ಜೇನುಗೂಡು ಸಿನಿಮಾ ಬ್ಯಾನರ್ ನಡಿ ಕೆ.ಎನ್ ಶ್ರೀಧರ್ ನಿರ್ಮಾಣ ಮಾಡಿರುವ ‘ವಾಸಂತಿ ನಲಿದಾಗ ಸಿನಿಮಾ’ದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಹಿಂದೆ ಪುಟಾಣಿ ಸಫಾರಿ, ವರ್ಣಮಯ ಸಿನಿಮಾ ನಿರ್ದೇಶನ ಮಾಡಿದ್ದ ರವೀಂದ್ರ ವಂಶಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಯುವ ಪ್ರತಿಭೆಗಳಾದ ರೋಹಿತ್ ಶ್ರೀಧರ್ ನಾಯಕನಾಗಿ ಹಾಗೂ ಭಾವನಾ ಶ್ರೀನಿವಾಸ್ ನಾಯಕಿಯಾಗಿ ನಟಿಸಿದ್ದು, ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಸಿನಿಮಾದಲ್ಲಿದ್ದಾರೆ.
ನಿಜವಾಗಲೂ ಸಂತೋಷವಾಗುತ್ತಿದೆ. ಸುಧಾರಾಣಿ ನನ್ನ ಮೊದಲ ಜೋಡಿ. ಈ ಸಿನಿಮಾದಲ್ಲೂ ಮತ್ತೆ ಜೋಡಿಯಾಗಿ ನಟಿಸುತ್ತಿದ್ದೇವೆ. ನಾನು ಬ್ಯುಸಿನೆಸ್ ಮ್ಯಾನ್. ಮಗ ಅಂದ್ರೆ ಇಷ್ಟ. ತುಂಬಾ ಇಂಟ್ರೆಸ್ಟಿಂಗ್ ಇರುವ ಪಾತ್ರ. ವಾಸಂತಿ ನಲಿದಾಗ ತುಂಬಾ ಸುಂದರವಾದ ಟೈಟಲ್, ವಂಡರ್ ಫುಲ್ ಸ್ಟಾರ್ ಕಾಸ್ಟ್, ಟೆಕ್ನಿಷಿಯನ್ ಎಂದು ಸಾಯಿಕುಮಾರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.
ಮಂಜು ಪಾವಗಡ ಮಾತನಾಡಿ, ರವೀಂದ್ರ ಸರ್ ಗೆ ಧನ್ಯವಾದ ಒಳ್ಳೆ ಪಾತ್ರ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಅದ್ಭುತ ಸನ್ನಿವೇಶಗಳಿವೆ. ಡೈಲಾಗ್ ತುಂಬಾ ಚೆನ್ನಾಗಿವೆ. ಇಷ್ಟೆಲ್ಲಾ ಸೀನ್ ಮಾಡಿದ್ರೂ ಹೀರೋಯಿನ್ ಕಾಣಿಸಿಲ್ಲ. ಆಮೇಲೆ ನಂಬರ್ ಕೊಟ್ರೆ ಕಷ್ಟಸುಖ ಮಾತಾಡೋಣಾ ಎಂದು ತಮಾಷೆ ಮಾಡಿದರು.
ರೋಮ್ಯಾಂಟಿಕ್ ಕಥಾಹಂದರ ಹೊಂದಿರುವ ವಾಸಂತಿ ನಲಿದಾಗ ಸಿನಿಮಾಗೆ ಶ್ರೀಗುರು ಸಂಗೀತವಿದ್ದು, ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ. ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣ ಸಿನಿಮಾಕ್ಕಿದ್ದು, ಸದ್ಯದಲ್ಲಿಯೇ ಸಿನಿಮಾ ಥಿಯೇಟರ್ ಗೆ ಎಂಟ್ರಿ ಕೊಡಲಿದೆ.
ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ನೋಡುವಂತಹ “ಕೆ ಜಿ ಎಫ್ 2” ನಂತಹ ಬಿಗ್ ಹಿಟ್ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ನಿರ್ಮಾಣದ “ಬಘೀರ” ಚಿತ್ರಕ್ಕೆ ಚಾಲನೆ ದೊರಕಿದೆ.
ಡಾ. ಸೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಶ್ರೀಮುರಳಿ ನಾಯಕರಾಗಿ ಅಭಿನಯಿಸುತ್ತಿದ್ದಾರೆ.
“ಬಘೀರ” ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ದೃಶ್ಯಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಹೋದರ ಮಂಜುನಾಥ್ ಆರಂಭ ಫಲಕ ತೋರಿದರು. ನಿರ್ದೇಶಕ ಸೂರಿ ಅವರ ತಾಯಿ ಸರೋಜ ಅವರು ಕ್ಯಾಮೆರಾ ಚಾಲನೆ ಮಾಡಿದರು. ಮೇ ಕೊನೆಯ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಎ ಜೆ ಶೆಟ್ಟಿ ಛಾಯಾಗ್ರಹಣ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಈ ಹಿಂದೆ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಶ್ರೀಮುರಳಿ ನಾಯಕರಾಗಿ ನಟಿಸಿದ್ದ “ಉಗ್ರಂ” ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಈ ಚಿತ್ರಕ್ಕೂ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಚಿತ್ರಕಥೆ ನಿರ್ದೇಶಕ ಡಾ. ಸೂರಿ ಅವರದು. ಹಿಂದೆ ಬಿಡುಗಡೆಯಾಗಿದ್ದ “ಬಘೀರ” ಚಿತ್ರದ ಫಸ್ಟಲುಕ್ ಗೆ ಶ್ರೀಮುರಳಿ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ? ಎಂಬ ಕಾತುರದಲ್ಲಿದ್ದಾರೆ.
ಶ್ರೀಮುರಳಿ “ಬಘೀರ” ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ರಂಗಾಯಣ ರಘು, ಅಚ್ಯುತಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಅನೇಕ ಪ್ರತಿಭೆಗಳು ಕಾಲಿಡುತ್ತಲೇ ಇವೆ. ನೂರಾರು ಆಸೆ, ಆಕಾಂಕ್ಷೆ ಹೊತ್ತು ಬಣ್ಣದ ಲೋಕದಲ್ಲಿ ಮಿಂದೆದ್ದ ಪ್ರತಿಭೆಗಳಿಗೆ ಇಲ್ಲಿ ಲೆಕ್ಕವಿಲ್ಲ. ನಟಿಯಾದವರು ಇಲ್ಲಿ ನಿರ್ಮಾಪಕರಾದ ಉದಾಹರಣೆಗೇನು ಕಮ್ಮಿ ಇಲ್ಲ. ಅಂತಹವರ ಸಾಲಿಗೆ ಈಗ ಯುವ ನಟಿಯೊಬ್ಬರೂ ಸೇರಿದ್ದಾರೆ. ಅವರು ಬೇರಾರೂ ಅಲ್ಲ, ಸಾತ್ವಿಕ. ಈ ಸಾತ್ವಿಕ ಬಗ್ಗೆ ಈಗ ಇಷ್ಟೊಂದು ಪೀಠಿಕೆ ಯಾಕೆಂದರೆ, ಅವರು ಮೇ. 20 ರಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಖುಷಿಯಲ್ಲಿ ಅವರು ಒಂದಷ್ಟು ಹೊಸ ಹೊಸ ಯೋಜನೆಗಳನ್ನೂ ಹಾಕಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲ ಪರಭಾಷೆಗೂ ಜಿಗಿದಿದ್ದಾರೆ.
