‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಚಿತ್ರದ ಟೈಟಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಗೊಳಿಸುವ ಮೂಲಕ ನಿರ್ದೇಶಕ ಸಡಗರ ರಾಘವೇಂದ್ರ ತಮ್ಮ ಮೊದಲನೆಯ ನಿರ್ದೇಶನದ ಸಡಗರಕ್ಕೆ ಗೆಳೆಯ ರೀಷಬ್ ಶೆಟ್ಟಿ ಸಾಥ್ ನೀಡಿದ್ದಾರೆ.
ಈಗಾಗಲೇ ಸುದ್ಧಿಯಾಗಿರುವ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಚಿತ್ರದ ಟೈಟಲ್ ಬಿಡುಗಡೆಯ ವಿಚಾರದಲ್ಲಿ ಮೊದಲಿನಿಂದಲೂ ಕುತೂಹಲ ಹುಟ್ಟಿಸಿದ್ದ ಚಿತ್ರ ತಂಡ ಕೊನೆಗೂ ನಾಯಕ ಕವೀಶ್ ಶೆಟ್ಟಿ ಹುಟ್ಟುಹಬ್ಬದ ಉಡುಗೊರೆಯಾಗಿ ಪ್ಯಾನ್ ಇಂಡಿಯಾ ಮಟ್ಟದ ಆಕರ್ಷಕ ಟೈಟಲ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಇನ್ನಷ್ಟೂ ಕುತೂಹಲ ಮೂಡಿಸಿದೆ.
‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಟೈಟಲ್ನಲ್ಲಿಯೇ ಇದೊಂದು ದೊಡ್ಡ ಮಟ್ಟದ ಆಕ್ಷನ್ ಪ್ಯಾಕೇಜ್ ಸಿನಿಮಾ ಎನ್ನುವುದನ್ನು ರುಜು ಮಾಡಿದೆ. ಹಾಲಿವುಡ್ ಶೈಲಿಯ ಪೋಸ್ಟರ್ನಲ್ಲಿರುವ ನಾಯಕ ಕವೀಶ್ ಶೆಟ್ಟಿ ಖದರ್ರು ಅದಕ್ಕೆ ಪುಷ್ಟಿ ನೀಡಿದೆ.
ನುರಿತ ತಾಂತ್ರಿಕ ವರ್ಗ ಹಾಗೂ ಕನ್ನಡ, ಮರಾಠಿ ಮತ್ತು ಬಹುಭಾಷಾ ಕಲಾವಿದರನ್ನು ಹೊಂದಿರುವ ಲಂಡನ್ ಕೆಫೆಯ ಗುಟ್ಟು ಬಿಟ್ಟು ಕೊಡದ ನಿರ್ದೇಶಕ ಸಡಗರ ರಾಘವೇಂದ್ರ ಹೆಸರಿಗೆ ತಕ್ಕಂತೆ ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ನಿರಾಸೆಗೊಳಿಸುವುದಿಲ್ಲ ಎನ್ನುತ್ತಾ ಚಿತ್ರದ ಟೈಟಲ್ ಬಿಡುಗಡೆಗೆ ಸಹಕರಿಸಿದ ಗೆಳೆಯ ರೀಷಬ್ ಶೆಟ್ಟಿಗೆ ಈ ಮೂಲಕ ಕೃತಜ್ಞತೆಯನ್ನು ಸೂಚಿಸಿದ್ದಾರೆ.
ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ ಮತ್ತು ಮರಾಠಿಯ ಹೆಸರಾಂತ ಡ್ರೀಮರ್ಸ್ ಪ್ರೊಡಕ್ಷನ್ ದೀಪಕ್ ರಾಣೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು. ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ.
ಕನ್ನಡದ ಮತ್ತೊಂದು ಚಿತ್ರ ಕರ್ನಾಟಕದ ಗಡಿ ಭಾಷೆಯನ್ನು ಮೀರಿ ಯಶಸ್ಸಿನ ಹಾದಿಯಲ್ಲಿ ಸಾಗಲಿ!
ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ‘ತ್ರಿವಿಕ್ರಮ’ ಶೂಟಿಂಗ್ ಮುಗಿದಿದೆ. ಇತ್ತೀಚೆಗೆ ಹಾಡಿನ ಚಿತ್ರೀಕರಣ ನಡೆಸಿರುವ ‘ತ್ರಿವಿಕ್ರಮ’ ತಂಡ, ಬಳಿಕ ಕುಂಬಳಕಾಯಿ ಒಡೆದಿದೆ. ಜೂನ್ 24ರಂದು ರಾಜ್ಯಾದ್ಯಂತ ‘ತ್ರಿವಿಕ್ರಮ’ ದರ್ಶನವಾಗಲಿದೆ.
ಯೋಗರಾಜ್ ಭಟ್ ಸಾಹಿತ್ಯ ರಚಿಸಿರುವ ‘ಶಕುಂತಲಾ ಶೇಕ್ ಎ ಬಾಡಿ ಪ್ಲೀಸ್…’ ಎಂಬ ಹಾಡನ್ನು ಮೋಹನ್ ಬಿ ಕೆರೆ ಸ್ಟೂಡಿಯೋದಲ್ಲಿ ಹಾಕಲಾಗಿದ್ದ ಬೃಹತ್ ಸೆಟ್ ಹಾಗೂ ಕಲರ್ ಕಲರ್ ಕಾಸ್ಟ್ಯೂಮ್’ಗಳಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಅರ್ಜುನ್ ಜನ್ಯ ಸಂಗೀತವಿರುವ ಈ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿಕ್ಕಿ ಹಾಗೂ ಆಕಾಂಕ್ಷಾ ಶರ್ಮಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಟ್ಟಾರೆ ನೂರಕ್ಕೂ ಅಧಿಕ ದಿನಗಳ ಕಾಲ ಶೂಟಿಂಗ್ ನಡೆಸಿರುವ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ರೋಸ್, ಮಾಸ್ ಲೀಡರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾ ಮೂರ್ತಿ ‘ತ್ರಿವಿಕ್ರಮ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಪ್ಲೀಸ್ ಮಮ್ಮಿ’ ಹಾಡು ಮಿಲಿಯನ್’ಗಟ್ಟಲೆ ಹಿಟ್ಸ್ ದಾಖಲಿಸಿ, ಟ್ರೆಂಡಿಂಗ್’ನಲ್ಲಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ಈ ಹಾಡಿಗೆ ವಿಜಯಪ್ರಕಾಶ್ ಹಾಡಿದ್ದಾರೆ.
ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ.
