ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ನಾಯಕರಾಗಿ ನಟಿಸಿರುವ “ಪ್ರಾರಂಭ” ಚಿತ್ರ ಮೇ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಆಹ್ವಾನಿಸುವ ವಿಶೇಷ ಆಹ್ವಾನ ಪತ್ರಿಕೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮದುವೆಯ ಆಮಂತ್ರಣ ಪತ್ರಿಕೆ ಶೈಲಿಯಲ್ಲಿ ಇದು ತಯಾರಾಗಿದೆ. ಈ ಆಹ್ವಾನ ಪತ್ರಿಕೆ ನೋಡಿ ಮನುರಂಜನ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಮನುರಂಜನ್ ಅವರಿಗೆ ನಾಯಕಿಯಾಗಿ ಕೀರ್ತಿ ಕಲ್ಕೇರಿ ಅಭಿನಯಿಸಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಯನ್ನು ಮನು ಕಲ್ಯಾಡಿ ಅವರೆ ಬರೆದಿದ್ದಾರೆ.
ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಗದೀಶ್ ಕಲ್ಯಾಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿ ವಡ್ಡೇರಹಳ್ಳಿ ಈ ಚಿತ್ರದ ಸಹ ನಿರ್ಮಾಪಕರು.
ಪ್ರಜ್ವಲ್ ಪೈ ಸಂಗೀತ ನಿರ್ದೇಶನ, ಸುರೇಶ್ ಬಾಬು ಛಾಯಾಗ್ರಹಣ, ವಿಜಯ್ ಸಂಕಲನ ಹಾಗೂ ಥ್ರಿಲ್ಲರ್ ಮಂಜು, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಖ್ಯಾತ ನಿರ್ದೇಶಕ, ನಟ ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ಹೆಸರಾಂತ ನಟ ಆದಿತ್ಯ ನಾಯಕರಾಗಿ ನಟಿಸುತ್ತಿರುವ ಚಿತ್ರಕ್ಕೆ ಇಲಾಖೆ ಎಂದು ಹೆಸರಿಡಲಾಗಿದೆ.
ಇವರಿಬ್ಬರ ಕಾಂಬಿನೇಶನಲ್ಲಿ ಮೂಡಿಬರುತ್ತಿರುವ ಈ ಚತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಉಳಿದ ಭಾಗದ ಚಿತ್ರೀಕರಣ ಜೂನ್ ನಲ್ಲಿ ನಡೆಯಲಿದೆ.
“ಲಾಕಪ್ ಡೆತ್”, “ಎ ಕೆ 47 ” ಚಿತ್ರಗಳ ತರಹದ ಕಥೆಯಿದು. ನಾನು ಬಹಳ ವರ್ಷಗಳ ನಂತರ ನಾನೇ ಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರವಿದು ಎನ್ನುತ್ತಾರೆ ನಿರ್ದೇಶಕ ಓಂಪ್ರಕಾಶ್ ರಾವ್.
ಶ್ರೀರೇಣುಕಾ ಮೂವೀ ಮೇಕರ್ಸ್ ಲಾಂಛನದಲ್ಲಿನಿರ್ಮಾಣವಾಗುತ್ತಿರುರುವ ಈ ಚಿತ್ರಕ್ಕೆ ಎಂ.ಎಸ್. ರಮೇಶ್ ಸಂಭಾಷಣೆ ಬರೆದಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ , ರವಿಕುಮಾರ್ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಲಕ್ಷ್ಮಣ್ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ.
ಹೊಸ ಯುವ ಉತ್ಸಾಹಿ ತಂಡದ ಸಮಾಗಮದಲ್ಲಿ “ಹುಲಿಬೇಟೆ ಚಿತ್ರ ತಯಾರಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಭಾರೀ ಮೆಚ್ಚುಗೆ ಪಡೆದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಎಸ್ ಎ ಚಿನ್ನೇಗೌಡ, ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೆ.ಎಂ.ವೀರೇಶ್, ಗೌರೀಶ್ ಅಕ್ಕಿ ಇತರರು ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು.
ನಾನು ಚಿತ್ರ ಆರಂಭಿಸಿದಾಗ ಕೆಲವು ಅಡೆತಡೆಗಳು ಎದುರಾದವು. ಮಕ್ಕಳಿಗೆ ಕಷ್ಟ ಬಂದಾಗ ಮೊದಲು ನೆನಪಾಗುವುದು ತಾಯಿ. ನನಗೆ ತಾಯಿಯ ತರಹ ವಾಣಿಜ್ಯ ಮಂಡಳಿ ಹಾಗೂ ತಂದೆಯ ಸ್ಥಾನದಲ್ಲಿ ನಿರ್ಮಾಪಕರ ಸಂಘ. ಈ ಎರಡು ಸಂಸ್ಥೆಗಳ ಸಹಕಾರದಿಂದ ನನಗೆ ಎದುರಾದ ಕಷ್ಟ ದೂರವಾಗಿದೆ. ಆ ಎರಡೂ ಸಂಸ್ಥೆಗಳಿಗೆ ಧನ್ಯವಾದ. ಚಿತ್ರದ ಬಗ್ಗೆ ಹೇಳುವುದಾದರೆ ಭೂಗತಲೋಕದ ಒಂದಿಷ್ಟು ಕಥೆ ಜೊತೆಗೆ ನವಿರಾದ ಪ್ರೇಮಕಾವ್ಯ ಸಹ ಇದರಲ್ಲಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲೇ ಚಿತ್ರೀಕರಣ ನಡೆದಿದೆ . ಮೇ ಅಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. ಸಹಕಾರ ನೀಡಿದ ಎಲ್ಲರಿಗೂ ವಂದನೆ ಅಂದರು ನಿರ್ದೇಶಕ ರಾಜ್ ಬಹದ್ದೂರ್.
