Categories
ಸಿನಿ ಸುದ್ದಿ

ಹೈದ್ರಬಾದ್‌ಗೂ ಹಬ್ಬಿದೆ ದಚ್ಚು `ಕ್ರಾಂತಿ’ ಕಿಚ್ಚು- ಡಿಬಾಸ್ ಜೊತೆ ಇಂಡಿಯನ್ ಸ್ಟ್ರಾಂಗ್‌ಮ್ಯಾನ್ ಸೆಣಸಾಟ !

ಕ್ರಾಂತಿ' ಚಾಲೆಂಜಿಂಗ್ ಚಕ್ರವರ್ತಿಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ಡಿಬಾಸ್ ಸಿನಿಕರಿಯರ್‌ನ 55ನೇ ಚಿತ್ರ. ಟೈಟಲ್‌ನಿಂದಲೇ ಮಾಯಲೋಕದಲ್ಲಿ ನಯಾ ಮೇನಿಯಾ ಶುರುವಿಟ್ಟುಕೊಂಡಿರುವ ಕ್ರಾಂತಿ’ ಸಿನಿಮಾ ಈಗಾಗಲೇ ಬಾರ್ಡರ್ ಕ್ರಾಸ್ ಮಾಡಿ ಹವಾ ಎಬ್ಬಿಸಿರೋದು ಮಾತ್ರ ಸುಳ್ಳಲ್ಲ. ಸದ್ದುಗದ್ದಲವಿಲ್ಲದೇ ಸೈಲೆಂಟಾಗಿಯೇ ಸುನಾಮಿ ಎಬ್ಬಿಸುತ್ತಿರುವ `ಕ್ರಾಂತಿ’, ಬೆಳ್ಳಿತೆರೆಗೆ ಅಪ್ಪಳಿಸುವಾಗ ಚಂಡಮಾರುತದ ಅಲೆ ಎಬ್ಬಿಸೋದು ಸತ್ಯ ಎನ್ನುವುದಕ್ಕೆ ನೂರೆಂಟು ಉದಾಹರಣೆಗಳನ್ನು ಕೊಡಬಹುದು. ಅದನ್ನು ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ಪ್ರಸ್ತಾಪಿಸ್ತೇವೆ. ಸದ್ಯಕ್ಕೆ, ಡಿಬಾಸ್ ಕ್ರಾಂತಿಯ ಕಿಚ್ಚು ಹೈದ್ರಬಾದ್ ಅಂಗಳಕ್ಕೂ ಹಬ್ಬಿರುವುದು ಮತ್ತು ಸ್ಯಾಂಡಲ್‌ವುಡ್ ಸುಲ್ತಾನನ ಜೊತೆ ಸೆಣಸಾಡುತ್ತಿರುವ ಆ ಚಾಂಪಿಯನ್ ಕುರಿತ ಸಖತ್ ಸುದ್ದಿಯನ್ನು ಹೊತ್ತು ತಂದಿದ್ದೇವೆ.

ಡಿಬಾಸ್ ಅಭಿಮಾನಿಗಳಿಗೆ ಕ್ರಾಂತಿ' ಸಿನಿಮಾ ಬಗ್ಗೆ ಕಂಪ್ಲೀಟ್ ಅಪ್‌ಡೇಟ್ ತಿಳಿದಿರುತ್ತೆ. ಆದ್ರೂ ಕೂಡ ಸ್ಯಾಂಡಲ್‌ವುಡ್ ಬೆಳ್ಳಿತೆರೆಯ ಯಜಮಾನ್ರು, ಬಾಕ್ಸ್ಆಫೀಸ್ ಪಾಲಿನ ಸುಲ್ತಾನರ ಅಪ್‌ಕಮ್ಮಿಂಗ್ ಸಿನಿಮಾದ ಅಪ್‌ಡೇಟ್ ಕುರಿತು ಗಾಂಧಿನಗರಕ್ಕೆ ಒಂದು ರಿಪೋರ್ಟ್ ಸಲ್ಲಿಸಬೇಕು. ಹೀಗಾಗಿ,ಕ್ರಾಂತಿ’ಯ ಅಂಗಳದಲ್ಲಿ ಏನ್ ನಡೀತಿದೆ, ಕ್ರಾಂತಿ'ಯ ಹವಾ ಹೆಂಗಿದೆ,ಕ್ರಾಂತಿ’ ಅಖಾಡಕ್ಕೆ ಹೊಸದಾಗಿ ಯಾರು ಎಂಟ್ರಿಕೊಟ್ಟರು, `ಕ್ರಾಂತಿ’ ಯಾವ್ ಹಂತದಲ್ಲಿದೆ? ಹೀಗೆ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕು ಮತ್ತು ತಿಳಿಸಬೇಕು ಎನ್ನುವ ಕಾರಣಕ್ಕೆ ಈ ಸುದ್ದಿ.

ಕ್ರಾಂತಿ' ಸೆಟ್ಟೇರಿದ ಕ್ಷಣದಿಂದಲೇ ಡಿಬಾಸ್ ಫ್ಯಾನ್ಸ್ ನ ಮಾತ್ರವಲ್ಲ ಗಾಂಧಿನಗರದ ಮಂದಿಯನ್ನೂ ಕುರ್ಚಿಯ ತುದಿಗೆ ತಂದು ಕೂರಿಸಿರುವ ಸಿನಿಮಾ. ಕ್ರೇಜ್‌ಗೆ ಅಪ್ಪನಪ್ಪನಪ್ಪನ ಪಟ್ಟ ಅಲಂಕರಿಸಿರುವ ಚಕ್ರವರ್ತಿಯನ್ನು ಹಾಕಿಕೊಂಡು ಸಿನಿಮಾ ತೆಗೆಯುತ್ತಿರುವುದರಿಂದಕ್ರಾಂತಿ’ ಮೇಲಿನ ನಿರೀಕ್ಷೆ ಕನ್ಯಾಕುಮಾರಿಯವರೆಗೂ ವಿಸ್ತರಣೆಗೊಂಡಿದ್ದಾಗಿದೆ. ಮತ್ತೆ ಒಂದಾಗಿರುವ ಯಜಮಾನ ಚಿತ್ರತಂಡ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾದಲ್ಲೇ ಕ್ರಾಂತಿ' ಮಾಡ್ತೀವಿ ಎಂದು ಸಿಡಿದೆದ್ದು ಫೀಲ್ಡಿಗಿಳಿದಿದ್ದಾಗಿದೆ. ಬುಲ್‌ಬುಲ್ ಜೋಡಿ ಮತ್ತೆ ಒಂದಾಗಿರುವುದು ಕೂಡಕ್ರಾಂತಿ’ ಮೇಲಿನ ಕೌತುಕವನ್ನು ಹೆಚ್ಚಿಸಿದೆ.

ಕಂಠೀರವ ಸ್ಟುಡಿಯೋ, ಟೊರಿನೋ ಫ್ಯಾಕ್ಟ್ರಿ ಸೇರಿದಂತೆ ಬೆಂಗಳೂರಿನ ಹಲವು ಸ್ಟುಡಿಯೋಗಳಲ್ಲಿ ಅದ್ದೂರಿ ಸೆಟ್ ಹಾಕಿ ಕ್ರಾಂತಿ'ಯ ಕೆಂಡದಂತಹ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಿಕೊಂಡ ಫಿಲ್ ಟೀಮ್ ಈಗ ಹೈದ್ರಬಾದ್‌ಗೆ ಲಗ್ಗೆ ಇಟ್ಟಿದೆ. ರಾಮೋಜಿ ಫಿಲ್ಮ್ಸ್ ಸಿಟಿಯಲ್ಲಿ ಕೋಟಿ ಸೆಟ್‌ನಲ್ಲಿ ಕಾದಾಟದ ಸನ್ನಿವೇಶಗಳನ್ನು ಕ್ಯಾಪ್ಚರ್ ಮಾಡಿಕೊಳ್ಳುವಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ’ ಕಾಂಪಿಟೇಷನ್‌ನಲ್ಲಿ ಮೂರು ಭಾರಿ ಚಾಂಪಿಯನ್ ಆದಂತಹ, ಗ್ಲೋಬಲ್ ಪವರ್ ಲಿಫ್ಟಿಂಗ್'ನಲ್ಲಿ ಐದು ಭಾರಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಂತಹರಾಘವೇಂದ್ರ ಎಚ್.ಎಸ್’ ಅವರು `ಕ್ರಾಂತಿ’ ಚಿತ್ರತಂಡ ಸೇರಿಕೊಂಡಿದ್ದಾರೆ. ಡಿಬಾಸ್ ಜೊತೆ ಖಳನಾಯಕನಾಗಿ ಕಾದಾಡುತ್ತಿದ್ದಾರೆ. ರಾಮೋಜಿಯಲ್ಲಿ ಇವರಿಬ್ಬರ ಕಾಂಬಿನೇಷನ್ ಕಾಳಗದ ಚಿತ್ರೀಕರಣ ನಡೆಯುತ್ತಿದೆ. ಉಳಿದಂತೆ ಇತರೆ ಖಡಕ್ ವಿಲನ್‌ಗಳ ಖದರ್ ಇನ್ನಷ್ಟೇ ಹೊರಬೀಳಬೇಕಿದೆ.

ಇನ್ನೂ ಕ್ರಾಂತಿ' ಚಿತ್ರದ ಅಪ್‌ಡೇಟ್‌ಗಾಗಿ ಕಾಯ್ತಿರುವವರಿಗೆ ಸಾರಥಿ ಯಾವ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಾರೆ? ಯಾವ ಕ್ಷೇತ್ರವನ್ನು ಮುಖ್ಯವಾಗಿಟ್ಟುಕೊಂಡು ಹೊಸ ಕ್ರಾಂತಿ ಮಾಡಲು ಹೊರಟಿದ್ದಾರೆ? ಈ ಕೂತೂಹಲದ ಪ್ರಶ್ನೆ ಮೂಡಿರುತ್ತೆ. ಇದಕ್ಕೆ ಮುಹೂರ್ತದ ಸಂದರ್ಭದಲ್ಲೇ ಖಾಸಗಿ ಮಾಧ್ಯಮಕ್ಕೆ ಮಾತನಾಡುತ್ತಾ ದಚ್ಚು ಹೇಳಿಕೊಂಡಿದ್ದಾರೆ.ಯಜಮಾನ’ ಸಿನಿಮಾದಲ್ಲಿ ಅಡುಗೆ ಎಣ್ಣೆಯ ವಿಚಾರದಲ್ಲಿ ಕ್ರಾಂತಿಯಾಗಿದ್ದನ್ನು ನೀವೆಲ್ಲರೂ ನೋಡಿದ್ದೀರಿ. ಈಗ `ಕ್ರಾಂತಿ’ ಸಿನಿಮಾ ಮೂಲಕ ಅಕ್ಷರ ಕ್ರಾಂತಿ ಆಗೋದನ್ನು ನೋಡ್ತೀರ ಎಂದು ಭರವಸೆ ಕೊಟ್ಟಿದ್ದಾರೆ. ಸರಸ್ವತಿಯ ಪುತ್ರ ವಿ.ಹರಿಕೃಷ್ಣ ಹಾಗೂ ತಂಡ ಸೇರಿಕೊಂಡು ಚಾಲೆಂಜಿಂಗ್ ಚಕ್ರವರ್ತಿಯ ಮುಖೇನ ರೆವಲ್ಯೂಷನ್ ತರಲಿಕ್ಕೆ ಹೊರಟಿದ್ದಾರೆ. ಬಾಕ್ಸ್ಆಫೀಸ್ ಸುಲ್ತಾನ್ ಸಿನಿಮಾಗೆ ನಿರ್ಮಾಪಕಿ ಶೈಲಜಾ ನಾಗ್ ಕೋಟಿ ಕೋಟಿ ಬಂಡವಾಳ ಸುರಿಯುತ್ತಿದ್ದಾರೆ.

ಸದ್ಯಕ್ಕೆ ಕ್ರಾಂತಿ' ಚಿತ್ರೀಕರಣ ಹೈದ್ರಬಾದ್‌ನಲ್ಲಿ ಭರದಿಂದ ಸಾಗುತ್ತಿದೆ. ಅಲ್ಲಿಂದ ಶೂಟಿಂಗ್ ಮುಗಿಸಿಕೊಂಡು ಮತ್ಯಾವ ಸ್ಥಳಕ್ಕೆ ಚಿತ್ರತಂಡ ಲಗ್ಗೆ ಇಡಲಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೆ,ಕ್ರಾಂತಿ’ ಫಿಲ್ಮ್ ಟೀಮ್‌ನ ಸ್ಪೀಡ್ ನೋಡ್ತಾಯಿದ್ರೆ ದಚ್ಚು ಬರ್ತ್ ಡೇಗೆ ಟೀಸರ್ ಬಿಡುಗಡೆಯಾಗೋದು ಪಕ್ಕಾ ಎನಿಸ್ತಿದೆ. ಯಜಮಾನರ ಕೋಟ್ಯಾಂತರ ಭಕ್ತರು ಹಬ್ಬ ಮಾಡಿ ಸಂಭ್ರಮಿಸಲಿಕ್ಕೆ ಮತ್ತು ಕಾಲರ್ ಪಟ್ಟಿ ಎಗರಿಸಲಿಕ್ಕೆ `ಕ್ರಾಂತಿ’ಟೀಸರ್ ಅಥವಾ ಮೇಕಿಂಗ್ ವಿಡಿಯೋ ಸಾಥ್ ಕೊಡಲಿದೆ ಎನ್ನುವ ವಿಶ್ವಾಸವಿದೆ. ಜೊತೆಗೆ ದಚ್ಚು ಹುಟ್ಟುಹಬಬ್ಬದಂದು ಮತ್ತೊಂದು ಹೊಸ ಸಿನಿಮಾದ ಅನೌನ್ಸ್ ಮೆಂಟ್ ನಿರೀಕ್ಷೆ ಮಾಡಬಹುದು. ದಾಸನ ಆಪ್ತಸ್ನೇಹಿತರ ವಲಯದ ಒಬ್ಬರಿಗೆ ಡಿಬಾಸ್ ಕಾಲ್‌ಶೀಟ್ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಆ ಬಗ್ಗೆ ಬರ್ತ್ಡೇ ದಿನದಂದು ಬಿಗ್‌ಅಪ್‌ಡೇಟ್ ಹೊರಬೀಳಲಿದೆ. ಫೆಬ್ರವರಿ ೧೬ರ ದಿನಗಣನೆ ಶುರುವಾಗಿದ್ದು, ಚಕ್ರವರ್ತಿ ಬರ್ತ್ಡೇ ಆಚರಣೆಗೆ ಅಭಿಮಾನಿ ಬಳಗ ಎದುರುನೋಡ್ತಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕೆವಿಎನ್ ಪ್ರೊಡಕ್ಷನ್ ಜೊತೆ ರಾಜಮೌಳಿ ಚಿತ್ರ; ಆರ್ ಆರ್ ಆರ್ ಬಳಗದ ಕನ್ನಡ ಮಾತೇ ಚೆನ್ನ…!