ನಟಿಯಷ್ಟೇ ಅಲ್ಲ…
ಹೌದು, ಸಾತ್ವಿಕ ಕಿರುತೆರೆಯಲ್ಲಿ ಗುರುತಿಸಿಕೊಂಡವರು. ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಈಗಾಗಲೇ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ಸಾತ್ವಿಕ, ಆ ಧಾರಾವಾಹಿಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ, ಸ್ಟೈಲಿಶ್ ಆಗಿಯೂ ಕೆಲಸ ಮಾಡಿದ್ದಾರೆ. ಇದಷ್ಟೇ ಅಲ್ಲ, ಸಾತ್ವಿಕ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದಾರೆ. ಇನ್ನು, ವಿಶೇಷವೆಂದರೆ, ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳಿಗೆ ತಮ್ಮ ಅದ್ಭುತ ಮನೆಗಳನ್ನೂ ಇವರು ಚಿತ್ರೀಕರಣಕ್ಕಾಗಿ ನೀಡುತ್ತಿದ್ದಾರೆ. ಹಾಗಾಗಿ ಸಾತ್ವಿಕ ಅಂದರೆ ಕಿರುತೆರೆ ಹಾಗು ಬೆಳ್ಳಿತೆರೆಯಲ್ಲಿ ಇವರು ಗೊತ್ತಿಲ್ಲವೆಂದವಲ್ಲ. ಸದ್ಯದ ಮಟ್ಟಿಗೆ ಸಾತ್ವಿಕ ಎಲ್ಲಾ ವಿಭಾಗಗಳಲ್ಲೂ ಗುರುತಿಸಿಕೊಂಡಿದ್ದಾರೆ.
ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ರಾಧಿಕಾ, ಕಲರ್ಸ್ ಕನ್ನಡದ ಕನ್ಯಾಕುಮಾರಿ ಹಾಗು ಸುವರ್ಣ ಚಾನೆಲ್ ನ ಬೆಟ್ಟದ ಹೂ ಧಾರಾವಾಹಿಗಳಿಗೆ ಸಾತ್ವಿಕ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಅವರ ಕೆಲಸ ಸೀರಿಯಲ್ ನಲ್ಲಿ ಹೈಲೈಟ್.
ಕಿರುತೆರೆ ಟು ಬೆಳ್ಳಿತೆರೆ…
ಇನ್ನು ಸಿನಿಮಾ ವಿಷಯಕ್ಕೆ ಬಂದರೆ, ಹಲವು ಸಿನಿಮಾಗಳಿಗೂ ಸಾತ್ವಿಕ ಕಾಸ್ಟ್ಯೂಮ್ ಡಿಸೈನರ್ ಆಗಿ, ಸ್ಟೈಲಿಶ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಅವರು ಬೆಳ್ಳಿತೆರೆಯಲ್ಲೂ ಕಾಣಿಕೊಂಡಿದ್ದಾರೆ. ಮಾರಿಗೋಲ್ಡ್ ಚಿತ್ರದಲ್ಲಿ ನಟಿಸಿರುವ ಸಾತ್ವಿಕ, ಪೃಥ್ವಿ ಅಂಬರ್ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.
ಜೊತೆಯಲ್ಲಿ ತೆರೆಯ ಮೇಲೂ ಕಾಣಿಸಿಕೊಳ್ಳಲಿದ್ದಾರೆ. ನಟ ಭಯಂಕರ ಮತ್ತು ದಿಲ್ ಪಸಂದ್ ಸಿನಿಮಾಗಳ ಸ್ಪೆಷಲ್ ಸಾಂಗ್ ಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ, ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.
ಕೋವಿಡ್ ವೇಳೆ ಸೇವೆ…
ಇನ್ನು ಕೋವಿಡ್ ವೇಳೆ ಸಾತ್ವಿಕ ಅವರು ತಮ್ಮ ಶೂಟಿಂಗ್ ಮನೆಗಳನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಿ, ರೋಗಿಗಳ ಗುಣಮುಖಕ್ಕೆ ಕಾರಣರಾಗಿದ್ದರು.
ಆಗ ಒಂದಷ್ಟು ಕೈಲಾದ ಸೇವೆ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಬಣ್ಣದ ಲೋಕದಲ್ಲಿ ಬಿಝಿ ಡಿಸೈನರ್ ಆಗಿದ್ದಾರೆ. ಅದೇನೆ ಇರಲಿ ಸಾತ್ವಿಕ ನಟನೆ, ನಿರ್ಮಾಣದ ಜೊತೆಯಲ್ಲಿ ಡಿಸೈನರ್ ಆಗಿಯೂ ಕೆಲಸ ಮಾಡುತ್ತಿರುವುದು ವಿಶೇಷ.
ಚಿತ್ರ: ದಾರಿ ಯಾವುದಯ್ಯ ವೈಕುಂಠಕೆ ನಿರ್ದೇಶನ: ಸಿದ್ದು ಪೂರ್ಣಚಂದ್ರ ನಿರ್ಮಾಣ: ಶರಣಪ್ಪ ಎಂ ಕೊಟಗಿ ತಾರಾಗಣ: ವರ್ಧನ್ ತೀರ್ಥಹಳ್ಳಿ, ಪೂಜಾ, ರಾಜ್ ಬಲವಾಡಿ, ಶೀಬಾ, ಸ್ಪಂದನ ಪ್ರಸಾದ್, ಸುಧಾ, ಪ್ರಣಯ ಮೂರ್ತಿ ಇತರರು.
‘ದೇಶದಲ್ಲಿ ಕಾಂಪಿಟೇಷನ್ ಇಲ್ಲದ ಜಾಗ ಅಂದ್ರೆ ಇದೆ…’ ತನ್ನ ಇಡೀ ಬದುಕನ್ನೇ ಆ ಸ್ಮಶಾನದಲ್ಲಿ ಕಳೆದು, ಹೆಣ ಸುಡುವ ಮತ್ತು ಗುಂಡಿ ತೋಡಿ ಮಣ್ಣು ಮಾಡುವ ಆ ಬಿಕ್ರ, ಈ ಡೈಲಾಗ್ ಹೇಳುವ ಹೊತ್ತಿಗೆ, ಆ ಕಥೆಯಲ್ಲಿ ಒಂದಷ್ಟು ಮೌಲ್ಯ ಸಂದೇಶ ಹರಡಿರುತ್ತೆ. ಸ್ಮಶಾನದಲ್ಲೇ ಇಡೀ ಸಿನಿಮಾ ಕಥೆ ಸಾಗುವುದರಿಂದ ಆ ಸ್ಮಶಾನ ಕೂಡ ಚಿತ್ರದ ಹೈಲೆಟ್. ಮನಸ್ಸಿಗೆ ಇಷ್ಟವಾಗುವ, ಆಗಾಗ ಎದೆ ಭಾರ ಎನಿಸುವ, ಅಲ್ಲಲ್ಲಿ ಮೌನವಾಗಿಸುವ, ಒಂದಷ್ಟು ಕಣ್ ಒದ್ದೆಯಾಗಿಸುವ ಎಮೋಷನಲ್ ಕಂಟೆಂಟ್ ಇಡೀ ಚಿತ್ರವನ್ನು ಮತ್ತಷ್ಟು ಅಪ್ಪಿ ಒಪ್ಪುವಂತೆ ಮಾಡಿದೆ.
