ಶುಗರ್ ಲೆಸ್ ಜೇನು ತುಪ್ಪ! ಒಂದು ಅಪರೂಪದ ಸ್ವೀಟ್ ಸಿನಿಮಾ…

ಚಿತ್ರ ವಿಮರ್ಶೆ

  • ವಿಜಯ್ ಭರಮಸಾಗರ

ಚಿತ್ರ: ಶುಗರ್ ಲೆಸ್

ನಿರ್ದೇಶನ, ನಿರ್ಮಾಣ: ಶಶಿಧರ್ ಕೆ.ಎಂ.

ತಾರಾಗಣ: ಪೃಥ್ವಿ ಅಂಬರ್, ಪ್ರಿಯಾಂಕ ತಿಮ್ಮೇಶ್, ದತ್ತಣ್ಣ, ಧರ್ಮಣ್ಣ, ನವೀನ್ ಡಿ ಪಡಿಯಾಲ್, ಪದ್ಮಜಾರಾವ್, ರಘು ರಾಮನಕೊಪ್ಪ ಇತರರು.

ಅವನ ಹೆಸರು ವೆಂಕಿ ಅಲಿಯಾಸ್ ವೆಂಕಟೇಶ. ವಯಸ್ಸು 28. ಸದಾ ರಾಯಲ್ ಫ್ಯಾಮಿಲಿ ಅನ್ನೋ ಬಿಲ್ಡಪ್. ಲೈಫಲ್ಲಿ ಡಿಸಿಪ್ಲೀನ್ ಇಲ್ಲದ ಹುಡುಗ. ಸದಾ ಲವಲವಿಕೆಯಲ್ಲಿರೋ ಅಂಥಾ ಹುಡುಗ ಇದ್ದಕ್ಕಿದ್ದಂತೆ ದಂಗು ಬಡಿದವನಂತಾಗುತ್ತಾನೆ. ಆಮೇಲೆ ಸಿನಿಮಾ ಕಥೆ ಹೆಂಗೆಲ್ಲಾ ನಗಿಸಿಕೊಂಡು ಹೋಗುತ್ತೆ ಅನ್ನೋದೇ ಮಜವೆನಿಸೋ ಕಥೆ.

ನಿಜ‌ ಹೇಳೋದಾದರೆ, ಇದಕ್ಕೆ ಶುಗರ್ ಲೆಸ್ ಎಂಬ ಹೆಸರು ಬರೀ ಹೆಸರಷ್ಟೆ. ಕಥೆಯಲ್ಲಿ ಎಷ್ಟು ಬೇಕೋ ಅಷ್ಟು ಸಿಹಿ ತುಂಬಿದೆ. ಚಿತ್ರಕಥೆಯೊಳಗೆ ಜೇನು ಕೂಡ ಮಿಕ್ಸ್ ಆಗಿದೆ. ಡ್ರೈ ಫ್ರೂಟ್ಸ್ ಜೊತೆ ಜಾಮೂನು‌ ತಿಂದಷ್ಟೇ ನಿರೂಪಣೆಯ ರುಚಿಯೂ ಇದೆ. ಒಟ್ಟಾರೆ, ಇಡೀ ಸಿನಿಮಾ ನಗುವಿನ ರಸದೌತಣ ಉಣಬಡಿಸುತ್ತಲೇ ನೊಡುಗರನ್ನು ಅತ್ತಿತ್ತ ಅಲ್ಲಾಡದಂತೆ ನೋಡಿಸಿಕೊಂಡು ಹೋಗುತ್ತೆ. ಬದುಕಲ್ಲಿ ಶುಗರ್ ಇದ್ದವರೂ ಈ ಶುಗರ ಲೆಸ್ ಸಿನಿಮಾ‌ ನೋಡಿದರೆ ಮೈಗಂಟಿರುವ ಶುಗರ್ ಮರೆತು ಸಿಹಿ ಬದುಕು ಕಟ್ಟಿಕೊಳ್ಳುವಷ್ಟರ ಮಟ್ಟಿಗೆ ನಿರ್ದೇಶಕ ಶಶಿಧರ್ ಕೆ.ಎಂ. ನಿರೂಪಿಸಿದ್ದಾರೆ.

ಹೊಡಿ, ಬಡಿ, ಕಡಿ ಎಂಬ ಸಿನಿಮಾಗಳ ನಡುವೆ ಮನಸ್ಸಿಗೆ ಖುಷಿ ಕೊಡುವ ಕಂಟೆಂಟ್, ಎರಡು ತಾಸು ಎಲ್ಲವನ್ನು ಮರೆಸಿ‌ ನಗೆಗಡಲಲ್ಲಿ ತೇಲಿಸುತ್ತೆ. ಇಲ್ಲಿ ನಿರ್ದೇಶಕರ ಕಥೆ ಹೈಲೆಟ್. ಆ ಕಥೆಯನ್ನು‌ ನಿರೂಪಿಸಿರುವ ರೀತಿ ಕೂಡ ಇಷ್ಟವಾಗುತ್ತೆ. ಮೊದಲ ಬಾಲ್ ನಲ್ಲೇ ಸಿಕ್ಸ್ ಹೊಡೆದಂತೆ ಚೊಚ್ಚಲ ನಿರ್ದೇಶನದಲ್ಲೇ ಅವರು ಸಾಬೀತುಪಡಿಸಿದ್ದಾರೆ. ಇಂಥದ್ದೊಂದು‌ ಕಥೆಯಲ್ಲೂ ಅಷ್ಟೊಂದು‌ ರಂಗು ತುಂಬಿ ರಂಜಿಸಬಹುದು ಅಂತ ತೋರಿಸಿಕೊಟ್ಟಿದ್ದಾರೆ.

