Deshadri Hosmane
Those who came to journalism with a fighting background. Hew has over 20 years of experience as a journalist and has worked in a variety of fields including politics, crime and agriculture. He is also a film journalist by accident and has been awarded the prestigious Aragini Award by the Karnataka Media Academy. He has worked in evening newspapers like sanjevani, karunaadu Sanje. Also work in tv Chanel. ETV, Udaya TV, Janashree, Vijaya Karnataka and Kannada newspapers.
ದೇಶಾದ್ರಿ ಹೊಸ್ಮನೆ
ಹೋರಾಟದ ಹಿನ್ನೆಲೆಯೊಂದಿಗೆ ಪತ್ರಿಕೋದ್ಯಮ ಕ್ಕೆ ಬಂದವರು. ಪತ್ರಕರ್ತನಾಗಿ 20 ವರ್ಷಗಳಿಗೂ ಹೆಚ್ವು ಕಾಲ ಅನುಭವ ಹೊಂದಿದ್ದು, ರಾಜಕೀಯ, ಅಪರಾಧ, ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ. ಹಾಗೆಯೇ ಆಕಸ್ಮಿಕ ಎಂಬಂತೆ ಸಿನಿಮಾ ಪತ್ರಕರ್ತರಾಗಿ ಬಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಟಿತ ಅರಗಿಣಿ ಪ್ರಶಸ್ತಿ ಗೆ ಪಾತ್ರವಾಗಿದ್ದಾರೆ. ಸಂಜೆ ವಾಣಿ, ಈಟಿವಿ, ಉದಯ ಟಿವಿ, ಜನಶ್ರೀ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ನ್ಯೂಸ್ ಮೀಡಿಯಾ ವಿಶೇಷ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗ ಸಿನಿ ಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ರೂವಾರಿ ಆಗಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನು ರವಿಚಂದ್ರನ್ ಅಭಿನಯದ ” ಪ್ರಾರಂಭ ” ಚಿತ್ರ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ರಿಲೀಸ್ ದಿನಾಂಕ ಇನ್ನು ಫಿಕ್ಸ್ ಆಗಿಲ್ಲ. ಆದರೆ ರಿಲೀಸ್ ಗೆ ಬರದ ಸಿದ್ಧತೆ ನಡೆಸಿರುವ ಚಿತ್ರ ತಂಡ ನಾಳೆ( ಡಿಸೆಂಬರ್ 11) ಚಿತ್ರದ ಅಧಿಕೃತ ಟ್ರೇಲರ್ ಲಾಂಚ್ ಮಾಡುತ್ತಿದೆ.
ಬುಧವಾರಬೆಳಗ್ಗೆ 12 ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ಮೂಲಕ ಟ್ರೇಲರ್ ಲಾಂಚ್ ಆಗುತ್ತಿದೆ. ʼಪ್ರಾರಂಭʼ ಹಲವು ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿದ ಸಿನಿಮಾ. ನಟ ರವಿಚಂದ್ರನ್ ಹಿರಿಯ ಪುತ್ರ ಮನು ರವಿಚಂದ್ರನ್ ಅಭಿನಯದ ಸಿನಿಮಾ ಎನ್ನುವುದರ ಜತೆಗೆ ಮನು ಕಲ್ಯಾಡಿ ನಿರ್ದೇಶನದ ಸಿನಿಮಾ ಎನ್ನುವುದು ಕೂಡ ಇದರ ಕುತೂಹಲದ ಅಂಶಗಳಲ್ಲಿ ಒಂದು.
ಈಗಾಗಲೇ ವಿಭಿನ್ನ ಕಾರಣಕ್ಕೆ ಸುದ್ದಿ ಮಾಡಿದ ಚಿತ್ರ ಇದು. ಈಗ ಟ್ರೇಲರ್ ಕೂಡ ಕುತೂಹಲ ಮೂಡಿಸಿದೆ. ಚಾಲೆಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೇಲರ್ ಗೆ ಧ್ವನಿ ನೀಡಿದ್ದು, ಇನ್ನೇನು ಲಾಂಚ್‌ಗೆ ಕಾತರ ಹೆಚ್ಚಿದೆ.
ಕುತೂಹಲ ಹುಟ್ಟಿಸುತ್ತೆ ಆರ್ ಎಚ್ 100 ಚಿತ್ರದ ಥ್ರಿಲ್ಲರ್ ಟ್ರೇಲರ್
ಹರ್ಷ್ ಮತ್ತು ಸೋಮಶೇಖರ್ ಇಬ್ಬರು ಯುವ ವಕೀಲ ಮಿತ್ರರು. ಅವರೀಗ ತಮ್ಮ ವಕೀಲಿ ವೃತ್ತಿಯ ಜತೆಗೆ ಸಿನಿಮಾ ಜಗತ್ತಿಗೂ ಎಂಟ್ರಿ ಆಗಿದ್ದಾರೆ. ಇಂಟೆರೆಸ್ಟಿಂಗ್ ಅಂದ್ರೆ ಸಿನಿಮಾನಿರ್ಮಾಣ ಅಂತ ಬಂದವರು, ನಟರಾಗಿಯೂ ಪರಿಚಯವಾಗುತ್ತಿದ್ದಾರೆ. ಹಾಗೊಂದು ರೂಪಾಂತರದ ಮೂಲಕ ಅವರನ್ನು ಕನ್ನಡ ಸಿನಿಮಾ ಜಗತ್ತಿಗೆ ಅವರನ್ನು ಪರಿಚಯಿಸುತ್ತಿರುವ ಚಿತ್ರ’ ಆರ್ ಎಚ್ 100′.
ಈ ಚಿತ್ರವೀಗ ರಿಲೀಸ್ ಗೆ ರೆಡಿಯಾಗಿದೆ. ಅಚ್ಚರಿ ಅಂದ್ರೆ ಸದ್ದಿಲ್ಲದೆ, ಸುದ್ದಿಯೂ ಮಾಡದೆ ಚಿತ್ರತಂಡವು ಡಿಸೆಂಬರ್ 18 ಕ್ಕೆ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದೆ. ಸದ್ಯಕ್ಕೀಗ ಟ್ರೇಲರ್ ಲಾಂಚ್ ಮೂಲಕ ಸೌಂಡ್ ಮಾಡಿದೆ. ಟ್ರೇಲರ್ ಸಖತ್ತಾಗಿದೆ. ಹಾರರ್, ಥ್ರಿಲ್ಲರ್ ಎಳೆಯ ಟ್ರೇಲರ್ ನೋಡುಗನನ್ನು ತುದಿಗಾಲ ಮೇಲೆ ನಿಲ್ಲಿಸುತ್ತಿದೆ. ಹಾಗಾದ್ರೆ ಸಿನಿಮಾ ಹೇಗಿರಬಹುದು? ಅದು ಡಿಸೆಂಬರ್ 18 ಕ್ಕೆ ಗೊತ್ತಾಗಲಿದೆ.
ಚಿತ್ರ ತಂಡ ಸದ್ದಿಲ್ಲದೆ ರಿಲೀಸ್ ಪ್ಲಾನ್ ಮಾಡಿಕೊಂಡರೂ ರಿಲೀಸ್ ಆನ್ನೋದು ಈಗ ಅಷ್ಟು ಸುಲಭ ಇಲ್ಲ. ಕೊರೋನಾ ಹೊಡೆತಕ್ಕೆ ಸಿಕ್ಕು ತತ್ತರಿಸಿರುವ ಚಿತ್ರರಂಗ ಇನ್ನು ಚೇತರಿಕೆ ಕಂಡಿಲ್ಲ. ಚಿತ್ರಮಂದಿರ ಒಪನ್ ಆಗಿದ್ದರೂ, ಜನರು ಚಿತ್ರಮಂದಿರಕ್ಕೆ ಅಷ್ಟಾಗಿ ಬರುತ್ತಿಲ್ಲ ಎನ್ನುವ ನೋವು ಇನ್ನು ಹೇಗೋ ಏನೋ ಎನ್ನುವ ಆತಂಕದಲ್ಲಿರಿಸಿದೆ.ಆದರೂ ಹೊಸಬರ ಚಿತ್ರ ʼR H 100ʼ ಮುಂದಿನ ವಾರವೇ ಚಿತ್ರ ಮಂದಿರಕ್ಕೆ ಬರುತ್ತಿದೆ ಅಂದ್ರೆ, ಚಿತ್ರತಂಡಕ್ಕೆ ಚಿತ್ರದ ಕಂಟೆಂಟ್ ಮೇಲಿರುವ ನಂಬಿಕೆ ಮತ್ತು ವಿಶ್ವಾಸ.
ಡಿಫೆರೆಂಟ್ ಟೈಟಲ್ ಮೂಲಕ ಬರುತ್ತಿರುವ ಈ ಚಿತ್ರವು ಕತೆ, ಚಿತ್ರಕತೆ ಹಾಗೂ ಟೆಕ್ನಿಕಲ್ ಕೆಲಸದಲ್ಲೂ ಅಷ್ಟೇ ಡಿಫೆರೆಂಟ್ ಆಗಿದೆ. ಬಹುಮುಖ್ಯವಾಗಿ ಹಾರರ್ ಹಾಗೂ ಥ್ರಿಲ್ಲರ್ ಅಂಶಗಳನ್ನೇ ಮೈನ್ ಆಗಿಟ್ಟುಕೊಂಡು ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಕೊರೋನಾ ಅಂತ ಚಿತ್ರಮಂದಿರದಿಂದ ದೂರ ಇರುವ ಪ್ರೇಕ್ಷಕರನ್ನು ಹಾರರ್ ಹಾಗೂ ಥ್ರಿಲ್ಲರ್ ಸಿನಿಮಾದ ಮೂಲಕವಾದರೂ ಚಿತ್ರಮಂದಿರಕ್ಕೆ ತರೋಣ ಎನ್ನುವ ವಿಶ್ವಾಸದೊಂದಿಗೆ ಚಿತ್ರ ತಂಡ ಈ ಚಿತ್ರವನ್ನು ಡಿಸೆಂಬರ್ ೧೮ ಕ್ಕೆ ತರಲು ಮುಂದಾಗಿದೆಯಂತೆ. ಹಾಗಂತ ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟ ಹರ್ಷ್ ಅವರು ಮಾತು.
