Categories
ಸಿನಿ ಸುದ್ದಿ

ಪುನೀತ ಪರ್ವ ಚಿತ್ರಕ್ಕೆ ತೆರಿಗೆ ವಿನಾಯಿತಿ: ಸಿಎಂ ಘೋಷಣೆ- ನವೆಂಬರ್ 1 ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರದಾನ…

ಮುಂದಿನ ಪೀಳಿಗೆಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ಸಂರಕ್ಷಣೆ ಮಾಡಲು ಪ್ರೇರಣೆ ನೀಡುವ ‘ಗಂಧದ ಗುಡಿ’ ಚಲನಚಿತ್ರಕ್ಕೆ ಸರ್ಕಾರ ತೆರಿಗೆ ವಿನಾಯ್ತಿಯನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಶುಕ್ರವಾರ ಅವರು ‘ಪುನೀತ ಪರ್ವ’ ಗಂಧದ ಗುಡಿ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಮಾಧ್ಯಮ ಜೊತೆ ಈ ವಿಷಯ ಹಂಚಿಕೊಂಡರು.

ಗಂಧದ ಗುಡಿ ಚಲನಚಿತ್ರ ನಿಸರ್ಗ ಮತ್ತು ಅದರ ರಕ್ಷಣೆ ಕುರಿತ ಸಿನಿಮಾ ಆಗಿರುವುದರಿಂದ ಇಂದಿನ ಕಾಲದಲ್ಲಿ ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ ಎಂದರು.

ಅಪ್ಪು ಜನಮಾನಸದಲ್ಲಿ ಜೀವಂತವಾಗಿದ್ದಾರೆ; ಅಪ್ಪು ಅವರನ್ನು ಕಳೆದುಕೊಂಡು ಒಂದು ವರ್ಷವಾಗಿದೆ. ಅಪ್ಪು ನಮ್ಮ ಜೊತೆಗೆ ಇದ್ದಾರೆ ಎಂಬ ಭಾವನೆ ನಮ್ಮಲ್ಲಿದೆ‌. ಅವರು ದೇವತಾ ಮನುಷ್ಯ, ಅವರ ವ್ಯಕ್ತಿತ್ವಕ್ಕೆ ದೇವರ ಆಶೀರ್ವಾದವಿದೆ ಎಂದರು.

ಕರ್ನಾಟಕ ರತ್ನ ಪ್ರದಾನ…

ನವೆಂಬರ್ 1 ರಂದು ಅಪ್ಪುರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಮುಖ್ಯದ್ವಾರ ಮೆಟ್ಟಿಲುಗಳ ಮೇಲೆ ಕರ್ನಾಟಕ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗುತ್ತಿದೆ. ಇದು ಎಲ್ಲಾ ಯುವಕರಿಗೂ ಪ್ರೇರಣೆಯಾಗುವಂತಹ ಒಂದು ಗೌರವ ಎಂದು ಭಾವಿಸುತ್ತೇನೆ ಎಂದರು.

ಗಂಧದ ಗುಡಿ ಚಲನಚಿತ್ರ ಅತ್ಯಂತ ಯಶಸ್ವಿಯಾಗಲಿ ಅದೇ ರೀತಿ ಪುನೀತ ಪರ್ವ ಕಾರ್ಯಕ್ರಮ ಕೂಡ ಯಶಸ್ವಿಯಾಗಲಿ. ಸುಮಾರು ಹತ್ತು ದಿನಗಳ ಕಾಲ ನಡೆಯುವ ಕರ್ನಾಟಕ ರತ್ನ ಸಮಾರಂಭದ ಸಂಭ್ರಮವೂ ಕೂಡ ಯಶಸ್ವಿಯಾಗಲಿ. ಈ ಕಾರ್ಯಕ್ರಮದ ಮೂಲಕ ಅಪ್ಪುವಿನ ಮೇಲಿನ ನಮ್ಮ ಪ್ರೀತಿ, ವಾತ್ಸಲ್ಯವನ್ನು ಸಮಸ್ತ ಕನ್ನಡ ನಾಡು ತೋರಿಸಿದಂತಾಗುತ್ತದೆ ಎಂದರು ಅವರು.

Categories
ಸಿನಿ ಸುದ್ದಿ

ಅಮೇಜಾನ್ ನಲ್ಲೂ ಡೊಳ್ಳು ಸೌಂಡು!

ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್. ನಿರ್ದೇಶನ, ಬರವಣಿಗೆ ಜೊತೆಗೆ ಸಿನಿಮಾ ನಿರ್ಮಾಣವನ್ನು ಆರಂಭಿಸಿರುವ ಇವರು ನಿರ್ಮಾಣ ಮಾಡಿದ ಮೊದಲ ಸಿನಿಮಾದಲ್ಲೇ ಸಂಚಲನ ಸೃಷ್ಟಿಸಿದವರು. ಚೊಚ್ಚಲ ನಿರ್ಮಾಣದ ‘ಡೊಳ್ಳು’ ಸಿನಿಮಾ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆದುಕೊಂಡಿದೆ. ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಕನ್ನಡಿಗರ ಕೀರ್ತಿಯನ್ನು ಹೆಚ್ಚಿಸಿತ್ತು. ಹೀಗೆ ಎಲ್ಲರ ಹೆಮ್ಮೆಗೆ ಪಾತ್ರವಾದ ‘ಡೊಳ್ಳು’ ಸಿನಿಮಾ ಚಿತ್ರಮಂದಿರದಲ್ಲೂ ಸಿನಿ ಪ್ರೇಮಿಗಳ ಮನಗೆದ್ದಿತ್ತು. ಇದೀಗ ಒಟಿಟಿಗೂ ಲಗ್ಗೆ ಇಟ್ಟಿದ್ದು ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡಿದೆ.

ಹೆಸರೇ ಹೇಳುವಂತೆ ಡೊಳ್ಳು ಕುಣಿತದ ಸುತ್ತ ನಮ್ಮ ನೆಲದ ಜಾನಪದ ಸೊಗಡನ್ನು ಮುಖ್ಯವಾಗಿಟ್ಟುಕೊಂಡು ಹೆಣೆದ ಕಥೆ ಈ ಚಿತ್ರದ ಜೀವಾಳ. ಒಡೆಯರ್ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆಯುದರೊಂದಿಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಮಾಮೂಲಿ ಕಮರ್ಶಿಯಲ್ ಸಿನಿಮಾಗಳ ನಡುವೆ ಜಾನಪದ ಕಲೆಯ ಕಾಳಜಿ ಕುರಿತಾದ ಈ ಚಿತ್ರ ಸಾಗರ್ ಪುರಾಣಿಕ್ ನಿರ್ದೇಶನದ ಮೊದಲ ಸಿನಿಮಾ.

ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಬಾಬು ಹಿರಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಒಳಗೊಂಡ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಅನಂತ್ ಕಾಮತ್ ಎಂ ಸಂಗೀತವಿದೆ.

ಅಭಿಲಾಶ್ ಕಲಥಿ ಕ್ಯಾಮೆರಾ ನಿರ್ದೇಶನ, ಬಿ ಎಸ್ ಕೆಂಪರಾಜು ಸಂಕಲನ ಡೊಳ್ಳು ಚಿತ್ರಕ್ಕಿದೆ. ಚಿತ್ರಮಂದಿರದಲ್ಲಿ ಡೊಳ್ಳು ಸಿನಿಮಾ ಮಿಸ್ ಮಾಡಿಕೊಂಡವರು ಅಮೇಜಾನ್ ಪ್ರೈಮ್ ನಲ್ಲಿ ನೋಡಬಹುದಾಗಿದೆ.

Categories
ಸಿನಿ ಸುದ್ದಿ

ಕನ್ನಡದ ಹೊಸ‌ ಕೆಡಿ! ಧ್ರುವ ಸರ್ಜಾಗೆ ಹೆಸರಿಟ್ಟ ಪ್ರೇಮ್: ನಯಾ ಸಿನಿಮಾ ಟೈಟಲ್ ರಿಲೀಸ್…

ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ‘ಜೋಗಿ’ ಪ್ರೇಮ್‌ ಕಾಂಬಿನೇಷನ್‌ನಲ್ಲಿ ಘೋಷಣೆ ಆಗಿದ್ದ ಸಿನಿಮಾಗೆ ‘ಕೆ ಡಿ’ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಟೈಟಲ್ ಟೀಸರ್ ರಿಲೀಸ್ ಮಾಡಿ, ಚಿತ್ರತಂಡ ಈ ವಿಚಾರವನ್ನು ಹಂಚಿಕೊಂಡಿದೆ. ಬಾಲಿವುಡ್‌ ನಟ ಸಂಜಯ್ ದತ್ ಅವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಟೈಟಲ್ ಟೀಸರ್ ರಿಲೀಸ್ ಆಗಮಿಸಿದ್ದ ಅವರು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಕೆಜಿಎಫ್‌ 2’ ಚಿತ್ರದಲ್ಲಿ ಅಧೀರ ಪಾತ್ರ ಮಾಡಿದ್ದ ಸಂಜಯ್ ದತ್, ಇಲ್ಲಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಈ ಸಿನಿಮಾವು 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆಯನ್ನು ಹೊಂದಿದೆ. ಬೆಂಗಳೂರಿನಲ್ಲಿ ನಡೆದ ಈ ಕಥೆ ರೋಚಕವಾಗಿದ್ದು, ನೈಜವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಲಿದ್ದೇನೆ. ಸದ್ಯ ‘ಕೆಡಿ’ ಎಂದು ಟೈಟಲ್ ಅನೌನ್ಸ್ ಮಾಡಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಪರಭಾಷೆಯ ಕಲಾವಿದರು ಕೂಡ ಇರಲಿದ್ದಾರೆ. ಪಾತ್ರಕ್ಕೆ ಹೊಂದಿಕೆ ಆಗುವುದರಿಂದ ಅವರನ್ನು ಆಯ್ಕೆ ಮಾಡಲಿದ್ದೇವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಅವರೆಲ್ಲ ಯಾರು ಎಂಬುದನ್ನು ಹೇಳಲಿದ್ದೇವೆ ಎಂದು ನಿರ್ದೇಶಕ ಪ್ರೇಮ್ ಹೇಳಿದರು.

ಮಚ್ಚು ಹಿಡಿದು ಖಡಕ್ ಆಗಿ ಪೋಸ್ ನೀಡಿರುವ ನಟ ಧ್ರುವ ಸರ್ಜಾ, ಪಾತ್ರಕ್ಕಾಗಿ ತುಂಬ ತಯಾರಿ ಮಾಡಿಕೊಂಡಿದ್ದಾರಂತೆ. ಈಗಾಗಲೇ ಅವರು 7 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಧ್ರುವ ರೆಟ್ರೋ ಶೈಲಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಇದೊಂದು ಮಾಸ್ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಕಾಳಿದಾಸ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಪರಭಾಷೆಯ ಪತ್ರಕರ್ತರ ಎದುರು ತಮ್ಮ ಪರಿಚಯ ಮಾಡಿಕೊಂಡ ಧ್ರುವ, ನಾನಿನ್ನೂ ಕೇವಲ 5 ಸಿನಿಮಾ ಮಾಡಿರುವ ನಟ. ಇದು ನನ್ನ 6ನೇ ಸಿನಿಮಾ. ನಾನು ಹುಟ್ಟಿದ್ದು, ಆರನೇ ತಾರೀಖು. ನನ್ನ ಲಕ್ಕಿ ನಂಬರ್ ಆರು. ಹಾಗೆಯೇ ಇದು ನನ್ನ 6ನೇ ಚಿತ್ರ. ಇದಿನ್ನೂ ಆರಂಭ ಅಷ್ಟೇ. ಚಿತ್ರೀಕರಣಕ್ಕಾಗಿ ಕಾಯುತ್ತಿದ್ದೇನೆ’ ಎಂದು ಧ್ರುವ ಸರ್ಜಾ ಹೇಳಿದರು.

ಕೆ ಡಿ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು ಟೈಟಲ್ ಟೀಸರ್‌ಗೆ ವಿಜಯ್‌ ಸೇತುಪತಿ ಧ್ವನಿ ನೀಡಿದ್ದಾರೆ. ಮಲಯಾಳಂ ಟೈಟಲ್ ಟೀಸರ್‌ಗೆ ಮೋಹನ್‌ಲಾಲ್‌ ಹಾಗೂ ಹಿಂದಿ ಟೈಟಲ್ ಟೀಸರ್‌ಗೆ ಸಂಜಯ್‌ ದತ್‌ ಅವರು ಧ್ವನಿ ನೀಡಿದ್ದಾರೆ. ಕೆವಿನ್‌ ಪ್ರೊಡಕ್ಷನ್‌ನಲ್ಲಿ ಮೂಡಿ ಬರುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಪ್ರೇಮ್ ಅವರ 9ನೇ ಸಿನಿಮಾ ಈ ಕೆಡಿ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಲಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್‌ ಛಾಯಾಗ್ರಹಣ ಮಾಡಲಿದ್ದಾರೆ. ಬಹುತೇಕ ಸೆಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಲಾಗುತ್ತಿದೆ.

