ಬಣ್ಣದ ಜಗತ್ತಿನಲ್ಲೂ ಬಿಳಿ ಹುಡುಗಿ ಕಪ್ಪಾದಳು!

ಡಿ ಗ್ಲಾಮ್ ಪಾತ್ರಕ್ಕೂ ಸೈ ಅಂದ ಗ್ಲಾಮರಸ್ ನಾಯಕಿ ಅನುಷಾ ರೊಡ್ರಿಗಸ್

ಐದು ವರ್ಷ ಕಾಯಬೇಕಾಯಿತು ಇಂತಹ ಪಾತ್ರ ಸಿಗಲು- ಮನದಾಳ ಮಾತು ಹಂಚಿಕೊಂಡ ‘ಡಿಂಗ’ ಖ್ಯಾತಿಯ ನಟಿ
………………………………………………………

‘ಡಿಂಗ ‘ ಖ್ಯಾತಿಯ ನಟಿ ಅನುಷಾ ರೊಡ್ರಿಗಸ್ ಅಂದ್ರೆ ಗ್ಲಾಮರಸ್ ಪಾತ್ರಗಳಿಗೆ ಮಾತ್ರ ಸೀಮಿತ ಎಂದುಕೊಂಡವರೇ ಹೆಚ್ಚು. ಯಾಕಂದ್ರೆ ಅವರ ಈವರೆಗಿನ ಸಿನಿಜರ್ನಿಯೇ ಹಾಗಿದೆ. ಆದರೆ ಈಗ ಅವರು ಹಾಗಿಲ್ಲ. ಪಾತ್ರಗಳ ಆಯ್ಕೆಯಲ್ಲಿ ಫುಲ್ ಚೇಂಜ್ ಆಗಿದ್ದಾರೆ. ಗ್ಲಾಮರಸ್ ಪಾತ್ರಗಳಾಚೆ ಪಕ್ಕಾ ಡಿ ಗ್ಲಾಮ್ ಪಾತ್ರಕ್ಕೂ ಸೈ ಅಂದಿದ್ದಾರೆ. ಅದಕ್ಕೀಗ ಸಾಕ್ಷಿ ‘ಕತ್ತಲನ ತ್ರಿಶೂಲ’ ಹೆಸರಿನ ಚಿತ್ರದಲ್ಲಿನ ಅವರ ಪಾತ್ರ ಮತ್ತು ಗೆಟಪ್.

ಮನೋಜ್ ನಿರ್ಮಿಸಿ, ಹೊಸ ಪ್ರತಿಭೆ ಪ್ರಶಾಂತ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ರಂಗಭೂಮಿ ಹಿನ್ನೆಲೆಯ ಹಾಸ್ಯ ನಟ ಪ್ರಶಾಂತ್ ಸಿದ್ದಿ ಇದರ ಪ್ರಮುಖ‌ ಪಾತ್ರಧಾರಿ. ಅವರಿಗೆ ಜೋಡಿ ಯಾಗಿ ಅನುಷಾ‌ ರೋಡ್ರಿಗಸ್ ಕಾಣಿಸಿಕೊಳ್ಳುತ್ತಿದ್ದು, ಸದ್ದಿಲ್ಲದೆ ಸುದ್ದಿಯಾಗದೆ ಈ ಚಿತ್ರಕ್ಕೆ ಈಗಾಗಲೇ ಮುಕ್ಕಾಲು‌ ಭಾಗದ ಚಿತ್ರೀಕರಣ ಕೂಡ ನಡೆದಿದೆ. ಈ ಹಂತದಲ್ಲಿ ಚಿತ್ರದಲ್ಲಿನ ನಾಯಕಿ ಅನುಷಾ ರೋಡ್ರಿಗಸ್ ಪಾತ್ರದ ಲುಕ್ ರಿವೀಲ್ ಆಗಿದೆ.

