Categories
ಸಿನಿ ಸುದ್ದಿ

ಮನಪೂರ ಕಾಡುವ ಚಾರ್ಲಿಯ ಎಮೋಷನಲ್ ಜರ್ನಿ: ಭಾವನೆಗಳ ಜೊತೆ ಭಾವುಕತೆಗೆ ದೂಡುವ ಆ ಎರಡು ಜೀವಗಳು…

ಚಿತ್ರ ವಿಮರ್ಶೆ

  • ವಿಜಯ್ ಭರಮಸಾಗರ


ರೇಟಿಂಗ್: 4.5 /5

ಚಿತ್ರ: 777 ಚಾರ್ಲಿ
ನಿರ್ಮಾಣ : ಜಿ.ಎಸ್ ಗುಪ್ತ, ರಕ್ಷಿತ್ ಶೆಟ್ಟಿ
ನಿರ್ದೇಶಕ : ಕಿರಣ್ ರಾಜ್
ತಾರಾಗಣ: ಚಾರ್ಲಿ, ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ಬಾಬಿ ಸಿಂಹ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಠ್, ಭಾರ್ಗವಿ ನಾರಾಯಣ್ ಇತರರು.

‘ಅವನಿಗೆ ಮನೆ ಮಠ ಇಲ್ಲ. ಮೂರನೆಯವರನ್ನ ಹತ್ರ ಸೇರಿಸಲ್ಲ. ಅವನ ಪ್ರಕಾರ ಅವನು ಸರಿಯಾಗಿದ್ದಾನೆ. ಆದರೆ, ನೋಡೋ ಜನ ಸರಿ ಇಲ್ಲ…’
ಇದು ಕಥಾನಾಯಕ ಧರ್ಮನ ಕಥೆ ಮತ್ತು ವ್ಯಥೆ.

ಸಿನಿಮಾ ಅನ್ನೋದು ಭಾವನೆಗಳನ್ನು ಕೆದಕಿ ಭಾವುಕತೆ ಹೆಚ್ಚಿಸುವಂತಿರಬೇಕು. ನೋಡುವ ಕಣ್ ಒದ್ದೆಯಾಗಿ, ಮನ ಕರಗಿ ಎದೆ ಭಾರವಾಗಿಬಿಡಬೇಕು… ಹಾಗೊಮ್ಮೆ ದುಃಖದ ಕಟ್ಟೆ ಹೊಡೆದು ಬಿಡಬೇಕು ಹೀಗಂದುಕೊಂಡೇ ನಿರ್ದೇಶಕ ಕಿರಣ್ ರಾಜ್, ‘777 ಚಾರ್ಲಿ’ ಕಥೆ ಬರೆದು ಚಂದದ ಸಿನಿಮಾ ಮಾಡಿದ್ದಾರೆ. ಸುದೀರ್ಘ ಪಯಣದ ನೋವಿನ ಆಯಾಸದಲ್ಲೂ ಗೆಲುವಿನ ನಗೆ ಬೀರಿದ್ದಾರೆ.

ಒಂದೇ ಮಾತಲ್ಲಿ ಹೇಳುವುದಾದರೆ, ಈ ಚಾರ್ಲಿ ಒಪ್ಪಿ, ಅಪ್ಪುವ ಚಿತ್ರ, ಮನಸ್ಸಿಗೆ ಆಪ್ತವೆನಿಸೋ ಸಿನಿಮಾ. ಇದು ಬರೀ ಸಿನಿಮಾ ಕಥೆಯಲ್ಲ, ಸಂಬಂಧಗಳ ಬೆಸೆಯುವ, ಮಾನವೀಯ ಮೌಲ್ಯವುಳ್ಳ ಚಿತ್ರಣದ ಹೂರಣ.

ಮನುಷ್ಯನಿಗೂ ಪ್ರಾಣಿಗಳಿಗೂ ಅಜಗಜಾಂತರ ವ್ಯತ್ಯಾಸ. ಆದರೆ, ಕೆಲ ಸಾಕು ಪ್ರಾಣಿಗಳದ್ದು ಮಗುವಿನಂತಹ ಹೃದಯ. ಅಂತಹ ಪ್ರಾಣಿಗಳಿಗೆ ಬೇಕಿರೋದು ಅಂಥದ್ದೇ ಪ್ರೀತಿಸೋ ಹೃದಯ. ಇದನ್ನು ಅರ್ಥ ಮಾಡಿಕೊಂಡು ಚಂದದ ಸಿನಿಮಾ ಕಟ್ಟಿಕೊಡುವಲ್ಲಿ ನಿರ್ದೇಶಕ ಮತ್ತು ತಂಡ ಚಾರ್ಲಿ ಮೂಲಕ ಯಶಸ್ವಿಯಾಗಿದೆ.

ಪ್ರೀತಿ, ಗೀತಿ ಇತ್ಯಾದಿ ಕಥೆಗಳ ಮಧ್ಯೆ ಎಮೋಷನಲ್ ಕಥೆ ಹೆಣೆದು ಅದಕ್ಕೆ ಚಂದವೆನಿಸೋ ನಿರೂಪಣೆ ಮಾಡಿರುವ ನಿರ್ದೇಶಕ ಕಿರಣ್ ರಾಜ್ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ.

ನಿಜ ಹೇಳಬೇಕೆಂದರೆ, ಇಲ್ಲಿ ಇಬ್ಬರು ಹೀರೋಸ್. ಒಂದು ಧರ್ಮನಾಗಿ ಕಾಣಿಸಿಕೊಂಡಿರೋ ರಕ್ಷಿತ್ ಶೆಟ್ಟಿ, ಇನ್ನೊಂದು ಅವನ ಜೊತೆಯಲ್ಲೇ ಸಾಗುವ ಚಾರ್ಲಿ ಹೆಸರಿನ ಒಂದು ಬುದ್ಧಿವಂತ ಹೆಣ್ಣು ನಾಯಿ ಇಲ್ಲಿನ ಹೈಲೆಟ್. ಇಡೀ ಸಿನಿಮಾವನ್ನು ಆವರಿಸಿರುವ ಚಾರ್ಲಿ, ನಗಿಸ್ತಾಳೆ, ಕಾಡ್ತಾಳೆ, ಅಳಿಸ್ತಾಳೆ ಆಗಾಗ ಎದೆ ಭಾರವಾಗಿಸ್ತಾಳೆ. ಯಾಕೆ, ಹೇಗೆ ಎಂಬ ಕುತೂಹಲವಿದ್ದರೆ ಒಂದೊಮ್ಮೆ ಸಿನಿಮಾ ನೋಡಿ.