ಸಿನಿಮಾದ ಅಂಗಳದ ಯಾವುದೇ ಗಲ್ಲಿ ಗಲ್ಲಿಯಲ್ಲಿಯೂ ಈಗ ಬರೀ RRR ಸಿನಿಮಾದ್ದೇ ಜಪ. ಯೂಟ್ಯೂಬ್ ನಲ್ಲಿ ಬೆಂಕಿ ಬಿರುಗಾಳಿ ಸೃಷ್ಟಿಸ್ತಿರುವ RRR ಟ್ರೇಲರ್ ನೋಡಿ ಚಿತ್ರಪ್ರೇಮಿಗಳು ಬಹುಪರಾಕ್ ಅಂತಿದ್ದಾರೆ. ಜಕ್ಕಣ್ಣ ಈಸ್ ಗ್ರೇಟ್.. ರಿಯಲ್ ಹೀರೋ ಅಂತಾ ಶಹಬ್ಬಾಸ್ ಗಿರಿ ಕೊಡ್ತಿದ್ದಾರೆ. ಅದ್ಧೂರಿ.. ವೈಭೋಗದ RRR ಟ್ರೇಲರ್ ಲಾಂಚ್ ಇವೆಂಟ್ ಗೆ ಜಕ್ಕಣ್ಣಗಾರು ತಮ್ಮ ಬಳಗದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. RRR ಬಳಗ ಮಾಧ್ಯಮದವರ ಜೊತೆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು.

ಕನ್ನಡದಲ್ಲಿ ಮಾತಾಡಿದ ರಾಜಮೌಳಿ ಟೀಂ!


RRR ಟ್ರೇಲರ್ ಇವೆಂಟ್ ಗೆ ಹಾಜರಾಗಿದ್ದ ರಾಜಮೌಳಿ, ಜೂನಿಯರ್ ಎನ್ ಟಿಆರ್, ರಾಮ್ ಚರಣ್ ತೇಜ್, ಆಲಿಯಾ ಭಟ್ ಎಲ್ಲರೂ ಕನ್ನಡದಲ್ಲಿ ಮಾತು ಆರಂಭಿಸಿದರು. ಅದ್ರಲ್ಲೂ ತಾರಕ್ ಹೇಳಿಕೊಟ್ಟ ಕನ್ನಡ ಪಾಠ ಕಲಿತ ಆಲಿಯಾ ಎಲ್ಲರಿಗೂ ನಮಸ್ಕಾರ ಅಂತಾ ಕನ್ನಡದಲ್ಲಿ ಹೇಳಿದ್ದು ಎಲ್ಲರನ್ನೂ ಚಕಿತಗೊಳಿಸಿತು.

ಕನ್ನಡದಲ್ಲಿ ಇಡೀ ಸಿನಿಮಾ ಡಬ್ ಮಾಡಿದ ತಾರಕ್!
RRR ಟ್ರೇಲರ್ ನಲ್ಲಿ ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ಕನ್ನಡದಲ್ಲಿಯೇ ಡಬ್ ಮಾಡಿದ್ದಾರೆ. ಇವರಿಬ್ಬರ ಕನ್ನಡ ವಾಯ್ಸ್ ಕೇಳಿ ಕನ್ನಡಿಗರು ಖುಷಿ. ಕೇವಲ ಟ್ರೇಲರ್ ನಲ್ಲಿ ಮಾತ್ರವಲ್ಲ ಇಡೀ ಸಿನಿಮಾವನ್ನೂ ಕನ್ನಡದಲ್ಲಿಯೇ ಡಬ್ ಮಾಡಿದ್ದೇನೆ ಅಂತಾ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಜೂನಿಯರ್ ಎನ್ ಟಿಆರ್ ನಗುತ್ತಲೇ ಉತ್ತರಿಸಿದರು.

ಕನ್ನಡ ಸಿನಿಮಾ ಮಾಡ್ತಾರೆ ರಾಮ್!
ರಾಜಮೌಳಿ ಡೈರೆಕ್ಷನ್ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಕನ್ನಡ ಸಿನಿಮಾ ಮಾಡ್ತೇನೆ. ಒಳ್ಳೆ ಕಥೆ ಹಾಗೂ ಡೈರೆಕ್ಟರ್ ಸಿಕ್ಕರೆ ಕನ್ನಡ ಸಿನಿಮಾ ಮಾಡ್ತೇನೆ ಅಂತಾ ಮನದಾಳದ ಮಾತು ಹಂಚಿಕೊಂಡರು.

ಕೆವಿಎನ್ ಜೊತೆ ರಾಜಮೌಳಿ ಸಿನಿಮಾ!
RRR ಸಿನಿಮಾದ ಕನ್ನಡ ವಿತರಣೆ ಹಕ್ಕು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ KVN ಪಾಲಾಗಿದೆ. ಕೋಟಿ ಕೋಟಿ ಕೊಟ್ಟು RRR ವಿತರಣೆ ಹಕ್ಕು ಪಡೆದಿರುವ KVN ಜೊತೆ ರಾಜಮೌಳಿ ಸಿನಿಮಾ ಮಾಡ್ತಾರಾ ಅನ್ನೋ ಪತ್ರಕರ್ತರೊಬ್ಬರ ಪ್ರಶ್ನೆ ಜಕ್ಕಣ್ಣಗಾರು, ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ರು.

ಕನ್ನಡ ರೈಟ್ಸ್ ಕಾಂಪಿಟೇಷನ್ ಇತ್ತು !

RRR ಸಿನಿಮಾದ ಕನ್ನಡ ವಿತರಣೆ ಹಕ್ಕು ಪಡೆಯಲು ದೊಡ್ಡ ಕಾಂಪಿಟೇಷನ್ ಇತ್ತು. ಆ ಕಾಂಪಿಟೇಷನ್ ನಡುವೆ KVN, RRR ಸಿನಿಮಾದ ವಿತರಣೆ ಹಕ್ಕನ್ನು ಖರೀದಿ ಮಾಡಿದೆ. ಈ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೆವಿಎನ್ ವೆಂಕಟ್, ಬಾಹುಬಲಿ ಸಿನಿಮಾವನ್ನು ಕರುನಾಡ ಮಂದಿಗೆ ತೋರಿಸುವ ಇಚ್ಛೆ ಇತ್ತು. ಬಟ್ ಬಾಹುಬಲಿ ಕನ್ನಡದಲ್ಲಿ ಇರಲಿಲ್ಲ. ಆದ್ರೆ RRR ಸಿನಿಮಾದ ಕನ್ನಡದಲ್ಲಿ ಇದೆ. ಹೀಗಾಗಿ ತಾವೇ ಕನ್ನಡ ವಿತರಣೆ ಹಕ್ಕನ್ನು ಎಷ್ಟೇ ಕಾಂಪಿಟೇಷನ್ ಇದ್ರು ಖರೀದಿ ಮಾಡಿದ್ರು.

ಒಟ್ನಲ್ಲಿ RRR ಸಿನಿಮಾ ಅದ್ಧೂರಿಯಾಗಿ ಪ್ರಮೋಷನ್ ಮಾಡ್ತಿದೆ. ಈಗಾಗಲೇ ಸ್ಯಾಂಪಲ್ಸ್ ನಲ್ಲಿ ಸಖತ್ ಸದ್ದು ಮಾಡ್ತಿರುವ RRR ಸಿನಿಮಾ ಜನವರಿ 7ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.

Categories
ಸಿನಿ ಸುದ್ದಿ

‘ಖಾಸಗಿ ಪುಟ’ದಲ್ಲಿ ಅನಾವರಣವಾಯ್ತು ಮನಮುಟ್ಟುವ ಪ್ರೇಮಕಥೆ…ಹೊಸಬರ ಹೊಸ ಪ್ರಯತ್ನದ ‘ಖಾಸಗಿ ಪುಟಗಳು’ ಫಸ್ಟ್ ಲುಕ್ ರಿಲೀಸ್!

ಕನ್ನಡ ಸಿನಿ ಜಗತ್ತಿನಲ್ಲಿ ಹೊಸಬರ ಹೊಸತನದ ಒಂದಷ್ಟು ಸಿನಿಮಾಗಳು ಸದ್ದು ಮಾಡುತ್ತಿವೆ. ಈ ಸಾಲಿಗೆ ‘ಖಾಸಗಿ ಪುಟಗಳು’ ಎಂಬ ಹೊಸಬರ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಕಡಲ ದಡಿಯಲ್ಲಿ ಕುಳಿತು ಎರಡು ಮುದ್ದಾದ ಜೋಡಿಗಳು ಹಸಿವು ನೀಗಿಸಿಕೊಳ್ಳುತ್ತಿರುವ ಮನಮುಟ್ಟುವ ಪೋಸ್ಟರ್ ಕುತೂಹಲದ ಕಾರ್ಮೋಡದಂತಿದೆ.

ಖಾಸಗಿ ಪುಟಗಳು ಎಂಬ ಗಮನಸೆಳೆಯುವ ಈ ಸಿನಿಮಾವನ್ನು ಸಂತೋಷ್ ಶ್ರೀಕಂಠಪ್ಪ ನಿರ್ದೇಶನ ಮಾಡುತ್ತಿದ್ದು, ಇದು ಇವರ ಮೊದಲ ಸಿನಿಮಾವಾಗಿದೆ. ಒಂದಷ್ಟು ಶಾರ್ಟ್‌ಮೂವಿಯಲ್ಲಿ ನಟಿಸಿದ್ದ ವಿಶ್ವ ಹಾಗೂ ಹಿಂದಿಯಲ್ಲಿ ‘ವೈ’ ಅನ್ನುವ ಸಿನಿಮಾವೊಂದರಲ್ಲಿ ನಟಿಸಿರುವ ಶ್ವೇತಾ ಡಿಸೋಜಾ ಈ ಸಿನಿಮಾದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಚೇತನ್‌ ದುರ್ಗಾ, ನಂದಕುಮಾರ್‌, ನಿರೀಕ್ಷಾ ಶೆಟ್ಟಿ, ಮೈಸೂರು ದಿನೇಶ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಮಂಜು ಡಿ ರಾಜ್, ವೀಣಾ ಡಿ ರಾಜ್, ಮಂಜುನಾಥ್ ಡಿಎಸ್ ಖಾಸಗಿ ಪುಟಗಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ವಿಶ್ವಜಿತ್ ರಾವ್ ಛಾಯಾಗ್ರಾಹಣ, ಆಶಿಕ್ ಕುಸುಗೊಳಿ ಸಂಕಲನ, ವಾಸುಕಿ ವೈಭವ್ ಸಂಗೀತ, ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಹಾಗೂ ವಿಶ್ವಜಿತ್ ರಾವ್ ಸಾಹಿತ್ಯ ಸಿನಿಮಾಕ್ಕಿದೆ.

ಉಡುಪಿಯ ಚೆಂದದ ಕರಾವಳಿ ತೀರದಲ್ಲಿ ಹುಟ್ಟುವ ಕಾಲೇಜು ಹುಡುಗರ ಪ್ರೇಮವೇ ಪ್ರಧಾನ ಕಥಾಹಂದರದ ಖಾಸಗಿ ಪುಟಗಳು ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲಿಯೇ ಸಿನಿಮಾ ತಂಡ ಹಾಡುಗಳನ್ನು ರಿಲೀಸ್ ಮಾಡಲಿದೆ.

Categories
ಸಿನಿ ಸುದ್ದಿ

ಬೆಂಗಳೂರಲ್ಲಿ ‘ ಗೆಳೆಯ’ ನ ನೆನೆದು ಜೂನಿಯರ್ ಎನ್ ಟಿ ಆರ್ ಭಾವುಕ !

ನಾನು ಈ ಹಾಡನ್ನು ಪುನೀತ್​ಗಾಗಿ ಎಂದಿಗೂ ಹೇಳಿರಲಿಲ್ಲ. ಇದೇ ಮೊದಲು ಮತ್ತು ಇದೇ ಕೊನೆ. ಈ ಹಾಡನ್ನು ಮತ್ತೆ ಹಾಡುವುದಿಲ್ಲ…

ಗೆಳೆಯ ಪುನೀತ್ ನೆನೆದು ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಭಾವುಕರಾಗಿ ಗೆಳೆಯ ಗೆಳೆಯ… ಅಂತ ಹೇಳಿದ ಹಾಡಿದು. ರಾಜ ಮೌಳಿ ನಿರ್ದೇಶನದ ಬಹು ನಿರೀಕ್ಷಿತ ಆರ್ ಆರ್ ಆರ್ ಜನವರಿ 7 ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಇದರ ಪ್ರಚಾರಕ್ಕಾಗಿ ಇಡೀ ತಂಡ ಶುಕ್ರವಾರ ಬೆಂಗಳೂರಿಗೆ ಆಗಮಿಸಿತ್ತು‌. ನಿರ್ದೇಶಕ ರಾಜ ಮೌಳಿ, ನಿರ್ಮಾಪಕ ದಾನಯ್ಯ, ನಾಯಕ ನಟರಾದ ರಾಮ್ ಚರಣ್ ತೇಜ್, ನಾಯಕಿ ಆಲಿಯಾ ಭಟ್ ಸೇರಿದಂತೆ ಜೂನಿಯರ್ ಎನ್ ಟಿ ಆರ್ ಕೂಡ ಬಂದಿದ್ದರು‌. ಈ‌ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು‌. ಅಪ್ಪು ನೆನೆದು ಭಾವುಕರಾದರು.

