Categories
ಸಿನಿ ಸುದ್ದಿ

ಜೇಮ್ಸ್ ಜತೆ ಬೈರಾಗಿ ಟೀಸರ್; ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್…

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಪುನೀತ್ ರಾಜ್’ಕುಮಾರ್ ಹುಟ್ಟು ಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲು ‘ಬೈರಾಗಿ’ ತಂಡ ತೀರ್ಮಾನಿಸಿದೆ. ‘ಜೇಮ್ಸ್‌’ ಬಿಡುಗಡೆಯಾಗುವ ಎಲ್ಲಾ ಪರದೆಗಳಲ್ಲೂ ‘ಬೈರಾಗಿ’ ದರ್ಶನವಾಗಲಿದೆ ಎಂಬುದು ವಿಶೇಷ.

ಪುನೀತ್ ಅವರ ಸವಿನೆನಪಿಗಾಗಿ ಈ ಟೀಸರ್ ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ‘ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ತಂಡದ ಜತೆ ಅಪ್ಪು ಒಡನಾಟವಿದೆ. ಹೀಗಾಗಿ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ‘ಬೈರಾಗಿ’ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಇದು ಪುನೀತ್ ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಸಂತಸದ ವಿಷಯ’ ಎಂಬುದು ಚಿತ್ರತಂಡದ ಅನಿಸಿಕೆ.

ವಿಜಯ್ ಮಿಲ್ಟನ್‌ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ ‘ಕೃಷ್ಣ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ‘ಟಗರು’ ಬಳಿಕ ‘ಡಾಲಿ’ ಧನಂಜಯ್ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಜತೆ ನಟಿಸಿದ್ದಾರೆ. ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಕೂಡಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.

Categories
ಎಡಿಟೋರಿಯಲ್ ಸಿನಿ ಸುದ್ದಿ

ಸಿನಿ‌ಲಹರಿ ಯುಟ್ಯೂಬ್‌ ಚಾನೆಲ್‌ಗೆ ವರ್ಷದ ಹರ್ಷ… ಮೊದಲ ವರ್ಷದ ಯಶಸ್ವೀ ಪಯಣ…

ನಾವಿಬ್ಬರು ಸೇರಿ ಶುರು ಮಾಡಿದ ಸಿನಿಲಹರಿಗೆ ಪ್ರೀತಿಯ ಹಾರೈಕೆಗಳು ಅಪ್ಪಳಿಸಿದವು. ಸಿನಿಲಹರಿ ಸಂಸ್ಥೆ ಕೊರೊನಾ ಹೊಡೆತಕ್ಕೆ ಮುಗ್ಗರಿಸಿತಾದರೂ, ನಾವು ಅದನ್ನು ನಿಲ್ಲಲು ಬಿಡಲಿಲ್ಲ. ಎಲ್ಲರಿಗೂ ಆದಂತೆ ನಮಗೂ ಒಂದಷ್ಟು ಸಮಸ್ಯೆಗಳು ಎದುರಾದವು. ಅದನ್ನು ಮೆಟ್ಟಿ ನಿಂತೆವು. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದುದರಿಂದಲೇ ಸಿನಿಲಹರಿ ಯುಟ್ಯೂಬ್‌ ಚಾನೆಲ್‌ ಯಶಸ್ವಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ…

2020 ನಂವೆಬರ್ 1ಕ್ಕೆ “ಸಿನಿ ಲಹರಿ” ವೆಬ್ ಸೈಟ್ ಶುರುವಾಗಿದ್ದು ಎಲ್ಲರಿಗೂ ಗೊತ್ತು. ಅಂದು ಎಲ್ಲವೂ ಹರಿಬಿರಿ, ಅವಸರ, ಆತುರ, ಸಣ್ಣ ಭಯ ಮತ್ತು ಒಂದಷ್ಟು ಗೊಂದಲದಲ್ಲಿಯೇ ಒಂದೊಳ್ಳೆಯ ಕಾರ್ಯಕ್ರಮ ನಡೆಯಿತು. ಅಂದು ಯಾರೆಲ್ಲ ಬರುತ್ತಾರೋ‌ ಎಂಬ ಸಣ್ಣ ಭಯದಲ್ಲೇ ಆಹ್ವಾನಿಸಿದರೆಲ್ಲರೂ ಬಂದು ಹೃದಯ ತುಂಬಿ ಹರಿಸಿದರು. ಅದ್ಯಾವ ಸಂದರ್ಭವೋ ಏನೋ ಗೊತ್ತಿಲ್ಲ. ಬಂದವರೆಲ್ಲ ಬೊಗಸೆ ತುಂಬಿ ಕೊಟ್ಟ ಪ್ರೀತಿ, ಹಾರೈಕೆ , ಧೈರ್ಯದಿಂದ ನಾವು ಯುಟ್ಯೂಬ್‌ ಚಾನೆಲ್‌ಗೂ ಕೈ ಹಾಕಿದೆವು.

ಸಿನಿ‌ಲಹರಿ‌ ವೆಬ್ಸೈಟ್ ಶುರುವಾಗಿ ನಾಲ್ಕು ತಿಂಗಳು ಕಳೆಯವ ಹೊತ್ತಿಗೆ ಒಂದು ವ್ಯವಸ್ಥಿತವಾದ ಸ್ಟುಡಿಯೋ, ಆಫೀಸು, ಕ್ಯಾಮೆರಾಗಳು, ಅಗತ್ಯ ಸಿಬ್ಬಂದಿ ಮೂಲಕ ಒಂದು ಯುಟ್ಯೂಬ್ ಚಾನೆಲ್ ಶುರುವಾಯ್ತು. ಇಷ್ಟೆಲ್ಲಾ ಆಗಿದ್ದು, ಆತ್ಮೀಯ ಗೆಳೆಯರ ಸಹಕಾರ, ಪ್ರೋತ್ಸಾಹ ಮತ್ತು ನಮ್ಮೊಳಗಿದ್ದ ಆತ್ಮವಿಶ್ವಾಸ. ಮಿತ್ರರು ಹಾಗು ಉದ್ಯಮಿ ಪಿ. ಕೃಷ್ಣ ಅವರು ನಮ್ಮೊಂದಿಗೆ ಸಾಥ್‌ ಕೊಟ್ಟರು. ಹಾಗಾಗಿ ಯುಟ್ಯೂಬ್‌ ಚಾನೆಲ್‌ ಯಾವುದೇ ಅಡೆತಡೆಗಳಿಲ್ಲದೆ ಶುರುವಾಯ್ತು.

ನಾವಿಬ್ಬರು ಸೇರಿ ಶುರು ಮಾಡಿದ ಸಿನಿಲಹರಿಗೆ ಪ್ರೀತಿಯ ಹಾರೈಕೆಗಳು ಅಪ್ಪಳಿಸಿದವು. ಸಿನಿಲಹರಿ ಸಂಸ್ಥೆ ಕೊರೊನಾ ಹೊಡೆತಕ್ಕೆ ಮುಗ್ಗರಿಸಿತಾದರೂ, ನಾವು ಅದನ್ನು ನಿಲ್ಲಲು ಬಿಡಲಿಲ್ಲ. ಎಲ್ಲರಿಗೂ ಆದಂತೆ ನಮಗೂ ಒಂದಷ್ಟು ಸಮಸ್ಯೆಗಳು ಎದುರಾದವು. ಅದನ್ನು ಮೆಟ್ಟಿ ನಿಂತೆವು. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದುದರಿಂದಲೇ ಸಿನಿಲಹರಿ ಯುಟ್ಯೂಬ್‌ ಚಾನೆಲ್‌ ಯಶಸ್ವಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ.