Categories
ಸಿನಿ ಸುದ್ದಿ

ಹುಬ್ಬಳ್ಳಿಯಲ್ಲಿ ಬನಾರಸ್! ಪ್ರೀ ರಿಲೀಸ್ ಇವೆಂಟ್ ಗೆ ದರ್ಶನ್ ಆಗಮನ…

ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ, ಝೈದ್ ಖಾನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಇದೇ ನವೆಂಬರ್ 4ರಂದು ಈ ಚಿತ್ರ ದೇಶಾದ್ಯಂತ ತೆರೆಕಾಣಲಿದೆ. ಈಗಾಗಲೇ ಹಾಡುಗಳು, ಟ್ರೈಲರ್ ಸೇರಿದಂತೆ ನಾನಾ ದಿಕ್ಕುಗಳಲ್ಲಿ ಪ್ರೇಕ್ಷಕರನ್ನು ಸೆಳೆದಿರುವ ಬನಾರಸ್, ಬಿಡುಗಡೆಯ ಹೊಸ್ತಿಲಿನಲ್ಲಿ ಮತ್ತಷ್ಟು ಕಳೆಗಟ್ಟಿಕೊಂಡಿದೆ. ಇದೇ ಬಿಸಿಯಲ್ಲಿ ಪ್ರೀ ರಿಲೀಸ್ ಇವೆಂಟ್ ಅನ್ನು ಚಿತ್ರತಂಡ ಆಯೋಜಿಸಿದೆ.

ಲೇಟೆಸ್ಟ್ ವಿಚಾರವೆಂದರೆ, ಈ ಇವೆಂಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಲಿದ್ದಾರೆ.
ಬನಾರಸ್ ಪ್ರೀ ರಿಲೀಸ್ ಇವೆಂಟ್ ಇದೇ 22ನೇ ತಾರೀಕಿನಂದು ಸಂಜೆ 7.30ಕ್ಕೆ ಸರಿಯಾಗಿ, ಹುಬ್ಬಳ್ಳಿಯ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್‌ನಲ್ಲಿ ನಡೆಯಲಿದೆ. ಸಾವಿರಾರು ಜನ ಸೇರಲಿರುವ ಈ ಅದ್ದೂರಿ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ, ವಿನೋದ್ ಪ್ರಭಾಕರ್, ಚಿಕ್ಕಣ್ಣ, ಅಭಿಷೇಕ್ ಅಂಬರೀಶ್ ಮುಂತಾದವರೂ ಪಾಲ್ಗೊಳ್ಳಲಿದ್ದಾರೆ.

ನಿರ್ದೇಶಕ ಜಯತೀರ್ಥ, ಝೈದ್ ಖಾನ್, ಸೋನಲ್ ಮೊಂತೇರೋ ಸೇರಿದಂತೆ ಒಂದಿಡೀ ಚಿತ್ರತಂಡ ಭಾಗಿಯಾಗಲಿದೆ. ಈ ಸಂದರ್ಭದಲ್ಲಿ ಬನಾರಸ್ ಬಗೆಗಿನ ಮತ್ತಷ್ಟು ಬೆರಗುಗಳು ಅನಾವರಣಗೊಳ್ಳಲಿವೆ.

Categories
ಸಿನಿ ಸುದ್ದಿ

ಹೊಸ ದಿನಚರಿಯ ಹೊಸ ಅಚ್ಚರಿ: ಹೊಸಬರ ಸಿನಿಮಾ ಪೋಸ್ಟರ್ ರಿಲೀಸ್…

ಕನ್ನಡ ಚಿತ್ರರಂಗದಲ್ಲಿ ಹೊಸಪ್ರತಿಭೆಗಳ ಹೊಸಪ್ರಯತ್ನ ನಡೆಯುತ್ತಿರುತ್ತದೆ. ಅದಕ್ಕೆ ಕಲಾರಸಿಕರ ಬೆಂಬಲವೂ ಸಿಗುತ್ತಿದೆ.

ಈಗ ಮತ್ತೊಂದು ಹೊಸ ತಂಡದಿಂದ “ಹೊಸ ದಿನಚರಿ” ಎಂಬ ಸಿನಿಮಾ ನಿರ್ಮಾಣವಾಗಿದೆ. ಈ ಚಿತ್ರದ ಪೋಸ್ಟರ್ ಬಿಡುಗಡೆಯೂ ಆಗಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಎರಡು ದಶಕಕೊಮ್ಮೆ ಒಂದು ಬದಲಾವಣೆ ಆಗುತ್ತಿರುತ್ತದೆ. ಎಂಭತ್ತರಲ್ಲಿ, ಎರಡುಸಾವಿರದಲ್ಲಿ ಈಗ ಎರಡುಸಾವಿರದ ಇಪ್ಪತ್ತರಲ್ಲಿ. ಚಿತ್ರದ ಟ್ರೇಲರ್ ನೋಡಿದರೆ ಈ ತಂಡದಿಂದ ಒಳ್ಳೆಯ ಚಿತ್ರ ಬರುವ ನಿರೀಕ್ಷೆಯಿದೆ. ಇಂತಹ ಯುವ ಉತ್ಸಾಹಿ ಪ್ರತಿಭಾವಂತರ ತಂಡಗಳು ಹೆಚ್ಚು ಬಂದು ಎರಡು ದಶಕಗಳಿಗಾಗುತ್ತಿರುವ ಬದಲಾವಣೆ ದಶಕಕ್ಕೆ ಆಗುವಂತೆ ಆಗಲಿ ಎಂದರು ಟಿ.ಎಸ್.ನಾಗಾಭರಣ.

ಎಲ್ಲರ ಜೀವನದಲ್ಲೂ ಪ್ರೀತಿ ಇದ್ದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ? ಎಂಬುದೆ “ಹೊಸ ದಿನಚರಿ” ಸಾರಾಂಶ. ನಾವು ಸೇರಿದಂತೆ ಈ ಚಿತ್ರತಂಡದ ಅನೇಕ ಸದಸ್ಯರು ಹೊಸಬರು. ಈ ಹಿಂದೆ ಕೆಲವು ಕಿರುಚಿತ್ರಗಳು ಮಾಡಿರುವ ಅನುಭವ ನಮ್ಮಗಿದೆ.


ನಮ್ಮ ಈ ಕನಸನ್ನು ನಿರ್ಮಾಪಕರಾದ ಮೃತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ ಸಾಲಿಮಠ ನನಸು ಮಾಡಿದ್ದಾರೆ. ಡಿಸೆಂಬರ್ 9 ರಂದು ಚಿತ್ರ ತೆರೆಗೆ ಬರುತ್ತಿದೆ ಪ್ರೋತ್ಸಾಹ ನೀಡಿ ಎಂದರು ಜಂಟಿ ನಿರ್ದೇಶಕರಾದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ.

