Categories
ಸಿನಿ ಸುದ್ದಿ

ಪುಷ್ಕರ್ ಮುಂದಿನ ಸಿನಿಮಾ ರಾಬಿನ್ ಹುಡ್ ಗೆ ಹೀರೋ‌ ಯಾರು?

 ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಆ ರಾಜಕಾರಣಿಯ ಪುತ್ರನ ಹೆಸರು. ಯಾರು ಆತ ? ಆತನ ಸಿನಿಮಾ ಹಿನ್ನೆಲೆ ಏನು?  ಸ್ಟೋರಿ ನೋಡಿ

ಪುಷ್ಕರ್ ಸದ್ದಿಲ್ಲದೆ ಹೊಸ ಸಿನಿಮಾ ‌ಅನೌನ್ಸ್ ಮಾಡಿದ್ದಾರೆ. ‘ಅವತಾರ ಪುರುಷ’ ಚಿತ್ರದ ಬೆನ್ನಲೇ  ನಿರ್ದೇಶಕ ಸಿಂಪಲ್ ಸುನಿ‌ ಜತೆಯಾಗಿ  ರಾಬಿನ್ ಹುಡ್ ಹೆಸರಲ್ಲಿ ಮತ್ತೊಂದು ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಆ ಚಿತ್ರದ ಟೈಟಲ್ ಕೂಡ ಲಾಂಚ್ ಆಗಿದೆ. ಆದರೆ ಆ ಚಿತ್ರದ ನಾಯಕ ಯಾರು ಎನ್ನುವುದೀಗ ಭಾರೀ ಕುತೂಹಲ ಕೆರಳಿಸಿದೆ.

ಹಾಗಂತ ಪುಷ್ಕರ್ ಅವರಾಗಲಿ, ನಿರ್ದೇಶಕ ಸಿಂಪಲ್ ಸುನಿ ಅವರಾಗಲಿ ಈ‌ ಬಗ್ಗೆ ಎಲ್ಲೂ ಮಾತನಾಡಿಲ್ಲ. ಕಲಾವಿದರ ಬಗ್ಗೆಯೂ ಸುಳಿವು ಕೊಟ್ಟಿಲ್ಲ.ಆದರೆ  ಸೋಷಲ್ ಮೀಡಿಯಾದಲ್ಲಿ‌ ಮಾತ್ರ ಒಬ್ಬ ರಾಜಕಾರಣಿಯ ಪುತ್ರನ ಹೆಸರು ವೈರಲ್ ಆಗಿದೆ. ಆತನೇ  ‘ರಾಬಿನ್ ಹುಡ್’ ಚಿತ್ರದ ನಾಯಕ ಅಂತಲೂ ಹೇಳಲಾಗುತ್ತಿದೆ. ಇಷ್ಟಕ್ಕೂ ಆತನ‌ಹೆಸರು ದುಶ್ಯಂತ್ ಶ್ರೀನಿವಾಸ್.


ಸೋಷಲ್ ಮೀಡಿಯಾದಲ್ಲಿ ಈ ಹೆಸರು ಚಾಲ್ತಿಯಲ್ಲಿದೆ. ಹಾಗಂತ ಚಿತ್ರ ತಂಡದಿಂದ  ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಆದರೆ ರಾಬಿನ್ ಹುಡ್ ಪೋಸ್ಟರ್ ಲಾಂಚ್ ಆದ ದಿನದಿಂದಲೇ ತುಮಕೂರು ಜಿಲ್ಲೆಯ ಜನ ಅದನ್ನು ಸೋಷಲ್ ಮೀಡಿಯಾದಲ್ಲಿ‌ ವೈರಲ್ ಮಾಡಿದ್ದಾರೆ. ಯುವ ರಾಜಕಾರಣಿಯೂ ಆಗಿರುವ ದುಶ್ಯಂತ್ ಶ್ರೀನಿವಾಸ್ ಅಧಿಕೃತ ಫೇಸ್ ಬುಕ್ ಪೇಜ್ ಗೆ ಅಭಿಮಾನಿಗಳು ಪೋಸ್ಟರ್ ಟ್ಯಾಗ್ ಮಾಡಿ, ಶುಭಾಶಯ ಕೋರಿದ್ದಾರೆ. ಇದೆಲ್ಲ ಹೇಗೆ ಸಾಧ್ಯ? ಬೆಂಕಿ ಇಲ್ಲದೆ ಹೊಗೆ ಬರಲು ಸಾಧ್ಯವೇ? ಉತ್ತರ ಚಿತ್ರ ತಂಡದ ಬಳಿಯಿದೆ.

ದುಶ್ಯಂತ್ ಶ್ರೀನಿವಾಸ್, ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಪುತ್ರ. ಯುವ ಉತ್ಸಾಹಿ. ಶಿಕ್ಷಣದ ಜತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ‌. ತಂದೆಯ ಹಾಗೆ ಸಾರ್ವಜನಿಕ ಕಾರ್ಯಕ್ರಮ ಗಳಲ್ಲಿ ಕಾಣಿಸಿಕೊಂಡ ದೊಡ್ಡ ಯುವ ಪಡೆಯ ಬೆಂಬಲ ಪಡೆದಿದ್ದಾರೆ. ಅವರ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಸೋಷಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರೀಯರಾಗಿರುವ ದುಶ್ಯಂತ್ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಅವರಿಂದಲೇ ಸೋಷಲ್ ಮೀಡಿಯಾದಲ್ಲಿ ದುಶ್ಯಂತ್ ಶ್ರೀನಿವಾಸ್ ರಾಬಿನ್ ಹುಡ್ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾಗುತ್ತಿರುವ ಸುದ್ದಿ ಹಬ್ಬಿದೆ.

ಇದರಲ್ಲಿ ಎಷ್ಟರ ಮಟ್ಟಿಗೆ ಸತ್ಯವಿದೆಯೋ, ಸಿಂಪಲ್ ಸುನಿ ಅವರಿಗೆ ಗೋತ್ತು.  ಹಾಗಂತ ಇದನ್ನು ಅಲ್ಲಗಳೆಯುವುದಕ್ಕೂ ಸಾಧ್ಯವಿಲ್ಲ.ಪುಷ್ಕರ್ ಅವರ ಊರು ತುಮಕೂರು. ‌ಸಹಜವಾಗಿಯೇ ಶಾಸಕ ಶ್ರೀನಿವಾಸ್ ಅವ್ ಸಂಪರ್ಕ‌ಇದ್ದೇ ಇರುತ್ತದೆ. ಅವರು ತಮ್ಮ‌ಮಗನನ್ನು ಹೀರೋ‌ಮಾಡು ಅಂತಲೂ ಶ್ರೀನಿವಾಸ್, ಪುಷ್ಕರ್ ಅವರಿಗೆ ಹೇಳಿರಬಹುದು. ಇಂತಹ ಸಾಧ್ಯತೆಗಳು ಈ ಸುದ್ದಿಯ ಸುತ್ತ ಇವೆ‌.


ಒಂದಂತೂ ಸತ್ಯ, ದುಶ್ಯಂತ್ ಶ್ರೀನಿವಾಸ್ ಅವರಿಗೆ ಸಿನಿಮಾದ ದೊಡ್ಡ ಕ್ರೇಜ್ ಇದೆ‌. ನಟ ನಿಖಿಲ್ ಕುಮಾರ ಸ್ವಾಮಿ‌ ಅವರ ಸ್ನೇಹಿತ ಕೂಡ. ಅನೇಕ ಸಿನಿಮಾ‌ ಕಾರ್ಯಕ್ರಮ ಗಳಲ್ಲೂ ಕಾಣಿಸಿಕೊಂಡಿದ್ದಾರೆ.ಡಾ. ರಾಜ್ ಕುಮಾರ್ ಅವರ ಪಕ್ಕಾ ಅಭಿಮಾನಿಯಂತೆ. ಹಾಗೆಯೇ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಜತೆಗೆ ಪೋಟೋಕ್ಕೆ ಪೋಸು ನೀಡಿದ್ದಾರೆ. ಇದರ ಪ್ರಭಾವ ಸಹಜವಾಗಿಯೇ ಸಿನಿಮಾರಂಗದ ಕಡೆ ಬರುವಂತೆಯೂ ಪ್ರೇರೆಪಿಸಿ ರಬಹಹುದು.‌ ಆದರೂ ಅಧಿಕೃತವಾಗಿಲ್ಲ.

ಉಳಿದಂತೆ ದುಶ್ಯಂತ್ ಅವರೇ ರಾಬಿನ್ ಹುಡ್ ಚಿತ್ರದ ನಾಯಕರಾದರೆ, ಹೊಸ ಪ್ರತಿಭೆಯಾಗಿ ಆ ಟೈಟಲ್ ಗೆ‌ಎಷ್ಟರ ಮಟ್ಟಿಗೆ ನ್ಯಾಯ ಒದಗಿಸಬಹುದು ಎನ್ನುವುದು ಸಹಜವಾದ ಕುತೂಹಲ.

Categories
ಸಿನಿ ಸುದ್ದಿ

ಬಣ್ಣದ ಜಗತ್ತಿನಲ್ಲೂ ಬಿಳಿ ಹುಡುಗಿ ಕಪ್ಪಾದಳು!

ಡಿ ಗ್ಲಾಮ್ ಪಾತ್ರಕ್ಕೂ ಸೈ ಅಂದ ಗ್ಲಾಮರಸ್ ನಾಯಕಿ ಅನುಷಾ ರೊಡ್ರಿಗಸ್

ಐದು ವರ್ಷ ಕಾಯಬೇಕಾಯಿತು ಇಂತಹ ಪಾತ್ರ ಸಿಗಲು- ಮನದಾಳ ಮಾತು ಹಂಚಿಕೊಂಡ ‘ಡಿಂಗ’ ಖ್ಯಾತಿಯ ನಟಿ
………………………………………………………

‘ಡಿಂಗ ‘ ಖ್ಯಾತಿಯ ನಟಿ ಅನುಷಾ ರೊಡ್ರಿಗಸ್ ಅಂದ್ರೆ ಗ್ಲಾಮರಸ್ ಪಾತ್ರಗಳಿಗೆ ಮಾತ್ರ ಸೀಮಿತ ಎಂದುಕೊಂಡವರೇ ಹೆಚ್ಚು. ಯಾಕಂದ್ರೆ ಅವರ ಈವರೆಗಿನ ಸಿನಿಜರ್ನಿಯೇ ಹಾಗಿದೆ. ಆದರೆ ಈಗ ಅವರು ಹಾಗಿಲ್ಲ. ಪಾತ್ರಗಳ ಆಯ್ಕೆಯಲ್ಲಿ ಫುಲ್ ಚೇಂಜ್ ಆಗಿದ್ದಾರೆ. ಗ್ಲಾಮರಸ್ ಪಾತ್ರಗಳಾಚೆ ಪಕ್ಕಾ ಡಿ ಗ್ಲಾಮ್ ಪಾತ್ರಕ್ಕೂ ಸೈ ಅಂದಿದ್ದಾರೆ. ಅದಕ್ಕೀಗ ಸಾಕ್ಷಿ ‘ಕತ್ತಲನ ತ್ರಿಶೂಲ’ ಹೆಸರಿನ ಚಿತ್ರದಲ್ಲಿನ ಅವರ ಪಾತ್ರ ಮತ್ತು ಗೆಟಪ್.

ಮನೋಜ್ ನಿರ್ಮಿಸಿ, ಹೊಸ ಪ್ರತಿಭೆ ಪ್ರಶಾಂತ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ರಂಗಭೂಮಿ ಹಿನ್ನೆಲೆಯ ಹಾಸ್ಯ ನಟ ಪ್ರಶಾಂತ್ ಸಿದ್ದಿ ಇದರ ಪ್ರಮುಖ‌ ಪಾತ್ರಧಾರಿ. ಅವರಿಗೆ ಜೋಡಿ ಯಾಗಿ ಅನುಷಾ‌ ರೋಡ್ರಿಗಸ್ ಕಾಣಿಸಿಕೊಳ್ಳುತ್ತಿದ್ದು, ಸದ್ದಿಲ್ಲದೆ ಸುದ್ದಿಯಾಗದೆ ಈ ಚಿತ್ರಕ್ಕೆ ಈಗಾಗಲೇ ಮುಕ್ಕಾಲು‌ ಭಾಗದ ಚಿತ್ರೀಕರಣ ಕೂಡ ನಡೆದಿದೆ. ಈ ಹಂತದಲ್ಲಿ ಚಿತ್ರದಲ್ಲಿನ ನಾಯಕಿ ಅನುಷಾ ರೋಡ್ರಿಗಸ್ ಪಾತ್ರದ ಲುಕ್ ರಿವೀಲ್ ಆಗಿದೆ.

ನಂಗಿದು ತುಂಬಾ ಸ್ಪೆಷಲ್ ಸಿನಿಮಾ…

ಚಿತ್ರದ ಶೀರ್ಷಿಕೆಯೇ ವಿಶೇಷವಾಗಿದೆ. ಹಾಗೆಯೇ ಇದೊಂದು ವಿಶೇಷವಾದ ಕಥಾ ಹಂದರದ ಚಿತ್ರ. ಸ್ವಾತಂತ್ರ್ಯ ಕ್ಕೂ ಮುಂಚೆ ಇಲ್ಲಿದ್ದ ಭೂಮಾಲೀಕ ವ್ಯವಸ್ಥೆ ಮತ್ತು ಅಲ್ಲಿನ ಕೂಲಿಯಾಳುಗಳ ದಾರುಣ ಸ್ಥಿತಿಯನ್ನು ತೆರೆ ಮೇಲೆ ತೋರಿಸುವ ಚಿತ್ರವಿದು. ಇಲ್ಲಿ ಒಬ್ಬ ಬಡ ಕೆಲಸದಾಳಿನ ಹೆಂಡತಿಯಾಗಿ ಅಭಿನಯಿಸಿದ್ದಾರಂತೆ ಅನುಷಾ ರೋಡ್ರಿಗಸ್. ಅದರ ಒಂದು ಲುಕ್ ಈಗ ಕುತೂಹಲ‌ ಮೂಡಿಸಿದೆ.
‘ ನನ್ನ ಮಟ್ಟಿಗೆ ಇದೊಂದು ವಿಶೇಷವಾದ ಪಾತ್ರ. ಯಾಕಂದ್ರೆ ಇದುವರೆಗೂ ಇಂತಹ ಪಾತ್ರದಲ್ಲಿ ಅಭಿನಯಿಸಿಲ್ಲ‌. ಅಭಿನಯಿಸುವ ಆಸೆ ಇತ್ತಾದರೂ ಅಂತಹ ಪಾತ್ರಗಳೇ ನನಗೆ ಸಿಕ್ಕಿರಲಿಲ್ಲ.ಈಗ ಆ ಅವಕಾಶ ಒದಗಿ ಬಂದಿದೆ‌. ಪಕ್ಕಾ ಹಳ್ಳಿ ಗಾಡಿನ ಮಹಿಳೆಯ ಪಾತ್ರ. ಆಕೆ ಭೂಮಾಲೀಕರ‌ ಮನೆಯಲ್ಲಿ ಕೂಲಿ‌ ಕೆಲಸ ಮಾಡುವ ತಳ‌ಸಮುದಾಯದ ಮಹಿಳೆ. ಆಕೆಯ ಬಣ್ಣ, ಉಡುಗೆ- ತೊಡುಗೆ ಎಲ್ಲವೂ ಹಳ್ಳಿಯ ಪ್ರತಿಬಿಂಬ’ ಎನ್ನುತ್ತಾರೆ ನಟಿ‌ ಅನುಷಾ ರೋಡ್ರಿಗಸ್,

ಚಾಲೆಂಜ್ ಆಗಿದ್ದ ಕ್ಯಾರೆಕ್ಟರ್…

‘ ಡಿಂಗ’ ಚಿತ್ರದ ಸಕ್ಸಸ್ ನಂತರ ನಟಿ‌ ಅನುಷಾ ಒಪ್ಪಿಕೊಂಡ ಚಿತ್ರವಿದು. ಅವರ ಇದುವರೆಗಿನ ಜರ್ನಿಗೆ ತೀರಾ ವಿಭಿನ್ನವಾದ ಕಥಾ ಹಂದರದ ಚಿತ್ರ. ಹಾಗೆಯೇ ನಾಯಕಿ‌ ಅನುಷಾ ಅವರ ಪಾತ್ರವೂ ಕೂಡ. ಅವರ ನಿಜ ಬದುಕಿಗೂ ವಿರುದ್ಧವಾದ ಕ್ಯಾರೆಕ್ಟರ್. ಒಂದ್ರೀತಿ ಸವಾಲೇ ಎನಿಸುವ ಪಾತ್ರ. ಈಗಾಗಲೇ ನಾನು ಅಭಿನಯಿಸಿದ ಪಾತ್ರಗಳಿಗಿಂತ ಇಲ್ಲಿ ಬೇರೆಯಾದ ಹಾವ, ಭಾವ, ಅಭಿನಯ ಎಲ್ಲವೂ ನೈಜವಾಗಿರಬೇಕಿತ್ತು. ಶೂಟಿಂಗ್ ಹೋಗುವುದಕ್ಕಿಂತ ಮುಂಚೆ ಒಂದಷ್ಟು ದಿನ ರಿಹರ್ಸಲ್ ಮಾಡಿಕೊಂಡೆವು. ನಿರ್ದೇಶಕರು ಸಾಕಷ್ಟು ಸಲಹೆ ಕೊಟ್ಟರು.‌ ಟೀಮ್ ನವರು ಕೂಡ ಸಾಕಷ್ಟು ಐಡಿಯಾ ಕೊಟ್ಟರು.‌ ಅದೆಲ್ಲ ಕಾರಣಕ್ಕೆ ನೈಜವಾಗಿ ಅಭಿನಯಿಸಲು ಸಾಧ್ಯವಾಗಿದೆ.ಅಂತಹ ಪಾತ್ರಕ್ಕೀಗ ಬಣ್ಣ ಹಚ್ಚಿ‌ ಸ್ಯಾಂಡಲ್ ವುಡ್ ನಲ್ಲಿ ಸುದ್ದಿ ಮಾಡಲು ಹೊರಟಿರುವ ನಟಿ ಅನುಷಾ ರೊಡ್ರಿಗಸ್‌, ಈ‌ ಸಿನಿಮಾ‌ ಒಪ್ಪಿಕೊಂಡ ಕುರಿತು ಹೇಳುವುದಿಷ್ಟು;

ಸೌಂದರ್ಯ ಪಾತ್ರವೇ ಕಾರಣ…

ಗಿರೀಶ್ ಕಾಸರವಳ್ಳಿ ನಿರ್ದೇಶನ ದ ದ್ವೀಪ ಸಿನಿಮಾ ಅದ್ಬುತ ಸಿನಿಮಾಗಳನ್ನು ನೋಡುವಾಗ ನಾನು ಕೂಡ‌ ಒಂದು ದಿನ ಈ ರೀತಿಯ ಸಿನಿಮಾಗಳಲ್ಲಿ ಯಾಕೆ ಅಭಿನಯಿಸಬಾರದು ಅಂತ ಯೋಚಿಸುತ್ತಿದ್ದೆ. ಅದು ಒಂಥರ ನನಗೆ ಕನಸು. ಯಾಕಂದ್ರೆ, ‘ದ್ವೀಪ’ ದಲ್ಲಿ ಸೌಂದರ್ಯ ಅಭಿನಯಿಸುವಾಗ ಅವರ ಅಭಿನಯದಲ್ಲಿ ನೈಜತೆ, ಭಾವನೆಗಳಿಗೆ ಹೆಚ್ಚು ತೂಕವಿರುತ್ತದೆ. ಅಂತಹ ಪಾತ್ರ ದಲ್ಲಿ ಅಭಿನಯಿಸಿದರೆ, ನಾನು ಒಬ್ಬ ನಟಿಯಾಗಲು ಸಾಧ್ಯ ಅಂತ ಯೋಚಿಸುತ್ತಿದ್ದೆ. ಆಗ ನನಗೆ ಸಿಕ್ಕಿದ್ದೇ ‘ಕತ್ತಲನ ತ್ರಿಶೂಲ ‘ಚಿತ್ರದ ಅವಕಾಶ. ಎನ್ನುವುದು ಅನುಷಾ ಅವರ ಮಾತು.

ಸಿನಿಮಾ ರಂಗವೇ ಈಗ ಟಾರ್ಗೆಟ್..