ಚಿತ್ರೋದ್ಯಮಕ್ಕಾಗಿಯೇ ಶುರುವಾದ ಸಿನಿಲಹರಿ, ಚಿತ್ರರಂಗ ಒಪ್ಪುವ ಮತ್ತು ಅಪ್ಪುವಂತೆ ಕೆಲಸ ಮಾಡಿಕೊಂಡು ಹೋಗಬೇಕೆನ್ನುವ ಧ್ಯೇಯವಿದೆ. ಅದೇ ಹಾದಿಯಲ್ಲಿ ಸಾಗುತ್ತಿದೆ. ಸಿನಿ‌ಲಹರಿ ಅಂದರೆ ಒಂದಷ್ಟು ನಂಬಿಕೆ ಹುಟ್ಟ ಬೇಕೆನ್ನುವ ಹಾಗೆ ವೃತ್ತಿಯನ್ನು ಪ್ರದರ್ಶಿಸೋಣ ಅನ್ನೋದು ನಮ್ಮ ಆಸೆ. ಇದೆಲ್ಲ ಕೈ ಗೂಡಬೇಕಾದರೆ, ನೀವುಗಳೇ ಮುಖ್ಯ. ನಿಮ್ಮ ಬೆಂಬಲ ನಮಗೆ ಸದಾ ಇರಬೇಕು.


ಕೊನೆಯ ಮಾತು: ಪ್ರತಿಯೊಬ್ಬರ ಬದುಕಿನ ಸಾಹಸಗಳು ಸುಮ್ಮನೆ ಶುರುವಾಗೋದಿಲ್ಲ. ‌ಅವುಗಳ ಹಿಂದೆ ಹುಮ್ಮಸ್ಸು ಇರುತ್ತೆ, ಛಲ ಇರುತ್ತೆ, ದರ್ದು ಇರುತ್ತೆ ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಅಲ್ಲಿ ನೋವು, ಅವಮಾನಗಳು ಇರುತ್ತವೆ. ಸಿನಿ‌ಲಹರಿ ಆರಂಭವೂ ಕೂಡ ಇದರಿಂದ ಹೊರತಲ್ಲ.

ವಿಜಯ್ ಭರಮಸಾಗರ, ದೇಶಾದ್ರಿ ಹೊಸ್ಮನೆ

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಆರ್‌ಆರ್‌ಆರ್ ಪ್ರಮೋಷನ್‌ಗೆ ರಾಜಮೌಳಿ ಸಜ್ಜು; ಮಾರ್ಚ್ 14ಕ್ಕೆ ಎತ್ತುವ ಜಂಡಾ ಎಂಬ ಮತ್ತೊಂದು ಹಾಡು ರಿಲೀಸ್…

ಎಸ್.ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆರ್ ಆರ್ ಆರ್’ ಸಿನಿಮಾ‌ ನೋಡಲು ಚಿತ್ರಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಬಾಹುಬಲಿ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. ಜೂ.ಎನ್. ಟಿ.ಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಾಗಲೇ ತ್ರಿಬಲ್ ಆರ್ ಸಿನಿಮಾ ಬೆಳ್ಳಿಪರದೆ ಮೇಲೆ ರಾರಾಜಿಸಬೇಕಿತ್ತು. ಆದರೆ ಕೊರೋನಾ ಕಾರಣದಿಂದ ರಿಲೀಸ್ ದಿನಾಂಕ ಮುಂದೂಡಲಾಗಿತ್ತು. ಹೀಗಾಗಿ ಎರಡು ಮುಹೂರ್ತ ಅನೌನ್ಸ್ ಮಾಡಿದ್ದ ರಾಜಮೌಳಿ, ಆ ಎರಡು ದಿನಗಳನ್ನು ಬಿಟ್ಟು ಮಾರ್ಚ್ 25ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಾಗಿ ಅನೌನ್ಸ್ ಮಾಡಿದ್ದಾರೆ. ಹೊಸ ದಿನಾಂಕ ಘೋಷಣೆ ಬಳಿ ರಾಜ್‌ಮೌಳಿ ಟೀಂ ಪ್ರಮೋಷನ್ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ಮತ್ತೆ ಪ್ರಮೋಷನ್ ಕಹಳೆ ಮೊಳಗಿಸಲು ಆರ್ ಆರ್ ಆರ್ ಟೀಂ ಸಜ್ಜಾಗಿದೆ.

ಮಾರ್ಚ್ 14ಕ್ಕೆ ಎತ್ತುವ ಜಂಡಾ ಸಾಂಗ್ ರಿಲೀಸ್

ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ದೋಸ್ತಿ, ಹಳ್ಳಿನಾಟು ಹಾಡುಗಳು ಸಿನಿಮಾ ಮೇಲಿನ ಕ್ರೇಜ್ ಹೆಚ್ಚಿಸಿದ್ದವು. ಇದೀಗ ತ್ರಿಬಲ್ ಆರ್ ಅಂಗಳದಿಂದ ಮತ್ತೊಂದು ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 14ನೇ ರಂದು “ಎತ್ತುವ ಜಂಡಾ” ಹಾಡು ರಿಲೀಸ್ ಮಾಡುವ ಮೂಲಕ ಆರ್ ಆರ್ ಆರ್ ಸಿನಿಮಾದ ಪ್ರಚಾರಕ್ಕೆ ಮತ್ತೆ ರಾಜಮೌಳಿ ಕಹಳೆ ಮೊಳಗಿಸಲಿದ್ದಾರೆ.

ಡಿವಿವಿ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಆರ್ ಆರ್ ಆರ್ ಸಿನಿಮಾಗೆ, ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ ‘ಆರ್‌ಆರ್‌ಆರ್‌’ ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಮಾರ್ಚ್ 25ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿತರಣೆ ಹಾಗೂ ನಿರ್ಮಾಣದ ಪ್ರತಿಷ್ಠಿತ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೌಸ್, ಆರ್ ಆರ್ ಆರ್ ಸಿನಿಮಾವನ್ನು ಕರ್ನಾಟಕಲ್ಲಿ ಹಂಚಿಕೆ ಮಾಡಲಿದೆ.

Categories
ಸಿನಿ ಸುದ್ದಿ

ಆಸ್ಕರ್‌ ಕೃಷ್ಣ ಹೊಸ ಚಿತ್ರ; ಮಾರ್ಚ್‌ 14ರಂದು ಶೀರ್ಷಿಕೆ ಅನಾವರಣ

ಇತ್ತೀಚೆಗೆ ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ ಸಿನಿಮಾ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಮತ್ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮಾರ್ಚ್‌ 14 ರಂದು ಅವರು ತಮ್ಮ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ. ಅಂದಹಾಗೆ, ಮಾರ್ಚ್‌ 14 ಅವರ ಬರ್ತ್‌ ಡೇ. ಸೋ ಅಂದೇ ಅವರು ಹೊಸ ಚಿತ್ರ ಅನೌನ್ಸ್‌ ಮಾಡುತ್ತಿದ್ದಾರೆ

ನಟ‌, ನಿರ್ದೇಶಕ ಕಮ್ ನಿರ್ಮಾಪಕ ಆಸ್ಕರ್ ಕೃಷ್ಣ‌ ಹೊಸದೊಂದು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಆ ವಿಷಯವನ್ನು ಮಾರ್ಚ್ 14ರಂದು ಹೇಳಲಿದ್ದಾರೆ, ಆ ದಿನ ಆಸ್ಕರ್‌ ಕೃಷ್ಣ ಅವರ ಹುಟ್ಟು ಹಬ್ಬ. ಹಾಗಾಗಿ ಅವರು ತಮ್ಮ ಮುಂದಿನ ಚಿತ್ರದ “ಶೀರ್ಷಿಕೆ” ಬಿಡುಗಡೆಗೊಳಿಸಲಿದ್ದಾರೆ.
ಈ ಹಿಂದೆ ” ಆಸ್ಕರ್”, “ಮಿಸ್ ಮಲ್ಲಿಗೆ”, ” ಮೋನಿಕಾ ಈಸ್ ಮಿಸ್ಸಿಂಗ್”, “ಮನಸಿನ ಮರೆಯಲಿ” ಹಾಗೂ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

