Categories
ಸಿನಿ ಸುದ್ದಿ

ಲವ್ ಮಿ ಆರ್ ಹೇಟ್ ಮಿ ಸಿನಿಮಾಗೆ ಶೂಟಿಂಗ್ ಮುಕ್ತಾಯ: ಸೆಪ್ಟೆಂಬರ್ 29ಕ್ಕೆ ರಿಲೀಸ್

ನಾಯಕ ಡಾರ್ಲಿಂಗ್ ಕೃಷ್ಣ ಅವರ ಹುಟ್ಟುಹಬ್ಬಕ್ಕೆ. “ಲವ್ ಮೀ ಆರ್ ಹೇಟ್ ಮೀ” ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಬಹ ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 29 ರಂದು ಬಿಡುಗಡೆಯಾಗಲಿದೆ.

ದೀಪಕ್ ಗಂಗಾಧರ್ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ದೀಪಕ್ ಗಂಗಾಧರ್ ಮೂವೀಸ್ ಲಾಂಛನದಲ್ಲಿ ದೀಪಕ ಗಂಗಾಧರ್ ಅವರ ಜೊತೆಗೆ ಸುನೀಲ್ ಬಿ.ಎನ್, ಮದನ್ ಗಂಗಾಧರ್, ಚಂದನ್ ಜೆ ಹಾಗೂ ನಾಗರಾಜ್ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಲವ್ ಸ್ಟೋರಿ ಜಾನರ್ ನ ಈ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.

ಐದು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀನಿಧರ್ ಸಂಭ್ರಮ್ – ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.

ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಮುರಳಿ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್, ರಘು ನಡವಳ್ಳಿ ಹಾಗೂ ರಘು ಸಂಭಾಷಣೆ ಬರೆದಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ರಚಿತಾರಾಮ್ ನಟಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ, ನಂದಿನಿ, ರಾಕೇಶ್ ಪೂಜಾರಿ, ದೀಪಿಕಾ, ಪ್ರವೀಣ್, ಸುಂದರ್ ವೀಣಾ, ರಮೇಶ್ ಭಟ್ ಮುಂತಾದವರು “ಲವ್ ಮೀ ಆರ್ ಹೇಟ್ ಮೀ” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಟೋಬಿ ಇದು ರಾಜ್ ಬಿ ಶೆಟ್ಟಿ ಚಿತ್ರ: ಆಗಸ್ಟ್ 25ಕ್ಕೆ ರಿಲೀಸ್

ಮೊದಲಿನಿಂದಲೂ ತಮ್ಮ ವಿಭಿನ್ನಪಾತ್ರಗಳ ಮೂಲಕ ಜನರ ಮನ ಗೆದ್ದಿರುವ ರಾಜ್ ಬಿ ಶೆಟ್ಟಿ ನಾಯಕರಾಗಿ ನಟಿಸಿರುವ “ಟೋಬಿ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ವಿಭಿನ್ನ ಕಥೆಯ ಈ ಚಿತ್ರ ಆಗಸ್ಟ್ 25 ರಂದು ಬಿಡುಗಡೆಯಾಗಲಿದೆ.‌ ಪ್ರತಿಷ್ಠಿತ ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದೆ. “ಟೋಬಿ” ಚಿತ್ರಕ್ಕೆ “ಮಾರಿ ಮಾರಿ ..ಮಾರಿಗೆ ದಾರಿ” ಎಂಬ ಅಡಿಬರಹವಿದೆ.

ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ.

ರಾಜ್ ಬಿ ಶೆಟ್ಟಿ ಈವರೆಗಿನ ಚಿತ್ರಗಳ ಪೈಕಿ “ಟೋಬಿ” ಬಿಗ್ ಬಜೆಟ್ ನ ಚಿತ್ರವಾಗಿದೆ. ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಮೂಲಕಥೆ ಟಿ.ಕೆ ದಯಾನಂದ್ ಅವರದು. ರಾಜ್ ಬಿ. ಶೆಟ್ಟಿ ರಚೆನೆ ಹಾಗೂ ಬಾಸಿಲ್ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ – ಸಂಕಲನ ಹಾಗೂ ಅರ್ಜುನ್ ರಾಜ್ – ರಾಜಶೇಖರ್ ಅವರ ಸಾಹಸ ನಿರ್ದೇಶನ “ಟೋಬಿ” ಚಿತ್ರಕಿದ್ದು, ರಾಜ್ ಬಿ ಶೆಟ್ಟಿ, ಸಂಯುಕ್ತ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ದುಬೈನಲ್ಲಿ ಡಾ. ರಾಜ್ ಕಪ್ ಸೀಸನ್ 6: ಹರಾಜು ಪ್ರಕ್ರಿಯೆ ಶುರು- ಅಶ್ವಿನಿ ಪುನೀತ್ ವಿಶೇಷ ಅತಿಥಿ

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ ಶುರುವಾಗ್ತಿದೆ. ಸಿಸಿಎಲ್ ಕ್ರಿಕೆಟ್ ಲೀಗ್ ಬೆನ್ನಲ್ಲೀಗ ಡಾ.ರಾಜ್ ಕಪ್ ಸೀಸನ್ 6ಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದಕ್ಕಾಗಿ ತಾರೆಯರು ತಯಾರಿ ಆರಂಭಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದ್ದು, ಇದೇ ಜೂನ್ 17 ರಂದು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಆಯೋಜಕರಾದ ರಾಜೇಶ್ ಬ್ರಹ್ಮಾವರ, ಅನಿರುಧ್ ಮಣಿಕಾಂತ್ ಕದ್ರಿ, ಸಿಂಪಲ್ ಸುನಿ, ರವಿಶಂಕರ್ ಗೌಡ, ಜೇಮ್ಸ್ ಚೇತನ್, ಪವನ್ ಒಡೆಯರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.

