ಮಿತ್ರ ಚಿತ್ರರಂಗದಲ್ಲಿ ಚಿರಪರಿಚಿತ. ಯಾವುದೇ ಪಾತ್ರವಿರಲಿ ಅದ್ಭುತ ಅಭಿನಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ತಮ್ಮದೇ ಅಭಿಮಾನಿ ವರ್ಗ ಹೊಂದಿರುವ ಮಿತ್ರ, ಸಿನಿಮಾ ರಂಗದಲ್ಲಿ ಎಲ್ಲರಿಗೂ ಆತ್ಮೀಯ ಮಿತ್ರರೇ ಹೌದು.
ನಟ ಮಿತ್ರ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಹಾಕೋಕೆ ಕಾರಣ, ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ. ಹೌದು, ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಚಿತ್ರ ರಿಲೀಸ್ ಆಗಿದೆ. ಜಗ್ಗೇಶ್ ಚಿತ್ರದ ಪ್ರಮುಖ ಆಕರ್ಷಣೆ. ಈ ಚಿತ್ರದಲ್ಲಿ ಮಿತ್ರ ಅವರೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರದ ಮೂಲಕ ನೋಡುಗರ ಮನದಲ್ಲಿ ಗಟ್ಟಿಯಾಗಿ ಬೇರೂರುತ್ತಾರೆ.
ಅವರು ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದಲ್ಲಿ ‘ಮೂಗ’ನ ಪಾತ್ರದಲ್ಲಿ ಅತ್ಯದ್ಭುತವಾಗಿ ನಟಿಸಿದ್ದಾರೆ. ಇಡೀ ಚಿತ್ರದಲ್ಲಿ ನೆನಪಲ್ಲಿ ಉಳಿಯೋ ಬೆರಳೆಣಿಕೆ ಪಾತ್ರಗಳ ಪೈಕಿ ಮಿತ್ರ ಅವರು ನಿರ್ವಹಿಸಿರುವ ‘ಕೋಗಿಲೆ’ ಎಂಬ ಮೂಗನ ಪಾತ್ರವೂ ಒಂದು.
ತೆರೆ ಮೇಲೆ ಉದ್ದುದ್ದ, ಮಾಸ್ ಡೈಲಾಗ್, ಕಾಮಿಡಿ ಡೈಲಾಗ್ ಹೇಳಿ ಗುರುತಿಸಿಕೊಳ್ಳೋದೆ ಕಷ್ಟ. ಆದರೆ, ಮಾತೇ ಬಾರದ ಪಾತ್ರದ ಮೂಲಕ ಆ ಸನ್ನಿವೇಶಕ್ಕೆ ತಕ್ಕಂತೆ ಪಾತ್ರದೊಳಗೆ ತಲ್ಲೀನರಾಗಿ ನೋಡುಗರನ್ನು ನಗಿಸುವುದಿದೆಯಲ್ಲ, ಅದು ನಿಜಕ್ಕೂ ವಿಶೇಷವೇ ಸರಿ. ಮಿತ್ರ ಅದನ್ನಿಲ್ಲಿ ಸಾಧ್ಯವಾಗಿಸಿದ್ದಾರೆ.
ನಟ ಮಿತ್ರ ಅವರು ರಂಗಭೂಮಿಯ ಅಪಾರ ನಂಟು ಹೊಂದಿದವರು, ನವರಸಗಳನ್ನು ಮೈದುಂಬಿಸಿಕೊಂಡವರು. ಹಾಗಾಗಿ ಅವರು ಯಾವ ಪಾತ್ರವೇ ಇರಲಿ ಸಲೀಸಾಗಿ ಪ್ರೇಕ್ಷಕರನ್ನು ನಗಿಸುವ ಜಾಣೇಶರಾದವರು.