ಕೊಡಗು ಮೂಲದ ಗ್ಲಾಮರಸ್ ನಟಿ ಅನು಼ಷಾ ರೋಡ್ರಿಗಸ್ ಸಿನಿ ಜರ್ನಿ ಶುರುವಾಗಿ ಇಲ್ಲಿದೆ ಐದು ವರ್ಷ.’ ಕೃಷ್ಣ ಲೀಲಾ ‘ ಚಿತ್ರದ ಮೂಲಕ ನಟಿಯಾಗಿ ಬೆಳ್ಳಿತೆರೆಗೆ ಎಂಟ್ರಿಯಾಗಿ ಲೌಡ್ ಸ್ಪೀಕರ್‌, ‘ ಜಲ್ಸಾ ‘ ಹಾಗೂ ಡಿಂಗ, ಚಿತ್ರಗಳ ನಂತರವೀಗ ‘ ದಾರಿ ಯಾವುದಯ್ಯ’ ಹಾಗೂ ಕತ್ತಲನ ತ್ರಿಶೂಲ ಚಿತ್ರಗಳಲ್ಲಿ‌ ಬ್ಯುಸಿಯಾಗಿದ್ದಾರೆ. ಜತೆಗೀಗ ಕಾಂತ ಕನ್ನಳ್ಳಿ ನಿರ್ದೇಶನದ ಮತ್ತೊಂದು ಚಿತ್ರಕ್ಕೂ ನಾಯಕಿ ಆಗಿದ್ದಾರಂತೆ‌ . ಆ ಸಿನಿಮಾ‌ ಇನ್ನೇನು ಶುರುವಾಗುವ ಹಂತದಲ್ಲಿದೆ. ಸಿನಿಮಾ ಜತೆಗೆ ಸೀರಿಯಲ್ ಜಗತ್ತಿನಲ್ಲೂ ಅನುಷಾ ರೋಡ್ರಿಗಸ್ ಸದ್ದು ಮಾಡುತ್ತಿದ್ದಾರೆ. ‘ ಶ್ರೀಮಾನ್ ಶ್ರೀಮತಿ ‘ ಹಾಗೂ‌’ ಅವಳು ಸುಜಾತ ‘ ಧಾರವಾಹಿಗಳು ಅಭಿನಯಿಸಿದ್ದಾರೆ. ಸದ್ಯಕ್ಕೀಗ ಕಿರುತೆರೆಗೆ ವಿಶ್ರಾಂತಿ ಹೇಳಿ, ಸಿನಿಮಾ ಕಡೆ ಹೆಚ್ವು ಗಮನಹರಿಸಿದ್ದಾರೆ. ಆ ಪ್ರಯತ್ನದ ಆರನೇ ಚಿತ್ರವೇ ‘ಕತ್ತಲನ ತ್ರಿಶೂಲ’.ಆಲ್ ದಿ ಬೆಸ್ಟ್ ಅನುಷಾ.

Categories
ಸಿನಿ ಸುದ್ದಿ

ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬ ವಾಖ್ಯಾನದ ಪ್ರಯತ್ನವೇ ಬಿರಿಯಾನಿ – ಸಜಿನ್ ಬಾಬು

ಅಂತಾರಾಷ್ಟ್ರೀಯ ಮಟ್ಟದಲ್ಲಿ‌ ಸಾಕಷ್ಟು ಸದ್ದು ಮಾಡುತ್ತಿರುವ ಮಲಯಾಳಂನ  ‘ಬಿರಿಯಾನಿ‌’ ಚಿತ್ರದ ನಿರ್ದೇಶಕ ಸಜಿನ್ ಬಾಬು ಜತೆಗೆ ‘ ಸಿನಿ ಲಹರಿ’ ನಡೆಸಿದ ವಿಶೇಷ ಸಂದರ್ಶನ

ಸಂದರ್ಶನ – ರಮೇಶ್ ಎಚ್.ಕೆ. ಶಿವಮೊಗ್ಗ

1. ನಮಸ್ತೆ ಸರ್, ಬಿರಿಯಾನಿ ಸಿನಿಮಾಗೆ ಸತತವಾಗಿ ಪ್ರಶಸ್ತಿಗಳು ಬರುತ್ತಿವೆ. ಹೇಗನಿಸುತ್ತಿದೆ?

ಈ ಪ್ರಶಸ್ತಿ ದೊರೆತಿರುವುದು ನಿಜಕ್ಕೂ ಅತೀವ ಸಂತೋಷ ತಂದಿದೆ.‌ ಬಿರಿಯಾನಿ ಸಿನಿಮಾ ಈಗಾಗಲೇ ಬಹಳಷ್ಟು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹಲವು ಪ್ರಶಸ್ತಿಗಳೂ‌ ಬಂದಿವೆ. ಆದರೆ ನಮ್ಮದೇ ಊರಿನಲ್ಲಿ ಪ್ರಶಸ್ತಿ ಪಡೆಯುವುದು ಒಂಥರಾ ವಿಶೇಷ ಅನುಭವ.‌ ಅದು ಅತೀವ ಖುಷಿ ಕೊಟ್ಟಿದೆ.

2. ನಿಮ್ಮ ಹಾಗೂ ನಿಮ್ಮ ಕೌಟುಂಬಿಕ ಹಿನ್ನೆಲೆಯ ಬಗ್ಗೆ ತಿಳಿಸಿ?

ಕೇರಳದ ಕೂಪ್ಪು ಎನ್ನುವ ಸಣ್ಣ ಹಳ್ಳಿಯಿಂದ ಬಂದವನು. ನನ್ನ ಶಾಲೆಯ ಬಳಿಕ ಪದವಿ ಪಡೆಯಲು ಟ್ರಿವೇಂಡ್ರಂ ಗೆ ಬಂದೆ. ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ನನ್ನ ಕನಸಾಗಿತ್ತು. ತ್ರಿವೇಂಡ್ರಂ ನಲ್ಲಿ ಇದ್ದಾಗ iffk ಮುಖಾಂತರ ಜಾಗತಿಕ ಸಿನಿಮಾಗಳನ್ನು ನೋಡುವ ಮತ್ತು ಸಿನಿಮಾಗಳ ಕುರಿತ ಚರ್ಚೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಇದಾದ ಮೇಲೆ ನಾನೂ ಸಹ ಕ್ಯಾಂಪಸ್ ಸಿನಿಮಾಗಳು ಮತ್ತು ಕೆಲ ಡಾಕ್ಯುಮೆಂಟರಿಗಳನ್ನು ಮಾಡಿದೆ. ನಾನು 26 ನೇ ವಯಸ್ಸಿನವನಾಗಿದ್ದಾಗ Unto The Dusk ಎನ್ನುವ ಸಿನಿಮಾ ಮಾಡಿದೆ. ಈ ಸಿನಿಮಾಗೆ ಬೆಂಗಳೂರು ಚಿತ್ರೋತ್ಸವದಲ್ಲಿ ಚಿತ್ರಭಾರತಿ ಪ್ರಶಸ್ತಿ ಹಾಗೂ iffk ನಲ್ಲಿ ರಜತಚಾಜೋರಂ ಪ್ರಶಸ್ತಿ ಲಭಿಸಿತು. ನನ್ನ ಎರಡನೇ ಚಿತ್ರ ನಟ ಶ್ರೀನಿವಾಸನ್ ಅವರೊಂದಿಗೆ ನಿರ್ಮಿಸಿದ ಅಯಾಲ್ ಸಾಸ್ಸಿ. ಇದು ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದಾದ ಮೇಲೆ ನಾನು ಮಾಡಿರುವ 3 ನೇ ಚಿತ್ರ ಬಿರಿಯಾನಿ ಆಗಿದ್ದು ಇದೊಂದು ಸ್ವತಂತ್ರ ಚಿತ್ರವಾಗಿದೆ.

3. ನಿಮ್ಮ ನೆಚ್ಚಿನ ನಟ, ಲೇಖಕ ಹಾಗೂ ಪುಸ್ತಕಗಳು ಯಾವು?

ಮಲಯಾಳಂನಲ್ಲಿ ಯಾರೋ ಒಬ್ಬ ನಟನ ಹೆಸರನ್ನು ಹೇಳುವುದು ಕಷ್ಟ‌. ಜತೆಗೆ ಹಾಗೆ ಹೇಳುವುದಕ್ಕೂ ಇಷ್ಟವಿಲ್ಲ. ಭಾರತೀಯ ಹಾಗೂ ಜಾಗತಿಕ ಸಿನಿಮಾ ರಂಗದಲ್ಲಿ ಬಹಳಷ್ಟು ಮಂದಿ ನಟರು ನನಗೆ ಇಷ್ಟವಾಗುತ್ತಾರೆ. ನನಗೆ ವರ್ನರ್ ಹೆರ್ಜಾರ್ಗ್ ನ ‘ಅಕ್ವಿರೆ’ ಸಿನಿಮಾದಲ್ಲಿ ಕ್ಲಾಸ್ ಕಿನ್ ಸ್ಕಿ ಪಾತ್ರ ಇಷ್ಟವಾಗುತ್ತದೆ. ಜೊತೆಗೆ ಕಮಲ್ ಹಾಸನ್, ಮೋಹನ್ ಲಾಲ್ ಹಾಗೂ ಅಮೀರ್ ಖಾನ್ ಅವರ ನಟನೆಗಳು ಇಷ್ಟವಾಗುತ್ತವೆ. ಇನ್ನು ಪುಸ್ತಕ ಮತ್ತು ಲೇಖಕರ ವಿಷಯದಲ್ಲೂ ಬಹಳಷ್ಟು ಜನರಿದ್ದು ಯಾವುದೋ ಒಂದು ಹೆಸರು ಹೇಳಲು ನನಗೆ ಸಾಧ್ಯವಿಲ್ಲ.

4. ಸಿನಿಮಾ ಕ್ಷೇತ್ರವನ್ನು ಆರಿಸಿಕೊಳ್ಳಲು ಕಾರಣ?

ವಿದ್ಯಾರ್ಥಿ ಆದಾಗಿನಿಂದಲೂ ಸಿನಿಮಾಗಳು ನನ್ನ ಮನಸ್ಸಿನಲ್ಲಿದೆ. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ. ನಾನು ಅಮ್ಮನ ಬಳಿ ಒಪ್ಪಿಗೆ ಪಡೆದು ಮನೆ ಕೆಲಸ ಮಾಡಿ, ಭಾನುವಾರದಂದು ದೂರದರ್ಶನದಲ್ಲಿ ಬರುತ್ತಿದ್ದ ಸಿನಿಮಾಗಳನ್ನು ನೋಡಲು ಪಕ್ಕದ ಮನೆಗೆ ಹೋಗುತ್ತಿದ್ದೆ. ಕೆಲವೊಮ್ಮೆ ಮನೆಯಲ್ಲಿ ಒಪ್ಪದೇ ಇದ್ದ ಕಾರಣಕ್ಕೆ ಸಿನಿಮಾಗಳನ್ನು ನೋಡಲು ಕಷ್ಟವಾಗುತ್ತಿತ್ತು. ಆದರೆ ಆಗಲೇ ಹೇಳಿದಂತೆ ಪದವಿಯ ವೇಳೆ ನಾನು ಹೆಚ್ಚು ಸಿನಿಮಾಗಳನ್ನು ನೋಡಿದೆ ಮತ್ತು ಸಿನಿಮಾ ಮಾಡುವ ಅವಕಾಶಗಳನ್ನು ಪಡೆದೆ

5. ಬಿರಿಯಾನಿಯಂತ ಸಿನಿಮಾ ಮಾಡಲು ಕಾರಣವೇನು?

ಈ ರೀತಿಯ ಸಿನಿಮಾ ಮಾಡಬೇಕೆಂಬ ಆಲೋಚನೆ ಬಂದಿದ್ದು ಯಾವಾಗ ಎಂದು ನನಗೆ ನೆನಪಿಲ್ಲ. 25-26 ನೇ ವಯಸ್ಸಿನಲ್ಲಿ ನಾನು ನನ್ನ ಮೊದಲ ಸಿನಿಮಾ ಮಾಡಿದಾಗ ನನಗೂ ಕೂಡಾ ಸಿನಿಮಾ ನಂತರದಲ್ಲಿ ಬಹಳಷ್ಟು ಪ್ರಶ್ನೆಗಳು ಮೂಡುತ್ತಿದ್ದವು. ಈ ಪ್ರಶ್ನೆಗಳು ನನ್ನದೇ ಸಿನಿಮಾ ನೋಡಿದಾಗಲೂ ಉದ್ಭವಿಸುತ್ತಿತ್ತು.‌ ನಾನು ಎಲ್ಲಾ ಧರ್ಮಗಳೂ ಇರುವಂತಹ ಒಂದು ಹಳ್ಳಿಯಲ್ಲಿ ಬೆಳೆದವನು. ಹೀಗಾಗಿ ಧರ್ಮಗಳೇ ಇಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಯಾವುದೇ ಧರ್ಮದ ಹಂಗಿಲ್ಲದೇ ನಾನು ಬದುಕಬೇಕು ಎಂಬುದನ್ನು ರೂಢಿಸಿಕೊಂಡೆ. ಈಗಲೂ ಕೂಡಾ ಬಹಳಷ್ಟು ಮಂದಿ ನನ್ನ ಹೆಸರಿನಿಂದ ನನ್ನ ಧರ್ಮವನ್ನು ಗುರುತಿಸಲು ಪ್ರಯತ್ನಿಸಿ ಸೋತಿದ್ದಾರೆ.‌ ಹೀಗಾಗಿಯೇ ನನ್ನ Unto The Dusk ಸಿನಿಮಾ ಮಾಡಿದಾಗ ನನಗೇ ಗೊತ್ತಿಲ್ಲದೇ ನನ್ನನ್ನು ಕ್ರಿಶ್ಚಿಯನ್ ಎಂದು ಸಂಬೋಧಿಸಿದ್ದಾರೆ. ಈಗ ಬಿರಿಯಾನಿ ಸಿನಿಮಾದ ನಂತರ ನನ್ನನ್ನು ಮುಸ್ಲಿಂ ಎಂದುಕೊಳ್ಳಲೂಬಹುದು. ಇಂತಹ ಗೊಂದಲಮಯವಾದಂತಹ ಬೇಸರದ ವಿದ್ಯಮಾನದೊಳಗೆ ಒಬ್ಬ ಜಾತ್ಯಾತೀತ ಎನಿಸಿಕೊಂಡಂತಹ ವ್ಯಕ್ತಿಯೇ ಧಾರ್ಮಿಕ ಮೂಲಭೂತವಾದಿಯೊಬ್ಬನಿಗಿಂತ ಹೆಚ್ಚಾಗಿ ಧರ್ಮದ ಬಗ್ಗೆ ಮಾತನಾಡುತ್ತಾನೆ. ಹೀಗಾಗಿ ಇಂತಹದ್ದನ್ನೆಲ್ಲಾ ಕಂಡು ಅನುಭವಿಸಿದ ಬಳಿಕ ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬುದನ್ನು ವಾಖ್ಯಾನಿಸಲು ಬಿರಿಯಾನಿ ಎಂಬ ಸಿನಿಮಾವನ್ನು ತೆರೆದ ಪುಸ್ತಕವಾಗಿ ರೂಪಿಸಲು ಯತ್ನಿಸಿದ್ದೇನೆ. ಸಮಾಜದ ನೈಜ ಸಂಗತಿಗಳಲ್ಲಿ ನನಗೆ ಹೆಚ್ಚಿನ ಆಸಕ್ತಿಯಿದ್ದು ಇವುಗಳನ್ನೇ ನಾನು ಹೆಚ್ಚು ನಂಬುತ್ತೇನೆ.

6. ನಿರ್ದೇಶಕ ಸಜಿನ್ ಬಾಬು ಅವರು ಬಿರಿಯಾನಿ ಸಿನಿಮಾದಲ್ಲಿ ತಾವಂದುಕೊಂಡ ಎಲ್ಲವನ್ನೂ ಅಳವಡಿಸಿದ್ದಾರೆಯೇ?

ನಾನಂದುಕೊಂಡ ಹಾಗೇ ಸಿನಿಮಾ ಬಂದಿದೆ ಎಂದು ಹೇಳಲಾರೆ.‌ ಆದರೆ ನಾನಂದುಕೊಂಡಿದ್ದರಲ್ಲಿ ಕನಿಷ್ಟ ಪಕ್ಷ 80% ಅಷ್ಟನ್ನಾದರೂ ನಾನು ಸಿನಿಮಾದಲ್ಲಿ ಅಳವಡಿಸಿದ್ದೇನೆ.

7. ನೀವು ಈ ಸಿನಿಮಾ ಬಗ್ಗೆ ಹೇಳಿದಾಗ ಕನಿ ಕುಸ್ರುತಿ ಅವರ ಪ್ರತಿಕ್ರಿಯೆ ಹೇಗಿತ್ತು?

ಮೊದಲು ಈ ಕತೆಯನ್ನು ಕನಿ ಅವರಿಗೆ ಹೇಳಿದಾಗ ಅವರು ಸುತಾರಾಂ ಒಪ್ಪಿರಲಿಲ್ಲ. ಆದರೆ ನಾನು ಮತ್ತೆ ಮತ್ತೆ ಅವರನ್ನು ಭೇಟಿ ಮಾಡಿ ಈ ಸಿನಿಮಾದಲ್ಲಿನ ಖದೀಜಾ ಪಾತ್ರ ಮಾಡುವಂತೆ ಒಪ್ಪಿಸಿದೆ. ಇನ್ನು ಪಾತ್ರದ ರಚನೆಯ ಬಗ್ಗೆ ಅವರಿಗೆ ತಕರಾರುಗಳಿವೆ. ಹೀಗಾಗಿಯೇ ನಾನು ಬೇರೆ ಖದೀಜಾ ಬೇರೆ ಎಂಬುದು ಕನಿ ಅವರ ನಿಲುವಾಗಿದೆ.

” ನಮ್ಮ ಸಮಾಜವು ಯಾವಾಗಲೂ ಸಹ ಸಮಸ್ಯೆಯ ಒಂದೇ ಮಗ್ಗುಲನ್ನು ನೋಡುತ್ತದೆ. ಐಸಿಸ್ ಜೊತೆ ನಂಟಿರುವ ಆರೋಪಿತ ವ್ಯಕ್ತಿಯನ್ನು ನೋಡುವಾಗ ಅವನನ್ನು ಸಮಾಜ ಹಾಗೂ ಮಾಧ್ಯಮಗಳು ತೀವ್ರವಾಗಿ ಗುರಿಪಡಿಸುತ್ತವೆ.‌‌ ಆದರೆ ಈ ಗುರಿ ಪಡಿಸುವ ಭರದಲ್ಲಿ ಅವನ ಕುಟುಂಬದ ಪರಿಸ್ಥಿತಿ ಏನಾಯಿತು ಎಂಬುದನ್ನು ಸಮಾಜ ಮತ್ತು ಮಾಧ್ಯಮಗಳು ಮರೆಯುತ್ತವೆ” 

8. ಖದೀಜಾ ಪಾತ್ರದ ಮೂಲಕ ನೀವು ಸಮಾಜಕ್ಕೆ ಯಾವ ಸಂದೇಶ ನೀಡಲು ಬಯಸುತ್ತೀರ ?

ನಮ್ಮ ಸಮಾಜವು ಯಾವಾಗಲೂ ಸಹ ಸಮಸ್ಯೆಯ ಒಂದೇ ಮಗ್ಗುಲನ್ನು ನೋಡುತ್ತದೆ. ಐಸಿಸ್ ಜೊತೆ ನಂಟಿರುವ ಆರೋಪಿತ ವ್ಯಕ್ತಿಯನ್ನು ನೋಡುವಾಗ ಅವನನ್ನು ಸಮಾಜ ಹಾಗೂ ಮಾಧ್ಯಮಗಳು ತೀವ್ರವಾಗಿ ಗುರಿಪಡಿಸುತ್ತವೆ.‌‌ ಆದರೆ ಈ ಗುರಿ ಪಡಿಸುವ ಭರದಲ್ಲಿ ಅವನ ಕುಟುಂಬದ ಪರಿಸ್ಥಿತಿ ಏನಾಯಿತು ಎಂಬುದನ್ನು ಸಮಾಜ ಮತ್ತು ಮಾಧ್ಯಮಗಳು ಮರೆಯುತ್ತವೆ
ಅದರಲ್ಲೂ ಆ ಕುಟುಂಬದ ಮಹಿಳೆಯರು ಯಾರಿಗೂ ಬೇಡವಾಗುತ್ತಾರೆ. ಅವರನ್ನು ಚಿತ್ರಹಿಂಸೆ ಮಾಡಲಾಗುತ್ತದೆ. ಆದರೆ ಈ ಸಂಗತಿಯನ್ನು ಒಂದು ಯಾರೂ ಚರ್ಚಿಸುವುದಿಲ್ಲ. ಇದು ಇಲ್ಲಷ್ಟೇ ಅಲ್ಲ ಸಮಾಜದಲ್ಲಿ ಅಪರಾಧಗಳು ಎಲ್ಲಿ ನಡೆಯುತ್ತದೋ ಅಲ್ಲೆಲ್ಲಾ ಇದು ಸಾಮಾನ್ಯವಾಗಿ ಕಾಣಬರುವ ವಿದ್ಯಮಾನವಾಗಿದೆ. ನಮ್ಮ ಸಮಾಜದಲ್ಲಿ ಹೀಗೆ ಆರೋಪಿತರಾದ ವ್ಯಕ್ತಿಗಳ ಕುಟುಂಬವನ್ನು ಸಂತೈಸುವ ಅಥವಾ ಅವರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಇಲ್ಲ.‌ ಯಾರೋ ಮಾಡುವ ತಪ್ಪಿಗೆ ಕುಟುಂಬದ ಇತರೆ ಜನರಿಗೆ ಇನ್ನಿಲ್ಲದ ತೊಂದರೆ ಆದರೂ ಸಹ ಅವರಿಗೆ ಯಾವ ರಕ್ಷಣೆಯೂ ಇರುವುದಿಲ್ಲ. ಹೀಗಾಗಿ ಈ ಸೂಕ್ಷ್ಮಗಳನ್ನೆಲ್ಲಾ ನಾನು ಬಿರಿಯಾನಿ ಸಿನಿಮಾ ಮೂಲಕ ಹೇಳಲು ಯತ್ನಿಸಿದ್ದೇನೆ.

