ಎ.ಪಿ. ಅರ್ಜುನ್ ನಿರ್ದೇಶನದ ಅದ್ಧೂರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಧ್ರುವ ಸರ್ಜಾ, ಮತ್ತೊಮ್ಮೆ ಅದೇ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದಾರೆ. ಅದು ಮಾರ್ಟಿನ್. ವಾಸವಿ ಎಂಟರ್ ಪ್ರೈಸಸ್ ಮೂಲಕ ಉದಯ್ ಕೆ.ಮೆಹ್ತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಚಿತ್ರೀಕರಣ ಈಗ ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ಒಂದು ವಾರದಿಂದ ನಡೆಯುತ್ತಿದೆ.
ಕಳೆದ 8 ದಿನಗಳಿಂದ ಕಾಶ್ಮೀರದಲ್ಲಿ ಮೈನಸ್ 7 ಡಿಗ್ರಿ ತಾಪಮಾನ ಇರುವ ಲೊಕೇಶನ್ ಗಳಲ್ಲಿ ಚಿತ್ರತಂಡ ಶೂಟಿಂಗ್ ನಡೆಸುತ್ತಿದೆ. ಕಾಶ್ಮೀರದ ಐಸ್ ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್ ಗಳನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಚಿತ್ರೀಕರಣದಲ್ಲಿ ನಾಯಕ ಧೃವಸರ್ಜಾ, ನಾಯಕಿ ವೈಭವಿ ಶಾಂಡಿಲ್ಯ, ಚಿಕ್ಕಣ್ಣ ಹಾಗೂ ಸಹ ಕಲಾವಿದರುಗಳು ಭಾಗವಹಿಸಿದ್ದಾರೆ. ಆಕ್ಷನ್ ಸೀನ್ ಜೊತೆಗೆ ಮಾತಿನಭಾಗ ಸೇರಿದಂತೆ ಚಿತ್ರದ ಪ್ರಮಖವಾದ ದೃಶ್ಯಗಳನ್ನು ಅಲ್ಲಿ ಸೆರೆ ಹಿಡಿಯಲಾಗುತ್ತಿದೆ.
ಇನ್ನೂ 8 ದಿನಗಳ ಕಾಲ ಅಲ್ಲೇ ಶೂಟಿಂಗ್ ನಡೆಸಲಿರುವ ಮಾರ್ಟಿನ್ ಚಿತ್ರತಂಡ ಒಟ್ಟು 16 ದಿನಗಳ ಶೂಟಿಂಗ್ ಶೆಡ್ಯೂಲ್ ಹಾಕಿಕೊಂಡಿದೆ. ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಅವರು ಹೊಸ ಮಾದರಿಯ ಮೇಕಿಂಗ್ ಟ್ರೈ ಮಾಡಿದ್ದಾರೆ.
ಎಲ್ಲಾ ಭಾಗಕ್ಕೂ ಸಲ್ಲುವ ಕಥೆ ಇದಾಗಿರುವುದರಿಂದ, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಾರ್ಟಿನ್ ಚಿತ್ರ ನಿರ್ಮಾಣವಾಗುತ್ತಿದೆ. ತೆಲುಗಿನಲ್ಲಿ ದೊಡ್ಡ ಹೆಸರು ಮಾಡಿರುವ ಮಣಿಶರ್ಮಾ ಅವರು ಸಂಗೀತ ನೀಡುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣವಿದೆ. ಮಹೇಶ್ ರೆಡ್ಡಿ ಸಂಕಲನವಿದೆ.
ದೇವರಾಜ್ ಕುಮಾರ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ “ತಾಜ್ ಮಹಲ್ 2” ಚಿತ್ರದ ಹಾಡುಗಳನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
“ನೀನು ಎಷ್ಟು ಕಷ್ಟಪಟ್ಟೆ ಎಂಬುದು ಮುಖ್ಯವಲ್ಲ. ತೆರೆ ಮೇಲೆ ನೀನು ಪ್ರೇಕ್ಷಕರಿಗೆ ಏನು ತೋರಿಸಿ, ಅವರ ಮನ ಗೆಲ್ಲುತ್ತೀಯಾ ಎನ್ನುವುದು ಮುಖ್ಯ ಎಂದು ಶ್ರೀಮುರಳಿ ಅವರು ಹಿಂದೊಮ್ಮೆ ಹೇಳಿದ್ದರು. ಆ ಮಾತೇ ನನಗೆ ಸ್ಪೂರ್ತಿ. ನಾಯಕಿಯಾಗಿ ಸಮೃದ್ಧಿ ಶುಕ್ಲ ಅಭಿನಯಿಸಿದ್ದಾರೆ. ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ. ಮನ್ವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದಾರೆ ಹಾಗೂ ತಮ್ಮದೇ ಹೊಸ ಸಂಸ್ಥೆಯ ಮೂಲಕ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ವಿಕ್ರಮ್ ಸೆಲ್ವ ಸಂಗೀತವಿದೆ. ಜೂನ್ ನಲ್ಲಿ ಚಿತ್ರ ಬಿಡುಗಡೆ ಮಾಡು ವುದಾಗಿ ನಿರ್ದೇಶಕ ಕಮ್ ನಾಯಕ ದೇವರಾಜ್ ಕುಮಾರ್ ಹೇಳಿದರು.
ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ, ಭಾ.ಮ.ಹರೀಶ್ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ವಿಜಯ್ ಸಿಂಹ, ವಿಕ್ಟರಿ ವಾಸು, ಭಾ.ಮ.ಗಿರೀಶ್, ಸುನೀಲ್ ಇತರರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಹಾಡುಗಳನ್ನು ಬರೆದಿರುವ ಮನ್ವರ್ಷಿ ನವಲಗುಂದ ಹಾಡುಗಳ ಹಾಗೂ ಹಾಡಿದವರ ಬಗ್ಗೆ ಮಾಹಿತಿ ನೀಡಿದರು.
ಚಿತ್ರ : ಡಿಯರ್ ಸತ್ಯ ನಿರ್ದೇಶಕ : ಶಿವಗಣೇಶ್ ನಿರ್ಮಾಣ : ಪರ್ಪಲ್ ರಾಕ್ ಎಂಟರ್ ಟೈನರ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋ ತಾರಾಗಣ : ಆರ್ಯನ್ ಸಂತೋಷ್, ಅರ್ಚನಾ ಕೊಟ್ಟಿಗೆ, ಅರುಣಾ ಬಾಲರಾಜ್ , ಅಶ್ವಿನ್ ರಾವ್ , ರಂಗಿತರಂಗ ಅರವಿಂದ್ ಇತರರು.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮರ್ಡರ್ ಮಿಸ್ಟ್ರಿ ಸಿನಿಮಾಗಳು ಬಂದಿವೆ. ಆ ಸಾಲಿಗೆ ಡಿಯರ್ ಸತ್ಯ ಕೂಡ ಒಂದು. ಆದರೆ, ಇದೊಂದು ವಿಭಿನ್ನ ಕಥಾಹಂದರದ ಸಿನಿಮಾ. ಇಲ್ಲಿ ನವಿರಾದ ಪ್ರೀತಿ ಇದೆ, ಅಪ್ಪುಗೆಯ ಗೆಳೆತನವಿದೆ. ತಾಯಿಯ ಮಮಕಾರವಿದೆ. ಒಂದಷ್ಟು ದ್ವೇಷ, ಅಸೂಯೆ ಕೂಡ ಇಲ್ಲಿದೆ. ಒಟ್ಟಾರೆ ಒಂದೇ ಮಾತಲ್ಲಿ ಹೇಳುವುದಾದರೆ, ಡಿಯರ್ ಸತ್ಯ ಹೊಸದೊಂದು ಫೀಲ್ ಕೊಡುವ ಸಿನಿಮಾ. ಒಂದಷ್ಟು ಭಾವುಕತೆಯ ಜೊತೆಯಲ್ಲೇ ಸಾಗುವ ಚಿತ್ರ ನೋಡುಗರ ಕಣ್ಣಾಲಿಗಳನ್ನು ಒದ್ದೆ ಮಾಡಿಬಿಡುತ್ತದೆ.
ಕಥೆ ತುಂಬಾನೇ ಸರಳ. ಆದರೆ, ನಿರ್ದೇಶಕ ಶಿವಗಣೇಶ್ ಅವರ ನಿರೂಪಣೆ ಇಲ್ಲಿ ಹೈಲೈಟ್. ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್ಗಳಿವೆ. ಅದಕ್ಕೆ ಕಾರಣ, ಮತ್ತದೇ ಸ್ಕ್ರೀನ್ ಪ್ಲೇ. ಚಿತ್ರದ ಹೀರೋ ತಾನು ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುತ್ತಾನೆ. ಆದರೆ, ಆತ ಮಾಡಿದ ತಪ್ಪಾದರೂ ಏನು? ಈ ಪ್ರಶ್ನೆಗೆ ಉತ್ತರ ಒಂದೊಮ್ಮೆ ಸಿನಿಮಾ ನೋಡಲೇಬೇಕು. ಸಿನಿಮಾ ರಿವರ್ಸ್ ಸ್ಕ್ರೀನ್ ಪ್ಲೇನಲ್ಲಿ ಸಾಗುತ್ತ ಹೋಗುತ್ತೆ. ಆಗಾಗ ಫ್ಲ್ಯಾಷ್ ಬ್ಯಾಕ್ ಸ್ಟೋರಿ ಚಿತ್ರದ ವೇಗಕ್ಕೊಂದು ಕಾರಣವಾಗುತ್ತದೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಹಾಗಂತ, ಹೊಡಿ ಬಡಿ ಕಡಿ ಇದ್ದರೂ, ಇಲ್ಲೊಂದು ನಿಷ್ಕಲ್ಮಷ ಪ್ರೀತಿ ಇದೆ. ಆಪ್ತವೆನಿಸೋ ಗೆಳೆತನವಿದೆ. ಮಧ್ಯಮವರ್ಗದ ತಾಯಿ ಮಗನ ಬಾಂಧವ್ಯದ ಬೆಸುಗೆಯೂ ಇದೆ. ಹೀರೋ ಇಲ್ಲಿ ಫುಡ್ ಡೆಲಿವರಿ ಬಾಯ್ ಕೆಲಸ ಮಾಡುತ್ತಲೇ ತನ್ನ ಸುಂದರ ಬದುಕು ಕಟ್ಟಿಕೊಂಡಾತ. ಅವನಿಗೆ ಅರಿವಿಲ್ಲದೆಯೇ ಹುಡುಗಿಯೊಬ್ಬಳ ಮೊದಲ ನೋಟಕ್ಕೆ ಪ್ರೀತಿ ಹುಟ್ಟಿಸಿಕೊಳ್ಳುತ್ತಾನೆ. ತನ್ನ ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂಬ ಕನಸು ಕಾಣುವ ಹೀರೋ, ತನ್ನ ಪ್ರೀತಿಯನ್ನೂ ಸಹ ಕಾಪಾಡಿಕೊಂಡು, ಅವಳನ್ನು ಕೈ ಹಿಡಿದು ಬದುಕಬೇಕೆಂದು ಆಸೆಪಡುವ ಹೀರೋಗೆ ಅದು ಸಾಧ್ಯವಾಗುವುದಿಲ್ಲ. ಯಾಕೆ ಅನ್ನೋದು ಸಸ್ಪೆನ್ಸ್.
