Categories
ಸಿನಿ ಸುದ್ದಿ

ಪ್ರಜ್ವಲ್ ಅಬ್ಬರಿಸಲು ರೆಡಿ! ನವೆಂಬರ್ 18ಕ್ಕೆ ಅಬ್ಬರ ರಿಲೀಸ್…

ಪ್ರಜ್ವಲ್ ಮತ್ತು ನಿರ್ದೇಶಕ ರಾಮ್ ನಾರಾಯಣ್ ಕಾಂಬಿನೇಷನ್ ಮೂಲಕ ರೆಡಿಯಾಗಿರುವ ಅಬ್ರಾಬರ ರಾಜ್ಯಾದ್ಯಂತ ನವೆಂಬರ್ 18ರಂದು ಬಿಡುಗಡೆಯಾಗುತ್ತಿದೆ. ಚಿತ್ರ ರಿಲೀಸ್‌ಗೂ ಮುನ್ನ ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಹಿರಿಯ ನಟ ದೇವರಾಜ್ ಅವರು ಚಿತ್ರದ
ಟ್ರೇಲರ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಟೈಸನ್, ಕ್ರ‍್ಯಾಕ್ ನಂತರ ರಾಮ್‌ನಾರಾಯಣ್ ನಿರ್ದೇಶಿಸಿರುವ ಈ ಚಿತ್ರವನ್ನು ಸಿ. ಅಂಡ್ ಎಂ.ಮೂವೀಸ್ ಬ್ಯಾನರ್ ನಲ್ಲಿ ಬಸವರಾಜ್ ಮಂಚಯ್ಯ ಅವರು ನಿರ್ಮಿಸಿದ್ದಾರೆ. ಆ್ಯಕ್ಷನ್,
ಫ್ಯಾಮಿಲಿ, ಕಾಮಿಡಿ ಎಂಟರ್‌ಟೈನರ್ ಕಥಾಹಂದರ ಹೊಂದಿರೋ ಈ ಚಿತ್ರದಲ್ಲಿ ಪ್ರಜ್ವಲ್ ಜೊತೆ ರಾಶಿಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ನಾಯಕಿಯರಾಗಿ ಅಭಿನಯಿಸಿದ್ದಾರೆ.


ಸಿನಿಮಾ ಕುರಿತು ನಿರ್ದೇಶಕ ರಾಮ್‌ನಾರಾಯಣ್ ಹೇಳಿದ್ದಿಷ್ಟು, ನವೆಂಬರ್ 18ಕ್ಕೆ ಅಬ್ಬರ ಬಿಡುಗಡೆಯಾಗುತ್ತಿದೆ. ಎಂಟರ್ಟೈನ್ಮೆಂಟ್ ಜೊತೆಗೆ ಆತಂಕವೂ ಇದೆ. ಈ ಸೀನ್‌ಗೆ, ಈ ಫೈಟ್‌ಗೆ, ಈ ಹಾಡಿಗೆ ಜನ ಏನೆನ್ನಬಹುದು ಎಂಬ ಕುತೂಹಲವಿದೆ. ಆದರೆ ಸಿನಿಮಾ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆಯಿದೆ. ಅಬ್ಬರ ಡೇ ಒನ್‌ನಿಂದ ಅಬ್ಬರವಾಗೇ ಬರುತ್ತಿದೆ. ಆರಂಭದಲ್ಲಿ ಟೈಟಲ್‌ನ್ನು ಎಸ್.ಗೋವಿಂದ್ ಅವರು ನಮಗೆ ಬಿಟ್ಟುಕೊಟ್ಟರು. ಅಂದುಕೊಂಡದ್ದಕ್ಕಿಂತ ಚೆನ್ನಾಗಿಯೇ ಚಿತ್ರ ಬಂದಿದೆ. ಹಾಡಿನ ಸಮಯದಲ್ಲಿ ನಿಮಿಕಾಗೆ ಕಾಲು ಪೆಟ್ಟಾದರೂ ತೋರಿಸಿಕೊಳ್ಳದೆ ಅಭಿನಯಿಸಿದರು. ಚಿತ್ರದ ಟೈಟಲನ್ನು ಶಿವರಾಜ್‌ಕುಮಾರ್ ರಿಲೀಸ್ ಮಾಡಿದ್ದರು.
ಈಗ ದೇವರಾಜ್ ಟ್ರೇಲರ್ ರಿಲೀಸ್ ಮಾಡಿದ್ದಾರೆ. ನಿರ್ಮಾಪಕರ ಹೆಸರೂ ಬಸವರಾಜ್, ಹೀಗೆ ನಮ್ಮ ಸಿನಿಮಾಗೆ ರಾಜ್ ಎನ್ನುವ ಹೆಸರು ಶಕ್ತಿಯಾಗಿ ನಿಂತಿದೆ. ರವಿಶಂಕರ್ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ, ಅವರಿಗೆ ಎರು ಶೇಡ್ಸ್ ಇದೆ. ಶೋಭರಾಜ್, ಶಂಕರ್ ಅಶ್ವಥ್, ವಿಕ್ಟರಿವಾಸು, ಕೋಟೆ ಪ್ರಭಾಕರ್ ತುಂಬಾ ಚೆನ್ನಾಗಿ ಆಕ್ಟ್
ಮಾಡಿದ್ದಾರೆ. ಅಲ್ಲದೆ ರವಿ ಬಸ್ರೂರು ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಜೆ.ಕೆ.ಗಣೇಶ್ ಕ್ಯಾಮೆರಾವರ್ಕ್ ನಿಭಾಯಿಸಿದ್ದು, ಮೂವರು ನಾಯಕಿಯರೂ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ
ಎಂದರು.


ನಿರ್ಮಾಪಕ ಬಸವರಾಜ್ ಮಂಚಯ್ಯ ಮಾತನಾಡಿ, ಕೋವಿಡ್ ಆಗಷ್ಟೇ ಮುಗಿದಿತ್ತು. ಹಾಡುಗಳನ್ನು ಫಾರಿನ್‌ನಲ್ಲಿ ಶೂಟ್ ಮಾಡಲು ಪ್ರಜ್ವಲ್ ಒಪ್ಪಿದರು. ಎರಡು ಹಾಡುಗಳನ್ನು ಥೈಲ್ಯಾಂಡ್‌ನಲ್ಲೇ
ಶೂಟ್ ಮಾಡಿದ್ದೇವೆ. ತೆರೆಯ ಹಿಂದೆ ನಾವಿದ್ದರೂ, ತೆರೆಯ ಮುಂದೆ ಅವರೆಲ್ಲ ಪಟ್ಟಿರುವ ಶ್ರಮವನ್ನು ಜನರೆಲ್ಲ ನೋಡುತ್ತಾರೆ. ತಂದೆ ಒಂದು ಒಂದು ತಪ್ಪು ಮಾಡುತ್ತಾನೆ, ಅದನ್ನು ಸರಿಪಡಿಸುವುಕ್ಕೆ ಹೋಗಿ ಮತ್ತೊಂದು ತಪ್ಪು ಮಾಡುತ್ತಾನೆ. ನಂತರ ಮಗ ಅದನ್ನು ಹೇಗೆ ಸರಿಪಡಿಸ್ತಾನೆ ಅನ್ನೋದೇ ಈ ಚಿತ್ರದ ಕಥೆ. ಹಾಗಾಗಿ ನಾಯಕನ ತಂದೆ ದೇವರಾಜ್ ಅವರೇ ಟ್ರೇಲರ್ ರಿಲೀಸ್ ಮಾಡಿದ್ದಾರೆ ಎಂದರು.


