ಬೆಳಗಾವಿ ಅಧಿವೇಶನದಲ್ಲಿ ಜನಪ್ರತಿನಿಧಿಗಳಿಂದ ಪುನೀತ್‌ ಸಂತಾಪ; ಸಿಎಂ ಭಾವುಕ…


ಬೆಳಗಾವಿಯ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಅಗಲಿದ ಕನ್ನಡದ ಖ್ಯಾತ ನಟ ಪುನೀತ್‌ ರಾಜಕುಮಾರ್‌ ಅವರಿಗೆ ಸಂತಾಪ ಸೂಚಿಸಿದ್ದಾರೆ. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು “ಪುನೀತ್‌ ಅವರು ತನ್ನದೇ ಆದಂತಹ ಅಭಿಮಾನಿಗಳನನು ಸಂಪಾದಿಸಿದ್ದರು. ಅವರಂತಹ ಅದ್ಭುತ ನಟರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಮಾತನಾಡಿ, “ಪುನೀತ್‌ ಅವರ ವ್ಯಕ್ತಿತ್ವ ನೋಡಿದಾಗ ಅವರೊಬ್ಬ ಒಳ್ಳೆಯ ಪ್ರತಿಭಾವಂತರು, ಸಾಕಷ್ಟು ವೈಚಾರಿಕವಾಗಿ ತಿಳಿದಿದ್ದರು. ಬೇರೆ ರಂಗದಲ್ಲೂ ಸಾಧಕರಿಗೆ ಅಲ್ಪ ಆಯುಷ್ಯ ಇದೆ ಎಂಬ ಭಾವನೆ ನನ್ನದು. ಹಾಗೆಯೇ ಅಪ್ಪು ವಿಚಾರದಲ್ಲೂ ಅದೇ ಭಾವನೆ ಇದೆ.

ಪುನೀತ್‌ ಅವರ ಸಾವು ನನ್ನನ್ನು ಬಹಳಷ್ಟು ಕಾಡಿತು. ಬೆಳಗ್ಗೆ ಎದ್ದು ವರ್ಕೌಟ್‌ ಮಾಡಿ ನಂತರದ ಕೆಲವೇ ಗಂಟೆಗಳಲ್ಲಿ ಹಾಗೆ ಆಗುತ್ತೆ ಅನ್ನೋದು ನಂಬೋಕೆ ಆಗಲಿಲ್ಲೆ. ಅದು ತುಂಬಾನೇ ಕಷ್ಟವಾಯ್ತು. ಅವರು ಆಸ್ಪತ್ರೆಗೆ ಹೋದ ಸುದ್ದಿ ಕೇಳಿದ ತಕ್ಷಣ ಆಸ್ಪತ್ರೆಗೆ ಹೋದೆವು. ಅಷ್ಟೊತ್ತಿಗಾಗಲೇ ಅವರಿಲ್ಲ ಎಂಬ ಸುದ್ದಿ ತಿಳಿಯಿತು. ಅವರ ಕುಟುಂಬದ ಸಹಕಾರ ಪಡೆದವು. ಸಾರ್ವಜನಿಕವಾಗಿ ಶಾಂತಿಯುತವಾಗಿಯೇ ಅವರ ಅಂತ್ಯ ಸಂಸ್ಕಾರ ನಡೆಸಿದೆವು. ಡಾ.ರಾಜಕುಮಾರ್‌ ಅವರ ಸಾವಿನ ಸಂದರ್ಭದಲ್ಲಿ ಕಹಿ ಘಟನೆಗಳು ನಡೆದಿದ್ದವು. ಮತ್ತೆ ಅಂತಹ ಘಟನೆ ನಡೆಯಬಾರದು ಅಂತ ಮುಂಜಾಗ್ರತೆ ಕ್ರಮ ಕೈಗೊಂಡು, ಅಂತಿಮ ಸಂಸ್ಕಾರ ನಡೆಸಿದೆವು. ಅದಕ್ಕೆ ಅವರ ಕುಟಂಬ, ರಾಜ್ಯದ ಜನತೆ ಮತ್ತು ಅಧಿಕಾರಿ ವರ್ಗ, ನೌಕರರು ಸಹಕರಿಸಿದರು.


ಅವರ ಸಾವಿನ ಸಂದರ್ಭದಲ್ಲಿ ಹರಿದು ಬಂದ ಜನರನ್ನು ನೋಡಿದಾಗ, ಅಚ್ಚರಿಯಾಯ್ತು. ವಿಶೇಷವಾಗಿ ಯುವಕರೇ ಹೆಚ್ಚು. ಭಾವುಕರಾಗಿದ್ದರು. ಒಬ್ಬ ನಟ ಅಲ್ಪ ಸಮಯದಲ್ಲಿ ಆಳವಾಗಿ ಅಷ್ಟೊಂದು ಜನರಲ್ಲಿ ಬೇರೂರಿದ್ದಾರೆ. ಕಡಿಮೆ ಸಮಯದಲ್ಲೂ ಅಷ್ಟೊಂದು ಜನಪ್ರಿಯತೆ ಗಳಿಸಬಹುದು ಎಂಬುದನ್ನು ಪುನೀತ್‌ ರಾಜಕುಮಾರ್‌ ಅವರನ್ನು ನೋಡಿ ಗೊತ್ತಾಯ್ತು. ಕೇವಲ ಚಿತ್ರರಂಗ ಅಲ್ಲ, ಅದರ ಹೊರತಾಗಿಯೂ ಪುನೀತ್‌ ಸಮಾಜ ಕಾರ್ಯ ಮಾಡಿದ್ದಾರೆ. ಅನೇಕ ಬಡವರಿಗೆ ಸಹಾಯ ಮಾಡಿರುವುದನ್ನು ಹೇಳಿಲ್ಲ. ಅನೇಕ ಯುವಕರಿಗೆ ಮಾರ್ಗದರ್ಶನ ಮಾಡಿದ್ದರು.

ಅವರು ನಿಧನರಾಗುವುದಕ್ಕಿಂತ ಮೂರು ದಿನ ಮುನ್ನ ಫೋನ್‌ ಮಾಡಿ, ಒಂದು ಟ್ರೇಲರ್‌ ರಿಲೀಸ್‌ ಮಾಡಬೇಕು ಅಂದಿದ್ದರು. ಅದು ಪರಿಸರ, ಅರಣ್ಯ ಹಾಗು ಪ್ರವಾಸೋದ್ಯಮ ಕುರಿತಂತೆ ಡಾಕ್ಯುಮೆಂಟರಿ. ನೀವೇ ಮಾಡಬೇಕು. ಸರ್ಕಾರದ ಬದ್ಧತೆ ತೋರಿಸಬೇಕಾಗಿದೆ ಹಾಗಾಗಿ ರಿಲೀಸ್‌ ಮಾಡಿ ಅಂದಿದ್ದರು. ನಾನೂ ಓಕೆ ಅಂದಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ” ಎಂದು ಬಸವರಾಜ ಬೊಮ್ಮಾಯಿ ಭಾವುಕರಾದರು.

Related Posts

error: Content is protected !!