ಪುನೀತ್​ ಇಲ್ಲದ ಕರ್ನಾಟಕ ನನಗೆ ಶೂನ್ಯವಾಗಿ ಕಾಣುತ್ತಿದೆ. ಅವರು ಎಲ್ಲೇ ಇದ್ದರೂ ಅವರ ಆಶೀರ್ವಾದ ನನ್ನ ಮೇಲಿರುತ್ತೆ ಎಂದು ಭಾವುಕರಾದರು. ಅವರಿಗಾಗಿ ಚಕ್ರವ್ಯೂಹ ಚಿತ್ರದ ಗೆಳೆಯ ಗೆಳೆಯ ಹಾಡು ಹಾಡಿ ಕಣ್ಣೀರಾದರು. ‘ ನಾನು ಈ ಹಾಡನ್ನು ಪುನೀತ್​ಗಾಗಿ ಎಂದಿಗೂ ಹೇಳಿರಲಿಲ್ಲ. ಇದೇ ಮೊದಲು ಮತ್ತು ಇದೇ ಕೊನೆ. ಈ ಹಾಡನ್ನು ಮತ್ತೆ ಹಾಡುವುದಿಲ್ಲ ಎಂದು ಗೆಳೆಯಾ ಗೆಳೆಯಾ’ ಎಂದು ಹಾಡಿ ಕಣ್ಣಾಲೆಗಳನ್ನು ತೇವ ಮಾಡಿಕೊಂಡರು. ಇನ್ನು ಎನ್​​ಟಿಆರ್​ ಕುಟುಂಬಕ್ಕೂ ಹಾಗೂ ರಾಜ್​ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಪುನೀತ್ ಅವರ ಪಾರ್ಥಿವ ಶರೀರದ ದರ್ಶನಕ್ಕೂ ಜ್ಯೂ.ಎನ್​ಟಿಆರ್ ಆಗಮಿಸಿ, ಗೌರವನ ನಮನ ಸಲ್ಲಿಸಿದ್ದರು. ನಟ ಪುನೀತ್ ಇಲ್ಲದ ಈ ಕ್ಷಣ ಅವರನ್ನು ನೆನೆದು ಜೂನಿಯರ್ ಎನ್ ಟಿಆರ್ ಭಾವುಕರಾಗಿದ್ದಕ್ಕೂ ಕಾರಣ ಇದೆ.

ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯ ಸ್ಟಾರ್​ಗಳ ಜೊತೆಯೂ ಅಪ್ಪು ಸ್ನೇಹ ಹೊಂದಿದ್ದವರು. ಅದೇ ರೀತಿ ಟಾಲಿವುಡ್ ನ ಹೆಸರಾಂತ ನಟ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಜತೆಗು ಅದೇ ಸ್ನೇಹ ಹೊಂದಿದ್ದರು. ಅದೇ ಗೆಳೆತನದ ಮೂಲಕ ಚಕ್ರವ್ಯೂಹ ಚಿತ್ರಕ್ಕೆ ಹಾಡಿದ್ದರು. ಅದೇ ರೀತಿ ಕನ್ನಡದ ಜತೆಗೂ ಜೂನಿಯರ್ ಅವರದ್ದು ಅವಿನಾಭಾವ ನಂಟು. ಅವರ ತಾಯಿ ಕುಂದಾಪುರದವರು‌. ಅದೇ ಕಾರಣಕ್ಕೆ ಅವರಿಗೇನು ಕನ್ನಡ ಹೊಸದಲ್ಲ. ಹಾಗಾಗಿಯೇ ಈಗ ಆರ್ ಆರ್ ಆರ್ ಚಿತ್ರದ ಕನ್ನಡದ ಅವತರಣಿಕೆಗೂ ಅವರದ್ದೇ ವಾಯ್ಸ್ ಡಬ್ ಮಾಡಿದ್ದಾರೆ. ಆ ಬಗ್ಗೆಯೂ ಅವರು ಅಲ್ಲಿ ಮಾತನಾಡಿದರು.

. ‘ ನಾನು ಕನ್ನಡದ ಅವತರಣಿಕೆಗೂ ವಾಯ್ಸ್ ಕೊಡ್ಬೇಕು ಅನ್ನೋದು ರಾಜಮೌಳಿ ಸರ್ ಅವರ ಅಭಿಲಾಶೆ ಆಗಿತ್ತು. ಅವರು ಆಸೆಯಂತೆ ನಾನು ಕನ್ನಡಕ್ಕೆ ಡಬ್ ಮಾಡಲು ಒಪ್ಪಿಕೊಂಡೆ. ಅವರಿಗೂ ಕನ್ನಡ ಗೊತ್ತು. ನಂಗೂ ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು. ಅಮ್ಮ ನಿಂದಲೇ ಕಲಿತಿದ್ದು. ಅವರು ಕೂಡ ಇದಕ್ಕೆ ಸಪೊರ್ಟ್ ಮಾಡಿದರು. ಹಾಗೆಯೇ ವರದರಾಜ್ ಅವರು ನಮಗೆ ಹೆಲ್ಪ್ ಮಾಡಿದ್ರು. ಅದರಿಂದಲೇ ನಾನು ಡಬ್ ಮಾಡಿದ್ದೇನೆ. ಟ್ರೇಲರ್ ನೋಡಿದ್ದೇನೆ‌ . ಚೆನ್ನಾಗಿ ಬಂದಿದೆ.’ ಎನ್ನುತ್ತಾ ನಗು ಬೀರಿದರು.
ಅಮ್ಮ ಕನ್ನಡದವರು , ಅವರೇನಾದ್ರು ಹೆಲ್ಪ್ ಮಾಡಿದ್ರ ಎನ್ನುವ ಪ್ರಶ್ನೆಗೆ, ಹೌದು ಎಂದು ಉತ್ತರಿಸಿದರು. ‘ ಹೌದು ನಿಂಗೆ ಕನ್ನಡ ಗೊತ್ತು. ಆದ್ರೆ ಚೆನ್ನಾಗಿ ಮಾತಾನಾಡ್ಬೇಕು. ಯಾಕಂದ್ರೆ ಕನ್ನಡ ನಮ್ಮೂರು, ಅಲ್ಲಿ ನಮ್ಮವರು‌ ಇದ್ದಾರೆ ಅಂತ ಸಲಹೆ‌ ಕೊಟ್ಟಿದ್ದ ನ್ನು ನೆನಪಿಸಿಕೊಂಡರು. ಆರ್​ಆರ್​ಆರ್​ ಪ್ರಮೋಷನ್​ ಕಾರ್ಯಕ್ರಮದಲ್ಲಿ ಮೆಗಾ ಪವರ್​ ಸ್ಟಾರ್ ರಾಮ್​ ಚರಣ್, ಬಾಲಿವುಡ್​ ಬ್ಯೂಟಿ ಆಲಿಯಾ ಭಟ್, ನಿರ್ದೇಶಕ ರಾಜಮೌಳಿ ಉಪಸ್ಥಿತರಿದ್ದರು.​

Categories
ಸಿನಿ ಸುದ್ದಿ

ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ? ಡೈವರ್ಸ್ ಮಾಡ್ಕೊಂಡಿರುವ ಸಮಂತಾ ಕೇಳಿದ್ಯಾವ ಮಾವನಿಗೆ ?

ಸೌತ್‌ಬ್ಯೂಟಿ ಸಮಂತಾ, ಅಕ್ಕಿನೇನಿ ನಾಗಚೈತನ್ಯರಿಂದ ವಿಚ್ಚೇದನ ಪಡೆದಿರುವುದು ಎಲ್ಲರಿಗೂ ತಿಳಿದಿರುವಂತಹದ್ದೇ. ಪರಸ್ಪರ ಒಪ್ಪಿಗೆಯ ಮೇರೆಗೆ ಡೈವರ್ಸ್ ಪಡೆದುಕೊಂಡು ನಾಲ್ಕು ವರ್ಷದ ವೈವಾಹಿಕ ಬದುಕಿಗೆ ಗುಡ್‌ಬೈ ಹೇಳಿದ್ದಾರೆ. ಸದ್ಯ ಚೈ ಅಂಡ್ ಸ್ಯಾಮ್ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ಇಬ್ಬರು ಕೂಡ ತಮ್ಮ ತಮ್ಮ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಸ್ಯಾಮ್ `ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ'ಅಂತೇಳಿ ಸಂಚಲನ ಸೃಷ್ಟಿಸಿದ್ದಾರೆ.ಅಷ್ಟಕ್ಕೂ, ಸಮ್ಮು ಈ ರೀತಿ ಹೇಳಿದ್ದು ಯಾವ ಮಾವನ ಮುಂದೆ?ಏನ್ ನಡೀತಿದೆ ‘ರಾಜಿ’ ಸುತ್ತ ಮುತ್ತ? ಆ ಇಂಟ್ರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ

ಮನಂ'ಜೋಡಿಯ ನಾಲ್ಕು ವರ್ಷದ ದಾಂಪತ್ಯ ಜೀವನ ಮುಗಿದುಹೋದ ಅಧ್ಯಾಯ.11 ವರ್ಷ ಪ್ರೀತ್ಸಿ ಮದುವೆಯಾದ ಚೈ-ಸ್ಯಾಮ್ ಮಧ್ಯೆ ಅದ್ಯಾವ ಘಟನೆ ಘಟಿಸಿತೋ? ಇವರಿಬ್ಬರ ಸಂಸಾರದಲ್ಲಿ ಅದ್ಯಾರು ಉಳಿ ಹಿಂಡಿದ್ರೋ ಏನೋ ಗೊತ್ತಿಲ್ಲ? ‘ಮಜಿಲಿ’ ಜೋಡಿ ಡೈವರ್ಸ್ ತೆಗೆದುಕೊಳ್ಳುವಂತಾಯ್ತು. ಕೋಟ್ಯಾಂತರ ಅಭಿಮಾನಿಗಳ ಹೊಟ್ಟೆಗೆ ಬೆಂಕಿ ಬಿತ್ತು. ಹೀಗೆ ಹೊಟ್ಟೆಗೆ ಬೆಂಕಿ ಹಾಕಿಕೊಂಡವರೆಲ್ಲ ಫ್ಯಾನ್ಸ್ ಈಗ್ಲೂ ಕೇಳಿಕೊಳ್ತಿರುವುದು ಒಂದೇ ಚೈ-ಸ್ಯಾಮ್ ಇಬ್ಬರು ವೈಮನಸ್ಸು ಮರೆತು ಒಂದಾಗ್ಬೇಕು ಅನ್ನೋದು. ಅಭಿಮಾನಿಗಳ ಈ ಕನಸು ಈಡೇರುತ್ತೋ? ಇಲ್ಲವೋ? ಗೊತ್ತಿಲ್ಲ. ಆದರೆ, ಫ್ಯಾನ್ಸ್ ಗೆ ಮನರಂಜನೆ ಕೊಡುವುದಕ್ಕೆ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರು ಕೂಡ ಸಿನಿಮಾದ ಮೊರೆ ಹೋಗಿದ್ದಾರೆ. ಅದರಲ್ಲೂ ಸ್ಯಾಮ್ ಅಂತೂ `ಪುಷ್ಪ’ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯ ಚಿತ್ರಪ್ರೇಮಿಗಳು ಬೆರಗುಗಣ್ಣಿನಿಂದ ನೋಡುವಂತಹ ಪರ್ಫಾಮೆನ್ಸ್ ಕೊಟ್ಟಿದ್ದಾರೆ.

ಅಲ್ಲಾ, ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ ಅಂತ ಸಮಂತಾ ಕೇಳಿದ್ದಾರೆ. ಅದರ ಕಥೆ ಹೇಳ್ತೀವಿ ಅಂತೇಳಿ ಮತ್ತದೇ ಹಳೆ ಕಥೆ ಕ್ಯಾಸೆಟ್ ಪ್ಲೇ ಮಾಡ್ತಿದ್ದಾರೆ ಅಂದ್ಕೋಬೇಡಿ. ತಾಜಾ ಸಮಾಚಾರ ಹೇಳಲಿಕ್ಕಾಗಿಯೇ ಇಷ್ಟೆಲ್ಲಾ ಹೇಳಿದ್ದು. ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ'? ಹೀಗಂತ ಆ್ಯಪಲ್ ಬ್ಯೂಟಿ ಸಮಂತಾ ಕೇಳಿದ್ದೇನೋ ನಿಜ ಆದರೆ,ರೀಲ್ ಲೈಫ್‌ನಲ್ಲಿರುವ ಮಾವನ ಮುಂದೆ ಅಲ್ಲಾ? ಬದಲಾಗಿ ರಿಯಲ್ ಲೈಫ್‌ನಲ್ಲಿಪುಷ್ಪ’ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಬರುವ ಸ್ಟೈಲಿಷ್ ಮಾವನ ಮುಂದೆ.

ಹೌದು, ಸ್ಟೈಲಿಷ್ ಐಕಾನ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಪುಷ್ಪ' ಚಿತ್ರದಲ್ಲಿ ಸಮಂತಾ ಐಟಂ ಹಾಡಿಗೆ ಸೊಂಟ ಕುಣಿಸಿದ್ದಾರೆ.ಇದೇ ಮೊದಲ ಭಾರಿಗೆ ಸ್ಪೆಷಲ್ ನಂಬರ್ ಹಾಡಿಗೆ ಬೆಲ್ಲಿ ಬಳುಕಿಸಿರುವ ಸ್ಯಾಮ್ ‘ಸೀರೆ.. ಸೀರೆ.. ಸೀರೆಯುಟ್ಟರೆ ಕಣ್.. ಕಣ್.. ಬಿಟ್ಕೊಂಡು ನೋಡ್ತೀರಾ, ಪುಟ್ಟ..ಪುಟ್ಟ.. ಗೌನು ತೊಟ್ರೆ..ಹಿಂದೆ ಹಿಂದೆ ಬೀಳ್ತೀರಾ, ಸೀರೆಯಲ್ಲ..ಗೌನು ಅಲ್ಲ..ಉಟ್ಟ ಬಟ್ಟೇಲಿ ಏನೈತೆ, ನೀವು ನೋಡೋದ್ರಾಗೆ ಎಲ್ಲಾ ಐತೆ ನಿಮ್ಮ ಬುದ್ದಿ ಇಲ್ಲ ಶುದ್ದಿ, ಉಹ್ಞೂಂ ಅಂತೀಯಾ ಮಾವ ? ಹ್ಞೂಂ ಅಂತೀಯಾ ಮಾವ’? ಅಂತ ಅಲ್ಲು ಅರ್ಜುನ್ ಮುಂದೆ ಕೇಳಿದ್ದಾರೆ.

