ಹೊಸ ಪ್ರಯೋಗಗಳ ಮೂಲಕ ಯೂಟ್ಯೂಬ್ನಲ್ಲಿ ಸದಾ ಸುದ್ದಿಯಲ್ಲಿರುವ ರ‍್ಯಾಪರ್, ಸಿಂಗರ್, ಕಂಪೋಸರ್ ALL OK ಅಲಿಯಾಸ್ ಅಲೋಕ್. ಇದೀಗ ಸದ್ದಿಲ್ಲದೆ ಮತ್ತೊಂದು ವಿಡಿಯೋ ಹಾಡನ್ನು ಹೊರತಂದಿದ್ದಾರೆ. ಅದರ ಹೆಸರು “ಹೌಸ್ ಪಾರ್ಟಿ’.
ಹಾಡಿಗೆ ಸಂಗೀತ ನೀಡಿ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ, ನಿರ್ಮಾಣವನ್ನೂ ಮಾಡಿರುವ ಅಲೋಕ್, ಇದು “ಕೋವಿಡ್ ಸಮಯದಲ್ಲಿನ ಕಾನ್ಸೆಪ್ಟ್ವೊಂದರಿಂದ ಪ್ರೇರಣೆ ಪಡೆದು “ಹೌಸ್ ಪಾರ್ಟಿ’ ಹಾಡನ್ನು ಹೊರತಂದಿದ್ದೇನೆ. ಮನೆಯಲ್ಲಿಯೇ ಇರಿ, ಅಲ್ಲಿಯೇ ಪಾರ್ಟಿ ಮಾಡಿ ಎಂಬುದನ್ನು ಕಲರ್ ಫುಲ್ ಆಗಿ ತೋರಿಸಿದ್ದೇವೆ. ಗೋಕರ್ಣದ ಕಹಾನಿ ಪ್ಯಾರಡೈಸ್ ರೆಸಾರ್ಟ್ನಲ್ಲಿ ಇಡೀ ಹಾಡಿನ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ .
“ಬೇರೆ ಭಾಷೆಗಳ ಆಲ್ಬಂಗಳಿಗೆ ಸಿಗುವ ರೆಸ್ಪಾನ್ಸ್ ಕನ್ನಡದ ಆಲ್ಬಂ ಹಾಡುಗಳಿಗೆ ಸಿಗುತ್ತಿಲ್ಲ. ಆದರೆ, ನಮ್ಮ ಹಾಡುಗಳು ಬೇರಾವ ಭಾಷೆಗಿಂತಲೂ ಕಡಿಮೆಯಿಲ್ಲ. ಅದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ’ ಎಂದು ಅಲೋಕ್ ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ಕಿರಿಕ್ ಶಂಕರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅದ್ವಿಕಾ ಈ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. “ಇದು ನನ್ನ ಮೊದಲ ಆಲ್ಬಂ. ತುಂಬ ಖುಷಿ ಎನಿಸುತ್ತದೆ. ಆರಂಭದಲ್ಲಿಯೇ ಈ ರೀತಿಯ ಅವಕಾಶಗಳು ಸಿಗುತ್ತಿವೆ. ಎಲ್ಲಿಯೂ ನಮಗೆ ಶೂಟಿಂಗ್ ಅನಿಸಲೇ ಇಲ್ಲ. ಪಾರ್ಟಿ ಮಾಡಿದ ಖುಷಿ ಆಯಿತು’ ಎನ್ನುತ್ತಾರೆ ಅದ್ವಿಕಾ.
ಈ ಆಲ್ಬಂ ಗೆ ಆಕಾಶ್ ಜೋಷಿ ಛಾಯಾಗ್ರಹಣದ ಜತೆಗೆ ಸಂಕಲನವನ್ನೂ ಮಾಡಿದ್ದಾರೆ.
ನಾವು ಮಾಡಿದ ಕರ್ಮಕ್ಕೆ ಪ್ರತಿಫಲ ಅನುಭವಿಸಬೇಕೆಂದು ಹೇಳುತ್ತಾರೆ. ಆದರೆ ಅದು ಯಾವತ್ತಿಗೊ ಅಲ್ಲ. ಈಗ ಮಾಡಿದ್ದು ಈಗಲೇ ಅನುಭವಿಸಬೇಕು ಎಂಬ ವಿಷಯವಿಟ್ಟುಕೊಂಡು ಏಪ್ರಿಲ್ ಒಂದರಂದು ತೆರೆಗೆ ಬರಲು ಸಿದ್ದವಾಗಿದೆ “ಇನ್ ಸ್ಟಂಟ್ ಕರ್ಮ”.
ಈ ಹಿಂದೆ ” ಡಿ.ಕೆ.ಬೋಸ್” ಎಂಬ ಚಿತ್ರ ನಿರ್ದೇಶಿಸಿದ್ದೆ. ಇದು ನನ್ನ ಎರಡನೇ ಚಿತ್ರ. ನಾನು ಕೆಲವು ದಿನಗಳ ಹಿಂದೆ ನಮ್ಮ ತಾಯಿಯನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದೆ. ಅಲ್ಲಿ ನಡೆದ ಘಟನೆ ಈ ಚಿತ್ರಕ್ಕೆ ಸ್ಪೂರ್ತಿ. ಎಲ್ಲಾ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಸಂದೀಪ್ ಮಹಾಂತೇಶ್.
ನಿರ್ಮಾಪಕ ಸಂತೋಷ್ ಮಹಂತೇಶ್, ಚಿತ್ರದಲ್ಲಿ ಅಭಿನಯಿಸಿರುವ ಅಂಜನ್ ದೇವ್, ಪ್ರಜ್ವಲ್ ಶೆಟ್ಟಿ, ಹರಿ ಧನಂಜಯ್, ಸಂಗೀತ ನಿರ್ದೇಶಕ ಸೂರಜ್ ಹಾಗೂ ಛಾಯಾಗ್ರಾಹಕ ಭಾಸ್ಕರ್ ಹೆಗಡೆ ತಮ್ಮ ಕಾರ್ಯಗಳ ಬಗ್ಗೆ ಮಾತನಾಡಿ, ಚಿತ್ರವನ್ನು ಬೆಂಬಲಿಸುವಂತೆ ಕೋರಿದರು.