ಇಲ್ಲಿ ಹೊಡಿ ಬಡಿ ಎಂಬ ಅಬ್ಬರವಿಲ್ಲ, ಮರಸುತ್ತುವ ಹಾಡಿಲ್ಲ, ನಗಿಸಬೇಕೆಂಬ ಹರಸಾಹಸವಿಲ್ಲ, ವಿನಾಕಾರಣ ಹೀರೋಯಿಸಂ ಇಲ್ಲ. ಮುದ್ದಿಸಬೇಕೆಂಬ ಚಾರ್ಲಿಯ ಎಮೋಷನ್ ಜರ್ನಿ ಇಲ್ಲಿ ಕಾಡುತ್ತಾ ಹೋಗುತ್ತೆ. ಆ ಕಾಡುವ ವಿಷಯವೇ ಸಿನಿಮಾದ ಹೈಲೆಟ್.

ಕಲರ್ಫುಲ್ ಫ್ರೇಮ್ ಒಳಗೆ ಕನಸುಗಳ ಮೆರವಣಿಗೆ ತುಂಬಿದೆ. ಅದು ಬರೀ ಕನಸಾಗಿಯೇ ಇಲ್ಲಿ ಉಳಿದಿಲ್ಲ. ಆಕಾಶಕ್ಕೆ ಸದಾ ತಿಳಿ ನೀಲಿ ಬಣ್ಣ ಹೇಗೆ ಅಂಟಿಕೊಂಡಿದೆಯೋ ಹಾಗೆ ಚಾರ್ಲಿ ಮತ್ತು ಧರ್ಮನ ಬಾಂಧವ್ಯವೂ ಇಲ್ಲುಂಟು. ಧರ್ಮ ಮತ್ತು ಚಾರ್ಲಿ ಬದುಕಿನ ಅನೇಕ ಮಜಲುಗಳನ್ನು ಇಲ್ಲಿ ಕಾಣಬಹುದು. ಅವರಿಬ್ಬರ ಪರಿಪೂರ್ಣ ಬದುಕು, ಅರ್ಥಪೂರ್ಣ ಪಯಣವನ್ನು ಇಲ್ಲಿ ಓದಿ ತೀಳಿಯುವುದಕ್ಕಿಂತ ಚಾರ್ಲಿ ನೋಡಿ ಕಣ್ತುಂಬಿಕೊಳ್ಳೋದೆ ವಾಸಿ.

ಚಾರ್ಲಿ ಕಥೆ ಏನು?

ಚಿಕ್ಕಂದಿನಲ್ಲೇ ಅಪ್ಪ,ಅಮ್ಮ ಮತ್ತು ತಂಗಿಯನ್ನು ಕಳಕೊಂಡು ಅನಾಥನಂತೆ ಬದುಕುತ್ತಿರುವ ಧರ್ಮನ ಬದುಕಲ್ಲಿ, ಅಲ್ಲೆಲ್ಲೋ ನರಕ ಹಿಂಸೆ ಅನುಭವಿಸಿ ರೋಸಿ ಹೋಗಿದ್ದ ಚಾರ್ಲಿ ತಪ್ಪಿಸಿಕೊಂಡು ಧರ್ಮ ವಾಸಿಸುವ ಕಾಲೋನಿಗೆ ಎಂಟ್ರಿಯಾಗ್ತಾಳೆ. ಆ ಕಾಲೋನಿಯಲ್ಲಿ ಅನಿಮಲ್ಸ್ ಸಾಕುವಂತಿಲ್ಲ. ಹೀಗಿರುವಾಗ ಗೊತ್ತಿಲ್ಲದೆಯೇ ಧರ್ಮ ಚಾರ್ಲಿಗೆ ಇಷ್ಟವಾಗ್ತಾಳೆ. ಅಷ್ಟೇ ಅಲ್ಲ ಹಿಂದಿಂದೆ ಹಿಂಬಾಲಿಸ್ತಾಳೆ. ಅತ್ತ ಧರ್ಮನಿಗೋ ಒಂದು ರೀತಿ ಧರ್ಮಸಂಕಟ. ಬಂಧು ಬಳಗವೇ ಇಲ್ಲದ ಧರ್ಮನಿಗೆ ಚಾರ್ಲಿಯ ಒಳ್ಳೇತನ ಇಷ್ಟವಾಗುತ್ತೆ. ಅಲ್ಲಿಂದ ಚಾರ್ಲಿ ಜೊತೆ ಅವನ ಪಯಣ ಶುರುವಾಗುತ್ತೆ. ಮನುಷ್ಯರನ್ನ ಕಂಡರೆ ಆಗದ ಧರ್ಮ ಆ ಚಾರ್ಲಿಯನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸೋಕೆ ಶುರು ಮಾಡ್ತಾನೆ ಯಾಕೆ ಎಂಬ ಪ್ರಶ್ನೆಗೆ ಸಿನಿಮಾ ನೋಡಲೇಬೇಕು.

ಇಲ್ಲಿ ಸಂಬಂಧದ ಬೆಸುಗೆ ಇದೆ, ಭಾವುಕ ಪಯಣವಿದೆ,ಭಾವನೆಗಳ ಗುಚ್ಛವಿದೆ, ದುಃಖ ದುಮ್ಮಾನವೂ ಅಡಗಿದೆ. ಸರಾಗವಾಗಿ ಸಾಗುವ ಧರ್ಮ ಮತ್ತು ಚಾರ್ಲಿಯ ಸುಂದರ ಬದುಕಲ್ಲೊಂದು ಘಟನೆಯೂ ಸಂಭವಿಸುತ್ತೆ. ಅಲ್ಲಿಂದ ಆ ಹಾದಿಯುದ್ದಕ್ಕೂ ಭಾವುಕವೇ ಹರಡುತ್ತೆ. ಕಲರ್ಫುಲ್ ಫ್ರೇಮ್ ಒಳಗಿನ ಬಣ್ಣ ಮಾಸಿದಂತಾಗುತ್ತೆ. ಅಲ್ಲೊಂದು ಮೌನ ಆವರಿಸುತ್ತೆ. ಆ ಮೌನ ಇಡೀ ಚಾರ್ಲಿಯನ್ನು ಗುಣಗಾನ ಮಾಡುವಂತಾಗುತ್ತೆ. ಇಷ್ಟು ಹೇಳಿದ ಮೇಲೂ ಚಾರ್ಲಿ ನಗಿಸುವ, ಕಾಡುವ ಮತ್ತು ಅಳಿಸುವ ಚಿತ್ರಣವನ್ನು ನೋಡದಿದ್ದರೆ ಹೇಗೆ?

ಯಾರು ಹೇಗೆ?

