ಸಿನಿಮಾ ಜಗತ್ತಿನಲ್ಲಿ ಎಲ್ಲವೂ ಇದೆ. ಬರಹಗಾರರ ಕೊರತೆ ಇದೆ. ಕಥಾ ಲೋಕ ಮತ್ತು ಸಿನಿಮಾ ಲೋಕ ಹತ್ತಿರ ಬಂದಾಗ ಸಿನಿಮಾ ಕ್ಷೇತ್ರ ಶ್ರೀಮಂತ ಆಗುತ್ತದೆ ಎಂದು ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಸಾವಣ್ಣ ಪ್ರಕಾಶನದ ನಾಲ್ಕು ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಅವರು ತಮ್ಮ ಅಭಿಪ್ರಾಯ ಹೇಳಿದರು.
ಇದೇ ವೇಳೆ ಅತಿಥಿಯಗಿ ಬಂದಿದ್ದ ನಟ ಡಾಲಿ ಧನಂಜಯ ಕೂಡ ಪುಸ್ತಕ ಕುರಿತು ಮಾತನಾಡಿದರು. ‘ನಟರಿಗೂ ಒಂದು ಖಾಸಗಿ ಬದುಕು ಇರುತ್ತದೆ. ಅಲ್ಲಿ ನಾವೂ ಎಲ್ಲರ ಹಾಗೆ ಇರುತ್ತೇವೆ. ನಮ್ಮ ಒಳಗೂ ಹುಡುಕಾಟ, ತೊಳಲಾಟ, ಸಂಘರ್ಷ ನಡೆಯುತ್ತಲೇ ಇರುತ್ತವೆ. ಒಂದು ಪ್ರೇಮಾಂಕುರ ಆಗಲಿ ಅಂತ ಕಾಯುತ್ತಿರುತ್ತವೆ. ನನ್ನ ಕೆಲಸಗಳ ನಡುವೆ ಓದು ಬಿಟ್ಟು ಹೋಗಿತ್ತು. ಈಗ ಮತ್ತೆ ಓದಲು ಶುರು ಮಾಡಿದ್ದೇನೆ ಎಂದು ಧನಂಜಯ ಹೇಳಿದರು.
ಸಾವಣ್ಣ ಪ್ರಕಾಶನದ ನಾಲ್ಕು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜೋಗಿ ಅವರ ಚಿಯರ್ಸ್, ಅಶ್ವತ್ಥಾಮನ್, ಕಥೆಕೂಟ ಸದಸ್ಯರ ಒಲವು ತುಂಬುವುದಿಲ್ಲ ಹಾಗೂ ಜಗದೀಶ ಶರ್ಮ ಸಂಪ ಅವರ ದಶಕಂಠ ರಾವಣ ಕೃತಿಗಳು ಅನಾವರಣಗೊಂಡವು. ಜೋಗಿ, ಗೋಪಾಲಕೃಷ್ಣ ಕುಂಟಿನಿ, ಜಮೀಲ್ ವೇದಿಕೆಯಲ್ಲಿದ್ದರು.
ಬಿ.ಬಿ.ಆರ್ ಫಿಲ್ಮಂಸ್ ಹಾಗೂ ಎವೆರೆಸ್ಟ್ ಇಂಡಿಯಾ ಎಂಟರ್ ಟೈನರ್ಸ್ ಬ್ಯಾನರ್ ನಡಿ ಪ್ರೊ.ಬಿ.ಬಸವರಾಜ್ ಹಾಗೂ ರೇಣುಕಾ ಬಸವರಾಜ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ಆಡೇ ನಮ್ಮ God ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎಂಬುದನ್ನು ಹಾಸ್ಯಾಸ್ಪದವಾಗಿ ಕಟ್ಟಿಕೊಡಲಾಗಿದೆ. ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಪಿಂಕಿ ಎಲ್ಲಿ ಚಿತ್ರದ ಅನೂಪ್ ಶೂನ್ಯ, ಸಾರಿಕ ರಾವ್, ಬಿ ಸುರೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚಮ ವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆ ಮಂಜು, ಮುಸುಕು ಸಿನಿಮಾಗಳ ಖ್ಯಾತಿ ಹಿರಿಯ ನಿರ್ದೇಶಕ ಪಿ.ಎಚ್.ವಿಶ್ವನಾಥ್ ಆಡೇ ನಮ್ಮ God ಆಕ್ಷನ್ ಕಟ್ ಹೇಳಿದ್ದಾರೆ.
