ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬ ವಾಖ್ಯಾನದ ಪ್ರಯತ್ನವೇ ಬಿರಿಯಾನಿ – ಸಜಿನ್ ಬಾಬು

ಅಂತಾರಾಷ್ಟ್ರೀಯ ಮಟ್ಟದಲ್ಲಿ‌ ಸಾಕಷ್ಟು ಸದ್ದು ಮಾಡುತ್ತಿರುವ ಮಲಯಾಳಂನ  ‘ಬಿರಿಯಾನಿ‌’ ಚಿತ್ರದ ನಿರ್ದೇಶಕ ಸಜಿನ್ ಬಾಬು ಜತೆಗೆ ‘ ಸಿನಿ ಲಹರಿ’ ನಡೆಸಿದ ವಿಶೇಷ ಸಂದರ್ಶನ

ಸಂದರ್ಶನ – ರಮೇಶ್ ಎಚ್.ಕೆ. ಶಿವಮೊಗ್ಗ

1. ನಮಸ್ತೆ ಸರ್, ಬಿರಿಯಾನಿ ಸಿನಿಮಾಗೆ ಸತತವಾಗಿ ಪ್ರಶಸ್ತಿಗಳು ಬರುತ್ತಿವೆ. ಹೇಗನಿಸುತ್ತಿದೆ?

ಈ ಪ್ರಶಸ್ತಿ ದೊರೆತಿರುವುದು ನಿಜಕ್ಕೂ ಅತೀವ ಸಂತೋಷ ತಂದಿದೆ.‌ ಬಿರಿಯಾನಿ ಸಿನಿಮಾ ಈಗಾಗಲೇ ಬಹಳಷ್ಟು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹಲವು ಪ್ರಶಸ್ತಿಗಳೂ‌ ಬಂದಿವೆ. ಆದರೆ ನಮ್ಮದೇ ಊರಿನಲ್ಲಿ ಪ್ರಶಸ್ತಿ ಪಡೆಯುವುದು ಒಂಥರಾ ವಿಶೇಷ ಅನುಭವ.‌ ಅದು ಅತೀವ ಖುಷಿ ಕೊಟ್ಟಿದೆ.

2. ನಿಮ್ಮ ಹಾಗೂ ನಿಮ್ಮ ಕೌಟುಂಬಿಕ ಹಿನ್ನೆಲೆಯ ಬಗ್ಗೆ ತಿಳಿಸಿ?

ಕೇರಳದ ಕೂಪ್ಪು ಎನ್ನುವ ಸಣ್ಣ ಹಳ್ಳಿಯಿಂದ ಬಂದವನು. ನನ್ನ ಶಾಲೆಯ ಬಳಿಕ ಪದವಿ ಪಡೆಯಲು ಟ್ರಿವೇಂಡ್ರಂ ಗೆ ಬಂದೆ. ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ನನ್ನ ಕನಸಾಗಿತ್ತು. ತ್ರಿವೇಂಡ್ರಂ ನಲ್ಲಿ ಇದ್ದಾಗ iffk ಮುಖಾಂತರ ಜಾಗತಿಕ ಸಿನಿಮಾಗಳನ್ನು ನೋಡುವ ಮತ್ತು ಸಿನಿಮಾಗಳ ಕುರಿತ ಚರ್ಚೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಇದಾದ ಮೇಲೆ ನಾನೂ ಸಹ ಕ್ಯಾಂಪಸ್ ಸಿನಿಮಾಗಳು ಮತ್ತು ಕೆಲ ಡಾಕ್ಯುಮೆಂಟರಿಗಳನ್ನು ಮಾಡಿದೆ. ನಾನು 26 ನೇ ವಯಸ್ಸಿನವನಾಗಿದ್ದಾಗ Unto The Dusk ಎನ್ನುವ ಸಿನಿಮಾ ಮಾಡಿದೆ. ಈ ಸಿನಿಮಾಗೆ ಬೆಂಗಳೂರು ಚಿತ್ರೋತ್ಸವದಲ್ಲಿ ಚಿತ್ರಭಾರತಿ ಪ್ರಶಸ್ತಿ ಹಾಗೂ iffk ನಲ್ಲಿ ರಜತಚಾಜೋರಂ ಪ್ರಶಸ್ತಿ ಲಭಿಸಿತು. ನನ್ನ ಎರಡನೇ ಚಿತ್ರ ನಟ ಶ್ರೀನಿವಾಸನ್ ಅವರೊಂದಿಗೆ ನಿರ್ಮಿಸಿದ ಅಯಾಲ್ ಸಾಸ್ಸಿ. ಇದು ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದಾದ ಮೇಲೆ ನಾನು ಮಾಡಿರುವ 3 ನೇ ಚಿತ್ರ ಬಿರಿಯಾನಿ ಆಗಿದ್ದು ಇದೊಂದು ಸ್ವತಂತ್ರ ಚಿತ್ರವಾಗಿದೆ.