” ಈಗಲೂ ಕೂಡಾ ಬಹಳಷ್ಟು ಮಂದಿ ನನ್ನ ಹೆಸರಿನಿಂದ ನನ್ನ ಧರ್ಮವನ್ನು ಗುರುತಿಸಲು ಪ್ರಯತ್ನಿಸಿ ಸೋತಿದ್ದಾರೆ.‌ ಹೀಗಾಗಿಯೇ ನನ್ನ Unto The Dusk ಸಿನಿಮಾ ಮಾಡಿದಾಗ ನನಗೇ ಗೊತ್ತಿಲ್ಲದೇ ನನ್ನನ್ನು ಕ್ರಿಶ್ಚಿಯನ್ ಎಂದು ಸಂಬೋಧಿಸಿದ್ದಾರೆ. ಈಗ ಬಿರಿಯಾನಿ ಸಿನಿಮಾದ ನಂತರ ನನ್ನನ್ನು ಮುಸ್ಲಿಂ ಎಂದುಕೊಳ್ಳಲೂಬಹುದು. ಇಂತಹ ಗೊಂದಲಮಯವಾದಂತಹ ಬೇಸರದ ವಿದ್ಯಮಾನದೊಳಗೆ ಒಬ್ಬ ಜಾತ್ಯಾತೀತ ಎನಿಸಿಕೊಂಡಂತಹ ವ್ಯಕ್ತಿಯೇ ಧಾರ್ಮಿಕ ಮೂಲಭೂತವಾದಿಯೊಬ್ಬನಿಗಿಂತ ಹೆಚ್ಚಾಗಿ ಧರ್ಮದ ಬಗ್ಗೆ ಮಾತನಾಡುತ್ತಾನೆ” 

9. ಖದೀಜಾ ಪಾತ್ರದ ಪ್ರತಿರೋಧದಿಂದಾಗಿ ಅವಳಿಗೆ ನ್ಯಾಯ ಸಿಕ್ಕಿದೆ ಎಂದು ನಿಮಗೆ ಅನ್ನಿಸುವುದೇ?

ಆಕೆ ತೋರಿದ ಪ್ರತಿರೋಧದಿಂದ ಅವಳಿಗೆ ನ್ಯಾಯ ಸಿಕ್ಕಿತು ಎಂದು ನಾನು ಭಾವಿಸುವುದಿಲ್ಲ. ಆದರೆ ವಾಸ್ತವವಾಗಿ ನೋಡಿದಾಗ ಅಷ್ಟು ಅಸಹಾಯಕಳಾದ ಹೆಣ್ಣಿನ ಆಕ್ರೋಶವು ಆಕೆಯ ಮಿತಿಯೊಳಗೆ ಅಷ್ಟೇ ಇರುವ ಸಾಧ್ಯತೆ ಇದೆ. ಇದು ಅವಳ ಮನಸ್ಸಿನ ದುಃಖವನ್ನು ಹೋಗಲಾಡಿಸದೇ ಇದ್ದರೂ ಸಹ ಅವಳ ಪ್ರತಿರೋಧವನ್ನು ಅವಳೇ ದಾಖಲಿಸುವ ಮಟ್ಟಿಗೆ ಅದನ್ನು ನಾವು ಒಪ್ಪಿಕೊಳ್ಳಬಹುದು.

10. ಈ ಚಿತ್ರದ ಬಗ್ಗೆ ಸಂಪ್ರದಾಯವಾದಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳು ಎತ್ತುವ ಪ್ರಶ್ನೆಗೆ ಉತ್ತರಿಸಲು ನೀವು ಸಿದ್ಧವಾಗಿದ್ದೀರಾ?

ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ನಾನು ಕೇವಲ ವಾಸ್ತವಗಳನ್ನು ತೋರಿಸಲು ಯತ್ನಿಸಿದ್ದೇನೆ. ನಾನು ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದನಾಗುವ ಅಗತ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ.

11. ನಿಮ್ಮ ಪ್ರಕಾರ ಒಳ್ಳೆಯ ಚಿತ್ರ ಎಂದರೆ ಏನು?

ಒಂದು ಚಿತ್ರ ನನಗೆ ಉತ್ತಮವಾಗಿ ಕಂಡರೆ ಮತ್ತೊಬ್ಬರಿಗೆ ಕೆಟ್ಟದಾಗಿ ಅನಿಸುತ್ತದೆ. ಇದಕ್ಕೆ ಆಯಾ ವ್ಯಕ್ತಿಗಳ ಇಷ್ಟ ಕಷ್ಟಗಳು ಮತ್ತು ಸಿನಿಮಾಗಳನ್ನು ನೋಡುವ ರೀತಿ ಕಾರಣವಾಗುತ್ತದೆ. ಹೀಗಾಗಿ ನನ್ನ ಪ್ರಕಾರ ಉತ್ತಮ ಅಥವಾ ಕೆಟ್ಟ ಚಿತ್ರ ಎನ್ನುವುದಕ್ಕೆ ಸಿದ್ಧಸೂತ್ರಗಳು ಇರುವುದಿಲ್ಲ ಎಂಬುದು ನನ್ನ ಭಾವನೆ.

12. ಮಲಯಾಳಂ ಸಿನಿಮಾಗಳನ್ನು ಬಿಟ್ಟರೆ ನಿಮಗೆ ಯಾವ ಭಾಷೆಯ ಚಿತ್ರಗಳು ಇಷ್ಟವಾಗುತ್ತವೆ?

ನನಗೆ ಹಲವು ಕಾರಣಗಳಿಗೆ ಮರಾಠಿ ಸಿನಿಮಾಗಳೆಂದರೆ ಇಷ್ಟ.

13 ನಿಮ್ಮ ಮುಂದಿನ ಚಿತ್ರಗಳು ಮತ್ತು ಯೋಜನೆಗಳ ಬಗ್ಗೆ ಹೇಳಿ ?

ನಾನೀಗ ಕೆಲವೊಂದು ಸಿನಿಮಾಗಳನ್ನು ಮಾಡಲು ಯೋಚಿಸಿದ್ದೇನೆ. ಆದರೆ ಯಾವುದೂ ಸಹ ಪೂರ್ಣವಾಗಿ ನಿರ್ಧಾರವಾಗಿಲ್ಲ. ಸದ್ಯ ಥ್ರಿಲ್ಲರ್ ಮಾದರಿಯಲ್ಲಿ ಮೂರು ಕತೆಗಳನ್ನು ಹೆಣೆದಿರುವೆ.

14. ಬಿರಿಯಾನಿ ಸಿನಿಮಾಗೆ ಈ ಬಾರಿ ರಾಷ್ಟ್ರ ಪ್ರಶಸ್ತಿ ಯನ್ನು ನಿರೀಕ್ಷಿಸಬಹುದೇ?

ಈಗಾಗಲೇ ಬಹಳಷ್ಟು ಸಿನಿಮಾ ಉತ್ಸವಗಳಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆಗಳು ಲಭಿಸಿದ್ದು ಈ ಬಾರಿ ಪ್ರಶಸ್ತಿ ಬರಬಹುದೆಂಬ ನಿರೀಕ್ಷೆ ಖಂಡಿತಾ ಇದೆ.

15. ಕೊನೆಯದಾಗಿ ಏನು ಹೇಳಲು ಬಯಸುತ್ತೀರಿ?

ಕೊನೆಯದಾಗಿ ಹೇಳಬೇಕೆಂದರೆ, ನನ್ನ ಸಂದರ್ಶನಕ್ಕಾಗಿ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು. ಉತ್ತಮವಾಗಿ ಯೋಚಿಸೋಣ, ಸಮಾಜದ ಅತಿ ಕ್ಲಿಷ್ಟ ಪರಿಸ್ಥಿತಿಗಳನ್ನು ಮೊದಲು ಸರಿಯಾಗಿ ಅರಿಯೋಣ ನಂತರ ಸ್ಪಂದಿಸಲು ಯತ್ನಿಸೋಣ.ಥ್ಯಾಂಕ್ ಯೂ.

Categories
ಸಿನಿ ಸುದ್ದಿ

ಬಾಲಿವುಡ್ ಗೆ ಹೊರಟ ‘ದಿಯಾ’ ನಿರ್ದೇಶಕ

ದಿಯಾ ಹಿಂದಿ ರಿಮೇಕ್ ಗೆ ಅಶೋಕ್ ಆ್ಯಕ್ಷನ್ ಕಟ್ 

ಸೂಪರ್ ಹಿಟ್ ಚಿತ್ರ’ ದಿಯಾ ‘ ಅಕ್ಟೋಬರ್ 23 ಕ್ಕೆ ಮರು ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ಚಿತ್ರಮಂದಿರಗಳ ರೆಸ್ಪಾನ್ಸ್ ನೋಡಿಕೊಂಡು ರಿಲೀಸ್ ಹೇಗೆ,ಏನೂ ಎನ್ನುವುದನ್ನು ಚಿತ್ರ ತಂಡ ನಿರ್ಧಾರ ಮಾಡಲಿದೆಯಂತೆ. ಆದರೆ ಈಗ ದಿಯಾ ನೋಡುವವರಿಗೆ ಒಂದು ಸಿಹಿ ಸುದ್ದಿ ಕಾದಿದೆ‌. ಕ್ಲೈಮ್ಯಾಕ್ಸ್ ಬದಲಾಗಿ ಚಿತ್ರ ಮರು‌‌ಬಿಡುಗಡೆ ಆಗುತ್ತಿದೆ. ಹಾಗಾದ್ರೆ ಕ್ಲೈಮ್ಯಾಕ್ಸ್ ಏನಾಗಬಹುದು? ಅದಕ್ಕೆ ಚಿತ್ರ ನೋಡಲೇ ಬೇಕು.


ಇನ್ನು‌ ದಿಯಾ ಚಿತ್ರ ತಂಡದಿಂದ ಮತ್ತೊಂದು‌ ಸಿಹಿ ಸುದ್ದಿ ಹೊರಬಿದ್ದಿದೆ. ‘ದಿಯಾ’ ಈಗಾಗಲೇ ತೆಲುಗು, ತಮಿಳಿಗೆ ರಿಮೇಕ್ ಆಗುವ ಸುದ್ದಿಯಿತ್ತು.‌ಇದೀಗ ಅದು ಹಿಂದಿಗೂ ರಿಮೇಕ್ ಆಗುತ್ತಿದ್ದು, ಅಲ್ಲಿ ನಿರ್ದೇಶಕ ಅಶೋಕ್ ಅವರೇ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ‌. ಈಗಾಗಲೇ ಒಂದು ಹಂತದ ಮಾತುಕತೆ ಕೂಡ ನಡೆದಿದೆಯಂತೆ.‌ ಹಾಗೊಂದು ವೇಳೆ ಅವರೇ ಅಲ್ಲಿ ನಿರ್ದೇಶನ ಮಾಡುವುದಾದರೆ ಅದೊಂದು ಬಂಪರ್ ಅವಕಾಶ.
ಈ ಕುರಿತು ನಿರ್ದೇಶಕ ಅಶೋಕ್ ಏನ್ ಹೇಳ್ತಾರೆ? ‘ ಫೈನಲ್ ಆಗಿಲ್ಲ. ಒಂದು ಹಂತದ ಮಾತುಕತೆ ಆಗಿದ್ದು‌ನಿಜ. ಆದ್ರೆ ಸಿನಿಮಾದ‌ಮಾತುಕತೆ ಗೊತ್ತಲ್ವಾ, ಅಧಿಕೃತ ವಾಗಲೇ ಅದು‌ನಿಜವಾಗುತ್ತೆ. ಆದರೆ ಅಲ್ಲಿನ ಒಂದು‌ದೊಡ್ಡ ಸಂಸ್ಥೆಯೇ ರಿಮೇಕ್ ಹಕ್ಕು ಪಡೆದಿದೆ.ಚಿತ್ರ ಚೆನ್ನಾಗಿ ಮಾಡಬಹುದು ಎನ್ನುವ ನಂಬಿಕೆ ಯಿದೆಮ ಅವರಿಗೆ ನಾನೇ ನಿರ್ದೇಶನ ಮಾಡಿದರೆ ಚೆನ್ನಾಗಿರುತ್ತೆ ಎನ್ನುವ ನಂಬಿಕೆ. ಅ‌ನಿಟ್ಟಿನಲ್ಲೇ ಮಾತುಕತೆ ಆಗಿದೆ. ಫೈನಲ್ ಆಗುವುದು ಬಾಕಿಯಿದೆ’ ಎನ್ನುವುದು ಅಶೋಕ್ ಅವರ ಪ್ರತಿಕ್ರಿಯೆ.

Categories
ಸಿನಿ ಸುದ್ದಿ

ಚಿರಂಜೀವಿ, ತಮನ್ನಾ ಸೇರಿ ಹೆಸರಾಂತ ಸ್ಟಾರ್ ಗಳ ಮನಸ್ಸು ಗೆದ್ದ ಅಸಾಧಾರಣ ಡಾನ್ಸರ್!

ಟಾಲಿವುಡ್ ಗೆ ಇಷ್ಟ, ಕನ್ನಡಕ್ಕೆ ಕಷ್ಟ, ಯಾಕೆ ಹೀಗೆ ಅನ್ನೋದೇ ಈಕೆಯ ಪೋಷಕರ ಸಂಕಷ್ಟ!

ನಟರ ಮಕ್ಕಳು ನಟರಾಗೋದು, ಡಾನ್ಸರ್ ಮಕ್ಕಳು ಡಾನ್ಸರ್ ಆಗೋದು, ಸಿಂಗರ್ ಮಕ್ಕಳು ಸಿಂಗರ್ ಆಗೋದು ವಿಶೇಷವೇನಲ್ಲ. ಅದೆಲ್ಲ ಈಗ ಮಾಮೂಲು. ಆದರೆ ಹಳ್ಳಿಯೊಂದರ ಬಡ ಮೆಕಾನಿಕ್ ಯೊಬ್ಬನ ಮಗಳು ಪುಟಾಣಿ ಬಾಲಕಿ ಜಗತ್ ಪ್ರಸಿದ್ಧ ಸ್ಟಾರ್ ಗಳೇ ಅಚ್ಚರಿಪಟ್ಟು ಹಾಡಿ- ಹೊಗಳುವಷ್ಟು ಸಾಧನೆ ಮಾಡುತ್ತಾಳೆಂದರೆ ಅದು ನಿಜವಾದ ಸಾಧನೆ. ಆ ಸಾಧಕಿ ಮಹಾಲಕ್ಷ್ಮಿ. ಹೆಸರಿಗೆ ತಕ್ಕಂತೆ ‘ಮಹಾ’ ಪ್ರತಿಭೆ‌. ಈ ಹಳ್ಳಿ ಪ್ರತಿಭೆಯ ಸಾಧನೆಯ ಹಿಂದಿದೆ ಒಂದು ರೋಚಕ ಕತೆ, ಅದೇನು ಅಂತ ಗೊತ್ತಾಗ ಬೇಕಾದ್ರೆ ಈ ಸ್ಟೋರಿ ಓದಿ.

ಅಸಾಧಾರಣ ಪ್ರತಿಭೆ ಈ ಪುಟಾಣಿ…

ಹೆಸರು ಮಹಾಲಕ್ಷ್ಮಿ .ಕನ್ನಡ ಹಾಗೂ ತೆಲುಗು ಕಿರುತೆರೆಗೆ ಚಿರಪರಿಚಿತ ಹೆಸರು. ಆಕೆಗೀಗ ಹತ್ತು ವರ್ಷ. ಈಗಷ್ಟೇ ಐದನೇ ತರಗತಿ ವಿದ್ಯಾರ್ಥಿನಿ. ನಾಲ್ಕನೇ ವರ್ಷದಿಂದಲೇ ಡಾನ್ಸ್ ಅಭ್ಯಾಸ ಆರಂಭಿಸಿದವಳು. ಕಲಿಕೆಗೆ ಗುರು ಇಲ್ಲ . ಕುಟುಂಬದ ದೊಡ್ಡ ಹಿನ್ನೆಲೆಯೂ ಇಲ್ಲ‌. ಮನೆಯಲ್ಲೇ ಟಿವಿ ಶೋ ನೋಡಿ ಡಾನ್ಸ್ ಹುಚ್ಚು ಹಿಡಿಸಿಕೊಂಡವಳು, ಮುಂದೆ ಅದರಲ್ಲೇ ದೊಡ್ಡ ಸಾಧನೆ ಮಾಡಿದ್ದಾಳೆ. ಮಹಾಲಕ್ಣ್ಮಿ ಎನ್ನುವ ಹೆಸರಿನ ಬಲವೋ, ದೇವರೇ ಕೊಟ್ಟ ವರವೋ ಮಹಾಲಕ್ಣ್ಮಿಗೆ ಡಾನ್ಸ್ ಎನ್ನುವುದು ನೀರು ಕುಡಿದಷ್ಟೇ ಸುಲಭ. ಮೊದಲು ಊರಿನ ವಿವಿಧ ಕಾರ್ಯಕ್ರಮಗಳಲ್ಲಿ ಕುಣಿದು ಚಪ್ಪಾಳೆ ಗಿಟ್ಟಿಸಿಕೊಂಡಿದ್ದೇ ದೊಡ್ಡ ಪ್ರೇರಣೆ ನೀಡಿದೆ. ಕನ್ನಡ ಮತ್ತು ತೆಲುಗಿನ ಜನಪ್ರಿಯ ಟಿವಿ ಡಾನ್ಸ್ ಶೋಗಳಿಗೆ ಹೋಗಿ, ಗೆದ್ದು ಬಂದಿದ್ದಾಳೆ. ರಾಜ್ಯ, ಹೊರ ರಾಜ್ಯದ ದೊಡ್ಡ ಸ್ಟಾರ್ ಗಳೇ ಹಾಡಿ- ಹೊಗಳಿದ್ದಾರೆ. ಆದರೆ ಈಗ, ಕನ್ನಡದಲ್ಲೇಕೆ ಆಕೆಯ ಪ್ರತಿಭೆಗೆ ತಕ್ಕಂತೆ ಯಾವುದೇ ಮನ್ನಣೆ ಸಿಗುತ್ತಲ್ಲ ಎನ್ನುವ ಅಳಲು ಆಕೆಯ ಪೋಷಕರದ್ದು. ಹಾಗಾದ್ರೆ ಏನಾಯ್ತು? ಅದಕ್ಕೂ ಮೊದಲು, ಆಕೆಯ ಹಿನ್ನೆಲೆ, ನೃತ್ಯ ಕಲಿತ ಸಾಹಸ, ಆ ಮೂಲಕ ಸಾಧಿಸಿದ ಯಶಸ್ಸಿನ ಕತೆ ಕೇಳಿ.

