ಇತ್ತೀಚೆಗೆ ತೆರೆಕಂಡ ತನುಷ್ ಶಿವಣ್ಣ ಅಭಿನಯದ “ನಟ್ವರ್ ಲಾಲ್” ಚಿತ್ರ ಜನಮನಸೂರೆಗೊಂಡಿತ್ತು. ಅಮೇಜಾನ್ ಪ್ರೈಮ್ ನಲ್ಲೂ ಈ ಚಿತ್ರವನ್ನು ಅಧಿಕ ಸಂಖ್ಯೆಯ ಜನರು ವೀಕ್ಷಿಸುತ್ತಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರದ ಘೋಷಣೆಯಾಗಿದೆ.
ಚಿತ್ರಕ್ಕೆ “ನಪೋಲಿಯನ್” ಎಂದು ಹೆಸರಿಡಲಾಗಿದೆ. ಸಂಕ್ರಾಂತಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು “ನಟ್ವರ್ ಲಾಲ್” ಚಿತ್ರದ ನಿರ್ದೇಶಕ ಲವ ವಿ ಅವರೆ ನಿರ್ದೇಶಿಸುತ್ತಿದ್ದಾರೆ. “ವಿಕ್ರಾಂತ್ ರೋಣ” ಖ್ಯಾತಿಯ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಹಾಗೂ “ಮಾರ್ಟಿನ್” ಖ್ಯಾತಿಯ ಮಹೇಶ್ ಅವರ ಸಂಕಲನ ಈ ನೂತನ ಚಿತ್ರಕ್ಕಿದೆ.
ಮುಂದಿನ ತಿಂಗಳ ಮಧ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಕರ್ನಾಟಕದ ಅನೇಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಶೋಷಿತ ಹೆಣ್ಣುಮಕ್ಕಳ ಪರ ಧ್ವನಿ ಎತ್ತುವ ಕಥಾಹಂದರ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಡೇವಿ ಸುರೇಶ್ ಸಂಗೀತ ನೀಡುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.
ಬಹು ಬೇಡಿಕೆಯ ಚಿತ್ರ “ಮ್ಯಾಕ್ಸ್” ಇದೀಗ ತನ್ನ ಮೊದಲ ಗೀತೆ “ಮ್ಯಾಕ್ಸಿಮಮ್ ಮಾಸ್” ಅನ್ನು ಬಿಡುಗಡೆ ಮಾಡಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ಅಂಗವಾಗಿ ಈ ಮಾಸ್ ಗೀತೆಯನ್ನು ಇಂದು ಬಿಡುಗಡೆ ಮಾಡಿ, ಎಲ್ಲೆಡೆ ಸದ್ದು ಮಾಡುತ್ತಿದೆ.
ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಈ ಹಾಡಿಗೆ, ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದು, ಚೇತನ್ ಗಂಧರ್ವ ಮತ್ತು ಎಂ.ಸಿ. ಬಿಜ್ಜು ದನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುತ್ತಾರೆ. ಒಟ್ಟಾರೆ ಅಭಿಮಾನಿಗಳಿಗೆ ಈ ಮಾಸ್ ಗೀತೆಯು ರಸದೌತಣವನ್ನು ಉಣಬಡಿಸಿದೆ ಎಂದರೆ ಉತ್ಪ್ರೇಕ್ಷೆಯಲ್ಲ.
“ಮ್ಯಾಕ್ಸ್” ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮತ್ತು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿರುತ್ತಾರೆ.
ತೆಲುಗು ಚಿತ್ರರಂಗದ ಸೂಪರ್ ಹೀರೋ ಜೂ.ಎನ್‌ಟಿಆರ್ ಅವರು ಶನಿವಾರ ಉಡುಪಿಯ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ತಮ್ಮ ತಾಯಿಯೊಂದಿಗೆ ಆಗಮಿಸಿದ ಜೂ.ಎನ್‌ಟಿ ಆರ್ ಅವರನ್ನು ಕನ್ನಡದ ಖ್ಯಾತ ನಟ, ನಿರ್ದೇಶಕ ರಿಷಭ್ ಶೆಟ್ಟಿ ಅವರು ಪ್ರೀತಿಯಿಂದ ಬರಮಾಡಿಕೊಂಡರು. ಈ ವೇಳೆ ರಿಷಭ್ ಶೆಟ್ಟಿ ಅವರಿಗೆ ತಮ್ಮ ತಾಯಿಯನ್ನು ಜೂ.ಎನ್‌ಟಿಆರ್ ಅವರು ಪರಿಚಯ ಮಾಡಿಕೊಟ್ಟರು.
ರಿಷಭ್ ಶೆಟ್ಟಿ ಅವರು ಜೂ.ಎನ್‌ಟಿಆರ್ ಅವರ ತಾಯಿಯ ಪಾದಕ್ಕೆ ನಮಸ್ಕರಿಸುವ ಮೂಲಕ ಅವರನ್ನು ಬರಮಾಡಿಕೊಂಡು, ಉಡುಪಿ ಶ್ರೀಕೃಷ್ಣನ ಸನ್ನಿಧಿಗೆ ಕರೆದುಕೊಂಡು ಹೋದರು.
ಕೃಷ್ಣನ ದರ್ಶನ ಬಳಿಕ ಪೂಜೆ ಮಾಡಿಸಿ, ಅಲ್ಲಿ ಪ್ರಸಾದ ಪಡೆದ ಜೂ.ಎನ್‌ಟಿಆರ್ ಹಾಗು ಅವರ ತಾಯಿ ರಿಷಭ್ ಜೊತೆ ಒಂದಷ್ಟು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಿಷಭ್ ಶೆಟ್ಟಿ ಅವರ ಪತ್ನಿ ಇದ್ದರು. ಇನ್ನು, ನಿರ್ದೇಶಕ ಪ್ರಶಾಂತ್ ನೀಲ್ ಅವರು ಜೂ.ಎನ್‌ಟಿಆರ್ ಅವರಿಗೊಂದು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.
ಸಿನಿಮಾ ಶುರುವಿಗೆ ಮುನ್ನ ಜೂ.ಎನ್‌ಟಿಆರ್ ಅವರು ಕೃಷ್ಣನ ಮೊರೆ ಹೋಗಿದ್ದಾರೆ. ಇನ್ನು ಪ್ರಶಾಂತ್ ನೀಲ್ ಹಾಗು ಜೂ.ಎನ್‌ಟಿಆರ್ ಅವರ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
“ದ್ವೇಷ, ಅಸೂಯೆ, ಪ್ರೀತಿ ಮತ್ತು ಎಮೋಷನಲ್… ಇದು ಪೆಪೆ ಸಿನಿಮಾದೊಳಗಿನ ಹೂರಣ. ಇದೊಂದು ಪಕ್ಕಾ ಮಾಸ್ ಫೀಲ್ ಇರುವ ಚಿತ್ರ. ಇಡೀ ಚಿತ್ರದಲ್ಲಿ ಮಚ್ಚು ಝಳಪಳಿಸಿದೆ. ರಕ್ತ ಚಿಮ್ಮಿದೆ. ಆಕ್ರೋಶ ಆಗಸದೆತ್ತರವಿದೆ. ಮೌನದ ಆಕ್ರಂದನವಿದೆ. ಇಲ್ಲಿ ನಾಲ್ಕು ಕುಟುಂಬದ ಮಧ್ಯೆ ನಡೆಯುವ ದ್ವೇಷ, ಅಸೂಯೆ ಒಳಗೊಂಡ ಕಥೆ ಹೈಲೆಟ್. ಚಿತ್ರದಲ್ಲಿ ನೆನಪಲ್ಲುಳಿಯುವ ಕೆಲವು ದೃಶ್ಯಗಳನ್ನು ಹೊರತುಪಡಿಸಿದರೆ, ಕಾಡುವ ಕಥೆಯೇನೂ ಇಲ್ಲ. ದುರ್ಬಲ ಕಥೆಯೇ ಚಿತ್ರದ ಹಿನ್ನೆಡೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಇಂತಹ ಕಥೆಯ ಎಳೆ ಬಂದಿದೆ. ಹಾಗಾಗಿ ಕಥೆಯಲ್ಲಿ ಗಟ್ಟಿತನವಿದೆ ಎಂದೆನಿಸೋದಿಲ್ಲ. ಆದರೆ, ಒಂದೊಳ್ಳೆಯ ನಿರೂಪಣೆಯ ಸಿನಿಮಾ ಆಗಿ ಹೊರಹೊಮ್ಮಿದೆ ಅನ್ನುವುದು ತಕ್ಕಮಟ್ಟಿಗಿನ ಸಮಾಧಾನ.
ಮೊದಲರ್ಧ ಸಿನಿಮಾ ನಿಧಾನಗತಿಯಲ್ಲಿ ಸಾಗುತ್ತದೆ ಎಂಬ ಭಾಸ. ಕಾರಣ, ನಿರ್ದೇಶಕರು ಕಥೆ ಹೇಳುವ ಮತ್ತು ತೋರಿಸುವ ವಿಧಾನ. ದ್ವಿತಿಯಾರ್ಧ ಕೂಡ ಇದಕ್ಕೆ ಹೊರತಲ್ಲ. ಕಥೆ ತುಂಬಾ ಸ್ಟ್ರಾಂಗ್ ಆಗಿದ್ದರೂ, ಅದನ್ನು ಬಿಗಿಹಿಡಿತದಲ್ಲಿ ಇಟ್ಟುಕೊಳ್ಳಲು ನಿರ್ದೇಶಕರು ಕೊಂಚ ಹಿಂದೆ ಉಳಿದಿದ್ದಾರೆ. ಆದರೆ, ಮೇಕಿಂಗ್ ವಿಷಯಕ್ಕೆ ಬಂದರೆ, ಆ ಬಗ್ಗೆ ಮಾತಾಡುವಂತಿಲ್ಲ. ಮೇಕಿಂಗ್ ಸಿನಿಮಾದ ಅಂದವನ್ನು ಹೆಚ್ಚಿಸಿದರೆ, ಚಿತ್ರದ ಸಂಕಲನ ಕೆಲಸ ವೇಗವನ್ನು ಹೆಚ್ಚಿಸಿದೆ. ಸಿನಿಮಾದ ಹೈಲೆಟ್ ಅಂದರೆ, ಕಟ್ಟಿಕೊಟ್ಟಿರುವ ಕಾಡಿನ ಪರಿಸರ ಹಾಗು ನೈಜತೆಗೆ ಹತ್ತಿರ ಎನಿಸುವ ದೃಶ್ಯಗಳು. ಉಳಿದಂತೆ, ತೆರೆಮೇಲೆ ಕಾಣುವ ಪಾತ್ರಗಳು. ಅಲ್ಲಿ ಸರಾಗವಾಗಿ ಆಡುವ ಸಂಭಾಷಣೆ ಮನಸ್ಸಿಗೆ ಹತ್ತಿರವೆನಿಸುತ್ತದೆ. ಎಲ್ಲೋ ಒಂದು ಕಡೆ ಕಥೆಯ ಆಶಯ ಮರೆತು ಮಚ್ಚಿಗೆ ಹೆಚ್ಚು ಜಾಗ ಕೊಟ್ಟುಬಿಟ್ಟರಾ ಅನ್ನೋ ಅಂಶ ಅತಿಯಾಗಿ ಕಾಡುತ್ತದೆ. ವ್ಯವಸ್ಥೆಗೆ ರಕ್ತಕ್ರಾಂತಿಯೊಂದೇ ಆಧಾರ ಅನ್ನುವಷ್ಟರ ಮಟ್ಟಿಗೆ ರಕ್ತದೋಕುಳಿ ಮೆರೆದಿದೆ.
ಕಥೆ ಇಷ್ಟು…
ಕಾಡಿನ ಪರಿಸರದೊಳಗಿರುವ ಬದನಾಳು ಎಂಬ ಕಾಲ್ಪನಿಕ ಕುಗ್ರಾಮ. ಅಲ್ಲಿ ನಾಲ್ಕು ಬೇರೆ, ಬೇರೆ ಜಾತಿ ಇರುವಂತಹ ಕುಟುಂಬಗಳ ವಾಸ. ಮೇಲ್ವರ್ಗ ಮತ್ತು ಕೆಳವರ್ಗ ಎಂಬ ಅಸೂಯೆ. ಆಚಾರ, ವಿಚಾರ ಪಾಲಿಸುವ ಸಂಪ್ರದಾಯಸ್ಥ ಕುಟುಂಬ ಒಂದು ಕಡೆಯಾದರೆ, ಕಟ್ಟ ಕಡೆಯ ಜನರಾಗಿ ಬದುಕುವ ಅಸಹಾಯಕ ಕುಟುಂಬ ಮತ್ತೊಂದು ಕಡೆ. ಅಲ್ಲಿ ನೀರಿನ ತೊರೆಗಾಗಿ ನಡೆಯುವ ಸಂಘರ್ಷವೇ ಚಿತ್ರದ ಆಕರ್ಷಣೆ. ಮೇಲ್ಜಾತಿ ಮತ್ತು ಕೆಳಜಾತಿಗಳ ಮಧ್ಯೆ ನಡೆಯುವ ಸಂಘರ್ಷ ಇಲ್ಲಿ ಸಿನಿಮಾದ ಕಥಾವಸ್ತು. ಮೇಲ್ವರ್ಗದ ಜನ ಒಂದು ವಿಷಯಕ್ಕೆ ಕೆಳವರ್ಗದವರನ್ನು ಅನಾದಿಕಾಲದಿಂದಲೂ ತುಳಿಯುತ್ತಲೇ ಬಂದಿರುತ್ತೆ. ಅಂತಹ ತುಳಿತಕ್ಕೊಳಗಾದ ಕುಟುಂಬದಲ್ಲಿ ಜನಿಸಿದ ಪ್ರದೀಪ್ ಅಲಿಯಾಸ್ ಪೆಪೆ ಆ ತಾರತಮ್ಯ ಮತ್ತು ಜಾತಿ ಸಂಘರ್ಷಕ್ಕೆ ಕಾರಣವಾದ ಕುಟುಂಬಗಳ ಮೇಲೆ ಹೇಗೆ ಎಗರಿ ಬೀಳುತ್ತಾನೆ ಅನ್ನೋದು ಕಥೆ. ಕೊನೆಗೆ ಆ ನೀರಿನ ತೊರೆ ಯಾರ ಪಾಲಾಗುತ್ತೆ ಅನ್ನೋದು ಚಿತ್ರದ ಕಥಾಹಂದರ. ಆ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.
ಇನ್ನು, ಕಥೆಯ ಒನ್‌ಲೈನ್ ಚೆನ್ನಾಗಿದೆ. ನಿರ್ದೇಶಕರ ಆಶಯವೂ ಕೂಡ ಸೊಗಸಾಗಿದೆ. ಇಲ್ಲಿ ಮೂಢನಂಬಿಕೆ ಇದೆ. ಪುರುಷನ ಪೌರುಷವಿದೆ. ಮಹಿಳೆ ಮೇಲೆ ನಡೆಯೋ ದೌರ್ಜನ್ಯವಿದೆ. ಈ ಎಲ್ಲವನ್ನೂ ಅಷ್ಟೇ ಅಂದವಾಗಿ ಅರ್ಥೈಸಲು ನಿರ್ದೇಶಕರು ಸವೆಸಿರುವ ಶ್ರಮ ಮೆಚ್ಚಬೇಕು. ಆದರೂ, ಕಥೆಗೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಬೇಕಿತ್ತು. ಕೆಲ ದೃಶ್ಯಗಳು ನೈಜತೆಗೆ ಹತ್ತಿರ ಎನಿಸಿದರೆ, ಕೆಲವು ದೃಶ್ಯಗಳು ಬೇಕಿತ್ತಾ ಎನಿಸುವುದುಂಟು. ಈ ಎಲ್ಲದರ ನಡುವೆ, ನಿರ್ದೇಶಕರು ಕೆಲ ದೃಶ್ಯಗಳ ಮೂಲಕ ಸಾಮಾಜಿಕ ವ್ಯವಸ್ಥೆಯೊಳಗಿನ ಕಲ್ಮಶವನ್ನು ಎತ್ತಿತೋರಿಸಿದ್ದಾರೆ. ಒಂದೊಂದು ಕಡೆ ಬರುವ ದೃಶ್ಯಗಳು ಮಲಯಾಳಂ ಸಿನಿಮಾಗಳನ್ನು ನೆನಪಿಸುತ್ತವೆ.
ಯಾರು ಹೇಗೆ?
ವಿನಯ್ ರಾಜಕುಮಾರ್ ಅವರಿಲ್ಲಿ ಪಕ್ಕಾ ಮಾಸ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅವರ ಪಾತ್ರ ಸರಿಹೊಂದಿದೆ. ಇಡೀ ಸಿನಿಮಾದಲ್ಲಿ ಅವರು ಪಂಚೆ ಮತ್ತು ಶರ್ಟ್, ಕೈಯಲ್ಲೊಂದು ಸಿಗರೇಟ್ ಹಿಡಿದು ಓಡಾಡಿದ್ದಾರೆ. ಅವರು ಹಿಡಿದಿರುವ ಮಚ್ಚು, ಹೊಡೆದಾಡುವ ದೃಶ್ಯಗಳೆಲ್ಲವೂ ನೈಜವೆನಿಸುತ್ತದೆ. ಹೊರಬಂದರೂ ವಿನಯ್ ಅವರ ಪಾತ್ರ ಹಾಗೊಮ್ಮೆ ಕಾಡದೇ ಇರದು. ಇನ್ನು, ಕಾಜಲ್ ಕುಂದರ್ ಕೂಡ ಇಲ್ಲಿ ಸಾಮಾಜಿಕ ಪಿಡುಗು ಎನಿಸಿರುವ ಆಚಾರ-ವಿಚಾರವನ್ನು ಧಿಕ್ಕರಿಸುವ ಹೆಣ್ಣಾಗಿ ಗಮನಸೆಳೆದಿದ್ದಾರೆ. ಉಳಿದಂತೆ ಅರುಣ ಬಾಲರಾಜ್ ತಾಯಿಯಾಗಿ ಕಾಡುತ್ತಾರೆ. ಬಲರಾಜವಾಡಿ, ಕಿಟ್ಟಿ, ಯಶ್ ಶೆಟ್ಟಿ ಸೇರಿದಂತೆ ಬರುವ ಪ್ರತಿ ಪಾತ್ರಗಳೂ ಕೂಡ ನಿರ್ದೇಶಕರ ಅಣತಿಯಂತೆ ನಟಿಸಿವೆ. ಇನ್ನು, ಇಲ್ಲಿ ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣ ಇಷ್ಟವಾಗುತ್ತದೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಬರುವ ಒಂದು ಹಾಡು ಗುನುಗುವಂತಿದೆ. ಸ್ಟಂಟ್ ಬಗ್ಗೆ ಹೇಳಲೇಬೇಕು. ಆಡಂಬರವಿಲ್ಲದ ನೈಜ ಹೊಡೆದಾಟಕ್ಕೆ ಸಾಕ್ಷಿಯಂಬಂತಿದೆ.
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಆಚರಿಸೋಕೆ ಅವರ ಅಭಿಮಾನಿಗಳು ಸಜ್ಜಾಗಿದ್ದಾರೆ. ಸೆಪ್ಟೆಂಬರ್ 2 ರಂದು ಸುದೀಪ್ ಬರ್ತ್ ಡೇ. ಅವರನ್ನು ಕಣ್ತುಂಬಿಕೊಂಡು ಹುಟ್ಟುಹಬ್ಬದ ಶುಭಾಶಯ ಹೇಳೋಕೆ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬಕ್ಕೆ ಒಂದಷ್ಟು ಸಿನಿಮಾಗಳು ಅನೌನ್ಸ್ ಆಗಲಿವೆ.
ಈ ಕುರಿತಂತೆ ಅನೂಪ್ ಭಂಡಾರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ವೋಂದನ್ನು ಹಾಕಿದ್ದಾರೆ. ಸೆಪ್ಟೆಂಬರ್ 2 ರ ಬೆಳಗ್ಗೆ 10 ಗಂಟೆಗೆ ಹೊಸದ್ದೊಂದು ಅನೌನ್ಸ್ ಮೆಂಟ್ ಆಗಲಿದೆ. ಸುದೀಪ್ ಅವರೊಂದಿಗೆ ಮತ್ತೊಂದು ಹೊಸ ಸಿನಿಮಾ ಮಾಡುವ ಕುರಿತು ಅವರು ಸುಳಿವೊಂದು ನೀಡಿದ್ದಾರೆ.
ಹೌದು, ಸುದೀಪ್ ಅವರ ಜೊತೆಗೆ ಅನೂಪ್ ಭಂಡಾರಿ ಅವರು, ಈ ಹಿಂದೆ ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದರು. ಆ ಸಿನಿಮಾ ನಿರೀಕ್ಷೆ ಮಟ್ಟಕ್ಕೆ ಸಕ್ಸಸ್ ಆಗಲಿಲ್ಲ. ಆದರೂ ಆ ಸಿನಿಮಾದ ನಿರೂಪಣೆ ಹಾಗು ಆರ್ಟ್ ವಿಭಾಗದ ಕೆಲಸ ಮೆಚ್ಚುಗೆ ಪಡೆದಿತ್ತು.
ಅನೂಪ್ ಭಂಡಾರಿ ಅವರು ಸುದೀಪ್ ಅವರಿಗೆ ಯಾವ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬ ಪ್ರಶ್ನೆ ಈ ಹಿಂದೆಯೇ ಎದ್ದಿತ್ತು. ಬಿಲ್ಲ ರಂಗ ಭಾಷ ಹೆಸರಿನ ಚಿತ್ರವೊಂದು ಇಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬರಲಿದೆ ಎನ್ನಲಾಗುತ್ತಿತ್ತು. ಈಗ ಅನೂಪ್ ಅವರು ಹಾಕಿಕೊಂಡಿರುವ ಟ್ವಿಟ್ಟರ್ ವಿಷಯ ಕೂಡ ಅದೇ ಸಿನಿಮಾ ಕುರಿತಂತೆ ಇರಬಹುದಾ? ಎಂಬ ಒಂದಷ್ಟು ಪ್ರಶ್ನೆಗಳು ಕಿಚ್ಚನ ಅಭಿಮಾನಿಗಳ ಮನದಲ್ಲಿ ಬೇರೂರಿವೆ. ಅದೇನೆ ಇದ್ದರೂ, ಸೆಪ್ಟೆಂಬರ್ 2 ರಂದು ಕಿಚ್ಚನ ಅಭಿಮಾನಿಗಳೆಲ್ಲರೂ ಕಿಚ್ಚೋತ್ಸವಕ್ಕೆ ಸಜ್ಜಾಗಿದ್ದಾರೆ.
ಅಂದು ಅನೂಪ್ ಭಂಡಾರಿ ಅವರು ಕಿಚ್ಚನ ಜೊತೆ ತಮ್ಮ ಹೊಸ ಸಿನಿಮಾ ಯಾವುದು ಎಂದು ಅನೌನ್ಸ್ ಮಾಡಲಿದ್ದಾರೆ. ಅಂದು ಅನೌನ್ಸ್ ಆಗಲಿರೋದು ಬಿಲ್ಲ ರಂಗ ಭಾಷ ಸಿನಿಮಾನ ಅಥವಾ ಬೇರೆಯದ್ದಾ? ಈ ಬಗ್ಗೆ ಅನೂಪ್ ಅವರ ಟ್ವೀಟ್ ಸಾಕಷ್ಟು ಕುತೂಹಲ ಮೂಡಿಸಿದೆ.
ಅದೇನೆ ಇದ್ದರೂ, ಕಿಚ್ಚನ ಹುಟ್ಟುಹಬ್ಬಕ್ಕೆ ಒಂದಷ್ಟು ಸಿನಿಮಾಗಳು ಅನೌನ್ಸ್ ಆಗುವ ಸಾಧ್ಯತೆ ಇದೆ. ಸದ್ಯ ಸುದೀಪ್ ಅವರು ಮ್ಯಾಕ್ಸ್ ಸಿನಿಮಾದ ಜಪದಲ್ಲಿದ್ದಾರೆ. ಸಿನಿಮಾ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸೆಪ್ಟೆಂಬರ್ 2ರ ಕಿಚ್ಚನ ಹುಟುಹಬ್ಬಕ್ಕೆ ಮ್ಯಾಕ್ಸ್ ಪ್ರೇಕ್ಷಕರ ಎದುರು ಬರಬೇಕಿತ್ತು. ಇನ್ನಷ್ಟು ಕೆಲಸಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಆ ಸಿನಿಮಾವನ್ನು ನೋಡಲು ಇದೀಗ ಸುದೀಪ್ ಅಭಿಮಾನಿಗಳು ಕಾದಿರುವುದಂತೂ ಸುಳ್ಳಲ್ಲ.
ಒಂದಂತೂ ನಿಜ ಮತ್ತೆ ಒಂದಾಗಲಿರುವ ವಿಕ್ರಾಂತ್ ರೋಣ ಜೋಡಿ ಹೊಸ ಮೋಡಿಮಾಡಲಿದೆ ಎಂಬ ಮಾತು ಕೇಳಿಬರುತ್ತಿದೆ. ಸುದೀಪ್ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್ ಸಿಗಲಿದೆ. ಹಲವು ದಿನಗಳಿಂದ ಹರಿದಾಡುತ್ತಿರುವ ಸುದ್ದಿಗೆ ಬ್ರೇಕ್ ಹಾಕಿದ ನಿರ್ದೇಶಕ ಅನೂಪ್ ಪೋಸ್ಟ್ ಮೂಲಕ ಕೂತೂಹಲ ಮೂಡಿಸಿದ್ದಾರೆ.
ಕಿಚ್ಚನಿಗೆ ಮತ್ತೆ ಆಕ್ಷನ್ ಕಟ್ ಹೇಳಲಿರುವ ಅನೂಪ್ ಸಾಕಷ್ಟು ಉತ್ಸಾಹದಲ್ಲಿದ್ದಾರೆ.
ಅಂದಹಾಗೆ, ಬಿಲ್ಲ ರಂಗ ಭಾಷಾ ಸೆಪ್ಟೆಂಬರ್ 2 ಗೆ ಅನೌನ್ಸ್ ಮೆಂಟ್ ಆಗಲಿದೆ ಅನ್ನೋದೇ ಫ್ಯಾನ್ಸ್ ಮಾತು. ಸುದೀಪ್ ಬರ್ತಡೇ ದಿನ ಹೊಸ ಸಿನಿಮಾ ಅನೌನ್ಸ್ ಮಾಡಲಾಗುತ್ತೆ ಎಂಬ ನಿರೀಕ್ಷೆ ಜೋರಾಗಿದೆ. ಇದಕ್ಕೆ ಪೂರಕವಾಗಿ ದ ಮೆನ್ ಇನ್ ಬ್ಲಾಕ್ ವಿಲ್ ಬೀ ರೈಟ್ ಬ್ಯಾಕ್ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ ಅನೂಪ್. ಸುದೀಪ್ ಸರ್ ಹುಟ್ಟುಹಬ್ಬದಂದು ಮತ್ತೆ ಭೇಟಿ ಆಗೋಣ ಎಂದು ಕ್ಯಾಪ್ಶನ್ ಕೊಟ್ಟ ನಿರ್ದೇಶಕ ಅನೂಪ್ ಭಂಡಾರಿ ಅಂದು ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ.
ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು ಯಶಸ್ಸು ಕಂಡಿರುವ ಸಾಕಷ್ಟು ಉದಾಹರಣೆಗಳಿವೆ. ಅಂತಹುದೇ ವಿಭಿನ್ನ ಕಂಟೆಂಟ್ ವುಳ್ಳ “ತದ್ವಿರುದ್ಧ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸುಚೇಂದ್ರ ಪ್ರಸಾದ್, ಹಿರಿಯ ನಟಿ ಸುಮನ್ ರಂಗನಾಥ್ ಹಾಗೂ ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು CHARMION MOTION PICTURES ಸಂಸ್ಥೆ ನಿರ್ಮಾಣ ಮಾಡಿದೆ. ವಿನೋದ್ ಜೆ ರಾಜ್ ನಿರ್ದೆಶಿಸಿದ್ದಾರೆ.
“ಯಶೋಗಾಥೆ” ಎಂಬ ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರ “ತದ್ವಿರುದ್ಧ”. ವಾಸ್ತವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದೆ ” ತದ್ವಿರುದ್ಧ ” ಎಂದು ಶೀರ್ಷಿಕೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ನಿರ್ದೇಶಕ ವಿನೋದ್ ಜೆ ರಾಜ್, ಇದೊಂದು 90 ಕಾಲಘಟ್ಟದಲ್ಲಿ ನಡೆಯುವ ಕಥೆ. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರವಾದರೂ ಕ್ರೌರ್ಯವನ್ನು ವೈಭವಿಕರಿಸಿಲ್ಲ. ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ ಸೇರಿದಂತೆ ಐದು ಮುಖ್ಯಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ.
ಸಕಲೇಶಪುರದಲ್ಲೇ ಪೂರ್ತಿ ಚಿತ್ರೀಕರಣ ನಡೆದಿದೆ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಪಕರು ಚಿತ್ರ ನಿರ್ಮಾಣ ಮಾಡಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರು ಸಹಕಾರ ನೀಡಿದ್ದಾರೆ. ಹಾಡಿಲ್ಲದ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತವೇ ಹೈಲೆಟ್ ಎನ್ನುತ್ತಾರೆ. ಕಥೆ, ಚಿತ್ರಕಥೆ, ಛಾಯಾಗ್ರಹಣ, ಸಂಕಲನದ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಯಾಗಿ ನಿಭಾಯಿಸಿರುವ ನಿರ್ದೇಶಕರು ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದ್ದಾರೆ.
ನಿರ್ದೇಶಕರು ಹೇಳಿದ ತಕ್ಷಣ ಕಥೆ ಇಷ್ಟವಾಯಿತು. ನನ್ನ ಪಾತ್ರ ಚೆನ್ನಾಗಿದೆ. ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಎಲ್ಲರೂ ನಮ್ಮ ಚಿತ್ರವನ್ನು ನೋಡಿ ಎಂದರು ನಟಿ ಸುಮನ್ ರಂಗನಾಥ್.
ಹೊಸಚಿಗುರು ಹಳೇ ಬೇರು ಸಮ್ಮಿಶ್ರಣ ಈ ಚಿತ್ರ ಎಂದು ಮಾತನಾಡಿದ ನಟ ಸುಚೇಂದ್ರ ಪ್ರಸಾದ್, ಸಿದ್ದ ಸೂತ್ರಗಳನ್ನು ಪಕ್ಕಕ್ಕಿರಿಸಿ ಮಾಡಿರುವ ಚಿತ್ರವಿದು. ಹಾಗಾಗಿ ಸ್ವಲ್ಪ ಈ ಚಿತ್ರ ಭಿನ್ನ. ಸಿನಿಮಾ ತಂತ್ರವನ್ನು ಬಿಟ್ಟು ಬೇರೆ ಯಾವ ತಂತ್ರಗಾರಿಕೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ಹೇರಿಲ್ಲ ಹಾಗಾಗಿ ಇದು ವಿಭಿನ್ನ ಅಂತಲೂ ಹೇಳಬಹುದು. ಈ ವಿಭಿನ್ನ ಕಥೆ ಯ ಈ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ ಎಂದರು.
ಚಿತ್ರದಲ್ಲಿ ಅಭಿನಯಿಸಿರುವ ವಿಕ್ರಮ್, ಐಶ್ವರ್ಯ ಬಿ ಶೆಟ್ಟಿ, ಸುವಿನ ಗೌಡ, ಪೂಜಾ ಗೌಡ, ಅಭಿಲಾಶ್ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಕೆ.ಆರ್ ರವಿಚಂದ್ರ, ಐಶ್ವರ್ಯ ಬಿ ಶೆಟ್ಟಿ ಚಿತ್ರದ ಕುರಿತು ಮಾತನಾಡಿದರು. CHARMION MOTION PICTURES ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ಸ್ಯಾಂಡಲ್‌ವುಡ್‌ಗೆ ಹೊಸಬರು ಬರುತ್ತಲೇ ಇದ್ದಾರೆ. ಆ ಸಾಲಿಗೆ ಈಗ ಹಾಸನದ ಹುಡುಗಿಯೊಬ್ಬಳ ಆಗಮನವಾಗಿದೆ. ಹೆಸರು ಭವ್ಯಾ. ಯಾವುದೇ ಗಾಡ್ ಫಾದರ್ ಇರದ ಭವ್ಯಾ, ಅದೃಷ್ಟಕ್ಕಿಂತ ಪ್ರತಿಭೆ ನಂಬಿ ಬಂದವರು. ಗಾಂಧಿನಗರದಲ್ಲಿ ಬೆಳೆಯಬೇಕೆಂಬ ಆಸೆ ಹೊತ್ತ ಭವ್ಯಾಗೆ ಸಿನಿಮಾ ರಂಗ ಭವ್ಯ ಭರವಸೆ ಮೂಡಿಸಿದೆ…
ಬಣ್ಣದ ಲೋಕದಲ್ಲಿ ಮಿಂದೇಳಬೇಕು. ಎಲ್ಲರಂತೆ ತಾನೂ ಗಟ್ಟಿನೆಲೆ ಕಂಡುಕೊಳ್ಳಬೇಕು ಅಂತ ಬಂದ ಪ್ರತಿಭೆಗಳಿಗೆ ಇಲ್ಲಿ ಲೆಕ್ಕವಿಲ್ಲ. ಅಂತೆಯೇ, ತಾನೂ ಇಲ್ಲೊಂದು ಜಾಗ ಮಾಡಿಕೊಳ್ಳಬೇಕು, ಎಲ್ಲರನ್ನೂ ನಕ್ಕು ನಗಿಸಬೇಕು, ಅತ್ತು ಅಳಿಸಬೇಕು ಅಂದುಕೊಂಡು ಬಂದ ಅದೆಷ್ಟೋ ಯುವ ನಟಿಮಣಿಗಳು ಇಲ್ಲಿ ನೆಲೆಕಂಡಿದ್ದಾರೆ. ನೆಲೆ ಕಾಣಲು ಹಪಾಹಪಿಸುತ್ತಿದ್ದಾರೆ. ಸಿನಿಲೋಕದಲ್ಲಿ ಜಾಗ ಮಾಡಿಕೊಂಡವರೂ ಇದ್ದಾರೆ. ಈಗ ಅಂತಹ ಪ್ರತಿಭಾವಂತ ನಟಿಮಣಿಯರ ಸಾಲಿಗೆ ಭವ್ಯಾ ಎಂಬ ಕನಸು ಕಂಗಳ ಹುಡುಗಿಯೂ ಸೇರಿದ್ದಾಳೆ.
ಹೌದು, ಹೆಸರಿಗೆ ತಕ್ಕಂತೆ ಭವ್ಯವಾಗಿರುವ ಈಕೆಗೆ ಸ್ಯಾಂಡಲ್‌ವುಡ್‌ನಲ್ಲಿ ಮಿಂದೇಳುವ ಆಸೆ. ಅಷ್ಟೇ ಅಲ್ಲ, ತನ್ನ ನಟನೆಯ ಮೂಲಕ ಬಣ್ಣದ ಲೋಕದಲ್ಲಿ ನೆಲೆಕಾಣುವ ಅದಮ್ಯ ಬಯಕೆ. ಹಾಸನದ ಈ ಚೆಲುವೆ ಓದಿರೋದು ಬಿಎಸ್ಸಿ. ಪದವಿ ಪಡೆದಿದ್ದರೂ, ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳದೆ, ತನ್ನ ಭವಿಷ್ಯವೇನಿದ್ದರೂ, ವರ್ಣರಂಜಿತ ಚಿತ್ರರಂಗದಲ್ಲಿದೆ ಅಂದುಕೊಂಡು, ಇಲ್ಲಿಯೇ ಕಲಾಸೇವೆ ಮಾಡಿಕೊಂಡು, ನಾಯಕಿಯಾಗಿ ಗುರುತಿಸಿಕೊಂಡು ಎಲ್ಲರ ಮನ ಗೆಲ್ಲಬೇಕೆಂಬ ಛಲ ಮತ್ತು ಹಠ ಈಕೆಯದ್ದು.
ಅಂದಹಾಗೆ, ಯಾರೇ ಇರಲಿ ಸಿನಿಮಾ ರಂಗವನ್ನು ಸ್ಪರ್ಶಿಸುವುದು ಸುಲಭದ ಮಾತಲ್ಲ. ಅದರಲ್ಲೂ ಇಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕು ಅಂದರೆ, ಯಾರಾದರೂ ಗಾಡ್ ಫಾದರ್ ಇರಬೇಕು. ಇಲ್ಲವೇ ಅದೃಷ್ಟ ಇರಬೇಕು. ಆದರೆ, ಇದ್ಯಾವುದನ್ನೂ ಈ ಭವ್ಯಾ ನಂಬಿಕೊಂಡು ಬಂದಿಲ್ಲ. ಪ್ರತಿಭೆಯನ್ನು ಮಾತ್ರ ನಂಬಿಕೊಂಡು ಗಾಂಧಿನಗರಕ್ಕೆ ಬಲಗಾಲಿಟ್ಟು ಬಂದಿದ್ದಾರೆ.
ಸ್ಯಾಂಡಲ್‌ವುಡ್ ಸ್ಪರ್ಶಿಸಿರುವ ಭವ್ಯಾ ಈಗಾಗಲೇ ಸಿನಿಮಾವೊಂದರಲ್ಲಿ ನಟಿಸಿದ್ದಾಗಿದೆ. “ದುನಿಯಾ” ರಶ್ಮಿ ಅವರೊಂದಿಗೆ ರಂಗಿನ ರಾಟೆ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಅವರ ಮೊದಲ ಎಂಟ್ರಿ. ಅಲ್ಲಿಂದ ಒಂದಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿಬಂದರೂ, ಭವ್ಯಾ ಮಾತ್ರ, ಬಂದಿದ್ದೆಲ್ಲವನ್ನೂ ಒಪ್ಪಿಕೊಳ್ಳಲಿಲ್ಲ. ಕಾರಣ, ಪಾತ್ರ ಮತ್ತು ಕಥೆಯ ಆಯ್ಕೆಯತ್ತ ಗಮನಹರಿಸಿದರು.
ಭವ್ಯಾ ಅವರು ಒಂದೊಳ್ಳೆಯ ಪಾತ್ರವನ್ನು ಎದುರು ನೋಡುತ್ತಿದ್ದಾರೆ. ಕಥೆ ಮತ್ತು ಪಾತ್ರಕ್ಕೆ ಪ್ರಮುಖ ಆದ್ಯತೆ ಎನ್ನುವ ಭವ್ಯಾ, ಕಮರ್ಷಿಯಲ್ ಮತ್ತು ಕಲಾತ್ಮಕ ಸಿನಿಮಾಗಳಲ್ಲೂ ನಟಿಸೋಕೆ ಸೈ ಎನ್ನುತ್ತಾರೆ. ಸದ್ಯ ಅವರು ಹಲವಾರು ಬ್ರಾಂಡೆಡ್ ಜಾಹಿರಾತುಗಳಲ್ಲಿ ನಟಿಸುವ ಮೂಲಕ ಬಣ್ಣದ ಲೋಕದ ನಂಟನ್ನು ಬೆಳೆಸಿಕೊಂಡಿದ್ದಾರೆ.
ಸದ್ಯ ರಂಗಿನ ರಾಟೆ ಬಳಿಕ ಭವ್ಯಾ ಅವರು “ಪೈನ್ ಕಿಲ್ಲರ್” ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರವಿನ್ನು ಬಿಡುಗಡೆಯಾಗಬೇಕಿದೆ. ಇದರ ನಡುವೆ, ತಮಿಳು ಭಾಷೆಗೂ ಲಗ್ಗೆ ಇಟ್ಟಿರುವ ಭವ್ಯಾ ಅಲ್ಲಿನ “ಟಿಂಗ್ ಟಾಂಗ್” ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ನನ್ನ ಮೊದಲ ಆದ್ಯತೆ ಎನ್ನುವ ಭವ್ಯಾ, ಹೊಸ ಜಾನರ್ ಕಥೆಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ. ಅದರಲ್ಲೂ, ಮಹಿಳಾ ಪ್ರಧಾನ ಕಥೆಗಳು ಮತ್ತು ಥ್ರಿಲ್ಲಿಂಗ್ ಎಲಿಮೆಂಟ್ಸ್ ಇರುವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಹಂಬಲವಿದೆ ಎನ್ನುತ್ತಾರೆ.
ಅದೇನೆ ಇರಲಿ, ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಹೊಸ ನಟಿಮಣಿಗಳ ಆಗಮನವಾಗುತ್ತಲೇ ಇರುತ್ತೆ. ಅಂತಹವರ ಸಾಲಿಗೆ ಈಗ ಭವ್ಯಾ ಕೂಡ ಸೇರಿದ್ದಾರಾದರೂ, ಅವರೊಳಗೆ ಇಲ್ಲಿ ಗಟ್ಟಿಯಾಗಿ ಬೇರೂರಬೇಕೆಂಬ ಆಸೆ ಇದೆ. ಅದರಲ್ಲೂ, ಒಂದಷ್ಟು ಹೀರೋಗಳ ಜೊತೆ ಕಾಣಿಸಿಕೊಳ್ಳುವ ಆಸೆಯೂ ಅವರೊಳಗಿದೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವ ಭವ್ಯಾ, ಮೂರು ಭಾಷೆಯನ್ನೂ ಅರಿತಿದ್ದಾರೆ.
“ನನಗಿಲ್ಲಿ ಯಾವ ಗಾಡ್ ಫಾದರ್ ಇಲ್ಲ. ನಾನು ನನ್ನ ಪ್ರತಿಭೆಯನ್ನು ಮಾತ್ರ ನಂಬಿಕೊಂಡು ಇಲ್ಲಿಗೆ ಬಂದಿದ್ದೇನೆ. ಸಿನಿಮಾವನ್ನೂ ಸವಾಲಾಗಿ ಸ್ವೀಕರಿಸಿದ್ದೇನೆ. ಅತೀವ ಉತ್ಸಾಹದಲ್ಲೇ ಸಿನಿಮಾದಲ್ಲಿ ಭವಿಷ್ಯ ಕಂಡುಕೊಳ್ಳುವ ಆಸೆಯೂ ಇದೆ. ವಲ್ಗರ್ ಎನ್ನುವ ಪಾತ್ರಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಚಾಲೆಂಜ್ ಪಾತ್ರಗಳಲ್ಲೂ ಕಾಣಿಸಿಕೊಳ್ಳಬೇಕು ಎಂಬ ಬಯಕೆ ನನ್ನದು. ಕನ್ನಡದ ಅನೇಕ ಹಿರಿಯ ನಟಿಯರು ನನಗೆ ಸ್ಪೂರ್ತಿ. ಕನ್ನಡ ಚಿತ್ರರಂಗದಲ್ಲೇ ನನ್ನ ಕೆರಿಯರ್ ಶುರುವಾಗಿದ್ದು, ಇಲ್ಲಿಯೇ ಹೊಸಬಗೆಯ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ ಎನ್ನುವ ಭವ್ಯಾ, ಕನ್ನಡ ಚಿತ್ರರಂಗ ಪ್ರತಿಭಾವಂತರನ್ನು ಯಾವತ್ತಿಗೂ ಕೈ ಬಿಟ್ಟಿಲ್ಲ. ಹಾಗಾಗಿ ನನಗೂ ಇಲ್ಲಿ ಭವ್ಯ ಭವಿಷ್ಯವಿದೆ ಅನ್ನುವ ನಂಬಿಕೆಯಲ್ಲೇ ಸಿನಿಮಾಗಳನ್ನು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ಭವ್ಯಾ.
ಕಿರಣ್ ರಾಜ್ ಅಭಿನಯದ ‘ರಾನಿ’ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಿದೆ. ಮೊದಲು ಹೇಳಿದ ಹಾಗೆ ಆಗಸ್ಟ್ 30ರಂದು ಬಿಡುಗಡೆ ಆಗಬೇಕಿತ್ತು. ಆದರೆ ಈಗ ‘ರಾನಿ’ ಆಗಸ್ಟ್ 30 ರ ಬದಲು ಸೆಪ್ಟೆಂಬರ್ 12 ರಂದು ತೆರೆಗೆ ಬರಲಿದೆ. ಪ್ರಸ್ತುತ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಚಿತ್ರಮಂದಿರಗಳ ಸಮಸ್ಯೆ ಎದುರಾಗಬಾರದೆಂದು ಈ ನಿರ್ಧಾರ ಮಾಡಿದೆ.
ಮೊದಲು ಮಾತನಾಡಿದ ನಿರ್ದೇಶಕ ಗುರುತೇಜ್ ಶೆಟ್ಟಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಕೃಷ್ಣಂ ಪ್ರಣಯ ಸಖಿ’ ಮತ್ತು ‘ಭೀಮ’ ಚಿತ್ರತಂಡಗಳಿಗೆ ಧನ್ಯವಾದ ಹೇಳಿದರು. ಆಗಸ್ಟ್ 20ರಂದು ನಮ್ಮ ಚಿತ್ರದ ಟ್ರೇಲರ್ ಬರಬೇಕಿತ್ತು. ಚಿತ್ರ ಆಗಸ್ಟ್ 30ರಂದು ಬಿಡುಗಡೆ ಆಗಬೇಕಿತ್ತು. ಭೀಮ ಹಾಗೂ ಕೃಷ್ಣಂ ಪ್ರಣಯ ಸಖಿ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ, ನಮಗೆ ಚಿತ್ರಮಂದಿರಗಳ ಸಮಸ್ಯೆ ಆಗ ಬಹುದು ಎಂದು ವಿತರಕರು ಹೇಳಿದರು. ನಾವು ಬಿಡುಗಡೆ ಮಾಡುವ ಹೊತ್ತಿಗೆ ಎಷ್ಟು ಚಿತ್ರಮಂದಿರಗಳು ಸಿಗುತ್ತದೆ ಗೊತ್ತಿಲ್ಲ. ಚೆನ್ನಾಗಿ ಶೇರ್ ಸಿಕ್ಕರೆ, ಚಿತ್ರಮಂದಿರ ತೆಗೆಯುವುದು ಸರಿಯಲ್ಲ. ಹಾಗಾಗಿ ಮುಂದೆ ಹೋಗುತ್ತಿದ್ದೇವೆ. ಮುಂದೆ ಹೋಗುತ್ತಿರುವುದಕ್ಕೆ ಬೇಸರವಿಲ್ಲ. ಖುಷಿಯದೆ. ಏಕೆಂದರೆ, ಜನ ಈಗ ಚಿತ್ರಮಂದಿರದತ್ತ ಬರುತ್ತಿದ್ದಾರೆ. ಸೆಪ್ಟೆಂಬರ್ 12ರಂದು ಬಿಡುಗಡೆ ಮಾಡುತ್ತಿದ್ದೇವೆ. ನಮ್ಮದು ದೊಡ್ಡ ಬಜೆಟ್‍ನ ಸಿನಿಮಾ. ಹಾಗಾಗಿ ಸ್ವಲ್ಪ ತಡೆದು ದೊಡ್ಡಮಟ್ಟದಲ್ಲೇ ರಿಲೀಸ್ ಮಾಡಬೇಕು. ಹಾಗಾಗಿ ಬಿಡುಗಡೆ ದಿನಾಂಕ ಮುಂದೆ ಹೋಗಿದೆ ಎಂದರು.
ಈ ಚಿತ್ರ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ. ನಿಮ್ಮ ನಿರೀಕ್ಷೆಗೆ ತಕ್ಕ ಹಾಗೆ ಚಿತ್ರ ಇದೆ. ಚಿತ್ರ ಬಿಡುಗಡೆ ಸ್ವಲ್ಪ ಮುಂದೆ ಹೋಗಿದೆ ಅಷ್ಟೇ. ಇಷ್ಟು ದಿನಗಳಿಂದ ನೀವು ನನ್ನ ಮೇಲಿಟ್ಟಿರುವ ಪ್ರೀತಿಗೆ ಚಿರಋಣಿ, ಆ ಪ್ರೀತಿ ಈ ಚಿತ್ರದಿಂದ ಇನ್ನಷ್ಟು ಜಾಸ್ತಿಯಾಗುತ್ತದೆ. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಎಂಟು ವರ್ಷಗಳ ಅಂತರದಲ್ಲಿ ಕಥೆ ನಡೆಯುತ್ತದೆ. ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುವ ನಾಯಕ ಕಿರಣ್ ರಾಜ್, ಈ ಚಿತ್ರ ನನ್ನ ಪಾಲಿಗೆ ಬಹಳ ಮಹತ್ವದ್ದು . ಈ ಗೆಲುವು ನನಗೆ ಬಹಳ ಮುಖ್ಯ. ಏನೇ ಕನಸು ಮತ್ತು ಗುರಿ ಇದ್ದರೂ, ಒಂದು ಶಕ್ತಿ ಬಹಳ ಮುಖ್ಯವಾಗುತ್ತದೆ. ಆ ಶಕ್ತಿ ಬರಬೇಕು ಎಂದರೆ ನಮ್ಮ ಮೇಲೆ ನಂಬಿಕೆ ಇರಬೇಕು. ಆ ನಂಬಿಕೆ ಬರಬೇಕು ಎಂದರೆ ಈ ಚಿತ್ರ ಗೆಲ್ಲಲೇಬೇಕು. ಇಲ್ಲವಾದರೆ, ನಾನು ಪುನಃ ಮೊದಲಿನಿಂದಲೂ ಶುರು ಮಾಡಬೇಕು ಎಂದರು.
ಈ ಚಿತ್ರಕ್ಕೆ ನಿರ್ದೇಶಕ ಗುರು ತೇಜ್ ಶೆಟ್ಟಿ ಸುಮ್ಮನೆ ಸ್ಕ್ರೀನ್ ಪ್ಲೇ ಮಾಡಿಲ್ಲ. ಒಂದಿಷ್ಟು ಊರುಗಳಲ್ಲಿ ಸರ್ವೆ ಮಾಡಿ ಅಲ್ಲಿನ ಜನ ನನ್ನನ್ನು ಯಾವರೀತಿ ಪಾತ್ರದಲ್ಲಿ ನೋಡಿದರೆ ಇಷ್ಟ ಪಡುತ್ತಾರೆ ಎಂದು ತಿಳಿದುಕೊಂಡು ಸರ್ವೆ ಮಾಡಿದ್ದಾರೆ ಎಂದು ಸಹ ಕಿರಣ್ ರಾಜ್ ತಿಳಿಸಿದರು.
‘ರಾನಿ’ ಚಿತ್ರದಲ್ಲಿ ಕಿರಣ್ ರಾಜ್ ಜೊತೆಗೆ ಸಮೀಕ್ಷಾ, ಅಪೂರ್ವ, ರಾಧ್ಯ, ರವಿಶಂಕರ್, ಮೈಕೋ ನಾಗರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಘವೇಂದ್ರ ಬಿ ಕೋಲಾರ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ. ಈ ಚಿತ್ರವನ್ನು ಸ್ಟಾರ್ ಕ್ರಿಯೇಷನ್ಸ್ ಲಾಂಛನದಲ್ಲಿ ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗಡೆ ನಿರ್ಮಿಸಿದ್ದಾರೆ.
ಚಿತ್ರ ವಿಮರ್ಶೆ ಚಿತ್ರ: ಸಿ ನಿರ್ದೇಶನ: ಕಿರಣ್ ಸುಬ್ರಮಣಿ ನಿರ್ಮಾಣ: ಎಜಿಎಸ್ ಪ್ರೊಡಕ್ಷನ್ ತಾರಾಗಣ: ಕಿರಣ್, ಪ್ರಶಾಂತ್ ನಟನಾ, ಸಾನ್ವಿಕಾ, ಶ್ರೀಧರ್ ರಾಮ್, ಮಧುಮಿತ ಇತರರು.
“ಅಪ್ಪ ನನಗೆ ಕಣ್ ಬರುತ್ತಾ? ನನ್ನನ್ನು ಮೈಸೂರಿಗೆ ರ‍್ಕೊಂಡ್ ಹೋಗ್ತೀಯಾ? ಯಾವಾಗ ಹೋಗೋದು…? ಹೀಗೆ ಆ ಬಾಲಕಿ ತನ್ನ ಅಪ್ಪನನ್ನು ಪ್ರಶ್ನಿಸುವಾಗ ಆ ಕ್ಷಣ ಭಾವುಕತೆಗೆ ದೂಡುತ್ತೆ. ಆಕೆ ಈ ಮಾತು ಹೇಳುವ ಹೊತ್ತಿಗೆ, ಘಟನೆಯೊಂದರಲ್ಲಿ ಏನೂ ಅರಿಯದ ಆ ಮುಗ್ಧ ಹುಡುಗಿ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡಿರುತ್ತಾಳೆ. ಇಷ್ಟಕ್ಕೂ ಆ ಹುಡುಗಿ ತಾನು ಇಷ್ಟಪಟ್ಟಂತೆ ಮೈಸೂರು ಅರಮನೆ ನೋಡ್ತಾಳಾ? ತನ್ನ ತಂದೆ ಆ ಮಗಳಿಗೆ ಪುನಃ ಕಣ್ಣು ಬರಲು ಶ್ರಮಿಸುತ್ತಾನಾ? ಮುಂದೇನಾಗುತ್ತೆ ಅನ್ನುವ ಕುತೂಹಲದೊಂದಿಗೆ ಸಿ ಸಿನಿಮಾ ಸಾಗುತ್ತೆ. ಇದೊಂದು ಅಪ್ಪ ಮಗಳ ಬಾಂಧವ್ಯದ ಕಥೆ. ಅಷ್ಟೇ ಅಲ್ಲ, ಅಲ್ಲೊಂದು ಭಾವುಕ ಪಯಣವೂ ಇದೆ. ಕಥೆಯ ಬಗ್ಗೆ ಹೇಳುವುದಾದರೆ, ಅಪಘಾತವೊಂಧರಲ್ಲಿ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಳ್ಳುವ ಬಾಲಕಿ, ಬದುಕೇ ಮುಗಿದು ಹೋಯ್ತು ಅಂದುಕೊಳ್ಳುತ್ತಾಳೆ. ಆದರೆ, ತನ್ನ ಮಗಳು ಪುನಃ ಈ ಜಗತ್ತನ್ನು ನೋಡಬೇಕು, ಅವಳಿಗೆ ಮತ್ತೆ ಕಣ್ಣು ಬರುವಂತೆ ಮಾಡಬೇಕು ಅಂತ ಒದ್ದಾಡುವ ತಂದೆ, ಆಸ್ಪತ್ರೆ ವೈದ್ಯರ ಬಳಿ ಹೋಗಿ, ಚಿಕಿತ್ಸೆ ಕೊಡಿಸುತ್ತಾನೆ. ಅಲ್ಲಿ ತನ್ನ ಮಗಳಿಗೆ ಕಣ್ಣು ಬರುತ್ತೆ ಎಂಬ ವಿಷಯ ಕೇಳುವ ತಂದೆಗೆ ಎಲ್ಲಿಲ್ಲದ ಖುಷಿ. ಆದರೆ, ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಲಕ್ಷಗಟ್ಟಲೆ ಹಣ ಹೊಂದಿಸೋಕೆ ಕಷ್ಟಪಡ್ತಾನೆ. ಕೊನೆಗೆ ಒಂದು ಕೆಲಸ ಒಪ್ಪಿಕೊಂಡರೆ ಅವನಿಗೆ ಲಕ್ಷಗಟ್ಟಲೆ ಹಣ ಸಿಗುತ್ತೆ. ಅದನ್ನು ಒಪ್ಪಿಕೊಳ್ತಾನೆ. ಅವನಿಗೆ ಗೊತ್ತಿಲ್ಲದಂತೆಯೇ ಮೆಡಿಕಲ್ ಮಾಫಿಯಾ ಒಂದರಲ್ಲಿ ಸಿಲುಕುತ್ತಾನೆ. ಅಲ್ಲಿಯ ಕರಾಳತೆ ಕಂಡು ಅವನು ಬೆಚ್ಚಿಬೀಳುತ್ತಾನೆ. ಅಲ್ಲಿಂದ ಹೊರಬರುತ್ತಾನಾ? ತನ್ನ ಮಗಳಿಗೆ ಕಣ್ಣು ಬರುವಂತೆ ನೋಡಿಕೊಳ್ಳುತ್ತಾನಾ ಅನ್ನೋದು ಕಥೆಯ ಎಳೆ.
ಮೊದಲರ್ಧ ಸಿನಿಮಾ ಸಾಗುವುದೇ ಗೊತ್ತಾಗಲ್ಲ. ದ್ವಿತಿಯಾರ್ಧ ಒಂದಷ್ಟು ತಿರುವುಗಳಿಗೆ. ಹೀಗೆ ಆಗುತ್ತೆ ಅಂದುಕೊAಡರೆ ಅದು ಬೇರೇನೋ ಆಗುತ್ತೆ. ಕಥೆಯ ಎಳೆ ಸಿಂಪಲ್. ಆದರೆ, ನಿರ್ದೇಶಕರ ನಿರೂಪಣೆ ಶೈಲಿ ಭಿನ್ನವಾಗಿದೆ. ಕೆಲವು ಕಡೆ ಕೆಲ ದೃಶ್ಯಗಳು ಬೇಕಿರಲಿಲ್ಲ. ಎಲ್ಲೋ ಒಂದು ಕಡೆ ಕಥೆ ಎತ್ತಲೋ ಸಾಗುತ್ತೆ ಅಂದುಕೊಳ್ಳುವಷ್ಟರಲ್ಲಿ ಹಾಡೊಂದು ಕಾಣಿಸಿಕೊಂಡು ಮತ್ತದೇ ಟ್ರಾö್ಯಕ್‌ಗೆ ಕರೆದುಕೊಂಡು ಬಂದು ನೋಡುಗರನ್ನು ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಇಡೀ ಸಿನಿಮಾದಲ್ಲಿ ಕೆಲವು ನ್ಯೂನ್ಯತೆಗಳಿದ್ದರೂ, ಒಂದೊಳ್ಳೆಯ ಎಮೋಷನ್ಸ್ ನೋಡುಗರ ಕಣ್ಣು ಒದ್ದೆ ಮಾಡುತ್ತೆ. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಮನರಂಜಿಸುವ ಗುಣ ಕೂಡ ಈ ಚಿತ್ರದಲ್ಲಿದೆ. ಇನ್ನು ತಾಂತ್ರಿಕ ವಿಚಾರಕ್ಕೆ ಬಂದರೆ, ಸ್ವಲ್ಪ ಮಬ್ಬು ಮಬ್ಬು ಎನಿಸುತ್ತೆ. ಒಂದು ಮೆಡಿಕಲ್ ಮಾಫಿಯಾದ ಕರಾಳತೆ ಹೇಗೆಲ್ಲಾ ಇರುತ್ತೆ ಅನ್ನುವುದನ್ನು ತಕ್ಕಮಟ್ಟಿಗೆ ತೋರಿಸಿದ್ದಾರಾದರೂ, ಅದನ್ನು ಇನ್ನಷ್ಟು ಚುರುಕಾಗಿ ತೋರಿಸಲು ಸಾಧ್ಯವಿತ್ತು. ಆದರೂ, ಇಲ್ಲೊಂದು ಭಾವುಕತೆಯ ದೃಶ್ಯಗಳಿರುವುದರಿಂದ ಕೆಲ ತಪ್ಪುಗಳೆಲ್ಲವೂ ಮರೆಯಾಗುತ್ತವೆ. ಬಹುತೇಕ ತೆರೆ ಮೇಲೆ ಹೊಸ ಮುಖಗಳಿದ್ದರೂ, ಸಿನಿಮಾ ನೋಡಿಸಿಕೊಂಡು ಹೋಗುತ್ತೆ ಅನ್ನೋದು ಸಮಾಧಾನದ ವಿಷಯ.
ಸಿನಿಮಾದಲ್ಲಿ ನಾಯಕರಾಗಿ ಕಾಣಿಸಿಕೊಂಡರುವ ಕಿರಣ್ ಸುಬ್ರಮಣಿ, ಒಬ್ಬ ಅಸಹಾಯಕ ತಂದೆಯಾಗಿ ಇಷ್ಟವಾಗುತ್ತಾರೆ. ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಸರಳ ನಟನೆ ಮಾಡಿದ್ದಾರೆ. ಅಲ್ಲಲ್ಲಿ ಅಳಿಸುವುದರ ಜೊತೆಗೆ ಮಗಳ ಮೇಲಿನ ಪ್ರೀತಿಯನ್ನೂ ಎತ್ತಿತೋರಿಸುತ್ತಾ ಹೋಗುತ್ತಾರೆ. ಅಂಧೆಯಾಗಿ ಬಾಲನಟಿ ಸಾನ್ವಿಕಾ ಗಮನ ಸೆಳೆಯುತ್ತಾರೆ. ಪ್ರಶಾಂತ್ ನಟನಾ ಅವರಿಲ್ಲಿ ಖಳನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಉಳಿದಂತೆ ಶ್ರೀಧರ್ ರಾಮ್, ಮಧುಮಿತ ಇತರರು ಕೂಡ ಸಿಕ್ಕ ಪಾತ್ರವನ್ನು ಅಂದಗಾಣಿಸಿದ್ದಾರೆ. ಬಿ.ಮುರಳೀಧರನ್ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ. ನವೀನ್ ಸೂರ್ಯ ಮತ್ತು ವೀರೇಶ್ ಕುಮಾರ್ ಅವರ ಕ್ಯಾಮೆರಾ ಕೈಚಳಕದಲ್ಲಿ ಇನ್ನಷ್ಟು ಜಾದು ಬೇಕಾಗಿತ್ತು. ನವೀನ್ ಸುಂದರ್ ರಾವ್ ಅವರ ಸಂಕಲನ ಚಿತ್ರದ ವೇಗ ಹೆಚ್ಚಿಸಿದೆ. ಒಟ್ಟಾರೆ, ಮೆಡಿಕಲ್ ಮಾಫಿಯಾ ಒಳಗಿನ ಅಪ್ಪ ಮಗಳ ಎಮೋಷನಲ್ ಜರ್ನಿ ಹೇಗಿದೆ ಎಂಬ ಕುತೂಹಲವಿದ್ದರೆ ಒಮ್ಮ ವಾಚ್ ಅಂಡ್ ಸಿ…
ಜಾಹೀರಾತು ನಿರ್ದೇಶಕ ರಾಜೇಶ್ ರಾಮಸ್ವಾಮಿ ಕಿರುಚಿತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. 17 ನಿಮಿಷಗಳ ಅವಧಿಯ ‘ಇರುವೆ’ ಕನ್ನಡ ಕಿರುಚಿತ್ರವನ್ನು ಅವರು ಬರೆದು ನಿರ್ದೇಶಿಸಿದ್ದಾರೆ. ಬೆಂಗಳೂರು ಮೂಲದ ಬರಹಗಾರರ ಕೇಂದ್ರವಾದ ‘ದಿ ಸ್ಕ್ರಿಪ್ಟ್ ರೂಮ್’ನ ಸಂಸ್ಥಾಪಕರಾಗಿರುವ ರಾಜೇಶ್ ರಾಮಸ್ವಾಮಿ ಉರೂಫ್ ರಾಮ್‌ಸಂ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಅವರ ನಿರ್ದೇಶನದ ಇರುವೆ ಕಿರುಚಿತ್ರದಲ್ಲಿ ದತ್ತಣ್ಣ ಮತ್ತು ಮಹಾಂತೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಕಾಶ್ ತುಮಿನಾಡ್, ರೋಹಿತ್ ಶ್ರೀನಾಥ್, ಸೋನು ವೇಣುಗೋಪಾಲ್ ಮತ್ತು ಅನಿರುದ್ಧ್ ಆಚಾರ್ಯ ಒಳಗೊಂಡ ತಾರಾಬಳಗವಿದೆ.
ಎರಡು ದಶಕಗಳ ಹಿಂದೆ ಉಪೇಂದ್ರ ಕಾಣಿಸಿಕೊಂಡಿದ್ದ ಎಲ್ಲಾ ಓಕೆ ಕೂಲ್ ಡ್ರಿಂಕ್ ಯಾಕೆ ಎಂಬ ಜಾಹೀರಾತು ಹಿಂದಿನ ಮಾಸ್ಟರ್ ಮೈಂಡ್ ರಾಜೇಶ್ ರಾಮಸ್ವಾಮಿ, “ನಾನು ಮಾಲ್ಗುಡಿ ಡೇಸ್‌ನ ದೊಡ್ಡ ಅಭಿಮಾನಿ ಮತ್ತು ಆರ್‌ಕೆ ನಾರಾಯಣ್ ಅವರ ಕಥೆಯನ್ನು ಇಷ್ಟಪಟ್ಟಿದ್ದೇನೆ. ಈ ಕಥೆಗಳನ್ನು ಶಂಕರ್ ನಾಗ್ ಅವರು ತೆರೆಗೆ ಅಳವಡಿಸಿದ ರೀತಿ ನನಗೂ ಮೆಚ್ಚುಗೆಯಾಯಿತು. ಈ ಸಾಮಾನ್ಯ ಜನರ ಸರಳ ನಿರೂಪಣಾ ಶೈಲಿ, ಸೂಕ್ಷ್ಮವಾದ ಅವಲೋಕನಗಳು ನಾನು ವೀಕ್ಷಕ ಅಥವಾ ಓದುಗನಾಗಿ ನಿಜವಾಗಿಯೂ ಆನಂದಿಸುವ ಸಂಗತಿಯಾಗಿದೆ. ಅಂದಿನಿಂದ, ನನಗೆ ಪ್ರತಿದಿನ ಭೇಟಿಯಾಗುವ ಈ ಸಾಮಾನ್ಯ ಜನರ ಬಗ್ಗೆ ಕುತೂಹಲವಿದೆ. ಆ ಕಥೆಗಳನ್ನು ಇಟ್ಟುಕೊಂಡು ಇರುವೆ ಕಿರುಚಿತ್ರ ತಯಾರಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಸಾಮಾನ್ಯ ಜನರ ಅಸಾಮಾನ್ಯ ಕಥೆಗಳು. ಇರುವೆ ಚಿತ್ರವು ಜಯನಗರದಲ್ಲಿ ನಡೆಯುವ ಇಂತಹ ಕಥೆಗಳಲ್ಲಿ ಒಂದಾಗಿದೆ”.
ಇರುವೆ 70 ವರ್ಷ ವಯಸ್ಸಿನ ಗೋವಿಂದಯ್ಯನ ಬಗ್ಗೆ. ಅವರ ಮನೆಯಲ್ಲಿನ ಕೆಂಪು ಇರುವೆಗಳು ಸುತ್ತ ಸಾಗುವ ಕಥೆ. ಇದು ದಿ ಸ್ಕ್ರಿಪ್ಟ್ ರೂಮ್‌ನ ಚೊಚ್ಚಲ ನಿರ್ಮಾಣವಾಗಿದೆ. ಇರುವೆ ಕಿರುಚಿತ್ರದ ಬಗ್ಗೆ ಮಾತನಾಡುವ ರಾಮ್‌ಸಂ, “ನಾವು ಮೊದಲ ಬಾರಿಗೆ ಕಥೆಯೊಂದಿಗೆ ದತ್ತಣ್ಣ ಅವರನ್ನು ಸಂಪರ್ಕಿಸಿದಾಗ, ಅವರು “ಹ ಹ್ಹ. ಸರಿ…ನನಗೆ ಕಥೆ ಇಷ್ಟವಾಯಿತು. ಆದರೆ ಈ ಸಿನಿಮಾ ಮಾಡಲು ನಿಮ್ಮ ಮುಖ್ಯ ‘ಉದ್ದೇಶ’ ಯಾವುದು? ಆ ಪ್ರಶ್ನೆ ನನ್ನನ್ನೂ ಕಾಡಲು ಪ್ರಾರಂಭವಾಯ್ತು.
ಆದರೆ ಪ್ರಾಮಾಣಿಕವಾದ ಉತ್ತರ ಮಾತ್ರ, “ಸರ್, ತಮಾಷೆಗಾಗಿ.” ಮತ್ತು ಹೌದು, ನಾವು ಅದನ್ನು ಶೂಟ್ ಮಾಡುವಾಗ ಬಹಳಷ್ಟು ಆನಂದಿಸಿದ್ದೇವೆ. ಮತ್ತು ಅದನ್ನು ನೋಡುವಾಗ ಪ್ರತಿಯೊಬ್ಬರೂ ಒಂದೇ ರೀತಿಯ ಮಜಾವನ್ನು ಹೊಂದಿರುತ್ತಾರೆ ಎಂದು ನಾವು ಭಾವಿಸುತ್ತೇವೆ. ಅದಕ್ಕಾಗಿಯೇ ನಾವು ಅದನ್ನು ಉಚಿತವಾಗಿ ವೀಕ್ಷಿಸಲು YouTube ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದರು.