ಒಂದಷ್ಟು ಹೊಸಬರು ಸೇರಿಕೊಂಡು ತಯಾರಿಸಿರುವ ತೂತು ಮಡಿಕೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜುಲೈ 8ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಈಗಾಗಲೇ, ಟ್ರೇಲರ್ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ತೂತು ಮಡಿಕೆ ಸಿನಿಮಾ ಮೂಲಕ ರಂಗಭೂಮಿ ಕಲಾವಿದ ಚಂದ್ರಕೀರ್ತಿ ಸ್ವತಂತ್ರ ನಿರ್ದೇಶಕರಾಗುವುದರ ಜೊತೆಗೆ ನಾಯಕನಾಗಿ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೇನೂ ದಿನಗಣನೆ ಶುರುವಾಗಿದ್ದು, ಹೀಗಾಗಿ ಇಡೀ ಚಿತ್ರತಂಡ ಮಾಧ್ಯಮದರ ಮುಂದೆ ಹಾಜರಾಗಿ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಕಂ ನಾಯಕ ಚಂದ್ರಕೀರ್ತಿ ಮಾತನಾಡಿ, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಎರಡೂವರೆ ವರ್ಷದಿಂದ ಕಾದು ಚಿತ್ರ ರಿಲೀಸ್ ಮಾಡುತ್ತಿದ್ದೇವೆ. ಜನ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ನೋಡ್ಬೇಕು ಅನ್ನೋದು ನಮ್ಮ ಇಡೀ ಚಿತ್ರತಂಡದ ಕನಸು. ಜುಲೈ 8ಕ್ಕೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂದು ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇನೆ. ಪ್ರತಿ ಜಿಲ್ಲೆಯಲ್ಲಿಗೂ ಹೋಗಿ ಪ್ರಮೋಷನ್ ಮಾಡಿದ್ದೇವೆ. ಗ್ರಾಮೀಣ ಭಾಗದಲ್ಲಿಯೂ ಇಷ್ಟವಾಗುವ ಸಬ್ಜೆಕ್ಟ್ ನಮ್ಮದು. ಇದು ಯಾವುದೇ ಸಿನಿಮಾದ ಸ್ಫೂರ್ತಿಯಲ್ಲ ಎಂದರು.
ನಿರ್ಮಾಪಕರಾದ ಶಿವಕುಮಾರ್ ಮಾತನಾಡಿ, ತುಂಬಾ ಎಕ್ಸೈಟ್ ಆಗಿದ್ದೇವೆ. ಇದೇ 8ರಂದು ಸಿನಿಮಾ ತೆರೆಗೆ ಬರ್ತಿದೆ. 80 ಥಿಯೇಟರ್ ನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಈಗಾಗ್ಲೇ ಒಟಿಟಿ ಸಿನಿಮಾ ಮಾರಾಟವಾಗಿದೆ. ಇದು ಸಿನಿಮಾದ ಕ್ವಾಲಿಟಿ ಮತ್ತು ಕಂಟೆಂಟ್ ಎರಡನ್ನು ತೋರಿಸುತ್ತದೆ ಎಂದು ತಿಳಿಸಿದರು.
ತೂತುಮಡಿಕೆ ಕಾಮಿಡಿ ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾವಾಗಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಚಂದ್ರ ಕೀರ್ತಿ, ಎ ಎಸ್ ಜಿ ಮತ್ತು ಡಾಲರ್ ಬರೆದಿದ್ದು, ಚಂದ್ರಕೀರ್ತಿಗೆ ಜೋಡಿಯಾಗಿ ಗೊಂಬೆಗಳ ಲವ್ ಖ್ಯಾತಿಯ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಿರೀಶ್ ಶಿವಣ್ಣ, ಶಂಕರ್ ಅಶ್ವತ್ಥ್, ಸಿತಾರಾ ನರೇಶ್ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಇನ್ನು ಸರ್ವತ ಸಿನಿ ಗ್ಯಾರೇಜ್ ಮತ್ತು ಸ್ಪ್ರೆಡಾನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮಧುಸೂದನ್ ಮತ್ತು ಗಿರಿಬಸವ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ಧಾರೆ. ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದೆ.
ಡಾಟರ್ ಆಫ್ ಪಾರ್ವತಮ್ಮ ನಿರ್ಮಾಪಕ ಕೆ.ಎಂ. ಶಶಿಧರ್ ಈಗ ಶುಗರ್ ಲೆಸ್ ಚಿತ್ರದ ಮೂಲಕ ನಿರ್ದೇಶಕರೂ ಆಗಿದ್ದಾರೆ. ಸಕ್ಕರೆ ಖಾಯಿಲೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿರುವ ಚಿತ್ರ ಇದಾಗಿದ್ದು, ಪೃಥ್ವಿ ಅಂಬರ್ ಹಾಗೂ ಪ್ರಿಯಾಂಕ ತಿಮ್ಮೇಶ್ ಇದರಲ್ಲಿ ನಾಯಕ -ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ದಿವ್ಯ ಶಶಿಧರ್ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಅವರ ನಿರ್ಮಾಣದ ಚಿತ್ರವಿದು.
ಜುಲೈ 8 ರಂದು ಬಿಡುಗಡೆ ಕುರಿತು ಪೃಥ್ವಿ ಅಂಬರ್ ಹೇಳಿದ್ದಿಷ್ಟು. ಚಿತ್ರದ ಟೈಟಲ್ ಅಷ್ಟೇ ಶುಗರ್ ಲೆಸ್, ಸಿನಿಮಾ ತುಂಬಾ ಸ್ವೀಟ್ ಇದೆ. ಇದರಿಂದ ನಮ್ಮ ಲೈಫ್ ಸ್ಟೈಲ್ ಬದಲಾಗಬೇಕು, ಅನುಪ್ ಸೀಳನ್ ಅವರು ಅದ್ಭುತವಾದ ಮ್ಯೂಸಿಕ್ ಮಾಡಿದ್ದಾರೆ. ಇದು ಸೀರಿಯಸ್ ಸಿನಿಮಾ ಅಲ್ಲ ಮನರಂಜನಾತ್ಮಕ ಚಿತ್ರ ಎಂದರು.
ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಶಧಿಧರ್, ಇದೊಂದು ವಿಶೇಷ ಸಿನಿಮಾ, ಹಿಂದೆ ಬಂದ ಕಂಟೆಂಟ್ ಚಿತ್ರಗಳು ಗೆದ್ದಿವೆ. ಇದು ಪ್ರತಿಯೊಂದು ಮನೆಗೆ ಸಂಬಂಧಿಸಿದ ಸಿನಿಮ. ಇಂದು ನಮ್ಮ ಲೈಫ್ ಸ್ಟೈಲ್ ಬದಲಾಗಿದ್ದು ಈಗ ಚಿಕ್ಕ ಮಕ್ಕಳಲ್ಲೂ ಸಹ ಶುಗರ್ , ಬಿಪಿ, ಹಾರ್ಟ್ ಅಟ್ಯಾಕ್ ನಂಥ ಖಾಯಿಲೆಗಳು ಬರುತ್ತಿದ್ದು ಇವುಗಳ ಜೊತೆ ನಾವು ಹೇಗೆ ಬದುಕಬೇಕು, ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು ಎಂಬುದರ ಜೊತೆಗೆ ಮನರಂಜನೆಯು ಇದೆ.
ವಿದೇಶಗಳಲ್ಲಿ ಕೂಡ ನಮ್ಮ ಚಿತ್ರ ರಿಲೀಸ್ ಆಗಲಿದೆ. ಚಿತ್ರ ನೋಡುಗರಿಗೆ ತುಂಬಾ ಎಂಜಾಯ್ ಮಾಡಿಸುತ್ತದೆ, ಕೊನೆಗೊಂದು ಮೆಸೇಜ್ ಕೂಡ ಇದೆ. ಎಲ್ಲರೂ ನೋಡಬೇಕಾದ ಚಿತ್ರ ಇದಾಗಿದೆ. ಶುಗರ್ ಲೆಸ್ ಎಲ್ಲರಿಗೂ ಆಪ್ತವಾದ್ದರಿಂದ ಚಿತ್ರಕ್ಕೆ ಈ ಟೈಟಲ್ ಇಟ್ಟಿದ್ದೇವೆ ಎಂದು ಹೇಳಿದರು.
