Categories
ಸಿನಿ ಸುದ್ದಿ

ಮುಸ್ತಫಾಗೆ ಡಾಲಿ ಸಾಥ್! ಡೇರ್ ಡೆವಿಲ್ ಮುಸ್ತಫಾ ಮೇ 19ಕ್ಕೆ ರಿಲೀಸ್…

ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳನ್ನು ಓದುಗರೇ ಹಣ ಹಾಕಿ ಸಿನಿಮಾ ಮಾಡುತ್ತಿರುವುದು ಗೊತ್ತೇ‌ ಇದೆ. ಡೇರ್ ಡೆವಿಲ್ ಮುಸ್ತಫಾ ಎಂಬ ಶೀರ್ಷಿಕೆಯಡಿ ಮೂಡಿಬರ್ತಿರುವ ಈ ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಈಗಾಗಲೇ ವಿಭಿನ್ನವಾಗಿ ಪ್ರಚಾರ ನಡೆಸುತ್ತಿರುವ ಚಿತ್ರತಂಡ ಮೇ 19ಕ್ಕೆ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದೆ.

ಅಂದಹಾಗೆ, ಡೇರ್ ಡೆವಿಲ್ ಮುಸ್ತಫಾ ಸಿನಿಮಾಗೆ ಶಶಾಂಕ್ ಸೋಗಾಲ್ ಸಾರಥಿ. ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಫಟಿಂಗ ಎಂಬ ಜನಪ್ರಿಯ ಕಿರುಚಿತ್ರ ನಿರ್ದೇಶಿಸಿದ್ದ ಶಶಾಂಕ್ ಸೋಗಾಲ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಆರಂಭದಲ್ಲಿ ನಾನಾ ಬಗೆಯಲ್ಲಿ ಸಿನಿರಸಿಕರನ್ನು ಗಮನಸೆಳೆಯುತ್ತಿರುವ ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ನಿನ್ನಂಥೋರ್ ಯಾರೂ ಇಲ್ವಲ್ಲೋ ಎಂಬ ಹಾಡು ಸೂಪರ್ ಹಿಟ್ ಲಿಸ್ಟ್ ಸೇರಿದೆ. ಅಣ್ಣಾವ್ರ ಅನಿಮೇಷನ್ ಮೂಲಕ ಗಮನಸೆಳೆದಿರುವ ಈ ಗಾನಲಹರಿಗೆ ವಾಸುಕಿ ವೈಭವ್ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಧ್ವನಿಯಾಗಿದ್ದಾರೆ. ವಿಭಿನ್ನವಾಗಿ ಮೂಡಿಬಂದಿರುವ ನಿನ್ನಂಥೋರ್ ಯಾರೂ ಇಲ್ವಲ್ಲೋ ಹಾಡು ಸಿನಿಮಾದಲ್ಲಿ ಹೇಗಿರಲಿ ಎಂಬ ನಿರೀಕ್ಷೆ ಹೆಚ್ಚಿಸಿದೆ.

ಆನಿಮೇಷನ್‌ ಹಾಡಿನ ಮೂಲಕ ಗಮನಸೆಳೆದಿರುವ ಡೇರ್ ಡೆವಿಲ್ ಮುಸ್ತಫಾ ಟ್ರೇಲರ್ ಬಿಡುಗಡೆಯಾಗಿದೆ. ಯೂಟ್ಯೂಬ್ ಸೆನ್ಸೇಷನ್ ಸ್ಟಾರ್ ಡಾ.ಬ್ರೋ ವಾಯ್ಸ್ ನಿಂದ ಪೂಚಂತೇ ಪ್ರಪಂಚ ಪರಿಚಯ ಮಾಡಿಕೊಡಲಾಗುತ್ತದೆ. ಬಾಲ್ಯದ ಆಟ ಪಾಠ ತುಂಟಾಟದ ಡೇರ್ ಡೆವಿಲ್ ಮುಸ್ತಫಾ ಮೊದಲ ನೋಟ ನೋಡುಗರಿಗೆ ಇಂಪ್ರೆಸ್ ಮಾಡುತ್ತಿದೆ.

ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳಿಂದಲೇ ತಯಾರಾಗಿರುವ ಸಿನಿಮಾಗೆ ನಟರಾಕ್ಷಸ ಡಾಲಿ ಧನಂಜಯ್ ಬೆಂಬಲವಾಗಿ ನಿಂತಿದ್ದಾರೆ. ಹೇಳಿಕೇಳಿ ಸಾಹಿತ್ಯ ಪ್ರೇಮಿಯಾಗಿರುವ ಧನಂಜಯ್ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ.

ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಫಾ ನಿರ್ಮಾಣವಾಗಿದೆ.
ಕನ್ನಡ ಚಿತ್ರರಸಿಕರನ್ನು ಪೂಚಂತೇ ಪ್ರಪಂಚಕ್ಕೆ ಕರೆದುಕೊಂಡು ಹೋಗಲು ಹೊಸ ಉತ್ಸಾಹಿ ಯುವಕರೇ ಕೂಡಿರುವ ಇಡೀ ಚಿತ್ರ ತಂಡ ಅತ್ಯಂತ ಫ್ಯಾಷನೆಟೇಡ್ ಆಗಿ ಕೆಲಸ ಮಾಡಿದೆ. ಇದು ದೊಡ್ಡ ಪರದೆಯಲ್ಲಿ ಅದ್ಭುತ ಅನುಭವ ಅಂತಾರೆ ನಿರ್ದೇಶಕ ಶಶಾಂಕ್ ಸೋಗಾಲ್.

Categories
ಸಿನಿ ಸುದ್ದಿ

ಕಮಲ ಹಾಸನ್ ನಿರ್ಮಾಣದ ಹೊಸ ಚಿತ್ರ ಅನೌನ್ಸ್: ಶಿವಕಾರ್ತಿಕೇಯನ್-ಸಾಯಿಪಲ್ಲವಿ ಜೋಡಿ

ಸೂಪರ್ ಸ್ಟಾರ್ ಕಮಲ್ ಹಾಸನ್ ಸಾರಥ್ಯದ ರಾಜ್ ಕಮಲ್ ಫಿಲ್ಮ್ಸ್ಇಂಟರ್ನ್ಯಾಷನಲ್ (RKFI) ನಡಿ ಮೂಡಿಬಂದಿದ್ದ ವಿಕ್ರಮ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಸೇರಿದೆ. ಇದು ರಾಜ್ ಕಮಲ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ನ 50 ಚಿತ್ರ. ಲೋಕೇಶ್ ಕನಗರಾಜ್ ನಿರ್ದೇಶನದ ಹಾಗೂ ಕಮಲ್ ನಟನೆಯ ವಿಕ್ರಮ್ ಅದ್ಧೂರಿ ಸಕ್ಸಸ್ ಕಂಡಿದೆ.

ಈ ಸಕ್ಸಸ್ ಬಳಿಕ ಈ ನಿರ್ಮಾಣ ಸಂಸ್ಥೆಯಡಿ 51 ಚಿತ್ರ ಸೆಟ್ಟೇರಿದೆ. ಮೇಜರ್ ಚಿತ್ರ ನಿರ್ಮಿಸಿದ್ದ ರಾಜ್ ಕಮಲ್ ಫಿಲ್ಮ್ಸ್ ಹಾಗೂ ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ಸ್ (SPIP) ಮತ್ತೊಂದು ಜೊತೆಗೂಡಿ ಹೊಸ ಸಿನಿಮಾಗೆ ಮುನ್ನುಡಿ ಬರೆದಿದ್ದಾರೆ.

ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಯೇನ್ ನಟಿಸುತ್ತಿರುವ #SK21 ಚಿತ್ರದ ಸಮಾರಂಭ ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕಮಲ್ ಹಾಸನ್ ಈ ಸಿನಿಮಾಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಶ್ರೀ ಆರ್ ಮಹೇಂದ್ರನ್, ಶ್ರೀ ಶಿವಕಾರ್ತಿಕೇಯನ್, ಎಂಎಸ್ ಸಾಯಿ ಪಲ್ಲವಿ, ಶ್ರೀ ರಾಜ್ ಕುಮಾರ್ ಪೆರಿಯಸಾಮಿ, ಶ್ರೀ ಜಿವಿ ಪ್ರಕಾಶ್, ಸಹ ನಿರ್ಮಾಪಕ ಶ್ರೀ ವಕೀಲ್ ಖಾನ್, ಶ್ರೀ ಲಾಡಾ ಗುರುಡೆನ್ ಸಿಂಗ್, ಜನರಲ್ ಮ್ಯಾನೇಜರ್ ಮತ್ತು ಹೆಡ್, ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ಸ್, ಇಂಡಿಯಾ ಮತ್ತು ಶ್ರೀ ನಾರಾಯಣನ್, CEO, RKFI ಮುಂತಾದವರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು,

ರಾಜ್ ಕುಮಾರ್ ಪೆರಿಯಸಾಮಿ ಕಥೆ ಬರೆದು ನಿರ್ದೇಶಿಸಿದ್ದು, ಶಿವಕಾರ್ತಿಕೇಯನ್ ಅವರನ್ನು ಅವರ ಅಭಿಮಾನಿಗಳು ಹಿಂದೆಂದೂ ನೋಡಿರದ ರೀತಿಯಲ್ಲಿ ದೊಡ್ಡ ಪರದೆಯ ಮೇಲೆ ತರುವ ಪ್ರಯತ್ನದಲ್ಲಿದ್ದಾರೆ. #SK21 ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸ್ತಿದ್ದು, ಕಾಶ್ಮೀರದಲ್ಲಿ ಎರಡು ತಿಂಗಳುಗಳ ಕಾಲ ಶೂಟಿಂಗ್ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

ಜಿ ವಿ ಪ್ರಕಾಶ್ ಸಂಗೀತ ನಿರ್ದೇಶನ, , ಸಿಎಚ್ ಸಾಯಿ ಛಾಯಾಗ್ರಹಣ, ಆರ್. ಕಲೈವನನ್ ಸಂಕಲನಕಾರ ಮತ್ತು ಸ್ಟೀಫನ್ ರಿಕ್ಟರ್ ಸಾಹಸ ನಿರ್ದೇಶಕ ಚಿತ್ರಕ್ಕಿದೆ. ಗಾಡ್ ಬ್ಲೆಸ್ ಎಂಟರ್‌ಟೈನ್‌ಮೆಂಟ್‌ನ ಸಹ-ನಿರ್ಮಾಣದಲ್ಲಿದೆ ಕೈ ಜೋಡಿಸಿದೆ.

Categories
ಸಿನಿ ಸುದ್ದಿ

ಡಾಲಿಗೆ ಲಕ್ ಇಲ್ಲ! ನಾನು ಆ ಸಿನಿಮಾದಲ್ಲಿ ನಟಿಸಲ್ಲ ಧನಂಜಯ್ ಸ್ಪಷ್ಟನೆ…

‘ಕ್ಯಾರಾವಾನ್ ಸ್ಟಾರ್’ ಮಂಜು ಅಭಿನಯದ ‘ಲಕ್’ ಚಿತ್ರದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಚಿತ್ರದಲ್ಲಿ ಧನಂಜಯ್ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಸ್ವತಃ ಚಿತ್ರತಂಡದವರು ಘೋಷಿಸಿದ್ದರು. ಆದರೆ, ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ವತಃ ಧನಂಜಯ್ ಸ್ಪಷ್ಟಪಡಿಸಿದ್ದಾರೆ.


ಈ ಕುರಿತು ಮಾತನಾಡಿರುವ ಧನಂಜಯ್, ‘’ಲಕ್’ ಚಿತ್ರದ ನಾಯಕ ಮತ್ತು ನಿರ್ಮಾಪಕ ಸ್ಮೈಲ್ ಮಂಜು ನನಗೆ ಬಹಳ ಒಳ್ಳೆಯ ಸ್ನೇಹಿತರು. ಅವರ ಪ್ರಯತ್ನಗಳಿಗೆ ನನ್ನ ಬೆಂಬಲ ಇರುತ್ತದೆ. ಅದರಂತೆ, ‘ಲಕ್’ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟದ್ದೇನೆ. ಆದರೆ, ಕಾರಣಾಂತರಗಳಿಂದ ನನಗೆ ಅವರ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ.

ಈ ವಿಷಯವನ್ನು ಚಿತ್ರತಂಡದವರಿಗೂ ಮನವರಿಕೆ ಮಾಡಿಕೊಟ್ಟಿದ್ದೇನೆ. ಹಾಗಾಗಿ, ಲಕ್ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ಈ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ’ ಎನ್ನುತ್ತಾರೆ ಧನಂಜಯ್.
‘ಲಕ್’ ಚಿತ್ರವನ್ನು ಹರೀಶ್ ನಿರ್ದೇಶನ ಮಾಡುತ್ತಿದ್ದು, ವಿಜಯ್ ಹರಿತ್ಸ ಸಂಗೀತ ಸಂಯೋಜಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಎಂಗೇಜ್ಮೆಂಟ್ ಗೆ ರೆಡಿಯಾದ ಐಶ್ವರ್ಯಾ!

ಇತ್ತೀಚೆಗೆ ಬಿಡುಗಡೆಯಾದ ‘ಪ್ರವೀಣ’ ಚಿತ್ರದಲ್ಲಿ ತಮ್ಮ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ನಟಿ ಐಶ್ವರ್ಯಾ ಗೌಡ, ಇದೀಗ ಬೋನಗಾನಿ ಎಂಟರ್ಟೈನ್ಮೆಂಟ್ ನಡಿ ನಿರ್ಮಾಣವಾಗುತ್ತಿರುವ ‘ಎಂಗೇಜ್ಮೆಂಟ್’ ಎಂಬ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್’ ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಐಶ್ವರ್ಯಾ, ‘ಪ್ರವೀಣ’ ಚಿತ್ರದಲ್ಲಿ ನಟಿಸಿದರು.