ನಾನು ಈ ಹಿಂದೆ “ಆಯನ” ಚಿತ್ರ ನಿರ್ಮಿಸಿದ್ದೆ. ಇದು ಎರಡನೇ ಚಿತ್ರ.‌ ಕಥೆ ಇಷ್ಟವಾಯಿತು ನಿರ್ಮಾಣಕ್ಕೆ ಮುಂದಾದೆ. ಸಮಾರಂಭಕ್ಕೆ ಆಗಮಿಸಿರುವ ನಾಗಾಭರಣ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ಗಂಗಾಧರ ಸಾಲಿಮಠ.

ಚಿತ್ರದ ನಾಯಕರಾದ ದೀಪಕ್ ಸುಬ್ರಹ್ಮಣ್ಯ‌ ಹಾಗೂ ಚೇತನ್ ವಿಕ್ಕಿ, ನಟಿಯರಾದ ಮಂದಾರ ಹಾಗೂ ವರ್ಷ, ಛಾಯಾಗ್ರಾಹಕ ರಾಕಿ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ಹೊಸ ದಿನಚರಿ” ಬಗ್ಗೆ ಮಾತನಾಡಿದರು. ‌

ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಮಂದಾರ, ವರ್ಷ, ಚೇತನ್ ವಿಕ್ಕಿ, ವಿವೇಕ್ ದೇವ್, ಶ್ರೀಪ್ರಿಯ, ಸುಪ್ರೀತಾ ಗೌಡ ಹಾಗೂ ಬೇಬಿ ಮಾನಿನಿ ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ವಿಜಯ ರಾಘವೇಂದ್ರ ಧಿಕ್ಕಾರ ಕೂಗಿದ್ದು ಯಾರಿಗೆ? ಇದು ಕಾಸಿನ ಸರ ವಿಚಾರ!

ಅಲ್ಲಿ ಜೋರಾಗಿಯೇ ಧಿಕ್ಕಾರ, ಧಿಕ್ಕಾರ ಎಂಬ ಕೂಗು ಕೇಳಿ ಬರುತ್ತಿತ್ತು. ಒಳ ಹೊಕ್ಕರೆ ಅದು ನಟ ರಾಘವೇಂದ್ರ ಅವರ ಆಕ್ರೋಶದ ಕೂಗು. ಹೌದು , ಅದು ವಿಜಯ ರಾಘವೇಂದ್ರ ಅವರ ಕೂಗು. ಅಷ್ಟಕ್ಕೂ ಅವರು ಕೂಗುತ್ತಿದ್ದದ್ದು ಒಂದು ಕಂಪೆನಿ ವಿರುದ್ಧ. ಇದು ಕಂಡು ಬಂದದ್ದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ.

ಕಾಸಿನ‌ ಸರ ಚಿತ್ರಕ್ಕಾಗಿ ರಾಘವೇಂದ್ರ ಡಬ್ಬಿಂಗ್ ಮಾಡುತ್ತಿದ್ದರು. ಅದೊಂದು ಒಂದು ರೈತ ವಿರೋಧಿ ಕಂಪನಿ ಒಂದರ ವಿರುದ್ಧ ಡಬ್ ಮಾಡುತ್ತಿದ್ದರು.

ನೇಟಿವ್ ಕ್ರಿಯೇಷನ್ಸ್ ಲಾಂಚನದಲ್ಲಿ ಈ. ದೊಡ್ಡನಾಗಯ್ಯ ನಿರ್ಮಿಸಿ, ಎನ್. ಆರ್. ನಂಜುಂಡೇಗೌಡ ನಿರ್ದೇಶಕರಾಗಿರುವ ಕಾಸಿನ ಸರ ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ ನ ಕೆಲಸ ಪ್ರಾರಂಭ ಆಗಿದೆ.

ಚಿತ್ರದ ತಾರಾಗಣದಲ್ಲಿ ವಿಜಯ ರಾಘವೇಂದ್ರ ಜೊತೆಗೆ ನಾಯಕಿಯಾಗಿ ಹರ್ಷಿಕಾ ಪೂಣಚ ಹಾಗೂ ಉಮಾಶ್ರೀ,ನೀನಾಸಂ ಅಶ್ವಥ್, ಸಂಗೀತಾ, ಸುಧಾ ಬೆಳವಾಡಿ, ಹನುಮಂತೆಗೌಡ, ಮಂಡ್ಯ ರಮೇಶ್, ಮೀನಪ್ರಕಾಶ್ ಇದ್ದಾರೆ.

ರೈತರ ಸಾಧನೆಗೇ ಪ್ರಶಸ್ತಿ ನೀಡುವ ಅತಿಥಿಯಾಗಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಚಿತ್ರಕ್ಕೆ ಪಾತ್ರ ಮಾಡುವ ಮೂಲಕ ಚಿತ್ರಕ್ಕೆ ಶುಭಾಶಯಗಳು ಕೋರಿದ್ದಾರೆ.ಹೆಚ್. ಸಿ ವೇಣು ಛಾಯಾಗ್ರಹಣ, ಶ್ರೀಧರ್ ಸಂಭ್ರಮ್ ಸಂಗೀತವಿದೆ.

ಸುರೇಶ್ ಅರಸ್ ಸಂಕಲನ,ಸಂಭಾಷಣೆ ಎಸ್. ಜಿ. ಸಿದ್ದರಾಮಯ್ಯ,ವಸಂತ್ ರಾವ್ ಕುಲಕರ್ಣಿ ಕಲೆ, ನಾಗೇಂದ್ರ, ಬಿ. ರಾಮಮೂರ್ತಿ ಕೋಲಾರ ನಾಗೇಶ್ ಚಿತ್ರದ ತಾಂತ್ರಿಕ ವರ್ಗ ಕೆಲಸ‌ ಮಾಡಿದೆ.

Categories
ಸಿನಿ ಸುದ್ದಿ

ಅದು ಯೆಲ್ಲೋ ಗ್ಯಾಂಗ್ಸ್! ಗೆಳೆಯರೇ ಕಟ್ಟಿದ ಗ್ಯಾಂಗ್ ಇದು: ಟ್ರೇಲರ್ ಬಂತು- ನ.11ಕ್ಕೆ ಸಿನಿಮಾ ಬರುತ್ತೆ…

ಮಾಮೂಲಿ ತರಹದ ಕಥೆಯಲ್ಲದೇ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ಜೈ ಎಂದದ್ದು ಹೆಚ್ಚು. ಅಂತಹ ವಿಭಿನ್ನ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಯೆಲ್ಲೋ ಗ್ಯಾಂಗ್ಸ್” ಚಿತ್ರದ ಟ್ರೇಲರ್ ವಿಭಿನ್ನವಾಗಿದ್ದು, ನೋಡುಗರಲ್ಲಿ ಕುತೂಹಲ ಮೂಡಿಸಿದೆ. ಹಲವಾರು ಸ್ನೇಹಿತರ ಸಮ್ಮಿಲನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ನವೆಂಬರ್ 11 ರಂದು ತೆರೆ ಕಾಣುತ್ತಿದೆ.

ಬೇರೊಂದು ಉದ್ಯೋಗ ಮಾಡುತ್ತಿದ್ದ ನನ್ನನ್ನು ಚಿತ್ರರಂಗ ಆಕರ್ಷಿಸಿತ್ತು. ಮೊದಲ ಪ್ರಯತ್ನವಾಗಿ ಈ ಚಿತ್ರ ನಿರ್ದೇಶಿಸಿದ್ದೇನೆ. ಕನ್ನಡದಲ್ಲಿ ಕ್ರೈಮ್ ಥ್ರಿಲ್ಲರ್ ಚಿತ್ರಗಳು ಬಂದಿದೆಯಾದರೂ, ಇದು ಸ್ವಲ್ಪ ಭಿನ್ನ. ನಾಯಕ ದೇವ್ ದೇವಯ್ಯ, ನಾಯಕಿ ಅರ್ಚನಾ ಕೊಟ್ಟಿಗೆ ಸೇರಿದಂತೆ ಹತ್ತೊಂಬತ್ತು ಪ್ರಮುಖ ಪಾತ್ರಗಳು ನಮ್ಮ ಚಿತ್ರದಲ್ಲಿದೆ. ಎಲ್ಲಾ ಪಾತ್ರಗಳ ಮೇಲೂ ನಮ್ಮ ಚಿತ್ರದ ಕಥೆ ಸಾಗುತ್ತದೆ. ಮೂರು ಗ್ಯಾಂಗ್ ಗಳಿದ್ದು, ಅದಕ್ಕೆ ಮೂರು ಜನ ಮುಖ್ಯಸ್ಥರಿರುತ್ತಾರೆ.

ಸುಜ್ಞಾನ್ ಅವರ ಸುಂದರ ಛಾಯಾಗ್ರಹಣ ಹಾಗೂ ರೋಹಿತ್ ಸೋವರ್ ಅವರ ಸಂಗೀತ ನಿರ್ದೇಶನ ಈ ಚಿತ್ರದ ಹೈಲೆಟ್. ಇಡೀ ಚಿತ್ರವನ್ನು ಟ್ರ್ಯಾಲಿ ಬಳಸದೆ , ಕೈಯಲ್ಲಿ ಕ್ಯಾಮೆರಾ ಹಿಡಿದು ಚಿತ್ರಿಸಿರುವುದು ವಿಶೇಷ. ಇಂತಹ ಹಲವು ವಿಶೇಷಗಳ ಸಂಗಮವಾಗಿರುವ ನಮ್ಮ “ಯೆಲ್ಲೋ ಗ್ಯಾಂಗ್ಸ್” ಗೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ.

ವಿಭಿನ್ನ ಸ್ಟುಡಿಯೋಸ್, ವಾಟ್ ನೆಕ್ಸ್ಟ್ ಮೂವೀಸ್ ಹಾಗೂ ಕೀ ಲೈಟ್ಸ್ ಸಂಸ್ಥೆ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಶಿವಮೊಗ್ಗದ ನವೋದಯ ಶಾಲೆಯಲ್ಲಿ ಓದಿರುವ ಸಾಕಷ್ಟು ವಿದ್ಯಾರ್ಥಿಗಳು ಈ ಚಿತ್ರಕ್ಕೆ ಹಣ ಹೂಡಿದ್ದೇವೆ. ಏಕೆಂದರೆ ನಿರ್ದೇಶಕ ರವೀಂದ್ರ ನಮ್ಮ ಸಹಪಾಠಿ. ಮೊದಲಿನಿಂದಲೂ ಅವರ ಯೋಚನೆ ವಿಭಿನ್ನವಾಗಿರುವುದರಿಂದ ನಮ್ಮ ಸಂಸ್ಥೆಗೆ ವಿಭಿನ್ನ ಸ್ಟುಡಿಯೋಸ್ ಎಂದು ಹೆಸರಿಟ್ಟಿದ್ದೇವೆ ಎಂದರು ನಿರಂಜನ್.

ವಿಕ್ರಮ್ ಎಂಬ ಹೆಸರಿನಿಂದ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ಅಭಿನಯಿಸಿರುವುದಾಗಿ ನಾಯಕ ದೇವ್ ದೇವಯ್ಯ ಹೇಳಿದರು. ನನಗೆ ಇದೊಂದು ಉತ್ತಮ ಚಿತ್ರವೆಂದರು ನಾಯಕಿ ಅರ್ಚನಾ ಕೊಟ್ಟಿಗೆ.

ಚಿತ್ರದಲ್ಲಿ ನಟಿಸಿರುವ ಸತ್ಯ ಬಿ.ಜಿ, ಅರುಣ್ ಕುಮಾರ್, ನಾಟ್ಯ ರಂಗ, ವಿನೀತ್ ಕಟ್ಟಿ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಹಾಡುಗಳಿಲ್ಲ. ರೀರೇಕಾರ್ಡಿಂಗ್ ಚಿತ್ರದ ಹೈಲೆಟ್ ಎಂದರು ಸಂಗೀತ ನಿರ್ದೇಶಕ ರೋಹಿತ್.

ಸಹ ನಿರ್ಮಾಪಕ ಮನೋಜ್ ಪಿ ಅವರ ಪುತ್ರಿ ಪ್ರತೀಕ್ಷ ಟ್ರೇಲರ್ ಬಿಡುಗಡೆ ಮಾಡಿದರು. ನಿರ್ದೇಶಕರೊಟ್ಟಿಗೆ ಸಂಭಾಷಣೆ ಬರೆದಿರುವ ಪ್ರವೀಣ್ ಕುಮಾರ್ ಇದ್ದರು.

