ಶಶಿಕುಮಾರ್ ಪುತ್ರ ಅಕ್ಷಿತ್ ಅಭಿನಯದ ಓ ಮೈ ಲವ್ ತೆರೆಗೆ ಬರಲು ರೆಡಿಯಾಗಿದೆ. ನಿರ್ದೇಶಕ ಸ್ಮೈಲ್ ಶ್ರೀನು ಅವರಿಗೆ ಸಿನಿಮಾ ಮೇಲೆ ಸಾಕಷ್ಟು ಭರವಸೆ ಇದೆ. ಅದಕ್ಕೆ ಕಾರಣ, ಸಿನಿಮಾ ಎಲ್ಲೆಡೆಯಿಂದ ಜೋರು ಸದ್ದು ಮಾಡಿರೋದು. ತಮ್ಮ ಸಿನಿಮಾ ಕುರಿತು ನಿರ್ದೇಶಕರು ಹೇಳೋದಿಷ್ಟು…
ಒಳ್ಳೆ ಪ್ರಚಾರದಿಂದ ಚಿತ್ರಕ್ಕೆ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ. ಕುಟುಂಬ ಸಮೇತ ನೋಡಬಹುದಾದ ಕಮರ್ಷಿಯಲ್ ಸಿನಿಮಾವಾಗಿದ್ದು, ಹಾಡುಗಳ ಪೈಕಿ ಎರಡು ಗೀತೆಗಳನ್ನು ಹೊರಬಿಡಲಾಗಿದೆ. ಹಾಡಿಗೆ ಮೆಚ್ಚುಗೆ ಸಿಕ್ಕಿದೆ. ಸಾಹಸ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿವೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಇದೇ 15ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ ಎಂದರು ಅವರು.
ವೈಯಕ್ತಿಕವಾಗಿ ನನಗೆ ಇಷ್ಟವಾದ ಸಿನಿಮಾ ಇದಾಗಿದೆ. ಎಲ್ಲೇ ಹೋದರೂ ಜನ ಸೇರುತ್ತಿದ್ದರು. ಶಶಿಕುಮಾರ್ ಮಗನೆಂದು ಗುರುತು ಹಿಡಿಯುತ್ತಿದ್ದಾರೆ. ಎಸ್.ನಾರಾಯಣ್ ಸರ್ ಅವರಿಂದ ಚಿತ್ರೀಕರಣ ಸಂದರ್ಭದಲ್ಲಿ ಬಹಳಷ್ಟು ಕಲಿತುಕೊಂಡೆ. ಗೆಳಯನ ಪಾತ್ರ ಮಾಡಿರುವ ಪೃಥ್ವಿ ಸೋದರನಂತೆ ಇದ್ದಾರೆ. ಒಟ್ಟಿನಲ್ಲಿ ಓ ಮೈ ಲವ್ ನನಗೆ ವೇದಿಕೆಯಾಗಿದೆ. ಇದೇ ನನಗೆ ಮೊದಲ ಸಿನಿಮಾ ಎಂದು ನಾಯಕ ಅಕ್ಷಿತ್‌ಶಶಿಕುಮಾರ್ ಹೇಳಿದರು.
ಎರಡನೇ ಸಿನಿಮಾದಲ್ಲಿ ಒಳ್ಳೆ ಪಾತ್ರ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಪ್ರಚಾರದ ಸಲವಾಗಿ ಕಾಲೇಜುಗಳಿಗೆ ಭೇಟಿ ನೀಡಿದಾಗ ಒಳ್ಳೆ ಸ್ಪಂದನೆ ಸಿಗುತ್ತಿತ್ತು. ಚಿತ್ರದಲ್ಲಿ ಕಾಮಿಡಿ, ಲವ್, ಫೈಟ್, ಫ್ರೆಂಡ್‌ಶಿಪ್ ಎಲ್ಲವು ಇದೆ. ನಿರ್ದೇಶಕರು ಚೆನ್ನಾಗಿ ಹೇಳಿ ಕೊಟ್ಟಿದ್ದಾರೆ. ಮತ್ತೆ ಸಕ್ಸಸ್ ಮೀಟ್‌ದಲ್ಲಿ ಭೇಟಿಯಾಗೋಣ ಅಂತ ನಾಯಕಿ ಕೀರ್ತಿಕಲ್ಕರೆ ಸಂತಸ ಹಂಚಿಕೊಂಡರು.