ಮೊದಲೇ ಹೇಳಿದಂತೆ ಇಲ್ಲಿ ಚಾರ್ಲಿ ಪ್ರಮುಖ ಆಕರ್ಷಣೆ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ, ತರಬೇತುದಾರನ ಸೂಚನೆಯ ಮೇರೆಗೆ, ನಾಯಕನ ಪ್ರೀತಿಯ ಜೊತೆಗೆ ಒಂದಿಷ್ಟೂ ಪಾತ್ರಕ್ಕೆ ಚ್ಯುತಿಯಾಗದ ರೀತಿ ನಟಿಸಿದ್ದಾಳೆ. ನೋಡುಗರಿಂದ ಶಿಳ್ಳೆ ಚಪ್ಪಾಳೆಯನ್ನೂ ಗಿಟ್ಟಿಸುತ್ತಾಳೆ.
ರಕ್ಷಿತ್ ಶೆಟ್ಟಿ ಎಂದಿಗಿಂತಲೂ ಇಲ್ಲಿ ಕಾಡುತ್ತಾರೆ. ಹಿಂದಿನ ಸಿನಿಮಗಳ ನಟನೆ ಮರೆಸಿ, ಇಲ್ಲಿ ನೆನಪಲ್ಲುಳಿಯುವಂತೆ ನಟಿಸಿದ್ದಾರೆ. ಒಟ್ಟಾರೆ ರಕ್ಷಿತ್ ಶೆಟ್ಟಿ ಈ ಮೂಲಕ ದೊಡ್ಡ ಗೆಲುವಿನ ನಗೆ ಬೀರೋದಂತು ಗ್ಯಾರಂಟಿ.


ತಮಿಳು ನಟ ಬಾಬಿ ಸಿಂಹ ತೆರೆ ಮೇಲೆ ಇರುವಷ್ಟು ಕಾಲ ಇಷ್ಟವಾಗ್ತಾರೆ. ಸಂಗೀತಾ ಶೃಂಗೇರಿ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಜ್ ಬಿ.ಶೆಟ್ಟಿ ಅಲ್ಲಲ್ಲಿ ನಗಿಸಿ ನೆನಪಲ್ಲುಳಿತಾರೆ. ಉಳಿದಂತೆ ಬರುವ ಪಾತ್ರಗಳೆಲ್ಲವೂ ಗಮನಸೆಳೆಯುತ್ತವೆ.
ಮುಖ್ಯವಾಗಿ ಇಲ್ಲಿ ನೋಬಿನ್ ಪಾಲ್ ಸಂಗೀತ ಮತ್ತು ಹಾಡು ಇಷ್ಟವಾಗುತ್ತೆ. ಕಥೆಗೆ, ಸನ್ನಿವೇಶಕ್ಕೆ ಪೂರಕವಾಗಿ ಕೆಲಸ ಮಾಡಿದ್ದಾರೆ. ಪ್ರತೀಕ್ ಶೆಟ್ಟಿ ಸಂಕಲನ ಚಿತ್ರದ ವೇಗ ಹೆಚ್ಚಿಸಿದೆ. ಅರವಿಂದ್ ಎಸ್ ಕಶ್ಯಪ್ ಅವರ ಕ್ಯಾಮೆರಾ ಕೈಚಳಕ ಚಾರ್ಲಿಯ ಚಾರ್ಮ್ ಗಟ್ಟಿಗೊಳಿಸಿದೆ.

ಕೊನೇ ಮಾತು: ಪ್ಯಾನ್ ಇಂಡಿಯಾ ಸಿನಿಮಾ ಅಂದಾಕ್ಷಣ, ಬರೀ ಹೊಡಿ, ಬಡಿ, ಕಡಿ, ಎಂಬ ಅಬ್ಬರವೇ ಜಾಸ್ತಿ. ಅಂತಹ‌ ಸಿನಿಮಾಗಳ ನಡುವೆ ಎಮೋಷನ್ ಕಂಟೆಂಟ್ ಇರುವ ಇಂತಹ ಚಿತ್ರಗಳೂ ಇಂಡಿಯಾ ಜನರ ಮನ ಮುಟ್ಟುತ್ತವೆ ಅನ್ನುವುದಕ್ಕೆ 777 ಚಾರ್ಲಿ ಕಣ್ಣೆದುರಿನ ಸಾಕ್ಷಿ. ಅದನ್ನು ಕಣ್ತುಂಬಿಕೊಳ್ಳಲು ನೀವೊಮ್ಮೆ ನೋಡಿ.

Categories
ಸಿನಿ ಸುದ್ದಿ

ತ್ರಿವಿಕ್ರಮನಿಗೆ ಸೆಲಿಬ್ರಿಟಿಗಳ ಸಾಥ್! ಹನಿ ಬನಿ ಸಾಂಗ್ ಸುದ್ದಿ ಜೋರು…

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಪುತ್ರ ವಿಕ್ರಮ್ ನಟನೆಯ ಮೊದಲ ಸಿನಿಮಾ ತ್ರಿವಿಕ್ರಮ ಜೂನ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಹಾಡುಗಳ ಮೂಲಕ ಗಮನ ಸೆಳೆಯಲು ಮುಂದಾಗಿರುವ ಚಿತ್ರತಂಡ, ರವಿಚಂದ್ರನ್ ಹುಟ್ಟುಹಬ್ಬದ ಪ್ರಯುಕ್ತ ‘ಪ್ಲೀಸ್ ಮಮ್ಮಿ…’ ವೀಡಿಯೋ ಸಾಂಗ್ ರಿಲೀಸ್ ಮಾಡಿತ್ತು. ಇದೀಗ ಮತ್ತೊಂದು ಹಾಡನ್ನು ಹರಿಬಿಟ್ಟಿದೆ ‘ತ್ರಿವಿಕ್ರಮ’ ಬಳಗ.

‘ಜೇಮ್ಸ್‌’ ಚೇತನ್ ಕುಮಾರ್ ಸಾಹಿತ್ಯ ಬರೆದಿರುವ ‘ಹನಿ ಬನಿ ಫೀಲ್ ಮೈ ಲವ್’ ಎಂಬ ಹಾಡನ್ನು ಸುಮಾರು 20ಕ್ಕೂ ಹೆಚ್ಚು ಸೆಬ್ರಿಟಿಗಳು ವರ್ಚುವಲ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಸಂಜಿತ್ ಹೆಗ್ಡೆ ದನಿಗೂಡಿಸಿದ್ದಾರೆ. ಬ್ಯಾಂಕಾಕ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ನೃತ್ಯ ನಿರ್ದೇಶಕ ಭೂಷಣ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಕಲರ್’ಫುಲ್ ಆಗಿ ಮೂಡಿಬಂದಿರುವ ಈ ಹಾಡು ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್’ನಲ್ಲಿ ಬಿಡುಗಡೆಯಾಗಿದ್ದು, ಸದ್ಯ ಟ್ರೆಂಡಿಂಗ್’ನಲ್ಲಿದೆ.

ಪ್ರೇಮ್, ರಕ್ಷಿತಾ, ಗಣೇಶ್, ಸೃಜನ್ ಲೋಕೇಶ್, ಚಂದನ್ ಶೆಟ್ಟಿ, ನವೀನ್ ಸಜ್ಜು, ಮೇಘಾ ಶೆಟ್ಟಿ ಹಾಗೂ ಅನುಪಮಾ ಗೌಡ ಸೇರಿದಂತೆ ಸಾಕಷ್ಟು ತಾರೆಯರು ಹಾಡನ್ನು ಕೇಳಿ, ಮೆಚ್ಚಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ರೋಸ್, ಮಾಸ್ ಲೀಡರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾ ಮೂರ್ತಿ ‘ತ್ರಿವಿಕ್ರಮ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ.

ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ.

Categories
ಸಿನಿ ಸುದ್ದಿ

ಟ್ರೇಲರ್ ನೋಡಿ ಅಬ್ಬಬ್ಬ ಎಂದ ಸುದೀಪ್! ಹೊಸಬರ ಚಿತ್ರ ಜುಲೈ 1ಕ್ಕೆ ರಿಲೀಸ್…

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳಿಗೆ ಕಿಚ್ಚ ಸುದೀಪ ಅವರ ಬೆಂಬಲ ಸದಾ ಇದ್ದೇ ಇರುತ್ತೆ. ಸುದೀಪ್ ಈಗ ಉತ್ತಮ ಮನೋರಂಜನೆಯ “ಅಬ್ಬಬ್ಬ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.


ಸುದೀಪ್ ಅವರ ಟ್ವಿಟರ್‌ ವಾಲ್ ನಲ್ಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಜುಲೈ ಒಂದರಂದು ತೆರೆಗೆ ಬರಲಿದೆ.

“ತುಂಬ ದಿನಗಳ ನಂತರ ಒಂದು ಅದ್ಭುತವಾದ ಕಾಮಿಡಿ ಸಿನೆಮಾ ಇದು. ಸಾಮಾನ್ಯವಾಗಿ ಬಂದ ಕಾಮಿಡಿ ಚಿತ್ರ ಅಲ್ಲಲ್ಲ ಇದು,

ಯೂತ್ ಫುಲ್ ಕಂಟೆಂಟ್ ಇರುವ, ಇತ್ತೀಚಿನ ದಿನಗಳಿಗೆ ಅಪರೂಪದ ಚಿತ್ರ” ಎಂದು ಅಬ್ಬಬ್ಬ ಟ್ರೇಲರ್ ನೋಡಿ ಸುದೀಪ್ ಹೇಳಿದ್ದಾರೆ.

ಮೀರಾಮಾರ್ ಸಂಸ್ಥೆಯ ಮೂಲಕ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ನಿರ್ಮಿಸಿರುವ ಈ ವಿಭಿನ್ನ ಹಾಸ್ಯ ಕಥಾನಕವನ್ನು ಕೆ.ಎಂ. ಬರೆದಿರುವ ಚಿತ್ರವನ್ನು ಕೆ.ಎಂ.ಚೈತನ್ಯ ನಿರ್ದೇಶಿಸಿದ್ದಾರೆ.


ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯಂಗಾರ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.
ಖ್ಯಾತ ಕೆ.ಆರ್.ಜಿ ಸಂಸ್ಥೆಯ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಎ ಕಿಕ್ ಲವ್ ಸ್ಟೋರಿ… ಇದು ಮದರಂಗಿ ಹುಡುಗನ ದಿಲ್ ಪಸಂದ್! ಡಾರ್ಲಿಂಗ್ ಕೃಷ್ಣನ ಬರ್ತ್ ಡೇ ಗೆ ಫಸ್ಟ್ ಗ್ಲಿಂಪ್ಸ್ ರಿಲೀಸ್…

ನಿರ್ದೇಶಕ ಶಿವತೇಜಸ್ ಈಗ ಡಾರ್ಲಿಂಗ್ ಡಾರ್ಲಿಂಗ್ ಅಂತ ಜಪ ಮಾಡುತ್ತಿದ್ದಾರೆ. ಹೀಗಂದರೆ ಅಪಾರ್ಥವಾದೀತು. ವಿಷಯವಿಷ್ಟೇ, ಶಿವ ತೇಜಸ್ ತಮ್ಮ ನಿರ್ದೇಶನದ ದಿಲ್ ಪಸಂದ್ ಚಿತ್ರದ ಸುದ್ದಿಯೊಂದನ್ನು ಹೊರ ಬಿಟ್ಟಿದ್ದಾರೆ. ಚಿತ್ರ ಬಹುತೇಕ ಮುಗಿಯೋ ಹಂತಕ್ಕೆ ಬಂದಿದ್ದು, ನೋಡುಗರ ಮುಂದ ಬರಲು ಮಾತ್ರ ಬಾಕಿ ಇದೆ.

ಈ ನಡುವೆ ಅವರು ದಿಲ್ ಪಸಂದ್ ಚಿತ್ರದ ಹೊಸದೊಂದು ಗ್ಲಿಂಪ್ಸ್ ರಿಲೀಸ್ ಮಾಡೋಕೆ ರೆಡಿಯಾಗಿದ್ದಾರೆ. ಅಂದಹಾಗೆ, ಜೂನ್ 12ರಂದು ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣನ ಹುಟ್ಟುಹಬ್ಬ. ಅದರ ಅಂಗವಾಗಿ ಈ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡಲು ಅಣಿಯಾಗಿದ್ದಾರೆ. ಸದ್ಯ ಹೊಸ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿರುವ ನಿರ್ದೇಶಕರು. ಆದಷ್ಟು‌ ಬೇಗ ಚಿತ್ರದ ಟೀಸರ್, ಟ್ರೇಲರ್ ಗೆ ಪ್ಲಾನ್ ಮಾಡುತ್ತಿದ್ದಾರೆ.

ಅಂದಹಾಗೆ ಸುಮಂತ್ ಕ್ರಾಂತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೆ.ಆರ್.ರಂಗಸ್ವಾಮಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.

ವಿನೋದ್‌ಸ್ಟಂಟ್ ಮಾಡಿದರೆ, ಮುರಳಿ ಅವರ ನೃತ್ಯ ನಿರ್ದೇಶನವಿದೆ. ಜೂನ್ 12ರಂದು 11.14ಕ್ಕೆ ಆನಂದ್ ಆಡಿಯೋದಲ್ಲಿ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಆಗಲಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಲಹರಿ ವೇಲು ಅವರ ಬರ್ತ್ ಡೇಗೆ ಹೊಸ ಹಾಡು: ಇದು ಅವರೇ ಬರೆದು ಹಾಡಿದ ಗೀತೆ…

ಲಹರಿ ವೇಲು ಗಾಯನ ಮಾಡಿದ್ದು ಗೊತ್ತೇ ಇದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರೀಗ ಹಾಡೊಂದಕ್ಕೆ ಸಾಹಿತ್ಯ ಬರೆದು, ಅವರೇ ಹಾಡಿದ್ದಾರೆ. ಅಭಿಮನ್ ರಾಯ್ ಆ ಹಾಡಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಜೂನ್ 11ರಂದು ವೇಲು ಅವರ ಹುಟ್ಟು ಹಬ್ಬ. ಅಂದು ‘ಹುಟ್ಗುಣ ಸುಟ್ರು ಹೋಗಲ್ಲ’ ಶೀರ್ಷಿಕೆಯ ಹಾಡು ಲಹರಿ‌ ಮ್ಯೂಸಿಕ್ ನಲ್ಲಿ ರಿಲೀಸ್ ಆಗಲಿದೆ…

