Categories
ಸಿನಿ ಸುದ್ದಿ

ಮುಖ ಮುಚ್ಚಿಕೊಂಡು ಬೀದಿ ಬೀದಿ ತಿರುಗಿದ ಬುಲ್‌ ಬುಲ್‌ ಬೆಡಗಿ‌!

 

ವೀರಂ ಚಿತ್ರಕ್ಕಾಗಿ ತಂಡದ ಜೊತೆ ಬೀದಿಗಿಳಿದರು ಡಿಂಪಲ್‌ ರಚಿತಾ

 

ಕನ್ನಡದ ನಟಿ ರಚಿತಾರಾಮ್‌ ಮುಖಕ್ಕೆ ಕೆಂಪು ವಸ್ತ್ರ ಕಟ್ಟಿಕೊಂಡು ಬೀದಿ ಬೀದಿ ಸುತ್ತುತ್ತಿದ್ದಾರೆ! ಅರೇ, ಹೀಗಂದಾಕ್ಷಣ ಇನ್ನೇನೋ ಕಲ್ಪನೆ ಮಾಡಿಕೊಳ್ಳಬೇಡಿ.

ರಚಿತಾರಾಮ್‌ ಬೀದಿ ಸುತ್ತಿರೋದು ನಿಜ. ಹಾಗಂತ ಇನ್ನೇನೋ ಕಾರಣಕ್ಕೆ ಅವರು ಬೀದಿ ಸುತ್ತಿಲ್ಲ. ಅವರು “ವೀರಂ” ಚಿತ್ರಕಕಾಗಿ ಕಾಸ್ಟ್ಯೂಮ್‌ ಖರೀದಿಸಲು  ಗುರುವಾರ ಕಮರ್ಷಿಯಲ್‌ ಸ್ಟ್ರೀಟ್‌ ಕಡೆ ಓಡಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದರಲ್ಲಿ ಮಾತನಾಡಿರುವ ರಚಿತಾರಾಮ್‌, “ನಾವು ಕಮರ್ಷಿಯಲ್‌ ಸ್ಟ್ರೀಟ್‌ಗೆ ಬಂದಿದ್ದೇವೆ. ಇದೊಂದು ಹೊಸ ಅನುಭವ. ಯಾರೂ ಕೂಡ ಕಂಡು ಹಿಡಿಯಲು ಆಗುತ್ತಿಲ್ಲ. ಎಲ್ಲರೂ ಮಾಸ್ಕ್‌ ಹಾಕಿಕೊಂಡಿದ್ದೇವೆ. ಇಡೀ ತಂಡ ನಮ್ಮೊಂದಿಗೆ ಇದೆ. ಖದರ್‌ ಕುಮಾರ್‌ ನಿರ್ದೇಶಕರು ನಮ್ಮ ಜೊತೆ ಇದ್ದಾರೆ.

ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಓಡಾಟ ನಡೆಸಿದ ರಚಿತಾರಾಮ್‌, ತಮಗೆ ಇಷ್ಟವಾದ, ಕಾಸ್ಟ್ಯೂಮ್‌ ಖರೀದಿಸಿದ್ದಾರೆ.  ಅವರು ಸುತ್ತಿದ ವಿಡಿಯೋ ಸದ್ಯಕ್ಕೆ ಹರಿದಾಡುತ್ತಿದೆ.

 

 

Categories
ಸಿನಿ ಸುದ್ದಿ

ಚಿತ್ರಮಂದಿರ ಅನ್ನೋದು  ದೇವಾಲಯ ಅಂದ್ರು ಅಭಿನಯ ಚಕ್ರವರ್ತಿ

 ಐರಾವನ್ ಚಿತ್ರದ ಟೀಸರ್ ಲಾಂಚ್ ಮಾಡಿದ ಕಿಚ್ಚ ಸುದೀಪ್

ಸಿನಿಮಾ ಮೊದಲು ಚಿತ್ರಮಂದಿರಕ್ಕೆ ಬರಬೇಕು, ಎಲ್ಲೋ ಕಳೆದು ಹೋಗಬೇಡಿ. ಶ್ರಮಕ್ಕೆ ಬೆಲೆ ಸಿಗಬೇಕೆಂದರೆ, ಸಿನಮಾ ಚಿತ್ರಮಂದಿರ ಅನ್ನೋ ದೇವಸ್ಥಾನ ಪ್ರವೇಶಿಸಲೇಬೇಕು….

-ಇದು ನಟ ಕಿಚ್ಚ ಸುದೀಪ್‌ ಅವರ ಮಾತು, ಸಿನಿಮಾ ಮಂದಿಗೆ ಮಾಡಿದ ಮನವಿ. ಜೆಕೆ ಅಲಿಯಾಸ್‌ ಕಾರ್ತಿಕ್‌ ಜಯರಾಂ ಅಭಿನಯ ಹಾಗೂ ನಿರಂತರ ಪ್ರೊಡಕ್ಷನ್‌ ಬ್ಯಾನರ್‌ ನಲ್ಲಿ ನಿರ್ಮಾಣವಾದ ʼ ಐರಾವನ್‌ʼ ಚಿತ್ರದ ಟೀಸರ್‌ ಲಾಂಚ್‌ ಸಂದರ್ಭದಲ್ಲಿ ಮಾತನಾಡಿದ ಸುದೀಪ್‌,  ಸಿನಿಮಾ ಅಂದ್ರೇನೆ ಹಾಗೆ. ಸಿನಿಮಾ ಅನ್ನೋದು ಮೊದಲು ಚಿತ್ರಮಂದಿರಕ್ಕೆ ಬರಬೇಕು, ಎಲ್ಲೋ ಕಳೆದು ಹೋಗಬೇಡಿ, ಶ್ರಮಕ್ಕೆ ಬೆಲೆ ಸಿಗಬೇಕು, ಒಂದು ಕಾಲದಲ್ಲಿ ಚಿತ್ರಮಂದಿರಕ್ಕೆ ಸಿನಿಮಾ ಬಂದರೆ ಸಾಕುಎನ್ನುತ್ತಿದ್ದೆವು. ಇದೀಗ ಚಿತ್ರಮಂದಿರ ಸಿಕ್ಕರೆ ಸಾಕಪ್ಪ ಎಂಬಂತಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ನಟ ಜೆಕೆ ಸಿನಿಮಾರಂಗದ ಆರಂಭದ ದಿನಗಳನ್ನು ನೆನಪಿಸಿಕೊಂಡರು. ‘. ಕಷ್ಟ ಇರಲಿ, ಸುಖ ಇರಲಿ ಸುದೀಪ್  ಅವರು ಮೊದಲಿನಿಂದಲೂ ಸುದೀಪ್‌ ಜತೆಗಿದ್ದಾರೆ. ಇನ್ನು ಈ ಸಿನಿಮಾ ಬಗ್ಗೆ ಹೇಳುವುದಾದರೆ, ಕೋವಿಡ್ ಸಮಯದಲ್ಲಿ ಸಿನಿಮಾ ಮಾಡಲು ಯೋಚನೆ ಮಾಡಬೇಕು. ನಿರಂತರ್ ಅವರು ಅಷ್ಟೇ ಬೇಗ ಈ ಸಿನಿಮಾ ವನ್ನು ಮುಗಿಸಿದ್ದಾರೆ ಎಂದರು.

ಅದೇ ರೀತಿ ಚಿತ್ರದಲ್ಲಿ ನಾಯಕಿಯಾಗಿ ಅದ್ವಿತಿ ಶೆಟ್ಟಿ ಜೆಕೆಗೆ ಜೋಡಿಯಾಗಿದ್ದಾರೆ. ವಿವೇಕ್‌ ಹಾಗೂ  ಅಭಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇಬ್ಬರೂ ತಮ್ಮ ಅನುಭವ ವನ್ನು ಹಂಚಿಕೊಂಡರು. ಅದೇ ರೀತಿ ನಿರ್ದೇಶಕ ರಾಮ್ಸ್ ರಂಗ ಸಿನಿಮಾದ ಎಳೆ ಬಿಚ್ಚಿಟ್ಟರು. ಇದು ನನ್ನ ಮೊದಲ ಸಿನಿಮಾ. ಈ ಹಿಂದೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಇದೀಗ ಪೂರ್ಣ ಪ್ರಮಾಣದ ಸಿನಿಮಾ ಮಾಡಿದ್ದೇನೆ. ಐರಾವನ್ ಎಂದರೆ, ಅರ್ಜುನನ ಮೂರನೇ ಮಗ ಐರಾವನ್. ಅದು ರಾಕ್ಷಸ ರೂಪ. ಆ ರೂಪವನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದೇವೆ. ಆ ಕುತೂಹಲವನ್ನು ಸಿನಿಮಾದಲ್ಲಿಯೇ ನೋಡಬೇಕೆಂದರು.

