ಕನ್ನಡದಲ್ಲಿ ಹೊಸ ಹೊಸ ಪ್ರತಿಭೆಗಳ ಅನಾವರಣವಾಗುತ್ತಿದೆ. ಆದ್ರೆ ಕಂಟೆಂಟ್ ಗಟ್ಟಿಯಾಗಿ ಇದ್ದವರು ಮಾತ್ರ ಇಲ್ಲಿ ನೆಲೆಯೂರುತ್ತಾರೆ. ಈಗ ಅದೇ ಗಟ್ಟಿ ಭರವಸೆಯೊಂದಿಗೆ ಹೊಸಬರ ತಂಡವೊಂದು ಎಂಟ್ರಿಕೊಡುತ್ತಿದೆ. ಯುಗಾದಿ ಹಬ್ಬದ ಪ್ರಯುಕ್ತ ಸಿನಿಮಾದ ಟೈಟಲ್ ಅನ್ನು ತಂಡ ರಿವೀಲ್ ಮಾಡಿದೆ.
ಮೂಲತಃ ಇಂಜಿನಿಯರಿಂಗ್ ಆಗಿರುವ ಶ್ರೀಕಾಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾ ಸದಸ್ಯ. ಈಗಾಗಲೇ ವಾರ್ಡ್ ನಂಬರ್ 11 ಸಿನಿಮಾ ಮೂಲಕ ನಿರ್ದೇಶಕರಾಗಿರುವ ಶ್ರೀಕಾಂತ್ ಕಿರು ಚಿತ್ರಗಳ ಮೂಲಕ ಬಣ್ಣದ ಬದುಕು ಆರಂಭಿಸಿ ಈಗ ಪೂರ್ಣಪ್ರಮಾಣ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸದಸ್ಯ ಶ್ರೀಕಾಂತ್ ನಿರ್ದೇಶನದ ಎರಡನೇ ಸಿನಿಮಾವಾಗಿದ್ದು, ಯುಗಾದಿ ಸ್ಪೆಷಲ್ ಆಗಿ ಚಿತ್ರತಂಡದ ಟೈಟಲ್ ಅನಾವರಣ ಮಾಡಿದೆ ಚಿತ್ರತಂಡ.
ಕಾಮಿಡಿ ಹೂರಣ ಒಳಗೊಂಡಿರುವ ಸದಸ್ಯ ಸಿನಿಮಾವನ್ನು ಪ್ರೊಡಕ್ಷನ್ ಫೀನಿಕ್ಸ್ ಎಂಟರ್ ಟೈನ್ ಮೆಂಟ್ ನಡಿ ಅನಿಲ್ ಕುಮಾರ್ ನಿರ್ಮಾಣ ಮಾಡ್ತಿದ್ದು, ಒಂದಷ್ಟು ಹೊಸ ಪ್ರತಿಭೆಗಳು, ಹಸಿವಿರುವ ಕಲಾವಿದರಿಗೆ ಅವಕಾಶ ನೀಡಲಿದೆ ಚಿತ್ರತಂಡ. ಸದ್ಯ ಟೈಟಲ್ ರಿವೀಲ್ ಮಾಡಿದ್ದು, ಮೇನಿಂದ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲಿಯೇ ರಿವೀಲ್ ಮಾಡಲಿದೆ.
ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆದೆ ಹೊಸ ಹೊಸ ನಟಿಯರ ಆಗಮನವಾಗುತ್ತಿದೆ. ಆದ್ರೆ ಗ್ಲಾಮರ್ ಜೊತೆಗೆ ಪ್ರತಿಭೆ, ಅದೃಷ್ಟ ಇದ್ದವರು ಮಾತ್ರ ಇಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ. ಈ ಪೈಕಿ ಪ್ರತಿಭಾನ್ವಿತ ನಾಯಕಿ ಚೈತ್ರಾ ಆಚಾರ್ ಕೂಡ ಒಬ್ಬರು. ಮಹಿರಾ, ಗಿಲ್ಕಿ, ತಲೆದಂಡ ಹೀಗೆ ಪ್ರತಿ ಸಿನಿಮಾಗಳಲ್ಲೂ ವಿಶೇಷ ಪಾತ್ರಗಳ ಮೂಲಕ ಗಮನಸೆಳೆದಿರುವ ಚೈತ್ರಾ ಈಗ ಅಕಟಕಟ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಪಾಸಿಟಿವ್ ಗರ್ಲ್ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡುತ್ತಿರುವ ಅಕಟಕಟ ಸಿನಿಮಾದಲ್ಲಿ ಚೈತ್ರಾ ಆಚಾರ್ ಜಾನಕಿ ಎಂಬ ಪಾತ್ರ ಮಾಡಲಿದ್ದಾರೆ. ಸದಾ ಖುಷಿ ಖುಷಿಯಿಂದ ಜೀವನವನ್ನು ಜೀವಿಸುವ.. ನೆಗೆಟಿವ್ ಬಿಟ್ಟು ಪಾಸಿಟಿವ್ ಬಗ್ಗೆ ಯೋಚಿಸುವ, ಮಧ್ಯಮ ವರ್ಗದ ಹುಡುಗಿಯಾಗಿ ಚೈತ್ರಾ ಬಣ್ಣ ಹಚ್ಚಲಿದ್ದು, ಇಂಥ ನಾಯಕಿ ನಾಯಕ ಬದುಕಿಗೆ ಎಂಟ್ರಿ ಕೊಟ್ಟಾಗ ಏನಾಗುತ್ತೇ ಅನ್ನೋದೇ ಚೈತ್ರಾ ಆಚಾರ್ ಪಾತ್ರ.