ಇಷ್ಟಕ್ಕೂ ಆಕೆ ಶ್ರೀಮಂತ‌ ಕುಟುಂಬದ ಮಗಳಲ್ಲ…

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಊಳವಿ ಮಹಾಲಕ್ಣ್ಮಿ ಊರು. ತಂದೆ ಉಮೇಶ್ ಗೌಡ. ತಾಯಿ ಉಷಾ. ಉಮೇಶ್ ಗೌಡ್ರು ಉಳವಿಯಲ್ಲೇ ಸಣ್ಣದೊಂದು ಗ್ಯಾರೇಜ್ ಇಟ್ಟುಕೊಂಡಿದ್ದಾರೆ. ತಾಯಿ ಉಷಾ ಹಾಲಿನ ಡೈರಿಯಲ್ಲಿ ವರ್ಕರ್. ಇದೊಂದು ಕೆಳ ಮಧ್ಯಮ ವರ್ಗದ ಫ್ಯಾಮಿಲಿ .ಅಂತಹ ಕುಟುಂಬದಲ್ಲಿ ಹುಟ್ಟಿ ಡಾನ್ಸ್ ನಲ್ಲಿ ದೊಡ್ಡ ಸಾಧನೆಯ ಕನಸು ಕಂಡವಳು ಈ ಮಹಾಲಕ್ಣ್ಮಿ. ‌ಆದರೆ ಆಕೆಯ ಕನಸು ನನಸಾಗಿಸುವ ಪೂರಕವಾದ ವಾತಾವರಣ ಮನೆಯಲ್ಲಿಲ್ಲ. ಡಾನ್ಸ್ ಕಲಿಸುವುದಕ್ಕಾಗಲಿ ಅಥವಾ ತರಬೇತಿ ಕೊಡಿಸುವುದಕ್ಕಾಗಲಿ ಪೋಷಕರಿಗೆ ಆರ್ಥಿಕ ಶಕ್ತಿ ಇಲ್ಲ. ಮೇಲಾಗಿ ಸಮಯವೂ ಇರಲಿಲ್ಲ. ಒಂದೊತ್ತಿನ ಊಟ ಬೇಕಾದರೆ ಅವರು ದುಡಿಯ ಲೇಬೇಕು. ಆದರೆ ಮಗಳ ಇಚ್ಚಾಶಕ್ತಿಯಂತೆ ದೊಡ್ಡ ಡಾನ್ಸರ್ ಮಾಡ್ಲಿಕ್ಕೆ ಬೇಕು ಎನ್ನುವ ಛಲ ಮಾತ್ರ ಅವರಲ್ಲಿತ್ತು. ಆಗ ಮಹಾಲಕ್ಷ್ಮಿ ಗೆ ಒಬ್ಬ ಗುರುವಾಗಿ ನಿಂತವರು ಆಕೆಯ ಮಾವ ಕಡೆನಂದಿ ಹಳ್ಳಿಯ ಕರಿಬಸಪ್ಪ ಅಲಿಯಾಸ್ ಕಬಿ ಮುತ್ತಿಗಿ.

ಮಾವ ಕಬಿ ಮುತ್ತಿಗಿ‌ ಜೊತೆಗೆ ಮಹಾಲಕ್ಷ್ಮಿ

ಅಂಗವಿಕಲತೆಯನ್ನೇ ಮೀರಿ, ಗುರುವಾಗಿ ನಿಂತರು…

ಮಹಾಲಕ್ಣ್ಮಿಯ ಮಾವ ಕಬಿ ಮುತ್ತಿಗಿ ಅಂಗ ವಿಕಲ. ಒಂದು ಕಾಲಿಲ್ಲ. ಆಕ್ಸಿಡೆಂಟ್ ನಲ್ಲಿ ಕಾಲು ಕಳೆದು ಕೊಂಡು ಶಾಶ್ವತವಾಗಿ, ಊನವಾಗುಂತಾಗಿದೆ. ಅದಕ್ಕಾಗಿಯೇ ಆಗವರು ಮನೆಹಿಡಿದಿದ್ದರು. ಅವರ ಆರೈಕೆಗೆ ಅವರ ಅಕ್ಕ-ಮಾವ ಸಾಥ್ ನೀಡಿದ್ದರು. ಅದರ ಋಣ ತೀರಿಸುವ ಅವಕಾಶವನ್ನೇ ಬಳಸಿಕೊಂಡು, ಸೊಸೆಯನ್ನು ದೊಡ್ಡ ಡಾನ್ಸರ್ ಮಾಡಲು ಹೊರಟರು.’ ಮಹಾಲಕ್ಷ್ಮಿ‌ ನಂಗೆ ಸೊಸೆಯಲ್ಲ ಮಗಳು. ಆಕೆ ನಾಲ್ಕು ವರ್ಷದಲ್ಲಿದ್ದಾಗಲೇ ಡಾನ್ಸ್ ಕಲಿಯಲು ಶುರು ಮಾಡಿದಳು. ಅದು ಆಕೆಗೆ ದೇವರೇ ಕೊಟ್ಟ ವರ. ಟಿ ವಿಗಳಲ್ಲಿ‌ ನೋಡಿದ್ದನ್ನು ಪಟ್ಟಂತೆ ನಮ್ಮೆದುರು ಮಾಡಿ ತೋರಿಸುತ್ತಿದ್ದಳು. ನಮಗೆಲ್ಲ ಒಂದ್ರೀತಿ ಅಚ್ಚರಿ. ಇನ್ನೊಂದು ರೀತಿಯಲ್ಲಿ ಸಂತೋಷ.‌ ಅದನ್ನೇ ಗಂಬೀರವಾಗಿ ಪರಿಗಣಿಸಿ, ಆಕೆಗೆ ಒಂದಷ್ಟು ಜಿಮ್ನಾಸ್ಟಿಕ್ ತರಬೇತಿ ನೀಡತೊಡಗಿದೆ. ಜತೆಗೆ ಡಾನ್ಸ್ ತರಬೇತಿಯೂ ಅಗತ್ಯ ಎನಿಸಿತು. ಅದಕ್ಕೂ ಅಲೆದಾಡಿದೆ. ನುರಿತ ಡಾನ್ಸ್ ಮಾಸ್ಟರ್ ಹತ್ತಿರದಲ್ಲಿ ಸಿಗಲಿಲ್ಲ. ‌ಅಲೆದಾಡಿದೆ. ಸೊರಬದಲ್ಲಿ ಒಂದಷ್ಟು ದಿನ ಡಾನ್ಸ್ ಕಲಿತಳು. ಆಕೆಯ ಡಾನ್ಸ್ ಸಾಮಾರ್ಥ್ಯ ಕ್ಕೆ ನುರಿತ ನೃತ್ಯ ನಿರ್ದೇಶಕರೇ ಸೂಕ್ತ ಎನಿಸಿತು. ಕೊನೆಗೆ ಪರಿಚಿತರೊಬ್ಬರ ಬಳಿ ಕರೆದುಕೊಂಡು ಹೋದೆ. ಅವರು ಕೊಟ್ಟ ಸಲಹೆಯೇ ಟಿವಿ ಶೋ ಗಳಿಗೆ ಎಂಟ್ರಿ’ ಎನ್ನುವ ಮೂಲಕ ಹಳ್ಳಿ ಡಾನ್ಸ್ ಪ್ರತಿಭೆ ಮಹಾಲಕ್ಣ್ಮಿ ಡಾನ್ಸರ್ ಆಗಿ ರಿಯಾಲಿಟಿ ಶೋಗೆ ಎಂಟ್ರಿಯಾದ ಹಿಂದಿನ ಕತೆ ಬಿಚ್ವಿಡುತ್ತಾರೆ ಕಬಿ ಮುತ್ತಿಗಿ.

ವೈಲ್ಡ್ ಕಾರ್ಡ್ ಎಂಟ್ರಿ ಎಂಬ ಅದೃಷ್ಟ ದ ಬಾಗಿಲು…

ನಿಜಕ್ಕೂ ಇದು ಅದೃಷ್ಟದಾಟ.‌ ಕಿರುತೆರೆಯ ರಿಯಾಲಿಟಿ ಶೋ ಗಳಿಗೆ ಹೋಗುವುದು ಅಂದುಕೊಂಡಷ್ಟು ಸುಲಭ ಅಲ್ಲ.ಅಲ್ಲಿ ಏನೇನೋ ಕತೆಗಳಿವೆ. ಅದರಲ್ಲೂ ಹಳ್ಳಿ ಪ್ರತಿಭೆಗಳಿಗೆ ಕೈ ಗೆಟುಕದ ಜಗತ್ತು. ಅಂತಹದರಲ್ಲಿ ಮಹಾಲಕ್ಷ್ಮಿ ಗೆ ರಿಯಾಲಿಟಿ ಶೋ ಬಾಗಿಲು ತೆರೆದಿದ್ದು ವೈಲ್ಡ್ ಎಂಟ್ರಿ‌ ಮೂಲಕ.’ ಪರಿಚಿತ ಡಾನ್ಸ್ ಮಾಸ್ಟರ್‌ಸಲಹೆಯಂತೆ ಟಿವಿ ಶೋಗಳ ಬಗ್ಗೆ ಗಮನ‌ಹ ರಿಯಿತು. ಫಸ್ಟ್ ಟೈಮ್ ‘ಕಲರ್ಸ್ ಕನ್ನಡ’ ದ ಮಾಸ್ಟರ್ ಡಾನ್ಸ್ ಗೆ ಆಡಿಷನ್ ನಡೆಯಿತು. ಆದರೆ, ಅಲ್ಲಿ ಮಹಾಲಕ್ಷ್ಮಿ ರಿಜೆಕ್ಟ್ ಆದಳು‌. ನಿರಾಸೆಯಿಂದ ವಾಪಾಸ್ ಬರುವಾಗ ಒಬ್ರು ಡಾನ್ಸ್ ಮಾಸ್ಟರ್ ಕಾಂಟ್ಯಾಕ್ಟ್ ನಂಬರ್ ತೆಗೆದುಕೊಂಡಿದ್ದರು‌ . ಅದಾಗಿ ಒಂದಷ್ಟು ದಿನ ಕಳೆಯುವ ಹೊತ್ತಿಗೆ ಫೋನ್ ಬಂತು. ಮಾಸ್ಟರ್ ಡಾನ್ಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿಯಿದೆ. ಬನ್ನಿ ಅಂದ್ರು. ಆಗ ನನ್ನೆಲ್ಲ ನೋವುಗಳು ಮರೆತು, ಸಂಭ್ರಮದಲ್ಲಿ ಬೆಂಗಳೂರು‌ಬಸ್ ಹತ್ತಿದೆವು ‘ ಎನ್ನುವಾಗ ಕಬಿ ಮುತ್ತಿಗಿ ಭಾವುಕರಾಗುತ್ತಾರೆ. ಅವರ ಕಣ್ಣಾಲೆಗಳು ತುಂಬಿಕೊಳ್ಳುತ್ತವೆ.

ಆಟ ಜೂನಿಯರ್ಸ್ ನಲ್ಲಿ‌ಗೆದ್ದ ಕ್ಷಣ

ವೇದಿಕೆ ಏರಿಸಿದ್ದು ಕಲರ್ಸ್ ಕನ್ನಡ, ಬಹುಮಾನ ನೀಡಿದ್ದು ಝೀ ತೆಲುಗು..
ಮಹಾಲಕ್ಷ್ಮಿ ವೈಲ್ಡ್ ಕಾರ್ಡ್ ಮೂಲಕ ಮಾಸ್ಟರ್ ಡಾನ್ಸರ್ ಎಂಟ್ರಿಯಾದಳು. ಅಲ್ಲಿ ನುರಿತ ನೃತ್ಯ ನಿರ್ದೇಶಕರ ಮೂಲಕ‌ ಜನಪ್ರಿಯ ಗೀತೆಗಳಿಗೆ ತೀರ್ಪುಗಾರರೇ ಅಚ್ವರಿ ಪಡುವಂತೆ ಕುಣಿದಳು. ಹೆಸರಾಂತ ನೃತ್ಯಗಾರ್ತಿ ಮಯೂರಿ ಸೇರಿದಂತೆ ನಟರಾದ ಯೋಗಿ, ವಿಜಯ್ ರಾಘವೇಂದ್ರ‌ ಅವರ ಮೆಚ್ಚುಗೆ ಪಡೆದುಕೊಂಡಳು. ಆದರೆ ಅಲ್ಲಿ ಅವಳು ರನ್ನರ್ ಆಗಿ ತೃಪ್ತಿಪಟ್ಟು ಕೊಳ್ಳಬೇ ಕಾಯಿತು.‌ಮುಂದೆ ತೆಲುಗು ರಿಯಾಲಿಟಿ ಶೋ‌ನಲ್ಲಿ ಕಾಣಿಸಿಕೊಂಡಳು. ಝೀ ತೆಲುಗು ಚಾನೆಲ್ ‘ ಆಟ ಜೂನಿಯರ್ಸ್’ ನಲ್ಲಿ ಮಹಾಲಕ್ಷಿಯದ್ದೇ ಅಬ್ಬರ.‌ ಅದೇನು ಡಾನ್ಸ್ ಅಂತೀರಾ, ಭಾರತೀಯ ಚಿತ್ರರಂಗದ ಹೆಸರಾಂತ ಕೋರಿಯೋಗ್ರಾಫರ್ ಮುಗೂರು ಸುಂದರ್ ಅವರೇ ಶಹಬ್ಬಾಸ್ ಅಂದ್ರು. ಮೆಗಾಸ್ಟಾರ್ ಚಿರಂಜೀವಿ, ಮಿಲ್ಕಿ ಬ್ಯೂಟಿ ತಮ್ಮನ್ನಾ, ಪ್ರಿಯಾಮಣಿ, ರಶ್ಮಿಕಾ‌ಮಂದಣ್ಣ‌ ಮುಂತಾದವರೆಲ್ಲ ಮಹಾಲಕ್ಣ್ಮಿ ನೃತ್ಯಕ್ಕೆ ಅಚ್ವರಿಪಟ್ಟರು. ಅಪಾರ ಮೆಚ್ಚುಗೆ ಫಲ ನೀಡಿತು. ಆ ಶೋ ವಿನ್ನರ್ ಆದಳು ಮಹಾಲಕ್ಣ್ಮಿ. ಮುಂದೆ ಅಲ್ಲಿಯೇ ಕಪಲ್ ಸೆಲಿಬ್ರಟಿ‌ಶೋ ನಲ್ಲೂ ನರ್ತಿಸಿದಳು ಈ ನಾಟ್ಯ ಮಯೂರಿ.

ಪ್ರೀ ಸ್ಟೈಲ್ ಡಾನ್ಸರ್..

ಶೂಟಿಂಗ್ ಸೆಟ್ ನಲ್ಲಿ ಮಹಾಲಕ್ಣ್ಮಿ

ಮಹಾಲಕ್ಣ್ಮಿ ಪ್ರೀ ಸ್ಟೈಲ್ ಡಾನ್ಸರ್. ಇಂತಹದೇ ಕಲಾ ಪ್ರಕಾರ ಅಂತಿಲ್ಲ. ಯಾವುದೇ ನೃತ್ಯ ಹೇಳಿಕೊಟ್ಟರೂ, ಅದನ್ನು ಕ್ಷಣ ಮಾತ್ರದಲ್ಲಿ ಕಲಿತು, ನೋಡುಗರು ಅಚ್ಚರಿ ಪಡುವಂತೆ ಮಾಡಿ‌ ತೋರಿಸುವ ಸಾಮಾರ್ಥ್ಯ ಮತ್ತು ಬುದ್ದಿವಂತಿಕೆ‌ ಆಕೆಯಲ್ಲಿದೆ. ಅದೇ ಅವಳ‌ ಕರಿಯರ್ ಗೆ ವರವಾಗಿದೆ. ಶೋ ವೇದಿಕೆ ಮೇಲೆ ಬಂದರೆ ಮಹಾಲಕ್ಣ್ಮಿ‌ಅವರದ್ದು ಅಕ್ಷರಶಃ ಡಾನ್ಸ್ ವಾರ್. ಚೈನಿ ಜಿಮ್ನಾಸ್ಟಿಕ್ ಪಟುಗಳೇ ಬೆಚ್ಚಿ ಬೀಳುವ ಹಾಗೆ ಮೈ ಯನ್ನು ರಬ್ಬರ್ ನಂತೆ ಬಾಗಿಸುತ್ತಾಳೆ‌. ಚೆಂಡಿನಂತೆ ಪುಟಿದೇಳುತ್ತಾಳೆ. ಟ್ರೆಡಿಷನಲ್ ಗೀತೆಗಳಾಗಲಿ, ಮಾರ್ಡನ್ ಗೀತೆಗಳಾಗಲಿ ಎಲ್ಲದಕ್ಕೂ ಸೈ ಈ‌ ಮಹಾಲಕ್ಣ್ಮಿ.

ಇವರೆಲ್ಲ ಮಹಾಲಕ್ಷ್ಮಿ‌ಗುರುಗಳು
ಸ್ಥಳೀಯವಾಗಿ ಮಹಾಲಕ್ಷ್ಮಿ‌‌ ಹಲವು ಡಾನ್ಸ್‌ಮಾಸ್ಟರ್ ಬಳಿ ತರಬೇತಿ ಪಡೆದಳು.‌ಶಿರಾಳಕೊಪ್ಪದ ಅಂಜಿ, ಆನವಟ್ಟಿಯ ಅಮಿತ್, ಸೊರಬದ ನೀಯಾಜ್ ಆ್ಯಂಡ್ ಸ್ಟಿವನ್ ಹಾಗೂ ಹಿರೇಕೆರೂರ ನ ಅರುಣ್ ಅವರ ಬೆಂಬಲ‌ ಮಹಾಲಕ್ಷ್ಮಿ ಯ ಸಾಧನೆಗೆ‌ ಸಾಥ್ ನೀಡಿತು.‌ಅಲ್ಲಿ‌ಂದಲೇ ಆಕೆ‌‌‌ರಿಯಾಲಿಟಿ ಶೋ ವೇದಿಕೆ ಏರುವಂತಾಯಿತು. ಮುಂದೆ ಕಲರ್ಸ್ ಸೂಪರ್ ನಲ್ಲಿ ಮಾಸ್ಟರ್ ಡ್ಯಾನ್ಸರ್ ಪವನ್, ಝೀ ತೆಲುಗು ಆಟ‌ಜೂನಿಯರ್ಸ್ ನಲ್ಲಿ ಯಶವಂತ್ ಮಾಸ್ಟರ್,
ಅದೇ ಚಾನೆಲ್ ನ ‘ ಡ್ಯಾನ್ಸ್ ಜೋಡಿ ಡ್ಯಾನ್ಸ್ ‘ ಸೆಲೆಬ್ರೆಟಿ ರಿಯಾಲಿಟಿ ಶೋ ನಲ್ಲಿ ಸುದರ್ಶನ್ ಮಾಸ್ಟರ್ ಕೊಟ್ಟ ಟ್ರೈನಿಂಗ್ ಅತ್ಯಾದ್ಬುತ ಎನ್ನುವ ಮಾತು ಕಬಿ‌ಮುತ್ತಿಗಿ ಅವರದು.

ಮಹಾಲಕ್ಣ್ಮಿ ಗೆ ಬಂದಿವೆ ಸಿನಿಮಾ‌ ಅವಕಾಶ..

ಮಹಾಲಕ್ಷ್ಮಿ ಈಗ ಸಿನಿಮಾ‌ನಟಿ. ಹೌದು, ಪುಟಾಣಿಗೆ ಈಗ ಸಿನಿಮಾ‌ ಬೇಡಿಕೆ ಬಂದಿವೆ. ಈಗಾಗಲೇ ವಿಶಾಲ್ ರಾಜ್ ನಿರ್ದೇಶನದ ‘ದಂತ ಪುರಾಣ ‘ಚಿತ್ರದಲ್ಲಿ ಮಹಾಲಕ್ಣ್ಮಿ ಅಭಿನಯಸಿದ್ದಾಳೆ. ಮತ್ತೆರೆಡು ಸಿನಿಮಾಗಳಿಗೂ ಆಫರ್ ಬಂದಿವೆ. ಹಾಗೆಯೇ ತೆಲುಗಿನಲ್ಲೂ‌ಒಂದು ಚಿತ್ರದಲ್ಲಿ ಅಭಿನಯಿಸಲು ಕೇಳಿದ್ದಾರಂತೆ.ಆದರೆ ಇವೆಲ್ಲ ಲಾಕ್ ಡೌನ್ ಆರಂಭಕ್ಕೂ ಮುಂಚೆ ಆದ ಮಾತುಕತೆ. ಈಗ ಇವೆಲ್ಲ ಮತ್ತೆ ಹೇಗೆ ಅನ್ನೋದು ಗೊತ್ತಿಲ್ಲ ಎನ್ನುವ ಮಾತು‌ ಆಕೆಯ‌ಮಾವ ಕಬಿ‌ಮುತ್ತಿಗೆ ಅವರದು.

ನಿರೀಕ್ಷಿತ ಪ್ರೋತ್ಸಾಹ ಸಿಕ್ಕಿಲ್ಲ ಎಂಬ ಕೊರಗು..