ರಾಜ್ ಕಪ್ ಆಯೋಜಕರಾದ ರಾಜೇಶ್ ಬ್ರಹ್ಮಾವರ ಮಾತನಾಡಿ, ಇದೇ 17ಕ್ಕೆ ದುಬೈನಲ್ಲಿ ರಾಜ್ ಕಪ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ಬಾರಿ 8 ತಂಡ ಇತ್ತು. ಈ ಬಾರಿ 12 ತಂಡಗಳಾಗಿವೆ. 1000ಕ್ಕೂ ಹೆಚ್ಚು ಅಪ್ಲೀಕೇಷನ್ ಬಂದಿತ್ತು. ಅವುಗಳಲ್ಲಿ ರೂಲ್ಸ್ ಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ. 12 ತಂಡಗಳಿಗೆ 12 ಕ್ಯಾಪ್ಟನ್, 12 ವೈಸ್ ಕ್ಯಾಪ್ಟನ್, ಸ್ಟಾರ್ ಕ್ಯಾಪ್ಟನ್ ಇರಲಿದ್ದಾರೆ. ರಾಜ್ ಕಪ್ ಸೀಸನ್ 6ನ್ನು ಆರು ದೇಶಗಳಲ್ಲಿ ಮಾಡುವ ಪ್ಲಾನ್ ನಡೆದಿದೆ. ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ಪಂದ್ಯ ನಡೆಯಲಿವೆ. ಇನ್ನೊಂದು ದೇಶ ಬಾಕಿ ಉಳಿದಿದೆ. ದುಬೈನಲ್ಲಿ ನಡೆಯುವ ಆಟಗಾರರ ಹರಾಜಿನಲ್ಲಿ ಮುಖ್ಯ ಅತಿಥಿಯಾಗಿ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ನಟ ಅನಿರುದ್ಧ್ ಮಾತನಾಡಿ, ಡಾ.ರಾಜ್ ಕಪ್ ಹೆಸರಲ್ಲೇ ಸಕಾರಾತ್ಮಕತೆ ಇದೆ. ಆ ಒಂದು ವ್ಯಕ್ತಿಗೆ ಮಹಾನ್ ಕಲಾವಿದರಿಗೆ ಅವ್ರ ಹೆಸರಲ್ಲಿ ಅವರ ಸ್ಮಾರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರುವುದು ನಿಜಕ್ಕೂ ಸಂತೋಷ. ಅದರಲ್ಲಿ ನಾನು ಭಾಗಿಯಾಗಿದ್ದು, ರಾಜೇಶ್ ಅವಕಾಶ ಕಲ್ಪಿಸಿಕೊಟ್ಟಿದ್ದು, ನನಗೆ ವೈಯಕ್ತಿಕವಾಗಿ ಬಹಳ ಸಂತೋಷವಾಗಿದೆ. ರಾಜೇಶ್ ನನಗೆ ಆತ್ಮೀಯರು. ನನ್ನ ಮೊದಲ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ. ಕ್ರಿಕೆಟ್ ಅನ್ನೋದು ನಿಮಿತ್ತ ಅಷ್ಟೇ. ನಮ್ಮ ಕನ್ನಡ ಚಿತ್ರರಂಗದ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಬಾಂಧವ್ಯ ಇದೆ ಅನ್ನೋದನ್ನು ತೋರಿಸಿಕೊಡುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲಿ ಎಂದರು.

ಡಾ. ರಾಜ್ ಕಪ್ ಸೀಸನ್ 6 ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಮ್ಯಾಚ್ ಗಳು ನಡೆಯಲಿದೆ. ಡಾಲಿ ಧನಂಜಯ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಾಲ್ಗೊಳ್ಳಲಿವೆ. ಇನ್ನು, ರಾಜ್ ಕಪ್ ಸೀಸನ್ 6ರ ಲೀಗ್ ಮ್ಯಾಚ್ ಗಳು ವಿದೇಶದಲ್ಲಿ ನಡೆಯಲಿದೆ. ಈ ಬಾರಿ ಲೀಗ್ ಪಂದ್ಯಗಳು ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ ಬ್ಯಾಂಕಾಕ್ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮಹತ್ವದ ರಾಜ್ ಕಫ್ ಟೂರ್ನಿಗಾಗಿ ಸ್ಯಾಂಡಲ್ ವುಡ್ ತಾರೆಯರು, ತಂತ್ರಜ್ಞರು, ರಾಜಕೀಯ, ಮಾಧ್ಯಮದವರು ಭಾಗಿಯಾಗಲಿದ್ದಾರೆ.

Categories
ಸಿನಿ ಸುದ್ದಿ

ಲವ್ ಲಿ ಹಾಡಿಗೆ ಜೈ ಅಂದ ಪ್ರೇಕ್ಷಕ: ಟೈಟಲ್ ಸಾಂಗ್ ರಿಲೀಸ್ ಮಾಡಿದ ತಾರೆಯರು

ವಸಿಷ್ಠ ಸಿಂಹ ನಾಯಕರಾಗಿ ಅಭಿನಯಿಸಿರುವ ‘ಲವ್ ಲಿ’ ಚಿತ್ರದ ಟೈಟಲ್ ಹಾಡು ಇತ್ತೀಚಿಗೆ ಬಿಡುಗಡೆಯಾಗಿದ್ದು, ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವಿಶೇಷವಾದ ಈ ಗೀತೆಯನ್ನು ಬಿಡುಗಡೆ ಮಾಡಲು ಮುಖ್ಯ ಅಥಿತಿಗಳಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ‘ನೆನಪಿರಲಿ’ ಪ್ರೇಮ್, ಪ್ರಿಯಂಕಾ ಉಪೇಂದ್ರ ಹಾಗೂ ಹರಿಪ್ರಿಯ ಆಗಮಿಸಿದ್ದರು. ಅಭುವನಾಸ್ ಕ್ರೀಯೆಷನ್ಸ್ ಬ್ಯಾನರ್ ನಲ್ಲಿ ರವೀಂದ್ರ ಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಕಥೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ ಯುವ ಪ್ರತಿಭೆ ಚೇತನ್ ಕೇಶವ್.

