ಚಿಕ್ಕಬಳ್ಳಾಪುರದಲ್ಲಿ RRR ಅದ್ಧೂರಿ ಪ್ರಿ-ರಿಲೀಸ್ ಈವೆಂಟ್; ರಾಜಮೌಳಿಯ ರಂಗೀನ್‌ ಲೋಕದಲ್ಲಿ ಮಿಂದೆದ್ದ ಜನಸಾಗರ… ವೇದಿಕೆ ಮೇಲೆ ಸೌತ್ ಸ್ಟಾರ್ಸ್ ಸಮಾಗಮ

ಝಗಮಗಿಸುವ ಸ್ಟೇಜ್.. ಕಣ್ಣಾಯಿಸಿದ ಕಡೆಯಲ್ಲಾ ಅಭಿಮಾನಿಗಳು…ತಿಳಿ ಸಂಜೆಯಲ್ಲಿ‌ ಸಂಗೀತ-ನೃತ್ಯದ ವೈಭವ…ನೆಚ್ಚಿನ ಸ್ಟಾರ್ಸ್ ಕಣ್ತುಂಬಿಕೊಂಡು‌ ಪುಳಕಗೊಂಡ ಫ್ಯಾನ್ಸ್ … ಇದೆಲ್ಲಾ ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ನಡೆದ RRR ಅದ್ಧೂರಿ ಪ್ರಿ-ರಿಲೀಸ್ ಇವೆಂಟ್ ಝಲಕ್..

ಮಾರ್ಚ್ 25ಕ್ಕೆ ಪಂಚ ಭಾಷೆಯಲ್ಲಿ ಅದ್ಧೂರಿಯಾಗಿ ತೆರೆಕಾಣ್ತಿರುವ ಮಲ್ಟಿಸ್ಟಾರ್ ಸಿನಿಮಾ RRR ಪ್ರಿ-ರಿಲೀಸ್ ಇವೆಂಟ್ ಧಾಮ್ ಧೂಮ್ ಅಂತಾ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಸಂಜೆಯಲ್ಲಿ ಅದ್ಧೂರಿಯಾಗಿ ನಡೆದ ಪ್ರಿ-ರಿಲೀಸ್ ಇವೆಂಟ್ ಗೆ ಜನಸಾಗರವೇ ಹರಿದು ಬಂದಿತ್ತು. ಸುಮಾರು ನೂರು ಎಕರೆ ಜಾಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಇಡೀ ಆರ್ ಆರ್ ಆರ್ ಬಳಗ ಸಾಕ್ಷಿಯಾಯ್ತು.

ಯಂಗ್ ಟೈಗರ್ ಕನ್ನಡ ಪ್ರೀತಿಗೆ ಕನ್ನಡಿಗರ ಸಲಾಂ

ಕನ್ನಡ ಭಾಷೆ..ಕನ್ನಡಿಗರ ಮೇಲೆ ವಿಶೇಷ ಅಭಿಮಾನ ಹೊಂದಿರುವ ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್ ಕನ್ನಡದಲ್ಲಿಯೇ ಮಾತು ಆರಂಭಿಸಿ ಎಲ್ಲರ ಗಮನಸೆಳೆದರು. ಅಪ್ಪು ಎಲ್ಲಿಯೂ ಹೋಗಿಲ್ಲ.. ಗಾಳಿ, ನೀರು ಎಲ್ಲೆಡೆ ಅಪ್ಪು ಇದ್ದಾರೆ ಅಂತಾ ನೆಚ್ಚಿನ ಗೆಳೆಯನನ್ನು ನೆನೆದ ತಾರಕ್, ಮಾರ್ಚ್ 25ಕ್ಕೆ ತ್ರಿಬಲ್ ಸಿನಿಮಾವನ್ನು ಫ್ಯಾಮಿಲಿ ಸಮೇತರಾಗಿ ನೋಡಿ‌ ಅಂತ ಮನವಿ‌ ಮಾಡಿಕೊಂಡರು.

ಅಪ್ಪು ನೆನೆದು ಭಾವುಕ

ತ್ರಿಬಲ್ ಸಿನಿಮಾ ಪ್ರಿ-ರಿಲೀಸ್ ಇವೆಂಟ್ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ್ದ ನಟ ಶಿವರಾಜ್ ಕುಮಾರ್, ಒಂದು ಕಡೆ ಸಂತೋಷನೂ ಆಗ್ತಾ ಇದೆ, ಮತ್ತೊಂದು ಕಡೆ ದುಃಖ ಇದೆ. ಅಪ್ಪುನ ಕಳೆದುಕೊಂಡು ದುಃಖದಲ್ಲಿದ್ದೇವೆ. ನಮ್ಮ ದುಃಖದಲ್ಲಿ ಭಾರತೀಯ ಚಿತ್ರರಂಗ ಇದೆ, ಸರ್ಕಾರ ಇದೆ. ಬೊಮ್ಮಾಯಿ ಅವರು ಅಣ್ಣನ ಸ್ಥಾನದಲ್ಲಿ ನಿಂತಿದ್ದಾರೆ. ನಮಗಾದಷ್ಟೇ ನೋವು ಅವರಿಗೂ ಆಗಿದೆ. ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಬಂದು ನಾವು ನಿಮ್ಮ ತಮ್ಮ ಎಂದಾಗ ಖುಷಿ ಆಯ್ತು.