ನಟ ಹಾಗೂ ಸಹ ನಿರ್ಮಾಪಕರಾದ ಕೃಷ್ಣೇಗೌಡ, ಲಾಕ್ ಡೌನ್ ಸಂದರ್ಭದಲ್ಲಿ ಈ ಚಿತ್ರವನ್ನು ಶುರು ಮಾಡಿದೆವು ಎಂದರು. ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರು ಡಾಕ್ಟರ್ ಪಾತ್ರ ಮಾಡಿದ್ದು, ನಟ ದತ್ತಣ್ಣ ಅವರ ಮೂಲಕ ಚಿತ್ರದಲ್ಲಿ ಮೂರು ಜನರೇಷನ್ ಅಂದರೆ ಮಗು ಯುವಕ ಹಾಗೂ ವಯಸ್ಸಾದವರ ತೊಂದರೆ ಹೇಳಲಾಗಿದೆ. ಇಡೀ ಚಿತ್ರವನ್ನು ಕಾಮಿಡಿಯಾಗಿ ಹೇಳಲಾಗಿದ್ದು, ಈಗಾಗಲೇ ಹಿಂದಿ ಸೇರಿದಂತೆ ಬೇರೆ ಭಾಷೆಗೆ ರೈಟ್ಸ್ ಮಾರಾಟವಾಗಿದ್ದು, ನಾನು ಸೇಫ್ ಆಗಿದ್ದೇನೆ ಎಂದೂ ಶಶಿಧರ್ ಹೇಳಿದರು.
ನಟ ನಿತೇಶ್ ಮಾತನಾಡಿ, ಕಾಮಿಕ್ ಆದಂಥ ಪಾತ್ರ ಮಾಡಿರುವುದಾಗಿ ಹೇಳಿದರು. ನಟ ರಘು ರಾಮನಕೊಪ್ಪ ಮಾತನಾಡಿ ಇದು ಡಯಾಬಿಟಿಸ್ ನವರಿಗೆ ಅಷ್ಟೇ ಅಲ್ಲ, ಎಲ್ಲರೂ ನೋಡಬೇಕಾದ ಚಿತ್ರ, ಯೋಗದಿಂದ ಶುಗರ್ ಕಂಟ್ರೋಲ್ ಮಾಡಬಹುದೆಂದೂ ಹೇಳಿದ್ದೇವೆ ಎಂದರು. ಅನೂಪ್ ಸೀಳನ್ ಅವರ ಸಂಗೀತ, ಲವಿತ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಹಾಸ್ಯ ನಟ ತರಂಗ ವಿಶ್ವ ನಟನೆಯೊಂದಿಗೆ ನಿರ್ಮಾಣ ಕೂಡ ಮಾಡಿರುವ “ಗಿರ್ಕಿ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಜುಲೈ ಎಂಟರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಾಸುಕಿ ಭುವನ್, ವಿಶ್ವ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ವೀರೇಶ್ ಪಿ.ಎಂ ನಿರ್ದೇಶನ ಮಾಡಿದ್ದಾರೆ
ನಾನು ಕಲಾವಿದನಾಗಿ ಬಂದ ದಿನದಿಂದಲೂ ನೀವು ನೀಡುತ್ತಿರುವ ಪ್ರೋತ್ಸಾಹ ಅಪಾರ. ಈಗ ನಿರ್ಮಾಪಕನಾಗಿ “ಗಿರ್ಕಿ” ಚಿತ್ರ ನಿರ್ಮಿಸಿದ್ದೇನೆ. ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದೆ. ಎಲ್ಲರಿಗೂ ಮಚ್ವುಗೆಯಾಗಿದೆ. ಚಿತ್ರ ಇದೇ ಎಂಟರಂದು ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲವಿರಲಿ. ಒಂದೊಳ್ಳೆಯ ಕಥೆ ಇಲ್ಲಿದೆ. ಗೆಳೆತನ, ಪ್ರೀತಿ, ಒಂದಷ್ಟು ಥ್ರಿಲ್ಲಿಂಗ್ ಅಂಶಗಳಿವೆ ಎಂದರು ವಿಶ್ವ.
ವಿಶ್ವ ಅವರನ್ನು ನಾನು ಬಹಳ ದಿನಗಳಿಂದ ಬಲ್ಲೆ. ಒಂದು ದಿನ ಅವರು ನನ್ನ ಬಳಿ ಬಂದು, ನಾನು ಒಂದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಾನು ಹಾಗೂ ವಿಲೋಕ್ ರಾಜ್ ಪ್ರಮುಖಪಾತ್ರದಲ್ಲಿ ನಟಿಸುತ್ತೇವೆ. ನೀವು ನಿರ್ದೇಶನ ಮಾಡಬೇಕೆಂದರು. ಆಗ “ಗಿರ್ಕಿ” ಚಿತ್ರ ಆರಂಭವಾಯಿತು. ಮೊದಲ ನಿರ್ದೇಶನಕ್ಕೆ ಅವಕಾಶ ನೀಡಿದ್ದ ವಿಶ್ವ ಹಾಗೂ ವಾಸುಕಿ ಭುವನ್ ಅವರಿಗೆ ಧನ್ಯವಾದ.
“ಗಿರ್ಕಿ” ಎಂದರೆ ಸುತ್ತಾಟ. ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನನಗೆ ಸಹಕಾರ ನೀಡಿದ ಚಿತ್ರತಂಡವನ್ನು ನೆನೆಯುತ್ತೇನೆ. ನಮ್ಮ ಚಿತ್ರಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಕೇಳುತ್ತೇನೆ ಎಂದರು ನಿರ್ದೇಶಕ ವೀರೇಶ್ ಪಿ.ಎಂ.
ನಾನು ಈ ಹಿಂದೆ “ಮಾಸ್ಟರ್ ಪೀಸ್” ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ವಿಶ್ವ ನನ್ನ ಮಿತ್ರರು. ಅವರು ನಾನು ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದೇವೆ. ಒಳ್ಳೆಯ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ನೀಡಿ ಎಂದರು ನಟ ವಿಲೋಕ್ ರಾಜ್.
“ಗಿರ್ಕಿ” ಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ನಟಿ ದಿವ್ಯ ಉರುಡಗ, ಮನೋರಂಜನೆಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನೋಡಿ ಹಾರೈಸಿ ಎಂದರು.
ಸಂಗೀತ ನಿರ್ದೇಶಕ ವೀರಸಮರ್ಥ್ “ಗಿರ್ಕಿ” ಹಾಡುಗಳ ಬಗ್ಗೆ ಮಾತನಾಡಿ, ಇದೊಂದು ವಿಭಿಮ್ನ ಕಥಾಹಂದರ ಹೊಂದಿರುವ ಸಿನಿಮಾ. ಹಾಡುಗಳಿಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ವಿಶ್ವ ಅವರ ಸಾಹಸ ಮೆಚ್ಚಬೇಕು. ಅವರು ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಸಿನಿಮಾ ಮಾಡಿದ್ದಾರೆ ಎಂದರು ವೀರ್ ಸಮರ್ಥ್.
ಮನುಷ್ಯ ಹಾಗೂ ಶ್ವಾನದ ನಡುವಿನ ಉತ್ತಮ ಸಂಬಂಧವನ್ನು ಮನಮುಟ್ಟುವಂತೆ ನಿರ್ದೇಶಕ ಕಿರಣ್ ರಾಜ್ “777 ಚಾರ್ಲಿ” ಚಿತ್ರದಲ್ಲಿ ತೋರಿಸಿದ್ದಾರೆ. ಇಡೀ ವಿಶ್ವದಾದ್ಯಂತ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಕ್ಷಿತ ಶೆಟ್ಟಿ ಅವರ ಅಮೋಘ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. “ಚಾರ್ಲಿ” ನಟನೆಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಯಶಸ್ವಿ 25 ದಿನ ಪೂರೈಸಿ ಮುನ್ನಡೆಯುತ್ತಿದೆ. ಈ ಸಂತಸವನ್ನು ಚಿತ್ರತಂಡ ಹಂಚಿಕೊಂಡಿದೆ.