ನಿರ್ದೇಶಕ ಪಿ.ಎಚ್.ವಿಶ್ವನಾಥ್ ಮಾತನಾಡಿ, ಜನಗಳು ಯಾವುದಾದರೂ ಒಂದು ವಿಷಯಕ್ಕೆ ಬೇಗ ಪ್ರಭಾವಕ್ಕೆ ಒಳಗಾಗುತ್ತಾರೆ. ನಮ್ಮಲ್ಲಿ ಹಂದಿಯನ್ನು ವರಾಹ ಎಂದು ಪೂಜೆ ಮಾಡುತ್ತೇವೆ. ಹಾವು, ಕಪ್ಪೆ ಮೊಸಳೆ ಎಲ್ಲವನ್ನೂ ಪೂಜೆ ಮಾಡುತ್ತವೆ. ನಾವು ಪೂಜೆ ಮಾಡದ ಪ್ರಾಣಿಗಳು ಇಲ್ಲ. ಆಂದ್ರದ ಬಾರ್ಡರ್ ಊರೊಂದರಲ್ಲಿ ಚೇಳು ಸ್ವಾಮಿ ದೇಗುಲವಿದೆ ಜೀವಂತ ಚೇಳುಗಳನ್ನು ಪೂಜೆ ಮಾಡುತ್ತಾರೆ. ಈ ಬಗ್ಗೆ ಯೋಚನೆ ಮಾಡುತ್ತಾ ನಾನು ಕಂಡ ಒಬ್ಬ ವ್ಯಕ್ತಿ ಮತ್ತು ನನಗೇ ಆದ ಅನುಭವಗಳ ಆಧಾರದ ಮೇಲೆ ಆಡು ಕೂಡ ಒಂದು ದೇವರು ಆಗಬಹುದು ಅನ್ನಿಸಿ ಅದನ್ನೇ ಚಿತ್ರವಾಗಿಸಿದ್ದೇವೆ. ಮೂಢನಂಬಿಕೆ ನಂಬಿಕೊಂಡು ಹೋಗುವ ಜನರ ಹಿಂದೆ ಇಡೀ ಸಿನಿಮಾವಿದೆ. ನಾಲ್ಕು ಜನ ಯುವಕರ ಜೀವನದಲ್ಲಿ ಒಂದು ಆಡು ಬಂದಾಗ ಏನಾಗುತ್ತದೆ ಎನ್ನುವುದು ಚಿತ್ರದ ತಿರುಳು. ನಾಲ್ಕೂ ಜನ ಯುವಕರು ಯಾವ ನುರಿತ ಕಲಾವಿದರಿಗಿಂತ ಕಡಿಮೆ ಇಲ್ಲದಂತೆ ನಟಿಸಿದ್ದು, ಚಿತ್ರವನ್ನು ಮನರಂಜನೆಯೊಂದಿಗೆ ಪ್ರೇಕ್ಷಕರಿಗೆ ಖುಷಿಕೊಡುವ ರೀತಿಯಲ್ಲಿ, ಕೊನೆಯವರೆಗೂ ಹಾಸ್ಯಮಯವಾಗಿ ಕಟ್ಟಿಕೊಡಲಾಗಿದೆ, ಆಡೇ ನಮ್GOD ಯಾವ ಕಟ್ಸ್ ಇಲ್ಲದೇ ಸೆನ್ಸಾರ್ ಆಗಿ ಬಿಡುಗಡೆಯ ಸಿದ್ಧತೆಯಲ್ಲಿದೆ ಎಂದರು.
ನಿರ್ಮಾಪಕರಾದ ಪ್ರೊ.ಬಿ.ಬಸವರಾಜ್ ಮಾತನಾಡಿ, ನಾನು ರಿಟೈಡ್ ಪ್ರೊಫೆಸರ್. ನಾನು ಮೊದಲಿನಿಂದಲೂ ಸಿನಿಮಾ ನೋಡುತ್ತಿದ್ದೆ. ನನಗೂ ಸಿನಿಮಾ ನಿರ್ಮಾಣ ಮಾಡುವ ಆಸೆ ಇತ್ತು. ರಿಟೈಡ್ ಆದ ಹತ್ತು ವರ್ಷದ ಬಳಿಕ ನನ್ನ ಆಸೆ ನೆರವೇರಿದೆ. ಪಿ ಎಚ್ ವಿಶ್ವನಾಥ್ ಹೆಸರಾಂತ ನಿರ್ದೇಶಕರು. ಆರು ತಿಂಗಳು ಲೋಕೇಷನ್ ನೋಡಿದೆವು. ಮೈಸೂರು ಹಾಗು ಬೆಂಗಳೂರಿನ ಸುತ್ತ ಮುತ್ತ ಯಾವ ರೀತಿಯ ಅಡಚಣೆಯೂ ಇಲ್ಲದೆ ಸರಾಗವಾಗಿ ಚಿತ್ರ ಮುಗಿದಿದೆ. ಸಿನಿಮಾ ಬಹಳ ಚೆನ್ನಾಗಿ ಬಂದಿದೆ ಎಂದರು.