ರಾಘವೇಂದ್ರ ಸ್ಟೋರ್ಸ್ ಸಿನಿಮಾ ನೋಡಿದವರಿಗೆ ಮಿತ್ರ ಅವರ ಕೋಗಿಲೆ ಹೆಸರಿನ ಮೂಗನ ಪಾತ್ರ ಕಾಡದೇ ಇರದು. ನಗಿಸುತ್ತಲೇ ಕೊಂಚ ಭಾವುಕತೆಗೂ ದೂಡುವ ಪಾತ್ರದಲ್ಲಿ ಸೈ ಎನಿಸಿಕೊಂಡು, ನೋಡುಗರ ಚಪ್ಪಾಳೆ, ಶಿಳ್ಳೆಗೆ ಪಾತ್ರರಾಗುತ್ತಾರೆ.
ಜಗ್ಗೇಶ್ ಮೆಚ್ಚಿದ ಮಿತ್ರ!
ಸಾಮಾನ್ಯವಾಗಿ ಕಲಾವಿದರ ನಡುವೆ, ನಟರ ಮಧ್ಯೆ ಎಲ್ಲವೂ ಸರಿ ಇರಲ್ಲ. ಅದರಲ್ಲೂ ಒಬ್ಬರನ್ನು ಮೆಚ್ಚುವ ಮಾತು ದೂರ. ಆದರೆ, ನಟ ಜಗ್ಗೇಶ್ ಅವರು ಮಾತ್ರ, ಮಿತ್ರ ಅವರ ಮೂಗನ ಪಾತ್ರದ ಬಗ್ಗೆ ಕೊಂಡಾಡಿದ್ದಾರೆ. ನಿರ್ದೇಶಕರ ಆಯ್ಕೆ ಸರಿಯಾಗಿದೆ ಎಂದು ಮೆಚ್ಚಿದ್ದಾರೆ. ಮಿತ್ರ ಮೂಗನಾಗಿ ಅದ್ಭುತವಾಗಿ ನಟಿಸಿದ್ದು, ಇಪ್ಪತ್ತು ವರ್ಷವಾದರೂ ನೆನಪಲ್ಲುಳಿಯೋ ಪಾತ್ರವದು’ ಎಂದು ಮಿತ್ರ ಅವರ ಅಭಿನಯದ ಬಗ್ಗೆ ಜಗ್ಗೇಶ್ ಕೊಂಡಾಡಿದ್ದಾರೆ.
ಮಿತ್ರ ಈಗಾಗಲೇ ತಾನೊಬ್ಬ ಪರ್ಫೆಕ್ಟ್ ಪರ್ಫಾಮರ್ ಅಂತ ಸಾಬೀತುಪಡಿಸಿದ್ದಾರೆ. ‘ರಾಗ’ ಎಂಬ ಕಲರ್ ಫುಲ್‌ಸಿನಿಮಾ ಮೂಲಕ ನಿರ್ಮಾಪಕರಾಗಿ ಅಷ್ಟೇ ಅಲ್ಲ, ಅಲ್ಲಿ ಅಂಧ ಪಾತ್ರಧಾರಿಯಾಗಿಯೂ ಮಿಂಚಿದವರು. ಸರ್ಕಾರ ಗುರುತಿಸಿ ಅವಾರ್ಡ್ ಕೊಡುವಷ್ಟರ ಮಟ್ಟಿಗೆ ಮಿತ್ರ ಪಾತ್ರದಲ್ಲಿ ಮಿಂದೆದ್ದವರು. ರಾಗ ಸಿನಿಮಾದ ಪಾತ್ರ ಒಂದು ಮೈಲಿಗಲ್ಲು ಸೃಷ್ಠಿಸಿದ್ದಂತೂ ಸುಳ್ಳಲ್ಲ. ಈಗ ಮೂಗನಾಗಿ ಅಭಿನಯಿಸಿರುವ ಮಿತ್ರ ಮತ್ತೆ ಪುಟಿದೆದ್ದಿದ್ದಾರೆಂದರೆ ಅತಿಶಯೋಕ್ತಿಯೇನಲ್ಲ.