ಆ ನಂತರ ರಾಜು ಬೋನಗಾನಿ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ರೇವ್ ಪಾರ್ಟಿ’ಯಲ್ಲಿ ದ್ವಿತೀಯ ನಾಯಕಿಯಾಗಿ ಅಭಿನಯಿಸಿದರು. ಇಂದಿನ ಯುವಜನತೆ ಡ್ರಗ್ಸ್ಗೆ ಹೇಗೆ ದಾಸರಾಗುತ್ತಿದ್ದಾರೆ ಎಂದು ಸಾರುವ ಈ ಚಿತ್ರ ಬಿಡುಗಡೆ ಆಗುವುದಕ್ಕಿಂತ ಮೊದಲೇ, ಅದೇ ನಿರ್ದೇಶಕರ ಇನ್ನೊಂದು ಪ್ಯಾನ್ ಇಂಡಿಯಾ ಚಿತ್ರವಾದ ‘ಎಂಗೇಜ್ಮೆಂಟ್’ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.


ತಮ್ಮ ಚಿತ್ರಜೀವನದ ಕುರಿತು ಮಾತನಾಡುವ ಐಶ್ವರ್ಯಾ, ‘ನನಗೆ ಚಿಕ್ಕಂದಿನಿಂದಲೂ ನಟನೆಯ ಬಗ್ಗೆ ಅಪಾರವಾದ ಆಸಕ್ತಿ. ಅದೇ ಆಸಕ್ತಿಯಿಂದ ‘ಜಾಗ್ವಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದೆ. ‘ಪ್ರವೀಣ’ ಚಿತ್ರ ಸಹ ನನಗೆ ಒಳ್ಳೆಯ ಬ್ರೇಕ್ ನೀಡಿತು. ಆ ಚಿತ್ರದಿಂದ ನನಗೆ ‘ರೇವ್ ಪಾರ್ಟಿ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಅದರಲ್ಲಿನ ನನ್ನ ಅಭಿನಯದ ನೋಡಿ ನಿರ್ದೇಶಕ ಬೋನಗಾನಿ ಅವರು ‘ಎಂಗೇಜ್ಮೆಂಟ್’ ಚಿತ್ರದಲ್ಲಿ ನಾಯಕಿಯಾಗುವ ಅವಕಾಶವನ್ನು ನೀಡಿದ್ದಾರೆ. ಈ ಚಿತ್ರ ಸಹ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಕಾಣಲಿದೆ ಎಂಬ ನಂಬಿಕೆ ನನಗಿದೆ’ ಎಂದು ಹೇಳುತ್ತಾರೆ.
‘ಎಂಗೇಜ್ಮೆಂಟ್’ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

Categories
ಸಿನಿ ಸುದ್ದಿ

ಟೆರರ್ ಟೀಸರ್ ಬಂತು: ಆದಿತ್ಯ ಬರ್ತ್ ಡೇಗೆ ತಂಡದ ಗಿಫ್ಟ್ ಇದು

ನಟ ಆದಿತ್ಯ ಅಭಿನಯದ ‘ಟೆರರ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಆದಿತ್ಯ ಅವರ ಹುಟ್ಟುಹಬ್ಬದ ಸಲುವಾಗಿ ಚಿತ್ರತಂಡ ವಿಶೇಷ ಟೀಸರ್ ಬಿಡುಗಡೆ ಮಾಡಿದೆ‌. ನಿರ್ದೇಶಕ – ನಿರ್ಮಾಪಕ ಆರ್. ಚಂದ್ರು ‘ಟೆರರ್’ ಚಿತ್ರದ ಟೀಸರ್ ಬಿಡುಗಡೆಗೊಳಿಸಿದರು.

“ಟೆರರ್’’ ಸಿನಿಮಾದ ಹೆಸರಿನಲ್ಲೆ ಒಂದು ಫೈಯರ್ ಇದೆ. ಟೀಸರಿನಲ್ಲಿ ಕಾಣುವ ಪ್ರತಿಯೊಂದು ಸನ್ನಿವೇಶಗಳು ಗಮನ ಸೆಳೆಯುತ್ತದೆ. ಟೀಸರ್ ನಲ್ಲಿಯೇ ‘ಟೆರರ್’ ದೊಡ್ಡ ಹಿಟ್ ಆಗುವ ಲಕ್ಷಣಗಳು ಕಾಣುತ್ತಿದೆ ಎಂದು ಆರ್ ಚಂದ್ರು ಹಾರೈಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ಮಾಪಕರಾದ ದೇವೇಂದ್ರ ರೆಡ್ಡಿ, ರಮೇಶ್ ರೆಡ್ಡಿ, ಪ್ರಕಾಶ್, ಶ್ರೀನಗರ ಕಿಟ್ಟಿ ಮುಂತಾದವರು ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಆದಿತ್ಯ ಅವರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಕಥೆ ಕೇಳಿದ ಕೂಡಲೇ ನಿರ್ಮಾಪಕ ಸಿಲ್ಕ್ ಮಂಜು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಅವರ ಸಹಕಾರದಿಂದಲೇ ಈ ಸಿನಿಮಾ ಮಾಡಲು ಸಾಧ್ಯವಾಗುತ್ತಿದೆ. ಸಿನಿಮಾದಲ್ಲಿ ಆದಿತ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ಕೂಡ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಕೋಟೆ ಪ್ರಭಾಕರ್, ಧರ್ಮ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ 30% ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ದೇಶಕ ರಂಜನ್ ಶಿವರಾಮ್ ಗೌಡ ಹೇಳಿದರು.

ಕನ್ನಡ ಚಿತ್ರರಂಗಕ್ಕೆ “A” ಎಂಬ ಉತ್ತಮ ಚಿತ್ರಕೊಟ್ಟ ನಿರ್ಮಾಪಕ ಸಿಲ್ಕ್ ಮಂಜು ಅವರ ನಿರ್ಮಾಣದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರಂಜನ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಹುಟ್ಟುಹಬ್ಬಕ್ಕಾಗಿ ವಿಶೇಷ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡಕ್ಕೆ ಇಲ್ಲಿ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಎಂದರು ನಾಯಕ ಆದಿತ್ಯ.

‘ಎ’ ಸಿನಿಮಾ ಬಿಡುಗಡೆಯಾಗಿ 25 ವರ್ಷ ಆದ ಮೇಲೆ ಮತ್ತೊಂದು ನಿರೀಕ್ಷಿತ ಸಿನಿಮಾ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸಿಲ್ಕ್ ಮಂಜು.