ಕನ್ನಡ ಚಿತ್ರರಂಗದಲ್ಲಿ ಲಹರಿ ಸಂಸ್ಥೆ ದೊಡ್ಡ ಛಾಪು ಮೂಡಿಸಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇಂದು ಪ್ಯಾನ್ ಇಂಡಿಯಾ ಮ್ಯೂಸಿಕ್ ಸಂಸ್ಥೆಯಾಗಿ ಬೆಳೆದಿರುವ ಲಹರಿ ಮ್ಯೂಸಿಕ್ ಸಂಸ್ಥೆ, ಯುಟ್ಯೂಬ್ ಕೊಡ ಮಾಡುವ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅಷ್ಟೇ ಅಲ್ಲ, ಲಹರಿ ಮ್ಯೂಸಿಕ್ ಸಂಸ್ಥೆ ನಿರ್ಮಿಸಿದ ಆಲ್ಬಂ ಸಾಂಗ್ ಗೆ ಗ್ರ್ಯಾಮಿ ಅವಾರ್ಡ್ ಕೂಡ ಲಭಿಸಿರುವುದು ಕನ್ನಡಕ್ಕೆ ಮತ್ತು ಭಾರತೀಯ ಚಿತ್ರರಂಗಕ್ಕೆ ಸಂತಸದ ವಿಷಯ. ಹಲವು ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಿರುವ ಲಹರಿ ಸಂಸ್ಥೆ, ನಿರಂತರವಾಗಿ ಸಿನಿಮಾ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿದೆ. ಈಗ ಲಹರಿ‌ ಸಂಸ್ಥೆ ಕುರಿತು ಇಷ್ಟೊಂದು ಪೀಠಿಕೆ ಯಾಕೆ ಗೊತ್ತಾ?

ಲಹರಿ ಮ್ಯೂಸಿಕ್ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ಲಹರಿ ವೇಲು ಮತ್ತು ಅವರ ಪ್ರೀತಿಯ ಸಹೋದರ ಮನೋಹರ ನಾಯ್ಡು. ಸರಿಸುಮಾರು ನಾಲ್ಕು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಸ್ಥಗೆ ಈ ಇಬ್ಬರು ಸಹೋದರರು ಭದ್ರ ಬುನಾದಿ ಹಾಕಿದ್ದಾರೆ. ಲಹರಿ ವೇಲು ಅದ್ಬುತ ಮಾತುಗಾರರು. ಯಾವುದೇ ವಿಷಯವಿರಲಿ, ಅದನ್ನು ನಿರರ್ಗಳವಾಗಿ ಗಂಟೆಗಟ್ಟಲೆ ಮಾತಾಡುವ ವಾಕ್ಚಾತುರ್ಯ ಅವರಲ್ಲಿದೆ. ಬಹಳಷ್ಟು ಮಂದಿಗೆ ವೇಲು ಒಬ್ಬ ಒಳ್ಳೆಯ ವ್ಯಕ್ತಿ, ಎಲ್ಲರನ್ನೂ ಆತ್ಮೀಯವಾಗಿ ಮಾತಾಡಿಸುವ ವ್ಯಕ್ತಿತ್ವ ಅವರದು ಅನ್ನುವುದಷ್ಟೇ ಗೊತ್ತು. ಅದರಾಚೆಗೆ ಅವರೊಬ್ಬ ಗಾಯಕರು ಅನ್ನೋದು ಗೊತ್ತಿಲ್ಲ. ಬರೀ ಗಾಯಕರಷ್ಟೇ ಅಲ್ಲ, ಅವರೊಬ್ಬ ಗೀತರಚನೆಕಾರರೂ ಹೌದು.

ಗಾಯಕ ಕಮ್ ಗೀತ ಸಾಹಿತಿ

ನಿಜ, ಲಹರಿ ವೇಲು ಅವರೊಳಗೊಬ್ಬ ಗಾಯಕ‌ ಕಮ್ ಬರಹಗಾರನಿದ್ದಾನೆ. ಅದು ಈಗಾಗಲೇ ಸಾಬೀತಾಗಿದೆ ಕೂಡ. ಕಳೆದ ಕೊರೊನೊ ವೇಳೆ ಲಹರಿ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದವರನ್ನು‌ ಗುರುತಿಸಿ ಆ ಮೂಲಕ ಒಂದಷ್ಟು ಸಹಾಯ ಹಸ್ತ ಚಾಚಿದ್ದು ಗೊತ್ತೇ ಇದೆ. ಅದೇ ಸಮಯದಲ್ಲಿ ಹಾಗೆ ಸುಮ್ಮನೆ ಹಾಡನ್ನು ಗುನುಗುವಾಗ ಸಂಗೀತ ನಿರ್ದೇಶಕ ಅಭಿಮನ್ ರಾಯ್ ಅವರು, ಲಹರಿ ವೇಲು ಅವರ ಹಾಡುವ ಧ್ವನಿ ಗಮನಿಸಿ, ನೀವೊಂದು ಹಾಡು ಹಾಡಬಾರದೇಕೆ ಎಂದು ಪ್ರಶ್ನಿಸಿದ್ದಾರೆ. ಅದರ ಬೆನ್ನಲ್ಲೇ ಲಹರಿ ವೇಲು ಕೂಡ ಪ್ರಯತ್ನಕ್ಕೆ‌ ಮುಂದಾಗಿದ್ದಾರೆ. ‘ ಒಳಿತು ಮಾಡು‌ ಮನುಸ ನೀ ಇರೋದು ಮೂರು ದಿವಸ’ ಗೀತೆ ಬರೆದ ನಮ್‌ ರಿಷಿ ಬರೆದ ‘ಇರುವುದೊಂದೆ ಜನ್ಮ ನೀ ಸಹಾಯ ಮಾಡು ತಮ್ಮ’ ಎಂಬ ಮಾನವೀಯ ಮೌಲ್ಯ ಸಾರುವ ಗೀತೆಗೆ ವೇಲು ಅವರು ಧ್ವನಿಯಾಗಿದ್ದಾರೆ. ಆ ಹಾಡು ಲಹರಿ ಮ್ಯೂಸಿಕ್ ನಲ್ಲಿ ರಿಲೀಸ್ ಆಗಿದ್ದೇ ತಡ ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಈಗ ಒಂದು ಮಿಲಿಯನ್ (ಹತ್ತು ಲಕ್ಷ) ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.