ಒಂದೇ ಮಾತಲ್ಲಿ ಹೇಳುವುದಾದರೆ, ಇದೊಂದು ಬದುಕಿನ ಪಾಠ ಕಲಿಸುವ ಚಿತ್ರಣ. ಇಲ್ಲಿ ಪ್ರೀತಿ ಇದೆ, ಆಸೆ ಇದೆ, ದುರಾಸೆ ಇದೆ, ಮೋಸವಿದೆ, ದರೋಡೆ, ಕೊಲೆ,ಸುಲಿಗೆ ಎಲ್ಲಕ್ಕಿಂತಲೂ ಹೆಚ್ಚಾಗಿ ಭಾವನೆಗಳ ಸಮ್ಮಿಲನವಿದೆ. ಜಾತ್ಯಾತೀತ ಭಾವನೆಯೂ ತುಂಬಿದೆ. ಒಟ್ಟಾರೆ ಪರಿಪೂರ್ಣ ಪರಿವರ್ತನೆಯ ಕಥೆಯನ್ನು ಅಷ್ಟೇ ಮನಮುಟ್ಟುವಂತೆ ನಿರೂಪಿಸಿದ್ದಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ. ಕಥೆ ಸಿಂಪಲ್ ಆಗಿದ್ದರೂ, ಅದರ ಭಾವ ಸಾರ ಕಾಡುವಂತಿದೆ. ಬದುಕಿನ ಎಲ್ಲಾ ಮಜಲುಗಳ ಮೆಲುಕು ಹಾಕುವಂತಹ ಸನ್ನಿವೇಶಗಳೂ ಇಲ್ಲಿವೆ. ಹಾಗಾಗಿ ನೋಡುಗರಿಗೆ ವೈಕುಂಟ ದರ್ಶನ ಖುಷಿ ಕೊಡಿಸುತ್ತೆ. ನೋಡ ನೋಡುತ್ತಲೇ ನೋಡುಗರ ಮನದಲ್ಲಿ ಒಂದಷ್ಟು ವಿಷಾದ ಮೂಡಿಸುತ್ತೆ. ಮಾನವ ಸಂಬಂಧಗಳ ಮೌಲ್ಯ ಹಲವು ವಿಷಯಗಳಿಗೆ ಮುಖ್ಯವೆನಿಸುತ್ತೆ. ಇನ್ನು ಆ ಸ್ಮಶಾನ ಕಾಯುವ ಬಿಕ್ರನಿಗೆ ತನ್ನ ಕಾಯಕ ಕೈಲಾಸ ಕಂಡಷ್ಟೇ ಖುಷಿ. ಹೆತ್ತ ಮಗನನ್ನು ಕಳಕೊಂಡ ಬಿಕ್ರನ ಪತ್ನಿಯ ಮೂಕ ರೋಧನೆ, ಅವಳ ಮಗಳು ಪಲ್ಲುಳ ನಿಷ್ಕಲ್ಮಶ ಪ್ರೀತಿ, ದರೋಡೆಕೋರ ಸುಧಾಕರನ ಪಾಪ ಪ್ರಜ್ಞೆ ಇವೆಲ್ಲವೂ ನೈಜತೆಗೆ ಸಾಕ್ಷಿಯಂತಿವೆ.
ಆ ದಾರಿಯ ಕಥೆ ಏನು?
ಆ ಸ್ಮಶಾನದಲ್ಲಿ ಎಲ್ಲವೂ ಎದೆಭಾರ ಎನಿಸುವ ಕ್ಷಣಗಳು. ಬಿಕೋ ಎನ್ನುವ, ಭಯವೆನಿಸೋ ಸ್ಮಶಾನದಲ್ಲಿ ಬಿಕ್ರನ ಕುಟುಂಬದ ವಾಸ. ಅಲ್ಲಿಗೆ ಆಕಸ್ಮಿಕವಾಗಿ ಎಂಟ್ರಿ ಕೊಡೋ ಒಬ್ಬ ಕಳ್ಳ. ಅಲ್ಲೊಂದಷ್ಟು ಮನಪರಿವರ್ತನೆಯಾಗುವ ಅಂಶಗಳು ಕಾಣಸಿಗುತ್ತವೆ. ಮೃಗಿಯಂತಹ ಒಬ್ಬ ಕೊಲೆಗಾರ, ಕಳ್ಳ ಹೇಗೆ ಒಬ್ಬ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ಅನ್ನೋದೆ ಕಥೆ. ಈ ಮಧ್ಯೆ ಆ ಬಿಕ್ರನ ಮಗಳು ಪಲ್ಲು, ಮುಸ್ಲಿಂ ಯುವಕನೊಬ್ಬನ ಪ್ರೀತಿಗೆ ಮನಸೋತು ತನ್ನ ದೇಹವನ್ನೇ ಅರ್ಪಿಸಿ ಅವನ ಆಗಮನಕ್ಕಾಗಿ ಕಾಯುತ್ತ ದಿನ ಸವೆಸೋ ಮುಗ್ಧ ಹುಡುಗಿಯ ಮೂಕ ರೋಧನ ಅವಳಿಗಷ್ಟೇ ಗೊತ್ತು. ಇಲ್ಲಿ ಒಬ್ಬ ಕಳ್ಳನಿಗೂ ಕರುಣೆ ತೋರಿ ಅವನನ್ನು ಆರೈಕೆ ಮಾಡುವ ಬಿಕ್ರನ ಮಾನವೀಯ ಕಳಕಳಿ ಇಲ್ಲಿ ಮನಕಲಕುತ್ತದೆ. ಆಗಾಗ ಆ ದೃಶ್ಯ ಭಾವುಕತೆಗೂ ದೂಡುತ್ತದೆ. ಇಲ್ಲಿ ಕಳ್ಳನಾಗಿ ಬರುವ ಆ ಸುಧಾಕರನ ಮನಪರಿವರ್ತನೆಯಾಗುವ ಪರಿಯೇ ವಿಶೇಷ. ಅಂತಹ ಹಲವು ವಿಶೇಷತೆಗಳು ಇಲ್ಲಿವೆ.