ಕೇವಲ ಒಂದುವರೆ ಸಾವಿರ ರೂಪಾಯಿಯಿಂದ ಆರಂಭವಾದ ಸಿನಿಮಾವಿದು. ಕ್ಯಾಮೆರಾ ಅಸಿಸ್ಟೆಂಟ್ ಹಾಗೂ ಇನ್ನಿತರ ಕೆಲಸ ಮಾಡಿರುವ ನನಗೆ ನಟನೆಯಲ್ಲಿ ಆಸಕ್ತಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ತಂದೆ-ತಾಯಿಯ ಬೆಂಬಲ ದೊರಕಿತು. ಈ ಸಿನಿಮಾ ಆರಂಭವಾಯಿತು. ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಅನಿರೀಕ್ಷಿತವಾಗಿ ನಮ್ಮ ತಂದೆ ನನ್ನಿಂದ ದೂರಾದರು. ಆದರೂ ಧೃತಿಗೆಡದೆ ನನ್ನ ತಾಯಿ, ನೀನು ಈ ಸಿನಿಮಾ ಪೂರ್ಣಮಾಡು ಎಂದು ನನ್ನ ಜೊತೆಗೆ ನಿಂತರು ಎಂದು ಹೇಳುತ್ತಾ ನಾಯಕ ವಿಶ್ವ ಭಾವುಕರಾದರು.
ನಾಯಕಿ ರೋಹಿಣಿ ಹಾಗೂ ಛಾಯಾಗ್ರಾಹಕ ಧನಪಾಲ್ “ಹುಲಿ ಬೇಟೆ” ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಧಾನುಬಾಯಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಅರವಿಂದ ರಾಜ್ ಸಂಕಲನ ಹಾಗೂ ಮಂಜು ನಾಗಪ್ಪ ಅವರ ಸಾಹಸ ನಿರ್ದೇಶನವಿದೆ.
ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಮೊದಲ ಹಾಡನ್ನು ಸ್ಯಾಂಡಲ್’ವುಡ್ ‘ಭೀಮ’ನಿಂದ ಅನಾವರಣಗೊಳಿಸಿದೆ ಚಿತ್ರತಂಡ. ಸಿನಿಮಾದಲ್ಲಿ ಈ ಹಾಡು ಶಿವಣ್ಣನ ಎಂಟ್ರಿ ಸಾಂಗ್ ಆಗಿದ್ದು ಸಖತ್ ಮಾಸ್ ಆಗಿ ಮೂಡಿಬಂದಿದೆ. ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅನೂಪ್ ಸೀಳಿನ್ ಬ್ಯಾಂಡು ಬಜಾಯಿಸಿರುವ ಈ ಹಾಡಿಗೆ ಆ್ಯಂಥೋನಿ ದಾಸನ್ ದನಿಗೂಡಿಸಿದ್ದಾರೆ.
‘ನಕ್ಕರನಖ ನಕ್ಕರನಖ ನುಗ್ಗಿಬಂತೋ ನಾಡಹುಲಿ…’ ‘ಟಕರಟಕ ಟಕರಟಕ ಎಗರಿಬಂತೋ ಕಾಡಹುಲಿ…’ ಎಂಬ ಹಾಡು ಅಕ್ಷಯ ತೃತೀಯ ವಿಶೇಷ ದಿನದಂದು ವಿಜಯ್ ಕುಮಾರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಮಾಸ್ ಬೀಟ್, ಕೇಳಿದಾಕ್ಷಣ ಕುಣಿಸುವ ಸಂಗೀತ ಈ ಹಾಡಿನಲ್ಲಿದೆ. ಆ್ಯಂಥೋನಿ ದಾಸ್ ವಾಯ್ಸ್ ಕೇಳಿದಾಕ್ಷಣ ಥ್ರಿಲ್ ಆಗಿಹೋದೆ. ಶಿವಣ್ಣನ ಎನರ್ಜಿಗೆ ಸರಿದೂಗುವಂಥ ಹಾಡಿದು. ನಾನಂತೂ ಸಖತ್ ಎಂಜಾಯ್ ಮಾಡಿದೆ. ಈ ಹಾಡನ್ನು ಕೇಳಿದವರೂ ಇಷ್ಟಪಡುತ್ತಾರೆ ಎಂಬ ಭರವಸೆಯಿದೆ’ ಅನ್ನೋದು ವಿಜಿ ಮಾತು.
‘ನೂರಾರು ಡಾನ್ಸರ್ಸ್, ಬೃಹತ್ ಸೆಟ್, ಕಲರ್’ಫುಲ್ ಕಾಸ್ಟ್ಯೂಮ್’ನಲ್ಲಿ ಶಿವಣ್ಣಈ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬನ್ನೇರುಘಟ್ಟ ಸಮೀಪದ ದೇವಸ್ಥಾನವೊಂದರ ಬಳಿ ಜಾತ್ರೆ ಸೆಟ್ ಹಾಕಲಾಗಿತ್ತು. ದೊಡ್ಡ ಮಟ್ಟದಲ್ಲಿ ಈ ಹಾಡು ಮೂಡಿಬಂದಿದೆ’ ಎನ್ನುತ್ತಾರೆ ನಿರ್ಮಾಪಕ ಕೃಷ್ಣ ಸಾರ್ಥಕ್.
ವಿಜಯ್ ಮಿಲ್ಟನ್ ನಿರ್ದೇಶನ ಹಾಗೂ ಛಾಯಾಗ್ರಹಣವಿರುವ ಈ ಸಿನಿಮಾಕ್ಕೆ ಅವರೇ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಗುರು ಕಶ್ಯಪ್ ಸಂಭಾಷಣೆ ಈ ಚಿತ್ರಕ್ಕಿದೆ.
ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ‘ಬೈರಾಗಿ’ ನಿರ್ಮಿಸಿದ್ದಾರೆ. ರಾಜ್ಯಾದ್ಯಂತ ಜಗದೀಶ್ ಗೌಡ ಈ ಸಿನಿಮಾವನ್ನು ವಿತರಣೆ ಮಾಡಲಿದ್ದಾರೆ.
ಚಿರಂಜೀವಿ ಅಗಲಿ ಎರಡುವರ್ಷಗಳಾಗುತ್ತಿದೆ. ಅವರ ಅಭಿನಯದ ಕೊನೆಯ ಚಿತ್ರ “ರಾಜ ಮಾರ್ತಾಂಡ” ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗಲಿದೆ. ಧ್ರುವ ಸರ್ಜಾ ಧ್ವನಿ ನೀಡಿರುವ ಈ ಚಿತ್ರದ ಟ್ರೇಲರ್ ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಚಿರು ಸರ್ ನಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಡಬ್ಬಿಂಗ್ ಮಾಡುವುದು ಮಾತ್ರ ಬಾಕಿಯಿತ್ತು. ಆನಂತರ ನಡೆಯ ಬಾರದ ನಟನೆ ನಡೆದದ್ದು ಎಲ್ಲರಿಗೂ ಗೊತ್ತೇ ಇದೆ. ನಾನು ಚಿರು ಅವರ ಪಾರ್ಥಿವ ಶರೀರ ನೋಡಲು ಹೋದಾಗ, ಧ್ರುವ ಸರ್ಜಾ ಕೇಳಿದ ಮೊದಲ ಮಾತು, ಅಣ್ಣ ಡಬ್ಬಿಂಗ್ ಮುಗಿಸಿದ್ದಾರಾ? ನಾನು ಇಲ್ಲ ಅಂದೆ. ನಾನು ಮಾಡಿಕೊಡುತ್ತೀನಿ ಅಂದರು. ಹಾಗೆ ಟ್ರೇಲರ್ ಗೆ ಧ್ರುವ ಧ್ವನಿ ನೀಡಿದ್ದಾರೆ. ಸದ್ಯದಲ್ಲೇ ಡಬ್ಬಿಂಗ್ ಪೂರ್ಣಗೊಳಿಸಲಿದ್ದಾರೆ. ದರ್ಶನ್ ಸರ್ ಸಹ ವಾಯ್ಸ್ ಓವರ್ ಕೊಡುವುದಾಗಿ ಹೇಳಿದ್ದಾರೆ. ಮೇಘನಾರಾಜ್ ಹಾಗೂ ಸುಂದರರಾಜ್ ಅವರಂತೂ ನಮ್ಮ ಬೆಂಬಲಕ್ಕೆ ಸದಾ ಇದ್ದಾರೆ. ರಾಯನ್ ರಾಜ್ ಸರ್ಜಾ ಸಹ ನಮ್ಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಧನ್ಯವಾದ. ಜೂನ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ದಿನಾಂಕ ನಿಗದಿಯಾಗಿದೆ. ಆದರೆ ಕೊರೋನ ನಾಲ್ಕನೇ ಅಲೆಯ ಪರಿಸ್ಥಿತಿ ನೋಡಿಕೊಂಡು ದಿನಾಂಕ ಘೋಷಣೆ ಮಾಡುತ್ತೇವೆ ಎಂದರು ನಿರ್ದೇಶಕ ರಾಮ್ ನಾರಾಯಣ್.
ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಬೇಕೆಂದು ಕೊಂಡಿದ್ದೇವೆ. ಚಿರು ಅವರ 111 ಅಡಿ ಎತ್ತರದ ಕಟೌಟ್ ನಿಲ್ಲಿಸಲಿದ್ದೇವೆ ಹಾಗೂ ರಾಯನ್ ರಾಜ್ ಸರ್ಜಾ ಅವರ 51 ಎತ್ತರದ ಕಟೌಟ್ ಸಹ ನಿಲಿಸಲಿದ್ದೀವಿ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಶಿವಕುಮಾರ್.
ಅದೇನೊ ಗೊತ್ತಿಲ್ಲ. ಅವರು ನಟಿಸುವ ಬೇರೆ ಚಿತ್ರಗಳ ಸಂಭಾಷಣೆನ್ನು ಅಲ್ಲೇ ಹೇಳಿ, ಹತ್ತು ನಿಮಿಷಕ್ಕೆ ಮರೆತು ಹೋಗತ್ತಿದ್ದರು. ಆದರೆ ಈ ಚಿತ್ರದ ಸಂಭಾಷಣೆ ಮಾತ್ರ ಯಾವಾಗಲೂ ಹೇಳುತ್ತಿದ್ದರು. ಕೊನೆಗೆ ಚಿರು ಬಂದರೆ ನಾವೆಲ್ಲಾ ಆ ಡೈಲಾಗ್ ಹೇಳುತ್ತಿದ್ದೆವು. ಅಷ್ಟು ಈ ಚಿತ್ರವನ್ನು ಹಚ್ಚಿಕೊಂಡಿದ್ದರು. ಅವರಿಲ್ಲದ ಈ ಸಮಯದಲ್ಲಿ ಚಿತ್ರತಂಡಕ್ಕೆ ಬೆಂಬಲ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮ ಎರಡು ಕುಟುಂಬಗಳ ಸಹಕಾರ ಸದಾ ನಿಮಗೆ ಇರುತ್ತದೆ ಎಂದರು ಮೇಘನಾರಾಜ್.
ನಟ ಸುಂದರರಾಜ್, ನಾಯಕಿ ದೀಪ್ತಿ ಸಾಥಿ, ಮತ್ತೊಬ್ಬ ನಾಯಕಿ ಟಗರು ಖ್ಯಾತಿಯ ಋಶಿಕಾ ರಾಜ್ (ತ್ರಿವೇಣಿ ಈಗ ಋಶಿಕಾ ರಾಜ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ), ಚಿರು ಮಿತ್ರರಾದ ಮನೀಷ್, ಸಚಿನ್ ಮುಂತಾದವರು “ರಾಜ ಮಾರ್ತಾಂಡ” ಚಿತ್ರದ ಬಗ್ಗೆ ಮಾತನಾಡಿದರು.
ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ.
ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚತ್ರಕ್ಕಿದೆ.
ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದು ಆಧುನಿಕ ಯುಗ. ಹೊಸ ತಂತ್ರಜ್ಞಾನ ದಿನದಿನಕ್ಕೂ ಅಭಿವೃದ್ಧಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಶೇಷ ಸೌಲಭ್ಯವುಳ್ಳ ” ಸಿನಿಬಜಾರ್ ” ಆಪ್ ಬಿಡುಗಡೆಯಾಗಿದೆ. ಇದು ಕನ್ನಡ ಸಿನಿ ಪ್ರಿಯರಿಗೆ ಹಾಗು ನಿರ್ಮಾಪಕರಿಗೆ ಸ್ನೇಹ ಸೇತು
ಹಲವು ವರ್ಷಗಳಿಂದ ಆನ್ ಲೈನ್ ನಲ್ಲಿ ಪರಿಣಿತಿ ಪಡೆದಿರುವ ಆನ್ ಲೈನ್ ಭಾಸ್ಕರ್ ಎಂದೇ ಖ್ಯಾತರಾಗಿರುವ ಭಾಸ್ಕರ್ ವೆಂಕಟೇಶ್ ಹಾಗು ನಿರ್ಮಾಪಕ, ಕರ್ನಾಟಕ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರ ಸಾರಥ್ಯದಲ್ಲಿ ಈ ಆಪ್ ಹೊರ ಬಂದಿದೆ.
ಈ ಆಪ್ ನಲ್ಲಿ ಸಿನಿಮಾ ವೀಕ್ಷಣೆಗೆ ತಗಲುವ ವೆಚ್ಚ ಕೇವಲ ಇಪ್ಪತ್ತೈದರಿಂದ ಮೂವತ್ತು ರೂಪಾಯಿ. 24 ಗಂಟೆಗಳ ಅವಧಿಯಿರುತ್ತದೆ. ಅಷ್ಟರೊಳಗೆ ಎಷ್ಟು ಸಿನಿಮಾ ಬೇಕಾದರೂ ನೋಡಬಹುದು. ಈ ಸಿನಿಮಾವನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬ ಮಾಹಿತಿ ಕೂಡ ನಿರ್ಮಾಪಕರಿಗೆ ತಿಳಿಯಲಿದೆ. ಪೈರಸಿ ತಡೆಗಟ್ಟುವ ಕಡೆಗೂ ಗಮನ ಹರಸಲಾಗಿದೆ. ಧ್ವನಿಯಿಂದ ಹಿಡಿದು, ಸ್ಕ್ರೀನಿಂಗ್ ತನಕ ಎಲ್ಲಾ ಉತ್ತಮ ಗುಣಮಟ್ಟದಾಗಿರುತ್ತದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳು ಈಗಾಗಲೇ ಈ ಆಪ್ ನಲ್ಲಿದೆ. ಈ ಆಪ್ ಮೂಲಕವೇ ಚಿತ್ರವನ್ನು ಬಿಡುಗಡೆ ಮಾಡಲು ಇಚ್ಛಿಸುವವರು ನಮ್ಮ ತಂಡವನ್ನು ಸಂಪರ್ಕಿಸಬಹುದು. ಒಟ್ಟಿನಲ್ಲಿ ಕನ್ನಡ ನಿರ್ಮಾಪಕರಿಗೆ ಒಳಿತಾಗಲಿ ಎಂಬುದೇ ನಮ್ಮ ಆಶಯ ಎಂದರು ಭಾಸ್ಕರ್ ವೆಂಕಟೇಶ್.
ಭಾಸ್ಕರ್ ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದಾಗ ಇದರಿಂದ ನಿರ್ಮಾಪಕರಿಗೆ ಹಾಗೂ ನೋಡುಗರಿಗೆ ಅನುಕೂಲವಿದೆ ಎಂದು ತಿಳಿಯಿತು. ನಾನು ಭಾಸ್ಕರ್ ಅವರ ಜೊತೆ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದೇನೆ ಎಂದರು ಉಮೇಶ್ ಬಣಕಾರ್.
ಆಪ್ ಹೇಗೆ ಬಳಸಿಕೊಳ್ಳುವುದು? ಎಂಬುದರ ಮಾಹಿತಿಯನ್ನು ಆಪ್ ಡೆವಲಪರ್ ಸುಧಾಕರ್ ನೀಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ಉಪಾಧ್ಯಕ್ಷ ನಾಗಣ್ಣ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ನಟ ಶ್ರೀನಗರ ಕಿಟ್ಟಿ, ನಿರ್ದೇಶಕರಾದ ರವಿಶ್ರೀವತ್ಸ, ಗಿರಿರಾಜ್ “ಸಿನಿಬಜಾರ್” ಓಟಿಟಿಯನ್ನು ಬಿಡುಗಡೆ ಮಾಡಿ , ತಂಡಕ್ಕೆ ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಶುಭ ಕೋರಿದರು.
ತಮ್ಮ ಸತ್ಯ ಹೆಗಡೆ ಸ್ಟುಡಿಯೋಸ್ ಮೂಲಕ ಪ್ರತಿಭಾವಂತ ಯುವ ಪ್ರತಿಭೆಗಳ ಸಮಾಗಮದಲ್ಲಿ ತಯಾರಾದ ಕಿರುಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಕಿರುಚಿತ್ರ ನಿರ್ಮಾಣ ಮಾಡುವವರನ್ನು ಪ್ರೋತ್ಸಾಹಿಸುತ್ತಿದ್ದಾರೆ ಸತ್ಯ ಹೆಗಡೆ.