ರಿಲೀಸ್‌ಗೆ ರೆಡಿಯಾಗಿರುವ ಚಿತ್ರ ತಂಡವು ಸೋಮವಾರ ಚಿತ್ರದ ಟ್ರೇಲರ್ ಲಾಂಚ್ ಮೂಲಕ ಚಿತ್ರದ ವಿಶೇಷತೆ ಕುರಿತು ಮಾಧ್ಯಮದ ಮುಂದೆ ಮಾತನಾಡಿತು. ಅದು ಚಿತ್ರತಂಡದ ಮೊದಲ ಸುದ್ದಿ ಗೋಷ್ಟಿಯೂ ಹೌದು. ಟ್ರೇಲರ್ ಲಾಂಚ್ ಆಕ್ಟ್ ೧೯೭೮ ಚಿತ್ರದ ಖ್ಯಾತಿಯ ನಿರ್ಮಾಪಕ ದೇವರಾಜ್ , ಸಮಾಜ ಸೇವಕ ಕೃಷ್ಣ ಮೂರ್ತಿ, ಮತ್ತೊರ್ವ ನಿರ್ಮಾಪಕ ಶ್ರೀಧರ್,ಯುವ ನಟ ಲೋಕೇಶ್ ಗೌಡ ಅತಿಥಿಗಳಾಗಿ ಬಂದಿದ್ದರು. ಹೊಸಬರು ಒಂದೊಳ್ಳೆಯ ಸಿನಿಮಾ ಮಾಡಿರುವ ವಿಶ್ವಾಸದಲ್ಲಿ ಅತಿಥಿಗಳು ಮೆಚ್ಚುಗೆಯ ಮಾತುಗಳನ್ನಾಡಿ, ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರ ತಂಡ ಕೂಡ ಚಿತ್ರದ ವಿಶೇಷತೆ ಹೇಳಿಕೊಂಡಿತು.
ವಕೀಲಿ ವೃತ್ತಿಯ ನಡುವೆಯೇ ನಾವು ಆಕಸ್ಮಿಕವಾಗಿ ಇಲ್ಲಿಗೆ ಬಂದಿದ್ದೇವೆ. ಆದಕ್ಕೆ ಸಿನಿಮಾದ ಮೇಲಿದ್ದ ಆಸಕ್ತಿ. ಮೊದಲು ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡೋಣ ಆನ್ನೋದಷ್ಟೆ ಇತ್ತು. ಆ ನಂತರ ನಿರ್ದೇಶಕ ಮಹೇಶ್ ಆಭಿಪ್ರಾಯಕ್ಕೆ ಬೇಡ ಎನ್ನದೇ ಇಬ್ಬರು ಪಾತ್ರಗಳಿಗೆ ಬಣ್ಣ ಹಚ್ಚಬೇಕಾಗಿ ಬಂತು ಎನ್ನುವ ಮೂಲಕ ನಿರ್ಮಾಣದ ಜತೆಗೆ ನಟನೆಗೆ ತೊಡಗಿಸಿಕೊಂಡಿದ್ದನ್ನು ಹರ್ಷ್ ಹೇಳಿಕೊಂಡರು. ಸೋಮಶೇಖರ್ ಕೂಡ ಇದೇ ಮಾತುಗಳನ್ನು ಹೇಳಿದರು. ನಾಯಕಿ ಚಿತ್ರಾ ಗ್ಲಾಮಸರ್ ಲುಕ್ ನಲ್ಲಿ ಮಿಂಚುತ್ತಿದ್ದರು. ಕನ್ನಡದವರೇ ಆದ ಚಿತ್ರಾಗೆ ಇದು ಎರಡನೇ ಚಿತ್ರ. ದರ್ಪಣ ನಂತರ ‘R H 100’ ಮೂಲಕ ಬೆಳ್ಳಿ ಪರದೆ ಮೇಲೆ ಕಾಣಸಿಕೊಳ್ಳುತ್ತಿದ್ದಾರಂತೆ. ನಿರ್ದೇಶಕ ಮಹೇಶ್. ಸಿನಿಮಾದ ಕತೆ, ಚಿತ್ರಕತೆ ಹಾಗೂ ತಾಂತ್ರಿಕ ವಿಶೇಷತೆ ಬಿಚ್ಚಿಟ್ಟರು.
ಸಿನಿಮಾ ಶುರುವಾಗಿ ವರ್ಷವೇ ಉರುಳಿ ಹೋಗಿದೆ. ಲಾಕ್ ಡೌನ್ ಕಾರಣಕ್ಕೆ ಚಿತ್ರ ಕೊಂಚ ತಡವಾಗಿ ತೆರೆಗೆ ಬರುತ್ತಿದೆ, ಸದ್ಯದ ಪರಿಸ್ಥಿತಿ ನೋಡಿದರೆ ಇದೇನು ತಡವಾಗಿ ಅಲ್ಲ. ಹಾಗೆ ನೋಡಿದರೆ ಸ್ಟಾರ್ ಸಿನಿಮಾಗಳೇ ರಿಲೀಸ್ ಆಗಲು ಹಿಂದು ಮುಂದು ನೋಡುತ್ತಿರುವಾಗ ಈ ಚಿತ್ರ ಈಗಲೇ ರಿಲೀಸ್ ಆಗುತ್ತಿರುವುದು ಸಾಹಸ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ಚಿತ್ರ ತಂಡ ಥ್ರಿಲ್ ಹುಟ್ಟಿಸುವ ಟ್ರೇಲರ್ ಮೂಲಕ ಕುತೂಹಲ ಹುಟ್ಟಿಸಿದೆ. ಜೀವನಲ್ಲಿ ಭಯ ಇರಬೇಕು, ಆದ್ರೆ ಭಯವೇ ಜೀವನವಲ್ಲ ಎನ್ನುವ ಸಂಭಾಷಣೆಯೇ ಹೇಳುತ್ತೆ ಇದೊಂದು ಪಕ್ಕಾ ಹಾರರ್ ಸಿನಿಮಾ ಅಂತ. ಅದು ಹೇಗೆ ಅಂತ ಸಿನಿಮಾ ನೋಡಿದಾಗಲೇ ಗೊತ್ತಾಗಲಿದೆ.
ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ನಾಳೆ(ಡಿ.೧೦) ಶಂಕುಸ್ಥಾಪನೆ
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಬಹುದಿನದ ಕನಸು ನನಸಾಗುತ್ತಿದೆ. ಸಂಘವು ತನ್ನದೇ ಸುಸಜ್ಜಿತವಾದ ಕಟ್ಟಡ ಹೊಂದಬೇಕೆನ್ನುವ ಬಹುದಿನದ ಆಸೆ ಕೊನೆಗೂ ಈಡೇರುತ್ತಿದೆ. ಬೆಂಗಳೂರಿನ ಶೇಷಾದ್ರಿಪುರಂನ ಶಿವಾನಂದ ಸರ್ಕಲ್ ಬಳಿ ಇರುವ ಸಂಘದ ಅಧಿಕೃತ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಾಳೆ( ಡಿಸೆಂಬರ್ ೧೦) ಬೆಳಗ್ಗೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ. ಚಿತ್ರೋದ್ಯಮಕ್ಕೆ ಸದಾ ಸಹಕಾರ ನೀಡುತ್ತಾ ಬಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಸಲಿದ್ದು, ಇದಕ್ಕೆ ಚಿತ್ರೋದ್ಯಮದ ಗಣ್ಯಾತೀಗಣ್ಯರು ಸಾಕ್ಷಿಯಾಗಲಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದನ್ನು ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಖಚಿತಪಡಿಸಿದ್ದು, ಕೊನೆಗೂ ಸಂಘದ ಬಹುದಿನದ ಕನಸು ನನಸಾಗುತ್ತಿರುವುದು ಸಂತಸ ಮೂಡಿಸಿದೆ ಎನ್ನುತ್ತಾರೆ.ಸಂಘವೇ ಖರೀದಿಸಿಟ್ಟುಕೊಂಡಿದ್ದ ವಿಶಾಲವಾದ ಜಾಗದಲ್ಲಿ ವಿಶೇಷ ವಿನ್ಯಾಸದ ಸುಸಜ್ಜಿತ ಕಟ್ಟಡ ನಿರ್ಮಾಣದ ಕನಸು ಹೊತ್ತಿರುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು, ಅಲ್ಲಿ ಏನೆಲ್ಲ ಇರಬೇಕು ಎನ್ನುವುದರ ನೀಲಿ ನಕ್ಷೆಯನ್ನು ಸಿದ್ದ ಪಡಿಸಿಕೊಂಡಿದೆ. ಮಿನಿ ಚಿತ್ರಮಂದಿರ, ಕನ್ನಡ ಚಿತ್ರರಂಗ ನಡೆದು ಬಂದ ಹಾದಿಗೆ ಸಂಬಂಧಿಸಿದ ಪುಸ್ತಕ ಹಾಗೂ ಡಿವಿಡಿಗಳ ಸಂಗ್ರಹಾಲಯದ ಜತೆಗೆ ಸಿನಿಮಾ ನಿರ್ಮಾಣಕ್ಕೆ ಪೂರಕವಾಗುವ ಇತರೆ ಸೌಲಭ್ಯಗಳು ಅಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದೆಯಂತೆ. ಇನ್ನು ಕನ್ನಡ ಚಿತ್ರರಂಗದ ಇತರೆ ಸಂಘ ಸಂಸ್ಥೆಗಳಿಗೆ ಇರುವಷ್ಟೇ ಇತಿಹಾಸ ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘಕ್ಕೂ ಇದೆ.