ತಾನು ಪ್ರೀತಿಸುವ ಹುಡುಗಿಯನ್ನು ಇನ್ನೇನು ತನ್ನ ತಾಯಿಗೆ ಪರಿಚಯಿಸಿ, ಮದುವೆ ಆಗಬೇಕು ಅಂದುಕೊಳ್ಳುವ ನಾಯಕನ ಬದುಕಲ್ಲಿ ಒಂದು ಘೋರ ಘಟನೆ ನಡೆದು ಹೋಗುತ್ತದೆ. ಅದೇ ಇಡೀ ಚಿತ್ರದ ಹೈಲೈಟ್. ಆ ಘಟನೆ ಬಳಿಕ ಏನೆಲ್ಲಾ ನಡೆಯುತ್ತೆ ಅನ್ನೋದೇ ಸಿನಿಮಾದ ವಿಶೇಷ. ಸಿನಿಮಾದಲ್ಲೊಂದು ಕೊಲೆಯಾಗುತ್ತೆ. ಆ ಕೊಲೆ ನಾಯಕನ ಮೇಲೆ ಹೋಗುತ್ತೆ. ಅಲ್ಲಿಂದ ಹೊರಬಂದು, ಆ ಕೊಲೆಗಾರರು ಯಾರು ಅನ್ನುವುದನ್ನು ಹೀರೋ ಕಂಡು ಹಿಡಿಯುತ್ತಾನೆ. ಆ ಬಳಿಕ ಏನೆಲ್ಲಾ ನಡೆದು ಹೋಗುತ್ತೆ ಎಂಬ ಕುತೂಹಲ ಇದ್ದರೆ, ಸಿನಿಮಾ ನೋಡಬಹುದು. ಇಷ್ಟಕ್ಕೂ ಆ ಕೊಲೆ ಯಾರದ್ದು? ಯಾರು ಮಾಡುತ್ತಾರೆ? ನಾಯಕ ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತಾನೋ ಇಲ್ಲವೋ ಅನ್ನೋದು ಕಥೆ.
ಇನ್ನು, ಚಿತ್ರದ ಟೆಕ್ನಿಕಲ್ ವಿಷಯಕ್ಕೆ ಬರುವುದಾದರೆ, ಚಿತ್ರದ ಕ್ಯಾಮೆರಾ ಕೆಲಸ ಸೊಗಸಾಗಿದೆ. ಶ್ರೀಧರ್ ವಿ.ಸಂಭ್ರಮ್ ಅವರ ಸಂಗೀತ ಇಲ್ಲಿ ಮಾತಾಡುವಂತಿದೆ. ಎರಡು ಹಾಡುಗಳು ಗುನುಗುವಂತಿವೆ. ಇನ್ನು, ಚಿತ್ರದ ಸಂಕಲನ ಕೆಲಸ ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿವೆ. ನಾಯಕ ಆರ್ಯನ್ ಸಂತೋಷ್ ಈ ಚಿತ್ರದ ಮೂಲಕ ಎಂದಿಗಿಂತಲೂ ಲುಕ್ ಆಗಿ ಕಾಣುತ್ತಾರೆ. ಅಷ್ಟೇ ಆ್ಯಂಗ್ರಿ ಯಂಗ್ ಮ್ಯಾನ್ ಆಗಿಯೂ ಕಾಣಿಸಿಕೊಂಡಿದ್ದಾರೆ. ತಮಗೆ ಸಿಕ್ಕ ಪಾತ್ರವನ್ನು ಲವ್ಲಿಯಾಗಿಯೇ ನಿರ್ವಹಿಸಿದ್ದಾರೆ. ಡ್ಯಾನ್ಸ್ ಮತ್ತು ಫೈಟ್ ವಿಚಾರದಲ್ಲಿ ಇಷ್ಟವಾಗುತ್ತಾರೆ. ಇನ್ನು, ನಾಯಕಿ ಅರ್ಚನಾ ಕೊಟ್ಟಿಗೆ ಅವರು ಸಹ ಸ್ಕ್ರೀನ್ ಮೇಲೆ ಮುದ್ದಾಗಿ ಕಾಣುತ್ತಾರೆ. ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ. ಕೆಲವು ಕಡೆ ಇನ್ನಷ್ಟು ಎಫರ್ಟ್ ಬೇಕಿತ್ತು ಎನಿಸುತ್ತದೆ. ತಾಯಿಯಾಗಿ ಅರುಣಾ ಬಾಲರಾಜ್ ಇರುವಷ್ಟು ಹೊತ್ತು ಇಷ್ಟವಾಗುತ್ತಾರೆ. ಗುರುರಾಜ್ ಹೊಸಕೋಟೆ , ಪಾಪಣ್ಣ, ಸೇರಿದಂತೆ ಒಂದಷ್ಟು ಹೊಸ ಬಗೆಯ ಪಾತ್ರಗಳಿಲ್ಲಿ ಗಮನಸೆಳೆಯುತ್ತವೆ.
