ನಿರ್ದೇಶಕ ಯೋಗರಾಜ್ ಭಟ್, ಗೀತರಚನೆಕಾರರಾಗಿಯೂ ಎಲ್ಲರಿಗೂ ಅಚ್ಚುಮೆಚ್ಚು. ಈ ಹಿಂದೆ ಇವರ ರಚನೆಯ ಎಣ್ಣೆ ಹಾಡುಗಳು ಇಂದಿಗೂ ಗುನಗುವಂತಿದೆ. ಭಟ್ಟರು ಬರೆದಿರುವ ಎಣ್ಣೆ ಹಾಡುಗಳನ್ನು ಹೆಚ್ಚಾಗಿ ಹಾಡಿರುವವರು ವಿಜಯ್ ಪ್ರಕಾಶ್ ಹಾಗೂ ಸಂಗೀತ ನೀಡಿರುವವರು ಅರ್ಜುನ್ ಜನ್ಯ. ಈ ಮೂವರ ಕಾಂಬಿನೇಶನ್ ನಲ್ಲಿ “ಗಾಳಿಪಟ 2” ಚಿತ್ರದ ಮತ್ತೊಂದು ಎಣ್ಣೆ ಸಾಂಗ್ ಜುಲೈ 14 ರಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ.
ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ಎರಡು ಹಾಡುಗಳು ಈಗಾಗಲೇ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಮುಂದೆ ಬಿಡುಗಡೆಯಾಗಲಿರುವ ಹಾಡಿನ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿದೆ.
ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು “ಗಾಳಿಪಟ 2” ಚಿತ್ರವನ್ನು ನಿರ್ಮಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಖ್ಯಾತ ನಟ ಸುದೀಪ್ ಅವರನ್ನು ಮನಬಂದಂತೆ ನಿಂದಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಅಹೋರಾತ್ರ ಹಾಗು ಚರಣ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಪತ್ರದಲ್ಲಿ ಭಾ.ಮ.ಹರೀಶ್ ಅವರು, ಭಾರತೀಯ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಎಂದೇ ಪ್ರಖ್ಯಾತ ರಾಗಿರುವ ಸುದೀಪ್ ಅವರ ವಿರುದ್ಧ ಅಹೋರಾತ್ರ ಮತ್ತು ಚರಣ್ ಎಂಬುವವರು, ವಿನಾಕಾರಣ
ಸಾಮಾಜಿಕ ತಾಣಗಳಲ್ಲಿ ಅವಾಚ್ಯವಾಗಿ, ಅವಹೇಳನಕಾರಿಯಾಗಿ ಪದಬಳಕೆ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹಾಗು ಸುದೀಪ್ ಅವರ ಘನತೆ, ಗೌರವಕ್ಕೆ ಚ್ಯುತಿ ತರುವಂತಹ ಹೇಳಿಕೆ ನೀಡಿರುವುದು ಬೇಸರದ ಸಂಗತಿಯಾಗಿದೆ.
ಇಂತಹ ಹೇಳಿಕೆಗಳಿಂದ ಕನ್ನಡ ಚಿತ್ರರಂಗ ಹಾಗು ಕಲಾವಿದರ ಬಗ್ಗೆ ಸಾರ್ವಜನಿಕರಲ್ಲಿ ಇಲ್ಲ ಸಲ್ಲದ ಗೊಂದಲಕ್ಕೆಎಡೆಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ತಾವು ದಯಮಾಡಿ ಅಹೋರಾತ್ರ ಮತ್ತು ಚರಣ್ ವಿರುದ್ದ ಕಾನೂನು ಕ್ರಮ ಜರುಗಿಸಬೇಕು.
ಹಾಗು ಚಿತ್ರರಂಗ, ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಸಹಕರಿಸಬೇಕೇಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.
ಶ್ರೇಯಸ್ ಚಿಂಗಾ ನಾಯಕನಾಗಿ ನಟಿಸಿ, ನಿರ್ದೇಶನವನ್ನು ಮಾಡಿರುವ “ಡೇವಿಡ್” ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ವಾಣಿಜ್ಯೋದ್ಯಮಿ ಹಾಗೂ ಲೇಖಕರು ಆಗಿರುವ ಧನರಾಜ್ ಬಾಬು ಅವರು ಹಾಡು ಹಾಗೂ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.
ALL OK ಸಂಗೀತ ನೀಡಿರುವ ಈ ಹಾಡನ್ನು ಸಂಚಿತ್ ಹೆಗಡೆ ಹಾಡಿದ್ದಾರೆ. ರೋಹನ್ ಬರೆದಿದ್ದಾರೆ.
“ಡೇವಿಡ್” ಒಂದು ವಿಭಿನ್ನ ಪ್ರಯತ್ನ. ನಾನು ಹಾಗೂ ಭಾರ್ಗವ್ ಯೋಗಾಂಬರ್ ಜಂಟಿಯಾಗಿ ನಿರ್ದೇಶಿಸಿದ್ದೇವೆ. ನಾನು ನಾಯಕನಾಗೂ ನಟಿಸಿದ್ದೇನೆ. ಸಾರಾ ಹರೀಶ್ ಈ ಚಿತ್ರದ ನಾಯಕಿ. ಅವಿನಾಶ್, ಪ್ರತಾಪ್ ನಾರಾಯಣ್, ರಾಕೇಶ್ ಅಡಿಗ, ಕಾವ್ಯ ಶಾ, ಬುಲೆಟ್ ಪ್ರಕಾಶ್, ಎಸ್ ಐ.ಡಿ ಮುಂತಾದವರು ಈ ಚಿತ್ರದ ತಾರಬಳಗದಲ್ಲಿದ್ದಾರೆ.
ಈ ಚಿತ್ರ 4 ಕಥೆಗಳ ಸುತ್ತ ಸುತ್ತುತ್ತದೆ ನಾಯಕನು ತನ್ನ ಸಾಮರ್ಥ್ಯಕ್ಕೆ ಮೀರಿದ ಶಕ್ತಿಗಳ ವಿರುದ್ಧ ಬಲವಂತವಾಗಿ ತೊಡಗಿಸಿಕೊಳ್ಳುತ್ತಾನೆ. ಇದೇ ಚಿತ್ರದ ಕಥಾಹಂದರ. ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಆಗಸ್ಟ್ ನಲ್ಲಿ ನಮ್ಮ ಚಿತ್ರವನ್ನು ತೆರೆಗೆ ತರುತ್ತೇವೆ. ನಮ್ಮ ಚಿತ್ರದ ಮತ್ತೊಂದು ವಿಶೇಷವೆಂದರೆ ಅಂತರರಾಷ್ಟ್ರೀಯ ವಿತರಕರನ್ನು ಹೊಂದಿರುವ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನಗೊಂಡಿದೆ. ಕೇನ್ಸ್ ನಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ ಇದಾಗಿದೆ . ಸಾಕಷ್ಟು ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಧನರಾಜ್ ಬಾಬು ಅವರು ಈ ಚಿತ್ರವನ್ನು ಅರ್ಪಿಸುವ ಮೂಲಕ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ ಎಂದು ನಾಯಕ ಹಾಗೂ ನಿರ್ದೇಶಕ ಶ್ರೇಯಸ್ ಚಿಂಗಾ “ಡೇವಿಡ್” ಚಿತ್ರದ ಬಗ್ಗೆ ವಿವರಣೆ ನೀಡಿದರು.
