿಗೆ ಸುನಿ ಸಹ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ ಎಂದರು ನಿರ್ಮಾಪಕ ದೀಪಕ್ ತಿಮ್ಮಪ್ಪ.

ಛಾಯಾಗ್ರಾಹಕ ವಿಲಿಯಂ ಡೇವಿಡ್, ಸಂಗೀತ ನಿರ್ದೇಶಕ ಭರತ್ ಬಿ.ಜೆ, ಸಂಕಲನಕಾರ ಆಶಿಕ್, ಕಲಾ ನಿರ್ದೇಶಕ ಶಿವಕುಮಾರ್, ವಿ ಎಫ್ ಎಕ್ಸ್ ಸೂಪರ್ ವೈಸರ್ ನಿರ್ಮಲ್ ಕುಮಾರ್ ಹಾಗೂ ಸಾಹಸ ನಿರ್ದೇಶಕ ಚೇತನ್ ಡಿಸೋಜ ಮುಂತಾದವರು ಈ ಚಿತ್ರದ ಬಗ್ಗೆ ಮಾತನಾಡಿದರು.

Related Posts

error: Content is protected !!