3. ನಿಮ್ಮ ನೆಚ್ಚಿನ ನಟ, ಲೇಖಕ ಹಾಗೂ ಪುಸ್ತಕಗಳು ಯಾವು?

ಮಲಯಾಳಂನಲ್ಲಿ ಯಾರೋ ಒಬ್ಬ ನಟನ ಹೆಸರನ್ನು ಹೇಳುವುದು ಕಷ್ಟ‌. ಜತೆಗೆ ಹಾಗೆ ಹೇಳುವುದಕ್ಕೂ ಇಷ್ಟವಿಲ್ಲ. ಭಾರತೀಯ ಹಾಗೂ ಜಾಗತಿಕ ಸಿನಿಮಾ ರಂಗದಲ್ಲಿ ಬಹಳಷ್ಟು ಮಂದಿ ನಟರು ನನಗೆ ಇಷ್ಟವಾಗುತ್ತಾರೆ. ನನಗೆ ವರ್ನರ್ ಹೆರ್ಜಾರ್ಗ್ ನ ‘ಅಕ್ವಿರೆ’ ಸಿನಿಮಾದಲ್ಲಿ ಕ್ಲಾಸ್ ಕಿನ್ ಸ್ಕಿ ಪಾತ್ರ ಇಷ್ಟವಾಗುತ್ತದೆ. ಜೊತೆಗೆ ಕಮಲ್ ಹಾಸನ್, ಮೋಹನ್ ಲಾಲ್ ಹಾಗೂ ಅಮೀರ್ ಖಾನ್ ಅವರ ನಟನೆಗಳು ಇಷ್ಟವಾಗುತ್ತವೆ. ಇನ್ನು ಪುಸ್ತಕ ಮತ್ತು ಲೇಖಕರ ವಿಷಯದಲ್ಲೂ ಬಹಳಷ್ಟು ಜನರಿದ್ದು ಯಾವುದೋ ಒಂದು ಹೆಸರು ಹೇಳಲು ನನಗೆ ಸಾಧ್ಯವಿಲ್ಲ.

4. ಸಿನಿಮಾ ಕ್ಷೇತ್ರವನ್ನು ಆರಿಸಿಕೊಳ್ಳಲು ಕಾರಣ?

ವಿದ್ಯಾರ್ಥಿ ಆದಾಗಿನಿಂದಲೂ ಸಿನಿಮಾಗಳು ನನ್ನ ಮನಸ್ಸಿನಲ್ಲಿದೆ. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ. ನಾನು ಅಮ್ಮನ ಬಳಿ ಒಪ್ಪಿಗೆ ಪಡೆದು ಮನೆ ಕೆಲಸ ಮಾಡಿ, ಭಾನುವಾರದಂದು ದೂರದರ್ಶನದಲ್ಲಿ ಬರುತ್ತಿದ್ದ ಸಿನಿಮಾಗಳನ್ನು ನೋಡಲು ಪಕ್ಕದ ಮನೆಗೆ ಹೋಗುತ್ತಿದ್ದೆ. ಕೆಲವೊಮ್ಮೆ ಮನೆಯಲ್ಲಿ ಒಪ್ಪದೇ ಇದ್ದ ಕಾರಣಕ್ಕೆ ಸಿನಿಮಾಗಳನ್ನು ನೋಡಲು ಕಷ್ಟವಾಗುತ್ತಿತ್ತು. ಆದರೆ ಆಗಲೇ ಹೇಳಿದಂತೆ ಪದವಿಯ ವೇಳೆ ನಾನು ಹೆಚ್ಚು ಸಿನಿಮಾಗಳನ್ನು ನೋಡಿದೆ ಮತ್ತು ಸಿನಿಮಾ ಮಾಡುವ ಅವಕಾಶಗಳನ್ನು ಪಡೆದೆ