ಅರ್ಜುನ್ ನಿಟ್ಟೂರ್ ಅವರು ಮುಖ್ಯ ನ್ಯಾಯಾಧೀಶರೂ ರಾಜ್ಯ ಪಾಲರೂ ಆಗಿದ್ದ ಜಸ್ಟಿಸ್ ನಿಟ್ಟೂರು ಶ್ರೀನಿವಾಸ ರಾವ್ ಅವರ ಮೊಮ್ಮಗ. ನಮ್ಮ ದೇಶದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಪ್ರಚಾರ ಮಾಡುವ ಕೆಲವೇ ಸಂಸ್ಥೆಗಳಲ್ಲಿ ಅರ್ಜುನ್ ನಿಟ್ಟೂರ್ ಅವರ ಬಸ್ಲ್ಪೋಡ್ ಕಂಪೆನಿಯು ಒಂದು. ಅರ್ಜುನ್ ನಿಟ್ಟೂರ್ ಅವರು ಫಿಲ್ಮ್ ಟೆಕ್ನಾಲಜಿ ಆಂತ್ರಪ್ರನರ್ ಆಗಿ ಇದುವರೆಗೂ ಬೇರೆ ಬೇರೆ ಭಾಷೆಗಳ ಹಲವಾರು ಚಿತ್ರಗಳನ್ನು ನೂತನ ಟೆಕ್ನಾಲಜಿ ಉಪಯೋಗಿಸಿಕೊಂಡು ಪ್ರಚಾರ ಮಾಡಿದ್ದಾರೆ .ಡೇವಿಡ್ ಸಿನಿಮಾ ಟ್ರೇಲರ್ ಅರ್ಜುನ್ ನಿಟ್ಟೂರ್ ಅವರ ನೇತೃತ್ವದಲ್ಲಿ ತಯಾರು ಮಾಡಲಾಗಿದೆ.ಅರ್ಜುನ್ ತಮ್ಮ ಸಂಸ್ಥೆಯ ಮೂಲಕ ಈ ಚಿತ್ರವನ್ನು ದೇಶ, ವಿದೇಶಗಳಿಗೆ ಪ್ರಮೋಟ್ ಮಾಡಲಿದ್ದಾರೆ.
“ಡೇವಿಡ್” ಚಿತ್ರದ ಟ್ರೇಲರ್ ಗೆ ಇಸ್ರೇಲ್ ನ ಖ್ಯಾತ ಸಂಗೀತ ನಿರ್ದೇಶಕ ಸಂಗೀತ ನೀಡಿರುವುದು ಹಾಗೂ ಚೆನ್ನೈ ನಲ್ಲಿ ಸೌಂಡಿಂಗ್ ಮಾಡಿಸಲಾಗಿದೆ ಎಂದು ಅರ್ಜುನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಧನರಾಜ್ ಬಾಬು ಅವರ ನಿರ್ಮಾಣದಲ್ಲಿ ಶ್ರೇಯಸ್ಸ್ ಚಿಂಗಾ ನಾಯಕರಾಗಿ ನಟಿಸುತ್ತಿರುವ “ಪ್ರೊಡಕ್ಷನ್ ನಂ 2” ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಯಿತು.
ಶಶಿಕುಮಾರ್ ಪುತ್ರ ಅಕ್ಷಿತ್ ಅಭಿನಯದ ಓ ಮೈ ಲವ್ ತೆರೆಗೆ ಬರಲು ರೆಡಿಯಾಗಿದೆ. ನಿರ್ದೇಶಕ ಸ್ಮೈಲ್ ಶ್ರೀನು ಅವರಿಗೆ ಸಿನಿಮಾ ಮೇಲೆ ಸಾಕಷ್ಟು ಭರವಸೆ ಇದೆ. ಅದಕ್ಕೆ ಕಾರಣ, ಸಿನಿಮಾ ಎಲ್ಲೆಡೆಯಿಂದ ಜೋರು ಸದ್ದು ಮಾಡಿರೋದು. ತಮ್ಮ ಸಿನಿಮಾ ಕುರಿತು ನಿರ್ದೇಶಕರು ಹೇಳೋದಿಷ್ಟು…
ಒಳ್ಳೆ ಪ್ರಚಾರದಿಂದ ಚಿತ್ರಕ್ಕೆ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ. ಕುಟುಂಬ ಸಮೇತ ನೋಡಬಹುದಾದ ಕಮರ್ಷಿಯಲ್ ಸಿನಿಮಾವಾಗಿದ್ದು, ಹಾಡುಗಳ ಪೈಕಿ ಎರಡು ಗೀತೆಗಳನ್ನು ಹೊರಬಿಡಲಾಗಿದೆ. ಹಾಡಿಗೆ ಮೆಚ್ಚುಗೆ ಸಿಕ್ಕಿದೆ. ಸಾಹಸ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿವೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಇದೇ 15ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ ಎಂದರು ಅವರು.
ವೈಯಕ್ತಿಕವಾಗಿ ನನಗೆ ಇಷ್ಟವಾದ ಸಿನಿಮಾ ಇದಾಗಿದೆ. ಎಲ್ಲೇ ಹೋದರೂ ಜನ ಸೇರುತ್ತಿದ್ದರು. ಶಶಿಕುಮಾರ್ ಮಗನೆಂದು ಗುರುತು ಹಿಡಿಯುತ್ತಿದ್ದಾರೆ. ಎಸ್.ನಾರಾಯಣ್ ಸರ್ ಅವರಿಂದ ಚಿತ್ರೀಕರಣ ಸಂದರ್ಭದಲ್ಲಿ ಬಹಳಷ್ಟು ಕಲಿತುಕೊಂಡೆ. ಗೆಳಯನ ಪಾತ್ರ ಮಾಡಿರುವ ಪೃಥ್ವಿ ಸೋದರನಂತೆ ಇದ್ದಾರೆ. ಒಟ್ಟಿನಲ್ಲಿ ಓ ಮೈ ಲವ್ ನನಗೆ ವೇದಿಕೆಯಾಗಿದೆ. ಇದೇ ನನಗೆ ಮೊದಲ ಸಿನಿಮಾ ಎಂದು ನಾಯಕ ಅಕ್ಷಿತ್‌ಶಶಿಕುಮಾರ್ ಹೇಳಿದರು.
ಎರಡನೇ ಸಿನಿಮಾದಲ್ಲಿ ಒಳ್ಳೆ ಪಾತ್ರ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಪ್ರಚಾರದ ಸಲವಾಗಿ ಕಾಲೇಜುಗಳಿಗೆ ಭೇಟಿ ನೀಡಿದಾಗ ಒಳ್ಳೆ ಸ್ಪಂದನೆ ಸಿಗುತ್ತಿತ್ತು. ಚಿತ್ರದಲ್ಲಿ ಕಾಮಿಡಿ, ಲವ್, ಫೈಟ್, ಫ್ರೆಂಡ್‌ಶಿಪ್ ಎಲ್ಲವು ಇದೆ. ನಿರ್ದೇಶಕರು ಚೆನ್ನಾಗಿ ಹೇಳಿ ಕೊಟ್ಟಿದ್ದಾರೆ. ಮತ್ತೆ ಸಕ್ಸಸ್ ಮೀಟ್‌ದಲ್ಲಿ ಭೇಟಿಯಾಗೋಣ ಅಂತ ನಾಯಕಿ ಕೀರ್ತಿಕಲ್ಕರೆ ಸಂತಸ ಹಂಚಿಕೊಂಡರು.