ಇದು ನನ್ನ ಸೌಭಾಗ್ಯ. ನಾನು ಅಧ್ಯಕ್ಷನಾದ ಸಂದರ್ಭದಲ್ಲಿ ಸಂಘದ ಸ್ವಂತ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರುತ್ತಿದೆ, ಹಾಗೆಯೇ ಕಟ್ಟಡ ನಿರ್ಮಾಣ ಆಗುತ್ತಿದೆ ಎನ್ನುವುದು ಖುಷಿ ತಂದಿದೆ. ಹಾಗಂತ ನಾನೊಬ್ಬನೇ ಇದಕ್ಕೆ ಕಾರಣ ಆಲ್ಲ. ಆರಂಭದಿಂಲೂ ಇದಕ್ಕೆ ಹಲವು ಗಣ್ಯರು ಶ್ರಮಿಸಿದ್ದಾರೆ. ನಿರ್ಮಾಪಕ ಮುನಿರತ್ನ ಆವರು ನಿವೇಶನಕ್ಕಾಗಿ ಶ್ರಮಿಸಿದ್ದಾರೆ. ಅವರ ಪಟ್ಟ ಪರಿಶ್ರಮದ ಫಲದಿಂದಾಗಿ ಇವತ್ತು ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಆಗುತ್ತಿದೆ. ಈ ಹೊತ್ತಲ್ಲಿ ಸಂಘಕ್ಕೆ ನಾನು ಅಧ್ಯಕ್ಷ ಅನ್ನೋದು ನನ್ನ ಹೆಮ್ಮೆ. – ಪ್ರವೀಣ್ ಕುಮಾರ್, ಸಂಘದ ಅಧ್ಯಕ್ಷ
ಚಿತ್ರರಂಗದಲ್ಲಿನ ನಿರ್ಮಾಪಕರ ಹಿತ ಕಾಪಾಡುವ ಸಲುವಾಗಿ ೧೯೮೨ ರಲ್ಲಿ ಈ ಸಂಘವು ಆಸ್ತಿತ್ವಕ್ಕೆ ಬಂತು. ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ನೇತೃತ್ವದಲ್ಲಿ ಅಂದು ಅಸ್ತಿತ್ವಕ್ಕೆ ಬಂದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಎಚ್.ಎಂ.ಕೆ. ಮೂರ್ತಿ ಮೊದಲ ಅಧ್ಯಕ್ಷರಾದರು. ಆನಂತರ ಬಿ.ಎಂ. ವೆಂಕಟೇಶ್, ಶಾಸ್ತ್ರಿ, ಬಸಂತ್ ಕುಮಾರ್ ಪಾಟೀಲ್, ಸಂದೇಶ್ ನಾಗರಾಜ್ ಅಧ್ಯಕ್ಷರಾದರು. ಆನಂತರ ಸಂಘಕ್ಕೆ ಹಾಲಿ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಅವರು ಆಧ್ಯಕ್ಷರಾದಾಗ ಸಂಘಕ್ಕೆ ಒಂದು ಸ್ವಂತ ಕಟ್ಟಡ ಬೇಕು, ಅದಕ್ಕೆ ಮೊದಲು ನಿವೇಶನ ಬೇಕು ಎನ್ನುವ ಚರ್ಚೆ ನಡೆಯಿತು. ಸಂಘದ ಇತರೆ ಪದಾಧಿಕಾರಿಗಳ ಸಹಕಾರದೊಂದಿಗೆ ಮುನಿರತ್ನ ಅವರೇ ಹೆಚ್ಚು ಆಸಕ್ತಿ ವಹಿಸಿ, ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯೇ ಒಂದು ನಿವೇಶನ ಒದಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲಿಂದೀಗ ನಿರ್ಮಾಪಕ ಪ್ರವೀಣ್ ಕುಮಾರ್ ಅಧ್ಯಕ್ಷರಾಗಿದ್ದು, ಆವರ ಸೌಭಾಗ್ಯವೇ ಎನ್ನುವಂತೆ ಅವರ ಅವದಿಯಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಗುತ್ತಿದೆ. ಇದಕ್ಕೆ ನಿರ್ಮಾಪಕ ಪ್ರವೀಣ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಸಂಘದ ಪದಾಧಿಕಾರಿಗಳ ಸಹಕಾರವೇ ಕಾರಣ ಎನ್ನುವುದು ಅವರ ಮಾತು.
ವಕೀಲರ ನೋಟಿಸ್ ಮೀರಿ ಬರ್ತಾರಾ ಸಿಎಂ?
ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಶುಭ ಸಂದರ್ಭದಲ್ಲಿದ್ದಾರೆ. ಸಂಘಕ್ಕೆ ಸ್ವಂತ ಕಟ್ಟಡ ಬೇಕಿತ್ತು, ಅದೀಗ ಈಡೇರುತ್ತಿದೆ ಎನ್ನುವುದು ಅದಕ್ಕೆ ಕಾರಣ. ಆದು ಸಹಜವೂ ಹೌದು. ಒಂದು ಕಟ್ಟಡ ಬೇಕು ಅಂತ ಸಂಘದ ಪದಾಧಿಕಾರಿಗಳ ಆರಂಭದಿಂದಲೂ ಕಷ್ಟಪಟ್ಟಿದ್ದಾರೆ, ಆದರೆ ಅದಕ್ಕೆ ವಿಘ್ನ ಎನ್ನುವ ಹಾಗೆ ಸಂಘದ ಕಟ್ಟಡ ನಿರ್ಮಾಣ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಭಾಗವಹಿಸುತ್ತಿರುವುದಕ್ಕೆ ವಕೀಲರ ಆಕ್ಷೇಪಣೆ ಇದೆ. ಸಂಘದ ಮೇಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳ ಮೂಲಕ ಹೈಕೋರ್ಟ್ ವಕೀಲರಾದ ಅಮೃತೇಶ್ ಅವರು ಮುಖ್ಯ ಮಂತ್ರಿ ಅವರಿಗೆ ಅಕ್ಷೇಪಣೆ ಪತ್ರ ಕಳುಹಿಸಿದ್ದಾರೆ. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಹಾಗೂ ಲೆಕ್ಕಪತ್ರ ವ್ಯವಹಾರಗಳಲ್ಲಿ ಲೋಪದೋಷಗಳಿವೆ. ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳ ಮುಂದೆ ಅವೀಗ ವಿಚಾರಣೆ ಹಂತದಲ್ಲಿವೆ.
ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಹೇಳಿದ ಕುಮಾರ್ ಗೋವಿಂದ್
ನಟ ಕುಮಾರ್ ಗೋವಿಂದ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ” ಅನುರಾಗ ಸಂಗಮ” ಚಿತ್ರ. ಕುಮಾರ್ ಗೋವಿಂದ್, ರಮೇಶ್, ಸುಧಾರಾಣಿ ಹಾಗೂ ಬಿ. ಸರೋಜಾ ದೇವಿ ಅಭಿನಯದ ” ಅನುರಾಗ ಸಂಗಮ” ಚಿತ್ರ ತೆರೆ ಕಂಡು ಸೋಮವಾರಕ್ಕೆ 25 ವಸಂತ ತುಂಬಿತು. ಇದೇಕಾರಣಕ್ಕೆ ನಟ ಕುಮಾರ್ ಗೋವಿಂದ್ ಸಂತಸ ವ್ಯಕ್ತಪಡಿಸಿದ್ದು, ಆಗ ಚಿತ್ರದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ವಿ. ಉಮಾಕಾಂತ್ ನಿರ್ದೇಶನದಲ್ಲಿ ಮೂಡಿಬಂದಿದ್ದ ” ಅನುರಾಗ ಸಂಗಮ ” ಚಿತ್ರವು 1995ಡಿಸೆಂಬರ್ 8 ರಂದು ತೆರೆ ಕಂಡಿತ್ತು.
ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಚಿತ್ರವು ೨೫ ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ವಿ. ಮನೋಹರ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಎಸ್ ಪಿಬಿ ಹಾಗೂ ರಮೇಶ್ ಚಂದ್ರ ಹಾಡಿದ್ದ ಹಾಡುಗಳು ಈಗಲೂ ಬಲು ಜನಪ್ರಿಯ. ಅಷ್ಟೇ ಅಲ್ಲ, ಗಾಯಕ ರಮೇಶ್ ಚಂದ್ರ ಅವರಿಗೆ ಈ ಚಿತ್ರದ ಗೀತೆಯ ಮೂಲಕ ರಾಜ್ಯ ಪ್ರಶಸ್ತಿಯೂ ಬಂತು. ಭಾರತದ ಇತರ ಭಾಷೆಗಳಿಗೂ ಈ ಚಿತ್ರದ ರಿಮೇಕ್ ಹಕ್ಕು ಮಾರಾಟವಾಗಿ ಅಲ್ಲೂ ಯಶಸ್ವಿಯಾಗಿದೆ. ಎಸ್.ಕೆ ಫಿಲಂಸ್ ಮೂಲಕ ಡಿ. ಗೋವಿಂದಪ್ಪ ಈ ಚಿತ್ರ ನಿರ್ಮಾಣ ಮಾಡಿದ್ದರು. ನಟ ಕುಮಾರ್ ಗೋವಿಂದ್ ಆವರಿಗೂ ಈ ಚಿತ್ರ ಭರ್ಜರಿ ವರ್ಚಸ್ಸು ತಂದುಕೊಟ್ಟಿದ್ದು ಗಮನಾರ್ಹ.ಈ ಹಿನ್ನೆಲೆಯಲ್ಲಿ ಅವರು ಅಂದು ʼ ಅನುರಾಗ ಸಂಗಮʼ ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ನಟ ಕುಮಾರ್ ಗೋವಿಂದ್.