Categories
ಸಿನಿ ಸುದ್ದಿ

ಗುಳಿಗ ದೈವಕ್ಕೆ ಕ್ಷೇತ್ರ ನಿರ್ಮಾಣ: ಕೊರಗಜ್ಜ ಸಿನಿಮಾ ನಿರ್ದೇಶಕ ಸುಧೀರ್ ಅತ್ತಾವರ ಅವರ ಅದ್ಧೂರಿ ಕೋಲ ಸೇವೆ

‘ಕರಿ ಹೈದ ಕೊರಗಜ್ಜ” ಚಿತ್ರೀಕರಣದ ವೇಳೆ ಅನೇಕ ಪವಾಡಗಳು ಗೋಚರಕ್ಕೆ ಬಂದ ವಿಷಯವನ್ನು ಕಲಾವಿದರಾದ ಕಬೀರ್ ಬೇಡಿ, ಶ್ರುತಿ, ಭವ್ಯ ಹಾಗೂ ಚಿತ್ರ ತಂಡದ ಸದಸ್ಯರು ಈಗಾಗಲೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

ಆದರೆ ಮತ್ತೊಂದು ಕುತೂಹಲದ ವಿಚಾರ ಇದುವರೆಗೂ ನಿಗೂಢವಾಗಿತ್ತು. ಇದು ಘಟಿಸಿದ್ದು ಚಿತ್ರೀಕರಣದ ಆರಂಭಕ್ಕೂ ಮೊದಲು ಪುತ್ತೂರಿನಲ್ಲಿ ಸೆಟ್ ವಿರ್ಮಾಣದ ವೇಳೆ.

ಸೆಟ್ ಕೆಲಸಗಾರರು ಸೆಟ್ ನಿರ್ಮಾಣದ ವೇಳೆ ಯಾವುದೋ ಆವೇಶ ಬಂದಂತವರಾಗಿ ಅಲ್ಲಲ್ಲೇ ಮೂರ್ಛೆ ಹೋಗ ತೊಡಗಿದರು. ಸ್ಥಳಿಯರು ಅರಶಿನ ನೀರನ್ನು ಪ್ರೋಕ್ಷಿಸಿ , ಕೆಲವರನ್ನು ಅಲ್ಲಿನ ಆಸ್ಪತ್ರೆಗೂ ಸೇರಿಸಲಾಯಿತು.

ನಂತರ ಆ ಪ್ರದೇಶದಲ್ಲಿ ಯಾರೂ ಸೆಟ್ ಕೆಲಸ ಮಾಡಲು ಮುಂದೆ ಬರಲಿಲ್ಲ. ಸೆಟ್ ಹಾಕಲಿದ್ದ ಆ ಜಾಗವು ಕರಾವಳಿಯ ಉಗ್ರ ರೂಪದ ದೈವ “ಗುಳಿಗ”ನ ಸ್ಥಳ ವೆಂದು ಸ್ಥಳಿಯರು ತಿಳಿಸಿದರು.

ದೈವದ ಮೇಲಿನ ಗೌರವ-ಭಕ್ತಿಯಿಂದ ಪುತ್ತೂರಿನಿಂದ ಬೆಳ್ತಂಗಡಿಯ ಅರಣ್ಯ ಪ್ರದೇಶದಲ್ಲಿ ಸೆಟ್ ಕೆಲಸವನ್ನು ಸ್ಥಳಾಂತರ ಗೊಳಿಸಲಾಯಿತು.


ಚಿತ್ರದಲ್ಲಿ ಗುಳಿಗ ದೈವದ ಪಾತ್ರವನ್ನು ಹಾಲಿವುಡ್- ಫ಼್ರೆಂಚ್- ಬಾಲಿವುಡ್ ನಟ ಹಾಗೂ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಅಭಿನಯಿಸಿದ್ದು, ಮಂಗಳೂರಿನ ಸೋಮೆಶ್ವರ ಸಮುದ್ರ ಕಿನಾರೆಯಲ್ಲಿ ಗುಳಿಗ ದೈವದ ಚಿತ್ರೀಕರಣವನ್ನು ನಡೆಸುತ್ತಿದ್ದಾಗಲೂ, ತಂಡಕ್ಕೆ ಹಲವಾರು ರೀತಿಯ ಅಡೆತಡೆಗಳು ಎದುರಾಯಿತು.


ಈ ಬಗ್ಗೆತಿಳಿದವರ ಜೊತೆ ಮಾತುಕತೆ ನಡೆಸಿದಾಗ ನಿರ್ದೇಶಕ ಸುಧೀರ್ ಅತ್ತಾವರ್ ರವರ ಹಿರಿಯರಿದ್ದ ಮನೆಯಲ್ಲಿ ಗುಳಿಗ ದೈವದ ಸಾನಿಧ್ಯವಿದ್ದು , ಹಲವಾರು ವರ್ಷಗಳಿಂದ ಆ ಮನೆಯಲ್ಲಿ ಯಾರೂ ವಾಸವಿರದೆ,

ಪಾಳು ಬಿದ್ದ ಕಾರಣ ದೈವಕ್ಕೆ ಪೂಜೆ ಪುರಸ್ಕಾರಗಳು ನಡೆಯದಿರುವ ವಿಚಾರ ಗೋಚರಿಸಿತು.
ಕೂಡಲೇ ನಿರ್ದೇಶಕರು ದೈವಕ್ಕೆ ಗುಡಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾದರು.

ಚಿತ್ರದ ಎಡಿಟಿಂಗ್ ಕೆಲಸ ಮುಗಿದ ಕೂಡಲೇ, ದೈವಸ್ಥಾನದ ಕಾರ್ಯ ಮುಗಿಸಿ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಅದ್ದೂರಿಯ ಕೋಲ ಸೇವೆಯನ್ನು ನಡೆಸಿದರು. ಈ ಸಮಯದಲ್ಲಿ ಹಿರಿಯ ನಟಿ ಭವ್ಯ, ನಿರ್ಮಾಪಕರಾದ ತ್ರಿವಿಕ್ರಮ ಸಫಲ್ಯ ಮುಖ್ಕ ಆಕರ್ಷಣೆ.

ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ಕಲಾವಿದರಾದ ಭರತ್ ಸೂರ್ಯ, ರಿತಿಕ ಹಾಗೂ ಹಲವು ತಂತ್ರಜ್ಞರು ಅಹೋರಾತ್ರಿ ವಿಜೃಂಭಣೆಯಿಂದ ನಡೆದ ಕೋಲಸೇವೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಚಿತ್ರತಂಡವು ಚಿತ್ರೀಕರಣ ಮುಗಿದ ಕೂಡಲೇ ಕೊರಗಜ್ಜನಿಗೂ ಕೋಲಸೇವೆಯನ್ನು ಅದ್ದೂರಿಯಾಗಿ ನೆರವೇರಿಸಿತ್ತು.