ಪ್ರಚಾರವನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದಾರೆ. ಒಳ್ಳೆ ಅಡುಗೆ ಮಾಡಿದರೆ ಸಾಲದು. ಅದಕ್ಕೆ ತಕ್ಕಂತೆ ಉತ್ತಮ ಸಲಕರಣೆಗಳು ಸಿಕ್ಕಿದೆ. ನಿರ್ದೇಶಕರು ಅಡುಗೆ ಭಟ್ಟರಾದರೆ, ನಿರ್ಮಾಪಕರು ಬೇಕಾದ ಸಲಕರಣೆಗಳನ್ನು ನೀಡಿರುವುದಕ್ಕೆ ಚಿತ್ರವು ಅದ್ಬುತವಾಗಿದೆ. ಇಂತಹ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬೇಕಾಗಿದೆ. ಸಿನಿಮಾ ನಿರ್ಮಾಣ ಎಂಬುದು ಕಷ್ಟ. ಅದೇ ರೀತಿ ಬಿಡುಗಡೆ ಮಾಡುವುದು ಸವಾಲಾಗಿದೆ. ಪ್ರಸಕ್ತ ಬಿಡುಗಡೆ ಶೈಲಿ ನೋಡಿದರೆ ಕಷ್ಟವಾಗುತ್ತದೆ. ವಾರಕ್ಕೆ 8 ಚಿತ್ರಗಳು ಬರುತ್ತಿವೆ. ಸಿನಿಮಾ ನಿರ್ಮಾಣ ಕಡಿಮೆ ಆಗಬೇಕು. ಚಿತ್ರಗಳು ಹೆಚ್ಚು ಬರುತ್ತಿದೆ. ಆದರೆ ಗುಣಮಟ್ಟ ಕಡಿಮೆ ಆಗುತ್ತಿದೆ. ನನ್ನ ಪಾತ್ರದಲ್ಲಿ ಗಂಭೀರತೆ ಇದೆ. ಶಶಿಕುಮಾರ್ ಮಗನೆಂದು ಅಹಂ ತೋರಿಸದೆ ಶ್ರದ್ದೆ ಭಕ್ತಿ ಇದೆ. ಅದನ್ನು ಉಳಿಸಿಕೊಂಡು ಹೋದರೆ, ಮುಂದೆ ಉತ್ತಮ ಕಲಾವಿದ ಆಗುತ್ತಿಯಾ. ಏನು ಗೊತ್ತಿಲ್ಲದೆ ಇರೋರು ಚೆನ್ನಾಗಿ ಬೆಳೆಯುತ್ತಾರೆ. ಎಲ್ಲಾ ಗೊತ್ತಿದೆ ಎನ್ನುವವರು ಒಂದು ಹೆಜ್ಜೆನೂ ಮುಂದಕ್ಕೆ ಹೋಗಲಿಕ್ಕೆ ಸಾಧ್ಯವಿಲ್ಲ. ಸೆಟ್‌ನಲ್ಲಿ ನಿರ್ದೇಶಕರು ಗೊಂದಲ ಪಡದೆ ಚೆನ್ನಾಗಿ ಶಾಟ್‌ಗಳನ್ನು ತೆಗೆಸುತ್ತಿದ್ದರು. ಇವರಿಗೂ ಉಜ್ವಲ ಭವಿಷ್ಯವಿದೆ. ಮಕ್ಕಳು ದಾರಿ ತಪ್ಪದೆ ಇರಲಿ ಎಂದು ಹೇಳುವ ಸಿನಿಮಾ ಇದಾಗಿದೆ ಎಂದು ದೀರ್ಘಕಾಲದ ಮಾತಿಗೆ ಎಸ್.ನಾರಾಯಣ್ ವಿರಾಮ ಹಾಕಿದರು.
ಚಿಕ್ಕಂದಿನಿಂದಲೂ ನಿರ್ಮಾಣ ಮಾಡುವ ಆಸೆ ಇತ್ತು. ಅದು ಈಗ ಈಡೇರಿದೆ. ಎಲ್ಲಾ ವ್ಯವಹಾರದಲ್ಲೂ ಸಕ್ಸಸ್ ಕಂಡಿದ್ದೇನೆ. ಕೊನೆಯದಾಗಿ ಸಿನಿಮಾರಂಗಕ್ಕೆ ಬಂದಿದ್ದೇನೆ. ಅಕ್ಷಿತ್‌ಗೆ ಅಪ್ಪನಂತೆ ಹೆಸರು ಬರುತ್ತದೆ. ಒಂದು ಪಾತ್ರಕ್ಕೆ ದೇವ್‌ಗಿಲ್ ಬೇಕು ಎಂದು ಹೇಳಿದ್ದಕ್ಕೆ ಅವರನ್ನೆ ಆಯ್ಕೆ ಮಾಡಲಾಯಿತು ಎನ್ನುತ್ತಾರೆ ಕಥೆ ಬರೆದು ಬಂಡವಾಳ ಹೂಡಿರುವ ಜಿ.ರಾಮಾಂಜಿನಿ. ನಾಯಕಿಯ ತಾಯಿ ಸಂಗೀತಾ, ಖಳನಟನ ತಂಗಿಯಾಗಿರುವ ಯಶಾ, ಗೆಳಯನಾಗಿ ಕಾಣಿಸಿಕೊಂಡಿರುವ ಪೃಥ್ವಿ ಅನುಭವಗಳನ್ನು ಹೇಳಿಕೊಂಡರು.
ಕನ್ನಡ ಸಿನಿಲೋಕದ ಯಂಗ್ ಅಂಡ್ ಎನರ್ಜಿಟಿಕ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಅಚರ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಈ ಚಿತ್ರಗಳ ಪೈಕಿ ಶಿವಣ್ಣ ನಟಿಸಲಿರುವ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ. ಶಿವಣ್ಣನ 60ನೇ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಇಂಟ್ರೆಸ್ಟಿಂಗ್ ಆಗಿರುವ ಪೋಸ್ಟರ್ ರಿಲೀಸ್ ಮಾಡಿ ಶಿವಣ್ಣನ ಜನುಮದಿನಕ್ಕೆ ಶುಭಾಶಯ ಕೋರಿದೆ.
ಆಗಸ್ಟ್ ನಲ್ಲಿ ಟೈಟಲ್ ರಿವೀಲ್ ಮಹಾಭಾರತದ ವೀರರಲ್ಲಿ ಒಬ್ಬರಾದ ಅಶ್ವತ್ಥಾಮ ಸಾಹಸಗಾಥೆಯನ್ನು ಆಧಾರಿಸಿ ತಯಾರಾಗಲಿರುವ ಈ ಸಿನಿಮಾದ ಟೈಟಲ್ ನ್ನು ಆಗಸ್ಟ್ ತಿಂಗಳ ಮೊದಲ ವಾರ ರಿವೀಲ್ ಆಗಲಿದೆ. ಟೈಟಲ್ ಬಳಿಕ ತಾಂತ್ರಿಕ ಬಳಗದ ಬಗ್ಗೆ ಮಾಹಿತಿ ಕೊಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ. ಇದೊಂದು ಪಕ್ಕಾ ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಅಮರತ್ವ ಪಡೆದಿರುವ ಅಶ್ವತ್ಥಾಮನ ಸುತ್ತಾ ಸಾಗುವ ಇಡೀ ಕಥೆಯಲ್ಲಿ ಶಿವಣ್ಣ ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಸಚಿನ್ ಈ ಸಿನಿಮಾಗೆ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿ ಕೂಡ ಹೊತ್ತಿದ್ದು, ತಮ್ಮದೇ ಹೋಮ್ ಬ್ಯಾನರ್ ಜೊತೆಗೆ ಕಾರ್ಪೊರೇಟ್ ಕಂಪನಿಯೊಂದರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಕನ್ನಡದ ಮಟ್ಟಿಗೆ ಸೂಪರ್ ಹೀರೋ ಕನ್ಸೆಪ್ಟ್ ನ ಮೊದಲ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ರೀತಿಯಲ್ಲಿ ಕಂಗೊಳಿಸಲಿದ್ದಾರೆ. ಜೊತೆಗೆ ವಿಎಫ್‌ಎಕ್ಸ್‌ಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆಯಂತೆ.
ನಾವು ಇಂದು ಸುಲಲಿತವಾಗಿ ಜೀವನ ನಡೆಸುತ್ತಿರುವುದಕ್ಕೆ ಮುಖ್ಯ ಕಾರಣ ಆರಕ್ಷಕರು. ಅಂತಹ ಆರಕ್ಷಕರಿಗೂ ಒಂದು ಜೀವನವಿದೆ. ಅವರಿಗೂ ಹೆಂಡತಿ, ಮಕ್ಕಳು, ತಂದೆ, ತಾಯಿ ಇದ್ದಾರೆ. ಅವರಿಗಿರುವ ಸಾಕಷ್ಟು ಕಷ್ಟಗಳ ನಡುವೆ, ಕರ್ತವ್ಯ ನಿಷ್ಠೆಯನ್ನು ಹೇಗೆ ಮಾಡುತ್ತಾರೆ ಎಂಬ ವಿಚಾರವನ್ನು “ಸೆಲ್ಯೂಟ್” ಎಂಬ ಇಪ್ಪತ್ತೇಳು ನಿಮಿಷಗಳ ಕಿರುಚಿತ್ರದ ಮೂಲಕ ಮನಮುಟ್ಟುವಂತೆ ನಿರ್ದೇಶಿಸಿದ್ದಾರೆ ನಿರ್ದೇಶಕ ತ್ಯಾಗರಾಜ್.