ಚಿತ್ರ ತಂಡದ ಭವಿಷ್ಯಕ್ಕೆ ಸಿನಿಮಾ ನಿರ್ಮಾಣ ಮಾಡಿದೆ ಅಂದ ನಾನೊಂಥರ ನಿರ್ಮಾಪಕಿ
ಹಣ ಮಾಡ್ಬೇಕು ಅನ್ನೋದಲ್ಲ, ನನ್ನಿಂದ ಒಂದಷ್ಟು ಜನರಿಗೆ ಉಪಯೋಗ ಆಗುತ್ತೆ ಅನ್ನೋದೇ ‘ ನಾನೊಂಥರ’ ಹೆಸರಿನ ಚಿತ್ರ ನಿರ್ಮಾಣ ಮಾಡಿದ್ದಕ್ಕೆ ಇರೋ ಮುಖ್ಯ ಕಾರಣ…
ವೃತ್ತಿಯಲ್ಲಿ ನೀವು ವೈದ್ಯರು. ಅಲ್ಲಿಯೇ ಸಾಕಷ್ಟು ಕೆಲಸ, ಕೈ ತುಂಬಾ ಸಂಪಾದನೆಯಿದೆ. ಅಷ್ಟಾಗಿಯೂ ಈ ಸಿನಿ ದುನಿಯಾಕ್ಕೆ ನಿರ್ಮಾಪಕರಾಗಿ ಯಾಕೆ ಬಂದ್ರಿ ಎನ್ನುವ ಪ್ರಶ್ನೆಗೆ ಡಾ.ಜಾಕ್ಲಿನ್ ಫ್ರಾನ್ಸಿಸ್ ಕೊಟ್ಟ ಉತ್ತರ ಹೀಗಿತ್ತು.
ಅಂದ ಹಾಗೆ, ‘ನಾನೊಂಥರ’ ಅನ್ನೋದು ಹೊಸಬರ ಚಿತ್ರ. ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಸೇರಿದಂತೆ ಎಲ್ಲರೂ ಹೊಸಬರು. ಸಿನಿಮಾ ಮೇಲಿನ ಆಸಕ್ತಿಯಿಂದ ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರ. ಡಿಸೆಂಬರ್ 18 ಕ್ಕೆ ತೆರೆಗೆ ಬರುತ್ತಿದೆ.
ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಚಿತ್ರವು ಕಳೆದ ಮಾರ್ಚ್ ತಿಂಗಳಲ್ಲೆ ತೆರೆಗೆ ಬರಬೇಕಿತ್ತು. ಇನ್ನೇನು ಚಿತ್ರ ತಂಡವು ತಾವು ರಿಲೀಸ್ ಗೆ ರೆಡಿ ಎಂದು ಅನೌನ್ಸ್ ಮಾಡುವ ಹೊತ್ತಿಗೆ ಕೊರೋನಾ ಬಂತು. ಚಿತ್ರರಂಗ ಬಂದ್ ಆಯ್ತು. ಪರಿಣಾಮ ಈಗ ‘ನಾನೊಂಥರ ‘ ಚಿತ್ರಕ್ಕೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಕೊರೋನಾ ಭೀತಿಯ ನಡುವೆಯೇ ‘ ಆಕ್ಟ್ 1978’ ಚಿತ್ರ ಬಿಡುಗಡೆ ಆಗಿ ದೊಡ್ಡ ಸಕ್ಸಸ್ ಕಂಡ ಬೆನ್ನಲೇ ‘ ‘ನಾನೊಂಥರ ‘ ಚಿತ್ರವು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕಿ ಡಾ.ಜಾಕ್ಲಿನ್ ಫ್ರಾನ್ಸಿಸ್ ಚಿತ್ರದ ವಿಶೇಷತೆ ಜತೆಗೆ ತಮ್ಮ ಹಿನ್ನೆಲೆ ಕುರಿತು’ ಸಿನಿಲಹರಿ ‘ಜತೆಗೆ ಮಾತನಾಡಿದರು.
ಬಾಲ್ಯದಿಂದಲೂ ಇತ್ತು ಸಿನಿಮಾ ನಂಟು…
ನಾನೀಗ ವೃತ್ತಿಯಲ್ಲಿ ವೈದ್ಯೆ. ಆದರೆ ಸಿನಿಮಾ ಅನ್ನೊದು ನನಗೆ ಬಾಲ್ಯದಿಂದಲೂ ಇರುವ ನಂಟು. 8 ನೇ ತರಗತಿಯಲ್ಲಿ ದ್ದಾಗಲೇ ನಾನು ರಾಜ್ ಕುಮಾರ್ ಅಭಿನಯದ’ ಧ್ರುವತಾರೆ ‘ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದೆ. ಅದು ಅಮ್ಮನ ಕಾರಣಕ್ಕೆ. ಯಾಕಂದ್ರೆ, ನನ್ನಮ್ಮನಿಗೆ ನಾನು ನಟಿಯಾಗಬೇಕೆನ್ನುವ ಹುಚ್ಚು. ಅದಕ್ಕೆಕಾರಣ ಬಟ್ಟೆ ಮೇಲೆ ನನಗಿದ್ದ ಮೋಹ. ತುಂಬಾ ಬಟ್ಟೆ ತೊಡುತ್ತಿದೆ. ಚಂದದ ಬಟ್ಟೆ ಕಂಡ್ರೆ ಅವುಗಳನ್ನು ಕೊಂಡು ತಂದುತೊಡುವುದು, ಶಾಲೆಗಳಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನೋಡಿ, ನೀನು ನಟಿ ಆಗ್ಬೇಕು ಎನ್ನುತ್ತಿದ್ದರು. ಆಗಲೇ ಧ್ರುವತಾರೆ ಸಿನಿಮಾಕ್ಕೆ ಬಾಲನಟಿಯಾಗಲು ಆಡಿಷನ್ಸ್ ಗೆ ಹೋದೆ. ಅದೃಷ್ಟವಶಾತ್ ಅಲ್ಲಿ ಆಯ್ಕೆಯಾದೆ . ರಾಜಕುಮಾರ್ ಸೇರಿದಂತೆದೊಡ್ಡ ಕಲಾವಿದರ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿತು.ಅ ಹೊತ್ತಿಗೆ ನನ್ನ ಅಮ್ಮನ ಆಸೆ ಕೂಡ ಈಡೇರಿತು.ಮುಂದೆ ಓದು ನನ್ನ ಟಾರ್ಗೆಟ್ ಆಯಿತು. ಅಂದುಕೊಂಡಂತೆ ಮೆಡಿಕಲ್ ಓದಿ ಡಾಕ್ಟರ್ ಆದೆ.
ಕತೆಗಿಂತ ಅವರ ಭವಿಷ್ಯ ಮುಖ್ಯ ಎನಿಸಿತು…
‘ನಾನೊಂಥರ ‘ ಒಂದೊಳ್ಳೆಯ ಕಥಾ ಹಂದರದ ಚಿತ್ರ.ಒಂದಿನ ನಿರ್ದೇಶಕ ರಮೇಶ್ ಹಾಗೂ ನಾಯಕ ನಟ ತಾರಕ್ ಮಿಟ್ ಮಾಡಿ ಕತೆ ಹೇಳಿದ್ರು. ಕತೆ ಹಾರ್ಟ್ ಗೆ ಟಚ್ ಆಗುವ ಹಾಗಿತ್ತು. ನಿರ್ಮಾಣಕ್ಕೆ ಬಂಡವಾಳ ಹಾಕಿದರೆ ನಷ್ಟ ಇಲ್ಲ ಅಂತೆನಿಸಿತು. ಪ್ರೇಕ್ಷಕರಿಗೂ ಒಂದೊಳ್ಳೆಯ ಸಿನಿಮಾಕೊಟ್ಟ ತೃಪ್ತಿ ಸಿಗಬಹುದು ಅಂತೆನಿಸಿತು.ಅದಕ್ಕಿಂತ ಮುಖ್ಯವಾಗಿ ನನಗೆ ಏನೇನೋ ಕನಸು ಹೊತ್ತು ಬಂದ ನಿರ್ದೇಶಕ ರಮೇಶ್ ಹಾಗೂ ನಾಯಕನಟ ತಾರಕ್ ಅವರ ಭವಿಷ್ಯವೂ ಮುಖ್ಯ ಎನಿಸಿತು. ಅವರ ಕನಸಿಗೆ ಬೆಂಬಲವಾಗಿ ನಿಂತರೆ ಮುಂದೆ ಅವರು ಉನ್ನತ ಹಂತಕ್ಕೆ ಹೋಗಬಹುದು ಅಂತೆನಿಸಿತು. ಹಾಗಾಗಿ ಹಿಂದು ಮುಂದುನೋಡದೆ ಈಸಿನಿಮಾಕ್ಕೆ ಬಂಡವಾಳ ಹಾಕುತ್ತೇನೆ ಅಂತ ಮಾತುಕೊಟ್ಟೆ.ಅಲ್ಲಿಂದ ವೈದ್ಯಕೀಯ ಕ್ಷೇತ್ರದಲ್ಲಿದ್ದ ನಾನು ಸಿನಿಮಾ ನಿರ್ಮಾಪಕಿ ಎನ್ನುವ ಜವಾಬ್ದಾರಿ ಹೊತ್ತಿಕೊಂಡೆ.