ಈ ಹಾಡಿಗಾಗಿ ದುಬಾರಿ ಸಂಭಾವನೆ ಪಡೆದಿರುವ ಸ್ಯಾಮ್, ನೀಲಿ ಬಣ್ಣದ ಲೆಹೆಂಗಾ ತೊಟ್ಟು ಸಖತ್ತಾಗೆ ಕುಣಿದಿದ್ದಾರೆ. ಈ ಸ್ಪೆಷಲ್ ನಂಬರ್ ಸಾಂಗ್ ಮೂರು ಸೀಸನ್‌ಗೂ ಮ್ಯಾಚ್ ಆಗುತ್ತೆ. ಚಳಿಗಾಲ..ಮಳೆಗಾಲ..ಬೇಸಿಗೆಕಾಲ ಈ ಮೂರು ಕಾಲದಲ್ಲೂ ಪಡ್ಡೆಹೈಕ್ಳು ಬೆವರುವಂತೆ ಮಾಡುವ ಸಾಂಗ್ ಇದು.

'ಕಣ್ಣೇ ಅದಿರಿಂದಿ'ಅಂತ ಹಾಡಿ ಪಡ್ಡೆ ಹುಡಗರ ಹಗಲು-ರಾತ್ರಿ ನಿದ್ದೆಕದ್ದ ಸಿಂಗರ್ ಮಂಗ್ಲಿ,ಈಗ ‘ಹ್ಞೂಂ ಅಂತೀಯಾ ಮಾವ? ಉಹ್ಞೂಂ ಅಂತೀಯಾ ಮಾವ’? ಅಂತ ಹಾಡಿ ಸಕಲ ಸೋದರ ಮಾವಂದಿರು-ಸಕಲ ಸೊಸೆಯಂದಿರನ್ನು ಅಟ್ರ್ಯಾಕ್ಟ್ ಮಾಡುತ್ತಿದ್ದಾರೆ. ವರದರಾಜ್ ಚಿಕ್ಕಬಳ್ಳಾಪುರ ಕನ್ನಡ ವರ್ಷನ್ ಹಾಡಿಗೆ ಕ್ಯಾಚಿ ಲಿರಿಕ್ಸ್ ಬರೆದುಕೊಟ್ಟಿದ್ದಾರೆ. ದೇವಿ ಶ್ರೀ ಪ್ರಸಾದ್ ಟ್ಯೂನ್ ಕಂಪೋಸ್ ಮಾಡಿದ್ದಾರೆ.

ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ‘ಹ್ಞೂಂ ಅಂತೀಯಾ ಮಾವ? ಉಹ್ಞೂಂ ಅಂತೀಯಾ ಮಾವ'? ಹಾಡು ಬಿಡುಗಡೆಯಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.ಸುಕುಮಾರ್ ಬತ್ತಳಿಕೆಯಿಂದ ಹೊರಬರುತ್ತಿರುವ ‘ಪುಷ್ಪ’ಕ್ಕೆ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೀವ ತುಂಬಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ‘ಪುಷ್ಪ'ಅದ್ದೂರಿಯಾಗಿ ನಿರ್ಮಾಣಗೊಂಡಿದ್ದು, ಡಿಸೆಂಬರ್ 17ರಂದು ಬಿಗ್‌ಸ್ಕ್ರೀನ್ ಮೇಲೆ ‘ಪುಷ್ಪ’ ಅರಳಲಿದೆ. ಪ್ಯಾನ್ ಇಂಡಿಯಾ ತುಂಬೆಲ್ಲಾ ಘಮಘಮಿಸೋಕೆ ಹೊರಟಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಬಂಧನ ಸಿನಿಮಾ ನೋಡಲು ಬಂದ ಮಹಿಳೆಯರ ಕಣ್ಣಿಗೆ ಮೆಣಸಿನಪುಡಿ ಎರಚಿದ್ದರಂತೆ !?

ಒಂದು ಯಶಸ್ವಿ ಸಿನಿಮಾ ಹಿಂದೆ ನೂರಾರು ಕಥೆಗಳಿರುತ್ತವೆ. ಅಲ್ಲಿ ನಲಿವಿಗಿಂತ ನೋವಿನ ಕಥೆಗಳೇ ಹೆಚ್ಚು. ಅಂತಹ ಬೇಸರದ ಕಥೆ ಬಂಧನ ಚಿತ್ರದಲ್ಲೂ ಇದೆ. ಆ ಇನ್ಸೈಡ್ ಸ್ಟೋರಿ ಕುರಿತು ಸ್ವತಃ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ….

  • ವಿಶಾಲಾಕ್ಷಿ

ಬಂಧನ' ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಎವರ್‌ಗ್ರೀನ್ ಚಿತ್ರ ಮತ್ತು ದಾದಾ ಕರಿಯರ್‌ನ ಮೈಲ್‌ಸ್ಟೋನ್ ಸಿನಿಮಾ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ,ಬಂಧನ’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಂತಹ ಮಹಿಳೆಯರ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದರು ಎನ್ನುವ ಸತ್ಯ ಬಹುಷಃ ನಿಮ್ಮೆಲ್ಲರಿಗೂ ತಿಳಿದಿರಲಿಕ್ಕಿಲ್ಲ. ಈ ಕಟುಸತ್ಯವನ್ನು ನಿರ್ದೇಶಕ ಎಸ್.ರಾಜೇಂದ್ರ ಸಿಂಗ್ ಬಾಬು ಅವರು `ಬಂಧನ-2′ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಬಹಿರಂಗಪಡಿಸಿದರು.

ಹೌದು, ಶುಭ ಶುಕ್ರವಾರವಾದ ಇಂದು ನಗರದ ಅಶೋಕ್ ಹೋಟೆಲ್‌ನಲ್ಲಿ ಬಂಧನ-2' ಚಿತ್ರದ ಮುಹೂರ್ತ ಹಮ್ಮಿಕೊಂಡಿದ್ದರು. ಅಶೋಕದಲ್ಲೇಬಂಧನ’ ಸಿನಿಮಾ ಸೆಟ್ಟೇರಿದ್ದ ಸೆಂಟಿಮೆಂಟ್‌ಗೋಸ್ಕರ ಸೀಕ್ವೆಲ್ ಕೂಡ ಇಲ್ಲೇ ಮುಹೂರ್ತ ನೆರವೇರಿಸಿದರು. ಈ ವೇಳೆ ಹಳೆಯ ಬಂಧನ ಹಾಗೂ ಹೊಸ ಬಂಧನದ ಬಗ್ಗೆ ಮಾತಿಗಿಳಿದ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು, `ಬಂಧನ’ ಟೀಮ್ ಎದುರಿಸಿದ ಅಗ್ನಿಪರೀಕ್ಷೆಗಳ ಬಗ್ಗೆ ಹೇಳುತ್ತಾ ಹೋದರು.

ದಾದಾ ನಟನೆಯ ಬಂಧನ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ಟಾಗುತ್ತೆ, ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆಹೊಡೆಯುತ್ತೆ, ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಇತಿಹಾಸವನ್ನು ಸೃಷ್ಟಿಮಾಡುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಯಾಕಂದ್ರೆ, ಸಿನಿಮಾ ಆರಂಭದಲ್ಲೇ ಈ ಮೂವೀ ಪಕ್ಕಾ ಫ್ಲಾಪ್ ಆಗುತ್ತೆ. ಆಕ್ಷನ್ ಹೀರೋನ ಹಾಕಿಕೊಂಡು ಪ್ರೇಮಕಾವ್ಯದ ಪುರಾಣ ಹೇಳಲಿಕ್ಕೆ ಹೊರಟಿದ್ದಾರೆ. ಅದಕ್ಕೆಬಂಧನ’ ಅಂತ ಟೈಟಲ್ ಬೇರೆ ಇಟ್ಟಿದ್ದಾರೆ, ಈ ಸಿನಿಮಾ ಎಲ್ಲಿ ಓಡಬೇಕು ಗುರು ಅಂತ ಗಾಂಧಿನಗರದ ಬಹುತೇಕ ಪಂಡಿತಪಾಮರರು ಕೊಂಕು ನುಡಿದಿದ್ದರು. ಆದರೆ, `ಬಂಧನ’ ಬಿಡುಗಡೆಯಾಗಿ ಒಂದೆರಡು ವಾರ ಕಳೆದ್ಮೇಲೆ ಕೊಂಕು ನುಡಿದವರ ಬಾಯಿಗೆ ಬೀಗ ಹಾಕಿಸಿತು. ಪಡ್ಡೆಹುಡ್ಗರಿಂದ ಹಿಡಿದು ಹಣ್ಣಣ್ಣು ಮುದುಕರು ಕೂಡ ಬಂಡಿ ಜೊತೆ ಬುತ್ತಿ ಕಟ್ಟಿಕೊಂಡು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವಂತೆ ಮಾಡ್ತು.

ಹೌದು, ಹಿಂದೆಂದೂ ನೋಡಿರದ ಪಾತ್ರದಲ್ಲಿ ದಾದಾ ಕಾಣಿಸಿಕೊಂಡರು. ದುರಂತ ಅಂತ್ಯ ಕಾಣುವ ನಾಯಕನ ಪಾತ್ರ ಆದರೂ ಕೂಡ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದನ್ನು ಕಂಡು ಅಭಿಮಾನಿ ದೇವರುಗಳು ದಾದಾಗೆ ಶರಣಾದರು. ಒಮ್ಮೆ ಸಿನಿಮಾ ನೋಡಿ ಬಂದವರು ಪುನಃ ಹೋಗುವಾಗ ಕುಟುಂಬ ಸಮೇತ ರ‍್ಕೊಂಡು ಹೋದರು. ಮೂರು ಶೋ ಅಲ್ಲ ಆರು ಶೋ ಮಾಡಿದ್ರೂ ಹೌಸ್‌ಫುಲ್ ಆಗುವಂತಹ ಸಂದರ್ಭ ಸೃಷ್ಟಿಯಾಯ್ತು. ಹೀಗೆ ಥಿಯೇಟರ್‌ಗೆ ಬರುವ ಜನರು ಹೆಚ್ಚಾದಂತೆ ಬಂಧನ ಚಿತ್ರಕ್ಕೆ ಬೇಡಿಕೆ ಹೆಚ್ಚಾಯ್ತು. ಸಿನಿಮಾ ರೀಲ್ ನಮಗೆ ಕೊಡಿ ನಾವು ಪ್ರದರ್ಶನ ಮಾಡ್ತೀವಿ ಅಂತ ಕೇಳುವ ಪ್ರದರ್ಶಕರು ಕೂಡ ಹೆಚ್ಚಾದರು. ಪತ್ರಿಕೆಗಳಲ್ಲಿ ಬಂಧನ ಭರ್ಜರಿ ಯಶಸ್ವಿ ಪ್ರದರ್ಶನದ ಜಾಹೀರಾತು ಪುಟಗಳು ಹೆಚ್ಚಾದವು.ಬಂಧನ’ ಚಿತ್ರ ನಿರ್ಮಾಪಕರ ಜೋಳಿಗೆ ಮಾತ್ರವಲ್ಲ ಕೊಂಡುಕೊಂಡವರ ಜೋಳಿಗೆ ಕೂಡ ತುಂಬುತ್ತಾ ಹೋಯ್ತು. ಇದನ್ನೆಲ್ಲಾ ನೋಡಿ ಸಹಿಸಿಕೊಳ್ಳುವ ಮನಸ್ತಿತಿಯಿಲ್ಲದವರು `ಬಂಧನ’ ಚಿತ್ರಕ್ಕೆ ಅಡ್ಡಗಾಲು ಹಾಕಿ ಮಕಾಡೆ ಮಲಗಿಸಲು ಶತಾಯಗತಾಯ ಪ್ರಯತ್ನಕ್ಕೆ ಮುಂದಾಗುತ್ತಾರೆ.

ಬೆಂಕಿ ಇಟ್ಟರು…!

ಹೇಗಾದರೂ ಸರೀ ಬಂಧನ ಬಂದ್ ಆಗಬೇಕು. ಚಿತ್ರಕ್ಕೆ ಹಿನ್ನಡೆ ಆಗಬೇಕು. ಹೀಗಂತ ಹಠಕ್ಕೆ ಬಿದ್ದ ಯಾರೋ ಕಿಡಿಗೇಡಿಗಳು,ಮೊದಲು ಥಿಯೇಟರ್ ಅಖಾಡದಲ್ಲಿ ತಲೆಎತ್ತಿದ್ದ ದಾದಾಕಟೌಟ್‌ನ ಸುಟ್ಟುಹಾಕಿದರು. ಪ್ರದರ್ಶನ ನಿಲ್ಲಿಸ್ಬೇಕು ಅಂತ ರೀಲ್‌ಗಳಿಗೆ ಬೆಂಕಿ ಇಟ್ಟರು.
ಇಷ್ಟಕ್ಕೆ ಸುಮ್ಮನಾಗದೇ ಸಿನಿಮಾ ವೀಕ್ಷಿಸಲು ಥಿಯೇಟರ್‌ಗೆ ಬಂದ ಮಹಿಳೆಯರ ಕಣ್ಣಿಗೆ ಮೆಣಸಿನ ಪುಡಿಯನ್ನು ಎರಚೋದಕ್ಕೆ ಶುರುಮಾಡಿದರು. ಒಟ್ನಲ್ಲಿ ಪ್ರೇಕ್ಷಕರಿಗೆ ಕಿರಿಕಿರಿ ಮಾಡಿ
ದಂಗೆ ಹೇಳುವಂತೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿದರು. ಆದರೆ, ಎಲ್ಲಾ ಉಲ್ಟಾ ಆಯ್ತು. ಅಭಿಮಾನಿ ದೇವರುಗಳು ದಾದಾ ಪರವಾಗಿ ನಿಂತರು. ‘ ಬಂಧನ’ ವನ್ನು ಬಿಗಿದಪ್ಪಿಕೊಂಡರು.ಎಷ್ಟರ ಮಟ್ಟಿಗೆ ಅಂದರೆ ಬರೋಬ್ಬರಿ 25 ಚಿತ್ರಮಂದಿರಗಳಲ್ಲಿ 25 ವಾರ ಸಿನಿಮಾ ಓಡಿಸಿದರು. 6 ತಿಂಗಳುಗಳ ಕಾಲ ಬಂಧನ ಚಿತ್ರ ಓಡುತ್ತಿತ್ತು, ಓಡುತ್ತಿತ್ತು, ಓಡುತ್ತಲೇ ಕಿಡಿಗೇಡಿಗಳ ಕಣ್ಣಿಗೆ ಬೆಂಕಿಹಾಕುತ್ತಿತ್ತು.