ಇತ್ತೀಚೆಗಷ್ಟೇ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಸಿನಿಮಾ ನಿರ್ದೇಶಿಸಿದ್ದರು. ಜೊತೆಗೆ ಆ ಚಿತ್ರದಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಮುಂದೆ ಒಂದು ಚಿತ್ರ ಮಾಡುವುದಾಗಿ ಹೇಳಿದ್ದರು. ಆದರೆ, ಯಾವ ಸಿನಿಮಾ ಅಂತ ಘೋಷಣೆ ಮಾಡಿರಲಿಲ್ಲ. ಮಾರ್ಚ್ 14ರಂದು‌ ಹೊಸ ಸಿನಿಮಾದ ಶೀರ್ಷಿಕೆ ಬಗ್ಗೆ ಹೇಳಲಿದ್ದಾರೆ.
ತಮ್ಮ‌ ಮುಂದಿನ ಚಿತ್ರವನ್ನು ಆಸ್ಕರ್ ಕೃಷ್ಣ ಅವರೇ ನಿರ್ಮಿಸಿ, ನಿರ್ದೇಶಿಸುತ್ತಿರುವುದರ ಜೊತೆಗೆ ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ನಾಯಕ ನಟನಾಗಿ ಇದು ಅವರಿಗೆ ಎರಡನೇ ಚಿತ್ರ.
ಗೌತಮ್ ರಾಮಚಂದ್ರ ಎಂಬುವವರು ಈ ಚಿತ್ರದ ಮೂಲಕ ಸಹ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಆಸ್ಕರ್ ಕೃಷ್ಣ ಅವರ ಜೊತೆ ಹಲವು ವರ್ಷಗಳಿಂದ ಒಡನಾಟದಲ್ಲಿರುವ ಗೌತಮ್ ರಾಮಚಂದ್ರ ರವರು‌ ಸಾಫ್ಟ್ ವೇರ್ ಉದ್ಯೋಗಿ. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಆಸ್ಕರ್ ಕೃಷ್ಣ ಅವರ ಜೊತೆ ಸೇರಿ ನಿರ್ಮಾಣಕ್ಕಿಳಿದಿರುವ ಇವರಿಗೆ ಮುಂದೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಿಸುವ ಆಸೆ.

Categories
ಸಿನಿ ಸುದ್ದಿ

ಕನ್ನಡದಲ್ಲಿ ಗಟ್ಟಿನೆಲೆ ಕಾಣುವಾಸೆ; ರಜನಿ ಎಂಬ ಪ್ರತಿಭೆಯ ಮನದಾಳದ ಮಾತು…

ಕನ್ನಡದಲ್ಲಿ ದಿನ ಕಳೆದಂತೆ ಹೊಸ ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಇಲ್ಲಿ ನೂರಾರು ಆಸೆ-ಆಕಾಂಕ್ಷೆ ಹೊತ್ತು ಬರುವ ಪ್ರತಿಭಾವಂತರಿಗೇನೂ ಕಮ್ಮಿ ಇಲ್ಲ. ಅದೆಷ್ಟೋ ಪ್ರತಿಭೆಗಳು ಇಲ್ಲಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಆ ಸಾಲಿಗೆ ಈಗ ಹೊಸ ಪ್ರತಿಭೆಯೊಂದು ಸೇರಿದೆ. ಹೌದು, ರಜನಿ ಎಂಬ ನಟಿ ಈಗ ಕನ್ನಡದಲ್ಲಿ ಗಟ್ಟಿ ನೆಲೆ ಕಾಣಬೇಕು ಎಂಬ ಕನಸು ಹೊತ್ತು ಬಂದಿದ್ದಾರೆ. ಆ ನಿಟ್ಟಿನಲ್ಲೀಗ ಒಂದಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಸಿಕ್ಕಿದೆ. ಅಂದಹಾಗೆ, ಯಾರು ಈ ರಜನಿ? ಎಲ್ಲಿಯವರು? ಅವರ ಹಿನ್ನೆಲೆ ಏನು ಇತ್ಯಾದಿ ಕುರಿತು ಒಂದು ರೌಂಡಪ್…‌

ರಜನಿ ಈಗಷ್ಟೇ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿರುವ ಬೆಡಗಿ. ಈ ಹುಡುಗಿಗೆ ತಾನೊಬ್ಬ ನಟಿ ಅನ್ನುವುದಕ್ಕಿಂತ ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆಂಬ ಬಯಕೆ. ಈವರೆಗೆ ಈ ಹುಡುಗಿ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. “ರೂಮ್‌ ಬಾಯ್”‌, “ಓಟ” ಮತ್ತು “ಒಂದಕ್ಕೆ ಮೂರು” ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ “ಓಟ” ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತಯಾರಾಗುತ್ತಿದೆ. ತಮ್ಮ ಸಿನಿಮಾ ಎಂಟ್ರಿ ಕುರಿತು ರಜನಿ ಹೇಳುವುದಿಷ್ಟು.

“ನಾನು ಮೂಲತಃ ಬೆಂಗಳೂರಿನವಳು. ಬಯೋಕೆಮಿಸ್ಟ್ರಿ ಓದಿದ್ದೇನೆ. ಸಿನಿಮಾ ಮೇಲೆ ಇನ್ನಿಲ್ಲದ ಒಲವಿತ್ತು. ಆದರೆ, ಸಿನಿಮಾಗೆ ಹೇಗೆ ಹೋಗಬೇಕೆಂಬುದು ಗೊತ್ತಿರಲಿಲ್ಲ. ಸಿನಿಮಾ ನೋಡುವ ಅಭ್ಯಾಸ ಹೆಚ್ಚಾಗಿತ್ತು. ಒಮ್ಮೆ ನನ್ನ ಇನ್‌ಸ್ಟಾಗ್ರಾಂನಲ್ಲಿ ಒಂದು ಫೋಟೋ ಪೋಸ್ಟ್‌ ಮಾಡಿದ್ದೆ. ಅದನ್ನು ನೋಡಿಯೇ ನನಗೆ ಸಿನಿಮಾಗೆ ಬರಲು ದಾರಿಯಾಯ್ತು. ಮೊದ ಮೊದಲು ಸಿನಿಮಾಗೆ ಹೇಗಪ್ಪಾ ಹೋಗೋದು ಅಂತ ಯೋಚಿಸುತ್ತಿದ್ದೆ. ಒಂದು ಫೋಟೋ ನನನ್ನು ಸಿನಿಮಾಗೆ ಎಂಟ್ರಿಯಾಗಲು ಅವಕಾಶ ಸಿಕ್ತುʼ ಎಂದು ಹೇಳುತ್ತಾರೆ ರಜನಿ.

ನಾನು ಯಾವ ನಟನಾ ತರಬೇತಿ ಪಡೆದಿಲ್ಲ. ಆದರೆ, ಸಿನಿಮಾಗಳನ್ನು ನೋಡಿ, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಬೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಗೆಳೆಯರ ಮೂಲಕವೂ ಒಂದಷ್ಟು ಪ್ರಾಜೆಕ್ಟ್‌ಗಳು ಸಿಗುತ್ತಿವೆ. ಸಿನಿಮಾ ಮೇಲೆ ಅತಿಯಾದ ಪ್ರೀತಿ ಇದ್ದುದರಿಂದ ಹೇಗಾದರೂ ಮಾಡಿ ಎಂಟ್ರಿಕೊಡಬೇಕು ಅಂದುಕೊಳ್ಳುತ್ತಿರುವಾಗಲೇ, ನನ್ನದ್ದೊಂದು ಫೋಟೋ ಪೋಸ್ಟ್‌ನಿಂದಾಗಿ ನಾನು ಸಿನಿಮಾರಂಗ ಪ್ರವೇಶ ಮಾಡುವಂತಾಯ್ತು. ಸದ್ಯ ನನಗೆ ಸಿಕ್ಕ ಮೂರು ಪ್ರಾಜೆಕ್ಟ್‌ಗಳಲ್ಲೂ ಒಳ್ಳೆಯ ಪಾತ್ರಗಳಿವೆ. ರೂಮ್‌ ಬಾಯ್‌ ಸಿನಿಮಾ ವಿಶೇಷ ಪ್ರಯೋಗಾತ್ಮಕ ಸಿನಿಮಾ.