“ಕೊರಗಜ್ಜ”ನ ಕುರಿತಾದ ಸಿನಿಮಾ ಮಾಡಬೇಕೆಂದು ಹಲವಾರು ನಿರ್ಮಾಪಕರು ಕಳೆದ ಕೆಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ನಿರ್ಮಾಪಕ ತ್ರಿವಿಕ್ರಮ ರವರು ಬಿಗ್ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಶಿವಣ್ಣನ ಮಗಳ ಹೊಸ ಹೆಜ್ಜೆ: ಮೊದಲ ಸಿನಿಮಾ ನಿರ್ಮಾಣಕ್ಕೆ ನಿವೇದಿತಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಯುವ ಸಿನಿಮೋತ್ಸಾಹಿಗಳಿಗೆ ಸದಾ ಬೆನ್ನು ತಟ್ಟುತ್ತಾ ಮುಂದೆ ಸಾಗುವ ಕನ್ನಡ ಚಿತ್ರರಂಗದ ಮಾಸ್ ಲೀಡರ್. ಹೊಸ ಚಿತ್ರತಂಡಕ್ಕೆ ಬಲವಾಗಿ ನಿಲ್ಲುವ ಶಿವಣ್ಣನ ಹಾದಿಯಲ್ಲಿ ಮಗಳು ನಿವೇದಿತಾ ಕೂಡ ಹೆಜ್ಜೆ ಇಟ್ಟಿದ್ದಾರೆ. ಹೇಳಿ ಕೇಳಿ ಕಲೆ ದೊಡ್ಮನೆ ಕುಟುಂಬದಲ್ಲಿ ರಕ್ತಗತವಾಗಿ ಬಂದಿದೆ. ಇಡೀ ಕುಟುಂಬ ಕಲಾಸೇವೆಯಲ್ಲಿ ನಿರತರಾಗಿದ್ದಾರೆ. ಅಂದು ಅಣ್ಣಾವ್ರು ತೆರೆಮೇಲೆ ರಾರಾಜಿಸುತ್ತಿದ್ದರೆ, ತೆರೆಹಿಂದೆ ಅವರ ಬೆನ್ನೆಲುಬಾಗಿ ನಿರ್ಮಾಣ ಸಂಸ್ಥೆಯಡಿ ದುಡಿಯುತ್ತಿದ್ದವರು ಪಾರ್ವತಮ್ಪೂ. ಪೂರ್ಣಿಮಾ ಎಂಟರ್ ಪ್ರೈಸನ್ ನಡಿ ಪಾರ್ವತಮ್ಮ ಕನ್ನಡ ಚಿತ್ರರಂಗಕ್ಕೆ ಹಲವ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಅದೇ ಲೆಗಸಿ ಈಗ ಮುಂದುವರೆದಿದೆ. ಗೀತಾ ಪಿಕ್ಚರ್ಸ್ ನಡಿ ಗೀತಾ ಶಿವರಾಜ್ ಕುಮಾರ್, ಪಿಆರ್ ಕೆ ಪ್ರೊಡಕ್ಷನ್ ನಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಪಕರಾಗಿ ಚಿತ್ರರಂಗಕ್ಕೆ ದುಡಿಯುತ್ತಿದ್ದಾರೆ. ಈಗ ಶಿವಣ್ಣನ ದ್ವೀತಿಯ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ತಮ್ಮದೇ ಒಡೆತನದ ನಿರ್ಮಾಣ ಸಂಸ್ಥೆಯಡಿ ಚೊಚ್ಚಲ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ.

ಶ್ರೀ ಮುತ್ತು ಸಿನಿ ಸರ್ವಿಸ್..ನಿವೇದಿತಾ ಕನಸಿನ ಕೂಸು..ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ನೀಡಲೆಂದು ಸೃಷ್ಟಿಯಾಗಿರುವ ನಿರ್ಮಾಣ ಸಂಸ್ಥೆ..ಈ ಸಂಸ್ಥೆಯಡಿ ಈಗಾಗಲೇ ಧಾರಾವಾಹಿ ಹಾಗೂ ಮೂರು ವೆಬ್ ಸೀರೀಸ್ ಗಳು ಹೊರಬಂದಿವೆ. ಈಗ ಇದೇ ಬ್ಯಾನರ್ ನಡಿ ನಿವೇದಿತಾ ಶಿವರಾಜ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೊಂಬಿಸಿಲ ಕಿರಣಗಳಲ್ಲಿ ತಂಗಾಳಿಯೊಂದು ಮೂಡಿದೆ, ಹುಟ್ಟು ಸಾವಿನ ಸ್ವಾರಸ್ಯವನ್ನು ಅನ್ವೇಷಿಸಲು ಹೊರಟಿದೆ. ಹೊಸ ಪೋಸ್ಟರ್ ಮೂಲಕ ತಮ್ಮ ಹೊಸ ಹೆಜ್ಜೆಯ ಬಗ್ಗೆ ತಿಳಿಸಿದ್ದಾರೆ.

ನಿವೇದಿತಾ ಶಿವರಾಜ್ ಕುಮಾರ್ ಒಡೆತನದ ಶ್ರೀ ಮುತ್ತು ಸಿನಿ ಸರ್ವಿಸ್ ನಡಿ ಮೂಡಿ ಬರ್ತಿರುವ ಚೊಚ್ಚಲ ಸಿನಿಮಾಗೆ ವಂಶಿ ಸಾರಥಿ.. ಒಂದಷ್ಟು ಕಿರುಚಿತ್ರ ನಿರ್ದೇಶಿಸಿ, PRK ನಿರ್ಮಾಣ ಸಂಸ್ಥೆಯಡಿ ಬಂದ ಮಾಯಾಬಜಾರ್ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ, ಇತ್ತೀಚೆಗೆ ತೆರೆಗೆ ಬಂದ ಐದು ಕಥೆಗಳ ಪೆಂಟಗನ್ ಸಿನಿಮಾದ ಕಿರಣ್ ಕುಮಾರ್ ನಿರ್ದೇಶಕದ ಕಥೆಯಲ್ಲಿ ಪ್ರಮುಖ ಪಾತ್ರವಾಗಿ ನಟಿಸಿದ್ದ ವಂಶಿ ನಿವೇದಿತಾ ಬಂಡವಾಳ ಹಾಕುತ್ತಿರುವ ಮೊದಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ನಾಯಕನಾಗಿ ಚಿತ್ರರಂಗಕ್ಕೆ ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದಾರೆ.