ಕಲೆಯೇ ಜೀವಾಳ
ಇಲ್ಲಿ ಹೈಲೆಟ್ ಅಂದರೆ ಸ್ಮಶಾನದಲ್ಲಿ ಬಿಕ್ರನಾಗಿ ಕಾಣಿಸಿಕೊಂಡಿರುವ ರಾಜ್ ಬಲವಾಡಿ. ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರ ಡೈಲಾಗ್ ಡಿಲವರಿ, ಬಾಡಿ ಲಾಂಗ್ವೇಜ್ ಆಕರ್ಷಣೆ. ವರ್ಧನ್ ಕೂಡ ಇಲ್ಲಿ ಕಳ್ಳನಾಗಿ ಇಷ್ಟವಾಗುತ್ತಾರೆ. ಪೂಜಾ ಇಲ್ಲಿ ತಿಥಿಯ ಪಾತ್ರ ನೆನಪಿಸುತ್ತಾರೆ. ತೆರೆ ಮೇಲೆ ಇರುವಷ್ಟು ಕಾಲ ಗಮನ ಸೆಳೆಯುತ್ತಾರೆ. ಉಳಿದಂತೆ ತೆರೆ ಮೇಲೆ ಬರುವ ಪಾತ್ರಗಳೂ ಗಮನಸೆಳೆಯುತ್ತವೆ.
ಚಿತ್ರದಲ್ಲಿ ಸಂಗೀತ ವಿಶೇಷ ಪಾತ್ರ ವಹಿಸಿದೆ. ಲೋಕಿ ಅವರ ಎಫರ್ಟ್ ಎದ್ದು ಕಾಣುತ್ತೆ. ಉಳಿದಂತೆ ನಿತಿನ್ ಅಪ್ಪಿ ಕ್ಯಾಮೆರಾ ಕೈಚಳಕ ಕೂಡ ಇಲ್ಲಿ ಗಮನಸೆಳೆಯುತ್ತೆ.
ಕೊನೆ ಮಾತು: ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ.. ಅನ್ನುವ ಮಾತಂತೆ ಇಲ್ಲಿ ಯಾವುದೂ ಶಾಶ್ವತವಲ್ಲ ಅನ್ನೋ ಸಂದೇಶವಿದೆ. ಇಷ್ಟು ಹೇಳಿದ ಮೇಲೂ ಸಿನಿಮಾ ನೋಡದಿದ್ದರೆ ಹೇಗೆ? ಒಂದೊಮ್ಮೆ ವೈಕುಂಠದ ದಾರಿ ನೋಡಿ….
“ಸಿಪಾಯಿ” ಚಿತ್ರದ ಮೂಲಕ ಬಂದ ಸಿದ್ದಾರ್ಥ್ ಮಹೇಶ್ ಅಭಿನಯದ “ಗರುಡ” ಚಿತ್ರದ ಹಾಡು ಬಿಡುಗಡೆಯಾಗಿದೆ. ಶಾಸಕ ಅರವಿಂದ್ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್ , ನಟ ವಿನೋದ್ ಪ್ರಭಾಕರ್, ನಿರ್ದೇಶಕರಾದ ಮಹೇಶ್ ಬಾಬು, ಮಹೇಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ನೃತ್ಯ ನಿರ್ದೇಶಕನಾಗಿ ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದೀನಿ. ನಿರ್ದೇಶನ ಮಾಡುವ ಆಸೆಯಿತ್ತುm. ಅವಕಾಶ ಮಾಡಿಕೊಟ್ಟ ಸಿದ್ದಾರ್ಥ್ ಮಹೇಶ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಚಿತ್ರತಂಡಕ್ಕೆ ಧನ್ಯವಾದವೆಂದರು ನಿರ್ದೇಶಕ ಧನು ಕುಮಾರ್ .
ನಾನು ಹಾಗೂ ಧನು ಮಾಸ್ಟರ್ ಚರ್ಚೆ ಮಾಡಿ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡೆವು. ನಂತರ ನಿರ್ಮಾಪಕರಿಗಾಗಿ ಕಾಯುತ್ತಿದ್ದಾಗ, ನಮ್ಮ ತಂದೆ ರಾಜಾ ರೆಡ್ಡಿ ಅವರು ನಿರ್ಮಾಣ ಮಾಡಲು ಮುಂದಾದರು. ಅವರ ಸಹಾಯ ಮರೆಯಲು ಸಾಧ್ಯವಿಲ್ಲ. ಸಮೀಕ್ಷೆಯ ಪ್ರಕಾರ “ಗರುಡ” ಸಾವಿರಾರು ವರುಷ ಬದಕುವ ಪಕ್ಷಿ. ವಯಸ್ಸಾದ ಮೇಲೂ ತಾನೆ, ಮತ್ತೆ ಪುಟ್ಟಿದೇಳುವ ಪಕ್ಷಿ ಕೂಡ. ಹಾಗಾಗಿ ನಮ್ಮ ಸಿನಿಮಾಗೆ ಈ ಹೆಸರು ಸೂಕ್ತ ಅನಿಸಿತು. ಕಥೆ ಮಾಡುವಾಗಲೇ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ಅಭಿನಯಿಸಬೇಕೆಂದು ತೀರ್ಮಾನಮಾಡಿಕೊಂಡಿದ್ದೆವು. ಕಿಟ್ಟಪ್ಪ ಅಭಿನಯಿಸಲು ಒಪ್ಪಿದರು. ಐಂದ್ರಿತಾ, ಆಶಿಕಾ ರಂಗನಾಥ್, ರಂಗಾಯಣ ರಘು ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಂತ್ರಜ್ಞರ ಕೆಲಸವೂ ಉತ್ತಮವಾಗಿದೆ. ಇದೇ ಇಪ್ಪತ್ತರಂದು ತೆರೆಗೆ ಬರುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ಸಿದ್ದಾರ್ಥ್ ಮಹೇಶ್.
ಶೀನಗರ ಕಿಟ್ಟಿ, ಆಶಿಕಾ ರಂಗನಾಥ್, ಐಂದ್ರಿತಾ ರೆ, ರಂಗಾಯಣ ರಘು ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿ, ಸಿದ್ದಾರ್ಥ್ ಮಹೇಶ್ ಅವರಿಗೆ ಶುಭ ಕೋರಿದರು.
ಜೈ ಆನಂದ್ ಛಾಯಾಗ್ರಹಣದ ಬಗ್ಗೆ ಮಾತನಾಡಿದರು. ಹಾಡಗಳ ಹಾಗು ಹಾಡಿದವರ ಬಗ್ಗೆ ತಿಳಿಸಿದ ಸಂಗೀತ ನಿರ್ದೇಶಕ ರಘು ದೀಕ್ಷಿತ್, ತಾವು ಈ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು.
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಅಭಿನಯದ ” ಪ್ರಾರಂಭ ” ಚಿತ್ರ ಇದೇ ಇಪ್ಪತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮೂರು ವರ್ಷಗಳ ಹಿಂದೆ “ಪ್ರಾರಂಭ” ಶುರುವಾಯಿತು. ಎರಡು ವರ್ಷ ಕೋವಿಡ್ ನಿಂದ ವಿಳಂಬವಾಯಿತು. ಇದೇ ಇಪ್ಪತ್ತರಂದು ಬಿಡುಗಡೆಗೆ ದಿನಾಂಕ ನಿಗದಿಯಾಯಿತು. ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಮನು ಕಲ್ಯಾಡಿ.
