“ವೀರ ಮದಕರಿ” ಚಿತ್ರದಿಂದ ಕನ್ನಡಿಗರ ಮನ ಗೆದ್ದಿರುವ ರಾಗಿಣಿ, ಈವರೆಗೂ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಅವರ ನಟನೆಯ ಚಿತ್ರ “ಸಾರಿ” (ಕರ್ಮ ರಿಟರ್ನ್ಸ್) ರಿಲೀಸ್ ಗೆ ರೆಡಿಯಾಗುತ್ತಿದೆ. ರಾಗಿಣಿ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ
ರಾಗಿಣಿ ಬರ್ತ್ ಡೇಗೆ ವಿಷ್ ಮಾಡಿದವರಿಗೆ ಥ್ಯಾಂಕ್ಸ್ ಹೇಳುತ್ತಲೆ, ಸಿನಿಮಾ ಕುರಿತು ಹೇಳಿಕೊಂಡರು. ‘ ನನ್ನನ್ನು ಪತ್ರಕರ್ತ ಅಫ್ಜಲ್ ಭೇಟಿಯಾಗಿ ಈ ಚಿತ್ರದ ಕುರಿತು ವಿವರಿಸಿದರು. ಕಥೆ ಇಷ್ಟವಾಯಿತು. ನಿರ್ದೇಶಕ ಬ್ರಹ್ಮ ಅತ್ಯುತ್ತಮ ತಂತ್ರಜ್ಞರು. ನಾನು ಒಂದೇ ತರಹದ ಪಾತ್ರ ಮಾಡಲು ಇಷ್ಟ ಪಡುವುದಿಲ್ಲ. ಬೇರೆ ಬೇರೆ ಪಾತ್ರ ಮಾಡಬೇಕೆಂಬುದು ನನ್ನ ಆಸೆ. ಇದರಲ್ಲೂ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮ ಹಾರೈಕೆ ಇರಲಿ ಎನ್ನುತ್ತಾರೆ ನಾಯಕಿ ರಾಗಿಣಿ ದ್ವಿವೇದಿ.
ನಾನು 2000 ನೇ ಇಸವಿಯಿಂದಲ್ಲೂ ಅನಿಮೇಷನ್ ಹಾಗೂ ವಿ ಎಫ್ ಎಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಕುರಿತು ಕೆಲವರಿಗೆ ತರಗತಿ ಕೂಡ ತೆಗೆದುಕೊಳ್ಳುತ್ತೇನೆ. ಹಿಂದೆ “ಸಿದ್ದಿ ಸೀರೆ” ಎಂಬ ಚಿತ್ರ ನಿರ್ದೇಶಿಸಿದ್ದ ನನಗೆ ಇದು ಎರಡನೇ ಚಿತ್ರ. ಅಫ್ಜಲ್ ಅವರು ಹೇಳಿದ ಒಂದೆಳೆ ಕಥೆ ಇಷ್ಟವಾಯಿತು. ನಾನು ಅದನ್ನು ಮುಂದುವರೆಸಿದೆ. ಇದರಲ್ಲಿ ಮಾಟ-ಮಂತ್ರ, ಬ್ಲ್ಯಾಕ್ ಮ್ಯಾಜಿಕ್ ಅಂತ ಏನು ಇಲ್ಲ. ಇದೊಂದು ಕ್ರೈಂ ಥ್ರಿಲ್ಲರ್. ಸೂಪರ್ ಹೀರೋ ಕಾನ್ಸೆಪ್ಟ್ ನ ಚಿತ್ರ ಕೂಡ ಎನ್ನುತ್ತಾರೆ ನಿರ್ದೇಶಕ ಬ್ರಹ್ಮ.
ಸಮಾರಂಭವೊಂದರಲ್ಲಿ ಬ್ರಹ್ಮ ಅವರ ಬಳಿ ಈ ಸಿನಿಮಾ ವಿಷಯ ಹೇಳಿದೆ. ನಂತರ ರಾಗಿಣಿ ಅವರು ಈ ಪಾತ್ರಕ್ಕೆ ಸೂಕ್ತ ಅನಿಸಿತು. ಅವರ ಬಳಿ ಹೋಗಿ ನೀವು ಈ ಚಿತ್ರದಲ್ಲಿ ನಟಿಸಬೇಕು ಎಂದು ಕೇಳಿದಾಗ, ತಕ್ಷಣ ಒಪ್ಪಿಕೊಂಡರು. ಅವರಿಗೆ ಧನ್ಯವಾದ. ಕೆನಡಾ ನಿವಾಸಿ ನವೀನ್ ಕುಮಾರ್ ಈ ಚಿತ್ರದ ನಿರ್ಮಾಪಕರು. ಜೈ ಕೃಪ್ಲಾನಿ ಹಾಗೂ ಜೇನ್ ಜಾರ್ಜ್ ಸಹ ನಿರ್ಮಾಪಕರು. ಬೆಂಗಳೂರು, ಸಕಲೇಶಪುರದ ಸುತ್ತ ಚಿತ್ರೀಕರಣ ಮಾಡಿದ್ದೇವೆ. ಮುಂದಿನ ಭಾಗದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ಮಾಹಿತಿ ನೀಡಿದರು.
ಛಾಯಾಗ್ರಾಹಕ ರಾಜೀವ್ ಗಣೇಶನ್ ಹಾಗೂ ನಟ ಸ್ವರ್ಣ ಚಂದ್ರ ಕೂಡ “ಸಾರಿ” ಚಿತ್ರದ ಬಗ್ಗೆ ಮಾತನಾಡಿದರು.
ಪ್ರಶಸ್ತಿಗಳು ಸುಮ್ಮನೆ ಹುಡುಕಿ ಬರೋದಿಲ್ಲ. ಅದಕ್ಕೆ ಪ್ರಾಮಾಣಿಕತೆ, ಪರಿಶ್ರಮ ಬೇಕು. ಇಲ್ಲೀಗ ಹೇಳ ಹೊರಟಿರುವ ವಿಷಯ, ಲಹರಿ ಮ್ಯೂಸಿಕ್ ಸಂಸ್ಥೆಗೆ ಹುಡುಕಿ ಬಂದ ಪ್ರಶಸ್ತಿ. ಹೌದು, ಈ ವರ್ಷ ಲಹರಿ ಮ್ಯೂಸಿಕ್ ಸಂಸ್ಥೆಗೆ ಯುಟ್ಯೂಬ್ ಡೈಮಂಡ್ ಅವಾರ್ಡ್ ಬಂತು. ಅದಷ್ಟೇ ಅಲ್ಲ, ಸಂಸ್ಥೆ ನಿರ್ಮಾಣ ಮಾಡಿದ ಆಲ್ಬಂ ಸಾಂಗ್ ಗೆ ಗ್ರ್ಯಾಮಿ ಅವಾರ್ಡ್ ಬಂತು. ಈಗ ಲಹರಿ ಸಂಸ್ಥೆಯ ಮತ್ತೊಂದು ಅಂಗ ಸಂಸ್ಥೆ ಎಂಆರ್ ಟಿ ಮ್ಯೂಸಿಕ್ ಗೆ ಗೋಲ್ಡ್ ಅವಾರ್ಡ್ ಕೂಡ ಲಭಿಸಿದೆ.