ನಿರ್ಮಾಪಕ ನಿರಂತರ, ಹುಚ್ಚ ಸಿನಿಮಾದಿಂದ ಸುದೀಪ್ ಅವರನ್ನು ನೋಡಿಕೊಂಡು ಬಂದಿದ್ದೇವೆ. ಜೆಕೆ ಅವರ ಮೂಲಕ ಅವರನ್ನು ಭೇಟಿ ಮಾಡಿಬಂದೆವು. ಈ ಕಾರ್ಯಕ್ರಮಕ್ಕೆ ಬಂದು ಟೀಸರ್ ಲಾಂಚ್ ಮಾಡಿದ್ದಕ್ಕೆ ಅವರಿಗೆ ಧನ್ಯವಾದ. ಇಡೀ ತಂಡದಲ್ಲಿ ಎಲ್ಲರೂ ಯುವಕರೇ. ಯುವಕರನ್ನು ಗುರುತಿಸಬೇಕೆಂಬ ಉದ್ದೇಶದಿಂದ ಸಿನಿಮಾರಂಗಕ್ಕೆ ಬಂದಿದ್ದೇನೆ ಎಂದರು.

ಅದೇ ರೀತಿ ನಿರ್ದೇಶಕರಾದ ಹರಿ ಸಂತೋಷ್, ಭರ್ಜರಿ ಚೇತನ್, ರಜತ್ ರವಿ ಶಂಕರ್, ನಟ ರಾಜವರ್ಧನ್, ವಿಕ್ಕಿ ವರುಣ್, ರಾಕ್​ಲೈನ್ ವಂಕಟೇಶ್ ಪುತ್ರ ಯತೀಶ್ ವೆಂಕಟೇಶ್ ಸೇರಿ ಹಲವರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.   ಇನ್ನು ತಾಂತ್ರಿಕ ವರ್ಗದಲ್ಲಿ ಎಸ್ ಪ್ರದೀಪ್ ವರ್ಮಾ ಅವರ ಸಂಗೀತ, ದೇವೇಂದ್ರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಹರಿ ಸಂತೋಶ್ ಸಾಹಿತ್ಯ, ಕಾಂತರಾಜು ಕಡ್ಡಿಪುಡಿ ಸಂಭಾಷಣೆ ಬರೆದಿದ್ದಾರೆ. ಸಾಯಿ ಚರಣ್ ಮತ್ತು ಆರ್ ಲೋಹಿತ್ ನಾಯ್ಕ್​ ಸಹ ನಿರ್ದೇಶನ ಮಾಡಿದ್ದಾರೆ. ಕುಂಗ್ ಫು ಚಂದ್ರು ಸಾಹಸ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಕನ್ನಡ ಹುಡುಗನ ಹಿಂದಿ ವೆಬ್‌ಸೀರೀಸ್‌ – ಮೇರಿ ಪಡೋಸಾನ್‌ಗೆ ಭರಪೂರ ಮೆಚ್ಚುಗೆ

ಒಂದೇ ದಿನ ಎಪಿಸೋಡ್‌ಗೆ ದಾಖಲೆ ವೀಕ್ಷಣೆ

 

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಒಂದಷ್ಟು ನಿರೀಕ್ಷೆ ಹೆಚ್ಚಿರುವುದು ಗೊತ್ತೇ ಇದೆ. ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ ಮಾಲಿವುಡ್‌ ಕೂಡ ಈಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತಾಗಿದೆ. ಈಗಾಗಲೇ ಕನ್ನಡ ಸಿನಿಮಾಗಳು ಜೋರು ಸದ್ದು ಮಾಡಿರುವುದೇ ಪರಭಾಷಿಗರೂ ಕನ್ನಡದತ್ತ ತಿರುಗುತಿರುವುದು ಕಾರಣ. ಕನ್ನಡದ ಅನೇಕ ನಿರ್ದೇಶಕರು, ನಟ,ನಟಿಯರು ಪರಭಾಷೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಆ ಸಾಲಿಗೆ ಕನ್ನಡದ ಯುವ ನಿರ್ದೇಶಕರೊಬ್ಬರು ಬಾಲಿವುಡ್‌ನಲ್ಲಿ ಎಂಟ್ರಿಕೊಟ್ಟು, ಸೈ ಎನಿಸಿಕೊಂಡಿದ್ದಾರೆ.


ಹೌದು, ಧಾರಾವಾಡ ಮೂಲದ ಮಂಜು ನಂದನ್‌ ಈಗ ಬಾಲಿವುಡ್‌ನಲ್ಲಿ ವೆಬ್‌ಸೀರೀಸ್‌ ಮಾಡಿದ್ದಾರೆ. ಆ ಹೊಸ ವೆಬ್‌ಸೀರೀಸ್‌ಗೆ “ಮೇರಿ ಪಡೋಸಾನ್”‌ ಎಂದು ನಾಮಕರಣ ಮಾಡಲಾಗಿದೆ. ಸದ್ಯಕ್ಕೆ ಈ ವೆಬ್‌ ಸೀರೀಸ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಹತ್ತು ಎಪಿಸೋಡ್‌ಗಳ ಪೈಕಿ ಒಂದು ಎಪಿಸೋಡ್‌ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ತಮ್ಮ ನಿರ್ದೇಶನದ ಹಿಂದಿ ವೆಬ್‌ಸೀರೀಸ್‌ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಮಂಜುನಂದನ್, “ಇದೊಂದು ಲವ್‌ ಕಾಮಿಡಿ ಜಾನರ್.‌ ಈಗಿನ ವೆಬ್‌ಸೀರೀಸ್‌ಗೆ ತಕ್ಕಂತಹ ಕಥೆಯನ್ನಿಟ್ಟುಕೊಂಡು ಮಾಡಲಾಗಿದೆ. ಈ ವೆಬ್‌ಸೀರೀಸ್‌ನಲ್ಲಿ ಬಾಲಿವುಡ್‌ ಕಲಾವಿದರು ಕಾಣಿಸಿಕೊಂಡಿದ್ದಾರೆ. ಮುಸ್ಕಾನ್‌ ಶರ್ಮ, ವಿಹಾನ್‌ ಗೋಯೆಲ್‌, ಸ್ವಾತಿ ಶರ್ಮ, ಜಸ್ವೀಲ್‌ ಅರೋರ ಇತರರು ನಟಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಈ ವೆಬ್‌ಸೀರೀಸ್‌ ಕೇವಲ ಒಂದು ಎಪಿಸೋಡ್‌ ಒಂದೇ ದಿನದಲ್ಲಿ ಎರಡು ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಇನ್ನು, ವಿಹಾನ್‌ ಗೋಯೆಲ್‌ ಕಥೆಯ ಜೊತೆಗೆ ಸಂಕಲನವನ್ನೂ ಮಾಡಿದ್ದಾರೆ. ನಾನು ನಿರ್ದೇಶನದ ಜೊತೆಗೆ ಪ್ರೊಡಕ್ಷನ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಶಿವು ನವಲಿಮಠ್‌ ಮತ್ತು ಪೌಲ್‌ ಕ್ಯಾಮೆರಾ ಹಿಡಿದಿದ್ದಾರೆ.