ಕನ್ನಡದಲ್ಲಿ ಮೈಲಾರಿ ಅನ್ನೋ ಪದಕ್ಕೆ ವಿಶೇಷ ಸ್ಥಾನವಿದೆ. ಈ ಮೈಲಾರಿ ಅಮನದಾಕ್ಷಣ ತಕ್ಷಣ ನೆನಪಾಗೋದೆ ಡಾ.ರಾಜಕುಮಾರ್ ಅವರ ‘ ಬಂಗಾರದ ಪಂಜರ’ ಚಿತ್ರದಲ್ಲಿ ಅವರು ಕೂಗಿ ಹೇಳೋ ‘ಮೈಲಾರಿ…’ ಎಂಬ ಡೈಲಾಗ್. ಇನ್ನು, ಈ ಮೈಲಾರಿಯ ನಂಟು ಶಿವರಾಜಕುಮಾರ್ ಅವರಿಗೂ ಅಂಟಿಕೊಂಡಿದ್ದು ಗೊತ್ತೇ ಇದೆ. ಮೈಲಾರಿ ಸಿನಿಮಾ ಮೂಲಕ ಶಿವಣ್ಣ ಮತ್ತೆ ಜೋರು ಸುದ್ದಿಯಾದರು. ಇಷ್ಟಕ್ಕೂ ಈ ಮೈಲಾರಿ ಬಗ್ಗೆ ಇಷ್ಟೊಂದು ಪೀಠಿಕೆಗೆ ಕಾರಣ, ಮತ್ತದೇ ಮೈಲಾರಿ! ಹೌದು, ಈಗ ಮೈಲಾರ ಲಿಂಗೇಶ್ವರನ ಭಕ್ತರಾಗಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ. ಅದೇ ಈ ಹೊತ್ತಿನ ಸುದ್ದಿ. ಸಂಚಾರಿ ವಿಜಯ್ ನಮ್ಮಿಂದ ದೂರವಾಗಿ ವರ್ಷ ಸಮೀಪಿಸುತ್ತಿದೆ. ಆದರೆ, ಅವರಿಲ್ಲ ಎಂಬ ಭಾವ ಯಾರಲ್ಲೂ ಇಲ್ಲ. ಅವರ ಅದ್ಭುತ ಸಿನಿಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರು ನಟಿಸಿ ಕೊನೆಯ ವಿಡಿಯೋ ಆಲ್ಬಂ ಸಾಂಗ್ ಇದೀಗ ರಿಲೀಸ್ ಗೆ ರೆಡಿಯಾಗಿದೆ. ಅದರ ಹೆಸರು ‘ಮೈಲಾರ’. ಇದೊಂದು ಭಕ್ತಿಪೂರ್ವಕ ಹಾಡು. ಜಾನಪದ ಭಾವಗುಚ್ಛ ಇದರ ಹೈಲೆಟ್. ಅಂಥದ್ದೊಂದು ಆಲ್ಬಂ ಸಾಂಗ್ ಕುರಿತು ಒಂದು ವರದಿ…
ಕನ್ನಡದಲ್ಲಿ ಈಗಾಗಲೇ ಅನೇಕ ಭಕ್ತಿಪ್ರಧಾನ, ಜಾನಪದ ಹಿನ್ನೆಲೆಯ ಹಾಡುಗಳು ಬಂದಿವೆ. ಆ ಸಾಲಿಗೆ ‘ಮೈಲಾರ’ ಹಾಡು ಸೇರಿದೆ. ಪ್ರದೀಪ್ ಚಂದ್ರ ಈ ಹಾಡು ಹುಟ್ಟಿಗೆ ಕಾರಣರಾದರೆ, ಸುಂದರ ಆಲ್ಬಂ ಆಗೋಕೆ ಕಾರಣ ಡಾ. ರಾಜಶೇಖರ್ . ಇನ್ನು ಇಂಥದ್ದೊಂದು ಹಾಡನ್ನು ಅಷ್ಟೇ ಅದ್ಭುತವಾಗಿ ಕಲ್ಪನೆಯಂತೆ ಮೂಡಿಬರಲು ಕಾರಣ ನಿರ್ದೇಶಕ ಹುಡುಗಾಟ ಸಂಜಯ್. ಈ ಹಾಡಿನ ಹಿಂದೆ ನೂರಾರು ಜನರ ಹಗಲಿರುಳು ಶ್ರಮವಿದೆ. ಇಷ್ಟಕ್ಕೂ ಈ ಹಾಡು ಮಾಡಿದ್ದು ಯಾಕೆ, ಹೇಗೆ, ಎಲ್ಲಿ ಎಂಬಿತ್ಯಾದಿ ಕುರಿತು ಸಂಗೀತ ನಿರ್ದೇಶಕ, ಗಾಯಕ ಮತ್ತು ಗೀತೆರಚನೆಕಾರ ಪ್ರದೀಪ್ ಚಂದ್ರ ಸಿನಿಲಹರಿ ಜೊತೆ ಹಂಚಿಕೊಂಡಿದ್ದಾರೆ.
ಓವರ್ ಟು ಪ್ರದೀಪ್ ಚಂದ್ರ…
‘ಮೈಲಾರ’ ಇದು ನನ್ನ ಕನಸಿನ ಆಲ್ಬಂ ಸಾಂಗ್. ಜಾನಪದ ಹಿನ್ನಲೆಯ ಹಾಡು ಕಟ್ಟಬೇಕೆಂಬ ನನ್ನ ಆಸೆ ಇದರ ಮೂಲಕ ಈಡೇರಿದೆ. ಮೈಸೂರು ಕಡೆ ಮಲೆ ಮಹದೇಶ್ವರ ಸ್ವಾಮಿ ಪ್ರಸಿದ್ಧಿ. ಅದರ ಮೇಲೆ ಸಾಕಷ್ಟು ಹಾಡು ಬಂದಿದೆ. ನಮ್ಮ ಈ ಭಾಗದಲ್ಲಿ ಮೈಲಾರ ಲಿಂಗೇಶ್ವರ ಪ್ರಸಿದ್ಧಿ. ಹಾಗಾಗಿ ಯಾಕೆ ಮೈಲಾರ ಸ್ವಾಮಿ ಮೇಲೆ ಹಾಡು ಮಾಡಬಾರದು ಅಂತ ನಿರ್ಧರಿಸಿದೆ.