ನಂಗಿದು ತುಂಬಾ ಸ್ಪೆಷಲ್ ಸಿನಿಮಾ…

ಚಿತ್ರದ ಶೀರ್ಷಿಕೆಯೇ ವಿಶೇಷವಾಗಿದೆ. ಹಾಗೆಯೇ ಇದೊಂದು ವಿಶೇಷವಾದ ಕಥಾ ಹಂದರದ ಚಿತ್ರ. ಸ್ವಾತಂತ್ರ್ಯ ಕ್ಕೂ ಮುಂಚೆ ಇಲ್ಲಿದ್ದ ಭೂಮಾಲೀಕ ವ್ಯವಸ್ಥೆ ಮತ್ತು ಅಲ್ಲಿನ ಕೂಲಿಯಾಳುಗಳ ದಾರುಣ ಸ್ಥಿತಿಯನ್ನು ತೆರೆ ಮೇಲೆ ತೋರಿಸುವ ಚಿತ್ರವಿದು. ಇಲ್ಲಿ ಒಬ್ಬ ಬಡ ಕೆಲಸದಾಳಿನ ಹೆಂಡತಿಯಾಗಿ ಅಭಿನಯಿಸಿದ್ದಾರಂತೆ ಅನುಷಾ ರೋಡ್ರಿಗಸ್. ಅದರ ಒಂದು ಲುಕ್ ಈಗ ಕುತೂಹಲ‌ ಮೂಡಿಸಿದೆ.
‘ ನನ್ನ ಮಟ್ಟಿಗೆ ಇದೊಂದು ವಿಶೇಷವಾದ ಪಾತ್ರ. ಯಾಕಂದ್ರೆ ಇದುವರೆಗೂ ಇಂತಹ ಪಾತ್ರದಲ್ಲಿ ಅಭಿನಯಿಸಿಲ್ಲ‌. ಅಭಿನಯಿಸುವ ಆಸೆ ಇತ್ತಾದರೂ ಅಂತಹ ಪಾತ್ರಗಳೇ ನನಗೆ ಸಿಕ್ಕಿರಲಿಲ್ಲ.ಈಗ ಆ ಅವಕಾಶ ಒದಗಿ ಬಂದಿದೆ‌. ಪಕ್ಕಾ ಹಳ್ಳಿ ಗಾಡಿನ ಮಹಿಳೆಯ ಪಾತ್ರ. ಆಕೆ ಭೂಮಾಲೀಕರ‌ ಮನೆಯಲ್ಲಿ ಕೂಲಿ‌ ಕೆಲಸ ಮಾಡುವ ತಳ‌ಸಮುದಾಯದ ಮಹಿಳೆ. ಆಕೆಯ ಬಣ್ಣ, ಉಡುಗೆ- ತೊಡುಗೆ ಎಲ್ಲವೂ ಹಳ್ಳಿಯ ಪ್ರತಿಬಿಂಬ’ ಎನ್ನುತ್ತಾರೆ ನಟಿ‌ ಅನುಷಾ ರೋಡ್ರಿಗಸ್,

ಚಾಲೆಂಜ್ ಆಗಿದ್ದ ಕ್ಯಾರೆಕ್ಟರ್…

‘ ಡಿಂಗ’ ಚಿತ್ರದ ಸಕ್ಸಸ್ ನಂತರ ನಟಿ‌ ಅನುಷಾ ಒಪ್ಪಿಕೊಂಡ ಚಿತ್ರವಿದು. ಅವರ ಇದುವರೆಗಿನ ಜರ್ನಿಗೆ ತೀರಾ ವಿಭಿನ್ನವಾದ ಕಥಾ ಹಂದರದ ಚಿತ್ರ. ಹಾಗೆಯೇ ನಾಯಕಿ‌ ಅನುಷಾ ಅವರ ಪಾತ್ರವೂ ಕೂಡ. ಅವರ ನಿಜ ಬದುಕಿಗೂ ವಿರುದ್ಧವಾದ ಕ್ಯಾರೆಕ್ಟರ್. ಒಂದ್ರೀತಿ ಸವಾಲೇ ಎನಿಸುವ ಪಾತ್ರ. ಈಗಾಗಲೇ ನಾನು ಅಭಿನಯಿಸಿದ ಪಾತ್ರಗಳಿಗಿಂತ ಇಲ್ಲಿ ಬೇರೆಯಾದ ಹಾವ, ಭಾವ, ಅಭಿನಯ ಎಲ್ಲವೂ ನೈಜವಾಗಿರಬೇಕಿತ್ತು. ಶೂಟಿಂಗ್ ಹೋಗುವುದಕ್ಕಿಂತ ಮುಂಚೆ ಒಂದಷ್ಟು ದಿನ ರಿಹರ್ಸಲ್ ಮಾಡಿಕೊಂಡೆವು. ನಿರ್ದೇಶಕರು ಸಾಕಷ್ಟು ಸಲಹೆ ಕೊಟ್ಟರು.‌ ಟೀಮ್ ನವರು ಕೂಡ ಸಾಕಷ್ಟು ಐಡಿಯಾ ಕೊಟ್ಟರು.‌ ಅದೆಲ್ಲ ಕಾರಣಕ್ಕೆ ನೈಜವಾಗಿ ಅಭಿನಯಿಸಲು ಸಾಧ್ಯವಾಗಿದೆ.ಅಂತಹ ಪಾತ್ರಕ್ಕೀಗ ಬಣ್ಣ ಹಚ್ಚಿ‌ ಸ್ಯಾಂಡಲ್ ವುಡ್ ನಲ್ಲಿ ಸುದ್ದಿ ಮಾಡಲು ಹೊರಟಿರುವ ನಟಿ ಅನುಷಾ ರೊಡ್ರಿಗಸ್‌, ಈ‌ ಸಿನಿಮಾ‌ ಒಪ್ಪಿಕೊಂಡ ಕುರಿತು ಹೇಳುವುದಿಷ್ಟು;