ಲೈಫ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಾನ ದಾರಿಯಲಿ ಸಿನಿಮಾದ ಛಾಯಾಗ್ರಹಕ ಅಭಿಲಾಷ್ ಕಲ್ಲಟ್ಟಿ ಕ್ಯಾಮೆರಾ ಸೆರೆಹಿಡಿಯಲಿದ್ದು, ಚರಣ್ ರಾಜ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಜಯ್ ರಾಮ್ ಕೋ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ರಾಜ್ ಮೊಮ್ಮಗಳ ಮತ್ತೊಂದು ಚಿತ್ರ: ಎಲ್ಲಾ ನಿನಗಾಗಿ: ಶ್ರೀಮುರಳಿ ಶುಭ ಹಾರೈಕೆ

.

ವಿದ್ಯಾ ಶ್ರೀಮುರಳಿ ಅರ್ಪಿಸುವ, F3 ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಹಾಗೂ ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ “ಮ್ಯಾಟ್ನಿ” ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗಲಿದೆ‌. ಈಗ ಅದೇ ಸಂಸ್ಥೆಯ ಬ್ಯಾನರ್ ನಲ್ಲಿ “ಎಲ್ಲಾ ನಿನಗಾಗಿ” ಎಂಬ ನೂತನ ಚಿತ್ರ ಆರಂಭವಾಗಿದೆ‌.

ವಿದ್ಯಾ ಶ್ರೀಮುರಳಿ ಅವರೆ ಈ ಚಿತ್ರವನ್ನೂ ಅರ್ಪಿಸುತ್ತಿದ್ದಾರೆ‌. ರಾಹುಲ್ ಆರ್ಕಾಟ್ ಹಾಗೂ ಧನ್ಯ ರಾಮಕುಮಾರ್ ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕಾಶಿ ನಿರ್ದೇಶಿಸುತ್ತಿದ್ದಾರೆ.

ಇತ್ತೀಚೆಗೆ ಈ ನೂತನ ಚಿತ್ರದ‌ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ದೇವಸ್ಥಾನದಲ್ಲಿ ನೆರವೇರಿತು. ನಟ ಶ್ರೀಮುರಳಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ “ಎಲ್ಲಾ ನಿನಗಾಗಿ” ಎಂದು ಹೆಸರಿಡಲಾಗಿದೆ. ಮೇ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Categories
ಸಿನಿ ಸುದ್ದಿ

ಅತಿಯಾದ ರೊಮ್ಯಾಂಟಿಕ್ ಫೋಟೋ ಶೂಟ್! ಅಥಿ ಚಿತ್ರದ ಫಸ್ಟ್ ಲುಕ್ ಶೀಘ್ರ

ಒಂದು ಮನೆ, ಎರಡು ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ರೂಪಿಸುವುದು ಅಂದರೆ ಸುಲಭದ ಮಾತಲ್ಲ. ಅದೂ ಹತ್ತಕ್ಕೂ ಹೆಚ್ಚು ನಿಮಿಷಗಳ ಸಿಂಗಲ್ ಶಾಟ್ ಗಳನ್ನು ಕಂಪೋಸ್ ಮಾಡೋದು ಕೂಡಾ ಕಷ್ಟದ ಕೆಲಸವೇ. ಆರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಕುತೂಹಲ ಹೆಚ್ಚಿಸಿಕೊಂಡು ಬಂದಿರುವ ಚಿತ್ರ ʻಅಥಿʼ. ಹಾಗೆ ನೋಡಿದರೆ, ಕನ್ನಡದಲ್ಲಿ ಗಂಡ-ಹೆಂಡತಿಯ ಸಂಬಂಧದ ಕುರಿತ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ʻʻಈವರೆಗೂ ಎಲ್ಲೂ, ಯಾರೂ ಹೇಳಿರದ ಹೊಸ ವಿಚಾರವೊಂದನ್ನು ನಾವಿಲ್ಲಿ ʻಅಥಿʼಯ ಮೂಲಕ ಅನಾವರಣ ಮಾಡುತ್ತಿದ್ದೇವೆʼʼ ಅನ್ನೋದು ಸ್ವತಃ ಚಿತ್ರದ ನಾಯಕನಟರೂ ಆಗಿರುವ, ನಿರ್ದೇಶಕ ಲೋಕೇಂದ್ರ ಸೂರ್ಯ ಅವರ ಮಾತು.

ʻಅಟ್ಟಯ್ಯ ವರ್ಸಸ್ ಹಂದಿ ಕಾಯೋಳುʼ ಎನ್ನುವ ಚಿತ್ರದ ಮೂಲಕ ಅಚ್ಚರಿ ಮೂಡಿಸಿದವರು ಲೋಕೇಂದ್ರ. ಆ ತನಕ ಯಾವ ಚಿತ್ರಗಳಲ್ಲೂ ನಟಿಸದ, ತಮಗೆ ಪರಿಚಿತರಿರುವವರನ್ನೇ ಪಾತ್ರಗಳನ್ನಾಗಿಸಿ, ಸಿನಿಮಾದ ಅನುಭವವೇ ಇರದವರನ್ನು ತಂತ್ರಜ್ಞರನ್ನಾಗಿಸಿ , ಕಾಡುವ ಕತೆಯ, ಚೆಂದದ ಸಿನಿಮಾ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಸಾಕಷ್ಟು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಲೋಕೇಂದ್ರ ಅವರೇ ರೂಪಿಸಿರುವ ʻಕುಗ್ರಾಮʼ ಚಿತ್ರ ಕೂಡ ಬಿಡುಗಡೆಗೆ ತಯಾರಾಗಿದೆ.


ಸದ್ಯ ಸೂರ್ಯ ಸಿನಿ ಫ್ಯಾಕ್ಟರಿಯಲ್ಲಿ ʻಅಥಿʼ ಚಿತ್ರಕ್ಕಾಗಿ ಕ್ಯೂಟ್ ಮತ್ತು ರೊಮ್ಯಾಂಟಿಕ್ ಫೋಟೋಶೂಟ್ ಮಾಡಲಾಗಿದೆ. ʻʻಫೋಟೋಗಳು ಎಲ್ಲರನ್ನೂ ಆಕರ್ಷಿಸುವುದರ ಜೊತೆಗೆ ಸಿನಿಮಾ ಕಂಟೆಂಟ್ ಹೇಳುವಂತಿರಬೇಕು ಎನ್ನುವ ಕಾರಣಕ್ಕೆ ಚಿತ್ರೀಕರಣವೆಲ್ಲಾ ಬಹುತೇಕ ಮುಕ್ತಾಯವಾಗುವ ಈ ಹಂತದಲ್ಲಿ ಫೋಟೋ ಶೂಟ್ ಮಾಡಿದ್ದೇವೆ. ಚುನಾವಣೆ ಮುಗಿಯುತ್ತಿದ್ದಂತೇ ಮೇ 13ರ ನಂತರ ʻಅಥಿʼ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುತ್ತೇವೆʼʼ ಎಂದು ಚಿತ್ರದ ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ಹೇಳಿದ್ದಾರೆ.