ಇತ್ತೀಚೆಗೆ ವಿನಯ್ ಶಾಸ್ತ್ರಿ ಅವರ ನಿರ್ದೇಶನದಲ್ಲಿ ಮಂಜುನಾಥ್ ಹೆಗಡೆ ಹಾಗೂ ಅರಣಾ ಬಾಲರಾಜ್ ಅಭಿನಯಿಸಿರುವ “ಕಾಲ”. ನಾಟಕ ಕಂಪನಿಗಳ ವಾಸ್ತವ ತಿಳಿಸುವ , ಅಭಿಷೇಕ್ ಕಾಸರಗೋಡು ನಿರ್ದೇಶನದ ” ನಾಟಕದ್ ಕಂಪನಿ” ಹಾಗೂ ಆಹಾರ ಪೂರೈಕೆ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಹೆಣ್ಣು ಮಗಳೊಬ್ಬಳ ಕಥೆಯನ್ನಾಧರಿಸಿದ, ಪ್ರಶಾಂತ್ ಗೌಡ ನಿರ್ದೇಶನದಲ್ಲಿ ರಮ್ಯಕೃಷ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಲಾಸ್ಟ್ ಆರ್ಡರ್” ಕಿರುಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಒಂದೊಂದು ಕಿರುಚಿತ್ರ ಕೂಡ ಬಹಳ ಅದ್ಭುತವಾಗಿದ್ದವು. ಸ್ವಲ್ಪ ಸಮಯದಲ್ಲೇ ದೊಡ್ಡ ವಿಷಯ ಹೇಳುವ ಕೆಲಸ ಮಾಡಿದ್ದಾರೆ ಈ ಕಿರುಚಿತ್ರಗಳ ನಿರ್ದೇಶಕರು. ಅಷ್ಟೇ ಚೆನ್ನಾಗಿ ಕಲಾವಿದರು ಅಭಿನಯಿಸಿದ್ದಾರೆ.
ಸಾಹಿತಿ ಜಯಂತ ಕಾಯ್ಕಿಣಿ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕರಾದ ಕೆ.ಮಂಜು, ಉದಯ್ ಕೆ ಮೆಹ್ತ, ನಿರ್ದೇಶಕ ಗಿರಿರಾಜ್ ಸೇರಿದಂತೆ ಮುಂತಾದ ಗಣ್ಯರು ಈ ಕಿರುಚಿತ್ರಗಳನ್ನು ವೀಕ್ಷಿಸಿ ಕಿರುಚಿತ್ರ ತಂಡವನ್ನು ಹಾಗೂ ಅವರಿಗೆ ಪ್ರೋತ್ಸಾಹ ನೀಡಿತ್ತಿರುವ ಸತ್ಯ ಹೆಗಡೆಯವರನ್ನು ಅಭಿನಂದಿಸಿದರು.
ಕಾರ್ಮಿಕರ ದಿನಾಚರಣೆ ಅಂಗವಾಗಿ ಚಿತ್ರರಂಗದಲ್ಲಿ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರಿಗೆ ಸತ್ಯ ಹೆಗಡೆ ಈ ಸಂದರ್ಭದಲ್ಲಿ ಸನ್ಮಾನಿಸಿದರು.
ಈಗ ಮೊದಲಿನಂತಿಲ್ಲ. ಕಲಾಸಕ್ತರು ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಕಷ್ಟು ವೇದಿಕೆಗಳಿವೆ. ಅಂತಹ ಪ್ರತಿಭಾ ಪ್ರದರ್ಶನಕ್ಕೆ ಮತ್ತೊಂದು ಉತ್ತಮ ವೇದಿಕೆ “ಟಾಕೀಸ್” ಆಪ್. ಇತ್ತೀಚೆಗೆ “ಟಾಕೀಸ್” ಆಪ್ ಗೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಚಾಲನೆ ನೀಡಿದರು.
ಕಟ್ಟಡ ನಿರ್ಮಾಣದಿಂದ ಹಿಡಿದು, ಸಿನಿಮಾ ನಿರ್ಮಾಣದ ತನಕ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸ್ವಯಂಪ್ರಭ ಸಂಸ್ಥೆ ಈ ಉಪಯುಕ್ತ “ಟಾಕೀಸ್” ಆಪ್ ಬಿಡುಗಡೆ ಮಾಡಿದೆ. ಕನ್ನಡಿಗರಿಂದ ಕನ್ನಡಿಗರಿಗಾಗಿ ಎಂಬ ವಾಕ್ಯದ ಮೂಲಕ ಈ ಆಪ್ ಕಾರ್ಯ ನಿರ್ವಹಿಸಲಿದೆ. ಮೂಲತಃ ಉದ್ಯಮಿಯಾಗಿರುವ ರತ್ನಾಕರ್ ಕಾಮತ್ ಈ ಸಂಸ್ಥೆಯ ಮುಖ್ಯಸ್ಥರು. ಈ ಹಿಂದೆ ವಿಜಯ ರಾಘವೇಂದ್ರ ಅಭಿನಯದ “ಮಾಲ್ಗುಡಿ ಡೇಸ್” ಚಿತ್ರವನ್ನು ನಿರ್ಮಾಣ ಮಾಡಿದ್ದರು.
ಸುಮಾರು 200 ಜನರ ಪರಿಶ್ರಮ, 700 ಕ್ಕೂ ಅಧಿಕ ತಂತ್ರಜ್ಞರು ಹಾಗೂ 1200 ಕ್ಕೂ ಮೀರಿದ ಕಲಾವಿದರು ಈ “ಟಾಕೀಸ್” ನ ವಿವಿಧ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ.
