ವಸಿಷ್ಠ ಸಿಂಹ ನಾಯಕರಾಗಿ ಅಭಿನಯಿಸಿರುವ ‘ಲವ್ ಲಿ’ ಚಿತ್ರದ ಟೈಟಲ್ ಹಾಡು ಇತ್ತೀಚಿಗೆ ಬಿಡುಗಡೆಯಾಗಿದ್ದು, ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವಿಶೇಷವಾದ ಈ ಗೀತೆಯನ್ನು ಬಿಡುಗಡೆ ಮಾಡಲು ಮುಖ್ಯ ಅಥಿತಿಗಳಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ‘ನೆನಪಿರಲಿ’ ಪ್ರೇಮ್, ಪ್ರಿಯಂಕಾ ಉಪೇಂದ್ರ ಹಾಗೂ ಹರಿಪ್ರಿಯ ಆಗಮಿಸಿದ್ದರು. ಅಭುವನಾಸ್ ಕ್ರೀಯೆಷನ್ಸ್ ಬ್ಯಾನರ್ ನಲ್ಲಿ ರವೀಂದ್ರ ಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಕಥೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ ಯುವ ಪ್ರತಿಭೆ ಚೇತನ್ ಕೇಶವ್.
‘ನಿರ್ಮಾಪಕರ ಸಹಕಾರದಿಂದ ಸಿನಿಮಾ ಇಷ್ಟು ಚೆನ್ನಾಗಿ ಬಂದಿದೆ. ಸಾಂಗ್ ನಂತೆ ಸಿನಿಮಾ ಕೂಡ ಕಲರ್ ಫುಲ್ ಆಗಿ ಬಂದಿದೆ. ಪ್ರೀತಿಯಲ್ಲಿ ಎನೆಲ್ಲಾ ಇರುತ್ತೆ ಎಂಬುದು ಸಿನಿಮಾ. ಮೊದಲ ಭಾಗದಲ್ಲಿ ರೋಮ್ಯಾಂಟಿಕ್ ಕಥೆ ಇದ್ದರೆ, ದ್ವಿತೀಯಾರ್ಧದಲ್ಲಿ ಕಂಟೆಂಟ್ ಬಗ್ಗೆ ಹೇಳಲಾಗಿದೆ. ನಾನು 9 ವರ್ಷದಿಂದ ಚಿತ್ರರಂಗದಲ್ಲಿದ್ದೀನಿ. ನಿರ್ದೇಶಕ ನರ್ತನ್ ಜೊತೆ ‘ಮಫ್ತಿ’ ಚಿತ್ರಕ್ಕೆ ಕೆಲಸ ಮಾಡಿದ್ದೇನೆ. ಸ್ಕೂಲ್ ದಿನಗಳಿಂದ ನನಗೆ ಸಿನಿಮಾ ಮಾಡುವ ಆಸೆ. ಉಪೇಂದ್ರ, ರವಿಚಂದ್ರನ್ ಅವರು ನನಗೆ ಸ್ಪೂರ್ತಿ. ಆದರೆ ನಾನು ಹೆಚ್ಚಾಗಿ ಆ್ಯಕ್ಷನ್ ಸಿನಿಮಾಗೆ ಕೆಲಸ ಮಾಡಿದ್ದೇನೆ. ಹಾಗಾಗಿ ಈ ಚಿತ್ರದಲ್ಲಿ ಮಾಸ್ , ಕ್ಲಾಸ್ ಎರಡನ್ನು ಬಳಸಿದ್ದೇನೆ.