ಹಿರಿಯ ನಟ ಬಿ.ಸುರೇಶ್ ಮಾತನಾಡಿ, ಕೊರೋನಾ ನಂತರದ ಕಾಲಘಟ್ಟದಲ್ಲಿ ಸಿನಿಮಾ ಮಾಡುವುದು ಸುಲಭದ ಕೆಲಸವಲ್ಲ. ಮೊದಲು ಸುಲಭ ಇತ್ತು ಅಂತಲ್ಲ. ಬಸವರಾಜ್ ಹಾಗೂ ವಿಶ್ವನಾಥ್ ಅವರು ದೊಡ್ಡ ಸಾಹಸ ಮಾಡಿದ್ದಾರೆ. ತುಂಬಾ ವಿಶಿಷ್ಟವಾದ ಕಥೆ. ಪಿ ಎಚ್ ವಿಶ್ವನಾಥ್ ಅವರ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಅವರ ಪಂಚಮವೇದ ಚಿತ್ರದಿಂದ ಇಲ್ಲಿವರೆಗೂ ಹಲವಾರು ಬಗೆಯ ಸಿನಿಮಾ ಮಾಡಿದ್ದಾರೆ. ಹೊಸಬರಿಗೆ ನಟನೆಯ ಭಾಷೆ, ಸಿನಿಮಾ ಹೇಳಿಕೊಟ್ಟಿದ್ದಾರೆ ಎಂದರು.
ನಟ ನಟರಾಜ್ ಮಾತನಾಡಿ, ಪುಟ್ಟಣ್ಣ ಕಣಗಾಲ್ ಸರ್ ಬಗ್ಗೆ ನಾವು ಕೇಳುತ್ತಿದ್ದೆವು. ಅವರ ಶಿಷ್ಯ ಅಂದರೆ ಹೇಗೆ ಇರ್ತಾರೆ ಎಂಬ ಭಯ ಇತ್ತು. ನೀನು ಮಾಡಿರುವ ಸಿನಿಮಾ ಎಲ್ಲಾ ನೋಡಿದ್ದೇನೆ ಕಥೆ ಹೇಳಬಹುದಾ ಎಂದರು. ಇಡೀ ಚಿತ್ರದ ಕಥೆ ಹೇಳಿದರು. ಬಳಿಕ ನನ್ನ ಪಾತ್ರದ ಬಗ್ಗೆ ತಿಳಿಸಿದರು. ಇಂತಹ ದಿಗ್ಗಜರ ಜೊತೆ ಸಿನಿಮಾ ಮಾಡಿರುವುದು ಖುಷಿ ಕೊಟ್ಟಿದೆ. ಸಾಂಗ್ಸ್, ಸಿನಿಮಾ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ಹಿರಿಯ ತಂತ್ರ್ಯಜ್ಞರ ಜೊತೆ ಕೆಲಸ ಮಾಡಿರುವುದು ದೊಡ್ಡ ಅನುಭವ ಎಂದರು.
ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ-ಸಹ ನಿರ್ದೇಶನ ‘ಆಡೇ ನಮ್ God’ ಚಿತ್ರಕ್ಕಿದೆ. ಆರ್.ಕೆ. ಸ್ವಾಮಿನಾಥನ್ ಸಂಗೀತ, ಶಶಿಕುಮಾರ್ ಎಸ್ ಹಿನ್ನೆಲೆ ಸಂಗೀತದ ಹಾಡುಗಳಿಗೆ ಹೃದಯ ಶಿವ-ನಿತಿನ್ ನಾರಾಯಣ್ ಸಾಹಿತ್ಯ ಬರೆದಿದ್ದು, ರವೀಂದ್ರ ಸೊರಗಾವಿ-ಚೇತನ್ ನಾಯಕ್ ಧ್ವನಿಯಾಗಿದ್ದಾರೆ. ಶೀಘ್ರದಲ್ಲಿಯೇ ಚಿತ್ರವನ್ನು ತೆರೆಗೆ ತರಲು ತಂಡ ತಯಾರಿ ನಡೆಸುತ್ತಿದೆ.
ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ, ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಾಯಕ – ನಾಯಕಿಯಾಗಿ ನಟಿಸಿರುವ ಚಿತ್ರ “ಸಂತೋಷ ಸಂಗೀತ”. ಈಗ ರಿಲೀಸ್ ಅಗಲು ರೆಡಿಯಾಗಿದೆ. ಮೊದಲ ಸಲ ನಿರ್ದೇಶನ ಮತ್ತು ನಿರ್ಮಾಣದ ಜವಬ್ದಾರಿ ಹೊತ್ತಿರುವ ಸಿದ್ದು ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂದಹಾಗೆ, ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರದ ಮೇಕಿಂಗ್ ವೀಡಿಯೋ ಕೂಡ ಈ ವೇಳೆ ಪ್ರದರ್ಶಿಸಲಾಯಿತು.