ಅಪ್ಪುನ ಇವರಲ್ಲಿ, ಅಭಿಮಾನಿಗಳಲ್ಲಿ ಕಾಣ್ತೀದ್ದೇನೆ. ನಾನು ರಾಜಮೌಳಿ ದೊಡ್ಡ ಫ್ಯಾನ್​. ಜ್ಯೂ. ಎನ್​ಟಿಆರ್​ ಅವರ ಎಲ್ಲಾ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ರಾಮ್​ ಚರಣ್​, ಪವನ್​ ಕಲ್ಯಾಣ್​, ಚಿರಂಜೀವಿ, ಅಜಿತ್​, ವಿಜಯ್​ ಪ್ರತಿಯೊಬ್ಬರ ಸಿನಿಮಾನೂ ನಾನು ಥಿಯೇಟರ್​ನಲ್ಲೇ ನೋಡೋದು. ನನಗೆ ಮನೆಯಲ್ಲೇ ಶೋ ಹಾಕಿಸಿಕೊಂಡು ಸಿನಿಮಾ ನೋಡೋದು ಇಷ್ಟ ಇಲ್ಲ. ನಾನು ಅಭಿಮಾನಿ ತರಹ ಥಿಯೇಟರ್​ಗೆ ಹೋಗೆ ಸಿನಿಮಾ ನೋಡೋದು’ ಎಂದಿದ್ದಾರೆ ಶಿವರಾಜ್​ಕುಮಾರ್. ಆರ್ ಆರ್ ಆರ್ ಸಿನಿಮಾ ಯಶಸ್ಸು ಆಗಲಿ‌ ಎಂದು ಹಾರೈಸಿದರು.

ಇಡೀ RRR ಬಳಗಕ್ಕೆ ಧನ್ಯವಾದ ಹೇಳಿದ ಮೌಳಿ

ಚಿತ್ರಬ್ರಹ್ಮ ರಾಜಮೌಳಿ ಅದ್ಧೂರಿ ಪ್ರಿ-ರಿಲೀಸ್ ಇವೆಂಟ್ ನಲ್ಲಿ ಇಡೀ ಚಿತ್ರತಂಡಕ್ಕೆ‌ ಧನ್ಯವಾದ ತಿಳಿಸಿದರು. ಶಿವಣ್ಣ, ಮುಖ್ಯಮಂತ್ರಿ, ಆರೋಗ್ಯ ಸಚಿವರ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿ ಗಮನಸೆಳೆದ‌ ಮೌಳಿ, ಇಂತಹ ಅದ್ಧೂರಿ ಇವೆಂಟ್ ಆಯೋಜಿಸಿದ KVN ಸಂಸ್ಥೆಯ ಒಡೆಯ ವೆಂಕಟ್ ಅವರಿಗೆ ಧನ್ಯವಾದ ತಿಳಿಸಿದರು.‌ ನಟ ರಾಮ್ ಚರಣ್ ಸಿನಿಮಾ ನೋಡಲು ಕಾತುರನಾಗಿದ್ದೇನೆ. ಪ್ರತಿಯೊಬ್ಬರು ಥಿಯೇಟರ್ ಗೆ ಹೋಗಿ ಸಿನಿಮಾ‌ ನೋಡಿ ಪ್ರೋತ್ಸಾಹಿಸಿ‌ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ‌ ಬಗ್ಗೆ ತೋರಿಸಿರುವುದು‌ ಹೆಮ್ಮೆ

ಸ್ವಾತಂತ್ರ್ಯ ಹೋರಾಟದ ಸತ್ಯಗಳು ಯುವಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ. ಸ್ವಾತಂತ್ರ್ಯ ಸೇನಾನಿ RRR ಸಿನಿಮಾ ನೋಡಿ‌ ಇಡೀ‌ ದೇಶ ಹೆಮ್ಮೆಪಡಲಿದೆ ಎಂದ ಮುಖ್ಯಮಂತ್ರಿ, ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ RRR ಸಿನಿಮಾದಲ್ಲಿ ತೋರಿಸಿರುವುದು ಹೆಮ್ಮೆ ಎಂದರು.

ಭಾರತದ ಅತಿ‌ದೊಡ್ಡ ಇವೆಂಟ್ ನ್ನು ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಿದ್ದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಹೌಸ್ RRR ಸಿನಿಮಾ ಕರುನಾಡಿನಾದ್ಯಂತ ಆರ್ ಆರ್ ಆರ್ ಚಿತ್ರವನ್ನು ವಿತರಣೆ‌ ಮಾಡಲಿದೆ. ಸುಮಾರು 450 ಕೋಟಿ ಬಜೆಟ್ ನಲ್ಲಿ ದಾನಯ್ಯ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಜಮೌಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ದೊಡ್ಡತಾರಾಬಳಗ ಸಿನಿಮಾದಲ್ಲಿ ನಟಿಸಿದ್ದು, ಇದೇ 25ಕ್ಕೆ ವರ್ಲ್ಡ್ ವೈಡ್ ಆರ್ ಆರ್ ಆರ್ ಸಿನಿಮಾ ರಿಲೀಸ್ ಅಗ್ತಿದೆ.

Related Posts

error: Content is protected !!