ಎನ್. ಕುಮಾರ್. ಕನ್ನಡ ಚಿತ್ರರಂಗದಲ್ಲಿ ಬಹು ದೊಡ್ಡ ಹೆಸರಿದು. ಯಶಸ್ವಿ ವಿತರಕರಾಗಿ, ನಿರ್ಮಾಪಕರಾಗಿ ಈಗಾಗಲೇ ಗಟ್ಟಿನೆಲೆ ಕಂಡಿರುವ ಎನ್.ಕುಮಾರ್, ಸ್ಟಾರ್ ನಟರ ಸಾಲು ಸಾಲು ಯಶಸ್ವಿ ಸಿನಿಮಾಗಳನ್ನು ನಿರ್ಮಿಸುವ ಮೂಲಕ ತಮ್ಮದೇ ಛಾಪು ಮೂಡಿಸಿದವರು. ಸಿಂಪಲ್ ವ್ಯಕ್ತಿಯಾಗಿ, ಪಕ್ಕಾ ಸಿನಿಮಾ ಉದ್ಯಮಿಯಾಗಿ, ಒಳ್ಳೆಯ ವಾಗ್ಮಿಯೂ ಆಗಿ ಸಿನಿಮಾ ಮಂದಿಗೆ ಹತ್ತಿರವಾದವರು.
ಸದಾ ಸಿನಿಮಾ ಚಟುವಟಿಕೆಯಲ್ಲೇ ನಿರತರಾಗಿರುವ ಎಂ.ಎನ್.ಕುಮಾರ್ ಅವರು ಸಿನಿಮಾ ಬಿಟ್ಟು ಬೇರೆ ಧ್ಯಾನ ಮಾಡಿದವರಲ್ಲ. ವಿತರಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಯಶಸ್ವಿ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ಎನ್.ಕುಮಾರ್ ಈಗ ಮತ್ತೊಂದು ಸಿನಿಮಾ ನಿರ್ಮಾಣ ಮಾಡುವ ತಯಾರಿಯಲ್ಲಿದ್ದಾರೆ.
ಹೌದು, ಸ್ಟಾರ್ ನಟರು ಸೇರಿದಂತೆ ಅನೇಕ ಹೊಸಬರನ್ನೂ ಪ್ರೀತಿಯಿಂದ ಕಾಣುವ ಕುಮಾರ್, ಪಕ್ಕಾ ಸಿನಿಮಾ ವ್ಯಾಕರಣವನ್ನು ಬಲ್ಲವರು. ಆ ಕಾರಣಕ್ಕೆ ಸಿನಿಮಾ ಬಿಜಿನೆಸ್ ಮಾಡೋದು ಹೇಗೆ ಎಂಬುದನ್ನೂ ತೋರಿಸಿ ಗೆದ್ದವರು. ಅಂದಹಾಗೆ, ಈ ಬಾರಿ ಎನ್. ಕುಮಾರ್ ವಿಶೇಷ ಕಥಾವಸ್ತು ಹಿಡಿದು ಒಂದೊಳ್ಳೆಯಬಸಿನಿಮಾಮಾಡುವ ಉತ್ಸಾಹದಲ್ಲಿದ್ದಾರೆ. ಅವರ ಉತ್ಸಾಹಕ್ಕೆ ಕಾರಣ, ಯಶಸ್ವಿ ಮತ್ತು ಸೂಕ್ಷ್ಮ ಸಂವೇದನೆ ನಿರ್ದೇಶಕ ಬಿ.ಎಂ.ಗಿರಿರಾಜ್.
ನಿಜ, ಬಿ.ಎಂ. ಗಿರಿರಾಜ್ ಅವರೀಗ ಎನ್. ಕುಮಾರ್ ಅವರ ಬ್ಯಾನರ್ ನಲ್ಲಿ ಹೊಸ ತರಹದ ಕಥೆ ಹೆಣೆದು ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಅಂದಾಗಲೇ ಸಿನಿಮಾ ಅರ್ಧ ಗೆದ್ದಂತೆ ಅನ್ನೋದು ಎಲ್ಲರಿಗೂ ಗೊತ್ತು. ಅಂದಹಾಗೆ, ಗಿರಿರಾಜ್ ಅವರು ಹೇಳಿದ ಕಥೆ ಮೆಚ್ಚಿಕೊಂಡು ದೊಡ್ಡಮಟ್ಟದಲ್ಲೇ ಸಿನಿಮಾ ನಿರ್ಮಾಣ ಮಾಡಲು ರೆಡಿಯಾಗಿರುವ ಕುಮಾರ್, ಅದೊಂದು ಹೊಸ ಬಗೆಯ ಸಿನಿಮಾ ಅಗುವುದರಿಂದ ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಚಿತ್ರ ಕೊಡಬೇಕೆಂಬ ತಯಾರಿಯಲ್ಲಿದ್ದಾರೆ.
ಸದ್ಯ ಗಿರಿರಾಜ್ ಅವರ ಹೊಸ ಕಥೆಗೆ ಎಂ.ಎನ್.ಕುಮಾರ್ ನಿರ್ಮಾಪಕರು. ಇನ್ನು ಗಿರಿರಾಜ್ ಕೂಡ ಹಲವು ಸೂಕ್ಷ್ಮ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿ ಈಗಾಗಲೇ ಗೆದ್ದಿದ್ದಾರೆ. ಈಗ ಕುಮಾರ್ ಬ್ಯಾನರ್ ನಲ್ಲಿ ಹೊಸ ರೀತಿಯ ಕಥೆ ಮಾಡಿ ಮತ್ತೊಂದು ಗೆಲುವಿಗೆ ಅಣಿಯಾಗುತ್ತಿರುವುದೇ ಈ ಹೊತ್ತಿನ ಸುದ್ದಿ.
