Categories
ಸಿನಿ ಸುದ್ದಿ

ಸಿಕಾಡಾ ಎಂಬ ಸ್ಪೆಷಲ್ ಚಿತ್ರ: ಒಂದು ಕಥೆ, ನಾಲ್ಕು ಭಾಷೆ, 24 ವಿಭಿನ್ನ ಟ್ಯೂನು!

ಸಿಕಾಡಾ ಪ್ಯಾನ್ ಇಂಡಿಯಾ ಚಿತ್ರದ ಕನ್ನಡದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯನ್ನು ಸ್ಯಾಂಡಲ್‌ವುಡ್ ತಾರೆಯರಾದ ಮೇಘನಾ ರಾಜ್ ಮತ್ತು ಪ್ರಜ್ವಲ್ ದೇವರಾಜ್ ಮಾಡಿದ್ದಾರೆ.. ಕರ್ನಾಟಕ ಮಾಜಿ ಕೃಷಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ಅವರು ತಮ್ಮ ಹೃತ್ಪೂರ್ವಕ ಹಾರೈಕೆಗಳೊಂದಿಗೆ, ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಮತ್ತು ಸಿಕಾಡಾ ಚಿತ್ರತಂಡಕ್ಕೆ ಉತ್ತಮ ಯಶಸ್ಸನ್ನು ಕೋರುವ ಮೂಲಕ ತಂಡವನ್ನು ಬೆಂಬಲಿಸಿದ್ದಾರೆ.


ಸಿಕಾಡಾದಲ್ಲಿ ಹೊಸ ಪ್ರತಿಭೆಗಳಿವೆ.
ಸಿಕಾಡಾ ನಿರ್ದೇಶಕರಾಗಿ ಶ್ರೀಜಿತ್ ಎಡವನ ಅವರ ಚೊಚ್ಚಲ ಚಿತ್ರ. ತಿರ್ನಾ ಫಿಲ್ಮ್ಸ್ ಮತ್ತು ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ವಂದನಾ ಮೆನನ್ ಮತ್ತು ಗೋಪಕುಮಾರ್ ಪಿ ನಿರ್ಮಿಸಿರುವ ಈ ಚಿತ್ರದಲ್ಲಿ ರಜಿತ್ ಸಿ.ಆರ್, ಗಾಯತ್ರಿ ಮಯೂರ, ಜೈಸ್ ಜೋಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬೆಂಗಳೂರು, ಅಟ್ಟಪಾಡಿ, ವಾಗಮೋನ್, ಕೊಚ್ಚಿ ಮುಂತಾದೆಡೆ ಚಿತ್ರೀಕರಣ ನಡೆದಿದೆ.


ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಈ ಸಿನಿಮಾ ಮೂಡಿಬಂದಿದೆ. ‘ಸಿಕಾಡಾ’ ಚಿತ್ರದ ಒಂದು ವಿಶೇಷತೆಯೆಂದರೆ, ಪ್ರತಿ ಅವತರಣಿಕೆಯ ಚಿತ್ರಕ್ಕೂ ಪ್ರತ್ಯೇಕ ಟ್ಯೂನ್ ಗಳನ್ನು ಕಂಪೋಸ್ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ನಾಲ್ಕು ಭಾಷೆಗಳಲ್ಲಿ ಆ ಭಾಷೆಯ ನೇಟಿವಿಟಿಗೆ ಹೊಂದುವಂತಹ ಟ್ಯೂನ್ ಗಳನ್ನು ಸಂಯೋಜಿಸಲಾಗಿವೆ. ನಾಲ್ಕು ಭಾಷೆಯ ಅವತರಣಿಕೆಗಳಿಗೆಂದೇ ಒಟ್ಟು 24 ಹೊಸ ಹಾಡುಗಳನ್ನು ಕಂಪೋಸ್ ಮಾಡಿರುವುದು ವಿಶೇಷ. ಇದು ಸಿಕಾಡಾದ ವಿಶಿಷ್ಟ ಲಕ್ಷಣವಾಗಿದೆ.


ಶ್ರೀಜಿತ್ ಎಡವನ ಸಂಗೀತ ಸಂಯೋಜಕರೂ ಹೌದು. ಅವರು “ಪ್ರೀತಿ ನನ್ನ ಕವಿಯೆ” ಮತ್ತು “ನೆಂಜೋಡು ಚೆರ್ತು” ನಂತಹ ಸಂಗೀತ ಹಿಟ್‌ಗಳನ್ನು ಸಂಯೋಜಿಸುವ ಮೂಲಕ ತಮಿಳು ಮತ್ತು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದರು. ಈ ಚಿತ್ರದ ಹಾಡುಗಳಿಗೆ ಅದ್ಭುತವಾದ ಸಾಹಿತ್ಯವನ್ನು ರವಿತೇಜ ಅಮರನಾರಾಯಣ ಬರೆದಿದ್ದಾರೆ.
ನವೀನ್ ರಾಜ್ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿದ್ದು, ಶೈಜಿತ್ ಕುಮಾರನ್ ಸಂಕಲನ ಮಾಡಿದ್ದಾರೆ.
ಹಾಡುಗಳು ಶೀಘ್ರದಲ್ಲೇ ಜ್ಯೂಕ್ ಬಾಕ್ಸ್‌ಗೆ ಬರಲಿವೆ. ಧ್ವನಿ ವಿನ್ಯಾಸವು ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

Categories
ಸಿನಿ ಸುದ್ದಿ

ಮಾಲಾಶ್ರೀ ಮಗಳ ಹೆಸರು ಈಗ ರಾಧನಾ ಅಲ್ಲ, ಆರಾಧನಾ: ಹೆಸರು ಬದಲಿಸಿದ ರಾಮು ಪುತ್ರಿ

ನಟಿ ಮಾಲಾಶ್ರೀ – ನಿರ್ಮಾಪಕ ರಾಮು ಪುತ್ರಿ ರಾಧನಾ ರಾಮ್ ಈಗ ತಮ್ಮ ಹೆಸರನ್ನು ಆರಾಧನಾ (Aradhanaa) ಎಂದು ಬದಲಿಸಿಕೊಂಡಿದ್ದಾರೆ.


ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ, ತರುಣ್ ಸುಧೀರ್ ನಿರ್ದೇಶಿಸಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ “ಕಾಟೇರ” ಚಿತ್ರದ ನಾಯಕಿಯಾಗಿ ಆರಾಧನಾ ಅವರು ಈಗಾಗಲೇ ಚಿತ್ರರಂಗ ಪ್ರವೇಶಿಸಿದ್ದಾರೆ.


ನಾನು, ರಾಕ್ ಲೈನ್ ವೆಂಕಟೇಶ್ ಹಾಗೂ ತರುಣ್ ಸುಧೀರ್ ಮೂರು ಜನ ಚರ್ಚಿಸಿ ಆರಾಧನಾ ಎಂಬ ಹೆಸರನ್ನು ಆಯ್ಕೆ ಮಾಡಿದ್ದೇವೆ.

ಈ ಹೆಸರು ಬರೀ “ಕಾಟೇರ” ಚಿತ್ರಕ್ಕೆ ಮಾತ್ರವಲ್ಲ. ಇನ್ನು ಮುಂದೆ ನನ್ನ ಮಗಳ ಹೆಸರೆ ಆರಾಧನಾ

. ಮುಂದಿನ ಚಿತ್ರಗಳಲ್ಲೂ ಆರಾಧನಾ ಎಂಬ ಹೆಸರಿನಿಂದಲೇ ಅಭಿನಯಿಸಿಲಿದ್ದಾರೆ. ತಾವೆಲ್ಲರೂ ಮುಂದೆ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕೆಂದು ಮಾಲಾಶ್ರೀ ವಿನಂತಿಸಿದ್ದಾರೆ.

Categories
ಸಿನಿ ಸುದ್ದಿ

ರಾಜ್ ಮೊಮ್ಮಗ ಷಣ್ಮುಖನ ಸಿನಿ ಜರ್ನಿ ಶುರು: ಚಿನ್ನದ ಮಲ್ಲಿಗೆ ಹೂವೇ ಸಿನಿಮಾಗೆ ಆರ್ನಾ ಸಾಧ್ಯ ನಿರ್ಮಾಪಕಿ

ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರ ವಜ್ರಗಳು ಕಾದಂಬರಿ ಆಧಾರಿತ “ಸಾರಾ ವಜ್ರ” ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕಿ ಆರ್‍ನಾ ಸಾಧ್ಯ ಈಗ ನಿರ್ಮಾಪಕಿಯಾಗಿದ್ದಾರೆ.
ಸಂಭ್ರಮ ಮೀಡಿಯಾ ಹೌಸ್ ಎಂಬ ಸಂಸ್ಥೆಯ ಮೂಲಕ “ಚಿನ್ನದ ಮಲ್ಲಿಗೆ ಹೂವೇ” ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ತಮ್ಮ ಮುದ್ದಾದ ಅಕ್ಷರದ ಮೂಲಕ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಬರೆದುಕೊಟ್ಟರೆ, ನಟ ಡಾ.ರಾಘವೇಂದ್ರ ರಾಜಕುಮಾರ್ ಶೀರ್ಷಿಕೆ ಅನಾವರಣ ಮಾಡಿದರು.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನವಿಲುಗರಿ ನವೀನ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ.
ಡಾ. ರಾಜಕುಮಾರ್ ಮೊಮ್ಮಗ (ಲಕ್ಷ್ಮೀ ಹಾಗೂ ಗೋವಿಂದರಾಜ್ ಅವರ ಪುತ್ರ) ಷಣ್ಮುಖ ಗೋವಿಂದರಾಜ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.

ನಾಗೇಂದ್ರ ಪ್ರಸಾದ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದ ಪಾತ್ರಗಳ ಆಡಿಷನ್ ನಡೆಯುತ್ತಿದೆ. ಪ್ರಣವ್ ಸತೀಶ್ “ಚಿನ್ನದ ಮಲ್ಲಿಗೆ ಹೂವೇ”ಗೆ ಸಂಗೀತ ನೀಡುತ್ತಿದ್ದು, ಮಧು ತುಂಬಕೆರೆ ಅವರ ಸಂಕಲನವಿರಲಿದೆ.

Categories
ಸಿನಿ ಸುದ್ದಿ

ಆ್ಯಕ್ಷನ್ ಟೀಸರ್ ಮೂಲಕ‌ ನಿರೀಕ್ಷೆ ಹುಟ್ಟಿಸಿದ ವಾಮನ: ಧನ್ವೀರ್ ಸಿನಿಮಾ ಸೆಪ್ಟೆಂಬರ್ ಗೆ ರಿಲೀಸ್