ಆರಕ್ಷಕರ ಬಗ್ಗೆ ಇಪ್ಪತ್ತೇಳು ನಿಮಿಷಗಳಲ್ಲಿ ಸುಂದರವಾಗಿ ಕಿರುಚಿತ್ರದ ಮೂಲಕ ತೋರಿಸಿರುವ ನಿರ್ದೇಶಕರಿಗೆ ಹಾಗೂ ಇಂತಹ ಕಿರುಚಿತ್ರವನ್ನು ನಿರ್ಮಿಸಿರುವ ದೀಪಕ್ ಗೌಡ ಅವರಿಗೆ ವಂದನೆ. ಕೊರೋನ ಕಾಲದಲ್ಲಿ ಪೊಲೀಸರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಾನು ಆ ಸಮಯದಲ್ಲಿ ಕಾರ್ಯ ನಿರ್ವಹಿಸಿದ್ದೆ. ಅದೇ ಸಮಯದಲ್ಲೇ ನಿವೃತ್ತನಾದೆ. ಒಂದು ಬೇಜಾರಿನ ವಿಚಾರವೆಂದರೆ, ನಾನು ನಿವೃತ್ತನಾಗುವ ದಿವಸ ನಮ್ಮ ಠಾಣೆಯಲ್ಲಿ ನಾನು ಮಾತ್ರ ಇದ್ದೆ. ಬೇರೆ ಯಾರು ಇರಲಿಲ್ಲ. ಈ ರೀತಿ ನಿವೃತ್ತಿಯಾಗಿರುವುದು ನಾನೊಬ್ಬನೆ ಅನಿಸುತ್ತದೆ ಎಂದರು ನಿವೃತ್ತ ಎಸ್.ಪಿ ಉಮೇಶ್.
ಈ ಕಿರುಚಿತ್ರ ನಿರ್ಮಿಸಿರುವ ದೀಪಕ್ ಗೌಡ ಅವರು ನನ್ನ ಅಣ್ಣ. ಅವರು ನನಗೆ ಮಾಡಿರುವ ಸಹಾಯ ಅಪಾರ. ಇನ್ನೂ “ಸೆಲ್ಯೂಟ್” ಕಿರುಚಿತ್ರವನ್ನು ತ್ಯಾಗರಾಜ್ ಅದ್ಭುತವಾಗಿ ನಿರ್ದೇಶಿಸಿದ್ದಾರೆ. ನಾನು ಕೂಡ ಎರಡು ವರ್ಷಗಳ ಹಿಂದೆ ಸಮಸ್ಯೆ ಎದುರಿಸಿದೆ. ಅ ಸಮಯದಲ್ಲಿ ಆರಕ್ಷಕರು ಮಾಡಿದ್ದ ಸಹಾಯ ಮರೆಯುವ ಹಾಗಿಲ್ಲ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ತಿಳಿಸಿದರು.
ನನಗೆ ಸ್ನೇಹಿತ ಬಾಲಾಜಿ ಯಾದವ್ ಮೂಲಕ ನಿರ್ಮಾಪಕ ದೀಪಕ್ ಗೌಡ ಪರಿಚಯವಾದರು. ಅವರಿಗೆ ಈ ಕಥೆ ಹೇಳಿದೆ. ಇಷ್ಟವಾಯಿತು .ನಿರ್ಮಾಣ ಮಾಡಿದರು. ಅಶ್ವಿನ್ ಹಾಸನ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ಸಂಗೀತ ನಿರ್ದೇಶಕ ಪ್ರದ್ಯೋತ್ತನ್ ಆದಿಯಾಗಿ ಎಲ್ಲಾ ತಂತ್ರಜ್ಞರ ಕಾರ್ಯ ವೈಖರಿ ಚೆನ್ನಾಗಿದೆ ಎಂದರು ನಿರ್ದೇಶಕ ತ್ಯಾಗರಾಜನ್. ಈ ಹಿಂದೆ ಎರಡು ಕಿರುಚಿತ್ರಗಳನ್ನು ತ್ಯಾಗರಾಜನ್ ನಿರ್ದೇಶಿಸಿದ್ದಾರೆ. ಕೆಲವು ಪ್ರಶಸ್ತಿಗಳು ಸಹ ಬಂದಿದೆ.
ನಾನು ಉಮಾಪತಿ ಅವರ ನಿರ್ಮಾಣದ “ಹೆಬ್ಬುಲಿ” ಚಿತ್ರದಲ್ಲಿ ಅಭಿನಯಿಸಿದ್ದೆ. ಅಲ್ಲಿ ಅವರು ಕಲಾವಿದರನ್ನು ಗೌರವಿಸುತ್ತಿದ್ದ ರೀತಿ ನೋಡಿ ಸಂತೋಷವಾಗಿತ್ತು. ಈಗ ಅವರ ಸಹೋದರ ದೀಪಕ್ ಗೌಡ ಅವರು ನಿರ್ಮಿಸಿರುವ “ಸೆಲ್ಯೂಟ್” ಕಿರುಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕರು ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು ನಟ ಅಶ್ವಿನ್ ಹಾಸನ್.
ನಾನು “ಸೆಲ್ಯೂಟ್” ಕಿರುಚಿತ್ರವನ್ನು ನನ್ನ ತಂದೆ ಗೋವಿಂದರಾಜು ಅವರಿಗೆ ಅರ್ಪಿಸುತ್ತಿದ್ದೇನೆ. ಅವರು ಸಹ ಪೊಲೀಸ್ ಅಧಿಕಾರಿಯಾಗಿದ್ದರು. ಈ ಕಿರುಚಿತ್ರವನ್ನು ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ. ನೋಡಿ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ದೀಪಕ್ ಗೌಡ.
ಸಂಗೀತ ನಿರ್ದೇಶಕ ಪ್ರದ್ಯೋತ್ತನ್ ಸಹ “ಸೆಲ್ಯೂಟ್” ಬಗ್ಗೆ ಮಾತನಾಡಿದರು.
ಅಜಿತ್ ಎ.ಯು ಛಾಯಾಗ್ರಹಣ, ರವಿ ಸಹ ನಿರ್ದೇಶನ ಹಾಗೂ ಕಿರಣ್ ಅವರ ಸಂಕಲನವಿರುವ ಈ ಕಿರುಚಿತ್ರದಲ್ಲಿ ಅಶ್ವಿನ್ ಹಾಸನ್, ಶ್ರೀನಾಥ್ ಚಿತ್ತಾರ, ನವೀನ್ ಸಾಣೇಹಳ್ಳಿ, ಲೋಕೇಶ್ ಆಚಾರ್, ವಾಣಿಶ್ರೀ ಕುಲಕರ್ಣಿ ಮುಂತಾದವರು ಅಭಿನಯಿಸಿದ್ದಾರೆ.
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾಗಳು ಅಂದರೆ ವಿಭಿನ್ನವಾಗಿಯೇ ಇರುತ್ತವೆ. ಸದಾ ಡಿಫರೆಂಟ್ ಶೈಲಿಯೇ ಚಿತ್ರ ಮಾಡುವುದರಲ್ಲಿ ಸದಾ ಮುಂದೆ. ಹೊಸತನದ ಹೆಜ್ಜೆಗಳನ್ನು ಇಡುವ ಆರ್ ಜಿವಿ ಈಗ ಸಮರ ಕಲೆಯಾಧಾರಿತ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದು, ಆ ಚಿತ್ರ ಹುಡುಗಿ ಎಂಬ ಶೀರ್ಷಿಕೆಯಡಿ ಕನ್ನಡದಲ್ಲೂ ರಿಲೀಸ್ ಮಾಡಲಾಗ್ತಿದೆ. ಇದೇ 15ಕ್ಕೆ ಚಿತ್ರ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ರಾಮ್ ಗೋಪಾಲ್ ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರ ನಡೆಸಿದರು.