ಈ ಕುರಿತು ಲಹರಿ ವೇಲು ಖುಷಿಯನ್ನು ಹಂಚಿಕೊಂಡಿದ್ದಾರೆ. ‘ವಿಶೇಷವೆಂದರೆ ಇದು ಶುರುವಾಗಿ ಕೇವಲ ಆರು ತಿಂಗಳಾಗಿದೆ. ಅದಾಗಲೇ ಈ ಅವಾರ್ಡ್ ಲಭಿಸಿದೆ. ಇದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಸಂಗೀತ ಸಂಸ್ಥೆಯ ಎಲ್ಲಾ ಹಾಡುಗಳು ಸೇರಿದಂತೆ ಅಣ್ಣಾವ್ರ ಹಾಡು, ಅಂಬರೀಷ್ ಮತ್ತು ವಿಷ್ಣುವರ್ಧನ್ ಸಿನಿಮಾಗಳ ಗೀತೆಗಳು ಮತ್ತು ಕೆಜಿಎಫ್ 2 ಹಿಂದಿ ಭಾಷೆಯ ಹಾಡುಗಳನ್ನು ಮೊದಲ ಸಲ ಉತ್ತರ ಭಾರತ ಮಾರುಕಟ್ಟೆಯನ್ನು ನಾವೇಕೆ ಪ್ರವೇಶ ಮಾಡಬಾರದು ಅಂತ ಅಲ್ಲಿಯೂ ಕಾಲಿಟ್ಟು, ಅಲ್ಲೂ ಸಹ ಆಡಿಯೋ ಸೂಪರ್ ಹಿಟ್ ಆಗಿದೆ. ಹಾಗಾಗಿ ಗೋಲ್ಡ್ ಅವಾರ್ಡ್ ಗೆ ಇದೂ ಕಾರಣವಾಗಿದೆ.
ಎಂಆರ್ ಟಿ ಮ್ಯೂಸಿಕ್ ಲಹರಿ ಸಂಸ್ಥೆಯ ಅಂಗ ಸಂಸ್ಥೆ. ಕೇವಲ ಆರು ತಿಂಗಳಲ್ಲಿ ಬಂದಿರೋದು ದಾಖಲೆ. ಮುಂದಿನ ದಿನಗಳಲ್ಲಿ ಎಂಆರ್ ಟಿ ಸಂಸ್ಥೆಗೆ ಆದಷ್ಟು ಬೇಗ ಡೈಮಂಡ್ ಅವಾರ್ಡ್ ಬರುವಂತೆಯೇ ಶ್ರಮ ವಹಿಸುತ್ತೇವೆ ಎನ್ನುವ ಲಹರಿ ವೇಲು, ಈ ಪ್ರಶಸ್ತಿಗೆ ಕಾರಣರಾದ ಎಲ್ಲರಿಗೂ ನಾನು ಚಿರ ಋಣಿ. ಪ್ರಮುಖವಾಗಿ ಕಲಾ ಪ್ರೇಮಿಗಳು, ಸಿನಿಮಾ ನಿರ್ದೇಶಕರು, ನಿರ್ಮಾಪಕರು ಹಾಗು ಪತ್ರಕರ್ತರಿಗೆ ಧನ್ಯವಾದಗಳು ಎಂದಿದ್ದಾರೆ ವೇಲು.
ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ಬಹುಮುಖ್ಯವಾದ ಕ್ರೀಡೆ ಕಂಬಳ. ಈ ಕಂಬಳದ ಕುರಿತು “ವೀರ ಕಂಬಳ” ಎಂಬ ಚಿತ್ರವನ್ನು ಖ್ಯಾತ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿದ್ದಾರೆ
ಮೊದಲ ಸಲ ಕಂಬಳ ಕುರಿತು ರಾಜೇಂದ್ರ ಸಿಂಗ್ ಬಾಬು ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಕುರಿತು ಅವರು ಹೇಳಿದ್ದಿಷ್ಟು. ನಾನು ಜನಪ್ರಿಯ ವಾರಪತ್ರಿಕೆಯೊಂದರಲ್ಲಿ “ಕಂಬಳ’ದ ಕುರಿತು ಬರುತ್ತಿದ್ದ ಬರಹಗಳನ್ನು ಓದುತ್ತಿದ್ದೆ. ಆ ವಾರಪತ್ರಿಕೆಯ ಮುಖ್ಯಸ್ಥರು ನನಗೆ ಪರಿಚಯ. ಅವರಿಂದ ಕಂಬಳದ ಬಗ್ಗೆ ಇದ್ದ ಸಾಕಷ್ಟು ಆರ್ಟಿಕಲ್ ಗಳನ್ನು ತರಿಸಿಕೊಂಡು ಓದಿ, ಇದರ ಬಗ್ಗೆ ಸಿನಿಮಾ ಮಾಡಬೇಕೆಂದು ನಿರ್ಧಾರ ಮಾಡಿದೆ. ನಂತರ ತುಳು ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಭೇಟಿ ಮಾಡಿದೆ. ಅವರಿಂದ ಕಂಬಳದ ಬಗ್ಗೆ ಸಾಕಷ್ಟು ಮಾಹಿತಿ ದೊರಕಿತು. ಅರುಣ್ ರೈ ತೋಡಾರ್ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಮೂಡುಬಿದಿರೆ ಬಳಿ ಇದಕ್ಕಾಗಿ ದೊಡ್ಡ ಕಂಬಳದ ಮೈದಾನ ಸಿದ್ದವಾಯಿತು.