‘ನಿರ್ಮಾಪಕರ ಸಹಕಾರದಿಂದ ಸಿನಿಮಾ ಇಷ್ಟು ಚೆನ್ನಾಗಿ ಬಂದಿದೆ. ಸಾಂಗ್ ನಂತೆ ಸಿನಿಮಾ ಕೂಡ ಕಲರ್ ಫುಲ್ ಆಗಿ ಬಂದಿದೆ. ಪ್ರೀತಿಯಲ್ಲಿ ಎನೆಲ್ಲಾ ಇರುತ್ತೆ ಎಂಬುದು ಸಿನಿಮಾ. ಮೊದಲ ಭಾಗದಲ್ಲಿ ರೋಮ್ಯಾಂಟಿಕ್ ಕಥೆ ಇದ್ದರೆ, ದ್ವಿತೀಯಾರ್ಧದಲ್ಲಿ ಕಂಟೆಂಟ್ ಬಗ್ಗೆ ಹೇಳಲಾಗಿದೆ. ನಾನು 9 ವರ್ಷದಿಂದ ಚಿತ್ರರಂಗದಲ್ಲಿದ್ದೀನಿ. ನಿರ್ದೇಶಕ ನರ್ತನ್ ಜೊತೆ ‘ಮಫ್ತಿ’ ಚಿತ್ರಕ್ಕೆ ಕೆಲಸ ಮಾಡಿದ್ದೇನೆ. ಸ್ಕೂಲ್ ದಿನಗಳಿಂದ ನನಗೆ ಸಿನಿಮಾ ಮಾಡುವ ಆಸೆ. ಉಪೇಂದ್ರ, ರವಿಚಂದ್ರನ್ ಅವರು ನನಗೆ ಸ್ಪೂರ್ತಿ. ಆದರೆ ನಾನು ಹೆಚ್ಚಾಗಿ ಆ್ಯಕ್ಷನ್ ಸಿನಿಮಾಗೆ ಕೆಲಸ ಮಾಡಿದ್ದೇನೆ. ಹಾಗಾಗಿ ಈ ಚಿತ್ರದಲ್ಲಿ ಮಾಸ್ , ಕ್ಲಾಸ್ ಎರಡನ್ನು ಬಳಸಿದ್ದೇನೆ.

ಚಿತ್ರದಲ್ಲಿ ಸೋಷಿಯಲ್ ಮೆಸೇಜ್ ಕೂಡ ಇದೆ. ಮಂಗಳೂರು, ಬೆಂಗಳೂರು ಉಡುಪಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಲಂಡನ್ ನಲ್ಲಿ ಒಂದು ಸಾಂಗ್ ಶೂಟಿಂಗ್ ಮಾಡಲು ಯೋಜನೆ ಹಾಕಲಾಗಿದೆ. ರೌಡಿಸಮ್, ಲವ್, ಡ್ರಾಮಾ ಹಾಗೂ ಫ್ಯಾಮಿಲಿ ಜಾನರ್ ನಲ್ಲಿ ಸಿನಿಮಾ ಸಾಗುತ್ತದೆ. ಪ್ರೀತಿ, ನಂಬಿಕೆ ಮೇಲೆ ಸಂಬಂಧಗಳು ಮುಖ್ಯ. ಅವುಗಳನ್ನು ಹೇಗೆ ಉಳಿಸುಕೊಳ್ಳಬೇಕು? ಎಂಬುದು ಕಥೆಯಲ್ಲಿ ಇದೆ. ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ. ಚಿತ್ರದಲ್ಲಿ ಮೂರು ಆ್ಯಕ್ಷನ್, ನಾಲ್ಕು ಹಾಡುಗಳಿದೆ’ ಎಂದು ನಿರ್ದೇಶಕ ಚೇತನ್ ಕೇಶವ್ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ನಾಯಕ ವಸಿಷ್ಠ ಸಿಂಹ ಮಾತನಾಡಿ, ‘ನನ್ನನ್ನು ತುಂಬಾ ಕಾಡಿದಂತಹ ಸಿನಿಮಾ ಇದು. ಈಗ ಈ ಹಾಡಿನಿಂದ ಪ್ರಮೋಷನ್ ಶುರು ಮಾಡಿದ್ದು, ಆಗಸ್ಟ್ ನಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಜನೆ ಇದೆ. ಇದು ಸುಂದರ ಪ್ರೇಮಕಥೆಯ ಚಿತ್ರ. ಕಥೆ ಕೇಳಿದಾಗ ತುಂಬಾ ಇಷ್ಟ ಆಯ್ತು. ನಿರ್ಮಾಪಕರು ಸೇರಿದಂತೆ ಚಿತ್ರತಂಡದ ಸಹಕಾರಕ್ಕೆ ಧನ್ಯವಾದ ಎಂದರು.

ನಂತರ ನಾಯಕಿ ಸ್ಟೇಪಿ ಪಟೇಲ್ ‘ನಾನು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದು ಕನ್ನಡ ಮೊದಲ ಸಿನಿಮಾ. ಒಳ್ಳೆ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ. ನಾನು ಇನ್ನಷ್ಟು ಸಿನಿಮಾ ಮಾಡಲು ನಿಮ್ಮ ಆಶಿರ್ವಾದ ಬೇಕು. ನಾನು ಈ ಚಿತ್ರದಲ್ಲಿ ಜನನಿ ಎಂಬ ಪಾತ್ರ ನಿರ್ವಹಿಸಿದ್ದೇನೆ’ ಎಂದು ಹೇಳಿದರು.

ಸಹ ನಿರ್ಮಾಪಕರಾದ ಬಾಲಕೃಷ್ಣ ಜಿ.ಎನ್, ಕೃಷ್ಣ, ಬೇಬಿ ವಂಶಿಕಾ ತಮ್ಮ ಅನುಭವ ಹಂಚಿಕೊಂಡರು. ಅಥಿತಿಗಳಾಗಿ ಆಗಮಿಸಿದ್ದ ರವಿಚಂದ್ರನ್ ಅಭುವನಾಸ್ ಯೂಟ್ಯೂಬ್ ಚಾನೆಲ್ ಗೆ ಚಾಲನೆ ನೀಡಿ ಚಿತ್ರ ‘ಲವ್ ಲಿ’ ಆಗಿರುತ್ತದೆ. ಹೊಸಬರಲ್ಲಿ ಉತ್ಸಾಹವಿದ್ದು, ಹಾಡು ಚೆನ್ನಾಗಿ ಬಂದಿದೆ. ತಂಡಕ್ಕೆ ಒಳ್ಳೆಯದಾಗಲಿ’ ಎಂದರು.

ಹಾಡು ಬಿಡುಗಡೆ ಮಾಡಿದ ಉಪೇಂದ್ರ ಅವರು ಮಾತನಾಡಿ ‘ಸಾಂಗ್ ಇಂಪಾಗಿದ್ದು, ಇಂಟ್ರೆಸ್ಟ್ ಆಗಿ ಕೂಡ ಇದೆ. ಸಾಂಗ್ ನೋಡುತ್ತಿದ್ದರೆ ನಂಗೆ ಸಿನಿಮಾ ನೋಡಬೇಕು ಅನಿಸುತ್ತಿದೆ’ ಎಂದರು.

ನೆನಪಿರಲಿ ಪ್ರೇಮ್ ‘ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಪ್ರಿಯಂಕಾ ಉಪೇಂದ್ರ ಹಾಗೂ ಹರಿಪ್ರಿಯ ಅವರು ಹಾಡಿನ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದರು.

Categories
ಸಿನಿ ಸುದ್ದಿ

ಸಂಜೆ ಆದ್ರೆ ಆಗು ರೆಡಿ, ನೈಂಟಿ ಹೊಡಿ, ಮನೀಗ್ ನಡಿ: ಇದು ಬಿರಾದಾರ ನಟನೆಯ 500 ನೇ ಸಿನಿಮಾ‌ ಸಾಂಗು

ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಬಿರಾದಾರ್ ಅಭಿನಯದ ಐನೂರನೇ ಸಿನಿಮಾ ಸುದ್ದಿಯಲ್ಲಿದ್ದ “90 ಬಿಡಿ ಮನೀಗ್ ನಡಿ” ಸಿನಿಮಾ ಇದೀಗ ಚಿತ್ರದ ಟೈಟಲ್ ಹಾಡನ್ನ ಬಿಡುಗಡೆಗೊಳಿಸಿ ಸದ್ದು ಮಾಡತೊಡಗಿದೆ. ಈ ಹಿಂದೆ ಉತ್ತರ ಕರ್ನಾಟಕದ ನಾಟಿ ಶೈಲಿಯ “ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರನ್ ಬಾರಸ್ತಿ..” ಎಂಬ ಕಚಗುಳಿ ಇಡುವ ಜವಾರಿ ಹಾಡು ಬಿಟ್ಟು ಹಿಟ್ ಮಾಡಿಕೊಂಡಿತ್ತು. ಎಪ್ಪತ್ತು ವರ್ಷದ ಬಿರಾದಾರ್ ಚಿತ್ರದ ನಾಯಕಿಯ ಜೊತೆ ಡಾನ್ಸ್ ಮಾಡಿದ ಎನರ್ಜಿ ಕಂಡು ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದರು. ಅಲ್ಲಿಂದಾಚೆಗೆ ಚಿತ್ರದ ಮೇಲೊಂದು ನಿರೀಕ್ಷೆ ಮೂಡಿಕೊಂಡಿತ್ತು.

ಚಿತ್ರತಂಡ ಇದೀಗ ಡಾ. ವಿ. ನಾಗೇಂದ್ರ ಪ್ರಸಾದ್ ರಚನೆಯ, ಡಾ. ರಾಜೇಶ್ ಕೃಷ್ಣನ್ ಧ್ವನಿಯಲ್ಲಿ ಮೂಡಿಬಂದ ಹಾಡು ಬಿಡುಗಡೆಗೊಳಿಸಿದೆ. ಕಿರಣ್ ಶಂಕರ್ ಸಂಗೀತ ನಿರ್ದೇಶನವಿರುವ ಈ ಹಾಡು ” ಸಂಜೆ ಗಂಟ ಸುಮ್ನೆ ದುಡಿ.. ನೈಂಟಿ ಹೊಡಿ ಮನೀಗ್ ನಡಿ” ಎಂಬ ಸಾಲುಗಳಿಂದ ಪ್ರಾರಂಭಗೊಂಡು, “ಸಂಜೆ ಆದ್ರೆ ಆಗು ರೆಡಿ.. ನೈಂಟಿ ಹೊಡಿ ಮನೀಗ್ ನಡಿ” ಎಂಬ ಸಾಲಿನ ಜೊತೆ ಸೇರಿಕೊಂಡು ” ಇವತ್ತೆ ಲಾಸ್ಟು ಗುರು, ನಾಳೆಯಿಂದ ನಾನ್ ಎಣ್ಣೆ ಹೊಡಿಯಲ್ಲ” ಎನ್ನುತ್ತಾ ಮಜವಾಗಿ ಕೊನೆಗೊಳ್ಳುತ್ತದೆ.