ದೇವರಾಜ್ ಮಾತನಾಡಿ ಟ್ರೇಲರ್ ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ. ಚಿತ್ರದ ಮೂವರು ನಾಯಕಿಯರು ಮಗನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದಾಗ ಒಬ್ಬ ತಂದೆಯಾಗಿ ನನಗೆ ತುಂಬಾ ಖುಷಿಯಾಯ್ತು. ಕನ್ನಡ ಚಿತ್ರರಂಗಕ್ಕೀಗ ಶುಕ್ರದೆಸೆ ಬಂದಿದೆ. ಇಡೀ ದೇಶ ಹೊಗಳುತ್ತಿದೆ. ರಾಮ ನಾರಾಯಣ್ ಜೊತೆ ನಾನೂ ಕೆಲಸ ಮಾಡಿದ್ದೇನೆ. ಒಬ್ಬ ಸಾಹಿತಿಯ ಕೈಲಿ ಬಂದಿರುವ ಡೈಲಾಗ್‌ಗಳು ತುಂಬಾ ಚೆನ್ನಾಗಿರುತ್ತೆ. ಅವರು ಆಡೋ ಮಾತಲ್ಲಿ ನಾಟಕೀಯತೆ ಕಾಣಲಿಲ್ಲ ಎಂದು ಹೇಳಿದರು.

ನಾಯಕ ಪ್ರಜ್ವಲ್ ಮಾತಾಡಿ, ಚಿತ್ರದ ರಿಲೀಸ್ ಹತ್ತಿರವಾಗ್ತಿದ್ದಂತೆ ಎಕ್ಸೈಟ್‌ಮೆಂಟ್ ಇರುತ್ತೆ, ಆದರೆ ಈ ಸಿನಿಮಾ ಮಾಡಿದಮೇಲೆ
ನೆಮ್ಮದಿ ಕಾಣಿಸ್ತಿದೆ. ಚಿತ್ರ ಇಷ್ಟು ಚೆನ್ನಾಗಿ ಬರಲು ಇಡೀತಂಡ ಹಾಕಿದ ಎಫರ್ಟ್ ಕಾರಣ. ಚಿತ್ರದಲ್ಲಿ ನನಗೆ ಮೂರು ವಿಭಿನ್ನವಾದ ಪಾತ್ರಗಳಿದ್ದು, ೫ ರೀತಿಯಲ್ಲಿ ಕಾಣಿಸಿಕೊಳ್ಳುತ್ತೇನೆ. ಒಂದೇದಿನ ಮೂರೂ
ಪಾತ್ರಗಳನ್ನು ಮಾಡಬೇಕಾಗಿತ್ತು. ಕಾಮಿಡಿ, ಎಂಟರ್‌ಟೈನಿಂಗ್ ಜೊತೆಗೆ ಒಂದು ರಿವೆಂಜ್ ಥಾಟ್ ಚಿತ್ರದಲ್ಲಿದೆ.
ಅದು ಚಿತ್ರದ ಕೊನೇವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ನಾನು
ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿರುತ್ತೇವೆ. ಆದರೆ, ಅದು ಹೋಗ್ತಾ ಹೋಗ್ತಾ ಕಳೆದುಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಚಿತ್ರದ ಸಂದೇಶ ಎಂದು ಹೇಳಿದರು.

ನಾಯಕಿಯರಾದ ನಿಮಿಕಾ ರತ್ನಾಕರ್, ಲೇಖಾಚಂದ್ರ ಹಾಗೂ ರಾಜಶ್ರೀ ಪೊನ್ನಪ್ಪ ಇವರೆಲ್ಲರೂ ಚಿತ್ರೀಕರಣದ ಅನುಭವಗಳು ಹಾಗೂ ತಮ್ಮ ಪಾತ್ರಗಳ ಬಗ್ಗೆ
ಹೇಳಿಕೊಂಡರು.

Categories
ಸಿನಿ ಸುದ್ದಿ

ಗಜರಾಮನಿಗೆ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್…

ನಟ ರಾಜವರ್ಧನ್ ನಟಿಸುತ್ತಿರುವ ‘ಗಜರಾಮ’ ಸಿನಿಮಾ ಶೂಟಿಂಗ್ ಜೋರಾಗಿ ಸಾಗುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೇ ಚಿತ್ರೀಕರಣ ಆರಂಭಿಸಿದ ಚಿತ್ರತಂಡ 16 ದಿನಗಳ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಹದಿನಾರು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಮೊದಲ ಶೆಡ್ಯೂಲ್ ಮುಗಿದ್ದಿದ್ದು ಎರಡನೆ ಶೆಡ್ಯೂಲ್ ಗಾಗಿ ಲೊಕೇಶನ್ ಹುಡುಕಾಟದಲ್ಲಿದ್ದೇವೆ. ಇನ್ನು ನಲವತ್ತು ದಿನಗಳ ಶೂಟಿಂಗ್ ಬಾಕಿ ಇದೆ. ನಾನು ಏನು ಅಂದುಕೊಂಡಿದ್ದೆನೋ ಹಾಗೆಯೇ ಚಿತ್ರೀಕರಣ ನಡೆಯುತ್ತಿದೆ, ಸಿನಿಮಾವೂ ಮೂಡಿ ಬರುತ್ತಿದೆ. ಮೊದಲ ಸಿನಿಮಾ ಎಂದು ನೋಡದೇ ಹಿರಿಯ ಹಾಗೂ ಅನುಭವಿ ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ನನಗೆ ಸಹಕಾರ ನೀಡುತ್ತಾ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ನಿರ್ದೇಶಕ ಸುನೀಲ್ ಕುಮಾರ್. ವಿ. ಎ ತಿಳಿಸಿದ್ದಾರೆ.

ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಸುನೀಲ್ ಕುಮಾರ್. ವಿ. ಎ ನಿರ್ದೇಶನದ ಮೊದಲ ಸಿನಿಮಾವಿದು. ಲವ್ ಸ್ಟೋರಿ ಹಾಗೂ ಮಾಸ್ ಆಕ್ಷನ್ ಕಥಾಹಂದರ ಒಳಗೊಂಡ ಚಿತ್ರದಲ್ಲಿ ರಾಜವರ್ಧನ್ ಜೋಡಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣಚ್ಚ ನಟಿಸುತ್ತಿದ್ದಾರೆ.

ಶಿಷ್ಯ ದೀಪಕ್ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದು, ಖಳನಟನಾಗಿ ಪೈಲ್ವಾನ್ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ನಟಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ಗೋವಿಂದೇ ಗೌಡ ಒಳಗೊಂಡ ತಾರಾಬಳಗ ಸಿನಿಮಾದಲ್ಲಿದೆ.

ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಮನೋಮೂರ್ತಿ ಸಂಗೀತ ನಿರ್ದೇಶನ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಸಾಹಿತ್ಯದಲ್ಲಿ ಹಾಡುಗಳು ಮೂಡಿ ಬರಲಿದೆ.

