Categories
ಸಿನಿ ಸುದ್ದಿ

ಜನಮನ‌ ಗೆದ್ದ ಶ್ರೀಜಗನ್ನಾಥ‌ ದಾಸರು…

ಹರಿಕಥಾಮೃತ ಸಾರದಂತಹ ಮೇರುಕೃತಿ ನೀಡಿರುವ ದಾಸ ಶ್ರೇಷ್ಠ ಶ್ರೀಜಗನ್ನಾಥ‌ ದಾಸರ ಕುರಿತಾದ “ಶ್ರೀ ಜಗನ್ನಾಥ ದಾಸರು” ಚಿತ್ರ ನಮ್ಮ ರಾಜ್ಯವಷ್ಟೇ ಅಲ್ಲದೇ, ಹೊರ ದೇಶದಲ್ಲೂ ಜನಮನಸೂರೆಗೊಂಡಿದೆ

ನಿರ್ದೇಶಕ ಮಧುಸೂದನ್ ಹವಾಲ್ದಾರ್, ಚಿತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಯಿಂದ ಖುಷಿಯಾಗಿದ್ದಾರೆ. ಈ ವೇಳೆ ಮಾತಾಡಿದ ಅವರು, ‘ ನಮ್ಮ ಚಿತ್ರಕ್ಕೆ ಸಿಕ್ಕಿರುವ ಪ್ರಶಂಸೆ ಕಂಡು ಆನಂದವಾಗಿದೆ.‌ ಚಿತ್ರ ಆರಂಭಿಸಲು‌ ಯೋಚನೆ ಮಾಡಿದಾಗ‌ ನನ್ನ ಅನೇಕ ಸ್ನೇಹಿತರೆ‌,‌ ಈಗಿನ ಕಾಲದಲ್ಲಿ ‌ಈ‌ ಸಿನಿಮಾ ಯಾರು ನೋಡುತ್ತಾರೆ ಎಂದಿದ್ದರು.‌ ಆದರೆ ನಾನು ಧೃತಿಗೆಡಲಿಲ್ಲ.‌ ಈ‌ ಸಿನಿಮಾ ಮಾಡಿದ್ದೇನೆ. ಈ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕ ತ್ರಿವಿಕ್ರಮ ಜೋಶಿ ಅವರ ಸಹಕಾರ ಮುಖ್ಯ ಕಾರಣ. ಚಿತ್ರ ನೋಡಿರುವ ಪಂಡಿತ, ಪಾಮರರೆಲ್ಲರು ಈ ಚಿತ್ರದ ಎರಡನೇ ಭಾಗ ನೋಡುವ ಕಾತುರದಲ್ಲಿದ್ದೇವೆ ಎಂದರು. ಆದಷ್ಟು ಬೇಗ ಆರಂಭ ಮಾಡುತ್ತೇವೆ. ಕರ್ನಾಟಕ ಕಂಡ ಶ್ರೇಷ್ಠ ಹರಿದಾಸರಾದ ಶ್ರೀ ವಿಜಯದಾಸರು ಹಾಗೂ ಶ್ರೀ ಪ್ರಸನ್ನ ವೆಂಕಟದಾಸರ ಕುರಿತಾದ ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಮುಂದಿನ‌ ದಿನಗಳಲ್ಲಿ ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತಂತೆ ಸಿನಿಮಾ‌ ಮಾಡುವ ಯೋಜನೆಯಿದೆ’ ಎಂದರು.

ನಮ್ಮ ಸಿನಿಮಾ ಇಷ್ಟು ಜನಪ್ರಿಯತೆ ಪಡೆಯಲು ಶ್ರೀ ಜಗನ್ನಾಥ ದಾಸರ ಆಶೀರ್ವಾದವೇ ಕಾರಣ. ಹೋದಲೆಲ್ಲಾ ಉತ್ತಮ ಚಿತ್ರ ನಿರ್ಮಾಣ ‌ಮಾಡಿದ್ದೀರಿ‌ ಎಂದು ಎಲ್ಲರೂ ಹೇಳುತ್ತಿರುವುದು ಕೇಳಿ ಕರ್ಣಾನಂದವಾಗಿದೆ. ಹಿಂದೆ ಮಂತ್ರಾಲಯ ಮಹಾತ್ಮೆ ಚಿತ್ರ ಬಿಡುಗಡೆಯಾದಾಗ ಜನ‌ ಚಪ್ಪಲಿ ಬಿಟ್ಟು ಸಿನಿಮಾ ನೋಡಿದ್ದನ್ನು ಕೇಳಿದ್ದೆವು. ಈಗ ಈ ಚಿತ್ರವನ್ನು ಜನ ಹಾಗೆ ನೋಡುತ್ತಿದ್ದಾರೆ. ಕರ್ನಾಟಕದ ಜನರಿಗೆ ಎಷ್ಟು ಧನ್ಯವಾದ ತಿಳಿಸಿದರು ಸಾಲದು. ಸುಮಾರು ಹದಿನೆಂಟಕ್ಕು ಹೆಚ್ಚು ಹೊರದೇಶದಲ್ಲಿ ಈ ಚಿತ್ರ ವೀಕ್ಷಿಸಿದ್ದಾರೆ. ಇನ್ನೂ ಹೆಚ್ಚಿನ ದೇಶಗಳಲ್ಲಿ ಸದ್ಯದಲ್ಲೇ ಪ್ರದರ್ಶನವಾಗಲಿದೆ. ಕೆಲವು ಕಡೆ ದಾಸರ ವೇಷ ಧರಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಾ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಸಿನಿಮಾ ಆರಂಭಕ್ಕೂ ಒಂದು ಗಂಟೆ ಮುಂಚೆ ಭಜನಾ ಗೋಷ್ಠಿ ಏರ್ಪಡಿಸುತ್ತಿದ್ದಾರೆ. ಇದನೆಲ್ಲಾ ಕಂಡು ಕಣ್ತುಂಬಿ ಬರುತ್ತಿದೆ ಎನ್ನುತ್ತಾರೆ ನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಶಿ.

ನನಗೆ ಇದು ಮೊದಲ ಚಿತ್ರ. ಈ ಚಿತ್ರದ ಸ್ಕ್ರಿಪ್ಟ್ ಕೊಟ್ಟಾಗ ಈಗಿನ ಟ್ರೆಂಡ್ ಬೇರೆ ಇದೆ. ಜನ ಒಪ್ಪಿಕೊಳ್ಳುತ್ತಾರಾ? ಎಂಬ ಆತಂಕವಿತ್ತು. ಈಗ ಆತಂಕ ದೂರವಾಗಿದೆ. ಚಿತ್ರ ಗೆದ್ದಿದೆ. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಎಂದರು ಜಗನ್ನಾಥ ದಾಸರ ಪಾತ್ರಧಾರಿ ಶರತ್ ಜೋಶಿ.