ಅದೇನೆ ಇರಲಿ, ಕನ್ನಡ ಸಿನಿಮಾರಂಗ ಈಗಾಗಲೇ ಭಾರತೀಯ ಚಿತ್ರರಂಗದಲ್ಲೇ ಮೊದಲ ಮೆಟ್ಟಿಲ ಮೇಲೆ ನಿಂತು ಬೀಗುತ್ತಿದೆ. ಈ ನಡುವೆ ಒಳ್ಳೆಯ ಸಿನಿಮಾಗಳೂ ಸೆಟ್ಟೇರುತ್ತಿವೆ. ಈಗ ಗಿರಿರಾಜ್ ಹಾಗು ಕುಮಾರ್ ಕಾಂಬಿನೇಷನ್ ಸಿನಿಮಾ ಕೂಡ ರೆಡಿಯಾಗಲಿದೆ. ಚಿತ್ರದ ಹೀರೋ, ಹೀರೋಯಿನ್ ಸೇರಿದಂತೆ ಯಾರೆಲ್ಲ ಇರುತ್ತಾರೆ ಅನ್ನೋದಕ್ಕೆ ಇಷ್ಟರಲ್ಲೇ ಮಾಹಿತಿ ಸಿಗಲಿದೆ. ಅಂತೂ ಹೊಸದೊಂದು ಪ್ಯಾನ್ ಇಂಡಿಯಾ ಲೆವೆಲ್ ಸಿನಿಮಾ ಸೌಂಡು ಮಾಡೋಕೆ ರೆಡಿಯಾಗುತ್ತಿದೆ ಅನ್ನೋದೆ ಖುಷಿಯ ವಿಷಯ.
ಭವ್ಯ ಪರಂಪರೆ ಹೊಂದಿರುವ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ದೇಶದಾದ್ಯಂತ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ನಾಡಿನ ಸಾಂಸ್ಕೃತಿಕ ರಂಗದ ಗಣ್ಯರ ಸಮಾಗಮದಲ್ಲಿ ಮೂಡಿಬಂದಿರುವ “ವಂದೇ ಮಾತರಂ” ಎಂಬ ಅದ್ಭುತ ಗೀತೆ ಬಿಡುಗಡೆಯಾಗಿದೆ.
ಹೆಸರಾಂತ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶನ ಮಾಡಿದ್ದಾರೆ. ಪ್ರವೀಣ್ ಡಿ ರಾವ್ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಶ್ರೀಶ ಕುದವಳ್ಳಿ ಛಾಯಾಗ್ರಹಣ ಮಾಡಿದ್ದಾರೆ. ಕಿಚ್ಚ ಸುದೀಪ, ಶಿವರಾಜಕುಮಾರ್, ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್,ಅನಂತನಾಗ್, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ಧನಂಜಯ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಹಾಗೂ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.
ನನಗೆ ಚಿಕ್ಕ ವಯಸ್ಸಿನಿಂದಲೂ “ಮಿಲೇ ಸುರ್ ಮೇರಾ ತುಮಾರ” ಹಾಡೆಂದರೆ ಬಹಳ ಇಷ್ಟ. ಇಂತಹದೊಂದು ಹಾಡನ್ನು ನಮ್ಮ ಕನ್ನಡ ಕಲಾವಿದರ ಸಮಾಗಮದಲ್ಲಿ ಮಾಡಬೇಕೆಂಬ ಆಸೆಯಿತ್ತು. ಈಗ ಆ ಆಸೆ ಈಡೇರಿದೆ. ಗೆಳೆಯ ಶ್ರೀನಿಧಿ ಅವರು ಕೆಲವು ದಿನಗಳ ಹಿಂದೆ ಈ ಹಾಡಿನ ಬಗ್ಗೆ ಪ್ರಸ್ತಾಪಿಸಿದರು. ನಾನು ನಿರ್ಮಾಣಕ್ಕೆ ಮುಂದಾದೆ. ಕೇವಲ ಹದಿಮೂರು ದಿನಗಳಲ್ಲಿ ಈ ಹಾಡು ನಿರ್ಮಾಣವಾಗಿದೆ. ಸಂತೋಷ್ ಆನಂದ್ ರಾಮ್ ಸೊಗಸಾಗಿ ನಿರ್ದೇಶನ ಮಾಡಿದ್ದಾರೆ.
ವಿಜಯ್ ಪ್ರಕಾಶ್ ಧ್ವನಿಯಲ್ಲಿ ಈ ಹಾಡನ್ನು ಕೇಳುವುದೆ ಆನಂದ. ಈ ಹಾಡಿನ ನಿರ್ಮಾಣ ಆರಂಭವಾದಾಗ ನನ್ನ ಎಲ್ಲಾ ಕನ್ನಡ ಚಿತರಂಗದ ನಾಯಕ ಮಿತ್ರರನ್ನು ಫೋನ್ ಮೂಲಕ ಸಂಪರ್ಕಿಸಿ, ಈ ವಿಷಯ ಹೇಳಿದಾಗ ಬಹಳ ಪ್ರೀತಿಯಿಂದ ಬಂದು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ನಾಯಕ ನಟರಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ನಾಡಿನ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಹಲವು ಮಂತ್ರಿಗಳು ಈ ಹಾಡನ್ನು ಮೆಚ್ಚಿ ಶೇರ್ ಮಾಡಿದ್ದಾರೆ. ತಾವು ಕೂಡ ಈ ಹಾಡನ್ನು ಶೇರ್ ಮಾಡುವ ಮೂಲಕ ಹೆಚ್ಷಿನ ಜನರಿಗೆ ತಲುಪಿಸಿ ಎಂದು ಜಗ್ಗೇಶ್ ವಿನಂತಿಸಿದ್ದಾರೆ. ಪ್ರಧಾನಮಂತ್ರಿಗಳಿಗೂ ಈ ಹಾಡನ್ನು ತೋರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.
“ವಂದೇ ಮಾತರಂ” ಎಂದರೆ ಜಾತಿಮತಧರ್ಮ ಎಲ್ಲವನ್ನೂ ದಾಟಿ ನಾವೆಲ್ಲರೂ ಭಾರತಮಾತೆಯ ಮಕ್ಕಳು ಎನ್ನುವ ಸಾರಾಂಶ. ಭಾರತವನ್ನು ಯಾವ ರೀತಿಯಲ್ಲಿ ವಿವರಿಸಬಹುದು ಎಂದು ಹೋದಾಗ, ಅಲ್ಲಿ ನಾವು ಗೋಮಾತೆಯನ್ನು ತಾಯಿಯ ತರಹ ಪೂಜಿಸುತ್ತೇವೆ. ಆ ಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಮೂಲಕ ಹಾಡು ಆರಂಭವಾಗುತ್ತದೆ ಅಲ್ಲಿ ಸುದೀಪ್ ಇದ್ದಾರೆ.