ಇದೇ ಚಿತ್ರದ “ಸಿಂಗಲ್ ಕಣ್ಣಾ” ಹಾಡಿಗೆ ಬಿರಾದಾರ್ ಜೊತೆ ಪ್ರಯೋಗ ಮಾಡಿ ಗೆದ್ದ ಭೂಷಣ್ ಇಲ್ಲಿಯೂ ಕೊರಿಯೋಗ್ರಫಿಯಲ್ಲಿ ಸದ್ದು ಮಾಡಿದ್ದಾರೆ.
‘ಅಮ್ಮ ಟಾಕೀಸ್ ಬಾಗಲಕೋಟೆ’ ಸಂಸ್ಥೆಯಡಿ ರತ್ನಮಾಲ ಬಾದರದಿನ್ನಿ ನಿರ್ಮಿಸಿರುವ ಈ ಚಿತ್ರಕ್ಕೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡಿದ್ದು, ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ.

ಒಟ್ಟಿನಲ್ಲಿ ಮಜವಾದ ಸಾಹಿತ್ಯದ ಜೊತೆ ನಶೆ ಏರಿಸುವ ಎಣ್ಣೆ ಹಾಡಿಗೆ ನಟ ಬಿರಾದಾರ್ ಜೊತೆ ಕರಿಸುಬ್ಬು, ಪ್ರಶಾಂತ್ ಸಿದ್ದಿ ಸಖತ್ ಸ್ಟೆಪ್ ಹಾಕಿದ್ದು, ಹಾಡಿಗೊಂದು ಮೆರಗುಕೊಟ್ಟಿದ್ದಾರೆ. ಅಂದಹಾಗೆ ಇದೇ ಬರುವ ಹದಿನೇಳನೇ ತಾರೀಖಿಗೆ ಚಿತ್ರದ ಟ್ರೈಲರ್ ಬಿಡುಗಡೆಯ ಸಿದ್ಧತೆಯಲ್ಲಿ ಚಿತ್ರತಂಡವಿದೆ.

Categories
ಸಿನಿ ಸುದ್ದಿ

ಸಪ್ಲೈಯರ್ ಶಂಕರ ಶೂಟಿಂಗ್ ಮುಗಿಸಿದ: ಗಂಟುಮೂಟೆ ಹುಡುಗ ಸಿನಿಮಾ ಹೀರೋ

ಗಂಟುಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಾಯಕ ನಿಶ್ಚಿತ್ ಕೊರೋಡಿ Supplier ಶಂಕರ ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ತ್ರಿನೇತ್ರ ಫಿಲ್ಮಂಸ್ ಸಂಸ್ಥೆಯಡಿ ಎಂ.ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ Supplier ಶಂಕರ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಟೈಟಲ್ ಹೇಳುವಂತೆ ಒಬ್ಬ ಬಾರ್ Supplier ಸುತ್ತಾ ಇಡೀ ಸಿನಿಮಾ ಸಾಗುತ್ತದೆ. ನಿಶ್ಚಿತ್ ಗೆ ಜೋಡಿಯಾಗಿ ಲಗೋರಿ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ ನಟಿಸಿದ್ದು, ಗೋಪಾಲ ಕೃಷ್ಣ ದೇಶಪಾಂಡೇ, ಜ್ಯೋತಿ ರೈ, ನವೀನ್ ಡಿ ಪಡಿಲ್ ಸೇರಿದಂತೆ ಒಂದಷ್ಟು ಹೊಸಬರು ಚಿತ್ರದಲ್ಲಿದ್ದಾರೆ. Supplier ಶಂಕರ ಸಿನಿಮಾಗೆ ರಂಜಿತ್, ಕಥೆ , ಚಿತ್ರಕಥೆ, ಸಂಭಾಷಣೆ ಜೊತೆಗೆ ಸಾಹಿತ್ಯದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ.

ವಿಜಯ್ ಪ್ರಕಾಶ್, ಅಮ್ಮ ನನ್ನೀ ಈ ಜನುಮ ಖ್ಯಾತಿಯ ಸುನಿಲ್ ಕಶ್ಯಪ್, ಮೋಹನ್ ಬಿನ್ನಿಪೇಟೆ, ಸಂತೋಷ್ ವೆಂಕಿ, ನಕುಲ್ ಅಭಯ್ಯಂಕರ್, ಐಶ್ವರ್ಯ ರಂಗರಾಜನ್ ಹಾಡುಗಳಿಗೆ ಧ್ವನಿಯಾಗಿದ್ದು, ರವಿ ಬಸ್ರೂರ್ ಬಳಿ ಕೆಲಸ ಮಾಡಿರುವ ಆರ್.ಬಿ.ಭರತ್ ಸಂಗೀತ ನೀಡಿದ್ದಾರೆ.

ಸತೀಶ್ ಚಂದ್ರಯ್ಯ ಸಂಕಲನ, ಸತೀಶ್ ಕುಮಾರ್.ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನ Supplier ಶಂಕರ್ ಸಿನಿಮಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರವು ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಭೀಮನ ಹಿಂದೆ ನಿಂತ ನಿರ್ದೇಶಕ ಹರ್ಷ: ಗೋಪಿಚಂದ್ ಫಸ್ಟ್ ಲುಕ್ ಇದು…

ತೆಲುಗಿನ ಸ್ಟಾರ್ ಖ್ಯಾತಿಯ ಗೋಪಿಚಂದ್ ಹಾಗೂ ಕನ್ನಡ ಎ.ಹರ್ಷ ಕಾಂಬೋದ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಗೋಪಿಚಂದ್ ಜನ್ಮದಿನದ ಪ್ರಯುಕ್ತ ಫಸ್ಟ್ ಹಾಗೂ ಟೈಟಲ್ ನ್ನು ಚಿತ್ರತಂಡ ರಿವೀಲ್ ಮಾಡಿದೆ. ಭೀಮನಾಗಿ ಮ್ಯಾಚೋ ಸ್ಟಾರ್ ಎಂಟ್ರಿ ಕೊಟ್ಟಿದ್ದು, ಪೊಲೀಸ್ ಖದರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮುಖದ ಮೇಲೆ ಗಾಯದ ಗುರುತು, ಉಗ್ರ ರೂಪಿಯಾಗಿ ತೀಕ್ಷ ನೋಟದ ಗೋಪಿಚಂದ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಭಜರಂಗಿ, ವಜ್ರಕಾಯ, ವೇದ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರ ನಿರ್ದೇಶಿಸಿರುವ ಎ.ಹರ್ಷಗೆ ಇದು ಮೊದಲ ಸಿನಿಮಾ. ಭೀಮ ಕೌಟುಂಬಿಕ ಹಾಗೂ ಆಕ್ಷನ್ ಎಂಟರ್ ಟೈನರ್ ಕಥಾಹಂದರ ಹೊಂದಿದೆ.‌ ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ನಡಿ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ, ಭೀಮ ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ.

ಸ್ವಾಮಿ.ಜೆ ಛಾಯಾಗ್ರಹಣ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ, ಅಜ್ಜು ಮಹಂಕಾಳಿ ಸಂಭಾಷಣೆ, ವೆಂಕಟ್ ಹಾಗೂ ಡಾ.ರವಿವರ್ಮಾ ಸ್ಟಂಟ್ ಚಿತ್ರಕ್ಕಿದೆ.

ಹೈದ್ರಾಬಾದ್ ನ ಅಲ್ಯೂಮಿನಿಯಂ ಫ್ಯಾಕ್ಟರ್ ಯಲ್ಲಿ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕಿ ಹಾಗೂ ಉಳಿದ ತಾರಾಬಳಗ ಅಪ್ ಡೇಟ್ ಶೀಘ್ರದಲ್ಲೇ ರಿವೀಲ್ ಮಾಡಿದೆ ಭೀಮ ಚಿತ್ರತಂಡ.

Categories
ಸಿನಿ ಸುದ್ದಿ

ಅಣ್ಣ ತಂಗಿಯ ಅನುಬಂಧ! ವಿನೋದ್-ಸೌಂದರ್ಯ ಜಯಮಾಲ ಅಪರೂಪದ ಭೇಟಿ: ಬಾಲ್ಯದ ನೆನಪಿಗೆ ಜಾರಿದ ಬ್ರದರ್-ಸಿಸ್ಟರ್

ಅಭಿಷೇಕ್ ಮದುವೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ.. ಹೇಗಿತ್ತು ಗೊತ್ತಾ ಅಣ್ಣ ತಂಗಿಯ ಮಾತುಕತೆ?

ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ. ಈ ಇಬ್ಬರು ಚಿತ್ರರಂಗದ ತಾರೆಯರು. ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣ-ತಂಗಿ. ಆದರೆ ಇಲ್ಲಿವರೆಯೂ ವಿನೋದ್ ಆಗಲಿ, ಸೌಂದರ್ಯ ಆಗಲಿ ಒಟ್ಟಿಗೆಕಾಣಿಸಿಕೊಂಡಿರಲಿಲ್ಲ. ಒಬ್ಬರಿಗೊಬ್ಬರು ಭೇಟಿಯಾಗಿಲ್ಲ. ಅಂತಹ ಸನ್ನಿವೇಶ ನಿರ್ಮಾಣವಾಗಿಲ್ಲ ಅಂತೇನಲ್ಲ. ಒಟ್ಟಿಗೆ ಆಡುತ್ತಾ ಬೆಳೆದ ಇವರಿಬ್ಬರು ಈ ಅಣ್ಣ ತಂಗಿ ಬದಲಾದ ಸನ್ನಿವೇಶದಲ್ಲಿ ದೂರ ಉಳಿದಿದ್ದೂ ಬಿಟ್ರೆ, ಅವರ ನಡುವೆ ಗಾಂಧಿನಗರ ಮಾತಾಡಿಕೊಳ್ಳುವ ರೀತಿ ಸಂಬಂಧವೇನು ಅಳಸಿಲ್ಲ.