ನಟ ಪ್ರಭಂಜನ ದೇಶಪಾಂಡೆ, ಕಥೆ, ಚಿತ್ರಕಥೆ ರಚನೆಯಲ್ಲಿ ನಿರ್ದೇಶಕರಿಗೆ ನೆರವಾಗಿರುವ ಜೆ.ಎಂ.ಪ್ರಹ್ಲಾದ್, ಸಂಗೀತ ನಿರ್ದೇಶಕ ವಿಜಯ್ ಕೃಷ್ಣ ತಮ್ಮ ಅಭಿಪ್ರಾಯ ಹಂಚಿಕೊಂಡರು.

Categories
ಸಿನಿ ಸುದ್ದಿ

ಫೆಬ್ರವರಿಯಲ್ಲಿ ಬೆಂಗಳೂರು 13 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

2022 ನೇ ಫೆಬ್ರವರಿಯಲ್ಲಿ ಬೆಂಗಳೂರು 13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲು ಉದ್ದೇಶಿಸಲಾಗಿದೆ. ಈ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಕಥಾಚಿತ್ರಗಳನ್ನು ಆಹ್ವಾನಿಸಲಾಗಿದೆ. ಏಷಿಯನ್, ಭಾರತೀಯ ಹಾಗೂ ಕನ್ನಡದ ಎಲ್ಲ ಉಪಭಾಷಾ ಚಲನಚಿತ್ರಗಳೂ ಸೇರಿದಂತೆ ಕನ್ನಡ ಸಿನಿಮಾಗಳು ಸ್ಪರ್ಧಾತ್ಮಕ ವಿಭಾಗದಲ್ಲಿರುತ್ತವೆ. ಪ್ರತಿಯೊಂದು ವಿಭಾಗದಲ್ಲೂ ಪ್ರಶಸ್ತಿ ವಿಜೇತ ಚಲನಚಿತ್ರಗಳಿಗೆ ನಗದು, ಸ್ಮರಣ ಫಲಕ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.

ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರವೇಶ ಪಡೆಯಲು ಕಥಾಚಿತ್ರಗಳು 1, ಜನವರಿ 2021 ರಿಂದ 30 ನವೆಂಬರ್ 2021 ರ ಅವಧಿಯಲ್ಲಿ ನಿರ್ಮಾಣಗೊಂಡವಾಗಿರಬೇಕು. ಹಾಗೂ 70 ನಿಮಿಷದ ಅವಧಿಯ ಚಲನಚಿತ್ರವಾಗಿರಬೇಕು.

ಕನ್ನಡ ಹಾಗೂ ಕರ್ನಾಟಕದ ಉಪಭಾಷೆಗಳಲ್ಲಿ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ ತಯಾರಾದ ಚಿತ್ರಗಳ ನಿರ್ಮಾಣದ ದಿನಾಂಕವನ್ನು ಭಾರತ ಸರ್ಕಾರದ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ ನೀಡಿದ ದಿನಾಂಕವನ್ನು ಆಧರಿಸಿ ಗಣನೆಗೆ ತೆಗೆದುಕೊಳ್ಳಲಾಗುವುದು.

ಸ್ಪರ್ಧಾತ್ಮಕ ವಿಭಾಗಕ್ಕೆ ಚಲನಚಿತ್ರಗಳನ್ನು ಸಲ್ಲಿಸಲು 27 ಡಿಸೆಂಬರ್ 2021 ಕಡೆಯ ದಿನವಾಗಿದೆ. ಚಲನಚಿತ್ರಗಳನ್ನು ಸಲ್ಲಿಸಲು ಅನುಸರಿಸಬೇಕಾದ ನಿಯಮಾವಳಿ ಹಾಗೂ ಮಾರ್ಗಸೂಚಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ವೆಬ್ ಸೈಟ್ Biffes.org ನಿಂದ ಪಡೆಯಬಹುದು.

Categories
ಸಿನಿ ಸುದ್ದಿ

ಎರಡನೇ ಹಂತದಲ್ಲಿ ಮೇಘಶೆಟ್ಟಿ ಸಿನಿಮಾ ಶುರು; ಅದಕ್ಕಿನ್ನೂ ಟೈಟಲ್ ಇಟ್ಟಿಲ್ಲ ಗುರು ?

ಕನ್ನಡ ಚಿತ್ರರಂಗದಲ್ಲಿ ಮತ್ತು ಸಿನಿಪ್ರಿಯರ ಮನಸ್ಸಿನಲ್ಲಿ ಒಂದಷ್ಟು ಕುತೂಹಲಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ. ಅದಕ್ಕೆ ಕಾರಣ, ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಮೊದಲ ಬಾರಿ ಜೊತೆಯಾಗಿ ನಟಿಸುತ್ತಿರುವ ನಿರ್ದೇಶಕ ಸಡಗರ ರಾಘವೇಂದ್ರ ಚೊಚ್ಚಲ ನಿರ್ದೇಶನದ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಮತ್ತು ಮಲಯಾಳಂ ಹೀಗೆ ಬಹುಭಾಷೆಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಟೈಟಲ್ ಏನಿರಬಹುದು? ಅನ್ನುವುದು.

ಏನಿರಬಹುದು? ನೀವೇ ಊಹಿಸಿ! ಎಂದು ನಸುನಕ್ಕು ಸುಮ್ಮನಾಗುವ ಸಡಗರ ರಾಘವೇಂದ್ರ, ಪ್ರೇಕ್ಷಕರ ಮನಸ್ಸಿನಲ್ಲಿ ಹಲವಾರು ಪ್ರೆಶ್ನೆಗಳನ್ನು ಹುಟ್ಟು ಹಾಕುತ್ತಾರೆ. ಈ ಚಿತ್ರಕ್ಕಾಗಿ ಸತತವಾಗಿ ಜಿಮ್ಮಿನಲ್ಲಿ ಬೆವರು ಹರಿಸುತ್ತಾ ಫೈಟ್ ಮತ್ತು ಡ್ಯಾನ್ಸ್ ರಿಹರ್ಸಲ್ನಲ್ಲಿ ತೊಡಗಿಸಿಕೊಂಡಿರುವ ಕವೀಶ್ ಶೆಟ್ಟಿಯವರನ್ನು ನೋಡಿದರೆ ಇದೊಂದು ಅಪ್ಪಟ ಔಟ್ ಆಂಡ್ ಔಟ್ ಮಾಸ್ ಆಕ್ಷನ್ ಥ್ರಿಲ್ಲರ್ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡಿಗರ ಮನೆಮನದ ಮುದ್ದಿನ ಬೆಡಗಿ ಮೇಘಾ ಶೆಟ್ಟಿ ಇವರ ಜೊತೆಗೂಡಿದ್ದಾರೆ ಅಲ್ಲದೆ ಅವರೂ ಕೂಡ ಈ ಚಿತ್ರಕ್ಕೆ ವಿಶೇಷವಾಗಿ ಸಮಯ ಮೀಸಲಿಟ್ಟು ನೃತ್ಯ ಇತ್ಯಾದಿ ತಯಾರಿಯಲ್ಲಿ ತೊಡಗಿದ್ದಾರೆ ಎಂದರೆ ಇದೊಂದು ಅದ್ಬುತ ಪ್ರೇಮಕಾವ್ಯ ಇರಬಹುದೇ? ಎನ್ನುವ ಕುತೂಹಲವೂ ಕಾಡುತ್ತದೆ. ಮರಾಠಿಗರ ಕನಸಿನ ಹುಡುಗಿ ಶಿವಾನಿ ಸುರ್ವೆ ಮತ್ತು ವಿರಾಟ್ ಮಡ್ಕೆ ಬೇರೆ ಈ ಚಿತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಅದೂ ಅಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ತಯಾರಾಗುತ್ತಿದೆಯೆಂದರೆ ಖಂಡಿತವಾಗಿಯೂ ಚಿತ್ರದ ಟೈಟಲ್ ಕೂಡ ಆ ಮಟ್ಟದಲ್ಲಿಯೇ ಇರುತ್ತದೆ. ಹಾಗಾದರೆ ಈ ಚಿತ್ರದ ಟೈಟಲ್ ಏನಿರಬಹುದು?

ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ತಂಡ ಈಗಾಗಲೇ ಮೊದಲನೇ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿ ಇದೇ ತಿಂಗಳ ಕೊನೆಯಲ್ಲಿ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧಗೊಳ್ಳುತ್ತಿದೆ. ಆದರೂ ಚಿತ್ರತಂಡ ಇನ್ನೂ ಚಿತ್ರದ ಟೈಟಲ್ ಗುಟ್ಟು ಬಿಟ್ಟು ಕೊಟ್ಟಿಲ್ಲ ಎನ್ನುವುದು ಒಂದು ಕಡೆಯಾದರೆ ಚಿತ್ರದ ಫಸ್ಟ್ ಲುಕ್ ಹೇಗಿರುತ್ತದೆ ಎನ್ನುವುದು ಕೂಡ ಮತ್ತೊಂದು ಕುತೂಹಲ.

ಎಲ್ಲಾ ಕುತೂಹಲಗಳಿಗೂ ಸದ್ಯದಲ್ಲಿಯೇ ತೆರೆ ಎಳೆಯುತ್ತೇವೆ ಅಲ್ಲಿಯವರೆಗೂ ತಾಳ್ಮೆಯಿಂದ ಟೈಟಲ್ ಏನಿರಬಹುದು? ಎಂದು ನೀವೂ ಯೋಚಿಸಿ ಎಂದು ಜಾಣ್ಮೆಯಿಂದ ತಲೆಗೆ ಹುಳ ಬಿಡುವ ನಿರ್ದೇಶಕರು ಮುಂದಿನ ಹಂತದ ಚಿತ್ರೀಕರಣದ ತಯಾರಿಯಲ್ಲಿ ಬಿಜಿಯಾಗಿದ್ದಾರೆ.

Categories
ಸಿನಿ ಸುದ್ದಿ

ಶರಣ್ ಹೊಸ ಚಿತ್ರಕ್ಕೆ ಪೂಜೆ; ತರುಣ್ ಟಾಕೀಸ್ ನ ಐದನೇ ಚಿತ್ರ ಶುರುವಿಗೆ ಚಾಲನೆ

“ರೋಜ್”, “ಮಾಸ್ ಲೀಡರ್”, ” ವಿಕ್ಟರಿ 2″ ಹಾಗೂ “ಖಾಕಿ” ಚಿತ್ರಗಳ ನಿರ್ಮಾಣ‌ ಮಾಡಿದ್ದ ತರುಣ್ ಟಾಕೀಸ್ ಸಂಸ್ಥೆಯಿಂದ “ಪ್ರೊಡಕ್ಷನ್ ನಂ 5” ನೂತನ ಚಿತ್ರ ನಿರ್ಮಾಣವಾಗುತ್ತಿದೆ. ಶರಣ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು “ಕರ್ವ” ಖ್ಯಾತಿಯ ನವನೀತ್ ನಿರ್ದೇಶಿಸುತ್ತಿದ್ದಾರೆ.

ಈ ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನಡೆದಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಮಾನಸ ತರುಣ್ ಆರಂಭ ಫಲಕ ತೋರಿದರು. ಖ್ಯಾತ ನಿರ್ದೇಶಕ ತರುಣ್ ಸುಧೀರ್ ಕ್ಯಾಮೆರಾ ಚಾಲನೆ ಮಾಡಿದರು.

ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ, ಕಥೆ, ಚಿತ್ರಕಥೆ ಬರೆದಿದ್ದಾರೆ. ಅಂತರರಾಷ್ಟ್ರೀಯ ಜಾಹಿರಾತುಗಳಿಗೆ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಿರುವ ಅನೂಪ್ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.

ಶರಣ್ ನಾಯಕರಾಗಿ ನಟಿಸುತ್ತಿದ್ದು, ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಬೆಂಗಳೂರು ಹಾಗೂ ಉತ್ತರಖಂಡ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಇಷ್ಟರಲ್ಲೆ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Categories
ಸಿನಿ ಸುದ್ದಿ

ಕಟಿಂಗ್ ಶಾಪ್ ಹುಡ್ಗಿಗೆ ಖುಲಾಯಿಸ್ತು ಅದೃಷ್ಟ ! ನಾಯಕಿಯಾಗಿ ಬ್ಯುಸಿಯಾದ ಅರ್ಚನಾ ಕೊಟ್ಟಿಗೆ !

ರಂಗಭೂಮಿ ನಟಿ‌ ಅರ್ಚನಾ ಕೊಟ್ಟಿಗೆ ಅದೃಷ್ಟ ಖುಲಾಯಿಸಿದೆ. ಅವರೀಗ ಹೊಸ ಅವಕಾಶಗಳ ಮೂಲಕ ಆಗಿಫುಲ್ ಬ್ಯುಸಿ‌ ಆಗುತ್ತಿದ್ದಾರೆ. ನಾಯಕಿ‌ಯಾಗಿ ಅಭಿನಯಿಸಿದ ಮೊದಲ‌ ಸಿನಿಮಾ ‘ಡಿಯರ್ ಸತ್ಯ ‘ ಅದರ ಜತೆಗೆ ‘ಕಟಿಂಗ್ ಶಾಪ್ ‘ಚಿತ್ರಗಳು ರಿಲೀಸ್ ಗೆ ರೆಡಿಯಾಗಿರುವ ಬೆನ್ನಲೇ ಅರ್ಚನಾ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.’ ಜುಗಲ್ ಬಂಧಿ ಬೆನ್ನಲೇ ಈಗ ‘ಅಲಂಕಾರ್ ವಿದ್ಯಾರ್ಥಿ’ ಹೆಸರಿನ‌ಮತ್ತೊಂದು ಚಿತ್ರಕ್ಕೆ ಅರ್ಚನಾ ಕೊಟ್ಟಿಗೆ ನಾಯಕಿ ಆಗಿದ್ದಾರೆ. ಮೊನ್ನೆಯಷ್ಟೇ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿನಾಯಕ-ವೆಂಕಟೇಶ್ವರ ದೇವಾಲಯದಲ್ಲಿ ಅಲಂಕಾರ್ ವಿದ್ಯಾರ್ಥಿ ಚಿತ್ರಕ್ಕೆ ಮಹೂರ್ತ ನಡೆಯಿತು‌.

ಮುಹೂರ್ತ ಸಮಾರಂಭಕ್ಕೆ ನಟ ಡಾಲಿ ಧನಂಜಯ ಮುಖ್ಯ ಅತಿಥಿಯಾಗಿ ಬಂದು ಚಿತ್ರತಂಡಕ್ಕೆ ಶುಭ ಕೋರಿದರು. ಅನಂತರ ಚಿತ್ರದಲ್ಲಿನ‌ ತಮ್ಮ ಪಾತ್ರ ಹಾಗೂ ಚಿತ್ರದ ವಿಶೇಷತೆ ಕುರಿತು ಮಾತನಾಡಿದರು. ‘ ಚಿತ್ರದ ಶೀರ್ಷಿಕೆಗೆ ತಕ್ಕಂತೆ ಇದೊಂದು ಕಾಲೇಜು ಸ್ಟೋರಿ ಸಿನಿಮಾ.‌ಇಲ್ಲಿ ನಾನು ಸ್ಟುಡೆಂಟ್. ವಿಶೇಷ ಅಂದ್ರೆ ನಾನು ನಿಜ ಜೀವನದಲ್ಲಂತೂ rank ಸ್ಟೂಡೆಂಟ್ ಆಗಿರಲಿಲ್ಲ. ಆದರೆ ಅಲಂಕಾರ್ ವಿದ್ಯಾರ್ಥಿಯ ಪಾತ್ರದ ಮೂಲಕ ಆ ಬಯಕೆಯನ್ನು ಈಡೇರಿಸಿಕೊಳ್ಳುತ್ತಿದ್ದೇನೆʼ ಎಂದು ನಗು ಬೀರಿದರು.‌ಇನ್ನು ಉಡಾಳ ಬಾಬು‌ಖ್ಯಾತಿಯ ನಟ ಪ್ರಮೋದ್ ಕಾಂಬಿನೇಷನ್ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಆಗುತ್ತಿದೆ ಎಂದರು.

ಬ್ಯಾಕ್ ಟು ಬ್ಯಾಕ್ ಸಿನಿಮಾ‌ ಅವಕಾಶ ಸಿಗುತ್ತಿರುವುದರ ರಹಸ್ಯ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ಅವರು, ಇದೆಲ್ಲ ದೊಡ್ಡದು ಅಂತ ಭಾವಿಸಬೇಡಿ. ಈಗ ಒಂದಷ್ಟು ಅವಕಾಶ ಸಿಗುತ್ತಿವೆ. ಉದ್ಯಮದಲ್ಲಿ ಇರುವ ಅನೇಕ ಸ್ಟಾರ್ ನಟಿಯರಿಗೆ ಹೋಲಿಕೆ ಮಾಡಿಕೊಂಡರೆ ನಾವೇನು ಅಲ್ಲ. ಅದ್ಯಾಕೋ‌ ನಾವಂದುಕೊಂಡಂತೆ ಇಲ್ಲಿ ಅವಕಾಶ ಸಿಗೋದು ತುಂಬಾ‌ ಕಮ್ಮಿ. ಒಳ್ಳೆಯ ಪಾತ್ರಗಳಲ್ಲಿ, ಒಳ್ಳೆಯ ಕತೆಗಳಲ್ಲಿ ಅಭಿನಯಿಸಬೇಕೆನ್ನುವ ಹಸಿವಿದೆ. ಆದರೆ ಅವೆಲ್ಲದ್ದಕ್ಕೂ ಸಮಯ ಬೇಕು ಅಂತಾರೆ ನಟಿ ಅರ್ಚನಾ ಕೊಟ್ಟಿಗೆ.ಅಂದ ಹಾಗೆ, ದಿವಾಕರ್ ಡಿಂಡಿಮ ನಿರ್ದೇಶನದ ಜುಗಲ್ ಬಂದಿ ಚಿತ್ರದಲ್ಲೂ ಅರ್ಚನಾ‌ ಅವರಿಗೆ ಒಂದೊಳ್ಳೆಯ ಪಾತ್ರ ಸಿಕ್ಕ ಖುಷಿ ಇದೆಯಂತೆ.

ಸದ್ಯಕ್ಕೆ ಡಿಯರ್ ಸತ್ಯ, ಅದರ ಜತೆಗೆ ಕಟಿಂಗ್ ಶಾಪ್ ಎರಡು ಸಿನಿಮಾ ರಿಲೀಸ್ ಆಗಬೇಕಿದೆ. ಈ‌ ನಡುವೆಯೇ ಅವಕಾಶಗಳ ಜತೆಗೆ ಬ್ಯುಸಿ ಆಗುತ್ತಿರುವ ಪಕ್ಕದ್ಮನೆ‌ ಹುಡುಗಿ ಅರ್ಚನಾ ಕೊಟ್ಟಿಗೆ, ಪಕ್ಕಾ ರಂಗಭೂಮಿ‌ ನಟಿ.‌ ಕಾರ್ಪೊರೇಟ್ ಜಾಹೀರಾತುಗಳಿಗೆ ಮಾಡೆಲ್ ಆಗಿ ಕ್ಯಾಮೆರಾ ಎದುರಿಸಿದ ದಿನಗಳಲ್ಲಿಯೇ ‘ಅನಾಮಿಕ‌’ ರಂಗ ತಂಡದ ಮೂಲಕ ರಂಗದ ಮೇಲೆ ಕಾಣಿಸಿಕೊಂಡರು. ಆನಂತರ 2017ರಲ್ಲಿ ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ರೆಡ್‌ ಕಾರ್ಪೆಟ್‌ ಕಾರ್ಯಕ್ರಮ, ಕಿರಿಕ್ ಪಾರ್ಟಿ ಶೋ ಹಾಗೂ LOL ಬಾಗ್ ಹೋಸ್ಟ್‌ ಮಾಡಿದ್ದರು. ಅದರ ಜೊತೆಗೆ ಹಲವು ಸಿನಿಮಾ ಆಡಿಷನ್‌ಗಳಲ್ಲಿ ಭಾಗಿಯಾಗಿದ್ದರಂತೆ. ಆದರೆ ಅವರಿಗೆ ಮೊದಲು ನಾಯಕಿ ಆಗಿ ಅವಕಾಶ ಸಿಕ್ಕಿದ್ದು ‘ ಡಿಯರ್ ಸತ್ಯ’ .

