ಗೋಲ್ಡನ್ ಹಾರ್ಟ್ಸ್ ಸಂಸ್ಥೆ ಯಲ್ಲಿ ಕೆ.ಕೆ. ಅಶ್ರಫ್ ನಿರ್ಮಿಸಿ, ಹೆಚ್.ಬಿ. ಸಿದ್ದು ನಿರ್ದೇಶನದ ನಮ್ಮ ಹುಡುಗರು ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿದ್ದಾರೆ. ಇದೇ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ನಮ್ಮ ಹುಡುಗರು ಚಿತ್ರದ ಪ್ರೀ ರಿಲೀಸ್ ಈವೆಂಟ್ ಅದ್ದೂರಿಯಾಗಿ ನೆರವೇರಿತು. ರಾಘವೇಂದ್ರ ರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ವಸಿಷ್ಠ ಸಿಂಹ, ಧನ್ಯ ರಾಮ್ ಕುಮಾರ್, ಲಹರಿ ವೇಲು, ಕಾರುಣ್ಯ ರಾಮ್, ಸಂಯುಕ್ತ ಹೆಗಡೆ ಮುಂತಾದವರು ಪಾಲ್ಗೊಂಡಿದ್ದರು.
ಈ ಸಮಾರಂಭಕ್ಕೆ ಕಿಚ್ಚ ಸುದೀಪ್ ಅವರು ಆಗಮಿಸಬೇಕಿತ್ತು. ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗಿರಲಿಲ್ಲ. ಸುದೀಪ್ ವಿಡಿಯೋವೊಂದನ್ನು ಕಳುಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ʻʻನಮ್ಮ ಹುಡುಗರು ಚಿತ್ರದ ಕಾರ್ಯಕ್ರಮಕ್ಕೆ ನೇರವಾಗಿ ಬರಬೇಕೆನ್ನುವ ಬಯಕೆ ಇತ್ತು. ಕಾಲಿಗೆ ಪೆಟ್ಟು ಬಿದ್ದಿರುವುದರಿಂದ ಅದು ಸಾಧ್ಯವಾಗಿಲ್ಲ. ಉಪೇಂದ್ರ ಅವರ ಕುಟುಂಬದಿಂದ ಬರುತ್ತಿರುವ ಪ್ರತಿಭೆ ನಿರಂಜನ್ ಸುಧೀಂದ್ರ. ಖಂಡಿತಾ ಕರ್ನಾಟಕದ ಜನ ಇವರನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ನನಗಿದೆ. ನಿರಂಜನ್ ನಟನೆಯ ಪ್ರೋಮೋ, ಹಾಡುಗಳನ್ನು ನೋಡಿದ್ದೀನಿ. ಕನ್ನಡ ಚಿತ್ರರಂಗದಲ್ಲಿ ನಿರಂಜನ್ ದೊಡ್ಡ ಮಟ್ಟದಲ್ಲಿ ನಿಲ್ಲುತ್ತಾರೆ. ಇವರಿಗೆ ನನ್ನ ಸಹಕಾರ ಯಾವತ್ತಿಗೂ ಇದ್ದೇ ಇರುತ್ತದೆʼʼ ಎಂದರು ಕಿಚ್ಚ.
ಈ ಕಾರ್ಯಕ್ರಮ, ಈ ಹಾಡು, ಈ ವೇದಿಕೆ ನಮ್ಮ ಕುಟುಂಬಕ್ಕೆ ತುಂಬಾ ಕನೆಕ್ಟ್ ಆಗಿದೆ. ಈ ಚಿತ್ರದ ಹೆಸರು ನಮ್ಮ ಹುಡುಗರು. ನಾವು ಹುಡುಗರು ಅಂತಾ ಹಿಂದೆ ಚಿತ್ರ ಮಾಡಿದ್ವಿ. ಉಪೇಂದ್ರ ನಮ್ಮ ಸಂಸ್ಥೆಗೆ ಓಂ, ಸ್ವಸ್ತಿಕ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇಂದಿಗೂ ಉಸಿರಾಡುತ್ತಿರುವ ಜೀವಂತ ಸಿನಿಮಾಗಳು ಅವು. ʻನಮ್ಮ ಹುಡುಗರುʼ ಚಿತ್ರಕ್ಕಾಗಿ ನನ್ನ ತಮ್ಮ ಹಾಡಿರುವ ಹಾಡನ್ನು ನಾನು ಈಗ ಬಿಡುಗಡೆ ಮಾಡಿದ್ದೀನಿ. ಅವನು ಮಾಡಿಟ್ಟು ಹೋಗಿರುವ ಕೆಲಸ ಇನ್ನೂ ಉಳಿದಿದೆ ಅನ್ನೋದು ನನಗೆ ಹೆಮ್ಮೆ ಅನ್ನಿಸುತ್ತದೆ. ನಿರಂಜನ್ ಅವರನ್ನು ನೋಡಿದಾಗ ನನಗೆ ಖುಷಿ ಆಗುತ್ತದೆ. ಪ್ಯಾನ್ ಇಂಡಿಯಾ ಪ್ರಾಡಕ್ಟ್ ಇವರು. ಇವರಿಗಾಗಿ ಉಪೇಂದ್ರ ಅವರು ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕು. ಆ ಮೂಲಕ ನಿರಂಜನ್ ಇಡೀ ಭಾರತದಲ್ಲಿ ಹೆಸರು ಮಾಡಬೇಕುʼʼ ಎಂದು ಆಶಯ ವ್ಯಕ್ತಪಡಿಸಿ, ಹಾರೈಸಿದರು.