ಮಾಧ್ಯಮಗಳೊಟ್ಟಿಗೆ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇದು ತುಂಬಾ ವಿಶೇಷವಾದ ಸಿನಿಮಾ. ನಾನು ಚಿಕ್ಕವನಿದ್ದಾಗ ಎಂಟರ್ ದಿ ಡ್ರ್ಯಾಗನ್ ಸಿನಿಮಾ ನೋಡಿದ್ದೆ. ಆ ಕಥೆಯ ನಾಯಕ ಬ್ರೂಸ್ಲಿಯಿಂದ ಸ್ಪೂರ್ತಿಯಿಂದ ಈ ಸಿನಿಮಾ ಮಾಡಿದ್ದು, ಮಾರ್ಷಲ್ ಆರ್ಟ್ಸ್ ಗೆ ಸಂಬಂಧಪಟ್ಟ ಸಿನಿಮಾವಾಗಿದೆ.
ಈ ಕಲೆ ಮಾಡುವವರ ಸಂಖ್ಯೆ ತೀರಾ ವಿರಳ. ಅದ್ರಲ್ಲೂ ಹೆಣ್ಣು ಮಕ್ಕಳು ಮಾಡೋದು ಕಡಿಮೆ. ನಾಯಕಿ ಪೂಜಾ ಹನ್ನೆರೆಡು ವರ್ಷದಿಂದ ಸಮರಕಲೆ ಅಭ್ಯಾಸ ಮಾಡ್ತಿದ್ದು, ಹೀಗಾಗಿ ಆಕೆಯನ್ನು ನಾಯಕಿಯನ್ನು ಆಕೆ ಮಾಡಲಾಗಿದೆ. ಟ್ರಯಾಂಗಲ್ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿದೆ ಎಂದು ತಿಳಿಸಿದರು.
ಹುಡುಗಿ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮಾರ್ಷಲ್ ಆರ್ಟ್ಸ್ ಹಿನ್ನೆಲೆಯಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಸಿನಿಮಾದಲ್ಲಿ ಪೂಜಾ ಭಾಲೇಕರ್ ನಾಯಕಿಯಾಗಿ ನಟಿಸಿದ್ದಾರೆ. ಭಾರತ ಹಾಗೂ ಚೀನಾದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
ಈ ಸಿನಿಮಾ ಚೀನಾದಲ್ಲಿ ಬಿಡುಗಡೆಯಾಗುತ್ತಿದೆ. ಆರ್ಟ್ಸಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬೆಳ್ಳಿತೆರೆಗೆ ಜುಲೈ 15ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.
ಅವನ ಹೆಸರು ವೆಂಕಿ ಅಲಿಯಾಸ್ ವೆಂಕಟೇಶ. ವಯಸ್ಸು 28. ಸದಾ ರಾಯಲ್ ಫ್ಯಾಮಿಲಿ ಅನ್ನೋ ಬಿಲ್ಡಪ್. ಲೈಫಲ್ಲಿ ಡಿಸಿಪ್ಲೀನ್ ಇಲ್ಲದ ಹುಡುಗ. ಸದಾ ಲವಲವಿಕೆಯಲ್ಲಿರೋ ಅಂಥಾ ಹುಡುಗ ಇದ್ದಕ್ಕಿದ್ದಂತೆ ದಂಗು ಬಡಿದವನಂತಾಗುತ್ತಾನೆ. ಆಮೇಲೆ ಸಿನಿಮಾ ಕಥೆ ಹೆಂಗೆಲ್ಲಾ ನಗಿಸಿಕೊಂಡು ಹೋಗುತ್ತೆ ಅನ್ನೋದೇ ಮಜವೆನಿಸೋ ಕಥೆ.
ನಿಜ ಹೇಳೋದಾದರೆ, ಇದಕ್ಕೆ ಶುಗರ್ ಲೆಸ್ ಎಂಬ ಹೆಸರು ಬರೀ ಹೆಸರಷ್ಟೆ. ಕಥೆಯಲ್ಲಿ ಎಷ್ಟು ಬೇಕೋ ಅಷ್ಟು ಸಿಹಿ ತುಂಬಿದೆ. ಚಿತ್ರಕಥೆಯೊಳಗೆ ಜೇನು ಕೂಡ ಮಿಕ್ಸ್ ಆಗಿದೆ. ಡ್ರೈ ಫ್ರೂಟ್ಸ್ ಜೊತೆ ಜಾಮೂನು ತಿಂದಷ್ಟೇ ನಿರೂಪಣೆಯ ರುಚಿಯೂ ಇದೆ. ಒಟ್ಟಾರೆ, ಇಡೀ ಸಿನಿಮಾ ನಗುವಿನ ರಸದೌತಣ ಉಣಬಡಿಸುತ್ತಲೇ ನೊಡುಗರನ್ನು ಅತ್ತಿತ್ತ ಅಲ್ಲಾಡದಂತೆ ನೋಡಿಸಿಕೊಂಡು ಹೋಗುತ್ತೆ. ಬದುಕಲ್ಲಿ ಶುಗರ್ ಇದ್ದವರೂ ಈ ಶುಗರ ಲೆಸ್ ಸಿನಿಮಾ ನೋಡಿದರೆ ಮೈಗಂಟಿರುವ ಶುಗರ್ ಮರೆತು ಸಿಹಿ ಬದುಕು ಕಟ್ಟಿಕೊಳ್ಳುವಷ್ಟರ ಮಟ್ಟಿಗೆ ನಿರ್ದೇಶಕ ಶಶಿಧರ್ ಕೆ.ಎಂ. ನಿರೂಪಿಸಿದ್ದಾರೆ.
ಹೊಡಿ, ಬಡಿ, ಕಡಿ ಎಂಬ ಸಿನಿಮಾಗಳ ನಡುವೆ ಮನಸ್ಸಿಗೆ ಖುಷಿ ಕೊಡುವ ಕಂಟೆಂಟ್, ಎರಡು ತಾಸು ಎಲ್ಲವನ್ನು ಮರೆಸಿ ನಗೆಗಡಲಲ್ಲಿ ತೇಲಿಸುತ್ತೆ. ಇಲ್ಲಿ ನಿರ್ದೇಶಕರ ಕಥೆ ಹೈಲೆಟ್. ಆ ಕಥೆಯನ್ನು ನಿರೂಪಿಸಿರುವ ರೀತಿ ಕೂಡ ಇಷ್ಟವಾಗುತ್ತೆ. ಮೊದಲ ಬಾಲ್ ನಲ್ಲೇ ಸಿಕ್ಸ್ ಹೊಡೆದಂತೆ ಚೊಚ್ಚಲ ನಿರ್ದೇಶನದಲ್ಲೇ ಅವರು ಸಾಬೀತುಪಡಿಸಿದ್ದಾರೆ. ಇಂಥದ್ದೊಂದು ಕಥೆಯಲ್ಲೂ ಅಷ್ಟೊಂದು ರಂಗು ತುಂಬಿ ರಂಜಿಸಬಹುದು ಅಂತ ತೋರಿಸಿಕೊಟ್ಟಿದ್ದಾರೆ.
ಒಂದೊಳ್ಳೆಯ ಸಿನಿಮಾದಲ್ಲಿ ಏನೆಲ್ಲಾ ಇರಬೇಕೋ ಆ ಎಲ್ಲಾ ಪಾಕವೂ ಇಲ್ಲುಂಟು. ಹಾಗಾಗಿ ಶುಗರ್ ಲೆಸ್ ಸಖತ್ ಟೇಸ್ಟ್ ಎನಿಸೋ ಕರದಂಟಿನಂತಹ ಸಿನಿಮಾ ಅಂತ ಮುಲಾಜಿಲ್ಲದೆ ಹೇಳಬಹುದು.
ಶುಗರ್ ಕಥೆ ಏನು?