ಹೀಗೆ, ವಿಷ್ಣುಸೈನ್ಯದ ಬಲದಿಂದ, ಕರುನಾಡ ಜನರ ಪ್ರೀತಿಯಿಂದ ‘ ಬಂಧನ’ ಗಟ್ಟಿಯಾಗಿ ನಿಲ್ತು. ದಾದಾಗೆ ಮತ್ತು ನಿರ್ದೇಶಕರ ಕರಿಯರ್ ಗೆ ಮೈಲುಗಲ್ಲಾಯ್ತು. ಇದೀಗ, ಇದೇ ಚಿತ್ರದ ಸೀಕ್ವೆಲ್ ತಯ್ಯಾರಾಗುತ್ತಿದೆ. ಅಭಿನವ ಭಾರ್ಗವನ ಆಶೀರ್ವಾದದೊಂದಿಗೆ ಸಿನಿಮಾ ಶುರುವಾಗಿದೆ. ಡೆಡ್ಲಿಸೋಮ ಆದಿತ್ಯ ಹೀರೋ ಆಗಿದ್ದಾರೆ. ಸುಹಾಸಿನಿ ಮಣಿರತ್ನಂ, ಜೈ ಜಗದೀಶ್ ಪಾತ್ರವರ್ಗದಲ್ಲಿದ್ದಾರೆ. ಕ್ಯಾಮೆರಮ್ಯಾನ್ ಅಣಜಿ ನಾಗರಾಜ್ ಸಿನಿಮಾಟ್ರೋಗ್ರಫಿ ಮಾಡೋದರ ಜೊತೆಗೆ ಬಂಡವಾಳ ಹೂಡ್ತಿದ್ದಾರೆ. ಹೊಸ ಬಂಧನಕ್ಕೆ ನಿಮ್ಮೆಲ್ಲರ ಪ್ರೀತಿ-ಹಾರೈಕೆ ಇರಲಿ. ಬಂಧನ2 ಗೆ ಶುಭವಾಗಲಿ.


ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ವೇದ ಎಂಬ ಹಳ್ಳಿ ಕಥೆ; ಶಿವಣ್ಣ ಇಲ್ಲಿ ಡಬ್ಬಲ್‌ ಶೇಡ್ ಪಾತ್ರ!

ಒಂದು ಸಿನಿಮಾ ನಂತರ ಮತ್ತೆ ನಿರ್ದೇಶಕ ಹಾಗು ನಾಯಕ ಸೇರಿ ಮತ್ತೆ ಸಿನಿಮಾ ಮಾಡೋದು ತುಸು ಕಷ್ಟ! ಎಲ್ಲೋ ಒಂದೆರೆಡು ಸಿನಿಮಾಗಳು ಮತ್ತದೇ ನಿರ್ದೇಶಕ, ನಾಯಕರ ಕಾಂಬಿನೇಷನ್‌ನಲ್ಲಿ ನಡೆದಿರಬಹುದು. ಆದರೆ, ಒಂದಲ್ಲ, ಎರಡಲ್ಲ, ಮೂರೂ ಅಲ್ಲ ನಾಲ್ಕು ಸಿನಿಮಾಗಳು ಒಬ್ಬ ನಿರ್ದೇಶಕ ಮತ್ತು ನಾಯಕರ ಜೊತೆ ಆಗುತ್ತೆ ಅಂದರೆ ವಿಶೇಷ. ಹಾಗಂತ, ಇದು ಹೊಸ ವಿಷಯವೂ ಅಲ್ಲ, ಹಿಂದೆಲ್ಲಾ ನಿರ್ದೇಶಕ ನಾಯಕರ ಕಾಂಬಿನೇಷನ್‌ನಲ್ಲಿ ಸಾಲು ಸಾಲು ಚಿತ್ರಗಳು ಬಂದಿವೆ. ಆದರೆ, ಈ ಜನರೇಷನ್‌ ನಿರ್ದೇಶಕರು ಒಬ್ಬ ಸ್ಟಾರ್‌ ನಾಯಕನ ಜೊತೆ ಸತತವಾಗಿ ನಾಲ್ಕು ಸಿನಿಮಾಗಳನ್ನು ಮಾಡುವುದು ವಿಶೇಷ. ಅಂದಹಾಗೆ, ಅದು ಬೇರಾರೂ ಅಲ್ಲ, ಅದು ಎ.ಹರ್ಷ. ಹೌದು, ಹರ್ಷ ಅಂದಾಕ್ಷಣ, ಮತ್ತೆ ನೆನಪಾಗೋದು ಶಿವರಾಜಕುಮಾರ್.‌ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಅದು “ವೇದ”. ಈ ಹಿಂದೆ ಶಿವರಾಜಕುಮಾರ್‌ ಅವರೊಂದಿಗೆ ಹರ್ಷ “ವಜ್ರಕಾಯ” ಸಿನಿಮಾ ಮಾಡಿದರು. ಅದಾದ ಬಳಿಕ, “ಭಜರಂಗಿ” ಮಾಡಿದರು. ಆ ನಂತರ ಪುನಃ “ಭಜರಂಗಿ 2” ಚಿತ್ರ ಮಾಡಿದರು ಈ ಸಿನಿಮಾಗಳ ಯಶಸ್ಸಿನ ಬಳಿಕ ಈಗ “ವೇದ” ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಹೌದು, ಶಿವರಾಜಕುಮಾರ್‌ ಅವರೊಂದಿಗೆ ನಿರ್ದೇಶಕ ಎ.ಹರ್ಷ ಪುನಃ, ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ “ವೇದ” ಎಂದು ನಾಮಕರಣ ಮಾಡಿದ್ದು, ಈಗಾಗಲೇ ಚಿತ್ರಕ್ಕೆ ಚಾಲನೆಯೂ ಸಿಕ್ಕಿದೆ. ಇದು ಶಿವರಾಜಕುಮಾರ್‌ ಅವರ 125ನೇ ಚಿತ್ರ. 125ನೇ ಸಿನಿಮಾವನ್ನು ಗೀತ ಶಿವರಾಜಕುಮಾರ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಯಾವುದೇ ಹೀರೋಗೆ ಮೊದಲ ಚಿತ್ರ, 25ನೇ ಸಿನಿಮಾ, 50 ನೇ ಚಿತ್ರ, 75ನೇ ಸಿನಿಮಾ ಮತ್ತು 100ನೇ ಚಿತ್ರಗಳು ಮೈಲಿಗಲ್ಲು. ಅಂತೆಯೇ ಶಿವರಾಜಕುಮಾರ್‌ ಅವರ 125ನೇ ಸಿನಿಮಾ “ವೇದ” ಕೂಡ ವಿಶೇಷತೆ ಹೊಂದಿದೆ. ಈ ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ಇದೊಂದು ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಚಂದದ ಕಥೆಯಂತೆ. ಈ ಚಿತ್ರದಲ್ಲಿ ಶಿವರಾಜಕುಮಾರ್‌ ಅವರ ಪಾತ್ರದ ಹೆಸರು ವೇದ. ಅಂದಹಾಗೆ, 1960 ರ ಕಾಲಘಟ್ಟದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಚಿತ್ರದ ಮುಹೂರ್ತ ನಡೆದು, ಈಗಾಗಲೇ ಚಿತ್ರೀಕರಣವೂ ಜೋರಾಗಿ ನಡೆಯುತ್ತಿದೆ. ಇನನು ಶಿವರಾಜಕುಮಾರ್‌ ಫಸ್ಟ್‌ಲುಕ್‌ ಟೀಸರ್‌ ಕೂಡ ರಿಲೀಸ್‌ ಆಗಿದೆ. ಶಿವರಾಜಕುಮಾರ್‌ ಇದೇ ಮೊದಲ ಬಾರಿಗೆ ವಯಸ್ಸಾದವರ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ರೀತಿಯ ಪಾತ್ರ ನಿರ್ವಹಣೆ ಇದೇ ಮೊದಲೂ ಎಂಬುದು ನಿರ್ದೇಶಕರ ಮಾತು.

ಇದೊಂದು ಫ್ಯಾಂಟಸಿ ಕಥೆ ಹೊಂದಿರುವ ಚಿತ್ರ. ಹಳ್ಳಿಯೊಂದರ ಸುತ್ತಮುತ್ತ ನಡೆಯುವ, ಅಲ್ಲಿರುವ ಒಬ್ಬ ವ್ಯಕ್ತಿಯ ಹಿನ್ನೆಲೆಯಲ್ಲಿ ಸಾಗುವ ಕಥೆ ಹೇಳುವ ಪ್ರಯತ್ನವನ್ನು ಎ.ಹರ್ಷ ಮಾಡುತ್ತಿದ್ದಾರೆ. ದಶಕಗಳ ಹಿಂದಿನ ರಿಯಲಿಸ್ಟಿಕ್‌ ಕಥೆ ಇದಾಗಿದ್ದು, ಆ ಹಳ್ಳಿಯಲ್ಲಿರುವ ಒಬ್ಬ ವ್ಯಕ್ತಿಯ ಜೀವನದಲ್ಲಿ ಏನೇನೆಲ್ಲ ನಡೆಯುತ್ತೆ ಎನ್ನುವುದು ಸಿನಿಮಾದಲ್ಲಿದೆ. ಚಿತ್ರದಲ್ಲಿ ಎಮೋಷನಲ್‌, ಆಕ್ಷನ್‌, ಡ್ರಾಮಾ ಇದೆ. ಇದರೊಂದಿಗೆ ಹಾಸ್ಯವೂ ಇಲ್ಲಿ ಜೋರಾಗಿದೆ. ಶಿವರಾಜಕುಮಾರ್‌ ಅವರದು ಇಲ್ಲಿ ಖಡಕ್‌ ಲುಕ್‌ ಇರಲಿದೆ. ಹೇಗೆಂದರೆ, ಈವರೆಗೆ ಕಾಣಿಸಿಕೊಳ್ಳದೇ ಇರುವಂತಹ ಖಡಕ್‌ ಲುಕ್‌ ಇಲ್ಲಿರಲಿದೆ ಎಂಬುದು ನಿರ್ದೇಶಕರ ಮಾತು. ಶಿವಣ್ಣ ಅವರಿಲ್ಲಿ ಎರಡು ಶೇಡ್‌ ಇರುವಂತಹ ಪಾತ್ರ ನಿಭಾಯಿಸುತ್ತಿದ್ದಾರೆ. ಆ ಪಾತ್ರ ಹೇಗಿರಲಿದೆ ಅನ್ನುವುದಕ್ಕೆ ಸಿನಿಮಾ ಬರುವವರೆಗೆ ಕಾಯಬೇಕು. ಇನ್ನು, ಚಿತ್ರದುದ್ದಕ್ಕೂ ಥ್ರಿಲ್ಲಿಂಗ್‌ ಆಂಶಗಳು ತುಂಬಿವೆ ಎನ್ನುವ ನಿರ್ದೇಶಕರು, ಈ ಬಾರಿ ಬೇರೆ ರೀತಿಯ ಸಿನಿಮಾ ಕಟ್ಟಿಕೊಡುವ ಪ್ರಯತ್ನದಲ್ಲಿದ್ದೇನೆ ಎಂಬುದು ಎ.ಹರ್ಷ ಅವರ ಮಾತು.

ಶಿವರಾಜಕುಮಾರ್‌ ಅವರ ಚಿತ್ರ ಅಂದಮೇಲೆ, ಅದರಲ್ಲೂ ಅದು 125ನೇ ಸಿನಿಮಾ ಆಗಿರುವುದರಿಂದ, ಅದು ಎಲ್ಲಾ ವರ್ಗಕ್ಕೂ ರುಚಿಸಬೇಕು. ಎಲ್ಲರನ್ನೂ ಮೆಚ್ಚಿಸಬೇಕು. ಅಂತಹ ಕಂಟೆಂಟ್‌ ಇಟ್ಟುಕೊಂಡೇ ಸಿನಿಮಾ ಮಾಡಲು ಹೊರಟಿದ್ದೇನೆ. ಪಕ್ಕಾ ಕಮರ್ಷಿಯಲ್‌ ಸಿನಿಮಾ ಇದಾಗಿದ್ದು, ಈ ಹಿಂದಿನ ಕಮರ್ಷಿಯಲ್‌ ಸಿನಿಮಾಗಳಂತೆ ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲೇ ತಯಾರಾಗಲಿದೆ. ಶಿವಣ್ಣ ಕಥೆಯ ಎಳೆ ಕೇಳುತ್ತಿದ್ದಂತೆಯೇ ಇಷ್ಟಪಟ್ಟು, ಮಾಡಲು ಮುಂದಾದರು.