ಆಸ್ಕರ್ ಕೃಷ್ಣ ನಟಿಸಿ, ನಿರ್ದೇಶಿಸಿ, ಗೌತಮ್ ರಾಮಚಂದ್ರ ಅವರೊಡನೆ ಸೇರಿ ನಿರ್ಮಿಸುತ್ತಿರುವ ಹೊಸ ಚಿತ್ರ “ಕೃತ್ಯ” ಶೀರ್ಷಿಕೆಯನ್ನು ರೋರಿಂಗ್ ಸ್ಟಾರ್ “ಶ್ರೀಮುರಳಿ” ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರತಂಡದೊಂದಿಗೆ ಹಿರಿಯ ನಿರ್ಮಾಪಕರಾದ, ಭಾ.ಮ ಹರೀಶ್, ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ನಿರ್ಮಾಪಕರುಗಳಾದ ಭಾ.ಮ ಗಿರೀಶ್, ನರಸಿಂಹರಾಜು ಜೊತೆಯಲ್ಲಿದ್ದರು.
ಸುನಿಲ್ ಕುಮಾರ್, ವಿಜಯ ಕುಮಾರ್ ಸಿಂಹ, ಟಿಪ್ಪುವರ್ಧನ್ ಇನ್ನಿತರರು ಉಪಸ್ಥಿತರಿದ್ದರು. ಚಿತ್ರದ ಉಳಿದ ವಿವರಗಳನ್ನು ಹಂತ ಹಂತವಾಗಿ ವಿವರಿಸುವುದಾಗಿ ನಿರ್ದೇಶಕ ಆಸ್ಕರ್ ಕೃಷ್ಣ ತಿಳಿಸಿದ್ದಾರೆ.
ಅತೀ ನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ್’ ಕೃತಿಯನ್ನು ಹೆಸರಾಂತ ನಟ ಕಿಚ್ಚ ಸುದೀಪ್ ಮಂಗಳವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದಿರುವ ಈ ಕೃತಿ ಈಗಾಗಲೇ ಬಿಡುಗಡೆಗೂ ಮುನ್ನ ಎರಡನೇ ಮುದ್ರಣ ಕಂಡಿದೆ ಅನ್ನೋದು ವಿಶೇಷ.
ಕೃತಿಯ ಬಿಡುಗಡೆ ನಂತರ ಮಾತನಾಡಿದ ಸುದೀಪ್, ‘ಒಂದೊಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ’ ಎಂದರು. ಅಲ್ಲದೇ ‘ಯಾವತ್ತಿಗೂ ನಾನು ಪುನೀತ್ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದರು.
ಲೇಖಕ ಡಾ. ಶರಣು ಹುಲ್ಲೂರು
ಕಿಚ್ಚ ಸುದೀಪ್ ಅವರ ಪುಸ್ತಕವನ್ನು ಎರಡು ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದರು. ಪುನೀತ್ ಅವರ ಬಯೋಗ್ರಫಿಯನ್ನು ಇದೀಗ ಸುದೀಪ್ ಅವರು ರಿಲೀಸ್ ಮಾಡಿದ್ದು ಭಾವುಕತೆಗೆ ಸಾಕ್ಷಿಯಾಗಿತ್ತು.
ಈ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಾದ ಜಾಕ್ ಮಂಜು ಮತ್ತು ಕುಮಾರ್ ಹಾಗೂ ಸಾವಣ್ಣ ಪ್ರಕಾಶನದ ಜಮೀಲ್ ಮತ್ತು ಲೇಖಕ ಶರಣು ಹುಲ್ಲೂರು ಉಪಸ್ಥಿತರಿದ್ದರು. ಪುನೀತ್ ಅವರ ಕುರಿತಾಗಿ ಬಂದಂತಹ ಮೊದಲ ಬಯೋಗ್ರಫಿ ಇದಾಗಿದ್ದು, 260ಕ್ಕೂ ಹೆಚ್ಚು ಪುಟಗಳನ್ನು ಹೊಂದಿದೆ.
ಪುನೀತ್ ಅವರ ಹುಟ್ಟು ಹಬ್ಬದ ದಿನಕ್ಕೆ ಈ ಕೃತಿ ಬಂದಿದೆ. ಪುನೀತ್ ಅವರ ಖಾಸಗಿ ಜೀವನ, ವೃತ್ತಿ ಜೀವನ, ಅಪರೂಪದ ಸಂಗತಿಗಳು ಮತ್ತು ಫೋಟೋಗಳನ್ನುಈ ಪುಸ್ತಕದಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ ಲೇಖಕ ಶರಣು ಹುಲ್ಲೂರು.