ಇದರ ಬೆನ್ನ ಹಿಂದೆಯೇ ಇದೀಗ ಲಹರಿ ವೇಲು ಅವರು ಮತ್ತೊಂದು ಅದ್ಭುತ ಗೀತೆಗೆ ಧ್ವನಿಯಾಗಿದ್ದಾರೆ. ಹಾಡುವುದರ ಜೊತೆಗೆ ಅವರು ತಾನೊಬ್ಬ ಗೀತ ಸಾಹಿತಿಯೂ ಆಗಿದ್ದಾರೆ. ಹೌದು, ಮತ್ತದೇ ಟೀಮ್ ಜೊತೆ ಸೇರಿಕೊಂಡು‌ ಲಹರಿ ವೇಲು ಒಂದೊಳ್ಳೆಯ ಗೀತೆ ಬರೆದು ಹಾಡಿದ್ದಾರೆ. ‘ ಹುಟ್ಗುಣ ಸುಟ್ರು ಹೋಗಲ್ಲ’ ಎಂಬ ಹಾಡನ್ನು ಸ್ವತಃ ರಚಿಸಿದ ವೇಲು, ಅದನ್ನು ಸಂಗೀತ ನಿರ್ದೇಶಕ ಅಭಿಮನ್ ರಾಯ್ ಅವರ ಬಳಿ ಹೇಳಿದ್ದಾರೆ. ಆ ಸಾಲುಗಳನ್ನು ಗಮನಿಸಿದ ಅಭಿಮನ್ ರಾಯ್, ವೇಲು ಅವರಿಂದ ಆ ಹಾಡನ್ನು ಸಂಪೂರ್ಣ ಬರೆಸಿ, ಅರ್ಥಪೂರ್ಣವಾದ ಹಾಡಿಗೆ ರಾಗ ಸಂಯೋಜನೆ ಮಾಡಿದ್ದಾರೆ. ವೇಲು ಬರೆದ ಹಾಡಿಗೆ ಅವರಿಂದಲೇ ಹಾಡಿಸಿದ್ದಾರೆ. ವೇಲು‌ ಅವರ ಜೊತೆ ಈ ಹಾಡಿಗೆ ವೇದಾ ವೆಂಕಟೇಶ್ ಭಟ್ ಕೂಡ ಧ್ವನಿಯಾಗಿದ್ದಾರೆ. ಆ ಹಾಡು ಜೂನ್ 11ರಂದು ಲಹರಿ ಮ್ಯೂಸಿಕ್ ನಲ್ಲಿ ರಿಲೀಸ್ ಆಗುತ್ತಿದೆ. ವಿಶೇಷವಾಗಿ ಈ ಹಾಡನ್ನು ಬಿಡುಗಡೆ ಮಾಡುತ್ತಿರುವ ಉದ್ದೇಶ, ಜೂನ್ 11 ಲಹರಿ ವೇಲು ಅವರ ಹುಟ್ಟು ಹಬ್ಬ. ತಮ್ಮ 57 ನೇ ವಸಂತಕ್ಕೆ ಕಾಲಿಡುತ್ತಿರುವ ವೇಲು ಅವರಿಗಾಗಿ ಅಭಿಮನ್ ರಾಯ್ ಈ ಹಾಡನ್ನು ಅಂದೇ ರಿಲೀಸ್ ಮಾಡುತ್ತಿದ್ದಾರೆ.

ಅದೇನೆ ಇರಲಿ, ತಮ್ಮ ಮತ್ತೊಂದು ಗೀತೆ ಕುರಿತು ಲಹರಿ ವೇಲು ಅವರು ಹೇಳುವುದಿಷ್ಟು. ‘ಅಭಿಮನ್ ರಾಯ್ ಅವರ ರಾಗ ಸಂಯೋಜನೆಯಲ್ಲಿ ಒಂದು‌ ಹಾಡು ಹಾಡಿದ್ದೆ. ಅದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿತ್ತು. ಇತ್ತೀಚೆಗೆ ಅಭಿಮನ್ ರಾಯ್ ಲಹರಿ ಸಂಸ್ಥೆ ಕಚೇರಿಗೆ ಬಂದಾಗ, ನಾನು ಒಂದಷ್ಟು ಸ್ಪೂರ್ತಿದಾಯಕ ಎನಿಸುವ ಪದಗಳನ್ನು ಬರೆದಿದ್ದೆ. ಅದನ್ನು ಅಭಿಮನ್ ಗಮನಿಸಿ, ಪದಗಳಲ್ಲಿ ಸಾಕಷ್ಟು ಅರ್ಥವಿದೆ. ಇನ್ನಷ್ಟು ಬರೆದು ಪೂರ್ಣಗೊಳಿಸಿ ಇದಕ್ಕೆ ರಾಗ ಸಂಯೋಜಿಸುತ್ತೇನೆ ಅಂದರು. ನಾನು ಅನುಭವಿಸಿದ, ನೋಡಿದ ಸಂದರ್ಭ ನೆನೆದು ಒಂದಷ್ಟು ಸಾಲು ಬರೆದೆ. ಅದೀಗ ಹಾಡಿನ ರೂಪದಲ್ಲಿ ಹೊರ ಬರಲಿದೆ. ಎಲ್ಲರೂ ತೋರಿದ ಪ್ರೀತಿಯಿಂದ ಹಾಡು ಬರೆಯೋಕೆ ಸಾಧ್ಯವಾಗಿದೆ’ ಎನ್ನುತ್ತಾರೆ ವೇಲು.

ಅಂದಹಾಗೆ, ‘ಹುಟ್ಗುಣ ಸುಟ್ರು ಹೋಗಲ್ಲ’ ಗೀತೆ ಮತ್ತೊಂದು ಮೆಚ್ಚುಗೆಯ ಹಾಡಾಗಲಿ, ಎಲ್ಲರೂ ಗುನುಗುವಂತಾಗಲಿ ಎಂಬುದು ಆಶಯ.

Categories
ಸಿನಿ ಸುದ್ದಿ

ಚಿತ್ರ ಸಾಹಿತಿ ಪುರುಷೋತ್ತಮ ಕಣಗಾಲ್ ನಿಧನ

ಖ್ಯಾತ ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್ ನಿನ್ನೆ ಅಮೇರಿಕಾದ ತಮ್ಮ ಮಗಳ ನಿವಾಸದಲ್ಲಿ ನಿಧನರಾಗಿದ್ದಾರೆ. ಪುರುಷೋತ್ತಮ ಕಣಗಾಲ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ಒಬ್ಬ ಮಗ ಹಾಗೂ ಒಬ್ಬ ಮಗಳನ್ನು ಅವರು ಅಗಲಿದ್ದಾರೆ.


ಪುರುಷೋತ್ತಮ ಕಣಗಾಲ್, ಹೆಸರಾಂತ ಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಪುತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣನ ಮಗ.‌
ಪುರುಷೋತ್ತಮ ಕಣಗಾಲ್ ಅವರು ಕನ್ನಡದ ಸಾಕಷ್ಟು ಚಿತ್ರಗಳಿಗೆ ಗೀತ ರಚನೆ ಮಾಡಿದ್ದಾರೆ. ಕಣಗಾಲ್ ನೃತ್ಯಾಲಯ ಹಾಗೂ ಪುಟ್ಟಣ್ಣ ಕಣಗಾಲ್ ಟ್ರಸ್ಟ್ ನ ಮುಖ್ಯಸ್ಥರಾಗಿ ಪುರುಷೋತ್ತಮ ಕಣಗಾಲ್ ಕಾರ್ಯ ನಿರ್ವಹಿಸಿದ್ದರು.

Categories
ಸಿನಿ ಸುದ್ದಿ

ಬಹು ನಿರೀಕ್ಷಿತ ಕಬ್ಜ ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್ ಶುರು…

ವಿಶ್ವದಾದ್ಯಂತ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಜನಪ್ರಿಯತೆ ಪಡೆದಿರುವ, ಆರ್ ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ “ಕಬ್ಜ” ಚಿತ್ರ ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.

ಒಂದು ಹಾಡಿನ ಚಿತ್ರೀಕರಣ ಬಿಟ್ಟು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಏಕಕಾಲದಲ್ಲಿ ಏಳುಭಾಷೆಗಳಲ್ಲೂ ಡಬ್ಬಿಂಗ್ ಸಹ ಸದ್ದಿಲ್ಲದೆ ನಡೆಯುತ್ತಿದೆ.

1940ರ ಕಾಲಘಟ್ಟದ ಕಥೆ ಅದ್ಭುತವಾಗಿದೆ. ಮೋಷನ್ ಪೋಸ್ಟರ್ ಹಾಗೂ ಸ್ಟಿಲ್ಸ್ ಜನಮನಸೂರೆಗೊಂಡಿದೆ. ಮೇಕಿಂಗ್ ತುಣುಕು ನೋಡಿದವರಂತು ಫಿದಾ ಆಗಿದ್ದಾರೆ. ಭಾರತ ದೇಶವೇ ತಿರುಗಿ ನೋಡುವ ಸಿನಿಮಾ ಇದಾಗಲಿದೆ. “ಕಬ್ಜ” ಚಿತ್ರ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮೈಲಿಗಲ್ಲಾಗಲಿ ಎಂಬುದೇ ಕನ್ನಡಿಗರ ಆಶಯ. ಚಿತ್ರದ. ಟೀಸರ್ ನೋಡುವ ಕಾತುರದಲ್ಲಿದ್ದೇವೆ. ಆದಷ್ಟು ಬೇಗ ಬಿಡುಗಡೆ ಮಾಡಿ ಎಂದು ಸಿನಿಪ್ರೇಕ್ಷಕರು ಚಂದ್ರು ಅವರನ್ನು ಒತ್ತಾಯಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಬಿಡುಗಡೆ ಮುನ್ನವೇ ನೋಡುಗರ ಮನ ಗೆದ್ದ 777 ಚಾರ್ಲಿ…

ಕಿರಣ್ ರಾಜ್ ನಿರ್ದೇಶನದ ಮೊದಲ ಚಿತ್ರ, ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ “777 ಚಾರ್ಲಿ” ಚಿತ್ರ. ಜೂನ್ 10 ರಂದು ದೇಶ ಹಾಗೂ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.

ನಮ್ಮ ಚಿತ್ರ ಇದೇ ಹತ್ತರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ದೆಹಲಿ, ಅಹಮದಾಬಾದ್, ಲಕ್ನೋ, ಕೊಲ್ಕತ್ತಾ ಸೇರಿದಂತೆ ಭಾರತದ ವಿವಿಧ ಕಡೆ ಹಾಗೂ ವಿದೇಶದ ಕೆಲವು ಕಡೆ ನಮ್ಮ ಚಿತ್ರದ ಸೆಲೆಬ್ರಿಟಿ ಶೋಗಳನ್ನು ಆಯೋಜಿಸಲಾಗಿತ್ತು. ಸಾಕಷ್ಟು ಜನ ನಮ್ಮ ಚಿತ್ರ ವೀಕ್ಷಣೆ ಮಾಡಿ,‌‌ ಮೆಚ್ಚುಗೆ ಸೂಚಿಸಿದ್ದಾರೆ.‌ ಕೆಲವು ಪ್ರಾಣಿಪ್ರಿಯರಂತೂ ಕಣ್ಣಲ್ಲಿ ನೀರು ಹಾಕಿಕೊಂಡು ಹೊರಬಂದಿದ್ದಾರೆ.‌‌ ಅವರ ಪ್ರತಿಕ್ರಿಯೆ ನೋಡಿ, ನಮಗೂ ಮನ ತುಂಬಿ‌ ಬಂದಿದೆ. ವ್ಯಾಪಾರ ದೃಷ್ಟಿಯಿಂದ ಹೇಳುವುದಾದಾರೆ, ಬಿಡುಗಡೆಗೂ ಮುನ್ನವೇ “ಚಾರ್ಲಿ” ನಮ್ಮನ್ನು‌ ಗೆಲಿಸಿದ್ದಾಳೆ ಎನ್ನುತ್ತಾರೆ‌ ಚಿತ್ರದ ನಿರ್ಮಾಪಕರೂ ಆಗಿರುವ ರಕ್ಷಿತ್ ಶೆಟ್ಟಿ.

ನನ್ನ ತಂಡದ ಪರಿಶ್ರಮದಿಂದ ನನ್ನ ಮೊದಲ ಚಿತ್ರ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರ ನೋಡಿರುವವರು ಮೆಚ್ಚುಗೆ ಸೂಚಿಸಿದ್ದಾರೆ. ಒಳ್ಳೆಯ ಚಿತ್ರ ಮಾಡಿದ್ದೀನಿ ಎಂಬ ವಿಶ್ವಾಸವಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಕಿರಣ್ ರಾಜ್.

ಕರ್ನಾಟಕದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರದ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಜೂನ್ 9 ರಂದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗಾಗಿ ಪೂರ್ವಭಾವಿ ಪ್ರದರ್ಶನ ಆಯೋಜಿಸಲಾಗಿದೆ.

ಬೆಂಗಳೂರಿನಲ್ಲಿ 55 ಕಡೆ ನಡೆದರೆ, ಉಳಿದಂತೆ ಕರ್ನಾಟಕದ ವಿವಿಧ ಕಡೆ ನಡೆಯಲಿದೆ. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಎರಡರಲ್ಲೂ ಪ್ರದರ್ಶನ ನಡೆಯಲಿದೆ ಎಂದರು ಕೆ.ಆರ್.ಜಿ ಫಿಲಂಸ್ ನ‌ ಕಾರ್ತಿಕ್ ಗೌಡ.

ನಾಯಕಿ ಸಂಗೀತ ಶೃಂಗೇರಿ, “ಚಾರ್ಲಿ” ಟ್ರೈನರ್ ಪ್ರಮೋದ್, ಸಂಗೀತ ನಿರ್ದೇಶಕ ನೊಬಿನ್ ಪಾಲ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಬೇಬಿ ಶಾರ್ವರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ನಿರ್ಮಾಣದ ಚಿತ್ರ ಜು. 8ಕ್ಕೆ ರಿಲೀಸ್: ಇದು ಎಲ್ಲರ ಹೋಪ್…!