ಧನ್ವೀರ್ ಮತ್ತು ರೀಷ್ಮಾ ನಾಣಯ್ಯ ಅಭಿನಯದ “ವಾಮನ” ಚಿತ್ರ ಸೆಪ್ಟೆಂಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಆಕ್ಷನ್ ಟೀಸರ್ ಮೈಸೂರಿನಲ್ಲಿ ಬಿಡುಗಡೆಯಾಗಿದೆ. ಸಮಾರಂಭದಲ್ಲಿ ಹುಣಸೂರು ಶಾಸಕ ಹರೀಶ್ ಗೌಡ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಈ ಸಂದರಭದಲ್ಲಿ ಮಾತನಾಡಿದ, ನಿರ್ದೇಶಕ ಶಂಕರ್ ರಾಮನ್, ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಜನರಿಂದ ಮೆಚ್ಚುಗೆ ಪಡೆದಿದೆ. ಇದೊಂದು ಆಕ್ಷನ್ ಚಿತ್ರ. ಚಿತ್ರದಲ್ಲಿ ಆಕ್ಷನ್ ಹೇಗಿರುತ್ತದೆ ಎಂದು ತೋರಿಸುವುದಕ್ಕೆ ಈ ಟೀಸರ್ ಬಿಡುಗಡೆ ಮಾಡಿದ್ದೇವೆ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಫೈಟ್ ಗಳಿವೆ. ಮೂರು ಫೈಟ್ ಗಳಿಗೆ ಅರ್ಜುನ್ ರಾಜ್ ಸಾಹಸ ನಿರ್ದೇಶನ ಮಾಡಿದ್ದಾರೆ. ಇನ್ನೊಂದು ಫೈಟ್ ನಲ್ಲಿ ಕಥೆ ಜೊತೆಜೊತೆಯಾಗಿ ಸಾಗುತ್ತದೆ.

ಈ ಫೈಟ್ ಪ್ರೇಕ್ಷಕರಿಗೆ ಬೇರೆ ತರಹದ ಅನುಭವ ಕೊಡುತ್ತದೆ ಎಂಬ ನಂಬಿಕೆ ನನಗಿದೆ. ಸಾಹಸ ದೃಶ್ಯವನ್ನು ವಿಕ್ರಮ್ ಮೋರ್ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ರಾಜ್ ಮತ್ತು ವಿಕ್ರಮ್ ಮೋರ್ ಜೊತೆಗೆ ಜಾಲಿ ಬಾಸ್ಟಿನ್ ಅವರ ನೆರವು ಮತ್ತು ಮಾರ್ಗದರ್ಶನವಿದೆ. ಈ ಮೂವರೂ ಸಾಹಸ ನಿರ್ದೇಶಕರಿಗೆ ನಮ್ಮ ಚಿತ್ರತಂಡದಿಂದ ಧನ್ಯವಾದಗಳು.


ವಾಮನ ಚಿತ್ರವನ್ನು ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. ಧನ್ವೀರ್ ಅವರ ಚಿತ್ರ ಬಿಡುಗಡೆಗೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಾಮನ ಅಂದರೆ ದಶಾವತಾರದಲ್ಲಿ ಬರುವ ಐದನೇ ಅವತಾರ. ದುಷ್ಟತ್ವವೇ ಸರ್ವಸ್ವ ಎನ್ನುವ ಜನರ ವಿರುದ್ಧ ವಾಮನ ಹೇಗೆ ಹೋರಾಡುತ್ತಾನೆ ಎಂಬುದು ಚಿತ್ರದ ಕಥೆ. ಇಲ್ಲಿ ರೌಡಿಸಂ, ಭೂಗತಲೋಕ ಮತ್ತು ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ಕಥೆ ಸಾಗುತ್ತಿದೆ. ಈ ಚಿತ್ರದ ಹೈಲೈಟ್ ಅಂದರೆ ಸೆಂಟಿಮೆಂಟ್ ದೃಶ್ಯಗಳು. ಈ ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶವಿದೆ ಎಂದರು.

ಈ ಚಿತ್ರದಲ್ಲಿ ನನ್ನದು ಎರಡು ಶೇಡ್ ಪಾತ್ರ. ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ. ನಿರ್ದೇಶಕರು ಮೂಲತಃ ಒಳ್ಳೆಯ ಬರಹಗಾರರು. ಅವರೊಂದು ಎಳೆಯನ್ನು ಹೇಳಿದ್ದರು. ಬಹಳ ಇಷ್ಟವಾಗಿ, ಅದನ್ನು ಬೆಳೆಸಿ ಎಂದು ಹೇಳಿದ್ದೆ. ಆ ಎಳೆ ಚಿತ್ರವಾಗಿ, ಇದೀಗ ಬಿಡುಗಡೆಗೆ ಬಂದಿದೆ. ಇಂದು ಗಣ್ಯರ ಸಮ್ಮುಖದಲ್ಲಿ ಮೈಸೂರಿನಲ್ಲಿ ಆಕ್ಷನ್ ಟೀಸರ್ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಸೇರಿದಂತೆ ಬೇರೆ ಊರುಗಳಲ್ಲಿ ಸಹ ಚಿತ್ರದ ಪ್ರಮೋಷನ್ ಮಾಡುತ್ತೇವೆ ಎಂದರು ಧನ್ವೀರ್.

ಈ ಚಿತ್ರದಲ್ಲಿ ನನ್ನದು ಬಹಳ ಮುದ್ದಾದ ಮತ್ತು ಅಷ್ಟೇ ಸರಳವಾದ ಪಾತ್ರ. ನನಗಂತೂ ಬಹಳ ಇಷ್ಟವಾದ ಪಾತ್ರ ಇದು. ಚಿತ್ರ ನೋಡಿದ ಜನರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆ ಇದೆ ಎಂಬುದು ಕರೀಷ್ಮಾ ನಾಣಯ್ಯ ಮಾತು.