ಸಂಚಾರಿ ವಿಜಯ್ ನಟಿಸಿದ್ದ ‘ಪುಕ್ಸಟ್ಟೆ ಲೈಫು’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ನಾಗರಾಜ್ ಸೋಮಯಾಜಿ ಮೂಲತಃ ಫೋಟೊಗ್ರಾಫರ್. ರಂಗಭೂಮಿಯಲ್ಲಿಯೂ ಸಕ್ರಿಯರಾಗಿರುವ ಅವರು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು.
ಈಗ ಅಕಟಕಟ ಸಿನಿಮಾಗೆ ಕಥೆಯನ್ನು ನಾಗರಾಜ್ ಅವರೇ ಬರೆದಿದ್ದು ನಿರ್ದೇಶನ ಕೂಡ ಮಾಡ್ತಿದ್ದು, ಶೀಘ್ರದಲ್ಲೇ ನಾಯಕ ಮತ್ತು ಉಳಿದ ವಿವರಗಳನ್ನು ಶೀಘ್ರದಲ್ಲಿ ರಿವೀಲ್ ಮಾಡಲಿದೆ.
“ಮಳೆಯಲಿ ಜೊತೆಯಲಿ” ಸಿನಿಮಾಗೆ ಜೊತೆಯಾಗಿದ್ದ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಜೋಡಿ ಈಗ ಹೊಸ ಚಿತ್ರ”ಬಾನದಾರಿಯಲ್ಲಿ” ಮೂಲಕ ಸಾಗಲಿದೆ.
ಇವರಿಬ್ಬರ ಕಾಂಬಿನೇಶನಲ್ಲಿ ಬರುತ್ತಿರುವ ಈ ಚಿತ್ರಕ್ಕೆ “ಬಾನದಾರಿಯಲ್ಲಿ” ಎಂದು ಹೆಸರಿಡಲಾಗಿದೆ. ಮೇನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಯುಗಾದಿ ಹಬ್ಬದ ಶುಭದಿನದಂದು ಪೋಸ್ಟರ್ ಬಿಡುಗಡೆಯಾಗಿದೆ.
ಪ್ರೀತಂಗುಬ್ಬಿ ನಿರ್ದೇಶನದಲ್ಲಿ ಗಣೇಶ್ ಈ ಹಿಂದೆ “ಮಳೆಯಲಿ ಜೊತೆಯಲಿ” , “ದಿಲ್ ರಂಗೀಲಾ” ಹಾಗೂ “99” ಚಿತ್ರಗಳಲ್ಲಿ ನಟಿಸಿದ್ದರು. ಇದು ಅವರ ಕಾಂಬಿನೇಷನ್ ನ ನಾಲ್ಕನೇ ಚಿತ್ರ. “ಬಾನದಾರಿಯಲ್ಲಿ” ಗೆ ನೋಡು ಎಂಥಾ ಚೆಂದ ಎಂಬ ಅಡಿಬರಹವಿದೆ.
ವಿ.ಹರಿಕೃಷ್ಣ ಸಂಗೀತ ನಿರ್ದೇಶನ, ಪ್ರೀತ ಜಯರಾಂ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.
ಪುನೀತ್ ರಾಜಕುಮಾರ್ ಅವರು ಹಾಡಿದ್ದ “ಬಾನದಾರಿಯಲ್ಲಿ” ಹಾಡು ಇಂದಿಗೂ, ಎಂದೆಂದಿಗೂ ಜನಪ್ರಿಯ.. ಆ ಹಾಡಿನ ಮೊದಲ ಪದವೇ ಈ ಚಿತ್ರದ ಶೀರ್ಷಿಕೆಯಾಗಿದ್ದು, ಆ ಹಾಡಿನಷ್ಟೇ ಈ ಚಿತ್ರ ಕೂಡ ಯಶಸ್ಸು ಕಾಣಲಿ ಅನ್ನೋದು ಹಾರೈಕೆ.
ಹೊಸಬಗೆಯ, ಹೊಸತನ ಸಿನಿಮಾಗಳನ್ನು ಮಾಡುವುದರಲ್ಲಿ ಹೊಸಬರಿಗೆ ಅವಕಾಶ ಕೊಡುವುದರಲ್ಲಿ ಪ್ರತಿಭಾನ್ವಿತ ನಟ ವಿಜಯ್ ರಾಘವೇಂದ್ರ ಸದಾ ಮುಂದು. ಸೀತಾರಾಮ್ ಬಿನೋಯ್ ಕೇಸ್ ನಂಬರ್ 18 ಸಿನಿಮಾ ಬಳಿಕ ಈಗ ವಿಜಯ್ ರಾಘವೇಂದ್ರ ಮತ್ತೊಮ್ಮೆ ಹೊಸಬರ ಜೊತೆ ಕೈ ಜೋಡಿಸಿದ್ದಾರೆ. ಅವರೀಗ ರಾಘು ಆಗಿ ಮಿಂಚಲಿದ್ದಾರೆ.
ಟೈಟಲ್ ಫಸ್ಟ್ ಲುಕ್ ರಿಲೀಸ್ ಆನ, ಬ್ಯಾಂಗ್ ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಆನಂದ್ ರಾಜ್ ರಾಘು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಈ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.
ರಾಘು ಥ್ರಿಲ್ಲರ್ ಎಕ್ಸ್ ಪಿರಿಮೆಂಟಲ್ ಸಿನಿಮಾವಾಗಿದ್ದು, ಕನ್ನಡದಲ್ಲಿ ಇದೊಂದು ಹೊಸತನದ ಸಿನಿಮಾ. ವಿಜಯ್ ರಾಘವೇಂದ್ರ ಹಿಂದೆಂದೂ ಮಾಡದ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ. ಡಿಕೆಎಸ್ ಸ್ಟುಡಿಯೋಸ್ ಮತ್ತು ಕೋಟ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ನಡಿ ರಣ್ವೀತ್ ಶಿವಕುಮಾರ್, ಅಭಿಷೇಕ್ ಕೋಟ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಬ್ಯಾಂಗ್’, ‘ಫ್ಯಾಮಿಲಿ ಪ್ಯಾಕ್’ ಖ್ಯಾತಿಯ ಉದಯ್ ಲೀಲಾ ಕ್ಯಾಮೆರಾ ವರ್ಕ್, ಸೂರಜ್ ಜೋಯಿಸ್ ಸಂಗೀತ ಸಂಯೋಜನೆ, ಅಥರ್ವ್ ಆರ್ಯ ಸಂಭಾಷಣೆ ಬರೆಯುತ್ತಿದ್ದಾರೆ. ಮೇ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯ ಟೈಟಲ್ ಹಾಗೂ ಫಸ್ಟ್ ಲುಕ್ ಬಿಟ್ಟು ಚಿತ್ರರಸಿಕರ ಕ್ಯೂರಿಯಾಸಿಟಿಯನ್ನು ರಾಘು ಚಿತ್ರತಂಡ ದುಪ್ಪಟ್ಟು ಮಾಡಿದೆ.
ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡುವ ವಿಶೇಷ ಟೀಸರ್ ಏಪ್ರಿಲ್ 2 ರಂದು ರಿಲೀಸ್ ಆಗುತ್ತಿದೆ… ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಅಷ್ಟೇ ಅಲ್ಲ, ಇಂಗ್ಲೀಷ್, ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಭಾಷೆಯಲ್ಲೂ ಡಬ್ ಆಗುತ್ತಿರುವುದು ವಿಶೇಷತೆಗಳಲ್ಲೊಂದು. ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬ ಸ್ಟಾರ್ ರಿಲೀಸ್ ಡೇಟ್ ಅನೌನ್ಸ್ ಮಾಡುವ ಟೀಸರ್ ಬಿಡುಗಡೆ ಮಾಡಲಿದ್ದಾರೆ…
ನಿರ್ದೇಶಕ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಶನ್ ನಲ್ಲಿ ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ 3ಡಿ ಆ್ಯಕ್ಷನ್ ಅಡ್ವೆಂಚರ್, ಮಿಸ್ಟ್ರಿ ಥ್ರಿಲ್ಲರ್ ಇದಾಗಿದ್ದು, ವಿಕ್ರಾಂತ್ ರೋಣ ಚಿತ್ರದ ಅಪ್ಡೇಟ್‍ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂದು ಸಿಹಿಯಾದ ಮಾಹಿತಿ ದೊರಕಲಿದೆ.
ಅನೂಪ್ ಭಂಡಾರಿ ಅವರು ವಿಕ್ರಾಂತ್ ರೋಣ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಅನೌನ್ಸಿಂಗ್ ದಿ ಅರೈವಲ್ ಆಫ್ ದಿ ಡೆವಿಲ್ ಎಂದಿರುವ ಅನೂಪ್, ವಿಕ್ರಾಂತ್ ರೋಣ ಸಿನಿಮಾದ ವಿಶೇಷ ಟೀಸರ್ ಏಪ್ರಿಲ್ 2ರಂದು ಬೆ.9:55ಕ್ಕೆ ರಿಲೀಸ್ ಆಗುತ್ತಿದೆ ಎಂದು ತಿಳಿಸಿದ್ದಾರೆ. ಚಿತ್ರದ ಅಪ್ಡೇಟ್‍ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಈಗ ಫುಲ್ ಖುಷ್ ಆಗಿದ್ದಾರೆ. ಇದನ್ನು ಕಿಚ್ಚ ಸಹ ಶೇರ್ ಮಾಡಿಕೊಂಡಿದ್ದಾರೆ. ಕಿಚ್ಚನನ್ನು ತೆರೆಮೇಲೆ ನೋಡಬೇಕೆಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತುಕೊಂಡಿದ್ದಾರೆ.
ವಿಕ್ರಾಂತ್ ರೋಣ ಕನ್ನಡ, ಹಿಂದಿ, ತೆಲುಗು ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೇ ಇಂಗ್ಲೀಷ್, ಅರೇಬಿಕ್, ಜರ್ಮನ್, ರಷಿಯನ್, ಮ್ಯಾಂಡರಿನ್ ಭಾಷೆಗೂ ಡಬ್ ಆಗುತ್ತಿದೆ. ಈ ಚಿತ್ರದಲ್ಲಿ ಕಿಚ್ಚನ ಸಾಹಸವನ್ನು 3ಡಿಯಲ್ಲಿ ನೋಡಬಹುದಾಗಿದೆ. ಝೀ ಸ್ಟುಡಿಯೋ ಅರ್ಪಿಸುತ್ತಿರುವ ಈ ಚಿತ್ರವನ್ನು ಶಾಲಿನಿ ಪ್ರೊಡಕ್ಷನ್ಸ್ ಮೂಲಕ ಜಾಕ್ ಮಂಜುನಾಥ್ ಅವರು ನಿರ್ಮಿಸುತ್ತಿದ್ದು, ಅಲಂಕಾರ್ ಪಾಂಡಿಯನ್ ಕೋ ಪ್ರೊಡ್ಯೂಸರ್ ಆಗಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ , ನಿರೂಪ್ ಭಂಡಾರಿ, ನೀತಾ ಅಶೋಕ್ ಸೇರಿದಂತೆ ಹಲವು ನಟರು ಚಿತ್ರದಲ್ಲಿ ನಟಿಸಿದ್ದಾರೆ.