ಬಜಾರ್ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದ ಶೋಕ್ದಾರ್ ಧನ್ವೀರ್ ಸದ್ಯ ಬೈ ಟು ಲವ್ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಬೈ ಟು ಲವ್ ಸಕ್ಸಸ್ ಯಾತ್ರೆ ಮುಗಿಸಿಕೊಂಡು ಇದೀಗ ಹೊಸ ಸಿನಿಮಾದತ್ತ ಮುಖ ಮಾಡಿದ್ದಾರೆ. ಹೌದು, ಅವರೀಗ “ವಾಮನ” ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದು ಗೊತ್ತೇ ಇದೆ. ಅದಕ್ಕೆ ಕತ್ತಿ ಮಾರಮ್ಮ ದೇಗುಲದಲ್ಲಿ ಮಂಗಳವಾರ ಸರಳವಾಗಿ ಮುಹೂರ್ತ ನಡೆದಿದೆ.
ಧನ್ವೀರ್ ಗೌಡ ನಟಿಸುತ್ತಿರುವ ಮೂರನೇ ಸಿನಿಮಾ ಇದು. ಸಂಕ್ರಾಂತಿ ಹಬ್ಬದ ಪ್ರಯುಕ್ತ ವಾಮನ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಬಿಟ್ಟರೆ, ಬೇರೆ ಅಪ್ ಡೇಟ್ ಸಿಕ್ಕಿರಲಿಲ್ಲ. ಇದೀಗ ವಾಮನ ಸಿನಿಮಾದ ಮುಹೂರ್ತ ಸರಳವಾಗಿ ದೇವನಹಳ್ಳಿಯ ಕತ್ತಿ ಮಾರಮ್ಮ ದೇಗುಲದಲ್ಲಿ ನೆರವೇರಿದೆ.
ವಾಮನ ಸಿನಿಮಾದ ಮುಹೂರ್ತದ ನಂತರ ಚಿತ್ರತಂಡ ಶೂಟಿಂಗ್ ಗೆ ಮುನ್ನುಡಿ ಬರೆದಿದೆ. ಬೆಂಗಳೂರಿನಲ್ಲಿಯೇ ಮೊದಲ ಹಂತದ ಶೂಟಿಂಗ್ ನಡೆಸುತ್ತಿದೆ. ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಅಗಿರುವ ಶಂಕರ್ ರಾಮನ್ ವಾಮನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಕ್ವಿನಾಕ್ಸ್ ಗೋಬಲ್ ಎಂಟರ್ ಟ್ರೈನ್ಮೆಂಟ್ ಪ್ರೊಡಕ್ಷನ್ ನಡಿ ಚೇತನ್ ಕುಮಾರ್ ಸಿನಿಮಾ ನಿರ್ಮಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರು ಬಿಟ್ಟು ಹೋದ ಆದರ್ಶ ಮತ್ತು ಮಾನವೀಯ ಮೌಲ್ಯಗಳಿವೆ. ಆ ಮೂಲಕ ಅವರಿನ್ನೂ ಜೀವಂತವಾಗಿದ್ದಾರೆ. ಅಪ್ಪು ಅವರ ನೆನಪಲ್ಲಿ ಈಗಾಗಲೇ ಹಲವು ಗೀತೆಗಳು ಹೊರಬಂದಿವೆ. ಬರುತ್ತಲೂ ಇವೆ. ಮಾರ್ಚ್ 17 ರಂದು ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ನಡುವೆಯೇ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಅವರು ತಮ್ಮ ಹೊಸ ಸಂಭ್ರಮ್ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್ನಲ್ಲಿ ಅಪ್ಪು ಅವರಿಗೊಂದು ವಿನೂತನ ಎನಿಸುವ ಗೀತೆಯನ್ನು ರಿಲೀಸ್ ಮಾಡಿದ್ದಾರೆ
ಹೌದು, ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಅವರು, ಹಲವಾರು ವರ್ಷಗಳಿಂದಲೂ ಅನೇಕ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸಾಕಷ್ಟು ಸೂಪರ್ ಹಿಟ್ ಸಾಂಗ್ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಸಂಗೀತ ಯಾನ ನಡೆಸಿರುವ ಶ್ರೀಧರ್ ಸಂಭ್ರಮ್ ಇದೀಗ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಶುರುಮಾಡಿದ್ದಾರೆ. ಆಮೂಲಕ ಅವರೀಗ ಪುನೀತ್ ರಾಜಕುಮಾರ್ ಅವರಿಗಾಗಿಯೇ “ಮಹಾನುಭಾವ” ಎಂಬ ಗೀತೆ ಬಿಡುಗಡೆ ಮಾಡಿದ್ದಾರೆ. ಈ ಮಹಾನುಭಾವ ಹಲವು ವಿಶೇಷತೆಗಳನ್ನು ಹೊಂದಿದೆ. ಆ ಕುರಿತು ಸ್ವತಃ ಶ್ರೀಧರ್ ಸಂಭ್ರಮ್ ಹೇಳುವುದಿಷ್ಟು.