ಇಪ್ಪತ್ತು ಜೊತೆ ಕೋಣ. ಒಂದು ಕೋಣ ನೋಡಿಕೊಳ್ಳಲು ನಾಲ್ಕು ಜನ. ಸಹ ಕಲಾವಿದರು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಜನ ಒಂದು ದಿನದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಕೋಣಗಳ ಮೂಡ್ ಒಂದೇ ತರಹ ಇರುವುದಿಲ್ಲ. ಅದನೆಲ್ಲಾ ನೋಡಿಕೊಂಡು ಚಿತ್ರೀಕರಣ ಮಾಡಬೇಕಿತ್ತು. ಒಂದು ಸಲ ಓಟದ ಶಾಟ್ ತೆಗೆದರೆ, ಸುಮಾರು ಒಂದು ಗಂಟೆ ವಿಶ್ರಾಂತಿ. ನಂತರ ಚಿತ್ರೀಕರಣ. ಈ ಚಿತ್ರಕ್ಕೆ ಕಥೆಯೇ ಹೀರೋ. ಅದು ಬಿಟ್ಟರೆ, ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾಗಿರುವ ಶ್ರೀನಿವಾಸ ಗೌಡ ಹಾಗೂ ನಾಟಕ ಕಲಾವಿದ ಸ್ವರಾಜ್ ಶೆಟ್ಟಿ ಕಂಬಳ ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷಪಾತ್ರದಲ್ಲಿ ಆದಿತ್ಯ ಅಭಿನಯಿಸಿದ್ದಾರೆ. ರಾಧಿಕಾ ಚೇತನ್ ಪೊಲೀಸ್ ಕಮಿಷನರ್ ಆಗಿ ಕಾಣಿಸಿಕೊಂಡಿದ್ದಾರೆ. ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಾಂಜುರು ಸೇರಿದಂತೆ ಪ್ರಸಿದ್ದ ತುಳು ನಟರು ಈ ಚಿತ್ರದಲ್ಲಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಸ್ವಲ್ಪ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಖ್ಯಾತ ನಟ ಪ್ರಕಾಶ್ ರಾಜ್ ಅವರನ್ನು ಅಭಿನಯಿಸಲು ಕೇಳಿದ್ದೇವೆ. ಅವರು ಒಪ್ಪಿಗೆ ನೀಡಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ “ವೀರ ಕಂಬಳ” ನಿಮ್ಮ ಮುಂದೆ ಬರಲಿದೆ. ಈ ಚಿತ್ರಕ್ಕೆ ದೇಸಿ ಸಂಗೀತ ಬೇಕಿತ್ತು. ಹಾಗಾಗಿ ಅಲ್ಲಿನ ಬಗ್ಗೆ ತಿಳಿದಿರುವ ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಗಿರಿ ಈ ಚಿತ್ರದ ಛಾಯಾಗ್ರಾಹಕರು. ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಈ ಚಿತ್ರ ಬರುತ್ತಿದೆ. ತೆಲುಗು, ತಮಿಳು , ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಿಗೆ ಡಬ್ ಆಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೆ ಸಿದ್ದತೆ ನಡೆಯುತ್ತಿದೆ. ವಿದೇಶಗಳಲ್ಲಿ ಪ್ರೀಮಿಯರ್ ಶೋ ನಡೆಸುವ ಯೋಜನೆಯಿದೆ ಎಂದು “ವೀರ ಕಂಬಳ” ದ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದರು. ನಂತರ ವಿಶ್ವದಾದ್ಯಂತ ಜಯಭೇರಿ ಬಾರಿಸುತ್ತಿರುವ “ಕೆ ಜಿ ಎಫ್ ೨” ಚಿತ್ರತಂಡಕ್ಕೆ ಶುಭ ಕೋರಿದ ರಾಜೇಂದ್ರ ಸಿಂಗ್ ಬಾಬು, ಮುಂದೆ ನಾನು ಸಹ ದರ್ಶನ್ ಅವರ ಅಭಿನಯದಲ್ಲಿ ಅದ್ದೂರಿ ಚಿತ್ರವೊಂದನ್ನು ನಿರ್ದೇಶನ ಮಾಡುತ್ತೇನೆ ಎಂದರು.
ನನಗೆ ತುಳು ಚಿತ್ರದಲ್ಲಿ ಅಭಿನಯಿಸುವ ಆಸೆ ಮುಂಚಿನಿಂದಲೂ ಇತ್ತು. ಏಕೆಂದರೆ ನನ್ನ ಅಜ್ಜಿ ಹಾಗೂ ಅಮ್ಮ ಇಬ್ಬರೂ ದಕ್ಷಿಣ ಕನ್ನಡದವರು. ನಾನು ಚಿತ್ರದಲ್ಲಿ ಅಭಿನಯಿಸುವ ವಿಷಯ ನನಗೆ ಗೊತ್ತಿರಲಿಲ್ಲ. ನಿರ್ಮಾಪಕರು ಈ ರೀತಿ ಪಾತ್ರವಿದೆ. ನೀವು ಮಾಡಬೇಕೆಂದರು. ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಮೊದಲ ದಿನ ಚಿತ್ರೀಕರಣಕ್ಕೆ ಸಿದ್ದವಾಗಿ ಬಂದಾಗ ಅಲ್ಲಿದವರೆಲ್ಲ ನನ್ನ ನೋಡಿ ಆಶ್ಚರ್ಯಪಟ್ಟರು. ಚಿತ್ರ ಬಿಡುಗಡೆಯಾದಾಗ ನನ್ನ ಪಾತ್ರದ ಬಗ್ಗೆ ನಿಮಗೂ ತಿಳಿಯಬಹುದು ಎಂದರು ನಟ ಆದಿತ್ಯ.
ಎಷ್ಟೋ ಜನಕ್ಕೆ ನಾನು ತುಳುನಾಡಿನವಳೆಂದು ತಿಳಿದಿಲ್ಲ. ನನ್ನ ಮಾತೃ ಭಾಷೆ ಕೂಡ ತುಳು. ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟ ನಿರ್ದೇಶಕರಿಗೆ ವಂದನೆಗಳು. ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ ಎಂದರು ನಟಿ ರಾಧಿಕಾ ಚೇತನ್.
ನಮ್ಮ ಊರಿನಲ್ಲಿ ನಡೆಯುವ ಕಂಬಳಕ್ಕೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಆಹ್ವಾನಿಸಲು ಕಂಬಳದ ಅಧ್ಯಕ್ಷರು ಹೇಳಿದರು. ಬಾಬು ಸರ್ ನಮ್ಮ ಊರಿಗೆ ಬಂದರು. ಅಲ್ಲಿ ಈ ಚಿತ್ರದ ಮಾತುಕತೆಯಾಗಿ, ಚಿತ್ರ ಆರಂಭವಾಯಿತು. ನಾನು ರಾಜೇಂದ್ರ ಸಿಂಗ್ ಬಾಬು ಅವರ ದೊಡ್ಡ ಅಭಿಮಾನಿ. ಅವರು ನಮ್ಮ ಚಿತ್ರ ನಿರ್ದೇಶನ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು ನಿರ್ಮಾಪಕ ಅರುಣ್ ರೈ ತೋಡಾರ್.