ಚಿತ್ರದಲ್ಲಿ ಸೋಷಿಯಲ್ ಮೆಸೇಜ್ ಕೂಡ ಇದೆ. ಮಂಗಳೂರು, ಬೆಂಗಳೂರು ಉಡುಪಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಲಂಡನ್ ನಲ್ಲಿ ಒಂದು ಸಾಂಗ್ ಶೂಟಿಂಗ್ ಮಾಡಲು ಯೋಜನೆ ಹಾಕಲಾಗಿದೆ. ರೌಡಿಸಮ್, ಲವ್, ಡ್ರಾಮಾ ಹಾಗೂ ಫ್ಯಾಮಿಲಿ ಜಾನರ್ ನಲ್ಲಿ ಸಿನಿಮಾ ಸಾಗುತ್ತದೆ. ಪ್ರೀತಿ, ನಂಬಿಕೆ ಮೇಲೆ ಸಂಬಂಧಗಳು ಮುಖ್ಯ. ಅವುಗಳನ್ನು ಹೇಗೆ ಉಳಿಸುಕೊಳ್ಳಬೇಕು? ಎಂಬುದು ಕಥೆಯಲ್ಲಿ ಇದೆ. ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ. ಚಿತ್ರದಲ್ಲಿ ಮೂರು ಆ್ಯಕ್ಷನ್, ನಾಲ್ಕು ಹಾಡುಗಳಿದೆ’ ಎಂದು ನಿರ್ದೇಶಕ ಚೇತನ್ ಕೇಶವ್ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ನಾಯಕ ವಸಿಷ್ಠ ಸಿಂಹ ಮಾತನಾಡಿ, ‘ನನ್ನನ್ನು ತುಂಬಾ ಕಾಡಿದಂತಹ ಸಿನಿಮಾ ಇದು. ಈಗ ಈ ಹಾಡಿನಿಂದ ಪ್ರಮೋಷನ್ ಶುರು ಮಾಡಿದ್ದು, ಆಗಸ್ಟ್ ನಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಜನೆ ಇದೆ. ಇದು ಸುಂದರ ಪ್ರೇಮಕಥೆಯ ಚಿತ್ರ. ಕಥೆ ಕೇಳಿದಾಗ ತುಂಬಾ ಇಷ್ಟ ಆಯ್ತು. ನಿರ್ಮಾಪಕರು ಸೇರಿದಂತೆ ಚಿತ್ರತಂಡದ ಸಹಕಾರಕ್ಕೆ ಧನ್ಯವಾದ ಎಂದರು.
ನಂತರ ನಾಯಕಿ ಸ್ಟೇಪಿ ಪಟೇಲ್ ‘ನಾನು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದು ಕನ್ನಡ ಮೊದಲ ಸಿನಿಮಾ. ಒಳ್ಳೆ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ. ನಾನು ಇನ್ನಷ್ಟು ಸಿನಿಮಾ ಮಾಡಲು ನಿಮ್ಮ ಆಶಿರ್ವಾದ ಬೇಕು. ನಾನು ಈ ಚಿತ್ರದಲ್ಲಿ ಜನನಿ ಎಂಬ ಪಾತ್ರ ನಿರ್ವಹಿಸಿದ್ದೇನೆ’ ಎಂದು ಹೇಳಿದರು.
ಸಹ ನಿರ್ಮಾಪಕರಾದ ಬಾಲಕೃಷ್ಣ ಜಿ.ಎನ್, ಕೃಷ್ಣ, ಬೇಬಿ ವಂಶಿಕಾ ತಮ್ಮ ಅನುಭವ ಹಂಚಿಕೊಂಡರು. ಅಥಿತಿಗಳಾಗಿ ಆಗಮಿಸಿದ್ದ ರವಿಚಂದ್ರನ್ ಅಭುವನಾಸ್ ಯೂಟ್ಯೂಬ್ ಚಾನೆಲ್ ಗೆ ಚಾಲನೆ ನೀಡಿ ಚಿತ್ರ ‘ಲವ್ ಲಿ’ ಆಗಿರುತ್ತದೆ. ಹೊಸಬರಲ್ಲಿ ಉತ್ಸಾಹವಿದ್ದು, ಹಾಡು ಚೆನ್ನಾಗಿ ಬಂದಿದೆ. ತಂಡಕ್ಕೆ ಒಳ್ಳೆಯದಾಗಲಿ’ ಎಂದರು.
ಹಾಡು ಬಿಡುಗಡೆ ಮಾಡಿದ ಉಪೇಂದ್ರ ಅವರು ಮಾತನಾಡಿ ‘ಸಾಂಗ್ ಇಂಪಾಗಿದ್ದು, ಇಂಟ್ರೆಸ್ಟ್ ಆಗಿ ಕೂಡ ಇದೆ. ಸಾಂಗ್ ನೋಡುತ್ತಿದ್ದರೆ ನಂಗೆ ಸಿನಿಮಾ ನೋಡಬೇಕು ಅನಿಸುತ್ತಿದೆ’ ಎಂದರು.
ನೆನಪಿರಲಿ ಪ್ರೇಮ್ ‘ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಪ್ರಿಯಂಕಾ ಉಪೇಂದ್ರ ಹಾಗೂ ಹರಿಪ್ರಿಯ ಅವರು ಹಾಡಿನ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದರು.