ಸೂಪರ್​ಸ್ಟಾರ್​ಗೆ ಅದ್ಧೂರಿ ಮುಹೂರ್ತ ಸೋಮವಾರದಿಂದ ಶೂಟಿಂಗ್​ ಶುರು

ಅಣ್ಣನ ಮಗನ ಸಿನಿ ಜರ್ನಿಗೆ ಮನದುಂಬಿ ಹಾರೈಸಿದ ರಿಯಲ್ ಸ್ಟಾರ್ ಉಪೇಂದ್ರ 

 

” ‘ಲೇ ಮಚಾ.. ತೆಳ್ಳಗೆ ಬೆಳ್ಳಗೆ  ಇದಾನೆ ಅಂತ ಲಿಟಲ್ ಸ್ಟಾರ್ ಅಂದ್ಕೊಂಡ್ಬಿಟ್ಟೇನೋ ಮಗನೇ, ನಾನು ರಿಯಲ್ ಸ್ಟಾರ್ ಗರಡಿಯಲ್ಲಿ ಪಳಗಿರೋ ಸೂಪರ್ಸ್ಟಾರ್ ಕಣೋ….” 

– ಜನ ಜಾತ್ರೆ ನಡುವೆ ಹೀಗೆ ಖಡಕ್ ಡೈಲಾಗ್ ಹೊಡೆದು ಕುತೂಹಲ‌ ಮೂಡಿಸಿದರು ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ. ಇದು ನಡೆದಿದ್ದು ಸೂಪರ್ ಸ್ಟಾರ್ ಚಿತ್ರದ ಮುಹೂರ್ತ ಸಂದರ್ಭ.

ಅಂದ ಹಾಗೆ, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕ ನಟನಾಗಿ ಬೆಳ್ಳಿ ತೆರೆಗೆ ಕಾಲಿಡುತ್ತಿರುವುದು ಹಳೇ ಸುದ್ದಿ. ಅದಕ್ಕಾಗಿಯೇ ನಿರಂಜನ್ ತುಂಬಾ ದಿನಗಳಿಂದ ಬಾಡಿ ವರ್ಕೌಟ್ ಮಾಡಿದ್ದು, ಆ ನಂತರ ಸೂಪರ್ ಸ್ಟಾರ್ ಅವರ ಚೊಚ್ಚಲ ಚಿತ್ರಕ್ಕೆ ಹೆಸರಿಟ್ಟು, ಅದರ ಟೀಸರ್ ಲಾಂಚ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದ್ದು , ಸಾಕಷ್ಟು ಕುತೂಹಲ ಮೂಡಿಸಿದ್ದೆಲ್ಲ ನಿಮಗೆ ಗೊತ್ತೇ ಇದೆ‌. ಅದಾದ ನಂತರವೀಗ ಡಿಸೆಂಬರ್ 4 ರಂದು ಶುಕ್ರವಾರ ಬೆಂಗಳೂರಿನ ಅಂಜನ ನಗರ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೂಪರ್ ಸ್ಟಾರ್‌ ಚಿತ್ರಕ್ಕೆ ಅದ್ದೂರಿ ಮುಹೂರ್ತ ಕಾರ್ಯಕ್ರಮ ನೆಡೆಯಿತು.

ಚಿತ್ರದ ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ಅವರ ತಾಯಿ ಶ್ರೀಮತಿ ಗೌರಮ್ಮ ಮುನಿಯಪ್ಪ, ಚಿತ್ರಕ್ಕೆ ಕ್ಲಾಪ್ ಮಾಡಿದರೆ, ಶ್ರೀಮತಿ ಲಕ್ಷ್ಮೀ ಕ್ಯಾಮರಾಕ್ಕೆ ಚಾಲನೆ ನೀಡಿದರು. ಬಳಿಕ ಚಿತ್ರ ತಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿತು. ‘ ಕಳೆದ ಎರಡು ವರ್ಷಗಳಿಂದ ಈ ಸಿನಿಮಾ ಬಗ್ಗೆ ಇಡೀ ತಂಡ ತಲೆ ಕೆಡಿಸಿಕೊಂಡಿದೆ. ನಿರ್ದೇಶಕರು, ನಿರ್ಮಾಪಕರು ಮತ್ತು ಹೀರೋ ಶಕ್ತಿ ಮೀರಿ ಶ್ರಮ ಹಾಕುತ್ತಿದ್ದಾರೆ. ನಮ್ಮ ಮನೆಮಂದಿಯೆಲ್ಲ ನಿರಂಜನ್​ನನ್ನು ನೋಡಿ ಜಿಮ್​ ಸೇರಿದ್ದಾರೆ. 19ನೇ ವರ್ಷಕ್ಕೆ ಜಿಮಿನಾಸ್ಟಿಕ್ ಶುರುಮಾಡಿದ ಅದಾದ ಬಳಿಕ ಡಾನ್ಸ್​, ಜಿಮ್, ಡ್ರಾಮಾ ಹೀಗೆ ಸಿನಿಮಾಕ್ಕಾಗಿ ತುಂಬ ಶ್ರಮ ಹಾಕುತ್ತಿದ್ದಾನೆ. ಪರಿಶ್ರಮ ಇದ್ದರೆ ಯಶಸ್ಸು
ಗ್ಯಾರಂಟಿ‌ ಸಿಗಲಿದೆ ‘ ಅಂತ ಮುಹೂರ್ತಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ನಟ ಉಪೇಂದ್ರ ಶುಭ ಹಾರೈಸಿದರು.