ಪ್ರಚಾರವನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದಾರೆ. ಒಳ್ಳೆ ಅಡುಗೆ ಮಾಡಿದರೆ ಸಾಲದು. ಅದಕ್ಕೆ ತಕ್ಕಂತೆ ಉತ್ತಮ ಸಲಕರಣೆಗಳು ಸಿಕ್ಕಿದೆ. ನಿರ್ದೇಶಕರು ಅಡುಗೆ ಭಟ್ಟರಾದರೆ, ನಿರ್ಮಾಪಕರು ಬೇಕಾದ ಸಲಕರಣೆಗಳನ್ನು ನೀಡಿರುವುದಕ್ಕೆ ಚಿತ್ರವು ಅದ್ಬುತವಾಗಿದೆ. ಇಂತಹ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬೇಕಾಗಿದೆ. ಸಿನಿಮಾ ನಿರ್ಮಾಣ ಎಂಬುದು ಕಷ್ಟ. ಅದೇ ರೀತಿ ಬಿಡುಗಡೆ ಮಾಡುವುದು ಸವಾಲಾಗಿದೆ. ಪ್ರಸಕ್ತ ಬಿಡುಗಡೆ ಶೈಲಿ ನೋಡಿದರೆ ಕಷ್ಟವಾಗುತ್ತದೆ. ವಾರಕ್ಕೆ 8 ಚಿತ್ರಗಳು ಬರುತ್ತಿವೆ. ಸಿನಿಮಾ ನಿರ್ಮಾಣ ಕಡಿಮೆ ಆಗಬೇಕು. ಚಿತ್ರಗಳು ಹೆಚ್ಚು ಬರುತ್ತಿದೆ. ಆದರೆ ಗುಣಮಟ್ಟ ಕಡಿಮೆ ಆಗುತ್ತಿದೆ. ನನ್ನ ಪಾತ್ರದಲ್ಲಿ ಗಂಭೀರತೆ ಇದೆ. ಶಶಿಕುಮಾರ್ ಮಗನೆಂದು ಅಹಂ ತೋರಿಸದೆ ಶ್ರದ್ದೆ ಭಕ್ತಿ ಇದೆ. ಅದನ್ನು ಉಳಿಸಿಕೊಂಡು ಹೋದರೆ, ಮುಂದೆ ಉತ್ತಮ ಕಲಾವಿದ ಆಗುತ್ತಿಯಾ. ಏನು ಗೊತ್ತಿಲ್ಲದೆ ಇರೋರು ಚೆನ್ನಾಗಿ ಬೆಳೆಯುತ್ತಾರೆ. ಎಲ್ಲಾ ಗೊತ್ತಿದೆ ಎನ್ನುವವರು ಒಂದು ಹೆಜ್ಜೆನೂ ಮುಂದಕ್ಕೆ ಹೋಗಲಿಕ್ಕೆ ಸಾಧ್ಯವಿಲ್ಲ. ಸೆಟ್‌ನಲ್ಲಿ ನಿರ್ದೇಶಕರು ಗೊಂದಲ ಪಡದೆ ಚೆನ್ನಾಗಿ ಶಾಟ್‌ಗಳನ್ನು ತೆಗೆಸುತ್ತಿದ್ದರು. ಇವರಿಗೂ ಉಜ್ವಲ ಭವಿಷ್ಯವಿದೆ. ಮಕ್ಕಳು ದಾರಿ ತಪ್ಪದೆ ಇರಲಿ ಎಂದು ಹೇಳುವ ಸಿನಿಮಾ ಇದಾಗಿದೆ ಎಂದು ದೀರ್ಘಕಾಲದ ಮಾತಿಗೆ ಎಸ್.ನಾರಾಯಣ್ ವಿರಾಮ ಹಾಕಿದರು.
ಚಿಕ್ಕಂದಿನಿಂದಲೂ ನಿರ್ಮಾಣ ಮಾಡುವ ಆಸೆ ಇತ್ತು. ಅದು ಈಗ ಈಡೇರಿದೆ. ಎಲ್ಲಾ ವ್ಯವಹಾರದಲ್ಲೂ ಸಕ್ಸಸ್ ಕಂಡಿದ್ದೇನೆ. ಕೊನೆಯದಾಗಿ ಸಿನಿಮಾರಂಗಕ್ಕೆ ಬಂದಿದ್ದೇನೆ. ಅಕ್ಷಿತ್‌ಗೆ ಅಪ್ಪನಂತೆ ಹೆಸರು ಬರುತ್ತದೆ. ಒಂದು ಪಾತ್ರಕ್ಕೆ ದೇವ್‌ಗಿಲ್ ಬೇಕು ಎಂದು ಹೇಳಿದ್ದಕ್ಕೆ ಅವರನ್ನೆ ಆಯ್ಕೆ ಮಾಡಲಾಯಿತು ಎನ್ನುತ್ತಾರೆ ಕಥೆ ಬರೆದು ಬಂಡವಾಳ ಹೂಡಿರುವ ಜಿ.ರಾಮಾಂಜಿನಿ.
ನಾಯಕಿಯ ತಾಯಿ ಸಂಗೀತಾ, ಖಳನಟನ ತಂಗಿಯಾಗಿರುವ ಯಶಾ, ಗೆಳಯನಾಗಿ ಕಾಣಿಸಿಕೊಂಡಿರುವ ಪೃಥ್ವಿ ಅನುಭವಗಳನ್ನು ಹೇಳಿಕೊಂಡರು.