ತ್ರಿಕೋನ ಸಿನಿಮಾ ರಿಲೀಸ್‌ ಡೇಟ್‌ ಬದಲು; ಏಪ್ರಿಲ್‌ 1ರ ಬದಲಾಗಿ 8ಕ್ಕೆ ಬಿಡುಗಡೆ

ಏ.1ರಂದು ಬಿಡುಗಡೆ ಆಗಬೇಕಿದ್ದ ತ್ರಿಕೋನ ಚಿತ್ರ ಬಿಡುಗಡೆಯ ದಿನವನ್ನು ಮುಂದೂಡಿದೆ. ಹೌದು, ಏಪ್ರಿಲ್ 8ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ. ಈ ಕುರಿತಂತೆ ನಿರ್ಮಾಪಕ ರಾಜಶೇಖರ್​, ರಾಯಭಾರಿ ಸುಚೇಂದ್ರ ಪ್ರಸಾದ್​ ಮತ್ತು ನಿರ್ದೇಶಕ ಚಂದ್ರಕಾಂತ್​ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಪುನೀತ್​ ರಾಜಕುಮಾರ್​ ಅಭಿನಯದ “ಜೇಮ್ಸ್​” ಚಿತ್ರವು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ವಿತರಕರ ಜತೆಗೆ ಮಾತನಾಡುವಾಗ, “ಜೇಮ್ಸ್​’ ಚಿತ್ರವು ಎಲ್ಲೆಲ್ಲಿ ಪ್ರದರ್ಶನವಾಗುತ್ತಿದೆ, ಆ ಕೆಲವು ಚಿತ್ರಮಂದಿರಗಳನ್ನು ಕೊಡಿಸುವುದಾಗಿ ಹೇಳಿದರು. ನಾನು ಪುನೀತ್​ ಅಭಿಮಾನಿಯಾಗಿ, ಅವರ ಚಿತ್ರ ಓಡುತ್ತಿರುವ ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ಪ್ರದರ್ಶನ ಮಾಡುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ. ಇದು ಮೊದಲ ಕಾರಣ. ನಾವು ಏಪ್ರಿಲ್​ 1ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದಾಗ ಒಂದು ಚಿತ್ರ ಸಹ ಘೋಷಣೆಯಾಗಿರಲಿಲ್ಲ. ಒಂದು ಅಥವಾ ಎರಡು ಸಿನಿಮಾಗಳು ಬಿಡುಗಡೆ ಆಗಬಹುದು ಎಂದು ಊಹಿಸಿದ್ದೆವು. ಅದರಂತೆ ಪ್ರಚಾರ ಶುರು ಮಾಡಿದ್ದೆವು.