ಗೀತಕ್ಕ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಆ ಕಾಲಘಟ್ಟದ ಕಥೆ ಆಗಿರುವುದರಿಂದ ಬೆಂಗಳೂರಲ್ಲೇ ಸೆಟ್‌ ಹಾಕಿ ಸಿನಿಮಾದ ಚಿತ್ರೀಕರಣ ಮಾಡಲಾಗುವುದು ಎನ್ನುತ್ತಾರೆ ನಿರ್ದೇಶಕರು. ಸದ್ಯ 16 ದಿನಗಳ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ. ಚಿತ್ರಕ್ಕೆ ರವಿ ಸಂತೆ ಹೈಕ್ಳು ಕಲಾ ನಿರ್ದೇಶನವಿದೆ. ಸ್ವಾಮಿ ಜೆ, ಕ್ಯಾಮೆರಾ ಹಿಡಿದರೆ, ಅರ್ಜುನ್‌ ಜನ್ಯ ಸಂಗೀತವಿದೆ. ಕೆ.ಕಲ್ಯಾಣ್‌, ನಾಗೇಂದ್ರ ಪ್ರಸಾದ್‌ ಗೀತೆಗಳಿವೆ.

Categories
ಸಿನಿ ಸುದ್ದಿ

ಸೆಟ್ಟೇರಿತು ಬಂಧನ-2 ! ದಾದಾ ‘ಬಂಧನ’ ಮಹೂರ್ತ ನಡೆದಿದ್ದ ಸ್ಥಳದಲ್ಲೇ ಬಂಧನ-2 ಆರಂಭ !

'ಬಂಧನ'ಅದ್ಬುತ ಅಮರ ಪ್ರೇಮ ಕಾವ್ಯ.ಕನ್ನಡ ಸಿನಿಮಾ ಪ್ರೇಕ್ಷಕರು ಯಾವತ್ತಿಗೂ ಮರೆಯದ ಮಾಣಿಕ್ಯದಂತಹ ಸಿನಿಮಾ.ಈ ಚಿತ್ರ ಬಂದು ಹೋಗಿ 37 ವರ್ಷಗಳು ಕಳೆದಿವೆ.ಆದರೆ,‘ಬಂಧನ’ ದ ಜೊತೆಗೆ ಬೆರೆತು ಹೋಗಿರುವ ಚಿತ್ರ ಪ್ರೇಮಿಗಳ ಅನುಬಂಧವಿದೆಯಲ್ಲ ಅದು ಯಾವತ್ತಿಗೂ ಅಜರಾಮರ. ಬೆಳ್ಳಿತೆರೆ ಮಾತ್ರವಲ್ಲ ಟಿವಿ ಪರದೆಯನ್ನೂ ಬೆಳಗುತ್ತಾ ಪ್ರೇಮಿಗಳನ್ನು ಸದಾ ಕಾಡುವಂತಹ ಸಿನಿಮಾ ದಾದಾ ಅಭಿನಯದ ಎವರ್‌ಗ್ರೀನ್ ಬಂಧನ.ಅಷ್ಟಕ್ಕೂ,ನಾವ್ ಇವತ್ತು ಬಂಧನದ ಬಗ್ಗೆ ಮಾತನಾಡಲಿಕ್ಕೆ ಕಾರಣ ಬಂಧನ-2′ ಚಿತ್ರ ಸೆಟ್ಟೇರಿದೆ. ಬಂಧನ ನಿರ್ದೇಶಿಸಿದ್ದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರೇ ಸೀಕ್ವೆಲ್ ನಿರ್ದೇಶನ ಮಾಡ್ತಿದ್ದಾರೆ. ಅಚ್ಚರಿ ಅಂದರೆ,37 ವರ್ಷಗಳ ಹಿಂದೆ ದಾದ ಬಂಧನ ಚಿತ್ರ ಸೆಟ್ಟೇರಿದ್ದ ಸ್ಥಳದಲ್ಲೇ `ಬಂಧನ-2′ ಚಿತ್ರಕ್ಕೆ ಚಾಲನೆ ಕೊಡಲಾಗಿದೆ

ಅಶೋಕ್ ಹೋಟೆಲ್ ವಿಷ್ಣುದಾದರ ನೆಚ್ಚಿನ ತಾಣ.ಬಿಡುವಿದ್ದಾಗ ಹೆಚ್ಚು ಕಾಲ ಈ ಹೋಟೆಲ್‌ನಲ್ಲಿ ಕಾಲ ಕಳೆಯುತ್ತಿದ್ದರು.ಸ್ನೇಹಿತರ ಜೊತೆ ಕ್ವಾಲಿಟಿ ಟೈಮ್‌ನ ಸ್ಪೆಂಡ್ ಮಾಡುತ್ತಿದ್ದ ದಾದ,ಸ್ವಿಮ್ಮಿಂಗ್ ಮಾಡಿ-ಟೆನ್ನಿಸ್ ಆಡಿ ಮೈಂಡ್ ಫ್ರೀ ಮಾಡಿಕೊಳ್ತಿದ್ದರು.ಇದೇ ಹೋಟೆಲ್‌ನಲ್ಲಿ 37 ವರ್ಷಗಳ ಹಿಂದೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ-ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಬಂಧನ’ ಸಿನಿಮಾ ಮುಹೂರ್ತ ನೆರವೇರಿತ್ತು. ಇಂದು ಅದೇ ಜಾಗದಲ್ಲಿ ದಾದಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಂಧನ-2 ಮುಹೂರ್ತ ಮಾಡಿದ್ದಾರೆ. ‘ಬಂಧನ’ ದಲ್ಲಿ ಯಜಮಾನರಿಗೆ ಜೊತೆಯಾಗಿದ್ದ ಸುಹಾಸಿನಿ ಮೇಡಂ `ಬಂಧನ-2 ‘ ಟೀಮ್ ಸೇರಿಕೊಂಡಿದ್ದಾರೆ. ಹೀಗಾಗಿ, ಫ್ಲೈಟ್ ಏರಿ ಬೆಂಗಳೂರಿಗೆ ಬಂದಿದ್ದರು. ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು-ಜೈ ಜಗದೀಶ್-ಭಾರತಿ ವಿಷ್ಣುವರ್ಧನ್-ವಿಜಯಲಕ್ಷ್ಮಿ ಸಿಂಗ್-ಆದಿತ್ಯ ಜೊತೆ ಪಾಲ್ಗೊಂಡಿದ್ದರು.

ಕನ್ನಡ ಸಿನಿಮಾ ಮಾಡಿ ತುಂಬಾ ವರ್ಷಗಳು ಕಳೀತು ಇದೀಗ ಮತ್ತೆ ಬಂದಿದ್ದೇನೆ. ಹೀಗೆ ಮಾತು ಶುರುಮಾಡಿದ ಹಿರಿಯ ನಟಿ ಸುಹಾಸಿನಿ ಮಣಿರತ್ನಂ, ಮೊದಲು ವಿಷ್ಣುದಾದರನ್ನು ನೆನಪು ಮಾಡಿಕೊಂಡರು. ‘ಬಂಧನ'ಮಾಡುವಾಗ ಅಷ್ಟು ದೊಡ್ಡ ಸೂಪರ್‌ಸ್ಟಾರ್ ಆಗಿದ್ದರೂ ಕೂಡ ಕನ್ನಡಕ್ಕೆ ಹೊಸಬಳಾಗಿದ್ದ ನನಗೆ ತುಂಬಾ ಕೋ ಆಪರೇಟ್ ಮಾಡುತ್ತಿದ್ದರು ಹಾಗೇ ತಾಳ್ಮೆಯಿಂದ ಹೇಳಿಕೊಡುತ್ತಿದ್ದರು.ವಿಷ್ಣು ಅವ್ರಂಥ ಹೃದಯವಂತ ವ್ಯಕ್ತಿ ಮತ್ತೊಬ್ಬರು ಸಿಕ್ಕಲ್ಲ.ದಾದ ಬಗ್ಗೆ ಹೇಳೋದಕ್ಕೆ ಪದಗಳು ಸಾಕಾಗಲ್ಲ.‘ಬಂಧನ’ ಮಾಡುವಾಗಲೂ ನಾನು ಸ್ಟುಡೆಂಟ್, ಈಗಲೂ ನಾನು ಸ್ಟುಡೆಂಟ್. ಯಾಕಂದ್ರೆ ಸಿನಿಮಾದಲ್ಲಿ ಕಲಿಯೋದು ಇನ್ನೂ ತುಂಬಾ ಇದೆ ಎಂದೇಳಿ ದೊಡ್ಡತನ ತೋರಿಸಿದರು. ಬಂಧನ-2 ಪಾರ್ಟ್ನಲ್ಲಿ ಭಾಗಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಅಂದ್ಹಾಗೇ, ‘ಬಂಧನ-2'ಮೊದಲ ಭಾಗದ ಮುಂದುವರೆದ ಭಾಗವಾ? ಅಸಲಿ ಕಥೆ ಏನು? ಎಲ್ಲಿಂದ ಆರಂಭವಾಗುತ್ತೆ? ಕಥೆ ಹೇಗೆ ಸಾಗುತ್ತೆ? ಇದ್ಯಾವ ಪ್ರಶ್ನೆಗೂ ನಿರ್ದೇಶಕರು ಉತ್ತರ ಕೊಟ್ಟಿಲ್ಲ.ಸದ್ಯಕ್ಕೆ,ಎಲ್ಲವನ್ನೂ ಸಸ್ಪೆನ್ಸ್ ಆಗಿಯೇ ಇಟ್ಟಿರುವ ನಿರ್ದೇಶಕ ಸಿಂಗ್ ಬಾಬು ಅವರು ಬಂಧನ-2 ಚಿತ್ರದಲ್ಲೂ ಯಜಮಾನರನ್ನು ಜ್ಞಾನಪಿಸುತ್ತೇವೆ ಎನ್ನುವ ಭರವಸೆಯನ್ನು ಕೊಟ್ಟಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಸಕಲ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಸಂತೃಪ್ತಿಗೊಂಡು ಎದ್ದು ಹೋಗುವಂತಹ ಸಿನಿಮಾ ಕೊಡಬೇಕು ಎನ್ನುವ ನಿಟ್ಟಿನಲ್ಲಿ ‘ಬಂಧನ-2'ಚಿತ್ರಕ್ಕೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.ಮೊದಲ ಭಾಗದಲ್ಲಿದ್ದಂತೆ ಇಲ್ಲೂ ಕೂಡ ಅಮರ-ಮಧುರ-ಪ್ರೇಮಕಾವ್ಯವಿರುತ್ತೆ.ಜೊತೆಗೆ ಇಲ್ಲಿವರೆಗೂ ಯಾರೂ ನೋಡಿರದ ಆಕ್ಷನ್‌ವೊಂದನ್ನು ಬಿಗ್‌ಸ್ಕ್ರೀನ್ ‌ನಲ್ಲಿ ತೋರಿಸುವುದಾಗಿ ತಿಳಿಸಿದ್ದಾರೆ. ‘ಬಂಧನ’ ದಲ್ಲಿದ್ದ ಸುಹಾಸಿನಿ ಮಣಿರತ್ನಂ ಹಾಗೂ ಜೈ ಜಗದೀಶ್ `ಬಂಧನ-2′ ಚಿತ್ರದಲ್ಲಿಯೂ ಇರಲಿದ್ದಾರೆ.

ಅಶೋಕ್ ಹೋಟೆಲ್‌ನಲ್ಲಿ ‘ಬಂಧನ'ಸಿನಿಮಾಗೆ ಮುಹೂರ್ತ ನಡೆಯುವಾಗ ನಂದಿನಿ ಪಾತ್ರಧಾರಿ ಸುಹಾಸಿನಿ ಡಾ.ಹರೀಶ್ ಪಾತ್ರಧಾರಿ ದಾದಾಗೆ ಕಪಾಳಮೋಕ್ಷ ಮಾಡುವ ದೃಶ್ಯ ಫಸ್ಟ್ ಶಾಟ್ ಆಗಿತ್ತು. ಈ ದೃಶ್ಯವನ್ನು ಹಾಗೂ ಆಕ್ಷನ್ ಕಟ್ ಹೇಳುತ್ತಿದ್ದ ತಂದೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಮೂಲೆಯಲ್ಲಿ ನಿಂತು ನೋಡುತ್ತಿದ್ದ ಅಂದಿನ ಆರು ವರ್ಷದ ಆದಿತ್ಯ ಇವತ್ತು ಬಂಧನ-2 ಚಿತ್ರಕ್ಕೆ ಹೀರೋ.

ಹೌದು,ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ‘ಬಂಧನ-2’ ಸಿನಿಮಾಗೆ ಮಗನನ್ನೇ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮಗನ ಇಮೇಜ್‌ನ ಬದಲಾಯಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೋ- ಇಲ್ಲವೋ ಗೊತ್ತಿಲ್ಲ. ಆದರೆ, ಆಕ್ಷನ್ ಹೀರೋ ಆಗಿ ಧಗಧಗಿಸುತ್ತಿದ್ದ ದಾದಾರನ್ನು ‘ಬಂಧನ'ಚಿತ್ರದಲ್ಲಿ ಅಮರ ಪ್ರೇಮಿಯಾಗಿಸಿ ಇಮೇಜ್‌ನ ಬದಲಾಯಿಸಿದರು.ಇದ್ರಿಂದ ವಿಷ್ಣುವರ್ಧನ್ ಲವ್ವರ್‌ಬಾಯ್ ಆಗಿಯೂ ಯಶಸ್ಸನ್ನು ಕಂಡರು.ಅದೇ ರೀತಿ ಡೆಡ್ಲಿಸೋಮ ಆದಿತ್ಯರ ಇಮೇಜ್ ಕೂಡ ‘ಬಂಧನ-2’ ಚಿತ್ರದಿಂದ ಬದಲಾಗುತ್ತಾ? ಮಾಸ್ ಆಡಿಯನ್ಸ್ ಗೆ ಕನೆಕ್ಟ್ ಆಗಿರುವ ಆದಿತ್ಯ, ಲವ್ವರ್‌ಬಾಯ್ ಆಗಿ ಕ್ಲಿಕ್ ಆಗ್ತಾರಾ ಕುತೂಹಲದಿಂದ ಕಾದು ನೋಡಬೇಕು.