ನೋ‌ ಡೌಟ್, ಪುಟಾಣಿ ಮಹಾಲಕ್ಣ್ಮಿ ಒಬ್ಬ ಅಸಾಧಾರಣ ಪ್ರತಿಭೆ. ಯಾವುದೇ ಸೂಕ್ತ ತರಬೇತಿ ಇಲ್ಲದೆ, ಆಕೆ ರಿಯಾಲಿಟಿ ಶೋಗಳಲ್ಲಿ ಕುಣಿಯುವುದನ್ನು ನೋಡಿದರೆ ಎಂತವರಿಗೂ ಮೈ ಝುಮ್ ಎನ್ನುತ್ತೆ. ಅಷ್ಟು ನೃತ್ಯ ಪ್ರವೀಣೆ. ಇದೆಲ್ಲ ಯಾರೋ ಕಲಿಸಿದ್ದುಎನ್ನುವುದಕ್ಕಿಂತ ಅದೊಂದು ಗಾಡ್ ಗಿಫ್ಟ್ ಎಂದೇ ನಂಬಿದ್ದಾರೆ ಆಕೆಯ ಪೋಷಕರು. ಆದರೂ ಆಕೆಗೆ ಒಳ್ಳೆಯ ತರಬೇತುದಾರರು ಬೇಕಿದೆ. ಹಾಗೆಯೇ ಅವಳಲ್ಲಿರುವ ಆಸಕ್ತಿಗೆ ದೊಡ್ಡ ಪ್ರೋತ್ಸಾಹ ವೂ ಬೇಕಿದೆ. ಅದೆಲ್ಲ ಸಿಕ್ಕರೆ ರಾಜ್ಯ ಮಾತ್ರವಲ್ಲ ಇಡೀ ದೇಶವೇ ಮೆಚ್ಚುವ ಡಾನ್ಸರ್ ಆಗುತ್ತಾಳೆಂಬ ಆಸೆ ಆಕೆಯ ಮಾವ ಕಬಿ ಮುತ್ತಿಗೆ ಅವರದು. ಆದರೆ ಅದೇ ಇಲ್ಲಿ ಆಕೆಗೆ ಸರ್ಕಾರದಿಂದಾಗಲಿ, ಮಾಧ್ಯಮದಿಂದಾಗಲಿ ಒಳ್ಳೆಯ ಪ್ರೋತ್ಸಾಹ ಸಿಗುತ್ತಿಲ್ಲ ಎನ್ನುವುದು ಅವರ ಬೇಸರ.’ ಹಳ್ಳಿ ಪ್ರತಿಭೆಗೆ ಪ್ರೋತ್ಸಾಹ ಇಲ್ಲ ಸರ್.‌ಅದೇ ಮಹಾಲಕ್ಣ್ಮಿ ಪಟ್ಟಣದ ಯಾವುದಾದರೂ ಅನುಕೂಲಸ್ಥ ಕುಟುಂಬದ ಲ್ಲಿ ಹುಟ್ಟಿದ್ದರೆ ದೊಡ್ಡ ಅವಕಾಶಗಳೇ ಸಿಗುತ್ತಿದ್ದವೋ ಏನೋ. ಮಾಧ್ಯಮದವರಂತೂ ನಮ್ಮ‌ಕಡೆ ತಿರುಗಿಯೂ ನೋಡಿಲ್ಲ. ಎಷ್ಟೇ ಆದ್ರೂ ಹಳ್ಳಿ ಪ್ರತಿಭೆಯಲ್ಲವೇ, ಅವರಿಗೆ ಇದು ಬೇಡ’ ಎನ್ನುತ್ತಾ ತಮ್ಮೊಳಗಿನ ಅಗಾಧ ನೋವನ್ನು ಹೊರ ಚೆಲ್ಲುತ್ತಾರೆ ಕಬಿ‌ಮುತಿಗೆ.‌ಇನ್ನಾದರೂ ಈ ಪ್ರೋತ್ಸಾಹ ಸಿಗಬಹುದೇ ಎನ್ನುವುದು ಅವರ ನಿರೀಕ್ಷೆ.

Categories
ಸಿನಿ ಸುದ್ದಿ

ಶುಭಾರಂಭವೋ, ಮತ್ತದೇ ಆತಂಕವೋ.!?

ಚಿತ್ರರಂಗಕ್ಕೆ ಪರ್ವಕಾಲ, ಹಾಗೆಯೇ ಅಗ್ನಿ‌ಪರೀಕ್ಷೆಯ ಕಾಲವೂ ಹೌದು 

ಚಿತ್ರ ರಂಗಕ್ಕೆ ನಾಳೆ ಪರ್ವ ಕಾಲ. ಒಂದ್ರೀತಿ ಅಗ್ನಿ‌ಪರೀಕ್ಷೆಯ ಕಾಲವೂ ಹೌದು. ಹೆಚ್ಚು ಕಡಿಮೆ ಏಳು ತಿಂಗಳ ನಂತರ ಚಿತ್ರಮಂದಿರಗಳು ಒಪನ್ ಆಗುತ್ತಿವೆ. ಆ ಮೂಲಕ ಸಿನಿಮಾಗಳೂ ರಿಲೀಸ್ ಆಗುತ್ತಿವೆ. ಹಾಗಂತ ರಿಲೀಸ್ ಆದ ಸಿನಿಮಾಗಳೆಲ್ಲ ರಾಜ್ಯದ ಎಲ್ಲಾ ಚಿತ್ರ ಮಂದಿರಗಳಲ್ಲೂ ಬಿಡುಗಡೆ ಆಗುತ್ತಿವೆ ಎನ್ನುವ ನಂಬಿಕೆಯಾಗಲಿ, ಒಪನ್ ಆದ ಚಿತ್ರಮಂದಿ ರಗಳಿಗೆ ಪ್ರೇಕ್ಷಕರು ಬರುತ್ತಾರೆನ್ನುವ ಖಾತರಿ ಯಾರಿಗೂ ಇಲ್ಲ. ಆದರೂ ಮುಂದಿನ ಒಂದಷ್ಟು ಕಾಲದ ಭವಿಷ್ಯ ನಾಳೆ ನಿರ್ಧಾರವಾಗುತ್ತೆ.

ಒಂದು ಪ್ರಯೋಗವಷ್ಟೇ..

ಕೊರೋ‌ನಾ ಬಗ್ಗೆ ಜನರಿಗೆ ಮೊದಲಿನಷ್ಟು ಭಯ ಇಲ್ಲ ಎನ್ನುವುದು , ಅದರ ಜತೆಗೆ ಬಹುತೇಕ ಚಟುವಟಿಕೆ ಮೊದಲಿನಂತಾಗುತ್ತಿರುವುದು ಒಂದಷ್ಟು ನಂಬಿಕೆ ಹುಟ್ಟಿಸಿದ್ದು.‌ಆದರ ವಾಸ್ತವ ನಾಳೆ ಮತ್ತು ನಾಡಿದ್ದು ಗೊತ್ತಾಗಲಿದೆ. ಯಾಕಂದ್ರೆ ನಾಳೆ ಒಂದಷ್ಟು ಸಿನಿಮಾಗಳು ರಿಲೀಸ್ ಆಗುತ್ತಿದ್ದರೆ, ನಾಡಿದ್ದು ಒಂದೆರೆಡು ಚಿತ್ರಗಳು ತೆರೆ ಕಾಣುತ್ತಿವೆ. ಎಲ್ಲವೂ ಪ್ರಯೋಗ. ಜತೆಗೆ ರಿ ರಿಲೀಸ್.

ಮತ್ತೊಂದು ಅವಕಾಶ ಸಿಕ್ಕ ಖುಷಿ..

ಸದ್ಯಕ್ಕೀಗ ಗೊತ್ತಾಗಿರುವ ಪ್ರಕಾರ ‘ಲವ್ ಮಾಕ್ಟೆಲ್, ‘ಶಿವಾರ್ಜುನ’, :’ಶಿವಾಜಿ ಸುರತ್ಕಲ್”, ಕಾಣದಂತೆ ಮಾಯವಾದನು’ ಹಾಗೂ’ ಥರ್ಢ್ ಕ್ಲಾಸ್’ ಹಾಚಿತ್ರಗಳು ಬಿಡುಗಡೆ ಘೋಷಿಸಿವೆ‌‌ . ಮುಂದಿನ ವಾರಕ್ಕೆ ‘ದಮಯಂತಿ ‘ ಫಿಕ್ಸ್ ಆಗಿದೆ.ಇವೆಲ್ಲ ಲಾಕ್ ಡೌನ್ ಆರಂಭಕ್ಕೂ ಮುನ್ನವೇ ರಿಲೀಸ್ ಆದ ಚಿತ್ರಗಳು.‌ ಕೆಲವು ಚಿತ್ರಗಳಿಗೆ ಒಳ್ಳೆಯ ಒಪನಿಂಗ್ ಕೂಡ ಸಿಕ್ಕಿತ್ತು. ಇನ್ನು ಕೆಲವು ರಿಲೀಸ್ ಆದ ಒಂದೇ ವಾರದಲ್ಲಿ ಲಾಕ್ ಡೌನ್ ಹೊಡೆತಕ್ಕೆ ಸಿಲುಕಿದವು‌. ಈಗ ಅವೆಲ್ಲವಕ್ಕೂ ಮತ್ತೊಂದು ಅವಕಾಶ ಸಿಕ್ಕಿದೆ. ಅದು ಎಷ್ಡರ ಮಟ್ಟಿಗೆ ಸಫಲವಾಗುತ್ತೆ ಎನ್ನುವುದು ಸಹಜವಾಗಿಯೇ ಕುತೂಹಲ ಹುಟ್ಟಿಸಿದೆ.

200 ಟಾಕೀಸ್ ಗಳು ಒಪನ್ ಆಗುವುದೇ ಡೌಟಂತೆ..

‌ಮೊದಲೇ ರಾಜ್ಯದಲ್ಲಿ ಚಿತ್ರಮಂದಿರಗಳ ಪರಿಸ್ಥಿತಿ ಭೀಕರವಾಗಿತ್ತು. ಬೆಂಗಳೂರಿನ ಕೆ.ಜಿ ರಸ್ತೆಯ ಚಿತ್ರಮಂದಿರಗಳು ಸೇರಿ ರಾಜ್ಯದ ಹಲವೆಡೆ ಚಿತ್ರಮಂದಿರಗಳು ಉರುಳಿಬಿದಿದ್ದವು. ಅದೇ ಹಾದಿಯಲ್ಲಿ ಸಾಕಷ್ಟು ಚಿತ್ರಮಂದಿರಗಳು ಇದ್ದವು. ಅವುಗಳಿಗೆಲ್ಲ ಕೊರೋನಾ ಅನ್ನೋದೇ ಒಂದು ನೆಪವಾಗಿದೆ. ಲಾಕ್ ಡೌನ್ ಕಾರಣಕ್ಕೆ ಬಾಗಿಲು ಮುಚ್ವಿರುವ ರಾಜ್ಯದ 700 ಕ್ಕೂ ಹೆಚ್ಚು ಚಿತ್ರಮಂದಿರಗಳ ಪೈಕಿ 200 ಚಿತ್ರಮಂದಿರಗಳು ಇನ್ನು ಮುಂದೆ ಒಪನ್ ಆಗುವುದೇ ಡೌಟು ಎನ್ನುವ ಮಾತು ಚಿತ್ರೋದ್ಯಮದವರಿಂದಲೇ ಕೇಳಿಬಂದಿದೆ.

ಕೆಲವು ತೆರೆಗೆ ವಿನಾಯಿತಿಗೂ ಜೀವ ಉಳಿಸಿಕೊಂಡಿವೆ….

ರಾಜ್ಯದ ಚಿತ್ರಮಂದಿರಗಳ ಮಾಲೀಕರು ಈಗ ಸರ್ಕಾರದ ಮುಂದೆ ಒಂದು ಬೇಡಿಕೆ ಇಟ್ಟಿದ್ದಾರಂತೆ. ಲಾಕ್ ಡೌನ್ ಅವಧಿಯಲ್ಲಿ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು‌ಮುಚ್ವಿದ್ದರಿಂದ ತೀವ್ರ ಆರ್ಥಿಮ ಸಂಕಷ್ಟ ಎದುರಾಗಿದೆ. ಸಿಬ್ಬಂದಿ ಸಂಬಳ, ನಿತ್ಯ ನಿರ್ವಹಣೆಗೆ ತೊಂದರೆಯಾಗಿದೆ. ಅಂತಹದರಲ್ಲಿ ಕರೆಂಟ್ ಬಿಲ್ಲು ಸೇರಿ ಸರ್ಕಾರವು ಟಾಕೀಸ್ ಮಾಲೀಕರಿಗೆ ವಿಧಿಸಿರುವ ಇತರೆ ತೆರಿಗೆಗೆ ವಿನಾಯಿತಿ ಕೊಡಬೇಕು. ಲಾಕ್ ಡೌನ್ ಕಾಲದ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಸರ್ಕಾರ ಹಾಗೊಂದು ಭರವಸೆ ನೀಡುವ ತನಕ ಚಿತ್ರಮಂದಿರಗಳನ್ನು ಬಂದ್ ಮಾಡಬೇಕೆಂಬ ನಿರ್ಧಾರ ಮಾಡಿರುವ ಸುದ್ದಿಯಿದೆ. ಸರ್ಕಾರ ಅದನ್ನು ಎಷ್ಟರಮಟ್ಟಿಗೆ ಪರಿಗಣಿಸುತ್ತೋ ಗೊತ್ತಿಲ್ಲ. ಆದರೆ, ಸರ್ಕಾರ ನಿರ್ಧಾರದ ಮೇಲೆ ರಾಜ್ಯದ ಟಾಕೀಸ್ ಗಳ‌ ಅಸ್ತಿತ್ವವೂ ಅಡಗಿದೆ ಎನ್ನುವ ಮಾತುಗಳನ್ನು ಕೇಳಿದರೆ, ಟಾಕೀಸ್ ಗಳು ಉಳಿತ್ರವೋ ಇಲ್ಲವೋ? ನೆನೆಸಿಕೊಂಡರೆ ಭಯ ಶುರುವಾಗುತ್ತೆ.

Categories
ಸಿನಿ ಸುದ್ದಿ

ಭೂಮಿಗೆ ತೆರೆಯಿತು‌ ಬೆಳ್ಳಿತೆರೆಯ ಬಾಗಿಲು !

ಪೇಪರ್ ಬೋಟ್ ಏರಿ ಸಿನಿ ಅಂಗಳಕ್ಕೆ ಬಂದ ಭೂಮಿಕಾಳ ಸಿನಿ ಎಂಟ್ರಿಗಿದೆ ಒಂದು ರೋಚಕ ಟ್ವಿಸ್ಟ್

ಭೂಮಿಕಾ‌, ಕನ್ನಡ‌ ಚಿತ್ರರಂಗಕ್ಕೆ ಇದೇನು ಹೊಸ ಹೆಸರು ಅಲ್ಲ. ಕನ್ನಡ ಚಿತ್ರರಂಗಕ್ಕೆ ಮತ್ತೆ ಬಂದರು ಭೂಮಿಕಾ‌ ಅಂದರೆ, ತಕ್ಷಣ ನೆನಪಾಗುವುದು ಬಹುಭಾಷೆ ನಟಿ ಭೂಮಿಕಾ‌ ಚಾವ್ಲಾ.ಆದರೆ ಈಗ ಕನ್ನಡ ಚಿತ್ರರಂಗಕ್ಕೆ‌ಬಂದಿದ್ದು ಬಹುಭಾಷೆ ನಟಿ‌ ಭೂಮಿಕಾ‌ ಅಲ್ಲ.ಬದಲಿಗೆ ಬೆಂಗಳೂರು ಮೂಲದ ಕ್ಲಾಸಿಕಲ್ ಡಾನ್ಸರ್ ಭೂಮಿಕಾ‌.  ಅಲಿಯಾಸ್ ಭೂಮಿಕಾ‌ ರಮೇಶ್.

ಡಿಸೆಂಬರ್ 24 ಚಿತ್ರದಲ್ಲಿನ ಲುಕ್

ಆಸಕ್ತಿ ಅಥವಾ ಅಭಿರುಚಿ ಎನ್ನುವುದಕ್ಕಿಂತ ಸಿನಿಮಾ‌ ಅನ್ನೋದೇ ಒಂದು ಆಕರ್ಷಣೀಯ ಕ್ಷೇತ್ರ. ನೇಮ್ ಆ್ಯಂಡ್ ಫೇಮ್ ಇಲ್ಲಿ ಬಹುಬೇಗ ಸಿಗುತ್ತೆ. ಅದಕ್ಕಾಗಿಯೇ  ಇಲ್ಲಿಗೆ ಬಂದವರಿಗೇನು ಕಮ್ಮಿ ಇಲ್ಲಮ ಹಾಗೆಯೇ  ಆಕಸ್ಮಿಕವಾ ಗಿಯೂ ಎಂಟ್ರಿಯಾದವರಿದ್ದಾರೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ನಟಿ ಭೂಮಿಕಾ‌ ರಮೇಶ್. ಈಗಷ್ಟೇ ಚಿತ್ರೀಕರಣದ ಹಂತದಲ್ಲಿರುವ ‘ಪೇಪರ್ ಬೋಟ್’ ಹಾಗೂ ‘ ಡಿಸೆಂಬರ್ 24 ‘ ಚಿತ್ರಗಳಿಗೆ ನಾಯಕಿಯಾಗಿ ಚಂದನವನದಲ್ಲಿ ಕುತೂಹಲ ಮೂಡಿಸಿದ್ದಾರೆ  ಈ ನಟಿ ಕಮ್ ಕ್ಲಾಸಿಕಲ್ ಡಾನ್ಸರ್.

ಭೂಮಿಕಾ ಎಂಬ ಮೈಸೂರು ಮಲ್ಲಿಗೆ…

ಭೂಮಿಕಾ‌ ರಮೇಶ್ , ಮೂಲತಃ ಮೈಸೂರು ಹುಡುಗಿ. ಸದ್ಯಕ್ಕೆ ಬೆಂಗಳೂರಿನಲ್ಲೇ ಸೆಟ್ಲ್ .‌ ಇದೀಗ ಡಿಗ್ರಿ ಓದುತ್ತಿದ್ದಾರೆ. ಆದರೆ ಬಾಲ್ಯದಿಂದಲೇ ಕಿರುತೆರೆಯ ಡಾನ್ಸ್ ರಿಯಾಲಿಟಿ ಶೋ‌ನಲ್ಲಿ ಇವರು ಸಾಕಷ್ಟು ಫೇಮಸ್. ಝೀ‌ ತೆಲುಗು ಚಾನಲ್ ನ ‘ಆಟ ಜೂನಿಯರ್ಸ್ ‘ ಡಾನ್ಸ್  ರಿಯಾಲಿಟಿ ಶೋ ವಿನ್ನರ್ ಕೂಡ ಹೌದು‌. ಅಷ್ಟೇ ಅಲ್ಲ, ಭರತ ನಾಟ್ಯ ಪ್ರವೀಣೆ. 2018 ರಲ್ಲಿ ಕ್ಲಾಸಿಕಲ್ ಡಾನ್ಸ್ ಕಾಂಪಿಟೀಷ್ ನಲ್ಲಿ ‘ ಒರಿಸ್ಸಾ ಮಿಸ್ ಮೊನಾಲಿಸಾ’ ಗೆದ್ದ ಹೆಗ್ಗಳಿಕೆ ಇವರದು‌. ಅದೇ ಜನಪ್ರಿಯತೆ ಯೊಂದಿಗೀಗ ‘ಪೇಪರ್ ಬೋಟ್’ ಏರಿ ಸಿನಿ‌ ಅಂಗಳಕ್ಕೂ‌ ಕಾಲಿಟ್ಟಿದ್ದಾರೆ. ಅಂದ ಹಾಗೆ ‘ ಪೇಪರ್ ಬೋಟ್ ‘ ಭೂಮಿಕಾ ಅಭಿನಯದ ಮೊದಲ ಚಿತ್ರ. ಅದೀಗ ಚಿತ್ರೀಕರಣದ ಹಂತದಲ್ಲಿದೆ. ಅದರ ಜತೆಗೀಗ ‘ಡಿಸೆಂಬರ್ 24 ‘ನಲ್ಲಿ ಬ್ಯುಸಿಯಾಗಿದ್ದಾರೆ. ಅದು ಕೂಡ ಎರಡನೇ ಹಂತದ ಚಿತ್ರೀಕರಣ ಶುರು ಮಾಡಿದೆ. ಯಾರಿಗುಂಟು ಈ ಅವಕಾಶ? ಮೊದಲ‌ ಚಿತ್ರವಿನ್ನು  ಚಿತ್ರೀಕರಣದಲ್ಲಿರುವಾಗಲೇ ಇನ್ನೊಂದು ಚಿತ್ರಕ್ಕೆ ನಾಯಕಿ. ಅದೃಷ್ಟ ಅಂದ್ರೆ ಹೀಗೆಯೇ.ಅದಿರಲಿ, ಇಲ್ಲಿನ‌ ಇಂಟರೆಸ್ಟಿಂಗ್ ವಿಷಯ ಅಂದ್ರೆ, ಅವರು ಡಾನ್ಸರ್ ಆಗಿ, ಸಿನಿಮಾ‌ ಜಗತ್ತಿಗೆ ಬಂದಿದ್ದು.