ವೆಬ್ ಸೀರೀಸ್, ಧಾರಾವಾಹಿ, ಕಿರುಚಿತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಚಲನಚಿತ್ರಗಳನ್ನು “ಟಾಕೀಸ್” ಮೂಲಕ ತಾವು ವೀಕ್ಷಿಸಬಹುದು. ಇದಕ್ಕೆ ತಗಲುವ ವೆಚ್ಚ ಒಂದು ವರ್ಷಕ್ಕೆ ಕೇವಲ 365 ರೂಪಾಯಿ ಮಾತ್ರ. ದಿನಕ್ಕೆ ಒಂದು ರೂಪಾಯಿಯ ಹಾಗೆ. ಬೇರೆ ಯಾವುದೇ ವೆಚ್ಚ ಇದಕ್ಕೆ ಇರುವುದಿಲ್ಲ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಮನೋರಂಜನೆ ನೀಡುವ ಯೋಜನೆ “ಟಾಕೀಸ್” ತಂಡದ್ದು.
ಈ ಸಂಸ್ಥೆಯ ಬೆಳವಣಿಗೆ ಕಂಡು ಖುಷಿಯಾಗುತ್ತಿದೆ. ಅಪ್ಪಾಜಿ ಹೇಳುತ್ತಿದ್ದರು. ಕೆಲಸ ಕೊಟ್ಟವರು ಅನ್ನದಾತರು ಅಂತ. ರತ್ನಾಕರ್ ಅವರನ್ನು ನೋಡಿದರೆ ಹಾಗೆ ಅನಿಸುತ್ತಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇನ್ನೂ “ಟಾಕೀಸ್” ಬಗ್ಗೆ ಹೇಳಬೇಕಾದರೆ, ಟೆಕ್ನಾಲಜಿ ಬದಲಾದ ಹಾಗೆ ನಾವು ಬದಲಾಗಬೇಕು. ನಾನು ಈ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದ್ದೇನೆ. ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ವೆಬ್ ಸೀರೀಸ್ ನೋಡಿದ್ದೀನಿ. ನನ್ನ ಮಗಳು ನಿರ್ಮಿಸಿರುವ ವೆಬ್ ಸೀರೀಸ್ ಸಹ ಸದ್ಯದಲ್ಲೇ ಇದೇ “ಟಾಕೀಸ್” ನಲ್ಲಿ ಬರಲಿದೆ. ಮುಂದೆ ನಾನು ಕೂಡ ಒಂದು ವೆಬ್ ಸೀರೀಸ್ ನಿರ್ಮಿಸಿ, ನಟಿಸಲಿದ್ದೇನೆ. “ಟಾಕೀಸ್” ತಂಡಕ್ಕೆ ಒಳ್ಳೆಯದಾಗಲಿ ಎಂದರು ಶಿವರಾಜಕುಮಾರ್.
ನಟ ಹರೀಶ್ ರಾಜ್ ಸಹ “ಟಾಕೀಸ್” ತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
“ಟಾಕೀಸ್” ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರೋಗ್ರಾಮಿಂಗ್ ಹೆಡ್ ಸೂರಜ್ ಬೋಳಾರ್ ನೀಡಿದರು. ಹೇಗೆ ಬಳಸಬೇಕೆಂಬ ವಿವರಣೆಯನ್ನು ನಟಿ ರಂಜನಿ ರಾಘವನ್ ವಿಡಿಯೋ ಮೂಲಕ ವಿವರಿಸಿದರು.
ಸ್ವಯಂಪ್ರಭ ಸಂಸ್ಥೆಯ ರುವಾರಿಗಳು ಹಾಗೂ ಈ ಆಪ್ ನ ಸ್ಥಾಪಕರೂ ಆದ ರತ್ನಾಕರ್ ಕಾಮತ್, ಲಕ್ಷ್ಮೀ ರತ್ನಾಕರ್ ಕಾಮತ್ ಹಾಗೂ ಗಣೇಶ್ ರತ್ನಾಕರ್ ಕಾಮತ್ ಇದ್ದರು.
ಕನ್ನಡ ಚಿತ್ರರಂಗದಲ್ಲಿ ಈಗ ಉತ್ತಮ ಬೆಳವಣಿಗೆ. ಕೇವಲ ಬೆರಳೆಣಿಕೆಯಷ್ಟಿದ್ದ ನಿರ್ದೇಶಕಿಯರ ಸಂಖ್ಯೆ ಈಗ ಹೆಚ್ಚುತ್ತಿದೆ. ಸಾಕಷ್ಟು ಜನ ಮಹಿಳೆಯರು ನಿರ್ದೇಶನದತ್ತ ಒಲವು ತೋರುತ್ತಿದ್ದಾರೆ.
“ನಿರ್ಮುಕ್ತ” ಚಿತ್ರವನ್ನು ರಮ್ಯ ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಸಹ ಇವರೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ರೂಪಸ್ವಾಮಿ ಅವರೊಡಗೂಡಿ ನಿರ್ಮಾಣವನ್ನು ಮಾಡಿದ್ದಾರೆ.
ಇತ್ತೀಚೆಗೆ ಸಂಸದೆ ಸುಮಲತಾ ಅಂಬರೀಶ್ ಅವರು ಸಾಂಗ್ ಮತ್ತು ಟೀಸರ್ ರಿಲೀಸದಮಾಡಿ ಶುಭ ಕೋರಿದರು. ಅಭಿಷೇಕ್ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.
ಈ ಚಿತ್ರದ ನಾಯಕನ ಹೆಸರು ಕೂಡ ಅಭಿಷೇಕ್. ಇವರು ರೆಬಲ್ ಸ್ಟಾರ್ ಅಂಬರೀಶ್ ಅವರ ತಂಗಿ ರಂಜನಿ ಅವರ ಪುತ್ರ. ನವ್ಯ ಪೂಜಾರಿ ಈ ಚಿತ್ರದ ನಾಯಕಿ.