ಸದ್ಯಕ್ಕೆ ‘ಬಂಧನ-2'ಚಿತ್ರದ ಮುಹೂರ್ತ ನೆರವೇರಿದೆ.ಮಾರ್ಚ್ ತಿಂಗಳಿಂದ ಚಿತ್ರೀಕರಣಕ್ಕೆ ಹೊರಡುವ‌ ಪ್ಲ್ಯಾನ್ ಚಿತ್ರತಂಡಕ್ಕಿದೆ.ಹಿಸ್ಟಿರಿ ರಿಪೀಟ್ ಮಾಡಬೇಕು ಎನ್ನುವ ಹುರುಪು ಇಡೀ ಸಿನಿಮಾ ತಂಡಕ್ಕಿದ್ದು,ಅಂಗಡಿ ಶಾಂತಪ್ಪನವರ ಕೈಯಲ್ಲಿ ಕಥೆ ಬರೆಸುತ್ತಿದ್ದಾರೆ.ಚಕ್ರವರ್ತಿ ಚಿಂತನ್ ‘ಬಂಧನ-2’ ಗೆ ಸಂಭಾಷಣೆ ಬರೆಯುತ್ತಿದ್ದಾರೆ.

ಧರ್ಮವಿಶ್ ಸಂಗೀತ ಸಂಯೋಜನೆ ಮಾಡುತ್ತಿದ್ದು ಒಟ್ಟು ಆರು ಹಾಡುಗಳು ಚಿತ್ರದಲ್ಲಿವೆ. ಅಣಜಿ ನಾಗರಾಜ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ತುಂಬಾ ವರ್ಷಗಳ ನಂತರ ಸಿನಿಮಾಟೋಗ್ರಫಿಗೆ ಮರಳಿರುವ ಅಣಜಿ ನಾಗರಾಜ್ ಅವರು `ಬಂಧನ-2′ ಗೆ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾವನ್ನು ಅದ್ದೂರಿಯಾಗಿ ತೆರೆ ಮೇಲೆ ತರಬೇಕು ಎನ್ನುವ ಕನಸು ಕಂಡಿದ್ದಾರೆ. ಸದ್ಯಕ್ಕಿಷ್ಟು ಮಾಹಿತಿ ಚಿತ್ರತಂಡ ಹಂಚಿಕೊಂಡಿದೆ. ತಾರಾಬಳಗ ಸೇರಿದಂತೆ ಇನ್ನಿತರ ಮಾಹಿತಿ ಮಾರ್ಚ್ ನಂತರವಷ್ಟೇ ಹೊರಬೀಳಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ರೂಲ್ ಮಾಡಲು ಹೊರಟು ನಿಂತರು ರೈಡರ್- ಯುವರಾಜ ನಿಖಿಲ್ ‌ಅಬ್ಬರಕ್ಕೆ ಮುಹೂರ್ತ ಫಿಕ್ಸ್ !

ಯುವ ರಾಜ ನಿಖಿಲ್ ಕುಮಾರ ಸ್ವಾಮಿ ಮತ್ತೆ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಲಹರಿ ಸಂಸ್ಥೆಯ ಬಹು ನಿರೀಕ್ಷಿತ ಸಿನಿಮಾ ‘ರೈಡರ್ ‌’ ಗ್ರಾಂಡ್ ರಿಲೀಸ್ ಗೆ ಸಜ್ಜಾಗಿದೆ. ಡಿಸೆಂಬರ್ ೨೪ ರಂದು ‌ಬೆಳ್ಳಿತೆರೆ ಮೇಲೆ ನಿಖಿಲ್ ಕುಮಾರ್ ಸ್ವಾಮಿ ರೈಡಿಂಗ್ ಶುರು‌ ಮಾಡಲಿದ್ದಾರೆ. ಕನ್ನಡ ದ ಮಟ್ಟಿಗೆ ರೈಡರ್ ಅನೇಕ ಕಾರಣಕ್ಕೆ ಕುತೂಹಲ‌ಹುಟ್ಟಿಸಿರೋ‌ ಸಿನಿಮಾ. ‘ಮಹಾ ಕ್ಷತ್ರೀಯ’, ರೋಜಾ,’ ಗಣೇಶನ‌ ಗಲಾಟೆ’ ಚಿತ್ರಗಳ ನಂತರ ಲಹರಿ ಸಂಸ್ಥೆ ನಿರ್ಮಾಣ ಮಾಡಿದ ಬಿಗ್ ಬಜೆಟ್ ಸಿನಿಮಾ ಎನ್ನುವುದರ ಜತೆಗೆ ಕನ್ನಡ, ತೆಲುಗು ಸೇರಿದಂತೆ ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ.‌

ಹಾಗೆಯೇ ನಿಖಿಲ್ ಕುಮಾರ ಸ್ವಾಮಿ ನಾಯಕರಾಗಿರೋ ಈ ಚಿತ್ರಕ್ಕೆ ನವ ತಾರೆ ಕಾಶ್ಮೀರಿ ಪರದೇಶಿ‌ ನಾಯಕಿ. ಹಾಗೆಯೇ ದೊಡ್ಡ ತಾರಾಗಣವೇ ಇಲ್ಲಿದೆ. ಚಿತ್ರ ತಂಡ ಮಾಹಿತಿ ಪ್ರಕಾರ ಕನ್ನಡದಲ್ಲಿಯೇ ಈ ಚಿತ್ರವೂ ೨೫೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಚಿತ್ರದ ರಿಲೀಸ್ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರ ತಂಡ ಇತ್ತೀಚೆಗೆ ಮಾಧ್ಯಮ ಮುಂದೆ ಬಂದಿತ್ತು. ಅಲ್ಲಿ ಚಿತ್ರದ ರಿಲೀಸ್ ಸಿದ್ದತೆಯ ಜತೆಗೆ ವಿಶೇಷತೆ ಕುರಿತು ಚಿತ್ರತಂಡ ಮಾಹಿತಿ‌ ಹಂಚಿಕೊಂಡಿತು.

ಮೊದಲು ಮೈಕ್ ಹಿಡಿದು ಮಾತಿಗೆ ನಿಂತಿದ್ದು ನಿರ್ಮಾಪಕರು ಆದ ಲಹರಿ ವೇಲು ಅವರು.’ ಲಹರಿ ಸಂಸ್ಥೆ ಈ ಹಿಂದೆ ಮಹಾ ಕ್ಷತ್ರಿಯ, ಗಣೇಶನ ಗಲಾಟೆ ಹಾಗೂ ತೆಲುಗಿನ ರೋಜ ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಈಗ ಸುನೀಲ್ ಅವರ ಶಿವನಂದಿ ಎಂಟರ್ ಟೈನ್ ಮೆಂಟ್ ಜೊತೆಗೂಡಿ “ರೈಡರ್” ಚಿತ್ರ ನಿರ್ಮಾಣ ಮಾಡಿದ್ದೇವೆ. ನಮ್ಮ ಅಣ್ಣ ಮನೋಹರ ನಾಯ್ಡು ಅವರ ಮಕ್ಕಳಾದ ಚಂದ್ರು ಹಾಗೂ ನವೀನ್ ಈಗ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಗೆದ್ದಿದೆ. ಚಿತ್ರ ಕೂಡ ಯಶಸ್ವಿಯಾಗಲಿದೆ ಎಂದರು ಲಹರಿ ವೇಲು.

ಇನ್ನು ಲಹರಿ ಸಂಸ್ಥೆಯ ಜತೆಗೆ ಸೇರಿ ಸಿನಿಮಾ ಮಾಡಿದ ಅನುಭವ ಕುರಿತು ಶಿವನಂದಿ ಸಂಸ್ಥೆಯ ಸುನೀಲ್ ಗೌಡ ಮಾತನಾಡಿದರು.’ ಒಳ್ಳೆಯ ಸಿನಿಮಾ ಮಾಡಿದ್ದ ಖುಷಿ ಇದೆ. ಇದೇ ಡಿಸೆಂಬರ್ 24 ರಂದು ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ. ಮೋಜೊ ಆಪ್ ನಲ್ಲಿ ನಮ್ಮ ಚಿತ್ರದ ಹಾಡು 221 ಮಿಲಿಯನ್‌ ಗೂ ಅಧಿಕ ವೀಕ್ಷಣೆಯಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಅಪ್ಪು ಅವರನ್ನು ನೆನೆದು ಮಾತು ಆರಂಭಿಸಿದ ನಾಯಕ ನಿಖಿಲ್ ಕುಮಾರ್ , ಕಲಾವಿದರ ಸಂಘಕ್ಕೆ ಮೊದಲ ಬಾರಿಗೆ ಅಂಬರೀಶ್ ಅವರೊಡನೆ ಬಂದಿದ್ದನ್ನು ನೆನಪಿಸಿಕೊಂಡರು. ‘ ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ನಡೆಯಬೇಕಾದಾಗ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಈ ಚಿತ್ರದ ಕಥೆ ಹೇಳಿದರು. ನಂತರ ಸುನೀಲ್ ಹಾಗೂ ಲಹರಿ ಸಂಸ್ಥೆ ಮೂಲಕ ಈ ಚಿತ್ರದ ನಿರ್ಮಾಣ ಆರಂಭವಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾವಿದ ಹಾಗೂ ತಂತ್ರಜ್ಞರನ್ನು ನಿಖಿಲ್ ಅವರು ಪ್ರತ್ಯೇಕವಾಗಿ ಅಭಿನಂದಿಸಿದರು. ಅರ್ಜುನ್ ಜನ್ಯರ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡುಗಳು ಹಿಟ್ ಆಗಿರುವುದು ಸಂತೋಷ ತಂದಿದೆ. ಇದೇ 24 ನೇ ತಾರೀಖು ನಮ್ಮ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಬೆಂಬಲವಿರಲಿ’ ಎನ್ನುತ್ತಾರೆ ನಾಯಕ ನಿಖಿಲ್ ಕುಮಾರ್.

ನಿರ್ದೇಶಕ ವಿಜಯ್ ಕುಮಾರ್ ಕೊಂಡ ಚಿತ್ರ ಉತ್ತಮವಾಗಿ ಬರಲು ಸಹಕರಿಸಿದ ತಂಡಕ್ಕೆ ಧನ್ಯವಾದ ತಿಳಿಸಿದರು. ವಿತರಕ ಸುಪ್ರೀತ್ ಚಿತ್ರ ಬಿಡುಗಡೆ ಬಗ್ಗೆ ಮಾಹಿತಿ ನೀಡಿದರು. ನಟರಾದ ರಾಜೇಶ್ ನಟರಂಗ, ಗರುಡ ರಾಮ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ, ಮಂಜು ಪಾವಗಡ, ಗಿರೀಶ್, ಅರ್ಜುನ್ ಗೌಡ, ಸಂತು, ಚಿಲ್ಲರ್ ಮಂಜು, ಬೇಬಿ ಪ್ರಾಣ್ಯ, ಗೀತರಚನೆಕಾರ ಕವಿರಾಜ್, ನೃತ್ಯ ನಿರ್ದೇಶಕ ಭೂಷಣ್ ಹಾಗೂ ಸಾಹಸ ನಿರ್ದೇಶಕ ಚೇತನ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಅದ್ಭುತ-ಅಮೋಘ-ಅವಿಸ್ಮರಣೀಯ `ಆರ್‌ಆರ್‌ಆರ್’ ಟ್ರೈಲರ್; ಜಕ್ಕಣ್ಣನ ಕಲ್ಪನೆಗೆ ಹಾಲಿವುಡ್ಡು ಅಲ್ಲಾಡುತ್ತೆ ಗುರು !

ಸೌತ್ ಸಿನಿಮಾ ಇಂಡಸ್ಟ್ರಿಯ ಸೆನ್ಸೇಷನಲ್ ‘ಆರ್‌ಆರ್‌ಆರ್'ಚಿತ್ರದ ಟ್ರೈಲರ್ ಹೊರಬಿದ್ದಿದೆ.ತೆಲುಗು ಸೇರಿದಂತೆ ಕನ್ನಡ-ತಮಿಳು-ಮಲೆಯಾಳಂ ಹಿಂದಿ ಭಾಷೆಯಲ್ಲಿ ಅನಾವರಣಗೊಂಡಿದ್ದು ಜಕ್ಕಣ್ಣ ಹಾಲಿವುಡ್ ಮಂದಿಯನ್ನೂ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ.೩ ನಿಮಿಷ ೭ ಸೆಕೆಂಡ್ ಇರುವ ಟ್ರೈಲರ್ ಥ್ರಿಬ್ಬಲ್ ಆರ್ ಭವಿಷ್ಯವನ್ನು ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾ ಮಂದಿಯ ತಾಕತ್ತೇನು ಎಂಬುದನ್ನೇ ಇಡೀ ಜಗತ್ತಿಗೆ ತೋರಿಸುತ್ತಿದೆ.ಜಕ್ಕಣ್ಣನ ಕಲ್ಪನೆಯ ‘ಥ್ರಿಬ್ಬಲ್ ಆರ್’ ಕಥೆಗೆ ಟ್ರೈಲ್ಲರ‍್ರೇ ಕನ್ನಡಿ ಹಿಡಿಯುತ್ತಿದೆ. ‘ರೌದ್ರ-ರಣ-ರುಧೀರ'ಸಿನಿಮಾ ಎಷ್ಟು ಅದ್ಭುತವಾಗಿ-ಅದ್ದೂರಿಯಾಗಿ-ವೈಭವೊಪೇತವಾಗಿ ಮೂಡಿಬಂದಿರಬಹುದು ಎನ್ನುವ ಕಲ್ಪನೆಗೆ ಟ್ರೈಲರ್ ಜೀವ ತುಂಬುತ್ತಿದೆ.ಮಲ್ಟಿಸ್ಟಾರರ್ ಸಿನ್ಮಾ ಅಂದ್ರೆ ಹಿಂಗರ‍್ಬೇಕು ಎನ್ನುವುದರ ಜೊತೆಗೆ ಚಿತ್ರರಂಗ ಒಂದು ಕುಟುಂಬವಿದ್ದಂತೆ ಅಂತ ಬಾಯ್ ಮಾತಿಗೆ ಹೇಳದೇ, ಜೂನಿಯರ್ ಎನ್‌ಟಿಆರ್ ಹಾಗೂ ರಾಮ್‌ಚರಣ್ ತೇಜಾರಂತೆ ಒಟ್ಟಿಗೆ ಅಭಿನಯಿಸಿ ತೋರಿಸ್ಬೇಕು’ ಎನ್ನುವ ಸೂಕ್ಷ್ಮತೆಯನ್ನು ಕೂಡ ಟ್ರೈಲರ‍್ರೇ ಹೇಳ್ತಿದೆ.