ವಿನೋದ್ ಹಾಗೂ ಸೌಂದರ್ಯ ಇಂದಿಗೂ, ಎಂದೆಂದಿಗೂ ಅಣ್ಣ ತಂಗಿಯೇ. ಆದ್ರೆ ಅವರಿಬ್ಬರನ್ನು ಅವರ ಅಕ್ಕ-ಪಕ್ಕದವರು ಭೇಟಿ ಮಾಡಲಾಗದಂತೆ ನೋಡಿಕೊಂಡಿದ್ದರು ಅನ್ನೋದೇ ವಿಪರ್ಯಾಸ. ಆದ್ರೆ ಸಮಯ-ಸಂದರ್ಭ ಇದೆಲ್ಲಾ ಸಂಬಂಧಗಳನ್ನು ಮತ್ತೆ ಬೆಸೆಯುವಂತೆ ಮಾಡಿದೆ. ಮೊನ್ನೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ನಡೆದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ ಆರತಕ್ಷಣೆಯಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಮುಖಾಮುಖಿಯಾಗಿದ್ದಾರೆ. ಬಹಳ ವರ್ಷದ ಬಳಿಕ ತಂಗಿ ನೋಡಿದ ಖುಷಿ ವಿನೋದ್ ಅವರದ್ದು, ಅಣ್ಣನನ್ನೂ ನೋಡಿದ ಖುಷಿ ಸೌಂದರ್ಯಗೆ..ಭೇಟಿ ಕ್ಷಣದಲ್ಲಿ ಅಣ್ಣ ತಂಗಿ ಮತ್ತೆ ಬಾಲ್ಯದ ದಿನಗಳಿಗೆ ಜಾರಿದ್ದಾರೆ.

ಬಾಲ್ಯದ ಆಟ-ತುಂಟಾಟ ನೆನಪುಕೊಂಡು ಒಂದಷ್ಟು ಸಮಯ ಚರ್ಚೆ ನಡೆಸಿದ್ದಾರೆ. ಅಣ್ಣನ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಯಲ್ಲಿಯೂ ಸೌಂದರ್ಯ ಖುಷಿ ಖುಷಿಯಿಂದ ಕಾಲ ಕಳೆದು ಮೂವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮರಿಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ನಡುವೆ ಅಣ್ಣ ತಂಗಿಯ ಬಾಂಧವ್ಯವಿದೆ. ಅದು ಬಿಟ್ರೆ ಅವ್ರು ದೂರವಾಗಿದ್ದರೆ ,ಅವ್ರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋ ಮಾತುಗಳು ಸತ್ಯಕ್ಕೆ ದೂರವಾದುದ್ದು.

Categories
ಸಿನಿ ಸುದ್ದಿ

ಆದಿಪುರುಷನ ಹಿಂದೆ ಬಿದ್ದ ಕೆ ಆರ್ ಜಿ ಸ್ಟುಡಿಯೋಸ್! ಪ್ರಭಾಸ್ ಸಿನಿಮಾ ವಿತರಣೆಗೆ ಮುಂದಾದ ಕನ್ನಡ ನಿರ್ಮಾಣ ಸಂಸ್ಥೆ

ಬಹಳ ಯಶಸ್ಸು ಕಂಡ ಕೆ.ಜಿ.ಎಫ್ 1, ಕೆ.ಜಿ.ಎಫ್ 2, ಕಾಂತಾರ, ಚಾರ್ಲಿ 777, ಗಂಧದಗುಡಿ, ವಕೀಲ್ ಸಾಬ್ ಮತ್ತು ದಸರಾ ಮುಂತಾದ ಚಿತ್ರಗಳನ್ನು ಬಿಡುಗಡೆ ಮಾಡಿದ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಇದೀಗ ಆದಿಪುರುಷ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. .

ಕರ್ನಾಟಕದಲ್ಲಿ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಇದುವರೆಗೂ ಬಹಳ ಶ್ರದ್ದೆಯಿಂದ ಚಿತ್ರಗಳನ್ನು ಬಿಡುಗಡೆ ಮಾಡಿಕೊಂಡು ಬರುತ್ತಿರುವುದು ಕರ್ನಾಟಕದ ಜನತೆಗೆ ತಿಳಿದುರುವ ವಿಷಯ. ಸದಭಿರುಚಿಯ ಚಿತ್ರಗಳನ್ನು ಸಿನಿಮಾ ಪ್ರೇಕ್ಷರಿಗೆ ತಲುಪಿಸುವ ಕೈಕಂರ್ಯದಲ್ಲಿ ಕೆ.ಆರ್.ಜಿ.ಸ್ಟುಡಿಯೋಸ್ ಸಂಸ್ಥೆ ತೊಡಗಿದೆ. ಈ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಆದಿಪುರುಷ್ ಆಗಲಿದೆ ಅನ್ನುವುದು ಸಂಸ್ಥೆಯ ನಂಬಿಕೆ.

ನಮ್ಮ ಹಿಂದೂ ಸಂಸ್ಕೃತಿಯ ಮಹಾಕಾವ್ಯ ಎಂದೇ ಹೇಳಲ್ಪಡುವ ಪವಿತ್ರ ಗ್ರಂಥ ರಾಮಾಯಣದ ಎಳೆಯನ್ನು ಆಧಿರಿಸಿ ತಯಾರಿಸಿರುವ ಚಿತ್ರ ಆದಿಪುರುಷ್.
ಟಿ. ಸೀರೀಸ್ ಮತ್ತು ರೆಟ್ರೋಫಿಲ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕಥೆ ಹೆಣೆದು ನಿರ್ದೇಶನ ಮಾಡುತ್ತಿರುವುದು ಓಂ ರಾವತ್ ಅವರು. ಆದಿಪುರುಷ್ ಚಿತ್ರವು ಏಕಕಾಲಕ್ಕೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿದೆ. ಚಿತ್ರದ ತಾರಾಗಣದಲ್ಲಿ ಪ್ರಭಾಸ್, ಕ್ರಿತಿ ಸನೋನ್ , ಸೈಫ್ ಅಲಿ ಖಾನ್, ಸನ್ನಿ ಸಿಂಗ್, ದೇವದತ್ತ ನಾಗೇ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