ಇದು ನನ್ನ ಅಭಿನಯದ ನಾಲ್ಕನೇ ಚಿತ್ರ. ಪ್ರೀತಿ ಕೈ ಕೊಟ್ಡರೆ, ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಅದು ತಪ್ಪು. ನಮಗೂ ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ ಹೀಗೆ ಕುಟುಂಬ ಇರುತ್ತದೆ ಎಂಬುದನ್ನು ಯೋಚಿಸಿ ಮುನ್ನಡೆಯಬೇಕು. ಇಂತಹ ಕಥೆ “ಪ್ರಾರಂಭ” ದಲ್ಲಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನೋಡಿ ಹರಸಿ ಎನ್ನುತ್ತಾರೆ ನಾಯಕ ಮನುರಂಜನ್ ರವಿಚಂದ್ರನ್.
ನನ್ನ ಪಾತ್ರ ಚೆನ್ನಾಗಿದೆ. ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವುದಾಗಿ ನಾಯಕಿ ಕೀರ್ತಿ ಕಲ್ಕೇರಿ ತಿಳಿಸಿದರು.
ಇನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ಪ್ರಾರಂಭ” ಚಿತ್ರವನ್ನು ಬಿಡುಗಡೆ ಮಾಡುವುದಾಗಿ ವಿತರಕ ವೆಂಕಟ್ ತಿಳಿಸಿದರು.
ಸುಂದರಸ್ಥಳಗಳಲ್ಲಿ ಚಿತ್ರೀಕರಿಸಿರುವಿದಾಗಿ ಛಾಯಾಗ್ರಾಹಕ ಸುರೇಶ್ ಬಾಬು ಹೇಳಿದರು.
ಚಿತ್ರ ಇದೇ ಇಪ್ಪತ್ತರಂದು ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಜಗದೀಶ್ ಕಲ್ಯಾಡಿ .
ಅನೇಕ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು “ಪ್ರಾರಂಭ”ದ ಬಗ್ಗೆ ಮಾತನಾಡಿದರು.
“ಕನ್ನಡತಿ” ಧಾರಾವಾಹಿ ಮೂಲಕ ಹರ್ಷ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಕಿರಣ್ ರಾಜ್ ಅಭಿನಯದ “ಬಡ್ಡೀಸ್” ಚಿತ್ರ ಜೂನ್ 24 ರಂದು ಬಿಡುಗಡೆಯಾಗುತ್ತಿದೆ. ಕಿರಣ್ ರಾಜ್ ಅವರ ತಂದೆ, ತಾಯಿ ಹಾಗೂ ಅಭಿಮಾನಿ ಸಮರ್ಥ್ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದರು.
ಕಥೆ ಸಿದ್ದಮಾಡಿಕೊಂಡು, ನಿರ್ಮಾಪಕರ ಹುಡುಕಾಟದಲ್ಲಿದ್ದಾಗ, ಸ್ನೇಹಿತರ ಮೂಲಕ ದುಬೈ ನಿವಾಸಿ ಭಾರತಿ ಶೆಟ್ಟಿ ಅವರ ಪರಿಚಯವಾಯಿತು. ಕಥೆ ಮೆಚ್ಚಿದ ಅವರು ನಿರ್ಮಾಣಕ್ಕೆ ಮುಂದಾದರು. ಇದೊಂದು ಸ್ನೇಹದ ಮಹತ್ವ ಸಾರುವ ಚಿತ್ರ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಕಥಾಹಂದರ. “ಬಡ್ಡೀಸ್” ಎಂದರೆ ಕಾಲೇಜಿನಲ್ಲಿ ಈಗಿನ ಹುಡುಗರು ಸ್ನೇಹಿತರನ್ನು ಕರೆಯುವ ಪದ. ಕಿರಣ್ ರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಎಲ್ಲಾ ತಂದೆ ಸಾಮಾನ್ಯವಾಗಿ ಮಗನಿಗೆ ಕಾರು, ಬೈಕು ಮುಂತಾದವುಗಳನ್ನು ನೀಡುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಶ್ರೀಮಂತ ತಂದೆ, ಮಗನಿಗೆ ಸ್ನೇಹಿತರನ್ನೇ ಉಡುಗೊರೆ ನೀಡುತ್ತಾನೆ. ನಾಯಕ ಹಾಗೂ ಮೂವರು ಸ್ನೇಹಿತರ ಜೊತೆ ನಡೆಯುವ ಕಥಾಹಂದರವಿದು. ಪ್ರೇಮಕಥೆಯೊಂದಿಗೆ, ಸೆಂಟಿಮೆಂಟ್ ಸನ್ನಿವೇಶಗಳು ಸಹ ನಮ್ಮ ಚಿತ್ರದಲ್ಲಿ ನೋಡುಗರ ಮನಸ್ಸಿಗೆ ಹತ್ತಿರವಾಗಲಿದೆ. ಜೂನ್ 24 ರಂದು ಚಿತ್ರ ಬಿಡುಗಡೆಯಾಗಲಿದೆ ನೋಡಿ ಹಾರೈಸಿ ಎಂದರು ನಿರ್ದೇಶಕ ಗುರುತೇಜ್ ಶೆಟ್ಟಿ.
ನಾನು ಮೂಲತಃ ಬೆಂಗಳೂರಿನವಳು. ಕಳೆದ ಕೆಲವು ವರ್ಷಗಳಿಂದ ದುಬೈನಲ್ಲಿದ್ದೀನಿ. ಜಾಹೀರಾತು ಸಂಸ್ಥೆ ನಡೆಸುತ್ತಿದ್ದೇನೆ. ಚಿಕ್ಕಂದಿನಿಂದಲೇ ಸಿನಿಮಾ ಮಾಡಬೇಕೆಂಬ ಹಂಬಲ. ಅಪ್ಪ, ಅಮ್ಮ ರಾಜಕುಮಾರ್ ಮುಂತಾದವರ ಚಿತ್ರಗಳನ್ನು ನೋಡಿಕೊಂಡು ಬಂದು ಕಥೆ ಹೇಳುತ್ತಿದ್ದರು. ಆಗಿನಿಂದಲೂ ನನಗೆ ಸಿನಿಮಾ ಆಸಕ್ತಿ. ಗುರುತೇಜ್ ಶೆಟ್ಟಿ ಗೆಳೆಯರೊಬ್ಬರ ಮೂಲಕ ಪರಿಚಯವಾಗಿ, ಕಥೆ ಕಳುಹಿಸಿದ್ದರು. ಕಥೆ ಹಿಡಿಸಿತು. ಸಿನಿಮಾ ನಿರ್ಮಾಣಕ್ಕೆ ಮುಂದಾದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಾಯದಿಂದ ಚಿತ್ರ ಉತ್ತಮವಾಗಿ ಬಂದಿದೆ. ಮುಂದಿನ ತಿಂಗಳು 24 ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕಿ ಭಾರತಿ ಶೆಟ್ಟಿ.