ನಾನು ಮೂಲತಃ ಎಂ.ಸಿ.ಎ ಪದವೀಧರ. ಸಿನಿಮಾ ಪ್ರೇmಮಿ. ಯಾವುದೇ ಸಿನಿಮಾ ಬಂದರೂ ಮಿಸ್ ಮಾಡದೆ ನೋಡುವವನು. ಚೆನ್ನಾಗಿರುವ ಸಿನಿಮಾ ನೋಡಿದರೆ, ನಾನು ಈ ರೀತಿ ಸಿನಿಮಾ ಮಾಡಬೇಕೆಂದು ಆಸೆ ಪಡುತ್ತಿದ್ದವನು. ಆ ಆಸೆ ಈಗ ಈಡೇರಿದೆ. ಲಾಕ್ ಡೌನ್ ಸಮಯದಲ್ಲಿ ಕಥೆ ಬರೆದಿದ್ದೆ. ಅದನ್ನು ಈಗ ಸಿನಿಮಾ ರೂಪದಲ್ಲಿ ತಂದಿದ್ದೀನಿ. ನಾನೇ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಈ ಚಿತ್ರದಲ್ಲಿ ಲವ್, ಕಾಮಿಡಿ, ವ್ಯಾಪಾರ ಹೀಗೆ ಎಲ್ಲಾ ತರಹದ ಕಮರ್ಷಿಯಲ್ ಅಂಶಗಳು ಈ ಚಿತ್ರದಲ್ಲಿದೆ. ಇದನ್ನು ಕಮರ್ಷಿಯಲ್ ಲವ್ ಜಾನರ್ ನ ಸಿನಿಮಾ ಎನ್ನಬಹುದು ಎನ್ನುತ್ತಾರೆ ಸಿದ್ದು.
ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ಈ ಚಿತ್ರದ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ನಿಜಜೀವನದಲ್ಲೂ ಪತಿ -ಪತ್ನಿಯಾಗಿರುವ ಅರ್ನವ್ ಹಾಗೂ ರಾಣಿ ತೆರೆಯ ಮೇಲೂ ನಾಯಕ-ನಾಯಕಿಯಾಗಿ ನಟಿಸಿರುವುದು ಈ ಚಿತ್ರದ ವಿಶೇಷ. ದೊಡ್ಡಣ್ಣ, ಅವಿನಾಶ್, ಲಯ ಕೋಕಿಲ, ಕವನ, ಅಮಿತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೂರ್ಯ ಮಡೆನೂರು ಮನು, ಹನೀಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕ ಹಾಗೂ ನಿರ್ದೇಶಕ ಸಿದ್ದು ಎಸ್ ತಿಳಿಸಿದರು.
” ಹೊಂಬಣ್ಣ”, “ಪ್ರೇಮಂ” ಚಿತ್ರಗಳಲ್ಲಿ ನಟಿಸಿರುವ ನನಗೆ ಇದು ಮೂರನೇ ಚಿತ್ರ ಎಂದು ಮಾತು ಆರಂಭಿಸಿದ ನಾಯಕ ಅರ್ನವ್ ವಿನ್ಯಾಸ್, ಈ ಚಿತ್ರದಲ್ಲಿ ನನ್ನದು ಉದ್ಯಮಿಯ ಪಾತ್ರ. ನಿರ್ದೇಶಕರ ಕಥೆ ಚೆನ್ನಾಗಿದೆ. ನಿರೂಪಣೆ ಕೂಡ ಹೊಸದಾಗಿದೆ. ಪ್ರತಿ ಪಾತ್ರಕ್ಕೂ ಆದ್ಯತೆ ಇದೆ. ವಿಶೇಷ ಎನಿಸುವ ಒಂದಷ್ಟು ಹೊಸ ಅಂಶಗಳಿವೆ ಎಂದು ಹೇಳಿದರು.
ಗಂಡ – ಹೆಂಡತಿ ಇಬ್ಬರು ಒಂದೇ ಉದ್ಯಮದಲ್ಲಿದ್ದಾಗ ಯಾವೆಲ್ಲಾ ಸವಾಲು ಎದುರಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದರು ನಾಯಕಿ ರಾಣಿ ವರದ್.
ಕವನ ಹಾಗೂ ಫಸ್ಟ್ rank ರಾಜು ಖ್ಯಾತಿಯ ಅಮಿತ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ಜೆ.ಪಿ ನಗರದ ಮಾಜಿ ಕಾರ್ಪೋರೇಟರ್ ಚಂದ್ರಶೇಖರ್ ರಾಜು ಅವರು “ಸಂತೋಷ ಸಂಗೀತ” ಚಿತ್ರತಂಡಕ್ಕೆ ಶುಭ ಕೋರಿದರು.
