Categories
ಸಿನಿ ಸುದ್ದಿ

ಮೆಹಬೂಬ ಹಾಡಿಗೆ ನೋಡುಗರ ಮೆಚ್ಚುಗೆ…

ಬಿಗ್ ಬಾಸ್ ಖ್ಯಾತಿಯ ಶಶಿ ನಾಯಕನಾಗಿ ನಟಿಸಿರುವ “ಮೆಹಬೂಬ” ಚಿತ್ರಕ್ಕಾಗಿ ರಘುಶಾಸ್ತ್ರಿ ಅವರು ಬರೆದಿರುವ “ದೇವರು ದೇವರು” ಎಂಬ ಭಾವೈಕ್ಯತೆ ಸಾರುವ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. “ಸರಿಗಮಪ” ಖ್ಯಾತಿಯ ಮನೋಜವಂ ಆತ್ರೇಯ ಸುಮಧುರವಾಗಿ ಹಾಡಿರುವ ಈ ಗೀತೆಗೆ ಮ್ಯಾಥ್ಯೂಸ್‌ ಮನು ಸಂಗೀತ ನೀಡಿದ್ದಾರೆ. ಜಂಕಾರ್
ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡು ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ‌ ಹರಿದು ಬರುತ್ತಿದೆ.

ಸ್ಕಂದ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪ್ರಸನ್ನ ಶ್ರೀನಿವಾಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೊನಿ ನಿರ್ದೇಶಿಸುತ್ತಿದ್ದಾರೆ.
ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಪೋಸ್ಟ್ ಪ್ರೊಡಕ್ಷನ್ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ.

ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘುಶಾಸ್ತ್ರಿ ರಚಿಸಿದ್ದಾರೆ. ಸಂಭಾಷಣೆಯನ್ನು ರಘುಶಾಸ್ತ್ರಿ ಬರೆದಿದ್ದಾರೆ.ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಶಶಿ, ಪಾವನ ಗೌಡ, ಕಬೀರ್ ದುಹಾನ್ ಸಿಂಗ್, ಸಲ್ಮಾನ್(ಕಿರಿಕ್ ಪಾರ್ಟಿ), ಬುಲೆಟ್ ಪ್ರಕಾಶ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿರಾಜು, ಸಂದೀಪ್, ಧನರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ವಿಡುದಲೈ ಇದು ವೆಟ್ರಿಮಾರನ್ ಸಿನಿಮಾ: ಎರಡು ಭಾಗದಲ್ಲಿ ರಿಲೀಸ್…

ವಿಜಯ್​ ಸೇತುಪತಿ ಮತ್ತು ಸೂರಿ ನಟಿಸುತ್ತಿರುವ ತಮಿಳು ಚಿತ್ರ ‘ವಿಡುದಲೈ’ ಇದೀಗ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.ಈ ಚಿತ್ರವನ್ನು ರೆಡ್​ ಜಯಂಟ್​ ಮೂವಿಸ್​ನಡಿ ಉದಯನಿಧಿ ಸ್ಟಾಲಿನ್​ ಅರ್ಪಿಸಿದರೆ, ಆರ್​.ಎಸ್​. ಇನ್ಫೋಟೈನ್​ಮೆಂಟ್​ನಡಿ ಎಲ್ರೆಡ್​ ಕುಮಾರ್​ ನಿರ್ಮಿಸುತ್ತಿದ್ದಾರೆ.
ಕಾಲಿವುಡ್​ನ ಜನಪ್ರಿಯ ನಿರ್ದೇಶಕರಲ್ಲಿ ವೆಟ್ರಿಮಾರನ್​ ಪ್ರಮುಖರು. ಕೆಲವು ತಿಂಗಳುಗಳ ಹಿಂದೆ ಅವರು ‘ವಿಡುದಲೈ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಘೋಷಿಸಿದಾಗಲೇ, ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಇತ್ತು. ಕ್ರಮೇಣ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರು ಚಿತ್ರತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆಯೇ, ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ.


ಸದ್ಯ, ‘ವಿಡುದಲೈ’ ಚಿತ್ರದ ಭಾಗ ಒಂದರ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್​ಪ್ರೊಡಕ್ಷನ್​ ಕೆಲಸಗಳು ಪ್ರಗತಿಯಲ್ಲಿವೆ. ಎರಡನೆಯ ಭಾಗದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು ಸಿರುಮಲೈ, ಕೊಡೈಕೆನಾಲ್​ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈ ಎರಡು ಚಿತ್ರಗಳು ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳಿನ ಕಾಸ್ಟ್ಲಿ ಚಿತ್ರಗಳ ಪೈಕಿ ‘ವಿಡುದಲೈ’ ಸಹ ಸೇರ್ಪಡೆಯಾಗಲಿದೆ.
ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ 10 ಕೋಟಿ ರೂ. ವೆಚ್ಚದ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್​ ನಿರ್ಮಾಣ ಮಾಡಲಾಗಿದೆ. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್​ ನಿರ್ಮಾಣಕ್ಕೂ ಬಳಸಲಾಗಿರುವುದು ವಿಶೇಷ.

ಇದಲ್ಲದೆ, ಸಿರುಮಲೈ ಬಳಿ ಜಾಕಿ ಅವರ ಕಲಾ ನಿರ್ದೇಶನದಲ್ಲಿ ಒಂದು ಹಳ್ಳಿಯನ್ನು ನಿರ್ಮಿಸಲಾಗಿದೆ.
ಸದ್ಯ ಕೊಡೈಕೆನಾಲ್​ನಲ್ಲಿ ಪೀಟರ್​ ಹೇನ್ಸ್​ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುವುದಕ್ಕೆ ತಯಾರಿ ನಡೆಸಲಾಗಿದ್ದು, ಇದಕ್ಕಾಗಿ ಬಲ್ಗೇರಿಯಾದಿಂದ ಸಾಹಸ ಕಲಾವಿದರನ್ನು ಕರೆಸಲಾಗಿದೆ. ಈ ಆಕ್ಷನ್​ ದೃಶ್ಯಗಳಲ್ಲಿ ಬಲ್ಗೇರಿಯಾದ ಸಾಹಸ ಕಲಾವಿದರು ಸಹ ಭಾಗವಹಿಸುತ್ತಿರುವುದು ವಿಶೇಷ.
‘ವಿಡುದಲೈ’ ಚಿತ್ರದಲ್ಲಿ ವಿಜಯ್​ ಸೇತುಪತಿ, ಸೂರಿ, ಭವಾನಿ ಶ್ರೀ, ಪ್ರಕಾಶ್​ ರಾಜ್​, ಗೌತಮ್​ ವಾಸುದೇವ ಮೆನನ್, ರಾಜೀವ್​ ಮೆನನ್​ ಮುಂತಾದವರು ನಟಿಸುತ್ತಿದ್ದಾರೆ.

ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ‘ಇಸೈಜ್ನಾನಿ’ ಇಳಯರಾಜ ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದು, ವೇಲ್​ರಾಜ್​ ಛಾಯಾಗ್ರಹಣ ಮಾಡುತ್ತಿದ್ದಾರೆ.
ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ರೆಡ್​ ಜೈಂಟ್​ ಮೂವೀಸ್​ ವಹಿಸಿಕೊಂಡಿದ್ದು, ಸದ್ಯದಲ್ಲೇ ‘ವಿಡುದಲೈ’ ಮೊದಲ ಭಾಗದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

Categories
ಸಿನಿ ಸುದ್ದಿ

ಕಾಂತಾರ ಟ್ರೇಲರ್ ಭರಪೂರ ಮೆಚ್ಚುಗೆ…

ಹೆಸರಾಂತ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ನಿರ್ಮಿಸಿರುವ, ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ, ಬಹು ನಿರೀಕ್ಷಿತ
“ಕಾಂತಾರ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು,. ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿರುವ ಈ ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

“ಕಾಂತಾರ” ಎಂದರೆ ನಿಗೂಡವಾದ ಕಾಡು.‌ ಪ್ರಕೃತಿ ಹಾಗೂ ಮನುಷ್ಯನ ನಡುವಿನ ಅವಿನಾಭಾವ ಸಂಬಂಧವನ್ನು ಜಾನಪದ ಸೊಗಡಿನ ಮೂಲಕ ತೋರಿಸುವ ಪ್ರಯತ್ನ ಈ ಚಿತ್ರದಲ್ಲಾಗಿದೆ. ಭೂಮಿಯ ಸುತ್ತ ಈ ಕಥೆ ನಡೆಯುತ್ತದೆ. ದಕ್ಷಿಣ ಕನ್ನಡದ ಭೂಮಿ, ಪರಶುರಾಮ ಸೃಷ್ಟಿ ಎಂದೆ ಪ್ರಸಿದ್ದಿ. ಈ ಭಾಗದಲ್ಲಿ ನಡೆಯುವ ದೈವಾರಾಧನೆ, ಕಂಬಳ ಮುಂತಾದ ಜಾನಪದ ಕ್ರೀಡೆಗಳನ್ನು “ಕಾಂತಾರ” ಚಿತ್ರದಲ್ಲಿ ನೋಡುವುದೆ ಕಣ್ಣಿಗೆ ಹಬ್ಬ.. ಟ್ರೇಲರ್ ನಲ್ಲೇ ಇಷ್ಟು ಕುತೂಹಲ ಮೂಡಿಸಿರುವ “ಕಾಂತಾರ”‌ ಚಿತ್ರ ಇದೇ ತಿಂಗಳ 30ರಂದು ಬಿಡುಗಡೆಯಾಗುತ್ತಿದೆ.


ಶಿವ ಹಾಗೂ ಮುರಳಿಧರ ಎಂಬ ಮುಖ್ಯಪಾತ್ರಗಳಿದ್ದು, ಶಿವನಾಗಿ ರಿಷಬ್ ಶೆಟ್ಟಿ, ಮುರಳಿಧರ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ.
“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ” ಚಿತ್ರದ ನಂತರ ರಿಷಬ್ ಶೆಟ್ಟಿ ಮತ್ತೊಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ‌
ಹಾಡು, ಟ್ರೇಲರ್ ನಿಂದ ಈಗಾಗಲೇ ಜನಮನ ಗೆದ್ದಿರುವ “ಕಾಂತಾರ” ಚಿತ್ರದ ಬಿಡುಗಡೆಗಾಗಿ ಕನ್ನಡ ಕಲಾರಸಿಕರು ಕಾತುರದಿಂದ ಕಾಯುತ್ತಿದ್ದಾರೆ.

Categories
ಸಿನಿ ಸುದ್ದಿ

ಒರಿಸ್ಸಾ ಪುರಿ ಬೀಚ್ ನಲ್ಲಿ ಅರಳಿದ ಸುದೀಪ್ ಮರಳು ಶಿಲ್ಪ…

ಅಭಿನಯ ಚಕ್ರವರ್ತಿ ಸುದೀಪ್ ಅವರು ರಾಷ್ಟ್ರದಾದ್ಯಂತ ಖ್ಯಾತಿ ಜೊತೆಗೆ ಅಭಿಮಾನ ಸಮೂಹವನ್ನು ಹೊಂದಿರುವ ಕನ್ನಡದ ಮೇರುನಟ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಜನ್ಮದಿನ. ಈ ಜನ್ಮದಿನವನ್ನು ಸ್ಮರಣೀಯವಾಗಿಸಲು ಮತ್ತು ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಮಾನಸ್ ಕುಮಾರ್ ಎಂಬ ಹೆಸರಾಂತ ಮರಳುಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸುವ ಮೂಲಕ ಶುಭಾಶಯ ತಿಳಿಸಿದ್ದಾರೆ.

ಈ ಶಿಲ್ಪವು 20 ಅಡಿ ಅಗಲ, 7 ಅಡಿ ಎತ್ತರವಿದೆ. ಈ ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ ಎಂದು ಶಿಲ್ಪಿ ತಿಳಿಸಿದ್ದಾರೆ. ಸುದೀಪ್ ಅವರ ಆಪ್ತರಾದ ವೀರಕಪುತ್ರ ಶ್ರೀನಿವಾಸ ಅವರು ಯಾವ ಫೋಟೋ ಬಳಸಬೇಕು ಮತ್ತು ಕನ್ನಡ ಬರವಣಿ ಹೇಗಿರಬೇಕು ಎಂಬ ಗೊಂದಲಕ್ಕೆ ಅಗತ್ಯವಿದ್ದ ಮಾಹಿತಿಯನ್ನು ನೀಡಿರುವುದನ್ನು ತಿಳಿಸಿದರು.

ದಕ್ಷಿಣ ಭಾರತದಲ್ಲಿಯೇ ಈ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ ಎರಡನೇ ಕಲಾವಿದರೆಂದರೆ ಅದು ಕಿಚ್ಚ ಸುದೀಪ್ ಅವರು ಮಾತ್ರ.

ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು ಎಂಬುದು ಬಿಟ್ಟರೆ ಇದುವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ದಕ್ಕಿರಲಿಲ್ಲ.

ಈಗ ಎರಡನೆಯವರಾಗಿ ಕಿಚ್ಚ ಸುದೀಪ್ ಅವರು ಅಂತಹ ಗೌರವವಕ್ಕೆ ಪಾತ್ರರಾಗಿದ್ದಾರೆ. ನಿನ್ನೆ ತಾನೇ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆಯ ಗೌರವವನ್ನು ಪಡೆದಿದ್ದಂತಹ ಸುದೀಪ್ ಅವರು ಈಗ ಮರಳು ಶಿಲ್ಪ ಗೌರವಕ್ಕೂ ಪಾತ್ರರಾಗಿರುವುದು ಅವರ ಅಭಿಮಾನಿಗಳನ್ನು ಖುಷಿಯಿಂದ ಕುಣಿಯುವಂತೆ ಮಾಡಿದೆ.

Categories
ಸಿನಿ ಸುದ್ದಿ

ಸುದೀಪ್ ಪುಣ್ಯಕೋಟಿ ರಾಯಭಾರಿ…

ಕಿಚ್ಚ ಸುದೀಪ್ ಕನ್ಮಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗ ಮೆಚ್ಚುವಂತಹ ನಟ. ಅವರು ಸೆಪ್ಟೆಂಬರ್ 2 ತಮ್ಮ‌ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಗುರುವಾರ ರಾತ್ರಿಯೇ ಪ್ರೀತಿಯ ನಾಯಕನ ಮನೆ ಎದುರು ಸಾಲುಗಟ್ಟಿ ನಿಂತು ಶುಭ ಕೋರಿದ್ದಾರೆ.

ಪ್ರತಿ ಹುಟ್ಟುಹಬ್ಬದಲ್ಲೂ ಅಭಿಮಾನಿಗಳು ದೊಡ್ಡ ಹಬ್ಬದಂತೆ ಸಡಗರದಿಂದ ಆಚರಿಸುತ್ತಾರೆ. ಈ ಬಾರಿಯೂ ಅದೇ ರೀತಿ ಹಬ್ಬ ಅಚರಿಸಿದ್ದಾರೆ.
ಈ ನಡುವೆ ಕಿಚ್ಚ ಸುದೀಪ ಅವರು, ಸರ್ಕಾರದ ಪಶುಸಂಗೋಪನೆ ಇಲಾಖೆಯ ರಾಯಭಾರಿಯಾಗಿದ್ದಾರೆ. ಪಶು ಸಂಗೋಪನೆ ಇಲಾಖೆ ಜಾನುವರುಗಳ ರಕ್ಷಣೆಗೆ ಕೈಗೊಂಡಿರುವ ಮಹತ್ವಾಕಾಂಕ್ಷೆ ಯೋಜನೆಯದ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ಆಗಿದ್ದಾರೆ.

ಅವರ ಹುಟ್ಟು ಹಬ್ಬದ ಸವಿನೆನಪಿಗೆ ಪಶು ಸಂಗೋಪನೆ ಇಲಾಖೆ ಸಚಿವರಾದ ಪ್ರಭು ಚವ್ಹಾಣ್ ಅವರು, ಸುದೀಪ್ ರಾಯಭಾರಿ ಆಗುವ ಮೂಲಕ ಗೋ ಸಂಪತ್ತಿನ ರಕ್ಷಣೆಗೆ ಕೈ ಜೋಡಿಸಬೇಕು ಎಂದಿದ್ದಾರೆ.

Categories
ಸಿನಿ ಸುದ್ದಿ

ಮೋಹಕ ತಾರೆ ರಮ್ಯಾ ಹೊಸ ಹೆಜ್ಜೆ: ಚಿತ್ರರಂಗದಲ್ಲಿ ಮತ್ತೆ ರಮ್ಯ ಚೈತ್ರಕಾಲ…

ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ರಮ್ಯಾ ಸ್ಯಾಂಡಲ್ ವುಡ್ ಕ್ವೀನ್ ಆಗಿ ಅಬ್ಬರಿಸಿದ್ದು ಗೊತ್ತೇ ಇದೆ. ನಾಯಕಿಯಾಗಿ ಬಿಝಿಯಾಗಿದ್ದ ಸಮಯದಲ್ಲೇ ಅವರು, ಚಿತ್ರರಂಗಕ್ಕೆ ಬ್ರೇಕ್ ನೀಡಿ, ರಾಜಕೀಯದತ್ತ ಮುಖ ಮಾಡಿದ್ದರು. ಇನ್ನೇನು ಸಿನಿಮಾರಂಗವನ್ನು ಮರೆತೇ ಬಿಟ್ಟರು ಅಂದುಕೊಳ್ಳುತ್ತಿದ್ದಂತೆಯೇ ಅವರು ಪುನಃ ಚಿತ್ರರಂಗಕ್ಕೆ ರೀ ಎಂಟ್ರಿಯಾಗಿದ್ದಾರೆ.

ಹೌದು ಆ ಕುರಿತಂತೆ ಸ್ವತಃ ರಮ್ಯಾ ಅವರೇ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಅವರು ಈಗ ನಟಿಯಾಗಿ ಅಲ್ಲ, ನಿರ್ಮಾಪಕಿಯಾಗಿ ಇಂಡಸ್ಟ್ರಿ ಗೆ ಎಂಟ್ರಿಯಾಗುತ್ತಿದ್ದಾರೆ. ಆ ಬಗ್ಗೆ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಅದೇನೆ ಇರಲಿ ರಮ್ಯಾ ಈಗ ನಿರ್ಮಾಪಕಿಯಾಗುತ್ತಿದ್ದಾರೆ ಅವರು ಆ್ಯಪಲ್ ಬಾಕ್ಸ್ ನಿರ್ಮಾಣ ಸಂಸ್ಥೆ ಮೂಲಕ ಸದ್ಯ ಎರಡು ಸಿನಿಮಾಗಳನ್ನು ನಿರ್ಮಿಸಲು ರೆಡಿಯಾಗಿದ್ದಾರೆ. ಆ ಎರಡು ಸಿನಿಮಾಗಳು ಕೆ ಆರ್ ಜಿ ಸ್ಟುಡಿಯೋಸ್ ಮೂಲಕ ವಿತರಣೆಯಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿವೆ.

ಸದ್ಯ ರಮ್ಯಾ ನಿರ್ಮಾಣ ಮಾಡುವ ಕುರಿತು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನಷ್ಟು ವಿವರಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಿದ್ದಾರೆ.

Categories
ಸಿನಿ ಸುದ್ದಿ

ತನುಜಾ ಮೋಷನ್ ಪೋಸ್ಟರ್ ರಿಲೀಸ್…

2020 ಇಡೀ ದೇಶವೇ ಕೊರೋನ ಹಾವಳಿಯಿಂದ ತತ್ತರಿಸಿ ಹೋಗಿದ್ದ ಸಮಯ. ಅಂತಹ ಸಮಯದಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್, ವಿಶ್ವೇಶ್ವರ್ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಾಯದಿಂದ ಶಿವಮೊಗ್ಗ ಜಿಲ್ಲೆಯ ಕುಗ್ರಾಮದ ಹುಡುಗಿ ತನುಜಾ ಬೆಂಗಳೂರಿಗೆ ಬಂದು ನೀಟ್ ಪರೀಕ್ಷೆ ಬರೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ಘಟನೆಯನ್ನು ಪತ್ರಕರ್ತ ವಿಶ್ವೇಶ್ವರ ಭಟ್ ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದರು. ವಿಶ್ವೇಶ್ವರ ಭಟ್ ಅವರಿಂದ ಅನುಮತಿ ಪಡೆದ ಹರೀಶ್ ಎಂ.ಡಿ ಹಳ್ಳಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

“ತನುಜಾ” ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ಪತ್ರಕರ್ತ ವಿಶ್ವೇಶ್ವರ ಭಟ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ನಾನು ಮೊದಲು ಪರಿಶ್ರಮ ನೀಟ್ ಅಕಾಡೆಮಿಯ ಪ್ರದೀಪ್ ಈಶ್ವರ್ ಅವರನ್ನು ಅಭಿನಂದಿಸುತ್ತೇನೆ. ಅವರಿಂದಲೇ ತನುಜಾ ಪರೀಕ್ಷೆ ಬರೆಯಲು ಸಾಧ್ಯವಾಗಿದ್ದು‌. ನನ್ನ ಅಂಕಣ ಓದಿ‌ ಕೆಲವರು ಚಿತ್ರ ಮಾಡುವುದಾಗಿ ಹೇಳಿದರು. ಅದರಲ್ಲಿ ಹರೀಶ್ ಕೂಡ ಒಬ್ಬರು. ಅವರ ಸಿನಿಮಾ ಮೇಲಿನ ಆಸಕ್ತಿ ಹಾಗೂ ಶ್ರದ್ದೆ ನಿಜಕ್ಕೂ ನನಗೆ ಆಶ್ಚರ್ಯ ಉಂಟು ಮಾಡಿತು ಚಿತ್ರ ಮಾಡುವಲ್ಲಿ ಹರೀಶ್ ರವರು ಸಾಕಷ್ಟು ಪರಿಶ್ರಮವನ್ನ ಪಟ್ಟಿದ್ದಾರೆ ಬಹಳ ಕನಸುಗಳನ್ನು ಭರವಸೆ ಇಟ್ಟುಕೊಂಡಿರುವ ನಿರ್ದೇಶಕ ತನುಜಾ ಚಿತ್ರವನ್ನು ಅವರು ಚೆನ್ನಾಗಿ ನಿರ್ದೇಶಿಸಿದ್ದಾರೆ. ನಾನು ಕೂಡ ಅಭಿನಯಿಸಿದ್ದೇನೆ. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಾಗೂ ಸಚಿವ ಸುಧಾಕರ್ ಅವರು ಸಹ ತನುಜಾ ಪರೀಕ್ಷೆ ಬರೆಯಲು ಮಾಡಿದ್ದ ಉಪಕಾರ ಸ್ಮರಣೀಯ. ಈ ಚಿತ್ರದ ಬಗ್ಗೆ ಪ್ರಧಾನಿ ಮೋದಿಯವರ ಗಮನಕ್ಕೆ ತಂದಿದ್ದು, ಚಿತ್ರದ ಕೊನೆಯಲ್ಲಿ ಅವರು ಕೆಲವು ಸೆಕೆಂಡ್ ಗಳ ಕಾಲ ಅವರು ಮಾತನಾಡುವ ಸಾಧ್ಯತೆ ಇದೆ ಎಂದು ಪತ್ರಕರ್ತ ವಿಶ್ವೇಶ್ವರ ಭಟ್ ತಿಳಿಸಿದರು.

ವಿಶ್ವೇಶ್ವರ ಭಟ್ ಅವರ ಅಂಕಣದಿಂದ ಪ್ರೇರಿತನಾದ ನಾನು, ಈ ಚಿತ್ರದ ನಿರ್ದೇಶನಕ್ಕೆ ಮುಂದಾದೆ. ನನ್ನ ಹಲವು ಸ್ನೇಹಿತರು ಬಂಡವಾಳ ಹೂಡಿದರು. ಒಂದು ದಿನದಲ್ಲಿ ನಡೆಯುವ ಕಥೆಯಿದು. ಶಿವಮೊಗ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸುಧಾಕರ್, ಪತ್ರಕರ್ತ ವಿಶ್ವೇಶ್ವರ ಭಟ್ ಮುಂತಾದ ಗಣ್ಯರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿ.

ನಾನು ಈ ಸಿನಿಮಾ ಮಾಡದೆ ಹೋಗಿದ್ದರೆ, ನನಗೆ ತುಂಬಾ ನಷ್ಟವಾಗುತ್ತಿತ್ತು. ಈ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ನನಗೆ ಖುಷಿಯಾಗಿದೆ ಎಂದರು “ತನುಜಾ” ಪಾತ್ರಧಾರಿ ಸಪ್ತ ಪಾವೂರ್.

ನೀಟ್ ಅಕಾಡೆಮಿಯ ಪ್ರದೀಪ್ ಈಶ್ವರ್. ಆಗಿನ ಮುಖ್ಯಮಂತ್ರಿಗಳಿಗೆ ವಿಶೇಷಾಧಿಕಾರಿಯಾಗಿದ್ದ ಡಾ ಕೆ.ಆರ್ ಕಾರ್ತಿಕ್ ತಮ್ಮ ಅನುಭವ ಹಂಚಿಕೊಂಡರು.

ಚಿತ್ರದಲ್ಲಿ ನಿರ್ದೇಶಕರ ಕೆಲವು ಗೆಳೆಯರು ನಿರ್ಮಾಪಕರಾಗಿದ್ದು ಚಂದ್ರಶೇಖರ್ ಗೌಡ ಹಾಗೂ ಪ್ರಕಾಶ್ ಮದ್ದೂರು ನಿರ್ಮಾಪಕರ ಪರವಾಗಿ ಮಾತನಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಇಂತಹ ಒಳ್ಳೆಯ ಪ್ರಯತ್ನ ಮಾಡಿರುವ ಚಿತ್ರತಂಡಕ್ಕೆ ಶುಭಾಶಯ ಹೇಳಿದರು.

ಹರೀಶ್ ಎಂ.ಡಿ ಹಳ್ಳಿ ನಿರ್ದೇಶನವಿರುವ ಈ ಚಿತ್ರದ
ನಿರ್ಮಾಪಕರು ಚಂದ್ರಶೇಖರ ಗೌಡ ಹಾಗೂ ಮನೋಜ್ ಬಿ ಜಿ. ಪ್ರಕಾಶ್ ಮದ್ದೂರು, ಅನಿಲ್ ಷಡಾಕ್ಷರಿ, ಗಿರೀಶ .ಕೆ – ಗೋವರ್ಧನ ಬಿ, ಅವಿನಾಶ್ ಗೌಡ ಈ ಚಿತ್ರದ ಸಹ ನಿರ್ಮಾಪಕರು. ಪ್ರದ್ಯೋತನ್ ಸಂಗೀತ ನಿರ್ದೇಶನ, ರವೀಂದ್ರನಾಥ ಛಾಯಾಗ್ರಹಣ ಹಾಗೂ
ಉಮೇಶ್ ಆರ್ ಬಿ ಸಂಕಲನವಿರುವ ಈ ಚಿತ್ರದ
ಕಾರ್ಯಕಾರಿ ನಿರ್ಮಾಪಕರು ರಘುನಂದನ್ ಎಸ್ ಕೆ‌.

Categories
ಸಿನಿ ಸುದ್ದಿ

ಮಾಫಿಯಾದಲ್ಲಿ ಪ್ರಜ್ವಲ್ ಭರ್ಜರಿ ಫೈಟ್! ಹೈದರಾಬಾದ್ ನಲ್ಲಿ ಬಿಡುವಿಲ್ಲದ ಶೂಟಿಂಗ್…

ಬೆಂಗಳೂರು ಕುಮಾರ್ ಫಿಲಂಸ್ ಬ್ಯಾನರ್ ನಲ್ಲಿ ಕುಮಾರ್ ಬಿ ನಿರ್ಮಿಸುತ್ತಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ ಚಿತ್ರ “ಮಾಫಿಯಾ”.

ಲೋಹಿತ್ ಹೆಚ್ ನಿರ್ದೇಶನದ ಈ ಚಿತ್ರದ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲಂಸಿಟಿಯಲ್ಲಿ ಅದ್ಧೂರಿ ವೆಚ್ಚದಲ್ಲಿ, ನಡೆಯುತ್ತಿದೆ. ವಿನೋದ್ ಅವರ ಸಾಹಸ ಸಂಯೋಜನೆಯಲ್ಲಿ ಮೂಡಿಬರುತ್ತಿರುವ ಈ ಸಾಹಸ ಸನ್ನಿವೇಶದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಸಹ ಕಲಾವಿದರು ಪಾಲ್ಗೊಂಡಿದ್ದಾರೆ. ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ. ಇದು ಕ್ಲೈಮ್ಯಾಕ್ಸ್ ಭಾಗದ ಸಾಹಸ ದೃಶ್ಯ.

“ಮಾಫಿಯಾ” ಚಿತ್ರ ತುಂಬಾ ಚೆನ್ನಾಗಿ ಮೂಡಿ ಬರುತ್ತಿದ್ದು, ಪ್ರಜ್ವಲ್ ಅವರ ಈವರೆಗಿನ ಸಿನಿಪಯಣದ ಅತ್ಯುತ್ತಮ ಚಿತ್ರವಾಗಲಿದೆ ಎಂಬ ಭರವಸೆಯಿದೆ. ಈ ಚಿತ್ರಕ್ಕಾಗಿ ಪ್ರಜ್ವಲ್ ಅವರು ಸಹ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಅವರ ಸಹಕಾರಕ್ಕೆ ಧನ್ಯವಾದ ಎಂದರು ನಿರ್ಮಾಪಕ ಕುಮಾರ್.

ಈ ಸಾಹಸ ಸನ್ನಿವೇಶದ ನಂತರ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿರುತ್ತದೆ. ಆ ಹಾಡಿನ ಚಿತ್ರೀಕರಣವಾದರೆ ಚಿತ್ರೀಕರಣ ಮುಕ್ತಾಯವಾಗಲಿದೆ.

ಎಸ್ ಪಾಂಡಿಕುಮಾರ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.

Categories
ಸಿನಿ ಸುದ್ದಿ

ಭಾವಪೂರ್ಣ ಎಂಬ ಅರ್ಥಪೂರ್ಣ ಸಿನಿಮಾ; ಇಲ್ಲಿ ಭಾವನೆಗಳದ್ದೇ ಮಾತು…

“ಮದಿಪು” ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಚೇತನ್ ಮುಂಡಾಡಿ. ಪ್ರಸ್ತುತ ಇವರು ನಿರ್ದೇಶಿಸುತ್ತಿರುವ “ಭಾವಪೂರ್ಣ” ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 8 ರಿಂದ ಆರಂಭವಾಗಲಿದೆ.

ಈವರೆಗೂ ಕಲಾತ್ಮಕ ಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಇದು ಮೊದಲ ಕಮರ್ಷಿಯಲ್ ಚಿತ್ರ.
ಇದು ತೊಂಬತ್ತರ ಕಾಲಘಟ್ಟದಲ್ಲಿ ನಡೆಯುವ ಕಥೆ. ಭಾವನೆಗಳೇ ಇಲ್ಲಿನ ಪಾತ್ರಗಳು. ಪುಟ್ಟಗ್ರಾಮವೊಂದರಲ್ಲಿ 50ರ ವಯಸ್ಸಿನ ವ್ಯಕ್ತಿಯಲ್ಲಿ ಚಿಗುರುವ ಅನಿವಾರ್ಯ ಬಯಕೆಯನ್ನು ಈಡೇರಿಸಿಕೊಳ್ಳಲು ಆತ ಪಡುವ ಪರಿಪಾಟಗಳೇ ಚಿತ್ರದ ಮುಖ್ಯ ಕಥಾಹಂದರ.

ಧರ್ಮಣ್ಣ ಎಂಬ ಮುಖ್ಯಪಾತ್ರದಲ್ಲಿ ಹಿರಿಯ ನಟ ರಮೇಶ್ ಪಂಡಿತ್ ಅಭಿನಯಿಸುತ್ತಿದ್ದಾರೆ. ಮಂಜುನಾಥ್ ಹೆಗಡೆ ಮತ್ತೊಂದು ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೈಲಶ್ರೀ, ಮಂಗಳಾ, ನಾಗೇಂದ್ರ ಶಾ, ಅಥರ್ವ ಪ್ರಕಾಶ್, ವಿ.ಮನೋಹರ್, ಸುಜಯ್ ಶಾಸ್ತ್ರಿ, ಎಂ.ಕೆ.ಮಠ, ವಿನ್ಯಾ, ಉಗ್ರಂ ಮಂಜು, ಜೆಜಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸೆಪ್ಟೆಂಬರ್ 8 ರಿಂದ ಸೌತಡ್ಕ, ಸಾಗರ, ಜೋಗ, ಮುರುಡೇಶ್ವರದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಚೇತನ್ ಮುಂಡಾಡಿ ಚಿತ್ರದ ಕುರಿತು ಮಾಹಿತಿ ನೀಡಿದರು.

ಈ ಚಿತ್ರದಲ್ಲಿ ಧರ್ಮಣ್ಣ ಎನ್ನುವ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಅನ್ವೇಷಣೆಯ ಮೇಲೆ ಕಥೆ ಸಾಗುತ್ತದೆ ಎಂದು ರಮೇಶ್ ಪಂಡಿತ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ನನಗೆ ಅಳುವ ಹಾಗೂ ಸಂದೇಶ ನೀಡುವ ಚಿತ್ರಗಳಲ್ಲಿ ಆಸಕ್ತಿ ಇಲ್ಲ. ಜನ ಸಿನಿಮಾ ನೋಡಲು ಬರುವುದು ತಮ್ಮ ನಿತ್ಯದ ಕಷ್ಟಗಳನ್ನು ಮರೆಯುವುದಕ್ಕಾಗಿ. ಚಿತ್ರದಲ್ಲೂ ದುಖದ ಸಂಗತಿ ಇದ್ದರೆ ಯಾರು ಇಷ್ಟ ಪಡುವುದಿಲ್ಲ. ಹಾಗಾಗಿ ಚೇತನ್ ಮುಂಡಾಡಿ ಒಳ್ಳೆಯ ಮನೋರಂಜನೆಯಿರುವ ಕಥೆ ಮಾಡಿಕೊಂಡಿದ್ದಾರೆ. ಅವರಿಗೆ ಬೇಕಾದನ್ನು ಒದಗಿಸುವುದನ್ನು ನಾನು ಮಾಡುತ್ತೇನೆ ಎಂದರು ನಿರ್ಮಾಪಕ ಪ್ರಶಾಂತ್ ಅಂಜನಪ್ಪ.

ವಿ.ಮನೋಹರ್ ಸಂಗೀತ ನಿರ್ದೇಶನ, ಪ್ರಸನ್ನ ಛಾಯಾಗ್ರಹಣ, ಕೀರ್ತಿ ಸಂಕಲನ, ಸುಂದರ್ ಸಂಭಾಷಣೆ ಹಾಗೂ ಅನಂತರಾಜ್ ಸಹ ನಿರ್ದೇಶನವಿರುವ ಈ ಚಿತ್ರಕ್ಕೆ ಸುಂದರ್ ವೀಣಾ ಸಂಭಾಷಣೆ ಬರೆದಿದ್ದಾರೆ.

Categories
ಸಿನಿ ಸುದ್ದಿ

ರಿದಂ ಎಂಬ ಸಂಗೀತಮಯ ಸಿನಿಮಾ: ಎ ಸ್ಪೆಷಲ್ ಲವ್ ಸ್ಟೋರಿ ಚಿತ್ರ…

ಕನ್ನಡ ಚಿತ್ರರಂಗದಲ್ಲಿ ಬಹಳ ದಿನಗಳ ನಂತರ ಮ್ಯೂಸಿಕಲ್ ಲವ್‌ಸ್ಟೋರಿ ಹೊಂದಿರುವ ಚಿತ್ರವೊಂದು ತೆರೆಗೆ ಬರಲು ಅಣಿಯಾಗಿದೆ. ಪ್ರೇಮಲೋಕ, ಎಕ್ಸ್ ಕ್ಯೂಸ್ ಮಿ ಚಿತ್ರಗಳ ನಂತರ ಅದೇ ಜಾನರ್‌ನಲ್ಲಿ ತಯಾರಾಗಿರುವ ಮತ್ತೊಂದು ಚಿತ್ರದ ಹೆಸರು ರಿದಂ. ಚಿತ್ರೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಅನುಭವ ಇರುವ ಮಂಜು ಮಿಲನ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರವಿದು.

ಈಗಾಗಲೇ ಬಿಡುಗಡೆಯ ಹಂತ ತಲುಪಿರುವ ರಿದಂ, ಸದ್ಯದಲ್ಲೇ ಸೆನ್ಸಾರ್ ಗೆ ಹೋಗಲಿದೆ. ಚಿತ್ರದಲ್ಲಿ ನಾಯಕನಾಗೂ ನಟಿಸಿರುವ ಮಂಜುಮಿಲನ್ ಈಗಾಗಲೇ ತಮ್ಮ ಬ್ಯಾನರ್ ಮೂಲಕ 2 ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ್ದು, ಇದು ಅವರ ಮೂರನೇ ಚಿತ್ರ. ಜೋಗಿ ಪ್ರೇಮ್, ಕಾಶೀನಾಥ್, ವಾಸು ಅವರಂಥ ನಿರ್ದೇಶಕರ ಬಳಿ ಕೆಲಸ ಮಾಡಿರುವ ಇವರು, ಒಬ್ಬ ಸಿಂಗರ್ ಹಾಗೂ ವಯಲಿನ್ ನುಡಿಸೋ ಯುವತಿಯ ನಡುವೆ ನಡೆಯುವ ಲವ್‌ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ಚಿತ್ರದ ನಾಯಕಿಯಾಗಿ ಕೃಷ್ಣತುಳಸಿ ಖ್ಯಾತಿಯ ಮೇಘಶ್ರೀ ಅವರು ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಬೆಂಗಳೂರು, ಮೈಸೂರು, ಮೇಲುಕೋಟೆ ಅಲ್ಲದೆ ಸಾಗರದಾಚೆಯ ಸಿಂಗಪೂರ್‌ನಲ್ಲಿ ಸುಮಾರು 62 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಿಕೊಂಡು ಬಂದಿದ್ದಾರೆ. ಚಿತ್ರದಲ್ಲಿ ಸಪ್ತಸ್ವರಗಳನ್ನು ಪ್ರತಿನಿಧಿಸುವಂತೆ ಏಳು ಸುಂದರವಾದ. ಹಾಡುಗಳಿದ್ದು, ಎ.ಟಿ. ರವೀಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಮಂಜುನಾಥ್ ಹಾಗೂ ಮಲ್ಲಿಕಾರ್ಜುನ್ ಚಿತ್ರಕ್ಕೆ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಹಿರಿಯ ಕಲಾವಿದರಾದ ಸುಮನ್, ಪದ್ಮಾವಾಸಂತಿ, ವಿನಯಾಪ್ರಸಾದ್, ಗಿರಿಜಾ ಲೋಕೇಶ್ ಈ ಚಿತ್ರದಲ್ಲಿ ನಟಿಸಿದ್ದಾರೆ.


ಫ್ಯಾಮಿಲಿ ಸೆಂಟಿಮೆಂಟ್ ಜೊತೆಗೆ ಒಂದು ಎಮೋಷನಲ್ ಲವ್‌ಸ್ಟೋರಿಯನ್ನು ರಿದಂ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಹೇಳಹೊರಟಿರುವ ನಿರ್ದೇಶಕ ಕಮ್ ನಾಯಕ ಮಂಜು ಮಿಲನ್ ಅವರು ಮುಂದಿನ ತಿಂಗಳು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.

error: Content is protected !!