ಕಮರ್ಷಿಯಲ್‌ ಅಂಶಗಳೊಂದಿಗೆ ವಿಭಿನ್ನ ಕಥಾಹಂದರ ಹೊಂದಿದೆ. ಇನ್ನು ತಮಿಳು ಹಾಗು ಕನ್ನಡದಲ್ಲಿ ತಯಾರಾಗುತ್ತಿರುವ ಓಟ ಸಿನಿಮಾ ಕೂಡ ವಿಶೇಷತೆ ಹೊಂದಿದೆ. ಆ ಚಿತ್ರದಲ್ಲಿ ನಾನು ನೆಗೆಟಿವ್‌ ಪಾತ್ರ ಮಾಡಿದ್ದೇನೆ. ಇನ್ನು ಒಂದಕ್ಕೆ ಮೂರು ಸಿನಿಮಾದಲ್ಲಿ ಲೀಡ್‌ ರೋಲ್‌ ಇದೆ. ಒಂದಷ್ಟು ಹೊಸ ಸಿನಿಮಾಗಳ ಜೊತೆ ಮಾತುಕತೆ ನಡೆಯುತ್ತಿದೆ. ಇದಕ್ಕೂ ಮುನ್ನ ಹಲವು ಕಿರುಚಿತ್ರಗಳಲ್ಲೂ ನಟಿಸಿದ್ದೇನೆ. ಅವೆಲ್ಲವೂ ಸಿನಿಮಾಗಳಿಗೆ ಈಗ ಸಹಕಾರಿಯಾಗಿವೆ ಎನ್ನುತ್ತಾರೆ ರಜನಿ.

ನನಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವಾಸೆ. ಅದರಲ್ಲೂ ಚಾಲೆಂಜಿಂಗ್‌ ಪಾತ್ರಗಳು ನನಗಿಷ್ಟ. ಮಹಿಳಾ ಪ್ರಧಾನ ಕಥೆ ಇರುವ ಚಿತ್ರಗಳಲ್ಲಿ ನಟಿಸುವ ಆಸೆ ಇದೆ. ಅಂಥದ್ದೊಂದು ಅವಕಾಶವನ್ನು ಎದುರು ನೋಡುತ್ತಿದ್ದೇನೆ. ಯಾವುದೇ ಪಾತ್ರವಿರಲಿ, ನನಗೆ ಅದು ಗುರುತಿಸುವಂತಿರಬೇಕಷ್ಟೇ. ಸಿನಿಮಾ ಅನ್ನೋದು ಗ್ಲಾಮರಸ್‌ ಲೋಕ.

ಹಾಗಾಗಿ ನಾನು ಗ್ಲಾಮರ್‌ ಇರುವಂತಹ ಪಾತ್ರವನ್ನೂ ಮಾಡುತ್ತೇನೆ. ಹಾಗಂತ, ಅದು ವಲ್ಗರ್‌ ಆಗಿರಬಾರದು. ಒಳ್ಳೆಯ ಕಥೆ, ಪಾತ್ರವಿದ್ದರೆ, ನಾನು ನಿರ್ವಹಿಸಲು ರೆಡಿ. ಒಟ್ಟಾರೆ, ಸಿನಿಮಾದಲ್ಲಿ ಗಟ್ಟಿ ನೆಲೆ ಕಾಣುವ ಆಸೆ ಇದೆ. ಅದಕ್ಕಾಗಿ ನಾನೀಗ ಹೊಸ ಪ್ರಯೋಗಾತ್ಮಕ ಸಿನಿಮಾಗಳ ಜೊತೆ ಜೊತೆಯಲ್ಲಿ ವಿಭಿನ್ನ ಕಥೆ ಇರುವ ಸಿನಿಮಾಗಳಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ರಜನಿ.

Categories
ಸಿನಿ ಸುದ್ದಿ

ಪವರ್‌ ಬರ್ತ್‌ಡೇಗೆ ಫ್ಯಾನ್ಸ್‌ ಪುನೀತ! ಮಾರ್ಚ್‌ 17ಕ್ಕೆ ಜೇಮ್ಸ್‌ ಗ್ರ್ಯಾಂಡ್‌ ರಿಲೀಸ್ ; ನಾಲ್ಕು ದಿನ-100 ಕೋಟಿ ಲೆಕ್ಕ ಪಕ್ಕಾ!!

ಮಾರ್ಚ್‌ 17… ಈ ದಿನಕ್ಕಾಗಿ ಇಡೀ ಕರುನಾಡೇ ಕಾಯುತ್ತಿದೆ… ಅದಕ್ಕೆ ಕಾರಣ ಅಂದು ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಹುಟ್ಟುಹಬ್ಬ. ಹೌದು. ಅಂದು ಅವರ ಫ್ಯಾನ್ಸ್‌ ಸೇರಿದಂತೆ ಕನ್ನಡಿಗರಿಗೆ ಡಬಲ್‌ ಧಮಾಕ. ಪುನೀತ್‌ ಇಲ್ಲ ಎಂಬ ಭಾವನೆ ಈಗ ಯಾರಲ್ಲೂ ಇಲ್ಲ. ಹಾಗಾಗಿ, ಅವರ ಬಹುನಿರೀಕ್ಷಿತ ಸಿನಿಮಾ ಜೇಮ್ಸ್‌ ಚಿತ್ರ ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗುತ್ತಿದೆ. ಆ ಚಿತ್ರವನ್ನು ಅದ್ಧೂರಿಯಾಗಿಯೇ ಸ್ವಾಗತಿಸಲು ಕನ್ನಡ ಚಿತ್ರರಂಗ ಕೂಡ ಸಜ್ಜಾಗಿದೆ. ಜೇಮ್ಸ್‌ ರಿಲೀಸ್‌ ಆಗುತ್ತಿದೆ ಅನ್ನುವ ವಿಷಯವೇ ಅದೊಂದು ಹಬ್ಬ. ಪುನೀತ್‌ ರಾಜ್‌ಕುಮಾರ್ ಅಭಿನಯದ ಕೊನೆ ಸಿನಿಮಾ ಆಗಿರುವುದರಿಂದ ಅದಕ್ಕೆ ಕೋಟ್ಯಾಂತರ ಕನ್ನಡಿಗರು ಸಿನಿಮಾ ನೋಡುವ ಕಾತುರದಲ್ಲಿದ್ದಾರೆ. ‘ಜೇಮ್ಸ್’ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಚಿತ್ರ ರಿಲೀಸ್‌ ಆಗುತ್ತಿದೆ ಎಂಬ ಒಂದೇ ಒಂದು ಕಾರಣಕ್ಕೆ ಅಂದು ಬೇರೆ ಯಾವುದೇ ಸಿನಿಮಾಗಳೂ ರಿಲೀಸ್‌ ಆಗುತ್ತಿಲ್ಲ. ಹಾಗಾಗಿಯೇ ಆ ಒಂದು ವಾರ ಜೇಮ್ಸ್‌ ಜಾತ್ರೆ ಜೋರು…

ಬಹುಶಃ ‘ಜೇಮ್ಸ್’ ಚಿತ್ರದ ಸಂಭ್ರಮಕ್ಕೆ ಒಂದುವಾರ ಸಾಕಾಗುವುದಿಲ್ಲ ಬಿಡಿ. ಅಷ್ಟರ ಮಟ್ಟಿಗೆ ಚಿತ್ರದ ಬಗ್ಗೆ ಸಿಕ್ಕಾ ಪಟ್ಟೆ ಕ್ರೇಜ್ ಹುಟ್ಟುಕೊಂಡಿದೆ. ಈ ಚಿತ್ರದ ಮೂಲಕ ಮತ್ತೆ ನಗುಮೊಗದ ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು ನೋಡಿ ಪುನೀತರಾಗಲು ಸಜ್ಜಾಗುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರ ಬಿಡುಗಡೆಯ ವಿಷಯದಲ್ಲಿ ದಾಖಲೆ ಬರೆಯುತ್ತಿದೆ. ‘ಜೇಮ್ಸ್’ ಚಿತ್ರಕ್ಕೆ ಸಿನಿಮಾ ಮಂದಿ ಹಾಗು ನೋಡುಗರು ಸಹ ದಾರಿ ಮಾಡಿ ಕೊಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಮೇಲಿನ ಪ್ರೀತಿ, ಅಭಿಮಾನಕ್ಕೆ ಅಂದು ಬೇರೆ ಯಾವ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಕರ್ನಾಟಕದಲ್ಲಿ ಆ ವಾರ ‘ಜೇಮ್ಸ್’ ಬಿಟ್ಟು ಬೇರೆ ಯಾವ ಚಿತ್ರ ಬರುತ್ತಿಲ್ಲ. ಒಂದು ವೇಳೆ ಪರಭಾಷೆ ಸಿನಿಮಾಗಳು ರಿಲೀಸ್ ಆದರೂ, ಕರ್ನಾಟಕದಲ್ಲಿ ಆ ಚಿತ್ರಗಳಿಗೆ ಹೆಚ್ಚು ಪ್ರಾಶಸ್ತ್ಯ ಇರೋದಿಲ್ಲ ಬಿಡಿ.

‘ಜೇಮ್ಸ್’ ಈಗ ಎಲ್ಲರಿಗೂ ವಿಶೇಷ ಮತ್ತು ಪ್ರೀತಿಯ ಸಿನಿಮಾ. ಯಾಕೆಂದರೆ ‘ಜೇಮ್ಸ್’ ಸಿನಿಮಾ ಜೊತೆಗೆ ಬೇರೆ ಯಾವ ಸಿನಿಮಾ ಬರುತ್ತಿಲ್ಲ. ಬಹುತೇಕ ಚಿತ್ರಮಂದಿರಗಳಲ್ಲೂ ‘ಜೇಮ್ಸ್’ ರಾರಾಜಿಸುತ್ತದೆ. ಹಾಗಾಗಿ ‘ಜೇಮ್ಸ್’ ಗಳಿಕೆಯಲ್ಲೂ ಕೂಡ ಹೊಸ ದಾಖಲೆ ಬರೆಯೋದು ಗ್ಯಾರಂಟಿ ಎಂಬ ಮಾತುಗಳು ಗಾಂಧಿನಗರದಲ್ಲಿ ಗುನುಗುತ್ತಿದೆ. ಹೌದು ‘ಜೇಮ್ಸ್’ ಸಿನಿಮಾ ನೋಡಲು ಸಣ್ಣ ಮಕ್ಕಳಿಂದ ಹಿಡಿದು, ವಯಸ್ಸಾದವರೂ ಎದುರು ನೋಡುತ್ತಿದ್ದಾರೆ. ಅದರಲ್ಲೂ ಪುನೀತ್‌ ಅವರಿಗೆ ಫ್ಯಾಮಿಲಿ ಆಡಿಯನ್ಸ್‌ ಹೇರಳವಾಗಿದ್ದಾರೆ. ಮೊದಲ ವಾರದಲ್ಲೇ ಜೇಮ್ಸ್‌ 100 ಕೋಟಿ ಗಳಿಕೆ ಮಾಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೊದಲ ನಾಲ್ಕೇ ದಿನದಲ್ಲಿ ‘ಜೇಮ್ಸ್’ 100 ಕೋಟಿಯತ್ತ ಸಾಗುತ್ತೆ ಎಂದು ಅಂದಾಜಿಸಲಾಗುತ್ತಿದೆ.

ಪುನೀತ್‌ ಸಿನಿಮಾ ಅಂದರೆ, ಅದು ಕೇವಲ ಕರುನಾಡಿಗೆ ಮಾತ್ರ ಸೀಮಿತವಲ್ಲ. ಪರ ರಾಜ್ಯ ಸೇರಿದಂತೆ ವಿದೇಶಗಳಲ್ಲೂ ಅವರ ಸಿನಿಮಾಗಳ ಅಬ್ಬರ ಜೋರು. ಹೀಗಾಗಿ ‘ಜೇಮ್ಸ್’ ಕೂಡ ವಿದೇಶದಲ್ಲಿ ಜೋರಾಗಿಯೇ ರಾರಾಜಿಸಲಿದೆ. ಈಗಾಗಲೇ ‘ಜೇಮ್ಸ್’ ರಿಲೀಸ್ ಆಗುತ್ತಿರುವ ಚಿತ್ರಮಂದಿರಗಳ ಪಟ್ಟಿ ಕೂಡ ಬಿಡುಗಡೆಯಾಗಿದೆ. ಕೆನಡ, ನೆದರ್‌ಲ್ಯಾಂಡ್‌ನಲ್ಲಿ’ಜೇಮ್ಸ್’ ತೆರೆಕಾಣಲಿದೆ ಎನ್ನುವ ಪಟ್ಟಿ ಬಿಡುಗಡೆಯಾಗಿದೆ. ಅಪ್ಪುಗೆ ವಿಶ್ವಾದ್ಯಂತ ಅಭಿಮಾನಿಗಳು ಇರುವ ಕಾರಣ, ವಿದೇಶಗಳಲ್ಲೂ ಕೂಡ ‘ಜೇಮ್ಸ್’ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಅಪ್ಪು ಅವರನ್ನು ಜೇಮ್ಸ್‌ ಮೂಲಕ ಅಪ್ಪಿಕೊಳ್ಳಲು ಇಡೀ ಕರುನಾಡೇ ಸಜ್ಜಾಗಿರೋದಂತು ನಿಜ.
ಇನ್ನು, ಜೇಮ್ಸ್ ಚಿತ್ರ ಸುಮಾರು 4 ಸಾವಿರ ಪರದೆಗಳಲ್ಲಿ ರಾರಾಜಿಸಲಿದೆ ಎಂಬ ಮಾತಿದೆ. ಚಿತ್ರಕ್ಕೆ ಸಿಕ್ಕಿರುವ ಚಿತ್ರ ಮಂದಿರಗಳ ಸಂಖ್ಯೆ, ದಿನಗಳ ಲೆಕ್ಕಚಾರ ನೋಡಿದರೆ, ಜೇಮ್ಸ್ ಗಳಿಕೆ ವಿಚಾರದಲ್ಲೂ ಹೊಸದೊಂದು ದಾಖಲೆ ಬರೆದು ಮೈಲಿಗಲ್ಲು ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ ಬಿಡಿ.

ಎಂಟರ್‌ಟೈನ್‌ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ತ್ರಿಕೋನ ಎಂಬ ವಿಶೇಷ ಸಿನಿಮಾ: ಏಪ್ರಿಲ್‌ 1ಕ್ಕೆ ರಿಲೀಸ್- ಸುಚೇಂದ್ರ ಪ್ರಸಾದ್‌ ಚಿತ್ರದ ರಾಯಭಾರಿ !

ಕೊರೊನಾ ಹಾವಳಿ ಕಡಿಮೆಯಾದ ಬಳಿಕ ಕನ್ನಡ ಚಿತ್ರರಂಗ ಮೆಲ್ಲನೆ ರಂಗೇರುತ್ತಿದೆ. ಮತ್ತದೇ ವೈಭವಕ್ಕೆ ಮರಳುತ್ತಿದೆ. ಸಾಲು ಸಾಲು ಚಿತ್ರಗಳು ರಿಲೀಸ್‌ಗೆ ರೆಡಿಯಾಗುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ವಿಭಿನ್ನ ಕಥಾಹಂದರ ಹೊಂದಿರುವ “ತ್ರಿಕೋನ” ಸಿನಿಮಾ ಕೂಡ ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ. ಅಂದಹಾಗೆ, ಏಪ್ರಿಲ್ 1ರಂದು ಚಿತ್ರ ಬಿಡುಗಡೆಯಾಗಲಿದೆ.

