ಮನಪೂರ ಕಾಡುವ ಚಾರ್ಲಿಯ ಎಮೋಷನಲ್ ಜರ್ನಿ: ಭಾವನೆಗಳ ಜೊತೆ ಭಾವುಕತೆಗೆ ದೂಡುವ ಆ ಎರಡು ಜೀವಗಳು…

ಚಿತ್ರ ವಿಮರ್ಶೆ

  • ವಿಜಯ್ ಭರಮಸಾಗರ


ರೇಟಿಂಗ್: 4.5 /5

ಚಿತ್ರ: 777 ಚಾರ್ಲಿ
ನಿರ್ಮಾಣ : ಜಿ.ಎಸ್ ಗುಪ್ತ, ರಕ್ಷಿತ್ ಶೆಟ್ಟಿ
ನಿರ್ದೇಶಕ : ಕಿರಣ್ ರಾಜ್
ತಾರಾಗಣ: ಚಾರ್ಲಿ, ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ಬಾಬಿ ಸಿಂಹ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಠ್, ಭಾರ್ಗವಿ ನಾರಾಯಣ್ ಇತರರು.

‘ಅವನಿಗೆ ಮನೆ ಮಠ ಇಲ್ಲ. ಮೂರನೆಯವರನ್ನ ಹತ್ರ ಸೇರಿಸಲ್ಲ. ಅವನ ಪ್ರಕಾರ ಅವನು ಸರಿಯಾಗಿದ್ದಾನೆ. ಆದರೆ, ನೋಡೋ ಜನ ಸರಿ ಇಲ್ಲ…’
ಇದು ಕಥಾನಾಯಕ ಧರ್ಮನ ಕಥೆ ಮತ್ತು ವ್ಯಥೆ.

ಸಿನಿಮಾ ಅನ್ನೋದು ಭಾವನೆಗಳನ್ನು ಕೆದಕಿ ಭಾವುಕತೆ ಹೆಚ್ಚಿಸುವಂತಿರಬೇಕು. ನೋಡುವ ಕಣ್ ಒದ್ದೆಯಾಗಿ, ಮನ ಕರಗಿ ಎದೆ ಭಾರವಾಗಿಬಿಡಬೇಕು… ಹಾಗೊಮ್ಮೆ ದುಃಖದ ಕಟ್ಟೆ ಹೊಡೆದು ಬಿಡಬೇಕು ಹೀಗಂದುಕೊಂಡೇ ನಿರ್ದೇಶಕ ಕಿರಣ್ ರಾಜ್, ‘777 ಚಾರ್ಲಿ’ ಕಥೆ ಬರೆದು ಚಂದದ ಸಿನಿಮಾ ಮಾಡಿದ್ದಾರೆ. ಸುದೀರ್ಘ ಪಯಣದ ನೋವಿನ ಆಯಾಸದಲ್ಲೂ ಗೆಲುವಿನ ನಗೆ ಬೀರಿದ್ದಾರೆ.

ಒಂದೇ ಮಾತಲ್ಲಿ ಹೇಳುವುದಾದರೆ, ಈ ಚಾರ್ಲಿ ಒಪ್ಪಿ, ಅಪ್ಪುವ ಚಿತ್ರ, ಮನಸ್ಸಿಗೆ ಆಪ್ತವೆನಿಸೋ ಸಿನಿಮಾ. ಇದು ಬರೀ ಸಿನಿಮಾ ಕಥೆಯಲ್ಲ, ಸಂಬಂಧಗಳ ಬೆಸೆಯುವ, ಮಾನವೀಯ ಮೌಲ್ಯವುಳ್ಳ ಚಿತ್ರಣದ ಹೂರಣ.

ಮನುಷ್ಯನಿಗೂ ಪ್ರಾಣಿಗಳಿಗೂ ಅಜಗಜಾಂತರ ವ್ಯತ್ಯಾಸ. ಆದರೆ, ಕೆಲ ಸಾಕು ಪ್ರಾಣಿಗಳದ್ದು ಮಗುವಿನಂತಹ ಹೃದಯ. ಅಂತಹ ಪ್ರಾಣಿಗಳಿಗೆ ಬೇಕಿರೋದು ಅಂಥದ್ದೇ ಪ್ರೀತಿಸೋ ಹೃದಯ. ಇದನ್ನು ಅರ್ಥ ಮಾಡಿಕೊಂಡು ಚಂದದ ಸಿನಿಮಾ ಕಟ್ಟಿಕೊಡುವಲ್ಲಿ ನಿರ್ದೇಶಕ ಮತ್ತು ತಂಡ ಚಾರ್ಲಿ ಮೂಲಕ ಯಶಸ್ವಿಯಾಗಿದೆ.