ಹೀಗೆ ಭಾರತದ ಹಿರಿಮೆಯನ್ನು ಈ ಹಾಡಿನಲ್ಲಿ ತೋರಿಸುವ ಪ್ರಯತ್ನವನ್ನು ಹಿರಿಯ ನಟರಾದ ಅನಂತನಾಗ್, ರವಿಚಂದ್ರನ್, ರಮೇಶ್ ಅರವಿಂದ್, ಜಗ್ಗೇಶ್, ಅರ್ಜುನ್ ಸರ್ಜಾ ಹಾಗೂ ಯುವ ಪ್ರತಿಭೆಗಳಾದ ಗಣೇಶ್, ಶ್ರೀಮುರಳಿ, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ಧನಂಜಯ ಅವರ ಮೂಲಕ ಮಾಡಿದ್ದೇವೆ. ಚಿತ್ರರಂಗದ ನಟರಷ್ಟೇ ಅಲ್ಲದೇ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಹಾಗೂ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಮುಂತಾದವರು ಭಾರತದ ಭವ್ಯ ಪರಂಪರೆಯನ್ನು ಬಿಂಬಿಸುವ ಈ ಹಾಡಿನಲ್ಲಿ ಭಾಗಿಯಾಗಿದ್ದಾರೆ. ನಾಲ್ಕುವರೆ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣ ಮುಗಿದಿದೆ. ಸಹಕಾರ ನೀಡಿದ ನನ್ನ ತಂಡಕ್ಕೆ ಹಾಗೂ ಅಭಿನಯಿಸಿರುವ ಗಣ್ಯರಿಗೆ ಧನ್ಯವಾದ ಎನ್ನುತ್ತಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.
ಕನ್ನಡ ಚಿತ್ರರಂಗಕ್ಕೆ ಕೆ.ಜಿ.ಎಫ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಸಿರುವ “ಕಾಂತಾರ” ಚಿತ್ರದ ಮೊದಲ ಹಾಡು ಸ್ವಾತಂತ್ರ್ಯ ದಿನಾಚರಣೆ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ನಟ – ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿರುವುಲ್ಲದೆ, ನಾಯಕರಾಗಿಯೂ ನಟಿಸಿದ್ದಾರೆ.
ಪ್ರಮೋದ್ ಮರವಂತೆ ರಚಿಸಿರುವ “ಸಿಂಗಾರ ಸಿರಿಯೆ” ಎಂಬ ಮನಮೋಹಕ ಹಾಡಿನಲ್ಲಿ ಜಾನಪದ ಸೊಗಡನ್ನು ಎತ್ತಿ ಹಿಡಿಯಲಾಗಿದೆ.
ಗಾಯಕ ವಿಜಯ್ ಪ್ರಕಾಶ್, ಅನನ್ಯ ಭಟ್ ಹಾಗೂ ನಾಗರಾಜ್ ಪನ್ನಾರ್ ವಲ್ಟುರ್ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಟ ಸಾರ್ವಭೌಮ ಡಾ.ರಾಜಕುಮಾರ್ ಮೊಮ್ಮಗ ಧೀರನ್ ರಾಮಕುಮಾರ್ ನಾಯಕನಾಗಿ ನಟಿಸಿರುವ “ಶಿವ 143” ಚಿತ್ರ ಆಗಸ್ಟ್ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಹಾಡು ನೋಡುಗರ ಮನ ಗೆದ್ದಿದೆ. ನಾಯಕನ ಪರಿಚಯಿಸುವ ಟೀಸರ್ ಗೂ ಅಪಾರ ಜನಮನ್ನಣೆ ದೊರಕಿದೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಈ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ಇದು ಲಾಕ್ ಡೌನ್ ಪೂರ್ವದಲ್ಲೇ ತಯಾರಾದ ಸಿನಿಮಾ. ಕೊರೋನ ಕಾರಣದಿಂದ ಬಿಡುಗಡೆ ವಿಳಂಬವಾಯಿತು. ಆನಂತರ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದ್ದವು. ನಾವು ಸೂಕ್ತ ಸಮಯ ನೋಡಿ, ಇದೇ ಆಗಸ್ಟ್ 26 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದು ರೌಡಿಸಂ ಸಿನಿಮಾ ಅಲ್ಲ. ವಿಭಿನ್ನ ಪ್ರೇಮಕಥೆಯ ಚಿತ್ರ. ಜಯಣ್ಣ ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ನಿರ್ಮಾಪಕರು ಹಾಗೂ ಧೀರನ್ ಅವರ ಕುಟುಂಬದವರು ಕುಳಿತು, ಧೀರನ್ ಅವರಿಗೆ ಇಂತಹುದೇ ಕಥೆ ಇದ್ದರೆ ಚೆನ್ನ ಎಂದು ತಿರ್ಮಾನಿಸಿದ್ದರು. ನಾನು ಆನಂತರ ತಂಡ ಸೇರಿಕೊಂಡೆ. ಧೀರನ್ ಅವರಿಗೆ ಈ ಮಾಸ್ ಲುಕ್ ಸರಿ ಹೊಂದುವುದೊ, ಇಲ್ಲವೋ? ಎಂಬ ಯೋಚನೆಯಿತ್ತು. ಅವರ ನಟನೆ ನೋಡಿ ಅದು ದೂರಾಯಿತು. ನಾಯಕಿ ಮಾನ್ವಿತ ಕಾಮತ್ ಹಾಗೂ ಚರಣ್ ರಾಜ್ ಅವರ ಅಭಿನಯ ಕೂಡ ತುಂಬಾ ಚೆನ್ನಾಗಿದೆ. ಸಾಧುಕೋಕಿಲ ಹಾಗೂ ಚಿಕ್ಕಣ್ಣ ಅವರ ಕಾಮಿಡಿ ಮೋಡಿ ಮಾಡಲಿದೆ ಎಂದು ನಿರ್ದೇಶಕ ಅನಿಲ್ ಕುಮಾರ್ ಚಿತ್ರದ ಬಗ್ಗೆ ವಿವರಣೆ ನೀಡಿದರು.