ಈ ಚಿತ್ರಕ್ಕೆ ಚಂದ್ರಕಾಂತ್‌ ನಿರ್ದೇಶಕರು. ಈ ಹಿಂದೆ ಇವರು 143 ಎಂಬ ವಿಭಿನ್ನ ಎನಿಸುವ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆ ಸಿನಿಮಾ ನಂತರ ನಿರ್ದೇಶಿಸುತ್ತಿರುವ ಚಿತ್ರವಿದು. ಇನ್ನು, ರಾಜಶೇಖರ್ ಈ ಚಿತ್ರದ ನಿರ್ಮಾಪಕರು. ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ತಮ್ಮ ಸಿನಿಮಾ ಕುರಿತು ಹೇಳುವ ನಿರ್ದೇಶಕರು, “ಎಲ್ಲಾ ಮನುಷ್ಯನಲ್ಲೂ ಮನಸ್ಸಿದೆ. ಆ ಮನಸ್ಸನ್ನು ನಾವು ಕ್ರೀಡಾ ಮೈದಾನ ಎನ್ನಬಹುದು. ಏಕೆಂದರೆ ಮನಸ್ಸಿನಲ್ಲಿ ಮೋಸ, ದ್ವೇಷ, ಅಸೂಯೆ, ಸೇಡು, ದುರಾಸೆ ಎಂಬ ಕ್ರೀಡೆಗಳು ನಡೆಯುತ್ತಲೇ ಇರುತ್ತದೆ. ಇದರಲ್ಲಿ ಅಹಂ, ಶಕ್ತಿ ಹಾಗೂ ತಾಳ್ಮೆ ಎಂಬ ಸ್ಪರ್ಧಿಗಳು ಕೂಡ ಇದ್ದಾರೆ. ಈ ಮೂವರಲ್ಲಿ ಗೆಲವು ಯಾರಿಗೆ? ಅನ್ನೋದೇ ಸಿನಿಮಾ ಎಂದು ವಿವರಿಸುತ್ತಾರೆ ನಿರ್ದೇಶಕರು.

ನಿರ್ಮಾಪಕ ರಾಜಶೇಖರ್‌ ಮಾತನಾಡಿ, “ನಾನು ಈ ಹಿಂದೆ ಕೆಲವು ಸಿನಿಮಾಗಳನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಮೊದಲ ಬಾರಿಗೆ ನಿರ್ದೇಶನವನ್ನು ಚಂದ್ರಕಾಂತ್ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ಕಥೆ ನಾನೇ ಬರೆದಿದ್ದೇನೆ. ಬೇರೆ ಚಿತ್ರಗಳನ್ನು ನಿರ್ಮಾಣ ಮಾಡಲಿದ್ದು, ಬೇರೆ ನಿರ್ದೇಶಕರೆ ಚಿತ್ರ ನಿರ್ದೇಶಿಸಲಿದ್ದಾರೆ. ಏಕೆಂದರೆ ಚಂದ್ರಕಾಂತ್ ಸೇರಿದಂತೆ ಬೇರೆ ನಿರ್ದೇಶಕರಿಂದ ನಾನು ಸಾಕಷ್ಟು ತಿಳಿಯುವುದಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಏಪ್ರಿಲ್ 1 ರಂದು ಬಿಡುಗಡೆಯಾಗಲಿದೆ. ಪ್ರಚಾರ ರಾಯಭಾರಿಯಾಗಿ ಖ್ಯಾತ ನಟ ಸುಚೀಂದ್ರ ಪ್ರಸಾದ್ ಅವರು ಇರುವುದು ವಿಶೇಷ. ಭಾಷಾ ಅವರು ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ವಿವರ ಕೊಟ್ಟರು ನಿರ್ಮಾಪಕ ರಾಜಶೇಖರ್.

ಇನ್ನು, ಚಿತ್ರದಲ್ಲಿ ಸುರೇಶ್‌ ಹೆಬ್ಳೀಕರ್‌ ಹೈಲೈಟ್.‌ ಅವರು ತಮ್ಮ ಪಾತ್ರ ಕುರಿತು ಹೇಳಿಕೊಂಡರು. ವಿತರಕ ಭಾಷಾ ಸಿನಿಮಾ ವಿತರಣೆ ಬಗ್ಗೆ ಮಾತಾಡಿದರು. ನಾನು ಹಾಗೂ ನಿರ್ಮಾಪಕ ರಾಜಶೇಖರ್ ಸಹಪಾಠಿಗಳು. ತ್ರಿಕೋನ ಚಿತ್ರದ ರಾಯಭಾರಿಯಾಗಲು ಕೇಳಿದರು.
ಚಿತ್ರ ನೋಡಿದೆ. ಚೆನ್ನಾಗಿದೆ. ರಾಯಭಾರಿಯಾಗಲು ಒಪ್ಪಿದ್ದೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದರು ನಟ ಸುಚೀಂದ್ರ ಪ್ರಸಾದ್.

ಚಿತ್ರದಲ್ಲಿ ನಟಿಸಿರುವ ರಾಜವೀರ್ ಹಾಗೂ ಮಾರುತೇಶ್ ಪಾತ್ರ ಪರಿಚಯ ಮಾಡಿಕೊಟ್ಟರು. ಪೊಲೀಸ್ ಪ್ರಕಿ ಪ್ರೊಡಕ್ಷನ್ ಲಾಂಛನದಲ್ಲಿ ರಾಜಶೇಖರ್ ನಿರ್ಮಿಸಿರುವ ಈ ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತವಿದೆ. ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣವಿದೆ.

ಚಿತ್ರದಲ್ಲಿ ಲಕ್ಷ್ಮೀ, ಅಚ್ಯುತಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಾರುತೇಶ್, ರಾಜವೀರ್, ಬೇಬಿ ಅದಿತಿ, ಬೇಬಿ ಹಾಸಿನಿ, ಮನದೀಪ್ ರಾಯ್, ರಾಕ್ ಲೈನ್ ಸುಧಾಕರ್‌ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಆಟಿಸಂ ಸಮಸ್ಯೆ ವಿವರಿಸುವ ಕನ್ನಡದ ಫಸ್ಟ್ ಸಿನಿಮಾ; ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಸಾರಥ್ಯದಲ್ಲಿ ವರ್ಣಪಟಲ…

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ ‘ವರ್ಣಪಟಲ’ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವರ್ಲ್ಡ್ ಪ್ರೀಮಿಯರ್ ಫಿಲ್ಮ್‌ ಪ್ರಶಸ್ತಿ, ಲಂಡನ್ ಇಂಡಿಪೆಂಡೆಂಟ್‌ ಫಿಲ್ಮ್ ಅವಾರ್ಡ್‌ನಲ್ಲಿ ಬೆಸ್ಟ್ ಫಾರಿನ್ ಫೀಚರ್ ಫಿಲ್ಮ್ ಪ್ರಶಸ್ತಿ ಜೊತೆಗೆ ಹಲವು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ನೈಜ‌ ಘಟನೆ ಆಧರಿತ ವರ್ಣಪಟಲ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಎಲ್ಲರ ಅಮ್ಮಂದಿರ ಥರ ನಾನು ಅಮ್ಮ ಅಲ್ಲ.. ಎಲ್ಲರ ಮಕ್ಕಳಂತೆ ನನ್ನ ಮಗಳಲ್ಲ .. ಎಂಬ ಡೈಲಾಗ್ ನಿಂದ ಶುರುವಾಗುವ ಟ್ರೇಲರ್ ನಲ್ಲಿ ಪ್ರೀತಿ, ಮಮತೆ, ನೋವು ಎಲ್ಲವನ್ನು ಒಳಗೊಂಡಿದೆ.


ನಿತ್ಯ ತಾನು ಪ್ರೀತಿಸಿದ ಹುಡುಗ ಮೈಕಲ್ ನನ್ನು ಮದುವೆ ಆಗ್ತಾಳೆ . ಮದುವೆ ಬಳಿಕ ಹೆಣ್ಣು ಮಗುವಿಗೆ ನಿತ್ಯ ತಾಯಿ ಆಗ್ತಾಳೆ. ಆ ಮಗುವೇ ಮೈನಾ. ಆದ್ರೆ ಎಲ್ಲಾ ಸರಿಯಿದ್ದ ನಿತ್ಯಾಳ ಬದುಕಲ್ಲಿ ಮೈನಾ ಅನ್ನೋ ಮಗಳಿಂದ ಜೀವನವೇ ಬದಲಾಗಿ ಹೋಗುತ್ತೆ.. ಮೈನಾ ಆಟಿಸಂ ಅನ್ನೋ ಖಾಯಿಲೆಯಿಂದ ಬಳಲುತ್ತಿರುತ್ತಾಳೆ. ಇದರಿಂದ ನಿತ್ಯಾ ಸಾಕಷ್ಟು ತೊಂದರೆ ಅನುಭವಿಸುತ್ತಾಳೆ. ಆ ಖಾಯಿಲೆಯಿಂದ ಮೈನಾಳನ್ನು ನಿತ್ಯಾ ಹೇಗೆ ಹೊರ ತರುತ್ತಾರೆ ಅನ್ನೋದು ಚಿತ್ರಕಥೆ.

