ನಾಯಕ ಡಾರ್ಲಿಂಗ್ ಕೃಷ್ಣ ಅವರ ಹುಟ್ಟುಹಬ್ಬಕ್ಕೆ. “ಲವ್ ಮೀ ಆರ್ ಹೇಟ್ ಮೀ” ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಬಹ ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 29 ರಂದು ಬಿಡುಗಡೆಯಾಗಲಿದೆ.
ದೀಪಕ್ ಗಂಗಾಧರ್ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ದೀಪಕ್ ಗಂಗಾಧರ್ ಮೂವೀಸ್ ಲಾಂಛನದಲ್ಲಿ ದೀಪಕ ಗಂಗಾಧರ್ ಅವರ ಜೊತೆಗೆ ಸುನೀಲ್ ಬಿ.ಎನ್, ಮದನ್ ಗಂಗಾಧರ್, ಚಂದನ್ ಜೆ ಹಾಗೂ ನಾಗರಾಜ್ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಲವ್ ಸ್ಟೋರಿ ಜಾನರ್ ನ ಈ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಐದು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀನಿಧರ್ ಸಂಭ್ರಮ್ – ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.

ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಮುರಳಿ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್, ರಘು ನಡವಳ್ಳಿ ಹಾಗೂ ರಘು ಸಂಭಾಷಣೆ ಬರೆದಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ರಚಿತಾರಾಮ್ ನಟಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ, ನಂದಿನಿ, ರಾಕೇಶ್ ಪೂಜಾರಿ, ದೀಪಿಕಾ, ಪ್ರವೀಣ್, ಸುಂದರ್ ವೀಣಾ, ರಮೇಶ್ ಭಟ್ ಮುಂತಾದವರು “ಲವ್ ಮೀ ಆರ್ ಹೇಟ್ ಮೀ” ಚಿತ್ರದ ತಾರಾಬಳಗದಲ್ಲಿದ್ದಾರೆ.