ಈವರೆಗೂ ಒಟ್ಟಾರೆ 150 ಕೋಟಿ ಗ್ರಾಸ್ ಗಳಿಕೆಯಾಗಿದೆ. ಅದರಲ್ಲಿ 90ರಿಂದ 100 ಕೋಟಿವರೆಗೂ ಲಾಭ ಬಂದಿದೆ. ಅದರಲ್ಲಿ ಶೇ. 5ರಷ್ಟು ಚಾರ್ಲಿಗೆ ಸಲ್ಲುವಂತದ್ದು. ಅವಳ ಹೆಸರಿನಲ್ಲಿ ಭಾರತದಾದ್ಯಂತ ಶ್ವಾನಗಳ ಇಂಬ್ರಿಡಿಂಗ್ ವಿರುದ್ಧ ಹೋರಾಡುತ್ತಿರುವ ಹಾಗೂ ಅದನ್ನು ದತ್ತು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎನ್ಜಿಓಗಳಿಗೆ ಸಹಾಯ ಮಾಡುವ ಕುರಿತು ಯೋಚನೆ ಮಾಡಿದ್ದೇವೆ. ಶೇ.5ರಷ್ಟು ಎಂದರೆ ಐದು ಕೋಟಿ ರೂಪಾಯಿಗಳಷ್ಟಾಗುತ್ತದೆ. ಅದನ್ನು ನೇರವಾಗಿ ಹಂಚಿಕೆ ಮಾಡಬೇಕಾ? ಅಥವಾ ಚಾರ್ಲಿ ಹೆಸರಿನಲ್ಲಿ ಒಂದು ಅಕೌಂಟ್ ಮಾಡಿ ದುಡ್ಡಿಟ್ಟು, ಪ್ರತಿ ತಿಂಗಳು ಸಿಗುವ ಬಡ್ಡಿಯಲ್ಲಿ ಸಹಾಯ ಮಾಡಬೇಕಾ? ಎಂಬ ವಿಷಯವಾಗಿ ಇನ್ನೂ ತೀರ್ಮಾನವಾಗಿಲ್ಲ. ಜೊತೆಗೆ ಕಲಾವಿದರು ಮತ್ತು ತಂತ್ರಜ್ಞರಿಗೆ ಶೇ. 10ರಷ್ಟು ಲಾಭದಲ್ಲಿ ಹಂಚಿಕೆ ಮಾಡಲಿದ್ದೇವೆ. ಆ ಮೊತ್ತವೇ 10 ಕೋಟಿ ರೂಪಾಯಿಗಳಷ್ಟಾಗುತ್ತದೆ. ಈ ಪಟ್ಟಿಯಲ್ಲಿ ನಾನಿಲ್ಲ. ಏಕೆಂದರೆ, ನಾನು ಒಬ್ಬ ನಟ ಮತ್ತು ನಿರ್ಮಾಪಕನಾಗಿರುವುದರಿಂದ, ನನ್ನನ್ನು ಬಿಟ್ಟು ಮಿಕ್ಕವರಿಗೆ ಹಂಚಲಿದ್ದೇವೆ ಎಂದರು ರಕ್ಷಿತ್ ಶೆಟ್ಟಿ.
25 ದಿನ ಕರ್ನಾಟಕದಲ್ಲಿ 100 ಪ್ಲಸ್ ಸೆಂಟರ್ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಬೇರೆ ದೇಶಗಳಲ್ಲಿ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಬಿಡುಗಡೆಯಾಗಿ 15 ದಿನಗಳ ನಂತರ ಚಿತ್ರತಂಡದವರು ದುಬೈಗೆ ಹೋಗಿ ಬಂದಿದ್ದಾರೆ. ಮಾರಿಷಸ್, ಜಪಾನ್ ಮುಂತಾದ ಕಡೆ ಸಹ ಚಿತ್ರ ಪ್ರದರ್ಶನವಾಗುತ್ತಿದೆ. ಅಲ್ಲಿ ಪ್ರದರ್ಶನಗಳ ಪ್ರಮಾಣ ಕಡಿಮೆ ಇರಬಹುದು. ಆದರೆ, ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ, ಅಲ್ಲೆಲ್ಲ ಪ್ರದರ್ಶನವಾಗುತ್ತಿದೆ. ಸಾಮಾನ್ಯವಾಗಿ ಚಿತ್ರಕ್ಕೆ ಜನ ಬರುತ್ತಿಲ್ಲ ಎಂದು ಆರೋಪ ಮಾಡುತ್ತಾರೆ. ಆದರೆ, ಚಿತ್ರವನ್ನು ಚೆನ್ನಾಗಿ ಪ್ರಮೋಟ್ ಮಾಡಿದರೆ, ಖಂಡಿತಾ ಜನ ಬರುತ್ತಾರೆ ಎಂದು “777 ಚಾರ್ಲಿ” ತೋರಿಸಿಕೊಟ್ಟಿದೆ. ಚಿತ್ರಕ್ಕೆ ಈಗಲೂ ಜನ ಬರುತ್ತಿದ್ದಾರೆ. ಭಾನುವಾರ 1 ಕೋಟಿಗೂ ಹೆಚ್ಚು ಗಳಿಕೆಯಾಗಿದೆ. ಚಿತ್ರ ಬಿಡುಗಡೆಯಾಗಿ 25 ದಿನಗಳ ನಂತರವೂ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್ಗಳಲ್ಲಿ ಬೇಡಿಕೆ ಇದೆ ಎಂದರು ವಿತರಕ ಕಾರ್ತಿಕ್ ಗೌಡ.
ಸಾಮಾನ್ಯವಾಗಿ ನಾಯಕಿ ಅಂದರೆ ಪ್ರೇಮಕಥೆ ಇರುತ್ತದೆ. ಇಲ್ಲಿ ಹಾಗಿಲ್ಲ. ಆದರೂ ನನ್ನ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎನ್ನುವುದೇ ಸಂತೋಷ. ಅವಕಾಶ ಕೊಟ್ಟ ಎಲ್ಲರಿಗೂ ನಾಯಕಿ ಸಂಗೀತ ಶೃಂಗೇರಿ ಧನ್ಯವಾದಗಳನ್ನು ಸಲ್ಲಿಸಿದರು.
ಸ್ನೇಹಿತರು ಮತ್ತು ಸಂಬಂಧಿಕರು ಚಿತ್ರ ನೋಡಿ ಖುಷಿಪಟ್ಟರು. ನಾವು 65 ಜನ ಒಟ್ಟಿಗೆ ಸಿನಿಪೊಲಿಸ್ಗೆ ಹೋಗಿ ಚಿತ್ರ ನೋಡಿ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮ ಆಚರಿಸಿದ್ದೇವೆ. ನಾನು ಕ್ಲಾಸ್ಗೆ ಹೋಗುವಾಗ ಚಾರ್ಲಿ ಹುಡುಗಿ ಅಂತ ಎಲ್ಲ ಹೇಳುತ್ತಾರೆ. ಸೆಲ್ಫಿ ತೆಗೆಸಿಕೊಂಡು ಆಲ್ ದಿ ಬೆಸ್ಟ್ ಹೇಳುತ್ತಾರೆ ಎಂದು ಪುಟಾಣಿ ಶಾರ್ವರಿ ತಮ್ಮ ಅನುಭವ ಹಂಚಿಕೊಂಡರು.
ಸೋಲು ಹಲವು ಪಾಠ ಕಲಿಸುತ್ತದೆ. ಗೆಲುವು ಹಲವು ದಾರಿಗಳನ್ನು ತೋರಿಸುತ್ತವೆ. ಸಹಾಯಕ ನಿರ್ದೇಶಕನಾಗಿ ಮೂರು ಸಿನಿಮಾಗಳನ್ನು ಮಾಡಿದ್ದೇನೆ. ಸೋಲು, ಗೆಲುವು ಎರಡನ್ನು ನೋಡಿದ್ದೀನಿ. ಸೋಲು ನೋಡಿರುವುದರಿಂದ ಗೆಲುವಿನ ಮಹತ್ವ ಗೊತ್ತಾಯಿತು. ಈ ಜರ್ನಿಯಲ್ಲಿ ಹಲವರಿದ್ದಾರೆ. ಒಂದೇ ಮನಸ್ಥಿತಿಯವರಾದ್ದರಿಂದ ಇಂಥದ್ದೊಂದು ಪ್ರಯತ್ನ ಮಾಡುವುದಕ್ಕೆ ಸಾಧ್ಯವಾಯಿತು. ಚಿತ್ರ 25 ದಿನ ಪೂರೈಸಿದೆ. ಮುಂದೆ ಸಹ ಇದೇ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಲಾಭ ಕೊಡುತ್ತದೆ ಎಂಬ ನಂಬಿಕೆ ಇದೆ. ಈ ಗೆಲುವಿನಿಂದ ಇನ್ನಷ್ಟು ಪ್ರಯತ್ನಗಳನ್ನು ಮಾಡುವುದಕ್ಕೆ ಸ್ಫೂರ್ತಿ ಸಿಕ್ಕಿದೆ. ಕಿರಿಕ್ ಪಾರ್ಟಿ ಮಾಡಿದಾಗ ಹಣದ ಅಭಾವವಿತ್ತು. ಆಗ ರಕ್ಷಿತ್ ಎಲ್ಲರನ್ನೂ ಕರೆದು, ಚಿತ್ರ ಚೆನ್ನಾಗಿ ಹೋದರೆ ಇನ್ನಷ್ಟು ಕೊಡುವುದಾಗಿ ಹೇಳಿದ್ದರು. ಅದರಂತೆ ಚಿತ್ರ ಗೆದ್ದ ಮೇಲೆ ಹಲವರಿಗೆ ಅವರ ಪಾಲು ಕೊಟ್ಟರು. ಇದನ್ನು ನೋಡಿ ಕೆಲವರು ಕಣ್ಣೀರು ಹಾಕಿದ್ದು ನೆನಪಿದೆ. ಈಗಲೂ ರಕ್ಷಿತ್ ಅದನ್ನೇ ಮುಂದುವರೆಸಿದ್ದಾರೆ ಎಂದರು ನಿರ್ದೇಶಕ ಕಿರಣ್ ರಾಜ್.
ನಾಲ್ವರು ಸ್ನೇಹಿತರ ಮಧ್ಯೆ ಹುಟ್ಟಿಕೊಳ್ಳುವ ಒಂದು ಸುಳ್ಳು ಮುಂದೆ ಏನೆಲ್ಲ ಘಟನೆಗಳಿಗೆ ಕಾರಣವಾಯಿತು ಎಂಬ ಎಳೆ ಇಟ್ಟುಕೊಂಡು ಯುವ ನಿರ್ದೇಶಕ ಹೆಚ್.ಬಿ. ಸಿದ್ದು ಅವರು ನಿರ್ದೇಶಿಸಿರುವ ಚಿತ್ರ ನಮ್ಮ ಹುಡುಗರು. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ಜುಲೈ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಟ ವಸಿಷ್ಠಸಿಂಹ ಅವರು ಈ ಚಿತ್ರದಲ್ಲಿ ಒಬ್ಬ ಕಲಾವಿದನಾಗೇ ಕಾಣಿಸಿಕೊಂಡಿದ್ದಾರೆ.
ಜುಲೈ 6ರಂದು ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಪ್ರೀರಿಲೀಸ್ ಕಾರ್ಯಕ್ರ ನಡೆಯಲಿದೆ. ಕಿಚ್ಚ ಸುದೀಪ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇಲ್ಲಿ ಮಂಡ್ಯದ ಹಿನ್ನೆಲೆಯಲ್ಲಿ ನಡೆಯುವ ಕಥೆಯಿದೆ. ಅಲ್ಲೊಂದು ಸ್ನೇಹಿತರ ಬಳಗ, ಆ ಸ್ನೇಹಿತರ ಹುಡುಗಾಟ, ಅವರ ನಡುವೆ ಹುಟ್ಟಿಕೊಳ್ಳುವ ಸುಳ್ಳಿನಿಂದ ಆರಂಭವಾಗಿ ಸುಳ್ಳಿನಿಂದಲೇ ಮುಗಿಯುವ ಕಥೆಯನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ. ಮಂಡ್ಯದಲ್ಲಿ ಪ್ರಾರಂಭವಾಗಿ ಮಂಗಳೂರಿನಲ್ಲಿ ಎಂಡ್ ಆಗುವ ಕಥೆಯಿದು. ಒಂದು ಪದ ಇಟ್ಟುಕೊಂಡು ಇಡೀ ಸಿನಿಮಾವನ್ನು ಹೇಗೆ ತೆಗೆದುಕೊಂಡು ಹೋಗಬಹುದು ಎಂದು ಇದರಲ್ಲಿ ಹೇಳಲಾಗಿದೆ. ಸ್ನೇಹಿತರ ನಡುವೆ ಮೋಸ, ವಂಚನೆ ಸುಳಿಯಬಾರದು, ಅಲ್ಲಿ ಸುಳ್ಳೊಂದು ಹುಟ್ಟಿದಾಗ ಅದು ಏನೆಲ್ಲ ತೊಂದರೆಗೆ ಕಾರಣವಾಯಿತೆಂದು ಈ ಚಿತ್ರ ನಿರೂಪಿಸುತ್ತದೆ. ಮಂಡ್ಯ, ಮೈಸೂರು, ಬೆಂಗಳೂರು, ಕಾರವಾರ, ಸಕಲೇಶಪುರ ಹಾಗೂ ಮಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆದಿದೆ. ಅಭಿಮನ್ ರಾಯ್ ಅವರ ಸಂಗೀತವಿದೆ. ಇಲ್ಲಿ ಬಿಂದು. ಶಫಿ ಎಂಬ ಹೊಸ ಗಾಯಕರಿಗೆ ಅವಕಾಶ ನೀಡಲಾಗಿದೆ.
ನಿರ್ದೇಶಕರು ಹೇಳುವಂತೆ, ಕಥೆಯ ನೆರೇಶನ್ ವಿಶೇಷವಾಗಿದೆ. ಆರಂಭ ಅಂತ್ಯ ಎರಡೂ ಸ್ಪೆಷಲ್ ಎಲಿಮೆಂಟ್. ಅಲ್ಲದೆ ಚಿತ್ರದ ಎಲ್ಲಾ ಪಾತ್ರಗಳು ಕಥೆಯನ್ನು ಕ್ಯಾರಿ ಮಾಡುತ್ತವೆ. ಸಿನಿಮಾ ನೋಡಿದ ಉಪೇಂದ್ರ ಅವರು ಫಸ್ಟ್ ಅಟೆಂಪ್ಟ್ ಆದರೂ ತುಂಬಾ ಚೆನ್ನಾಗಿ ಮಾಡಿದ್ದೀರಿ ಎಂದು ಮೆಚ್ಚಿಕೊಂಡರು. ಲೆಂತ್ ಆಗುತ್ತೆ ಅಂತ ನಾವು ತೆಗೆದುಹಾಕಿದ್ದ ಸೀನನ್ನು ಕಥೆಗದು ಬೇಕು ಎಂದು ಮತ್ತೆ ಹಾಕಿಸಿದರು ಎಂದು ಸಿದ್ದು ವಿವರಿಸುತ್ತಾರೆ.