ಏ.1ರಂದು ಬಿಡುಗಡೆ ಆಗಬೇಕಿದ್ದ ತ್ರಿಕೋನ ಚಿತ್ರ ಬಿಡುಗಡೆಯ ದಿನವನ್ನು ಮುಂದೂಡಿದೆ. ಹೌದು, ಏಪ್ರಿಲ್ 8ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಈ ಕುರಿತಂತೆ ನಿರ್ಮಾಪಕ ರಾಜಶೇಖರ್, ರಾಯಭಾರಿ ಸುಚೇಂದ್ರ ಪ್ರಸಾದ್ ಮತ್ತು ನಿರ್ದೇಶಕ ಚಂದ್ರಕಾಂತ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಪುನೀತ್ ರಾಜಕುಮಾರ್ ಅಭಿನಯದ “ಜೇಮ್ಸ್” ಚಿತ್ರವು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ವಿತರಕರ ಜತೆಗೆ ಮಾತನಾಡುವಾಗ, “ಜೇಮ್ಸ್’ ಚಿತ್ರವು ಎಲ್ಲೆಲ್ಲಿ ಪ್ರದರ್ಶನವಾಗುತ್ತಿದೆ, ಆ ಕೆಲವು ಚಿತ್ರಮಂದಿರಗಳನ್ನು ಕೊಡಿಸುವುದಾಗಿ ಹೇಳಿದರು. ನಾನು ಪುನೀತ್ ಅಭಿಮಾನಿಯಾಗಿ, ಅವರ ಚಿತ್ರ ಓಡುತ್ತಿರುವ ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ಪ್ರದರ್ಶನ ಮಾಡುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ. ಇದು ಮೊದಲ ಕಾರಣ. ನಾವು ಏಪ್ರಿಲ್ 1ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದಾಗ ಒಂದು ಚಿತ್ರ ಸಹ ಘೋಷಣೆಯಾಗಿರಲಿಲ್ಲ. ಒಂದು ಅಥವಾ ಎರಡು ಸಿನಿಮಾಗಳು ಬಿಡುಗಡೆ ಆಗಬಹುದು ಎಂದು ಊಹಿಸಿದ್ದೆವು. ಅದರಂತೆ ಪ್ರಚಾರ ಶುರು ಮಾಡಿದ್ದೆವು.
ಆದರೆ, ಒಂದೊಂದೇ ಸಿನಿಮಾಗಳು ಘೋಷಣೆಯಾದವು. ಆರರಿಂದ ಏಳು ಸಿನಿಮಾಗಳು ಅಂದು ಬಿಡುಗಡೆಯಾಗಲಿವೆ. ನಾವು ಕನ್ನಡ ಸಿನಿಮಾದವರೇ ಚಿತ್ರಮಂದಿರಗಳಿಗಾಗಿ ಪರಸ್ಪರ ಕಿತ್ತಾಡುವ ಪರಿಸ್ಥಿತಿ ಇದೆ. ನಾವು ಮುಂಚೆಯೇ ಘೋಷಣೆ ಮಾಡಿದ್ದೇವೆ, ನೀವು ತಡವಾಗಿ ಬಿಡುಗಡೆ ಮಾಡಿ ಎಂದು ಹೇಳುವುದು ಎಷ್ಟು ಸೂಕ್ತ? ಎಂದು ಪ್ರಶ್ನೆ ಹಾಕಿಕೊಂಡಾಗ, ನಾವೇ ಮುಂದಕ್ಕೆ ಹೋಗೋಣ ಎಂದು ಚರ್ಚಿಸಿ, ಏಪ್ರಿಲ್ 8ಕ್ಕೆ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮೂರನೇ ಕಾರಣ ಎಂದರೆ, ಈ ಚಿತ್ರದ ಮೂಲಕ ನಾವು ತಾಳ್ಮೆಯ ಬಗ್ಗೆ ಹೇಳುವುದಕ್ಕೆ ಹೊರಟಿದ್ದೇವೆ. ಈಗಾಗಲೇ ಟೀಸರ್ ಮತ್ತು ಟ್ರೇಲರ್ನಲ್ಲಿ ಅಹಂ, ಶಕ್ತಿ ಮತ್ತು ತಾಳ್ಮೆಯ ನಡುವೆ ಯಾರಿಗೆ ಜಯ ಸಿಗುತ್ತದೆ ಎಂದು ಹೇಳ ಹೊರಟಿದ್ದೇವೆ. ನಾವು ಪ್ರಚಾರ ಮಾಡಿದ್ದೀವಿ, ಇನ್ನೂ ಮಾಡುತ್ತೇವೆ ಎನ್ನುವ ಶಕ್ತಿ ಪ್ರದರ್ಶನವಾಗಲಿ ಅಥವಾ ಚಿತ್ರ ಚೆನ್ನಾಗಿ ಬಂದಿದ್ದು ನೋಡಿದವರು ಒಪ್ಪಿಕೊಳ್ಳುತ್ತಾರೆ ಎಂಬ ಅಹಂಕಾರವಾಗಲಿ ಇಲ್ಲ. ನಾವು ತಾಳ್ಮೆಯಿಂದ ಒಂದು ವಾರ ಮುಂದಕ್ಕೆ ಹೋದರೂ ಪರವಾಗಿಲ್ಲ ಎಂದು ಏಪ್ರಿಲ್ 8 ರಂದು ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿರ್ಮಾಪಕ ಹಾಗೂ ಕಥೆಗಾರ ರಾಜಶೇಖರ್ ಹೇಳಿದರು.
ಚಿತ್ರದ ರಾಯಭಾರಿ ಸುಚೇಂದ್ರ ಪ್ರಸಾದ್, ನಿರ್ಮಾಪಕರ ಕಷ್ಟ ಅರ್ಥ ಮಾಡಿಕೊಂಡಿರುವವರು ನೀವು. ಆಗು ಹೋಗುಗಳ ಜತೆಗೆ ನಿರ್ಮಾಪಕರ ಚಡಪಡಿಕೆ ನಿಮಗೆ ಗೊತ್ತಿರುತ್ತದೆ. ತ್ರಿಕೋನದ ಗುರಿ ಹೆಚ್ಚಿನ ಜನರಿಗೆ ಹೇಗೆ ತಲುಪುವುದು ಎಂಬ ಕಡೆ ಇದೆ. ಈ ಚಿತ್ರವನ್ನು ಸಿದ್ಧಸೂತ್ರಗಳ ಜಾಡಿನಿಂದ ಹೊರತಪ್ಪಿಸಿ ಮಾಡಿದ್ದಾರೆ. ಸಿನಿಮಾ ಹೆಸರಿನಲ್ಲಿ ಇನ್ನೂ ಏನೇನೋ ಮಾಡುವುದಕ್ಕೆ ಸಾಧ್ಯವಿದೆ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ.