ಸೌಂದರ್ಯ ಪಾತ್ರವೇ ಕಾರಣ…

ಗಿರೀಶ್ ಕಾಸರವಳ್ಳಿ ನಿರ್ದೇಶನ ದ ದ್ವೀಪ ಸಿನಿಮಾ ಅದ್ಬುತ ಸಿನಿಮಾಗಳನ್ನು ನೋಡುವಾಗ ನಾನು ಕೂಡ‌ ಒಂದು ದಿನ ಈ ರೀತಿಯ ಸಿನಿಮಾಗಳಲ್ಲಿ ಯಾಕೆ ಅಭಿನಯಿಸಬಾರದು ಅಂತ ಯೋಚಿಸುತ್ತಿದ್ದೆ. ಅದು ಒಂಥರ ನನಗೆ ಕನಸು. ಯಾಕಂದ್ರೆ, ‘ದ್ವೀಪ’ ದಲ್ಲಿ ಸೌಂದರ್ಯ ಅಭಿನಯಿಸುವಾಗ ಅವರ ಅಭಿನಯದಲ್ಲಿ ನೈಜತೆ, ಭಾವನೆಗಳಿಗೆ ಹೆಚ್ಚು ತೂಕವಿರುತ್ತದೆ. ಅಂತಹ ಪಾತ್ರ ದಲ್ಲಿ ಅಭಿನಯಿಸಿದರೆ, ನಾನು ಒಬ್ಬ ನಟಿಯಾಗಲು ಸಾಧ್ಯ ಅಂತ ಯೋಚಿಸುತ್ತಿದ್ದೆ. ಆಗ ನನಗೆ ಸಿಕ್ಕಿದ್ದೇ ‘ಕತ್ತಲನ ತ್ರಿಶೂಲ ‘ಚಿತ್ರದ ಅವಕಾಶ. ಎನ್ನುವುದು ಅನುಷಾ ಅವರ ಮಾತು.

ಸಿನಿಮಾ ರಂಗವೇ ಈಗ ಟಾರ್ಗೆಟ್..

ಕೊಡಗು ಮೂಲದ ಗ್ಲಾಮರಸ್ ನಟಿ ಅನು಼ಷಾ ರೋಡ್ರಿಗಸ್ ಸಿನಿ ಜರ್ನಿ ಶುರುವಾಗಿ ಇಲ್ಲಿದೆ ಐದು ವರ್ಷ.’ ಕೃಷ್ಣ ಲೀಲಾ ‘ ಚಿತ್ರದ ಮೂಲಕ ನಟಿಯಾಗಿ ಬೆಳ್ಳಿತೆರೆಗೆ ಎಂಟ್ರಿಯಾಗಿ ಲೌಡ್ ಸ್ಪೀಕರ್‌, ‘ ಜಲ್ಸಾ ‘ ಹಾಗೂ ಡಿಂಗ, ಚಿತ್ರಗಳ ನಂತರವೀಗ ‘ ದಾರಿ ಯಾವುದಯ್ಯ’ ಹಾಗೂ ಕತ್ತಲನ ತ್ರಿಶೂಲ ಚಿತ್ರಗಳಲ್ಲಿ‌ ಬ್ಯುಸಿಯಾಗಿದ್ದಾರೆ. ಜತೆಗೀಗ ಕಾಂತ ಕನ್ನಳ್ಳಿ ನಿರ್ದೇಶನದ ಮತ್ತೊಂದು ಚಿತ್ರಕ್ಕೂ ನಾಯಕಿ ಆಗಿದ್ದಾರಂತೆ‌ . ಆ ಸಿನಿಮಾ‌ ಇನ್ನೇನು ಶುರುವಾಗುವ ಹಂತದಲ್ಲಿದೆ. ಸಿನಿಮಾ ಜತೆಗೆ ಸೀರಿಯಲ್ ಜಗತ್ತಿನಲ್ಲೂ ಅನುಷಾ ರೋಡ್ರಿಗಸ್ ಸದ್ದು ಮಾಡುತ್ತಿದ್ದಾರೆ. ‘ ಶ್ರೀಮಾನ್ ಶ್ರೀಮತಿ ‘ ಹಾಗೂ‌’ ಅವಳು ಸುಜಾತ ‘ ಧಾರವಾಹಿಗಳು ಅಭಿನಯಿಸಿದ್ದಾರೆ. ಸದ್ಯಕ್ಕೀಗ ಕಿರುತೆರೆಗೆ ವಿಶ್ರಾಂತಿ ಹೇಳಿ, ಸಿನಿಮಾ ಕಡೆ ಹೆಚ್ವು ಗಮನಹರಿಸಿದ್ದಾರೆ. ಆ ಪ್ರಯತ್ನದ ಆರನೇ ಚಿತ್ರವೇ ‘ಕತ್ತಲನ ತ್ರಿಶೂಲ’.ಆಲ್ ದಿ ಬೆಸ್ಟ್ ಅನುಷಾ.

Related Posts

error: Content is protected !!