ಆದರೆ, ಒಂದೊಂದೇ ಸಿನಿಮಾಗಳು ಘೋಷಣೆಯಾದವು. ಆರರಿಂದ ಏಳು ಸಿನಿಮಾಗಳು ಅಂದು ಬಿಡುಗಡೆಯಾಗಲಿವೆ. ನಾವು ಕನ್ನಡ ಸಿನಿಮಾದವರೇ ಚಿತ್ರಮಂದಿರಗಳಿಗಾಗಿ ಪರಸ್ಪರ ಕಿತ್ತಾಡುವ ಪರಿಸ್ಥಿತಿ ಇದೆ. ನಾವು ಮುಂಚೆಯೇ ಘೋಷಣೆ ಮಾಡಿದ್ದೇವೆ, ನೀವು ತಡವಾಗಿ ಬಿಡುಗಡೆ ಮಾಡಿ ಎಂದು ಹೇಳುವುದು ಎಷ್ಟು ಸೂಕ್ತ? ಎಂದು ಪ್ರಶ್ನೆ ಹಾಕಿಕೊಂಡಾಗ, ನಾವೇ ಮುಂದಕ್ಕೆ ಹೋಗೋಣ ಎಂದು ಚರ್ಚಿಸಿ, ಏಪ್ರಿಲ್​ 8ಕ್ಕೆ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮೂರನೇ ಕಾರಣ ಎಂದರೆ, ಈ ಚಿತ್ರದ ಮೂಲಕ ನಾವು ತಾಳ್ಮೆಯ ಬಗ್ಗೆ ಹೇಳುವುದಕ್ಕೆ ಹೊರಟಿದ್ದೇವೆ. ಈಗಾಗಲೇ ಟೀಸರ್​ ಮತ್ತು ಟ್ರೇಲರ್​ನಲ್ಲಿ ಅಹಂ, ಶಕ್ತಿ ಮತ್ತು ತಾಳ್ಮೆಯ ನಡುವೆ ಯಾರಿಗೆ ಜಯ ಸಿಗುತ್ತದೆ ಎಂದು ಹೇಳ ಹೊರಟಿದ್ದೇವೆ. ನಾವು ಪ್ರಚಾರ ಮಾಡಿದ್ದೀವಿ, ಇನ್ನೂ ಮಾಡುತ್ತೇವೆ ಎನ್ನುವ ಶಕ್ತಿ ಪ್ರದರ್ಶನವಾಗಲಿ ಅಥವಾ ಚಿತ್ರ ಚೆನ್ನಾಗಿ ಬಂದಿದ್ದು ನೋಡಿದವರು ಒಪ್ಪಿಕೊಳ್ಳುತ್ತಾರೆ ಎಂಬ ಅಹಂಕಾರವಾಗಲಿ ಇಲ್ಲ. ನಾವು ತಾಳ್ಮೆಯಿಂದ ಒಂದು ವಾರ ಮುಂದಕ್ಕೆ ಹೋದರೂ ಪರವಾಗಿಲ್ಲ ಎಂದು ಏಪ್ರಿಲ್ 8 ರಂದು ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿರ್ಮಾಪಕ ಹಾಗೂ ಕಥೆಗಾರ ರಾಜಶೇಖರ್ ಹೇಳಿದರು.

ಚಿತ್ರದ ರಾಯಭಾರಿ ಸುಚೇಂದ್ರ ಪ್ರಸಾದ್​, ನಿರ್ಮಾಪಕರ ಕಷ್ಟ ಅರ್ಥ ಮಾಡಿಕೊಂಡಿರುವವರು ನೀವು. ಆಗು ಹೋಗುಗಳ ಜತೆಗೆ ನಿರ್ಮಾಪಕರ ಚಡಪಡಿಕೆ ನಿಮಗೆ ಗೊತ್ತಿರುತ್ತದೆ. ತ್ರಿಕೋನದ ಗುರಿ ಹೆಚ್ಚಿನ ಜನರಿಗೆ ಹೇಗೆ ತಲುಪುವುದು ಎಂಬ ಕಡೆ ಇದೆ. ಈ ಚಿತ್ರವನ್ನು ಸಿದ್ಧಸೂತ್ರಗಳ ಜಾಡಿನಿಂದ ಹೊರತಪ್ಪಿಸಿ ಮಾಡಿದ್ದಾರೆ. ಸಿನಿಮಾ ಹೆಸರಿನಲ್ಲಿ ಇನ್ನೂ ಏನೇನೋ ಮಾಡುವುದಕ್ಕೆ ಸಾಧ್ಯವಿದೆ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ.

ತ್ರಿಕೋನವನ್ನು ಹಲವರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೀರಿ. ಎಂಟರಂದು ಅದು ಇನ್ನಷ್ಟು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೈಜೋಡಿಸಿ. ಮಿಕ್ಕಂತೆ ಈ ಚಿತ್ರ ಚರ್ವಿತಚರ್ವಣವಾಗಿರದೆ, ಅಭಿರುಚಿಯನ್ನು ಬಿತ್ತುವ ಕೆಲಸ ಮಾಡಲಿ ಎಂಬುದು ನನ್ನ ಹಾರೈಕೆ ಎಂದರು. ನಿರ್ದೇಶಕ ಚಂದ್ರಕಾಂತ್ ಸಹ ತಮ್ಮ ಸಿನಮಾ ಬಿಡುಗಡೆ ಮುಂದಕ್ಕೆ ಹೋಗಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದರು.

Related Posts

error: Content is protected !!