ತ್ರಿಕೋನವನ್ನು ಹಲವರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೀರಿ. ಎಂಟರಂದು ಅದು ಇನ್ನಷ್ಟು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೈಜೋಡಿಸಿ. ಮಿಕ್ಕಂತೆ ಈ ಚಿತ್ರ ಚರ್ವಿತಚರ್ವಣವಾಗಿರದೆ, ಅಭಿರುಚಿಯನ್ನು ಬಿತ್ತುವ ಕೆಲಸ ಮಾಡಲಿ ಎಂಬುದು ನನ್ನ ಹಾರೈಕೆ ಎಂದರು. ನಿರ್ದೇಶಕ ಚಂದ್ರಕಾಂತ್ ಸಹ ತಮ್ಮ ಸಿನಮಾ ಬಿಡುಗಡೆ ಮುಂದಕ್ಕೆ ಹೋಗಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದರು.
ಅಮ್ಮ ಟಾಕೀಸ್ ಬ್ಯಾನರಿನಡಿ ಇತ್ತೀಚೆಗೆ ಸುದ್ದಿಯಲ್ಲಿದ್ದ, ಹಾಸ್ಯ ನಟ ಬಿರಾದಾರ್ ಅಭಿನಯದ “90 ಹೊಡಿ ಮನೀಗ್ ನಡಿ” ಚಿತ್ರ ಸೆನ್ಸಾರ್ ಮೆಟ್ಟಿಲೇರಿದ್ದು, ಟೈಟಲ್ ಗೆ ಸಂಬಂಧಿಸಿದಂತೆ ತಗಾದೆ ಎದ್ದಿದೆ. ಅಸಲಿಗೆ, “90 ಹೊಡಿ ಮನೀಗ್ ನಡಿ” ಎಂದರೆ, ಜನರನ್ನು ನೇರವಾಗಿ ಕುಡಿತಕ್ಕೆ ಪ್ರಚೋದಿಸಿದಂತಾಗುತ್ತದೆ” ಎಂಬುದು ಮಂಡಳಿಯವರ ವಾದವಂತೆ. ಹಾಗಾಗಿ ಚಿತ್ರದ ಶೀರ್ಷಿಕೆ ಬದಲಾಯಿಸಲು ಸೂಚನೆ ನೀಡಿದೆ. ಈ ಬದಲಾವಣೆಗೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ಸಿನಿ ತಂಡ, ತಮ್ಮ ಶೀರ್ಷಿಕೆಯನ್ನ ” 90 ಬಿಡಿ ಮನೀಗ್ ನಡಿ” ಎಂದು ಬದಲಾಯಿಸಿಕೊಂಡಿದೆ. ‘ಹೊಡಿ’ ಬದಲು ‘ಬಿಡಿ’ ಎಂದಾಗಿದೆ ಅಷ್ಟೆ.
ಏನೇ ಆದರೂ ’90’ಯೇ ಸಿನಿಮಾದ ಹೈಲೈಟ್ ಆಗಿದ್ದರಿಂದ, ಅಷ್ಟೇನು ಬೇಜಾರಿಲ್ಲ ಎನ್ನುವ ನಿರ್ಮಾಪಕಿ ರತ್ನಮಾಲಾ ಬಾದರದಿನ್ನಿ, ನಮಗೆ ಟೈಟಲ್ ಬದಲಾಯಿಸಲು ಸೂಚಿಸಿದ ಮಂಡಳಿಯವರು, ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ನಮ್ಮ ಹೆಗ್ಗಳಿಕೆ ಎನ್ನುತ್ತಾರೆ. ಕಾಮಿಡಿ, ಕ್ರೈಮ್ ಥ್ರಿಲ್ಲರ್ ಕಥೆ ಆಧರಿಸಿದ ಈ ಚಿತ್ರಕ್ಕೆ, ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡಿದ್ದು, ಇನ್ನಷ್ಟೆ ಚಿತ್ರದ ಪ್ರಚಾರ ಶುರುವಿಟ್ಟು, ಮೇ ತಿಂಗಳ ಹೊತ್ತಿಗೆ ಚಿತ್ರವನ್ನು ಅದ್ಧೂರಿಯಾಗಿ ತೆರೆ ಕಾಣಿಸುವ ಯೋಜನೆ ಹಾಕಿಕೊಂಡಿದ್ದೇವೆ ಎನ್ನುತ್ತಾರೆ.
ಉಳಿದಂತೆ ಡಾ. ನಾಗೇಂದ್ರ ಪ್ರಸಾದ್ ಮತ್ತು ಶಿವು ಬೇರಗಿಯವರ ಸಾಹಿತ್ಯಕ್ಕೆ ಕಿರಣ್ ಶಂಕರ್ ಸಂಗೀತ ನೀಡಿದ್ದು, ವೀರ್ ಸಮರ್ಥ್ ಹಿನ್ನೆಲೆ ಸಂಗೀತದಲ್ಲಿ ಸಾಥ್ ನೀಡಿದ್ದಾರೆ. ಕೃಷ್ಣ ನಾಯ್ಕರ್ ಛಾಯಾಗ್ರಹಣ, ಯುಡಿವಿ ವೆಂಕಟೇಶ್ ಸಂಕಲನ, ರಾಕಿ ರಮೇಶ್ ಸಾಹಸ, ಚುಟು- ಚುಟು ಖ್ಯಾತಿಯ ಭೂಷಣ್ ಕೊರಿಯೋಗ್ರಫಿ ಈ ಚಿತ್ರಕ್ಕಿದ್ದು, ತಾರಾಗಣದಲ್ಲಿ ಬಿರಾದಾರ್ ಜೊತೆ ನೀತಾ ಮೈಂದರ್ಗಿ, ಪ್ರೀತು ಪೂಜಾ, ಹಿರಿಯ ನಟ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ದಿ, ಅಭಯ್ ವೀರ್, ಆರ್ ಡಿ ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ, ಮುರುಳಿ ಹೊಸಕೋಟೆ, ರಾಜೇಂದ್ರ ಗುಗ್ವಾಡ, ರವಿದೀಪ್, ಸಂತು ಸೊಕನಾದಗಿ, ಎಲ್ಐಸಿ ಲೋಕೇಶ್ ಇದ್ದಾರೆ.
ವಿಶೇಷವಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ವೈಜನಾಥ ಬಿರಾದಾರ್ ಅವರ ಅಭಿನಯದ ಐನೂರನೇ ಚಿತ್ರ ಆಗಿರುವ ಕಾರಣಕ್ಕೆ ಈ ಸಿನಿಮಾ ಸಣ್ಣದಾಗಿ ಸದ್ದು ಮಾಡತೊಡಗಿದೆ. ಚಿತ್ರದ ಬಹುಭಾಗ ಉತ್ತರ ಕರ್ನಾಟದ ಭಾಗಗಳಲ್ಲೇ ಹೆಚ್ಚಾಗಿ ಚಿತ್ರೀಕರಣಗೊಂಡು, ಆ ಭಾಷಾ ಶೈಲಿಯಲ್ಲೇ ಚಿತ್ರ ಮೂಡಿ ಬಂದಿದ್ದು, ಅಲ್ಲಿಯ ದೇಸೀ ಸೊಗಡನ್ನೇ ಹೊತ್ತು ತಂದಿದ್ದರಿಂದ, ಸಹಜವಾಗಿಯೇ ಆ ಭಾಗದ ಜನರ ನಿರೀಕ್ಷೆ ತುಸು ಹೆಚ್ಚಾಗಿದೆ.
“ಒಂದೊಳ್ಳೆ ಪ್ರಯತ್ನವಂತೂ ಪಟ್ಟಿದ್ದೇವೆ, ಮಿಕ್ಕಿದ್ದು ಪ್ರೇಕ್ಷಕರಿಗೆ ಬಿಟ್ಟದ್ದು ಎನ್ನುವ ಚಿತ್ರತಂಡ, ಅಂದುಕೊಂಡಂತೆಯೇ ಎಲ್ಲವೂ ಆಗಿಬಿಟ್ಟರೆ, ಮೇ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂಬುದು ಚಿತ್ರತಂಡದ ಮಾತು.
ಈ ಸಮಾಜಕ್ಕೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ನೀಡಿದ ಕೊಡುಗೆ ಅಪಾರ. ಅಸಂಖ್ಯಾತ ಮಕ್ಕಳಿಗೆ ಅವರು ಅಕ್ಷರ, ಆಶ್ರಯ, ಅನ್ನ ನೀಡಿ ಜೀವನದ ದಾರಿ ತೋರಿಸಿದ್ದಾರೆ. ಎಂದೆಂದಿಗೂ ಅವರೊಂದು ಸ್ಫೂರ್ತಿಯ ಶಿಖರ. ಅವರ ಜೀವನದ ವಿವರಗಳನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಒಂದು ಮಹಾನ್ ಕಾರ್ಯ ನೆರವೇರಿಸಲು ಈಗ ಯೋಜನೆ ಸಿದ್ಧವಾಗಿದೆ. ಅದಕ್ಕೆ ‘ನಾದಬ್ರಹ್ಮ’ ಹಂಸಲೇಖ ಅವರು ಸಾರಥ್ಯ ವಹಿಸಿದ್ದಾರೆ. ಸಿದ್ದಗಂಗಾ ಶ್ರೀಗಳ ಕುರಿತು 52 ಎಪಿಸೋಡ್‌ಗಳ ಮಿನಿ ಸಿನಿ ಸೀರಿಸ್ ನಿರ್ಮಾಣ ಮಾಡಲಾಗುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಯತ್ನ ಆಗುತ್ತಿರುವುದು ಇದೇ ಮೊದಲು. ಸಿದ್ದಗಂಗಾ ಶ್ರೀಗಳು ಮತ್ತು ಬಸವಣ್ಣನವರ ಕುರಿತು ನಿರ್ಮಾಣ ಆಗಲಿರುವ ಈ ಮಿನಿ ಸಿನಿ ಸೀರಿಸ್ ಗೆ ‘ನಡೆದಾಡೋ ದೇವರ ಬಸವ ಭಾರತ’ ಎಂದು ಶೀರ್ಷಿಕೆ ಇಡಲಾಗಿದೆ. ಇದನ್ನು ರುದ್ರೇಶ್ ಅವರು ‘ರುದ್ರ ಕಿರುಚಿತ್ರ’ ಸಂಸ್ಥೆ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಐದನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಏ.1ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಜರುಗುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವದಂದು ‘ನಡೆದಾಡೋ ದೇವರ ಬಸವ ಭಾರತ’ ಮಿನಿ ಸಿನಿ ಸೀರಿಸ್ ಉದ್ಘಾಟನೆ ಆಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದನ್ನು ಉದ್ಘಾಟನೆ ಮಾಡಲಿರುವುದು ವಿಶೇಷ.
ಈ ಕುರಿತು ಮಾಹಿತಿ ನೀಡಲು ಸಂಗೀತ ನಿರ್ದೇಶಕ ಹಂಸಲೇಖ, ಶಾಸಕ ರೇಣುಕಾಚಾರ್ಯ, ‘ರುದ್ರ ಕಿರುಚಿತ್ರ’ ಸಂಸ್ಥೆಯ ರುದ್ರೇಶ್, ವಚನ ಕಾವ್ಯದಲ್ಲಿ ಪಿಎಚ್‌ಡಿ ಪಡೆದಿರುವ ಮಾಜಿ ಐಎಎಸ್ ಅಧಿಕಾರಿ ಸೋಮಶೇಖರ್ ಮುಂತಾದವರು ಭಾಗವಹಿಸಿದ್ದರು. ಈ ಮಿನಿ ಸಿನಿ ಸೀರಿಸ್ 7 ಭಾಷೆಗಳಲ್ಲಿ ಮೂಡಿಬರಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ನಿರ್ಮಾಣ ಆಗಲಿದೆ. ಅದಕ್ಕಾಗಿ 7 ತಂಡಗಳಲ್ಲಿ ಸುಮಾರು 300ಕ್ಕೂ ಅಧಿಕ ತಂತ್ರಜ್ಞರು ಕೆಲಸ ಮಾಡಲಿದ್ದಾರೆ.
‘ರುದ್ರೇಶ್ ಅವರು ನನಗೆ ಇತ್ತೀಚೆಗೆ ಪರಿಚಯ ಆದವರು. ಶಿವಕುಮಾರ ಸ್ವಾಮಿಗಳ ಕುರಿತಾಗಿ ಧಾರಾವಾಹಿ ಮಾಡಬೇಕು, ಅದಕ್ಕೆ ಸಹಾಯ ಮಾಡಿ ಅಂತ ಕೇಳಿಕೊಂಡರು. ಧಾರಾವಾಹಿ ಆದರೆ ನಾನು ಯಾಕೆ? ಅದಕ್ಕೆ ಬೇಕಾದಷ್ಟು ಜನರು ಇದ್ದಾರೆ ಅಂತ ಹೇಳಿದೆ. ನಂತರ ಅದರ ಬಗ್ಗೆ ಆಲೋಚನೆ ಮಾಡಿದೆ. ಧಾರಾವಾಹಿ ಬದಲು ಮಿನಿ ಸಿನಿ ಸೀರಿಸ್ ಮಾಡಲು ನಿರ್ಧರಿಸಿದೆವು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹಂಸಲೇಖ ಹೇಳಿದ್ದಾರೆ.
ಶಿವಕುಮಾರ ಸ್ವಾಮೀಜಿ ಅವರ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದರೆ ಸೂಕ್ತ ಎಂಬುದು ತಂಡದ ಆಶಯ. ಹಾಗಾಗಿ ಅವರಿಗೆ ಈಗಾಗಲೇ ಕಥೆಯನ್ನು ಹೇಳಲಾಗಿದೆ. ಸದ್ಯ ಅಮಿತಾಭ್ ಅವರ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಆಗಿದ್ದು, ಅವರು ಚೇತರಿಸಿಕೊಂಡ ನಂತರ ಅಂತಿಮ ನಿರ್ಧಾರ ಗೊತ್ತಾಗಲಿದೆ.
ರಾಷ್ಟ್ರಕವಿ ಕುವೆಂಪು ರಚನೆಯ ‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಈ ನಮ್ಮ ನಾಡಗೀತೆ ಎಲ್ಲರ ಬಾಯಲ್ಲೂ ಗುನುಗುತ್ತದೆ. ಈಗ ಈ ಗೀತೆಗೆ ಹೊಸ ರೂಪ ನೀಡುವ ಪ್ರಯತ್ನವಾಗಿದೆ. ಈ ನಾಡ ಗೀತೆಗೆ ಈಗ ಹಲವು ಗಾಯಕರು ತಮ್ಮದೇ ಆದ ಶೈಲಿಯಲ್ಲಿ ಹಾಡಿದ್ದಾರೆ.
ಆರಂಭದಿಂದಲೂ ಕನ್ನಡ ನಾಡು ನುಡಿ ಬಗ್ಗೆ ಅಪಾರ ಗೌರವ, ಅಭಿಮಾನ ಇಟ್ಟುಕೊಂಡಿರುವ ನಟ, ನಿರ್ಮಾಪಕ, ಉದ್ಯಮಿ ಹಾಗೂ ಗೋಪ್ರೇಮಿ ಮಹೇಂದ್ರ ಮುನ್ನೋತ್ ರವರು ನಮ್ಮ ನಾಡಗೀತೆಗೆ ಹೊಸರಾಗದ ಜೊತೆಗೆ ಹೊಸ ದೃಶ್ಯರೂಪ ನೀಡಿದ್ದಾರೆ.
ಬಿ.ಪಿ.ಹರಿಹರನ್ ಈ ಹಾಡಿನ ನಿರ್ದೇಶನ ಮಾಡಿದ್ದು, ವಿಜಯಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಪವನ್ ನೃತ್ಯ ನಿರ್ದೇಶನ ಹಾಗೂ ಕಲಾ ನಿರ್ದೇಶನ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಹೇಂದ್ರ ಮುನ್ನೋತ್, ಇತ್ತೀಚೆಗೆ ನಮ್ಮ ನಾಡಗೀತೆಯನ್ನು ಮೊಟಕುಗೊಳಿಸಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿತು. ಕುವೆಂಪು ಅವರಂತಹ ಮಹಾನ್ ಕವಿ ರಚಿಸಿದ ಸಾಹಿತ್ಯವನ್ನು ಕಡಿತ ಮಾಡಿರುವುದು ಸರಿಯಲ್ಲ. ಹಾಗಾಗಿ ಈ ಗೀತೆಗೆ ಹೊಸರಾಗ ಜೋಡಿಸಿ ಚಿತ್ರೀಕರಣ ಮಾಡಿದ್ದೇವೆ. ನಾನು ರಾಜಸ್ಥಾನದಲ್ಲಿ ಜನಿಸಿದವನಾದರೂ ಕನ್ನಡವೇ ನನ್ನ ಉಸಿರು, ಈ ನೆಲ ನನಗೆ ಎಲ್ಲವನ್ನೂ ಕೊಟ್ಟಿದೆ. ಈ ಹಾಡನ್ನು ಎಲ್ಲರೂ ವೀಕ್ಷಿಸಿ ಕನ್ನಡವನ್ನು ಬೆಳೆಸಿ ಎಂದರು.