ಉಪೇಂದ್ರ ಅವರು ಮಾತನಾಡಿ ನಾನು ಈಗಾಗಲೇ ಸಿನಿಮಾ ನೋಡಿದ್ದೀನಿ. ನಿರ್ದೇಶಕ ಸಿದ್ದು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಯಾರೂ ಊಹೆ ಮಾಡಲಾರದ ಟ್ವಿಸ್ಟು, ಟರ್ನುಗಳನ್ನು ಇಟ್ಟಿದ್ದಾರೆ. ಇದು ಸಿದ್ದು ಅವರ ಮೊದಲ ಸಿನಿಮಾ ಅಂತ ಅನ್ನಿಸೋದೇ ಇಲ್ಲ. ರಾಘಣ್ಣ ತುಂಬಾ ಅರ್ಥಪೂರ್ಣವಾಗಿ ಮಾತಾಡಿದರು. ಸಿನಿಮಾ ಬರೀ ನಮ್ಮ ಜನರೇಷನ್ನಿಗೆ ಮುಗಿದು ಹೋಗಬಾರದು ಎನ್ನುವ ಅವರ ಅಭಿಪ್ರಾಯ ಖಂಡಿತಾ ನಿಜ. ಹಾಗೇ ನನ್ನ ನಿರ್ದೇಶನದಲ್ಲಿ ನಿರಂಜನ್ ನಟನೆಯ ಸಿನಿಮಾ ಅತೀ ಶೀಘ್ರದಲ್ಲೇ ಶುರು ಮಾಡ್ತೀನಿ. ಎಂದು ಹೇಳಿ ಅಣ್ಣನ ಮಗನ ಚಿತ್ರದ ಟ್ರೇಲರ್ ಲಾಂಚ್ ಮಾಡಿದರು. ʻʻನಮ್ಮನೆ ಹುಡುಗನ ಬಗ್ಗೆ ನಾವು ಹೆಚ್ಚು ಮಾತಾಡಬಾರದು. ಸಿನಿಮಾ ಮಾತಾಡುವಂತಾಗಲಿʼʼ ಎಂದು ಪ್ರಿಯಾಂಕ ಹೇಳಿದರು.
ಚಿತ್ರದ ನಾಯಕಿ ರಾಧ್ಯಾ ಮಾತನಾಡುತ್ತಾ, ನನಗೆ ಶಿವಣ್ಣ, ರಾಘಣ್ಣ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಆದರೆ ಅಪ್ಪು ಸರ್ ಅವರನ್ನು ಕಣ್ಣಾರೆ ನೋಡುವ ಸಂದರ್ಭ ಸಿಕ್ಕಿರಲಿಲ್ಲ. ನನ್ನ ನಟನೆಯ ಸಿನಿಮಾದಲ್ಲಿ ಅವರು ಒಂದು ಹಾಡು ಹಾಡಿದ್ದಾರೆ. ಆ ಮೂಲಕ ಅವರ ಆಶೀರ್ವಾದ ನಮ್ಮ ಮೇಲೆ ಇದೆ ಅಂತಾ ಭಾವಿಸಿದ್ದೇನೆ ಎಂದು ಹೇಳುತ್ತಾ ಭಾವುಕರಾದರು.
ಇನ್ನು ಚಿತ್ರದ ನಾಯಕ ನಿರಂಜನ್ ಸುಧೀಂದ್ರ ಕಿಚ್ಚ ಸುದೀಪ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ. ಆದರೆ ಶೀಘ್ರದಲ್ಲೇ ಅವರು ಇಂಥದ್ದೇ ಸಮಾರಂಭದಲ್ಲಿ ನಮ್ಮ ಜೊತೆಯಾಗುತ್ತಾರೆ ಎಂದರು.
ಸಂಗೀತ ನಿರ್ದೇಶಕ ಅಭಿಮನ್ ರಾಯ್ ಮಾತನಾಡಿ, ʻʻಒಬ್ಬ ಕಲಾವಿದರಾಗಬೇಕು ಅಂದರೆ ನಲವತ್ತು ಜನ್ಮದ ಪುಣ್ಯ ಮಾಡಿರಬೇಕು ಅಂತಾರೆ. ಅಪ್ಪು ಸರ್ ನಾನ್ನೂರು ಜನುಮದ ಪುಣ್ಯ ಮಾಡಿದ್ದವರು. ನಾನು ಈ ಚಿತ್ರಕ್ಕಾಗಿ ಹಾಡನ್ನು ರೆಕಾರ್ಡ್ ಮಾಡಿಸಿಕೊಳ್ಳಲು ಹೋದಾಗ ತಕ್ಷಣಕ್ಕೆ ಅವರಿಗೆ ನನ್ನ ಗುರುತು ಸಿಕ್ಕಿರಲಿಲ್ಲ. ನಂತರ ಈ ಹಿಂದೆ ನಾನು ಮಾಡಿರುವ ಸಿನಿಮಾಗಳ ಬಗ್ಗೆ ತಿಳಿದು, ತುಂಬಾ ಸಂತೋಷ ಪಟ್ಟರು.ʼʼ ಎಂದರು. ಚಿತ್ರಕ್ಕೆ ಚಿದಾನಂದ್ ಹೆಚ್.ಕೆ. ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನವಿದೆ.