ಬೈರಾಗಿ ಮೊದಲ ಹಾಡಿಗೆ ಭೀಮನ ಸಾಥ್: ಶಿವಣ್ಣನ ಎಂಟ್ರಿ ಹಾಡಿಗೆ ಅನೂಪ್ ಸೀಳಿನ್ ಸಂಗೀತ…

ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಮೊದಲ ಹಾಡನ್ನು ಸ್ಯಾಂಡಲ್’ವುಡ್ ‘ಭೀಮ’ನಿಂದ ಅನಾವರಣಗೊಳಿಸಿದೆ ಚಿತ್ರತಂಡ. ಸಿನಿಮಾದಲ್ಲಿ ಈ ಹಾಡು ಶಿವಣ್ಣನ ಎಂಟ್ರಿ ಸಾಂಗ್ ಆಗಿದ್ದು ಸಖತ್ ಮಾಸ್ ಆಗಿ ಮೂಡಿಬಂದಿದೆ. ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅನೂಪ್ ಸೀಳಿನ್ ಬ್ಯಾಂಡು ಬಜಾಯಿಸಿರುವ ಈ ಹಾಡಿಗೆ ಆ್ಯಂಥೋನಿ ದಾಸನ್ ದನಿಗೂಡಿಸಿದ್ದಾರೆ.

‘ನಕ್ಕರನಖ ನಕ್ಕರನಖ ನುಗ್ಗಿಬಂತೋ ನಾಡಹುಲಿ…’
‘ಟಕರಟಕ ಟಕರಟಕ ಎಗರಿಬಂತೋ ಕಾಡಹುಲಿ…’ ಎಂಬ ಹಾಡು ಅಕ್ಷಯ ತೃತೀಯ ವಿಶೇಷ ದಿನದಂದು ವಿಜಯ್ ಕುಮಾರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಮಾಸ್ ಬೀಟ್, ಕೇಳಿದಾಕ್ಷಣ ಕುಣಿಸುವ ಸಂಗೀತ ಈ ಹಾಡಿನಲ್ಲಿದೆ. ಆ್ಯಂಥೋನಿ ದಾಸ್ ವಾಯ್ಸ್ ಕೇಳಿದಾಕ್ಷಣ ಥ್ರಿಲ್ ಆಗಿಹೋದೆ. ಶಿವಣ್ಣನ ಎನರ್ಜಿಗೆ ಸರಿದೂಗುವಂಥ ಹಾಡಿದು. ನಾನಂತೂ ಸಖತ್ ಎಂಜಾಯ್ ಮಾಡಿದೆ. ಈ ಹಾಡನ್ನು ಕೇಳಿದವರೂ ಇಷ್ಟಪಡುತ್ತಾರೆ ಎಂಬ ಭರವಸೆಯಿದೆ’ ಅನ್ನೋದು ವಿಜಿ ಮಾತು.

‘ನೂರಾರು ಡಾನ್ಸರ್ಸ್, ಬೃಹತ್ ಸೆಟ್, ಕಲರ್’ಫುಲ್ ಕಾಸ್ಟ್ಯೂಮ್’ನಲ್ಲಿ ಶಿವಣ್ಣಈ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬನ್ನೇರುಘಟ್ಟ ಸಮೀಪದ ದೇವಸ್ಥಾನವೊಂದರ ಬಳಿ ಜಾತ್ರೆ ಸೆಟ್ ಹಾಕಲಾಗಿತ್ತು. ದೊಡ್ಡ ಮಟ್ಟದಲ್ಲಿ ಈ ಹಾಡು ಮೂಡಿಬಂದಿದೆ’ ಎನ್ನುತ್ತಾರೆ ನಿರ್ಮಾಪಕ ಕೃಷ್ಣ ಸಾರ್ಥಕ್.

ವಿಜಯ್ ಮಿಲ್ಟನ್‌ ನಿರ್ದೇಶನ ಹಾಗೂ ಛಾಯಾಗ್ರಹಣವಿರುವ ಈ ಸಿನಿಮಾಕ್ಕೆ ಅವರೇ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಗುರು ಕಶ್ಯಪ್ ಸಂಭಾಷಣೆ ಈ ಚಿತ್ರಕ್ಕಿದೆ.

ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ‘ಬೈರಾಗಿ’ ನಿರ್ಮಿಸಿದ್ದಾರೆ. ರಾಜ್ಯಾದ್ಯಂತ ಜಗದೀಶ್ ಗೌಡ ಈ ಸಿನಿಮಾವನ್ನು ವಿತರಣೆ ಮಾಡಲಿದ್ದಾರೆ.

Related Posts

error: Content is protected !!