ಈ ಚಿತ್ರ ಐದು ಹುಡುಗರ ಸುತ್ತ ಸಾಗುತ್ತದೆ. ಯಶ್ ಶೆಟ್ಟಿ, ಕೆಂಡ ಶ್ರೇಷ್ಠ, ಅಂಜನ್ ದೇವ್, ಪ್ರಜ್ವಲ್ ಶೆಟ್ಟಿ ಹಾಗೂ ಹರಿ ಧನಂಜಯ್ ನಟಿಸಿದ್ದಾರೆ.
ವರ್ತೂರು ಮಂಜು ನಿರ್ಮಾಣದ, ಶಂಕರ್ ಕೋನಮಾನಹಳ್ಳಿ ನಿರ್ದೇಶನದಲ್ಲಿ ಮೂಡಿಬಂದಿರುವ “ಶಂಭೋ ಶಿವ ಶಂಕರ” ಚಿತ್ರದ ಹಾಡುಗಳು ಈಗ ಬಿಡುಗಡೆಯಾಗಿವೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಹಾಗು ನಟ ವಸಿಷ್ಠ ಸಿಂಹ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಹಿತನ್ ಸಂಗೀತದ ಗೌಸ್‌ಪೀರ್ ಸಾಹಿತ್ಯ ಇರುವ ನವೀನ್ ಸಜ್ಜು ಹಾಡಿರುವ “ನಾಟಿಕೋಳಿ” ಹಾಡು ಸಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡತ್ತಿದೆ.
ನಾನು ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿದ್ದವನು. ಹಿರಿತೆರೆಯಲ್ಲಿ ಇದು ಚೊಚ್ಚಲ ಚಿತ್ರ. ನನ್ನ ಕನಸಿಗೆ ಜೀವ ತುಂಬಿದ ನಿರ್ಮಾಪಕ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಧನ್ಯವಾದ. ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಬಹುದಿನಗಳ ಗೆಳೆಯ ವಸಿಷ್ಠ ಸಿಂಹ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ದೇಶಕ ಶಂಕರ್ ಕೋನಮಾನಹಳ್ಳಿ.
ಸಿನಿಮಾ ನಿರ್ಮಾಣದ ಬಗ್ಗೆ ವರ್ತೂರು ಮಂಜು, ಗೀತರಚನೆ ಕುರಿತು ಗೌಸ್ ಫಿರ್ ಹಾಗೂ ಸಂಗೀತದ ಬಗ್ಗೆ ಹಿತನ್ ಹಾಸನ್ ಮಾಹಿತಿ ನೀಡಿದರು. ಛಾಯಾಗ್ರಾಹಕ ನಟರಾಜು ಮದ್ದಾಲ, ನೃತ್ಯ ನಿರ್ದೇಶಕ ಕಲೈ ತಮ್ಮ ಕಾರ್ಯಗಳ ಬಗ್ಗೆ ಮಾತನಾಡಿದರು.
ನನಗೆ ಅಭಿನಯ ಅಂದರೆ ಏನೆಂದು ಗೊತ್ತಿರಲಿಲ್ಲ. ನನಗೆ ಅಭಿನಯ ಕಲಿಸಿದ ನಿರ್ದೇಶಕರಿಗೆ ನಾನು ಆಭಾರಿ ಎಂದರು ನಾಯಕ ಅಭಯ್.
ನಾಯಕಿ ಸೋನಾಲ್ ಮಾಂಟೆರೊ, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರೋಹಿತ್ ಹಾಗೂ ರಕ್ಷಕ್ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.ಆನಂದ್ ಆಡಿಯೋ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.
ಕನ್ನಡದಲ್ಲೀಗ ಸಿನಿಮಾ ಬಿಡುಗಡೆ ಪರ್ವ. ಹೌದು, ಸ್ಟಾರ್ ಚಿತ್ರಗಳು ಈಗ ಸಾಲಾಗಿ ಬಿಡುಗಡೆಗೆ ಸಜ್ಜಾಗಿವೆ. ಆ ಸಾಲಿಗೆ ಈಗ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ “ಹೋಮ್ ಮಿನಿಸ್ಟರ್” ಚಿತ್ರ ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈಗಾಗಲೇ ಜಿಬ್ರಾನ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಆನಂದ್ ಆಡಿಯೋ ಮೂಲಕ ಈ ಹಾಡುಗಳು ಬಿಡುಗಡೆಯಾಗಿವೆ.
ಸಚಿವ ಮುನಿರತ್ನ, ಗೋಲ್ಡನ್ ಸ್ಟಾರ್ ಗಣೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ನಿರಂಜನ್ ಸುಧೀಂದ್ರ, ಪ್ರಿಯಾಂಕ ಉಪೇಂದ್ರ ಹಾಗೂ ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.