ಹೋಪ್..ಕನ್ನಡದಲ್ಲಿ ಹೀಗೊಂದು ಸಿನಿಮಾ ಬರ್ತಿರೋದು ಗೊತ್ತೇ ಇದೆ. ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್ ಸಣ್ಣದೊಂದು ಗ್ಯಾಪ್ ಬಳಿಕ ಕಂಬ್ಯಾಕ್ ಆಗ್ತಿರುವ ಈ ಚಿತ್ರ ತೆರೆಗೆ ಬರೋದಿಕ್ಕೆ ಅಣಿಯಾಗಿದೆ. ಜುಲೈ 8ರಂದು ಹೋಪ್ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಈಗಾಗಲೇ ಚಿತ್ರತಂಡ ಪ್ರಚಾರಕ್ಕೆ ಸಜ್ಜಾಗ್ತಿದೆ.

ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಕಥೆ ಬರೆದು ನಿರ್ಮಾಣ ಮಾಡಿರುವ ಹೋಪ್ ಸಿನಿಮಾಗೆ ಅಂಬರೀಷ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೆಎಎಸ್ ಅಧಿಕಾರಿಗಳ ವರ್ಗಾವಣೆ ಸಾಮಾನ್ಯ ಜನರಿಗೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬ ಕಂಟೆಂಟ್ ಆಧಾರಿತ ಸೋಷಿಯಲ್ ಡ್ರಾಮಾ ಹೋಪ್ ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಕೆಎಎಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಸಂಸದೆ ಸುಮಲತಾ ಅಂಬರೀಷ್ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಗೋಪಾಲ್ ದೇಶಪಾಂಡೆ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹೋಪ್ ಚಿತ್ರ ಇಷ್ಟರಲ್ಲಾಗಲೇ ತೆರೆಗೆ ಬರಬೇಕಿತ್ತು. ಆದ್ರೆ ಕೊರೋನಾ ಕಾರಣದಿಂದ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಮಾಡಲಾಗಿತ್ತು. ಇದೀಗ ಎಲ್ಲಾ ಕೆಲಸಗಳನ್ನು ಮುಗಿಸಿರುವ ಚಿತ್ರತಂಡ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. 34 ದಿನಗಳ ಶೂಟಿಂಗ್ ಮುಗಿಸಿರುವ ಹೋಪ್ ಚಿತ್ರಕ್ಕೆ ಹಾಲೇಶ್ ಛಾಯಾಗ್ರಾಹಣ, ಹರೀಶ್ ಕೊಮ್ಮೆ ಸಂಕಲನ, ರಿತ್ವಿಕ್ ಮುರಳೀಧರ್ ಸಂಗೀತವಿದೆ.

Categories
ಸಿನಿ ಸುದ್ದಿ

ಡೊಳ್ಳುಗೆ ಪ್ರಶಸ್ತಿಗಳ ಸೌಂಡು!ಇದು ಪವನ್‌ ಒಡೆಯರ್ ನಿರ್ಮಾಣದ ಚಿತ್ರ…

ನಿರ್ದೇಶಕನಾಗಿ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪವನ್ ಒಡೆಯರ್, ತಮ್ಮದೇ ಒಡೆಯರ್ ಮೂವೀಸ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ಸಿನಿಮಾ ಡೊಳ್ಳು. ಡೊಳ್ಳು ಕುಣಿತದ ಸುತ್ತ ಎಣೆದಿರುವ ಈ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಹರಿದು ಬಂದಿದೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಡೊಳ್ಳು ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ. ಇಷ್ಟೆಲ್ಲಾ ಯಶಸ್ಸಿಗೆ ಕಾರಣದವರಿಗೆ ಇಡೀ ಚಿತ್ರತಂಡ ಧನ್ಯವಾದ ಅರ್ಪಿಸಿದೆ.

ಒಡೆಯರ್ ಮೂವೀಸ್ ನಡಿ ನಿರ್ಮಾಣದ ಮಾಡಿರುವ ಮೊದಲ ಸಿನಿಮಾವಾಗಿದ್ದು, ನಾನು ನನ್ನ ಪತ್ನಿ, ಸ್ನೇಹಿತರಾದ ಹರೀಶ್ ನಾರಾ, ಸಚಿನ್ ತಪಶೆಟ್ಟಿ, ನರಸಿಂಹ ಜೊತೆಗೂಡಿ ಚಿತ್ರ ನಿರ್ಮಾಣ ಮಾಡಿದ್ದೇವೆ. ಇದು ನಿಜವಾದ ಸಿನಿಮಾ. ಇಡೀ ತಂಡ ಸೇರಿಕೊಂಡು ತುಂಬಾ ಅದ್ಭುತ ಸಿನಿಮಾ ಮಾಡಿದ್ದಾರೆ. ನಿರ್ಮಾಪಕನಾಗಿ ನನಗೂ ಇದು ಹೊಸ ಅನುಭವ. ಸಿನಿಮಾದ ವಿಶೇಷ ಅಂದ್ರೆ ಇಡೀ ಡೊಳ್ಳು ಕಲಾವಿದರು ಅಭಿನಯಿಸಿರುವ ಚಿತ್ರ ಇದಾಗಿದೆ ಎಂದು ನಿರ್ಮಾಪಕ ಪವನ್ ಒಡೆಯರ್ ಅಭಿಪ್ರಾಯ ಹಂಚಿಕೊಂಡರು.

ಇಂತಹ ಅವಕಾಶ ಮಾಡಿಕೊಟ್ಟಿದ್ದಕ್ಕೆ ಪವನ್ ಸರ್ ಗೆ ಧನ್ಯವಾದ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿದವರಿಗೆ ಸಿನಿಮಾ ಮಾಡುವುದು ದೊಡ್ದ ಸಾಹಸ. ಆ ಸಾಹಸ ಮಾಡುವುದಕ್ಕೆ ಇಡೀ ತಂಡ ಸಪೋರ್ಟ್ ಮಾಡಿದೆ. ಈ ಯಶಸ್ಸಿಗೆ ಕಾರಣವರಾದ ಎಲ್ಲರಿಗೂ ಧನ್ಯವಾದ ಎಂದು ನಿರ್ದೇಶಕ ಸಾಗರ್ ಪುರಾಣಿಕ್ ತಮ್ಮ ಅನಿಸಿಕೆ ಹಂಚಿಕೊಂಡರು.

ಸಾಗರ್ ಪುರಾಣಿಕ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿರುವ ಡೊಳ್ಳು ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ, ನಾಯಕ-ನಾಯಕಿಯಾಗಿ ನಟಿಸಿದ್ದು, ಬಾಬು ಹಿರಣಯ್ಯ, ಚಂದ್ರ ಮಯೂರ್ ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಲಾಥಿ ಕ್ಯಾಮೆರಾವಿರುವ ಡೊಳ್ಳು ಸಿನಿಮಾ ಸದ್ಯದಲ್ಲಿಯೇ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡಲಿದೆ.

error: Content is protected !!