ರಾಯರೇ ಆಶೀರ್ವದಿಸಿದರು!
ರಾಗ ಸಿನಿಮಾ ಬಳಿಕ ಮಿತ್ರ ಅವರ ಅಭಿನಯದ ಸಿನಿಮಾಗಳು ಕ್ರಮೇಣ ಕಡಿಮೆಯಾದವು. ಕಡಿಮೆ ಆದವು ಎನ್ನುವುದಕ್ಕಿಂತ ಅವರು ಚ್ಯೂಸಿಯಾದರು. ಕಥೆ ಹಾಗು ಗಟ್ಟಿ ಪಾತ್ರದತ್ತ ಗಮನ ಹರಿಸಿದರು. ಗುಣಮಟ್ಟದ ಸಿನಿಮಾ ಮೂಲಕ ಕಾಣಿಸಿಕೊಂಡರೂ ಎಲ್ಲೋ ಒಂದು ಕಡೆ ಹೇಳಿಕೊಳ್ಳುವ ಯಶಸ್ಸು ಸಿಗಲಿಲ್ಲ. ಒಂದು ಕಡೆ ರಾಗ ಎಂಬ ಕ್ಲಾಸಿಕ್ ಸಿನಿಮಾ ನಿರ್ಮಾಣ ಮಾಡಿ ಭೇಷ್ ಎನಿಸಿಕೊಂಡರೂ, ಹಾಕಿದ ಹಣ ಹಿಂದಿರುಗಲಿಲ್ಲ.
ಮಿತ್ರ ಅವರು ಸಿನಿಮಾ ಮೇಲಿನ ಪ್ರೀತಿಗಾಗಿ ಕೋಟಿ ಕೋಟಿ ಹಾಕಿ ರಾಗ ಸೃಷ್ಟಿಸಿದರೂ, ಬದುಕಲ್ಲಿ ಅದು ಅನುರಾಗ ಆಗಲಿಲ್ಲ. ಅಲ್ಲಿಂದ ಬರೀ ಭಾವುಕ ರಾಗವೇ ಕೇಳತೊಡಗಿತು. ಎಲ್ಲಾ ಕಲಾವಿದರಂತೆ ಮಿತ್ರ ಏಳು-ಬೀಳು ಕಂಡವರು. ಒಂದೊಳ್ಳೆಯ ಅವಕಾಶ ಎದುರು ನೋಡುತ್ತಿದ್ದ ಅವರಿಗೆ ಸ್ವತಃ ರಾಯರೇ ಆಶೀರ್ವಾದ ಮಾಡಿದ್ದಾರೆ.
ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲೊಂದು ವಿಶೇಷ ಪಾತ್ರ ಅವರ ಪಾಲಾಯಿತು. ಸಿಕ್ಕ ಅವಕಾಶವನ್ನು ಮಿತ್ರ ಮಿಸ್ ಮಾಡಿಕೊಳ್ಳಲಿಲ್ಲ. ಮೂಗನ ಪಾತ್ರದ ಮೂಲಕ ಅವರು ಮತ್ತೆ ಸ್ಟಡಿಯಾಗಿದ್ದಾರೆ. ಎಂಥಾ ಪಾತ್ರಕ್ಕೂ ಸೈ ಅಂತ ಮತ್ತೆ ತೋರಿಸಿದ್ದಾರೆ. ಸದ್ಯ ಚಿತ್ರಕ್ಕೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಜಗ್ಗೇಶ್ ಅಭಿನಯ ಜೊತೆ ಮಿತ್ರ ಅವರ ನಟನೆಯನ್ನೂ ಜನರು ಗುರುತಿಸುತ್ತಿದ್ದಾರೆ. ತೆರೆ ಮೇಲೆ ನಗಿಸುತ್ತಿದ್ದ ಮಿತ್ರ ಅವರ ಮೊಗದಲ್ಲೀಗ ಬೊಗೆದಷ್ಟೂ ಮಂದಹಾಸ ಮೂಡುತ್ತಿದೆ.