ತಿನ್ನೋದಿಕ್ಕೆ ಡಾನ್ಸರ್ ಅಗಿದ್ದು, ಸಿನಿಮಾಕ್ಕೂ ಬ‌ಂದಳು…

ನೀವು ನಂಬ್ತೀರಾ? ಹೆಚ್ಚೆಚ್ಚು ತಿನ್ನೋದಿಕ್ಕೆ ಭೂಮಿಕಾ‌ ಡಾನ್ಸರ್ ಆದ್ರಂತೆ. ಡಾನ್ಸರ್ ಆಗಿ ಒಂದಷ್ಟು ಹೆಸರು ಮಾಡಿದ ಕಾರಣಕ್ಕೆ ಸಿನಿಮಾಕ್ಕೂ ಬಂದ್ರಂತೆ. ಹಾಗಂತ ಭೂಮಿಕಾ‌ ಹೇಳ್ತಾರೆ. ‘ ಇದು ನಿಜವೇ. ಚಿಕ್ಕವಳಿದ್ದಾಗ ನಾನು ತುಂಬಾ ಸಣ್ಣಕ್ಕಿದ್ದೆ‌. ಊಟ, ತಿಂಡಿ ಅಂದ್ರೆ ಅಲರ್ಜಿ ಅನ್ನೋ‌ಥರ ಇತ್ತು. ಕೊನೆಗೆ ಅಪ್ಪ- ಅಮ್ಮ ಡಾಕ್ಟರ್ ಭೇಟಿ ಮಾಡಿದಾಗ ಅವರು ಒಂದು ಸಲಹೆ ಕೊಟ್ರಂತೆ. ‘ ಸುಸ್ತಾದ್ರೆ ಏನಾದ್ರೂ ತಿಂತಾಳೆ, ಡಾನ್ಸ್ ಕ್ಲಾಸ್ ಗೆ ಕಳುಹಿಸಿ, ಚೆನ್ನಾಗಿ ತಿಂತಾಳೆ. ಡಾನ್ಸ್ ಕೂಡ ಕಲಿತಾಳೆ‌ ಅಂದ್ರಂತೆ. ಹಂಗೆ ಶುರುವಾಗಿದ್ದು ಡಾನ್ಸಿಂಗ್ ಕಲಿಕೆ.‌ಅಲ್ಲಿಂದ ಕಿರುತೆರೆ ಡಾನ್ಸ್ ರಿಯಾಲಿಟಿ ಶೋ ಗೆ ಹೋದೆ. ಮೊದಲು ಕಲರ್ಸ್ ಕನ್ನಡದ ಡಾನ್ಸಿಂಗ್ ಸ್ಟಾರ್ ಗೆ  ಆಡಿಷನ್ ಮೂಲಕ ಕಂಟೆಸ್ಟೆಂಟ್ ಆಗಿ‌ಸೆಲೆಕ್ಟ್ ಆದೆ. ಅಲ್ಲಿ ಒಳ್ಳೆಯ ರೆಸ್ಪಾನ್ಸ್ ಕೂಡ ಬಂತು. ಅಲ್ಲಿಂದ ತೆಲುಗು ಝೀ ಚಾನೆಲ್ ನ ‘ ಆಟ ಜೂನಿಯರ್ಸ್ ‘ಗೂ ಕಂಟೆಸ್ಟೆಂಟ್ ಆಗಿ ಸೆಲೆಕ್ಟ್ ಆದೆ. ಅದೃಷ್ಟ ಎನ್ನುವ ಹಾಗೆ ಅಲ್ಲಿ ವಿನ್ನರ್ ಕೂಡ ಆದೆ. ಅಲ್ಲಿಂದ ಕರಿಯರ್ ಗೆ ಟರ್ನಿಂಗ್ ಪಾಯಿಂಟ್ ಸಿಗ್ತು ಅಂತ ನಟಿಯಾಗುವ ಮುಂಚಿನ ಭೂಮಿಕೆಯನ್ನು ಬಿಚ್ಚಿಡುತ್ತಾರೆ ನಟಿ ಭೂಮಿಕಾ.

ಕೇಳಿ ಪಡೆದಿದ್ದಲ್ಲ ಈ ಆಫರ್…

ಭೂಮಿಕಾ ಹೇಳುವ ಹಾಗೆ ಅವರ ಕರಿಯರ್ ಗೆ ಟರ್ನಿಂಗ್ ಪಾಯಿ‌ಂಟ್ ಸಿಕ್ಕಿದ್ದು ‘ಆಟ ಜೂನಿಯರ್ಸ್ ‘ ಡಾನ್ಸ್ಬರಿಯಾಲಿಟಿ ಶೋ ನಲ್ಲಿ ವಿನ್ನರ್ ಆಗಿದ್ದು. ಸಹಜವಾಗಿಯೇ ಅದು ಅವರಿಗೆ ಒಂದಷ್ಟು ಹೆಸರು ತಂದು‌ಕೊಟ್ಟಿತು. ಕನ್ನಡದ ಹುಡುಗಿಯೊಬ್ಬಳಿಗೆ ತೆಲುಗಿನಲ್ಲಿ ಮಾನ್ಯತೆ ಸಿಕ್ಕಿತು. ಆ ಮೂಲಕ ಅಲ್ಲಿಯೇ ಭೂಮಿಕಾ ಮತ್ತೊಂದು ಡಾನ್ಸ್ ರಿಯಾಲಿಟಿ ಶೋ ಸೆಲೆಕ್ಟ್ ಆಗಿದ್ರಂತೆ. ಆದ್ರೆ ಈ ವೇಳೆಗೆ ರಾಷ್ಟ್ರೀಯ ಮಟ್ಟದ ಕ್ಲಾಸಿಕಲ್ ಡಾನ್ಸ್  ಕಾಂಪಿಟೇಷನ್ಗೆ ಹೋಗ ಬೇಕಾಗಿದ್ರಿಂದ , ಅದು ಸ್ಕಿಪ್ ಆಯ್ತು ಎನ್ನುವ ಭೂಮಿಕಾ, ಮುಂದೆ ಆಡಿಷನ್ ಮೂಲಕವೇ ‘ಪೇಪರ್ ಬೋಟ್ ‘ಹಾಗೂ ‘ಡಿಸೆಂಬರ್ 24 ‘  ಚಿತ್ರಗಳಿಗೆ ನಾಯಕಿ ಆಗುವ ಮೂಲಕ  ಚಿತ್ರರಂಗಕ್ಕೆ ಬಂದಿದ್ದರ ಕುರಿತು ಮಾತನಾಡುತ್ತಾ ದುಂಡು ಮುಖದಲ್ಲಿ ಸೂಜಿ‌ಮಲ್ಲಿಗೆಯಂತಹ ನಗು‌ಬೀರುತ್ತಾರೆ‌.

ಪ್ರತಿಭೆಯೇ ಭೂಮಿಕಾಳ ಹಿನ್ನೆಲೆ…

ಭೂಮಿಕಾಗೆ ಚಿತ್ರರಂಗ ಹೊಸದು‌. ಅವರ ಕುಟುಂಬದಲ್ಲಿಯೇ ಬಣ್ಣ ಹಚ್ಚಿದ ಮೊದಲ ಕುಡಿ.ಭೂಮಿಕಾ‌ ತನ್ನದೇ ಪ್ರತಿಭೆಯೊಂದಿಗೆ ಡಾನ್ಸಿಂಗ್, ಮಾಡೆಲಿಂಗ್ ನಲ್ಲಿ ದೊಡ್ಡ ಹೆಸರು ಮಾಡಿದ್ದು ಆಕೆಯ ಪೋಷಕರಿಗೂ ಖುಷಿ ತಂದಿದೆ. ಕಿರುತೆರೆಯಾಗಲಿ, ಸಿನಿಮಾವಾಗಲಿ ಶ್ರದ್ದೆಯಿಟ್ಟು ಸಾಧನೆ‌ ಮಾಡುತ್ತಾಳೆಂದೆ ನಂಬಿದ್ದಾರೆ. ಅದನ್ನು ಉಳಿಸಿಕೊಳ್ಳುವ ಅಪಾರ ವಿಶ್ವಾಸ ಭೂಮಿಕಾ‌ ಅವರದು ಕೂಡ.’ ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೇ ಮನೆಯವರ ಸಲಹೆ-ಸಹಕಾರದಿಂದ. ಸಿನಿಮಾ‌ರಂಗಕ್ಕೂ ಬರಲು ಅವರೇ ಕಾರಣ. ಮಗಳು ಒಳ್ಳೆಯ ಕಲಾವಿದೆಯಾಗಬೇಕೆನ್ನುವುದು ಅವರ ಆಸೆ. ಅದಕ್ಕೆ ತಕ್ಕಂತೆಯೇ ನನ್ನ ಪಾತ್ರಗಳ ಆಯ್ಕೆ ಇರಲಿದೆ. ಈಗ ಚಿತ್ರೀಕರಣದಲ್ಲಿರುವ ಎರಡು ಚಿತ್ರಗಳು ಚೆನ್ನಾಗಿವೆ. ಕತೆ ನನ್ನ ಪಾತ್ರ ಮುದ್ದಾಗಿವೆ. ಗ್ಲಾಮರ್ ಗ್ಲಿಮರ್ ಎನ್ನುವುದಕ್ಕಿಂತ‌ ನಾನಿಲ್ಲಿ ಪಕ್ಕಾ‌ಟ್ರೆಡಿಷನಲ್ ಹುಡುಗಿ. ಅಂತಹದೇ ಪಾತ್ರಗಳಲ್ಲಿ ಅಭಿನಯಿಸಬೇಕೆನ್ನುವುದು ನನ್ನಾಸೆ ‘ ಎನ್ನುತ್ತಾರೆ ಭೂಮಿಕಾ.ಏನೇ ಆಗಲಿ ಡಾನ್ಸಿಂಗ್ ನಿಂದ ಸಿನಿ ದುನಿಯಾಕ್ಕೂ ಕಾಲಿಟ್ಟ ನವತಾರೆ ಭೂಮಿಕಾ ಎಂಟ್ರಿಯಲ್ಲೆ ಎರಡು ಚಿತ್ರಕ್ಕೆ ನಾಯಕಿ‌ ಆಗಿದ್ದಾರೆ. ಒಂದೆಡೆ ಮಾಡೆಲ್, ಮತ್ತೊಂದೆಡೆ ಕ್ಲಾಸಿಕಲ್ ಡಾನ್ಸರ್. ನಟಿಯಾಗುವ ಎಲ್ಲಾ ಕ್ವಾಲಿಪಿಕೇಷನ್ ಕೂಡ ಇವೆ.‌‌ಆ‌ಮೂಲಕ ಹೆಚ್ಚೇಚು ಅವಕಾಶಗಳು‌ ಸಿಗಲಿ, ಅವರ ಪೋಷಕರು ಬಯಸಿದಂತೆ ಒಳ್ಳೆಯ ಕಲಾವಿದೆಯಾಗಲಿ ಎನ್ನುವುದು ‘ಸಿನಿ‌ಲಹರಿ ‘ ಹಾರೈಕೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಸಿನಿಮಾವಾಗಲೀ, ರಾಜಕೀಯವಾಗಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗಲಿ – ಕನಿ ಕುಸ್ರುತಿ

ಸಿನಿ ಲಹರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಲಯಾಳಂ ಬಿರಿಯಾನಿಚಿತ್ರದ ಖ್ಯಾತಿಯ ನಟಿ ಕನಿ ಕುಸ್ರುತಿ ಅಭಿಮತ.

ಮಲಯಾಳಂ‌‌‌‌ ಚಿತ್ರರಂಗದಲ್ಲಿ ಭಾರೀ ಸುದ್ದಿಯಲ್ಲಿರುವ ಚಿತ್ರ ಬಿರಿಯಾನಿ.‌ ಇದು ಇನ್ನು ಬಿಡುಗಡೆ ಆಗಿಲ್ಲ. ಅದರೆ    ಚಿತ್ರ ಬೆಂಗಳೂರು ಸೇರಿದಂತೆ ಜಗತ್ತಿನಹಲವು ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡು, ಭಾರೀ ಮೆಚ್ಚುಗೆ ಪಡೆಯುತ್ತಿದೆ.‌ ಚಿತ್ರದ ನಾಯಕಿ ಕನಿ ಕುಸ್ರುತಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಿನ್ನೆಲೆಯಲ್ಲಿ‌ ‘ಸಿನಿ ಲಹರಿಗಾಗಿ  ಕನಿ ಕುಸ್ರುತಿ ಅವರೊಂದಿಗೆ ರಮೇಶ್ ಎಚ್.ಕೆ.‌ನಡೆಸಿದಅಪರೂಪದಸಂದರ್ಶನ ಇಲ್ಲಿದೆ.

 

ಸಂದರ್ಶನ ವಿವರ

ಹೇಗಿದ್ದೀರಿ, ಎಲ್ಲಿದ್ದೀರಿ,ಹೇಗಿದೆ ಸಿನಿಮಾ ಜರ್ನಿ?

ಕನಿ : ನಮಸ್ಕಾರ ನಾನು ಚೆನ್ನಾಗಿದ್ದೀನಿ. ಸದ್ಯ ಗೋವಾದಲ್ಲಿ ವಾಸವಾಗಿದ್ದೀನಿ

 

ನಿಮ್ಮ‌ ಹಿನ್ನೆಲೆ ಏನು? ಅಂದ್ರೆ ನಿಮ್ನ ಪರಿಚಯ?

ಕನಿ : ನಾನು ಮೂಲತಃ ಕೇರಳದವಳು. ನಾನು ರಂಗಭೂಮಿಯ ಹಿನ್ನಲೆಯವಳು. ನಾನು ಓದಿದ್ದು ರಂಗಭೂಮಿ ವಿಷಯವನ್ನೇ. ಪ್ಯಾರಿಸ್ ನಲ್ಲಿ ಈ ವಿಷಯದ ಕುರಿತು ನಾನು ವ್ಯಾಸಂಗ ಮಾಡಿದ್ದು ಯುರೋಪ್ ನಲ್ಲಿ 2 ವರ್ಷಗಳ ಕಾಲ ನಾನು ಕೆಲಸ ಮಾಡಿದ್ದೇನೆ. ನಾನು ತುಂಬಾ ಕಡಿಮೆ ಸಿನಿಮಾಗಳಲ್ಲಿ ನಟಿಸಿದ್ದು ಈ ಸದ್ಯ ಗೋವಾಗೆ ಬಂದಿದ್ದೇನೆ. ಕೆಲವೊಮ್ಮೆ ನಾನು ಸಿನಿಮಾ ಮಾಡುತ್ತೇನೆ, ಇನ್ನು ಕೆಲವೊಮ್ಮೆ ರಂಗಭೂಮಿಯಲ್ಲಿ ತೊಡಗುತ್ತೇನೆ.

 

ಸಿನಿಮಾ ಎನ್ನುವ ಗ್ಲಾಮರ್ ಜಗತ್ತಿಗೆ ಬಂದಿದ್ದು ಹೇಗೆ? ಯಾಕೆ?

ಕನಿ : ನಾನು ಸಿನಿಮಾ ಕ್ಷೇತ್ರವನ್ನು ಆರಿಸಿಕೊಳ್ಳಲಿಲ್ಲ. ನಾನು ಶಾಲಾ ದಿನಗಳಿಂದಲೂ ಸಹ ರಂಗಭೂಮಿಯಲ್ಲೇ ಹೆಚ್ಚು ಆಸಕ್ತಿ ಕೆಲಸ ಮಾಡುತ್ತಿದ್ದೆ. ಆಗ ಸಿನಿಮಾಗಳಲ್ಲಿ ನಟಿಸಲು ಕರೆ ಬರುತ್ತಿತ್ತು. ಆದರೆ 2010 ರ ವರೆಗೂ ಸಹ ನನಗೆ ನಟಿಸಲು ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಆದರೆ ನಂತರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಾನು ಈ ಸಿನಿಮಾ ಕ್ಷೇತ್ರವನ್ನು ಆರಿಸಿಕೊಂಡೆ. ಹೀಗೆ ನಾನು ಆಕಸ್ಮಿಕವಾಗಿ ಸಿನಿಮಾ ಕ್ಷೇತ್ರಕ್ಕೆ ಬರುವಂತೆ ಆಯಿತು.

MeToo: Adjustments were all that was needed for filmmakers when I decided  to be a cinema actress : Kani Kusruti | Malayalam Movie News - Times of  India

 

ಬಿರಿಯಾನಿ ಸಿನಿಮಾದ ಅನುಭವದ ಬಗ್ಗೆ ಹೇಳಿ

ಕನಿ : ಧನ್ಯವಾದಗಳು. ಬಿರಿಯಾನಿ ಸಿನಿಮಾ ಒಂದು ಸಣ್ಣ ಬಜೆಟ್ ನ ಸಿನಿಮಾ.‌ ಇಲ್ಲಿ ಎಲ್ಲರೂ ಕೂಡಾ ಒಂದು ತಂಡವಾಗಿ ಸರಿಯಾಗಿ ಸಹಕರಿಸಿದರು. ಇಡೀ ತಂಡವು ಕುಟುಂಬದಂತೆ ಇತ್ತು. ಎಷ್ಟೋ ಸಲ ನಮಗೆ ಶೂಟಿಂಗ್ ಗೆ ಒಪ್ಪಿಗೆ ಸಿಗದ ಜಾಗದಲ್ಲಿ ಶೂಟಿಂಗ್ ಮಾಡಬೇಕಿತ್ತು. ಹೀಗಾಗಿ ಇದೊಂತರ ಗೋರಿಲ್ಲಾ ಶೂಟಿಂಗ್ ಎನಿಸಿದರೂ ಒಂದರ್ಥದಲ್ಲಿ ಚೆನ್ನಾಗಿತ್ತು.

 

ಬಿರಿಯಾನಿ ಸಿನಿಮಾ‌ದಲ್ಲಿನ‌ ನಿಮ್ಮ ಅಭಿನಯದ ಬಗ್ಗೆ ಮೊದಲ ಪ್ರತಿಕ್ರಿಯೆ ಹೇಗಿತ್ತು?‌ ಸ್ನೇಹಿತರು ಮತ್ತು ಕುಟುಂಬದವರ ಪ್ರತಿಕ್ರಿಯೆ ಏನಾಗಿತ್ತು?

ಕನಿ: ನಿಜ ಹೇಳಬೇಕೆಂದರೆ ನನ್ನ ಸ್ನೇಹಿತರಾಗಲೀ ಅಥವಾ ಕುಟುಂಬ ವರ್ಗದವರಾಗಲೀ ಈ ಚಿತ್ರವನ್ನು ನೋಡಿಲ್ಲ. ಇದು ಕೇರಳದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ. ಅಲ್ಲದೇ ನಾನೇ ಇನ್ನೂ ಈ ಸಿನಿಮಾ ನೋಡಿಲ್ಲ.‌ ಆದರೆ ನನಗೆ ಈ ಸಿನಿಮಾಗೆ ಸಂಬಂಧಿಸಿದಂತೆ 2 ಪ್ರಶಸ್ತಿಗಳು ಬಂದಿದ್ದಕ್ಕೆ ಅವರು ಸಂತೋಷವಾಗಿದ್ದಾರೆ.

 

ಬಿರಿಯಾನಿ ಸಿನಿಮಾ ನಿಮ್ಮ ಸಿನಿಮಾ‌ ಬದುಕು ಜತೆಗೆ ಖಾಸಗಿ ಬದುಕಿನಲ್ಲಿ ತಂದ ಬದಲಾವಣೆ ಏನು?