ಪ್ರೀತಿ, ಗೀತಿ ಇತ್ಯಾದಿ ಕಥೆಗಳ ಮಧ್ಯೆ ಎಮೋಷನಲ್ ಕಥೆ ಹೆಣೆದು ಅದಕ್ಕೆ ಚಂದವೆನಿಸೋ ನಿರೂಪಣೆ ಮಾಡಿರುವ ನಿರ್ದೇಶಕ ಕಿರಣ್ ರಾಜ್ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ.

ನಿಜ ಹೇಳಬೇಕೆಂದರೆ, ಇಲ್ಲಿ ಇಬ್ಬರು ಹೀರೋಸ್. ಒಂದು ಧರ್ಮನಾಗಿ ಕಾಣಿಸಿಕೊಂಡಿರೋ ರಕ್ಷಿತ್ ಶೆಟ್ಟಿ, ಇನ್ನೊಂದು ಅವನ ಜೊತೆಯಲ್ಲೇ ಸಾಗುವ ಚಾರ್ಲಿ ಹೆಸರಿನ ಒಂದು ಬುದ್ಧಿವಂತ ಹೆಣ್ಣು ನಾಯಿ ಇಲ್ಲಿನ ಹೈಲೆಟ್. ಇಡೀ ಸಿನಿಮಾವನ್ನು ಆವರಿಸಿರುವ ಚಾರ್ಲಿ, ನಗಿಸ್ತಾಳೆ, ಕಾಡ್ತಾಳೆ, ಅಳಿಸ್ತಾಳೆ ಆಗಾಗ ಎದೆ ಭಾರವಾಗಿಸ್ತಾಳೆ. ಯಾಕೆ, ಹೇಗೆ ಎಂಬ ಕುತೂಹಲವಿದ್ದರೆ ಒಂದೊಮ್ಮೆ ಸಿನಿಮಾ ನೋಡಿ.

ಇಲ್ಲಿ ಹೊಡಿ ಬಡಿ ಎಂಬ ಅಬ್ಬರವಿಲ್ಲ, ಮರಸುತ್ತುವ ಹಾಡಿಲ್ಲ, ನಗಿಸಬೇಕೆಂಬ ಹರಸಾಹಸವಿಲ್ಲ, ವಿನಾಕಾರಣ ಹೀರೋಯಿಸಂ ಇಲ್ಲ. ಮುದ್ದಿಸಬೇಕೆಂಬ ಚಾರ್ಲಿಯ ಎಮೋಷನ್ ಜರ್ನಿ ಇಲ್ಲಿ ಕಾಡುತ್ತಾ ಹೋಗುತ್ತೆ. ಆ ಕಾಡುವ ವಿಷಯವೇ ಸಿನಿಮಾದ ಹೈಲೆಟ್.

ಕಲರ್ಫುಲ್ ಫ್ರೇಮ್ ಒಳಗೆ ಕನಸುಗಳ ಮೆರವಣಿಗೆ ತುಂಬಿದೆ. ಅದು ಬರೀ ಕನಸಾಗಿಯೇ ಇಲ್ಲಿ ಉಳಿದಿಲ್ಲ. ಆಕಾಶಕ್ಕೆ ಸದಾ ತಿಳಿ ನೀಲಿ ಬಣ್ಣ ಹೇಗೆ ಅಂಟಿಕೊಂಡಿದೆಯೋ ಹಾಗೆ ಚಾರ್ಲಿ ಮತ್ತು ಧರ್ಮನ ಬಾಂಧವ್ಯವೂ ಇಲ್ಲುಂಟು. ಧರ್ಮ ಮತ್ತು ಚಾರ್ಲಿ ಬದುಕಿನ ಅನೇಕ ಮಜಲುಗಳನ್ನು ಇಲ್ಲಿ ಕಾಣಬಹುದು. ಅವರಿಬ್ಬರ ಪರಿಪೂರ್ಣ ಬದುಕು, ಅರ್ಥಪೂರ್ಣ ಪಯಣವನ್ನು ಇಲ್ಲಿ ಓದಿ ತೀಳಿಯುವುದಕ್ಕಿಂತ ಚಾರ್ಲಿ ನೋಡಿ ಕಣ್ತುಂಬಿಕೊಳ್ಳೋದೆ ವಾಸಿ.