Categories
ಸಿನಿ ಸುದ್ದಿ

ಹರ್ಷಿಕಾ ಭುವನ್ ಗೆ ಡಬಲ್ ಸಂಭ್ರಮ! ಆಗಸ್ಟ್ 24ಕ್ಕೆ ಮದ್ವೆ: ನಿರ್ದೇಶಕ, ನಿರ್ಮಾಪಕಿ ಖುಷಿಯಲ್ಲಿ ಸ್ಯಾಂಡಲ್ ವುಡ್ ಜೋಡಿ

ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಆಗಸ್ಟ್. 24ರಂದು ಕೊಡಗಿನ ಅಮ್ಮತ್ತಿ ಕೊಡವ ಸಮಾಜದಲ್ಲಿ ಇವರಿಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ಸುಮಾರು 5 ವರ್ಷಗಳಿಂದ ತಮ್ಮ ಪ್ರೀತಿಯನ್ನು ಗುಟ್ಟಾಗಿಟ್ಟಿದ್ದ ಈ ಜೋಡಿ, ಇದೀಗ ಮದ್ವೆಯಾಗುತ್ತಿದೆ. ಆಗಸ್ಟ್ 23 ಮತ್ತು 24ರಂದು ಕೂರ್ಗಿ ಸಂಪ್ರದಾಯದಂತೆ ಇವರ ಮದುವೆ ಕಾರ್ಯಕ್ರಮ ನಡೆಯಲಿದೆ, ಈ ವಿಷಯವನ್ನು ಮಾಧ್ಯಮ ಮುಂದೆ ಹಂಚಿಕೊಂಡ ಜೋಡಿ, ತಮ್ಮ ನೂತನ ಬ್ಯಾನರ್ ಹಾಗೂ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.


ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಜೋಡಿ ಭುವನಂ ಎಂಟರ್‌ಟೈನ್‌ಮೆಂಟ್ ಎಂಬ ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದು, ಅದರ ಪ್ರಥಮ ಕಾಣಿಕೆಯಾಗಿ ಭುವನಂ ಶ್ರೇಷ್ಠಮ್ ಗಚ್ಚಾಮಿ ಚಿತ್ರವನ್ನು ನಿರ್ಮಿಸಲಿದ್ದಾರೆ. ಈ ಚಿತ್ರದ ಮೂಲಕ ನಟಿ ಹರ್ಷಿಕಾ ಪೂಣಚ್ಚ ಅವರು ನಿರ್ಮಾಪಕಿಯಾದರೆ, ಭುವನ್ ನಿರ್ದೇಶಕ.


ಭುವನಂ ಶ್ರೇಷ್ಠಮ್ ಗಚ್ಚಾಮಿ ಚಿತ್ರದ ನೂತನ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಚಿತ್ರದ ಕುರಿತಂತೆ ನಾಯಕ, ನಿರ್ದೇಶಕ ಭವನ್ ಪೊನ್ನಣ್ಣ ಮಾಹಿತಿ ಹಂಚಿಕೊಂಡರು. ಬಾಕ್ಸಿಂಗ್ ಕುರಿತಾದ ಕತೆ ಹೊಂದಿರುವ ಈ ಚಿತ್ರದಲ್ಲಿ ಕನಸಿನ ಬೆನ್ನೇರಿ ಹೊರಟ ಹುಡುಗನಾಗಿ ಭುವನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರು.
ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಸೆಟ್ಟೇರುವುದಷ್ಟೇ ಬಾಕಿಯಿದೆ.

Categories
ಸಿನಿ ಸುದ್ದಿ

ರೂಪೇಶ್ ಶೆಟ್ಟಿಗೆ ಜಾಹ್ನವಿ ಜೋಡಿ: ಅಧಿಪತ್ರಕ್ಕೆ ಗಿಚ್ಚಿ ಗಿಲಿ ಗಿಲಿ ಹುಡುಗಿ

ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ಹೊಸ ಸಿನಿಮಾಗೆ ಅಧಿಪತ್ರ ಎಂಬ ಟೈಟಲ್ ಇಡಲಾಗಿದೆ.ರೂಪೇಶ್ ಜನ್ಮದಿನದ ಅಂಗವಾಗಿ ಟೈಟಲ್ ರಿವೀಲ್ ಮಾಡಲಾಗಿತ್ತು. ಟೈಟಲ್ ಮೂಲಕವೇ ಸಿನಿಮಾ ಪ್ರಿಯರಿಗೆ ಕುತೂಹಲ ಮೂಡಿಸಿದ್ದ ಚಿತ್ರ ತಂಡ, ಇದೀಗ ಅಧಿಪತ್ರ ಅಂಗಳದಿಂದ ಹೊಸ ಸುದ್ದಿ ಬಂದಿದೆ.

ಈ ಸಿನಿಮಾ ಮೂಲಕ ಜಾಹ್ನವಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಸುದ್ದಿ ಮನೆಯಲ್ಲಿ ಬಹಳಷ್ಟು ಖ್ಯಾತಿ ಗಳಿಸಿದ್ದ ಜಾಹ್ನವಿ, ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ತನ್ನ ಅಭಿನಯದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಈಗ ಅಧಿಪತ್ರದಲ್ಲಿ ನಾಯಕಿಯಾಗಿ ರೂಪೇಶ್ ಶೆಟ್ಟಿಗೆ ಜೋಡಿಯಾಗಿ ನಟಿಸಲಿದ್ದಾರೆ.

ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಚಯನ್ ಶೆಟ್ಟಿ ಎಂಬುವರು ಅಧಿಪತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗ್ತಿರುವ ಅಧಿಪತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.

ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಅಧಿಪತ್ರ ಸಿನಿಮಾವನ್ನು ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಇದೇ 23 ರಂದು ಅಧಿಪತ್ರ ಸಿನಿಮಾದ ಮುಹೂರ್ತ ಸಮಾರಂಭ ನಡೆಯಲಿದೆ.

ರೂಪೇಶ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ತುಳು ಸಿನಿಮಾ ಸರ್ಕಸ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು ಇದೀಗ ರೂಪೇಶ್ ಹಾಗೂ ಜಾಹ್ನವಿ ಜೋಡಿಯಾಗಿ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ.

Categories
ಸಿನಿ ಸುದ್ದಿ

ಬನ್ನಿ ಜಾಲಿವುಡ್ ನಲ್ಲಿ ಜಾಲಿ ಮಾಡಿ! ಸಿನಿಮಾ ಮಂದಿಗೊಂದು ಶೂಟಿಂಗ್ ಸ್ಪಾಟ್: ಬಿಡದಿ ಬಳಿ ಥೀಮ್ ಪಾರ್ಕ್

ಚೆನ್ನೈ ಮೂಲದ ವೇಲ್ಸ್ ಗ್ರೂಪ್‌ ನ ಅಂಗಸಂಸ್ಥೆಯಾದ ವೇಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು, ಇಡೀ ಕುಟುಂಬಕ್ಕೆ ಭರಪೂರ ಮನರಂಜನೆ ನೀಡುವ ಉದ್ದೇಶದಿಂದ ಬಿಡದಿ ಬಳಿ ಜಾಲಿವುಡ್ – ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ ಎಂಬ ಥೀಮ್ ಪಾರ್ಕ್ ಶುರು ಮಾಡಿದೆ.
ಈ ಥೀಮ್ ಪಾರ್ಕ್ ಇದೇ ಆಗಸ್ಟ್ 20ರಂದು ಅದ್ಧೂರಿಯಾಗಿ ಲೋಕಾರ್ಪಣೆ ಆಗಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್, ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಅಂದು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೂ ವೇಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾದ ಡಾ. ಇಶಾರಿ ಕೆ ಗಣೇಶ್, ಸಂಸ್ಥೆಯ ನಿರ್ದೇಶಕರಾದ ಡಾ. ಪ್ರೀತಾ ಗಣೇಶ್ ಮತ್ತು ಕುಶ್ಮಿತಾ ಗಣೇಶ್ ಸ್ವಾಗತ ಕೋರಿದ್ದಾರೆ.


ಏನಿದು ಜಾಲಿವುಡ್?

ಬೆಂಗಳೂರು ಮತ್ತು ಮೈಸೂರು ನಡುವೆ ಬಿಡದಿ ಬಳಿ ಸುಮಾರು 40 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಮತ್ತು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಯಿಂದ 10 ನಿಮಿಷ ದೂರದಲ್ಲಿರುವ ಈ ಜಾಲಿವುಡ್ ಎಲ್ಲಾ ವಯಸ್ಸಿನವರಿಗೂ ಒಂದು ಅದ್ಭುತ ತಾಣ. ಸಿನಿಮಾ ಮತ್ತು ಸಾಹಸ ಮಿಳಿತವಾಗಿರುವ ಈ ಥೀಮ್ ಪಾರ್ಕ್ ನಲ್ಲಿ ಚಿತ್ರಗಳಲ್ಲಿ ಬಳಸಲಾಗುವ ಕೆಲವು ಸೆಟ್ ಗಳು, ಬಾಲಿವುಡ್ ನಡೆದು ಬಂದ ಹಾದಿ, ನಿಮ್ಮ ಮೆಚ್ಚಿನ ದೃಶ್ಯಗಳನ್ನು ನೋಡಬಹುದಾಗಿದೆ. ಹಾಡು-ನೃತ್ಯ ಕಾರ್ಯಕ್ರಮಗಳು, ಲೈವ್ ಪ್ರದರ್ಶನಗಳು ಸಹ ಇರಲಿವೆ. ಇದರ ಜೊತೆಗೆ ಇಡೀ ಕುಟುಂಬದವರು ಆಡಿ ಖುಷಿಪಡಬಹುದಾದ ಹಲವು ಸಾಹಸ ಕ್ರೀಡೆಗಳಿವೆ.
ಜಾಲಿವುಡ್ ನ ಹೈಲೈಟ್ ಎಂದರೆ ಜಾಲಿ ಐಲ್ಯಾಂಡ್ ಎಂಬ ವಾಟರ್ ಪಾರ್ಕ್. ಈ ಥೀಮ್ ಪಾರ್ಕ್ನ ಹೃದಯಭಾಗದಲ್ಲಿರುವ ಜಾಲಿ ಐಲ್ಯಾಂಡ್ ನಲ್ಲಿ ಸಮುದ್ರದ ಅಲೆಗಳನ್ನು ನೆನಪಿಸುವ ವೇವ್ ಪೂಲ್ ಇದೆ. ಕುಟುಂಬದ ಎಲ್ಲಾ ಸದಸ್ಯರ ಮನರಂಜನೆಗಾಗಿ ಹಲವು ವಾಟರ್ ಸ್ಲೈಡ್ ಗಳು, ಸ್ಪ್ಲಾಶ್ ಜೋನ್ ಗಳು ಮತ್ತು ಆಟ ಆಡಿ ಸುಸ್ತಾದಾಗ ವಿಶ್ರಾಂತಿ ಪಡೆಯಲು ಪ್ರತ್ಯೇಕ ಸ್ಥಳಗಳು ಸಹ ಇವೆ.