ವಿಜಯ್ ಪ್ರಕಾಶ್, ಪ್ರದೀಪ್, ಸಂಜಯ್
ಅದಕ್ಕೆ ಕಾರಣ ಅಲ್ಲಿ ನಡೆಯುವ ದೊಡ್ಡ ಜಾತ್ತೆ, ಅಲ್ಲಿನ ಕಲ್ಚರ್, ಗೊರಪ್ಪಗಳು, ಅಲ್ಲಿನ ಪವಾಡ, ಭವಿಷ್ಯ ನುಡಿಯುವ ಕಾರ್ಣಿಕ ಲಕ್ಷಾಂತರ ಭಕ್ತರು ಇವೆಲ್ಲವೂ ಅದರ ಹೈಲೆಟ್. ಹಾಗಾಗಿ ಹಾಡು ಮಾಡಲು ಮುಂದಾದೆ. ನಿರ್ದೇಶಕ ಸಂಜಯ್ ಅವರು ಹಾಡನ್ನು ಚಿತ್ರೀಕರಿಸಬೇಕೆಂದಾಗ ಒಂದಷ್ಟು ಸಲಹೆ ನೀಡಿ, ಚಂದದ ಹಾಡಾಗಲು ಕಾರಣರಾದರು.
ನಮ್ಮ ಕನಸಿಗೆ ಬಣ್ಣ ತುಂಬಿದ್ದು, ನಿರ್ಮಾಪಕರಾದ ಡಾ.ರಾಜಶೇಖರ್. ಅವರು ತುಂಬಿದ ಧೈರ್ಯ ಮತ್ತು ಪ್ರೋತ್ಸಾಹದಿಂದ ಇಂದು ಚಂದದ ಆಲ್ಬಂ ಸಾಂಗ್ ಆಗಿದೆ.
ಸಂಚಾರಿಯ ಮಿಂಚಿನ ಸಂಚಾರ
ಈ ಹಾಡಿನ ಹೈಲೆಟ್ ಸಂಚಾರಿ ವಿಜಯ್. ಹಾಡು ಕೇಳಿ ನಟಿಸಲು ಒಪ್ಪಿ, ಐದು ದಿನಗಳ ಕಾಲ ನಡೆದ ಶೂಟಿಂಗ್ ವೇಳೆ ಖುಷಿಯಿಂದಲೇ ನಮ್ಮೊಂದಿಗಿದ್ದರು. ನಮಗೆ ಆ ಭಾಗದ ಮೈಲಾರ ಸ್ವಾಮಿ ಚರಿತ್ರೆ ಮತ್ತು ಶ್ರೀಮಂತವಾಗಿ ನಡೆಯುವ ಜಾತ್ರೆ ಚಿತ್ರಣವನ್ನು ಇಡೀ ರಾಜ್ಯದ ಜನತೆಗೆ ತೋರಿಸಬೇಕೆಂಬ ಉದ್ದೇಶವಿತ್ತು.
ಅದಕ್ಕಾಗಿ ಸರ್ಕಾರದ ಪರ್ಮಿಷನ್ ಪಡೆದು ಜಾತ್ರೆಯಲ್ಲೇ ಚಿತ್ರೀಕರಿಸಿದ್ದೇವೆ. ಮೈಲಾರಿ ಸಿನಿಮಾ ಚಿತ್ರೀಕರಣ ಬಳಿಕ ನಮ್ಮ ಹಾಡಿನ ಚಿತ್ರೀಕರಣ ಅಲ್ಲಾಗಿದೆ. ನಾವು ಅಂದುಕೊಂಡಿದ್ದಕ್ಕಿಂತಲೂ ಹಾಡು ಚೆನ್ನಾಗಿ ಮೂಡಿಬಂದಿದೆ.
ವಿಜಯ್ ಪ್ರಕಾಶ್ ಗಾನ…
ಇನ್ನು, ಇದೊಂದು ಹೈ ಪಿಚ್ ಗೀತೆ. ಇದಕ್ಕೆ ವಿಜಯ್ವಪ್ರಕಾಶ್ ಅವರ ಧ್ವನಿ ಬೇಕು ಎಂಬ ಕಾರಣಕ್ಕೆ ಅವರಿಂದಲೇ ಹಾಡು ಹಾಡಿಸಿದ್ದೇವೆ. ಅವರೂ ಕೂಡ ಹಾಡಿನ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಾಕಷ್ಟು ಲೈವ್ ವಾದ್ಯಗಳಿಂದಲೇ ಸಂಗೀತ ಸಂಯೋಜಿಸಲಾಗಿದೆ. ಹಾಡನ್ನು ಹಗಲಿರುಳು ಚಿತ್ರೀಕರಿಸಲಾಗಿದೆ. ಲಕ್ಷಾಂತರ ಜನರ ನಡುವೆ ಶೂಟಿಂಗ್ ನಡೆಸಿದ್ದು ವಿಶೇಷ ಎನ್ನುತ್ತಾರೆ ಪ್ರದೀಪ್ ಚಂದ್ರ.
ಡಾ.ರಾಜಶೇಖರ್, ನಿರ್ಮಾಪಕರು
ಕಮರ್ಷಿಯಲ್ ಹಾಡಿಗೆ ಕಮ್ಮಿ ಇಲ್ಲದಂತೆ ಅದ್ಧೂರಿಯಾಗಿ ಚಿತ್ರೀಕರಿಸಿದ್ದೇವೆ. ಸದಾ ನೃತ್ಯ ಸಂಯೋಜನೆ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನವಿದೆ. ಚಂದ್ರು ಮತ್ತು ರಾಜಶೇಖರ್ ಛಾಯಾಗ್ರಹಣವಿದೆ. ಈ ಹಾಡಿನ ಹಿಂದೆ ಡಾಕ್ಟರ್ ಗಿರೀಶ್, ಮಂಜುನಾಥ್, ಮೈಲೇಶ್ ನಿಂತು ಸಾಥ್ ನೀಡಿದ್ದಾರೆ.
ಸಂಚಾರಿ ವಿಜಯ್ ಅವರು ಇಲ್ಲವಾಗಿ ಒಂದು ವರ್ಷವಾಗಿದೆ. ಈ ಹಾಡು ಅವರಿಗೆ ಅರ್ಪಿಸುತ್ತಿದ್ದೇವೆ. ಕನ್ನಡದ ಹಲವು ನಟ, ನಟಿಯರು ಹಾಡು ನೋಡಿ ಮೆಚ್ಚಿಕೊಂಡಿದ್ದಾರೆ.
ಕನ್ನಡದ ಸ್ಟಾರ್ ನಟರೊಬ್ಬರು ಈ ಹಾಡನ್ನು ರಿಲೀಸ್ ಮಾಡಲಿದ್ದಾರೆ. ಇಷ್ಟರಲ್ಲೇ ಮೈಲಾರ ಹಾಡು ಎಲ್ಲೆಡೆ ಪಸರಿಸಲಿದೆ ಎನ್ನುತ್ತಾರೆ ಅವರು.