Categories
ಸಿನಿ ಸುದ್ದಿ

ಕಂಬ್ಳಿಹುಳ ತಂಡದ ಹಿಂದೆ ನಿಂತ ನಿರ್ದೇಶಕ ಸಿಂಪಲ್ ಸುನಿ: ಪ್ರೇಕ್ಷಕರಿಗೆ ಹೊಸ ಆಫರ್ ಘೋಷಿಸಿದ ಟೀಮ್…

ನವೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾದ ‘ಕಂಬ್ಳಿಹುಳ’ ಸಿನಿಮಾ ಪ್ರೇಕ್ಷಕ ಪ್ರಭುಗಳಿಂದ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಹೊಸಬರ ಸಿನಿಮಾವನ್ನು, ಹೊಸತನವನ್ನು ಚಿತ್ರರಸಿಕರು ಒಪ್ಪಿ ಅಪ್ಪಿಕೊಂಡಿದ್ದಾರೆ. ಮಲೆನಾಡಿನ ಪ್ರೇಮಕಥೆಯೊಂದನ್ನು ತೆರೆ ಮೇಲೆ ಸೊಗಸಾಗಿ ಕಟ್ಟಿಕೊಟ್ಟ ನವ ನಿರ್ದೇಶಕ ನವನ್ ಶ್ರೀನಿವಾಸ್ ಪ್ರರಿಶ್ರಮಕ್ಕೆ ಸ್ಯಾಂಡಲ್ ವುಡ್ ನಟ ನಟಿಯರೂ ಫಿಧಾ ಆಗಿದ್ದರು, ಎಲ್ಲರೂ ಸಿನಿಮಾ ನೋಡಲೇ ಬೇಕು ಎಂದು ಮನದುಂಬಿ ಹೊಗಳಿದ್ದರು. ಇದೀಗ ಸಿನಿಮಾ ತಂಡಕ್ಕೆ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಕೂಡ ಸಾಥ್ ನೀಡಿದ್ದು ಪ್ರೇಕ್ಷಕರಿಗೆ ಹೊಸ ಆಫರ್ ನೀಡಿದ್ದಾರೆ.

ಹೌದು, ನಿರ್ದೇಶಕ ಸಿಂಪಲ್ ಸುನಿ ‘ಕಂಬ್ಳಿಹುಳ’ ಸಿನಿಮಾ ನೋಡಿ ಫಿಧಾ ಆಗಿದ್ದಾರೆ. ಕೇವಲ ಫಿದಾ ಆಗಿಲ್ಲ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ಇಡೀ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಕಂಬ್ಳಿಹುಳ ಸಿನಿಮಾ ನೋಡಿ ಬರುವವರಿಗೆ ಆಫರ್ ಕೂಡ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಸಿನಿಮಾ ಸಿಂಪಲ್ ಸುನಿ ಮನಸ್ಸಿಗೆ ಹಿಡಿಸಿದೆ, ಮನ ಸೆಳೆದಿದೆ. ಕಂಬ್ಳಿಹುಳ ಸಿನಿಮಾ ಸೆಕೆಂಡ್ ಹಾಫ್ ಮುಗಿಸಿ ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕ ಪ್ರಭುಗಳು ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಅವರು ತೆಗೆದುಕೊಂಡ ಟಿಕೆಟ್ ನ ಅರ್ಧಹಣವನ್ನು ವಾಪಾಸ್ಸು ಮಾಡುವುದಾಗಿ ಹೇಳಿದ್ದಾರೆ. ಈ ಆಫರ್ ಮುಂದಿನ ಮೂರು ದಿನಗಳು ಮಾತ್ರ ಲಭ್ಯವಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕೊಂಡಿದ್ದಾರೆ. ಸಿಂಪಲ್ ಸುನಿ ಸಿನಿಮಾ ಮೇಲೆ ತೋರಿಸಿರುವ ಪ್ರೀತಿಕಂಡು ಸಿನಿಮಾ ತಂಡ ಕೂಡ ಸಂತಸಗೊಂಡಿದೆ.

ಪ್ರೇಕ್ಷಕ ಪ್ರಭುಗಳು ಕೂಡ ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ. ಈಗಾಗಲೇ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದುಕೊಳ್ಳುತ್ತಿದ್ದಾರೆ. ಸಪೋರ್ಟ್ ಕಂಬ್ಳಿಹುಳ, ನಮ್ಮ ಮಣ್ಣಿನ ಸಿನಿಮಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ. ಇದರಲ್ಲೇ ಅರ್ಥ ಮಾಡಿಕೊಳ್ಳಬೇಕು ಸಿನಿಮಾ ಅದೆಷ್ಟು ಚೆನ್ನಾಗಿದೆ ಅನ್ನೋದು. ಚಿತ್ರದ ಬಗೆಗೆ ಎಲ್ಲರೂ ತೋರಿಸುತ್ತಿರುವ ಪ್ರೀತಿ, ಸಪೋರ್ಟ್ ಕಂಡು ಸಿನಿಮಾ ತಂಡ ಕೂಡ ಸಂತಸ ವ್ಯಕ್ತಪಡಿಸಿದೆ.

ನವ ಪ್ರತಿಭೆ ನವನ್ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಾಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನ, ಶಿವ ಪ್ರಸಾದ್ ಸಂಗೀತ ನಿರ್ದೇಶನ ‘ಕಂಬ್ಳಿಹುಳ’ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕನ್ನಡ ಚಲನಚಿತ್ರ ಅಕಾಡೆಮಿಗೆ ಅಶೋಕ್ ಕಶ್ಯಪ್ ಸಾರಥಿ…

ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರಾಗಿ ಕನ್ನಡ ಚಿತ್ರರಂಗದ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಹಿಂದಿನ ಅಧ್ಯಕ್ಷರಾಗಿದ್ದ ಸುನೀಲ್ ಪುರಾಣಿಕ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ರಾಜ್ಯ ಸರ್ಕಾರ ನವೆಂಬರ್ 5ರಂದು ಅಶೋಕ್ ಕಶ್ಯಪ್ ಅವರನ್ನು ನೇಮಿಸಿ ಆದೇಶಿಸಿತ್ತು.
ಅಶೋಕ್ ಅಶ್ಯಪ್ ಅವರು ಕನ್ನಡ ಚಿತ್ರರಂಗದಲ್ಲಿ ಹಿರಿಯ ಸಿನಿಮಾಟೋಗ್ರಾಫರ್ ಆಗಿದ್ದು, ಅವರ ಶಾಪ ಚಿತ್ರದ ಛಾಯಾಗ್ರಾಹಣಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ಭುವನಜ್ಯೋತಿ, ಶ್, ಕರುಣಿನಕೂಗು, ಸೂಪರ್, ಉಪ್ಪಿ2, ಕಾಫಿತೋಟ ಸೇರಿದಂತೆ ವಿವಿಧ ಚಿತ್ರಗಳಿಗೆ ಸಿನಿಮಾಟೋಗ್ರಾಫರ್ ಆಗಿ ದುಡಿದಿದ್ದಾರೆ. ಅಲ್ಲದೆ, ಚಿತ್ರ ನಿರ್ದೇಶನ ಮತ್ತು ನಟನೆಯಲ್ಲಿ ಸಹ ಅವರು ತಮ್ಮ ಪ್ರತಿಭೆಯನ್ನು ತೋರಿದ್ದಾರೆ.


ಕನ್ನಡ ಚಿತ್ರರಂಗದ ತಾಂತ್ರಿಕ ವರ್ಗದಲ್ಲಿ ದುಡಿದ ತಮ್ಮನ್ನು ಸರ್ಕಾರ ಗುರುತಿಸಿ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ಸಿನಿಮಾ ತಾಂತ್ರಿಕ ವರ್ಗಕ್ಕೆ ಖುಷಿ ತಂದಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಹಾಗೂ ಕನ್ನಡ ಚಿತ್ರರಂಗದಲ್ಲಿ ಈವರೆಗೆ ದುಡಿದು ಪಡೆದ ತಮ್ಮ ಅನುಭವವನ್ನು ಅಕಾಡೆಮಿ ಹಾಗೂ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.


ನಂದಿನಿ ಬಡಾವಣೆಯಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಹಿರಿಯ ನಿರ್ದೇಶಕರು ಹಾಗೂ ಅಕಾಡೆಮಿಯ ಹಿಂದಿನ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಸಿನಿಮಾಟೋಗ್ರಾಫರ್ ಬಸವರಾಜ್ ಸೇರಿದಂತೆ ಹಲವು ಗಣ್ಯರು, ಚಿತ್ರ ನಿರ್ದೇಶಕರು, ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಕೋರಿದರು.