ನಾನು ನಮ್ಮ ಕುಟುಂಬದವರ ಬಳಿ ಈ ಸಿನಿಮಾ ಕಥೆ ಬಗ್ಗೆ ಚರ್ಚಿಸಿದಾಗ ನಿನಗೆ ಸರಿ ಹೊಂದುವುದಾದರೆ ಮಾಡು ಎಂದರು. ನನಗೂ ಈ ಕಥೆ ಇಷ್ಟವಾಗಿತ್ತು. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಕೊರೋನ ಕಾರಣದಿಂದ ಬಿಡುಗಡೆ ತಡವಾಗಿದೆ. ಶಿವಣ್ಣ ಮಾಮ ಹಾಗೂ ಗೀತಾ ಆಂಟಿ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಭೇಟಿ ನೀಡಿ ಶುಭ ಹಾರೈಸಿದ್ದರು. ರಾಘಣ್ಣ ಮಾಮ ಅವರ ಹಾರೈಕೆ ಸದಾ ಇದೆ. ಇನ್ನೂ ಯಾರ ಬಳಿಯು ಹೇಳದ ವಿಷಯವೊಂದು ಇಂದು ಹೇಳುತ್ತಿದ್ದೇನೆ. ಮೈಸೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲೇ ಅಪ್ಪು ಮಾಮ “ಜೇಮ್ಸ್” ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಾಹಸ ನಿರ್ದೇಶಕ ರವಿವರ್ಮ ಅವರು ಎರಡೂ ಚಿತ್ರಗಳಿಗೂ ಸಾಹಸ ಸಂಯೋಜನೆ ಮಾಡುತ್ತಿದ್ದರು. ನಾನು ಪಾಲ್ಗೊಂಡ ಸಾಹಸ ದೃಶ್ಯವೊಂದರ ತುಣುಕನ್ನು ಅವರು, ಅಪ್ಪು ಮಾಮ ಅವರಿಗೆ ತೋರಿಸಿದರಂತೆ.
ಅದನ್ನು ನೋಡಿದ ಅಪ್ಪು ಮಾಮ, ಸ್ನೇಹಿತರೊಬ್ಬರ ಬಳಿ ಅವನ ಕಣ್ಣು ನೋಡಿ ಎಷ್ಟು ಚೆನ್ನಾಗಿದೆ. ನಮ್ಮ ಕುಟುಂಬದಿಂದ ಒಳ್ಳೆಯ ಹೀರೋ ಬರುತ್ತಿದ್ದಾನೆ ಎಂದು ತುಂಬಾ ಸಂತೋಷಪಟ್ಟಿದ್ದರಂತೆ. ಈ ವಿಷಯವನ್ನು ನನಗೆ ಎಷ್ಟೋ ದಿನಗಳ ಬಳಿಕ ಆ ಸ್ನೇಹಿತರು ಹೇಳಿದರು. ಅಶ್ವಿನಿ ಆಂಟಿ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಅವರು ಬಿಡುಗಡೆ ಮಾಡಿಕೊಟ್ಟಿದ್ದು ನನಗೆ ಅಪ್ಪು ಮಾಮ ಬಿಡುಗಡೆ ಮಾಡಿದಷ್ಟೇ ಖುಷಿಯಾಗಿದೆ. ಅವರಿಗೆ ನನ್ನ ಧನ್ಯವಾದ ಎಂದರು ನಾಯಕ ಧೀರನ್.
ಛಾಯಾಗ್ರಹಕ ಶಿವ ಛಾಯಾಗ್ರಹಣದ ಬಗ್ಗೆ ಮಾತನಾಡಿದರು.
ಜಯಣ್ಣ, ಭೋಗೇಂದ್ರ ಹಾಗೂ ಡಾ.ಸೂರಿ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿಮಿಷನ್ ಪ್ರೀಮಿಯರ್ ಲೀಗ್-ಟಿಪಿಎಲ್ ಶುರುವಾಗುತ್ತಿದ್ದು, ಆಗಸ್ಟ್ 18, 19 ಹಾಗೂ 20 ಈ ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಕಿರುತೆರೆ ಕಲಾವಿದರು ಭಾಗಿಯಾಗಲಿದ್ದಾರೆ. ಹಿರಿಯ ಕಲಾವಿದರಿಗೆ ಸಹಾಯಾರ್ಥ ಈ ಟಿಪಿಎಲ್ ನ ಮುಖ್ಯ ಧ್ಯೇಯವಾಗಿದೆ ಎನ್ನುತ್ತಾರೆ ಟಿಪಿಎಲ್ ಆಯೋಜಕ ಸುನಿಲ್ ಕುಮಾರ್ ಬಿ ಆರ್.
ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾದ ಸುನಿಲ್ ಕುಮಾರ್ ಮಾತಾಡಿ, ಒಳ್ಳೆ ಉದ್ದೇಶ ಇಟ್ಕೊಂಡು ಈ ಪಂದ್ಯಾವಳಿ ಏರ್ಪಡಿಸಲಾಗಿದೆ. ಆರು ಜನ ಓನರ್ಸ್ ಗೆ ಧನ್ಯವಾದ ತಿಳಿಸುತ್ತೇನೆ. 16ರಂದು ಜರ್ಸಿ ಲಾಂಚ್ ಹಾಗೂ ಟ್ರೋಫಿ ಲಾಂಚ್ ಮಾಡಲಾಗುತ್ತದೆ. 18, 19 ಹಾಗೂ 20 ಈ ಮೂರು ದಿನಗಳ ಕಾಲ ಕ್ರಿಕೆಟ್ ನಡೆಯಲಿದೆ ಎಂದು ತಿಳಿಸಿದರು.
ಅಶ್ವ ಸೂರ್ಯ ರೈಡರರ್ಸ್ ತಂಡದ ನಾಯಕ ಮಂಜು ಪಾವಗಡ ಮಾತನಾಡಿ, ಒಂದೊಳ್ಳೆ ತಂಡಗಳು ಸೇರಿಕೊಂಡು ಕ್ರಿಕೆಟ್ ಆಡುತ್ತಿದ್ದು, ಪ್ರತಿ ತಂಡಕ್ಕೂ ಓನರ್ ಗಳು ಬೆಂಬಲವಾಗಿ ನಿಂತಿದ್ದಾರೆ ಎಂದರು.
ದಿ ಬುಲ್ ಸ್ಕ್ವಾಡ್, ಭಜರಂಗಿ ಬುಲ್ಸ್, ಏಂಜೆಲ್ ಎಸ್ಐ, ವಿನ್ ಟೈಮ್ ರಾಕರ್ಸ್, ಅಶ್ವ ಸೂರ್ಯ ರೈಡರ್ಸ್, ಸ್ಯಾಂಡಲ್ ವುಡ್ ಕಿಂಗ್ಸ್ ಎಂಬ ಆರು ತಂಡಗಳು ಭಾಗಿಯಾಗಲಿದ್ದು, ಒಟ್ಟು 102 ಸೆಲಿಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ ಆರು ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್ ಗಳಿರಲಿದ್ದಾರೆ.