5. ಬಿರಿಯಾನಿಯಂತ ಸಿನಿಮಾ ಮಾಡಲು ಕಾರಣವೇನು?

ಈ ರೀತಿಯ ಸಿನಿಮಾ ಮಾಡಬೇಕೆಂಬ ಆಲೋಚನೆ ಬಂದಿದ್ದು ಯಾವಾಗ ಎಂದು ನನಗೆ ನೆನಪಿಲ್ಲ. 25-26 ನೇ ವಯಸ್ಸಿನಲ್ಲಿ ನಾನು ನನ್ನ ಮೊದಲ ಸಿನಿಮಾ ಮಾಡಿದಾಗ ನನಗೂ ಕೂಡಾ ಸಿನಿಮಾ ನಂತರದಲ್ಲಿ ಬಹಳಷ್ಟು ಪ್ರಶ್ನೆಗಳು ಮೂಡುತ್ತಿದ್ದವು. ಈ ಪ್ರಶ್ನೆಗಳು ನನ್ನದೇ ಸಿನಿಮಾ ನೋಡಿದಾಗಲೂ ಉದ್ಭವಿಸುತ್ತಿತ್ತು.‌ ನಾನು ಎಲ್ಲಾ ಧರ್ಮಗಳೂ ಇರುವಂತಹ ಒಂದು ಹಳ್ಳಿಯಲ್ಲಿ ಬೆಳೆದವನು. ಹೀಗಾಗಿ ಧರ್ಮಗಳೇ ಇಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಯಾವುದೇ ಧರ್ಮದ ಹಂಗಿಲ್ಲದೇ ನಾನು ಬದುಕಬೇಕು ಎಂಬುದನ್ನು ರೂಢಿಸಿಕೊಂಡೆ. ಈಗಲೂ ಕೂಡಾ ಬಹಳಷ್ಟು ಮಂದಿ ನನ್ನ ಹೆಸರಿನಿಂದ ನನ್ನ ಧರ್ಮವನ್ನು ಗುರುತಿಸಲು ಪ್ರಯತ್ನಿಸಿ ಸೋತಿದ್ದಾರೆ.‌ ಹೀಗಾಗಿಯೇ ನನ್ನ Unto The Dusk ಸಿನಿಮಾ ಮಾಡಿದಾಗ ನನಗೇ ಗೊತ್ತಿಲ್ಲದೇ ನನ್ನನ್ನು ಕ್ರಿಶ್ಚಿಯನ್ ಎಂದು ಸಂಬೋಧಿಸಿದ್ದಾರೆ. ಈಗ ಬಿರಿಯಾನಿ ಸಿನಿಮಾದ ನಂತರ ನನ್ನನ್ನು ಮುಸ್ಲಿಂ ಎಂದುಕೊಳ್ಳಲೂಬಹುದು. ಇಂತಹ ಗೊಂದಲಮಯವಾದಂತಹ ಬೇಸರದ ವಿದ್ಯಮಾನದೊಳಗೆ ಒಬ್ಬ ಜಾತ್ಯಾತೀತ ಎನಿಸಿಕೊಂಡಂತಹ ವ್ಯಕ್ತಿಯೇ ಧಾರ್ಮಿಕ ಮೂಲಭೂತವಾದಿಯೊಬ್ಬನಿಗಿಂತ ಹೆಚ್ಚಾಗಿ ಧರ್ಮದ ಬಗ್ಗೆ ಮಾತನಾಡುತ್ತಾನೆ. ಹೀಗಾಗಿ ಇಂತಹದ್ದನ್ನೆಲ್ಲಾ ಕಂಡು ಅನುಭವಿಸಿದ ಬಳಿಕ ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬುದನ್ನು ವಾಖ್ಯಾನಿಸಲು ಬಿರಿಯಾನಿ ಎಂಬ ಸಿನಿಮಾವನ್ನು ತೆರೆದ ಪುಸ್ತಕವಾಗಿ ರೂಪಿಸಲು ಯತ್ನಿಸಿದ್ದೇನೆ. ಸಮಾಜದ ನೈಜ ಸಂಗತಿಗಳಲ್ಲಿ ನನಗೆ ಹೆಚ್ಚಿನ ಆಸಕ್ತಿಯಿದ್ದು ಇವುಗಳನ್ನೇ ನಾನು ಹೆಚ್ಚು ನಂಬುತ್ತೇನೆ.