ಟಾಯ್ಲೆಟ್ ಇಲ್ಲದಿರೋ ಮನೆ ಸಿಗುತ್ತೆ, ಆದರೆ ಟ್ಯಾಬ್ಲೆಟ್ ಇಲ್ಲದಿರೋ ಮನೆ ಸಿಗುತ್ತಾ? ಇದು ಕಥೆಯ ಕಾನ್ಸೆಪ್ಟ್. ಇಲ್ಲಿನ ಕಥಾ ನಾಯಕ 28 ವರ್ಷದ ವೆಂಕಟೇಶನಿಗೆ ಶುಗರ್ ಇರೋದು ಗೊತ್ತಾಗುತ್ತೆ. ಲೈಫಲ್ಲಿ ಶಿಸ್ತು ಇಲ್ಲದ ವೆಂಕಿಗೆ ಗುಂಡು ಹಾಕೋದೇ ಜೀವನ. ಅದರಲ್ಲೂ ಅವನ ಕುಚೇಷ್ಟೆಗಳಿಂದಲೇ ಸಿಕ್ಕ ಕೆಲಸಗಳೆಲ್ಲವೂ ಗೋತಾ. ಹೀಗಿರುವಾಗ ಅವನೊಂದು ಸಕ್ಕರೆಯಂತಹ ಹುಡುಗಿಗೆ ಫಿದಾ ಆಗ್ತಾನೆ. ಆಮೇಲೆ ಮದ್ವೆ ಆಗೋಕೂ ತಯಾರಿ ನಡೆಸ್ತಾನೆ. ಮದ್ವೆಗೂ ಮುನ್ನ ಅವನಿಗೆ ಶುಗರ್ ಇರೋದು ಗೊತ್ತಾಗುತ್ತೆ. ಅತ್ತ ದಂಗಾಗುವ ವೆಂಕಿ ಡಲ್ ಆಗ್ತಾನೆ. ಶುಗರ್ ತುಂಬಿಕೊಂಡು ಹೆಂಗೆಲ್ಲಾ ಒದ್ದಾಡ್ತಾನೆ ಅನ್ನೋದೆ ಕಥೆ. ಮೊದಲರ್ಧ ಜಾಲಿ. ದ್ವಿತಿಯಾರ್ಧವೂ ಫುಲ್ ಜಾಲಿ. ಈ ಜಾಲಿ ಮೂಡ್ ನಲ್ಲೇ ಸಾಗುವ ಕಥೆಯಲ್ಲಿ ಆಗಾಗ ಎಮೋಷನ್ಸ್ ಕೂಡ ಇಣುಕಿ ಹಾಕುತ್ತೆ. ಒಂದಷ್ಟು ಭಾವುಕ ಅನಿಸಿದರೂ, ಅದರೊಳಗೂ ನಗುವಿಟ್ಟು ಖುಷಿ ತುಂಬಿಸಿದ್ದಾರೆ ನಿರ್ದೇಶಕರು.
ಈ ವೆಂಕಿ ಜೊತೆ ವಿಭಿನ್ನ ಅಭಿರುಚಿ ಇರೋ ಮೂರು ಕುದುರೆಗಳು ಜತೆಯಾಗುತ್ತವೆ. ಹಾಸ್ಯದ ಮಧ್ಯೆ ಬದುಕಿನ ಪಾಠ ಹೇಳಿಕೊಡುವ ವಯಸ್ಕ ಗೆಳೆಯರ ಮಾತು ಕಥೆ ಮತ್ತು ವ್ಯಥೆ ಸಿನಿಮಾದ ಹೈಲೆಟ್. ಶುಗರ್ ಬಂದ ವೆಂಕಿ ಅದನ್ನು ಹೇಳಿಕೊಂಡರೆ ಏನೆಲ್ಲಾ ಸಮಸ್ಯೆ ಎದುರಾಗಬಹುದು ಅಂತಂದುಕೊಂಡು ಪೇಚೆಗೆ ಸಿಕ್ಕಿ ಒದ್ದಾಡುವ ಸನ್ನಿವೇಶಗಳು ನಗೆಗಡಲಲ್ಲಿ ತೇಲಿಸುತ್ತವೆ.
ಯಾರ ಕೆಲಸ ಹೇಗೆ?
ಒಂದು ಸಿನಿಮಾ ಅಂದರೆ ಬರೀ ಕಥೆಯಲ್ಲ, ಅದಕ್ಕೆ ಸರಿಯಾದ ಸಂಗೀತ, ಸಾಹಿತ್ಯ, ಛಾಯಾಗ್ರಹಣ ಇರಬೇಕು. ಜೊತೆಗೆ ಇಂತಹ ಹಾಸ್ಯಮಯ ಕಥೆಗೆ ಕಚಗುಳಿ ಇಡುವ ಮಾತುಗಳೇ ಜೀವಾಳ. ಅಂಥದ್ದೊಂದು ಒಳ್ಳೆಯ ತಂತ್ರಜ್ಞರ ಸ್ಪರ್ಶ ಇಲ್ಲಿದೆ. ಅನೂಪ್ ಸೀಳಿನ್ ಹಾಡು ಮತ್ತು ಹಿನ್ನೆಲೆ ಸಂಗೀತ ಮೂಲಕ ಇಷ್ಟ ಆಗುತ್ತಾರೆ. ಅಲ್ಲಲ್ಲಿ ಹಿನ್ನೆಲೆ ಸಂಗೀತದ ಒಂದೇ ಒಂದು ಬಿಟ್ ಮಾತ್ರ, ರವಿಚಂದ್ರನ್ ಸಿನಿಮಾವೊಂದರ ಹಾಡಿನ ಟ್ಯೂನ್ ನೆನಪಿಸುತ್ತದೆ. ಉಳಿದಂತೆ ಅನೂಪ್ ಅವರ ಸಂಗೀತ ಕಥೆಗೆ ಪೂರಕ. ಗುರುರಾಜ್ ಕಶ್ಯಪ್ ಅವರ ಮಾತಿಲ್ಲಿ ಜೋರು ಸದ್ದು ಮಾಡಿದೆ. ಪ್ರತಿ ಪಾತ್ರಗಳ ಮಾತಲ್ಲೂ ನಗೆಬುಗ್ಗೆ ಇದೆ ಅಂದರೆ ಅದಕ್ಕೆ ಅವರು ಪೋಣಿಸಿರುವ ಮಾತೇ ಕಾರಣ. ಇನ್ನು, ಸಿನಿಮಾ ಲವಿತ್ ಕ್ಯಾಮೆರಾ ಕೈಚಳಕ ಸಿನಿಮಾ ಜೇನು ತುಪ್ಪವಾಗಲು ಕಾರಣ. ಕಥೆಯ ವೇಗಕ್ಕೆ ರವಿಚಂದ್ರನ್ ಕತ್ತರಿ ಕೆಲಸ ಸಾಥ್ ನೀಡಿದೆ.
ತೆರೆ ಮೇಲಿನ ಹೈಲೆಟ್
ಪೃಥ್ವಿ ಅಂಬರ್ ಸಿನಿಮಾದ ಕೇಂದ್ರ ಬಿಂದು. ನಗಿಸುವ ಮೂಲಕ ಮತ್ತಷ್ಟು ಇಷ್ಟವಾಗುತ್ತಾರೆ. ಅವರ ನಟನೆ, ಡ್ಯಾನ್ಸ್ ಮತ್ತೊಂದು ಹೈಲೆಟ್. ಪ್ರಿಯಾಂಕ ತಿಮ್ಮೇಶ್ ಕೊಟ್ಟ ಪಾತ್ರಕ್ಕೆ ಮೋಸ ಮಾಡಿಲ್ಲ. ಹಿರಿಯ ಕಲಾವಿದ ದತ್ತಣ್ಣ ಇಲ್ಲಿ ಕಾಡುತ್ತಾರೆ. ಡಾಕ್ಟರ್ ಆಗಿ ಎಸ್. ನಾರಾಯಣ್ ಇದ್ದಷ್ಟು ಸಮಯ ನಗಿಸುತ್ತಾರೆ. ಧರ್ಮಣ್ಣ, ನವೀನ್ ಡಿ.ಪಡೀಲ್, ರಘು ರಾಮನಕೊಪ್ಪ, ಪದ್ಮಜಾರಾವ್, ಗಿರೀಶ್ ಜತ್ತಿ ಇತರರು ಸಿನಿಮಾ ವೇಗಕ್ಕೆ ಹೆಗಲು ಕೊಟ್ಟಿದ್ದಾರೆ.
ಗೋಲ್ಡನ್ ಹಾರ್ಟ್ಸ್ ಸಂಸ್ಥೆ ಯಲ್ಲಿ ಕೆ.ಕೆ. ಅಶ್ರಫ್ ನಿರ್ಮಿಸಿ, ಹೆಚ್.ಬಿ. ಸಿದ್ದು ನಿರ್ದೇಶನದ ನಮ್ಮ ಹುಡುಗರು ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿದ್ದಾರೆ. ಇದೇ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ನಮ್ಮ ಹುಡುಗರು ಚಿತ್ರದ ಪ್ರೀ ರಿಲೀಸ್ ಈವೆಂಟ್ ಅದ್ದೂರಿಯಾಗಿ ನೆರವೇರಿತು. ರಾಘವೇಂದ್ರ ರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ವಸಿಷ್ಠ ಸಿಂಹ, ಧನ್ಯ ರಾಮ್ ಕುಮಾರ್, ಲಹರಿ ವೇಲು, ಕಾರುಣ್ಯ ರಾಮ್, ಸಂಯುಕ್ತ ಹೆಗಡೆ ಮುಂತಾದವರು ಪಾಲ್ಗೊಂಡಿದ್ದರು.
ಈ ಸಮಾರಂಭಕ್ಕೆ ಕಿಚ್ಚ ಸುದೀಪ್ ಅವರು ಆಗಮಿಸಬೇಕಿತ್ತು. ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗಿರಲಿಲ್ಲ. ಸುದೀಪ್ ವಿಡಿಯೋವೊಂದನ್ನು ಕಳುಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ʻʻನಮ್ಮ ಹುಡುಗರು ಚಿತ್ರದ ಕಾರ್ಯಕ್ರಮಕ್ಕೆ ನೇರವಾಗಿ ಬರಬೇಕೆನ್ನುವ ಬಯಕೆ ಇತ್ತು. ಕಾಲಿಗೆ ಪೆಟ್ಟು ಬಿದ್ದಿರುವುದರಿಂದ ಅದು ಸಾಧ್ಯವಾಗಿಲ್ಲ. ಉಪೇಂದ್ರ ಅವರ ಕುಟುಂಬದಿಂದ ಬರುತ್ತಿರುವ ಪ್ರತಿಭೆ ನಿರಂಜನ್ ಸುಧೀಂದ್ರ. ಖಂಡಿತಾ ಕರ್ನಾಟಕದ ಜನ ಇವರನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ನನಗಿದೆ. ನಿರಂಜನ್ ನಟನೆಯ ಪ್ರೋಮೋ, ಹಾಡುಗಳನ್ನು ನೋಡಿದ್ದೀನಿ. ಕನ್ನಡ ಚಿತ್ರರಂಗದಲ್ಲಿ ನಿರಂಜನ್ ದೊಡ್ಡ ಮಟ್ಟದಲ್ಲಿ ನಿಲ್ಲುತ್ತಾರೆ. ಇವರಿಗೆ ನನ್ನ ಸಹಕಾರ ಯಾವತ್ತಿಗೂ ಇದ್ದೇ ಇರುತ್ತದೆʼʼ ಎಂದರು ಕಿಚ್ಚ.
ಈ ಕಾರ್ಯಕ್ರಮ, ಈ ಹಾಡು, ಈ ವೇದಿಕೆ ನಮ್ಮ ಕುಟುಂಬಕ್ಕೆ ತುಂಬಾ ಕನೆಕ್ಟ್ ಆಗಿದೆ. ಈ ಚಿತ್ರದ ಹೆಸರು ನಮ್ಮ ಹುಡುಗರು. ನಾವು ಹುಡುಗರು ಅಂತಾ ಹಿಂದೆ ಚಿತ್ರ ಮಾಡಿದ್ವಿ. ಉಪೇಂದ್ರ ನಮ್ಮ ಸಂಸ್ಥೆಗೆ ಓಂ, ಸ್ವಸ್ತಿಕ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇಂದಿಗೂ ಉಸಿರಾಡುತ್ತಿರುವ ಜೀವಂತ ಸಿನಿಮಾಗಳು ಅವು. ʻನಮ್ಮ ಹುಡುಗರುʼ ಚಿತ್ರಕ್ಕಾಗಿ ನನ್ನ ತಮ್ಮ ಹಾಡಿರುವ ಹಾಡನ್ನು ನಾನು ಈಗ ಬಿಡುಗಡೆ ಮಾಡಿದ್ದೀನಿ. ಅವನು ಮಾಡಿಟ್ಟು ಹೋಗಿರುವ ಕೆಲಸ ಇನ್ನೂ ಉಳಿದಿದೆ ಅನ್ನೋದು ನನಗೆ ಹೆಮ್ಮೆ ಅನ್ನಿಸುತ್ತದೆ. ನಿರಂಜನ್ ಅವರನ್ನು ನೋಡಿದಾಗ ನನಗೆ ಖುಷಿ ಆಗುತ್ತದೆ. ಪ್ಯಾನ್ ಇಂಡಿಯಾ ಪ್ರಾಡಕ್ಟ್ ಇವರು. ಇವರಿಗಾಗಿ ಉಪೇಂದ್ರ ಅವರು ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕು. ಆ ಮೂಲಕ ನಿರಂಜನ್ ಇಡೀ ಭಾರತದಲ್ಲಿ ಹೆಸರು ಮಾಡಬೇಕುʼʼ ಎಂದು ಆಶಯ ವ್ಯಕ್ತಪಡಿಸಿ, ಹಾರೈಸಿದರು.
ಉಪೇಂದ್ರ ಅವರು ಮಾತನಾಡಿ ನಾನು ಈಗಾಗಲೇ ಸಿನಿಮಾ ನೋಡಿದ್ದೀನಿ. ನಿರ್ದೇಶಕ ಸಿದ್ದು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಯಾರೂ ಊಹೆ ಮಾಡಲಾರದ ಟ್ವಿಸ್ಟು, ಟರ್ನುಗಳನ್ನು ಇಟ್ಟಿದ್ದಾರೆ. ಇದು ಸಿದ್ದು ಅವರ ಮೊದಲ ಸಿನಿಮಾ ಅಂತ ಅನ್ನಿಸೋದೇ ಇಲ್ಲ. ರಾಘಣ್ಣ ತುಂಬಾ ಅರ್ಥಪೂರ್ಣವಾಗಿ ಮಾತಾಡಿದರು. ಸಿನಿಮಾ ಬರೀ ನಮ್ಮ ಜನರೇಷನ್ನಿಗೆ ಮುಗಿದು ಹೋಗಬಾರದು ಎನ್ನುವ ಅವರ ಅಭಿಪ್ರಾಯ ಖಂಡಿತಾ ನಿಜ. ಹಾಗೇ ನನ್ನ ನಿರ್ದೇಶನದಲ್ಲಿ ನಿರಂಜನ್ ನಟನೆಯ ಸಿನಿಮಾ ಅತೀ ಶೀಘ್ರದಲ್ಲೇ ಶುರು ಮಾಡ್ತೀನಿ. ಎಂದು ಹೇಳಿ ಅಣ್ಣನ ಮಗನ ಚಿತ್ರದ ಟ್ರೇಲರ್ ಲಾಂಚ್ ಮಾಡಿದರು. ʻʻನಮ್ಮನೆ ಹುಡುಗನ ಬಗ್ಗೆ ನಾವು ಹೆಚ್ಚು ಮಾತಾಡಬಾರದು. ಸಿನಿಮಾ ಮಾತಾಡುವಂತಾಗಲಿʼʼ ಎಂದು ಪ್ರಿಯಾಂಕ ಹೇಳಿದರು.