ಈ‌ ಚಿತ್ರದಲ್ಲಿ ನಾನು ಅಂಜಲಿ ಹೆಸರಿನ ಪಾತ್ರ ಮಾಡಿದ್ದೀನಿ. ಸಾವಿರಾರು ಕನಸುಗಳನ್ನು ಹೊತ್ತಿಕೊಂಡಿರುವ ಮಿಡಲ್‌ ಕ್ಲಾಸ್‌ ಕುಟುಂಬದ ಹುಡುಗಿ.  ಸತ್ಯನ ಲೈಫ್‌ ಮೇಲೆ ಸಿಕ್ಕಾಪಟ್ಟೆ ಪ್ರಭಾವ ಬೀರುವಂಥ ಗಟ್ಟಿ ಹುಡುಗಿ ಇವಳು. ನಿಜ ಹೇಳಬೇಕಂದರೆ ವೀಕ್ಷಕರು ಈ ಸಿನಿಮಾ ಹಾಗೂ ನನ್ನ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆಂದು ತುಂಬಾ ನರ್ವಸ್ ಆಗುತ್ತಿದ್ದೇನೆ’ ಎನ್ನುವ ನಟಿ ಅರ್ಚನಾ ಕೊಟ್ಟಿಗೆ ಈಗ ಹಲವು ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುತ್ತಾ, ಕಲಾವಿದೆಯಾಗಿ ತಮ್ಮ ನ್ನು ಸಿನಿಮಾ ಪ್ರೇಕ್ಷಕರಿಗೆ ಪರಿಚಯಿಸಿಕೊಳ್ಳಲು ಮುಂದಾಗಿದ್ದಾರೆ.ಆಲ್ ದಿ ಬೆಸ್ಟ್ ಅರ್ಚನಾ.

Categories
ಸಿನಿ ಸುದ್ದಿ

ಆನ ಯಾನ ಆರಂಭ! ಡಿಸೆಂಬರ್‌ 17ರಂದು ಲೇಡಿ ಸೂಪರ್‌ ಹೀರೋ ಅದಿತಿಗೆ ಆತಿಥ್ಯ!!

ಅದಿತಿ ಪ್ರಭುದೇವ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಹಾಗೂ ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್ ನ‌ “ಆನ‌” ಡಿಸೆಂಬರ್ 17 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಮೆಚ್ಚುಗೆ ಪಡೆದುಕೊಂಡಿದೆ. ಮೊದಲ ಬಾರಿಗೆ ಅದಿತಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುನೀಲ್ ಪುರಾಣಿಕ್ ಅವರಿಲ್ಲಿ ಇನ್ನೊಂದು ಹೈಲೈಟ್.

ನಿರ್ದೇಶಕ ಮನೋಜ್‌ ಅವರಿಗೆ ಸಿನಿಮಾ ಮೇಲೆ ಸಾಕಷ್ಟು ನಂಬಿಕೆ ಇದೆ. ಅದಕ್ಕೆ ಕಾರಣ, ಸಿನಿಮಾ ಮೂಡಿಬಂದಿರುವ ರೀತಿ. ಆದರೆ, ಬಿಡುಗಡೆಯ ಸಮಸ್ಯೆ ಈ ಚಿತ್ರಕ್ಕೂ ಇದೆ ಅನ್ನುವುದನ್ನು ಒಪ್ಪಿಕೊಂಡಿದ್ದಾರೆ. ಅಂದು ತೆಲುಗಿನ ದೊಡ್ಡ ಚಿತ್ರವೊಂದು ಬಿಡುಗಡೆಯಾಗುತ್ತಿರುವ ಕಾರಣ, ಸ್ವಂತ ಊರಾದ ದಾವಣಗೆರೆಯಲ್ಲೇ ಚಿತ್ರಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ ಎಂದು ಅಂತ ಮನೋಜ್‌ ನಡಲುಮನೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಮಗೆ ಸಹಕಾರ ನೀಡಿದ ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದ ಹೇಳಿದರು.


ಇನ್ನು, ಅದಿತಿ ಈ ಚಿತ್ರದ ಪಾತ್ರ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಅವರು ತಮ್ಮ ಪಾತ್ರ ಕುರಿತು ಹೇಳಿದ್ದಿಷ್ಟು, “ನಾನು ಈವರೆಗೂ ಈ ರೀತಿಯ ಪಾತ್ರ ಮಾಡಿಲ್ಲ. ನನಗೂ ಚಿತ್ರ ಒಪ್ಪಿಕೊಂಡಾಗ ಸ್ವಲ್ಪ ಭಯವಿತ್ತು. ಹೇಗೆ ಕಾಣುತ್ತೇನೋ ಎಂದು. ಈಗ ಆ ಭಯ ಹೋಗಿದೆ. ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ಇದೆ. ಅದಕ್ಕೆ ನಿಮ್ಮ ಬೆಂಬಲ ಬೇಕಾಗಿದೆ ಎಂಬುದು ಅದಿತಿ ಪ್ರಭುದೇವ ಅವರ ಮಾತು.
ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್ ಸಂಗೀತ ಕುರಿತು ‌ಮಾಹಿತಿ ನೀಡಿದರು.

ಸೌಂಡ್ ಡಿಸೈನರ್ ನವೀನ್ ಕೂಡ ಮಾತನಾಡಿದರು. ಯು.ಕೆ.ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣವಿದೆ. ವಿಜೇತ್ ಚಂದ್ರ ಸಂಕಲನ ಮಾಡಿದ್ದಾರೆ.
ಚಿತ್ರದಲ್ಲಿ ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಮ್, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಮುಂತಾದವರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಸಮಂತಾ `ಹೂಂ ಅಂತೀಯಾ ಮಾವ? ಉಹೂಂ ಅಂತೀಯಾ ಮಾವ ಅಂತ ಕೇಳಿದ್ದಕ್ಕೆ ಬಿತ್ತು ಕೇಸ್ !?