ನಟಿಯಾಗಿ ಸಾಕಷ್ಟು ಹೆಸರು ಮಾಡಿರುವ ಋತುಚೈತ್ರ ಅವರು ವಸ್ತ್ರವಿನ್ಯಾಸ ಮಾಡಿರುವುದು ಈ ಫೋಟೋಶೂಟ್ನ ಮತ್ತೊಂದು ವಿಶೇಷವಾಗಿದೆ.
ಇನ್ನುಳಿದಂತೆ ಸೆವೆನ್ ರಾಜ್ ಆರ್ಟ್ಸ್ ನಿರ್ಮಿಸುತ್ತಿರುವ ಅಥಿ ಐ ಲವ್ ಯುʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ.

ಎನ್. ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ ಅಂದ್ರೆ ಸಾತ್ವಿಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಪರದೆಯನ್ನು ಬಹುತೇಕ ಸಾತ್ವಿಕ ಆವರಿಸಿಕೊಂಡಿದ್ದ ಬಿಡುಗಡೆಗೆ ಕಾತರದಲ್ಲಿ ಕಾಯುತ್ತಿರುವುದಾಗಿ ಹೇಳಿದ್ದಾರೆ ಸಾತ್ವಿಕ ಹೇಳಿದ್ದಾರೆ.
ಅಲ್ಲದೆ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದ ಎರಡನೇ ಚಿತ್ರ ಇದಾಗಿದೆ.

Categories
ಸಿನಿ ಸುದ್ದಿ

ಮತ್ತೆ ಹಾಡಿತು ಕೋಗಿಲೆ! ಮೂಗನಾಗಿ ಕಾಡಿದ ಮಿತ್ರ ಈಗ ಇನ್ನಷ್ಟು ಹತ್ರ: ಇದು ರಾಯರ ಆಶೀರ್ವಾದ ಅಂದ್ರು

ಮಿತ್ರ ಚಿತ್ರರಂಗದಲ್ಲಿ ಚಿರಪರಿಚಿತ. ಯಾವುದೇ ಪಾತ್ರವಿರಲಿ ಅದ್ಭುತ ಅಭಿನಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ತಮ್ಮದೇ ಅಭಿಮಾನಿ ವರ್ಗ ಹೊಂದಿರುವ ಮಿತ್ರ, ಸಿನಿಮಾ ರಂಗದಲ್ಲಿ ಎಲ್ಲರಿಗೂ ಆತ್ಮೀಯ ಮಿತ್ರರೇ ಹೌದು.

ನಟ ಮಿತ್ರ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಹಾಕೋಕೆ ಕಾರಣ, ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ. ಹೌದು, ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಚಿತ್ರ ರಿಲೀಸ್ ಆಗಿದೆ. ಜಗ್ಗೇಶ್ ಚಿತ್ರದ ಪ್ರಮುಖ ಆಕರ್ಷಣೆ. ಈ ಚಿತ್ರದಲ್ಲಿ ಮಿತ್ರ ಅವರೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರದ ಮೂಲಕ ನೋಡುಗರ ಮನದಲ್ಲಿ ಗಟ್ಟಿಯಾಗಿ ಬೇರೂರುತ್ತಾರೆ.

ಅವರು ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದಲ್ಲಿ ‘ಮೂಗ’ನ ಪಾತ್ರದಲ್ಲಿ ಅತ್ಯದ್ಭುತವಾಗಿ ನಟಿಸಿದ್ದಾರೆ. ಇಡೀ ಚಿತ್ರದಲ್ಲಿ ನೆನಪಲ್ಲಿ ಉಳಿಯೋ ಬೆರಳೆಣಿಕೆ ಪಾತ್ರಗಳ ಪೈಕಿ ಮಿತ್ರ ಅವರು ನಿರ್ವಹಿಸಿರುವ ‘ಕೋಗಿಲೆ’ ಎಂಬ ಮೂಗನ ಪಾತ್ರವೂ ಒಂದು.

ತೆರೆ ಮೇಲೆ ಉದ್ದುದ್ದ, ಮಾಸ್ ಡೈಲಾಗ್, ಕಾಮಿಡಿ ಡೈಲಾಗ್ ಹೇಳಿ ಗುರುತಿಸಿಕೊಳ್ಳೋದೆ ಕಷ್ಟ. ಆದರೆ, ಮಾತೇ ಬಾರದ ಪಾತ್ರದ ಮೂಲಕ ಆ ಸನ್ನಿವೇಶಕ್ಕೆ ತಕ್ಕಂತೆ ಪಾತ್ರದೊಳಗೆ ತಲ್ಲೀನರಾಗಿ ನೋಡುಗರನ್ನು ನಗಿಸುವುದಿದೆಯಲ್ಲ, ಅದು ನಿಜಕ್ಕೂ ವಿಶೇಷವೇ ಸರಿ. ಮಿತ್ರ ಅದನ್ನಿಲ್ಲಿ ಸಾಧ್ಯವಾಗಿಸಿದ್ದಾರೆ.

ನಟ ಮಿತ್ರ ಅವರು ರಂಗಭೂಮಿಯ ಅಪಾರ ನಂಟು ಹೊಂದಿದವರು, ನವರಸಗಳನ್ನು ಮೈದುಂಬಿಸಿಕೊಂಡವರು. ಹಾಗಾಗಿ ಅವರು ಯಾವ ಪಾತ್ರವೇ ಇರಲಿ ಸಲೀಸಾಗಿ ಪ್ರೇಕ್ಷಕರನ್ನು ನಗಿಸುವ ಜಾಣೇಶರಾದವರು.

ರಾಘವೇಂದ್ರ ಸ್ಟೋರ್ಸ್ ಸಿನಿಮಾ ನೋಡಿದವರಿಗೆ ಮಿತ್ರ ಅವರ ಕೋಗಿಲೆ‌ ಹೆಸರಿನ ಮೂಗನ ಪಾತ್ರ ಕಾಡದೇ ಇರದು. ನಗಿಸುತ್ತಲೇ ಕೊಂಚ ಭಾವುಕತೆಗೂ ದೂಡುವ ಪಾತ್ರದಲ್ಲಿ ಸೈ ಎನಿಸಿಕೊಂಡು, ನೋಡುಗರ ಚಪ್ಪಾಳೆ, ಶಿಳ್ಳೆಗೆ ಪಾತ್ರರಾಗುತ್ತಾರೆ.

ಜಗ್ಗೇಶ್ ಮೆಚ್ಚಿದ ಮಿತ್ರ!