ಚಿತ್ರದ ನಾಯಕಿ ರಾಧ್ಯಾ ಮಾತನಾಡುತ್ತಾ, ನನಗೆ ಶಿವಣ್ಣ, ರಾಘಣ್ಣ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಆದರೆ ಅಪ್ಪು ಸರ್ ಅವರನ್ನು ಕಣ್ಣಾರೆ ನೋಡುವ ಸಂದರ್ಭ ಸಿಕ್ಕಿರಲಿಲ್ಲ. ನನ್ನ ನಟನೆಯ ಸಿನಿಮಾದಲ್ಲಿ ಅವರು ಒಂದು ಹಾಡು ಹಾಡಿದ್ದಾರೆ. ಆ ಮೂಲಕ ಅವರ ಆಶೀರ್ವಾದ ನಮ್ಮ ಮೇಲೆ ಇದೆ ಅಂತಾ ಭಾವಿಸಿದ್ದೇನೆ ಎಂದು ಹೇಳುತ್ತಾ ಭಾವುಕರಾದರು.
ಇನ್ನು ಚಿತ್ರದ ನಾಯಕ ನಿರಂಜನ್ ಸುಧೀಂದ್ರ ಕಿಚ್ಚ ಸುದೀಪ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ. ಆದರೆ ಶೀಘ್ರದಲ್ಲೇ ಅವರು ಇಂಥದ್ದೇ ಸಮಾರಂಭದಲ್ಲಿ ನಮ್ಮ ಜೊತೆಯಾಗುತ್ತಾರೆ ಎಂದರು.
ಸಂಗೀತ ನಿರ್ದೇಶಕ ಅಭಿಮನ್ ರಾಯ್ ಮಾತನಾಡಿ, ʻʻಒಬ್ಬ ಕಲಾವಿದರಾಗಬೇಕು ಅಂದರೆ ನಲವತ್ತು ಜನ್ಮದ ಪುಣ್ಯ ಮಾಡಿರಬೇಕು ಅಂತಾರೆ. ಅಪ್ಪು ಸರ್ ನಾನ್ನೂರು ಜನುಮದ ಪುಣ್ಯ ಮಾಡಿದ್ದವರು. ನಾನು ಈ ಚಿತ್ರಕ್ಕಾಗಿ ಹಾಡನ್ನು ರೆಕಾರ್ಡ್ ಮಾಡಿಸಿಕೊಳ್ಳಲು ಹೋದಾಗ ತಕ್ಷಣಕ್ಕೆ ಅವರಿಗೆ ನನ್ನ ಗುರುತು ಸಿಕ್ಕಿರಲಿಲ್ಲ. ನಂತರ ಈ ಹಿಂದೆ ನಾನು ಮಾಡಿರುವ ಸಿನಿಮಾಗಳ ಬಗ್ಗೆ ತಿಳಿದು, ತುಂಬಾ ಸಂತೋಷ ಪಟ್ಟರು.ʼʼ ಎಂದರು. ಚಿತ್ರಕ್ಕೆ ಚಿದಾನಂದ್ ಹೆಚ್.ಕೆ. ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನವಿದೆ.
ನಟಿ ಅನಿತಾ ಭಟ್ ಅಂದಾಕ್ಷಣ ನೆನಪಾಗೋದೇ ಹಾಟ್ ಬೆಡಗಿ ಲುಕ್. ಹೌದು ಅನಿತಾಭಟ್ ನಟಿಯಾಗಿ ಈಗಾಗಲೇ ಸಾಕಷ್ಟು ಸುದ್ದಿಯಾಗಿದ್ದಾರೆ. ಅದು ಹಳೇ ಸುದ್ದಿ. ಆದರೆ ಅವರು ನಿರ್ಮಾಪಕಿಯಾಗಿಯೂ ಎಂಟ್ರಿಯಾಗಿದ್ದಾರೆ ಅನ್ನೋದು ಹೊಸ ಸುದ್ದಿಯಂತೂ ಅಲ್ಲ ಬಿಡಿ. ಅವರು ಈಗಾಗಲೇ ತಮ್ಮ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂದು ಸಿನಿಮಾ ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿದ್ದಾರೆ. ಅವರು ಸದ್ದಿಲ್ಲದೆಯೇ ಇಂದಿರಾ ಎಂಬ ಸಿನಿಮಾ ಮಾಡಿದ್ದಾರೆ.
ಅದೀಗ ರಿಲೀಸ್ ಆಗುತ್ತಿದೆ ಅನ್ನೋದೇ ವಿಶೇಷ. ಹೌದು. ಅನಿತಾ ಭಟ್ ನಿರ್ಮಾಣದ ಮೊದಲ ಸಿನಿಮಾ ಮೊದಲನೇ ಸಿನಿಮಾ “ಇಂದಿರಾ”. ಈ ಚಿತ್ರ ಜುಲೈ 8ಕ್ಕೆ ರಿಲೀಸ್ ಅಗುತ್ತಿದೆ. ಅದು ವೂಟ್ ಸೆಲೆಕ್ಟ್ ನಲ್ಲಿ. ಇಂದಿರಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿಲ್ಲ.
ವಿಶೇಷವೆಂದರೆ, ಇಂದಿರಾ ಸಿನಿಮಾದ ಕಂಟೆಂಟ್ ಹಾಗು ಗುಣಮಟ್ಟವೇ ವೂಟ್ ಸೆಲೆಕ್ಟ್ ನಲ್ಲಿ ಸಿನಿಮಾ ಬಿಡುಗಡೆಗೆ ಕಾರಣ ಅನ್ನೋದು ನಿರ್ಮಾಪಕಿ ಅನಿತಾಭಟ್ ಅವರ ಮಾತು.
ಈಗಾಗಲೇ ಇಂದಿರಾ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ ಕೂಡ ವೂಟ್ ಸೆಲೆಕ್ಟ್ ನಲ್ಲಿ ತೆರೆ ಕಾಣುತ್ತಿದೆ. ಅಂದಹಾಗೆ, ಇಂದಿರಾ ಸೈಕಲಾಜಿಕಲ್ ಥ್ರಿಲ್ಲರ್. ಇದು ಕನ್ನಡ ಹಾಗು ತೆಲುಗು ಭಾಷೆಯಲ್ಲಿ ತಯಾರಾಗಿದೆ. ರಿಷಿಕೇಶ್ ಚಿತ್ರದ ನಿರ್ದೇಶಕರು. ನಿರ್ದೇಶಕರೇ ಇಲ್ಲಿ ಛಾಯಾಗ್ರಹಣ ಮತಗತು ಸಂಕಲನ ಕೆಲಸ ಮಾಡಿದ್ದಾರೆ.
ಇಲ್ಲಿ ಅನಿತಾಭಟ್ ಜೊತೆಯಲ್ಲಿ ಷಫಿ, ರೆಹಮಾನ್ ಹಾಸನ್, ಚಕ್ರವರ್ತಿ ಚಂದ್ರಚೂಡ್, ನೀತು ಇತರರು ನಟಿಸಿದ್ದಾರೆ. ಲೋಹಿತ್ ಎಲ್. ನಾಯಕ್ ಸಂಗೀತವಿದೆ. ಅಭಿಷೇಕ್ ಮಠದ್ ಅವರ ನೃತ್ಯವಿದೆ.
ಅನಿತಾಭಟ್ ಅವರೊಂದಿಗೆ ಸಹ ನಿರ್ಮಾಪಕರಾಗಿ ಪ್ರಜ್ಞಾನಂದ್ ಸೊರಬ್ ಅವರು ಸಾಥ್ ನೀಡಿದ್ದಾರೆ.
ಅದೇನೆ ಇರಲಿ, ನಟಿಯಾಗಿ ಗೆದ್ದಿರುವ ಅನಿತಾಭಟ್ ಈಗ ನಿರ್ಮಾಣದಲ್ಲೂ ಗೆಲುವಿನ ನಗೆ ಬೀರಿದ್ದಾರೆ. ಅವರ ಇಂದಿರಾ ಅವರಿಗೆ ಖುಷಿ ಕೊಟ್ಟಿದೆ ಅನ್ನೋದೆ ಅವರ ಮತ್ತೊಂದು ಹೊಸ ಪ್ರಾಜೆಕ್ಟ್ ಗೆ ಕಾರಣವಾಗಿದೆ.