‘ಕನಸಿಗೂ ಮತ್ತು ಸಂಬಂಧಕ್ಕೂ ರಿಯಾಲಿಟಿ ಇರಲ್ಲ. ಕನಸು ಇದ್ದಂಗೆ ಬದುಕಾಗಲ್ಲ…’ ಅವನು ಈ ಡೈಲಾಗ್ ಹೇಳುವ ಹೊತ್ತಿಗೆ ಆ ಮೂವರು ಗೆಳೆಯರ ಲೈಫಲ್ಲಿ ತಮಾಷೆ, ಹತಾಶೆ ಮತ್ತ ನಿರಾಸೆ ಎಂಬ ಕಾರ್ಮೋಡ ಕವಿದಿರುತ್ತೆ. ಆ ಕಾರ್ಮೋಡ ಸರಿದ ಮೇಲೆ ಒಂದಷ್ಟು ಜೋರು ಮಳೆ ಸುರಿದು ಎಲ್ಲವೂ ನಿರಾಳವೆನಿಸುತ್ತೆ… ಇದಿಷ್ಟು ಹೇಳಿದ ಮೇಲೆ ಭಟ್ಟರ ಗಾಳಿಪಟದ ಎತ್ತರ ಎಷ್ಟಿದೆ ಅನ್ನೋದನ್ನು ಊಹಿಸಿಕೊಳ್ಳಿ.
ಈ ಗಾಳಿಪಟ ಕಣ್ಣಿಗೆ ಕಾಣುವಷ್ಟೇ ಹಾರಿದೆ. ನಿರ್ದೇಶಕ ಎಂಬ ಸೂತ್ರದಾರನಿಗೆ ಎಷ್ಟು ಹಾರಿಸಬೇಕೆಂಬ ಕಲ್ಪನೆ ಇದ್ದುದರಿಂದಲೋ ಏನೋ, ಗಾಳಿಪಟದ ಪ್ರತಿಯೊಂದು ಚಿತ್ರಪಟ ಪಟಪಟನೆ ಕಣ್ಮುಂದೆ ಹಾದು ಹೋಗಿ ನಿಚ್ಚಳ ಭಾವ ತೃಪ್ತಿಗೆ ಕಾರಣವಾಗುತ್ತೆ.
ಯೋಗರಾಜ ಭಟ್ ಶೈಲಿಯ ಸಿನಿಮಾ ಸಾಲಿಗೆ ಇದೂ ಸೇರಿದೆ. ಅವರ ಹಿಂದಿನ ಸಿನಿಮಾಗಳಲ್ಲಿದ್ದ ಮಾತು-ಮಂಥನ ಇಲ್ಲೂ ಇದೆ. ಅದೇ ಹಸಿ ಪ್ರೀತಿ, ಅದೇ ತುಂಟಾಟ, ತಮಾಷೆ, ‘ನಾಟು’ವ ನಾಟಿ ಮಾತುಗಳು, ಬೈಗುಳ, ಜಗಳ, ಮಳೆ, ತಂಗಾಳಿ ಇತ್ಯಾದಿಯ ಭಟ್ಟರ ‘ಸಿನಿಮಾ ವ್ಯಾಕರಣ’ ಇಲ್ಲೂ ಇದೆಯಾದರೂ, ಅವೆಲ್ಲಕ್ಕಿಂತಲೂ ಈ ಬಾರಿ ಅವರ ಈ ಸಿನಿಮಾದಲ್ಲಿ ಒಂದಷ್ಟು ಮಜವಿದೆ, ತುಸು ಹೆಚ್ಚೇ ತುಂಟಾಟವಿದೆ, ಪದಪುಂಜಗಳ ಕಣಜವಿದೆ. ಪರಿಮಿತಿ ಇರದ ಪರಿಸರದ ಅಂದವಿದೆ. ಈ ಎಲ್ಲವೂ ಸಿನಿಮಾದ ಚಂದವನ್ನು ಹೆಚ್ಚಿಸಿದೆ.
ಭಟ್ಟರಿಗೆ ಈಗಿನ ಮತ್ತು ಮುಂದಿನ ಪೀಳಿಗೆಯ ಹುಡುಗ, ಹುಡುಗಿಯರ ನಾಡಿಮಿಡಿತ ಗೊತ್ತಿದೆ. ಆ ಕಾರಣಕ್ಕೆ ಇಂಥದ್ದೊಂದು ಸಿನಿಮಾ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಎರಡುವರೆ ತಾಸು ಕೂರಿಸುವ ತಾಕತ್ತು ಈ ಕಥೆಗಿದೆಯಾದರೂ, ಕಥೆಯ ಅಲ್ಲ್ಲಿಲಿ ಆಚೀಚೆ ಹಳ್ಳ- ಕೊಳ್ಳಗಳು ಎದುರಾಗಿವೆ. ಅಷ್ಟಾದರೂ ಕಿವಿಗಿಂಪೆನಿಸೋ ಹಾಡು ಎದುರಾಗಿ ಮನೋಲ್ಲಾಸಕ್ಕೆ ಕಾರಣವಾಗುತ್ತೆ.
ಸಿನಿಮಾ ಕಥೆ ಬಗ್ಗೆ ಯಾವ ತಕರಾರಿಲ್ಲ. ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಇನ್ನಷ್ಟು ಬಿಗಿಯಾದ ನಿರೂಪಣೆ ಬೇಕಿತ್ತು. ಇನ್ನು, ಸುಂದರ ತಾಣಗಳ ಮಧ್ಯೆ ನೋಡುಗರ ಮನಸ್ಸನ್ನು ಜೋರು ಮಳೆಗೆ ಮೈವೊಡ್ಡಿ ಸಂಭ್ರಮಿಸಿದಷ್ಟೇ ಅನುಭವ ಕಟ್ಟಿಕೊಟ್ಟಿದ್ದಾರೆಂಬ ಸಮಾಧಾನ. ಮೊದಲರ್ಧ ತುಂಟಾಟ, ತಮಾಷೆಯಲ್ಲೇ ಸಾಗುವ ಕಥೆಯಲ್ಲಿ ಸಣ್ಣ ಸಣ್ಣ ತಿರುವುಗಳಿವೆ. ಅವನ್ನು ದಾಟಿ ಬರಲು ಸಣ್ಣ ಅಯಾಸವೆನಿಸಿದರೂ ಭಟ್ಟರ ಹಾಡು ಕಚಗುಳಿ ಇಡುವ ಮಾತುಗಳು ಮತ್ತದೇ ಉತ್ಸಾಹ ತುಂಬುತ್ತೆ.