ನಂತರ ನಾಯಕ ನಿರಂಜನ್, ಹೀರೋ ಆಗಿ ನನ್ನ ಮೊದಲ ಚಿತ್ರವಿದು. ನಾರ್ಮಲ್ ಸಿನಿಮಾ ಇದಲ್ಲ. ಒಂದೊಳ್ಳೇ ಕಂಟೆಂಟ್ ಇದೆ. ರಿಯಲ್ ಲೈಫ್‌ನಲ್ಲಿ ಎಲ್ಲರಿಗೂ ಎಮೋಷನಲಿ ಕನೆಕ್ಟ್ ಆಗುವಂಥ ಸಬ್ಜೆಕ್ಟ್. ಚಿತ್ರದಲ್ಲಿ ಹಾಡುಗಳೂ ಹೈಲೈಟ್, ಇವತ್ತು ಹಾಡೊಂದನ್ನು ಶ್ರೀಮುರುಳಿ ಅವರು ಬಿಡುಗಡೆ ಮಾಡಿಕೊಟ್ಟರು. ಅಪ್ಪು ಅವರ ವೀಡಿಯೋ ಹಾಡನ್ನು ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ರಾಘಣ್ಣ ರಿಲೀಸ್ ಮಾಡಲಿದ್ದಾರೆ. ಇಂಟರ್‌ವೆಲ್‌ಗೂ ಮುಂಚೆ ಬರುವ ಸೀನೊಂದನ್ನು ಬೆಟ್ಟದ ಮೇಲೆ ಶೂಟ್ ಮಾಡಿದ್ದೇವೆ. ಸಖತ್ ಹೈಟ್‌ಪೀಕ್‌ನಲ್ಲಿ ಮಾಡಿದ ಆ ಸೀನನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲೋಕ್, ಪ್ರವೀಣ್ ಹಾಗೂ ಮಾರುತಿ ನನ್ನ ಸ್ನೇಹಿತರಾಗಿ ಉತ್ತಮ ಅಭಿನಯ ನೀಡಿದ್ದಾರೆ. ಸೆಂಟಿಮೆಂಟ್, ಕಾಮಿಡಿಯಿಂದ ಆರಂಭವಾಗುವ ಕಥೆ ನಂತರ ಸೀರಿಯಸ್ ಆಗುತ್ತದೆ ಎಂಬುದು ನಿರಂಜನ್ ಮಾತು.
ಚಿತ್ರದ ನಾಯಕಿ ರಾಧ್ಯ ಗೌರಿ ಎಂಬ ಮಂಡ್ಯ ಹುಡುಗಿಯಾಗಿ ನಟಿಸಿದ್ದಾರೆ., ಎಲ್ಲರ ಮನಕ್ಕೂ ಹತ್ತಿರವಾಗುವಂಥ ಪಾತ್ರವಂತೆ ಅದು. ಗೋಲ್ಡನ್ ಹಾರ್ಟ್ಸ್ ಮೂಲಕ ಕೆಕೆ. ಅಶ್ರಫ್ ಅವರ ನಿರ್ಮಾಣದ ಈ ಚಿತ್ರವನ್ನು ಜಯಣ್ಣ ಫಿಲಂಸ್ ಬಿಡಗಡೆ ಮಾಡುತ್ತಿದೆ.
ಕನ್ನಡ ಚಿತ್ರರಂಗದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಹರ್ಷಿಕಾ ಅವರು ತೆರೆಯ ಮೇಲೆ ಮಾತ್ರ ನಾಯಕಿಯಲ್ಲ. ತೆರೆಯ ಹಿಂದೆಯೂ ನಾಯಕಿ ಅಂತಾ ಕೊರೊನಾ ಸಮಯದಲ್ಲೇ ಸಾಮಾಜಿಕ ಕಾರ್ಯದ ಮೂಲಕ ಸಾಬೀತುಪಡಿಸಿದ್ದಾರೆ.
ಭುವನಂ ಸಂಸ್ಥೆಯ ಮೂಲಕ ನಟ ಭುವನ್ ಅವರೊಂದಿಗೆ ಹರ್ಷಿಕಾ ಜೊತೆಯಾಗಿ, ಒಂದಷ್ಟು ಒಳ್ಳೆಯ ಕೆಲಸ ಮಾಡಿದ್ದರು. ಅದನ್ನು ಪರಿಗಣಿಸಿ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಕಲಾವಿದರು ನಿಜ ಜೀವನದಲ್ಲೂ ನಾಯಕ, ನಾಯಕಿ ಆಗೋದು ಸ್ವಲ್ಪ ಕಮ್ಮಿ. ಆದರೆ ನಿಜ ಬದುಕಲ್ಲೂ ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ಅವರು ನಾಯಕ, ನಾಯಕಿ ಅನ್ನುವುದನ್ನು ತೋರಿಸಿದ್ದಾರೆ.
ಇವರಿಬ್ಬರ ಸಮಾಜಮುಖಿ ಕಾರ್ಯ ಗುರುತಿಸಿ ಭುವನಂ ಸಂಸ್ಥೆಯ ಪರವಾಗಿ ನಟಿ ಹರ್ಷಿಕಾ, ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದಾರೆ.
ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ನಟಿ ಹರ್ಷಿಕಾ ಅವರಿಗೆ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯಿಂದ ಭುವನಂ ಸಂಸ್ಥೆಯ ಮೂಲಕ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ನಟಿಗೆ ಪ್ರೇರಣೆ ಸಿಕ್ಕಂತಾಗಿದೆ. ಪ್ರಶಸ್ತಿಯ ಕುರಿತು ಹರ್ಷಿಕಾ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜುಲೈ 4 ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಹಾಗಾಗಿ ಅವರು ನಾಯಕರಾಗಿ ನಟಿಸುತ್ತಿರುವ “ಮಾಫಿಯಾ” ಚಿತ್ರತಂಡ ಹೊಸ ಮಾಸ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕ ಪ್ರಜ್ವಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದೆ.
ಕ್ರೈಂ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಜುಲೈ ಅಂತ್ಯದ ವೇಳೆಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಲೋಹಿತ್ ಹೆಚ್. ನಿರ್ದೇಶಿಸುತ್ತಿದ್ದಾರೆ. ಎಸ್ ಪಾಂಡಿಕುಮಾರ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. ಶೈನ್ ಶೆಟ್ಟಿ, ದೇವರಾಜ್, ವಿಜಯ್ ಚೆಂಡೂರ್, ವಾಸುಕಿ ವೈಭವ್, ಸಾಧುಕೋಕಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ದಿಯಾ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಿದ್ದ ಪೃಥ್ವಿ ಅಂಬರ್ ಈಗ ‘ದೂರದರ್ಶನ’ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಕಥಾಹಂದರದ ಈ ಸಿನಿಮಾದ ಟೈಟಲ್ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ದೂರದರ್ಶನ ಬಳಗ ನಾಯಕಿಯನ್ನು ಪರಿಚಯಿಸುತ್ತಿದೆ. ಈ ಹಿಂದೆ ಇಲ್ಲಿ ಇರಲಾರೆ ಅಲ್ಲಿಗೆ ಹೋಗಲಾರೆ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ್ದ ಆಯಾನಾ ಪೃಥ್ವಿ ಅಂಬರ್ ಗೆ ಜೋಡಿಯಾಗಿ ನಟಿಸಿದ್ದಾರೆ.
ದೂರದರ್ಶನ ಸಿನಿಮಾಗೆ ನಾಯಕಿ ಪಾತ್ರಕ್ಕೆ ಆಡಿಷನ್ ಕರೆಯಲಾಗಿತ್ತು. 30 ರಿಂದ 40 ಮಂದಿ ಆಡಿಷನ್ ನಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಆಯಾನಾ ಫೈನಲ್ ಆಗಿ ಆಯ್ಕೆಯಾದರು ಎನ್ನುವ ನಿರ್ದೇಶಕ ಸುಕೇಶ್ ಶೆಟ್ಟಿ, ಆಯಾನಾ ಮೈತ್ರಿ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ರಿಕ್ಷಾ ಡ್ರೈವರ್ ಮಗಳಾಗಿ ಅಪ್ಪನ ಆಸೆಯಲ್ಲಿ ಬೆಳೆಯುವ ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಮುಂದೇನು ಆಗುತ್ತೇ ಎಂಬ ತಿರುವು ನೀಡುವ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.
ಸಂಭಾಷಣೆ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ, ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಸುಕೇಶ್ ಶೆಟ್ಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದು ಇವರ ಮೊದಲ ಸಿನಿಮಾವಾಗಿದೆ. ನೈಜ ಘಟನೆ ಹಾಗೂ ಕಾಲ್ಪನಿಕತೆ ಬೆರೆತ ಸಿನಿಮಾವಾಗಿರುವ ದೂರದರ್ಶನ ಚಿತ್ರೀಕರಣ ಮಂಗಳೂರು ಪುತ್ತೂರು ಮಧ್ಯದ ಆರ್ಲಪದವಿನಲ್ಲಿ 38 ದಿನಗಳ ಕಾಲ ನಡೆದಿದೆ.
ವಿಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ಸಿನಿಮಾಗೆ ಬಂಡವಾಳ ಹೂಡಿದ್ದು, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಜವಾಬ್ದಾರಿಯನ್ನು ಉಗ್ರಂ ಮಂಜು ಹೊತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್ ರಾವ್ ಸಂಕಲನ ಸಿನಿಮಾಕ್ಕಿದೆ.
ಕನ್ನಡದಲ್ಲಿ ಈಗಾಗಲೇ ಅನೇಕ ವಿಭಿನ್ನ ಕಥೆ ಇರುವ ಸಿನಿಮಾಗಳು ಬಂದಿವೆ. ಅ ಸಾಲಿಗೆ ಇದೀಗ ‘ ವೆಡ್ಡಿಂಗ್ ಗಿಫ್ಟ್’ ಸಿನಿಮಾ ಕೂಡ ಸೇರಿದೆ. ಶೀರ್ಷಿಕೆಯಲ್ಲೇ ವಿಶೇಷ ಎನಿಸುವ ಈ ಚಿತ್ರ ಫಟಾಫಟ್ ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಜ್ಜಾಗಿದೆ. ಹೌದು ಜುಲೈ 8 ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ವಿಕ್ರಂಪ್ರಭು ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಎಂಟ್ರಿಯಾಗಿದ್ದಾರೆ.
ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಮದುವೆ ಹಿಂದಿನಕಥೆ ಮತ್ತು ವ್ಯಥೆ ಕುರಿತ ಸಿನಿಮಾ. ಈಗಿನ ಮದುವೆ ಸಂಬಂಧಗಳು ಎಷ್ಟರ ಮಟ್ಟಿಗೆ ಗಟ್ಟಿ ಅನ್ನೋದು ಗೊತ್ತಿದೆ. ಅಂಥದ್ದೇ ಒಂದು ಎಳೆ ಇಟ್ಟುಕೊಂಡು ಹೆಣೆದಿರುವ ಸಿನಿಮಾ ಇದು. ಮದುವೆಯಾದ ಆರಂಭದಲ್ಲೇ ಗಂಡ-ಹೆಂಡತಿ ಮಧ್ಯೆ ಬಿರುಕು ಬಂದರೆ ಏನೆಲ್ಲಾ ಆಗುತ್ತೆ ಎಂಬ ಕಥಾವಸ್ತು ಚಿತಗರದ ಹೈಲೆಟ್.
ಚಿತ್ರದಲ್ಲಿ ನಿಶಾಂತ್ ಮತ್ತು ಸೋನುಗೌಡ ನಾಯಕ- ನಾಯಕಿಯಾಗಿದ್ದಾರೆ. ಇನ್ನು ಚಿತ್ರದ ಪ್ರಮುಖ ಆಕರ್ಷಣೆ ನಟಿ ಪ್ರೇಮ. ತುಂಬಾ ದಿನಗಳ ಬಳಿಕ ಪ್ರೇಮ ಇಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿ ಎಲ್ಲೆಡೆ ಮೆಚ್ಚುಗೆ ಪಡೆದಿದೆ.
ಈ ಸಿನಿಮಾ ನಿರ್ದೇಶಕ ವಿಕ್ರಂ ಪ್ರಭು ಅವರಿಗೆ ಇದು ಮೊದಲ ಅನುಭವ. ಹಾಗಂತ, ಸಿನಿಮಾರಂಗ ಗೊತ್ತಿಲ್ಲ ಅಂತಲ್ಲ. ಅಚರು ಈ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ “ಲವ್” ಚಿತ್ರದಲ್ಲಿ ಕೆಲಸ ಮಾಡಿದ್ದರು. ನಂತರದ ದಿನಗಳಲ್ಲಿ ಪೂನಾದಲ್ಲಿ ಉದ್ಯಮಿಯಾಗಿ ನೆಲೆಸಿ, ತಾನೊಂದು ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಮಾಡಲೇಬೇಕು ಅಂತ ಕೆಲವು ವರ್ಷಗಳ ನಂತರ ಈ “ವೆಡ್ಡಿಂಗ್ ಗಿಫ್ಟ್” ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಕೂಡ ಮಾಡಿದ್ದಾರೆ.
ಕಳೆದ ಜುಲೈನಲ್ಲಿ ಈ ಸಿನಿಮಾದ ಮುಹೂರ್ತ ನಡೆದಿತ್ತು. ಈ ಜುಲೈ 8ರಂದು ಚಿತ್ರ ತೆರೆ ಕಾಣುತ್ತಿದೆ. ಹೀಗಾಗಿ ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿ ಇದೆ.
ನಿರ್ದೇಶಕ ವಿಕ್ರಂ ಪ್ರಭು ಅವರು ಪಕ್ಕಾ ಪ್ಲಾನ್ ಮಾಡಿಕೊಂಡೇ ಸಿನಿಮಾ ಮಾಡಿದ್ದಾರೆ. ಮೊದಲು ಒಂದೊಳ್ಳೆಯ ಕಥೆ ರೆಡಿ ಮಾಡಿ, ಅದಕ್ಕೆ ಇಂತಹ ಕಲಾವಿದರೇ ಸೂಕ್ತ ಅಂದುಕೊಂಡು ನಿಗಧಿತ ಅವಧಿಯಲ್ಲೇ ಸಿನಿಮಾ ಮಾಡಿದ ಸಂತಸ ಅವರದು. ಸರಿಯಾದ ಸಮಯಕ್ಕೆ ಸಿನಿಮಾ ಮಾಡಿ ರಿಲೀಸ್ ಮಾಡೋಕೆ ಚಿತ್ರತಂಡದ ಸಹಕಾರ ಅಪಾರವಾಗಿದೆ ಎನ್ನುವ ನಿರ್ದೇಶಕ ವಿಕ್ರಮ್ ಪ್ರಭು, ಸಮಾಜಕ್ಕೆ ಉತ್ತಮ ಸಂದೇಶವುಳ್ಳ ಚಿತ್ರ ಇದಾಗಲಿದೆ ಎಲ್ಲರೂ ನಮ್ಮನ್ನು ಹರಸಿ ಎನ್ನುತ್ತಾರೆ.
ನಟಿ ಪ್ರೇಮ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಗಕವು ಕಥೆ ಬಂದರೂ ಸರಿಯಾಗಿಲ್ಲ ಎಂಬ ಕಾರಣಕ್ಕೆ ರಿಜೆಕ್ಟ್ ಮಾಡುತ್ತಿದ್ದರಂತೆ. ಆದರೆ ಅವರು, ವಿಕ್ರಂಪ್ರಭು ಅವರು ಹೇಳಿದ ಕಥೆ ಕೇಳಿ ತಕ್ಷಣ ನಟಿಸಲು ಒಪ್ಪಿಕೊಂಡರಂತೆ. ಅಂದಹಾಗೆ, ನಟಿ ಪ್ರೇಮ ಇಲ್ಲಿ ಲಾಯರ್ ಪಾತ್ರ ಮಾಡುತ್ತಿದ್ದಾರೆ.