Categories
ಸಿನಿ ಸುದ್ದಿ

ಬನಾರಸ್​ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸುಂದರ ದೃಶ್ಯಕಾವ್ಯ ಕಟ್ಟಿಕೊಟ್ಟಿರೋ ಬನಾರಸ್​​​, ರುದ್ರತಾಂಡವ ಆಡ್ತಿದ್ದಾನೆ. ಈ ಸಿನಿಮಾವನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಝೈದ್​ ಖಾನ್ ಜೊತೆ ವೀಕ್ಷಿಸಿದ್ದಾರೆ.

ಭಾನುವಾರ ರಾತ್ರಿ, ತಮ್ಮ ಕೆಲವು ಸಹೋದ್ಯೋಗಿಗಳ ಜೊತೆಗೆ ಮಲ್ಟಿಪ್ಲೆಕ್ಸ್‌ನಲ್ಲಿ ‘ಬನಾರಸ್’ ಸಿನಿಮಾವನ್ನು ಸಿದ್ದರಾಮಯ್ಯ ವೀಕ್ಷಿಸಿದ್ದಾರೆ. ಈ ಸಮಯದಲ್ಲಿ ಸಿದ್ದರಾಮಯ್ಯ ಜೊತೆಗೆ ನಟ ಝೈದ್ ಖಾನ್ ಹಾಗೂ ಚಿತ್ರತಂಡದ ಇತರ ಸದಸ್ಯರು ಸಹ ಇದ್ದರು.

ಈ ಸಿನಿಮಾದಲ್ಲಿ ಜಮೀರ್​ ಅಹ್ಮದ್​ ಅವರ ಪುತ್ರ ಝೈದ್​ ಖಾನ್​ ಹೀರೋ ಆಗಿ ನಟಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ‘ಮೊದಲ ಸಿನಿಮಾದಲ್ಲಿಯೇ ಅನುಭವ ಹೀರೋ ರೀತಿ ಝೈದ್​ ಖಾನ್​​  ನಟಿಸಿದ್ದಾರೆ.

ಅವರ ಮತ್ತು ಸೋನಲ್​ ಮಾಂಥೆರೋ ಜೋಡಿ ಚೆನ್ನಾಗಿದೆ. ಜಯತೀರ್ಥ ಬರೆದ ಕಥೆ ಕುತೂಹಲಕಾರಿ ಆಗಿದೆ. ಎಲ್ಲಿಯೂ ಬೋರ್​ ಆಗಲ್ಲ’ ಎಂದು ಹೇಳಿರುವ ಸಿದ್ದರಾಮಯ್ಯ ಅವರು ಇದರಲ್ಲಿನ ಸಸ್ಪೆನ್ಸ್​ ಅಂಶವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.

Categories
ಸಿನಿ ಸುದ್ದಿ

ವಿಜಯಾನಂದ ಹಾಡು ಪರಮಾನಂದ! ಇದು ವಿಜಯ ಸಂಕೇಶ್ವರ ಬಯೋಪಿಕ್: ಇದೀಗ ಮಧುರ ಹಾಡು ಹೊರಬಂತು…

ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ “ವಿಜಯಾನಂದ”. ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ನೀಡಿರುವ ಈ ಚಿತ್ರದ “ಹಾಗೆ ಆದ ಆಲಿಂಗನ” ಎಂಬ ಹಾಡು ಬಿಡುಗಡೆಯಾಗಿದೆ. ಧನಂಜಯ್ ರಂಜನ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ಕೀರ್ತನಾ ವೈದ್ಯನಾಥನ್ ಇಂಪಾಗಿ ಹಾಡಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಿದೆ. ಮಲೆಯಾಳಂನ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್, “ಗೀತಾ ಗೋವಿಂದಂ” ಸೇರಿದಂತೆ ಮುನ್ನೂರಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

ನನ್ನ‌ ಜೀವನಾಧಾರಿತ ಸಿನಿಮಾ ಮಾಡುವುದಾಗಿ ನಿರ್ದೇಶಕಿ ರಿಶಿಕಾ ಶರ್ಮ ಕೇಳಿದಾಗ, ಈ ಚಿಕ್ಕ ಹುಡಗಿ ಏನು ಮಾಡುತ್ತಾಳೆ? ಅನಿಸಿತು. ಆದರೆ ಈಗ, ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಿಶಿಕಾ ಬಹಳ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನನ್ನ ಮಗ ಆನಂದ್ ಈ ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ. ನನ್ನ‌ ಕುಟುಂಬದವರೆಲ್ಲಾ ಉದ್ಯಮಿಗಳು. ನಮ್ಮ ತಂದೆಯವರು ಸಹ.‌ ನಾನು ಹದಿನೈದನೇ ವಯಸ್ಸಿಗೆ ಕೆಲಸ ಶುರು ಮಾಡಿದೆ. ನಮ್ಮ‌ ತಂದೆ ಬಳಿ ಹೋಗಿ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಶುರು ಮಾಡುತ್ತೇನೆ ಅಂದಾಗ ಅವರು ಗಾಬರಿಯಾದರು. ಅಂದು ಒಂದು ಲಾರಿಯಿಂದ ಆರಂಭವಾದ ನನ್ನ ಉದ್ಯಮ, ಇಂದು ಬೃಹತಾಗಿ ಬೆಳೆದಿದೆ. ಟ್ರಾನ್ಸ್ ಪೋರ್ಟ್ ಹಾಗೂ ಮಾಧ್ಯಮ ಎರಡರಲ್ಲೂ ನಾವು ಮುಂದಿದ್ದೇವೆ. ನನ್ನ ಹಿಂದಿನ ಶಕ್ತಿ ನನ್ನ ಪತ್ನಿ ಲಲಿತಾ ಎಂದರೆ ತಪ್ಪಾಗಲಾರದು. ನನ್ನ ಮಗ ಆನಂದ ಈಗ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾನೆ.

ಮೊಮ್ಮಗ ಶಿವ ಸದ್ಯದಲ್ಲೇ ಹೊಸ ಉದ್ಯಮ ಶುರು ಮಾಡಲಿದ್ದಾನೆ. ಈ ಚಿತ್ರ ಮಾಡಬೇಕಾದರೆ ನಾನು ನಿರ್ದೇಶಕರಿಗೆ ಹೇಳಿದ್ದೆ. ನನ್ನ‌ ಜೀವನ ಹೇಗಿತ್ತೊ ಹಾಗೆ ತೋರಿಸಬೇಕು. ಬೇರೆ ಏನು ಸೇರಿಸಬಾರದು ಅಂತ. ನಾನು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದನೋ, ನಾಯಕ ನಿಹಾಲ್ ಹಾಗೆ ಕಾಣುತ್ತಾರೆ. ಆ ಮೀಸೆ, ಬಣ್ಣ ಬಣ್ಣದ ಅಂಗಿಗಳು ಎಲ್ಲವು…. ಆ ವಯಸ್ಸಿನಲ್ಲಿ ನಾನು ಹಾಗೆ ಇದ್ದೆ. ನಾಯಕಿ ಸಿರಿ ಪ್ರಹ್ಲಾದ್ ಕೂಡ ನನ್ನ ಹೆಂಡತಿಯನ್ನೇ ಹೋಲುತ್ತಾರೆ. ಈ ಚಿತ್ರ ಯುವಕರಿಗೆ ಸ್ಪೂರ್ತಿಯಾಗಲಿ. ಡಿಸೆಂಬರ್ ಒಂಭತ್ತರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಐದು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು ವಿಜಯ ಸಂಕೇಶ್ವರ.