ಒಂದೊಳ್ಳೆಯ ಸಿನಿಮಾದಲ್ಲಿ ಏನೆಲ್ಲಾ ಇರಬೇಕೋ ಆ ಎಲ್ಲಾ ಪಾಕವೂ ಇಲ್ಲುಂಟು. ಹಾಗಾಗಿ ಶುಗರ್ ಲೆಸ್ ಸಖತ್ ಟೇಸ್ಟ್ ಎನಿಸೋ ಕರದಂಟಿನಂತಹ ಸಿನಿಮಾ ಅಂತ ಮುಲಾಜಿಲ್ಲದೆ ಹೇಳಬಹುದು.

ಶುಗರ್ ಕಥೆ ಏನು?

ಟಾಯ್ಲೆಟ್ ಇಲ್ಲದಿರೋ ಮನೆ ಸಿಗುತ್ತೆ, ಆದರೆ ಟ್ಯಾಬ್ಲೆಟ್ ಇಲ್ಲದಿರೋ ಮನೆ ಸಿಗುತ್ತಾ? ಇದು ಕಥೆಯ ಕಾನ್ಸೆಪ್ಟ್. ಇಲ್ಲಿನ ಕಥಾ ನಾಯಕ 28 ವರ್ಷದ ವೆಂಕಟೇಶನಿಗೆ ಶುಗರ್ ಇರೋದು ಗೊತ್ತಾಗುತ್ತೆ. ಲೈಫಲ್ಲಿ ಶಿಸ್ತು ಇಲ್ಲದ ವೆಂಕಿಗೆ ಗುಂಡು ಹಾಕೋದೇ ಜೀವನ. ಅದರಲ್ಲೂ ಅವನ ಕುಚೇಷ್ಟೆಗಳಿಂದಲೇ ಸಿಕ್ಕ ಕೆಲಸಗಳೆಲ್ಲವೂ ಗೋತಾ. ಹೀಗಿರುವಾಗ ಅವನೊಂದು ಸಕ್ಕರೆಯಂತಹ ಹುಡುಗಿಗೆ ಫಿದಾ ಆಗ್ತಾನೆ. ಆಮೇಲೆ ಮದ್ವೆ ಆಗೋಕೂ ತಯಾರಿ‌ ನಡೆಸ್ತಾನೆ. ಮದ್ವೆಗೂ ಮುನ್ನ ಅವನಿಗೆ ಶುಗರ್ ಇರೋದು ಗೊತ್ತಾಗುತ್ತೆ. ಅತ್ತ ದಂಗಾಗುವ ವೆಂಕಿ ಡಲ್ ಆಗ್ತಾನೆ. ಶುಗರ್ ತುಂಬಿಕೊಂಡು ಹೆಂಗೆಲ್ಲಾ ಒದ್ದಾಡ್ತಾನೆ ಅನ್ನೋದೆ ಕಥೆ. ಮೊದಲರ್ಧ ಜಾಲಿ. ದ್ವಿತಿಯಾರ್ಧವೂ ಫುಲ್ ಜಾಲಿ. ಈ ಜಾಲಿ ಮೂಡ್ ನಲ್ಲೇ ಸಾಗುವ ಕಥೆಯಲ್ಲಿ ಆಗಾಗ ಎಮೋಷನ್ಸ್‌ ಕೂಡ ಇಣುಕಿ ಹಾಕುತ್ತೆ. ಒಂದಷ್ಟು ಭಾವುಕ ಅನಿಸಿದರೂ, ಅದರೊಳಗೂ ನಗುವಿಟ್ಟು ಖುಷಿ ತುಂಬಿಸಿದ್ದಾರೆ ನಿರ್ದೇಶಕರು.

ಈ ವೆಂಕಿ ಜೊತೆ ವಿಭಿನ್ನ ಅಭಿರುಚಿ ಇರೋ ಮೂರು ಕುದುರೆಗಳು ಜತೆಯಾಗುತ್ತವೆ. ಹಾಸ್ಯದ ಮಧ್ಯೆ ಬದುಕಿನ ಪಾಠ ಹೇಳಿಕೊಡುವ ವಯಸ್ಕ ಗೆಳೆಯರ ಮಾತು ಕಥೆ ಮತ್ತು ವ್ಯಥೆ ಸಿನಿಮಾದ ಹೈಲೆಟ್. ಶುಗರ್ ಬಂದ ವೆಂಕಿ ಅದನ್ನು ಹೇಳಿಕೊಂಡರೆ ಏನೆಲ್ಲಾ ಸಮಸ್ಯೆ ಎದುರಾಗಬಹುದು ಅಂತಂದುಕೊಂಡು ಪೇಚೆಗೆ ಸಿಕ್ಕಿ ಒದ್ದಾಡುವ ಸನ್ನಿವೇಶಗಳು ನಗೆಗಡಲಲ್ಲಿ ತೇಲಿಸುತ್ತವೆ.