ನಾನು ಈ ಹಿಂದೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ಆದರೆ ನನಗೆ ಹೆಸರು ತಂದುಕೊಟ್ಟದ್ದು “ಕನ್ನಡತಿ”. ಆನಂತರ ಒಳ್ಳೆಯ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿದ್ದ ನನಗೆ ಗುರುತೇಜ್ ಶೆಟ್ಟಿ ಅವರು ಹೇಳಿದ್ದ ಕಥೆ ಹಿಡಿಸಿತು. ಹಿಂದೆ “ಮಾರ್ಚ್ 22″ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ನಾಯಕನಾಗಿ ಇದು ಮೊದಲ ಚಿತ್ರ. ಸ್ನೇಹದ ಮಹತ್ವ ಸಾರುವ ಈ ಚಿತ್ರದಲ್ಲಿ ಮನೋರಂಜನೆಗೆ ಬೇಕಾದ ಎಲ್ಲಾ ಅಂಶಗಳು ಇದೆ. ನನ್ನ ಅಭಿಮಾನಿ ಸಮರ್ಥ್ ಮತ್ತು ನನ್ನ ತಂದೆ, ತಾಯಿ ಹಾಡು ಬಿಡುಗಡೆ ಮಾಡಿದ್ದು ಸಂತಸ ತಂದಿದೆ ಎಂದರು ನಾಯಕ ಕಿರಣ್ ರಾಜ್.
ತಮ್ಮ ಅಭಿನಯದ ಬಗ್ಗೆ ನಟ ಗೋಪಾಲ್ ದೇಶಪಾಂಡೆ ಮಾಹಿತಿ ನೀಡಿದರು. ಒಂದೇ ಟೇಕ್ ನಲ್ಲಿ ಈ ಚಿತ್ರದ ಹಾಡೊಂದರ ನೃತ್ಯ ನಿರ್ದೇಶನ ಮಾಡಿರುವುದಾಗಿ ನೃತ್ಯ ನಿರ್ದೇಶ ಧನಂಜಯ್ ತಿಳಿಸಿದರು.
ಜ್ಯೂಡಿ ಸ್ಯಾಂಡಿ ” ಬಡ್ಡೀಸ್ ” ಹಾಡುಗಳಿಗೆ ಸಂಗೀತ ನೀಡಿದ್ದು, ಯು ಎಸ್ ಎ ನಿವಾಸಿ ನಿಭಾ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಅದರ ರಿಲೀಸ್ ಡೇಟ್ ಟೀಸರ್ ಬಿಡುಗಡೆಯಾದ ನಂತರ, ಪ್ರೇಕ್ಷಕರು ಮತ್ತು ವಿಮರ್ಶಕರು ಜುಲೈ 28 ರಂದು ಪ್ರಪಂಚದಾದ್ಯಂತದ ರಿಲೀಸ್ ಆಗುವ ಬಗ್ಗೆ ಅದ್ಭುತ ಪ್ರತಿಕ್ರಿಯೆ ನೀಡಿದ್ದಾರೆ ಮತ್ತು ಸಿನಿಪ್ರಿಯರು ಉತ್ಸುಕರಾಗಿದ್ದರು.
ಈ ವೈಭವವನ್ನು ಹೆಚ್ಚಿಸಲು, ‘ ವಿಕ್ರಾಂತ್ ರೋಣ ‘ ಚಿತ್ರವನ್ನು ಈಗ ಉತ್ತರ ಭಾರತದಲ್ಲಿ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆ SKF ಪ್ರಸ್ತುತಪಡಿಸುತ್ತದೆ. ನಿರ್ದೇಶಕ ಅನುಪ್ ಭಂಡಾರಿಯವರ ಅದ್ಭುತ ದೃಷ್ಟಿಕೋನದಲ್ಲಿ ತೆಗೆದಿರುವ ಈ ಚಿತ್ರವು ಜನರಿಗೆ ಆಸನದ ಅಂಚಿನ ಅನುಭವವನ್ನು ಕೊಡಲು ಸಜ್ಜಾಗಿದೆ.
ಪ್ಯಾನ್ ವರ್ಲ್ಡ್ 3D ಚಿತ್ರವು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್, ಇಂಗ್ಲಿಷ್, ಇತ್ಯಾದಿಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಅನುಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ 3D ನಲ್ಲಿ ಬಿಡುಗಡೆಯಾಗಲಿದೆ, ಇದರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಝೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದ್ದು, ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡುತ್ತಿದ್ದಾರೆ.
ಶ್ವೇತಾ ಶೆಟ್ಟಿ (ಆರ‍್ನಾ ಸಾಧ್ಯ)ಅವರ ನಿರ್ದೇಶನದ, ಸಾರಾ ಅಬೂಬಕ್ಕರ್ ಬರೆದ ಕಾದಂಬರಿ ಆಧಾರಿತ ಚಿತ್ರ “ಸಾರಾ ವಜ್ರ” ಈ ಶುಕ್ರವಾರ ತೆರೆಕಾಣುತ್ತಿದೆ
ಚಿತ್ರದ ಕಥೆ 19890ರಿಂದ ಆರಂಭವಾಗಿ ಪ್ರಸ್ತುತ ಕಾಲಘಟ್ಟದವರೆಗೆ ಬಂದು ನಿಲ್ಲುತ್ತದೆ. ತ್ರಿವಳಿ ತಲಾಖ್ ಪರಿಣಾಮವಾಗಿ ಹೆಣ್ಣು ಮಗಳೊಬ್ಬಳು ಅನುಭವಿಸುವ ಕಷ್ಟ, ನೋವುಗಳ ಚಿತ್ರಣವಿದು. ನಾಯಕಿ ಅನು ಪ್ರಭಾಕರ್ ಬ್ಯಾರಿ ಸಮಾಜದ ಹೆಣ್ಣುಮಗಳಾಗಿ ನಟಿಸಿದ್ದಾರೆ. 20ನೇ ವಯಸ್ಸಿನಿಂದ 60 ವರ್ಷದ ಮಹಿಳೆಯಾಗಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ಮಾಪಕ ದೇವೇಂದ್ರರೆಡ್ಡಿ, ನಿರ್ದೇಶಕರು ಬಂದು ಈ ಕಾದಂಬರಿ ಬಗ್ಗೆ ಹೇಳಿದರು. ನಾನು ಮೊದಲು ಒಪ್ಪಲಿಲ್ಲ. ಮತ್ತೆ ಬಂದು ಕೇಳಿದಾಗ, ಅನು ಪ್ರಭಾಕರ್ ಅವರು ನಾಯಕಿ ಅಂದಮೇಲೆ ಒಪ್ಪಿದೆ. ಬಡ ಕುಟುಂಬದ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟದ ಕಥೆಯಿದು ಎಂದು ಹೇಳಿದರು.
ನಂತರ ಚಿತ್ರಕ್ಕೆ ಸಾಹಿತ್ಯ ರಚಿಸಿದ ಪತ್ರಕರ್ತ ಬಿಎಂ ಹನೀಫ್ ಅವರು, 40 ವರ್ಷಗಳ ಹಿಂದಿನ ಕಥೆ ಆದರೂ ಈಗಲೂ ಅನ್ವಯವಾಗುತ್ತದೆ. ಬೇರೆ ಸಮುದಾಯದ ಹೆಣ್ಣು ಮಕ್ಕಳು ಏನು ತೊಂದರೆ ಅನುಭವಿಸುತ್ತಿದ್ದಾರೆಂದು ಈ ಚಿತ್ರದಲ್ಲಿ ಹೇಳಲಾಗಿದೆ. ಅನು ಪ್ರಭಾಕರ್, ಸುಹಾನಾ ಸಯ್ಯದ್, ರೆಹಮಾನ್ ನೈಜವಾಗಿ ಅಭಿನಯಿಸಿದ್ದಾರೆ ಎಂದರು.
