ಕತ್ತಲು ರಾತ್ರಿಯೊಳು ಭಯ, ಭೀತಿ ಇತ್ಯಾದಿ…

ರೇಟಿಂಗ್: 3.5/5

ಚಿತ್ರ: ಕಪಟಿ
ನಿರ್ದೇಶನ: ರವಿಕಿರಣ್, ಚೇತನ್
ನಿರ್ಮಾಣ: ದಯಾಳ್ ಪದ್ಮನಾಭನ್
ತಾರಾಗಣ: ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ಶಂಕರ್ ನಾರಾಯಣ ಇತರರು.

ಆ ಮನೆಯಲ್ಲಿ ಅವಳಿಗೆ ಯಾರೋ ಕರೆಯುತ್ತಿರುವ ಭಾಸ. ಇನ್ಯಾರೋ ಓಡಾಡಿದ ಫೀಲ್. ಮನೆ ಸುತ್ತ ಮುತ್ತ ಏನೇನೋ ನಡೆಯುತ್ತಿರೋ ಭೀತಿ…

ಇಷ್ಟಕ್ಕೂ ಅದು ದೆವ್ವದ ಓಡಾಟವೋ? ಯಾರಾದರೂ ಭಯಗೊಳಿಸಲು ಮಾಡುತ್ತಿರೋ ಪಿತೂರಿಯೋ ? ಆರಂಭದಿಂದ ಅಂತ್ಯದವರೆಗೂ ನೋಡುಗರಿಗೆ ಕುತೂಹಲ ಕೆರಳಿಸುವ ಈ ಕಥೆ ನೋಡಿಸಿಕೊಂಡು ಹೋಗುತ್ತೆ. ಹಾಗೆ ನೋಡೋಕೆ ಕಾರಣ ನಿರ್ದೇಶಕರ ನಿರೂಪಣೆಯ ಜಾಣತನ. ಇಲ್ಲಿ ಭೀತಿ ಇದೆ, ಗಂಭೀರತೆ ಇದೆ, ಆತಂಕ ಇದೆ, ಆಸೆ, ದುರಾಸೆ , ಬಾಂಧವ್ಯ, ಎಮೋಷನಲ್ ಇತ್ಯಾದಿ ಎಲ್ಲವೂ ಮೇಳೈಸಿದೆ. ಆ ಕಾರಣಕ್ಕೆ ಚಿತ್ರ ಆಪ್ತತೆಯ ಸಾರವಾಗುತ್ತೆ.

ಕಥೆ ಸಿಂಪಲ್ ಎನಿಸಿದರೂ, ಹೊಸ ವಿಷಯ ಇಲ್ಲಿದೆ. ಹೊಸತನ್ನು ಹೇಳಿರುವ ಮತ್ತು ತೋರಿಸಿರುವ ರೀತಿ ಇಷ್ಟವಾಗುತ್ತೆ. ನೋಡುಗರಿಗೆ ಎಷ್ಟು ತೋರಿಸಬೇಕು, ಏನನ್ನು ಹೇಳಬೇಕೆಂಬ ಅರಿವು ನಿರ್ದೇಶಕರಿಗೆ ಇದೆ. ಹಾಗಾಗಿ ಸಿನಿಮಾ ಎಲ್ಲಾ ವರ್ಗಕ್ಕೂ ರುಚಿಸುವುದರಲ್ಲಿ ಸಂದೇಹವಿಲ್ಲ.

ಮೊದಲರ್ಧ ಸರಾಗವಾಗಿ ಸಾಗುವ ಸಿನಿಮಾದಲ್ಲಿ ಸಾಕಷ್ಟು ಸಂಗತಿಗಳಿವೆ. ದ್ವಿತಿಯಾರ್ಧ ಕಥೆಯ ಓಗ ನೋಡುಗರಲ್ಲಿ ಕುತೂಹಲ ಮೂಡಿಸುತ್ತೆ. ಸಾಮಾನ್ಯವಾಗಿ ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರಿಯರಿಗೆ ಇದು ಇಷ್ಟವಾಗದೇ ಇರದು.

ಸಿನಿಮಾದ ಅವಧಿ ಹೆಚ್ಚನಿಸಲ್ಲ. ಎಲ್ಲೂ ಗೊಂದಲ ಇರದ ಕಥೆಯಲ್ಲಿ ಚಿತ್ರಕಥೆ ಬಿಗಿಯಾಗಿದೆ. ಸಿನಿಮಾದ ವೇಗಕ್ಕೆ ಸಂಕಲನ ಮುಖ್ಯವಾಗಿ ಹೆಗಲು ಕೊಟ್ಟಿದೆ. ಇಂತಹ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಮಾತಾಡಬೇಕು. ಅದಿಲ್ಲಿ ವರ್ಕ್ ಆಗಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಅದು ಪಾತ್ರಗಳು. ಬೆರಳೆಣಿಕೆಯ ಪಾತ್ರಗಳಿವೆ. ಬಹುತೇಕ ಒಂದೇ ಮನೆ ಸಿನಿಮಾದ ಕೇಂದ್ರಬಿಂದು. ನೋಡೋಕೆ ಒಂದು ಹಾಡು, ಒಂದು ಫೈಟು ಇದ್ದರೂ ಅದು ಕಥೆಗೆ ಪೂರಕ. ಗಲಿಬಿಲಿ ಇರದ ನೀಟ್ ನರೇಷನ್ ಚಿತ್ರ.

ಕಥೆ ಏನು?

ಇದೊಂದು ಡಾರ್ಕ್ ನೈಟ್ ಕಥೆ. ಅಂದರೆ ಇಬ್ಬರು ಹ್ಯಾಕರ್ಸ್ ಕಥೆ ವ್ಯಥೆ ಇಲ್ಲಿದೆ. ಯಾರೂ ಇಲ್ಲದ ವೇಳೆ ಆ ದೊಡ್ಡ ಬಂಗಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಅಪ್ಪ, ಮಗ ಮತ್ತು ಮಗಳ ಚಟುವಟಿಕೆಯನ್ನು ಡಾರ್ಕ್ ವೆಬ್ ಮೂಲಕ ಹಣ ಮಾಡುವ ಸಂಚು ಹೇಗಿರುತ್ತೆ ಅನ್ನೋದು ಒನ್ ಲೈನ್. ಅದು ಹೇಗೆ ಎಂಬ ಕುತೂಹಲ ಇದ್ದರೆ ಒಮ್ಮೆ ನೋಡಲ್ಲಡ್ಡಿಯಿಲ್ಲ.

ಆ ಮನೆಯಲ್ಲಿ ವಿಚಿತ್ರ ಘಟನೆ ನಡೆಯುತ್ತೆ. ಏನೇನು ಎಂಬ ಪ್ರಶ್ನೆಗೆ ಇಡೀ ಸಿನಿಮಾ ಉತ್ತರವಾಗಲಿದೆ.

ನೋಡ ನೋಡುತ್ತಿದ್ದಂತೆ ಚಿತ್ರ ಎಂಡ್ ಆಗುತ್ತೆ. ಒಂದಷ್ಟು ಪ್ರಶ್ನೆಗಳು ಕಾಡುತ್ತವೆ. ಅಲ್ಲೇ ಉತ್ತರವೂ ಸಿಗುತ್ತೆ. ಹೊಸ ವಿಷಯವನ್ನು ಹೀಗೂ ಹೇಳಬಹುದು ಅಂತ ಕಪಟಿ ನೋಡಿದವರಿಗೆ ಗೊತ್ತಾಗುತ್ತೆ.

ಕತ್ತಲು ರಾತ್ರಿಯೊಳು ಜರುಗುವ ಸೂಕ್ಷ್ಮ ಸನ್ನಿವೇಶಗಳೇ ಚಿತ್ರದ ಹೈಲೆಟ್. ಕನ್ನಡದಲ್ಲಿ ಬಂದ ಅದೆಷ್ಟೋ ಕ್ರೈಮ್ ಥ್ರಿಲ್ಲರ್ ನಡುವೆ ಇದು ಭಿನ್ನವಾಗುತ್ತೆ. ಒಟ್ಟಾರೆ ಕನ್ನಡಕ್ಕೊಂದು ಹೊಸ ಪ್ರಯತ್ನವಂತೂ ಹೌದು.ತಾಂತ್ರಿಕವಾಗಿಯೂ ಸಿನಿಮಾ ಸೈ ಎನಿಸಿಕೊಂಡಿದೆ.

ಯಾರು ಹೇಗೆ?

ಇಲ್ಲಿ ಸುಕೃತ ವಾಗ್ಲೆ ಎಂದಿಗಿಂತ ನಟನೆಯಲ್ಲಿ ಇಷ್ಟವಾಗುತ್ತಾರೆ. ಎಮೋಷನ್ ದೃಶ್ಯದಲ್ಲಿ ಭಾವುಕತೆಗೆ ದೂಡುತ್ತಾರೆ. ಕೊಟ್ಟ ಪಾತ್ರಕ್ಕೆ ಮೋಸ‌ ಮಾಡಿಲ್ಲ. ದೇವ್ ದೇವಯ್ಯ ಮತ್ತು ಸಾತ್ವಿಕ್ ಕೃಷ್ಣನ್ ಸಿನಿಮಾದ ಕೇಂದ್ರ ಬಿಂದು. ಜಿದ್ದಿಗೆ ಬಿದ್ದವರಂತೆ ಕಾಣಿಸಿಕೊಂಡಿದ್ದಾರೆ. ಪಕ್ಕಾ ಹ್ಯಾಕರ್ಸ್ ಆಗಿ ಇಷ್ಟವಾಗುತ್ತಾರೆ. ತೆರೆ ಮೇಲೆ ಬರುವ ಕೆಲ ಪಾತ್ರಗಳೂ ಇರುವಷ್ಟು ಕಾಲ ಗಮನ ಸೆಳೆಯುತ್ತವೆ.

ಚಿತ್ರದ ಛಾಯಾಗ್ರಹಣದಲ್ಲಿ ಕತ್ತಲು ಬಿಳುಪಿನ ಆಟ ಸೊಗಸಾಗಿದೆ. ಸಂಗೀತ ಸಿನಿಮಾಗೆ ಸಾಥ್ ನೀಡಿದೆ.

Related Posts

error: Content is protected !!