“ಅಪ್ಪು ಸರ್ ಅಂದರೆ, ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಅಪ್ಪು ಸರ್ ಇಲ್ಲ ಅನ್ನುವುದನ್ನೂ ಸಹ ಊಹಿಸಿಕೊಳ್ಳಲಾಗುತ್ತಿಲ್ಲ. ಅವರು ಯಾವುದೇ ಕ್ಷಣದಲ್ಲಿ ಸಿಕ್ಕರೂ ಪ್ರೀತಿಯಿಂದಲೇ ಮಾತಾಡಿಸುತ್ತಿದ್ದರು. ಸದಾ ನಗುಮೊಗದಲ್ಲೇ ಇರುತ್ತಿದ್ದ ಅಪ್ಪು ಸರ್ ನಮ್ಮೊಂದಿಗಿಲ್ಲ. ಹಾಗಂತ ಆ ಭಾವನೆಯಲ್ಲೂ ನಾವಿಲ್ಲ. ಅವರ ಸದಭಿರುಚಿಯ ಸಿನಿಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರಿಗಾಗಿಯೇ ಒಂದೊಳ್ಳೆಯ ಗೀತೆ ಮಾಡಬೇಕು ಎಂಬ ಉದ್ದೇಶವಿತ್ತು.
ಗಾಯಕ ಕೈಲಾಶ್ ಖೇರ್ ಜೊತೆ ಶ್ರೀಧರ್ ವಿ.ಸಂಭ್ರಮ್
ಕರುನಾಡಿಗರೆಲ್ಲರೂ ಅವರಿಲ್ಲದ ನೋವಲ್ಲಿದ್ದಾರೆ. ಹಾಗಂತ, ಪ್ರತಿನಿತ್ಯ ಆ ನೋವಲ್ಲೇ ಬಾಳುವುದಕ್ಕಾಗಲ್ಲ. ಅವರನ್ನು ಹಾಡಿನ ಮೂಲಕ ನೆನಪಿಸಿಕೊಳ್ಳುವಂತಾಗಬೇಕು ಎಂಬುದು ನಮ್ಮ ಆಲೋಚನೆ ಆಗಿತ್ತು. ಹಾಗಾಗಿಯೇ ಅವರನ್ನು ಹತ್ತಿರದಿಂದ ನೋಡಿದ್ದರಿಂದ, ಅವರ ಒಡನಾಟ ಇದ್ದುದರಿಂದ, ದೊಡ್ಮನೆ ಹುಡುಗನಾಗಿ ಹೇಗೆಲ್ಲಾ ಇದ್ದರು, ಏನೆಲ್ಲಾ ಮಾಡಿದ್ದರು, ಹೇಗೆಲ್ಲ ಪ್ರೀತಿ ತೋರುತ್ತಿದ್ದರು ಅನ್ನುವುದನ್ನೇ ಹಾಡಿನ ಮೂಲಕ ಹೇಳಲಾಗಿದೆ. ಅದೊಂದು ಅವರ ಮೇಲಿನ ಪ್ರೀತಿ ಮತ್ತು ಗೌರವಕ್ಕಾಗಿ ಮಾಡಿರುವ ಹಾಡಿದು” ಎಂದು ವಿವರ ಕೊಡುತ್ತಾರೆ ಶ್ರೀಧರ್ ವಿ.ಸಂಭ್ರಮ್.
ಇನ್ನು, ಈ ಹಾಡನ್ನು ನಿರ್ದೇಶಕ ಕಾಂತ ಕನ್ನಲ್ಲಿ ಬರೆದಿದ್ದಾರೆ. ಅವರ ಸಾಹಿತ್ಯಕ್ಕೆ ತಕ್ಕಂತೆ ನಾನು ಸಂಗೀತ ನೀಡಿದ್ದೇನೆ. ” ಆಕಾಶ ಭೂಮಿ ಹೇಳಿದೆ, ಊರಿಗೇ ನಮ್ಮೂರಿಗೆ ಮಹಾನುಭಾವ ನೀನಯ್ಯ… ನಾಡಿಗೆ ಕರುನಾಡಿಗೆ ಮಹಾನುಭಾವ ನೀನಯ್ಯ…” ಎಂದು ಶುರುವಾಗುವ ಗೀತೆ ಈಗಾಗಲೇ ಸಂಭ್ರಮ್ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಸಾಕಷ್ಟು ಜನ ಹಾಡನ್ನು ಮೆಚ್ಚಿಕೊಂಡಿದ್ದಾರೆ.
ಕಾಂತ ಕನ್ನಲ್ಲಿ, ನಿರ್ದೇಶಕ, ಗೀತೆರಚನೆಕಾರ
ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಇನ್ನು, ಹಾಡಲ್ಲಿ ವಿಶೇಷತೆಗಳಿವೆ. ಈ ಹಾಡಿಗೆ ಖ್ಯಾತ ಗಾಯಕರು ಧ್ವನಿಯಾಗಿದ್ದಾರೆ. ಬಾಲಿವುಡ್ ಗಾಯಕರಾದ ಸೋನು ನಿಗಮ್, ಶಂಕರ್ ಮಹದೇವನ್. ವಿಜಯ ಪ್ರಕಾಶ್, ಕೈಲಾಶ್ ಕೇರ್ ಅವರು ಧ್ವನಿಯಾಗಿರುವುದು ವಿಶೇಷತೆಗಳಲ್ಲೊಂದು ನಿರ್ದೇಶಕ ಕಾಂತ ಕನ್ನಲ್ಲಿ ಅವರ ಗೀತ ಸಾಹಿತ್ಯದ ಜೊತೆ ಪರಿಕಲ್ಪನೆಯೂ ಇದೆ. ಇನ್ನು, ಇಂಥದ್ದೊಂದು ಒಳ್ಳೆಯ ಹಾಡಿಗೆ ಸುನೀಲ್ ಬಿ.ಎನ್. ಅವರು ನಿರ್ಮಾಣ ಮಾಡಿದ್ದಾರೆ ಎಂದು ಹೇಳುತ್ತಾರೆ ಶ್ರೀಧರ್ ವಿ.ಸಂಭ್ರಮ್.