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಸೊಂಟ ಬಳುಕಿಸಿದ `ಹ್ಞೂಂ ಅಂತೀಯಾ ಮಾವ? ಹ್ಞೂಂ ಅಂತೀಯಾ ಮಾವ?’ ಹಾಡು ಸಂಕಷ್ಟಕ್ಕೆ ಸಿಲುಕಿದೆ. ಪಡ್ಡೆ ಹುಡುಗರ ನಿದ್ದೆಗೆಡಿಸಿ, ಯೂಟ್ಯೂಬ್ ಲೋಕದಲ್ಲಿ ಹಾಡು ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ, ಪುರುಷರ ಸಂಘದ ಸದಸ್ಯರುಗಳು ಸ್ಟೇಷನ್ ಮೆಟ್ಟಿಲೇರಿ ಕಂಪ್ಲೆಂಟ್ ದಾಖಲಿಸಿದ್ದಾರೆ. ಮಾತ್ರವಲ್ಲ ಸಾಂಗ್ ಬ್ಯಾನ್ ಮಾಡುವಂತೆ ಆಂಧ್ರ ಪ್ರದೇಶದ ಕೋರ್ಟ್ ಮೊರೆ ಹೋಗಿರುವುದಾಗಿ ಸುದ್ದಿಯಾಗಿದೆ.

ಹ್ಞೂಂ ಅಂತೀಯಾ ಮಾವ? ಹ್ಞೂಂ ಅಂತೀಯಾ ಮಾವ?'ಪುಷ್ಪ’ ಚಿತ್ರದ ಐಟಂ ಹಾಡು. ಪುಷ್ಪ' ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗ್ತಿದೆ. ಅದರಂತೇ,ಪುಷ್ಪ’ ಸ್ಪೆಷಲ್ ಸಾಂಗ್‌ನ ಏಕಕಾಲಕ್ಕೆ ಬಿಡುಗಡೆ ಮಾಡಿದ್ದು, ಕನ್ನಡದಲ್ಲೂ ಕೂಡ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

“ಉದ್ದ ಉದ್ದ ಇದ್ದರೆ ಒಬ್ಬ ಹಾರಿ ಹಾರಿ ಬರುತ್ತಾನೆ. ಗಿಡ್ಡ ಗಿಡ್ಡ ಇದ್ದರೆ ಒಬ್ಬ ಜಾರಿ ಜಾರಿ ಬೀಳ್ತಾನೆ… ಉದ್ದ ಅಲ್ಲ, ಗಿಡ್ಡ ಅಲ್ಲ ನಿಮ್ಮ ಸತ್ಯ ಹೇಳಲೇನು, ಸಿಕ್ಕಿದ್ದೆಲ್ಲ ಸೀರುಂಡೇನೇ ನಿಮ್ಮ ಬುದ್ದಿ ಇಲ್ಲ ಶುದ್ದಿ…. ಹ್ಞೂಂ ಅಂತೀಯಾ ಮಾವ? ಹ್ಞೂಂ ಅಂತೀಯಾ ಮಾವ?..” ಈ ರೀತಿಯಾದ ಸಾಲುಗಳು ಕನ್ನಡ ವರ್ಷನ್‌ನಲ್ಲಿವೆ. ಅದೇ ರೀತಿ ತೆಲುಗು-ತಮಿಳು ವರ್ಷನ್‌ನಲ್ಲಿ ಕ್ಯಾಚಿ ಲಿರಿಕ್ಸ್ ಪೋಣಿಸಿ `ಹ್ಞೂಂ ಅಂಟಾವ ಮಾವ? ಹ್ಞೂಂ ಅಂಟಾವ ಮಾವ?’ ಸಾಂಗ್ ರಚನೆ ಮಾಡಲಾಗಿದೆ.

ಪುಷ್ಪ' ಚಿತ್ರದ ಐಟಂ ಹಾಡಿನಲ್ಲಿಗಂಡುಮಕ್ಕಳು ಕಾಮಭರಿತರು’ ಎನ್ನುವಂತೆ ಬಿಂಬಿಸಲಾಗಿದೆ. ಈ ಕಾರಣವನ್ನು ನೀಡಿರುವ ಪುರುಷರ ಸಂಘದ ಸದಸ್ಯರುಗಳು ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರಂತೆ. `ಪುಷ್ಪ’ ಚಿತ್ರದಿಂದ ಸಾಂಗ್ ಬ್ಯಾನ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರಂತೆ. ಈಗೊಂದು ಸುದ್ದಿ ಭರ್ಜರಿಯಾಗಿ ಸದ್ದುಮಾಡ್ತಿದೆ.

ಈ ಬ್ರೇಕಿಂಗ್ ನ್ಯೂಸ್‌ನಿಂದ ಪಡ್ಡೆಹುಡುಗರಿಗೆ ಹಾಗೂ ಅಲ್ಲು ಅರ್ಜುನ್-ಸಮಂತಾ ಅಭಿಮಾನಿಗಳು ಬೇಸರಗೊಂಡರ‍್ತಾರೆ. ನಶೆಯೇರಿಸೋ ಸಾಂಗ್‌ನ ಥಿಯೇಟರ್‌ನಲ್ಲಿ ಕುಳಿತು ಫೀಲ್ ಮಾಡೋದಕ್ಕೆ ಆಗಲ್ಲ ಎನ್ನುವ ಕಾರಣಕ್ಕೆ ನಿರಾಶೆಗೊಂಡಿರುತ್ತಾರೆ. ಸದ್ಯಕ್ಕೆ, ಕೋರ್ಟ್ ಮೆಟ್ಟಿಲೇರಿರುವ ಸುದ್ದಿ ಫ್ಯಾನ್ಸ್ಗೆ ಸಿಹಿಸುದ್ದಿ ಕೊಡುತ್ತಾ ಅಥವಾ ಕಹಿಸುದ್ದಿ ನೀಡುತ್ತಾ ಗೊತ್ತಿಲ್ಲ?ಡಿಸೆಂಬರ್ 17 ರಂದು ಪುಷ್ಪ ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಬೆಳಗಾವಿ ಅಧಿವೇಶನದಲ್ಲಿ ಜನಪ್ರತಿನಿಧಿಗಳಿಂದ ಪುನೀತ್‌ ಸಂತಾಪ; ಸಿಎಂ ಭಾವುಕ…


ಬೆಳಗಾವಿಯ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಅಗಲಿದ ಕನ್ನಡದ ಖ್ಯಾತ ನಟ ಪುನೀತ್‌ ರಾಜಕುಮಾರ್‌ ಅವರಿಗೆ ಸಂತಾಪ ಸೂಚಿಸಿದ್ದಾರೆ. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು “ಪುನೀತ್‌ ಅವರು ತನ್ನದೇ ಆದಂತಹ ಅಭಿಮಾನಿಗಳನನು ಸಂಪಾದಿಸಿದ್ದರು. ಅವರಂತಹ ಅದ್ಭುತ ನಟರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಮಾತನಾಡಿ, “ಪುನೀತ್‌ ಅವರ ವ್ಯಕ್ತಿತ್ವ ನೋಡಿದಾಗ ಅವರೊಬ್ಬ ಒಳ್ಳೆಯ ಪ್ರತಿಭಾವಂತರು, ಸಾಕಷ್ಟು ವೈಚಾರಿಕವಾಗಿ ತಿಳಿದಿದ್ದರು. ಬೇರೆ ರಂಗದಲ್ಲೂ ಸಾಧಕರಿಗೆ ಅಲ್ಪ ಆಯುಷ್ಯ ಇದೆ ಎಂಬ ಭಾವನೆ ನನ್ನದು. ಹಾಗೆಯೇ ಅಪ್ಪು ವಿಚಾರದಲ್ಲೂ ಅದೇ ಭಾವನೆ ಇದೆ.