ಮಕ್ಕಳನ್ನು ಹೆಚ್ಚಾಗಿ ಕಾಡುವ ಆಟಿಸಂ ಸಮಸ್ಯೆ ಕುರಿತು ನಿರ್ದೇಶಕರು ಬೆಳಕು ಚೆಲ್ಲಿದ್ದಾರೆ. ಜೊತೆಗೆ ತಾಯಿ ಮಗುವಿನ ಬಾಂಧವ್ಯವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ನಿತ್ಯಾ ಪಾತ್ರಕ್ಕೆ ಕಿರುತೆರೆಯ ಖ್ಯಾತ ನಟಿ ಜ್ಯೋತಿ ರೈ ನಾಯಕಿಯಾಗಿ ನಟಿಸಿದ್ದು, ತುಳು ಸಿನಿಮಾಗಳಿಂದ ಖ್ಯಾತಿ ಗಳಿಸಿರುವ ಅನೂಪ್ ಸಾಗರ್ ನಾಯಕನಾಗಿ ನಟಿಸಿದ್ದಾರೆ. ಖ್ಯಾತ ಬಹುಭಾಷಾ ನಟಿ ಸುಹಾಸಿನಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಧನಿಕ ಹೆಗ್ಡೆ, ಚೇತನ್ ರೈ ಮಾಣಿ, ಇಳಾ ವಿಟ್ಲಾ, ಅರವಿಂದ್ ರಾವ್‌ ಹಾಗೂ ಶ್ರೀಕಾಂತ್ ಹೆಬ್ಳಿಕರ್ ಮೊದಲಾದವರು ನಟಿಸಿದ್ದಾರೆ.

ವರ್ಣಪಟಲ ಸಿನಿಮಾದ ಚಿತ್ರಕಥೆ ಹಾಗೂ ನಿರ್ಮಾಣವನ್ನು ಡಾ. ಸರಸ್ವತಿ ಹೊಸದುರ್ಗ, ಕವಿತಾ ಸಂತೋಷ್ ಹೊತ್ತಿದ್ದು. ಈ ಚಿತ್ರಕ್ಕೆ ಕಾರ್ತಿಕ್ ಸರ್ಗೂರು ಸಾಹಿತ್ಯವಿದೆ. ಕಿರುತೆರೆ ನಿರ್ದೇಶಕ ವಿನು ಬಳಂಜ ಸಂಭಾಷಣೆ ಬರೆದಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ದಕ್ಷಿಣ ಕನ್ನಡದ ಮಡಂತ್ಯಾರು, ಮಂಗಳೂರು, ಮಡಿಕೇರಿ, ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.

ಕನ್ನಡದಲ್ಲಿ ಆಟಿಸಂ ಕುರಿತು ತಯಾರಾಗಿರುವ ಮೊದಲ ಸಿನಿಮಾ ವರ್ಣಪಟಲ. ಕಮರ್ಷಿಯಲ್ ಸಿನಿಮಾಗಳ ನಡುವೆ ಕಥೆಯನ್ನೇ ನಾಯಕರನ್ನಾಗಿಸಿ, ಬೇರೆ ಭಾಷೆಗಳ ಕಥೆಗಳ ಜೊತೆಗೆ ಪೈಪೋಟಿ ಕೊಂಡಂತೆ ಇರುವ, ಅಟಿಸಂ ಮಕ್ಕಳ ತಂದೆತಾಯಿಗಳಿಗೆ ಒಂದು ಬಾಹ್ಯ ಬೆಂಬಲವನ್ನು ಕೊಡುವ ಉದ್ದೇಶ ಈ ವರ್ಣಪಟಲ ಸಿನಿಮಾದ ಉದ್ದೇಶವಾಗಿದ್ದು , ಇದು ಎಲ್ಲರ ಗಮನವನ್ನು ಸೆಳೆಯುತ್ತಿದೆ, ಅನ್ನುವುದು ವಿಶೇಷ.

Categories
ಸಿನಿ ಸುದ್ದಿ

ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ಗೆ ಧಾರ್ಮಿಕ ರಂಗು; ಸುತ್ತೂರು ಶ್ರೀಮಠ ಗುರು ಪರಂಪರೆ ಅನಿಮೇಷನ್‌ ಚಿತ್ರ ಪ್ರದರ್ಶನ


ಅಂತಾರಾಷ್ಟ್ರೀಯ ಪಿಯಾಫೆ ಮಾನ್ಯತೆ ಪಡೆದ ಹಿರಿಮೆಯ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಇದೀಗ ಧರ್ಮಗುರುಗಳ ಸಮಕ್ಷಮದ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂತಾರಾಷ್ಟ್ರೀಯ ಚಿತ್ರೋತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರಮುಖ ಧರ್ಮಪೀಠದ ಜಗದ್ಗುರುಗಳು ಸಿನಿಮೋತ್ಸವದಲ್ಲಿ ಭಾಗಿಯಾಗುವ ಮೂಲಕ ಹೊಸಯುಗವೊಂದಕ್ಕೆ ನಾಂದಿ ಹಾಡಿದೆ.
ಮೈಸೂರಿನ ಪ್ರತಿಷ್ಠಿತ ಸುತ್ತೂರು ಶ್ರೀಮಠದ ಸಾವಿರ ವರ್ಷಗಳ ಇತಿಹಾಸವನ್ನು ಕಟ್ಟಿಕೊಟ್ಟಿರುವ `ಸುತ್ತೂರು ಶ್ರೀಮಠ ಗುರು ಪರಂಪರೆ’ ಆನಿಮೇಷನ್‌ ಚಿತ್ರ ಪ್ರದರ್ಶನಕ್ಕೆ ಮಂಗಳವಾರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಕಣ್ಣಾಯಿತು.


ಅಮೆರಿಕ, ಜಪಾನ್‌, ಇಟಲಿಯಲ್ಲಿ ಪ್ರದರ್ಶನಗೊಂಡು ಬಹುಮಾನಗಳಿಗೆ ಸತ್ಪಾತ್ರವಾಗಿರುವ ಈ ವಿಶಿಷ್ಟ ಆನಿಮೇಷನ್‌ ಚಿತ್ರ ಪ್ರದರ್ಶನದಲ್ಲಿ ಸುತ್ತೂರು ಶ್ರೀಮಠದ ಜಗದ್ಗುರು ಶಿವಮೂರ್ತಿ ದೇಶಿಕೇಂದ್ರ ಸಾಮೀಜಿಗಳು, ತುಮಕೂರಿನ ಸಿದ್ಧ ಗಂಗಾ ಮಠದ ಸಿದ್ಧಲಿಂಗ ಶ್ರೀಗಳು ಹಾಗೂ ಬೆಂಗಳೂರಿನ ಹಲವು ಮಠಗಳ ಧಾರ್ಮಿಕ ಗುರುಗಳು ಪಾಲ್ಗೊಂಡು ಚಿತ್ರವೀಕ್ಷಿಸುವ ಮೂಲಕ ಹೊಸ ದಾರಿಗೆ ಮುನ್ನುಡಿ ಬರೆದರು.
ಈ ಸಂದರ್ಭದಲ್ಲಿ ಸುತ್ತೂರಿನ ಶಿವಮೂರ್ತಿ ದೇಶೀಕೇಂದ್ರ ಸಾಮೀಜಿಗಳು ಮಾತನಾಡಿ, ʼಶ್ರೀಮಠದ ಧಾರ್ಮಿಕ ಪರಂಪರೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ತೋರ್ಪಡಿಸುವುದು ಸುಲಭದ ಕೆಲಸವಲ್ಲ. ಅದನ್ನು ನಿರ್ದೇಶಕರಾದಿಯಾಗಿ ಚಿತ್ರತಂಡ ನಾಲ್ಕು ವರ್ಷಗಳ ಸತತ ಪರಿಶ್ರಮದ ಫಲವಾಗಿ ಮಾಡಿಕೊಟ್ಟಿದೆ. ವಿದೇಶಗಳಲ್ಲಿ ಪ್ರದರ್ಶಿತಗೊಂಡು ಪ್ರಶಸ್ತಿಗಳಿಗೆ ಪಾತ್ರವಾದ ಈ ಚಿತ್ರ ಭಾರತದಲ್ಲೇ ಇದೇ ಮೊದಲ ಬಾರಿಗೆ ಅದರಲ್ಲೂ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡಿರುವುದು ಸಂತಸದ ಸಂಗತಿ. ಅದಕ್ಕಾಗಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ ಪುರಾಣಿಕ್‌ ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ತುಮಕೂರು ಸಿದ್ಧಗಂಗಾ ಮಠದ ಶ್ರೀಗಳು ಮಾತನಾಡಿ, ಈ ಆನಿಮೇಷನ್‌ ಚಿತ್ರವು ಕೇವಲ ಸುತ್ತೂರು ಮಠದ ಪರಂಪರೆಯ ಚಿತ್ರಣ ಮಾತ್ರವಾಗಿರದೆ ಕನ್ನಡ ನಾಡಿನ ಶರಣ ಸಂಸ್ಕೃತಿ, ದಾಸೋಹ ಸಂಸ್ಕೃತಿ, ಸಹಬಾಳೆ ಸಂಸ್ಕೃತಿಯ ದರ್ಶನವಾಗಿದೆ. ಯುದ್ಧದ ಕರಿನೆರಳು ಎಲ್ಲರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಶಾಂತಿ, ಸೌಹಾರ್ದತೆ ಸಾರುವ ಇಂತಹ ಚಿತ್ರಗಳು ಹೆಚ್ಚು ಪ್ರದರ್ಶನಗೊಳ್ಳಬೇಕು. ಸುನೀಲ್‌ ಪುರಾಣಿಕ್‌ ಅಂತಹ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು, ಅಂತಾರಾಷ್ಟ್ರೀಯ ಚಿತ್ರೋತ್ಸವ ವೇದಿಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.


ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ ಪುರಾಣಿಕ್‌ ಮಾತನಾಡಿ, ಚಿತ್ರೋತ್ಸವಕ್ಕೆ ಹೊಸದೊಂದು ಆಯಾಮ ಸಿಕ್ಕಂತಾಗಿದ್ದು ಇದು ಇತಿಹಾಸದಲ್ಲೇ ಮೊದಲೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಚಿತ್ರ ಪ್ರದರ್ಶನದಲ್ಲಿ ಜಾನಪದ ತಜ್ಞ ಗೊ.ರು.ಚನ್ನಬಸಪ್ಪ, ಹಿರಿಯ ನಿರ್ಮಾಪಕ ಎಸ್‌.ಎ.ಚೆನ್ನೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಜಯರಾಜ್‌, ಆನಿಮೇಷನ್‌ ಚಿತ್ರದ ನಿರ್ದೇಶಕ ಅಬ್ದುಲ್‌ ಕರೀಂ, ಹಲವು ಹಿರಿಯ ಐಎಎಸ್‌ ಹಾಗೂ ಐಎಫ್‌ಎಸ್‌ ಅಧಿಕಾರಿಗಳು ಸೇರಿದಂತೆ ಅಪಾರ ಜನಸ್ತೋಮ ಪಾಲ್ಗೊಂಡು ಧಾರ್ಮಿಕ ಸಂಭ್ರಮದಲ್ಲಿ ಮಿಂದೆದ್ದಿದ್ದು ವಿಶೇಷವಾಗಿತ್ತು.

Categories
ಸಿನಿ ಸುದ್ದಿ

ಈ ಬಾರಿ ಜನ್ಮದಿನ ಆಚರಿಸಲ್ಲ; ಅದಕ್ಕೆ ಮನಸ್ಸೂ ಇಲ್ಲ! ಜಗ್ಗೇಶ್‌ ಭಾವುಕ ಟ್ವೀಟ್…

ಮಾರ್ಚ್‌ 17 ಕನ್ನಡ ಚಿತ್ರರಂಗದ ಇಬ್ಬರು ನಟರ ಜನ್ಮದಿನ. ಹೌದು ಅಂದು ಪವರ್‌ಸ್ಟಾರ್ ಪುನೀತ್‌ ರಾಜಕುಮಾರ್‌ ಹಾಗು‌ ನವರಸ ನಾಯಕ ಜಗ್ಗೇಶ್‌ ಅವರ ಹುಟ್ಟುಹಬ್ಬ. ಕಳೆದ ಎರಡು ವರ್ಷಗಳಿಂದಲೂ ಈ ಇಬ್ಬರು ನಟರು ತಮ್ಮ ಹುಟ್ಟುಹಬ್ಬನ್ನು ಗ್ರ್ಯಾಂಡ್‌ ಆಗಿ ಆಚರಿಸಿಕೊಂಡಿಲ್ಲ. ಅದಕ್ಕೆ ಕಾರಣ, ಕೊರೊನಾ. ಈ ವರ್ಷ ಭರ್ಜರಿಯಾಗಿಯೇ ತಮ್ಮ ಹೀರೋಗಳ ಹುಟ್ಟುಹಬ್ಬವನ್ನು ಆಚರಿಸಬೇಕು ಅಂತ ಫ್ಯಾನ್ಸ್‌ ಕೂಡ ತಯಾರಿ ನಡೆಸಿದ್ದರು. ಆದರೆ, ಪುನೀತ್‌ ರಾಜಕುಮಾರ್‌ ಅವರ ಅಗಲಿಕೆಯ ನೋವು ಇನ್ನೂ ಹೋಗಿಲ್ಲ. ಆದರೂ ಅಪ್ಪು ಫ್ಯಾನ್ಸ್‌ ಅವರ ಹುಟ್ಟುಹಬ್ಬವನ್ನು ತಮ್ಮದೇ ಶೈಲಿಯಲ್ಲಿ ಆಚರಿಸಲು ಸಜ್ಜಾಗಿದ್ದಾರೆ. ಆದರೆ, ಅಂದು ತಮ್ಮ ಜನ್ಮದಿನವನ್ನು ಆಚರಿಸದಿರಲು ಸ್ವತಃ ಜಗ್ಗೇಶ್‌ ಅವರೇ ಸ್ಪಷ್ಟಪಡಿಸಿದ್ದಾರೆ.

ಹೌದು, ಮಾರ್ಚ್‌ 17 ರಂದು ಜಗ್ಗೇಶ್‌ ಅವರ ಜನ್ಮದಿನ. ಅಂದು ಅವರಿಗೆ 59 ನೇ ಹುಟ್ಟುಹಬ್ಬ. ಆದರೆ, ಜಗ್ಗೇಶ್‌ ಅವರು ಈ ಬಾರಿ ಆಚರಿಸದಿರಲು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ, ಕುರಿತು ಅವರೇ ಟ್ವೀಟ್‌ ಕೂಡ ಮಾಡಿದ್ದಾರೆ.‌


“ಈ ಬಾರಿ ನನ್ನ 59 ನೇ ಹುಟ್ಟುಹಬ್ಬವನ್ನುಆಚರಿಸುವುದಿಲ್ಲ! ಹಾಗು ಮನಸ್ಸು ಇಲ್ಲ! ಕಾರಣ, ಪ್ರತಿ ಮಾರ್ಚ್‌ 17ಕ್ಕೆ ತಪ್ಪದೆ ಬರುತ್ತಿದ್ದ ಪುನೀತ ಕರೆ ಅಣ್ಣ ಹ್ಯಾಪಿ ಬರ್ತಡೇ ಎಂದು ಮತ್ತೆ ಎಂದು ಬರದಂತಾಯಿತು. ಪುನೀತನ ಜೊತೆ ಕೊನೆಯ ಚಿತ್ರ..” ಎಂದು ಜಗ್ಗೇಶ್‌ ಟ್ವೀಟ್‌ ಮಾಡುವ ಮೂಲಕ ಈ ಬಾರಿ ಜನ್ಮದಿನ ಆಚರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

error: Content is protected !!