6. ನಿರ್ದೇಶಕ ಸಜಿನ್ ಬಾಬು ಅವರು ಬಿರಿಯಾನಿ ಸಿನಿಮಾದಲ್ಲಿ ತಾವಂದುಕೊಂಡ ಎಲ್ಲವನ್ನೂ ಅಳವಡಿಸಿದ್ದಾರೆಯೇ?

ನಾನಂದುಕೊಂಡ ಹಾಗೇ ಸಿನಿಮಾ ಬಂದಿದೆ ಎಂದು ಹೇಳಲಾರೆ.‌ ಆದರೆ ನಾನಂದುಕೊಂಡಿದ್ದರಲ್ಲಿ ಕನಿಷ್ಟ ಪಕ್ಷ 80% ಅಷ್ಟನ್ನಾದರೂ ನಾನು ಸಿನಿಮಾದಲ್ಲಿ ಅಳವಡಿಸಿದ್ದೇನೆ.

7. ನೀವು ಈ ಸಿನಿಮಾ ಬಗ್ಗೆ ಹೇಳಿದಾಗ ಕನಿ ಕುಸ್ರುತಿ ಅವರ ಪ್ರತಿಕ್ರಿಯೆ ಹೇಗಿತ್ತು?

ಮೊದಲು ಈ ಕತೆಯನ್ನು ಕನಿ ಅವರಿಗೆ ಹೇಳಿದಾಗ ಅವರು ಸುತಾರಾಂ ಒಪ್ಪಿರಲಿಲ್ಲ. ಆದರೆ ನಾನು ಮತ್ತೆ ಮತ್ತೆ ಅವರನ್ನು ಭೇಟಿ ಮಾಡಿ ಈ ಸಿನಿಮಾದಲ್ಲಿನ ಖದೀಜಾ ಪಾತ್ರ ಮಾಡುವಂತೆ ಒಪ್ಪಿಸಿದೆ. ಇನ್ನು ಪಾತ್ರದ ರಚನೆಯ ಬಗ್ಗೆ ಅವರಿಗೆ ತಕರಾರುಗಳಿವೆ. ಹೀಗಾಗಿಯೇ ನಾನು ಬೇರೆ ಖದೀಜಾ ಬೇರೆ ಎಂಬುದು ಕನಿ ಅವರ ನಿಲುವಾಗಿದೆ.

” ನಮ್ಮ ಸಮಾಜವು ಯಾವಾಗಲೂ ಸಹ ಸಮಸ್ಯೆಯ ಒಂದೇ ಮಗ್ಗುಲನ್ನು ನೋಡುತ್ತದೆ. ಐಸಿಸ್ ಜೊತೆ ನಂಟಿರುವ ಆರೋಪಿತ ವ್ಯಕ್ತಿಯನ್ನು ನೋಡುವಾಗ ಅವನನ್ನು ಸಮಾಜ ಹಾಗೂ ಮಾಧ್ಯಮಗಳು ತೀವ್ರವಾಗಿ ಗುರಿಪಡಿಸುತ್ತವೆ.‌‌ ಆದರೆ ಈ ಗುರಿ ಪಡಿಸುವ ಭರದಲ್ಲಿ ಅವನ ಕುಟುಂಬದ ಪರಿಸ್ಥಿತಿ ಏನಾಯಿತು ಎಂಬುದನ್ನು ಸಮಾಜ ಮತ್ತು ಮಾಧ್ಯಮಗಳು ಮರೆಯುತ್ತವೆ” 