ದ್ವಿತಿಯಾರ್ಧ ಕಥೆ ಮತ್ತೊಂದು ಪಯಣದತ್ತ ಸಾಗುತ್ತೆ. ಅಲ್ಲೂ ತಮಾಷೆ, ಹತಾಶೆ ನಿರಾಸೆಯ ಕಾರ್ಮೋಡದ ಛಾಯೆ ಆವರಿಸುತ್ತೆ. ಪ್ರೀತಿ ಜಗಳ ಕೋಪ ತಾಪ ಹುಡುಕಾಟ ಒದ್ದಾಟಗಳ ಮಧ್ಯೆ ಎದೆಭಾರವೆನಿಸೋ ಸನ್ನಿವೇಶಗಳು ಸ್ವಲ್ಪಮಟ್ಟಿಗೆ ಕಣ್ಣುಗಳನ್ನು ಒದ್ದೆಯಾಗಿಸುತ್ತವೆ. ಉಳಿದಂತೆ ಇಲ್ಲಿ ಭಾವನೆಗಳು ಗರಿಗೆದರಿವೆ, ಭಾವುಕತೆಯೂ ಹರಿದಾಡಿದೆ, ಕಳೆದು ಹೋದ ಮಗನ ಹಂಬಲ, ಪ್ರೀತಿ ಪಡೆಯೋ ಚಡಪಡಿಕೆ, ಗೆಳೆತನದ ಬದ್ಧತೆ, ಅಪ್ಪ,ಅಮ್ಮನ ವಾತ್ಸಲ್ಯ ಹೀಗೆ ಎಲ್ಲದರ ಸುತ್ತವೂ ಕಥೆ ಗಿರಕಿ ಹೊಡೆದು ನೋಡುಗನ ಮನಸ್ಸನ್ನು ಗಾಳಿಪಟದೆತ್ತರದಷ್ಟು ಹಾರಿಸುವ ಪ್ರಯತ್ನಕ್ಕೆ ಭಟ್ಟರು ಸಾಕ್ಷಿಯಾಗುತ್ತಾರೆ.
ಕಥೆ ಏನು…?
ಅದು ‘ನೀರುಕೋಟೆ’ ಕನ್ನಡ ವಿಶ್ವವಿದ್ಯಾಲಯ. ಹೆಸರಿಗೆ ತಕ್ಕಂತೆ ಸದಾ ಮಳೆ ಸುರಿಯೋ ಊರು. ಆ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಸೇರುವ ಮೂವರು ತರಲೆ ಗೆಳೆಯರು. ಜವಾಬ್ದಾರಿ ಇರದ ಹುಡುಗ, ಆಕಾಶದೆತ್ತರದಷ್ಟೇ ಗೆಳೆತನ, ಎತ್ತರದಲ್ಲಿ ಹಾರಾಡುವ ಗಾಳಿಪಟದಷ್ಟೇ ಎತ್ತರದ ಪ್ರೀತಿ, ಬಾಚಿ ಹಿಡಿದು ತಬ್ಬುವಷ್ಟು ಪ್ರೀತಿ, ಕೋಪಿಸಿಕೊಳ್ಳುವಷ್ಟು ತಮಾಷೆ, ಬೊಗಸೆಯಷ್ಟು ಹತಾಶೆ, ಹಿಡಿಯಷ್ಟು ನಿರಾಸೆ… ಇವೆಲ್ಲದರ ಜೊತೆ ಹಳೆಯ ನೆನಪುಗಳ ಗುಚ್ಛ. ಎಂಎಲ್ಎ ಮತ್ತು ಕಾದಂಬರಿಕಾರ್ತಿ ಮಗ ಗಣಿ. ಅವನಿಗೆ ಕನ್ನಡ ಅಷ್ಟಾಗಿ ಬರಲ್ಲ. ಹೆತ್ತವರಿಗೆ ಕನ್ನಡ ಸ್ನಾತಕೋತ್ತರ ಪದವಿ ಕೊಡಿಸೋ ಆಸೆ.
ನೀರುಕೋಟೆ ಕಾಲೇಜಿನಲ್ಲಿ ಜೊತೆಯಾಗೋ ಮೂವರು ಗೆಳೆಯರು, ಅವರ ತರಲೆ, ರಗಳೆ, ಪ್ರೀತಿ, ಜಗಳದೊಂದಿಗೆ ಸುಂದರ ಪಯಣ. ಅಲ್ಲೊಂದಷ್ಟು ಕಾಡುವ ಪ್ರೀತಿ ಗೀತಿ ಇತ್ಯಾದಿಯೊಂದಿಗೆ ಭಾವನಾತ್ಮಕ ಸಂಬಂಧದ ಬೆಸುಗೆ. ಜಾಲಿಯಾಗಿಯೇ ಸಾಗುವ ಮೊದಲರ್ಧ. ದ್ವಿತಿಯಾರ್ಧ ಒಂದಷ್ಟು ಖುಷಿ ಮತ್ತು ದುಃಖದೊಂದಿಗೆ ಮುಕ್ತಾಯ. ಇಲ್ಲಿ ಕೊಟ್ಟ ಕಾಸಿಗೆ ಮೋಸವಿಲ್ಲ. ಒಂದು ಮನರಂಜನೆಯ ಸಿನಿಮಾವಾಗಿ ಇಷ್ಟವಾಗುತ್ತೆ.
ಯಾರು ಹೇಗೆ..?
ಕಾಲೇಜ್ ನ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಅಗಿ ಗಣೇಶ್, ದಿಗಂತ್, ಪವನ್ ಕುಮಾರ್ ಒಬ್ಬರಿಗೊಬ್ಬರು ಹಠಕ್ಕೆ ಬಿದ್ದವರಂತೆ ನಟಿಸಿದ್ದಾರೆ. ಗಣೇಶ್ ಎಂದಿಗಿಂತಲೂ ಮುದ್ದಾಗಿ ಕಾಣುವುದರ ಜೊತೆ ನಟನೆಯಲ್ಲಿ ನಗಿಸಿ ಭಾವುಕತೆ ಹೆಚ್ಚಿಸುತ್ತಾರೆ. ದಿಗಂತ್ ಅವರಿಗೆ ಇಲ್ಲಿ ಹೆಚ್ಚು ಸ್ಕೋರ್ ಕೊಡಬಹುದು. ಅವರಿಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಪವನ್ ಕುಮಾರ್ ಕೂಡ ಪಾಪದ ಹುಡುಗನಾಗಿ ಇಷ್ಟವಾಗುತ್ತಾರೆ. ಇವರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ನಾಯಕಿಯರ ಪರ್ಫಾರ್ಮೆನ್ಸ್ ಕೂಡ ಚೆನ್ನಾಗಿದೆ. ಅನಂತ್ ನಾಗ್ ಇಡೀ ಸಿನಿಮಾದ ಕೇಂದ್ರ ಬಿಂದು. ಉಳಿದಂತೆ ರಂಗಾಯಣ ರಘು, ಸುಧಾ ಬೆಳೆವಾಡಿ, ಶ್ರೀನಾಥ್ ಎಲ್ಲರೂ ಗಮನ ಸೆಳೆಯುತ್ತಾರೆ.
ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ಕೈಚಳಕ ಎತ್ತರದ ಗಾಳಿಪಟದಷ್ಟೇ ಅಂದವಾಗಿದೆ. ಅರ್ಜುನ್ ಜನ್ಯ ಸಂಗೀತವೂ ಇಲ್ಲಿ ಸ್ಕೋರ್ ಮಾಡಿದೆ. ಜಯಂತ್ ಕಾಯ್ಕಿಣಿ ಮತ್ತು ಭಟ್ಟರ ಹಾಡು ಗುನುಗುವಂತಿವೆ. ‘ನೀನು ಬಗೆಹರಿಯದ ಹಾಡು ಮತ್ತು ‘ದೇವ್ಲೆ ದೇವ್ಲೆ’ ಹಾಡುಗಳಲ್ಲಿ ಹೊಸತನವಿದೆ.
ಕೊನೇಮಾತು: ಪ್ರಾಯಶಃ ಇದು ಲೈಫಲ್ಲಿ ಜವಾಬ್ದಾರಿ ಇರದ ಹುಡುಗರ ಪಾಲಿಗೆ ಕಾಡುವ ಸಿನಿಮಾ ಆಗಬಹುದೇನೋ?
ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ “ಐನೂರ”ನೇ ಚಿತ್ರ ಎಂದು ಸದ್ದಾಗಿದ್ದ “ಅಮ್ಮಾ ಟಾಕೀಸ್ ಬಾಗಲಕೋಟೆ” ಸಂಸ್ಥೆಯ ನಿರ್ಮಾಣದ “ನೈಂಟಿ ಬಿಡಿ ಮನೀಗ್ ನಡಿ” ಚಿತ್ರ ರಿಲೀಸಿಗೆ ತಯಾರಾಗುತ್ತಿದ್ದು, ಮೊದಲ ಹಂತವಾಗಿ ಚಿತ್ರದ ಟೀಸರ್ ಬಿಡುಗಡೆಗೊಳಿಸಿದೆ.
“A2” ಮ್ಯೂಸಿಕ್ ಚಾನೆಲ್ಲಿಗೆ ಭರ್ಜರಿ ಡಿಮಾಂಡಿನೊಂದಿಗೆ ಆಡಿಯೋ ಮಾರಿಕೊಂಡ ತಂಡ ಆ ಆಡಿಯೋ ಕಂಪೆನಿಯ ಯೂಟ್ಯೂಬ್(A2 Music ) ವಾಹಿನಿಯ ಮೂಲಕ ಟೀಸರ್ ಬಿಟ್ಟುಕೊಂಡಿದೆ.
ವಿಶೇಷವಾಗಿ ಹೆಸರಾಂತ ನಾಯಕನಟ “ಶರಣ್” ಅವರು ಈ ಚಿತ್ರದ ಟೀಸರ್ ಮೆಚ್ಚಿಕೊಂಡು ಬಿಡುಗಡೆಗೆ ಸಾಥ್ ನೀಡಿದ್ದಾರೆ. ಬಿರಾದಾರ್ ರವರು ಶರಣ್ ರವರ ತಂದೆಯ ಒಡನಾಡಿಯಾಗಿದ್ದು ಅದೇ ಅಭಿಮಾನದೊಂದಿಗೆ ” ನೈಂಟಿಗೆ” ಜೊತೆಯಾಗಿದ್ದಾರೆ.
“ನಾವು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದವರು, ಮಿಗಿಲಾಗಿ ಇವರೊಬ್ಬ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತರು, ಇಂಥವರ ನಟನೆಯ ಐನೂರನೇ ಸಿನಿಮಾ ಎಂಬುದೇ ನಮ್ಮೆಲ್ಲರ ಹೆಮ್ಮೆ” ಎನ್ನುತ್ತಲೇ ಟೀಸರ್ ಬಿಡುಗಡೆಗೊಳಿಸಿದ ಶರಣ್ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು.
ಶೋಕ್ದಾರ್ ಖ್ಯಾತಿಯ ಧ್ವನೀರ್ ಗೌಡ ನಟಿಸುತ್ತಿರುವ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೀಗ ವಾಮನಿಗೆ ನಾಯಕಿ ಸಿಕ್ಕಿದ್ದಾಳೆ. ಏಕ್ ಲವ್ ಯಾ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ರೀಷ್ಮಾ ನಾಣಯ್ಯ ಧ್ವನೀರ್ ಗೆ ಜೋಡಿಯಾಗಿ ಅಭಿನಯಿಸ್ತಿದ್ದು, ಈಗಾಗಲೇ ರೀಷ್ಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ರೀಷ್ಮಾ, ಸದಾ ಹಸನ್ಮುಖಿಯಾಗಿರುವ ಪಾತ್ರದಲ್ಲಿ ನಟಿಸುತ್ತಿದ್ದು, ನಾಯಕನ ಪಯಣದಲ್ಲಿ ನಾಯಕಿ ಹೇಗೆ ಬೆಂಬಲವಾಗಿ ನಿಲ್ಲುತ್ತಾಳೆ ಅನ್ನೋದನ್ನು ಸಿನಿಮಾದಲ್ಲಿ ನೋಡಬಹುದು. ಪಕ್ಕ ಔಟ್ ಅಂಡ್ ಟ್ ಕಮರ್ಷಿಯಲ್ ಆಕ್ಷನ್ ಸಿನಿಮಾ
ವಾಗಿರುವ ವಾಮನದಲ್ಲಿ ಒಂದೊಳ್ಳೆ ಲವ್ ಸ್ಟೋರಿ ಕೂಡ ಇದೆ. ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿಬರ್ತಿರುವ ಸಿನಿಮಾವನ್ನು ಚೇತನ್ ಕುಮಾರ್ ರ್ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ನಡಿ ನಿರ್ಮಾಣ ಮಾಡಿದ್ದಾರೆ.
ಈಗಾಗ್ಲೇ ರಿಲೀಸ್ ಆಗಿರುವ ಧನ್ವೀರ್ ಫಸ್ಟ್ ಲುಕ್ ಹಾಗೂ ಮೇಕಿಂಗ್ ಝಲಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಖತ್ ಮಾಸ್ ಅವತಾರದಲ್ಲಿ ಶೋಕ್ದಾರ್ ಮಿಂಚಿದ್ದು, ಶೀರ್ಘದಲ್ಲಿ ಚಿತ್ರತಂಡ ಮತ್ತೊಂದು ಅಪ್ ಡೇಟ್ ಗೆ ಸಜ್ಜಾಗುತ್ತಿದೆ.