ನಾಯಕಿ ಅನು ಪ್ರಭಾಕರ ನಫೀಜಾ ಎಂಬ ಮಹಿಳೆಯ ಕಥೆಯಿದು. ಈ ಥರದ ಸಿನಿಮಾಗಳನ್ನು ಅವಾರ್ಡ್, ಫಿಲಂ ಫೆಸ್ಟಿವಲ್‌ಗಳಿಗೆ ಮಾಡುತ್ತಾರೆ, ಆದರೆ ನಿರ್ಮಾಪಕರು ಕಮರ್ಷಿಯಲ್ ಆಗಿ ಥಿಯೇಟರ್ ಗಳಲ್ಲೇ ರಿಲೀಸ್ ಮಾಡುತ್ತಿದ್ದಾರೆ, ಎಲ್ಲಾ ಹೆಣ್ಣು ಮಕ್ಕಳಿಗೂ ನಾಟುವಂಥ ಯೂನಿವರ್ಸಲ್ ಸಿನಿಮಾ. ಈ ಚಿತ್ರದಿಂದ ಹತ್ತು ಹೆಣ್ಣು ಮಕ್ಕಳಿಗಾದ್ರೂ ಧೈರ್ಯ ಬರಲಿ ಅನ್ನೋದೇ ನಮ್ಮ ಆಶಯ. ಸಿನಿಮಾ ನೋಡಿ ಹೊರ ಬಂದಮೇಲೆ ಒಂದು ನಗು ಇರುತ್ತದೆ. ಮಹಿಳೆ ಬರೆದ ಮಹಿಳಾ ಪ್ರದಾನ ಕಥೆ, ನಿರ್ದೇಶನವನ್ನೂ ಮಹಿಳೆಯೇ ಮಾಡಿರುವುದು ವಿಶೇಷ.
ಪುನೀತ್ ಅವರು ನಮ್ಮ ಚಿತ್ರಕ್ಕೆ ತುಂಬಾ ಸಪೋರ್ಟ್ ಮಾಡಿದ್ದರು. ಕಾಸರಗೋಡು ಕೇರಳದಲ್ಲಿ ಬ್ಯಾರಿ ಸಮುದಾಯ ವಾಸವಿರುವ ಜಾಗದಲ್ಲೇ ಚಿತ್ರೀಕರಣ ಮಾಡಿದ್ದೇವೆ. ಅವರು ಕನ್ನಡ, ಬ್ಯಾರಿ ಮಿಕ್ಸ್ ಮಾಡಿ ಮಾತಾಡ್ತಾರೆ. ನಫೀಜಾಗೆ ಚಿಕ್ಕ ವಯಸಿನಲ್ಲೇ ಮದುವೆಯಾಗಿ 60 ವರ್ಷದವವಳಾಗುವವರೆಗೆ ಕಥೆ ಸಾಗುತ್ತದೆ ಎಂದು ಹೇಳಿದರು.
ಗಾಯಕಿ ಸುಹಾನಾ ಇಲ್ಲಿ ನಾಯಕಿಯ ಸ್ನೇಹಿತೆಯಾಗಿ ನಟಿಸಿದ್ದಾರೆ. ರೆಹಮಾನ್ ಹಾಸನ್ ಗಂಡನಾಗಿ, ಸುಧಾ ಬೆಳವಾಡಿ, ರಮೇಶ್ `ಭಟ್ ತಂದೆ, ತಾಯಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕತೆ-ಸಂಭಾಷಣೆಯನ್ನು ನರೇಂದ್ರಬಾಬು ರಚಿಸಿದ್ದಾರೆ. ಛಾಯಾಗ್ರಹಣ ಪರಮೇಶ್.ಸಿ.ಎಂ, ನೃತ್ಯ ಮದನ್-ಹರಿಣಿ ಅವರದಾಗಿದೆ. ಸಂಭ್ರಮ ಡ್ರೀಮ್ ಹೌಸ್ ಮತ್ತು ಎಂ.ದೇವೇಂದ್ರ ರೆಡ್ಡಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನರಾಗಿದ್ದಾರೆ. ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಸರು ಸಂಪಾದಿಸಿದ್ದ ಅವರು ತಮ್ಮ ಪುತ್ರ ಸಂತೋಷ್ ನನ್ನು ಹೀರೋ ಮಾಡುವ ಸಲುವಾಗಿ ಅನೇಕ ಹೊಸ ನಿರ್ದೇಶಕರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಅವರಿಲ್ಲ ಎಂಬ ಮಾತು ಕೇಳಿದ ಅದೆಷ್ಟೋ ಕಲಾವಿದರು, ನಿರ್ದೇಶಕರು ನಿರ್ಮಾಪಕರು ಅಷ್ಟೆ ಯಾಕೆ ಪತ್ರಕರ್ತರು ಕೂಡ ಹಳೆಯ ದಿನಗಳನ್ನು ಮೆಲುಕು ಹಾಕಿದ್ದು ನಿಜ. ಅವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ನಿರ್ಮಾಣದ ಸಿನಿಮಾಗಳಿವೆ. ಬಿಟ್ಟು ಹೋದ ನೆನಪುಗಳಿವೆ. ಆ ಕುರಿತು ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಬರಹ ರೂಪದಲ್ಲಿ ನೆನಪಿಸಿಕೊಂಡಿದ್ದಾರೆ…
ಓವರ್ ಟು ಚಕ್ರವರ್ತಿ ಚಂದ್ರಚೂಡ…