8. ಖದೀಜಾ ಪಾತ್ರದ ಮೂಲಕ ನೀವು ಸಮಾಜಕ್ಕೆ ಯಾವ ಸಂದೇಶ ನೀಡಲು ಬಯಸುತ್ತೀರ ?

ನಮ್ಮ ಸಮಾಜವು ಯಾವಾಗಲೂ ಸಹ ಸಮಸ್ಯೆಯ ಒಂದೇ ಮಗ್ಗುಲನ್ನು ನೋಡುತ್ತದೆ. ಐಸಿಸ್ ಜೊತೆ ನಂಟಿರುವ ಆರೋಪಿತ ವ್ಯಕ್ತಿಯನ್ನು ನೋಡುವಾಗ ಅವನನ್ನು ಸಮಾಜ ಹಾಗೂ ಮಾಧ್ಯಮಗಳು ತೀವ್ರವಾಗಿ ಗುರಿಪಡಿಸುತ್ತವೆ.‌‌ ಆದರೆ ಈ ಗುರಿ ಪಡಿಸುವ ಭರದಲ್ಲಿ ಅವನ ಕುಟುಂಬದ ಪರಿಸ್ಥಿತಿ ಏನಾಯಿತು ಎಂಬುದನ್ನು ಸಮಾಜ ಮತ್ತು ಮಾಧ್ಯಮಗಳು ಮರೆಯುತ್ತವೆ
ಅದರಲ್ಲೂ ಆ ಕುಟುಂಬದ ಮಹಿಳೆಯರು ಯಾರಿಗೂ ಬೇಡವಾಗುತ್ತಾರೆ. ಅವರನ್ನು ಚಿತ್ರಹಿಂಸೆ ಮಾಡಲಾಗುತ್ತದೆ. ಆದರೆ ಈ ಸಂಗತಿಯನ್ನು ಒಂದು ಯಾರೂ ಚರ್ಚಿಸುವುದಿಲ್ಲ. ಇದು ಇಲ್ಲಷ್ಟೇ ಅಲ್ಲ ಸಮಾಜದಲ್ಲಿ ಅಪರಾಧಗಳು ಎಲ್ಲಿ ನಡೆಯುತ್ತದೋ ಅಲ್ಲೆಲ್ಲಾ ಇದು ಸಾಮಾನ್ಯವಾಗಿ ಕಾಣಬರುವ ವಿದ್ಯಮಾನವಾಗಿದೆ. ನಮ್ಮ ಸಮಾಜದಲ್ಲಿ ಹೀಗೆ ಆರೋಪಿತರಾದ ವ್ಯಕ್ತಿಗಳ ಕುಟುಂಬವನ್ನು ಸಂತೈಸುವ ಅಥವಾ ಅವರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಇಲ್ಲ.‌ ಯಾರೋ ಮಾಡುವ ತಪ್ಪಿಗೆ ಕುಟುಂಬದ ಇತರೆ ಜನರಿಗೆ ಇನ್ನಿಲ್ಲದ ತೊಂದರೆ ಆದರೂ ಸಹ ಅವರಿಗೆ ಯಾವ ರಕ್ಷಣೆಯೂ ಇರುವುದಿಲ್ಲ. ಹೀಗಾಗಿ ಈ ಸೂಕ್ಷ್ಮಗಳನ್ನೆಲ್ಲಾ ನಾನು ಬಿರಿಯಾನಿ ಸಿನಿಮಾ ಮೂಲಕ ಹೇಳಲು ಯತ್ನಿಸಿದ್ದೇನೆ.