ನಿರ್ಮಾಪಕ ಮೈಲಾರಿ ಚಿತ್ರ‌ನಿರ್ಮಾಣದ ವಿಶೇಷತೆ ಕುರಿತು‌ಮಾತನಾಡಿದರು. ‘ ಸಿನಿಮಾ ನಿರ್ಮಾಣ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಉಪೇಂದ್ರ ಮತ್ತವರ ಇಡೀ ಕುಟುಂಬ ಮತ್ತು ಚಿತ್ರರಂಗದ ಸಾಕಷ್ಟು ಸ್ಟಾರ್ ನಟರು ನಮ್ಮ ಸಿನಿಮಾಕ್ಕೆ ಬೆಂಬಲ ನೀಡುತ್ತಿದ್ದಾರೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬರಲಿದೆ’ ಎಂದರು.

ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ಮಾತನಾಡಿ, ಚಿತ್ರಕ್ಕೆ ಮೂಗೂರು ಸುಂದರಂ ಅವರನ್ನು ಕರೆತರುವುದಕ್ಕೆ ನಾಲ್ಕು ತಿಂಗಳ ಕಾಲ ವ್ಯಯ ಮಾಡಿದ್ದೇವೆ. ಪೋನ್ ಮಾಡಿದರೂ ಅವರು ಸಿಕ್ಕಿರಲಿಲ್ಲ. ಕೊನೆಗೆ ಅವರ ಮನೆಗೆ ಹೋಗಿ ಕಥೆ ಹೇಳಿ ಅವರ ಒಪ್ಪಿಗೆ ಪಡೆದುಕೊಂಡು ಬಂದಿದ್ದೇವೆ. ಈ ಸಿನಿಮಾದಲ್ಲಿ ಅವರು ಡಾನ್ಸ್ ಮಾಸ್ಟರ್ ಪಾತ್ರ ಮಾಡಲಿದ್ದಾರೆ. ಸೋಮವಾರ ದಿಂದ ಶೂಟಿಂಗ್​ ಶುರುವಾಗಲಿದೆ‘ ಎಂದರು ನಿರ್ದೇಶಕರು. ಇನ್ನು ನಾಯಕ ನಿರಂಜನ್ ಮಾತಿಗೆ ಮುನ್ನ ಖಡಕ್ ಡೈಲಾಗ್ ಹೊಡೆದು ಕುತೂಹಲ ಮೂಡಿಸಿದರು.

ನನಗೆ ಸಿನಿಮಾವೊಂದೆ ಗೊತ್ತಿರುವುದು. ಅದರಲ್ಲಿಯೇ ಏನಾದರು ಮಾಡಬೇಕೆಂಬ ತುಡಿತ ಇದೆ. ತುಂಬ ವರ್ಷಗಳಿಂದ ಒಳ್ಳೇ ಸ್ಕ್ರಿಪ್ಟ್ ಸಲುವಾಗಿ ಕಾಯುತ್ತಿದ್ದೆ. ಅದು ಸೂಪರ್​ಸ್ಟಾರ್ ಮೂಲಕ ಸಿಕ್ಕಿತು. ಡಾನ್ಸಿಂಗ್​ ಸಿನಿಮಾ ಆಗಿರುವುದರಿಂದ ನನಗೂ ಡಾನ್ಸ್ ಇಷ್ಟ. ಒಂದೊಳ್ಳೆ ಮೆಸೆಜ್ ಸಹ ಇದರಲ್ಲಿದೆ ” 

ನಿರಂಜನ್ ಸುಧೀಂದ್ರ, ನಟ

ಮುಹೂರ್ತಕ್ಕೆ ಅತಿಥಿಯಾಗಿ ಬಂದಿದ್ದ ನಟ ನೆನಪಿರಲಿ ಪ್ರೇಮ್, ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದರು. ಚಿತ್ರಕ್ಕೆ ವಿಜಯ್ ಮಾಸ್ಟರ್ ಸಾಹಸ ನಿರ್ದೇಶನ, ಯೋಗಿ ಕ್ಯಾಮರ್, ರಾಘವೇಂದ್ರ ವಿ ಸಂಗೀತ, ವಿಜಯ್ ಕುಮಾರ್ ಸಂಕಲನ, ಮೋಹನ್ ಅವರು ಈ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಲಿದ್ದಾರೆ. ಇನ್ನುಳಿದ ತಾರಾಗಣದ ಆಯ್ಕೆಯೂ ನಡೆಯುತ್ತಿದ್ದು, ಶೀಘ್ರದಲ್ಲಿ ಚಿತ್ರ ತಂಡ ಅದನ್ನು ಬಹಿರಂಗ ಪಡಿಸಲಿದೆಯಂತೆ.

Related Posts

error: Content is protected !!