ಶರಣ್, ಹರ್ಷಿಕಾ ಪೂಣಚ್ಛ ಅತಿಥಿಗಳಾಗಿ ಆಗಮಿಸಿ‌ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರ ಸಾಗಿ ಬಂದ ಬಗ್ಗೆ ನಿರ್ದೇಶಕಿ ರಿಶಿಕಾ ಶರ್ಮ ಮಾಹಿತಿ ನೀಡಿದರು. ಹಾಡುಗಳ ಬಗ್ಗೆ ಗೋಪಿ ಸುಂದರ್, ಅಭಿನಯದ ಕುರಿತು ನಾಯಕ ನಿಹಾಲ್, ನಾಯಕಿ ಸಿರಿ ಪ್ರಹ್ಲಾದ್, ಭರತ್ ಬೋಪ್ಪಣ್ಣ, ಅರ್ಚನಾ ಕೊಟ್ಟಿಗೆ, ರಾಜೇಶ್ ನಟರಂಗ ಮಾತನಾಡಿದರು.

ಅನಂತನಾಗ್, ರವಿಚಂದ್ರನ್, ವಿನಯಾಪ್ರಸಾದ್, ಪ್ರಕಾಶ್ ಬೆಳವಾಡಿ, ರಮೇಶ್ ಭಟ್, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ರೇಮೊ ಸೂಪರ್ ಹಿಟ್ ಆಗಲಿ ಅಂದ್ರು ಶಿವಣ್ಣ: ಸಿನಿಮಾ ಟ್ರೇಲರ್ ಹೊರಬಂತು…

ಸಿ.ಆರ್.ಮನೋಹರ್ ನಿರ್ಮಿಸಿರುವ, ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಶಿವರಾಜಕುಮಾರ್ ‘ರೇಮೊ’ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಇಶಾನ್ ಮತ್ತು ಆಶಿಕಾ ರಂಗನಾಥ್ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

‘ಕನ್ನಡ ಚಿತ್ರರಂಗ ಯಾರಿಗೂ ಕಡಿಮೆ ಇಲ್ಲ. “ಕಾಂತಾರ” ಚಿತ್ರ ನಮಗೆಲ್ಲ ಒಂದು ಹೆಮ್ಮೆ. ಆ ಚಿತ್ರದ ಟ್ರೇಲರ್ ಮತ್ತು ಸಾಂಗ್ ನೋಡಿ ನಾನು ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿದ್ದೆ. ‘ರೇಮೊ’ ಕೂಡ ಅದೇ ರೀತಿ ಸೂಪರ್ ಹಿಟ್ ಆಗಲಿ ಅಂತ ದೇವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಇಶಾನ್ ಹಾಗೂ ಆಶಿಕಾ ಮುದ್ದಾಗಿ ಕಾಣುತ್ತಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಬಗ್ಗೆ ಹೇಳುವಂತೆಯೇ ಇಲ್ಲ. ಸಿ.ಆರ್. ಮನೋಹರ್ ಅವರಂತಹ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬೇಕು’ ಎಂದು ಶಿವರಾಜಕುಮಾರ್ ಹೇಳಿದರು.

‘ರೇಮೊ’ ಚಿತ್ರದ ಕೆಲಸ ಶುರುವಾಗಿ 3 ವರ್ಷ ಆಯಿತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ನನ್ನನ್ನು ಚಿತ್ರರಂಗಕ್ಕೆ ಬರಲು ಹೇಳಿದ್ದು ಶಿವಣ್ಣ. ಇವತ್ತು ಅವರಿಂದಲೇ ನಮ್ಮ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಖುಷಿಯಾಗಿದೆ. ನವೆಂಬರ್ 25 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಅಂದೇ ನಮ್ಮ ಚಿತ್ರವನ್ನು ನೋಡುವುದಾಗಿ ಶಿವಣ್ಣ ಹೇಳಿದ್ದಾರೆ. ಅವರೇ ನನಗೆ ಸ್ಫೂರ್ತಿ. ನಾನು ಎಷ್ಟೇ ಸಿನಿಮಾ ಮಾಡಬಹುದು. ಆದರೆ ‘ರೇಮೊ’ ಚಿತ್ರ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ ಎನ್ನುತ್ತಾರೆ ನಾಯಕ ಇಶಾನ್.

ನಟಿ ಆಶಿಕಾ ರಂಗನಾಥ್ ಅವರಿಗೂ ‘ರೇಮೊ’ ಚಿತ್ರ ವಿಶೇಷ ಅಂತೆ. ‘ಇಷ್ಟು ದಿನ ನನ್ನನ್ನು ಕ್ಯೂಟ್ ಹುಡುಗಿಯ ಪಾತ್ರದಲ್ಲಿ ನೋಡಿದ್ದೀರಿ. ಆದರೆ ಈ ಸಿನಿಮಾದಲ್ಲಿನ ಪಾತ್ರ ಭಿನ್ನವಾಗಿದೆ. ಈವರೆಗೆ ನಾನು ಮಾಡಿದ ಪಾತ್ರಗಳಲ್ಲಿ ಇದೇ ಬೆಸ್ಟ್. ಹೀರೋಗೆ ಸಮನಾಗಿ ಇರುವಂತಹ ಪಾತ್ರ ನನಗೆ ಸಿಕ್ಕಿದೆ. ಅದಕ್ಕೆ ನನ್ನನ್ನು ಆಯ್ಕೆ ಮಾಡಿದ ಪವನ್ ಒಡೆಯರ್ ಅವರಿಗೆ ಧನ್ಯವಾದಗಳು’ ಎನ್ನುತ್ತಾರೆ ಆಶಿಕಾ ರಂಗನಾಥ್.

ಪ್ರೀತಿಯಲ್ಲಿ ಹಲವು ವಿಧಗಳಿವೆ. ಅದರಲ್ಲಿ ನಾನು ಮ್ಯೂಸಿಕಲ್ ಲವ್ ಸ್ಟೋರಿ ಆಯ್ಕೆ ಮಾಡಿಕೊಂಡಿದ್ದೀನಿ. ಈ ಚಿತ್ರದಲ್ಲಿ ಎಮೋಷನ್ ಸಹ ಇದೆ. ವೈದಿ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರವನ್ನು ಮತ್ತಷ್ಟು ಸುಂದರವಾಗಿಸಿದೆ. ಇಶಾನ್ ಹಾಗೂ ಆಶಿಕಾ ರಂಗನಾಥ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ಪವನ್ ಒಡೆಯರ್.

ನಿರ್ಮಾಪಕ ಸಿ.ಆರ್.ಮನೋಹರ್ ಶಿವರಾಜಕುಮಾರ್ ಅವರನ್ನು ಸನ್ಮಾನಿಸಿದರು. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.

ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಅವರು ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ, ವೈದಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪಿ. ಗುಣಶೇಖರನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ನವೆಂಬರ್ 11ಕ್ಕೆ ಹುಬ್ಬಳ್ಳಿ ಡಾಬಾ : ವಿಭನ್ನ ಕಥೆ ಸಿನಿಮಾದಲ್ಲಿ ರವಿಶಂಕರ್

“ನನ್ನವನು”, ” ಕೋಟೆ”, “ದಂಡುಪಾಳ್ಯ” , “ಶಿವ” ಮುಂತಾದ ಚಿತ್ರಗಳ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದ “ಹುಬ್ಬಳ್ಳಿ ಡಾಬಾ” ಚಿತ್ರ‌ ಇದೇ ನವೆಂಬರ್ 11 ರಂದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

ಕೊರೋನ ಎರಡನೇ ಅಲೆ ಸಮಯದಲ್ಲಿ ಆರಂಭವಾದ ಸಿನಿಮಾವಿದು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗಿ, ನವೆಂಬರ್ 11 ರಂದು ಬಿಡುಗಡೆಯಾಗುತ್ತಿದೆ. ತೆಲುಗಿನ ನವೀನ್ ಚಂದ್ರ ಈ ಚಿತ್ರದ ನಾಯಕ. ದಿವ್ಯ ಪಿಳ್ಳೈ, ಅನನ್ಯ ಸೇನ್ ಗುಪ್ತ ನಾಯಕಿಯರು. ‌ರವಿಶಂಕರ್, ರಾಜಾ ರವೀಂದ್ರ, ನಾಗಾ ಬಾಬು, ಅಯ್ಯಪ್ಪ ಶರ್ಮ, ಪೂಜಾ ಗಾಂಧಿ, ರವಿಕಾಳೆ, ಮಕರಂದ ದೇಶಪಾಂಡೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ವಿಶೇಷ ಸಂದರ್ಭದಲ್ಲಿ “ದಂಡುಪಾಳ್ಯ” ಗ್ಯಾಂಗ್ ನವರ ಸನ್ನಿವೇಶಗಳು ಸಹ ಬರುತ್ತದೆ. ಹಾಗಾಗಿ ಆ ಚಿತ್ರದಲ್ಲಿ ಅಭಿನಯಿಸಿದ್ದ ಕಲಾವಿದರು ಈ ಚಿತ್ರದಲ್ಲೂ ಅಭಿನಯಿಸಿದ್ದಾರೆ. ‌ಮೂರು ಹಾಡುಗಳನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಚರಣ್ ಅರ್ಜುನ್ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಈ ಚಿತ್ರದ ಛಾಯಾಗ್ರಹಕರು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದ್ದ ನಿರ್ದೇಶಕ ಶ್ರೀನಿವಾಸರಾಜು, ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.

ನನಗೆ ಶ್ರೀನಿವಾಸರಾಜು “ಕೋಟೆ” ಚಿತ್ರದಲ್ಲಿ ಅವಕಾಶ ನೀಡಿದ್ದರು. “ದಂಡುಪಾಳ್ಯ” ಚಿತ್ರದಲ್ಲೂ ನಟಿಸಿದ್ದೆ. ಈ ಚಿತ್ರದಲ್ಲಿ ನಾನು ಚಲಪತಿ ಹೆಸರಿನ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದ ಕುರಿತು ಇನ್ನೊಂದು ಹೆಮ್ಮೆಯ ವಿಷಯವೆಂದರೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಎಂಭತ್ತರ ದಶಕದಲ್ಲಿ ಸಂಗೀತ ನೀಡಿದ್ದ, ಜನಪ್ರಿಯ ತಮಿಳು ಚಿತ್ರದ ಗೀತೆಯೊಂದರ ಟ್ಯೂನ್ ಬಳಸಿಕೊಳ್ಳಲು ಶ್ರೀನಿವಾಸರಾಜು ಅವರಿಗೆ ಅವಕಾಶ ನೀಡಿದ್ದಾರೆ.

ಈ ಹಾಡು ಇಳಯರಾಜ ಅವರ ಅಭಿಮಾನಿಯಾಗಿರುವ ನನ್ನ ಜನಪ್ರಿಯ ಗೀತೆಯೂ ಹೌದು ಎಂದು ನಟ ರವಿಶಂಕರ್ ತಿಳಿಸಿದರು. ಕ್ಲೈಮ್ಯಾಕ್ಸ್ ಸಾಹಸ ಸನ್ನಿವೇಶವನ್ನು ಹನ್ನೆರಡು ದಿನಗಳ ಕಾಲ ಚಿತ್ರಿಸಿರುವುದು ಚಿತ್ರದ ವಿಶೇಷಗಳಲ್ಲೊಂದು ಎಂದರು ರವಿಶಂಕರ್.

Categories
ಸಿನಿ ಸುದ್ದಿ

ಡಾಲಿ ಜೊತೆ ರಮ್ಯಾ! ನಾಯಕಿಯಾಗಿ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ಕ್ವೀನ್: ಉತ್ತರಕಾಂಡ ಸಿನಿಮಾಗೆ ಪೂಜೆ- ಜನವರಿಯಿಂದ ಶೂಟಿಂಗ್…

ವಿಜಯ್ ಕಿರಗಂದೂರು ಅರ್ಪಿಸುತ್ತಿರುವ, ಕೆ.ಆರ್.ಜಿ ಸಂಸ್ಥೆ ನಿರ್ಮಿಸುತ್ತಿರುವ ಹಾಗೂ ರೋಹಿತ್ ಪದಕಿ ರಚಿಸಿ, ನಿರ್ದೇಶಿಸುತ್ತಿರುವ ‘ಉತ್ತರಕಾಂಡ’ ಚಿತ್ರದ ಮುಹೂರ್ತ ನವೆಂಬರ್ 6ರಂದು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ‘ರತ್ನನ್ ಪ್ರಪಂಚ’ ಯಶಸ್ಸಿನ ನಂತರ ಮತ್ತೊಮ್ಮೆ ರೋಹಿತ್ ಪದಕಿ ಹಾಗೂ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಒಂದಾಗಿದ್ದಾರೆ. ಈ ಸಿನಿಮಾಗೆ‌ ಡಾಲಿ ಧನಂಜಯ ಹಾಗು ರಮ್ಯಾ ನಾಯಕ, ನಾಯಕಿ.

ಸ್ಯಾಂಡಲ್‌ವುಡ್ ಕ್ವೀನ್ ರಮ್ಯ ‘ಉತ್ತರಕಾಂಡ’ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿಪರದೆಗೆ ಹಿಂತಿರುಗುತ್ತಿದ್ದಾರೆ. ಎಂಟು ವರ್ಷಗಳ ಬಳಿಕ ತಮಗೆ ಅತ್ಯಂತ ಆಪ್ತವಾದ ಕಥೆ ಹಾಗು ಪಾತ್ರ ‘ಉತ್ತರಕಾಂಡ’ ಕೊಟ್ಟಿರುವ ಕಾರಣ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಭಾಷೆ, ಉಡುಗೆ-ತೊಡುಗೆ ಎಲ್ಲದರ ಮೇಲೆ ಗಂಭೀರವಾಗಿ ಕಸರತ್ತು ನಡೆಸುತ್ತಿದ್ದಾರೆ ನಟಿ ರಮ್ಯ.

ಉತ್ತರಕಾಂಡದ ಬಗ್ಗೆ ಪ್ರಶ್ನಿಸಿದಾಗ ರಮ್ಯ ಹೇಳಿದ್ದು ಹೀಗೆ – “ ‘ರತ್ನನ್ ಪ್ರಪಂಚ’ ಚಿತ್ರಕ್ಕೆ ನಾಯಕಿಯ ಪಾತ್ರವನ್ನು ನನಗೆ ಕೇಳಿದಾಗ ಕಾರಣಾಂತರಗಳಿಂದ ಅದನ್ನು ಒಪ್ಪಿಕೊಳ್ಳಲಾಗಿರಲಿಲ್ಲ. ನನಗೆ ಅತ್ಯಂತ ಆಪ್ತವಾದ ಸಿನೆಮಾ ರತ್ನನ್ ಪ್ರಪಂಚ. ಅಂತಹ ಒಳ್ಳೆಯ ಸಿನೆಮಾ ತಂಡದ ಜೊತೆ ಕೈ ಜೋಡಿಸಿ ಬೆಳ್ಳಿಪರದೆಗೆ ಹಿಂತಿರುಗುತ್ತಿರುವುದು ಸಂತೋಷ ತಂದಿದೆ. ಇತ್ತೀಚಿನ ದಿನಗಳಲ್ಲಿ ಈ ತಂಡದ ಜೊತೆಗಿನ ಒಡನಾಟ ಮತ್ತು ತಂಡದವರೆಲ್ಲರು ನನ್ನ ಮೇಲೆ ತೋರುತ್ತಿರುವ ಅಭಿಮಾನ ಹಾಗು ಬಾಂಧವ್ಯ ಒಂದು ಒಳ್ಳೇ ಜಾಗದಲ್ಲಿದ್ದೀನಿ ಅನ್ನೋ ಭಾವನೆ ಕೊಟ್ಟಿದೆ. ಇಂತಹ ದೈತ್ಯ ಪ್ರತಿಭೆಗಳ ಜೊತೆ ಶೂಟಿಂಗ್ ಶುರು ಮಾಡೋದಕ್ಕೆ ಕಾಯ್ತ ಇದ್ದೀನಿ”