ವಿಕ್ರಮ್ ಪ್ರಭು, ನಿರ್ದೇಶಕ, ನಿರ್ಮಾಪಕ
ನಟಿ ಸೋನು ಗೌಡ ಅವರಿಗೆ ಕಥೆ ಇಷ್ಟವಾಗಿದ್ದೇ ತಡ ನಟಿಸೋಕೆ ಒಪ್ಪಿದರಂತೆ. ಇದೊಂದು ಭಾವನಾತ್ಮಕ ಚಿತ್ರ. ಯಾರು ಈ ಕಷ್ಟಗಳನೆಲ್ಲಾ ಅನುಭವಿಸಿರುತ್ತಾರೊ, ಅವರಿಗೆ ಈ ಚಿತ್ರ ಹತ್ತಿರವಾಗಲಿದೆ. ಈ ಪಾತ್ರ ಮಾಡುವಾಗ ನನಗಂತು ನಿಜವಾಗಲೂ ಕಷ್ಟವಾಯಿತು. ಇಂತಹವರೂ ಇರುತ್ತಾರಾ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಒಬ್ಬ ನಟಿಯಾಗಿ ಎಲ್ಲಾ ಪಾತ್ರಗಳನ್ನು ಮಾಡಬೇಕು. ಪಾಸಿಟಿವ್ ಹಾಗೂ ನೆಗಟಿವ್ ಎರಡು ಪಾತ್ರಗಳಲ್ಲೂ ಅಭಿನಯಿಸಿದ್ದೇನೆ. ಹಾಗೊಂದು ವೇಳೆ ನೆಗಟಿವ್ ಪಾತ್ರ ನೋಡುಗರಿಗೆ ಹಿಡಿಸಿತೆಂದರೆ, ಅದು ನನ್ನ ನಿಜವಾದ ಗೆಲುವು ಎಂಬುದು ನಟಿ ಸೋನು ಗೌಡ ಅವರ ಮಾತು.
ಜುಲೈ 8 ರಂದು ಸುಮಾರು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾ, ಹೆಚ್ಚು ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಆಗಲಿದೆ ಅನ್ನೋದು ವಿತರಕ ಶ್ರೀಧರ್ ಮಾತು.
ಚಿತ್ರಕ್ಕೆ ಉದಯ್ ಲೀಲ ಕ್ಯಾಮೆರಾ ಹಿಡಿದರೆ, ವಿಜೇತ್ ಚಂದ್ರ ಸಂಕಲನವಿದೆ. ಚಿತ್ರದಲ್ಲಿ ಅಚ್ಯುತ್ ರಾವ್, ಪವಿತ್ರಾ ಲೋಕೇಶ್ ಇತರರು ಇದ್ದಾರೆ.
ಚಿತ್ರ : ಬೈರಾಗಿ ನಿರ್ದೇಶನ : ವಿಜಯ್ ಮಿಲ್ಟನ್ ನಿರ್ಮಾಣ : ಕೃಷ್ಣ ಸಾರ್ಥಕ್ ತಾರಾಗಣ : ಶಿವರಾಜಕುಮಾರ್, ಡಾಲಿ ಧನಂಜಯ್, ಪೃಥ್ವಿ ಅಂಬರ್, ಅಂಜಲಿ, ಶಶಿಕುಮಾರ್, ಯಶಾ ಶಿವಕುಮಾರ್, ಶರತ್ ಲೋಹಿತಾಶ್ವ, ಅನುಪ್ರಭಾಕರ್, ವಿನೋದ್ ಆಳ್ವ ಇತರರು.
‘ಸಿಂಪಲ್ಲಾಗಿರೋದ್ ನೋಡಿ ಡಮ್ಮಿ ಪೀಸ್ ಅನ್ಕೊಂಡ…’ ಈ ಡೈಲಾಗ್ ಬರುವ ಹೊತ್ತಿಗೆ ಅದಾಗಲೇ ಆ ಹುಲಿಯ ಆರ್ಭಟ ಜೋರಾಗಿರುತ್ತೆ. ಆ ಹುಲಿ ತುಂಬಾ ಸೈಲೆಂಟ್ ಕೆಣಕಿದರೆ ವೈಲೆಂಟ್… ಚಿತ್ರದುದ್ದಕ್ಕೂ ಸೈಲೆಂಟ್ ಮತ್ತುವೈಲೆಂಟ್ ನ ಅಬ್ಬರ ತುಸು ಜೋರಾಗಿಯೇ ಇದೆ. ಇದು ಪಕ್ಕಾ ಮಾಸ್ ಮತ್ತು ಕ್ಲಾಸ್ ಸಿನಿಮಾ. ಒಂದೇ ಮಾತಲ್ಲಿ ಹೇಳುವುದಾದರೆ ಬೈರಾಗಿ ಮನರಂಜನೆಯ ಜೊತೆಗೊಂದು ಸಂದೇಶ ಸಾರುವ ಸಿನಿಮಾ ಕೂಡ. ಇದು ಶಿವಣ್ಣ ಫ್ಯಾನ್ಸ್ ಮಾತ್ರವಲ್ಲ, ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು.
ಶಿವರಾಜಕುಮಾರ್ ಅವರನ್ನಿಲ್ಲಿ ನಿರ್ದೇಶಕ ವಿಜಯ್ ಮಿಲ್ಟನ್ ತುಂಬಾ ಸಿಂಪಲ್ಲಾಗಿ ತೋರಿಸಿದ್ದರೂ, ಶಿವಣ್ಣ ಅವರ ಎನರ್ಜಿಯನ್ನು ಎಲ್ಲೂ ವೇ್ಟ್ ಮಾಡದಂತೆ ತೋರಿಸಿದ್ದಾರೆ. ಶಿವಣ್ಣ ಅವರಿಗೆ ಇದೊಂದು ಹೊಸ ಬಗೆಯ ಪಾತ್ರ. ಆ ಪಾತ್ರದಲ್ಲೇ ಶಿವಣ್ಣ ಜೀವಿಸಿದ್ದಾರೆ. ಇಡೀ ಸಿನಿಮಾದಲ್ಲಿ ಶಿವಣ್ಣ ಅವರ ಹುಲಿ ಘರ್ಜನೆ ಹೈಲೆಟ್.
ಇದು ತಮಿಳಿನ ‘ಕಡುಗು’ ಚಿತ್ರದ ಅವತರಣಿಕೆ. ತಮಿಳಿನಲ್ಲಿ ನಿರ್ದೇಶಿಸಿದ್ದ ವಿಜಯ್ ಮಿಲ್ಟನ್ ಅವರೇ ಈ ಸಿನಿಮಾಗೂ ಆಕ್ಷನ್ ಕಟ್ ಹೇಳಿದ್ದಾರೆ. ಇದು ತಮಿಳು ಸಿನಿಮಾದ ರಿಮೇಕ್ ಇದ್ದರೂ ಕನ್ನಡತನಕ್ಕೆ ಎಲ್ಲೂ ಮೋಸವಾಗಿಲ್ಲ. ಅನ್ನೋದೆ ಸಮಾಧಾನ. ಶಿವಣ್ಣ ಅವರನ್ನು ತೋರಿಸಿರುವ ರೀತಿ, ಮೇಕಿಂಗ್ ಪ್ಯಾಟ್ರನ್ ಎಲ್ಲವೂ ಇಲ್ಲಿ ಹೊಸದಾಗಿದೆ. ಇದುವರೆಗೆ ಮಾಡದಿರುವ ಪಾತ್ರದಲ್ಲಿ ಶಿವಣ್ಣ ಎಲ್ಲರಿಗೂ ಮತ್ತಷ್ಟು ಹತ್ತಿರವಾಗುತ್ತಾರೆ.
ಒಂದು ಕಥೆ ಕೇಳುವಂತಿರಬೇಕು, ಆ ಕಥೆ ತೆರೆ ಮೇಲೆ ಚಿತ್ರರೂಪವಾಗಿ ಬಂದಾಗ, ಕಾಡುವಂತಿರಬೇಕು ಆ ಕೇಳುವ, ಕಾಡುವ ಮತ್ತು ನೋಡುವ ಸಿನಿಮಾ ಇದು. ಹಾಗಾಗಿ ಬೈರಾಗಿ ನಂಬಿ ಬಂದವರಿಗೆ ಯಾವ ಮೋಸವಾಗಲ್ಲ.
ಸಿನಿಮಾದಲ್ಲಿ ತಾರೆಗಳ ದಂಡೇ ಇದೆ. ಎಲ್ಲಾ ಪಾತ್ರಗಳಿಗೂ ಅಲ್ಲಿ ತುಂಬಾನೇ ಸ್ಪೇಸ್ ಇದೆ. ಮುಖ್ಯವಾಗಿ ಇಲ್ಲಿ ಮತ್ತೆ ಶಿವಣ್ಣ ಡಾಲಿ ಧನಂಜಯ ಕಾಂಬಿನೇಷನ್ ಇದೆ. ನಿರೀಕ್ಷೆ ಮೀರಿ ಆ ಕಾಂಬಿನೇಷನ್ ವರ್ಕೌಟ್ ಆಗಿದೆ. ಟಗರು ಮೂಲಕ ಜೋರು ಸುದ್ದಿಯಾದ ಧನಂಜಯ ಇಲ್ಲೂ ಹುಲಿ ಜೊತೆ ಸೆಣಸಾಡಿದ್ದಾರೆ. ಅವರಿಲ್ಲಿ ಒಳ್ಳೆಯವರ ಕೆಟ್ಟವರ ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು.