“A”, “ಓಂ” ನಂತಹ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಉಪೇಂದ್ರ ನಾಯಕರಾಗೂ ಜನಪ್ರಿಯ. “ಉಪ್ಪಿ ೨” ಚಿತ್ರದ ನಂತರ ಉಪೇಂದ್ರ ಯಾವುದೇ ಚಿತ್ರ ನಿರ್ದೇಶನ ಮಾಡಿರಲಿಲ್ಲ. ಉಪೇಂದ್ರ ನಿರ್ದೇಶನದ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆ ಶುಭಘಳಿಗೆ ಈಗ ಬಂದಿದೆ. ಉಪೇಂದ್ರ ನಿರ್ದೇಶಿಸಿ, ನಾಯಕರಾಗೂ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಸುದೀಪ್ ಆರಂಭ ಫಲಕ ತೋರಿದರು. ಶಿವರಾಜಕುಮಾರ್ ಕ್ಯಾಮೆರಾ ಚಾಲಾನೆ ಮಾಡಿದರು. ಗೀತಾ ಶಿವರಾಜಕುಮಾರ್, ಡಾಲಿ ಧನಂಜಯ, ವಸಿಷ್ಠ ಸಿಂಹ ಆಗಮಿಸಿ ಶುಭ ಕೋರಿದರು.
ಲಹರಿ ಫಿಲಂಸ್ ಹಾಗೂ VENUS entertainers ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶನದೊಂದಿಗೆ ಉಪೇಂದ್ರ ನಾಯಕರಾಗೂ ನಟಿಸುತ್ತಿದ್ದಾರೆ.
ಮೂರುನಾಮದ ಚಿಹ್ನೆಯೊಂದು ಈ ಚಿತ್ರದ ಶೀರ್ಷಿಕೆಯಾಗಿದೆ. ಇದನ್ನು ಕೆಲವರು ಮೂರು ನಾಮ ಅಂದುಕೊಂಡರೆ, ಮತ್ತೆ ಕೆಲವರು ಯು ಮತ್ತು ಐ ಅಂದುಕೊಳ್ಳುತ್ತಾರೆ. ನಾನು ಮತ್ತು ನೀನು ಎಂಬ ಅರ್ಥ ಬರುವ ಹಾಗಿದೆ ಆ ಚಿಹ್ನೆ.
ಒಟ್ಟಿನಲ್ಲಿ ತಮ್ಮ ಹಿಂದಿನ ಚಿತ್ರಗಳಲ್ಲಿ ವಿಭಿನ್ನ ಶೀರ್ಷೆಕೆಯಿಟ್ಟು ಎಲ್ಲರ ತಲೆಗೆ ಕೆಲಸ ಕೊಡುತ್ತಿದ್ದ ಉಪೇಂದ್ರ ಅವರು ಈ ಚಿತ್ರದಲ್ಲೂ ಹಾಗೆ ಮಾಡಿದ್ದಾರೆ.
ಇಂದಿನಿಂದ ಚಿತ್ರೀಕರಣ ಆರಂಭಿಸಿದ್ದೇವೆ. ಲಹರಿ ಸಂಸ್ಥೆಯವರು ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ. ವಿಭಿನ್ನ ಶೀರ್ಷಿಕೆ ಯಿಟ್ಟಿದ್ದೀನಿ. ನಿಮಗೆಲ್ಲಾ ಏನು ಅನಿಸುತ್ತದಯೋ, ಅದೇ ಶೀರ್ಷಿಕೆ ಆಗಿರುತ್ತದೆ. ನಾನು ಕಥೆ ಸಿದ್ದಮಾಡಿಕೊಂಡಿರುತ್ತೇನೆ. ಮತ್ತೆ ಬೇರೆ ಅಲೋಚನೆ ಬಂದರೆ, ಬದಲಿಸುತ್ತೀನಿ. ಚಿತ್ರದ ಶೀರ್ಷಿಕೆ ಹಾಗೂ ಕುದುರೆ ಪೋಸ್ಟರ್ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ.
ಅದರ ಬಗ್ಗೆ ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಹೊಳೆಯುತ್ತಿದೆ. ನಿಮ್ಮಗೆಲ್ಲಾ ಏನು ಅನಿಸುವುದೊ, ಅದು ಚಿತ್ರದಲ್ಲಿ ಇರುತ್ತದೆ. ನಾನು ನನ್ನ ನಿರ್ದೇಶಕರ ತಂಡ ಹಾಗೂ ಇನ್ನೂ ಕೆಲವರ ಬಳಿ ಕಥೆಯ ಬಗ್ಗೆ ಹೇಳಿರುತ್ತೇನೆ. ಅವರಿಗೆ ಅದನ್ನು ಹೇಳಲು ಬರುವುದಿಲ್ಲ ಎಂದ ಉಪೇಂದ್ರ ಅವರು ಒಟ್ಟಿನಲ್ಲಿ ಉತ್ತಮ ಚಿತ್ರವೊಂದನ್ನು ನಿಮ್ಮ ಮುಂದೆ ಇಡುತ್ತೇನೆ. ನಿಮ್ಮ ನಿರೀಕ್ಷೆ ಸುಳ್ಳು ಮಾಡುವುದಿಲ್ಲವೆಂದು ತಿಳಿಸಿದರು.
ಕಲಾವಿದರು ಹಾಗೂ ತಾಂತ್ರಿಕವರ್ಗದ ಕುರಿತು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಉಪೇಂದ್ರ ಹೇಳಿದರು.
ಉಪೇಂದ್ರ ಅವರು ನಿರ್ದೇಶನಕ್ಕೆ ಒಪ್ಪಿರುವುದು ಖುಷಿಯಾಗಿದೆ. ಶಿವಣ್ಣ ಹಾಗೂ ಗೀತಕ್ಕ ಅವರ ಆಶೀರ್ವಾದದಿಂದ ಮೂರನೇ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಖ್ಯಾತ ಲಹರಿ ಫಿಲಂಸ್ ನವರು ನಾವು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ನಿಮ್ಮ ಹಾರೈಕೆ ಇರಲಿ ಎಂದರು ಕೆ.ಪಿ.ಶ್ರೀಕಾಂತ್.
ನಾನು ಹಾಗೂ ಉಪೇಂದ್ರ ಅವರು ಸಹಪಾಠಿಗಳು. ತುಂಬಾ ವರ್ಷಗಳಿಂದ ಅವರು ಪರಿಚಯ. ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತೋಷವೆಂದರು ಲಹರಿ ವೇಲು.
ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ನವೀನ್, ಕಾಕ್ರೋಜ್ ಸುಧಿ, ನಟಿ ತ್ರಿವೇಣಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ಬೈರಾಗಿ. ‘ಡಾಲಿ’ ಧನಂಜಯ್ ಹಾಗೂ ಪೃಥ್ವಿ ಅಂಬರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡು ಶಿವರಾಜ್‌ಕುಮಾರ್ ಮತ್ತು ಶರಣ್ ಕಂಠಸಿರಿಯಲ್ಲಿ ಮೂಡಿಬಂದಿರೋದು ವಿಶೇಷ. ‘ವಜ್ರಕಾಯ’ ಬಳಿಕ ಶಿವಣ್ಣನ ಸಿನಿಮಾಕ್ಕೆ ಶರಣ್ ದನಿಗೂಡಿಸಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯವಿರುವ ‘ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ…’ ಎಂಬ ಹಾಡು ಸಿಂಗಲ್ ಶಾಟ್’ನಲ್ಲಿ ಶೂಟ್ ಮಾಡಿರುವುದು ಮತ್ತೊಂದು ವಿಶೇಷ.
‘ರಿದಮ್ ಆಫ್ ಶಿವಪ್ಪ’ ಕಾನ್ಸೆಪ್ಟ್’ನಡಿ ಮೂಡಿಬಂದಿರುವ ಈ ಹಾಡಿಗೆ ಇಡೀ ‘ಬೈರಾಗಿ’ ತಂಡ ಹೆಜ್ಜೆ ಹಾಕಿದ್ದು, ದೇವನಹಳ್ಳಿ ಬಳಿಯಿರುವ ನೂತನ ಮಾಲ್’ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮುರಳಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ‘ನಖರನಖ’ ಹಾಡಿಗೆ ಆ್ಯಂಥೋನಿ ದಾಸ್ ದನಿಗೂಡಿಸಿದ್ದರು.
ಇದೀಗ ‘ಸಂಡೆ-ಮಂಡೆ’ ಹಾಡು ಶಿವಣ್ಣ-ಶರಣ್ ದನಿಯಲ್ಲಿ ಮೂಡಿಬಂದಿದ್ದು ಜೆ.ಪಿ ಮ್ಯೂಸಿಕ್ ಯೂಟ್ಯೂಬ್ ಚಾನಲ್’ನಲ್ಲಿ ರಿಲೀಸ್ ಆಗಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಹಿಟ್ಸ್ ದಾಖಲಾಗಿ ಟ್ರೆಂಡಿಂಗ್’ನಲ್ಲಿದೆ.
ವಿಜಯ್ ಮಿಲ್ಟನ್ ನಿರ್ದೇಶನವಿರುವ ಈ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್, ಅನು ಪ್ರಭಾಕರ್, ಅಂಜಲಿ, ಯಶ ಶಿವಕುಮಾರ್, ಚಿಕ್ಕಣ್ಣ ಮೊದಲಾದವರ ತಾರಾದಂಡೇ ಇದೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ‘ಬೈರಾಗಿ’ಗೆ ಬಂಡವಾಳ ಹೂಡಿದ್ದಾರೆ.
ಕನ್ನಡ ಚಿತ್ರರಂಗದ ಎವರ್ ಗ್ರೀನ್ ಬ್ಯೂಟಿ.. ಕನಸಿನ ರಾಣಿ ಮಾಲಾಶ್ರೀ ಮತ್ತೆ ಸಿನಿಮಾ ಲೋಕಕ್ಕೆ ಕಂಬ್ಯಾಕ್ ಆಗ್ತಿದ್ದಾರೆ. ಪತಿ ಅಗಲಿಕೆ ನೋವಿನ ನಂತ್ರ ಒಂದಷ್ಟು ಗ್ಯಾಂಪ್ ತೆಗೆದುಕೊಂಡಿದ್ದ ಮಾಲಾಶ್ರೀ ನೈಟ್ ಕರ್ಫ್ಯೂ’ ಸಿನಿಮಾ ಮೂಲಕ ಬೆಳ್ಳಿತೆರೆಮೇಲೆ ದಿಬ್ಬಣ ಹೊರಡಲಿದ್ದಾರೆ.
ಈ ಹಿಂದೆ ‘ಪುಟಾಣಿ ಸಫಾರಿ’ ನಿರ್ದೇಶನ ಮಾಡಿದ್ದ ರವೀಂದ್ರ ವೆಂಶಿ ಈ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಇಡೀ ತಂಡ ಭಾಗಿಯಾಗಿ ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡರು.
ಮಾಲಾಶ್ರೀ ಮಾತನಾಡಿ, ನನಗೆ ತುಂಬಾ ಗ್ಯಾಪ್ ಅನಿಸುತ್ತಿಲ್ಲ, ತುಂಬಾ ಖುಷಿಯಾಗ್ತಿದೆ. ಕಥೆಯಲ್ಲಿ ಹೊಸತನವಿದೆ. ಹೊಸ ತಂಡ ನನಗೆ ಹೊಸ ಅನುಭವ, ಚಾಲೆಂಜ್ ಇರುತ್ತದೆ. ನಾನು ಡಾಕ್ಟರ್ ಆಗಿ ಎರಡನೇ ಸಿನಿಮಾವಿದು ಎಂದು ಹೇಳಿದರು. ತುಂಬಾ ಕಾರಣಕ್ಕೆ ಈ ಸಿನಿಮಾ ನನಗೆ ವಿಶೇಷವಾಗಿದೆ. ಮಾಲಾಶ್ರೀ ಅವರ ಜೊತೆ ಕೆಲಸ ಮಾಡ್ತಿರೋದು ಖುಷಿ ಕೊಟ್ಟಿದೆ. ಇದೊಂದು ಕ್ರೈಮ್ ಥ್ರಿಲ್ಲರ್. ಕೊರೋನಾ ಕಾಲಘಟ್ಟದಲ್ಲಿ ನಡೆಯುವ ಕಥೆ. ನಾನು ಡಾಕ್ಟರ್ ಪಾತ್ರ ಮಾಡಿದ್ದೇನೆ ಎಂದು ರಂಜನಿ ರಾಘವನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
ನಿರ್ದೇಶಕ ರವೀಂದ್ರ ವಂಶಿ, ನೈಟ್ ಕರ್ಫ್ಯೂ ವಿಶೇಷ ಸಿನಿಮಾ. ಸಿನಿಮಾದಲ್ಲಿ ನಾಲ್ಕು ಅಂಶ ಮುಖ್ಯ. ಕಥೆ ಚಿತ್ರ-ಕಥೆ, ಸಂಭಾಷಣೆ. ಈ ಸಿನಿಮಾದಲ್ಲಿ, ವಿಶೇಷ ಕಥೆ, ನಿರೂಪಣಾ ಶೈಲಿ ಇದ್ದು, ಸಿನಿಮಾದ ತಾರಾಬಳಗ ತುಂಬಾ ಚೆನ್ನಾಗಿದೆ, ಟೆಕ್ನಿಕಲ್ ಡಿಪಾರ್ಟ್ ಚೆನ್ನಾಗಿದೆ. ನಿರ್ಮಾಣ ಎಲ್ಲದಕ್ಕೂ ಸಾಥ್ ಕೊಟ್ಟಿದ್ದಾರೆ ಎಂದರು.
