ಹೊಸ ದಿನಚರಿಯ ಹೊಸ ಅಚ್ಚರಿ: ಹೊಸಬರ ಸಿನಿಮಾ ಪೋಸ್ಟರ್ ರಿಲೀಸ್…

ಕನ್ನಡ ಚಿತ್ರರಂಗದಲ್ಲಿ ಹೊಸಪ್ರತಿಭೆಗಳ ಹೊಸಪ್ರಯತ್ನ ನಡೆಯುತ್ತಿರುತ್ತದೆ. ಅದಕ್ಕೆ ಕಲಾರಸಿಕರ ಬೆಂಬಲವೂ ಸಿಗುತ್ತಿದೆ.

ಈಗ ಮತ್ತೊಂದು ಹೊಸ ತಂಡದಿಂದ “ಹೊಸ ದಿನಚರಿ” ಎಂಬ ಸಿನಿಮಾ ನಿರ್ಮಾಣವಾಗಿದೆ. ಈ ಚಿತ್ರದ ಪೋಸ್ಟರ್ ಬಿಡುಗಡೆಯೂ ಆಗಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಎರಡು ದಶಕಕೊಮ್ಮೆ ಒಂದು ಬದಲಾವಣೆ ಆಗುತ್ತಿರುತ್ತದೆ. ಎಂಭತ್ತರಲ್ಲಿ, ಎರಡುಸಾವಿರದಲ್ಲಿ ಈಗ ಎರಡುಸಾವಿರದ ಇಪ್ಪತ್ತರಲ್ಲಿ. ಚಿತ್ರದ ಟ್ರೇಲರ್ ನೋಡಿದರೆ ಈ ತಂಡದಿಂದ ಒಳ್ಳೆಯ ಚಿತ್ರ ಬರುವ ನಿರೀಕ್ಷೆಯಿದೆ. ಇಂತಹ ಯುವ ಉತ್ಸಾಹಿ ಪ್ರತಿಭಾವಂತರ ತಂಡಗಳು ಹೆಚ್ಚು ಬಂದು ಎರಡು ದಶಕಗಳಿಗಾಗುತ್ತಿರುವ ಬದಲಾವಣೆ ದಶಕಕ್ಕೆ ಆಗುವಂತೆ ಆಗಲಿ ಎಂದರು ಟಿ.ಎಸ್.ನಾಗಾಭರಣ.

ಎಲ್ಲರ ಜೀವನದಲ್ಲೂ ಪ್ರೀತಿ ಇದ್ದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ? ಎಂಬುದೆ “ಹೊಸ ದಿನಚರಿ” ಸಾರಾಂಶ. ನಾವು ಸೇರಿದಂತೆ ಈ ಚಿತ್ರತಂಡದ ಅನೇಕ ಸದಸ್ಯರು ಹೊಸಬರು. ಈ ಹಿಂದೆ ಕೆಲವು ಕಿರುಚಿತ್ರಗಳು ಮಾಡಿರುವ ಅನುಭವ ನಮ್ಮಗಿದೆ.


ನಮ್ಮ ಈ ಕನಸನ್ನು ನಿರ್ಮಾಪಕರಾದ ಮೃತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ ಸಾಲಿಮಠ ನನಸು ಮಾಡಿದ್ದಾರೆ. ಡಿಸೆಂಬರ್ 9 ರಂದು ಚಿತ್ರ ತೆರೆಗೆ ಬರುತ್ತಿದೆ ಪ್ರೋತ್ಸಾಹ ನೀಡಿ ಎಂದರು ಜಂಟಿ ನಿರ್ದೇಶಕರಾದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ.

ನಾನು ಈ ಹಿಂದೆ “ಆಯನ” ಚಿತ್ರ ನಿರ್ಮಿಸಿದ್ದೆ. ಇದು ಎರಡನೇ ಚಿತ್ರ.‌ ಕಥೆ ಇಷ್ಟವಾಯಿತು ನಿರ್ಮಾಣಕ್ಕೆ ಮುಂದಾದೆ. ಸಮಾರಂಭಕ್ಕೆ ಆಗಮಿಸಿರುವ ನಾಗಾಭರಣ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ಗಂಗಾಧರ ಸಾಲಿಮಠ.

ಚಿತ್ರದ ನಾಯಕರಾದ ದೀಪಕ್ ಸುಬ್ರಹ್ಮಣ್ಯ‌ ಹಾಗೂ ಚೇತನ್ ವಿಕ್ಕಿ, ನಟಿಯರಾದ ಮಂದಾರ ಹಾಗೂ ವರ್ಷ, ಛಾಯಾಗ್ರಾಹಕ ರಾಕಿ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ಹೊಸ ದಿನಚರಿ” ಬಗ್ಗೆ ಮಾತನಾಡಿದರು. ‌

ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಮಂದಾರ, ವರ್ಷ, ಚೇತನ್ ವಿಕ್ಕಿ, ವಿವೇಕ್ ದೇವ್, ಶ್ರೀಪ್ರಿಯ, ಸುಪ್ರೀತಾ ಗೌಡ ಹಾಗೂ ಬೇಬಿ ಮಾನಿನಿ ಈ ಚಿತ್ರದಲ್ಲಿದ್ದಾರೆ.

Related Posts

error: Content is protected !!