ಕಥೆ ಏನು?
ಹುಲಿ ವೇಷ ಹಾಕಿಕೊಂಡು ಬದುಕು ಸವೆಸುವ ಶಿವಪ್ಪನಿಗೆ ಎಲ್ಲಿಲ್ಲದ ಕೋಪ. ಯಾರಾದರೂ ಕೆಣಕಿದರೆ, ಇತರರಿಗೆ ಅನ್ಯಾಯವಾದರೆ ಸಾಕು ಕೋಪ ಸ್ಪೋಟಗೊಂಡು ಅಲ್ಲೋಲ ಕಲ್ಲೋಲ ಆಗುವ ಹಂತಕ್ಕೂ ಶಿವಪ್ಪ ಕಾರಣನಾಗುತ್ತಾನೆ.
ತಮ್ಮನ್ನು ವಿನಾಕಾರಣ ಕೆಣಕಿದವರ ವಿರುದ್ಧ ಹುಲಿ ಶಿವಪ್ಪ ಕೋಪ ಹೆಚ್ಚಿಸಿಕೊಂಡು ಘಟನೆಯೊಂದರಲ್ಲಿ ಹೊಡೆದಾಡಿ, ಜೈಲಿಗೆ ಹೋಗುತ್ತಾನೆ. ಅಲ್ಲಿಂದ ಹೊರ ಬರುವ ಹುಲಿ ಶಿವಪ್ಪನಿಗೆ ಪೊಲೀಸ್ ಅಧಿಕಾರಿಯೊಬ್ಬ ಕೋಪ ಬಿಟ್ಟರೆ ನೀನು, ನಿನ್ನ ಜೊತೆ ಇರೋರು ಚೆನ್ನಾಗಿರುತ್ತಾರೆ ಅಂತ ಬುದ್ಧಿವಾದ ಹೇಳಿ ತನ್ನೊಟ್ಟಿಗೆ ಹುಲಿ ಶಿವಪ್ಪನನ್ನು ಕರೆದೊಯ್ಯುತ್ತಾರೆ. ಗೊತ್ತಿಲ್ಲದ ಊರಲ್ಲಿ ವರ್ಗಾವಣೆಯಾಗುವ ಪೊಲೀಸ್ ಅಧಿಕಾರಿ ಜೊತೆ ಶಿವಪ್ಪನೂ ಹೋಗ್ತಾನೆ. ಅಲ್ಲಿ ಸಿಂಪಲ್ಲಾಗಿಯೇ ಇರುವ ಶಿವಪ್ಪನ ಬದುಕಲ್ಲಿ ಒಂದೊಂದೇ ಘಟನೆಗಳು ನಡೆಯುತ್ತವೆ. ಎಲ್ಲವನ್ನೂ ಸಹಿಸಿಕೊಳ್ಳುವ ಶಿವಪ್ಪ, ಕೆಲವರ ಮೇಲೆ ತಿರುಗಿ ಬೀಳುತ್ತಾನೆ. ಹೀಗಿರುವಾಗ ಒಂದು ದುರ್ಘಟನೆ ನಡೆಯುತ್ತೆ. ಅದೇನು ಅನ್ನೋ ಕುತೂಹಲ ಇದ್ದರೆ ಸಿನಿಮಾ ನೋಡಿ.
ಯಾರು ಹೇಗೆ?
ಇಲ್ಲಿ ಶಿವಣ್ಣ ಅವರ ನಟನೆ ಬಗ್ಗೆ ಮಾತಾಡುವಂತಿಲ್ಲ. ಈ ಪಾತ್ರದಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ. ಹುಲಿಯಾಗಿ ಘರ್ಜಿಸುತ್ತಲೇ ಮುದ್ದಾಡುವಂತಹ ಹುಲಿಯಾಗಿಯೂ ಕಾಣುತ್ತಾರೆ. ಅವರ ಎನರ್ಜಿ ಇಂದಿಗೂ ಕಮ್ಮಿಯಾಗಿಲ್ಲ ಅನ್ನೋಕೆ ಈ ಪಾತ್ರದಲ್ಲಿ ಮಿಂಚಿರುವ ರೀತಿಯೇ ಸಾಕ್ಷಿ. ಅವರ ಒಂದೊಂದು ಡೈಲಾಗ್ ಗೂ ಶಿಳ್ಳೆ, ಚಪ್ಪಾಳೆ ಬೀಳುತ್ತವೆ. ಹುಲಿ ಕುಣಿತದಲ್ಲಂತೂ, ಕುಳಿತವರನ್ನೇ ಕುಣಿಸುವಷ್ಟರ ಮಟ್ಟಿಗೆ ಕುಣಿದು ಕುಪ್ಪಳಿಸಿದ್ದಾರೆ. ಇನ್ನು, ಫೈಟಿಂಗ್ ವಿಚಾರದಲ್ಲಂತೂ ಜಿಂಕೆ ಥರಾನೆ ಎಗರಿ ವಿಲನ್ ಗಳನ್ನು ಚಚ್ಚಿದ್ದಾರೆ. ಆಗಾಗ ಭಾವುಕತೆಗೂ ದೂಡುತ್ತಾರೆ.
ಡಾಲಿ ಧನಂಜಯ್ ಇಲ್ಲಿ ಒಳ್ಳೆಯವನಾಗಿ ಕೆಟ್ಟವನಾಗಿ ನಂತರ ಹುಲಿ ಭಯಕ್ಕೆ ಒಳ್ಳೆಯವಾಗಿರುವ ಪಾತ್ರ ಮಾಡಿದ್ದಾರೆ. ಸ್ಪೇಸ್ ಕಮ್ಮಿಇದ್ದರೂ ನಟನೆಯಲ್ಲೇನೂ ಕಮ್ಮಿಯಾಗಿಲ್ಲ. ಪೃಥ್ವಿ ಅಂಬರ್ ನಿಜಕ್ಕೂ ಇಷ್ಟವಾಗುತ್ತಾರೆ. ಹೀರೋ ಆಗಿ ಸಕ್ಸಸ್ ಕಂಡರೂ ಆ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮುಗ್ಧನಾಗಿ ತಮಾಷೆ ಹುಡುಗನಾಗಿ ನಗಿಸಿ, ಒಂದಷ್ಟು ಛೇ ಪಾಪ ಎನಿಸುವಷ್ಟು ನಟಿಸಿದ್ದಾರೆ. ಶಶಿಕುಮಾರ್ ಇಲ್ಲಿ ಒಳ್ಳೆಯ ಪೊಲೀಸ್ ಅಧಿಕಾರಿಯಾಗಿ ಗಮನಸೆಳೆದರೆ, ಶರತ್ ಲೋಹಿತಾಶ್ವ ಕೆಟ್ಟ ರಾಜಕಾರಣಿಯಾಗಿ ಸೈ ಎನಿಸಿದ್ದಾರೆ. ನಾಯಕಿ ಅಂಜಲಿ ಕೂಡ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಪ್ರತಿ ಪಾತ್ರಗಳು ರಿಜಿಸ್ಟರ್ ಆಗುತ್ತವೆ.
ಅನೂಪ್ ಸೀಳಿನ್ ಅವರ ಸಂಗೀತದ ಎರಡು ಹಾಡು ಗುನುಗುವಂತಿವೆ. ಹಿನ್ನೆಲೆ ಸಂಗೀತ ಕೂಡ ಸಿನಿಮಾ ವೇಗ ಹೆಚ್ಚಿಸಿದೆ. ಬೈರಾಗಿಯ ಅಂದಕ್ಕೆ ಕ್ಯಾಮೆರಾ ಕೈಚಳಕ ಕಾರಣವಾಗಿದೆ.