ತನುಜಾ ಮೋಷನ್ ಪೋಸ್ಟರ್ ರಿಲೀಸ್…

2020 ಇಡೀ ದೇಶವೇ ಕೊರೋನ ಹಾವಳಿಯಿಂದ ತತ್ತರಿಸಿ ಹೋಗಿದ್ದ ಸಮಯ. ಅಂತಹ ಸಮಯದಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್, ವಿಶ್ವೇಶ್ವರ್ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಾಯದಿಂದ ಶಿವಮೊಗ್ಗ ಜಿಲ್ಲೆಯ ಕುಗ್ರಾಮದ ಹುಡುಗಿ ತನುಜಾ ಬೆಂಗಳೂರಿಗೆ ಬಂದು ನೀಟ್ ಪರೀಕ್ಷೆ ಬರೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ಘಟನೆಯನ್ನು ಪತ್ರಕರ್ತ ವಿಶ್ವೇಶ್ವರ ಭಟ್ ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದರು. ವಿಶ್ವೇಶ್ವರ ಭಟ್ ಅವರಿಂದ ಅನುಮತಿ ಪಡೆದ ಹರೀಶ್ ಎಂ.ಡಿ ಹಳ್ಳಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

“ತನುಜಾ” ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ಪತ್ರಕರ್ತ ವಿಶ್ವೇಶ್ವರ ಭಟ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ನಾನು ಮೊದಲು ಪರಿಶ್ರಮ ನೀಟ್ ಅಕಾಡೆಮಿಯ ಪ್ರದೀಪ್ ಈಶ್ವರ್ ಅವರನ್ನು ಅಭಿನಂದಿಸುತ್ತೇನೆ. ಅವರಿಂದಲೇ ತನುಜಾ ಪರೀಕ್ಷೆ ಬರೆಯಲು ಸಾಧ್ಯವಾಗಿದ್ದು‌. ನನ್ನ ಅಂಕಣ ಓದಿ‌ ಕೆಲವರು ಚಿತ್ರ ಮಾಡುವುದಾಗಿ ಹೇಳಿದರು. ಅದರಲ್ಲಿ ಹರೀಶ್ ಕೂಡ ಒಬ್ಬರು. ಅವರ ಸಿನಿಮಾ ಮೇಲಿನ ಆಸಕ್ತಿ ಹಾಗೂ ಶ್ರದ್ದೆ ನಿಜಕ್ಕೂ ನನಗೆ ಆಶ್ಚರ್ಯ ಉಂಟು ಮಾಡಿತು ಚಿತ್ರ ಮಾಡುವಲ್ಲಿ ಹರೀಶ್ ರವರು ಸಾಕಷ್ಟು ಪರಿಶ್ರಮವನ್ನ ಪಟ್ಟಿದ್ದಾರೆ ಬಹಳ ಕನಸುಗಳನ್ನು ಭರವಸೆ ಇಟ್ಟುಕೊಂಡಿರುವ ನಿರ್ದೇಶಕ ತನುಜಾ ಚಿತ್ರವನ್ನು ಅವರು ಚೆನ್ನಾಗಿ ನಿರ್ದೇಶಿಸಿದ್ದಾರೆ. ನಾನು ಕೂಡ ಅಭಿನಯಿಸಿದ್ದೇನೆ. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಾಗೂ ಸಚಿವ ಸುಧಾಕರ್ ಅವರು ಸಹ ತನುಜಾ ಪರೀಕ್ಷೆ ಬರೆಯಲು ಮಾಡಿದ್ದ ಉಪಕಾರ ಸ್ಮರಣೀಯ. ಈ ಚಿತ್ರದ ಬಗ್ಗೆ ಪ್ರಧಾನಿ ಮೋದಿಯವರ ಗಮನಕ್ಕೆ ತಂದಿದ್ದು, ಚಿತ್ರದ ಕೊನೆಯಲ್ಲಿ ಅವರು ಕೆಲವು ಸೆಕೆಂಡ್ ಗಳ ಕಾಲ ಅವರು ಮಾತನಾಡುವ ಸಾಧ್ಯತೆ ಇದೆ ಎಂದು ಪತ್ರಕರ್ತ ವಿಶ್ವೇಶ್ವರ ಭಟ್ ತಿಳಿಸಿದರು.