ಕೊರೋನ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಯಿತು. ಚಿತ್ರದ ಕಥೆ ಕೇಳಿದಾಗ ನನಗೆ ಒಂದು ಕಡೆ ಇಷ್ಟವಾಗುತ್ತಿದೆ. ಮತ್ತೊಂದು ಕಡೆಯಿಂದ ಭಯ. ಜನ ಈ ಕಥೆಯನ್ನು ಯಾವರೀತಿ ತೆಗೆದುಕೊಳ್ಳುತ್ತಾರೋ? ಎಂದು. ಕೊನೆಗೆ ನಿರ್ಮಾಪಕ ಪೂರ್ಣಚಂದ್ರ ನಾಯ್ಡು ಅವರು, ಈ ಸಿನಿಮಾ ಮಾಡೋಣ ಸರ್. ಎಲ್ಲರಿಗೂ ಹಿಡಿಸುತ್ತದೆ ಎಂದು ಭರವಸೆ ನೀಡಿದರು. ಇದೇ ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆಯಾಗುತ್ತಿದೆ. ಜನ ಮೆಚ್ಚಿಕೊಳ್ಳುತ್ತಾರೆಂಬ ನಿರೀಕ್ಷೆಯಿದೆ. ನನ್ನೊಂದಿಗೆ ನಟಿಸಿರುವ ವೇದಿಕ , ತಾನ್ಯ ಹೋಪ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನಮ್ಮ ಕರೆಗೆ ಓಗೊಟ್ಟು ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ ಎಂದರು ಉಪೇಂದ್ರ.
ಚಿತ್ರದಲ್ಲಿ ನಟಿಸಿರುವ ವೇದಿಕ, ತಾನ್ಯ ಹೋಪ್, ಚಾಂದಿನಿ, ವಿನಯ್ ಚಂಡೂರ್, ಸಂಭಾಷಣೆ ಬರೆದಿರುವ ಧರ್ಮೇಂದ್ರ, ನಿರ್ಮಾಪಕರಾದ ಪೂರ್ಣಚಂದ್ರ ನಾಯ್ಡು , ಶ್ರೀಕಾಂತ್ ವೀರಮಾಚನೇನಿ ಹಾಗೂ ಚಿತ್ರವನ್ನು ಬಿಡುಗಡೆ ಮಾಡುತ್ತಿರುವ ಬೆಂಗಳೂರು ಕುಮಾರ್ ಫಿಲಂಸ್ ನ ಕುಮಾರ್ “ಹೋಮ್ ಮಿನಿಸ್ಟರ್” ಕುರಿತು ಮಾತನಾಡಿದರು.
ಸುಜಯ್ ಕೆ ಶ್ರೀಹರಿ ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ವೇದಿಕ, ತಾನ್ಯ ಹೋಪ್, ಚಾಂದಿನಿ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕ ಅವಿನಾಶ್, ಲಾಸ್ಯ ಮುಂತಾದವರಿದ್ದಾರೆ.
ಸದ್ಯ ಕನ್ನಡದಲ್ಲಿ ಬಹುನಿರೀಕ್ಷೆಯ ಸಿನಿಮಾ ಅಂದರೆ ಅದು ಕೆಜಿಎಫ್ ೨. ಹೌದು, ಯಶ್ ಅಭಿನಯದ ಈ ಸಿನಿಮಾ ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಅದಕ್ಕೂ ಮೊದಲೇ ಸಿನಿಮಾ ದೊಡ್ಡ ಮಟ್ಟದ ಕುತೂಹಲವನ್ನು ಮೂಡಿಸಿದೆ. ಈಗ ಹೊಸ ಸುದ್ದಿ ಅಂದರೆ, ಸೋಮವಾರ ಚಿತ್ರದ “ತೂಫಾನ್” ಎಂಬ ಹಾಡೊಂದು ಹೊರಹೊಮ್ಮಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಮೊದಲೇ “ತೂಫಾನ್” ಸಾಂಗ್ ರಿಲೀಸ್ ಆಗುತ್ತೆ ಅಂತ ಅನೌನ್ಸ್ ಮಾಡಿದ್ದರಿಂದ ಎಲ್ಲೆಡೆಯಿಂದಲೂ ಕುತೂಹಲ ಹೆಚ್ಚಾಗಿತ್ತು. ಆ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಪಕ್ಕಾ ಮಾಸ್ ಎನಿಸಿರುವ ಹಾಡಿಗೆ ಯಶ್ ಫ್ಯಾನ್ಸ್ ಫಿದಾ ಆಗಿದ್ದಾರೆ. “ತೂಫಾನ್ ತೂಫಾನ್ ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ… ತೂಫಾನ್ ತೂಫಾನ್ ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ…” ಎಂದ ಸಾಗುವ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು, ಈ ಹಾಡಿಗಾಗಿ ಯಶ್ ಫ್ಯಾನ್ಸ್ ಎದುರು ನೋಡುತ್ತಿದ್ದರು. ಬಿಡುಗಡೆಯಾಗಿದ್ದೇ ತಡ, ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆಯ ಸುರಿಮಳೆಯಾಗಿದೆ. ಇನ್ನು, ಲಹರಿ ಮ್ಯೂಸಿಕ್ ಮತ್ತು ಟೀ ಸೀರಿಸ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ರಿಲೀಸ್ ಆಗಿದೆ.
ರವಿಬಸ್ರೂರು ಅವರೇ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ. ಜೊತೆಗೆ ಧ್ವನಿಯನ್ನೂ ನೀಡಿದ್ದಾರೆ. ಅವರೊಂದಿಗೆ ದೊಡ್ಡ ಗಾಯಕರ ತಂಡವೇ ಇದೆ. ಈ ಹಾಡಿಗೆ ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ಪುನೀತ್ ರುದ್ರರಂಗ, ರವಿಬಸ್ರೂರು, ವರ್ಷ ಆಚಾರ್ಯ ಸೇರಿದಂತೆ ಇತರೆ ಗಾಯಕರ ಧ್ವನಿಯೂ ಈ ಹಾಡಿಗೆ. ಅಂದಹಾಗೆ, ಈ ಲಿರಿಕಲ್ ವಿಡಿಯೋ ಹಾಡು ಸದ್ಯಕ್ಕೆ ಸಾಕಷ್ಟು ಸೌಂಡು ಮಾಡುತ್ತಿದೆ. ಕೆಜಿಎಫ್ ೨ ಸಿನಿಮಾ ಏಪ್ರಿಲ್ 14ಕ್ಕೆ ರಾಜ್ಯ, ದೇಶ ವಿದೇಶಗಳಲ್ಲೂ ತೆರೆಗೆ ಅಪ್ಪಳಿಸಲಿದೆ.