ಈ ವೆಬ್‌ಸೀರೀಸ್‌ ನಿರ್ದೇಶಕ ಮಂಜುನಂದನ್‌ ಬಗ್ಗೆ ಹೇಳುವುದಾದರೆ, ಈ ಮೊದಲು ಹಿಂದಿಯಲ್ಲಿ ಆಲ್ಬಂ ಸಾಂಗ್‌ ಮಾಡಿದ್ದರು. ನಂತರದ ದಿನಗಳಲ್ಲಿ, ಅಲ್ಲೇ ಒಂದಷ್ಟು ಮಂದಿಯ ಪರಿಚಯವಾಗಿ, ಬಾಲಿವುಡ್‌ ಜನರ ಸಂಪರ್ಕ ಬೆಳೆಸಿಕೊಂಡು ಈ ವೆಬ್‌ಸೀರೀಸ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೊಂದು ವಿಶೇಷವೆಂದರೆ, ಈ ವೆಬ್‌ಸೀರೀಸ್‌ ಅನ್ನು, ಕನ್ನಡದಲ್ಲೂ ಮಾಡುವ ಯೋಚನೆ ನಿರ್ದೇಶಕರಿಗಿದೆ. ಅಂದಹಾಗೆ, ಈ “ಮೇರಿ ಪಡೋಸಾನ್” ವೆಬ್‌ಸೀರೀಸ್‌ ಮಹಾರಾಷ್ಟ್ರದ ಅಂಬೋಲಿಯ ರೆಸಾರ್ಟ್‌ವೊಂದರಲ್ಲಿ ಹದಿನೈದು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಇನ್ನೊಂದು ವಿಶೇಷವೆಂದರೆ, ಕಲಾವಿದರನ್ನು ಹೊರತುಪಡಿಸಿ ಈ ವೆಬ್‌ಸೀರೀಸ್‌ನಲ್ಲಿ ಬಹುತೇಕ ಕನ್ನಡಿಗರೇ ಸೇರಿ ಕೆಲಸ ಮಾಡಿರುವುದು ವಿಶೇಷ.

Categories
ಸಿನಿ ಸುದ್ದಿ

ಸಂತೋಷ್ ನಿರ್ದೇಶನದ ‘ಕ್ಯಾಂಪಸ್ ಕ್ರಾಂತಿ’ಗೆ ಪವರ್ ಸ್ಟಾರ್ ಬೆಂಬಲ

ಗಡಿಭಾಗದ ಕ್ರೈಮ್‌ ಥ್ರಿಲ್ಲರ್‌ ಕತೆಯಲ್ಲಿದೆ ಕನ್ನಡದೊಂದಿಗಿನ ಸೆಂಟಿಮೆಂಟ್ 

ಯುವ ನಿರ್ದೇಶಕ ಸಂತೋಷ್‌ ಕುಮಾರ್‌ ನಿರ್ದೇಶನದ “ಕ್ಯಾಂಪಸ್ ಕ್ರಾಂತಿ’ ಚಿತ್ರವೀಗ ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ಹಂತಕ್ಕೆ ಕಾಲಿಟ್ಟಿದೆ. ಈ ಹಂತದಲ್ಲಿ ಚಿತ್ರತಂಡ ಟೈಟಲ್‌ ಲಾಂಚ್‌ ಮೂಲಕ ಸದ್ದು ಮಾಡಿದೆ. ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಟೈಟಲ್‌ ಲಾಂಚ್‌ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರವಿಶಂಕರ್‌ ಗುರೂಜಿ ಅವರ ಆರ್ಟ್‌ಆಫ್‌ ಲಿವಿಂಗ್‌ ಆಶ್ರಮದಲ್ಲಿ ಇತ್ತೀಚೆಗೆ ಪುನೀತ್‌ ರಾಜ್‌ಕುಮಾರ್‌ ಅವರು ‘ಯುವರತ್ನ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲೇ ಚಿತ್ರತಂಡ ಅಲ್ಲಿಗೆ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ʼಕ್ಯಾಂಪಸ್‌ ಕ್ರಾಂತಿʼ ಚಿತ್ರದ ಟೈಟಲ್‌ ಪೋಸ್ಟರ್‌ ಲಾಂಚ್‌ ಮಾಡುವ ಮೂಲಕ ಶುಭ ಕೋರಿದರು.

ನಿರ್ದೇಶಕ ಸಂತೋಷ್ ಕುಮಾರ್

“ಬಿಂದಾಸ್‌ ಗೂಗ್ಲಿʼ ಹಾಗೂ ʼಸ್ಟೂಡೆಂಟ್ಸ್‌ʼ ಚಿತ್ರಗಳ ನಂತರವೀಗ ಸಂತೋಷ್‌ ಕುಮಾರ್‌ ಆಕ್ಷನ್‌ ಕಟ್‌ ಹೇಳಿದ ಮೂರನೇ ಚಿತ್ರ  “ಕ್ಯಾಂಪಸ್‌ ಕ್ರಾಂತಿʼ. ಚಿತ್ರದ ನಿರ್ದೇಶನ ಜತೆಗೆ ಸಂತೋಷ್ ಹಿಂದಿಯಲ್ಲೂ ಒಂದು ಆಲ್ಬಂ ಸಾಂಗ್ ವೊಂದನ್ನು ನಿರ್ದೇಶಿಸಿ, ಹೊರ ತಂದಿದ್ದಾರೆ. ಅದರ ಜತೆಗೀಗ ಲಾಕ್ ಡೌನ್ ಸಮಯದಲ್ಲಿ ಕತೆ, ಚಿತ್ರಕತೆ ಬರೆದು ‘ಕ್ಯಾಂಪಸ್ ಕ್ರಾಂತಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಕಾಲೇಜು ಸುತ್ತು ನಡೆಯುವ ಕತೆ. ಹಾಗಂತ ಕನ್ನಡ ಚಿತ್ರರಂಗಕ್ಕೆ ಇಂತಹ ಕತೆಗಳೇನು ಹೊಸದಲ್ಲ. ಕಾಲೇಜು ಲವ್ ಸ್ಟೋರಿ ಕತೆಗಳು ಬೆಳ್ಳಿತೆರೆಯಲ್ಲಿ ಬೇಕಾದಷ್ಟು ಬಂದಿವೆ. ಹಾಗೆ ನೋಡಿದರೆ, ಪ್ರತಿ ಸಿನಿಮಾದಲ್ಲೂ ಇಂತಹ ಕಾಲೇಜು ಕತೆ ಇರುವುದು ಸರ್ವೇ ಸಾಮಾನ್ಯ. ಆದರೆ “ಕ್ಯಾಂಪಸ್ ಕ್ರಾಂತಿ’ ವಿಭಿನ್ನ ಕತೆಯ ಚಿತ್ರ. ಆ ಕತೆ ಹೇಗೆ ವಿಭಿನ್ನ ಅಂತ ಹೇಳ್ತಾರೆ ಕೇಳಿ ನಿರ್ದೇಶಕ ಸಂತೋಷ್ ಕುಮಾರ್.

ಇದು ನಾನು ಲಾಕ್ ಡೌನ್ ಸಮಯದಲ್ಲಿ ಬರೆದ ಕತೆ. ಕರ್ನಾಟಕ ಹಾಗು ಮಹಾರಾಷ್ಟ್ರ ಗಡಿ ಭಾಗದ ಕಾಲೇಜ್ ಒಂದರಲ್ಲಿ ನಡೆದಿದ್ದು. ನಿಜವಾಗಿಯೂ ನಡೆದಿದ್ದು. ಆ ಕಾಲೇಜ್ ನಲ್ಲಿ ತುಂಬಾ ವರ್ಷಗಳಿಂದ ಕನ್ನಡ ರಾಜ್ಯೋತ್ಸವ ನಡೆಯುವುದಿಲ್ಲ. ಅದಕ್ಕೆ ಕಾರಣ ಯಾಕೆ ಎನ್ನುವುದು ಸಸ್ಪೆನ್ಸ್. ಆದರೆ ಅಲ್ಲಿ ಒಂದಷ್ಟು ಕೊಲೆಗಳು ನಡೆಯುತ್ತವೆ. ಆ ಕೊಲೆಗಳಿಗೂ, ರಾಜ್ಯೋತ್ಸವ ನಡೆಯದಿರುವುದಕ್ಕೂ ಸಂಬಂಧ ಇದೀಯಾ? ಇದ್ದರೆ ಅದಕ್ಕೆ ಕಾರಣ ಏನು? ಅದರ ಸುತ್ತ ನಡೆಯುವ ಕತೆ ಇದು. ಇದು ಸಸ್ಪೆನ್ಸ್ ಥ್ರಿಲ್ಲರ್ ಕತೆ. ಅದರ ಜತೆಗೆ ಒಂದು ಕ್ಯೂಟ್ ಪ್ರೇಮ ಕತೆಯೂ ಇದೆ’