ವಿಶ್ವೇಶ್ವರ ಭಟ್ ಅವರ ಅಂಕಣದಿಂದ ಪ್ರೇರಿತನಾದ ನಾನು, ಈ ಚಿತ್ರದ ನಿರ್ದೇಶನಕ್ಕೆ ಮುಂದಾದೆ. ನನ್ನ ಹಲವು ಸ್ನೇಹಿತರು ಬಂಡವಾಳ ಹೂಡಿದರು. ಒಂದು ದಿನದಲ್ಲಿ ನಡೆಯುವ ಕಥೆಯಿದು. ಶಿವಮೊಗ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸುಧಾಕರ್, ಪತ್ರಕರ್ತ ವಿಶ್ವೇಶ್ವರ ಭಟ್ ಮುಂತಾದ ಗಣ್ಯರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿ.

ನಾನು ಈ ಸಿನಿಮಾ ಮಾಡದೆ ಹೋಗಿದ್ದರೆ, ನನಗೆ ತುಂಬಾ ನಷ್ಟವಾಗುತ್ತಿತ್ತು. ಈ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ನನಗೆ ಖುಷಿಯಾಗಿದೆ ಎಂದರು “ತನುಜಾ” ಪಾತ್ರಧಾರಿ ಸಪ್ತ ಪಾವೂರ್.

ನೀಟ್ ಅಕಾಡೆಮಿಯ ಪ್ರದೀಪ್ ಈಶ್ವರ್. ಆಗಿನ ಮುಖ್ಯಮಂತ್ರಿಗಳಿಗೆ ವಿಶೇಷಾಧಿಕಾರಿಯಾಗಿದ್ದ ಡಾ ಕೆ.ಆರ್ ಕಾರ್ತಿಕ್ ತಮ್ಮ ಅನುಭವ ಹಂಚಿಕೊಂಡರು.

ಚಿತ್ರದಲ್ಲಿ ನಿರ್ದೇಶಕರ ಕೆಲವು ಗೆಳೆಯರು ನಿರ್ಮಾಪಕರಾಗಿದ್ದು ಚಂದ್ರಶೇಖರ್ ಗೌಡ ಹಾಗೂ ಪ್ರಕಾಶ್ ಮದ್ದೂರು ನಿರ್ಮಾಪಕರ ಪರವಾಗಿ ಮಾತನಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಇಂತಹ ಒಳ್ಳೆಯ ಪ್ರಯತ್ನ ಮಾಡಿರುವ ಚಿತ್ರತಂಡಕ್ಕೆ ಶುಭಾಶಯ ಹೇಳಿದರು.

ಹರೀಶ್ ಎಂ.ಡಿ ಹಳ್ಳಿ ನಿರ್ದೇಶನವಿರುವ ಈ ಚಿತ್ರದ
ನಿರ್ಮಾಪಕರು ಚಂದ್ರಶೇಖರ ಗೌಡ ಹಾಗೂ ಮನೋಜ್ ಬಿ ಜಿ. ಪ್ರಕಾಶ್ ಮದ್ದೂರು, ಅನಿಲ್ ಷಡಾಕ್ಷರಿ, ಗಿರೀಶ .ಕೆ – ಗೋವರ್ಧನ ಬಿ, ಅವಿನಾಶ್ ಗೌಡ ಈ ಚಿತ್ರದ ಸಹ ನಿರ್ಮಾಪಕರು. ಪ್ರದ್ಯೋತನ್ ಸಂಗೀತ ನಿರ್ದೇಶನ, ರವೀಂದ್ರನಾಥ ಛಾಯಾಗ್ರಹಣ ಹಾಗೂ
ಉಮೇಶ್ ಆರ್ ಬಿ ಸಂಕಲನವಿರುವ ಈ ಚಿತ್ರದ
ಕಾರ್ಯಕಾರಿ ನಿರ್ಮಾಪಕರು ರಘುನಂದನ್ ಎಸ್ ಕೆ‌.

Related Posts

error: Content is protected !!