ನಟ ರಿಷಿ ಇದೀಗ ಖುಷಿಯ ಮೂಡ್ನಲ್ಲಿದ್ದಾರೆ. ಹೌದು, ಈಗಾಗಲೇ ಸದಭಿರುಚಿಯ ಸಿನಿಮಾಗಳ ಮೂಲಕ ತಮ್ಮದೇ ಆದ ಆಡಿಯನ್ಸ್ ಹೊಂದಿರುವ ಅದರಲ್ಲೂ, ಫ್ಯಾಮಿಲಿ ಪ್ರೇಕ್ಷಕ ವೃಂದವನ್ನು ಸಂಪಾದಿಸಿರುವ ರಿಷಿ ಸಿಂಪಲ್ ಸುನಿ ನಿರ್ದೇಶನದ “ಆಪರೇಷನ್ ಅಲಮೇಲಮ್ಮ” ಹಾಗು ಹೇಮಂತ್ ನಿರ್ದೇಶನದ “ಕವಲುದಾರಿ” ಮೂಲಕ ತಾನೊಬ್ಬ ಫ್ಲೆಕ್ಸಿಬಲ್ ನಟ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ.
ಸದಾ ನಗುಮೊಗದಲ್ಲೇ ಇರುವ ರಿಷಿ, ಹೊಸ ಬಗೆಯ ಅದರಲ್ಲೂ ಕಂಟೆಂಟ್ ಬೇಸ್ಡ್ ಸಿನಿಮಾಗೆ ಒತ್ತುಕೊಟ್ಟವರು. ಕಥೆ ಮತ್ತು ಪಾತ್ರ ಇಷ್ಟವಾದರೆ, ಆ ಚಿತ್ರತಂಡದಲ್ಲಿ ತಾನೂ ಒಬ್ಬ ಅಂತ ಕೈ ಜೋಡಿಸುವ ನಟ ಅವರು. ಅ ಕಾರಣಕ್ಜೆ ಅವರೀಗ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಅದರ ಮಧ್ಯೆಯೇ ಅವರ ಅಭಿನಯದ “ರಾಮನ ಅವತಾರ” ಚಿತ್ರವನ್ನೂ ಯಶಸ್ವಿಯಾಗಿ ಮುಗಿಸಿದ್ದಾರೆ.
ಈ ಕುರಿತು ತಮ್ಮ ಮುಖಪುಟದಲ್ಲಿ ರಿಷಿ “ರಾಮನ ಅವತಾರ” ಚಿತ್ರ ಮುಕ್ತಾಯ ಬಗ್ಗೆ ಬರೆದುಕೊಂಡಿದ್ದಾರೆ.
‘ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚು ಮಾತನಾಡುತ್ತೇವೆ ಹಾಗು ಚಿತ್ರಮಂದಿರಗಳಲ್ಲಿ ಸಿಗೋಣ. ನಿಮ್ಮ ಪ್ರೀತಿ ಪ್ರೋತ್ಸಾಹವಿರಲಿ’ ಎಂದಿದ್ದಾರೆ.
ಅದೇನೆ ಇರಲಿ, ಹಿಂದಿನ ಎರಡು ಚಿತ್ರಗಳಲ್ಲೂ ಮೋಡಿ ಮಾಡಿ ಸೈ ಎನಿಸಿಕೊಂಡಿದ್ದ ರಿಷು, ಈಗ ‘ರಾಮನ ಅವತಾರ’ ಸಿನಿಮಾ ಎದುರು ನೋಡುತ್ತಿದ್ದಾರೆ. ಆ ಚಿತ್ರ ಮುಗಿಸಿದ ಖುಷಿಯಲ್ಲಿದ್ದಾರೆ. ಮುಂದೆಯೂ ಹೊಸ ಬಗೆಯ ಚಿತ್ರ ಕೊಡವ ಉತ್ಸಾಹದಲ್ಲಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿನಯದಷ್ಟೇ, ಗಾಯನದಿಂದಲೂ ಜನಪ್ರಿಯರಾದವರು. ಪ್ರಸ್ತುತ ಉಪೇಂದ್ರ ಅವರು “ಹುಷಾರ್” ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಸತೀಶ್ ರಾಜ್ ಬರೆದಿರುವ “ನೀ ನೋಡೊಕೆ ಸಿಕ್ಸ್ ಟೀನ್ ಸ್ವೀಟಿ. ಬಿಟ್ಕೊಳೆ ಒಂದ್ ನೈಂಟಿ” ಎಂಬ ಹಾಡನ್ನು ಇತ್ತೀಚಿಗೆ ಸಾಧುಕೋಕಿಲ ಅವರ ಸ್ಟುಡಿಯೋದಲ್ಲಿ ಉಪೇಂದ್ರ ಹಾಡಿದ್ದಾರೆ.
ಸತೀಶ್ ರಾಜ್ ಮೂವೀ ಮೇಕರ್ಸ್ ಲಾಂಛನದಲ್ಲಿ ಸತೀಶ್ ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಶ್ವಿನ್ ಅರುಣ್ ಕೃಷ್ಣ ಈ ಚಿತ್ರದ ಸಹ ನಿರ್ಮಾಪಕರು.
ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಸತೀಶ್ ರಾಜ್ ನಿರ್ದೇಶನವನ್ನು ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆಯಲ್ಲಿ ಬಂದಿರುವ ಸತೀಶ್ ರಾಜ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
ನಮ್ಮ ಜೀವನದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಬರುತ್ತದೆ. ಅದಕ್ಕೆ ಯಾರು ಹೊಣೆಗಾರರಲ್ಲ. ನಾವು ಎಚ್ಚರಿಕೆಯಿಂದ ಇರಬೇಕು ಎನ್ನುವುದು ಕಥೆಯ ಸಾರಾಂಶ. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಮೇಲಿನ ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯದಲ್ಲೇ ಈ ಹಾಡಿನ ಚಿತ್ರೀಕರಣ ನಡೆಯಲಿದೆ. ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ.