ಕನಿ: ಚಿತ್ರ ಇನ್ನೂ ಬಿಡುಗಡೆ ಕಾಣದ ಕಾರಣ ಇನ್ನೂ ಅಂತಹ ಬದಲಾವಣೆಗಳೇನೂ ಆಗಿಲ್ಲ. ಆದರೆ ಒಂದು ವೇಳೆ ಹಾಗೇನಾದರೂ ಆದರೆ ಅದು ಇಡೀ ತಂಡಕ್ಕೆ ಆಗಲಿ ಮತ್ತು ಪ್ರತಿಭಾವಂತರಾದ ಎಲ್ಲರಿಗೂ ಒಂದು ಸಮಾನ ಅವಕಾಶ ಸಿಗಲಿ.ಆದರೆ ನನಗೆ ತಿಳಿದ ಮಟ್ಟಿಗೆ ಸದ್ಯ ಸಮಾನ ಅವಕಾಶಗಳು ಸಿಗುವ ವಾತಾವರಣ ನಿರ್ಮಾಣವಾಗಿಲ್ಲ.

 

ಬಿರಿಯಾನಿ‌ ಸಿನಿಮಾ ನಂತರ ನೀವು ಮುಂಬೈಗೆ ಹೋದ್ರಿ ಎನ್ನುವ ಸುದ್ದಿ ನಿಜವಾ? ಹೋಗಿದ್ದು ನಿಜವಾದ್ರೆ ಯಾಕೆ?

ಕನಿ: ಇಲ್ಲ ನಾನು ಬಿರಿಯಾನಿ ಚಿತ್ರದ ನಂತರ ಮುಂಬೈಗೆ ಹೋಗಲಿಲ್ಲ. ಆದರೆ ನಾನು ಬಿರಿಯಾನಿ ಸಿನಿಮಾಗೂ ಮುಂಚೆ ಅಲ್ಲಿದ್ದೆ. ಬಿರಿಯಾನಿ ಸಿನಿಮಾ ಶೂಟಿಂಗ್ ವೇಳೆ ನಾನು ಕೊಚ್ಚಿಯಲ್ಲಿದ್ದೆ. ಆ ಸಿನಿಮಾ ಶೂಟಿಂಗ್ ಆದ ನಂತರದಲ್ಲಿ ನಾನು ಗೋವಾಗೆ ಬಂದೆ. ಹೀಗಾಗಿ ನಾನು ಬಹಳಷ್ಟು ಸಮಯದ ಹಿಂದೆ ಮುಂಬೈನಲ್ಲಿ ಇದ್ದೆ ಅಷ್ಟೇ.

 

ನೀವು ಅಭಿನಯಿಸಿದ ಖದೀಜಾ ಪಾತ್ರದ ಮೂಲಕ ಸಮಾಜಕ್ಕೆ ಏನಾದ್ರೂ ಸಂದೇಶ ಹೇಳಬಹುದೇ?

ಕನಿ: ಖದೀಜಾ ಪಾತ್ರದ ಮೂಲಕ ನಾನೇನೂ ಸಹ ಸಂದೇಶವನ್ನು ನೀಡಲಾರೆ. ಕಾರಣ ನಾನೇ ಬೇರೆ ಖದೀಜಾನೇ ಬೇರೆ. ಇದು ನಿರ್ದೇಶಕ ಸಜಿನ್ ಬಾಬು ಅವರ ಕಲ್ಪನೆಯಾದ ಕಾರಣ ಅವರೇ ಈ ಪ್ರಶ್ನೆಗೆ ಉತ್ತರಿಸಬೇಕು.

Where are the good samaritans, asks Sajin Babu | Thiruvananthapuram News -  Times of India

ಹಾಗಾದ್ರೆ, ನೀವು ಆ ಪಾತ್ರವನ್ನು ಹೇಗೆ ರಿಲೇಟ್ ಮಾಡಿಕೊಳ್ಳುತ್ತೀರಿ?

ಕನಿ:  ನಿಜ ಹೇಳಬೇಕೆಂದರೆ ನಾನು ಆ ಪಾತ್ರದೊಂದಿಗೆ ನನ್ನನ್ನು ಕಲ್ಪಿಸಿಕೊಳ್ಳಲಾರೆ. ಆದರೆ ಈ ದೇಶದಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ನಾನು ಭಾವನಾತ್ಮಕವಾಗಿ ನನ್ನನ್ನು ಕಲ್ಪಿಸಿಕೊಳ್ಳಬಲ್ಲೆ.

 

ಬಿರಿಯಾನಿ ಸಿನಿಮಾ ಮೂಲಭೂತವಾದಿಗಳು ಮತ್ತು ಸಂಪ್ರದಾಯವಾದಿಗಳಿಂದ ಅನೇಕ ವಿವಾದಗಳನ್ನು ‌ಹುಟ್ಟು ಹಾಕುವ ಸಾಧ್ಯತೆಗಳಿವೆ ಎನ್ನುವ ಅನುಮಾನ ..

ಕನಿ : ಈ ಸಿನಿಮಾ ಇನ್ನೂ ಬಿಡುಗಡೆಯಾಗದ ಕಾರಣ ಮೂಲಭೂತಿವಾದಿಗಳು ಮತ್ತು ಸಂಪ್ರದಾಯವಾದಿಗಳು ಏನೆನ್ನುತ್ತಾರೆ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ.‌ ಸೆನ್ಸಾರ್ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಏನಾಗುತ್ತದೆ ಎಂಬುದು ನಮಗೆ ತಿಳಿಯಲಿದೆ.

 

ಮಲಯಾಳಂ ಚಿತ್ರ ರಂಗವು ಸೇರಿ ಭಾರತೀಯ ಚಿತ್ರರಂಗದ ಇವತ್ತಿನ ವಿದ್ಯಮಾನಗಳ ಬಗ್ಗೆ ಏನ್ ಹೇಳ್ತೀರಾ?

ಕನಿ : ನಾನು ಮೂಲತಃ ಕೆಲವೇ ಕೆಲವು ಕನ್ನಡ, ತಮಿಳು, ಬಂಗಾಳಿ ಹಾಗೂ ಮರಾಠಿ ಸಿನಿಮಾಗಳನ್ನು ನೋಡಿದ್ದೇನೆ. ಹೀಗಾಗಿ ಭಾರತದ ಚಿತ್ರರಂಗದ ಕುರಿತು ಮಾತನಾಡುವಷ್ಟು ತಿಳುವಳಿಕೆ ನನಗಿಲ್ಲ.ಆದರೆ ನಾನು ಹೆಚ್ಚು ಹೆಚ್ಚು ಮಲೆಯಾಳಂ ಸಿನಿಮಾಗಳನ್ನು ನೋಡುತ್ತೇನೆ. ಕಳೆದ 10 ವರ್ಷಗಳಲ್ಲಿ ಮಲೆಯಾಳಂ ಸಿನಿಮಾವು ತನ್ನ ವೈಭವಕ್ಕೆ ಮರಳಿದ್ದು ಒಳ್ಳೆಯ ಕಥೆಗಳು ಮೂಡಿ ಬರುತ್ತಿವೆ. ಇನ್ನು ನನ್ನ ಇಷ್ಟದ ನಿರ್ದೇಶಕ ಎಂದರೆ ಅದು ಪದ್ಮರಾಜನ್.

 

ಎಲ್ಲಾ ಕ್ಷೇತ್ರಗಳಲ್ಲೂ ಇರುವ ಹಾಗೆ ಸಿನಿಮಾ ರಂಗದಲ್ಲೂ ಹೆಣ್ಣಿನ ಮೇಲೆ ಶೋಷಣೆ, ದಬ್ಬಾಳಿಕೆ, ತಾರತಮ್ಯ ನಡೀತಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೀರಾ?

ಕನಿ: ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಬಹಳ ಕಡಿಮೆ ಪ್ರಮಾಣದ ಹೆಣ್ಣು ಮಕ್ಕಳನ್ನು ನಾವು ಕಾಣ್ತೀವಿ.‌ ಆದರೆ ಇತ್ತೀಚಿನ ಮಲೆಯಾಳಂ ಚಿತ್ರಗಳಲ್ಲಿ ನಾವು ಅಲ್ಲಲ್ಲಿ ಕೆಲವು ಮಹಿಳಾ ಸಹ ನಿರ್ದೇಶಕರು, ಎಡಿಟರ್ ಗಳು, ಹಾಗೂ ಕ್ಯಾಮೆರಾ ಸಹಾಯಕರು ಇರುವುದನ್ನು ಕಾಣಬಹುದು. ಆದರೆ ಅದು 50% ಗೆ ಮುಟ್ಟಬೇಕೆಂಬುದು ನನ್ನ ಆಸೆ. ಸಿನಿಮಾ ಅಷ್ಟೇ ಅಲ್ಲ ರಾಜಕೀಯ ಪಕ್ಷಗಳು ಮತ್ತು ಶಾಸನ ಸಭೆಗಳಲ್ಲಿ 50% ಗೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಇರಬೇಕೆಂದು ನಾನು ಬಯಸುತ್ತೇನೆ.ಜೊತೆಗೆ ಈಗಿರುವ ಜಾತಿ ಮತ್ತು ವರ್ಗದ ತಾರತಮ್ಯ ಹೊರಟುಹೋಗಿ ಇಂದು ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು.

Kani Kusruti wins International Award for Sajin Baabu's 'Biriyaani'- The  New Indian Express

ನಿಮ್ಮ ಹೊಸ ಸಿನಿಮಾಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಹೇಳಿ.

ಕನಿ : ಪ್ರಶಾಂತ್ ನಾಯರ್ ಅವರ Trust with destiny ( ಇದು ಟ್ರೈಬೇಕಾನಲ್ಲಿ ಪ್ರದರ್ಶನವಾಗಿದೆ) ಇದಾದ ಮೇಲೆ ಬಿರಿಯಾನಿ ಹಾಗೂ ನಂತರದಲ್ಲಿ ಹಾಟ್ ಸ್ಟಾರ್ ನಲ್ಲಿ ಕೆಲ ಸಣ್ಣ ಪುಟ್ಟ ವೆಬ್ ಸೀರೀಸ್ ಗಳು ಬಿಡುಗಡೆಗೊಳ್ಳಲಿವೆ. ಇದಾದ ನಂತರ ಮಲೆಯಾಳಂ ನ ಚಿತ್ರದ ಶೂಟಿಂಗ್ ಇದ್ದು, ತಮಿಳು ಚಿತ್ರದಲ್ಲಿ ನಟಿಸುವ ಮಾತುಕತೆ ನಡೆಯುತ್ತಿದೆ. ಆದರೆ ಕರೋನಾ ಕಾರಣದಿಂದಾಗಿ ಇಂದು ಎಲ್ಲವೂ ಸ್ಥಗಿತಗೊಂಡಿದೆ.

ಸಾಕಷ್ಟು ಪ್ರಶಸ್ತಿಗೆ ಪಾತ್ರರಾಗುತ್ತಿದ್ದೀರಿ, ಈ ಪ್ರಶಸ್ತಿಗಳು ಸಂತೋಷ ಮೂಡಿಸಿರಬೇಕು ಅಲ್ವಾ?

ಕನಿ : ನಾನು ಸಾಮಾನ್ಯವಾಗಿ ಪ್ರಶಸ್ತಿಯನ್ನು ನಿರೀಕ್ಷೆ ಮಾಡುವವಳಲ್ಲ. ಆದರೆ ಪ್ರಶಸ್ತಿಗಳು ಯಾವಾಗಲೂ ಸಹ ಅನಿರೀಕ್ಷಿತವಾಗಿರಬೇಕು, ನಮ್ಮೊಳಗೆ ಅಚ್ಚರಿ ಮೂಡಿಸಬೇಕು. ಆಗ ಮಾತ್ರ ಅದು ನಮಗೆ ಸಂತೋಷ ನೀಡುತ್ತದೆ. ‌ಆದರೆ ನಮ್ಮ ಸುತ್ತ ಬಹಳಷ್ಟು ಜನ ಪ್ರತಿಭಾವಂತ ನಟ ನಟಿಯರು ಇದ್ದಾರೆ. ಹೀಗಾಗಿ ಪ್ರಶಸ್ತಿ ಅನ್ನುವುದನ್ನು ನಾನು ಅನಿರೀಕ್ಷಿತವಾಗಿ ಬರುವ ಪ್ರೋತ್ಸಾಹದ ಸಂಗತಿಯಾಗಿ ಮಾತ್ರ ಕಾಣುತ್ತೇನೆ ಅಷ್ಟೇ.

 

ಕನ್ನಡ‌ ಸಿನಿಮಾ ಇಂಡಸ್ಟ್ರಿ ‌ಬಗ್ಗೆ ಎಷ್ಟು ಗೊತ್ತು‌? ಈ ಉದ್ಯಮದ ಬಗ್ಗೆ ಏನ್ ಹೇಳ್ತೀರಾ?

ಕನಿ : ನಾನು ಅಷ್ಟಾಗಿ ಕನ್ನಡ ಸಿನಿಮಾಗಳನ್ನು ನೋಡಿಲ್ಲ. ನಾನು ಕೇವಲ ಗಿರೀಶ್ ಕಾರ್ನಾಡ್ ಅವರ ಹಯವದನ ಹಾಗೂ ಇನ್ನಿತರೆ ನಾಟಕಗಳನ್ನು ನೋಡಿದ್ದೇನೆ. ಅವರ ನಾಟಕಗಳು ನನ್ನ ಆಲೋಚನೆಯನ್ನು ಬದಲಿಸಿವೆ.

Timeline Photos

ಕೊನೆಯದಾಗಿ ಒಂದೆರಡು ಮಾತುಗಳು

ಕನಿ : ಕೊನೆಯದಾಗಿ ಹೇಳಬಹುದಾದರೆ ನನ್ನ ಮಾತುಗಳನ್ನು ಕೇಳಿಸಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು ಮತ್ತು ಈ ದೇಶದಲ್ಲಿ ಎಲ್ಲರಿಗೂ ಕೆಲಸ ಮಾಡಲು ಸಮಾನ ಅವಕಾಶಗಳು ದೊರೆಯಲಿ ಎಂದು ನಾನು ಆಶಿಸುತ್ತೇನೆ.

Categories
ಸಿನಿ ಸುದ್ದಿ

ನನ್ನದು ರಾಧಿಕಾ‌ ಪಂಡಿತ್ ಇಷ್ಟಪಟ್ಟಿದ್ದ ಪಾತ್ರ- ಆರೋಹಿ‌ ನಾರಾಯಣ್

‘ಭೀಮಸೇನ ನಳಮಹಾರಾಜ’ ತಮಗೆ  ಯಾಕಷ್ಟು  ಇಂಪಾರ್ಟೆಂಟ್ ಎನ್ನುವುದರ ಕುರಿತು ‘ ಸಿನಿ‌ಲಹರಿ’ ಜತೆ ಮನಬಿಚ್ಚಿ ಮಾತನಾಡಿದ ‘ದೃಶ್ಯ ‘ ಖ್ಯಾತಿಯ ನಟಿ

……………………………………

‘ದೃಶ್ಯ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಟಿಯಾಗಿ ಎಂಟ್ರಿಯಾದ ಹೊಸ ಪ್ರತಿಭೆ ಆರೋಹಿ ನಾರಾಯಣ್  ಸಂಭ್ರಮದಲ್ಲಿದ್ದಾರೆ.  ಹಾಗಂತ ಅವರಿಗೇನು ಮದುವೆ ಫಿಕ್ಸ್ ಆಯ್ತಾ?  ಹೊಸ ಮನೆ ಕಟ್ಟಿದ್ರಾ? ಇಲ್ಲವೇ ಹೊಸ ಕಾರು ಖರೀಸಿದ್ರಾ? ಹಾಗೆಲ್ಲ ಭಾವಿಸಿಕೊಳ್ಳಬೇಕಿಲ್ಲ. ಬದಲಿಗೆ ಅವರು ಅಭಿನಯಿಸಿದ  ಎರಡು‌ ಚಿತ್ರಗಳು ಈ ತಿಂಗಳು ಬಿಡುಗಡೆ ಆಗುತ್ತಿವೆ. ಅದೇ ಅವರ ಸಂಭ್ರಮಕ್ಕೆ ಕಾರಣ.

ತೆರೆ ಕಾಣುತ್ತಿರುವ ಚಿತ್ರಗಳಿವು…

ಬಹು ದಿನಗಳಿಂದ‌ ಒಂದೇ ಉಸಿರಿನಲ್ಲಿ  ಅವರು ಎದುರು ನೋಡುತ್ತಿದ್ದ  ಬಹುನಿರೀಕ್ಷಿತ ಚಿತ್ರ ‘ ಭೀಮಸೇನ ನಳ‌ಮಹಾರಾಜ’ ಅಕ್ಟೋ‌ಬರ್ 29 ಕ್ಕೆ  ಅಮೆಜಾನ್ ಪ್ರೈಮ್ ನಲ್ಲಿ ತೆರೆ ಕಾಣುತ್ತಿದೆ.  ಮತ್ತೊಂದೆಡೆ ಕೊರೋನಾ ಆರಂಭಕ್ಕೂ ಮುನ್ನವೇ ಚಿತ್ರಮಂದಿರಕ್ಕೆ ಬಂದು ಜನ ಮೆಚ್ಚುಗೆ ಪಡೆದಿದ್ದ ‘ಶಿವಾಜಿ ಸುರತ್ಕಲ್’  ಕೂಡ ಈಗ  ಟಾಕೀಸ್ ಗಳಲ್ಲಿಯೇ ರೀ ರಿಲೀಸ್ ಆಗುತ್ತಿದೆ. ಒಂದೆಡೆ ಆನ್ ಲೈನ್  ಪ್ಲಾಟ್ ಫಾರ್ಮ್ ಮತ್ತೊಂದೆಡೆ ಟಾಕೀಸ್,  ಎರಡು ಕಡೆಗಳಲ್ಲೂ ಧೂಳೆಬ್ಬಿಸಲು ಬರುತ್ತಿದ್ದಾರೆ‌ ನಟಿ‌ ಆರೋಹಿ ನಾರಾಯಣ್.

ಯಾರಿಗೆ ಖುಷಿಯಾಗಲ್ಲ ಹೇಳಿ…

ನಟರೋ ಅಥವಾ ನಟಿಯರೋ ಹೊಸಬರ ಮಟ್ಟಿಗೆ ಇದೊಂದು‌ ಥ್ರಿಲ್ ಕೊಡುವ ವಿಷಯ. ಜತೆಗೆ ಕೊರೋನಾ ಕಾರಣಕ್ಕೆ ಸಿನಿಮಾ‌ ಕೆಲಸ ಇಲ್ಲದೆ ಎಲ್ಲವೂ ಸ್ಥಬ್ದವಾಗಿರುವ ಸಂದರ್ಭದಲ್ಲಿ ಮತ್ತೆ ಶುರುವಾದ ಚಟುವಟಿಕೆಗಳ ಮೂಲಕ ತಾವು ಅಭಿನಯಿಸಿದ ಸಿನಿಮಾ‌ ರಿಲೀಸ್ ಆಗುತ್ತಿವೆ ಅಂದ್ರೆ, ಯಾರಿಗೆ ಖುಷಿಯಾಗಲ್ಲ? ಆ ಖುಷಿ ಈಗ ನಟಿ‌ ಆರೋಹಿ ನಾರಾಯಣ್  ಮೊಗದಲ್ಲಿ ಕಾಣುತ್ತಿದೆ‌.

ಇದು‌ ಸಹಜವಾದ ಸಂಭ್ರಮ..

ಏನ್ ಹೇಳ್ಬೇಕೋ‌ ಗೊತ್ತಾಗುತ್ತಿಲ್ಲ.  ಎರಡು ಈಗ ಎರಡು ಚಿತ್ರಗಳು ಜನರದೆ ಮುಂದೆ ಬರುತ್ತಿವೆ. ಬದಲಾದ ಸಂದರ್ಭವೋ, ನನ್ನ ಅದೃಷ್ಟವೋ ಗೊತ್ತಿಲ್ಲ. ಇದು ತುಂಬಾ ಅನಿರೀಕ್ಷಿತ. ಒಂದಂತೂ‌ ಹೌದು, ತುಂಬಾ ಖುಷಿಯಾಗುತ್ತಿದೆ.  ಹೀಗಾಗುತ್ತೆ ಅಂತ ನಾನು‌ ಕನಸಲ್ಲೂ ಎಣಿಸಿರಲಿಲ್ಲ‌ .’ ಶಿವಾಜಿ ಸುರತ್ಕಲ್’ ಈಗಾಗಲೇ ರಿಲೀಸ್ ಆಗಿತ್ತು. ಕೊರೋನಾ ಕಾರಣಕ್ಕೆ ಅರ್ಧದಲ್ಲೇ ಪ್ರದರ್ಶನ ನಿಂತು‌ ಹೋಗಿದ್ದವು. ಅದು ತೀವ್ರ‌ಬೇಸರ ತರಿಸಿತ್ತು.ಆದ್ರೆ‌ಇಡೀ ಜಗತ್ತೇ ಸ್ಥಬ್ಧವಾಗಿತ್ತಲ್ಲ, ನಾವೇನು‌ ಮಾಡೋದಿಕ್ಕೆ ಸಾಧ್ಯ? ಈಗ ಅದು‌ ಮತ್ತೆ ರಿಲೀಸ್ ಆಗುತ್ತಿದೆ. ಅದರ ಜತೆಗೆ ‘ ಭೀಮಸೇನ ನಳ‌ಮಹಾರಾಜ’  ಕೊಂಚ ತಡವಾಗಿ‌ ಬರುತ್ತಿದೆ. ತಡವಾದರೂ ಚಿತ್ರದ ಕಂಟೆಂಟ್ ಹಾಗೂ‌ ಮೇಕಿಂಗ್ ಅದ್ಬುತವಾಗಿದೆ. ಜನ ಅದನ್ನು ಇಷ್ಟ ಪಡುವ ಬಗ್ಗೆ ಅಪಾರ ನಂಬಿಕೆಯಿದೆ. ಹಾಗೆಯೇ ದೇವರ ಆಶೀರ್ವಾದವೂ‌ ಬೇಕಿದೆ’ ಎನ್ನುತ್ತಾರೆ ನಟಿ‌ ಆರೋಹಿ ನಾರಾಯಣ್.