ಸಾಮಾನ್ಯವಾಗಿ ಕಲಾವಿದರ ನಡುವೆ, ನಟರ‌ ಮಧ್ಯೆ ಎಲ್ಲವೂ ಸರಿ ಇರಲ್ಲ. ಅದರಲ್ಲೂ ಒಬ್ಬರನ್ನು ಮೆಚ್ಚುವ ಮಾತು ದೂರ. ಆದರೆ, ನಟ ಜಗ್ಗೇಶ್ ಅವರು ಮಾತ್ರ, ಮಿತ್ರ ಅವರ ಮೂಗನ ಪಾತ್ರದ ಬಗ್ಗೆ ಕೊಂಡಾಡಿದ್ದಾರೆ. ನಿರ್ದೇಶಕರ ಆಯ್ಕೆ ಸರಿಯಾಗಿದೆ ಎಂದು ಮೆಚ್ಚಿದ್ದಾರೆ. ಮಿತ್ರ ಮೂಗನಾಗಿ ಅದ್ಭುತವಾಗಿ ನಟಿಸಿದ್ದು, ಇಪ್ಪತ್ತು ವರ್ಷವಾದರೂ ನೆನಪಲ್ಲುಳಿಯೋ ಪಾತ್ರವದು’ ಎಂದು ಮಿತ್ರ ಅವರ ಅಭಿನಯದ ಬಗ್ಗೆ ಜಗ್ಗೇಶ್ ಕೊಂಡಾಡಿದ್ದಾರೆ.

ಮಿತ್ರ ಈಗಾಗಲೇ ತಾನೊಬ್ಬ ಪರ್ಫೆಕ್ಟ್ ಪರ್ಫಾಮರ್ ಅಂತ ಸಾಬೀತುಪಡಿಸಿದ್ದಾರೆ. ‘ರಾಗ’ ಎಂಬ ಕಲರ್ ಫುಲ್‌ಸಿನಿಮಾ ಮೂಲಕ ನಿರ್ಮಾಪಕರಾಗಿ ಅಷ್ಟೇ ಅಲ್ಲ, ಅಲ್ಲಿ ಅಂಧ ಪಾತ್ರಧಾರಿಯಾಗಿಯೂ ಮಿಂಚಿದವರು. ಸರ್ಕಾರ ಗುರುತಿಸಿ ಅವಾರ್ಡ್ ಕೊಡುವಷ್ಟರ ಮಟ್ಟಿಗೆ ಮಿತ್ರ ಪಾತ್ರದಲ್ಲಿ ಮಿಂದೆದ್ದವರು. ರಾಗ ಸಿನಿಮಾದ ಪಾತ್ರ ಒಂದು ಮೈಲಿಗಲ್ಲು ಸೃಷ್ಠಿಸಿದ್ದಂತೂ ಸುಳ್ಳಲ್ಲ. ಈಗ ಮೂಗನಾಗಿ ಅಭಿನಯಿಸಿರುವ ಮಿತ್ರ ಮತ್ತೆ ಪುಟಿದೆದ್ದಿದ್ದಾರೆಂದರೆ ಅತಿಶಯೋಕ್ತಿಯೇನಲ್ಲ.

ರಾಯರೇ ಆಶೀರ್ವದಿಸಿದರು!

ರಾಗ ಸಿನಿಮಾ ಬಳಿಕ ಮಿತ್ರ ಅವರ ಅಭಿನಯದ ಸಿನಿಮಾಗಳು ಕ್ರಮೇಣ ಕಡಿಮೆಯಾದವು. ಕಡಿಮೆ ಆದವು ಎನ್ನುವುದಕ್ಕಿಂತ ಅವರು ಚ್ಯೂಸಿಯಾದರು. ಕಥೆ ಹಾಗು ಗಟ್ಟಿ ಪಾತ್ರದತ್ತ ಗಮನ ಹರಿಸಿದರು. ಗುಣಮಟ್ಟದ ಸಿನಿಮಾ ಮೂಲಕ ಕಾಣಿಸಿಕೊಂಡರೂ ಎಲ್ಲೋ ಒಂದು ಕಡೆ ಹೇಳಿಕೊಳ್ಳುವ ಯಶಸ್ಸು ಸಿಗಲಿಲ್ಲ. ಒಂದು ಕಡೆ ರಾಗ ಎಂಬ ಕ್ಲಾಸಿಕ್ ಸಿನಿಮಾ‌ ನಿರ್ಮಾಣ‌ ಮಾಡಿ ಭೇಷ್ ಎನಿಸಿಕೊಂಡರೂ, ಹಾಕಿದ ಹಣ ಹಿಂದಿರುಗಲಿಲ್ಲ.

ಮಿತ್ರ ಅವರು ಸಿನಿಮಾ‌ ಮೇಲಿನ ಪ್ರೀತಿಗಾಗಿ ಕೋಟಿ ಕೋಟಿ ಹಾಕಿ ರಾಗ ಸೃಷ್ಟಿಸಿದರೂ, ಬದುಕಲ್ಲಿ ಅದು ಅನುರಾಗ ಆಗಲಿಲ್ಲ. ಅಲ್ಲಿಂದ ಬರೀ ಭಾವುಕ ರಾಗವೇ ಕೇಳತೊಡಗಿತು. ಎಲ್ಲಾ ಕಲಾವಿದರಂತೆ ಮಿತ್ರ ಏಳು-ಬೀಳು ಕಂಡವರು. ಒಂದೊಳ್ಳೆಯ ಅವಕಾಶ ಎದುರು ನೋಡುತ್ತಿದ್ದ ಅವರಿಗೆ ಸ್ವತಃ ರಾಯರೇ ಆಶೀರ್ವಾದ ಮಾಡಿದ್ದಾರೆ.

ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲೊಂದು ವಿಶೇಷ ಪಾತ್ರ ಅವರ ಪಾಲಾಯಿತು. ಸಿಕ್ಕ ಅವಕಾಶವನ್ನು ಮಿತ್ರ ಮಿಸ್ ಮಾಡಿಕೊಳ್ಳಲಿಲ್ಲ. ಮೂಗನ ಪಾತ್ರದ ಮೂಲಕ ಅವರು ಮತ್ತೆ ಸ್ಟಡಿಯಾಗಿದ್ದಾರೆ. ಎಂಥಾ ಪಾತ್ರಕ್ಕೂ ಸೈ ಅಂತ ಮತ್ತೆ ತೋರಿಸಿದ್ದಾರೆ. ಸದ್ಯ ಚಿತ್ರಕ್ಕೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಜಗ್ಗೇಶ್ ಅಭಿನಯ ಜೊತೆ ಮಿತ್ರ ಅವರ ನಟನೆಯನ್ನೂ ಜನರು ಗುರುತಿಸುತ್ತಿದ್ದಾರೆ. ತೆರೆ ಮೇಲೆ ನಗಿಸುತ್ತಿದ್ದ ಮಿತ್ರ ಅವರ ಮೊಗದಲ್ಲೀಗ ಬೊಗೆದಷ್ಟೂ ಮಂದಹಾಸ ಮೂಡುತ್ತಿದೆ.

error: Content is protected !!