ಯಾರ ಕೆಲಸ‌ ಹೇಗೆ?

ಒಂದು ಸಿನಿಮಾ ಅಂದರೆ ಬರೀ ಕಥೆಯಲ್ಲ, ಅದಕ್ಕೆ ಸರಿಯಾದ ಸಂಗೀತ, ಸಾಹಿತ್ಯ, ಛಾಯಾಗ್ರಹಣ ಇರಬೇಕು. ಜೊತೆಗೆ ಇಂತಹ ಹಾಸ್ಯಮಯ ಕಥೆಗೆ ಕಚಗುಳಿ ಇಡುವ ಮಾತುಗಳೇ ಜೀವಾಳ. ಅಂಥದ್ದೊಂದು ಒಳ್ಳೆಯ ತಂತ್ರಜ್ಞರ ಸ್ಪರ್ಶ ಇಲ್ಲಿದೆ.
ಅನೂಪ್ ಸೀಳಿನ್ ಹಾಡು ಮತ್ತು ಹಿನ್ನೆಲೆ ಸಂಗೀತ ಮೂಲಕ ಇಷ್ಟ ಆಗುತ್ತಾರೆ. ಅಲ್ಲಲ್ಲಿ ಹಿನ್ನೆಲೆ ಸಂಗೀತದ ಒಂದೇ ಒಂದು ಬಿಟ್ ಮಾತ್ರ, ರವಿಚಂದ್ರನ್ ಸಿನಿಮಾವೊಂದರ ಹಾಡಿನ ಟ್ಯೂನ್ ನೆನಪಿಸುತ್ತದೆ. ಉಳಿದಂತೆ ಅನೂಪ್ ಅವರ ಸಂಗೀತ ಕಥೆಗೆ ಪೂರಕ. ಗುರುರಾಜ್ ಕಶ್ಯಪ್ ಅವರ ಮಾತಿಲ್ಲಿ ಜೋರು ಸದ್ದು ಮಾಡಿದೆ. ಪ್ರತಿ ಪಾತ್ರಗಳ ಮಾತಲ್ಲೂ ನಗೆಬುಗ್ಗೆ ಇದೆ ಅಂದರೆ ಅದಕ್ಕೆ ಅವರು ಪೋಣಿಸಿರುವ ಮಾತೇ ಕಾರಣ. ಇನ್ನು, ಸಿನಿಮಾ ಲವಿತ್ ಕ್ಯಾಮೆರಾ ಕೈಚಳಕ ಸಿನಿಮಾ ಜೇನು ತುಪ್ಪವಾಗಲು ಕಾರಣ. ಕಥೆಯ ವೇಗಕ್ಕೆ ರವಿಚಂದ್ರನ್ ಕತ್ತರಿ ಕೆಲಸ ಸಾಥ್ ನೀಡಿದೆ.

ತೆರೆ ಮೇಲಿನ ಹೈಲೆಟ್

ಪೃಥ್ವಿ ಅಂಬರ್ ಸಿನಿಮಾದ ಕೇಂದ್ರ ಬಿಂದು. ನಗಿಸುವ ಮೂಲಕ ಮತ್ತಷ್ಟು ಇಷ್ಟವಾಗುತ್ತಾರೆ. ಅವರ ನಟನೆ, ಡ್ಯಾನ್ಸ್ ಮತ್ತೊಂದು ಹೈಲೆಟ್. ಪ್ರಿಯಾಂಕ ತಿಮ್ಮೇಶ್ ಕೊಟ್ಟ ಪಾತ್ರಕ್ಕೆ ಮೋಸ ಮಾಡಿಲ್ಲ. ಹಿರಿಯ ಕಲಾವಿದ ದತ್ತಣ್ಣ ಇಲ್ಲಿ ಕಾಡುತ್ತಾರೆ. ಡಾಕ್ಟರ್ ಆಗಿ ಎಸ್. ನಾರಾಯಣ್ ಇದ್ದಷ್ಟು ಸಮಯ ನಗಿಸುತ್ತಾರೆ. ಧರ್ಮಣ್ಣ, ನವೀನ್ ಡಿ.ಪಡೀಲ್, ರಘು ರಾಮನಕೊಪ್ಪ, ಪದ್ಮಜಾರಾವ್, ಗಿರೀಶ್ ಜತ್ತಿ ಇತರರು ಸಿನಿಮಾ ವೇಗಕ್ಕೆ ಹೆಗಲು ಕೊಟ್ಟಿದ್ದಾರೆ.

Related Posts

error: Content is protected !!