“ಭಿನ್ನ” ದಂತಹ ವಿಭಿನ್ನ ಚಿತ್ರ ನಿರ್ಮಾಣ ಮಾಡಿದ್ದ ಪರ್ಪಲ್ ರಾಕ್ ಸಂಸ್ಥೆಯಿಂದ ಇತ್ತೀಚೆಗೆ “ಡಿಯರ್ ಸತ್ಯ” ಚಿತ್ರ ಸಹ ನಿರ್ಮಾಣವಾಗಿತ್ತು. ಈಗ ಸಂಸ್ಥೆಯ ಮೂರನೇ ಕಾಣಿಕೆಯಾಗಿ “ಲೈನ್ ಮ್ಯಾನ್” ಚಿತ್ರ ಆರಂಭವಾಗಿದೆ. ಚಾಮರಾಜನಗರದ ಚಂದಕವಾಡಿಯಲ್ಲಿರುವ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಕುಮಾರ್ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ನಿರ್ಮಿಸುತ್ತಿರುವ ಈ ಚಿತ್ರವನ್ನು ರಘು ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ರನ್ ಆಂಟೊನಿ” ಹಾಗೂ “ಟಕ್ಕರ್” ಚಿತ್ರಗಳನ್ನು ರಘು ಶಾಸ್ತ್ರಿ ನಿರ್ದೇಶಿಸಿದ್ದರು.
ತ್ರಿಗುಣ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಆರ್.ಜಿ.ವಿ ನಿರ್ದೇಶನದ “ಕೊಂಡ” ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಹಿರಿಯ ನಟಿ ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ ಹಾಗೂ “ತರ್ಲೆನನ್ಮಗ” ಖ್ಯಾತಿಯ ಅಂಜಲಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಹಳ್ಳಿ ಕಡೆ ದಿನ ಬೀದಿ ದೀಪ ಹಾಕುವ, ಅರಿಸುವ ಹಾಗೂ ವಿದ್ಯುತ್ ನಿಂದಾಗುವ ತೊಂದರೆ ಸರಿಪಡಿಸುವ “ಲೈನ್ ಮ್ಯಾನ್” ಸುತ್ತ ಈ ಕಥೆ ನಡೆಯಲಿದೆ. ತ್ರಿಗುಣ್ “ಲೈನ್ ಮ್ಯಾನ್” ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ ಪಿ , ಜೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಅಭಿನಯದಲ್ಲಿ “ಧಮ್” ಎನ್ನುವ ಚಿತ್ರ ಬಂದಿತ್ತು. ಈಗ ಮತ್ತೆ ಅದೇ ಹೆಸರಿನ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಕನ್ನಡದ ಹುಡುಗ ಶ್ರೀಜಿತ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ವಿ ಆರ್ ಆರ್ ನಿರ್ದೇಶಿಸಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ನೆರವೇರಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಕಾರ್ಯದರ್ಶಿ ಕುಶಾಲ್ ಚಂದ್ರಶೇಖರ್ ಹಾಗೂ ನಟ, ನಿರ್ದೇಶಕ ರವಿಕಿರಣ್ ಇದ್ದರು.
ನಾನು ಬಾಲನಟನಾಗಿ “ಹಾತಿ ಮೇರೆ ಸಾತಿ” ಸೇರಿದಂತೆ ಸುಮಾರು ನೂರೈವತ್ತಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹದಿನಾರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನನ್ನ ತಾಯಿ ಮೈಸೂರಿನವರು. ಅವರಿಗೆ ನಾನು ಕನ್ನಡ ಚಿತ್ರವೊಂದನ್ನು ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈಗ ಈಡೇರಿದೆ. ಈ ಚಿತ್ರ ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿದೆ. ಈ ಚಿತ್ರದ ನಾಯಕರಾಗಿ ಸಂಚಾರಿ ವಿಜಯ್ ಮಾಡಬೇಕಿತ್ತು. ಕಾರಣಾಂತರದಿಂದ ಅದು ಆಗಲಿಲ್ಲ. ನಂತರ ಶ್ರೀಜಿತ್ ಆಯ್ಕೆಯಾದರು. ಎರೀನ್ ಅಧಿಕಾರಿ ಈ ಚಿತ್ರದ ನಾಯಕಿ. ಶಯ್ಯಾಜಿ ಶಿಂಧೆ, ರವಿಕಾಳೆ, ನಾಗೇಶ್ವರ ರಾವ್, ಗುರುಚಂದ್ರನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ರಿಹಾನ್ ಅಹಮದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇಳಯರಾಜ ಅವರ ಬಳಿ ಕಾರ್ಯ ನಿರ್ವಹಿಸಿರುವ ಜೀವ ವರ್ಷಿಣಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದರು ನಿರ್ದೇಶಕ ವಿ.ಆರ್.ಆರ್.
ನನ್ನ ಸ್ನೇಹಿತನ ಮೂಲಕ ನಿರ್ದೇಶಕರ ಪರಿಚಯವಾಯಿತು. ವಿ.ಆರ್.ಆರ್ ಅವರಂತಹ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸಿದ್ದು ಸಂತೋಷವಾಗಿದೆ. ನಾನು ಈ ಹಿಂದೆ “ರಂಗ್ ಬಿ ರಂಗಿ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೆ. ಇದು ಎರಡನೇ ಚಿತ್ರ. ಆಕ್ಷನ್, ಥ್ರಿಲ್ಲರ್, ಸೆಂಟಿಮೆಂಟ್ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ಶ್ರೀಜಿತ್.
ನಾನು ಮೂಲತಃ ಬಂಗಾಲಿಯವಳು. ಬಂಗಾಳಿ, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ. ಒಳ್ಳೆಯ ಪಾತ್ರ ನೀಡಿರುವ ನಿರ್ದೇಶಕರಿಗೆ ವಂದನೆಗಳು ಎಂದರು ನಾಯಕಿ ಎರೀನ್ ಅಧಿಕಾರಿ.
ಚಿತ್ರದಲ್ಲಿ ನಟಿಸಿರುವ ನಾಗೇಶ್ವರರಾವ್, ಸಂಗೀತ ನೀಡಿರುವ ಜೀವವರ್ಷಿಣಿ “ಧಮ್” ಚಿತ್ರದ ಬಗ್ಗೆ ಮಾತನಾಡಿದರು.