Categories
ಸಿನಿ ಸುದ್ದಿ

ಕಾಶ್ಮೀರಿ ಪಂಡಿತರ ಮೇಲಾದ ಘೋರ‌ ಹತ್ಯೆಯ ಕಥೆ! ವಿಧಿ ಆರ್ಟಿಕಲ್ 370 ಪೋಸ್ಟರ್ ರಿಲೀಸ್…

ಲೈರಾ ಎಂಟರ್‌ ಟೈನರ್ ಬ್ಯಾನರ್ ಮೂಲಕ ಭರತ್ ಗೌಡ, ಸಿ.ರಮೇಶ್ ಅವರು ನಿರ್ಮಿಸಿರುವ ಚಿತ್ರ ಆರ್ಟಿಕಲ್ 370. ಕೆ.ಶಂಕರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ, ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ ಈ ವೇಳೆ ಆಗ ಅಲ್ಲಿ‌ ನೆಲೆಸಿದ್ದ ಪಂಡಿತರೂ ಆದ ಆರ್.ಕೆ.ಮುಟ್ಟು, ಮಾಜಿ ಸೈನಿಕ ಪ್ರಹ್ಲಾದ್ ವಿ.ಕುಲಕರ್ಣಿ ಸೇರಿದಂತೆ ಇತರೆ ಸೈನಿಕರು ಅಲ್ಲಿ ಹಾಜರಿದ್ದರು.
ಹಿಂದೆ ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ಘೋರ ಹಲ್ಲೆ, ದೌರ್ಜನ್ಯದ ಕಥೆ ಇಟ್ಟುಕೊಂಡು ಹಿಂದಿಯಲ್ಲಿ ಕಶ್ಮೀರಿ ಫೈಲ್ಸ್ ಚಿತ್ರ ಬಂದಿತ್ತು. ಈಗ ಅಲ್ಲಿ ಅರ್ಟಿಕಲ್ 370 ಜಾರಿಯಾದ ನಂತರ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಹಾಗಾಗಿ ಸೈನಿಕರಿಗೆ, ಕಾಶ್ಮೀರಿ ಪಂಡಿತರಿಗೆ ಈ ಸಿನಿಮಾ ಅರ್ಪಣೆ ಎಂದು ಚಿತ್ರತಂಡ ಹೇಳಿದೆ.

ಆ ಸಮಯದಲ್ಲಿ ಅಲ್ಲೇ ಇದ್ದು ನಡೆದ ಎಲ್ಲಾ ಘಟನೆಗಳನ್ನು ಕಣ್ಣಾರೆ ಕಂಡ ಮುಟ್ಟು ಅವರು ಮಾತನಾಡಿ, ನಾನ 1990ರಲ್ಲಿ ಬೆಂಗಳೂರಗೆ ಬಂದೆ. ಕರ್ನಾಟಕದ ಜನ ಒಳ್ಳೆಯವರು. ತುಂಬಾ ಚೆನ್ನಾಗಿ ನೋಡಿಕೊಂಡರು. ಆಗ ಸುಮಾರು 800 ರಿಂದ 850 ಪಂಡಿತರನ್ನು ಕೊಲೆ ಮಾಡಲಾಯಿತು, ಮಹಿಳೆಯರ ಮೇಲೆ ರೇಪ್ ಮಾಡುವುದು, ರುಂಡ ಕತ್ತರಿಸುವುದು ಹೆಚ್ಚಾಗಿ ನಡೀತು. 32 ವರ್ಷಗಳಿಂದ ಅಲ್ಲಿನ ಜನ ಈ ಯಾತನೆಯನ್ನು ಅನುಭವಿಸುತ್ತಾ ಇದ್ದರು. 370, 35 ಎ ಮೊದಲು ಎಲ್ಲಾ ಬೇರೆಯಾಗಿತ್ತು, ಈಗ ಇದನ್ನು ತೆಗೆದಿದ್ದರಿಂದ ಖುಷಿ ಇದೆ ಎಂದು ವಿವರಿಸಿದರು.


ಮಾಜಿ ಸೈನಿಕರಾದ ಪ್ರಹ್ಲಾದ ವಿ ಕುಲಕರ್ಣಿ ಮಾತನಾಡಿ. ನಾನು 16ನೇ ವಯಸ್ಸಿನಲ್ಲಿಯೇ ಸೈನ್ಯಕ್ಕೆ ಸೇರಿದೆ. ಅಲ್ಲಿ ಧರ್ಮದ ಬಗ್ಗೆ ಬೇದಭಾವ ಇರಲ್ಲ. ಹೃದಯ ಕೈನಲ್ಲಿ ಇಟ್ಟುಕೊಂಡು ದೇಶಕ್ಕಾಗಿ ಹೋರಾಟ ಮಾಡಿದ್ದೇವೆ. 370 ವಿಧಿ ಅವರಿಗೆ ಕೊಟ್ಟ ನಂತರ ನಮ್ಮ ಮೇಲೆ ಹಲ್ಲೆ ಮಾಡುತ್ತಾ ಬಂದರು. ಈಗ ಅದನ್ನು ತೆಗೆದಿದ್ದರಿಂದ ಒಳ್ಳೆಯದಾಗುತ್ತಿದೆ. ಕಾಶ್ಮೀರ ನಮ್ಮ ಭಾರತದ ಒಂದು ಭಾಗ ಎಂದು ಹೇಳಿದರು. ಸೈನಿಕರಾದ ಈರಣ್ಣ,ಈರಪ್ಪ, ಇವರೆಲ್ಲ ಆ ವಿಧಿಯ ಕುರಿತು ಮಾತನಾಡಿದರು.


ನಿರ್ಮಾಪಕ‌ ಭರತ ಗೌಡ ಮಾತನಾಡಿ, ನಿರ್ದೇಶಕರು ಈ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ಹಾಗಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಅಲ್ಲಿ ಚಿತ್ರೀಕರಣಕ್ಕೆ ಹೋದಾಗ ಸೈನಿಕರು ತುಂಬಾ ಸಪೋರ್ಟ್ ಮಾಡಿದರು ಎಂದರು.


ನಿರ್ದೇಶಕ ಶಂಕರ್ ಮಾತನಾಡಿ, ಒಂದಿಷ್ಟು ವಿಷಯ ಕಲೆ ಹಾಕಿ ಈ ಚಿತ್ರವನ್ನು ಮಾಡಿದ್ದೇವೆ. 60 ದಿನ ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಕಾಶ್ಮೀರದಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಮಾಡಿದ್ದೇವೆ. ಶಶಿಕುಮಾರ್, ಶೃತಿ, ಶಿವರಾಂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ತಿಂಗಳು ಸೆನ್ಸಾರ್ ಆಗಿದ್ದು, ಬರುವ ನವೆಂಬರ್ ನಲ್ಲಿ ಚಿತ್ರವನ್ನು ರಿಲೀಸ್ ಮಾಡುವುದಾಗಿಯೂ ಹೇಳಿದರು.

Categories
ಸಿನಿ ಸುದ್ದಿ

ಇದು ಹಾಡುವ ಸಮಯ: ಕಾಣೆಯಾಗಿದ್ದಾಳೆ ಹಾಡು ಹೊರಬಂತು…

ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ, ಆರ್ ಕೆ ನಿರ್ದೇಶಿಸಿರುವ ಹಾಗೂ ಕೌಶಿಕ್ ಸಂಗೀತ ನೀಡಿರುವ
“ಕಾಣೆಯಾಗಿದ್ದಾಳೆ” ಚಿತ್ರದ ಹಾಡುಗಳು ರಿಲೀಸ್ ಆಗಿವೆ. ಚಿತ್ರಕ್ಕೆ ಹುಡುಕಿ ಕೊಟ್ಟವರಿಗೆ ಬಹುಮಾನ ಎಂಬ ಅಡಿಬರಹವಿದೆ.

ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ.ಹರೀಶ್, ನಟಿ, ನಿರ್ದೇಶಕಿ ಪ್ರಿಯಾಹಾಸನ್, ನಟಿಯರಾದ ಶರಣ್ಯ, ನಿಶಿತಾ ಗೌಡ, “ಫಾರ್ ರಿಜಿಸ್ಟ್ರೇಶನ್” ಚಿತ್ರದ ನಿರ್ದೇಶಕ ನವೀನ್ ದ್ವಾರಕನಾಥ್, ನಿರ್ಮಾಪಕ ನವೀನ್ ರಾವ್ ಮುಂತಾದವರು ಮುಖ್ಯ ಅತಿಥಿಗಳಾಗಿ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ನಾನು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದ ಜೊತೆ ಒಡನಾಟ ಹೊಂದಿದ್ದೇನೆ. ಇದು ನನ್ನ ಎರಡನೇ ನಿರ್ದೇಶನದ ಚಿತ್ರ. ಸಮಾಜಿಕ ಕಳಕಳಿಯಿರುವ ಈ ಚಿತ್ರವನ್ನು ಕುಟುಂಬ ಸಮೇತ ನೋಡಬಹುದು. ಹೆಚ್ಚಿನ ಓದಿನ ಸಲುವಾಗಿ ನಗರಕ್ಕೆ ಬಂದ ಹೆಣ್ಣುಮಗಳೊಬ್ಬಳು ಯಾವರೀತಿ ತೊಂದರೆ ಅನುಭವಿಸುತ್ತಾಳೆ ಎನ್ನುವುದೇ ಪ್ರಮುಖ ಕಥಾಹಂದರ.

ವಿನಯ್ ಕಾರ್ತಿ ನಾಯಕನಾಗಿ ನಟಿಸಿದ್ದು, ಕೀರ್ತಿ ಭಟ್ ಈ ಚಿತ್ರದ ನಾಯಕಿ. ಸದ್ಯ ತೆಲುಗು ಬಿಗ್ ಬಾಸ್ ನಲ್ಲಿ ನಮ್ಮ ನಾಯಕಿ ಇರುವುದರಿಂದ ಇಲ್ಲಿಗೆ ಬಂದಿಲ್ಲ. ಹಿರಿಯ ನಟಿ ಗಿರಿಜಾ ಲೋಕೇಶ್, ವಿನಯಾ‌ಪ್ರಸಾದ್, ಬಿರಾದಾರ್ ಮುಂತಾದವರು ಚಿತ್ರದಲ್ಲಿದ್ದಾರೆ. ಕೌಶಿಕ್ ಅದ್ಭುತವಾಗಿ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿ ಸಹ ಚಿತ್ರವನ್ನು ವೀಕ್ಷಿಸಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದೆ. ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲವಾರ ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದರು ನಿರ್ದೇಶಕ – ನಿರ್ಮಾಪಕ ಆರ್.ಕೆ.

ನಾನು ಹೊಸಕೋಟೆ ಬಳಿಯ ಹಳ್ಳಿಯವನು. ಬೆಂಗಳೂರಿಗೆ ಕೆಲಸದ ನಿಮಿತ್ತ ಬಂದೆ. ಆನಂತರ ನಿರ್ದೇಶಕ ಆರ್ ಕೆ ಅವರು ಭೇಟಿಯಾದಾಗ ಈ ಚಿತ್ರದ ಬಗ್ಗೆ ಹೇಳಿದರು. ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದರು ಎಂದು ನಾಯಕ ವಿನಯ್ ಕಾರ್ತಿ ತಿಳಿಸಿದರು.

ನಾನು ಆರ್ ಕೆ ಅವರ ಜೊತೆ ನಟಿಸಿರುವ ಎರಡನೇ ಸಿನಿಮಾ. ಅದ್ಭುತ ನಿರ್ದೇಶಕ ಈತ. ಒಳ್ಳೆಯ ಸಿನಿಮಾ ಮಾಡಿದ್ದಾರೆ ಪ್ರೋತ್ಸಾಹ ನೀಡಿ ಎನ್ನುತ್ತಾರೆ ಹಿರಿಯ ನಟಿ ಗಿರಿಜಾ ಲೋಕೇಶ್‌.

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಕೌಶಿಕ್ ಮಾಹಿತಿ ನೀಡಿದರು. ಕಾರ್ಯಕಾರಿ ನಿರ್ಮಾಪಕ ಸಂಜಯ್ ಹಾಗೂ ಚಿತ್ರದಲ್ಲಿ ನಟಿಸಿರುವ ಅಂಜನಾ ಗಿರೀಶ್ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಚಾಂಪಿಯನ್ ಫುಲ್ ಖುಷ್: ಗೆಲುವಿನ ಸಂಭ್ರಮದಲ್ಲಿ ತಂಡ- ಬಾರದ ನಾಯಕಿ ಮೇಲೆ ಟೀಮ್ ಬೇಸರ…

ಉತ್ತರ ಕರ್ನಾಟಕದ ಯುವ ಪ್ರತಿಭೆ ಸಚಿನ್ ಧನಪಾಲ್ ನಾಯಕನಾಗಿ ಅಭಿನಯಸಿದ ಚಾಂಪಿಯನ್ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಚಿತ್ರ ವೀಕ್ಷಿಸಿದ ಬಹುತೇಕರು ಆ್ಯಕ್ಷನ್ ಬ್ಲಾಕ್ ಹಾಗೂ ಹಾಡುಗಳ ಬಗ್ಗೆಯೇ ಹೆಚ್ಚು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಗೆಲುವಿನ ಸಂತಸವನ್ನು ನಿರ್ಮಾಪಕ ಶಿವಾನಂದ್ ಎಸ್.ನೀಲಣ್ಣನವರ್ ಹಾಗೂ ನಾಯಕ ಸಚಿನ್ ಧನಪಾಲ್ ಮಾದ್ಯಮ ಜೊತೆ ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್, ಪ್ರತಿಯೊಬ್ಬರೂ ಚಿತ್ರದ ಮೇಕಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, ನಮ್ಮ ನಿರೀಕ್ಷೆಯಂತೆಯೇ ಚಿತ್ರ ಜನರನ್ನು ತಲುಪಿದೆ. ಆಕ್ಷನ್ ಸೀಕ್ವೇನ್ಸ್ ಬಗ್ಗೆ ಸಾಕಷ್ಟು ಜನ ಮಾತಾಡುತ್ತಿದ್ದಾರೆ. ಗುಡ್ ಮೇಕಿಂಗ್ ಚಿತ್ರ, ಹೊಸಬರ ಸಿನಿಮಾ ಅಂತ ಎಲ್ಲೂ ಅನಿಸಲ್ಲ ಎನ್ನುವ ಪ್ರತಿಕ್ರಿಯೆ ಬರುತ್ತಿದೆ. ಉತ್ತರ ಕರ್ನಾಟಕದಾದ್ಯಂತ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬೆಳಗಾವಿ,
ಹುಬ್ಬಳ್ಳಿ, ಬೀದರ್, ಗುಲ್ಬರ್ಗ, ರಾಯಚೂರಿನಲ್ಲಿ ಎಲ್ಲಾ ಶೋ ಭರ್ತಿಯಾಗಿದೆ. ಜನರ ಈ ಪ್ರತಿಕ್ರಿಯೆ ಕಂಡು ನಾವು ಈವರೆಗೆ ಪಟ್ಟಂಥ ಶ್ರಮ ಸಾರ್ಥಕ ಎನಿಸಿದೆ, ಇದಕ್ಕೆಲ್ಲ ನಿರ್ಮಾಪಕರ ಸಹಕಾರ, ಬೆಂಬಲವೇ ಕಾರಣ ಎಂದರು.