ಪಾತ್ರಗಳ  ವೈಶಿಷ್ಟ್ಯ ತೆಯೇ ವಿಶೇಷ..

‘ಶಿವಾಜಿ ಸುರತ್ಕಲ್’ ಸಿನಿಮಾದ ಕತೆಯೇನು, ಅಲ್ಲಿ‌ ನಾನೇನು ಅನ್ನೋದು ಬಹುತೇಕ ಜನರಿಗೆ ಗೊತ್ತು. ಯಾಕಂದ್ರೆ ಅದು ಈಗಾಗಲೇ ರಿಲೀಸ್ ಆದ ಸಿನಿಮಾ. ಒಂದು ಡಿಫೆರೆಂಟ್ ಕಥಾ ಹಂದರ ಚಿತ್ರವದು. ರಮೇಶ್‌ ಸರ್ ಅಲ್ಲಿ ತನಿಖಾಧಿಕಾರಿ. ನಾನು‌ ಸೈಕಾಲಜಿಸ್ಟ್. ರಮೇಶ್ ಸರ್ ಕಾರಣಕ್ಕೆ ನಾನು‌ ಆ ಸಿನಿಮಾ‌ ಒಪ್ಪಿಕೊಂಡಿದ್ದೆ.‌ ನಟಿಯಾಗಿ ಆ ಪಾತ್ರ ಸಾಕಷ್ಟು ಖುಷಿ ಕೊಟ್ಟಿದೆ. ಇನ್ನು ‘ ಭೀಮಸೇನ‌ ನಳ‌ಮಹಾರಾಜ’ ತುಂಬಾ ಡಿಫೆರೆಂಟ್ ಕಥಾ ಹಂದರದ ಚಿತ್ರ.‌ ಚಿತ್ರದ ಶೀರ್ಷಿಕೆಯೇ‌ ಹೇಳುವ ಹಾಗೆ ಇದು ಮನೋರಂಜನೆಯ ನಳಪಾಕ.‌ಇಲ್ಲಿ‌ ನಾನು‌‌ ಅಯ್ಯಂಗಾರ್  ಬ್ರಾಹ್ಮಣರ ಹುಡುಗಿ. ಆಕೆ‌ ತನ್ನ ಹುಟ್ಟು, ಸಂಸ್ಕೃತಿಗೆ ವಿರುದ್ಧ ವಾದ ಹುಡುಗಿ. ಒಂಥರ ಟಾಮ್ ಬಾಯ್.‌ ಹಾಗೆ ನೋಡಿದರೆ ಈ‌ ಪಾತ್ರದಲ್ಲಿ‌ ರಾಧಿಕಾ ಪಂಡಿತ್ ಅಭಿನಯಿಸಬೇಕಿತ್ತಂತೆ. ಪ್ರಿಯಾಂಕಾ ಅಭಿನಯಿಸಿದ ಪಾತ್ರಕ್ಕೆ ರಾಧಿಕಾ‌ ಅವರನ್ನು ನಿರ್ಮಾಪಕರು‌ ಭೇಟಿ‌ಮಾಡಿದ್ದಾಗ ಕತೆ ಕೇಳಿ, ನಾನು‌ ನಿರ್ವಹಿಸಿದ ಪಾತ್ರ ಚೆನ್ನಾಗಿದೆ ಅಂದಿದ್ರಂತೆ. ಕಾರಣಾಂತರಗಳಿಂದ ಅವರು ಅಭಿನಯಿಸಲು ಆಗಲಿಲ್ಲ. ಆ ಪಾತ್ರವೇ ನಂದು.ಹಾಗಾಗಿ ತುಂಬಾ ಎಚ್ಚರಿಕೆ ಯಿಂದ ಅಭಿನಯಿಸಿದ್ದೇನೆ. ಪ್ರೇಕ್ಷಕರಿಗೆ ಇಷ್ಟವಾಗುತ್ತೆ’  ಎನ್ನುತ್ತಾ ನಗು‌ ಬೀರುತ್ತಾರೆ ಚೆಲುವೆ ಆರೋಹಿ ನಾರಾಯಣ್.

ಚಿತ್ರೀಕರಣದ ಅನುಭವವೇ ಅದ್ಬುತ, ವಿಭಿನ್ನ..

‘ಶಿವಾಜಿ ಸುರತ್ಕಲ್ ‘ ಚಿತ್ರೀಕರಣ ಪಕ್ಕಾ ಪ್ರೊಪೆಷನಲ್ ಆಗಿತ್ತು. ರಮೇಶ್ ಸರ್ ಅಂದ್ರೆ ಹೇಳ್ಬೇಕೆ, ಅವರ ಕೆಲಸವೇ ಹಾಗೆ, ಎಲ್ಲದೂ ಅಚ್ಚುಕಟ್ಟು, ಪಕ್ಕಾ ಪ್ರೊಪೆಷನಲ್. ನಿರ್ದೇಶಕರು ಹಾಗೆಯೇ ಚಿತ್ರೀಕರಣ ಮುಗಿಸಿದರು. ಅನೇಕ‌ ಸಂಗತಿಗಳನ್ನು‌ನಾವು ಕಲಿಯುವುದಕ್ಕೆ ಸಾಧ್ಯವಾಯಿತು. ಇನ್ನು ‘ಭೀಮಸೇನ ನಳ‌ಮಹಾರಾಜ’  ತುಂಬಾ ಸಮಯ ತೆಗೆದುಕೊಂಡಿತು. ಆದರೂ‌ ನಂಗೆ ಎಲ್ಲೂ ಬೇಸರ ಎನಿಸಿಲ್ಲ. ನಿರ್ಮಾಪಕರಾದ ಪುಷ್ಕರ್ ಅವರಾಗಲಿ, ನಿರ್ದೇಶಕ ಕಾರ್ತಿಕ್ ಅವರಾಗಲಿ ಕಿಂಚಿತ್ತು ಬೇಜಾರು ತರಿಸಿಲ್ಲ. ಇಡೀ ಸೆಟ್ ವಾತಾವರಣವೇ ಫ್ಯಾಮಿಲಿ ಥರ ಇತ್ತು. ಇವತ್ತಿಗೂ ನಂಗೆ ಅವರೆಲ್ಲರ ಜತೆಗೆ ತುಂಬಾ ಕಂಫರ್ಟ್ ಫೀಲ್ ಇದೆ. ಸೆಟ್ ಗಳಲ್ಲಿ ಇಂತಹ ವಾತಾವರಣ ಇರೋದೆ ಅಪರೂ‌ಪ. ಬಟ್ ನಮಗೆ‌ ಇದು ಸಿಕ್ಕಿದೆ ಎನ್ನುವ ಮಾತು‌ ಆರೋಹಿ ನಾರಾಯಣ್  ಅವರದು.

ನಾನು ಕಾದಿದ್ದಕ್ಕೂ ಕಾರಣವಿತ್ತು…

ನಿಜ , ತುಂಬಾ ತಾಳ್ಮೆ‌ಬೇಕು.‌ಹಾಗಂತ ಅದು‌ ಬೇಕಂತಲೇ‌ ಆಗಿದ್ದಲ್ಲ. ಅದಕ್ಕೆ ಅದರದ್ದೇಯಾದ ಹಲವು ಕಾರಣವಿದೆ. ಹಾಗಾಗಿ‌ ತಡವಾಗಿದೆ. ಇನ್ನು ನಾನು ಬೇಕಂತಲೇ ಆ ಸಿನಿಮಾಕ್ಕಾಗಿ‌ ಕಾದಿದ್ದೇನೆ. ಕಾರಣ ಆ ಚಿತ್ರದಲ್ಲಿನ‌ ನನ್ನ ಪಾತ್ರ. ನಾನಿನ್ನು ಅಭಿನಯದ ಮೂಲಕ ನಟಿಯಾಗಿ ಗುರುತಿಸಿಕೊಂಡಿಲ್ಲ .‌ಹೊಸಬರು ಅಂತ ಸಾಕಷ್ಟು ಆಫರ್ ಬಂದಿವೆ. ಅವೆಲ್ಲ ನನಗೆ ಇಷ್ಟವಾಗದ ಪಾತ್ರಗಳು. ಬಂದವರಿಗೂ ನನ್ನ ನಟನೆ ಗೊತ್ತಿಲ್ಲ. ‘ಭೀಮಸೇನ‌‌ ನಳ‌ಮಹಾರಾಜ ‘ತೆರೆ‌ಕಂಡರೆ ನಾನೇನು, ನನ್ನ‌ಪಾತ್ರ ಆಯ್ಕೆಯ ಅಭಿರುಚಿಯೇನು ಅಂತ ಗೊತ್ತಾಗಲಿದೆ. ಹಾಗಾಗಿಯೇ ಈ ಸಿನಿಮಾ‌ ಒಪ್ಪಿಕೊಂಡ‌ ನಂತರದ‌ ದಿನಗಳಲ್ಲಿ ಯಾವುದೇ ಸಿನಿಮಾ‌ ಒಪ್ಪಿಕೊಂಡಿಲ್ಲ. ರಮೇಶ್ ಕಾರಣಕ್ಕೆ ಮಾತ್ರ ‘ ಶಿವಾಜಿ ಸುರತ್ಕಲ್’ ಒಪ್ಪಿಕೊಂಡಿದ್ದೆ‌. ಅದು ಬಿಟ್ಟರೆ ‘ ಭೀಮಸೇನ ನಳಮಹಾರಾಜ ‘ ನನ್ನ ಸಿನಿ‌ಜರ್ನಿಗೆ ಟರ್ನಿಂಗ್ ನೀಡುವುದು ಗ್ಯಾರಂಟಿ‌  ಎನ್ನುವ ಭರವಸೆಯ ಮಾತುಗಳನ್ನಾಡುತ್ತಾರೆ ದೃಶ್ಯ ಖ್ಯಾತಿಯ ನಟಿ.

Categories
ಸಿನಿ‌ ಆ್ಯಡ್

ಖುಷಿಯ ಖುಷಿ ಹೆಚ್ಚಿಸಿದ ದಿಯಾ !

ಅವಕಾಶಕ್ಕಾಗಿ ಪರದಾಡುತ್ತಿದ್ದ ಹುಡುಗಿ, ಇವತ್ತು ಬಹು ಬೇಡಿಕೆಯ ನಟಿ , ಸಾಲು ಸಾಲು ಸಿನಿಮಾಗಳಿಗೆ ನಾಯಕಿ.  ಇದಕ್ಕೆಲ್ಲ ಕಾರಣ ಯಾರು ಗೊತ್ತಾ? ಈ ಸ್ಟೋರಿ ನೋಡಿ

ಖುಷಿ ಅಲಿಯಾಸ್ ದಿಯಾ ಇವತ್ತು ಕನ್ನಡದ ಬಹು ಬೇಡಿಕೆ ನಟಿ. ಕೊರೋನಾ ಸೃಷ್ಟಿಸಿದ ಅತೀವ ಸಂಕಷ್ಟದ ಕಾಲದಲ್ಲೂ ‘ದಿಯಾ’ 2020 ರ ಸೂಪರ್ ಹಿಟ್ ಚಿತ್ರ. ಚಿತ್ರಮಂದಿರಗಳ ಜತೆಗೆ ಅನ್ ಲೈನ್ ಜಗತ್ತಿನಲ್ಲೂ ಇದು ಸೃಷ್ಟಿಸಿದ ಹವಾ‌, ಈ ನಟಿಯನ್ನು ರಾತ್ರೋರಾತ್ರಿ ಸ್ಟಾರ್ ಆಗಿಸಿತು‌ . ಅದರ ಫಲವೇ ಎನ್ನುವ ಹಾಗೆ ಈ ನಟಿ‌ ಇವತ್ತು ಸಾಲು ಸಾಲು ಸಿನಿಮಾಗಳಿಗೆ ನಾಯಕಿ.

ಅದೃಷ್ಟ ಅಂದ್ರೆ ಹೀಗೆಯೇ. ಯಾವಾಗ ,ಹೇಗೆ , ಯಾರಿಗೆ ‌ ಒಲಿದು ಬರುತ್ತೆ ಅನ್ನೋದೇ ಗೊತ್ತಾಗುವುದಿಲ್ಲ. ಅಂತಹ ಅದೃಷ್ಟವೀಗ  ಈ ನಟಿಗೆ  ದಿಯಾ ಹೆಸರಿನೊಂದಿಗೆ ಒಲಿದು ಬಂದಿದ್ದು  ಬಿದ್ದಿದೆ. ಅದೇ ಚಿತ್ರದ
ಜನಪ್ರಿಯತೆಯೊಂದಿಗೆ ಖುಷಿ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯಕ್ಕೀಗ ಅವರ ಕೈಯಲ್ಲಿ ಐದಾರು ಸಿನಿಮಾಗಳಿವೆ.‌ ಆ ಸಿನಿಮಾಗಳಲ್ಲಿ‌ಬ್ಯುಸಿ ಇರುವಾಗಲೇ’  ದಿಯಾ’ ರೀ ರಿಲೀಸ್ ಆಗುತ್ತಿರುವುದು ನಟಿ‌ ಖುಷಿ ಅವರಲ್ಲಿ ಥ್ರಿಲ್ ತರಿಸಿದೆ.

ನಿಜ‌, ಕೊರೋನಾ‌ ಆತಂಕದ ನಡುವೆಯೂ ನಾನೀಗ ಸಾಕಷ್ಟು ಅವಕಾಶಗಳೊಂದಿಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿರಬಹುದು. ಬಟ್, ಇದಕ್ಕೆಲ್ಲ ಕಾರಣ ‘ದಿಯಾ’ ಚಿತ್ರ. ಆ ಚಿತ್ರ ಮತ್ತೆ ಈಗ ಬಿಡುಗಡೆ ಆಗುತ್ತಿದೆ ಅಂತ ಚಿತ್ರ ತಂಡದವರು ಹೇಳಿದಾಗ ಥ್ರಿಲ್ ಆದೆ‌. ಹಳೆಯ ಎಕ್ಸೈಟ್ ಮೆಂಟ್ ಈಗಲೂ‌ಶುರುವಾಗಿದೆ. ಹಾಗಂತ‌ ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆನ್ನುವ ಭಯಕ್ಕಲ್ಲ‌‌ . ಒಂಥರ ಖುಷಿ. ಹಾಗೆಯೇ ಅದು ಇನ್ನಷ್ಟು ಜನರಿಗೆ ತಲುಪಲಿ ಎನ್ನುವ ಆಶಯಕ್ಕೆ’ ಅಂತ ತಮ್ಮ ಮುದ್ದಾದ ಮುಖದಲ್ಲಿ‌ನಗು ಅರಳಿಸುತ್ತಾರೆ ನಟಿ‌ ಖುಷಿ.

‘ದಿಯಾ’ ಚಿತ್ರದ ಹಾಗೆಯೇ ಈ‌ ವರ್ಷದ ಬ್ಲಾಕ್‌ ಬಸ್ಟರ್‌ಚಿತ್ರ. ‘ಲವ್‌ಮಾಕ್ಟೆಲ್’ ಕೂಡ‌‌ರೀ‌ರಿಲೀಸ್ ಆಗುತ್ತಿದೆ. ಹಾಗೆಯೇ ಫೆಬ್ರವರಿ ಕೊನೆಯಲ್ಲಿ ಬಿಡುಗಡೆ ಕಂಡ ಮತ್ತಷ್ಟು ಸಿನಿಮಾಗಳು ಜನರ‌ ಮುಂದೆ‌ ಬರುತ್ತಿವೆ‌. ಆ‌ ಕತೆ ಬೇರೆ. ಆದರೆ’ ದಿಯಾ ‘ ಹೆಸರಿನ ಒಂದು‌ಸಿನಿಮಾ‌ ಸಂಕಷ್ಟದ ಕಾಲದಲ್ಲೂ‌ಗೆದ್ದು‌ಬಿಗಿದು, ಅದರ‌ ಕಲಾವಿದರ ಬದುಕಲ್ಲಿ ಎಷ್ಟೇಲ್ಲ ಟ್ವಿಸ್ಟ್ ನೀಡಿತು ಎನ್ನುವುದಕ್ಕೆ ಸಾಕ್ಷಿ ನಾಯಕಿ‌ ಖುಷಿ ಅವರೇ ಸಾಕ್ಷಿ.

ನಕ್ಷೆ,  ಸ್ಪೂಕಿ ಕಾಲೇಜ್,  ಮಾರ್ಗ ಚಿತ್ರಗಳ ಜತೆಗೆ  ‘ ದಿಯಾ’  ಚಿತ್ರ ಹೀರೋ‌ ಪೃಥ್ವಿ ಅಂಬರ ಅವರೇ ಕತೆ ಬರೆದು ನಾಯಕರಾಗಿರುವ ಮತ್ತೊದು ಚಿತ್ರಕ್ಕೂ‌ನಟಿ  ಖುಷಿ ನಾಯಕಿ ಆಗಿದ್ದಾರೆ. ಈಗಾಗಲೇ ಅಷ್ಟು ಚಿತ್ರಗಳು ಶುರುವಾಗಿ, ಮುಹೂರ್ತ ಹಾಗೂ‌ ಚಿತ್ರೀಕರಣದೊಂದಿಗೆ ಸುದ್ದಿ ಮಾಡಿವೆ. ಒಂದು ಚಿತ್ರ ನವೆಂಬರ್‌ತಿಂಗಳಲ್ಲಿ ಸೆಟ್ಟೇರುತ್ತಿದೆ. ಇನ್ನೆರೆಡು ಕತೆಗಳು ಫೈನಲ್ ಆಗಿದ್ದು, ಅವು ಕೂಡ ಇಷ್ಟರಲ್ಲಿಯೇ ಸೆಟ್ಟೇರಲಿವೆ ಎನ್ನುವ ಅಧಿಕೃತ ‌ಮಾಹಿತಿ ಖುಷಿ ಅವರಿಂದಲೇ‌ ಬಹಿರಂಗಗೊಂಡಿದೆ.

ಒಟ್ಟಿನಲ್ಲಿ , ಒಂದು ಚಿತ್ರ ಗೆದ್ದರೆ ಏನೆಲ್ಲ ಆಗುತ್ತೆ, ಅದರ ನಟ-ನಟಿಯರು, ಕಲಾವಿದರು ಹೇಗೆಲ್ಲ ಬ್ಯುಸಿಯಾಗಬಲ್ಲರು ಎನ್ನುವುದಕ್ಕೆ ಸಾಕ್ಷಿ .‌ಒಂದು ಕಾಲದಲ್ಲಿ  ಅಂದ್ರೆ ಮೊದಲ‌ಚಿತ್ರ ಬಂದು‌ಹೋದ ದಿನಗಳಲ್ಲಿ ಅವಕಾಶಕ್ಕಾಗಿ‌ಪರದಾಡುತ್ತಿದ್ದ ಹುಡುಗಿ ಇವತ್ತು ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ. ಸಾಲು‌ ಸಾಲು ಸಿನಿಮಾಗಳಿಗೆ‌ ನಾಯಕಿ. ಅವರ ಹೇಳುವ ಹಾಗೆ ಕತೆ‌ಕೇಳುವುದಕ್ಕೂ‌ ಸಮಯ‌ ಸಿಗ್ತಿಲ್ವಂತೆ‌. ಟೈಮ್ ಅಂದ್ರೆ ಇದೇ ಅಲ್ವಾ? ಎಲ್ಲವೂ ಅದೃಷ್ಟದಾಟ.‌
….

error: Content is protected !!