– ಸಂತೋಷ್ ಕುಮಾರ್, ನಿರ್ದೇಶಕ

ಬಹುತೇಕ ಹೊಸಬರೇ ಚಿತ್ರದ ಕಲಾವಿದರು. ಒಂದೆರೆಡು ಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಇರುವ ಆರ್ಯ ಹಾಗೂ ಅಲಂಕಾರ್‌ ಈ ಚಿತ್ರಕ್ಕೆ ಹೀರೋ ಆಗಿದ್ದಾರೆ. ಹಾಗೆಯೇ ಈಶಾನಾ ಹಾಗೂ ಆರತಿ ಪಡುಬಿದ್ರಿ ನಾಯಕಿಯರು. ಅವರೊಂದಿಗೆ ವಾಣಿಶ್ರೀ, ಹನುಮಂತೇ ಗೌಡ್ರು ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಕೊರೋನಾ ಆತಂಕದ ಮಧ್ಯೆಯೇ ಚಿತ್ರ ತಂಡ ಸೂಕ್ತ ರಕ್ಷಣೆಯೊಂದಿಗೆ ೪೫ ದಿನಗಳ ಕಾಲದ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಹಾಗೆಯೇ ರೀ ರೆಕಾರ್ಡಿಂಗ್‌ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವೂ ಮುಗಿಸಿಕೊಂಡು ಈಗ ಆಡಿಯೋ ರಿಲೀಸ್‌ ಗೆ ಪ್ಲಾನ್‌ ಮಾಡಿಕೊಂಡಿದೆ.

 

ಹೊಸ ವರ್ಷ ಜನವರಿ ತಿಂಗಳಲ್ಲಿ ಆಡಿಯೋ ಲಾಂಚ್‌ ಮಾಡಲು ತಯಾರಿ ನಡೆಸಿದೆ. ಹಾಗೆಯೇ ಚಿತ್ರದ ರಿಲೀಸ್‌ ಗೂ ಸಿದ್ದತೆ ನಡೆದಿದೆ. ಎಲ್ಲವೂ ಅಂದುಕೊಂಡಂತಾದರೆ ಫೆಬ್ರವರಿ ಅಥವಾ ಮಾರ್ಚ್‌ ತಿಂಗಳಲ್ಲಿ ಚಿತ್ರ ರಿಲೀಸ್‌ ಗ್ಯಾರಂಟಿ ಎನ್ನುತ್ತಾರೆ ನಿರ್ದೇಶಕ ಸಂತೋಷ್ ಕುಮಾರ್.‌ ಚಿತ್ರಕ್ಕೆ ವಿ. ಮನೋಹರ್‌ ಸಂಗೀತ ನೀಡಿದ್ದಾರೆ. ಪಿಕೆಎಚ್‌ ದಾಸ್‌ ಛಾಯಾಗ್ರಣವಿದೆ. ಪ್ಯಾಷನ್‌ ಮೂವೀ ಮೇಕರ್ಸ್‌ ಮೂಲಕ ಸಂತೋಷ್‌ ಅವರೇ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ನಿರ್ದೇಶಕರಾಗಿ ಅವರಿಗಿದು ಮೂರನೇ ಚಿತ್ರ. ಹಾಗೆಯೇ ನಿರ್ಮಾಪಕರಾಗಿ ಎರಡನೇ ಚಿತ್ರ. ಈ ಸಲ ಸಕ್ಸಸ್‌ ಪಡೆಯಲೇ ಬೇಕು ಎನ್ನುವ ಉತ್ಸಾಹದಲ್ಲಿದ್ದಾರೆ ಸಂತೋಷ್.‌ ಆಲ್‌ ದಿ ಬೆಸ್ಟ್‌ ಸಂತೋಷ್.

Categories
ಸಿನಿ ಸುದ್ದಿ

ಥಿಯೇಟರ್‌ಗೆ ಶೇ.100 ಅವಕಾಶ ಕೊಡಿ – ಸರ್ಕಾರಕ್ಕೆ ನೆನಪಿರಲಿ ಪ್ರೇಮ್‌ ಮನವಿ

ಹೋಟೆಲ್‌, ಪಬ್‌, ರೆಸ್ಟೋರೆಂಟ್‌ಗೆ ಇಲ್ಲದ ನಿಯಮ ಚಿತ್ರರಂಗಕ್ಕೆ ಯಾಕೆ?

ಕೊರೊನಾ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಷ್ಟೇ ಅಲ್ಲ, ಬದುಕನ್ನೇ ಕಸಿದುಕೊಂಡಿದೆ. ಅನೇಕ ಕ್ಷೇತ್ರಗಳು ನೆಲಕಚ್ಚಿದ್ದು ಉಂಟು. ಸರ್ಕಾರ ಕೆಲವು ಉದ್ಯಮ ನಡೆಸಲು ಅವಕಾಶ ಕೊಟ್ಟರೆ, ಇನ್ನೂ ಕೆಲವು ಉದ್ಯಮಗಳಿಗೆ ನಿಯಮ ಸೂಚನೆ ನೀಡಿ ಅವಕಾಶ ಕೊಟ್ಟಿದೆ. ಅದರಲ್ಲಿ ಚಿತ್ರರಂಗವೂ ಒಂದು. ಎಲ್ಲಾ ಉದ್ಯಮಕ್ಕೂ ಸರ್ಕಾರ ದುಡಿಮೆಗೆ ಅವಕಾಶ ಕಲ್ಪಿಸಿದೆ. ಆದರೆ, ಚಿತ್ರರಂಗಕ್ಕೆ ಮಾತ್ರ ಶೇ.೫೦ರಷ್ಟು ಅವಕಾಶ ಕಲ್ಪಿಸಿದೆ. ಸ್ಟಾರ್‌ ಸಿನಿಮಾಗಳನ್ನು ಹೊರತುಪಡಿಸಿದರೆ ಚಿತ್ರಮಂದಿರಗಳು ಶೇ.೬೦, ೫೦ ಮಾತ್ರ ಭರ್ತಿ ಆಗುತ್ತವೆ. ಈಗ ಶೇ.೫೦ಕ್ಕೆ ಮಾತ್ರ ಅನುಮತಿ ಕೊಡಲಾಗಿದೆ.

ಸ್ಟಾರ್‌ ಸಿನಿಮಾ ರಿಲೀಸ್‌ ಆದರೂ, ಶೇ.೫೦ರಷ್ಟು ಮಾತ್ರ ಅವಕಾಶ. ಹೀಗಾಗಿ ದೊಡ್ಡ ಬಜೆಟ್‌ನ ಸಿನಿಮಾಗಳು ಬಿಡುಗಡೆ ಮಾಡಲು ಹಿಂಜರಿಯುತ್ತಿವೆ. ಕೋಟಿಗಟ್ಟಲೆ ಬಂಡವಾಳ ಹೂಡಿ, ಈಗ ರಿಲೀಸ್‌ ಮಾಡಿಬಿಟ್ಟರೆ, ಶೇ.೫೦ರಷ್ಟು ಜನ ಬರಲು ಅವಕಾಶವಿದೆ. ಇನ್ನರ್ಧ ನಿರ್ಮಾಪಕರಿಗೂ ನಷ್ಟ. ಥಿಯೇಟರ್‌ ಮಾಲೀಕರಿಗೂ ಸಮಸ್ಯೆ. ಹೀಗಾಗಿ, ಶೇ.೧೦೦ ರಷ್ಟು ಅನುಮತಿ ಕೊಟ್ಟಾಗಲಷ್ಟೇ ಸ್ಟಾರ್‌ ಸಿನಿಮಾಗಳು ರಿಲೀಸ್‌ ಆಗುತ್ತವೆ. ಉಳಿದಂತೆ ಸಣ್ಣ ಬಜೆಟ್‌ನ ಸಿನಿಮಾಗಳು, ಹೊಸಬರ ಚಿತ್ರಗಳು ಕೂಡ ಥಿಯೇಟರ್‌ ಕಡೆ ಮುಖ ಮಾಡುತ್ತವೆ.