ನಾನು ಮೂಲತಃ ರಂಗಭೂಮಿಯವನು. ತುಳು ಭಾಷೆಯ ಸಾಕಷ್ಟು ನಾಟಕಗಳಿಗೆ ಸಂಭಾಷಣೆ ಬರೆದಿದ್ದೇನೆ. ರಾಜೇಂದ್ರ ಸಿಂಗ್ ಬಾಬು ಅವರು ನನ್ನನ್ನು ಭೇಟಿಯಾಗಿ ಈ ಚಿತ್ರಕ್ಕೆ ತುಳು ಹಾಗೂ ಕನ್ನಡದಲ್ಲಿ ಸಂಭಾಷಣೆ ಬರೆಯಲು ಹೇಳಿದರು. ಈವರೆಗೂ ನಾನು ಕನ್ನಡ ಚಿತ್ರಕ್ಕೆ ಸಂಭಾಷಣೆ ಬರೆದಿರಲಿಲ್ಲ. ಇದೇ ಮೊದಲು. ಕನ್ನಡ ಚಿತ್ರರಂಗಕ್ಕೆ ಇದು ದೊಡ್ಡ ಚಿತ್ರವಾಗುತ್ತದೆ. ತುಳು ಭಾಷೆಯಲಂತೂ ಪ್ರಚಂಡ ಯಶಸ್ಸು ಕಾಣಲಿದೆ ಎಂದು ಚಿತ್ರಕಥೆ , ಸಂಭಾಷಣೆ ಬರೆದಿರುವ ವಿಜಯ್ ಕುಮಾರ್ ಕೋಡಿಯಾಲ್ ಬೈಲ್ ತಿಳಿಸಿದರು.
ಚಿತ್ರದಲ್ಲಿ ಅಭಿನಯಿಸಿರುವ ಶ್ರೀನಿವಾಸ ಗೌಡ , ಸ್ವರಾಜ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ “ವೀರ ಕಂಬಳ” ದ ಕುರಿತು ಮಾತನಾಡಿದರು.
ಅರ್ ಗಿರಿ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ಆರ್ ಬಾಬು ಸಂಕಲನವಿರುವ ಈ ಚಿತ್ರಕ್ಕೆ ವಿಜಯ್ ಕುಮಾರ್ ಕಿಡಿಯಾಲ್ ಬೈಲ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ರಾಜೇಶ್ ಕುಡ್ಲ ಅವರ ನಿರ್ಮಾಣ ನಿರ್ವಹಣೆ “ವೀರ ಕಂಬಳ” ಚಿತ್ರಕ್ಕಿದೆ.
ಆದಿತ್ಯ, ರಾಧಿಕಾ ಚೇತನ್, ಗೋಪಿನಾಥ್ ಭಟ್, ಭೋಜರಾಜ್ ವಾಮಾಂಜೂರು, ಮೈಮ್ ರಮೇಶ್, ರಾಜಶೇಖರ ಕೋಟ್ಯಾನ್, ಉಷಾ ಭಂಡಾರಿ, ಶ್ರೀನಿವಾಸ ಗೌಡ, ಸ್ವರಾಜ್ ಶೆಟ್ಟಿ, ವೀಣಾ ಪೊನ್ನಪ್ಪ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಚಲನಚಿತ್ರೋದ್ಯಮದ ಅತ್ಯುನ್ನತ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಕೆಎಫ್‌ಸಿಸಿ) ವಾರ್ಷಿಕ ಚುನಾವಣೆ ಇದೇ ಶನಿವಾರ, ಮೇ 28 ರಂದು ನಡೆಯಲಿದೆ.
ಮತದಾನಕ್ಕೆ ಇದೀಗ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ಅಖಾಡದಲ್ಲಿ ಘಟಾನುಘಟಿಗಳಿದ್ದಾರೆ. ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದ ತಂಡ ಎದುರಾಳಿ ಸ್ಪರ್ಧಿಗಳಿಗಿಂತ ಮುಂದಿದೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿ ಬರುತ್ತಿದ್ದು, ಅದೀಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ನಾಲ್ಕು ವರ್ಷಗಳ ಬಳಿಕ ಸಾ.ರಾ. ಗೋವಿಂದು ಅವರು ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಪುನಃ ಅಧ್ಯಕ್ಷರಾಗಲು ತಯಾರಿ ನಡೆಸಿದ್ದಾರೆ.
ಈ ಸಲ ಅವರ ನೇತೃತ್ವದಲ್ಲಿ ನಿರ್ಮಾಪಕ ವಲಯದಿಂದ ಕರಿಸುಬ್ಬು (ಉಪಾಧ್ಯಕ್ಷ, ಸ್ಥಾನ), ಕೆ.ಎಂ.ವೀರೇಶ್ ನಿರ್ಮಾಪಕ ವಲಯದಿಂದ (ಗೌರವ ಕಾರ್ಯದರ್ಶಿ), ಎಂ.ಎನ್.ಕುಮಾರ್ ವಿತರಕ ವಲಯದಿಂದ (ಗೌರವ ಕಾರ್ಯದರ್ಶಿ) ಪಿ.ಎನ್.ಜ್ಞಾನೇಶ್ವರ್ ಐತಾಳ್ ವಿತರಕ ವಲಯದಿಂದ (ಉಪಾಧ್ಯಕ್ಷ), ಜೆ.ಪಿ.ಕುಮಾರ್ ಪ್ರದರ್ಶಕರ ವಲಯದಿಂದ (ಉಪಾಧ್ಯಕ್ಷ) ಎಲ್.ಸಿ.ಕುಶಾಲ್ ಪ್ರದರ್ಶಕರ ವಲಯದಿಂದ (ಗೌರವ ಕಾರ್ಯದರ್ಶಿ ಹಾಗು ಜಿ.ಕೆ.ಜಯಸಿಂಹ ಮುಸುರಿ ಗೌರವ ಖಜಾಂಚಿ ವಿವಿಧ ಹುದ್ದೆಗಳಿಗೆ ಸ್ಪರ್ಧಿಸಲಿದ್ದಾರೆ.