ಜಕ್ಕಣ್ಣನ ಮೆದುಳಿನಲ್ಲಿ ಮಿನುಗಿ ದೃಶ್ಯರೂಪಕ ಪಡೆದುಕೊಂಡಿರುವ ತ್ರಿಬಲ್‌ಆರ್' ಟ್ರೈಲರ್ ಏಕ್ದಮ್ ಜಕ್ಕಾಸ್ ಅಷ್ಟೇ.ಬಾಹುಬಲಿ ಸಾರಥಿ ಎಸ್.ಎಸ್. ರಾಜಮೌಳಿಯ ಸಿನಿಮಾಗಳಂದ್ರೆ ಅಲ್ಲಿ ಅದ್ದೂರಿತನಕ್ಕೆ ಕೊರತೆಯಿರಲ್ಲ, ಕೂತೂಹಲಕ್ಕೆ ಮಿತಿಯಿರುವುದಿಲ್ಲ,ಚಿತ್ರಪ್ರೇಮಿಗಳು ನಿರೀಕ್ಷೆ ಮಾಡಿದ್ದಕ್ಕಿಂತ ಒಂದು ತೂಕ ಜಾಸ್ತಿನೇ ಟ್ವಿಸ್ಟ್ ಅಂಡ್ ಟರ್ನ್ಸ್ ಇಟ್ಟಿರುತ್ತಾರೆ.ಕಥೆ ಮೇಲೆ ಇಂಚಿಂಚೂ ವರ್ಕ್ ಮಾಡಿರುತ್ತಾರೆ,ಪ್ರತಿಪಾತ್ರಕ್ಕೂ ಭೂಮಿ ತೂಕದ ಬೆಲೆ ಬರುವಂತೆ ಕಟ್ಟಿಕೊಡುತ್ತಾರೆ,ಮಾತ್ರವಲ್ಲ ಕಲಾವಿದರ ಹಣೆ ಮೇಲೆ ಇಟ್ಟಿರುವ ಬೊಟ್ಟು ಕೂಡ ಒಂದು ಕಥೆ ಹೇಳುತ್ತೆ.ಅದನ್ನು ನಾವು ಈ ಹಿಂದಿನ ಸಿನಿಮಾಗಳಲ್ಲಿ ನೋಡಿದ್ದೇವೆ. ಹೀಗೆ ಕಥೆ-ಚಿತ್ರಕಥೆ-ಸಂಭಾಷಣೆ-ಪಾತ್ರವರ್ಗ-ಮೇಕಿಂಗ್ ಅಂತ ತಲೆಕೆಡಿಸಿಕೊಂಡು ಕಲೆಗೆ ಜೀವತುಂಬುವ, ಒಂದೊಂದು ಫ್ರೇಮ್ ಕೂಡ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ತೋರಿಸುವ ಕಲಾಕಾರ್ ಜಕ್ಕಣ್ಣ,೩ ನಿಮಿಷ ೭ ಸೆಕೆಂಡ್’ ತ್ರಿಬಲ್ ಆರ್ ಟ್ರೈಲರ್ ಬಿಟ್ಟು ಇಡೀ ಜಗತ್ತು ವಾರೆವ್ಹಾ ಎನ್ನುವಂತೆ ಮಾಡಿರುವುದು ನಿಜಕ್ಕೂ ಗ್ರೇಟ್‌ನೆಸ್ ಅಲ್ಲದೇ ಮತ್ತೇನು ಹೇಳಿ.

'ಆರ್‌ಆರ್‌ಆರ್' ಇಡೀ ಜಗತ್ತು ಎದುರುನೋಡ್ತಿರುವ ಸಂಗತಿ ನಿಮ್ಮೆಲ್ಲರಿಗೂ ಗೊತ್ತಿದೆ.ಭಾರತೀಯ ಚಿತ್ರರಂಗ ಜಾತಕಪಕ್ಷಿಯಂತೆ ಕಾಯ್ತಿರೋ ಸಿನಿಮಾಗಳ ಪಟ್ಟಿಗೆ ಸೌತ್ ಸಿನಿಮಾ ಇಂಡಸ್ಟ್ರಿಯ ‘ಆರ್‌ಆರ್‌ಆರ್’ ಕೂಡ ಸೇರಿಕೊಳ್ಳುತ್ತೆ. ಇಷ್ಟೊಂದು ಕೂತೂಹಲದಿಂದ ಕಾಯೋದಕ್ಕೆ ಮೊದಲನೆಯ ಕಾರಣ ರಾಜಮೌಳಿಯ ನಿರ್ದೇಶನವಾದರೆ, ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್ ಹಾಗೂ ಮೆಗಾಪ್ರಿನ್ಸ್ ರಾಮ್‌ಚರಣ್ ತೇಜಾ ಇಬ್ಬರು ಸ್ಕ್ರೀನ್ ಶೇರ್ ಮಾಡಿರುವುದು ಎರಡನೇ ಕಾರಣ. ಇವರಿಬ್ಬರು ಟಿಟೌನ್ ಅಂಗಳದಲ್ಲಿ ಸೂಪರ್‌ಸ್ಟಾರ್‌ಗಳು. ಇಬ್ಬರಿಗೂ ಆಕಾಶವನ್ನು ಅದುರಿಸುವಷ್ಟು ಅಭಿಮಾನಿಗಳಿದ್ದಾರೆ. ಇಬ್ಬರಿಗೂ ತಮ್ಮದೇ ಆದ ಸ್ಟಾರ್‌ಢಮ್ ಇದೆ ಹಾಗೂ ಬೇರೆ ಬೇರೆ ಇಮೇಜ್ ಇದೆ. ಅದೆಲ್ಲವನ್ನೂ ಬದಿಗಿಟ್ಟು ‘ಜಕ್ಕಣ್ಣ'ನ ಕಲ್ಪನೆಯ ‘ಆರ್‌ಆರ್‌ಆರ್’ಗೆ ಜೀವ ತುಂಬಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಹುಲಿಯ ಸದ್ದನ್ನು ಅಡಗಿಸುವಷ್ಟರ ಮಟ್ಟಿಗೆ ಯಂಗ್ ಟೈಗರ್ ಘರ್ಜಿಸಿದ್ದಾರೆ. ಯಂಗ್ ರೆಬೆಲ್‌ಸ್ಟಾರ್ ರಾಮಚರಣ್ ಭರ್ಜರಿ ಆಕ್ಷನ್ ಗಿಂತ ಅವರು ಉರಿಗೊಳಿಸಿಕೊಂಡಿರುವ ದೇಹಸ್ವರೂಪಕ್ಕೆ ಮಾಸ್ ಪ್ರಿಯರು ಮಾತ್ರವಲ್ಲ ಮಹಾರಾಣಿ ಕಾಲೇಜ್‌ನ ಹುಡ್ಗೀಯರು ಹೃದಯ ಕೊಡ್ತಾರೆ.

ಚಿಂಕಿ-ಮಿಂಕಿ ಡ್ರಸ್ ತೊಟ್ಟು ಬಾರ್ಬಿಡಾಲ್ ಥರಹ ಮಿಂಚುತ್ತಿದ್ದ ಆಲಿಯಾ ಭಟ್ `ಆರ್‌ಆರ್‌ಆರ್’ ಚಿತ್ರದಲ್ಲಿ ಪಕದ್ಮನೆ ಹುಡುಗಿ ಥರ ಕಾಣಿಸಿಕೊಳ್ತಿದ್ದಾರೆ. ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಒಂದೇ ಫ್ರೇಮ್‌ನಲ್ಲಿ ಬರುವ ಆಲಿಯಾ ಇಷ್ಟವಾಗ್ತಾರೆ. ಒಲಿವಿಯಾ ಮೋರಿಸ್ ಬ್ಯೂಟಿ ಕಣ್ಣಿಗೆ ಹೊಡೆಯುತ್ತೆ. ಶ್ರೇಯಾಶರಣ್ ಒಂದೇ ನೋಟದಲ್ಲೇ ಬೆಚ್ಚಿಬೀಳಿಸ್ತಾರೆ. ಬಾಲಿವುಡ್ ನಟ ಅಜಯ್ ದೇವಗನ್ ಕೈಲಿ ಬಂದೂಕು ಹಿಡಿದು ಎಗರೆಗರಿ ಹೊಡೆಯುತ್ತಾರೆ. ಕೈಲಿ ಬಂದೂಕು ಇದೆಯೆಂದು ಗುಂಡಿಗೆಗೆ ಗನ್ನಿಟ್ಟ ಹಾಲಿವುಡ್ ಸ್ಟಾರ್‌ಗಳು, ರಾಮ್‌ಚರಣ್ ರಾಮನ ಅವತಾರವೆತ್ತಿ ಬಂದಾಗ ಕಣ್ಣುಬಾಯಿಬಿಡ್ತಾರೆ. ಎಲ್ಲದಕ್ಕಿಂತ ಎಕ್ಸ್ಟ್ರಾಡಿನರಿ ಅಂದರೆ ರಾಮ್‌ಚರಣ್ ತೇಜಾರನ್ನ ಜೂನಿಯರ್ ಎನ್‌ಟಿಆರ್ ಹೆಗಲ ಮೇಲೆ ಹೊತ್ತು ಕುಣಿಯುವುದು. ಅಂದ್ಹಾಗೇ, ಪಿಕ್ಚರ್‌ನಲ್ಲಿ ಇವರಿಬ್ಬರು ಅಣ್ತಮ್ಮಾಸ್ ಆಗಿರಲಿ ಅಥವಾ ದೋಸ್ತಿಗಳೇ ಆಗಿರಲಿ. ಆದರೆ ಸ್ಟಾರ್‌ನಟರಿಬ್ಬರು ಒಂದೇ ಫ್ರೇಮ್‌ನಲ್ಲಿ ಈ ರೀತಿ ಕಂಡ್ರೆ ಅಭಿಮಾನಿಗಳಿಗೆ ಅದಕ್ಕಿಂತ ಹಬ್ಬ ಇನ್ನೊಂದು ಇಲ್ಲ ಬಿಡಿ.

ಒಟ್ನಲ್ಲಿ ಆರ್‌ಆರ್‌ಆರ್' ಟ್ರೈಲರ್ ಅದ್ಬೂತವಾಗಿ ಮೂಡಿಬಂದಿದೆ. ಭರ್ಜರಿ ಸ್ಟಂಟ್ಸ್-ಸಸ್ಪೆನ್ಸ್-ಸ್ನೇಹ-ಸಹೋದರತ್ವ-ಸ್ವಾತಂತ್ರ್ಯ-ಸ್ವಾಭಿಮಾನ-ಜನ ಹೀಗೆ ಹಲವು ಕಾರಣಕ್ಕೆತ್ರಿಬಲ್ ಆರ್’ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿದೆ. ಇಬ್ಬರು ಫ್ರೀಡಂಫೈಟರ್‌ಗಳ ಸಾಹಸಗಾಥೆ ಇದಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜಾ ಕಾಣಿಸಿಕೊಂಡಿದ್ದಾರೆ. ಕೊಮರಂ ಭೀಮ್ ಪಾತ್ರವನ್ನು ಜೂನಿಯರ್ ಎನ್‌ಟಿಆರ್ ನಿಭಾಯಿಸಿದ್ದಾರೆ. ತಳ ಸಮುದಾಯದ ಜನರನ್ನು ರಕ್ಷಿಸುವ ಕೊಮರಂ ಭೀಮ್ ನ ಶಿಕ್ಷಿಸುವ ಬ್ರಿಟಿಷ್ ಅಧಿಕಾರಿ ಅಲ್ಲೂರಿ ಸೀತರಾಮ ರಾಜು ಮುಂದೆ ಭೀಮ್ ಜೊತೆಗೆ ಕೈಜೋಡಿಸ್ತಾರೆ.

ಮೊದಲು ವಿರೋಧಿಗಳಾಗಿದ್ದವರು ಅನಂತರ ಸ್ನೇಹಿತರಾಗ್ತಾರೆ. ಇಬ್ಬರು ಜೊತೆಯಾಗಿ ಬ್ರಿಟಿಷರ ವಿರುದ್ದ ಸಿಡಿದೇಳುತ್ತಾರೆ. ಇಷ್ಟು ಕಥೆ ಸದ್ಯಕ್ಕೆ ಟ್ರೈಲರ್‌ನಿಂದ ಗೊತ್ತಾಗುತ್ತೆ. ಅಸಲಿ ಕಥೆ ಏನು? ಎಂತ? ಎನ್ನುವುದು ಜನವರಿ ೦೭ರಂದು ಗೊತ್ತಾಗಲಿದೆ. ೧೦೦೦ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಡಿ.ವಿವಿ ದಾನಯ್ಯ ನಿರ್ಮಾಣದಲ್ಲಿ ಕೋಟ್ಯಾನುಕೋಟಿ ವೆಚ್ಚದಲ್ಲಿ ಆರ್‌ಆರ್‌ಆರ್' ರೆಡಿಯಾಗಿದೆ. ದೊಡ್ಡಮಟ್ಟದಲ್ಲಿ ಇಡೀ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಸದ್ಯ, ಪ್ರಮೋಷನ್ ಕೆಲಸದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದ್ದು, ನಾಳೆ ಅಂದ್ರೆ ಶುಕ್ರವಾರ ಬೆಳಗ್ಗೆ ಟಿಫನ್ ಮುಗಿಸಿ ಬೆಂಗಳೂರಿನಲ್ಲಿಆರ್‌ಆರ್‌ಆರ್’ ತಂಡ ಪ್ರಮೋಷನ್ ಮಾಡ್ತಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!