ಸೀನ್ ಹಾಗೂ ಹಾಡುಗಳಲ್ಲಿ ತಮ್ಮ ಲುಕ್‌ನ ವ್ಯತ್ಯಾಸದ ಕುರಿತು ವಿವರಿಸಿದ ಸಚಿನ್, 2019ರಲ್ಲೇ ಚಿತ್ರದ ಟಾಕೀ ಪೋರ್ಷನ್ ಮುಗಿಯಿತು. 2 ವರ್ಷದ ನಂತರ ಹಾಡುಗಳನ್ನು ಚಿತ್ರೀಕರಿಸಿದೆವು. ಹಾಗಾಗಿ ಸ್ವಲ್ಪ ಚೇಂಜ್ ಆಗಿದೆ. ಮೊದಲು 96 ಕೆಜಿ ಇದ್ದ ನಾನು ಸ್ಪೋರ್ಟ್ ಯುವಕನ ಪಾತ್ರಕ್ಕಾಗಿ 72 ಕೆಜಿವರೆಗೆ ತೂಕ ಇಳಿಸಿಕೊಂಡಿದ್ದೆ. ಸಾಂಗ್‌ನಲ್ಲಿ ಗ್ಲಾಮರ್ ಇರಬೇಕು ಅಂತ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಆರ್ಮಿ ಸಬ್ಜೆಕ್ಟ್ ಮಾಡಬೇಕೆನ್ನುವುದು ನನ್ನಾಸೆ. ಸಂದೀಪ್ ಉನ್ನಿಕೃಷ್ಣನ್ ಅವರ ಬಯಾಗ್ರಫಿ ಮಾಡುವ ಆಸೆಯೂ ಇದೆ ಎನ್ನುವ ಸಚಿನ್ ಇದಕ್ಕೆಲ್ಲ ಕನ್ನಡ ಜನತೆಯ ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದಾರೆ. ಚಿತ್ರದ ಪ್ರೊಮೋಷನ್‌ಗೆ ನಾಯಕಿ ಅದಿತಿ ಅವರು ಗೈರಾದ ಬಗ್ಗೆ ಮಾತನಾಡುತ್ತ ಅವರಿಗೆ ನಾವು ಎಲ್ಲಾ ಪ್ರೆಸ್‌ಮೀಟ್ ಬಗ್ಗೆ ಹೇಳುತ್ತಲೇ ಬಂದಿದ್ದೇವೆ, ಆದರೂ ಅವರು ಯಾವುದಕ್ಕೂ ಬರುತ್ತಿಲ್ಲ ಎಂದರು.

ನಿರ್ಮಾಪಕ ಶಿವಾನಂದ್ ಅವರು ಕೂಡ ಉತ್ತರ ಕರ್ನಾಟಕದವರು ಅಂತ ನಮ್ಮ ಚಿತ್ರಕ್ಕೆ ನಾಯಕಿಯಾಗಿ ಸೆಲೆಕ್ಟ್ ಮಾಡಿಕೊಂಡೆವು.
ಅವರು ಪ್ರಚಾರಕ್ಕೆ ಏಕೆ ಬರುತ್ತಿಲ್ಲವೋ ಗೊತ್ತಿಲ್ಲ, ಸಾಂಗ್, ಟೀಸರ್ ಬಿಡುಗಡೆ ಮಾಡುವಾಗಲೂ ನಾವು ಕರೆದಿದ್ದೆವು. ಆದರೆ ಅವರು ಬರಲಿಲ್ಲ, ಥ್ಯಾಂಕ್ಸ್ ಗಿವಿಂಗ್ ಸಮಯದಲ್ಲಾದರೂ ಅವರು ಇಲ್ಲಿರಬೇಕಿತ್ತು. ಅವರಿಗೆ ಕೊಡಬೇಕಾದ ಸಂಭಾವನೆ ಪೂರ್ತಿ ಕೊಟ್ಟಿದ್ದೇವೆ, ಯಾವುದೆ ಬಾಕಿ ಉಳಿಸಿಕೊಂಡಿಲ್ಲ ಎಂದು ಬೇಸರದಿಂದಲೇ ಹೇಳಿಕೊಂಡರು.

ನಂತರ ಚಿತ್ರದ ಯಶಸ್ಸಿನ ಕುರಿತು ಮಾತನಾಡುತ್ತ ಕಾಂತಾರ ಹಿಸ್ಟರಿ ಕ್ರಿಯೇಟ್ ಮಾಡುತ್ತಿದೆ. ಅಂಥಾ ಸಮಯದಲ್ಲಿ ನಾವು ಬಂದಿದ್ದರೂ ಜನ ನಮ್ಮ ಚಿತ್ರವನ್ನೂ ಇಷ್ಟಪಟ್ಟು ನೋಡುತ್ತಿದ್ದಾರೆ. ಗಂಗಾವತಿ, ಬೆಳಗಾವಿ, ಗೋಕಾಕ್, ನಿಪ್ಪಾಣಿಯಂಥ ಗಡಿ ಪ್ರದೇಶಗಳಲ್ಲಿ ಎರಡು ದಿನವೂ ಹೌಸ್ಫುಲ್ ಪ್ರದರ್ಶನ ಆಗಿದೆ. ಮೌತ್ ಪಬ್ಲಿಸಿಟಿಯಿಂದ ಹೆಚ್ಚು ಹೆಚ್ಚು ಜನ ಥಿಯೇಟರಿಗೆ ಬರುತ್ತಿದ್ದಾರೆ. ತುಂಬಾ ಕಷ್ಟಬಿದ್ದು ಈ ಚಿತ್ರವನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಾನು
ಕರ್ನಾಟಕದ ಮನೆಮನೆಗೂ ಹೋಗಿ ನಮ್ಮ ಚಿತ್ರವನ್ನು ನೋಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಛಾಯಾಗ್ರಾಹಕ ಸರವಣನ್ ನಟರಾಜನ್, ಜಯರಾಮ್. ಮತ್ತಿತರರು ಹಾಜರಿದ್ದರು,

error: Content is protected !!