ಸಿನಿಮಾ, ಮನರಂಜನೆ ಮತ್ತು ಸಾಹಸವಲ್ಲದೆ ನಿಮಗಿಷ್ಟವಾದ ಮತ್ತು ಸ್ವಾಧಿಷ್ಟವಾದ ಉತ್ತರ ಭಾರತ, ದಕ್ಷಿಣ ಭಾರತ, ಚೈನೀಸ್, ಕಾಂಟಿನೆಂಟಲ್ ಮುಂತಾದ ತಿಂಡಿ-ತಿನಿಸುಗಳನ್ನು ಉಣಬಡಿಸುವ ರೆಸ್ಟೋರೆಂಟ್ ಗಳು ನಿಮ್ಮ ಹೊಟ್ಟೆ ತುಂಬಿಸುವುದಕ್ಕೆ ಸದಾ ಸಿದ್ದವಾಗಿರುತ್ತವೆ.
ಈ ಥೀಮ್ ಪಾರ್ಕ್ ನ ಪ್ರವೇಶ ದರ, ಮಾರ್ಗ ಮುಂತಾದ ಹಲವು ವಿಷಯಗಳಿಗೆ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಆದ www.jollywood.co.in ಲಾಗಿನ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

Categories
ಸಿನಿ ಸುದ್ದಿ

ಟಗರು ಪಲ್ಯ ಟೈಟಲ್ ಟ್ರ್ಯಾಕ್ ರಿಲೀಸ್: ರಾಜ್ಯೋತ್ಸವಕ್ಕೆ ಅಮೃತಾ ಪ್ರೇಮ್, ನಾಗಭೂಷಣ ಚಿತ್ರ ಬಿಡುಗಡೆ

ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ಪ್ರತಿಭಾನ್ವಿತ ಕಲಾವಿದ ನಾಗಭೂಷಣ್ ಅವರಿಗಿಂದು ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಟಗರು ಪಲ್ಯ ಸಿನಿಮಾ ಬಳಗದಿಂದ ವಿಶೇಷ ಉಡುಗೊರೆ ಸಿಕ್ಕಿದೆ.

ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ ಮೂರನೇ ಚಿತ್ರ ಟೈಟಲ್ ಟ್ರ್ಯಾಕ್ ನಾಯಕ ನಾಗಭೂಷಣ್ ಬರ್ತ್ ಡೇ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಧನಂಜಯ್ ಕ್ಯಾಚಿ ಮ್ಯಾಚಿ ಪದಗಳನ್ನು ಸೇರಿಸಿ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ.

ಯುವ ನಿರ್ದೇಶಕ ಉಮೇಶ್ ಕೆ ಕೃಪಾ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ಟಗರು ಪಲ್ಯ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ನಿರ್ದೇಶಕ ಉಮೇಶ್ ಕೆ. ಕೃಪಾ ಕಟ್ಟಿಕೊಟ್ಟಿದ್ದಾರೆ.

ಹಿರಿಯ ಕಲಾವಿದರಾದ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವಿರುವ “ಟಗರು ಪಲ್ಯ” ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಎಸ್ ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಟೈಟಲ್ ಟ್ರ್ಯಾಕ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಮತ್ತೆ ಬಂದ್ರು ಸಂಜು ಮತ್ತು ಗೀತಾ! ಸಂಜು ವೆಡ್ಸ್ ಗೀತಾ-2 ಅದ್ಧೂರಿ ಚಾಲನೆ


‌‌‌
‌12 ವರ್ಷಗಳ ಹಿಂದೆ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಚಿತ್ರ ತನ್ನ ಹಾಡುಗಳು ಹಾಗೂ ಕಂಟೆಂಟ್ ಮೂಲಕ ಜನರ ಮನ ಗೆದ್ದಿತ್ತು. ಈಗ ಆ ಚಿತ್ರದ ಸೀಕ್ವೇಲ್ ಆಗಿ ಸಂಜು ವೆಡ್ಸ್ ಗೀತಾ-2 ಮೂಡಿಬರುತ್ತಿದೆ. ನಾಗಶೇಖರ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಮೊದಲ ಭಾಗದಲ್ಲಿದ್ದ ಕಲಾವಿದರೇ ಈ ಚಿತ್ರದಲ್ಲೂ ಇರುತ್ತಾರೆ. ಫಾರ್ ಎ ಚೇಂಜ್ ರಮ್ಯಾ ಬದಲು ಇಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಸಂಜು ವೆಡ್ಸ್ ಗೀತಾ-2 ಚಿತ್ರದ ಮುಹೂರ್ತ ಹಾಗೂ ಟೀಸರ್ ಬಿಡುಗಡೆ ಸಮಾರಂಭ ನೆರವೇರಿತು.

ಕಾರ್ಯಕ್ರಮದ ಆರಂಭದಲ್ಲಿ ಹಿಂದಿನ ಚಿತ್ರದ ಎವಿ ಪ್ರದರ್ಶನ ಹಾಗೂ ಆ ಚಿತ್ರದ ಟೈಟಲ್ ಟ್ರ್ಯಾಕ್ ಗೆ ನೃತ್ಯ ಮಾಡುವ ಮೂಲಕ ಮೆಲುಕು ಹಾಕಲಾಯಿತು.
ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀ ಮೇಕರ್ಸ್ ಸಹಯೋಗದೊಂದಿಗೆ
ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ
ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ವರ್ಣರಂಜಿತವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗಶೇಖರ್, ನಾನು ಸೀರಿಯಲ್ ಗಳಲ್ಲಿ ಆಕ್ಟ್ ಮಾಡ್ತಿರುವಾಗ, ಕಪ್ಪಗಿರುವ ಈ ಹುಡುಗನನ್ನು ಕರೆದು ತಮ್ಮ ನಿರ್ದೇಶನದ ನಿನಗಾಗಿ ಚಿತ್ರದಲ್ಲಿ ಅವಕಾಶ ನೀಡಿದವರು ಎಸ್ ಮಹೇಂದರ್, ಅವರು ಇಂದು ನಮ್ಮ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು ತುಂಬಾ ಖುಷಿಯಾಗಿದೆ. ಈ ಸಿನಿಮಾವನ್ನು 5 ವರ್ಷಗಳ ಹಿಂದೆಯೇ ಪ್ರಾರಂಭಿಸಬೇಕಾಗಿತ್ತು. ಆದರೆ ನಾನು ತೆಲುಗು, ತಮಿಳು ಕಡೆ ಹೋಗಿದ್ದರಿಂದ ಆಗಲಿಲ್ಲ. ರಮ್ಯ ಅವರು ಈ ಚಿತ್ರದಲ್ಲೂ ಆಕ್ಟ್ ಮಾಡಬೇಕಿತ್ತು. ಅದರೆ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರ ಬದಲಾಗಿ ಈ ಪಾತ್ರಕ್ಕೆ ಮೊದಲು ನನ್ನ ಕಣ್ಣಮುಂದೆ ಬಂದದ್ದೇ ರಚಿತಾ ರಾಮ್, ತಮ್ಮ ಅದ್ಭುತವಾದ ಅಭಿನಯದ ಮೂಲಕವೇ ಅವರು ಹೆಸರು‌ ಮಾಡಿದವರು.