ಸಂಗೀತ ನಿರ್ದೇಶಕ ವಿಜಯಕೃಷ್ಣ ಮಾತನಾಡಿ, ಇದನ್ನು ಎಸ್ ಪಿ ಬಿ ಅವರು ಹಾಡಬೇಕಿತ್ತು. ಹಾಡುಕೇಳಿ ಒಪ್ಪಿದ್ದರು. ಹೊಸ ಟ್ಯೂನ್ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆಯಿದೆ ಎಂದರು. ನಿರ್ದೇಶಕ ಹರಿಹರನ್ ಮಾತನಾಡಿ, ಈ ಗೀತೆಯನ್ನು ಕೊಡಚಾದ್ರಿಯಲ್ಲಿ ಚಿತ್ರೀಕರಿಸಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ ಚಿಕ್ಕಮಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಿಸಿದ್ದೇವೆ.
ನಮ್ಮ ಈ ಗೀತೆಯನ್ನು ಎರಡು ಶೈಲಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದರು. ಒಟ್ಟಿನಲ್ಲಿ ನಾಡಪ್ರೇಮಿಗಳಿಗೆ ಮಹಾನ್ ಕವಿ ಕುವೆಂಪು ರವರು ರಚಿಸಿರುವ ನಾಡಗೀತೆ ಮತ್ತೊಂದು ಶೈಲಿಯಲ್ಲಿ ನೋಡಲು ಆಸ್ವಾದಿಸಲು ಲಭ್ಯವಾಗಿದೆ.
ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಟ ವಿಜಯ್ ದೇವರಕೊಂಡ ಕಾಂಬೋದಲ್ಲಿ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಲೈಗರ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ವಿಜಯ್ ಹಾಗೂ ಪುರಿ ಜಗನ್ನಾಥ್ ಜೋಡಿ ಜೆಜಿಎಂ ಎಂಬ ಆಕ್ಷನ್ ಡ್ರಾಮಾ ಸಿನಿಮಾ ಉಣಬಡಿಸಲು ತಯಾರಾಗುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಮಂಗಳವಾರ ಮುಂಬೈನಲ್ಲಿ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಜನಗಣಮನ ಸಿನಿಮಾಗೆ ಮುನ್ನುಡಿ ಬರೆಯಲಾಯಿತು.
ಜೆಜಿಎಂ ಸಿನಿಮಾಗೆ ಪುರಿ ಜಗನ್ನಾಥ್ ಚಿತ್ರಕಥೆ, ಡೈಲಾಗ್ ಬರೆದು ಆಕ್ಷನ್ ಕಟ್ ಹೇಳಲಿದ್ದು, ಪುರಿ ಕನೆಕ್ಟ್ ಹಾಗೂ ಶ್ರೀಕರ ಸ್ಟುಡಿಯೋ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ವಂಶಿ ಪಡಿಪೆಲ್ಲಿ ಬಂಡವಾಳ ಹೂಡುತ್ತಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ.
ನಮ್ಮ ಮುಂದಿನ ಸಿನಿಮಾ ಜೆಜಿಎಂ ಬಗ್ಗೆ ಮಾಹಿತಿ ಹಂಚಿಕೊಂಡಿರುವುದು ಖುಷಿಯಾಗುತ್ತಿದೆ. ವಿಜಯ್ ಜೊತೆ ಮತ್ತೆ ಕೈ ಜೋಡಿಸಿದ್ದೇನೆ. ಇದು ಪಕ್ಕಾ ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ಮಾಹಿತಿ ಹಂಚಿಕೊಂಡರು.
ವಿಜಯ್ ದೇವರಕೊಂಡ, ಪುರಿ ಪ್ರಾಜೆಕ್ಟ್ ಭಾಗವಾಗಿರೋದು ಖುಷಿಯಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಈ ಕಥೆ ಮನ ಮುಟ್ಟುತ್ತದೆ. ಇದು ಸವಾಲಿನ ಕಥೆಯಾಗಿದ್ದು, ಚಾರ್ಮಿ ಹಾಗೂ ಇಡೀ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದರು.
ವಂಶಿ ಪಡಿಪೆಲ್ಲಿ, ಜೆಜಿಎಂ ಅದ್ಭುತ ಕಥೆಯಾಗಿದ್ದು, ಇದು ಭಾರತೀಯರ ಮನ ತಟ್ಟುತ್ತದೆ. ವಿಜಯ್, ಪುರಿ, ಚಾರ್ಮಿ ಜೊತೆ ಪ್ರಾಜೆಕ್ಟ್ ಕೆಲಸ ಮಾಡುತ್ತಿರುವುದು ಖುಷಿಕೊಟ್ಟಿದೆ ಎಂದರು.
ವಿದೇಶದ ನಾನಾ ಭಾಗಳಲ್ಲಿ ಶೂಟಿಂಗ್ ನಡೆಸಲು ಪ್ಲ್ಯಾನ್ ಹಾಕಿದ್ದು, ಏಪ್ರಿಲ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಆಕ್ಷನ್ ಎಂಟರ್ ಟೈನರ್ ಕಥಾನಕ ಹೊಂದಿರುವ ಜೆಜಿಎಂ ಸಿನಿಮಾ ಆಗಸ್ಟ್ 3, 2023 ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.