” ಈಗಲೂ ಕೂಡಾ ಬಹಳಷ್ಟು ಮಂದಿ ನನ್ನ ಹೆಸರಿನಿಂದ ನನ್ನ ಧರ್ಮವನ್ನು ಗುರುತಿಸಲು ಪ್ರಯತ್ನಿಸಿ ಸೋತಿದ್ದಾರೆ.‌ ಹೀಗಾಗಿಯೇ ನನ್ನ Unto The Dusk ಸಿನಿಮಾ ಮಾಡಿದಾಗ ನನಗೇ ಗೊತ್ತಿಲ್ಲದೇ ನನ್ನನ್ನು ಕ್ರಿಶ್ಚಿಯನ್ ಎಂದು ಸಂಬೋಧಿಸಿದ್ದಾರೆ. ಈಗ ಬಿರಿಯಾನಿ ಸಿನಿಮಾದ ನಂತರ ನನ್ನನ್ನು ಮುಸ್ಲಿಂ ಎಂದುಕೊಳ್ಳಲೂಬಹುದು. ಇಂತಹ ಗೊಂದಲಮಯವಾದಂತಹ ಬೇಸರದ ವಿದ್ಯಮಾನದೊಳಗೆ ಒಬ್ಬ ಜಾತ್ಯಾತೀತ ಎನಿಸಿಕೊಂಡಂತಹ ವ್ಯಕ್ತಿಯೇ ಧಾರ್ಮಿಕ ಮೂಲಭೂತವಾದಿಯೊಬ್ಬನಿಗಿಂತ ಹೆಚ್ಚಾಗಿ ಧರ್ಮದ ಬಗ್ಗೆ ಮಾತನಾಡುತ್ತಾನೆ” 

9. ಖದೀಜಾ ಪಾತ್ರದ ಪ್ರತಿರೋಧದಿಂದಾಗಿ ಅವಳಿಗೆ ನ್ಯಾಯ ಸಿಕ್ಕಿದೆ ಎಂದು ನಿಮಗೆ ಅನ್ನಿಸುವುದೇ?

ಆಕೆ ತೋರಿದ ಪ್ರತಿರೋಧದಿಂದ ಅವಳಿಗೆ ನ್ಯಾಯ ಸಿಕ್ಕಿತು ಎಂದು ನಾನು ಭಾವಿಸುವುದಿಲ್ಲ. ಆದರೆ ವಾಸ್ತವವಾಗಿ ನೋಡಿದಾಗ ಅಷ್ಟು ಅಸಹಾಯಕಳಾದ ಹೆಣ್ಣಿನ ಆಕ್ರೋಶವು ಆಕೆಯ ಮಿತಿಯೊಳಗೆ ಅಷ್ಟೇ ಇರುವ ಸಾಧ್ಯತೆ ಇದೆ. ಇದು ಅವಳ ಮನಸ್ಸಿನ ದುಃಖವನ್ನು ಹೋಗಲಾಡಿಸದೇ ಇದ್ದರೂ ಸಹ ಅವಳ ಪ್ರತಿರೋಧವನ್ನು ಅವಳೇ ದಾಖಲಿಸುವ ಮಟ್ಟಿಗೆ ಅದನ್ನು ನಾವು ಒಪ್ಪಿಕೊಳ್ಳಬಹುದು.

10. ಈ ಚಿತ್ರದ ಬಗ್ಗೆ ಸಂಪ್ರದಾಯವಾದಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳು ಎತ್ತುವ ಪ್ರಶ್ನೆಗೆ ಉತ್ತರಿಸಲು ನೀವು ಸಿದ್ಧವಾಗಿದ್ದೀರಾ?

ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ನಾನು ಕೇವಲ ವಾಸ್ತವಗಳನ್ನು ತೋರಿಸಲು ಯತ್ನಿಸಿದ್ದೇನೆ. ನಾನು ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದನಾಗುವ ಅಗತ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ.

11. ನಿಮ್ಮ ಪ್ರಕಾರ ಒಳ್ಳೆಯ ಚಿತ್ರ ಎಂದರೆ ಏನು?

