ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಯುವ ಸಿನಿಮೋತ್ಸಾಹಿಗಳಿಗೆ ಸದಾ ಬೆನ್ನು ತಟ್ಟುತ್ತಾ ಮುಂದೆ ಸಾಗುವ ಕನ್ನಡ ಚಿತ್ರರಂಗದ ಮಾಸ್ ಲೀಡರ್. ಹೊಸ ಚಿತ್ರತಂಡಕ್ಕೆ ಬಲವಾಗಿ ನಿಲ್ಲುವ ಶಿವಣ್ಣನ ಹಾದಿಯಲ್ಲಿ ಮಗಳು ನಿವೇದಿತಾ ಕೂಡ ಹೆಜ್ಜೆ ಇಟ್ಟಿದ್ದಾರೆ. ಹೇಳಿ ಕೇಳಿ ಕಲೆ ದೊಡ್ಮನೆ ಕುಟುಂಬದಲ್ಲಿ ರಕ್ತಗತವಾಗಿ ಬಂದಿದೆ. ಇಡೀ ಕುಟುಂಬ ಕಲಾಸೇವೆಯಲ್ಲಿ ನಿರತರಾಗಿದ್ದಾರೆ. ಅಂದು ಅಣ್ಣಾವ್ರು ತೆರೆಮೇಲೆ ರಾರಾಜಿಸುತ್ತಿದ್ದರೆ, ತೆರೆಹಿಂದೆ ಅವರ ಬೆನ್ನೆಲುಬಾಗಿ ನಿರ್ಮಾಣ ಸಂಸ್ಥೆಯಡಿ ದುಡಿಯುತ್ತಿದ್ದವರು ಪಾರ್ವತಮ್ಪೂ. ಪೂರ್ಣಿಮಾ ಎಂಟರ್ ಪ್ರೈಸನ್ ನಡಿ ಪಾರ್ವತಮ್ಮ ಕನ್ನಡ ಚಿತ್ರರಂಗಕ್ಕೆ ಹಲವ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಅದೇ ಲೆಗಸಿ ಈಗ ಮುಂದುವರೆದಿದೆ. ಗೀತಾ ಪಿಕ್ಚರ್ಸ್ ನಡಿ ಗೀತಾ ಶಿವರಾಜ್ ಕುಮಾರ್, ಪಿಆರ್ ಕೆ ಪ್ರೊಡಕ್ಷನ್ ನಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಪಕರಾಗಿ ಚಿತ್ರರಂಗಕ್ಕೆ ದುಡಿಯುತ್ತಿದ್ದಾರೆ. ಈಗ ಶಿವಣ್ಣನ ದ್ವೀತಿಯ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ತಮ್ಮದೇ ಒಡೆತನದ ನಿರ್ಮಾಣ ಸಂಸ್ಥೆಯಡಿ ಚೊಚ್ಚಲ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ.
ಶ್ರೀ ಮುತ್ತು ಸಿನಿ ಸರ್ವಿಸ್..ನಿವೇದಿತಾ ಕನಸಿನ ಕೂಸು..ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ನೀಡಲೆಂದು ಸೃಷ್ಟಿಯಾಗಿರುವ ನಿರ್ಮಾಣ ಸಂಸ್ಥೆ..ಈ ಸಂಸ್ಥೆಯಡಿ ಈಗಾಗಲೇ ಧಾರಾವಾಹಿ ಹಾಗೂ ಮೂರು ವೆಬ್ ಸೀರೀಸ್ ಗಳು ಹೊರಬಂದಿವೆ. ಈಗ ಇದೇ ಬ್ಯಾನರ್ ನಡಿ ನಿವೇದಿತಾ ಶಿವರಾಜ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೊಂಬಿಸಿಲ ಕಿರಣಗಳಲ್ಲಿ ತಂಗಾಳಿಯೊಂದು ಮೂಡಿದೆ, ಹುಟ್ಟು ಸಾವಿನ ಸ್ವಾರಸ್ಯವನ್ನು ಅನ್ವೇಷಿಸಲು ಹೊರಟಿದೆ. ಹೊಸ ಪೋಸ್ಟರ್ ಮೂಲಕ ತಮ್ಮ ಹೊಸ ಹೆಜ್ಜೆಯ ಬಗ್ಗೆ ತಿಳಿಸಿದ್ದಾರೆ.
ನಿವೇದಿತಾ ಶಿವರಾಜ್ ಕುಮಾರ್ ಒಡೆತನದ ಶ್ರೀ ಮುತ್ತು ಸಿನಿ ಸರ್ವಿಸ್ ನಡಿ ಮೂಡಿ ಬರ್ತಿರುವ ಚೊಚ್ಚಲ ಸಿನಿಮಾಗೆ ವಂಶಿ ಸಾರಥಿ.. ಒಂದಷ್ಟು ಕಿರುಚಿತ್ರ ನಿರ್ದೇಶಿಸಿ, PRK ನಿರ್ಮಾಣ ಸಂಸ್ಥೆಯಡಿ ಬಂದ ಮಾಯಾಬಜಾರ್ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ, ಇತ್ತೀಚೆಗೆ ತೆರೆಗೆ ಬಂದ ಐದು ಕಥೆಗಳ ಪೆಂಟಗನ್ ಸಿನಿಮಾದ ಕಿರಣ್ ಕುಮಾರ್ ನಿರ್ದೇಶಕದ ಕಥೆಯಲ್ಲಿ ಪ್ರಮುಖ ಪಾತ್ರವಾಗಿ ನಟಿಸಿದ್ದ ವಂಶಿ ನಿವೇದಿತಾ ಬಂಡವಾಳ ಹಾಕುತ್ತಿರುವ ಮೊದಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ನಾಯಕನಾಗಿ ಚಿತ್ರರಂಗಕ್ಕೆ ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದಾರೆ.
ಲೈಫ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಾನ ದಾರಿಯಲಿ ಸಿನಿಮಾದ ಛಾಯಾಗ್ರಹಕ ಅಭಿಲಾಷ್ ಕಲ್ಲಟ್ಟಿ ಕ್ಯಾಮೆರಾ ಸೆರೆಹಿಡಿಯಲಿದ್ದು, ಚರಣ್ ರಾಜ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಜಯ್ ರಾಮ್ ಕೋ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.