ಎಲ್ಲರಿಗೂ ಇಷ್ಟವಾಗುವ ಸಿನಿಮಾ…
‘ನಾನೊಂಥರ’ ಎಲ್ಲರಿಗೂ ಇಷ್ಟವಾಗುವ ಸಿನಿಮಾ. ನಮ್ಮಸಿನಿಮಾ ಎನ್ನುವ ಪ್ರೀತಿ, ಕಾಳಜಿ ಅಥವಾ ವ್ಯಾಮೋಹಕ್ಕೆ ನಾನೀ ಮಾತು ಹೇಳುತ್ತಿಲ್ಲ, ಇದರ ಕತೆಯೇ ಹಾಗಿದೆ. ಒಬ್ಬ ಕುಡುಕ ಗಂಡ, ಜವಾಬ್ದಾರಿಯುತ ಹೆಂಡತಿ ಸುತ್ತಲ ಕತೆ ಪ್ರತಿಯೊಬ್ಬ ರ ಫ್ಯಾಮಿಲಿಗೂ ಕನೆಕ್ಟ್‌ಆಗುತ್ತೆ.ಅಲ್ಲಿ ಅದಷ್ಟೇ ಇಲ್ಲ. ಮಗನಿಗಾಗಿ ಪರಿತಪಿಸುವ ತಂದೆ, ಕಟ್ಟಿಕೊಂಡವನನ್ನು ಸರಿ ದಾರಿಗೆ ತರಲು ಪರದಾಡುವ ಹುಡುಗಿ, ಅಣ್ಣನಿಗಾಗಿ ಎಲ್ಲವನ್ನು ತ್ಯಾಗ ಮಾಡಿ ನಿಲ್ಲುವ ಸಹೋದರ.. ಹೀಗೆ ಪ್ರತಿ ಪಾತ್ರಗಳು ಅಲ್ಲಿ ಹೈಲೈಟ್ಸ್. ಇಂತಹದೊಂದು ಸಿನಿಮಾ ಮಾಡಿ, ಚಿತ್ರ ಮಂದಿರಕ್ಕೆ ತರುತ್ತಿರುವ ನಮಗೆ ಇಲ್ಲಿ ಎಲ್ಲವೂ ಹೊಸದು.ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ? ಚಿತ್ರ ತಂಡದ ಮುಂದಿನ ಭವಿಷ್ಯವೇನು? ಒಂಥರ ಆತಂಕ, ಇನ್ನೊಂದೆಡೆ ಚಿತ್ರ ಚೆನ್ನಾಗಿದೆ ಎನ್ನುವ ನಂಬಿಕೆ.
ಮಗ ಜೈಸನ್ ಮುಂದೆ ಹೀರೋ...
ಅದು ರಕ್ತಗತ ನಂಟೋ ಏನೋ ಗೊತ್ತಿಲ್ಲ. ನಾನು ಬಾಲ್ಯದಲ್ಲಿದ್ದಾಗ ನಾನುನಟಿ ಆಗ್ಬೇಕು ಅನ್ನೊದುನನ್ನಮ್ಮನಆಸೆ ಆಗಿತ್ತು. ಅದೇ ಕಾರಣಕ್ಕೆ ನಾನು ಆಡಿಷನ್ಸ್ ಗೆ ಹೋಗಿ ಬಾಲ ನಟಿಆಗಿ ಅಭಿನಯಿಸಿದೆ.ಈಗ ನನ್ನಮಗ ಕೂಡ ನಟನಾಗಿ ನಿಮ್ಮಮುಂದೆ ಬರುತ್ತಿದ್ದಾನೆ. ಹಾಗಂತ ಆತ ನಟ ಆಗ್ಬೇಕು ಅನ್ನೋದು ನನ್ನಾಸೆ ಅಲ್ಲ. ಒತ್ತಡವೂ ಇಲ್ಲ. ಅದು ಆತನ ಆಸೆ. ಒಬ್ಬ ತಾಯಿಯಾಗಿ ನಾನೀಗ ಆತನ ಆಸೆ ಈಡೇರಿಸುತ್ತಿದ್ದೇನೆ. ಈ ಚಿತ್ರದಲ್ಲಿಆತ ನಾಯಕನ ಸಹೋದರ. ಆತನವಯಸ್ಸಿಗೆ ಅದೊಂದುಒಳ್ಳೆಯ ಪಾತ್ರ.ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ. ಎಲ್ಲರಿಗೂ ಇಷ್ಟವಾಗಿದೆ.ಒಳ್ಳೆಯ ಕಲಾವಿದ ಆಗ್ತಾನೆ ಅಂತ ಚಿತ್ರತಂಡ ಬೆನ್ನು ತಟ್ಟಿದೆ. ಮುಂದೆ ಆತನನ್ನು ಹೀರೋಆಗಿಪರಿಚಯಿಸಬೇಕೆನ್ನುವ ಹಂಬಲ ನಮಗೂ ಇದೆ. ಎಲ್ಲದಕ್ಕೂ ಪ್ರೇಕ್ಷಕರ ಅಶೀರ್ವಾದ ಬೇಕು.
ಬಹು ದಿನಗಳ ನಂತರ ನಾನೂ ಬಣ್ಣ ಹಚ್ಚಿದೆ…
ನಾನೊಂಥರ ಸಿನಿಮಾ ನನ್ನ ಮಟ್ಟಿಗೆ ಅತೀಮುಖ್ಯ. ಯಾಕಂದ್ರೆ ಬಹು ದಿನಗಳನಂತರ ನಾನಗೂ ಸಿನಿಮಾ ಜಗತ್ತಿಗೂ ಇದ್ದ ನಂಟು ನೆನಪಿಸಿತು.ಹಾಗೆಯೇ ಪುತ್ರ ಕೂಡ ನಟನಾಗಿ ಪರಿಚಯವಾಗುತ್ತಿದ್ದಾನೆ.ಅದರ ಜತೆಗೆಯೇ ಹಲವು ವರ್ಷಗಳ ನಂತರ ನಾನೂ ಕೂಡ ಇಲ್ಲಿ ಬಣ್ಣ ಹೆಚ್ಚಿದೆ. ಅದೊಂದು ಚಿಕ್ಕ ಪಾತ್ರ. ಚರ್ಚ್ ನ ಮದರ್ ಆಗಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ನನಗೆ ಖುಷಿ ನೀಡುವ ಹಾಗೆ ಅಭಿನಯಿಸಿದ್ದೇನೆ ಎನ್ನುವ ನಂಬಿಕೆ ಇದೆ. ಉಳಿದಿದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.
ಪ್ರೇಕ್ಷಕರ ಆಶೀರ್ವಾದ ವೇ ನಮಗೆ ಮುಖ್ಯ…
ಹಣ ಮಾಡ್ಬೇಕು ಅಂತ ನಾನು ಈ ಸಿನಿಮಾಮಾಡಿಲ್ಲ. ತಂಡ ಭವಿಷ್ಯ ಚೆನ್ನಾಗಿರಲಿ ಅಂತ ಹಣ ಹಾಕಿದ್ದೇನೆ.ಇದು ಕೈ ಗೂಡಬೇಕಾದರೆ ಜನರ ಆಶೀರ್ವಾದ ಬೇಕು.ಹಾಗಂತ ಸಿನಿಮಾಕೆಟ್ಟದ್ದಾಗಿದ್ದರೂ ಬಂದು ಸಿನಿಮಾ ನೋಡಿ ಅಂತ ಹೇಳಲಾರೆ.ಸಿನಿಮಾ ಚೆನ್ನಾಗಿದೆ.ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ವಿಶ್ವಾಸವೇ ಅದಕ್ಕೆ ಕಾರಣ.
‘ಅಕ್ಕಿ ರೊಟ್ಟಿಗೂ ಕೂರ್ಗ್ ನವರಿಗೂ ಬಿಡಿಸಲಾಗದ ನಂಟಿದೆ. ಅದರಲ್ಲೂ ಜಿನಿ ಜನಿ ಮಳೆಗಾಲದ ನಡುವೆ ಅಕ್ಕಿರೊಟ್ಟಿ- ಕೋಳಿ ಕರಿ ತಿಂತಿದ್ರೆ, ಎಂತಹ ಆನಂದ ಗೊತ್ತಾ? ಹೀಗಂತ ಒಂದ್ಸಲ ಬಾಯಿ ಚಪ್ಪರಿಸಿದ್ದು ಬೇರಾರು ಅಲ್ಲ ಸೌತ್ ಸೆನ್ಸೆಷನಲ್ ನಟಿ , ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ.
ಹಾಗಂತ ಅವರು ಹೇಳಿಕೊಂಡಿದ್ದು ಯೂವರ್ಸ್ ಲೈಫ್ ಆನ್ ಲೈನ್ ಪ್ಲಾಟ್ ಫಾರ್ಮ್ ನಲ್ಲಿ. ಅಂದ ಹಾಗೆ ಇದು ಮೆಗಾ ಸ್ಟಾರ್ ಚಿರಂಜೀವಿ ಅವರ ಸೊಸೆ, ರಾಮ್ ಚರಣ್ ತೇಜ್ ಪತ್ನಿ ಉಪಾಸನಾ ಅವರು ಶುರುಮಾಡಿರೋ ಆನ್ ಲೈನ್ ಪ್ಲಾಟ್ ಫಾರ್ಮ್.
ಆರೋಗ್ಯ, ಲೈಫ್ಸ್ಟೈಲ್, ಮಾನಸಿಕ ಮತ್ತು ದೈಹಿಕ ಆರೋಗ್ಯ, ಪ್ರಸ್ತುತ ಟ್ರೆಂಡಿಂಗ್ ವಿಚಾರಗಳನ್ನು ಅವರು, URLife.co.in ಹೆಸರಿನ ವಿನೂತನ ವೆಬ್ಸೈಟ್ ಮೂಲಕ ಹೇಳ ಹೊರಟಿದ್ದಾರೆ. ಈ ವೆಬ್ ಸೈಟ್ ಗೆ ಉಪಾಸನಾ ಅವರು ಮ್ಯಾನೇಜಿಂಗ್ ಡೈರೆಕ್ಟರ್ .