ನನ್ನ ಚಿತ್ರದಲ್ಲಿ ಈ‌ ಪಾತ್ರಕ್ಕೆ ಜೀವ ತುಂಬುವುದೇ ಅಭಿನಯ. ಇನ್ನು ಹಿಂದಿನ ಚಿತ್ರದಲ್ಲಿದ್ದ ಬಹುತೇಕರು ಇದರಲ್ಲೂ ಇರುತ್ತಾರೆ. ನಾನು ಚಿತ್ರದಲ್ಲಿ ಕಥೆಯ ಜೊತೆ ಹಾಡುಗಳಿಗೂ ಜಾಸ್ತಿ ಪ್ರಾಮುಖ್ಯತೆ ಕೊಡುತ್ತೇನೆ. ಶ್ರೀಧರ್ ಸಂಭ್ರಮ್ ಅವರಿಗೆ ರಾತ್ರಿ 12 ಗಂಟೆಗೆ

ಕಾಲ್ ಮಾಡಿ ಹಾಡುಗಳ ಸನ್ನಿವೇಶ ವಿವರಿಸಿದ್ದೇನೆ. ಅವರು ಸೂಪರ್ ಸಾಂಗ್ಸ್ ಕೊಟ್ಟಿದ್ದಾರೆ. ಅದ್ಭುತವಾದ 5 ಹಾಡುಗಳು ಮೂಡಿಬಂದಿವೆ. ಇಂದಿನಿಂದಲೇ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದರು.
ಶ್ರೀನಗರ ಕಿಟ್ಟಿ, ರಚಿತಾ ಅಭಿನಯದ ಹಾಡಿನೊಂದಿಗೆ ಚಿತ್ರೀಕರಣ ಪ್ರಾರಂಭಿಸಲಾಯಿತು. ಮುಹೂರ್ತ ದೃಶ್ಯಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕ್ಲಾಪ್ ಮಾಡಿದರೆ, ನಾಗಶೇಖರ್ ಅವರ ತಾಯಿ ವರಲಕ್ಷ್ಮಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.

ಈ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುವ ಮೂಲಕ ನಾಗಶೇಖರ್, ರಾಜರತ್ನನಿಗೆ ಗೌರವ ಸಲ್ಲಿಸಿದ್ದಾರೆ.
ನಿರ್ಮಾಕ ಚಲುವಾದಿ ಕುಮಾರ್ ಮಾತನಾಡಿ ಹಿಂದಿನ ಚಿತ್ರಗಳಲ್ಲಿ ನಾಗಶೇಖರ್ ಅವರ ವರ್ಕ್ ನೋಡಿದ್ದೇನೆ. ಈ ಚಿತ್ರದ ಬಗ್ಗೆ ೫ ವರ್ಷಗಳ ಹಿಂದೆಯೇ ಮಾತಾಡಿದ್ವಿ, ಕಥೆ ತುಂಬಾ ಚೆನ್ನಾಗಿ ಮಾಡಿಕೊಂಡಿದ್ದಾರೆ 12 ವರ್ಷವಾದರೂ ಹಾಡು, ಕಥೆ ಜೀವಂತವಾಗಿದೆ ಎಂದರೆ ಅದಕ್ಕಿರುವ ಜನಪ್ರಿಯತೆ ಕಾರಣ ಎಂದರು.

ಮತ್ತೊಬ್ಬ‌ ನಿರ್ಮಾಪಕ ನಾರಾಯಣ ಎಂ.ಸಿ. ಮಾತನಾಡಿ,ನನಗೆ ಬಹಳ ಇಷ್ಟವಾದ ಟೀಂ ಇದು. ಮೊದಲ ಚಿತ್ರಕ್ಕಿಂತ ಈ ಚಿತ್ರ, ಹೆಚ್ಚು ಜನಪ್ರಿಯವಾಗುವ ನಂಬಿಕೆಯಿದೆ ಎಂದರು.
ನಾಯಕಿ ರಚಿತಾ ಮಾತನಾಡಿ ಲಾಂಚ್ ಇವೆಂಟ್ ಇಷ್ಟೊಂದು ಗ್ರ್ಯಾಂಡ್ ಆಗಿ ಮಾಡಿದ್ದಾರೆ. ನಾಗಶೇಖರ್ ಅವರ ಜೊತೆ ಫಸ್ಟ್ ಟೈಮ್ ಕೆಲಸ ಮಾಡುತ್ತಿದ್ದೇನೆ. ಚಿತ್ರದ ಬಗ್ಗೆ ಅವರಿಗೆ ಡೆಡಿಕೇಶನ್ ಜಾಸ್ತಿ, ಅದನ್ನು ಫೋಟೋಶೂಟ್ ಸಮಯದಲ್ಲೇ ನೋಡಿದೆ. ನನ್ನ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂದರು.
ನಾಯಕ ಕಿಟ್ಟಿ ಮಾತನಾಡಿ, ನಾಗಶೇಖರ್ ಚಿತ್ರದ ಕಥೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ನನ್ನ ಲ್ಯಾಂಡ್ ಮಾರ್ಕ್ ಸಿನಿಮಾಗಳಲ್ಲಿ ಸಂಜು ವೆಡ್ಸ ಗೀತಾ ಒಂದು. ಅದ್ಭುತವಾದ ಪ್ರೇಮಕಥೆಯೊಂದಿಗೆ ಮತ್ತೆ ಬರುತ್ತೇವೆ.
ಮೊದಲ ಚಿತ್ರಕ್ಕಿಂತ ಈ ಚಿತ್ರದ ಪಾತ್ರ ಇನ್ನೂ ಚೆನ್ನಾಗಿದೆ. ರಚಿತಾ ರಾಮ್ ಅವರ ಜೊತೆ ಮೊದಲಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದೇನೆ ಎಂದರು.

ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, ಛಾಯಾಗ್ರಾಹಕ ಸತ್ಯ ಹೆಗಡೆ, ಸಾಹಿತಿ ಕವಿರಾಜ್ ಚಿತ್ರದ ಕುರಿತಂತೆ ಮಾತನಾಡಿದರು. ಅತಿಥಿಯಾಗಿ ಆಗಮಿಸಿದ್ದ ಅಭಿಷೇಕ್ ಅಂಬರೀಶ್ ಮಾತನಾಡಿ ನಾಗಶೇಖರ್ ಅದ್ಭುತವಾದ ತಂತ್ರಜ್ಞ ಎಂದು ಹೇಳಿದರು.
ಮಂಜುನಾಥ್ ಐಎಎಸ್. ನಿರ್ಮಾಪಕ ಕಾರ್ತಿಕ್ ಗೌಡ, ನಟ ಆದಿತ್ಯ, ಮಾಜಿ ಎಂ.ಎಲ್.ಎ.ಬಾಲರಾಜ್ ನಾಗತಿಹಳ್ಳಿ, ಚಂದ್ರಶೇಖರ್, ಚೇಂಬರ್ ಅಧ್ಯಕ್ಷ ಭಾ.ಮಾ. ಹರೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ನಿರ್ಮಾಪಕ ಜಾಕ್ ಮಂಜು ಅವರು ಈ ಚಿತ್ರವನ್ನು ವಿಶ್ವಾದ್ಯಂತ ರಿಲೀಸ್ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಮೇಘನಾರಾಜ್ ಸಿನಿಮಾ ಹಾಡು ರಿಲೀಸ್: ತತ್ಸಮ ತದ್ಭವ ಚಿತ್ರದ ದೂರಿ ಲಾಲಿ ಚಾಲೆಂಜ್

ಮೇಘನರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಪನ್ನಗ ಭರಣ , ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಜಂಟಿಯಾಗಿ ನಿರ್ಮಿಸಿರುವ ಹಾಗೂ ವಿಶಾಲ್ ಆತ್ರೇಯ ನಿರ್ದೇಶನದ “ತತ್ಸಮ ತದ್ಭವ” ಚಿತ್ರದ ಮೊದಲ ಹಾಡು “ದೂರಿ ಲಾಲಿ” ಇತ್ತೀಚೆಗೆ Betel music youtube channal ಮೂಲಕ ಬಿಡುಗಡೆಯಾಗಿ, ಜನರ ಮನ ಗೆಲ್ಲುತ್ತಿದೆ. ವಾಸುಕಿ ವೈಭವ್ ಈ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ. ಸುನಿಧಿ ಗಣೇಶ್ ಹಾಡಿದ್ದಾರೆ. ಮೇಘನರಾಜ್ ಹಾಗೂ ಮಹತಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ಜನಪ್ರಿಯವಾಗುತ್ತಿರುವ “ದೂರಿ ಲಾಲಿ” ಹಾಡನ್ನು ಹಾಡುತ್ತಾ(ತಾಯಿಯರು) ತಮ್ಮ ಮಗುವನ್ನು ಹೇಗೆ ಮಲಗಿಸುತ್ತೀರಾ? ಎಂಬ ವಿಡಿಯೋವನ್ನು ನಿಮ್ಮ ಇನ್ಸ್ಟಾಗ್ರಾಮ್ ಮೂಲಕ ಈ ಕೆಳಕಂಡ
@megsraj @prajwaldevaraj @pannagabharana @vishal.atreya @vasuki_vaibhav_ @pbstudios_productions @anvitcinemas @tatsamatadbhava @betelmusic.in


ಇನ್ಸ್ಟಾಗ್ರಾಮ್ ಐಡಿಗಳಿಗೆ ಟ್ಯಾಗ್ ಮಾಡಬೇಕು. ಈ ವಿಡಿಯೋಗಳಲ್ಲಿ ಮೂರು ವಿಡಿಯೋಗಳನ್ನು ಆಯ್ಕೆ ಮಾಡಲಾಗುವುದು. ಆ ಮೂವರು ತಮ್ಮ ಮಕ್ಕಳೊಂದಿಗೆ ಮೇಘನರಾಜ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಊಟ ಮಾಡುತ್ತಾ ಕೆಲವು ವಿಷಯಗಳನ್ನು ಹಂಚಿಕೊಳ್ಳಬಹುದು ಎಂದು ಚಿತ್ರತಂಡ ತಿಳಿಸಿದೆ.

error: Content is protected !!