ಪುನೀತ್‌ ಅವರ ಸಾವು ನನ್ನನ್ನು ಬಹಳಷ್ಟು ಕಾಡಿತು. ಬೆಳಗ್ಗೆ ಎದ್ದು ವರ್ಕೌಟ್‌ ಮಾಡಿ ನಂತರದ ಕೆಲವೇ ಗಂಟೆಗಳಲ್ಲಿ ಹಾಗೆ ಆಗುತ್ತೆ ಅನ್ನೋದು ನಂಬೋಕೆ ಆಗಲಿಲ್ಲೆ. ಅದು ತುಂಬಾನೇ ಕಷ್ಟವಾಯ್ತು. ಅವರು ಆಸ್ಪತ್ರೆಗೆ ಹೋದ ಸುದ್ದಿ ಕೇಳಿದ ತಕ್ಷಣ ಆಸ್ಪತ್ರೆಗೆ ಹೋದೆವು. ಅಷ್ಟೊತ್ತಿಗಾಗಲೇ ಅವರಿಲ್ಲ ಎಂಬ ಸುದ್ದಿ ತಿಳಿಯಿತು. ಅವರ ಕುಟುಂಬದ ಸಹಕಾರ ಪಡೆದವು. ಸಾರ್ವಜನಿಕವಾಗಿ ಶಾಂತಿಯುತವಾಗಿಯೇ ಅವರ ಅಂತ್ಯ ಸಂಸ್ಕಾರ ನಡೆಸಿದೆವು. ಡಾ.ರಾಜಕುಮಾರ್‌ ಅವರ ಸಾವಿನ ಸಂದರ್ಭದಲ್ಲಿ ಕಹಿ ಘಟನೆಗಳು ನಡೆದಿದ್ದವು. ಮತ್ತೆ ಅಂತಹ ಘಟನೆ ನಡೆಯಬಾರದು ಅಂತ ಮುಂಜಾಗ್ರತೆ ಕ್ರಮ ಕೈಗೊಂಡು, ಅಂತಿಮ ಸಂಸ್ಕಾರ ನಡೆಸಿದೆವು. ಅದಕ್ಕೆ ಅವರ ಕುಟಂಬ, ರಾಜ್ಯದ ಜನತೆ ಮತ್ತು ಅಧಿಕಾರಿ ವರ್ಗ, ನೌಕರರು ಸಹಕರಿಸಿದರು.


ಅವರ ಸಾವಿನ ಸಂದರ್ಭದಲ್ಲಿ ಹರಿದು ಬಂದ ಜನರನ್ನು ನೋಡಿದಾಗ, ಅಚ್ಚರಿಯಾಯ್ತು. ವಿಶೇಷವಾಗಿ ಯುವಕರೇ ಹೆಚ್ಚು. ಭಾವುಕರಾಗಿದ್ದರು. ಒಬ್ಬ ನಟ ಅಲ್ಪ ಸಮಯದಲ್ಲಿ ಆಳವಾಗಿ ಅಷ್ಟೊಂದು ಜನರಲ್ಲಿ ಬೇರೂರಿದ್ದಾರೆ. ಕಡಿಮೆ ಸಮಯದಲ್ಲೂ ಅಷ್ಟೊಂದು ಜನಪ್ರಿಯತೆ ಗಳಿಸಬಹುದು ಎಂಬುದನ್ನು ಪುನೀತ್‌ ರಾಜಕುಮಾರ್‌ ಅವರನ್ನು ನೋಡಿ ಗೊತ್ತಾಯ್ತು. ಕೇವಲ ಚಿತ್ರರಂಗ ಅಲ್ಲ, ಅದರ ಹೊರತಾಗಿಯೂ ಪುನೀತ್‌ ಸಮಾಜ ಕಾರ್ಯ ಮಾಡಿದ್ದಾರೆ. ಅನೇಕ ಬಡವರಿಗೆ ಸಹಾಯ ಮಾಡಿರುವುದನ್ನು ಹೇಳಿಲ್ಲ. ಅನೇಕ ಯುವಕರಿಗೆ ಮಾರ್ಗದರ್ಶನ ಮಾಡಿದ್ದರು.

ಅವರು ನಿಧನರಾಗುವುದಕ್ಕಿಂತ ಮೂರು ದಿನ ಮುನ್ನ ಫೋನ್‌ ಮಾಡಿ, ಒಂದು ಟ್ರೇಲರ್‌ ರಿಲೀಸ್‌ ಮಾಡಬೇಕು ಅಂದಿದ್ದರು. ಅದು ಪರಿಸರ, ಅರಣ್ಯ ಹಾಗು ಪ್ರವಾಸೋದ್ಯಮ ಕುರಿತಂತೆ ಡಾಕ್ಯುಮೆಂಟರಿ. ನೀವೇ ಮಾಡಬೇಕು. ಸರ್ಕಾರದ ಬದ್ಧತೆ ತೋರಿಸಬೇಕಾಗಿದೆ ಹಾಗಾಗಿ ರಿಲೀಸ್‌ ಮಾಡಿ ಅಂದಿದ್ದರು. ನಾನೂ ಓಕೆ ಅಂದಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ” ಎಂದು ಬಸವರಾಜ ಬೊಮ್ಮಾಯಿ ಭಾವುಕರಾದರು.

Categories
ಸಿನಿ ಸುದ್ದಿ

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ದಿನಾಂಕ ಶೀಘ್ರ ಘೋಷಣೆ; ಪದ್ಮಶ್ರೀ ಪ್ರಶಸ್ತಿಗೂ ಶಿಫಾರಸು- ಸಿಎಂ ಬೊಮ್ಮಾಯಿ

ಕನ್ನಡದ ಖ್ಯಾತ ನಟರಾದ ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಈಗಾಗಲೇ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಇಷ್ಟರಲ್ಲೇ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಕುರಿತಂತೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.


ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾತಿಗೂ ಮುನ್ನ, ಸಭೆಯಲ್ಲಿ ಸಂತಾಪ ಸೂಚಿಸಿದ ಮುಖ್ಯಮಂತ್ರಿಗಳು, ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ದಿನಾಂಕವನ್ನು ಶೀಘ್ರವೇ ಘೋಷಣೆ ಮಾಡಲಾಗುವುದು.