“ಆದಿಪುರುಷ್ ಚಿತ್ರದ ಕರ್ನಾಟಕದ ವಿತರಣೆ ನಮಗೆ ಸಿಕ್ಕಿರುವುದು ಬಹಳ ಹೆಮ್ಮೆಯ ಸಂಗತಿ” ಎಂದು ಹೊಂಬಾಳೆ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರು ಮತ್ತು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರು ಆಗಿರುವ ಕಾರ್ತಿಕ್ ಗೌಡ ಸಂತಸ ವ್ಯಕ್ತ ಪಡಿಸಿದ್ದಾರೆ. ನಮ್ಮ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿರುವ ಸಾರವನ್ನು ಇಂದಿನ ಕಾಲಘಟ್ಟಕ್ಕೆ ಮತ್ತು ಇಂದಿನ ಪೀಳಿಗೆಗೆ ಅನುಗುಣವಾಗಿ ಆದಿಪುರುಷ್ ಚಿತ್ರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಚಿತ್ರವು ಪ್ರಭಾಸ್ ಮತ್ತು ಯು. ವಿ ಕ್ರಿಯೇಷನ್ಸ್ ಜೊತೆಗಿನ ಕೆ.ಆರ್.ಜಿ ಸ್ಟುಡಿಯೋಸ್ ಒಡನಾಟಕ್ಕೂ ಸಾಕ್ಷಿಯಾಗಲಿದೆ.

ಆದಿಪುರುಷ್ ಚಿತ್ರ ಜೂನ್ 16 ರಂದು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ.

Categories
ಸಿನಿ ಸುದ್ದಿ

ಆಗಸ್ಟ್‌ನಲ್ಲಿ ರೇವ್ ಪಾರ್ಟಿ!

ರಾಜು ಬೋನಗಾನಿ ನಿರ್ದೇಶನದ ವಿಭಿನ್ನ ಕಥಾಹಂದರದ ‘ರೇವ್ ಪಾರ್ಟಿ’ ಚಿತ್ರದ ಚಿತ್ರೀಕರಣವು ಯಶಸ್ವಿಯಾಗಿ ಮುಗಿದಿದ್ದು, ಚಿತ್ರವು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರವನ್ನು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ಮಾನಿಸಿದೆ.


ಬೋನಗಾನಿ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ ರಾಜು ಬೋನಗಾನಿ ನಿರ್ಮಿಸುತ್ತಿರುವ ‘ರೇವ್ ಪಾರ್ಟಿ’ ಚಿತ್ರದಲ್ಲಿ ಕ್ರಿಶ್ ಸಿದ್ದಿಪಲ್ಲಿ, ರಿತಿಕಾ ಚರ್ಕವರ್ತಿ, ಐಶ್ವರ್ಯಾ ಗೌಡ, ಸುಚೇಂದ್ರ ಪ್ರಸಾದ್, ತಾರಕ್ ಪೊನ್ನಪ್ಪ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಉಡುಪಿಯಲ್ಲಿ 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಈ ಚಿತ್ರಕ್ಕೆ ರಾಜು ಬೋನಗಾನಿ ಅವರೇ ಕಥೆ-ಚಿತ್ರಕಥೆ ರಚಿಸಿದ್ದಾರೆ.


ಯಶಸ್ವಿಯಾಗಿ ಚಿತ್ರೀಕರಣ ಮುಕ್ತಾಯವಾಗಲು ಸಹಕರಿಸಿದ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ
ರಾಜು ಬೋನಗಾನಿ ಧನ್ಯವಾದ ತಿಳಿಸಿದ್ದಾರೆ.

ಸಾಮಾನ್ಯವಾಗಿ ರೇವ್ ಪಾರ್ಟಿಗಳು ಬೆಂಗಳೂರು, ಉಡುಪಿ ಮತ್ತು ಗೋವಾದಲ್ಲಿ ನಡೆಯುತ್ತವೆ. ಈ ಪಾರ್ಟಿಗಳು ಹೇಗೆ ನಡೆಯುತ್ತವೆ? ಅದರ ಹಿಂದೆ ಯಾರೆಲ್ಲಾ ಇರುತ್ತಾರೆ? ಈ ಪಾರ್ಟಿಗಳು ಯುವ ಜನತೆಯ ಮೇಲೆ ಏನೆಲ್ಲಾ ದುಷ್ಪರಿಣಾಮಗಳು ಬೀರುತ್ತವೆ ಎಂಬ ಅಂಶಗಳನ್ನು ಈ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇವೆ.

‘ರೇವ್ ಪಾರ್ಟಿ’ ಚಿತ್ರವು ಇಂದಿನ ಯುವ ಜನತೆಗೆ ಬಹಳ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ ಎನ್ನುತ್ತಾರೆ ನಿರ್ದೇಶಕ ರಾಜು ಬೋನಗಾನಿ.

‘ರೇವ್ ಪಾರ್ಟಿ’ ಚಿತ್ರಕ್ಕೆ ದಿಲೀಪ್ ಭಂಡಾರಿ ಸಂಗೀತ ಸಂಯೋಜಿಸಿದ್ದು, ವೆಂಕಟ್ ಮನ್ನಂ ಛಾಯಾಗ್ರಹಣ ಮಾಡಿದ್ದಾರೆ. ರವಿಕುಮಾರ್ ಅವರ ಸಂಕಲನ, ವೆಂಕಟ್ ಆರೆ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

error: Content is protected !!