ಈ ನಿಟ್ಟಿನಲ್ಲಿ ನಟ ನೆನಪಿರಲಿ ಪ್ರೇಮ್‌ ಕೂಡ ಸರ್ಕಾರಕ್ಕೆ ಒಂದಷ್ಟು ಮನವಿ ಮಾಡಿದ್ದಾರೆ. “ಸರ್ಕಾರ ಶೇ.೫೦ರಷ್ಟು ಮಾತ್ರ ಚಿತ್ರಮಂದಿರಕ್ಕೆ ಅನುಮತಿ ನೀಡಿದೆ. ಹೀಗಾಗಿ ಮನರಂಜನೆ ಕ್ಷೇತ್ರ ಮಂಕಾಗಿದೆ. ಬೇರೆ ಉದ್ಯಮಗಳಿಗೆ ಪೂರ್ಣ ಅನುಮತಿ ನೀಡಲಾಗಿದೆ. ಆದರೆ, ಚಿತ್ರರಂಗಕ್ಕೆ ಆ ಅವಕಾಶವಿಲ್ಲ. ಬಾರ್‌, ಪಬ್‌, ರೆಸ್ಟೋರೆಂಟ್‌, ಹೋಟೆಲ್‌ಗಳಿಗೆ ಇಲ್ಲಿದ ನಿಯಮ ಚಿತ್ರರಂಗಕ್ಕೆ ಯಾಕೆ? ಈ ಫಿಫ್ಟಿ ಎಂಬ ಕಾನ್ಸೆಪ್ಟ್‌ನಿಂದ ಚಿತ್ರರಂಗ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ಸರ್ಕಾರ ಶೇ.೧೦೦ರಷ್ಟು ಅನುಮತಿ ಕೊಟ್ಟರೆ, ಚಿತ್ರರಂಗ ಖಂಡಿತವಾಗಲೂ ಮೊದಲಿನಿಂತೆ ಎದ್ದು ನಿಲ್ಲುತ್ತದೆ. ಹಾಗಾಗಿ, ಇತ್ತ ಗಮನಿಸುವ ಮೂಲಕ ಚಿತ್ರೋದ್ಯಮದ ಕಡೆಯೂ ಒಲವು ತೋರಬೇಕು ಎಂದು ನೆನಪಿರಲಿ ಪ್ರೇಮ್‌ ಮನವಿ ಮಾಡಿದ್ದಾರೆ.


ಪ್ರೇಮ್‌ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಪ್ರೇಮ್‌ ಅವರಿಗೂ ಈ ಚಿತ್ರ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಅವರೇ ಹೇಳುವಂತೆ, ಅದೊಂದು ಹೊಸ “ಗೀತಾಂಜಲಿ” ಅನ್ನುತ್ತಾರೆ. “ಪ್ರೇಮಂ ಪೂಜ್ಯಂ” ಕಾಯಾ ವಾಚಾ ಮನಸ ಮಾಡಿರುವ ಚಿತ್ರ. ಸದ್ಯಕ್ಕೆ ಚೆನೈನಲ್ಲಿ ಎಸ್‌ಎಫ್‌ಎಕ್ಸ್‌ ಕೆಲಸ ನಡೆಯುತ್ತಿದೆ. ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇರುವುದಾಗಿ ಹೇಳುವ ಪ್ರೇಮ್‌ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಕೊರೊನಾ ಹಾವಳಿ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾದ ಬಳಿಕ ಹೊಸ ಘೋಷಣೆ ಮಾಡುವ ಉತ್ಸಾಹದಲ್ಲೂ ಇದ್ದಾರೆ.

Categories
ಸಿನಿ ಸುದ್ದಿ

ಕಾಸರವಳ್ಳಿ ಚಿತ್ರಕ್ಕೆ ರೋಮ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಸಿನಿಮಾಗೆ ಸಿಕ್ಕ ಗೌರವ

 

ಗಿರೀಶ್‌ ಕಾಸರವಳ್ಳಿ ನಿರ್ದೇಶನದ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರಕ್ಕೆ ಪ್ರತಿಷ್ಠಿತ ರೋಂ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಫರ್ಧಾತ್ಮಕ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ರೋಂನಲ್ಲಿ ನಡೆದ ಏಷ್ಯಾಟಿಕಾ ಚಿತ್ರೋತ್ಸವದಲ್ಲಿ ಡಿಸೆಂಬರ್‌ ೨೧ರಂದು ಈ ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ.

ಗಿರೀಶ್‌ ಕಾಸರವಳ್ಳಿ

“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರ ಖ್ಯಾತ ಸಾಹಿತಿ, ಗೀತ ರಚನೆಕಾರ ಜಯಂತ್‌ ಕಾಯ್ಕಿಣಿ ಅವರ “ಹಾಲಿನ ಮೀಸೆ” ಕಥೆ ಆಧರಿಸಿದೆ. ಆ ಕಥೆಯಲ್ಲಿ ಬರುವ ಪಾತ್ರವೊಂದನ್ನುಬೆಳೆಸಿ, ಸಮಕಾಲೀನ ಸಾಮಾಜಿಕ ಜ್ವಲಂತ ದ್ವಂದ್ವವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ದಾಸ ಶ್ರೇಷ್ಠ ಪುರಂದರ ದಾಸರ ಹಾಡೊಂದರ ಶೀರ್ಷಿಕೆ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಈ ದ್ವಂದ್ವವನ್ನು ಅತ್ಯಂತ ಮಾರ್ಮಿಕವಾಗಿ ಸೂಚಿಸುತ್ತದೆ. ಸುಖವನ್ನು ಅರಸುತ್ತಾ ಹೋಗುವ ಈ ಕಾಲದ ನಮ್ಮ ಪಯಣ ಮನಶಾಂತಿಗೆ ಎರವಾಗುತ್ತಿದೆಯೇ ಅನ್ನುವ ಈ ದಾಸರ ಪದದಲ್ಲಿ ವ್ಯಕ್ತವಾಗುವ ಆತಂಕವೂ ಚಿತ್ರದ ಸತ್ವವಾಗಿದೆ.

ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ೬೦ರ ದಶಕದ ಕನಸು ಮತ್ತು ಈ ಕಾಲದ ತಳಮಳ ಇವೆರೆಡೂ ಕಥಾನಾಯಕನ ಮನೋಗತಿಯನ್ನು ರೂಪಿಸುತ್ತಿರುವ ನೆಲೆಗಳು. ಕಾಲಘಟ್ಟ ಭಿನ್ನವಾದಂತೆ ಪರಿಸರವೂ ಬದಲಾಗುತ್ತದೆ ಅನ್ನೋದೇ ಕಥೆ.  “ದ್ವೀಪ” ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಹೆಚ್.ಎಂ.ರಾಮಚಂದ್ರ ಹಾಲ್ಕೆರೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎಸ್.ಆರ್.ರಾಮಕೃಷ್ಣ ಅವರ ಸಂಗೀತವಿದೆ. ಎಸ್.ಗುಣ ಶೇಖರನ್‌ ಸಂಕಲನವಿದೆ. ಅಪೂರ್ವ ಕಾಸರವಳ್ಳಿ ಜಂಟಿ ನಿರ್ದೇಶನವಿದೆ. ಅನನ್ಯ ಕಾಸರವಳ್ಳಿ ಅವರ ವಸ್ತ್ರ ವಿನ್ಯಾಸವಿದ್ದು, ಸಾವಂತ್‌, ಕಿರಣ್‌ ಕುಮಾರ್‌ ಹಾಗೂ ಯಶವಂತ ಯಾದವ್‌ ಅವರ ಸಹನಿರ್ದೇನವಿದೆ. ಬಾಸುಮ ಕೊಡಗು ಅವರ ಕಲಾನಿರ್ದೇಶನ ರಮೇಶ್‌ ಬಾಬು ಅವರ ಪ್ರಸಾಧನ ಇದೆ. ಮೋಹನ್‌ ಕಾಮಾಕ್ಷಿ ಅವರ ತಾಂತ್ರಿಕ ನೆರವು ಚಿತ್ರಕ್ಕಿದೆ.