ಹೊಂಬಾಳೆ ಫಿಲಂಸ್ ನಡಿ ವಿಜಯ್ ಕಿರಗಂದೂರು ನಿರ್ಮಿಸಿರುವ, ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವಂತಹ ಪ್ಯಾನ್ ಚಿತ್ರವಾದ ‘ಸಲಾರ್ ಪಾರ್ಟ್ 1: ಸೀಸ್ ಫೈರ್ ಟೀಸರ್ ಇಂದು ಮುಂಜಾನೆ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ‘ಬಾಹುಬಲಿ’ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದಲ್ಲಿ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿರುವ ‘ಸಲಾರ್’ ಚಿತ್ರವು ಆರಂಭದಿಂದಲೂ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಇಂದು ಮುಂಜಾನೆ 05:12ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಭರ್ಜರಿ ಆಕ್ಷನ್ ದೃಶ್ಯಗಳು ಮತ್ತು ಪವರ್ ಫುಲ್ ಸಂಭಾಷಣೆಗಳಿಂದ ಕೂಡಿರುವ ಈ ಟೀಸರ್, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ, ಹೊಸ ದಾಖಲೆಯನ್ನು ಬರೆಯುವ ಎಲ್ಲಾ ಮುನ್ಸೂಚನೆಯನ್ನು ನೀಡಿದೆ. ‘ಕೆಜಿಎಫ್’ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಪ್ರಶಾಂತ್ ನೀಲ್, ಈ ಬಾರಿ ‘ಸಲಾರ್’ ಮೂಲಕ ಇನ್ನೊಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಕಂಡುಕೇಳರಿಯದ ಪ್ರಮಾಣದಲ್ಲಿ ಈ ಚಿತ್ರವು ನಿರ್ಮಾಣವಾಗುತ್ತಿದ್ದು, ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿ ಬಳಿ 14 ಅದ್ಭುತ ಸೆಟ್ ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಿ, ಅಲ್ಲಿ ಚಿತ್ರೀಕರಣ ಮಾಡಲಾಗಿದೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ವಿಜಯ್ ಕಿರಗಂದೂರು, ‘ಈ ಚಿತ್ರ ಪ್ರಾರಂಭವಾದಾಗಲೇ ನಾವು ಇದು ಯಾವುದೋ ಒಂದು ಭಾಷೆಯ ಅಥವಾ ಪ್ಯಾನ್ ಇಂಡಿಯಾ ಸಿನಿಮಾವಲ್ಲ ಎಂದು ಹೇಳಿದ್ದೆವು. ಇದು ಎಲ್ಲ ಕಡೆ ಸಲ್ಲುವ ಭಾರತೀಯ ಚಿತ್ರವಾಗಬೇಕು ಎಂಬುದು ನಮ್ಮ ಆಸೆ. ಅದರಂತೆ ಈ ಚಿತ್ರ ಮೂಡಿಬಂದಿದ್ದು, ಬರೀ ಭಾರತದಲ್ಲಷ್ಟೇ ಅಲ್ಲ, ಹೊರದೇಶಗಳಲ್ಲೂ ಭಾರತೀಯ ಚಿತ್ರವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.
ಕನ್ನಡದ ನಿರ್ಮಾಣ ಸಂಸ್ಥೆಯೊಂದು, ಪ್ಯಾನ್ ಇಂಡಿಯಾ ಸ್ಟಾರ್ ಒಬ್ಬರ ಚಿತ್ರವೊಂದನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕನ್ನಡದ ನಿರ್ಮಾಣ ಸಂಸ್ಥೆ, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು, ತೆಲುಗಿನ ಸ್ಟಾರ್ ನಟ ಪ್ರಭಾಸ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ತಮಿಳಿನ ಶ್ರುತಿ ಹಾಸನ್ ಹೀಗೆ ಎಲ್ಲ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಇಲ್ಲಿದ್ದಾರೆ. ಎಲ್ಲರನ್ನೂ ಸೇರಿಸಿ ಭಾರತೀಯ ಸಿನಿಮಾ ಮಾಡಿದ್ದೇವೆ. ಇವತ್ತು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 28ಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎನ್ನುತ್ತಾರೆ.
ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಸಲಾರ್’ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ವಿದೇಶಗಳಲ್ಲೂ ಚಿತ್ರದ ವಿಎಫ್ಎಕ್ಸ್ ಕೆಲಸ ನಡೆದಿದ್ದು, ಆಕ್ಷನ್ ದೃಶ್ಯಗಳಲ್ಲಿ ಬೇರೆ ದೇಶಗಳಿಂದ ಬಂದ ಹಲವು ನುರಿತ ಸಾಹಸ ಕಲಾವಿದರು ಕೆಲಸ ಮಾಡಿರುವುದು ಈ ಚಿತ್ರದ ವಿಶೇಷತೆಗಳಲ್ಲೊಂದು. ದೊಡ್ಡ ಕ್ಯಾನ್ವಾಸ್ ಅಷ್ಟೇ ಅಲ್ಲ, ದೊಡ್ಡ ತಾರಾಗಣವೂ ಇರುವ ಈ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಮಿಕ್ಕಂತೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ನಟಿಸಿದ್ದಾರೆ. ‘ಕೆಜಿಎಫ್’ ಚಿತ್ರಗಳಿಗೆ ಕೆಲಸ ಮಾಡಿದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ‘ಸಲಾರ್ ಪಾರ್ಟ್ 1: ಸೀಸ್ ಫೈರ್ ಚಿತ್ರವು ಸೆಪ್ಟೆಂಬರ್ 28ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಈಗ ಪ್ಯಾನ್ ಇಂಡಿಯಾ ಸ್ಟಾರ್..ಇತ್ತೀಚೆಗೆಷ್ಟೇ ಇರೈವನ್ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಅವರ 32ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ. ವೆಲ್ಸ್ ಫಿಲಂಸ್ ಇಂಟರ್ನ್ಯಾಶನಲ್ನಡಿ ಡಾ.ಇಶಾರಿ ಕೆ ಗಣೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಚೆನ್ನೈನಲ್ಲಿಂದು ಸೆಟ್ಟೇರಿರುವ ಈ ಸಿನಿಮಾಗೆ ಜೀನಿ ಎಂಬ ಟೈಟಲ್ ಇಡಲಾಗಿದೆ.