ಇದೊಂದು ಆಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು ಮೆಡಿಕಲ್ ಮಾಫಿಯಾ ಕುರಿತಾದ ಕಥೆ ಒಳಗೊಂಡಿದ್ದು, ಪ್ರಮೋದ್ ಶೆಟ್ಟಿ, ಬಲರಾಜ್ವಾಡಿ, ವರ್ಧನ್ ,ಅಶ್ವಿನ್, ರಂಗಾಯಣ ರಘು ಸಾಧು ಕೋಕಿಲ, ಮಂಜು ಪಾವಗಡ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿದ್ದಾರೆ. ಸ್ವರ್ಣಗಂಗಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಿ.ಎಸ್ ಚಂದ್ರಶೇಖರ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಕ್ಯಾಮೆರಾ ವರ್ಕ್, ಜಾಗ್ವಾರ್ ಸಣ್ಣಪ್ಪ ಸಾಹಸ ಸಿನಿಮಾಕ್ಕಿದೆ.
ನಿರ್ದೇಶನದಿಂದ ಜನಮನಸೂರೆಗೊಂಡಿರುವ ಪ್ರೇಮ್ (ಜೋಗಿ) ಅವರು ಗಾಯಕನಾಗೂ ಜನಪ್ರಿಯ. ವಿಲೇಜ್ ರೋಡ್ ಫಿಲಂಸ್ ಲಾಂಛನದಲ್ಲಿ ವಿನೋದ್ ಶೇಷಾದ್ರಿ ನಿರ್ಮಿಸುತ್ತಿರುವ “ಪರಿಮಳ ಡಿಸೋಜಾ” ಚಿತ್ರದ ಹಾಡೊಂದನ್ನು ನಿರ್ದೇಶಕ ಪ್ರೇಮ್ ಹಾಡಿದ್ದಾರೆ. ಕೆ.ಕಲ್ಯಾಣ್ ಗೀತರಚನೆ ಮಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ.
ಡಾ. ಗಿರಿಧರ್ ಹೆಚ್. ಟಿ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಪ್ರೇಮ್ ಅವರು ಹಾಡಿರುವ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯದಲ್ಲೇ ಆ ಹಾಡಿನ ಚಿತ್ರೀಕರಣ ನಡೆಯಲಿದೆ.
ಹಿಂದು ಸಂಪ್ರದಾಯದ ಶ್ರೀಮಂತ ಕುಟುಂಬವೊಂದು ಸುಖ ಸಂತೋಷದಿಂದ ಜೀವನ ನಡೆಸುತ್ತಿರುತ್ತಾರೆ. ಆ ಮನೆಗೆ ಕ್ರಿಶ್ಚಿಯನ್ ಸಂಪ್ರದಾಯದ ಪರಿಮಳ ಡಿಸೋಜಾ ಸೊಸೆಯಾಗಿ ಬರುತ್ತಾಳೆ. ಜೊತೆಗೆ ಮತ್ತಷ್ಟು ಸಂತೋಷ, ಆನಂದವನ್ನು ಹೊತ್ತು ತರುತ್ತಾಳೆ. ಎರಡುವರ್ಷಗಳ ನಂತರ ಆ ಮನೆಯಲ್ಲಿ ಯಾರು ಊಹಿಸದ ಘಟನೆ ನಡೆಯುತ್ತದೆ. ಆ ಘಟನೆಯಿಂದ ಮನೆಮಂದಿಯಲ್ಲಾ ಸಂಕಷ್ಟಕ್ಕೆ ಸಿಲುಕುತ್ತಾರೆ. ಮುಂದೇನು ನಡೆಯುತ್ತದೆ ಎಂಬುದೇ ಕುತೂಹಲ ಎನ್ನುವ ನಿರ್ದೇಶಕ ಗಿರಿಧರ್, ಇದೊಂದು ಸಸ್ಪೆನ್ಸ್ ಥ್ರಿಲ್ಲರ್, ಆಕ್ಷನ್ , ಸೆಂಟಿಮೆಂಟ್ ಹಾಗೂ ಕಾಮಿಡಿ ಎಲ್ಲವನ್ನು ಒಳಗೊಂಡಿರುವ ಚಿತ್ರ ಎಂದು ತಿಳಿಸುತ್ತಾರೆ.
ಕೋಮಲ ಬನವಾಸೆ , ವಿನೋದ್ ಶೇಷಾದ್ರಿ, ಶ್ರೀನಿವಾಸಪ್ರಭು, ಭವ್ಯ, ಪೂಜಾ ರಾಮಚಂದ್ರ, ಶಿವಕುಮಾರ್ ಆರಾಧ್ಯ, ಶಂಖನಾದ ಅಂಜನಪ್ಪ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಾಲ್ಕು ಹಾಡುಗಳಿದ್ದು, ವಿ.ನಾಗೇಂದ್ರಪ್ರಸಾದ್, ಜಯಂತ್ ಕಾಯ್ಕಿಣಿ , ಕೆ.ಕಲ್ಯಾಣ್ ಹಾಗೂ ವಿನೋದ್ ಶೇಷಾದ್ರಿ ಬರೆದಿದ್ದಾರೆ. ಜೋಗಿ ಪ್ರೇಮ್, ರಾಜೇಶ್ ಕೃಷ್ಣನ್, ಅನುರಾಧ ಭಟ್, ನಕುಲ್ ಅಭ್ಯಂಕರ್, ಸುಪ್ರಿಯಾ ರಾಮ್, ಶೃತಿ ವಿ.ಎಸ್ ಹಾಡಿದ್ದಾರೆ. ಕೆ.ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಂಜೀವ್ ರೆಡ್ಡಿ ಅವರ ಸಂಕಲನವಿದೆ.
ಕನ್ನಡ ಸಿನಿಮಾ ಅಂಗಳದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ತೆರೆಮೇಲೆ ಧೂಳ್ ಎಬ್ಬಿಸಲು ಸಜ್ಜಾಗಿದೆ. ನಾಯಿ ಮತ್ತು ಮನುಷ್ಯನ ಬಾಂಧವ್ಯ ಕಥೆಯ ಚಾರ್ಲಿ 777 ಸಿನಿಮಾ ಇದೇ ತಿಂಗಳ 10ರಂದು ವರ್ಲ್ಡ್ ವೈಡ್ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡ್ತಿದೆ. ಈಗಾಗಲೇ ಟ್ರೇಲರ್ ನಲ್ಲಿಯೇ ತನ್ನ ತಾಕತ್ತು ತೋರಿಸಿರುವ ಚಾರ್ಲಿಗೆ ಚಿತ್ರರಸಿಕರು ಫುಲ್ ಫಿದಾ ಆಗಿದ್ದಾರೆ.