ಆನೇಕಲ್ ಬಾಲಣ್ಣ …. ಅದೊಂದು ನಂಬರ್ ಗೆ ಕರೆ ಮಾಡಿದರೆ ಸಾಕು ಕುತ್ತಿಗೆ ತನಕ ಏನೇ ಬಂದಿದ್ರೂ ಚಕ್ರಿ ಫೋರ್ತ್ ಬ್ಲಾಕ್ ಬಾ ಅನ್ನುವ ಜೀವ.,. ನಾಲ್ಕು ಮಂದಿ ಪತ್ರಕರ್ತರು ಬಾಲಣ್ಣನಿಗೆ ಯಾವುದೇ ಕಾರಣಕ್ಕೂ ಚಕ್ರವರ್ತಿ ಎಂಬ ಚಂದ್ರಚೂಡ್ ಗೆ ಸಿನಿಮಾ ಕೊಡಬಾರದು ಡೈರೆಕ್ಟರ್ ಆಗಿಬಿಡ್ತಾನಾ ಅಂತ ತಿದಿ ಒತ್ತಿಕೊಂಡು ಕುಳಿತಿದ್ದರೂ – ನಂಗೊತ್ತು ಚಕ್ರಿ ಯಾರತ್ರನೂ ಸಹಾಯಕನ ಕೆಲಸನೂ ಮಾಡಿಲ್ಲ.ಯಾವ ಸಿನಿಮಾದಲ್ಲೂ ಕೆಲಸ ಮಾಡಿಲ್ಲ.ಆದರೆ ಮಾತು ಕೊಟ್ಟಿದೀನಿ ಸಿನಿಮಾ ಕೊಡ್ತೀನಿ ರಾಜಕುಮಾರರು ತೀರ್ಕೊಂಡ ಒಂದೇವಾರಕ್ಕೆ ಎಂತ ಕಥೆ ಹೇಳಿದಾನೆ ಅಂತ ಆ ನಾಕು ಮಂದಿ ಪತ್ರಕರ್ತರಿಗೆ ಗುಂಡುಹೊಡೆದಂತೆ ಮಾತಾಡಿ ಗುಂಡು ಹೊಡೆಸಿ ಹೇಳಿ ಕಳಿಸಿದ್ಥರು.( ಈಗೀ ಪತ್ರಕರ್ತರು ನನಗೆ ಪರಮಾಪ್ತರು) 3ಸಿ ಕ್ಯಾಮರಾ ನೆಗೆಟಿವ್ ಕಾಲವದು ಅದ್ಧೂರಿ ಕಾರ್ಯಕ್ರಮಗಳು ಚೆನ್ಯೈಲಿ ನಡೆವ ಕಥೆ ಅವರ ಮಗ ಸಂತೋಷ್ ಹೀರೋ …
ಸಿತಾರಾ ಪೊನ್ನಾಂಬಲಂ ತಲೈವಾಸಲ್ ವಿಜಯ್ ಅನುರಾಧ ಬುಲೆಟ್ ಪ್ರಕಾಶ್ ಶಕೀಲಾ ಮುಂತಾದವರ ತಾರಾಗಣದ ಸಿನಿಮಾ ಅದು ಜನ್ಮ.ಕನ್ನಡ ತಮಿಳು ಎರಡು ಭಾಶೆಗಳಲ್ಲಿ ಚಿತ್ರೀಕರಿಸಿದ್ದೆ. ಬಾಲಣ್ಣನದೊಂದೇ ಸಮಸ್ಯೆ ಬೇರೆ ನಿರ್ಮಾಪಕರ ಥರ ಬೇಗ ಬೇಗ ಸಿನಿಮಾ ಮುಗಿಸಲ್ಲ .ಒಂದು ಸಿನಿಮಾ ಅಂದರೆ ಗರಿಷ್ಠ ನಾಕು ವರುಶ .ಉದಯ ಟೀವಿಗೆ ಸಿನಿಮಾ ಸೇಲಾಯ್ತು ಬಿಡುಗಡೆಯೂ ಆಗಿ ನಾಕುವಾರ ದ ಕಲೆಕ್ಷನ್ನು…. ಈಗಿನ sunext ಆಗಿನ ಉದಯ ಟೀವಿಯವರು ಜಯಲಲಿತಾ ಹೋಲುವ ಅನುರಾಧ ಪಾತ್ರ ಮತ್ತು ಕರುಣಾನಿಧಿ ಹೋಲುವ ಪೊನ್ನಾಂಬಲಂ ನ ಮೂರು ದೃಶ್ಯಗಳು .ನಾಯಕ ಗಾಜನೂರಿನಿಂದ ರಜನೀಕಾಂತ್ ರ ಚೆನ್ನೈನ ಮನೆಗೆ ಹೋಗುವ ದೃಶ್ಯಗಳ ತೆಗೆಯಿರಿ ಅಂದರು. ಉದಯದ ಮಾಲೀಕರಿಗೆ ಆಪ್ತರಾಗಿದ್ದ ಬಾಲಣ್ಣ ಚಕ್ರಿ ತೆಗಿತೀಯ ಅಂದರು ಬಾಲಣ್ಣ ಸಿನಿಮಾದ ಆತ್ಮವೇ ಹೋಗುತ್ತೆ ಅಣ್ಣಾವ್ರ ಸಾವಿನ ದಿನ,ನಡೆಯುವ ಘಟನೆಗಳಿಗೆ ಲಿಂಕಿರಲ್ಲ ಅಂದುಬಿಟ್ಟೆ.
ಸೀದಾ ಸೆಲ್ವಂ ರಿಗೆ ಫೋನು ಮಾಡಿ ನಮ್ ಡೈರೆಕ್ಟರ್ ಬೇಡ ಅಂತಿದಾನೆ.ಜನ್ಮದ ವ್ಯವಹಾರ ನಾ ಬೇರೆ ಥರ ಮಾಡ್ತೀನಿ ಬಿಡಿ ಅಂದು ಬಿಟ್ಟರು .ಬಹುತೇಕ ಸಿನಿಮಾಗೆ ಹಾಕಿದ ಹಣನೇ ಕೊಡ್ತೀನಿ ಅಂದರೂ ಬೇಡ ಅನ್ನುವ ನಿರ್ಮಾಪಕ ಅವರು. ಅದಾದ ಮೇಲೆ ನೀ ಯಾವಾಗ ಡೈರಕ್ಟ್ ಮಾಡ್ತೀಯ ಹೇಳು ಆಗ ಬಾ ಕಥೆನೂ ಹೇಳಬೇಡ ಸಿನಿಮಾ ಶುರುಮಾಡೋಣ ಅನ್ನುತ್ತಿದ್ದರು.
ತುಂಬಿದ ಪತ್ರಿಕಾಗೋಷ್ಠಿಯಲಿ ಸೋತರೆ ನಾನು ಹೊಣೆ ಗೆದ್ದರೆ ಚಕ್ರಿ ಹೊಣೆ ಅಂತ ಘೋಷಿಸಿದ್ದು ಪತ್ರಿಕೆಗಳ ತಲೆ ಬರಹ .ಜನ್ಮ ಟೈಟಲ್ ಟ್ರಾಕ್ ಹಾಡಿನ ಅಷ್ಟೂ ಸಾಹಿತ್ಯ ವಿಜಯಕರ್ನಾಟಕ ಪತ್ರಿಕೆಯಲ್ಲಿ ದೇವಶೆಟ್ಟಿ ಮಹೇಶ್ ಅವರ ಪ್ರೀತಿಗೆ ಅಚ್ಚಾಗಿತ್ತು. “ನಿನ್ನ ತಲೇನಾ ನಿನಗೋಸ್ಕರ ಬಳಸಿಕೋ ಒಂದು ರೌಂಡ್ ಬರ್ತೀಯ “ಅನ್ನುತ್ತಿದ್ದ ಬಾಲಣ್ಣ ಬೆಳಗಿನ ಜಾವದ ವಾಕಿಂಗ್ ಮುಗಿಸಿ ಬರುವಾಗ ಬೈಕೊಂದು ಗುದ್ದಿದ ಅಪಘಾತದಲಿ ಅಸುನೀಗಿದ್ದಾರೆ.ಅವರಿಲ್ಲದಿರುತ್ತಿದ್ದರೆ ನಾನು ಪತ್ರಕರ್ತನಾಗಿಯೇ ಉಳಿದುಬಿಡುತ್ತಿದ್ದೆ . ಬಾಲಣ್ಣ ತುಂಬಾ ಜನರಿಗೆ ಮೆಟ್ಟಿಲಾದ ನಿರ್ಮಾಪಕ. ಹೋಗಿಬನ್ನಿ… ನಮಸ್ಕಾರಗಳು…