ಈಗಾಗಲೇ ಈ ಹಿಂದೆ ಈ ತಂಡ ಅಧಿಕಾರದಲ್ಲಿದ್ದಾಗ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರ ಆಧಾರದ ಮೇಲೆ ಮತ್ತೆ ಸ್ಫರ್ಧೆಗಿಳಿದಿದೆ. ಕೆ.ಎಂ.ವೀರೇಶ್ ಅವರು ಕೋವಿಡ್ ಸಂದರ್ಭದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸಿದ ಪರಿ ಎಲ್ಲರಿಗೂ ಗೊತ್ತಿದೆ. ಅವರ ಕೆಲಸ ಮೆಚ್ಚುಗೆಗೂ ಪಾತ್ರವಾಗಿತ್ತು. ಈಗಾಗಲೇ ಕೆಎಫ್‌ಸಿಸಿಯಲ್ಲಿ ಇತರ ಹುದ್ದೆಗಳಲ್ಲೂ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಸಾ.ರಾ.ಗೋವಿಂದು ಮತ್ತು ಎನ್.ಎಂ.ಕುಮಾರ್ ಅವರು 2008ರಲ್ಲಿ ಕೆಎಫ್‌ಸಿಸಿ ಸದಸ್ಯರಿಗೆ ಕಲ್ಯಾಣ ನಿಧಿಯನ್ನು ಪರಿಚಯಿಸಿದ್ದರು.
ಕಳೆದ ಐದು ವರ್ಷಗಳಲ್ಲಿ ಈ ನಿಧಿಯು ವೈದ್ಯಕೀಯ ಚಿಕಿತ್ಸೆಗಾಗಿ ಸದಸ್ಯರಿಗೆ ರೂ.3,71,76,000 ವಿತರಿಸಿರುವುದು ಹೆಗ್ಗಳಿಕೆ. ನಿಧನರಾದ ಸದಸ್ಯರ ಕುಟುಂಬಗಳಿಗೆ ಪರಿಹಾರ ನೀಡಿದೆ. ಪ್ರತಿ ಸದಸ್ಯನ ಕಲ್ಯಾಣ ನಿಧಿ ಈಗ 2.5 ಲಕ್ಷ ರೂ. 5 ಲಕ್ಷಕ್ಕೆ ದ್ವಿಗುಣಗೊಳಿಸುವುದಾಗಿಯೂ ಸಾ.ರಾ. ಗೋವಿಂದು ಭರವಸೆ ನೀಡಿದ್ದಾರೆ. ಇದಲ್ಲದೇ ಚಿತ್ರರಂಗಕ್ಕೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಈ ತಂಡ ಕಾರಣರಾಗಿದೆ.
ಮತ್ತೊಂದೆಡೆ, ಗೋವಿಂದು ಅವರ ಎದುರಾಕಲಿ ತಂಡ ಅಷ್ಟೊಂದು ಬಲವಿಲ್ಲ ಎಂಬ ನಂಬಿಕೆ ಈ ತಂಡಕ್ಕಿದೆ. ಕೆಎಫ್‌ಸಿಸಿಯಲ್ಲಿ 1,290 ನಿರ್ಮಾಪಕರು, 412 ವಿತರಕರು ಮತ್ತು 187 ಪ್ರದರ್ಶಕರು ಸೇರಿದಂತೆ ಒಟ್ಟು 1,800 ಮತದಾರರಿದ್ದಾರೆ. ಶನಿವಾರ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ ವಿಜೇತರನ್ನು ಘೋಷಿಸಲಾಗುತ್ತದೆ.
ಕಂಚಿನ ಕಂಠದ ಗಾಯಕ… ಪ್ರತಿಭಾನ್ವಿತ ನಾಯಕ ವಸಿಷ್ಠ ಸಿಂಹ ಭತ್ತಳಿಕೆಯಲ್ಲಿರುವ ಬಹುನಿರೀಕ್ಷಿತ Love..ಲಿ ಸಿನಿಮಾ ಅಂಗಳದಿಂದ ನಯಾ ಪೋಸ್ಟರ್ ರಿಲೀಸ್ ಆಗಿದೆ. ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು, ಮತ್ತೊಂದು ಕೈಯಲ್ಲಿ ಧಮ್ ಎಳೆಯುತ್ತಾ, ರಾ ಲುಕ್ ನಲ್ಲಿ ವಸಿಷ್ಠ ಸಿಂಹ ಎಂಟ್ರಿ ಕೊಟ್ಟಿದ್ದು, ಈ ಪೋಸ್ಟರ್ ಗೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ Love..ಲಿ ಚಿತ್ರದ ಇಂಟ್ರೊಡಕ್ಷನ್ ಸೀನ್ಸ್ ಅದ್ದೂರಿಯಾಗಿ ಮೂಡಿ ಮೂಡಿ ಬಂದಿರುವ ಬಗ್ಗೆ ಮಾಹಿತಿ ಕೊಟ್ಟಿದ್ದ ಚಿತ್ರತಂಡ ಈಗ ಹೊಸ ಪೋಸ್ಟರ್ ವೊಂದನ್ನು ರಿಲೀಸ್ ಮಾಡುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಮಫ್ತಿ ಸಿನಿಮಾ ನಿರ್ದೇಶಕ ನರ್ತನ್ ಜೊತೆಗೆ ಕೆಲಸ ಮಾಡಿರುವ ಅನುಭವ ಇರುವ ಚೇತನ್ ಕೇಶವ್ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು love..ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ರವೀಂದ್ರ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹರೀಶ್‌ಕೊಂಬೆ ಕ್ಯಾಮೆರಾ, ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ವಸಿಷ್ಠ ಸಿಂಹ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ಗಳಿವೆ. ಜಯರಾಜ್ ಜೀವನ ಆಧರಿಸಿ ‘ಹೆಡ್ ಬುಷ್’ ‘ಸಿಂಬಾ’, ‘ಓದೆಲಾ ರೈಲ್ವೇ ಸ್ಟೇಷನ್’ ಸೇರಿ ಹಲವು ಸಿನಿಮಾಗಳಲ್ಲಿ ವಸಿಷ್ಠ ಬ್ಯುಸಿಯಾಗಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ ಗುರುತಿಸಿಕೊಂಡಿರುವ ಯುವಧೀರ, ಗುಡ್ ಗುಡ್ಡರ್ ಗುಡೆಸ್ಟ್ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. ಇತ್ತೀಚೆಗೆ ಮುಹೂರ್ತ ನೆರವೇರಿದ್ದು, ಜೀ ಕನ್ನಡದ ಡಿಕೆಡಿ ಶೋ ವಿನ್ನರ್ ಚೈತ್ರಾಲಿ ಕ್ಲ್ಯಾಪ್ ಮಾಡಿದ್ರೆ, ಬೂಸೆ ಗೌಡ ಎಂಬ ಭರತನಾಟ್ಯದಲ್ಲಿ ನ್ಯಾಷನಲ್ ಅವಾರ್ಡ್ ಪಡೆದ ಅಂಧರೊಬ್ಬರು ಕ್ಯಾಮೆರಾಗೆ ಚಾಲನೆ ನೀಡಿದರು.