ಈ ಶೋನಲ್ಲಿ ಈಗ ಅತಿಥಿ ಸಂಪಾದಕಿಯಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ಕೊಡಗಿನವರಿಗೂ , ಅಕ್ಕಿ ರೊಟ್ಟಿಗೂ ಇರುವ ನಂಟಿನ ಬಗ್ಗೆ ಹೇಳಿಕೊಂಡಿರುವುದು ವಿಶೇಷ. ಈ ಹಿಂದೆ ಇದಕ್ಕೆ ಅತಿಥಿಯಾಗಿ ಹೋಗಿದ್ದ ಕರ್ನಾಟಕದ ಕ್ರಷ್ ರಶ್ಮಿಕಾಮಂದಣ್ಣ , ಕೋಳಿ ಕರಿ ಶುಚಿ- ರುಚಿ ಕುರಿತು ಮಾತನಾಡಿದ್ದರು.ಈಗ ಮತ್ತೆ ಅಲ್ಲಿಗೆ ಅತಿಥಿಯಾಗಿ ಹೋಗಿದ್ದ ರಶ್ಮಿಕಾ ಅಕ್ಕಿ ರೊಟ್ಟಿ ನಂಟಿನ ಬಗ್ಗೆ ಹೇಳಿಕೊಂಡರು.
‘ ನಮ್ಮ ಮನೆಯಲ್ಲಿ ಬೆಳಗ್ಗೆಯೇ ಅಕ್ಕಿ ರೊಟ್ಟಿ ಉಪಾಹಾರ. ನಮ್ಮ ಅಜ್ಜಿ ಆ ರೊಟ್ಟಿ ಮಾಡುವುದರಲ್ಲಿ ಎತ್ತಿದ ಕೈ. ಬೆಳಗ್ಗೆಯೂ ಅದೇ, ಮಧ್ಯಾಹ್ನ ಊಟಕ್ಕೂ ಅಕ್ಕಿರೊಟ್ಟಿ, ರಾತ್ರಿ ಊಟಕ್ಕೂ ಅಕ್ಕಿ ರೊಟ್ಟಿ. ನಾನೊಬ್ಬಳೇ ಅಲ್ಲ ಬಹುತೇಕ ಎಲ್ಲ ಕೂರ್ಗಿಗಳಿಗೆ ಅಕ್ಕಿರೊಟ್ಟಿ ಅಂದರೆ ಇಷ್ಟ’ ಎಂದರು ರಶ್ಮಿಕಾಮಂದಣ್ಣ.
ರಂಗಭೂಮಿಕಲಾವಿದೆ ಹಾಗೂ ಬಿಗ್‍ಬಾಸ್ ಸ್ಪರ್ಧಿ ಅಕ್ಷತಾ ಪಾಂಡವಪುರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನ ಅವರು ಸೋಷಲ್ ಮೀಡಿಯಾ ಮೂಲಕ ರಿವೀಲ್ ಮಾಡಿದ್ದಾರೆ.
” ಬದುಕೆಂಬ ಪುಸ್ತಕದಲ್ಲಿ ಮುಂದಿನ ಅಧ್ಯಾಯಕ್ಕೆ ಕೆಲವೇದಿನಗಳು ಬಾಕಿ.ಹೊಸವರ್ಷ ಹೊಸಬೆಳಕಿನ ನಿರೀಕ್ಷೆಯಲ್ಲಿದ್ದೇವೆ. ಈ ವಿಸ್ಮಯ ಜಗತ್ತಿನಲ್ಲಿ ಮತ್ತೊಂದು ವಿಸ್ಮಯ ಅಂದ್ರೆ ಮತ್ತೆಂದೂ ಬಾರದ ಈ ಘಳಿಗೆ…ಇನ್ನೂ ಜನವರಿ 2021ಕ್ಕೆ ಮತ್ತೊಂದು ವಿಶೇಷ ಘಳಿಗೆಯ ನಿರೀಕ್ಷೆಯಲ್ಲಿದ್ದೇವೆ” ಅಂತ ಅಕ್ಷತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಗರ್ಭಿಣಿಯಾಗಿರುವ ಅಕ್ಷತಾ ಪಾಂಡವಪುರ, ಫೋಟೋಶೂಟ್ ಸಹ ಮಾಡಿಸಿಕೊಂಡಿದ್ದಾರೆ. ಜನವರಿಯಲ್ಲಿ ಮಗುವಿನ ಆಗಮನವಾಗಲಿದೆ ಎಂದು ತಿಳಿಸಿದ್ದಾರೆ. ಕೆಂಪು-ಹಳದಿ ಬಾರ್ಡರಿನ ಕಪ್ಪು ಬಣ್ಣದ ಇಳಕಲ್ ಸೀರೆ ತೊಟ್ಟು, ದೊಡ್ಡ ಕತ್ತಿನ ಸರ ಮತ್ತು ಮೂಗುತಿ ತೊಟ್ಟು ಕ್ಯಾಮೆರಾ ಕ್ಕೆ ಪೋಸು ನೀಡಿದ್ದಾರೆ.
ಅಕ್ಷತಾ ಪತಿ ಪ್ರಸನ್ ಸಾಗರ್ ನಿರ್ದೇಶಕರಾಗಿದ್ದಾರೆ. ಪ್ರಸನ್ನ್ ಶಿವಮೊಗ್ಗ ಜಿಲ್ಲೆಯ ಸಾಗರ್ ಮೂಲದವರಾಗಿದ್ದು, ಅಕ್ಷತಾರನ್ನ ಪ್ರೀತಿಸಿ ಮದುವೆ ಆಗಿದ್ದಾರೆ.
ಶನಿವಾರ ( ಡಿ.5) ಹುಟ್ಟು ಹಬ್ಬ ಆಚರಿಸಿಕೊಂಡ ಕನ್ನಡದ ಏಕ್ತಾಕಪೂರ್ ಶ್ರುತಿ ನಾಯ್ಡು
ಸ್ಟಾರ್ ಸುವರ್ಣ ಬದಲಾವಣೆಯ ಬೆಳಕಿನೊಂದಿಗೆ ಹೊಸ ಕಿರುತೆರೆ ವೀಕ್ಷಕರನ್ನು ಹೊಸ ರೂಪದಲ್ಲಿ ರಂಜಿಸುತ್ತಿದೆ. ಹೊಸ ಆಲೋಚನೆಯ ‘ಸರಸು’ ಧಾರಾವಾಹಿ, ಹೊಸ ಪರಿಕಲ್ಪನೆಯ ‘ಸುವರ್ಣ ಸೂಪರ್ ಸ್ಟಾರ್’ ಕಾರ್ಯಕ್ರಮಗಳು ಈಗಾಗಲೇ ಕಿರುತೆರೆ ವೀಕ್ಷಕರ ಮನಸಿಗೆ ಹತ್ತಿರವಾಗಿವೆ. ಆ ಸಾಲಿಗೆ ಈಗ ‘ಮನಸೆಲ್ಲಾ ನೀನೇ’ ಹೊಚ್ಚ ಹೊಸ ಧಾರಾವಾಹಿ.
ಇದು ಶ್ರುತಿ ನಾಯ್ಡು ನಿರ್ಮಾಣದ ಹೊಸ ಧಾರಾವಾಹಿ. ಶ್ರುತಿ ನಾಯ್ಡು ಅವರು ತಮ್ಮದೇ ‘ಶ್ರುತಿ ನಾಯ್ಡ ಚಿತ್ರ’ ಸಂಸ್ಥೆಯ ಮೂಲಕ ಈಗಾಗಲೇ ಅವರು ಕಿರುತೆಯಲ್ಲಿ ಹಲವು ಜನಪ್ರಿಯ ಧಾರಾವಾಹಿ ಕೊಟ್ಟವರು. ಅದೇ ಅನುಭವದ ಪಯಣದಲ್ಲೀಗ ಹೊಸತನ್ನು ಬಯಸುವ ಕಿರುತೆರೆ ವೀಕ್ಷಕರಿಗೆ ಹೊಸ ಹೊಸತೆನಿಸುವ ಕತೆಯೊಂದನ್ನು ‘ ಮನಸೆಲ್ಲಾನೀನೇ’ ಮೂಲಕ ನೀಡಲು ಬರುತ್ತಿದ್ದಾರೆ. ವಿಶೇಷವಾಗಿ ಸಂಘರ್ಷ ಧಾರಾವಾಹಿ ಯ ನಂತರ ಸ್ಟಾರ್ ಸುವರ್ಣದಲ್ಲಿ ಅವರು ನೀಡುತ್ತಿರುವ ಎರಡನೇ ಧಾರಾವಾಹಿ ಇದು. ಇದುವರೆಗೂ ಬಂದು ಹೋದ ಧಾರಾವಾಹಿಗಳ ಕಥಾ ಹಂದರಕ್ಕಿಂತ ಇದು ಭಿನ್ನವಾದ ಕತೆಯಂತೆ.
ಕಥಾ ನಾಯಕಿ ರಾಗ. ಅಪ್ಪ ಅಮ್ಮನ ಪ್ರೀತಿಯ ಮಗಳು.
ವೃತ್ತಿಯಲ್ಲಿ ಡಯಟಿಷಿಯನ್ . ಪುಟಾಣಿ ಪ್ರೀತೂ ಅಂದ್ರೆ ಇವಳಿಗೆ ಪ್ರಾಣ. ಅವನಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾಳೆ. ಇನ್ನು ಕಥಾ ನಾಯಕ ಅರುಣ್ ಯಶಸ್ಸಿನ ಅಮಲಿನಲ್ಲಿ ತೇಲುವ ರಾಕ್ ಸ್ಟಾರ್ . ಅವನಂದ್ರೆ ಸೆನ್ಸೇಷನ್ .ಒಂಥರ ಯೂತ್ ಐಕನ್. ಅವರ ಮಧ್ಯೆ ಬರುವವನು ಪ್ರೀತಮ್.ಆತ ರಾಕ್ ಸ್ಟಾರ್ ಅರುಣ್ ದೊಡ್ಡ ಫ್ಯಾನ್. ಈತ ರಾಗಾಳ ಮುದ್ದಿನಮಗ. ಅವರ ಸುತ್ತಲ ಕತೆಯೇ ‘ ಮನಸೆಲ್ಲಾ ನೀನೇ’ . ಕತೆ ಸಿಂಪಲ್ ಎನಿಸಿದರೂ ಇಲ್ಲಿ ಅನೇಕ ಟ್ವಿಸ್ಟ್ ಆ್ಯಂಡ್ ಟರ್ನ್ ಗಳಿವೆ. ಅವೆಲ್ಲ ಏನು, ಹೇಗೆ ಎನ್ನುವುದು ಧಾರಾವಾಹಿಯ ಕುತೂಹಲದ ಅಂಶ.
ಧಾರಾವಾಹಿಯ ಕತೆ ಇದಾದರೆ ಇನ್ನು ಉಳಿದಿದ್ದು ಪಾತ್ರವರ್ಗ ಯಾರು ಅನ್ನೋದು. ಕಥಾ ನಾಯಕಿ ರಾಗ ಪಾತ್ರಕ್ಕೆ ಬಣ್ಣ ಹಚ್ಚಿದವರು ರಶ್ಮಿ ಪ್ರಭಾಕರ್. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಿನ್ನು ಖ್ಯಾತಿಯ ನಟಿ.ಹಾಗೆಯೇ ಕಲಾವಿದ ಸುಜಿತ್, ರಾಕ್ ಸ್ಟಾರ್ ಅರುಣ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪುಟಾಣಿ ಅಲಾಪ್ ಪ್ರೀತಮ್ ಆಗಿ ಬರುತ್ತಿದ್ದಾರೆ.ಈ ಮೂವರ ಅನುಬಂಧದ ಕತೆ ಇಲ್ಲಿ ಹೊಸತಾಗಿರುವುದು ಮಾತ್ರವಲ್ಲ, ರೋಚಕ , ರಂಜನೆಯ ರಸದೌತಣ ನೀಡಲಿದೆಯಂತೆ. ಹಾಗೆಯೇ ಅನುಭವಿ ಕಲಾವಿದರಾದ ವಿಜಯ್ ಕಾಶಿ, ಅರುಣಾ ಬಾಲರಾಜ್ , ಬಾಬು ಹಿರಣಯ್ಯ , ಪ್ರಕಾಶ್ ಶೆಟ್ಟಿ, ರೇಖಾ ಸಾಗರ್ ಧಾರಾವಾಹಿಯ ತಾರಾಗಣದಲ್ಲಿದ್ದಾರೆ.
ಕರ್ನಾಟಕದ ಸ್ಟೈಲಿಷ್ ಸಿಂಗರ್ ಸಂಜಿತ್ ಹೆಗ್ಡೆ ‘ಮನಸೆಲ್ಲಾ ನೀನೇ’ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಹಾಡಿದ್ದು, ಈ ಹಾಡು ಈಗಾಗಲೇ ಜನಪ್ರಿಯವಾಗಿದೆ. ಅದ್ಧೂರಿ ನಿರ್ಮಾಣ, ಸುಂದರ ಕತೆ, ಮುದ್ದಾದ ಪಾತ್ರವರ್ಗವು ‘ಮನಸೆಲ್ಲಾ ನೀನೇ’ ಧಾರಾವಾಹಿಯ ಹೈಲೈಟ್ಸ್. ಅಂದ ಹಾಗೆ, ಶನಿವಾರ( ಡಿಸೆಂಬರ್ 5) ದಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಅವರು, ತಮ್ಮ ಬರ್ತಡೇ ವಿಶೇಷ ಎಂಬಂತೆ ಈ ಧಾರಾವಾಹಿಯ ಸುದ್ದಿ ರಿವೀಲ್ ಮಾಡಿದ್ದಾರೆ. ಡಿ.7ರಿಂದ ಪ್ರತಿ ರಾತ್ರಿ 9.30ಕ್ಕೆ ಇದು ಸ್ಟಾರ್ ಸುವರ್ಣ ದಲ್ಲಿ ಮೂಡಿ ಬರಲಿದೆ.
ಕಿರುತೆರೆಯಲ್ಲಿ ಫೇಮಸ್ ಆದ ನಟ-ನಟಿಯರು ಹಿರಿತೆರೆಗೆ ಬರುವುದೇನು ಹೊಸದಲ್ಲ. ಸದ್ಯದ ಅನೇಕ ಜನಪ್ರಿಯ ತಾರೆಯರು ಅಲ್ಲಿಂದಲೇ ಬಂದವರು ಎನ್ನುವುದು ನಿಮಗೂ ಗೊತ್ತು. ಅ ಸಾಲಿಗೆ ಈಗ ಹೊಸ ಸೇರ್ಪಡೆ ಯುವ ನಟ ಅಭಿಲಾಷ್ ಅಲಿಯಾಸ್ ಮಧುಕರ್.
ಅಭಿಲಾಷ್ ಎನ್ನುವುದು ಅವರ ಒರಿಜಿನಲ್ ಹೆಸರು. ಆದರೆ ಮಧುಕರ್ ಎನ್ನುವ ಪಾತ್ರದ ಮೂಲಕವೇ
ಜನಪ್ರಿಯತೆ ಪಡೆದ ನಟ ಅವರು. ಅಂದ ಹಾಗೆ, ಮಧುಕರ್ ಎನ್ನುವುದು ‘ ಮಗಳು ಜಾನಕಿ’ ಧಾರಾವಾಹಿ ಯಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರ. ಆ ಪಾತ್ರದೊಂದಿಗೆ ಮನೆಮಾತಾದ ಅಭಿಲಾಷ್ ಈಗ ‘ಮಹಾ ಕರ್ಮ’ ಹೆಸರಿನ ಚಿತ್ರದೊಂದಿಗೆ ಹೀರೋ ಆಗಿ ಬೆಳ್ಳಿತೆರೆಗೆ ಜಿಗಿಯುತ್ತಿರುವುದು ವಿಶೇಷ.
‘ಮಹಾಕರ್ಮ’. ಶುದ್ದ ಹೊಸಬರ ಚಿತ್ರ. ಯಶಸ್ವಿ ಬಾಲಾಧಿತ್ಯ ಇದರ ನಿರ್ದೇಶಕ. ಈ ಹಿಂದೆ ಇವರು ಒಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಅದು ಅಷ್ಟೇನು ಸಕ್ಸಸ್ ಕಾಣಲಿಲ್ಲ .ಆದರೆ ಮತ್ತೊಂದು ಸಿನಿಮಾ ಮಾಡಿ ಗೆಲ್ಲಲೇ ಬೇಕೆನ್ನುವ ಛಲದೊಂದಿಗೆ ಮಹಾ ಕರ್ಮಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರಂತೆ. ಇನ್ನು ಈ ಚಿತ್ರಕ್ಕೆ ವಿದ್ಯಾಶ್ರೀ ಕ್ರಿಯೇಷನ್ಸ್ ಮೂಲಕ ವಿ.ಮಂಜುನಾಥ್ ಬಂಡವಾಳ ಹಾಕುತ್ತಿದ್ದು, ಕಿರಣ್ ಛಾಯಾಗ್ರಹಣ, ಮಧು ತುಂಬೆಕೆರೆ ಸಂಕಲನ ಚಿತ್ರಕ್ಕಿದೆ.
ಸದ್ದಿಲ್ಲದೆ ಸುದ್ದಿ ಮಾಡದೆ ‘ ಮಹಾ ಕರ್ಮ ‘ ಚಿತ್ರಕ್ಕೆ ಮುಹೂರ್ತವು ಮುಗಿದಿದೆ. ಇತ್ತೀಚೆಗಷ್ಟೇ ನಗರದಲ್ಲಿ ಮುಹೂರ್ತ ಮುಗಿಸಿಕೊಂಡ ಚಿತ್ರ ತಂಡವೀಗ ಚಿತ್ರೀಕರಣಕ್ಕೆ ಸಿದ್ದತೆ ನಡೆಸಿದೆ. ನಟ ಅಭಿಲಾಷ್ ಪ್ರಕಾರ ಮಹಾಕರ್ಮ ಒಂದು ವಿಶೇಷವಾದ ಸಿನಿಮಾ. ಇದೊಂದು ಕ್ರೇಮ್ ಥ್ಲಿಲ್ಕರ್ ಕತೆ. ಹಾಗೆಯೇ ಕ್ಯೂಟ್ ಲವ್ ಸ್ಟೋರಿ ಸಿನಿಮಾವೂ ಹೌದು. ಸಾಕಷ್ಟು ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿವೆ. ಹೊಸಬರಾದರೂ, ಚಿತ್ರದ ಕತೆ ಪ್ರೇಕ್ಷಕ ರಿಗೆ ಹೆಚ್ಚು ಇಷ್ಟವಾಗಲಿದೆ. ಅದರ ಜತೆಗೆ ನಿರ್ಮಾಪಕ ಮಂಜುನಾಥ್ ಅವರು ಕೂಡ ಚಿತ್ರವನ್ನು ಅದ್ದೂರಿಯಾಗಿಯೇ ತೆರೆಗೆ ತರಲು ಮುಂದಾಗಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿ ಬರುವ ನಂಬಿಕೆಯಿದೆ ಎನ್ನುತ್ತಾರೆ ಯುವನಟ ಅಭಿಲಾಷ್.
ಅಣ್ಣನ ಮಗನ ಸಿನಿ ಜರ್ನಿಗೆ ಮನದುಂಬಿ ಹಾರೈಸಿದ ರಿಯಲ್ ಸ್ಟಾರ್ ಉಪೇಂದ್ರ
” ‘ಲೇ ಮಚಾ.. ತೆಳ್ಳಗೆ ಬೆಳ್ಳಗೆ ಇದಾನೆ ಅಂತ ಲಿಟಲ್ ಸ್ಟಾರ್ ಅಂದ್ಕೊಂಡ್ಬಿಟ್ಟೇನೋ ಮಗನೇ, ನಾನು ರಿಯಲ್ ಸ್ಟಾರ್ ಗರಡಿಯಲ್ಲಿ ಪಳಗಿರೋ ಸೂಪರ್ಸ್ಟಾರ್ ಕಣೋ….”
– ಜನ ಜಾತ್ರೆ ನಡುವೆ ಹೀಗೆ ಖಡಕ್ ಡೈಲಾಗ್ ಹೊಡೆದು ಕುತೂಹಲ ಮೂಡಿಸಿದರು ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ. ಇದು ನಡೆದಿದ್ದು ಸೂಪರ್ ಸ್ಟಾರ್ ಚಿತ್ರದ ಮುಹೂರ್ತ ಸಂದರ್ಭ.
ಅಂದ ಹಾಗೆ, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕ ನಟನಾಗಿ ಬೆಳ್ಳಿ ತೆರೆಗೆ ಕಾಲಿಡುತ್ತಿರುವುದು ಹಳೇ ಸುದ್ದಿ. ಅದಕ್ಕಾಗಿಯೇ ನಿರಂಜನ್ ತುಂಬಾ ದಿನಗಳಿಂದ ಬಾಡಿ ವರ್ಕೌಟ್ ಮಾಡಿದ್ದು, ಆ ನಂತರ ಸೂಪರ್ ಸ್ಟಾರ್ ಅವರ ಚೊಚ್ಚಲ ಚಿತ್ರಕ್ಕೆ ಹೆಸರಿಟ್ಟು, ಅದರ ಟೀಸರ್ ಲಾಂಚ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದ್ದು , ಸಾಕಷ್ಟು ಕುತೂಹಲ ಮೂಡಿಸಿದ್ದೆಲ್ಲ ನಿಮಗೆ ಗೊತ್ತೇ ಇದೆ. ಅದಾದ ನಂತರವೀಗ ಡಿಸೆಂಬರ್ 4 ರಂದು ಶುಕ್ರವಾರ ಬೆಂಗಳೂರಿನ ಅಂಜನ ನಗರ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೂಪರ್ ಸ್ಟಾರ್ ಚಿತ್ರಕ್ಕೆ ಅದ್ದೂರಿ ಮುಹೂರ್ತ ಕಾರ್ಯಕ್ರಮ ನೆಡೆಯಿತು.
ಚಿತ್ರದ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಅವರ ತಾಯಿ ಶ್ರೀಮತಿ ಗೌರಮ್ಮ ಮುನಿಯಪ್ಪ, ಚಿತ್ರಕ್ಕೆ ಕ್ಲಾಪ್ ಮಾಡಿದರೆ, ಶ್ರೀಮತಿ ಲಕ್ಷ್ಮೀ ಕ್ಯಾಮರಾಕ್ಕೆ ಚಾಲನೆ ನೀಡಿದರು. ಬಳಿಕ ಚಿತ್ರ ತಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿತು. ‘ ಕಳೆದ ಎರಡು ವರ್ಷಗಳಿಂದ ಈ ಸಿನಿಮಾ ಬಗ್ಗೆ ಇಡೀ ತಂಡ ತಲೆ ಕೆಡಿಸಿಕೊಂಡಿದೆ. ನಿರ್ದೇಶಕರು, ನಿರ್ಮಾಪಕರು ಮತ್ತು ಹೀರೋ ಶಕ್ತಿ ಮೀರಿ ಶ್ರಮ ಹಾಕುತ್ತಿದ್ದಾರೆ. ನಮ್ಮ ಮನೆಮಂದಿಯೆಲ್ಲ ನಿರಂಜನ್ನನ್ನು ನೋಡಿ ಜಿಮ್ ಸೇರಿದ್ದಾರೆ. 19ನೇ ವರ್ಷಕ್ಕೆ ಜಿಮಿನಾಸ್ಟಿಕ್ ಶುರುಮಾಡಿದ ಅದಾದ ಬಳಿಕ ಡಾನ್ಸ್, ಜಿಮ್, ಡ್ರಾಮಾ ಹೀಗೆ ಸಿನಿಮಾಕ್ಕಾಗಿ ತುಂಬ ಶ್ರಮ ಹಾಕುತ್ತಿದ್ದಾನೆ. ಪರಿಶ್ರಮ ಇದ್ದರೆ ಯಶಸ್ಸು
ಗ್ಯಾರಂಟಿ ಸಿಗಲಿದೆ ‘ ಅಂತ ಮುಹೂರ್ತಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ನಟ ಉಪೇಂದ್ರ ಶುಭ ಹಾರೈಸಿದರು.
ನಿರ್ಮಾಪಕ ಮೈಲಾರಿ ಚಿತ್ರನಿರ್ಮಾಣದ ವಿಶೇಷತೆ ಕುರಿತುಮಾತನಾಡಿದರು. ‘ ಸಿನಿಮಾ ನಿರ್ಮಾಣ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಉಪೇಂದ್ರ ಮತ್ತವರ ಇಡೀ ಕುಟುಂಬ ಮತ್ತು ಚಿತ್ರರಂಗದ ಸಾಕಷ್ಟು ಸ್ಟಾರ್ ನಟರು ನಮ್ಮ ಸಿನಿಮಾಕ್ಕೆ ಬೆಂಬಲ ನೀಡುತ್ತಿದ್ದಾರೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬರಲಿದೆ’ ಎಂದರು.
ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಮಾತನಾಡಿ, ಚಿತ್ರಕ್ಕೆ ಮೂಗೂರು ಸುಂದರಂ ಅವರನ್ನು ಕರೆತರುವುದಕ್ಕೆ ನಾಲ್ಕು ತಿಂಗಳ ಕಾಲ ವ್ಯಯ ಮಾಡಿದ್ದೇವೆ. ಪೋನ್ ಮಾಡಿದರೂ ಅವರು ಸಿಕ್ಕಿರಲಿಲ್ಲ. ಕೊನೆಗೆ ಅವರ ಮನೆಗೆ ಹೋಗಿ ಕಥೆ ಹೇಳಿ ಅವರ ಒಪ್ಪಿಗೆ ಪಡೆದುಕೊಂಡು ಬಂದಿದ್ದೇವೆ. ಈ ಸಿನಿಮಾದಲ್ಲಿ ಅವರು ಡಾನ್ಸ್ ಮಾಸ್ಟರ್ ಪಾತ್ರ ಮಾಡಲಿದ್ದಾರೆ. ಸೋಮವಾರ ದಿಂದ ಶೂಟಿಂಗ್ ಶುರುವಾಗಲಿದೆ‘ ಎಂದರು ನಿರ್ದೇಶಕರು. ಇನ್ನು ನಾಯಕ ನಿರಂಜನ್ ಮಾತಿಗೆ ಮುನ್ನ ಖಡಕ್ ಡೈಲಾಗ್ ಹೊಡೆದು ಕುತೂಹಲ ಮೂಡಿಸಿದರು.
” ನನಗೆ ಸಿನಿಮಾವೊಂದೆ ಗೊತ್ತಿರುವುದು. ಅದರಲ್ಲಿಯೇ ಏನಾದರು ಮಾಡಬೇಕೆಂಬ ತುಡಿತ ಇದೆ. ತುಂಬ ವರ್ಷಗಳಿಂದ ಒಳ್ಳೇ ಸ್ಕ್ರಿಪ್ಟ್ ಸಲುವಾಗಿ ಕಾಯುತ್ತಿದ್ದೆ. ಅದು ಸೂಪರ್ಸ್ಟಾರ್ ಮೂಲಕ ಸಿಕ್ಕಿತು. ಡಾನ್ಸಿಂಗ್ ಸಿನಿಮಾ ಆಗಿರುವುದರಿಂದ ನನಗೂ ಡಾನ್ಸ್ ಇಷ್ಟ. ಒಂದೊಳ್ಳೆ ಮೆಸೆಜ್ ಸಹ ಇದರಲ್ಲಿದೆ ”
– ನಿರಂಜನ್ ಸುಧೀಂದ್ರ, ನಟ
ಮುಹೂರ್ತಕ್ಕೆ ಅತಿಥಿಯಾಗಿ ಬಂದಿದ್ದ ನಟ ನೆನಪಿರಲಿ ಪ್ರೇಮ್, ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದರು. ಚಿತ್ರಕ್ಕೆ ವಿಜಯ್ ಮಾಸ್ಟರ್ ಸಾಹಸ ನಿರ್ದೇಶನ, ಯೋಗಿ ಕ್ಯಾಮರ್, ರಾಘವೇಂದ್ರ ವಿ ಸಂಗೀತ, ವಿಜಯ್ ಕುಮಾರ್ ಸಂಕಲನ, ಮೋಹನ್ ಅವರು ಈ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಲಿದ್ದಾರೆ. ಇನ್ನುಳಿದ ತಾರಾಗಣದ ಆಯ್ಕೆಯೂ ನಡೆಯುತ್ತಿದ್ದು, ಶೀಘ್ರದಲ್ಲಿ ಚಿತ್ರ ತಂಡ ಅದನ್ನು ಬಹಿರಂಗ ಪಡಿಸಲಿದೆಯಂತೆ.