ಶಿವಕುಮಾರ್‌, ನಿರ್ಮಾಪಕ

 

ಚಿತ್ರದಲ್ಲಿ ದ್ರುಶಾ ಕೊಡಗು, ಆರಾಧ್ಯ, ಪ್ರವರ್ಥ ರಾಜು ಮತ್ತ ನಲ್ಮೆ. ಉಳಿದ ಮುಖ್ಯ ಪಾತ್ರಗಳಲ್ಲಿ ಪವಿತ್ರ, ಮಾಲತೇಶ್‌, ಕೆ.ಜಿ.ಕೃಷ್ಣಮೂರ್ತಿ, ಚೆಸ್ವಾ, ರಶ್ಮಿ, ಬಿ.ಎಂ.ವೆಂಕಟೇಶ್‌, ಪುಷ್ಪಾ ರಾಘವೇಂದ್ರ, ಸುಜಾತ ಶೆಟ್ಟಿ ಇತರರು ಇದ್ದಾರೆ.
೨೦೧೦ ರಲ್ಲಿ “ಕೂರ್ಮಾವತಾರ” ಚಿತ್ರದ ಬಳಿಕ ಸಾಕ್ಷ್ಯಚಿತ್ರ ನಿರ್ಮಾಣದತ್ತ ಮುಖಮಾಡಿದ್ದ ಗಿರೀಶ್‌ ಕಾಸರವಳ್ಳಿ ಅವರು ಹತ್ತು ವರ್ಷಗಳ ಬಳಿಕ ಒಂದೊಳ್ಳೆಯ ಸಿನಿಮಾ ಮಾಡಿದ್ದು, ಇದು ಅವರ ೧೫ನೇ ಚಿತ್ರ. ಇನ್ನು, ಹಲವಾರು ಯಶಸ್ವಿ ಧಾರಾವಾಹಿ ನಿರ್ಮಿಸಿರುವ ನಿರ್ಮಾಪಕ ಎಸ್.ವಿ.ಶಿವಕುಮಾರ್‌ ಅವರ ಮೂರನೇ ಸಿನಿಮಾ ಇದು. ಸಿನಿಮಾ ರೆಡಿಯಾಗಿದ್ದು, ಕೊರೊನಾ ಸಮಸ್ಯೆ ಬಗೆಹರಿದ ಬಳಿಕ ಚಿತ್ರಮಂದಿರದಲ್ಲಿ ತೆರೆಗೆ ಬರಲಿದೆ.

 

Categories
ಸಿನಿ ಸುದ್ದಿ

ಎಲ್ಲಾ ಬಿಟ್ಟು ಅಡಿಕೆ ಸುಲಿಯುವ ಕೆಲಸ ಶುರು ಮಾಡಿದ್ರಾ ಆ ನಟಿ ?

ಶಿರಸಿಯಲ್ಲಿದ್ದಾರೆ ರಾಬರ್ಟ್‌ ಸುಂದರಿ ಆಶಾ ಭಟ್‌

ʼರಾರ್ಬಟ್‌ʼ ಸುಂದರಿ ರಜೆಯ ಮಜಾದಲ್ಲಿದ್ದಾರೆ. ಬೆಂಗಳೂರಿನಲ್ಲಿದ್ದು ಸಿನಿಮಾ ಶೂಟಿಂಗ್‌, ಡಬ್ಬಿಂಗ್‌ ಅಂತೆಲ್ಲ ಯಾವುದೇ ಒತ್ತಡಕ್ಕೆ ಸಿಲುಕದೆ ರಜೆಯ ಮಜಾ ಸವಿಯಲು ಊರು ಕಡೆ ಮುಖ ಮಾಡಿದ್ದಾರೆ. ಸದ್ಯ ಅವರೀಗ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿದ್ದಾರೆ. ಅದು ಅವರ ಅಜ್ಜಿಯ ಮನೆ ಊರು. ಶಿರಸಿ ಅಂದ್ರೆ ಗೊತ್ತಲ್ವಾ ಮಲೆನಾಡಿನ ತವರೂರು. ಬಹುತೇಕ ಆಡಿಕೆ ತೋಟಗಳ ನಾಡು. ಹಾಗೆಯೇ ಮೋಹಕ ನೋಟದ ಗದ್ದೆ ಬಯಲು. ಅವುಗಳ ನಡುವೆ ಸುತ್ತಾಡುವುದು, ಅಡಿಕೆ ಸುಲಿಯುವುದು, ಕಾಡು ಬೀಡು ಸುತ್ತಾಡುತ್ತಾ ಕಣ್ಣು ತಂಪಾಗಿಸಿಕೊಳ್ಳುವುದೇ ಆನಂದ.

ಸದ್ಯಕ್ಕೆ ಅಂತಹದೇ ಅದ್ಬುತ ಅನುಭದಲ್ಲಿದ್ದಾರೆ ನಟಿ ಆಶಾಭಟ್.‌ ಆ ಅನುಭವದ ವಿಧ ವಿಧ ಪೋಟೋಗಳನ್ನು ಸೋಷಲ್‌ ಮೀಡಿಯಾದಲ್ಲಿ ಅಪಲೋಡ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಮಾಡೆಲ್‌ ಕಮ್‌ ನಟಿ ಆಶಾ ಭಟ್.‌ ಅಡಿಕೆ ಸುಲಿಯುವ ವಿಡಿಯೋ ಶೇರ್ ಮಾಡಿರುವ ಅಶಾ ಭಟ್, ‘ಅಜ್ಜಿ ಮನೆಯಲ್ಲಿ ಅಡಿಕೆ ಸುಲಿಯುವ ಮಜಾನೇ ಬೇರೆ’ ಎಂದು ಬರೆದುಕೊಂಡಿದ್ದಾರೆ.

 

 