“ಮಹಾನುಭಾವ” ಗೀತೆಯಿಂದ ಬರುವ ಆದಾಯವನ್ನು ಅಪ್ಪು ಸರ್ ಅವರ ಚಾರಿಟಿಗೆ ಕೊಡಬೇಕು ಎಂಬ ನಿರ್ಧಾರ ಮಾಡಲಾಗಿದೆ. ಯಾಕೆಂದರೆ, ಅಪ್ಪು ಸರ್ ಅವರು ಯಾರಿಗೂ ಗೊತ್ತಾಗದ ರೀತಿ ಹಲವು ಮಾನವೀಯ ಕೆಲಸ ಮಾಡಿದ್ದಾರೆ. ಅನೇಕರ ಕಷ್ಟಕ್ಕೆ ಮಿಡಿದಿದ್ದಾರೆ. ಹಾಗಾಗಿ, ಅವರ ನೆನಪಲ್ಲಿ ಮಾಡಿರುವ ಈ ಗೀತೆಯಿಂದ ಬರುವ ಆದಾಯವನ್ನು ಅವರ ಚಾರಿಟಿಗೆ ನೀಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ ಎನ್ನುವ ಶ್ರೀಧರ್ ಸಂಭ್ರಮ್, ಮುಂದಿನ ದಿನಗಳಲ್ಲಿ ನಮ್ಮ ಸಂಭ್ರಮ್ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್ ಮೂಲಕ ಹೊಸ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಇಲ್ಲಿ ಗೀತೆಗಳ ಜೊತೆಯಲ್ಲಿ ವಿಡಿಯೋ ಆಲ್ಬಂ ಕೂಡ ರಿಲೀಸ್ ಮಾಡಲಾಗುತ್ತದೆ. ಹೊಸಬರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದಲೇ ನಾವು ನಾಗಭಾವಿಯಲ್ಲಿ ಸುಸಜ್ಜಿತ ಸ್ಟುಡಿಯೋ ನಿರ್ಮಾಣ ಮಾಡಿ, ಆ ಮೂಲಕ ಹೊಸಬರಿಗೆ ವೇದಿಕೆ ಕಲ್ಪಿಸುವ ಉದ್ದೇಶನ ನನ್ನದು. “ಮಹಾನುಭಾವ” ಗೀತೆ ಮೂಲಕ ನಮ್ಮ ಯುಟ್ಯೂಬ್ ಚಾನೆಲ್ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಒಳ್ಳೆಯ ಗೀತೆಗಳನ್ನೂ ಕೊಡುವ ಉದ್ದೇಶವಿದೆ ಎನ್ನುತ್ತಾರೆ ಶ್ರೀಧರ್.
ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿರುವ ” ಕಿರಿಕ್ ಶಂಕರ್ ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನೂತನ ಪ್ರತಿಭೆ ಅದ್ವಿಕ ಈ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಎಂ.ಎನ್.ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಆರ್ ಅನಂತರಾಜು ನಿರ್ದೇಶನ ಮಾಡಿದ್ದಾರೆ.
ತುಂಬಾ ದಿನಗಳ ನಂತರ ನಮ್ಮ ಭೇಟಿಯಾಗುತ್ತಿದೆ. ಕೊರೋನ ಕಾರ್ಮೋಡ ಕಳೆದು ಸಂಭ್ರಮದ ವಾತಾವರಣ ಮರಳಿ ಬಂದಿದೆ. ಇದೇ ಏಪ್ರಿಲ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ಧನ್ಯವಾದ ಎಂದರು ಎಂ.ಎನ್.ಕುಮಾರ್.
ಇದೊಂದು ನಗರದ ಹೊರವಲಯದಲ್ಲಿ ನಡೆಯುವ ಕಥೆ. ನಾಯಕನಿಗೆ ಇಬ್ಬರು ತಂಗಿಯರು. ತುಂಬು ಕುಟುಂಬ. ಸಂಸಾರದ ಜವಾಬ್ದಾರಿ ಹೆಗಲ ಮೇಲಿದ್ದರೂ, ಯಾವುದಕ್ಕೂ ತಲೆ ಕೆಡಸಿಕೊಳ್ಳದಾತ. ಆತನ ಜೀವನದಲ್ಲಿ ನಾಯಕಿಯ ಆಗಮನವಾಗುತ್ತಿದಂತೆ ಏನೆಲ್ಲಾ ಆಗುತ್ತದೆ ಎಂಬುದೆ ಕಥಾಸಾರಾಂಶ. ಕಥೆ ಎಲ್ಲರಿಗೂ ಹಿಡಿಸಿದರೆ ಆ ಕ್ರೆಡಿಟ್ ಯೋಗೀಶ್ ಹುಣಸೂರು ಅವರಿಗೆ ಹೋಗಬೇಕು. ಅವರೆ ಈ ಚಿತ್ರದ ಕಥೆಗಾರರು. ತಾಂತ್ರಿಕವರ್ಗದವರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಅನಂತರಾಜು.
ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಅವಕಾಶ ನೀಡಿದ ಎಂ.ಎನ್ ಕುಮಾರ್ ಅವರಿಗೆ ಧನ್ಯವಾದ. ಅನಂತರಾಜು ಅವರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ಪ್ರತಿಯೊಂದು ಸಿನಿಮಾದಲ್ಲೂ ಕಲಿಯುವುದು ಇರತ್ತೆ. ಈ ಚಿತ್ರದಲ್ಲೂ ಸಾಕಷ್ಟು ಕಲಿತ್ತಿದ್ದೇನೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು ಲೂಸ್ ಮಾದ ಯೋಗಿ.
ನಾನು ರಂಗಭೂಮಿ ಕಲಾವಿದೆ ನಿರ್ದೇಶಕ ಗಿರಿರಾಜ್ ಅವರು ನನ್ನ ಗುರುಗಳು. ಅವರ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದೇನೆ. ಹಿರಿತೆರೆಯಲ್ಲಿ ಇದು ನನ್ನ ಮೊದಲ ಚಿತ್ರ. ಪಾತ್ರ ತುಂಬಾ ಚೆನ್ನಾಗಿದೆ. ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ವಂದನೆಗಳನ್ನು ಸಲ್ಲಿಸಿದರು ನಾಯಕಿ ಅದ್ವಿಕ.
ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ವೀರ ಸಮರ್ಥ್ ಮಾತನಾಡಿದರು. ಅದ್ವಿಕರಿಗೆ ಅಭಿನಯ ತರಭೇತಿ ನೀಡಿದ ನಿರ್ದೇಶಕ ಗಿರಿರಾಜ್ ಅತಿಥಿಯಾಗಿ ಆಗಮಿಸಿ ಶುಭಕೋರಿದರು. ಕಥೆ, ಚಿತ್ರಕಥೆ, ಸಂಭಾಷಣೆ ಬರೆದರುವ ಯೋಗೀಶ್ ಹುಣಸೂರು ಹಾಗೂ ಅಭಿನಯಿಸಿರುವ ರಿತೇಶ್ ಅನುಭವದ ಮಾತುಗಳಾಡಿದರು. ಆನಂದ್ ಆಡಿಯೋ ಶ್ಯಾಮ್ ಹಾಗೂ ಗೀತರಚನೆಕಾರ ಕಿನ್ನಾಲ್ ರಾಜ ಇದ್ದರು.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಿಸಿದೆ. ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅಧಿಕೃತ ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ 46 ವರ್ಷದ ಹಿಂದೆ ಡಾ.ರಾಜ್ಕುಮಾರ್ ಅವರಿಗೂ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿತ್ತು. ಮಾರ್ಚ್ 22ರಂದು ನಡೆಯುವ ವಿವಿ ಘಟಿಕೋತ್ಸವದಲ್ಲಿ ಪುನೀತ್ಗೆ ಮರಣೋತ್ತರ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಮಾತನಾಡಿ, “ಈ ಹಿಂದೆ ಪದ್ಮಭೂಷಣ ಡಾ. ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು.
ಈಗ ಮೈಸೂರು ವಿಶ್ವವಿದ್ಯಾಲಯ ಇದೀಗ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ಮರಣೋತ್ತರವಾಗಿ ನೀಡಲು ತೀರ್ಮಾನಿಸಿದೆ” ಎಂದು ಹೇಳಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಪುನೀತ್ ರಾಜ್’ಕುಮಾರ್ ಹುಟ್ಟು ಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲು ‘ಬೈರಾಗಿ’ ತಂಡ ತೀರ್ಮಾನಿಸಿದೆ. ‘ಜೇಮ್ಸ್’ ಬಿಡುಗಡೆಯಾಗುವ ಎಲ್ಲಾ ಪರದೆಗಳಲ್ಲೂ ‘ಬೈರಾಗಿ’ ದರ್ಶನವಾಗಲಿದೆ ಎಂಬುದು ವಿಶೇಷ.
ಪುನೀತ್ ಅವರ ಸವಿನೆನಪಿಗಾಗಿ ಈ ಟೀಸರ್ ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ‘ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ತಂಡದ ಜತೆ ಅಪ್ಪು ಒಡನಾಟವಿದೆ. ಹೀಗಾಗಿ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ‘ಬೈರಾಗಿ’ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಇದು ಪುನೀತ್ ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಸಂತಸದ ವಿಷಯ’ ಎಂಬುದು ಚಿತ್ರತಂಡದ ಅನಿಸಿಕೆ.
ವಿಜಯ್ ಮಿಲ್ಟನ್ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ ‘ಕೃಷ್ಣ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ‘ಟಗರು’ ಬಳಿಕ ‘ಡಾಲಿ’ ಧನಂಜಯ್ ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಜತೆ ನಟಿಸಿದ್ದಾರೆ. ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಕೂಡಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.