ಜೂನ್ 10ರಂದು ಸಿನಿಮಾ ತೆರೆಗೆ ಬರ್ತಿರೋದ್ರಿಂದ ಚಿತ್ರತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ. ರಾಜ್ಯ ರಾಜ್ಯ ಸುತ್ತಿ ಪ್ರಚಾರದ ಕಹಳೆ ಮೊಳಗಿಸಿರುವ ಚಾರ್ಲಿ ಅಂಗಳದಿಂದ ಮಸ್ತ್ ಖಬರ್ ವೊಂದು ರಿವೀಲ್ ಆಗ್ತಿದೆ. ಬರೋಬ್ಬರಿ 21 ಸಿಟಿಗಳಲ್ಲಿ ಚಾರ್ಲಿ ಸಿನಿಮಾ ಪ್ರೀಮಿಯರ್ ಆಗ್ತಿದೆ.
ಹೊಸ ದಾಖಲೆ ಬರೆದ ಚಾರ್ಲಿ
ಹೇಳಿಕೇಳಿ ಇದು ಕಾಂಪಿಟೇಷನ್ ಯುಗ. ಅದ್ರಲ್ಲೂ ಚಿತ್ರರಂಗದಲ್ಲಂತೂ ಕೇಳ್ಬೇಕೆ. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳು ಸದ್ದು ಮಾಡ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳು ಒಂದೊಂದಾಗಿ ತೆರೆಗೆ ಬರ್ತಿವೆ. ಇಷ್ಟೆಲ್ಲಾ ಕಾಂಪಿಟೇಷನ್ ಇದ್ರೂ ಚಾರ್ಲಿ 777 ಸಿನಿಮಾ ರಿಲೀಸ್ ಗೂ ಮುನ್ನ ಹೊಸ ರೆಕಾರ್ಡ್ ಬರೆದಿದೆ. ಹೈದ್ರಾಬಾದ್, ಚೆನ್ನೈ, ದೆಹಲಿ, ಮಧುರೈ ಸೇರಿದಂತೆ ಬರೋಬ್ಬರಿ 21 ಸಿಟಿಗಳಲ್ಲಿ ಪ್ರೀಮಿಯರ್ ಆಗ್ತಿರುವ ಮೊದಲ ಸಿನಿಮಾ ಎಂಬ ಖ್ಯಾತಿ ಚಾರ್ಲಿ ಭತ್ತಳಿಕೆ ಸೇರಿದೆ.
ಎಲ್ಲೆಲ್ಲಿ ಯಾವಾಗಾ ಪ್ರೀಮಿಯರ್
21 ಸಿಟಿಗಳಲ್ಲಿ ಪ್ರೀಮಿಯರ್ ಆಗ್ತಿರುವ ಚಾರ್ಲಿ-777 ಸಿನಿಮಾ ಹೈದ್ರಾಬಾದ್, ವಾರಾಣಾಸಿ 7ರಂದು, ದೆಹಲಿಯಲ್ಲಿ 2ರಂದು, ಅಮೃತಸರ 2ರಂದು, ಮಧುರೈ, ಪಂಜಿಮ್, ಬರೋಡಾ, ವೈಜಾಕ್ ನಲ್ಲಿ 8ರಂದು, ಕೊಯ್ಯಮತ್ತೂರು, ಸೊಲ್ಲಾಪುರ,ತಿರುವನಂತಪುರ, ಅಹಮದಾಬಾದ್ ನಲ್ಲಿ 7ರಂದು, ಪುಣೆ, ಮುಂಬೈ, ಕಿಚ್ಚಿನ್, ಲಖನೌ, ಚೆನ್ನೈ, ಜೈಪುರ, ಕೋಲ್ಕತ್ 6ರಂದು, ನಾಗಾಪುರ, ಸೂರತ್ ನಲ್ಲಿ 9ರಂದು ಪ್ರೀಮಿಯರ್ ಆಗ್ತಿದ್ದು, ಈಗಾಗ್ಲೇ ಆಲ್ ಮೋಸ್ಟ್ ಆಲ್ ಟಿಕೆಟ್ ಸೋಲ್ಟ್ ಔಟ್ ಆಗಿವೆ.
ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಾರ್ಲಿ 777 ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಧರ್ಮ ಪಾತ್ರದಲ್ಲಿ ಮಿಂಚಿದ್ದು, ರಕ್ಷಿತ್ ಗೆ ಜೋಡಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದಾರೆ. ನಟನೆ ಜೊತೆಗೆ ರಕ್ಷಿತ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ರಕ್ಷಿತ್ ಜತೆಗೆ ರಾಜ್ ಬಿ. ಶೆಟ್ಟಿ, ದಾನಿಶ್ ಸೇಠ್, ತಮಿಳಿನ ಬಾಬಿ ಸಿಂಹ ಸೇರಿ ಇನ್ನೂ ಅನೇಕರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಣ್ ರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ನೋಬಿನ್ ಪೌಲ್ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ, ಪ್ರಗತಿ ರಿಷಬ್ ಶೆಟ್ಟಿ ಅವರ ವಸ್ತ್ರ ವಿನ್ಯಾಸ, ವಿಕ್ರಮ್ ಮೋರ್ ಅವರ ಸಾಹಸ ಈ ಚಿತ್ರಕ್ಕಿದೆ.
ಜೂನ್ 3ರಿಂದ ಕನ್ನಡ ಬೆಳ್ಳಿತೆರೆ ಮೇಲೆ ಮೆಟಡೋರ್ ಪಯಣ ಶುರುವಾಗಲಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಥಿಯೇಟರ್ ಗೆ ಲಗ್ಗೆ ಇಡಲು ಅಣಿಯಾಗಿದೆ.
ನಿರ್ಮಾಪಕ ಕಿರಣ್ ಕುಮಾರ್ ಅವರು ಮಾತನಾಡಿ, ಇಂಜಿನಿಯರಿಂಗ್ ಬ್ಯಾಗ್ರೌಂಡ್ ನಮ್ಮದು. ಒಟ್ಟಿಗೆ ಶಾರ್ಟ್ ಮೂವೀಗಳನ್ನು ಮಾಡಿ ನಂತರ ಸಿನಿಮಾ ಮಾಡುವ ಕನಸು ಹೊತ್ತು ಈಗ ಸಿನಿಮಾ ಮಾಡಿದ್ದೇವೆ. ನಮ್ಮ ಚಿತ್ರದಲ್ಲಿ ಒಳ್ಳೆ ಕಂಟೆಂಟ್ ಇದೆ. ಬೀದಿನಾಟಕ ಮೂಲಕ ರಾಜ್ಯಾದ್ಯಂತ ಸಿನಿಮಾ ಪ್ರಚಾರ ಮಾಡಿದ್ದೇವೆ ಎಂದರು.
ನಿರ್ದೇಶಕ ಸುದರ್ಶನ್, ಕಲಾವಿದರು ಹೊಸಬರು. ನಾಟಕದ ಹಿನ್ನೆಲೆಯುಳ್ಳವರು. ಎಲ್ಲರೂ ನಮ್ ಸ್ನೇಹಿತರು. ಸಿನಿಮಾದಲ್ಲಿ ಐದು ಕಥೆ ಇದೆ. ಹೈಪರ್ ಲಿಂಕ್ ರೀತಿ. ಕಾಮಿಡಿ, ಥ್ರಿಲ್ಲರ್ ಎಲ್ಲಾ ಬಗೆ ಕಥೆ ಇದೆ. ಜೂನ್ 3ಕ್ಕೆ ಸಿನಿಮಾ ಬರ್ತಿದೆ. ಎಲ್ಲರೂ ಸಪೋರ್ಟ್ ಮಾಡಿ ಎಂದರು.
ಮೆಟಡೋರ್ ಮೂಲಕ ಭರ್ಜರಿ ಪ್ರಮೋಷನ್
ಮೆಟಡೋರ್ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದ್ದು, ಹೀಗಾಗಿ ಚಿತ್ರತಂಡ ಭರ್ಜರಿ ಪ್ರಮೋಷನ್ ಗೆ ಇಳಿದಿದೆ. ಮೆಟಡೋರ್ ವಾಹನಕ್ಕೆ ಸಿನಿಮಾದ ಪೋಸ್ಟರ್ ಅಂಟಿಸಿ, ಈ ಮೆಟಡೋರ್ ಮೂಲಕವೇ ರಾಜ್ಯಾದ್ಯಂತ ಪ್ರಮೋಷನ್ ನಡೆಸ್ತಿದೆ.
ಐದು ಕಥೆಯುಳ್ಳ ಹೈಪರ್ ಲಿಂಕ್ ಸಿನಿಮಾವಾಗಿರುವ ಮೆಟಡೋರ್ ಚಿತ್ರಕ್ಕೆ ಸುದರ್ಶನ್ ಜಿ ಶೇಖರ್ ನಿರ್ದೇಶನ ಮಾಡಿದ್ದು, ಈ ಹಿಂದೆ ಇವರು 13ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಕಿರಣ್, ರವಿ ಮೈಸೂರು, ಅರ್ಚನಾ ಮಹೇಶ್, ಮೋಹನ್ ಬಾಬು ಸೇರಿದಂತೆ ಹೊಸ ತಾರಾಬಳಗ ಸಿನಿಮಾದಲ್ಲಿದೆ.
ಓಂ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ಕಿರಣ್ ಕುಮಾರ್ ಎಸ್ ಹೆಚ್ ಬಂಡವಾಳ ಹೂಡಿದ್ದು, ತಂಗಾಳಿ ನಾಗರಾಜ್ ಸಂಗೀತ, ಗೋಪಿನಾಥ್ ಕ್ಯಾಮೆರಾ, ಕುಮಾರ್ ಸಿಎಚ್ ಸಂಕಲನ ಚಿತ್ರಕ್ಕಿದೆ.
ಪ್ರತಿಭಾನ್ವಿತ ತಂಡವೇ ಸೇರಿ ತಯಾರಿಸುವ ತೂತು ಮಡಿಕೆ ಸಿನಿಮಾ ರಿಲೀಸ್ ಹೊಸ್ತಿಲಿನಲ್ಲಿ ನಿಂತಿದ್ದು, ಚಿತ್ರತಂಡ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ಮೋಷನ್ ಪೋಸ್ಟರ್ ಹಾಗೂ ಯಾಮಾರಿದೆ ಹೃದಯ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ತೂತು ಮಡಿಕೆ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.
ನಿತಿನ್ ನಾರಾಯಣ್ ಕ್ಯಾಚಿ-ಮ್ಯಾಚಿ ಸಾಹಿತ್ಯವಿರುವ ಹಾಡಿಗೆ, ಚೇತನ್ ನಾಯ್ಕ್ ಧ್ವನಿಯಾಗಿದ್ದು, ಸ್ವಾಮಿನಾಥನ್ ಆರ್.ಕೆ ಸಂಗೀತದ ಕಂಪು ಹಾಡಿನ ಇಂಪನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಯಾಮಾರಿದೆ ಹೃದಯ ಹಾಡಿನ ಚಿತ್ರೀಕರಣ ನಡೆದ ಜಾಗದಲ್ಲಿಯೇ ಟೈಟಲ್ ಟ್ರ್ಯಾಕ್ ಕೂಡ ಶೂಟ್ ಆಗಿದ್ದು, ಅಲ್ಲಿನ ಸ್ಥಳೀಯರನ್ನು ಬಳಸಿಕೊಂಡು ಮೋಹನ್ ಮಾಸ್ಟರ್ ಹಾಡಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಶೀರ್ಷಿಕೆ ಗೀತೆಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.
ಕಿರುಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ನಂತ್ರ ಮೂಕವಿಸ್ಮಿತ, ಸಿಲಿಕಾನ್ ಸಿಟಿ, ಕಿಸ್ ಸಿನಿಮಾಗಳಲ್ಲಿ ಸಪೋರ್ಟಿಂಗ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಚಂದ್ರ ಕೀರ್ತಿ ತೂತು ಮಡಿಕೆ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದು, ಜೊತೆಗೆ ಸಿನಿಮಾದ ಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಾಯಕಿಯಾಗಿ ಪಾವನಾ ಗೌಡ ನಾಯಕಿ ನಟಿಸಿದ್ದು, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಮುಂತಾದ ಕಲಾಬಳಗ ಸಿನಿಮಾದಲ್ಲಿದೆ.
ಕಾಮಿಡಿ ಥ್ರಿಲ್ಲರ್ ಸಸ್ಪೆನ್ಸ್ ಕಥಾಹೂರಣದ ತೂತುಮಡಿಕೆ ಸಿನಿಮಾಗೆ ಸರ್ವತಾ ಸಿನಿ ಗ್ಯಾರೇಜ್ ಬ್ಯಾನರ್ ನಡಿ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ಬಂಡವಾಳ ಹೂಡಿದ್ದು, ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದ್ದು, ಸದ್ಯ ಎರಡು ಹಾಡುಗಳನ್ನು ರಿಲೀಸ್ ಮಾಡಿರುವ ಚಿತ್ರತಂಡ ಶೀರ್ಷದಲ್ಲಿಯೇ ಟ್ರೇಲರ್ ಬಿಡುಗಡೆ ಮಾಡಲಿದೆ.