ಒಂದು ಚಿತ್ರ ನನಗೆ ಉತ್ತಮವಾಗಿ ಕಂಡರೆ ಮತ್ತೊಬ್ಬರಿಗೆ ಕೆಟ್ಟದಾಗಿ ಅನಿಸುತ್ತದೆ. ಇದಕ್ಕೆ ಆಯಾ ವ್ಯಕ್ತಿಗಳ ಇಷ್ಟ ಕಷ್ಟಗಳು ಮತ್ತು ಸಿನಿಮಾಗಳನ್ನು ನೋಡುವ ರೀತಿ ಕಾರಣವಾಗುತ್ತದೆ. ಹೀಗಾಗಿ ನನ್ನ ಪ್ರಕಾರ ಉತ್ತಮ ಅಥವಾ ಕೆಟ್ಟ ಚಿತ್ರ ಎನ್ನುವುದಕ್ಕೆ ಸಿದ್ಧಸೂತ್ರಗಳು ಇರುವುದಿಲ್ಲ ಎಂಬುದು ನನ್ನ ಭಾವನೆ.

12. ಮಲಯಾಳಂ ಸಿನಿಮಾಗಳನ್ನು ಬಿಟ್ಟರೆ ನಿಮಗೆ ಯಾವ ಭಾಷೆಯ ಚಿತ್ರಗಳು ಇಷ್ಟವಾಗುತ್ತವೆ?

ನನಗೆ ಹಲವು ಕಾರಣಗಳಿಗೆ ಮರಾಠಿ ಸಿನಿಮಾಗಳೆಂದರೆ ಇಷ್ಟ.

13 ನಿಮ್ಮ ಮುಂದಿನ ಚಿತ್ರಗಳು ಮತ್ತು ಯೋಜನೆಗಳ ಬಗ್ಗೆ ಹೇಳಿ ?

ನಾನೀಗ ಕೆಲವೊಂದು ಸಿನಿಮಾಗಳನ್ನು ಮಾಡಲು ಯೋಚಿಸಿದ್ದೇನೆ. ಆದರೆ ಯಾವುದೂ ಸಹ ಪೂರ್ಣವಾಗಿ ನಿರ್ಧಾರವಾಗಿಲ್ಲ. ಸದ್ಯ ಥ್ರಿಲ್ಲರ್ ಮಾದರಿಯಲ್ಲಿ ಮೂರು ಕತೆಗಳನ್ನು ಹೆಣೆದಿರುವೆ.

14. ಬಿರಿಯಾನಿ ಸಿನಿಮಾಗೆ ಈ ಬಾರಿ ರಾಷ್ಟ್ರ ಪ್ರಶಸ್ತಿ ಯನ್ನು ನಿರೀಕ್ಷಿಸಬಹುದೇ?

ಈಗಾಗಲೇ ಬಹಳಷ್ಟು ಸಿನಿಮಾ ಉತ್ಸವಗಳಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆಗಳು ಲಭಿಸಿದ್ದು ಈ ಬಾರಿ ಪ್ರಶಸ್ತಿ ಬರಬಹುದೆಂಬ ನಿರೀಕ್ಷೆ ಖಂಡಿತಾ ಇದೆ.

15. ಕೊನೆಯದಾಗಿ ಏನು ಹೇಳಲು ಬಯಸುತ್ತೀರಿ?

ಕೊನೆಯದಾಗಿ ಹೇಳಬೇಕೆಂದರೆ, ನನ್ನ ಸಂದರ್ಶನಕ್ಕಾಗಿ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು. ಉತ್ತಮವಾಗಿ ಯೋಚಿಸೋಣ, ಸಮಾಜದ ಅತಿ ಕ್ಲಿಷ್ಟ ಪರಿಸ್ಥಿತಿಗಳನ್ನು ಮೊದಲು ಸರಿಯಾಗಿ ಅರಿಯೋಣ ನಂತರ ಸ್ಪಂದಿಸಲು ಯತ್ನಿಸೋಣ.ಥ್ಯಾಂಕ್ ಯೂ.

Related Posts

error: Content is protected !!