ಜೊತೆಗೆ ಮುಂದಿನ ದಿನಗಳಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ.

Categories
ಸಿನಿ ಸುದ್ದಿ

ಕರ್ನಾಟಕದಲ್ಲೂ ಅಸ್ತಿತ್ವಕ್ಕೆ ಬಂತು ಡಿಜಿಟಲ್ ಮೀಡಿಯಾ ಫೋರಂ; ಸಮೀವುಲ್ಲ ಬೆಲಗೂರು ನೂತನ ಅಧ್ಯಕ್ಷ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವುದರಿಂದ ಇದರ ಅಗತ್ಯತೆ ಎಂದಿಗಿಂತ ಈಗ ಹೆಚ್ಚಿದೆ. ಹೀಗಾಗಿ ಡಿಜಿಟಲ್ ಮಿಡಿಯಾ ಪೋರಮ್ ನೂತನವಾಗಿ ಅಸ್ತಿತಕ್ಕೆ ಬಂದಿದ್ದು, ಪತ್ರಿಕೆ ಮತ್ತು ಮಾಧ್ಯಮಗಳಿಗೆ ನೀಡಿರುವಂತೆಯೇ ನಮಗೂ ಮಾನ್ಯತೆ ನೀಡಬೇಕು- ನೂತನ ಅಧ್ಯಕ್ಷ ಸಮೀವುಲ್ಲ…

ಮಾಧ್ಯಮ‌ಲೋಕದಲ್ಲಿ‌ ಮತ್ತೊಂದು ಹೊಸ ಕ್ರಾಂತಿ ಶುರುವಾಗಿದ್ದು ಎಲ್ಲರಗೂ ಗೊತ್ತು. ಈ ನಿಟ್ಟಿನಲ್ಲಿ ‘ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ’ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ. ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಡಿಜಿಟಲ್ ಮಾಧ್ಯಮ ಮಿತ್ರರ ಸಭೆಯಲ್ಲಿ, ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಅಸ್ತಿತಕ್ಕೆ ಬಂದಿದೆ. ಈ ಮೀಡಿಯಾ ಫೋರಂ ನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರಾದ ಸಮೀವುಲ್ಲಾ ಬೆಲಗೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುನೀಲ್ , ಮತ್ತು ವಸಂತ ಬಿ ಈಶ್ವರಗೆರೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶಿವು ಬೆಸಗರಹಳ್ಳಿ ಮತ್ತು ಜಂಟಿ ಕಾರ್ಯದರ್ಶಿಗಳಾಗಿ ರಜನಿ ಹಾಗೂ ಮಾಲತೇಶ್ ಅರಸ್ ಹರ್ತಿಕೋಟೆ ಮತ್ತು ಖಜಾಂಚಿಯಾಗಿ ಸನತ್ ರೈ ಅವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಎಸ್ ರಾಘವೇಂದ್ರ, ಗೌರೀಶ್ ಅಕ್ಕಿ, ವಿಜಯ್ ಭರಮಸಾಗರ, ದರ್ಶನ್ ಆರಾಧ್ಯ, ಪ್ರವೀಣ್ ಏಕಾಂತ, ಅಮರ್ ಪ್ರಸಾದ್, ಅಂಕಿತಾ, ಹರೀಶ್ ಅರಸು ಇವರುಗಳನ್ನು ಆಯ್ಕೆ ಮಾಡಲಾಗಿದೆ. ಪತ್ರಿಕೋದ್ಯಮ ಹಾಗು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಎರಡು ದಶಕಗಳ ಅನುಭವ ಇರುವಂತಹ ಹಿರಿಯ ಪತ್ರಕರ್ತರ ನೇತೃತ್ವದಲ್ಲಿ ಅಸ್ತಿತಕ್ಕೆ ಬಂದಿರುವ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಡಿಜಿಟಲ್ ಮಾಧ್ಯಮ ಮಿತ್ರರನ್ನೂ ಒಳಗೊಂಡಂತೆ ದೊಡ್ಡ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಸಮೀವುಲ್ಲಾ ಅವರು ಮಾತನಾಡಿ, ‘ಡಿಜಿಟಲ್ ಮೀಡಿಯಾ ಎಂಬುದು ಪ್ರತಿಯೊಬ್ಬರಿಗೂ ನವಯುಗಕ್ಕೆ ಅವಶ್ಯಕವಾಗಿದ್ದು, ಪ್ರಿಂಟ್ ಹಾಗೂ ಟಿವಿ ಮಾಧ್ಯಮಗಳಿಗಿಂತಲೂ ಪರಿಣಾಮಕಾರಿಯಾಗಿದೆ. ವೀಕ್ಷಕರು ಮತ್ತು ಓದುಗರನ್ನು ಹೆಚ್ಚು ತಲುಪಲು ತನ್ನದೇ ಆದ ಸಾಮರ್ಥ್ಯ ಹೊಂದಿದೆ. ಹೀಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಡಿಜಿಟಲ್ ಮಾಧ್ಯಮಗಳಿಗೆ ಒತ್ತು ನೀಡಿವೆ. ಪಕ್ಕದ ರಾಜ್ಯಗಳಾದ ಆಂಧ್ರ ಮತ್ತು ತಮಿಳು ನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಡಿಜಿಟಲ್ ಮಾಧ್ಯಮ ಒಕ್ಕೂಟ ಅಸ್ತಿತ್ವದಲ್ಲಿವೆ.

ಕರ್ನಾಟಕದಲ್ಲಿ ಡಿಜಿಟಲ್ ಮಾಧ್ಯಮ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ನಮ್ಮ ಸಂಘಟನೆ ಮಾಧ್ಯಮ ಲೋಕದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವವರ ಹಿತಾಸಕ್ತಿ ಕಾಪಾಡಲು ಬದ್ದವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವುದರಿಂದ ಇದರ ಅಗತ್ಯತೆ ಎಂದಿಗಿಂತ ಈಗ ಹೆಚ್ಚಿದೆ. ಹೀಗಾಗಿ ಡಿಜಿಟಲ್ ಮಿಡಿಯಾ ಪೋರಂ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ.

ಪತ್ರಿಕೆ ಮತ್ತು ಮಾಧ್ಯಮಗಳಿಗೆ ನೀಡಿರುವಂತೆಯೇ ನಮಗೂ ಮಾನ್ಯತೆ ನೀಡಬೇಕೆಂದು ಮನವಿ ಮಾಡಿದರು.
ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ನೂರಾರು ಡಿಜಿಟಲ್ ಮಾದ್ಯಮ ಪತ್ರಕರ್ತರು , ತಂತ್ರಜ್ಞರು ಉಪಸ್ಥಿತರಿದ್ದರು.

error: Content is protected !!