ಕಳೆದ ಹದಿನೈದು ವರ್ಷಗಳಿಂದ ಸಿನಿಮಾಗಳಲ್ಲಿ ಸಂಭಾಷಣೆಕಾರನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮಿಂಚು, ಜಾನಿ ಜಾನಿ ಎಸ್ ಪಪ್ಪಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ಮೊದಲ ನಿರ್ದೇಶನ ಸಿನಿಮಾ. ಒಂದೇ ಕಥೆ ಮೂರು ಟ್ರ್ಯಾಕ್ ನಲ್ಲಿ ನಡೆಯುತ್ತದೆ. ಇದು ಯಾವ ಜಾನರ್ ಸಿನಿಮಾ ಅನ್ನೋದು ವರ್ಗೀಕೃತ ಮಾಡುವುದು ಕಷ್ಟ. ಹೀಗಾಗಿ ಇದು ಮಲ್ಟಿಪಲ್ ಜಾನರ್ ನ ಸಿನಿಮಾ ಎಂದು ನಿರ್ದೇಶಕ ಯುವಧೀರ ಮಾಹಿತಿ ಹಂಚಿಕೊಂಡರು.
ಸುಚೇಂದ್ರ ಪ್ರಸಾದ್, ಇವರು ಇಟ್ಟಿರುವ ಶೀರ್ಷಿಕೆ ವ್ಯಾಕರಣ ಬದ್ಧವಲ್ಲ ಹಾಗೇಯೇ ಸಿನಿಮಾ ಕೂಡ ಎಲ್ಲ ವ್ಯಾಕರಣವನ್ನ ಮುರಿಯಲಿದೆ. ಇದು ನಿಜ ಜೀವನದ ಕೆಲವು ಪ್ರಸಂಗ ತಳುಕು ಹಾಕಿ ಕಥೆ ರೆಡಿ ಮಾಡಿದ್ದಾರೆ. ಒಳ್ಳೆ ಕಥಾಹಂದರವನ್ನು ತಯಾರಿಸಿದ್ದಾರೆ ಎಂದು ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್ ಹೇಳಿದರು.
ಯುವಧೀರ ನಿರ್ದೇಶನದ ಜೊತೆಗೆ ತಾವೇ ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಇವರಿಗೆ ಜೋಡಿಯಾಗಿ ಆದ್ಯಾ ಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಸೋನುಗೌಡ, ಪ್ರಮೋದ್ ಶೆಟ್ಟಿ, ಗೋಪಾಲ್ ಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್, ವಿ.ಮನೋಹರ್, ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
ಶ್ರೀನಿಧಿ ಪಿಕ್ಚರ್ ಬ್ಯಾನರ್ ತಯಾರಾಗುತ್ತಿರುವ ಗುಡ್ ಗುಡ್ಡರ್ ಗುಡ್ಡೆಸ್ಟ್ ಚಿತ್ರಕ್ಕೆ ಬಿಲ್ಡರ್ ಆಗಿರುವ ಸುರೇಶ್ ಬಿ ನಿರ್ಮಾಣ ಮಾಡಿದ್ದು, ಇದೊಂದು ಡಾರ್ಕ್ ಹ್ಯೂಮರ್ ಸೆಟೈರ್ ಕಾಮಿಡಿ ಚಿತ್ರವಾಗಿದ್ದು, ಜೊತೆಗೆ ರೊಮ್ಯಾನ್ಸ್, ಥ್ರಿಲ್ಲರ್, ಡ್ರಾಮಾ, ಕ್ರೈಂ, ಆ್ಯಕ್ಷನ್ ಕೂಡ ಒಳಗೊಂಡಿದೆ. ಬೆಂಗಳೂರು, ಮಂಗಳೂರು, ಮೈಸೂರು ಸುತ್ತಮುತ್ತ 45 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಸಂದೀಪ್ ಹೊಲ್ಲೂರಿ ಕ್ಯಾಮೆರಾ, ಶಶಾಂಕ್ ಶೇಷಗಿರಿ ಸಂಗೀತ, ಕಿರಣ್ ಸಂಕಲನ ಸಿನಿಮಾಕ್ಕಿದೆ.
ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ “ಕಿರಿಕ್ ಶಂಕರ್” ಚಿತ್ರದ ಟ್ರೇಲರನ್ನು ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿ ಶುಭ ಕೋರಿದರು.
ನಾನು “ತಾಜ್ ಮಹಲ್” ಚಿತ್ರ ಮಾಡಿದಾಗಿನಿಂದಲೂ ಎಂ. ಎನ್. ಕುಮಾರ್ ಅವರು ನೀಡುತ್ತಿರುವ ಪ್ರೋತ್ಸಾಹ ಅಪಾರ. ಅವರು ಈಗ ಸಿನಿಮಾ ಮಾಡು ಅಂದರು, ನಾನು ಮಾಡಲು ಸಿದ್ದ. ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಹಾಗೂ ಇಡೀ ತಂಡಕ್ಕೆ ನನ್ನ ಶುಭಾಶಯ. ಚಿತ್ರ ಯಶಸ್ವಿಯಾಗಲಿ ಅಂದರು ಆರ್ ಚಂದ್ರು. ಮತ್ತೊಬ್ಬ ಅತಿಥಿ ALL OK ಕೂಡ ಚಿತ್ರತಂಡಕ್ಕೆ ಶುಭ ಕೋರಿದರು.
ಇಡೀ ತಂಡದ ಪರಿಶ್ರಮದಿಂದ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ಮನಸ್ಸುಗಳು ಸೇರಿ ಮಾಡುವ ಕೆಲಸ ಒಳ್ಳೆಯದೆ ಆಗುತ್ತದೆ ಎಂಬ ಭರವಸೆ ಇದೆ. ನಮ್ಮ ಚಿತ್ರ ನೋಡಿ ಹಾರೈಸಿ ಎಂದರು ನಿರ್ದೇಶಕ ಅನಂತರಾಜ್.
ನಾನು ಏಪ್ರಿಲ್ ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದೆ. ತುಂಬಾ ಚಿತ್ರಗಳು ಬಿಡುಗಡೆಯಾಗಿದ್ದರಿಂದ ಈ 27ರಂದು 150 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ಕಿರಿಕ್ ಶಂಕರ್” ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು ನಿರ್ಮಾಪಕ ಎಂ.ಎನ್.ಕುಮಾರ್.
ನಾನು ಅಣ್ಣವ್ರ ಬ್ಯಾನರ್ ಬಿಟ್ಟರೆ ಇದೇ ದೊಡ್ಡ ಬ್ಯಾನರ್ ನಲ್ಲಿ ನಟನೆ ಮಾಡಿರುವುದು. ನಿರ್ದೇಶಕರು ಸಹ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವವರು. ಅವರ ಜೊತೆ ಕೆಲಸ ಮಾಡಿದ್ದು ಸಂತೋಷ ತಂದಿದೆ. ಎಲ್ಲರ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಾಯಕ ಲೂಸ್ ಮಾದ ಯೋಗಿ.
ನಾಯಕಿ ಅದ್ವಿಕ ಸಹ ಅಭಿನಯದ ಅನುಭವ ಹಂಚಿಕೊಂಡರು. ನಟ ರಿತೇಶ್, ನಟ ಹಾಗೂ ಸಂಕನಕಾರ ನಾಗೇಂದ್ರ ಅರಸ್ , ಸಂಗೀತ ನಿರ್ದೇಶಕ ವೀರ ಸಮರ್ಥ್, ಛಾಯಾಗ್ರಾಹಕ ಜೆ.ಜಿ ಕೃಷ್ಣ ಹಾಗೂ ಕಾರ್ಯಕಾರಿ ನಿರ್ಮಾಪಕ ಯೋಗೀಶ್ ಹುಣಸೂರು “ಕಿರಿಕ್ ಶಂಕರ್” ಚಿತ್ರದ ಬಗ್ಗೆ ಮಾತನಾಡಿದರು.
ಜೇನುಗೂಡು ಸಿನಿಮಾ ಬ್ಯಾನರ್ ನಡಿ ಕೆ.ಎನ್ ಶ್ರೀಧರ್ ನಿರ್ಮಾಣ ಮಾಡಿರುವ ‘ವಾಸಂತಿ ನಲಿದಾಗ ಸಿನಿಮಾ’ದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಹಿಂದೆ ಪುಟಾಣಿ ಸಫಾರಿ, ವರ್ಣಮಯ ಸಿನಿಮಾ ನಿರ್ದೇಶನ ಮಾಡಿದ್ದ ರವೀಂದ್ರ ವಂಶಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಯುವ ಪ್ರತಿಭೆಗಳಾದ ರೋಹಿತ್ ಶ್ರೀಧರ್ ನಾಯಕನಾಗಿ ಹಾಗೂ ಭಾವನಾ ಶ್ರೀನಿವಾಸ್ ನಾಯಕಿಯಾಗಿ ನಟಿಸಿದ್ದು, ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಸಿನಿಮಾದಲ್ಲಿದ್ದಾರೆ.
ನಿಜವಾಗಲೂ ಸಂತೋಷವಾಗುತ್ತಿದೆ. ಸುಧಾರಾಣಿ ನನ್ನ ಮೊದಲ ಜೋಡಿ. ಈ ಸಿನಿಮಾದಲ್ಲೂ ಮತ್ತೆ ಜೋಡಿಯಾಗಿ ನಟಿಸುತ್ತಿದ್ದೇವೆ. ನಾನು ಬ್ಯುಸಿನೆಸ್ ಮ್ಯಾನ್. ಮಗ ಅಂದ್ರೆ ಇಷ್ಟ. ತುಂಬಾ ಇಂಟ್ರೆಸ್ಟಿಂಗ್ ಇರುವ ಪಾತ್ರ. ವಾಸಂತಿ ನಲಿದಾಗ ತುಂಬಾ ಸುಂದರವಾದ ಟೈಟಲ್, ವಂಡರ್ ಫುಲ್ ಸ್ಟಾರ್ ಕಾಸ್ಟ್, ಟೆಕ್ನಿಷಿಯನ್ ಎಂದು ಸಾಯಿಕುಮಾರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.
ಮಂಜು ಪಾವಗಡ ಮಾತನಾಡಿ, ರವೀಂದ್ರ ಸರ್ ಗೆ ಧನ್ಯವಾದ ಒಳ್ಳೆ ಪಾತ್ರ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಅದ್ಭುತ ಸನ್ನಿವೇಶಗಳಿವೆ. ಡೈಲಾಗ್ ತುಂಬಾ ಚೆನ್ನಾಗಿವೆ. ಇಷ್ಟೆಲ್ಲಾ ಸೀನ್ ಮಾಡಿದ್ರೂ ಹೀರೋಯಿನ್ ಕಾಣಿಸಿಲ್ಲ. ಆಮೇಲೆ ನಂಬರ್ ಕೊಟ್ರೆ ಕಷ್ಟಸುಖ ಮಾತಾಡೋಣಾ ಎಂದು ತಮಾಷೆ ಮಾಡಿದರು.
ರೋಮ್ಯಾಂಟಿಕ್ ಕಥಾಹಂದರ ಹೊಂದಿರುವ ವಾಸಂತಿ ನಲಿದಾಗ ಸಿನಿಮಾಗೆ ಶ್ರೀಗುರು ಸಂಗೀತವಿದ್ದು, ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ. ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣ ಸಿನಿಮಾಕ್ಕಿದ್ದು, ಸದ್ಯದಲ್ಲಿಯೇ ಸಿನಿಮಾ ಥಿಯೇಟರ್ ಗೆ ಎಂಟ್ರಿ ಕೊಡಲಿದೆ.
ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ನೋಡುವಂತಹ “ಕೆ ಜಿ ಎಫ್ 2” ನಂತಹ ಬಿಗ್ ಹಿಟ್ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ನಿರ್ಮಾಣದ “ಬಘೀರ” ಚಿತ್ರಕ್ಕೆ ಚಾಲನೆ ದೊರಕಿದೆ.
ಡಾ. ಸೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಶ್ರೀಮುರಳಿ ನಾಯಕರಾಗಿ ಅಭಿನಯಿಸುತ್ತಿದ್ದಾರೆ.
“ಬಘೀರ” ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ದೃಶ್ಯಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಹೋದರ ಮಂಜುನಾಥ್ ಆರಂಭ ಫಲಕ ತೋರಿದರು. ನಿರ್ದೇಶಕ ಸೂರಿ ಅವರ ತಾಯಿ ಸರೋಜ ಅವರು ಕ್ಯಾಮೆರಾ ಚಾಲನೆ ಮಾಡಿದರು. ಮೇ ಕೊನೆಯ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಎ ಜೆ ಶೆಟ್ಟಿ ಛಾಯಾಗ್ರಹಣ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಈ ಹಿಂದೆ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಶ್ರೀಮುರಳಿ ನಾಯಕರಾಗಿ ನಟಿಸಿದ್ದ “ಉಗ್ರಂ” ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಈ ಚಿತ್ರಕ್ಕೂ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಚಿತ್ರಕಥೆ ನಿರ್ದೇಶಕ ಡಾ. ಸೂರಿ ಅವರದು. ಹಿಂದೆ ಬಿಡುಗಡೆಯಾಗಿದ್ದ “ಬಘೀರ” ಚಿತ್ರದ ಫಸ್ಟಲುಕ್ ಗೆ ಶ್ರೀಮುರಳಿ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ? ಎಂಬ ಕಾತುರದಲ್ಲಿದ್ದಾರೆ.
