ಪಿ.ಲಂಕೇಶ್ ಮೊಮ್ಮಗನ ಸಿನಿಮಾ ಎಂಟ್ರಿ: ಮಗನಿಗೆ ಇಂದ್ರಜಿತ್ ನಿರ್ದೇಶನ; ಗೌರಿಯಾಗಿ ಸಮರ್ಜಿತ್ ಲಂಕೇಶ್ ಪಾದಾರ್ಪಣೆ

ಹಿರಿಯ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ, ಇಂದ್ರಜಿತ್‍ ಲಂಕೇಶ್‍ ಅವರ ಮಗ ಸಮರ್ಜಿತ್ ಲಂಕೇಶ್‍ ನಾಯಕರಾಗಿ ನಟಿಸುತ್ತಿರುವ “ಗೌರಿ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆದಿದೆ. ಈ ಚಿತ್ರದ ಮೂಲಕ ಸಮರ್ಜಿತ್ ನಾಯಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಬಸವನಗುಡಿ ರಸ್ತೆಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನೆರವೇರಿದ್ದು,. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲಾಪ್‍ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡಿದ ಇಂದ್ರಜಿತ್ ಲಂಕೇಶ್, “ಗೌರಿ” ಶೀರ್ಷಿಕೆ ಇಡಲು ಕಾರಣವಿದೆ. ನಮ್ಮ ಅಕ್ಕನ ನೆನಪಿನಲ್ಲಿ ಈ ಶೀರ್ಷಿಕೆಯಿಟ್ಟಿದ್ದೇನೆ. ಈ ಚಿತ್ರ ಯುವಕರಿಗೊಂದು ಸ್ಫೂರ್ತಿದಾಯಕ ಸಿನಿಮಾ‌ ಆಗುವುದಂತು ನಿಜ. ಚಿತ್ರದಲ್ಲೊಂದು ಅದ್ಭುತವಾದ ಸಂದೇಶವಿದೆ. ಏನೇ ಹೆಚ್ಚು ಹೇಳಿದರೂ ಈ ಚಿತ್ರದ ಕಥೆ ಏನಿರಬಹುದು? ಎಂಬುದು ಎಲ್ಲರಿಗೂ ತಿಳಿಯುತ್ತದೆ.

ಇದು ನಮ್ಮ ರಾಜ್ಯದ ಕಥೆ. ಇಡೀ ದೇಶಕ್ಕೇ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ಇದೊಂದು ನೈಜ ಘಟನೆಯನ್ನಾಧರಿಸಿದ ಚಿತ್ರ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ. ಮುಂದಿನ ದಿನಗಳಲ್ಲಿ ಒಂದೊಂದೇ ವಿಷಯಗಳನ್ನು ಹಂಚಿಕೊಳ್ಳುತ್ತಾ ಹೋಗುತ್ತೇ ಎನ್ನುತ್ತಾರೆ ಇಂದ್ರಜಿತ್‍.

‘ಗೌರಿ’ ಚಿತ್ರದಲ್ಲಿ ನಾಯಕ ಸಮರ್ಜಿತ್ ಲಂಕೇಶ್ ಮತ್ತು ನಾಯಕಿ ಸಾನಿಯಾ ಅಯ್ಯರ್ ಸಹ ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಸಂತಸಪಟ್ಟರು. ‘ಕಾಂತಾರ’ ಚಿತ್ರದ ಖ್ಯಾತಿಯ ಮಾನಸಿ ಸುಧೀರ್ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಂದ್ರಜಿತ್‍ ಅವರ ಪತ್ನಿ ಅರ್ಪಿತಾ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಮತ್ತು ಚಂದನ್‍ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ. ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದ್ದು, ಮಾಸ್ತಿ ಮಂಜು ಮತ್ತು ಬಿ.ಎ. ಮಧು ಸಂಭಾಷಣೆ ಬರೆಯುತ್ತಿದ್ದಾರೆ.

‘ಗೌರಿ’ ಚಿತ್ರವನ್ನು 2024 ರ ಮಾರ್ಚ್ ನಲ್ಲಿ ತೆರೆಗೆ ತರುವ ಯೋಜನೆ ಹಾಕಿಕೊಂಡಿದ್ದಾರೆ ಇಂದ್ರಜಿತ್ ಲಂಕೇಶ್.

ಈ ಸಂದರ್ಭದಲ್ಲಿ ಸಂಭಾಷಣೆಕಾರರಾದ ಬಿ.ಎ. ಮಧು ಮತ್ತು ಮಾಸ್ತಿ ಮಂಜು, ಗೀತರಚನೆಕಾರ ಕವಿರಾಜ್, ಆನಂದ್ ಆಡಿಯೋ ಶ್ಯಾಮ್, ಹಿರಿಯ ನಿರ್ಮಾಪಕ ಕೆ. ಮಂಜು ಮುಂತಾದವರು ಹಾಜರಿದ್ದು ‘ಗೌರಿ’ ಚಿತ್ರತಂಡಕ್ಕೆ ಶುಭಕೋರಿದರು.

Related Posts

error: Content is protected !!