ಈ ಹಿಂದೆಯೇ ಚಿತ್ರತಂಡ ಹಂಚಿಕೊಂಡಂತೆ ‘ಉತ್ತರಕಾಂಡ’ದಲ್ಲಿ ಧನಂಜಯ ಮುಖ್ಯಭೂಮಿಕೆಯಲ್ಲಿದ್ದಾರೆ. ವೈವಿಧ್ಯಮಯ ಪಾತ್ರಗಳಲ್ಲಿ ನಾಯಕನಟನಾಗಿ ಮಿಂಚುತ್ತಿರುವ ಧನಂಜಯ ಅವರ ವೃತ್ತಿಯಲ್ಲೇ ಅತಿ ದೊಡ್ಡ ಸಿನೆಮಾ ‘ಉತ್ತರಕಾಂಡ’, ಅತ್ಯಂತ ಗಟ್ಟಿಯಾದ, ಕಷ್ಟವಾದ ಪಾತ್ರ ವಹಿಸಿಕೊಂಡಿರುವುದರ ಬಗ್ಗೆ ಅವರೇ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಈಗಾಗಲೇ ಧನಂಜಯ ಅವರ ಸುಕ್ಕಾ ಲುಕ್ ವೈರಲ್ ಆಗಿದೆ.

“ಒಂದೇ ದಿಕ್ಕಿನಲ್ಲಿ ಆಲೋಚಿಸುವವರು ಒಟ್ಟಿಗೆ ಸೇರಿ, ನಿಸ್ವಾರ್ಥವಾಗಿ ಸಿನಿಮಾಕ್ಕಾಗಿ, ಒಬ್ಬರು ಇನ್ನೊಬ್ಬರಿಗಾಗಿ contribute ಮಾಡಿದಾಗ ಅದ್ಭುತಗಳು ಸಂಭವಿಸುತ್ತವೆ ಎಂದು ನಾನು ನಂಬಿದ್ದೇನೆ. ಅದೆ ರೀತಿ ಆಗಿದ್ದು, ಮೈಲಿಗಲ್ಲಾಗಿದ್ದು “ರತ್ನನ್ ಪ್ರಪಂಚ” . ರೋಹಿತ್ ಪದಕಿಯಂತ ನಿರ್ದೇಶಕ ಘಟನ ಜೊತೆ ಎರಡನೆ ಪ್ರಯತ್ನ, ಕಾರ್ತಿಕ್ ಹಾಗು ಯೋಗಿ ಯಂತ ನಿರ್ಮಾಪಕ ಘಟರ ಜೊತೆ ಸತತವಾಗಿ ಮೂರನೆ ಪ್ರಯತ್ನ, ಇನ್ನೊಂದು ಮೈಲಿಗಲ್ಲಿನ ಕಡೆ ಮತ್ತೊಂದು ದಿಟ್ಟ ಹೆಜ್ಜೆ “ಉತ್ತರಕಾಂಡ”.

ಹಾಗೆ ರಮ್ಯ ಅವರ ಜೊತೆ ನಟಿಸುವ ಕನಸು ಈ ಸಿನಿಮಾದ ಮೂಲಕ ಕೈಗೂಡುತ್ತಿದೆ. ಇದು ಮತ್ತೊಂದು ಖುಷಿಯ ವಿಚಾರ. ನನ್ನ ಪರವಾಗಿ ನಿಂತು ಯುದ್ಧ ಮಾಡುವ ಮಾಧ್ಯಮ ಮಿತ್ರರು, ನನ್ನ ಮೇಲೆ ನಂಬಿಕೆಯಿಟ್ಟು ನನ್ನ ಶಕ್ತಿಯಾಗಿ ನಿಂತಿರುವ ಕನ್ನಡ ಕುಲಕೋಟಿಗೆ ನನ್ನ ಹೃದಯಪೂರ್ವಕ ನಮನಗಳು. ಹೀಗೆ ಜೊತೆಗಿರಿ, ತಪ್ಪಾದಾಗ ತಿದ್ದಿ, ಗೆಲುವಾಗುವಂತೆ ಹರಸಿ, ಮೆರೆಸಿ.” ಎಂದು ಧನಂಜಯ ಹೇಳಿದ್ದಾರೆ.

‘ಈ ಸಿನೆಮಾ ಮನುಷ್ಯನ ವಿಲಕ್ಷಣ ಮನಸ್ಸಿನ ಹೋರಾಟವನ್ನ ಬಿಂಬಿಸುತ್ತದೆ. ಸರಿ ತಪ್ಪುಗಳ ಸಿದ್ದಾಂತ, ಅಹಂಕಾರಗಳ ಗುದ್ದಾಟ. ಈ ಸಿನೆಮಾ ಒಂದು ಸೆಲೆಬ್ರೇಶನ್. ಉತ್ತರಕರ್ನಾಟಕದ ಅಧ್ಬುತ ಬದುಕಿನ ನಡುವೆ ನಡೆಯುವ ಕಥೆ ಹೇಳುತ್ತಿರುವುದು ನನಗೆ ದೊಡ್ಡ ಸವಾಲು ಮತ್ತು ಜವಾಬ್ದಾರಿ’ ಎಂದು ನಿರ್ದೇಶಕ ರೋಹಿತ್ ಪದಕಿ ಹೇಳಿದ್ದಾರೆ. ಚಿತ್ರ ಸಂಪೂರ್ಣ ಉತ್ತರಕರ್ನಾಟಕದ ಸೊಗಡಲ್ಲಿ, ಭಾಷೆಯಲ್ಲಿ ಇರುತ್ತದೆ. ಹಾಗೂ ಅಲ್ಲಿಯೇ ಚಿತ್ರೀಕರಣವಾಗಲಿದೆ ಎಂದು ಕೂಡ ಹಂಚಿಕೊಂಡಿದ್ದಾರೆ.

‘ಇನ್ ಮ್ಯಾಲಿಂದ ಫುಲ್ ಗುದ್ದಾಂಗುದ್ದಿ’ ಎಂದು ಅಡಿ-ಶೀರ್ಷಿಕೆ ಹೊಂದಿರುವ ‘ಉತ್ತರಕಾಂಡ’ ದೊಡ್ಡ ಮಟ್ಟದ ಮಾಸ್ ಮನರಂಜನೆ ನೀಡುವ ಸಿನೆಮಾ ಆಗಲಿದೆ ಎಂದು ನಿರ್ಮಾಪಕರು ನುಡಿದಿದ್ದಾರೆ. ಮುಂದಿನ ವರ್ಷದಲ್ಲಿ ಸೆಟ್ಟೇರುತ್ತಿರುವ ಚಿತ್ರಗಳಲ್ಲಿ ಅತಿ ದೊಡ್ಡ ತಾರಾಗಣ, ಹಾಗೂ ಬಜೆಟ್ ಹೊಂದಿರುವ ಚಿತ್ರ ಇದು ಎಂದು ಹೇಳಲಾಗುತ್ತಿದೆ.

“ಕೆ.ಆರ್.ಜಿ ಸಂಸ್ಥೆ ಧನಂಜಯ ಅವರ ಜೊತೆ ಕೈಜೋಡಿಸಿರುವ ಮೂರನೇ ಚಿತ್ರ ಇದು. ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಲ್ಲಿ ಇರುವ ನಟ ಧನಂಜಯ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯ ಅವರ ಕಮ್‌ಬ್ಯಾಕ್ ಚಿತ್ರ ಇದು. ಇನ್ನು ರೋಹಿತ್ ಪದಕಿ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಸಂಬಂಧ ಉನ್ನತ ಮಟ್ಟದಲ್ಲಿದೆ. ‘ರತ್ನನ್ ಪ್ರಪಂಚ’ ಒಂದು ಮೈಲಿಗಲ್ಲಾದರೆ, ‘ಉತ್ತರಕಾಂಡ’ ಎಂದೂ ಹೇಳಿರದ, ವಿಷಯ ಹೇಳಲಿದೆ ಎಂದು ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು.

ಜನವರಿಯಿಂದ ಚಿತ್ರೀಕರಣ ಶುರುವಾಗಲಿದೆ ಅರವಿಂದ ಕಶ್ಯಪ್ ಕ್ಯಾಮರಾ, ಚರಣ್ ರಾಜ್ ಸಂಗೀತ ಸಂಯೋಜನೆ ಇರುತ್ತದೆ. ದೀಪು ಎಸ್ ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲೆ ನಿರ್ವಹಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಯತಿರಾಜನ ಅಗಮ್ಯ ಪಯಣ: ಸಂಜು ಜೊತೆ ಹೊಸ ಕಥೆ…

ಪ್ರೀತಿಯ ಚೌಕಟ್ಟಿನೊಳಗೆ ಸಂಬಂಧಗಳ ಪಯಣ..ಪಯಣದ ದಾರಿಯಲ್ಲಿ ಬದುಕಿನ ಮೌಲ್ಯಗಳ ಅನಾವರಣ- ಹೀಗೆಂದವರು ನಿರ್ದೇಶಕ ಯತಿರಾಜ್ . ಪತ್ರಕರ್ತನಾಗಿ, ನಟನಾಗಿ ಇದೀಗ ನಿರ್ದೇಶಕನಾಗಿ ಸದ್ಯ ಚಾಲ್ತಿಯಲ್ಲಿರುವ ಅವರು ತಮ್ಮ ಹೊಸ ಚಿತ್ರ “ಸಂಜು” ಕುರಿತು‌ ಹೇಳುತ್ತಾ ಹೋದರು.
‘ಮೈಸೂರಿನ ಸಂತೋಷ್ ಡಿ ಎಂ ನಿರ್ಮಿಸುತ್ತಿರುವ “ಸಂಜು” ಅಗಮ್ಯ ಪಯಣಿಗ.. ಡಿಸೆಂಬರ್ 14 ರಿಂದ ಚಿತ್ರೀಕರಣ ನಡೆಯಲಿದೆ. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳ ತಲ್ಲಣಗಳಿವೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ತತ್‌ಕ್ಷಣದ ನಿರ್ಧಾರಗಳು ನಮ್ಮ ಬದುಕಿನಲ್ಲಿ ಎಷ್ಟೆಲ್ಲಾ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಮಡಿಕೇರಿ ಮತ್ತು ವಿರಾಜಪೇಟೆ ಸುತ್ತಮುತ್ತಲಿನ ಹಸಿರಿನ ಪರಿಸರದಲ್ಲಿ ಕಟ್ಟಿಕೊಡುವ ಪ್ರಯತ್ನ . ಅದಕ್ಕಾಗಿ ಮೂರ್ನಾಡುವಿನಲ್ಲಿ ಬಸ್ ಸ್ಟಾಪ್ ಮತ್ತು ಟೀ ಶಾಪಿನ ಸೆಟ್ ಕೂಡ ಹಾಕಲಾಗುತ್ತಿದೆ ಎಂದು ಚಿತ್ರದ ಕುರಿತು ಯತಿರಾಜ್ ಹೇಳಿದರು.


ಇನ್ನೂ ಚಿತ್ರದ ನಾಯಕನಾಗಿ ಮನ್ವೀತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ‘ಅ್ಯಂಗರ್’ ಅನ್ನುವ ಸಿನಿಮಾದಲ್ಲಿ ನಟಿಸಿದ್ದ ಅವರಿಗೆ ‘ಸಂಜು’ ಎರಡನೇ ಚಿತ್ರ. ರಂಗಭೂಮಿಯ ನಂಟಿದ್ದರೂ ಪಾತ್ರದ ಪರಕಾಯ ಪ್ರವೇಶ ಪಡೆಯಲು ನಿರ್ದೇಶಕ ಜೊತೆಗೆ ಸತತ ತಾಲೀಮು ನಡೆಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು. ಆರಂಭದಲ್ಲಿ ನಾಟಕವೊಂದರ ಡೈಲಾಗ್ ಮೂಲಕ ವೇದಿಕೆ ಏರಿದ ಮನ್ವೀತ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.


ನಾಯಕಿಯಾಗಿ ನಟಿಸುತ್ತಿರುವ ರೇಖಾದಾಸ್ ಪುತ್ರಿ ಶ್ರಾವ್ಯ ‘ ಚಿತ್ರದಲ್ಲಿ ಸರಸ್ವತಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ .ಮೊದಲ ಹದಿನೈದು ದೃಶ್ಯಗಳಲ್ಲಿ ನನಗೆ ಮಾತುಗಳಿಲ್ಲ. ಕೇವಲ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಬೇಕಿದೆ. ಇದೊಂಥರ ವಿಭಿನ್ನ ಪ್ರಯೋಗ ‘ ಎಂದು ತಮ್ಮ ಪಾತ್ರದ ಕುರಿತು ಹೇಳಿಕೊಂಡರು.
ನಾಯಕನ ತಾಯಿಯಾಗಿ ಸಂಗೀತಾ, ನಾಯಕಿಯ ತಂದೆಯಾಗಿ ಬಲರಾಜವಾಡಿ ಹಾಗೂ ಕಾಮಿಡಿ ಕಿಲಾಡಿಗಳು ಸಂತು, ಕುರಿ ರಂಗ, ಬೌ ಬೌ ಜಯರಾಮ್, ಶಂಕರ್ ಭಟ್, ಕಾತ್ಯಾಯಿನಿ, ಮಿಥಾಲಿ, ಪ್ರಕಾಶ್ ಶಣಯ್, ಚೇತನ್ ರಾಜ್, ಮಂಜು ಕವಿ, ನಾಗರತ್ನ, ಫ್ರೆಂಚ್ ಬಿರಿಯಾನಿ,
ಫ್ರೆಂಚ್ ಬಿರಿಯಾನಿ ಖ್ಯಾತಿಯ ಜೂ.ಯೋಗಿಬಾಬು  ಮಹಂತೇಶ್ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಥ್ರಿಲ್ಲರ್ ಮಂಜು ಎರಡು ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡುತ್ತಿದ್ದಾರೆ.


ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ‘ ಪ್ರೇಮ ಗೀತೆಯೊಂದನ್ನು ಜನಪದ ಶೈಲಿಯಲ್ಲಿ ಹೇಳುವ ಪ್ರಯತ್ನ ನಡೆಯುತ್ತಿದೆ’ ಎಂದರು. ಛಾಯಾಗ್ರಾಹಕ ವಿದ್ಯಾನಾಗೇಶ್, ಅನಿಲ್ ಮತ್ತು ಪ್ರದೀಪ್ ‘ ನಿರ್ದೇಶಕರು ಹೇಳಿದ್ದನ್ನು ಕೊಡುವುದೇ ನಮ್ಮ ಕರ್ತವ್ಯ’ ಎಂದರು.

error: Content is protected !!