ಯುವ ನಿರ್ದೇಶಕ ಅರ್ಜುನನ್ ಜೆ ಆರ್ ನಿರ್ದೇಶನದಲ್ಲಿ ಜಯಂ ರವಿ ನಾಯಕನಾಗಿ ನಟಿಸುತ್ತಿದ್ದು, ಕೃತಿ ಶೆಟ್ಟಿ, ಕಲ್ಯಾಣಿ ಪ್ರಿಯದರ್ಶನ್, ವಾಮಿಕಾ ಗಬ್ಬಿ ಮತ್ತು ದೇವಯಾನಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಹೇಶ್ ಮುತ್ತುಸಾಮಿ ಛಾಯಾಗ್ರಹಣ, ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ, ಪ್ರದೀಪ್ ಇ ರಾಘವ್ ಸಂಕಲನ, ಹಾಲಿವುಡ್ ಮತ್ತು ಅಂತರಾಷ್ಟ್ರೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಸ್ಟಂಟ್ ಕೊರಿಯೋಗ್ರಾಫರ್ಗಳಲ್ಲಿ ಒಬ್ಬರಾದ ಯಾನಿಕ್ ಬೆನ್ ಈ ಚಿತ್ರಕ್ಕೆ ಆಕ್ಷನ್ ಸೀಕ್ವೆನ್ಸ್ ಖದರ್ ಚಿತ್ರದಲ್ಲಿರಲಿದೆ.
ಜೀನಿ ವೆಲ್ಸ್ ಫಿಲ್ಮ್ ಇಂಟರ್ನ್ಯಾಶನಲ್ನ 25 ನೇ ಚಿತ್ರವಾಗಿದ್ದು, ದುಬಾರಿ ಬಜೆಟ್ನಲ್ಲಿ ತಯಾರಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿರುವ ಜೀನಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಭಾರತೀಯ ಚಿತ್ರರಂಗದ ದುಬಾರಿ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಲೈಕಾ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದೆ. ಇಂಡಿಯನ್, ಖೈದಿ-150, ವಡಾ ಚೆನ್ನೈ, ದರ್ಬಾರ್, ಪೊನ್ನಿಯಿನ್ ಸೆಲ್ವನ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಇಂಡಿಯನ್-2, ರಜನಿ ಜೊತೆ ಲಾಲ್ ಸಲಾಂ ಸೇರಿದಂತೆ ಹಲವು ಚಿತ್ರಗಳಿಗೆ ಹಣ ಸುರಿದಿರುವ ಸುಭಾಷ್ ಕರಣ್ ಈಗ ಸೆನ್ಸೇಷನಲ್ ಮೂವೀ 2018 ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ.
ಲೈಕಾ ಬರೀ ಸೂಪರ್ ಸ್ಟಾರ್ಸ್ ಸಿನಿಮಾಗಳನ್ನು ಮಾತ್ರವಲ್ಲ ಹೊಸ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸಿಕೊಡುತ್ತಿದೆ. ಮೋಸ್ಟ್ ಹ್ಯಾಪನಿಂಗ್ ಡೈರೆಕ್ಟರ್ ಜೂಡಾ ಆಂಥನಿ ಜೋಸೆಫ್ ಜೊತೆ ಸಿನಿಮಾ ಮಾಡುವುದಾಗಿ ಲೈಕಾ ಅನೌನ್ಸ್ ಮಾಡಿದೆ.
ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಕೇರಳ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್ ಬಸ್ಟರ್ ಆಗಿದೆ.
ಈ ಚಿತ್ರವನ್ನು ನಿರ್ದೇಶಿಸಿದ್ದು, ಜೂಡಾ ಆಂಥನಿ ಜೋಸೆಫ್..ಇದೇ ನಿರ್ದೇಶಕರಿಗೆ ಈಗ ಲೈಕಾ ಸಿನಿಮಾ ಮಾಡುತ್ತಿವೆ. ಶೀಘ್ರದಲ್ಲಿಯೇ ಈ ಚಿತ್ರದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಅಪ್ ಡೇಟ್ ನೀಡಲಿದೆ ಲೈಕಾ..