ಎರಡು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಹಾಗೂ ನಾಗು ಸಂಗೀತ ನೀಡಿದ್ದಾರೆ. ರೆಮೋ ಹಾಗೂ ಉಪೇಂದ್ರ ಒಂದೊಂದು ಹಾಡನ್ನು ಹಾಡಿದ್ದಾರೆ. ನವೀನ್ ಮತ್ತು ನಾಗರಾಜ್ ಛಾಯಾಗ್ರಹಣ, ಜೆ.ಜೆ.ಶರ್ಮ ಸಂಕಲನ, ಚಂದ್ರು ಬಂಡೆ, ಜಾಗ್ವರ್ ಸಣ್ಣಪ್ಪ ಸಾಹಸ ನಿರ್ದೇಶನ ಹಾಗೂ ಸ್ಟಾರ್ ನಾಗಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಸಿದ್ದೇಶ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಪ್ರಿಯದರ್ಶಿನಿ. ವಿನೋದ್, ರಚನಾ ಮಲ್ನಾಡ್, ಲಯ ಕೋಕಿಲ, ಡಿಂಗ್ರಿ ನಾಗರಾಜ್, ಪುಷ್ಪಸ್ವಾಮಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಸತೀಶ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಾರ್ಚ್ 25ಕ್ಕೆ ಪಂಚ ಭಾಷೆಯಲ್ಲಿ ಅದ್ಧೂರಿಯಾಗಿ ತೆರೆಕಾಣ್ತಿರುವ ಮಲ್ಟಿಸ್ಟಾರ್ ಸಿನಿಮಾ RRR ಪ್ರಿ-ರಿಲೀಸ್ ಇವೆಂಟ್ ಧಾಮ್ ಧೂಮ್ ಅಂತಾ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಸಂಜೆಯಲ್ಲಿ ಅದ್ಧೂರಿಯಾಗಿ ನಡೆದ ಪ್ರಿ-ರಿಲೀಸ್ ಇವೆಂಟ್ ಗೆ ಜನಸಾಗರವೇ ಹರಿದು ಬಂದಿತ್ತು. ಸುಮಾರು ನೂರು ಎಕರೆ ಜಾಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಇಡೀ ಆರ್ ಆರ್ ಆರ್ ಬಳಗ ಸಾಕ್ಷಿಯಾಯ್ತು.
ಯಂಗ್ ಟೈಗರ್ ಕನ್ನಡ ಪ್ರೀತಿಗೆ ಕನ್ನಡಿಗರ ಸಲಾಂ
ಕನ್ನಡ ಭಾಷೆ..ಕನ್ನಡಿಗರ ಮೇಲೆ ವಿಶೇಷ ಅಭಿಮಾನ ಹೊಂದಿರುವ ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್ ಕನ್ನಡದಲ್ಲಿಯೇ ಮಾತು ಆರಂಭಿಸಿ ಎಲ್ಲರ ಗಮನಸೆಳೆದರು. ಅಪ್ಪು ಎಲ್ಲಿಯೂ ಹೋಗಿಲ್ಲ.. ಗಾಳಿ, ನೀರು ಎಲ್ಲೆಡೆ ಅಪ್ಪು ಇದ್ದಾರೆ ಅಂತಾ ನೆಚ್ಚಿನ ಗೆಳೆಯನನ್ನು ನೆನೆದ ತಾರಕ್, ಮಾರ್ಚ್ 25ಕ್ಕೆ ತ್ರಿಬಲ್ ಸಿನಿಮಾವನ್ನು ಫ್ಯಾಮಿಲಿ ಸಮೇತರಾಗಿ ನೋಡಿ ಅಂತ ಮನವಿ ಮಾಡಿಕೊಂಡರು.
ಅಪ್ಪು ನೆನೆದು ಭಾವುಕ
ತ್ರಿಬಲ್ ಸಿನಿಮಾ ಪ್ರಿ-ರಿಲೀಸ್ ಇವೆಂಟ್ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ್ದ ನಟ ಶಿವರಾಜ್ ಕುಮಾರ್, ಒಂದು ಕಡೆ ಸಂತೋಷನೂ ಆಗ್ತಾ ಇದೆ, ಮತ್ತೊಂದು ಕಡೆ ದುಃಖ ಇದೆ. ಅಪ್ಪುನ ಕಳೆದುಕೊಂಡು ದುಃಖದಲ್ಲಿದ್ದೇವೆ. ನಮ್ಮ ದುಃಖದಲ್ಲಿ ಭಾರತೀಯ ಚಿತ್ರರಂಗ ಇದೆ, ಸರ್ಕಾರ ಇದೆ. ಬೊಮ್ಮಾಯಿ ಅವರು ಅಣ್ಣನ ಸ್ಥಾನದಲ್ಲಿ ನಿಂತಿದ್ದಾರೆ. ನಮಗಾದಷ್ಟೇ ನೋವು ಅವರಿಗೂ ಆಗಿದೆ. ರಾಮ್ ಚರಣ್, ಜ್ಯೂ. ಎನ್‌ಟಿಆರ್ ಬಂದು ನಾವು ನಿಮ್ಮ ತಮ್ಮ ಎಂದಾಗ ಖುಷಿ ಆಯ್ತು.
ಅಪ್ಪುನ ಇವರಲ್ಲಿ, ಅಭಿಮಾನಿಗಳಲ್ಲಿ ಕಾಣ್ತೀದ್ದೇನೆ. ನಾನು ರಾಜಮೌಳಿ ದೊಡ್ಡ ಫ್ಯಾನ್. ಜ್ಯೂ. ಎನ್‌ಟಿಆರ್ ಅವರ ಎಲ್ಲಾ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ರಾಮ್ ಚರಣ್, ಪವನ್ ಕಲ್ಯಾಣ್, ಚಿರಂಜೀವಿ, ಅಜಿತ್, ವಿಜಯ್ ಪ್ರತಿಯೊಬ್ಬರ ಸಿನಿಮಾನೂ ನಾನು ಥಿಯೇಟರ್ನಲ್ಲೇ ನೋಡೋದು. ನನಗೆ ಮನೆಯಲ್ಲೇ ಶೋ ಹಾಕಿಸಿಕೊಂಡು ಸಿನಿಮಾ ನೋಡೋದು ಇಷ್ಟ ಇಲ್ಲ. ನಾನು ಅಭಿಮಾನಿ ತರಹ ಥಿಯೇಟರ್ಗೆ ಹೋಗೆ ಸಿನಿಮಾ ನೋಡೋದು’ ಎಂದಿದ್ದಾರೆ ಶಿವರಾಜ್ಕುಮಾರ್. ಆರ್ ಆರ್ ಆರ್ ಸಿನಿಮಾ ಯಶಸ್ಸು ಆಗಲಿ ಎಂದು ಹಾರೈಸಿದರು.
ಇಡೀ RRR ಬಳಗಕ್ಕೆ ಧನ್ಯವಾದ ಹೇಳಿದ ಮೌಳಿ
ಚಿತ್ರಬ್ರಹ್ಮ ರಾಜಮೌಳಿ ಅದ್ಧೂರಿ ಪ್ರಿ-ರಿಲೀಸ್ ಇವೆಂಟ್ ನಲ್ಲಿ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು. ಶಿವಣ್ಣ, ಮುಖ್ಯಮಂತ್ರಿ, ಆರೋಗ್ಯ ಸಚಿವರ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿ ಗಮನಸೆಳೆದ ಮೌಳಿ, ಇಂತಹ ಅದ್ಧೂರಿ ಇವೆಂಟ್ ಆಯೋಜಿಸಿದ KVN ಸಂಸ್ಥೆಯ ಒಡೆಯ ವೆಂಕಟ್ ಅವರಿಗೆ ಧನ್ಯವಾದ ತಿಳಿಸಿದರು. ನಟ ರಾಮ್ ಚರಣ್ ಸಿನಿಮಾ ನೋಡಲು ಕಾತುರನಾಗಿದ್ದೇನೆ. ಪ್ರತಿಯೊಬ್ಬರು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ ತೋರಿಸಿರುವುದು ಹೆಮ್ಮೆ
ಸ್ವಾತಂತ್ರ್ಯ ಹೋರಾಟದ ಸತ್ಯಗಳು ಯುವಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ. ಸ್ವಾತಂತ್ರ್ಯ ಸೇನಾನಿ RRR ಸಿನಿಮಾ ನೋಡಿ ಇಡೀ ದೇಶ ಹೆಮ್ಮೆಪಡಲಿದೆ ಎಂದ ಮುಖ್ಯಮಂತ್ರಿ, ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ RRR ಸಿನಿಮಾದಲ್ಲಿ ತೋರಿಸಿರುವುದು ಹೆಮ್ಮೆ ಎಂದರು.
ಭಾರತದ ಅತಿದೊಡ್ಡ ಇವೆಂಟ್ ನ್ನು ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಿದ್ದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಹೌಸ್ RRR ಸಿನಿಮಾ ಕರುನಾಡಿನಾದ್ಯಂತ ಆರ್ ಆರ್ ಆರ್ ಚಿತ್ರವನ್ನು ವಿತರಣೆ ಮಾಡಲಿದೆ. ಸುಮಾರು 450 ಕೋಟಿ ಬಜೆಟ್ ನಲ್ಲಿ ದಾನಯ್ಯ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಜಮೌಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ದೊಡ್ಡತಾರಾಬಳಗ ಸಿನಿಮಾದಲ್ಲಿ ನಟಿಸಿದ್ದು, ಇದೇ 25ಕ್ಕೆ ವರ್ಲ್ಡ್ ವೈಡ್ ಆರ್ ಆರ್ ಆರ್ ಸಿನಿಮಾ ರಿಲೀಸ್ ಅಗ್ತಿದೆ.
ಇಂಥದ್ದೊಂದು ಪ್ರಶ್ನೆ ಶನಿವಾರ ಮೀಡಿಯಾ ಮುಂದೆ ಕುಳಿತ ರಾಜಮೌಳಿ ಅವರಿಗೆ ಎದುರಾಯ್ತು. ಚಿಕ್ಕಬಳ್ಳಾಪುರದಲ್ಲಿ ಆಯೋಜನೆಗೊಂಡಿರುವ ತ್ರಿಬ್ಬಲ್ ಆರ್ ಸಿನಿಮಾದ ಪ್ರೀ ರಿಲೀಸ್ ಈವೆಂಟ್‌ಗೂ ಮುನ್ನ, ಬಂದ ಈ ಪ್ರಶ್ನೆಗೆ ರಾಜಮೌಳಿ ಹೇಳಿದ್ದೇನು ಗೊತ್ತಾ?
ರಾಜಮೌಳಿ ಈಗಾಗಲೇ ಸಕ್ಸಸ್‌ಫುಲ್ ನಿರ್ದೇಶಕರು. ಅವರು ತ್ರಿಬ್ಬಲ್ ಆರ್ ಸಿನಿಮಾ ನಿರ್ದೇಶಿಸಿದ್ದು, ಮಾರ್ಚ್ 25ರಂದು ತೆರೆಗೆ ಅಪ್ಪಳಿಸಲಿದೆ. ಈ ವೇಳೆ ಪ್ರೀ ರಿಲೀಸ್ ಈವೆಂಟ್ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದ ರಾಜಮೌಳಿಗೆ ಕನ್ನಡದ ಯಾವ ಹೀರೋಗೆ ನಿರ್ದೇಶಿಸಲು ಇಷ್ಟಪಡ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ, ರಾಜಮೌಳಿ ಉತ್ತರ ಹೀಗಿತ್ತು.
ಸರ್, ಈ ಪ್ರಶ್ನೆ ನನಗೆ ಅನೇಕ ಪತ್ರಿಕಾಗೋಷ್ಠಿಗಳಲ್ಲಿ ಎದುರಾಗಿದೆ. ಆಗಲೂ ನಾನು ಸಮಯ ಬಂದಾಗ ಹೇಳ್ತೀನಿ ಅಂತ ಉತ್ತರಿಸಿದ್ದೇನೆ. ಆದರೆ, ಈಗ ನಾವಿಲ್ಲಿ ಬಂದಿರೋದು ತ್ರಿಬ್ಬಲ್ ಆರ್ ಈವೆಂಟ್ ಕುರಿತು ಹೇಳಲು. ತ್ರಿಬ್ಬಲ್ ಆರ್ ಸಿನಿಮಾ ಕುರಿತು ಕೇಳಿ. ನಿಮ್ಮ ಪ್ರಶ್ನೆಗೆ ನಾನು ಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ ಹೇಳ್ತೀನಿ. ಅಂತ ನಯವಾಗಿಯೇ ಪ್ರಶ್ನೆಗೆ ಉತ್ತರಿಸದೆ, ತ್ರಿಬ್ಬಲ್ ಆರ್ ಸಿನಿಮಾ ಕುರಿತು ಮಾತಾಡುತ್ತಾ ಹೋದರು ರಾಜಮೌಳಿ.
ಇದೇ ವೇಳೆ ಮಾಧ್ಯಮ ಕಡೆಯಿಂದ ತೂರಿ ಬಂದ ಇನ್ನೊಂದು ಪ್ರಶ್ನೆಗೆ ರಾಜಮೌಳಿ ಹೇಳಿದ್ದಿಷ್ಟು. ಪ್ರಶ್ನೆ ಇದು, “ಸರ್ ನಿಮ್ಮ ಟೀಮ್‌ನಲ್ಲಿ ಟೆಕ್ನೀಷಿಯನ್ಸ್ ಕೂಡ ಹೀರೋಗಳೇ. ನಿಮ್ಮ ಸ್ಕ್ರಿಪ್ಟ್ ಚರ್ಚೆಯಲ್ಲಿ ಟೆಕ್ನೀಷಿಯನ್ಸ್ ಇನ್ವಾಲ್ ಮಾಡ್ಕೋತೀರಾ? ಈ ಪ್ರಶ್ನೆಗೆ, ಉತ್ತರಿಸಿದ ರಾಜಮೌಳಿ, ಯೆಸ್ ನಾನು ಎಲ್ಲರನ್ನೂ ಗಣನಗೆ ತೆಗೆದುಕೊಳ್ತೀನಿ. ಹೀರೋಗಳಿರುತ್ತಾರೆ, ತಾಂತ್ರಿಕ ವರ್ಗದವರೂ ಇರುತ್ತಾರೆ ಅಂದರು.
ಜೂ.ಎನ್‌ಟಿಆರ್ ರಾಜಮೌಳಿ ಕೆಲಸ ಬಗ್ಗೆ ಹೇಳಿದ್ದು ಹೀಗೆ
ಇದೇ ವೇಳೆ ಜೂನಿಯರ್ ಎನ್‌ಟಿಆರ್ ಅವರಿಗೊಂದು ಪ್ರಶ್ನೆಯೂ ತೂರಿ ಬಂತು. ಪ್ರಶ್ನೆ ಹೀಗಿತ್ತು. “ಸರ್, ಈಗಾಗಲೇ ನೀವು ರಾಜಮೌಳಿ ಅವರೊಂದಿಗೆ ಕೆಲಸ ಮಾಡಿದ್ದೀರಿ. ಆ ಹಿಂದಿನ ಸಿನಿಮಾಗಳಿಗೂ ಈಗಿನ ತ್ರಿಬ್ಬಲ್ ಆರ್ ಸಿನಿಮಾಗೂ ಏನು ಡಿಫರೆನ್ಸ್ ಇದೆ. ಈ ಪ್ರಶ್ನೆಗೆ ಉತ್ತರಿಸಿದ ಜೂನಿಯರ್ ಎನ್‌ಟಿಆರ್, “ನನಗೆ ಯಾವುದೇ ಚೇಂಜ್ ಕಾಣ್ತಾ ಇಲ್ಲ. ರಾಜಮೌಳಿ ಎಲ್ಲಾ ಸಿನಿಮಾಗೂ ಒಂದೇ ಎಫರ್ಟ್ ಹಾಕ್ತಾರೆ. ಅವರೊಂದಿಗೆ ಕೆಲಸ ಮಾಡೋದೇ ಖುಷಿ. ಅವರಲ್ಲಿ ಪವರ್ ಸ್ಟೋರಿಸ್ ಇರುತ್ತೆ. ಅದಕ್ಕೆ ತಕ್ಕಂತೆಯೇ ಕೆಲಸ ಮಾಡುತ್ತಾರೆ ಮತ್ತು ನಮ್ಮಿಂದಲೂ ಮಾಡಿಸುತ್ತಾರೆ ಅಂದರು ಜೂ.ಎನ್‌ಟಿಆರ್.
ರಾಮ್ ಚರಣ್ ಹೇಳಿದ್ರು ಕನ್ನಡ ನನ್ನ ಫೇವರೇಟ್…
ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ರಾಮ್‌ಚರಣ್ ಅವರಿಗೆ ಗ್ಯಾಲರಿಯಿಂದ ಪ್ರಶ್ನೆ ತೂರಿಬಂತು. “ನಿಮ್ಮ ತಂದೆ ಈಗಾಗಲೇ ಸಿಪಾಯಿ ಎಂಬ ಕನ್ನಡ ಸಿನಿಮಾ ಮಾಡಿದ್ದರು. ನೀವು ಕೂಡ ಹೀರೋ ಆಗಿದ್ದೀರಿ. ನೀವು ಯಾವಾಗ ಕನ್ನಡದಲ್ಲಿ ನಟಿಸ್ತೀರಿ? ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರಾಮ್‌ಚರಣ್, ” ನಾನು ರೆಡಿ ಇದ್ದೇನೆ. ನಾನು ನಾಲ್ಕೈದು ಭಾಷೆಗಳಲ್ಲಿ ಡಬ್ ಮಾಡಿದ್ದೇನೆ. ಅದರಲ್ಲಿ ಕನ್ನಡ ಕೂಡ ನನ್ನ ನೆಚ್ಚಿನ ಭಾಷೆ. ಆದಷ್ಟು ಬೇಗ ನಾನು ಕನ್ನಡದಲ್ಲಿ ನಟಿಸ್ತೀನಿ. ನನ್ನ ಫೇವರೇಟ್ ಭಾಷೆಗಳಲ್ಲಿ ಇದೂ ಒಂದು ಎಂದರು ರಾಮ್ ಚರಣ್.
ಡಾ.ಪುನೀತ್ ರಾಜ್‌ಕುಮಾರ್ ಅಭಿನಯದ “ಜೇಮ್ಸ್” ಅದ್ಧೂರಿಯಾಗಿ ಬಿಡುಗಡೆಯಾಗಿರುವುದು ಗೊತ್ತೇ ಇದೆ. ಬಿಡುಗಡೆಯ ಮೊದಲ ದಿನವೇ ದಾಖಲೆ ಬರೆದಿರುವುದು ಎಲ್ಲರಿಗೂ ಗೊತ್ತಿದೆ. ದೊಡ್ಡ ಮಟ್ಟದಲ್ಲೇ ಓಪನಿಂಗ್ ಸಿಕ್ಕಿದ್ದು ಗೊತತು. ಇನ್ನು, ಅಪ್ಪು ಫ್ಯಾನ್ಸ್ ಅಂತೂ ಸಿನಿಮಾ ನೋಡೋಕೆ ಮುಗಿ ಬೀಳುತ್ತಲೇ ಇದ್ದಾರೆ. ಮೊದಲ ದಿನ ಮತ್ತು ಎರಡನೇ ದಿನ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನವನ್ನು ಕಂಡಿವೆ. ಮೊದಲ ದಿನವೇ ಕನ್ನಡ ಚಿತ್ರರಂಗದ ಆಲ್ ರೆಕಾರ್ಡ್ ಅನ್ನು ಜೇಮ್ಸ್ ಮುರಿದಿದೆ.
ಅಂದಹಾಗೆ, ಮೊದಲ ದಿನವೇ ಕರ್ನಾಟಕದಲ್ಲಿ ಸುಮಾರು 35 ಕೋಟಿಯಷ್ಟು ಗಳಿಕೆ ಮಾಡಿದ್ದು, ಎರಡನೇ ದಿನ ಕೂಡ ರಾಜ್ಯದಲ್ಲಿ ಸುಮಾರು 18 ಕೋಟಿಗೂ ಹೆಚ್ಚು ಗಳಿಕೆಯಾಗಿದೆ ಎನ್ನಲಾಗಿದೆ. ಇದು ನಿಜಕ್ಕೂ ಹೊಸ ದಾಖಲೆ. ಇನ್ನು, ಶನಿವಾರ ಮತ್ತು ಭಾನುವಾರದ ಗಳಿಕೆ ಕೂಡ ಇದೇ ವೇಗದಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಇದೇ ವೇಗದಲ್ಲಿ ಗಳಿಕೆ ಕಂಡರೆ ಒಂದು ವಾರದಲ್ಲಿ ಚಿತ್ರ ನೂರು ಕೋಟಿ ಕ್ಲಬ್ ಸೇರಲಿದೆ ಎನ್ನಲಾಗುತ್ತಿದೆ. ಜೇಮ್ಸ್ ಚಿತ್ರದ ಗಳಿಕೆ ಕುರಿತಂತೆ ಸ್ವತಃ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು, “ಇಷ್ಟೆಲ್ಲಾ ಆಗಿರೋದು ಪುನೀತ್ ಅಣ್ಣನ ಪವರ್. ನನಗೆ ತಿಳಿದಿರುವಂತೆ ಈ ರೀತಿಯ ಓಪನಿಂಗ್ ಯಾವ ಸಿನಿಮಾಗೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿಯೂ ಸಿಗಲ್ಲ. ಕೇವಲ ಚಿತ್ರದ ಗಳಿಕೆ ಮಾತ್ರವಲ್ಲ ಇತರೆ ವಿಭಾಗದಲ್ಲೂ ಚಿತ್ರ ಹಳೆಯ ದಾಖಲೆಗಳನ್ನೆಲ್ಲ ಮುರಿದು ಹಾಕಿದೆ ಎಂದಿದ್ದಾರೆ.
ಸದ್ಯ ಚಿತ್ರ ಎರಡು ದಿನದಲ್ಲಿ 50 ಕೋಟಿ ಗಳಿಕೆ ದಾಟಿದ್ದು, ಒಂದು ವಾರದಲ್ಲೇ ಚಿತ್ರ ನೂರು ಕೋಟಿ ಕ್ಲಬ್ ಸೇರಲಿದೆ ಎಂದಿದ್ದಾರೆ. ಈಗಾಗಲೇ ಚಿತ್ರದ ಡಿಜಿಟಲ್, ಸ್ಯಾಟಲೈಟ್, ಓಟಿಟಿ ಹೀಗೆ ಒಟ್ಟಾರೆ ಲೆಕ್ಕ ಹಾಕಿದರೆ ಚಿತ್ರ ಈಗಲೇ ನೂರು ಕೋಟಿಗೂ ಗಳಿಕೆಯಾಗಿದೆ ಎಂಬುದು ಅವರ ಮಾತು.