ಇದು ನಮ್ಮ ಕುಟುಂಬದ ಸಮಾರಂಭ. ಏನು ಮಾತನಾಡಬೇಕೋ ತಿಳಿಯುತ್ತಿಲ್ಲ. ಅಂಬರೀಶ್ ಅವರ ತಾತಾ ಚೌಡಯ್ಯ ಅವರದು ಸಂಗೀತ ಕ್ಷೇತ್ರದಲ್ಲಿ ಅವರದೇ ಹೆಸರು. ನಂತರ ಅಂಬರೀಶ್ ಸಿನಿಮಾದಲ್ಲಿ ಹೆಸರು ಮಾಡಿದರು. ಆನಂತರ ನಮ್ಮ ಅಭಿಷೇಕ್. ಈಗ ಈ ಅಭಿಷೇಕ್. ಸಂತೋಷವಾಗುತ್ತಿದೆ ಎಲ್ಲರನ್ನು ನೋಡಿ. ಅಭಿಷೇಕ್ ಸಿ.ಕೆ ಸಹ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಲಿ ಎಂದರು ಸುಮಲತಾ ಅಂಬರೀಶ್.
ಟೀಸರ್ ನೋಡಿದೆ. ಚೆನ್ನಾಗಿದೆ. ಅಭಿಷೇಕ್ ಸಿ.ಕೆ ನನ್ನ ಬ್ರದರ್. ಅವರಿಗೆ ಶುಭವಾಗಲಿ ಎಂದು ಅಭಿಷೇಕ್ ಅಂಬರೀಶ್ ಹಾರೈಸಿದರು.
ಚಿತ್ರತಂಡಕ್ಕೆ ಶುಭಕೋರಿದ ರಾಕ್ ಲೈನ್ ವೆಂಕಟೇಶ್, ಅಂಬರೀಶ್ ಅವರನ್ನು ನೆನೆದು ಭಾವುಕರಾದರು.
ಮೂಲತಃ ವೈದ್ಯರಾಗಿರುವ ಡಾ.ರೂಪಸ್ವಾಮಿ ನಿರ್ಮಾಣದ ಬಗ್ಗೆ ಮಾತನಾಡುತ್ತಾ, ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.
ಇದೊಂದು ಮೆಡಿಕಲ್ ಕಾಲೇಜ್ ನಲ್ಲಿ ನಡೆಯುವ ಕಥೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿದೆ. ನಾನು ನಿರ್ದೇಶನ ಮಾಡಲು ಸಹಕಾರ ನೀಡಿದವರು ನನ್ನ ಪತಿ ಶ್ರೀನಿವಾಸ್. ಬಂದಿರುವ ಗಣ್ಯರಿಗೆ , ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕಿ ರಮ್ಯ ಶ್ರೀನಿವಾಸ್.
ಹಾಡು ಬರೆದಿರುವ ಸ್ವಾಮಿ ಹಾಗೂ ಸಂಗೀತ ನೀಡಿರುವ ಸಾಮ್ರಾಟ್ “ನಿರ್ಮುಕ್ತ” ಚತ್ರದ ಬಗ್ಗೆ ಮಾತನಾಡಿದರು.
ಅಪ್ಪ ನನಗೊಂದು ಡೌಟು, ಅಮ್ಮನಿಗೇನಾದ್ರೂ ಬೇರೆ ಕನೆಕ್ಷನ್ ಇದೆಯಾ ಅಂತ…! ಕೆಲವು ಹೆಂಗಸರಿಗೆ ಜೀವನದಲ್ಲಿ ಇಂತಹ ಸುಖಗಳೇ ದೊಡ್ಡದಾಗಿ ಕಾಣ್ತವೆ. ಇದ್ರಲ್ಲಿ ನಿಮ್ಮದೇನೂ ತಪ್ಪಿಲ್ಲ ಬಿಡಿ… ಕೆಲವರಿಗೆ ಹೆಂಡ್ತೀರು ವರವಾಗಿ ಸಿಕ್ಕಿದ್ರೆ, ಕೆಲವರಿಗೆ ಶಾಪ ಆಗ್ತಾರೆ…
ಇದು “ಪುರುಷೋತ್ತಮ” ಚಿತ್ರದ ಟ್ರೇಲರ್ ಒಳಗಿರುವ ಡೈಲಾಗ್. ಇಡೀ ಟ್ರೇಲರ್ ಗಮನಿಸಿದರೆ, ಅಲ್ಲೊಂದು ಮೋಸ, ವಂಚನೆಯ ಅಂಶಗಳು ಕಾಣಸಿಗುತ್ತವೆ. ಅಷ್ಟೇ ಅಲ್ಲ, ನಂಬಿಕೆ ದ್ರೋಹ ಮೇಲಿನ ಕಥೆ ಇರಬಹುದೇನೋ ಎಂಬ ಪ್ರಶ್ನೆಯೂ ಕಾಡುತ್ತದೆ. ಎಲ್ಲದರ ಜೊತೆಯಲ್ಲಿ ಅದೊಂದು ಒಳ್ಳೆಯ ವ್ಯಕ್ತಿತ್ವ ಇರುವ ವ್ಯಕ್ತಿಗೆ ಆಗುತ್ತಿರುವ ಮೋಸವೂ ಗೊತ್ತಾಗುತ್ತೆ. ಅದೇನೆ ಇರಲಿ, ಜಿಮ್ ರವಿ ನಿರ್ಮಿಸಿ ಮೊದಲ ಸಲ ಈ ಚಿತ್ರದಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೇಲರ್ ಈಗಾಗಲೇ ಜೋರಾಗಿಯೇ ಸದ್ದು ಮಾಡಿದೆ.