Categories
ಸಿನಿ ಸುದ್ದಿ

ಕನ್ನಡಕ್ಕೆ ಬಂದ ಶಿಲ್ಪಾಶೆಟ್ಟಿ! ಶುಗರ್‌ ಫ್ಯಾಕ್ಟರಿ ಸೇರಿದ ಗ್ಲಾಮರ್‌ ಬೆಡಗಿ

ಜನವರಿ 28ರಿಂದ ಶೂಟಿಂಗ್‌ ಶುರು

ಶಿಲ್ಪಾ ಶೆಟ್ಟಿ

“ಲವ್‌ ಮಾಕ್ಟೇಲ್‌” ಖ್ಯಾತಿಯ ಕೃಷ್ಣ ಅಭಿನಯದ “ಶುಗರ್‌ ಫ್ಯಾಕ್ಟರಿ” ಸಿನಿಮಾ ಬಗ್ಗೆ ಗೊತ್ತೇ ಇದೆ. ಚಿತ್ರವನ್ನು ದೀಪಕ್‌ ಅರಸ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮೂವರು ನಾಯಕಿಯರು. ಈಗಾಗಲೇ ಸೊನಾಲ್ ಮಾಂತೆರೊ ಹಾಗೂ ಅದ್ವಿತಿ ಶೆಟ್ಟಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಅವರ ಜೊತೆಗೆ ಇನ್ನೊಬ್ಬ ನಾಯಕಿಯ ಆಯ್ಕೆ ಮಾತ್ರ ಆಗಿರಲಿಲ್ಲ. ಈಗ ಮೂರನೇ ನಾಯಕಿಯೂ ಸಿಕ್ಕಾಗಿದೆ. ಅದು ಬೇರಾರೂ ಅಲ್ಲ, ಶಿಲ್ಪಾಶೆಟ್ಟಿ. ಅರೇ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ನಾಯಕಿಯಾಗಿ ಬರುತ್ತಿದ್ದಾರಾ? ಈ ಪ್ರಶ್ನೆ ಎದುರಾಗಬಹುದು. ಆದರೆ, ಆ ಶಿಲ್ಪಾಶೆಟ್ಟಿ ಅಲ್ಲವೇ ಅಲ್ಲ. “ಶುಗರ್‌ ಫ್ಯಾಕ್ಟರಿ”ಗೆ ಎಂಟ್ರಿ ಕೊಡುತ್ತಿರುವ ನಾಯಕಿಯ ಹೆಸರಿದು. ಶಿಲ್ಪಾಶೆಟ್ಟಿ ಈ ಸಿನಿಮಾಗೆ ನಾಯಕಿಯಾಗಿದ್ದು, ಈಗಾಗಲೇ ಕನ್ನಡ, ತುಳು ಭಾಷೆಯ ಕೆಲವು ಚಿತ್ರಗಳಲ್ಲಿ ಹಾಗೂ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಜನವರಿ 28ರಿಂದ ಬೆಂಗಳೂರಿನಲ್ಲಿ “ಶುಗರ್‌ ಫ್ಯಾಕ್ಟರಿ” ಚಿತ್ರೀಕರಣ ಆರಂಭವಾಗಲಿದೆ. ಅಂದಹಾಗೆ, ಈ ಚಿತ್ರ ಬಾಲಮಣಿ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌ ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ಚೇತನ್ ಕುಮಾರ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಇತರರು ಸಾಹಿತ್ಯ ಬರೆದಿದ್ದಾರೆ. ಕಬೀರ್ ರಫಿ ಸಂಗೀತ ನೀಡುತ್ತಿರುವ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ರೈತರು ನಿಜವಾದ ವೀರರು-ರೈತರ ದಿನಕ್ಕೆ ಶುಭ ಕೋರಿದ  ಸ್ಟಾರ್ಸ್‌

ರೈತರ ಉತ್ಪನ್ನಗಳಿಗೆ ಬೆಲೆ ಸಿಕ್ಕಾಗಲೆ ರೈತ ದಿನಕ್ಕೆ ನಿಜ ಅರ್ಥ, ಶುಭಾಶಯ ಕೋರುವ ಸಂದರ್ಭದಲ್ಲೆ ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ನಟರು

 

ಇಂದು ರಾಷ್ಟ್ರೀಯ ರೈತ ದಿನಾಚರಣೆ. ನಿರಂತರ ದುಡಿಮೆಯಲ್ಲಿ ತೊಡಗುವ ನಾಡಿನ ಸಮಸ್ತ ರೈತರಿಗೆ ಕನ್ನಡ ಹಲವು ನಟರು ಶುಭಾಶಯ ಕೋರಿದ್ದಾರೆ. ರೈತರು ನಿಜವಾದ ವೀರರಾಗಿದ್ದಾರೆ. ಯಾಕೆಂದರೆ, ಅವರ ಸಮರ್ಪಣೆ ಮತ್ತು ಶ್ರಮದಿಂದ. ಬಂಜರು ಭೂಮಿಯನ್ನು ಆಹಾರವನ್ನು ಉತ್ಪಾದಿಸುವ ಭೂಮಿಯಾಗಿ ಪರಿವರ್ತಸಿ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ, ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ. ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ ಅಂತ ನಟ ದರ್ಶನ್‌ ಟ್ವಿಟ್‌ ಮಾಡಿದ್ದಾರೆ.

ಹಾಗೆಯೇ ನಟ ನಿಖಿಲ್‌ ಕುಮಾರ್‌ ಕೂಡ ರೈತರ ದಿನಕ್ಕೆ ಶುಭಾಶಯ ಕೋರಿದ್ದಾರೆ.
ʼ ದೇಶದ ಬೆನ್ನೆಲುಬು ರೈತ. ಎಲ್ಲರಿಗೂ ಅನ್ನದಾತರಾಗಿರುವ ಸಮಸ್ತ ರೈತ ಕುಲಕ್ಕೆ ರೈತ ದಿನದ ಶುಭಾಶಯ. ಬೆವರು ಸುರಿಸಿ ಬೆಳೆ ಬೆಳೆಯುವ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಗೌರವ ದೊರಕುವಂತಹ ದಿನಗಳು ಬಂದಾಗಲೇ ರೈತ ದಿನಾಚರಣೆ ಸಾರ್ಥಕʼ ಎಂದು ನಿಜವಾದ ಅರ್ಥʼ ಎಂಬುದಾಗಿ ನಿಖಿಲ್‌ ಟ್ವಿಟ್‌ ಮಾಡಿದ್ದಾರೆ.

ನಟ ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ ಕೂಡ ರೈತರ ದಿನಕ್ಕೆ ಶುಭ ಕೋರಿದ್ದಾರೆ. ರೈತ ದೇಶದ ಬೆನ್ನೆಲುಬು, ರೈತ ದುಡಿದರೆ ಅನ್ನ, ನಾಡಿಗೆ ಅನ್ನ ನೀಡುವ ರೈತರ ಎಲ್ಲಾ ಸಂಕಷ್ಟಗಳು ಮುಂದಿನ ದಿನಗಳಲ್ಲಾದರೂ ಬಗೆ ಹರೆದು, ಸಂತಸ ಕಾಣಲಿ” ಎಂದು ಅವರು ಟ್ವಿಟ್‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ಐರಾವನ್‌ ಟೀಸರ್‌ ಗೆ ಅದ್ಭುತ ರೆಸ್ಪಾನ್ಸ್, ಜೆಕೆ ಅವರಿಗೆ ಸಿಗುತ್ತಾ ದೊಡ್ಡದೊಂದು ಬ್ರೇಕ್‌ ?

ಅರ್ಜುನನ ಪುತ್ರನ ಅವತಾರ ಹೊತ್ತ ಕಾರ್ತಿಕ್‌ ಜಯರಾಂ, ಐದು ಭಾಷೆಗಳಲ್ಲಿ ಐರಾವನ್

ಜೆಕೆ ಅಲಿಯಾಸ್‌ ಕಾರ್ತಿಕ್‌ ಜಯರಾಂ ಈಗಾದ್ರೂ ಇನ್ನೊಂದು ಲೆವೆಲ್‌ಗೆ ಹೋಗ್ತಾರಾ? ಗೊತ್ತಿಲ್ಲ, ಅದರೆ ಅವರ ಫ್ಯಾನ್ಸ್‌ ಜತೆಗೆ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಹಾಗೊಂದು ಕುತೂಹಲ ಈಗ ಶುರುವಾಗಿದೆ. ಅದಕ್ಕೆ ಕಾರಣ ʼಐರಾವನ್‌ʼ ಚಿತ್ರ. ಒಂದಷ್ಟು ಗ್ಯಾಪ್‌ ನಂತರ ನಟ ಕಾರ್ತಿಕ್‌ ಜಯರಾಂ ಸಾಕಷ್ಟು ತಾಳ್ಮೆ ಮತ್ತು ಸಿದ್ದತೆಯೊಂದಿಗೆ ಮಾಡಿದ ಚಿತ್ರ ಇದು. ಚಿತ್ರದ ಶೀರ್ಷಿಕೆಯೇ ಇಲ್ಲಿ ವಿಭಿನ್ನ ಮತ್ತು ವಿಶೇಷ. ಐರಾವನ್‌ ಅಂದ್ರೇನು? ಇದು ಕನ್ನಡದ ಸಿನಿ ಪ್ರೇಕ್ಷಕರಿಗೆ ಇರುವ ಪ್ರಶ್ನೆ.

ಚಿತ್ರ ತಂಡ ಹೇಳುವ ಪ್ರಕಾರ ʼಐರಾವನ್‌ʼ ಅಂದ್ರೆ ಅರ್ಜುನನ ಪುತ್ರನ ಹೆಸರಂತೆ. ಅದನ್ನೇ ಚಿತ್ರ ತಂಡ ಯಾಕೆ ಟೈಟಲ್‌ ಆಗಿಸಿಕೊಂಡಿದೆ ಎನ್ನುವ ಕುತೂಹಲದ ಪ್ರಶ್ನೆಗೆ ಅದು ಕತೆಯೊಳಗಿನ ಸಸ್ಪೆನ್ಸ್‌ ಎನ್ನುತ್ತಿದೆ ಚಿತ್ರ ತಂಡ. ಅದರೆ ಅದನ್ನೇ ಯಾಕೆ ಟೈಟಲ್‌ ಆಗಿಸಿಕೊಂಡಿದ್ದು ಎನ್ನುವುದಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದು ಕಾರಣವಂತೆ.

