ಕನ್ನಡ ಚಿತ್ರರಂಗದಲ್ಲಿ ಬಹಳ ದಿನಗಳ ನಂತರ ಮ್ಯೂಸಿಕಲ್ ಲವ್‌ಸ್ಟೋರಿ ಹೊಂದಿರುವ ಚಿತ್ರವೊಂದು ತೆರೆಗೆ ಬರಲು ಅಣಿಯಾಗಿದೆ. ಪ್ರೇಮಲೋಕ, ಎಕ್ಸ್ ಕ್ಯೂಸ್ ಮಿ ಚಿತ್ರಗಳ ನಂತರ ಅದೇ ಜಾನರ್‌ನಲ್ಲಿ ತಯಾರಾಗಿರುವ ಮತ್ತೊಂದು ಚಿತ್ರದ ಹೆಸರು ರಿದಂ. ಚಿತ್ರೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಅನುಭವ ಇರುವ ಮಂಜು ಮಿಲನ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರವಿದು.
ಈಗಾಗಲೇ ಬಿಡುಗಡೆಯ ಹಂತ ತಲುಪಿರುವ ರಿದಂ, ಸದ್ಯದಲ್ಲೇ ಸೆನ್ಸಾರ್ ಗೆ ಹೋಗಲಿದೆ. ಚಿತ್ರದಲ್ಲಿ ನಾಯಕನಾಗೂ ನಟಿಸಿರುವ ಮಂಜುಮಿಲನ್ ಈಗಾಗಲೇ ತಮ್ಮ ಬ್ಯಾನರ್ ಮೂಲಕ 2 ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ್ದು, ಇದು ಅವರ ಮೂರನೇ ಚಿತ್ರ. ಜೋಗಿ ಪ್ರೇಮ್, ಕಾಶೀನಾಥ್, ವಾಸು ಅವರಂಥ ನಿರ್ದೇಶಕರ ಬಳಿ ಕೆಲಸ ಮಾಡಿರುವ ಇವರು, ಒಬ್ಬ ಸಿಂಗರ್ ಹಾಗೂ ವಯಲಿನ್ ನುಡಿಸೋ ಯುವತಿಯ ನಡುವೆ ನಡೆಯುವ ಲವ್‌ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ಚಿತ್ರದ ನಾಯಕಿಯಾಗಿ ಕೃಷ್ಣತುಳಸಿ ಖ್ಯಾತಿಯ ಮೇಘಶ್ರೀ ಅವರು ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಬೆಂಗಳೂರು, ಮೈಸೂರು, ಮೇಲುಕೋಟೆ ಅಲ್ಲದೆ ಸಾಗರದಾಚೆಯ ಸಿಂಗಪೂರ್‌ನಲ್ಲಿ ಸುಮಾರು 62 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಿಕೊಂಡು ಬಂದಿದ್ದಾರೆ. ಚಿತ್ರದಲ್ಲಿ ಸಪ್ತಸ್ವರಗಳನ್ನು ಪ್ರತಿನಿಧಿಸುವಂತೆ ಏಳು ಸುಂದರವಾದ. ಹಾಡುಗಳಿದ್ದು, ಎ.ಟಿ. ರವೀಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಮಂಜುನಾಥ್ ಹಾಗೂ ಮಲ್ಲಿಕಾರ್ಜುನ್ ಚಿತ್ರಕ್ಕೆ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಹಿರಿಯ ಕಲಾವಿದರಾದ ಸುಮನ್, ಪದ್ಮಾವಾಸಂತಿ, ವಿನಯಾಪ್ರಸಾದ್, ಗಿರಿಜಾ ಲೋಕೇಶ್ ಈ ಚಿತ್ರದಲ್ಲಿ ನಟಿಸಿದ್ದಾರೆ.
ಫ್ಯಾಮಿಲಿ ಸೆಂಟಿಮೆಂಟ್ ಜೊತೆಗೆ ಒಂದು ಎಮೋಷನಲ್ ಲವ್‌ಸ್ಟೋರಿಯನ್ನು ರಿದಂ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಹೇಳಹೊರಟಿರುವ ನಿರ್ದೇಶಕ ಕಮ್ ನಾಯಕ ಮಂಜು ಮಿಲನ್ ಅವರು ಮುಂದಿನ ತಿಂಗಳು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.