ಅಷ್ಟೇ ಅಲ್ಲ, ಟ್ರೇಲರ್ ನೋಡಿದವರಿಂದ ಒಳ್ಳೆಯ ಪ್ರತಿಕ್ರಿಯೆಗಳೂ ಸಿಕ್ಕಿವೆ. ಇಲ್ಲಿಯವರೆಗೂ ಸಿನಿಲೋಕದಲ್ಲಿ ಸಕ್ಸಸ್ ಜರ್ನಿ ಮಾಡಿರುವ ಜಿಮ್ ರವಿ ಅಭಿನಯದ ಈ ಚಿತ್ರ ಮೇ 6ರಂದು ತೆರೆಗೆ ಬರಲಿದೆ. ತೆರೆಗೆ ಬರುವ ಮೊದಲೇ ಚಿತ್ರ ಸಾಕಷ್ಟು ಸುದ್ದಿಯಾಗಿದೆ. ಚಿತ್ರದ ಪೋಸ್ಟರ್ ಮೂಲಕವೇ ಒಂದಷ್ಟು ಕುತೂಹಲ ಕೆರಳಿಸಿದ್ದ “ಪುರುಷೋತ್ತಮ” ಆ ಬಳಿಕ ಒಳ್ಳೆಯ ಹಾಡುಗಳು ಕೂಡ ಗಮನಸೆಳೆದಿದ್ದವು. ಈಗ ಟ್ರೇಲರ್‌ಗೂ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಗುತ್ತಿದೆ. ಈಗ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಸಿನಿಮಾ ಕೂಡ ನೋಡುಗರ ಮನ ಗೆಲ್ಲುತ್ತದೆ ಅನ್ನೋದು ಚಿತ್ರತಂಡದ ಮಾತು.
ಜಿಮ್ ರವಿ ಈವರೆಗೆ ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಯ ನೂರಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇಷ್ಟು ವರ್ಷಗಳ ಕಾಲ ಬಣ್ಣದ ಬದುಕಲ್ಲಿ ಮಿಂದೆದ್ದ ಅವರು, ಅದೇ ಅನುಭವದ ಮೇಲೆ ಹೀರೋ ಆಗಿ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. “ಪುರುಷೋತ್ತಮ” ಮೇ. 6 ತೆರೆಗೆ ಬರಲು ಸಜ್ಜಾಗಿದೆ. ಇದೊಂದು ಹೊಸ ಕಥಾಹಂದರ ಹೊಂದಿರುವ ಸಿನಿಮಾ. ಅದರಲ್ಲೂ ಕೌಟುಂಬಿಕ ಚಿತ್ರ. ಜಿಮ್ ರವಿ ರವರು ಕಥೆಯನ್ನು ಮೆಚ್ಚಿ ಅವರೇ ನಿರ್ಮಾಣ ಕೂಡ ಮಾಡಿದ್ದಾರೆ ಅಂದರೆ, ಆ ಚಿತ್ರದ ಕಥೆ ಇಲ್ಲಿ ನಂಬಿಕೆ ಉಳಿಸಿಕೊಂಡಿದೆ ಎಂದರ್ಥ. ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಮನರಂಜನೆ ಕೊಡುವುದು ನಿರ್ಮಾಪಕ ರವಿ ಅವರ ಉದ್ದೇಶ. ಹಾಗಾಗಿ ಅವರಿಗೆ ಈ ಚಿತ್ರದ ಮೇಲೆ ವಿಶ್ವಾಸವುದೆ, ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ, ಸಿನಿಮಾಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಅವರು ನೀಡುವ ಮೂಲಕ ಸದಭಿರುಚಿಯ ಸಿನಿಮಾ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು, ಈ ಚಿತ್ರಕ್ಕೆ “ದಿಲ್ದಾರ, ‘ನಾನು ನಮ್ಮುಡ್ಗಿ ಖರ್ಚ್ಗೊಂದು ಮಾಫಿಯಾ, ಸಿನಿಮಾಗಳನ್ನು ನಿರ್ದೇಶಿಸಿದ್ದ ಎಸ್.ವಿ. ಅಮರನಾಥ್ ಅವರು “ಪುರುಷೋತ್ತಮ” ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಜಿಮ್ ರವಿ ಅವರಿಗೆ ಅಪೂರ್ವ ಸಿನಿಮಾ ನಾಯಕಿ ಅಪೂರ್ವ ಇಲ್ಲೂ ನಾಯಕಿಯಾಗಿದ್ದಾರೆ. ನಿವೇದಿತಾ ಇದ್ದಾರೆ. ಅವರೂ ಸಹ ಡ್ರಾಮಾ ಆರ್ಟಿಸ್ಟ್ ವರ್ಸಟೈಲ್ ಆಕ್ಟಿಂಗ್ ಸ್ಕಿಲ್ಸ್ ಮತ್ತು ಡ್ಯಾನ್ಸರ್. ಪುರುಷೋತ್ತಮ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಟ್ರೇಲರ್ ಕೂಡ ಸದ್ದು ಮಾಡಿದೆ. ಈ ಸಿನಿಮಾಗೆ ಶ್ರೀಧರ್ ವಿ ಸಂಭ್ರಮ್ ಸಂಗೀತವಿದೆ. ಅದೇನೆ ಇರಲಿ, ಒಂದೊಳ್ಳೆಯ ಕಥಾ ಹಂದರ ಹೊಂದಿರುವ “ಪುರುಷೋತ್ತಮ” ಎಲ್ಲಾ ವರ್ಗಕ್ಕೂ ಇಷ್ಟ ಅಗುವ ಚಿತ್ರ. ಜಿಮ್ ರವಿ ಅವರ ಕನಸಿನ ಈ ಚಿತ್ರ ಎಲ್ಲರ ಮನ ಗೆಲ್ಲಲಿ ಅನ್ನೋದೆ ಆಶಯ.