ಹೌದು, ಈ ಚಿತ್ರ ಕನ್ನಡ, ತಮಿಳು, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಅಷ್ಟು ಭಾಷೆಗಳಿಗೂ ಕನೆಕ್ಟ್‌ ಆಗಲಿ ಅಂತಲೇ ಚಿತ್ರತಂಡ ಸಾಕಷ್ಟು ರಿಸರ್ಚ್‌ ಮಾಡಿ, ಆಲೋಚಿಸಿ, ಐರಾವನ್‌ ಎನ್ನುವ ಪದವನ್ನೆ, ಟೈಟಲ್‌ ಅಗಿಸಿಕೊಂಡಿದೆಯಂತೆ. ಅದೆನೇ ಇರಲಿ, ʼಐರಾವನ್‌ʼಮೂಲಕ ಈಗ ಜೆಕೆ ಬಹುಭಾಷೆಗಳಲ್ಲೂ ಹೀರೋ ಆಗಿ ಎಂಟ್ರಿಯಾಗುತ್ತಿರುವುದು ವಿಶೇಷ.

ಹಾಗಂತ ಜೆಕೆಗೆ ಬಹುಭಾಷೆಗಳ ಬಣ್ಣದ ಜಗತ್ತು ಹೊಸದಲ್ಲ. ಹಾಗೆ ನೋಡಿದರೆ, ನಟ ಕಾರ್ತಿಕ್‌ ಜಯರಾಂ ಅವರಿಗೆ ಕನ್ನಡಕ್ಕಿಂತ ಹೆಚ್ಚು ಜನಪ್ರಿಯತೆ ಸಿಕ್ಕಿದ್ದೇ ಹಿಂದಿ ಕಿರುತೆರೆಯ ಮೂಲಕ. ” ಸೀ ಯಾ ಕೆ ರಾಮ್‌ʼ ಧಾರಾವಾಹಿ ದೊಡ್ಡ ಗೆಲುವು ಕಂಡ ನಂತರ ಜೆಕೆ, ಹಿಂದಿ ಕಿರುತೆರೆಯಲ್ಲಿ ಮನೆ ಮಾತಾದರು. ಆಗಲೇ ಕನ್ನಡದ ಸಿನಮಾ ಮಂದಿ ಜೆಕೆ ಅವರತ್ತ ತಿರುಗಿ ನೋಡಿದರು. ಹಾಗಂತ ಕನ್ನಡದ ಸಿನಿಮಾ ನಿರ್ಮಾಪಕರು ಅವರಿಗೆ ರೆಡ್‌ ಕಾರ್ಪೆಟ್‌ ಹಾಕಿ ಕರೆದರು ಅಂತಲ್ಲ. ಒಂದಷ್ಟು ಆವಕಾಶ ಬರುವಂತೆ ಅಯಿತು. ಅದರೂ ಸಕ್ಸಸ್‌ ಸಿನಿಮಾದಲ್ಲಿ ದೊಡ್ಡ ಸಕ್ಸಸ್‌ ಕಾಣದೆ ಒಂಥರ ನೋವಿನ ಭಾವದಲ್ಲಿದ್ದ ಜೆಕೆ ಈಗ ಗಾಯಗೊಂಡ ಹುಲಿಯಂತೆ ಘರ್ಜಿಸಲು ರೆಡಿ ಅಗಿದ್ದಾರೆ. ಸೋಮವಾರವಷ್ಟೇ ಲಾಂಚ್‌ ಅಗಿರುವ ಟೀಸರ್‌ ನೋಡಿದರೆ ಜೆಕೆ, ಕಿರುತೆರೆಯ ಹಾಗೆಯೇ ಸಿನಿಮಾದಲ್ಲೂ ದೊಡ್ಡ ಹವಾ ಸೃಷ್ಟಿಸುವುದು ಗ್ಯಾರಂಟಿ ಎನಿಸಿದೆ.


ಐರಾವನ್‌ ಟೀಸರ್‌ ಮೇಕಿಂಗ್‌ ನಲ್ಲಿ ಗ್ರಾಂಡ್‌ ಆಗಿದೆ. ಹಾಗೆಯೇ ಲುಕ್‌ನಲ್ಲಿ ಜಬರ್‌ದಸ್ತ್‌ ಆಗಿದೆ. ಜೆಕೆ ಡಿಫೆರೆಂಟ್‌ ಗೆಟಪ್‌ನಲ್ಲಿ ಅಬ್ಬರಿಸಿದ್ದಾರೆ. ಟೀಸರ್‌ ನಲ್ಲಿನ ಅವರ ಎಂಟ್ರಿಯೇ ಜೋರಾಗಿದೆ. ಕತೆ ಸಸ್ಪೆನ್ಸ್‌, ಥ್ರಿಲ್ಲರ್‌
ಎನ್ನುವುದನ್ನು ಟೀಸರ್‌ ಹೇಳುತ್ತದೆ. ಜೆಕೆ ರಗಡ್‌ ಲುಕ್‌ ನೋಡಿದರೆ, ಐರಾವನ್‌ ಜೆಕೆಗೆ ಬ್ರೇಕ್‌ ನೀಡುವುದು ಗ್ಯಾರಂಟಿ ಎನಿಸುತ್ತದೆ. ಸಿನಿಮಾ ಜತೆಗೆ ಟೀಸರ್‌ ಕುರಿತು ಮಾತನಾಡುವ ನಟ ಜೆಕೆ, ತಮ್ಮ ನೆಚ್ಚಿನ ನಟ ಸುದೀಪ್‌ ಅವರು ಟೀಸರ್‌ ಲಾಂಚ್‌ ಮಾಡಿದಕ್ಕೆ ಧನ್ಯವಾದ ಹೇಳಿದರು. ಹಾಗೆಯೇ ಚಿತ್ರದ ಬಗ್ಗೆ ಅತೀವ ವಿಶ್ವಾಸ ವ್ಯಕ್ತಪಡಿಸಿದರು.

” ಇದೊಂದು ಕಠಿಣ ಪ್ರಯತ್ನದ ಫಲ. ಸಾಕಷ್ಟು ಶ್ರಮ ವಹಿಸಿ ಈ ಸಿನಿಮಾ ಮಾಡಿದ್ದೇವೆ. ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇಡೀ ಟೀಮ್‌ ವರ್ಕ್‌ ಅತ್ಯಾದ್ಭುತವಾಗಿದೆ. ಅವರೆಲ್ಲರ ಶ್ರಮದಿಂದಲೇ ಸಿನಿಮಾ ರಿಚ್‌ ಅಗಿ ಬಂದಿದೆʼ ಎನ್ನುವ ಮೂಲಕ ಕುತೂಹಲ ಮೂಡಿಸಿದರು.

ನಿರಂತರ ಪ್ರೋಡಕ್ಷನ್‌ ಮೂಲಕ ನಿರ್ಮಾಣವಾದ ಸಿನಿಮಾ ಇದು. ಯುವ ನಿರ್ದೇಶಕ ರಾಮ್‌ ರಂಗ, ಕತೆ, ಚಿತ್ರಕತೆ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ. ಎಸ್.‌ ಪ್ರದೀಪ್‌ ವರ್ಮ ಸಂಗೀತ ನಿರ್ದೇಶನ ಇದೆ. ದೇವೇಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಸಂಕಲನ, ಕುಂಗ್ಪು ಚಂದ್ರು ಸಾಹಸವಿದೆ. ಚಿತ್ರಕ್ಕೆ 45ದಿನಗಳ ಚಿತ್ರೀಕರಣ ನಡೆದಿದೆ. ಇದೀಗ ಚಿತ್ರಕ್ಕೆ ಕಿಚ್ಚ ಸುದೀಪ್‌ ಸಾಥ್‌ ನೀಡಿರುವುದು ಚಿತ್ರ ತಂಡಕ್ಕೆ ದೊಡ್ಡ ಬೆಂಬಲವಾಗಿದೆ.

error: Content is protected !!