ಪಿ.ಸಿ ಶೇಖರ್ ನಿರ್ದೇಶನದ ಹತ್ತನೇ ಚಿತ್ರ ಹಾಗೂ ನಕುಲ್ ಗೌಡ(ಪ್ರೀತಿಯ ರಾಯಭಾರಿ ಖ್ಯಾತಿ) ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ “BAD” ಚಿತ್ರದ ಫಸ್ಟ್ ಲಕ್ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಇದು ನಾಯಕ ಪ್ರಧಾನ ಚಿತ್ರವಲ್ಲ. ಏಳು ಮುಖ್ಯಪಾತ್ರಗಳಿದೆ. ಮನುಷ್ಯನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯವೆಂಬ ಅರಿಷಡ್ವರ್ಗಗಳಿರುತ್ತದೆ. ಈ ಆರು ಅರಿಷಡ್ವರ್ಗಗಳನ್ನು ನಮ್ಮ ಚಿತ್ರದ ಆರು ಪಾತ್ರಗಳು ಪ್ರತಿನಿಧಿಸುತ್ತದೆ. ಆ ಪೈಕಿ “ಕ್ರೋಧ”ವನ್ನು ಪ್ರತಿನಿಧಿಸುತ್ತಿರುವ ನಕುಲ್ ಗೌಡ ಅವರ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಸಾಮಾನ್ಯವಾಗಿ ” ಕ್ರೋಧ” ವನ್ನು ಕಿರಿಚುವುದು, ಅರಚುವುದು ಮುಂತಾದ ವಿಚಿತ್ರ ರೀತಿಗಳಿಂದ ತೋರಿಸುತ್ತಾರೆ. ನಾವು ಮುಖದ ಹಾವಭಾವದಲ್ಲಿ “ಕ್ರೋಧ” ವನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.
ಇದೊಂದು ವಿಭಿನ್ನ ಕಥೆಯ ಚಿತ್ರ ಎಂದು ತಿಳಿಸಿರುವ ಮುಖ್ಯ ಪಾತ್ರಧಾರಿ ನಕುಲ್, ನನ್ನದು ಈ ಚಿತ್ರದಲ್ಲಿ ಕ್ರೋಧವನ್ನು ಪ್ರತಿನಿಧಿಸುವ ಪಾತ್ರ. ಕ್ರೋಧವನ್ನು ಚಿತ್ರದಲ್ಲಿ ಭೀಕರವಾಗಿ ತೋರಿಸಿಲ್ಲ. ನಿರ್ದೇಶಕ ಪಿ.ಸಿ.ಶೇಖರ್ ಉತ್ತಮವಾದ ಕಥೆ ಮಾಡಿದ್ದಾರೆ. ಚಿತ್ರಕಥೆ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಬಹುತೇಕ ಭಾಗದ ಚಿತ್ರೀಕರಣ ಸೆಟ್ ನಲ್ಲೇ ನಡೆದಿರುವುದು ವಿಶೇಷ ಎನ್ನುತ್ತಾರೆ.
ಎಸ್.ಆರ್.ವೆಂಕಟೇಶ್ ಗೌಡ ನಿರ್ಮಾಣದ ” BAD” ಚಿತ್ರದಲ್ಲಿ “ರೋಷಮಾನ್ ಎಫೆಕ್ಟ್” ಎಂಬ ವಿಶೇಷ ವಿಧಾನವನ್ನು ಬಳಸಿಕೊಳ್ಳಲಾಗಿದೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ.ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನ “BAD” ಚಿತ್ರಕ್ಕಿದೆ.
“ಪ್ರೀತಿಯ ರಾಯಭಾರಿ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ತೆರೆಮೇಲೆ ಮಾತ್ರವಲ್ಲ ತೆರೆಹಿಂದೆಯೂ ಅವರು ರಿಯಲ್ ಹೀರೋ..ಕಷ್ಟದಲ್ಲಿದ್ದವರಿಗೆ ಜೊತೆಯಾಗಿ ನಿಲ್ಲುವ ಸೂಪರ್ ಸ್ಟಾರ್..ಕಿಚ್ಚನ ಹೃದಯವಂತಿಕೆ, ಸರಳತೆ ಬಗ್ಗೆ ಹೊಸದಾಗಿ ವಿವರಿಸುವ ಅಗತ್ಯವಿಲ್ಲ. ಕೋಟಿಗೊಬ್ಬನ್ನು ಒಮ್ಮೆಯಾದ್ರೂ ಭೇಟಿಯಾಗಬೇಕು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಪ್ರತಿಯೊಬ್ಬ ಸುದೀಪಿಯನ್ಸ್ ಗೂ ಇದ್ದೇ ಇರುತ್ತದೆ. ಆ ಆಸೆ ಈಡೇರಿಕೆಗೆ ಸಮಯ ಕೂಡಿ ಬರಬೇಕು ಅಷ್ಟೇ. ಈಗ ಸುದೀಪ್ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಸಾಕ್ಷಿ ಎಂಬ ಬಾಲಕಿ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿ.. ಜೀವನದಲ್ಲಿ ಒಮ್ಮೆಯಾದ್ರೂ ತಮ್ಮ ನೆಚ್ಚಿನ ಸ್ಟಾರ್ ಭೇಟಿಯಾಗಬೇಕು ಎಂಬುದು ಸಾಕ್ಷಿ ಆಸೆ. ಬಾಲಕಿಯ ಆಸೆ ಮತ್ತು ಆರೋಗ್ಯ ಸಮಸ್ಯೆ ಬಗ್ಗೆ ತಿಳಿದುಕೊಂಡ ಕಿಚ್ಚ ಸುದೀಪ್ ತನ್ನ ಅಭಿಮಾನಿ ಹಾಗೂ ಅವರ ಕುಟುಂಬಸ್ಥರನ್ನ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಕ್ಷಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
‘ಆಟೋಗ್ರಾಫ್’ ನೀಡಿ ಪ್ರೀತಿಯಿಂದ ಅಭಿಮಾನಿಗೆ ಅಪ್ಪುಗೆ ಕೊಟ್ಟಿದ್ದಾರೆ. ಸುದೀಪ್ ಭೇಟಿಯಾದ ಖುಷಿ ಕ್ಷಣಗಳನ್ನು ಹಂಚಿಕೊಂಡಿರುವ ಸಾಕ್ಷಿ, ನನಗೆ ಸುದೀಪ್ ಸರ್ ಇಷ್ಟ. ರನ್ನ ಸಿನಿಮಾದ ಥಿತಲಿ ಹಾಡು ನನಗೆ ಸ್ಪೂರ್ತಿ ಎಂದಿದ್ದಾರೆ. ಕೋಟಿಗೊಬ್ಬನ್ನು ನೋಡಿ ಆ ಪುಟ್ಟ ಅಭಿಮಾನಿಯ ಖುಷಿಗೆ ಪಾರವೇ ಇಲ್ಲ. ಕಿಚ್ಚನ ಈ ಹೃದಯವಂತಿಕೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಸಲಾಂ ಎಂದಿದ್ದಾರೆ.
ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ ಹಾಗೂ ಲೋಹಿತ್ ಹೆಚ್ ನಿರ್ದೇಶಿಸಿರುವ ಸಿನಿಮಾ “ಮಾಫಿಯಾ”. ಜುಲೈ 4 ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ವಿಶೇಷವಾದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರಜ್ವಲ್ ಅವರಿಗೆ “ಮಾಫಿಯಾ” ಚಿತ್ರತಂಡ ಶುಭಾಶಯ ಕೋರಿದೆ.
ಚಿತ್ರೀಕರಣ ಮುಕ್ತಾಯವಾಗಿ, ಪೋಸ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ನಡೆಯುತ್ತಿರುವ ಈ ಚಿತ್ರವನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಆಕ್ಷನ್ ಪ್ರಿಯರಿಗೆ ಈ ಚಿತ್ರ ಬಹಳ ಮೆಚ್ಚುಗೆಯಾಗಲಿದೆ. “ಮಾಫಿಯಾ” ಚಿತ್ರಕ್ಕಾಗಿ ಪ್ರಜ್ವಲ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ ಹಾಗೂ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ ನಟನೆಯ ಮೂವತ್ತೈದನೇ ಚಿತ್ರವೂ ಹೌದು.
ಈ ಚಿತ್ರದಲ್ಲಿ ಮೂರು ಹಾಡುಗಳಿದೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಎಸ್ ಪಾಂಡಿಕುಮಾರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.
ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೋಮಲ್ ಜನುಮದಿನ ಉಡುಗೊರೆಯಾಗಿ ‘ರೋಲೆಕ್ಸ್’ ಸಿನಿಮಾದ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸೂಟು ಬೂಟೂ ತೊಟ್ಟು ಸ್ಟೈಲೀಶ್ ಲುಕ್ ನಲ್ಲಿ ಸೆನ್ಸೇಷನಲ್ ಸ್ಟಾರ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಟೈಟಲ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ‘ರೋಲೆಕ್ಸ್’ಗೆ ಶ್ರೀನಿವಾಸ್ ಮಂಡ್ಯ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ‘ಬಿಲ್ ಗೇಟ್ಸ್’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಮಂಡ್ಯ ಈ ಬಾರಿ ಇಂಟ್ರಸ್ಟಿಂಗ್ ಕಥೆ ಹೊತ್ತು ಬಂದಿದ್ದಾರೆ. ಕೋಮಲ್ ಗೆ ಜೋಡಿಯಾಗಿ ಪಂಚತಂತ್ರ ಬ್ಯೂಟಿ ಸೋನಲ್ ಮೊಂಟೆರೋ ನಟಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ಶೋಭರಾಜ್, ಅರವಿಂದ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ. ಈಗಾಗಲೇ ಶೇಖಡ 50ರಷ್ಟು ರೋಲೆಕ್ಸ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಉಳಿದ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ ಸೆಪ್ಟಂಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.