ಚಾರ್ಲಿ ಕಥೆ ಏನು?

ಚಿಕ್ಕಂದಿನಲ್ಲೇ ಅಪ್ಪ,ಅಮ್ಮ ಮತ್ತು ತಂಗಿಯನ್ನು ಕಳಕೊಂಡು ಅನಾಥನಂತೆ ಬದುಕುತ್ತಿರುವ ಧರ್ಮನ ಬದುಕಲ್ಲಿ, ಅಲ್ಲೆಲ್ಲೋ ನರಕ ಹಿಂಸೆ ಅನುಭವಿಸಿ ರೋಸಿ ಹೋಗಿದ್ದ ಚಾರ್ಲಿ ತಪ್ಪಿಸಿಕೊಂಡು ಧರ್ಮ ವಾಸಿಸುವ ಕಾಲೋನಿಗೆ ಎಂಟ್ರಿಯಾಗ್ತಾಳೆ. ಆ ಕಾಲೋನಿಯಲ್ಲಿ ಅನಿಮಲ್ಸ್ ಸಾಕುವಂತಿಲ್ಲ. ಹೀಗಿರುವಾಗ ಗೊತ್ತಿಲ್ಲದೆಯೇ ಧರ್ಮ ಚಾರ್ಲಿಗೆ ಇಷ್ಟವಾಗ್ತಾಳೆ. ಅಷ್ಟೇ ಅಲ್ಲ ಹಿಂದಿಂದೆ ಹಿಂಬಾಲಿಸ್ತಾಳೆ. ಅತ್ತ ಧರ್ಮನಿಗೋ ಒಂದು ರೀತಿ ಧರ್ಮಸಂಕಟ. ಬಂಧು ಬಳಗವೇ ಇಲ್ಲದ ಧರ್ಮನಿಗೆ ಚಾರ್ಲಿಯ ಒಳ್ಳೇತನ ಇಷ್ಟವಾಗುತ್ತೆ. ಅಲ್ಲಿಂದ ಚಾರ್ಲಿ ಜೊತೆ ಅವನ ಪಯಣ ಶುರುವಾಗುತ್ತೆ. ಮನುಷ್ಯರನ್ನ ಕಂಡರೆ ಆಗದ ಧರ್ಮ ಆ ಚಾರ್ಲಿಯನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸೋಕೆ ಶುರು ಮಾಡ್ತಾನೆ ಯಾಕೆ ಎಂಬ ಪ್ರಶ್ನೆಗೆ ಸಿನಿಮಾ ನೋಡಲೇಬೇಕು.

ಇಲ್ಲಿ ಸಂಬಂಧದ ಬೆಸುಗೆ ಇದೆ, ಭಾವುಕ ಪಯಣವಿದೆ,ಭಾವನೆಗಳ ಗುಚ್ಛವಿದೆ, ದುಃಖ ದುಮ್ಮಾನವೂ ಅಡಗಿದೆ. ಸರಾಗವಾಗಿ ಸಾಗುವ ಧರ್ಮ ಮತ್ತು ಚಾರ್ಲಿಯ ಸುಂದರ ಬದುಕಲ್ಲೊಂದು ಘಟನೆಯೂ ಸಂಭವಿಸುತ್ತೆ. ಅಲ್ಲಿಂದ ಆ ಹಾದಿಯುದ್ದಕ್ಕೂ ಭಾವುಕವೇ ಹರಡುತ್ತೆ. ಕಲರ್ಫುಲ್ ಫ್ರೇಮ್ ಒಳಗಿನ ಬಣ್ಣ ಮಾಸಿದಂತಾಗುತ್ತೆ. ಅಲ್ಲೊಂದು ಮೌನ ಆವರಿಸುತ್ತೆ. ಆ ಮೌನ ಇಡೀ ಚಾರ್ಲಿಯನ್ನು ಗುಣಗಾನ ಮಾಡುವಂತಾಗುತ್ತೆ. ಇಷ್ಟು ಹೇಳಿದ ಮೇಲೂ ಚಾರ್ಲಿ ನಗಿಸುವ, ಕಾಡುವ ಮತ್ತು ಅಳಿಸುವ ಚಿತ್ರಣವನ್ನು ನೋಡದಿದ್ದರೆ ಹೇಗೆ?

ಯಾರು ಹೇಗೆ?