ಶ್ರೀಮುರಳಿ “ಬಘೀರ” ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ರಂಗಾಯಣ ರಘು, ಅಚ್ಯುತಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಅನೇಕ ಪ್ರತಿಭೆಗಳು ಕಾಲಿಡುತ್ತಲೇ ಇವೆ. ನೂರಾರು ಆಸೆ, ಆಕಾಂಕ್ಷೆ ಹೊತ್ತು ಬಣ್ಣದ ಲೋಕದಲ್ಲಿ ಮಿಂದೆದ್ದ ಪ್ರತಿಭೆಗಳಿಗೆ ಇಲ್ಲಿ ಲೆಕ್ಕವಿಲ್ಲ. ನಟಿಯಾದವರು ಇಲ್ಲಿ ನಿರ್ಮಾಪಕರಾದ ಉದಾಹರಣೆಗೇನು ಕಮ್ಮಿ ಇಲ್ಲ. ಅಂತಹವರ ಸಾಲಿಗೆ ಈಗ ಯುವ ನಟಿಯೊಬ್ಬರೂ ಸೇರಿದ್ದಾರೆ. ಅವರು ಬೇರಾರೂ ಅಲ್ಲ, ಸಾತ್ವಿಕ. ಈ ಸಾತ್ವಿಕ ಬಗ್ಗೆ ಈಗ ಇಷ್ಟೊಂದು ಪೀಠಿಕೆ ಯಾಕೆಂದರೆ, ಅವರು ಮೇ. 20 ರಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಖುಷಿಯಲ್ಲಿ ಅವರು ಒಂದಷ್ಟು ಹೊಸ ಹೊಸ ಯೋಜನೆಗಳನ್ನೂ ಹಾಕಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲ ಪರಭಾಷೆಗೂ ಜಿಗಿದಿದ್ದಾರೆ.
ನಟಿಯಷ್ಟೇ ಅಲ್ಲ…
ಹೌದು, ಸಾತ್ವಿಕ ಕಿರುತೆರೆಯಲ್ಲಿ ಗುರುತಿಸಿಕೊಂಡವರು. ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಈಗಾಗಲೇ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ಸಾತ್ವಿಕ, ಆ ಧಾರಾವಾಹಿಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ, ಸ್ಟೈಲಿಶ್ ಆಗಿಯೂ ಕೆಲಸ ಮಾಡಿದ್ದಾರೆ. ಇದಷ್ಟೇ ಅಲ್ಲ, ಸಾತ್ವಿಕ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದಾರೆ. ಇನ್ನು, ವಿಶೇಷವೆಂದರೆ, ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳಿಗೆ ತಮ್ಮ ಅದ್ಭುತ ಮನೆಗಳನ್ನೂ ಇವರು ಚಿತ್ರೀಕರಣಕ್ಕಾಗಿ ನೀಡುತ್ತಿದ್ದಾರೆ. ಹಾಗಾಗಿ ಸಾತ್ವಿಕ ಅಂದರೆ ಕಿರುತೆರೆ ಹಾಗು ಬೆಳ್ಳಿತೆರೆಯಲ್ಲಿ ಇವರು ಗೊತ್ತಿಲ್ಲವೆಂದವಲ್ಲ. ಸದ್ಯದ ಮಟ್ಟಿಗೆ ಸಾತ್ವಿಕ ಎಲ್ಲಾ ವಿಭಾಗಗಳಲ್ಲೂ ಗುರುತಿಸಿಕೊಂಡಿದ್ದಾರೆ.
ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ರಾಧಿಕಾ, ಕಲರ್ಸ್ ಕನ್ನಡದ ಕನ್ಯಾಕುಮಾರಿ ಹಾಗು ಸುವರ್ಣ ಚಾನೆಲ್ ನ ಬೆಟ್ಟದ ಹೂ ಧಾರಾವಾಹಿಗಳಿಗೆ ಸಾತ್ವಿಕ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಅವರ ಕೆಲಸ ಸೀರಿಯಲ್ ನಲ್ಲಿ ಹೈಲೈಟ್.
ಕಿರುತೆರೆ ಟು ಬೆಳ್ಳಿತೆರೆ…
ಇನ್ನು ಸಿನಿಮಾ ವಿಷಯಕ್ಕೆ ಬಂದರೆ, ಹಲವು ಸಿನಿಮಾಗಳಿಗೂ ಸಾತ್ವಿಕ ಕಾಸ್ಟ್ಯೂಮ್ ಡಿಸೈನರ್ ಆಗಿ, ಸ್ಟೈಲಿಶ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಅವರು ಬೆಳ್ಳಿತೆರೆಯಲ್ಲೂ ಕಾಣಿಕೊಂಡಿದ್ದಾರೆ. ಮಾರಿಗೋಲ್ಡ್ ಚಿತ್ರದಲ್ಲಿ ನಟಿಸಿರುವ ಸಾತ್ವಿಕ, ಪೃಥ್ವಿ ಅಂಬರ್ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.
ಜೊತೆಯಲ್ಲಿ ತೆರೆಯ ಮೇಲೂ ಕಾಣಿಸಿಕೊಳ್ಳಲಿದ್ದಾರೆ. ನಟ ಭಯಂಕರ ಮತ್ತು ದಿಲ್ ಪಸಂದ್ ಸಿನಿಮಾಗಳ ಸ್ಪೆಷಲ್ ಸಾಂಗ್ ಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ, ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.
ಕೋವಿಡ್ ವೇಳೆ ಸೇವೆ…
ಇನ್ನು ಕೋವಿಡ್ ವೇಳೆ ಸಾತ್ವಿಕ ಅವರು ತಮ್ಮ ಶೂಟಿಂಗ್ ಮನೆಗಳನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಿ, ರೋಗಿಗಳ ಗುಣಮುಖಕ್ಕೆ ಕಾರಣರಾಗಿದ್ದರು.
ಆಗ ಒಂದಷ್ಟು ಕೈಲಾದ ಸೇವೆ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಬಣ್ಣದ ಲೋಕದಲ್ಲಿ ಬಿಝಿ ಡಿಸೈನರ್ ಆಗಿದ್ದಾರೆ. ಅದೇನೆ ಇರಲಿ ಸಾತ್ವಿಕ ನಟನೆ, ನಿರ್ಮಾಣದ ಜೊತೆಯಲ್ಲಿ ಡಿಸೈನರ್ ಆಗಿಯೂ ಕೆಲಸ ಮಾಡುತ್ತಿರುವುದು ವಿಶೇಷ.