ಮೊದಲೇ ಹೇಳಿದಂತೆ ಇಲ್ಲಿ ಚಾರ್ಲಿ ಪ್ರಮುಖ ಆಕರ್ಷಣೆ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ, ತರಬೇತುದಾರನ ಸೂಚನೆಯ ಮೇರೆಗೆ, ನಾಯಕನ ಪ್ರೀತಿಯ ಜೊತೆಗೆ ಒಂದಿಷ್ಟೂ ಪಾತ್ರಕ್ಕೆ ಚ್ಯುತಿಯಾಗದ ರೀತಿ ನಟಿಸಿದ್ದಾಳೆ. ನೋಡುಗರಿಂದ ಶಿಳ್ಳೆ ಚಪ್ಪಾಳೆಯನ್ನೂ ಗಿಟ್ಟಿಸುತ್ತಾಳೆ.
ರಕ್ಷಿತ್ ಶೆಟ್ಟಿ ಎಂದಿಗಿಂತಲೂ ಇಲ್ಲಿ ಕಾಡುತ್ತಾರೆ. ಹಿಂದಿನ ಸಿನಿಮಗಳ ನಟನೆ ಮರೆಸಿ, ಇಲ್ಲಿ ನೆನಪಲ್ಲುಳಿಯುವಂತೆ ನಟಿಸಿದ್ದಾರೆ. ಒಟ್ಟಾರೆ ರಕ್ಷಿತ್ ಶೆಟ್ಟಿ ಈ ಮೂಲಕ ದೊಡ್ಡ ಗೆಲುವಿನ ನಗೆ ಬೀರೋದಂತು ಗ್ಯಾರಂಟಿ.


ತಮಿಳು ನಟ ಬಾಬಿ ಸಿಂಹ ತೆರೆ ಮೇಲೆ ಇರುವಷ್ಟು ಕಾಲ ಇಷ್ಟವಾಗ್ತಾರೆ. ಸಂಗೀತಾ ಶೃಂಗೇರಿ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಜ್ ಬಿ.ಶೆಟ್ಟಿ ಅಲ್ಲಲ್ಲಿ ನಗಿಸಿ ನೆನಪಲ್ಲುಳಿತಾರೆ. ಉಳಿದಂತೆ ಬರುವ ಪಾತ್ರಗಳೆಲ್ಲವೂ ಗಮನಸೆಳೆಯುತ್ತವೆ.
ಮುಖ್ಯವಾಗಿ ಇಲ್ಲಿ ನೋಬಿನ್ ಪಾಲ್ ಸಂಗೀತ ಮತ್ತು ಹಾಡು ಇಷ್ಟವಾಗುತ್ತೆ. ಕಥೆಗೆ, ಸನ್ನಿವೇಶಕ್ಕೆ ಪೂರಕವಾಗಿ ಕೆಲಸ ಮಾಡಿದ್ದಾರೆ. ಪ್ರತೀಕ್ ಶೆಟ್ಟಿ ಸಂಕಲನ ಚಿತ್ರದ ವೇಗ ಹೆಚ್ಚಿಸಿದೆ. ಅರವಿಂದ್ ಎಸ್ ಕಶ್ಯಪ್ ಅವರ ಕ್ಯಾಮೆರಾ ಕೈಚಳಕ ಚಾರ್ಲಿಯ ಚಾರ್ಮ್ ಗಟ್ಟಿಗೊಳಿಸಿದೆ.

ಕೊನೇ ಮಾತು: ಪ್ಯಾನ್ ಇಂಡಿಯಾ ಸಿನಿಮಾ ಅಂದಾಕ್ಷಣ, ಬರೀ ಹೊಡಿ, ಬಡಿ, ಕಡಿ, ಎಂಬ ಅಬ್ಬರವೇ ಜಾಸ್ತಿ. ಅಂತಹ‌ ಸಿನಿಮಾಗಳ ನಡುವೆ ಎಮೋಷನ್ ಕಂಟೆಂಟ್ ಇರುವ ಇಂತಹ ಚಿತ್ರಗಳೂ ಇಂಡಿಯಾ ಜನರ ಮನ ಮುಟ್ಟುತ್ತವೆ ಅನ್ನುವುದಕ್ಕೆ 777 ಚಾರ್ಲಿ ಕಣ್ಣೆದುರಿನ ಸಾಕ್ಷಿ. ಅದನ್ನು ಕಣ್ತುಂಬಿಕೊಳ್ಳಲು ನೀವೊಮ್ಮೆ ನೋಡಿ.

Related Posts

error: Content is protected !!